ಸೂ. ಉಭಯಬಲದತಿರಥ ಮಹಾರಥ
ವಿಭುಗಳುರೆ ಹಳಚಿದರು ರಣದಲಿ
ತ್ರಿಭುವನವು ರಂಜಿಸಿತು ಸವೆದುದು ಸಕಲ ಸನ್ನಾಹ

ಅಳಿದುದೆರಡರ ಚೂಣಿ ಮುಂಗುಡಿ
ಯೊಳಗೆ ಕಡಲಾಯ್ತರುಣ ಜಲದೊ
ಬ್ಬುಳಿಯ ಖಂಡದ ದೊಂಡೆಗಳು ಕೆಸರಿಡುವ ಮಿದುಳುಗಳ
ಕಳದ ಹೆಣನೊಟ್ಟಿಲಲಿ ಮೊಗಸುವೊ
ಡಳುಕಿದರು ಮನ್ನೆಯರು ಬಳಿಕರೆ
ನೆಲೆಗಳಲಿ ಸೂಳೈಸಿದವು ನಿಸ್ಸಾಳ ಕೋಟಿಗಳು  ೧

ನರನ ರಥ ಕುಣಿದುದು ಯುಧಿಷ್ಢಿರ
ನುರು ವರೂಥ ಸಗಾಢದೊಳು ಚೀ
ತ್ಕರಿಸಿತನಿಲಾತ್ಮಜನ ಸ್ಯಂದನ ಮುಂದುವರಿಯುತಿರೆ
ಭರದಿ ಮಾದ್ರೀಸುತರ ತೇರುಗ
ಳುರವಣಿಸಲಭಿಮನ್ಯು ಸಾತ್ಯಕಿ
ಯಿರದೆ ಕೈಕೊಳಲಾಯಿತಿತ್ತಲು ಕದನಕುದ್ಯೋಗ  ೨

ವಿನುತ ಭೀಷ್ಮನು ಗಜರೆ ದುರಿಯೋ
ಧನನು ಬಿಲುಗೊಳಲಾತನನುಜರು
ಧನುವ ತುಡುಕೆ ಸುಶರ‍್ಮ ಶಲ್ಯರು ಸರಳ ಹೊದೆಗೆದರೆ
ಮೊನೆಗಣೆಯನಳವಡಿಸೆ ಗುರು ಗುರು
ತುನುಜನಸ್ತ್ರವ ತಿರುಹೆ ಸೇನಾ
ವನಧಿ ಗರ್ಜಿಸಲಾಯ್ತು ಸಂಕುಲಸಮರ ಸೌರಂಭ  ೩

ಶಕುನಿ ಸಹದೇವನೊಳು ಶಲ್ಯನು
ನಕುಲನೊಳು ದುಶ್ಶಾಸನನು ಸಾ
ತ್ಯಕಿಯೊಡನೆ ಸೈಂಧವನು ಕುಂತೀಭೋಜ ಭೂಪನೊಳು
ಸಕಲ ನಾಯಕರಂದು ಯುದ್ಧೋ
ದ್ಯುಕುತರಾದರು ಕೇಳು ನೃಪ ತಾ
ವಕರ ಕೌಂತೇಯರ ಸಮಗ್ರಾಹವದ ವಿಸ್ತರವ ೪

ಕಣೆಗೆದರಿ ದ್ರುಪದಾಂಕ ಗುರುವನು
ಕೆಣಕಿದನು ತತ್ತನುಜ ಭೀಷ್ಮನ
ಸೆಣಸಿದನು ಮೂದಲಿಸಿದನು ಲಕ್ಷಣನನಭಿಮನ್ಯು
ರಣಕೆ ಕರೆದನು ಕೌರವಾನುಜ
ಗಣವನನಿಲತನೂಜನಿತ್ತಲು
ಹೆಣಗಿದರು ಭಗದತ್ತ ಭೀಮಕುಮಾರರವಗಡಿಸಿ  ೫

ಕಲಹದೊಳು ಕರಿಘಟೆಯ ಹೊಯ್ ಹೊ
ಯ್ದಲಸಿ ಕೌರವನನುಜನನು ಮುಂ
ಕೊಳಿಸಿ ಕೊಳ್ಳದೆ ಕಳುಹಿ ಬೇಸರುತನಿಲಸುತ ಮಸಗಿ
ನೆಲನ ಲೋಭಿಯ ಬುದ್ಧಿ ಮರಣಕೆ
ಫಲಿಸಬೇಹುದು ಕರೆ ಸುಯೋಧನ
ನಿಲಲಿ ಬವರಕ್ಕೆನುತ ಗದೆಯನು ತೂಗಿದನು ಭೀಮ  ೬

ಭುಜವನೊದರಿಸಿ ಸಿಂಹರವದಲಿ
ಗಜರಿ ಗದೆಯನು ತಿರುಹಿ ರಿಪು ಭೂ
ಭುಜರನರಸಿದನಳವಿಗಾಂತರೆ ಕೊಂದನತಿಬಳರ
ತ್ರಿಜಗ ಮಝ ಭಾಪೆನಲು ಪವಮಾ
ನಜನು ತಿರುಗಿಟ್ಟಣಿಸೆ ಸೇನಾಂ
ಬುಜಕೆ ಕುಂಜರನಾದನೈ ಜನಮೇಜಯ ಕ್ಷಿತಿಪ ೭

ನಡೆದರಾಹವಕನಿಲ ನಂದನ
ನೊಡನೆ ಸಾತ್ಯಕಿ ನಕುಲ ದ್ರುಪದರು
ತುಡುಕಿದರು ಬಿಲುಗೋಲನೈದಿತು ಪವನಜನ ಚೂಣಿ
ಗಡಣಿಸುವ ಮುಂಮೊಗದ ಕೌರವ
ಪಡೆಯ ಹೇರಡವಿಯನು ಸವರಲು
ಕಡಿತಕಾರರು ಮುಂದೆ ಹೊಕ್ಕುದು ನಕುಲ ಪಾರ್ಥಜರು ೮

ಕಡಿದರರಿಭಟಪಾದಪವನಡ
ಗೆಡಹಿದರು ಗಜಗಿರಿಗಳನು ರಥ
ದೆಡೆದೆವರ ಕೊಚ್ಚಿದರು ತುರಗವ್ರಜದ ಬಲುಮೆಳೆಯ
ಕಡಿದು ಹರಹಿದರನಿಲಸುತ ಕಾ
ಲಿಡಲು ತೆರಹಾಯ್ತಹಿತವಿಪಿನದ
ಕಡಿತ ತೀರಿತು ಹೊಕ್ಕನರೆನೆಲೆಗಾಗಿ ಕಲಿಭೀಮ  ೯

ಎಲೆಲೆ ವಿಲಯಕೃತಾಂತನೋ ನ
ಮ್ಮಳವು ಕೊಳ್ಳದು ಬೆಂಗೊಡಲಿ ಮುಂ
ಕೊಳಿಸದಿರಿ ಮದುಳಾಗದಿರಿ ಹುರುಳಾಗಿ ಹೆಂಡಿರಿಗೆ
ಕೊಲೆಗಡಿಗನೋ ಭೀಮನೋ ರಿಪು
ಬಲಜಲಧಿಬಡಬಾನಲನೊ ತೊಲ
ತೊಲಗೆನುತ ತೆಗೆದೋಡಿತರೆನೆಲೆ ಕೌರವನ ಹೊರೆಗೆ  ೧೦

ಅದಟನಡ್ಡೈಸಿದನು ದುರುಳನ
ಮದವನಳಿವೆನು ಬಾಯ ಹೊಯ್ ಹೊಯ್
ಕದನದಲಿ ನಡುಗಿಸುವ ನಾಯಕವಾಡಿಗಳನೆನುತ
ಬದಗಿನಿದಿರಾದನು ಜಯಶ್ರೀ
ಮದನಕಾಯನು ಕಪಟದಾಯನು
ವಿದಿತಮಾಯನು ರಣದಜೇಯನು ಕೌರವರ ರಾಯ  ೧೧

ಎಲವೊ ಮಾರುತಿ ನಿಮ್ಮೊಳಗೆ ಕೋ
ಮಳೆಯ ಹುದುವನು ಮೆಚ್ಚಿ ನಮ್ಮೊಳ
ಗಿಳೆಯ ಹುದುವನು ಬಯಸಿದೈ ಛಲದಂಕನೆಂದರಿಯ
ನೆಲನ ಬೇಟವ ಬಿಸುಟು ಜೀವದ
ಲುಳಿದು ತೊಲಗೆನೆ ಪವನಸುತ ಕಳ
ಕಳಿಸಿ ನಗುತವೆ ಕೌರವೇಂದ್ರಂಗೆಂದನುತ್ತರವ ೧೨

ಕೆಡಹಿ ದುಶ್ಶಾಸನನ ರಕುತವ
ಕುಡಿದು ನಿನ್ನೂರುಗಳನೀಕ್ಷಣ
ವುಡಿದು ಕೊಂಬೆನು ಧರೆಯನಲ್ಲದೆ ಹುದುವ ಬಯಸುವೆನೆ
ಪೊಡವಿ ದ್ರುಪದಕುಮಾರಿಯೆಮ್ಮಯ
ಮಡದಿಗನ್ಯರು ಮನವಿಡಲು ಬಳಿ
ಕಡಗುದರಿವೆನೆನುತ್ತ ಹೊಕ್ಕನು ಭೀಮನವಗಡಿಸಿ  ೧೩

ಗಾಳಿಯುರುಬೆಗೆ ಮಲೆತ ಮೇಘದ
ತೋಳುವಲ ನಗೆಗೆಡೆಯಲಾ ಕುರು
ಪಾಲನೆತ್ತಲು ಭೀಮನೆತ್ತಲು ಶಿವಶಿವಾ ಎನುತ
ಮೇಲಣಮರರ ಮಂದಿ ನಗೆ ನೃಪ
ಮೌಳಿ ಜವಗೆಡೆ ಖಾತಿಯೊಳು ಕ
ಟ್ಟಾಳು ಹೊಕ್ಕುದು ಭೀಮಸೇನನ ರಥವ ಮುರಿಯೆಸುತ ೧೪

ಬಿಲುದುಡುಕಿ ಕೈಕೊಂಡ ರಥಿಕಾ
ವಳಿಯ ಗೋಣಡವಿಯಲಿ ಭೀಮಾ
ನಲನ ವಿಲಸತ್ಕೇಳಿ ಕಾಣಿಸಲಾಯ್ತು ನಿಮಿಷದಲಿ
ಇಳೆಯೊಳೀ ಪವಮಾನ ನಂದನ
ನುಳಿಯೆ ಯಮರಾಜಂಗೆ ಬೆಸಕೈ
ವಳವಿ ಹಲಬರಿಗಾಗದೆಂದುದು ಸಮರ ಭೂತಗಣ  ೧೫

ಪವನಜನ ಕೈಘಾಸಿಗಾನದ
ಬವರಿಗರನೀಕ್ಷಿಸುತ ರಥವನು
ಕವಿಸಿದನು ಕೈನೆಗಹಿ ಮೋಹರಕಭಯವನು ಕೊಡುತ
ಹವಣಿಸೈ ಹೇರಾಳದಾಟೋ
ಪವನು ಹಾರೈ ಜಯವ ರಣದಲಿ
ತವಕಿಸೈ ತೆಗೆದೋಟಕೆನುತುರವಣಿಸಿದನು ಭೀಷ್ಮ  ೧೬

ಎಲೆ ಪಿತಾಮಹ ನೀವು ಕರುಣಿಸಿ
ದಳವ ನಿಮಗೊಪ್ಪಿಸುವೆ ಜಯವೆಮ
ಗುಳಿವು ಬೇರೆಂತೆನುತ ಕೊಂಡನು ಪವನಸುತ ಧನುವ
ಚಳಕದಲಿ ತೆಗೆದೆಚ್ಚಡಹಿತನ
ಹಿಳುಕ ಸೀಳಿದು ಬಿಸುಟು ಭೀಮನ
ಗೆಲಿದನೆಂಟಂಬಿನಲಿ ಗಂಗಾಸೂನು ಸಮರದಲಿ  ೧೭

ಮೇಲೆ ಹೇಳಿಕೆಯಾಯ್ತು ವರ ಪಾಂ
ಚಾಲರಿಗೆ ಚೈದ್ಯರಿಗೆ ಮತ್ಸ್ಯನೃ
ಪಾಲ ಸೃಂಜಯರಾದಿಯಾದಕ್ಷೋಹಿಣೀದಳಕೆ
ಸೂಳು ಮಿಗೆ ಗರ್ಜಿಸುವ ಘನ ನಿ
ಸ್ಸಾಳ ಕೋಟಿಯ ಗಡಣದೊಳು ಕೆಂ
ಗೋಲ ಮಳೆಗರೆಯುತ್ತ ಗಂಗಾಸುತನ ಕೆಣಕಿದರು  ೧೮

ಪೂತು ಮಝರೇ ಪಾಂಡುಸೈನ್ಯ
ವ್ರಾತ ಕವಿದುದು ಕೇಳಿರೈ ಮು
ಯ್ಯಾಂತುದೇ ಬರಹೇಳಿ ವೈವಸ್ವತನ ಪರಿಜನವ
ಘಾತಿಸುವೆನದನೆನುತ ತೊಡಚಿದ
ನೂತನಾಸ್ತ್ರಂಗಳಲಿ ರಿಪು ಸಂ
ಘಾತವನು ಕೆಡೆಯೆಚ್ಚು ಪಲ್ಲಟಿಸಿದನು ಕಡಿಕಡಿಯ  ೧೯

ಕಾಳೆಗಕ್ಕಿದಿರೊಡ್ಡಿ ಭೀಷ್ಮನ
ಕೋಲ ಹತಿಯಲಿ ಮಡಿದ ರಿಪುಭೂ
ಪಾಳಿ ಹರಿದುದು ಸುರರ ಹೆಂಡಿರ ಮುರಿದ ಮುಂದಲೆಯ
ಮೇಲೆ ಮೇಲೈತಪ್ಪ ವೀರಭ
ಟಾಳಿಯೊಡನಲ್ಲಿಂದ ಸುಭಟರು
ಸೂಳೆಬಂಟಿಕೆಯಿಂದ ಹೊಯ್ದಾಡಿದರು ನಾಕದಲಿ  ೨೦

ಮುಡುಹುಗಳೊಳೊಡೆಹೊಯ್ವ ಕಾಲಲಿ
ಮಿಡಿಯ ಮೆಟ್ಟುವ ತಂಬುಲವ ತೆಗೆ
ದಿಡುವ ಕರೆಕರೆದೊರೆಯನುರ್ಚುವ ನಾಯ ಹೆಸರಿಡುವ
ತೊಡರುಗಟ್ಟುವ ಬೈವ ಭಟ್ಟರ
ಬಿಡುವ ಕಾದುವ ವೀರ ಭಟರಿಂ
ದಿಡಿದುದಮರಾವತಿಯ ಸೊಂಪಿನ ಸೂಳೆಗೇರಿಗಳು  ೨೧

ಸುರರಿಗತ್ತಣ ಗಜಬಜವ ಪರಿ
ಹರಿಸಲರಿಯದೆ ವೀರ ಭೀಷ್ಮನ
ಧುರವನೀಕ್ಷಿಸಲಿತ್ತಲಳವಡದೇನನುಸುರುವೆನು
ಅರರೆ ಅಂಬರಸರಸಿ ರಿಪುಭಟ
ವರರ ಮುಖಪಂಕರುಹವನ ವಿ
ಸ್ತರಣವಾದುದೆನಲ್ಕೆ ಗಂಗಾಸೂನು ಕೈಕೊಂಡ  ೨೨

ಕಡುಮನದ ಕೈಸೂರೆಗಾರರ
ನಡಗೆಡಹಿದನು ಧುರದ ಗೆಲವಿಗೆ
ಮಿಡುಕುವರನಸಿಯರೆದು ನೆಗ್ಗಿದನೇನನುಸುರುವೆನು
ಗಡಣಿಗರನೊಂದೊಂದು ಶರದಲಿ
ತಡೆಗಡಿವ ಸಂರಂಭ ಭೀಷ್ಮನ
ಬಿಡುಧನುವಿನುಬ್ಬಟೆಗೆ ತೆರಳಿತು ಮಕುಟವರ್ಧನರು  ೨೩

ಬಳಸಿ ತಾರೆಗಳೆಸೆಯೆ ಚಂದ್ರರು
ಹಲಬರಾದರೊ ನಭದೊಳೆನೆ ಹೊಳೆ
ಹೊಳೆವ ಮಣಿಮೌಳಿಗಳು ಸಂದಣಿಸಿದವು ಗಗನದೊಳು
ಗೆಲಿದನಹಿತಾನೀಕವನು ರಿಪು
ಬಲ ದಿಶಾಪಟ ಭೀಷ್ಮನಿತ್ತಲು
ಕಲಿ ಯುಧಿಷ್ಠಿರನೃಪನ ವಿರಥನ ಮಾಡಿದನು ಶಲ್ಯ  ೨೪

ಅರಸನನು ಹಿಂದಿಕ್ಕಿ ನಡೆದು
ತ್ತರನು ಶಲ್ಯನೊಳಾಂತು ನಿಂದನು
ಸರಳ ಸರಿವಳೆಗರೆಯೆ ಕಡಿದನು ಶಲ್ಯಭೂಪಾಲ
ಧುರವಿಶಾರದನಹೆ ವಿರಾಟನ
ಹಿರಿಯಮಗ ನೀನಂದು ಗೋಕುಲ
ಹರಣದಲಿ ಕಲಿಯಾಗಿ ಕಾದಿದೆಯೆನುತ ತೆಗೆದೆಚ್ಚ  ೨೫

ಎಸಲು ಶಲ್ಯನ ಸರಳ ಖಂಡಿಸಿ
ನಿಶಿತ ಬಾಣದಲುತ್ತರನು ತೆಗೆ
ದೆಸಲು ಖತಿಯಲಿ ಶಲ್ಯನಭಿಮಂತ್ರಿಸಿ ಮಹಾಶರವ
ಅಸಮಬಲನಾಕರ್ಣಪೂರದಿ
ನೆಸೆ ವಿರಾಟಕುಮಾರನಸು ಲಂ
ಘಿಸಿತು ಕಾಯವನೊದೆದು ಖಚರೀಜನದ ಕುಚಯುಗಕೆ  ೨೬

ವೀರಶಲ್ಯ ದ್ರೋಣ ಕೃಪ ಭಾ
ಗೀರಥಿಯ ನಂದನರು ಪಾಂಡು ಕು
ಮಾರಕರ ಸೇನೆಯೊಳು ಗೆಲಿದರು ಮುರಿದರತಿಬಲರ
ಧೀರ ಸುಭಟರ ರಕ್ತಧಾರಾ
ಸಾರ ಲೋಹಿತ ಬಿಂಬವನು ಘನ
ವಾರಿಯಲಿ ತೊಳೆದಂತೆ ಪಶ್ಚಿಮಜಲಧಿಗಿನನಿಳಿದ  ೨೭

ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಸೇನೆಯ ತೆಗೆಸಿದವು ಹೆ
ಗ್ಗಾಳೆ ಮೊಳಗಿದವಾನೆವರೆ ಗಜರಿದವು ಡೌಡೆಗಳು
ಪಾಳಯಕೆ ತಿರುಗಿದರಖಿಲ ಭೂ
ಪಾಲಕರು ಗಂಗಾಸುತನ ಪಾಂ
ಚಾಲಕನ ನೇಮದಲಿ ಕೌರವ ಪಾಂಡುನಂದನರು೨೮

ಇತ್ತಲೀ ಸಂಗ್ರಾಮ ಮಹಿಯೊಳು
ಮೃತ್ಯುವಿನ ಭಾಗ್ಯೋದಯವು ಕೈ
ವರ್ತ್ತಿಸಿತು ವೈವಸ್ವತಾಭಿಪ್ರಾಯ ಸಿದ್ಧಿಸಿತು
ಮುತ್ತಿಗೆಯ ಜಂಬುಕ ಖಗಾಳಿಯ
ಚಿತ್ತ ನಿಶ್ಚಲವಾಯ್ತು ಸಲೆ ಮನ
ವುತ್ತರೋತ್ತರವಾಯ್ತು ಶಾಕಿನಿ ಡಾಕಿನೀ ಜನದ ೨೯

ಹೆಗಲ ಪಕ್ಕಲೆಗಳಲಿ ಕವಿದುದು
ವಿಗಡ ಪೂತನಿವೃಂದ ಜೀರ್ಕೊಳ
ವಿಗಳ ಕೈರಾಟಳದೊಳೈದಿತು ಶಾಕಿನೀ ನಿಕರ
ತೊಗಲ ಕುನಿಕಿಲ ಬಂಡಿಗಳಲಾ
ರ್ದಗಿದು ಹೊಕ್ಕರು ರಕ್ಕಸರು ಬಾ
ಯ್ದೆಗೆದು ಬಂದುದುಲೂಕ ಜಂಬುಕ ಕಾಕ ಸಂದೋಹ  ೩೦

ತಳಿತ ತಲೆಯೋಡಿನೊಳು ಶೋಣಿತ
ಜಲವ ಕಾಸಿದರೆಳೆಯ ಕರುಳನು
ಹಿಳಿದು ಹಿಂಡಿದರಿಕ್ಕಿದರು ಕುಸುರಿಗಳ ಮೂಳೆಗಳ
ತೆಳುದೊಗಲ ಚಕ್ಕಳದ ಕೈ ಚ
ಪ್ಪಳೆಯವರು ಹಂತಿಯಲಿ ಕುಡಿದರು
ಕೆಳೆಯರಿಗೆ ಸವಿದೋರಿ ಪೂತನಿನಿಕರ ಗಡಣದಲಿ  ೩೧

ಕರುಳನಣಲೊಳಗಡಸಿ ನಲಿದುದು
ಮರುಳ ಬಳಗ ಕಪಾಲ ಪಾತ್ರೆಯ
ನರೆನೆಗಹಿ ಕೊಂಕಿನಲಿ ಕುಡಿದರು ಮುಕ್ತ ಕೇಶಿಯರು
ಮೊರೆವೆಣನನೊಡೆ ಮೆಲುತ ಹಾಡಿತು
ದುರುಳ ದಾನವನಿಕರ ಪಾಂಡವ
ಕುರುನೃಪರ ಹರಸಿದುದು ಕೈಪರೆಗುಟ್ಟಿ ಭೂತಗಣ  ೩೨

ಸಿಡಿದ ಕಣ್ಣಾಲಿಗಳನಾಯಿದು
ಕುಡುಕುಗೊಂಡವು ಕಾಗೆಗಳು ಹಿ
ಮ್ಮಡಿಯ ಹೊರಳಿಯ ನರವ ಸೆಳೆದವು ಜಂಬುಕಾದಿಗಳು
ಅಡಗ ಕದುಕಿರಿದೊರಲಿ ಕರೆದವು
ಗಡಣವನು ಗೂಗೆಗಳು ರಕುತದ
ಕಡಲಲೋಕುಳಿಯಾಡಿದವು ಭೇತಾಳ ಕಾಳಿಯರು  ೩೩

ತೆಳುದೊಗಲ ನಿಡುಸೋಗೆಯುಡುಗೆಯ
ನೆಳಗರುಳ ಸಿಂಗಾರದುರುಬಿನ
ಕೆಳದಿಯರ ಕೈನೇಣ ಕಿರಿದೊಟ್ಟಿಲಿನ ಬೊಂಬೆಗಳ
ಎಳಮಿದುಳ ಕಜ್ಜಾಯ ಮೂಳೆಯ
ಹಳುಕು ಕಾಳಿಜದಟ್ಟುಗುಳಿಗಳ
ಕೆಳೆಗಳೊಳು ಕೊಡಗೂಸು ಪೂತನಿ ನಿಕರವೊಪ್ಪಿದವು  ೩೪

ತೂಳ ಬರೆ ಕುಣಿದುದು ಕಬಂಧದ
ಜಾಲದೊಡನೆ ಪಿಶಾಚಗಣ ಭೇ
ತಾಳಗಣ ಕೈಪರೆಯ ಬಡಿದುದು ಶಾಕಿನೀನಿವಹ
ಸಾಲು ಮಿಗೆ ಸೊಗಸಿದುದು ರಣಭೂ
ತಾಳಿಯಲಿ ಮತ್ತಿತ್ತ ಕೇಳ್ದುದು
ಪಾಳಯಂಗಳೊಳೆರಡರಲಿ ಸಂಗರ ಮಹೋತ್ಸಾಹ  ೩೫

ಹಿಳಿದ ಲೋಹದ ಸೀಸಕಂಗಳ
ಬಲಿಸಿದರು ಹೋಳಾದ ಕವಚವ
ಹೊಲಿಸಿದರು ಬಾಹುರಕೆ ಸವಗದ ಬಿರುಕ ಬೆಸಸಿದರು
ಕಳಚಿದಾಯುಧದಾಯತದ ಕೀ
ಲ್ಗೊಳಿಸಿದರು ಖಡ್ಗಕ್ಕೆ ಕುಂತವ
ಕಳೆದು ಕಾವನು ತೊಡಿಸುತಿರ್ದುದು ಸೇನೆಯೆರಡರಲಿ  ೩೬

ತಡಿಯ ಬಲಿಸುವ ಗುಳನ ರೆಂಚೆಯ
ಗಡಣಿಸುವ ಹಕ್ಕರಿಕೆಗಳನಾ
ಯ್ದಡಿಸಿ ಹೊಲಿಸುವ ಕಬ್ಬಿಗಳ ಕೊಂಡಿಗಳ ಮಿಗೆ ಬಲಿವ
ಒಡೆದ ದೂಹತ್ತಿಗೆಗೆ ಕೀಲ್ಗಳ
ನಡಸಿ ಬೆಟ್ಟಿದ ಗಾಲಿಗಚ್ಚನು
ತೊಡಿಸುತಿರಲಾಯ್ತೆರಡು ಬಲದೊಳು ನಿದ್ರೆಗವಮಾನ  ೩೭

ಅಸಿಯ ಮಸೆಸುವ ಮುರಿದ ಲೌಡಿಯ
ಬೆಸುವ ಕುಂತದ ಧಾರೆಗಳ ಢಾ
ಳಿಸುವ ಆನೆರೆಸೊಪ್ಪಾದ ಹಿಳುಕಿನ ಗರಿಯ ಕೀಲಿಸುವ
ಹೊಸ ತಿರುವ ಕಟ್ಟುವ ಕಠಾರಿಯ
ಮಸೆವ ಹಲಗೆಯ ಬಲಿವ ಸುರಗಿಯ
ಬಸೆಯ ಬೆಳಸುವ ವೀರಭಟರೊಪ್ಪಿದರು ಕಟಕದಲಿ  ೩೮

ಹರಿದ ಕೊರಳನು ಬಿಗಿವ ಉರದೊಳು
ಮುರಿದ ಬಾಣವ ಕೀಳ್ವ ಹೊಟ್ಟೆಯ
ನಿರಿಗರುಳನೊಳಗಿಕ್ಕಿ ಹೊಲಿಸುವ ಮದ್ದುಗಳನಿಡಿವ
ಉರಿವ ಸೇಕದ ನಸ್ಯದೊಳು ಹದ
ನರಿವ ತುರಗದ ವೈದ್ಯ ತತಿಯೆ
ಚ್ಚರಿಕೆಯಲಿ ಸಂತೈಸಿದರು ವಾಜಿಗಳ ವೇದನೆಯ  ೩೯

ಒಡಲಿನೊಳು ಮುರಿದಿದ್ದ ಸಬಳವ
ನುಡಿಯಲೀಯದೆ ಕೀಳ್ವ ಮದ್ದನು
ಗಿಡಿವ ಜೇವಣಿಗೆಯೊಳು ಸಪ್ರಾಣಿಸುವ ದುರ್ವ್ರಣವ
ತೊಡೆದು ಕಟ್ಟುವ ಹಸ್ತಿವೈದ್ಯರ
ಗಡಣವುಭಯದೊಳೆಸೆವವಂತ್ಯದ
ಕಡಲ ರಭಸಕೆ ತೊಡಕನಿಕ್ಕಿತು ಬಹಳ ಬಲಜಲಧಿ  ೪೦

ಬಾದಣಿಸಿದೇರುಗಳ ಬಾಯೊಳು
ಕಾದ ಬಾರಂಗಿಗಳನಳತೆಗೆ
ಕೋದು ವಾಮದೊಳೆಯ್ದೆ ಹಿಡಿದರು ತೈಲಧಾರೆಗಳ
ಆದ ಮೈಗಂಡಿಯೊಳು ಕರುತವ
ಶೋಧಿಸುತ ಹಳದುಪ್ಪವನು ತೊಡೆ
ದಾದರಿಸಿದುದು ವೈದ್ಯಸಂತತಿ ವೀರ ಭಟರುಗಳ  ೪೧

ಖಡುಗದಡವೊಯ್ಲುಗಳಲಡು ಮ
ದ್ದಡಸಿದರು ಸೂಕರನ ತುಪ್ಪವ
ತೊಡೆದರಿರಿದೇರಿನೊಳು ಬಿಟ್ಟರು ತೈಲಧಾರೆಗಳ
ಕುಡಿಸಿದರು ಮಂತ್ರೋದಕವನೊಳ
ಗಡಸಿ ಕರುಳನು ಮುಚ್ಚಿ ಮಂತ್ರಿಸಿ
ತೊಡೆದರಖಿಳೌಷಧಿಗಳನು ನೃಪಸೇನೆಯೆರಡರಲಿ  ೪೨