ಸೂ: ರಾಯಕಟಕದೊಳಿರುಳು ಭೀಷ್ಮರ
ಸಾಯಬೇಕೆಂದೊಡಬಡಿಸಿ ಕಮ
ಲಾಯತಾಂಬಕ ಸಹಿತ ಪಾಳಯಕರಸನೈತಂದ

ಕೇಳು ಜನಮೇಜಯ ಧರಿತ್ರೀ
ಪಾಲ ದಿನ ಮೂರಾಯ್ತು ಭೀಷ್ಮನ
ಕಾಳೆಗದೊಳಲ್ಲಿಂದ ಮೇಲಣ ಕಥನಕೌತುಕವ
ಆಲಿಸುವದೈ ಮೂಡಣದ್ರಿಯ
ಮೇಲೆ ಕೆಂಪೆಸೆಯಿತ್ತು ಘನನಿ
ಸ್ಸಾಳವೊದರಿದವೈ ನೃಪಾಲರ ಕಟಕವೆರಡರಲಿ  ೧

ಹಲ್ಲಣಿಸಿ ಹರಿತಂದು ಮೋಹರ
ವಲ್ಲಿಗಲ್ಲಿಗೆ ನಿಂದುದೆರಡರ
ಘಲ್ಲಣೆಯ ಘಾಯದ ಘಡಾವಣೆ ಮೀರಿ ಘಾತಿಸಿತು
ಕೆಲ್ಲೆಗೆಡೆದವು ಕರಿಗಳಸುಗಳ
ಚೆಲ್ಲಿದವು ತೇಜಿಗಳು ರಥುಕುಳ
ವೆಲ್ಲ ಹುಡುಹುಡಿ ಪಾಯದಳ ನಿರ್ನಾಮವಾಯ್ತೆಂದ  ೨

ಅಳಿದುದಾ ದಿವಸದಲಿ ಪಾಂಡವ
ಬಳದೊಳಗಣಿತಸೇನೆ ಭೀಷ್ಮನು
ಫಲುಗುಣನು ಕಾದಿದರು ದಿನಕರನಪರಜಲನಿಧಿಗೆ
ಇಳಿಯೆ ತೆಗೆದವು ಬಲವೆರಡು ಮೂ
ಡಲು ಮಗುಳೆ ಕೆಂಪೇರೆ ಕದನಕೆ
ಕಳನ ತುಂಬಿತು ಮತ್ತೆ ಕೌರವ ಪಾಂಡವರ ಸೇನೆ  ೩

ಬಿದ್ದುದಗಣಿತ ಸೇನೆ ಪಡುವಲು
ಹೊದ್ದಿದನು ರವಿ ಮತ್ತೆ ಮೂಡಣ
ಗದ್ದುಗೆಯ ವೆಂಠಣಿಸಿದನು ಕುಮುದಾಳಿ ಕಂಠಣಿಸೆ
ಎದ್ದುದದ್ಭುತರಣ ಕೃತಾಂತಗೆ
ಬಿದ್ದನಿಕ್ಕಿದನದಟನಬುಧಿಯೊ
ಳದ್ದ ಸೂರ‍್ಯನ ಬಿಂಬವೆದ್ದುದು ಮೂಡಣದ್ರಿಯಲಿ  ೪

ಏಳನೆಯ ದಿವಸದ ಮಹಾರಥ
ರೂಳಿಗವು ಹಿರಿದಾಯ್ತು ಕುರುಭೂ
ಪಾಲಕನ ತಮ್ಮಂದಿರಳಿದುದು ದಿವಸವೆಂಟರಲಿ
ಕೋಲ ಮೊನೆಯಲಿ ಕೃಷ್ಣರಾಯನ
ನೋಲಗಿಸಿ ಮೆಚ್ಚಿಸಿದನಾ ಕ
ಟ್ಟಾಳು ಭೀಷ್ಮನ ದಿವಸವೊಂಬತ್ತಾಯ್ತು ಸಮರದಲಿ  ೫

ಇರುಳು ಕೃಷ್ಣನ ಹೊರಗೆ ಬಂದನು
ಧರಣಿಪತಿ ದುಗುಡದಲಿ ನಿಜಸೋ
ದರರು ಸಹಿತ ಮುರಾರಿಯಂಘ್ರಿಗೆ ನಮಿಸಿ ಕೈಮುಗಿದು
ಸುರನದೀಸುತನಖಿಲ ಸೇನೆಯ
ನೊರಸಿದನು ನಮ್ಮಲ್ಲಿ ಖಾತಿಯ
ಧರಿಸಿದನು ಜಯವಧುವ ವರಿಸಿದ ದೇವ ಕೇಳೆಂದ  ೬

ನೆರೆವಣೆಗೆಗುಂದಿತ್ತು ಬಲ ಕೈ
ಮರೆದರದಟರು ಬಿರುದ ಭಟರಿಗೆ
ಬೆರಗು ಬಲಿದುದು ಹೂಣೆಗರ ಹೋರಟೆಗಳಳುಕಿದವು
ನೆರೆ ಸುಗಿದ ಹುಲಿಯಂತೆ ಬರಿಕೈ
ಮುರಿದ ಮದಗಜದಂತೆ ಚಿತ್ರದ
ಲುರುವ ಕೇಸರಿಯಂತೆ ಮೆರೆದಿದೆ ನಮ್ಮ ಬಲವೆಂದ  ೭

ಹಾರಿದವು ಹೆಸರುಗಳು ಭಂಗದ
ಸೂರೆಗಳ ಕಟ್ಟಿದರು ಮಿಗೆ ತಲೆ
ಮಾರಿಗಳು ಮರಳಿದರು ರಣಹೇಡಿಗಳ ಬಗೆಯಂತೆ
ದೂರಲರಿಯೆನು ಸುಭಟರಿಗೆ ಮನ
ಬೇರೆ ನುಡಿ ಬೇರಾಯ್ತು ಸಮರದೊ
ಳೇರತಿಂಗುರಿದಿಂದು ದಣಿದುದು ನಮ್ಮ ಬಲವೆಂದ  ೮

ಚಳಶಿಳೀಮುಖರವಕೆ ಪಟು ಭಟ
ರಳುಕಿದರು ವಿರಹಿಗಳವೊಲು ಸ
ಮ್ಮಿಳಿತ ಶಾಸ್ತ್ರಧ್ವನಿಗೆ ಸೆಡೆದರು ಮೂರ್ಖರಂದದಲಿ
ಕಲಿತ ಬಲ ಶತ ಕೋಟಿಗಿದಿರಾ
ಗಳಿದವದ್ರಿಗಳಂತೆ ಹರಿಪದ
ವಳಯ ವಿದಳಿತವಾಯ್ತು ಮೇಘವ್ರಾತದಂದದಲಿ  ೯

ರಣರಹಸ್ಯಜ್ಞಾನಿಗಳು ಮಿಗೆ
ಮಣಿದರಿಂದ್ರಿಯವಶಕೆ ರಿಪುಭಟ
ಗಣವಿದಾರಣ ತರ್ಕವಿದ್ಯಾವೀತರಾಗಿಗಳು
ಸೆಣಸಿನಲಿ ಸಮದರ್ಶಿಗಳು ಧಾ
ರುಣಿಯ ಪತಿಗಳು ರಾಜಸೇವಾ
ಪ್ರಣಯಮೀಮಾಂಸಾದಿ ಮೂಢರು ನಮ್ಮ ಭಟರೆಂದ ೧೦

ಹರಿದುದಿಂದಿನ ದಿನಕೆ ಶತ ಸಾ
ವಿರ ಮಹೀಶರು ಯಮನ ನಗರಿಗೆ
ಸರಿದುದುಳಿದರ ದಿಟ್ಟತನ ಗಾಂಗೇಯನುಪಟಳಕೆ
ಅರಿಪಯೋನಿಧಿ ಬಡಬನನು ಗೆಲ
ಲರಿದು ಜೀಯ ಮುಕುಂದ ನೀನೇ
ಕರುಣಿಸೈ ವನವಾಸವೋ ನಮಗೇನು ಗತಿಯೆಂದ  ೧೧

ಮುಗುಳುನಗೆ ನಸು ಮೊಳೆಯೆ ಭೀಮಾ
ದಿಗಳಿಗೆಂದನು ಕೃಷ್ಣನರಸಗೆ
ಸೊಗಸು ಬನದಲಿ ಬರಿಯ ಮನವೀ ಕದನಕೇಳಿಯಲಿ
ವಿಗಡತನವಂತಿರಲಿ ಭೀಷ್ಮನ
ಬೆಗಡುಗೊಳಿಸಲು ಹರನ ಹವಣ
ಲ್ಲಗಣಿತನ ಸಾಮದಲಿ ಮುರಿಯಲುಬೇಕು ನಾವೆಂದ  ೧೨

ದಂಡನಯ ತರುಬಿದರೆ ಗುಣದಲಿ
ಖಂಡಿಸುವುದಿದಿರಾದ ತರುಗಳು
ದಿಂಡುಗೆಡೆವವು ತೊರೆಗೆ ಮಣಿದರೆ ಗೇಕು ಬದುಕುವುದು
ಚಂಡಬಲನೀ ಭೀಷ್ಮ ಮುಳಿದರೆ
ಖಂಡಪರಶುವ ಗಣಿಸನೆನೆ ಖರ
ದಂಡನಾಭನ ಮತಕೆ ನೃಪತಿ ಹಸಾದವೆನುತಿರ್ದ  ೧೩

ಇರುಳು ಗುಪಿತದಲವನಿಪತಿ ಸೋ
ದರರು ಮುರರಿಪು ಸಹಿತ ಬಂದನು
ಸುರನದೀನಂದನನ ಮಂದಿರಕಾಗಿ ವಹಿಲದಲಿ
ಕರೆದು ಪಡಿಹಾರರಿಗೆ ಬಂದುದ
ನರುಹಲವದಿರು ಹೊಕ್ಕು ಸಮಯವ
ನರಿದು ಭೀಷ್ಮಂಗೀ ಹದನ ಬಿನ್ನಹವ ಮಾಡಿದರು  ೧೪

ಬಂದನೇ ಧರ‍್ಮಜನು ಮುರರಿಪು
ತಂದನೇ ಕೌರವರನಕಟಾ
ಕೊಂದನೇ ಶಿವಶಿವಯೆನುತ ಮೌನದಲಿ ಮುಳುಗಿರ್ದು
ಮಂದಿಯನು ಹೊರಗಿರಿಸಿ ಬರಹೇ
ಳೆಂದರಾಗಲೆ ಕೃಷ್ಣ ಕೊಂತೀ
ನಂದನರು ಬರಲಿದಿರುವಂದನು ಭೀಷ್ಮ ವಿನಯದಲಿ  ೧೫

ಅರಸಿ ಹೊಗಲಾಮ್ನಾಯನಿಕರಕೆ
ತೆರಹುಗುಡದ ಪರಸ್ವರೂಪನು
ಕುರುಹುಗೊಂಡರೆ ಮಂದಿವಾಳವೆ ದೇವ ನೀನೊಲಿದು
ಅರಸಿಕೊಂಡೈತರಲು ತಾನೈ
ಸರವನಾಗಲಿ ನಿನ್ನ ಭೃತ್ಯನ
ಹೊರೆವ ಪರಿಯಿದು ಕೃಷ್ಣ ಜಯಜಯಯೆನುತ ನಿಡುಗೆಡೆದ ೧೬

ನಗುತ ಹರಿ ಗಂಗಾಕುಮಾರನ
ನೆಗಹಿದನು ಬಳಿಕಿವರು ರತುನಾ
ಳಿಗಳ ಕಾಣಿಕೆಯಿತ್ತು ಮೈಯಿಕ್ಕಿದರು ಭಕುತಿಯಲಿ
ತೆಗೆದು ಬಿಗಿಯಪ್ಪಿದನು ಯಮಜಾ
ದಿಗಳ ಮನ್ನಿಸಿ ವೀಳೆಯವನಿ
ತ್ತೊಗುಮಿಗೆಯ ಹರುಷದಲಿ ಹೊಂಪುಳಿಯೋದನಾ ಭೀಷ್ಮ ೧೭

ಅರಿಯ ಬೀಡಿದು ರಾಯನನುಜರು
ದುರುಳರುಚಿತಾನುಚಿತಗೇಡಿಗ
ಳಿರುಳು ದೊರೆಗಳು ನೀವನಾಲೋಚಿತದಲೈತಹರೆ
ಹರಿಯ ಬಲುಹುಂಟಾದಡೆಯು ಧಿ
ಕ್ಕರಿಸಬಾರದು ರಾಜ ಮಂತ್ರವ
ನರಸ ಸಾಕಿನ್ನೇನು ಬಂದುದು ಹೇಳು ನೀನೆಂದ  ೧೮

ಅರಿಯೆನುಚಿತವನೆಮ್ಮ ಭಾರದ
ಹೊರಿಗೆ ನಿಮ್ಮದು ಕೃಷ್ಣನದು ನಾ
ವರಿದರೆಯು ಮೇಣ್ ಮರೆದರೆಯು ರಕ್ಷಕರು ನೀವೆಮಗೆ
ಅರಿಯನೇನುವನೆಂದು ಸಲಹಲು
ಮರೆವಳೇ ಬಾಲಕನ ತಾಯ್ ನೀ
ನುರುವ ವಜ್ರದ ಜೋಡು ನಮಗಿರೆ ಭೀತಿಯೇಕೆಂದ  ೧೯

ಎಮಗೆ ಜಯವೆಂತಹುದು ರಾಜ್ಯ
ಭ್ರಮೆಯ ರಾಜಸಬುದ್ಧಿಗಳು ವಿ
ಕ್ರಮವಿಹೀನರು ನಾವು ನೀವ್ ತ್ರೈಲೋಕ್ಯವಿಜಯಿಗಳು
ಸಮರ ಸೋತುದು ನಮ್ಮ ಸುಭಟರು
ಯಮನ ಸೇವಕರಾಯ್ತು ಕೃಪೆಯಿಂ
ದೆಮಗೆ ನಿಮ್ಮ ಭಿಮತವ ಬೆಸಸುವುದೆಂದನಾ ಭೂಪ  ೨೦

ಆಕೆವಾಳರು ಭೀಮ ಪಾರ್ಥರು
ನೂಕದಾಹವವುಳಿದ ಸೇನಾ
ನೀಕವೇ ನಿಮ್ಮಿಂದ ಸವೆದುದು ಹಲವು ಮಾತೇನು
ಸಾಕುವರೆ ಮೇಣ್ ಮುನಿದು ಕೊಲುವರೆ
ಬೇಕು ಬೇಡೆಂಬವರ ಕಾಣೆನು
ಕಾಕನಾಡೆನು ಬೆಸಸಿ ನಿಮ್ಮಭಿಮತವನೆನಗೆಂದ  ೨೧

ತೀದುದೆಮ್ಮಯ ಸೇನೆ ನಸುಸೊ
ಪ್ಪಾದುದಿಲ್ಲರಿಸೇನೆ ನಿಮ್ಮನು
ಕಾದಿ ಗೆಲುವರೆ ಮೊಲೆಯನೂಡಿದ ತಾಯಿ ಜಾಹ್ನವಿಯೆ
ಕಾದಿದೆವು ಕಟ್ಟಿದೆವು ಗೆಲಿದೆವು
ಮೇದಿನಿಯ ನಾವಿನ್ನು ಮುನ್ನಿನ
ತೀದ ವನವಾಸಕ್ಕೆ ನೇಮವ ಕೊಟ್ಟು ಕಳುಹೆಂದ  ೨೨

ಮನ್ನಿಸುವಡೀ ಉಭಯರಾಯರು
ನಿನ್ನ ಮೊಮ್ಮಂದಿರುಗಳದರೊಳು
ನಿನ್ನ ಕುಣಿಕೆಯೊಳಿಹುದು ಕುಂತೀಸುತರ ಜೀವನವು
ನಿನ್ನನೇ ನಂಬಿಹರು ನೀನೇ
ಮುನ್ನ ಶಿಶುತನದಲ್ಲಿ ಸಲಹಿದೆ
ಮನ್ನಣೆಯ ನೀ ಬಲ್ಲೆಯೆಂದನು ದಾನವಧ್ವಂಸಿ  ೨೩

ಎನಲು ಮೊಮ್ಮಂದಿರುಗಳಳಲಿನ
ಘನತೆಯನು ಕಿವಿಗೊಟ್ಟು ಕೇಳಿದು
ನನೆದುದತಃಕರಣ ಕಂಬನಿದುಂಬಿದನು ಭೀಷ್ಮ
ಎನಗೆ ಕಾಲ ಸಮೀಪ ಮಗನೇ
ನಿನಗೆ ಭಯ ಬೇಡಿನ್ನು ಕುರುಪತಿ
ದನುಜವೈರಿಗೆ ತಪ್ಪಿದಾಗಳೆ ನಿಮಗೆ ಜಯವೆಂದ  ೨೪

ಕೊಂದೆನಗಣಿತ ರಾಯರನು ತಾ
ಮಂದಿಯನು ನಿನಗಾನು ಮುನಿಯೆನು
ಬಂದು ಪಾರ್ಥನ ರಥವ ತಡೆದರೆ ನೀವು ಧೃತಿಗೆಡದೆ
ಇಂದಿನುದಯದಲಾ ಶಿಖಂಡಿಯ
ತಂದು ನಿಲಿಸಿದಡೆನ್ನ ತನುವನು
ಹಿಂಡುಗಳೆಯದೆ ನಿಮಗೆ ತೆರುವೆನು ಮಗನೆ ಕೇಳೆಂದ  ೨೫

ಗಂಡುತನ ತಾ ನೆರವು ನಿಮ್ಮ ಶಿ
ಖಂಡಿಯನು ಮುಂದಿರಿಸಲಾತನ
ಕಂಡು ನಾವ್ ಕಾಳೆಗವ ಮಾಡೆವು ಕೈದುಗಳ ಬಿಸುಟು
ಚಂಡಿತನವನು ಮಾದು ಮಿಗೆ ಕೈ
ಕೊಂಡು ಫಲುಗುಣನೆಸಲಿ ತನುವನು
ದಿಂಡುಗೆಡಹಲಿ ಬಳಿಕ ಗೆಲುವಿರಿ ಕೌರವೇಶ್ವರನ  ೨೬

ಎನಲು ಶಿವಶಿವ ಶಿವ ಮಹಾದೇ
ವೆನುತ ಕಿವಿಗಳ ಮುಚ್ಚಿದನು ಕಂ
ಬನಿಯನುಗುರಲಿ ಮಿಡಿದು ನೊಂದನು ಪಾರ್ಥ ಹೃದಯದಲಿ
ಎನಗೆ ಗೆಲವಾಯ್ತದು ಕೃತಾರ್ಥರು
ಜನದೊಳೆನ್ನವೊಲಾರು ಬಳಿಕೇ
ನೆನಗೆ ನಿಮ್ಮವೊಲಾರು ಹಗೆಗಳು ಜಗದೊಳುಂಟೆಂದ  ೨೭

ಕಳಿದನಡವಿಯೊಳಯ್ಯನಲ್ಲಿಂ
ಬಳಿಕ ಭೀಷ್ಮನ ತೋಳ ತೊಟ್ಟಿಲಿ
ನೊಳಗೆ ಬೆಳೆದೆವು ಸಲಹಿದನು ಧೂಳಾಟ ಮೊದಲಾಗಿ
ಬಲಿಯಲೆರಕೆಗಳೆಮಗೆ ಭಾಗಿಸಿ
ನೆಲನ ಕೊಟ್ಟನು ಭೀಷ್ಮನೀತನ
ಕೊಲೆಗೆ ಬಯಸುವ ಮನವದೆಂತುಟೊ ಕೃಷ್ಣ ಹೇಳೆಂದ  ೨೮

ಈತನನು ನಾವ್ ಕೊಲಲು ಭುವನ
ಖ್ಯಾತರಹೆವೈ ಸುಡಲಿ ಬಯಸುವ
ಭೂತಳವನೀ ಬೊಡ್ಡಿಗೋಸುಗ ಸುಟ್ಟು ಸುಕೃತವನು
ಘಾತಕರು ಪಾತಕರು ತೆಗೆ ತೆಗೆ
ಏತರವದಿರು ಪಾಂಡುತನಯರ
ಮಾತನಾಡದಿರೆಂಬ ಕೀರ್ತಿಗೆ ನೋತುದಿಲ್ಲೆಂದ  ೨೯

ನಿಲ್ಲು ಫಲುಗುಣ ಕೇಳು ಹೊಲ್ಲೆಹ
ವಲ್ಲ ಸಕಲ ಕ್ಷತ್ರಧರ‍್ಮವ
ಬಲ್ಲೆ ನೀನೆಮಗಹಿತನೇ ನೃಪನೀತಿಬಾಹಿರನೆ
ಎಲ್ಲಿಯಪಕೀರ್ತಿಗಳು ಕೀರ್ತಿಗ
ಳೆಲ್ಲ ವಿಧಿಯವು ನಿನ್ನ ಕಾರಣ
ವೆಲ್ಲ ನೀ ಕೊಲಲೈಸರವನೈ ಪಾರ್ಥ ಹೇಳೆಂದ  ೩೦

ಯಂತ್ರಿ ಮಿಡಿದರೆ ಕಾದಿ ಬೀಳ್ವವು
ಯಂತ್ರಮಯ ಹಾಹೆಗಳು ವಧೆಯಾ
ಯಂತ್ರಿಗೋ ಹಾಹೆಗಳಿಗೋ ಹೇಳಾರ ನೆಮ್ಮುವದು
ಯಂತ್ರಿ ಕೃಷ್ಣನು ನಾವು ನೀವೀ
ತಂತ್ರವಖಿಲ ಚರಾಚರಂಗಳು
ಯಂತ್ರ ರೂಪುಗಳೆಲ್ಲ ಕಾರಣವಿಲ್ಲ ನಿನಗೆಂದ  ೩೧

ಒಂದು ಮುಖದಲಿ ಜಗವ ಹೂಡುವ
ನೊಂದು ಮುಖದಲಿ ಜಗವ ಸಲಹುವ
ನೊಂದು ಮುಖದಲಿ ಬೇಳುವನು ನಯನಾಗ್ನಿಯಲಿ ಜಗವ
ಕೊಂದು ಹಗೆಯಲ್ಲೀತ ಸಲಹಿದ
ನೆಂದು ಮೋಹಿತರನಲ್ಲ ಪರಮಾ
ನಂದಮಯ ಹರಿಯಿದಕೆ ಕಾರಣವಿಲ್ಲ ನಿನಗೆಂದ  ೩೨

ಕಾವುದೀತನ ಕರುಣ ಮುನಿದರೆ
ಸಾವೆನೀತನ ಕಯ್ಯ ಬಾಯಲಿ
ನೀವು ತಾವ್ ನೆರೆ ಮತ್ತೆ ಕೆಲಬರು ಮುನಿದಡಂಜುವೆನು
ನಾವು ಬೆಸಸಿದ ಮಾಡಿ ಸಾಕಿ
ನ್ನಾವಭಯ ನಿಮಗಿಲ್ಲ ಚಿತ್ತದ
ಭಾವಶುದ್ಧಿಯಲೆಮ್ಮ ನಂಬಿರಿ ಹೋಗಿ ನೀವೆಂದ  ೩೩

ಹರುಷ ಬಲಿದುದು ಮನದ ಸಂಶಯ
ಹರೆದುದಾಹವ ವಿಜಯವಾರ್ತೆಯ
ಹರಹಿನಲಿ ಹೊರೆಯೇರಿ ಹೋಂಪುಳಿಯೋದರಡಿಗಡಿಗೆ
ಸುರನದೀನಂದನನ ಹರಹಿನ
ಹರಕೆಗಳ ಕೈಕೊಂಡು ಬೀಳ್ಕೊಂ
ಡರಸ ಮುರರಿಪು ಸಹಿತ ಬಂದನು ತನ್ನ ಪಾಳಯಕೆ  ೩೪