ಸೂ. ವೀರ ಭಾಗೀರಥಿಯ ತನಯನೊ
ಳಾ ರಿಪುವ್ರಜವಿಜಯ ಫಲುಗುಣ
ಹೋರಿದನು ಸರಿಸಮರದಲಿ ತ್ರೈಜಗವು ಕೊಂಡಾಡೆ

ಜೀಯ ಚಿತ್ತೈಸಿದರೆ ಸೇನಾ
ನಾಯಕರ ಮೋರೆಗಳ ಮುಸುಕುಗ
ಳಾಯತವನೀ ಹೊತ್ತು ಮುನ್ನಿನ ಬಿರುದಿನುಬ್ಬಟೆಯ
ಕಾಯಿದಿರೆ ಧರ‍್ಮವನು ಜಠರ ಪ
ರಾಯಣರ ಪರಿಣತೆಯಲಾದ ಪ
ಲಾಯನದ ಹೆಬ್ಬೆಳಸ ನೋಡೆನೆ ಭೀಷ್ಮನಿಂತೆಂದ  ೧

ಅರಸ ಹೊಲ್ಲೆಹವೇನು ಪಾರ್ಥನ
ಸರಿಸದಲಿ ನಿಲುವೆದೆಯ ಬಲುಹು
ಳ್ಳರನು ದೇವಾಸುರರೊಳರಿಯೆನು ಮನುಜರೇನಹರು
ತಿರುಗಬೇಕವಗಡಿಸಿದರೆ ಸಂ
ಗರವ ಹೊಗುವುದು ಸರಿದರಿದಿರುವ
ನರಿದು ಕಾದುವುದಿದರಲಾವುದು ಕೊರತೆ ಹೇಳೆಂದ  ೨

ನುಡಿಯೆವಾವು ಸಮರ್ಥರೆಂದುದೆ
ಕಡು ನಿಧಾನವು ಸುಭಟರೋಟವೆ
ಕಡೆಗೆ ಪರವಹ ಧರ‍್ಮ ಪಾರ್ಥನು ಜಗದೊಳಗ್ಗಳನು
ನಡುಹೊಳೆಯ ಹರಿಗೋಲ ಮೂಲೆಯ
ಕಡಿದಿರಾದರೆ ನಮ್ಮ ಪುಣ್ಯದ
ಬಿಡುಗಡೆಯ ಕಾಲವು ಶಿವಾಯೆಂದರಸ ಬಿಸುಸುಯಿದ  ೩

ಖತಿಯ ಮಾಡಿತೆ ನಮ್ಮ ನುಡಿಯನು
ಚಿತಪರಾಯಣರೆಂದು ನಿನ್ನಯ
ಮತಿಗೆ ತೋರಿತೆ ಮಾಣಲದು ನೋಡಾದಡಾಹವವ
ಕ್ಷಿತಿಯ ಹೊರೆಕಾರರಿಗೆ ಸೌಖ್ಯ
ಸ್ಥಿತಿಯ ಮಾಡುವೆನಿನ್ನು ಕುರುಭೂ
ಪತಿ ವಿರೋಧಿಯ ವಿಧಿಯನೀಗಳೆ ತೋರಿಸುವೆನೆಂದ  ೪

ತರಿಸಿದನು ಹದಿನೆಂಟು ಸಾವಿರ
ಸರಳ ಹೊದೆಗಳ ಬಂಡಿಗಳ ಹ
ನ್ನೆರಡು ಸಾವಿರ ಧನುವನುರುತರದಖಿಳ ಕೈದುಗಳ
ಕರಸಿದನು ಸೈಂಧವನ ಶಲ್ಯನ
ಗುರುಸುತನ ಕೃತವರ್ಮ ಭಗದ
ತ್ತರ ಶಕುನಿ ದುಶ್ಶಾಸನ ದ್ರೋಣಾದಿ ನಾಯಕರ  ೫

ಒತ್ತುಗೊಡುವರೆ ಹಗೆಗೆ ಹಜ್ಜೆಯ
ನಿತ್ತು ತೆಗೆವರೆ ಪಾರ್ಥ ಪರಬಲ
ಮೃತ್ಯುವೇ ಸಾಕಿನ್ನು ಹೋಗಲಿಯೆಂದು ಫಲವೇನು
ಮತ್ತೆ ಕೆಣಕುವುದರ್ಜುನನ ನ
ಮ್ಮತ್ತ ಬಿಡದಿರೆ ವೈರಿಸೇನೆಯ
ಕಿತ್ತು ಬಿಸುಡುವೆ ಯಮಪುರಕೆ ಮೋಹರಿಸಿ ನೀವೆಂದ  ೬

ವಿಗಡರನಿಬರು ನೆರೆದು ಪಾರ್ಥನ
ತೆಗೆದರತ್ತಲು ಭೀಷ್ಮನಿತ್ತಲು
ಹೊಗೆದನಂತ್ಯದ ರುದ್ರನಗ್ಗದ ಕಣ್ಣ ಶಿಖಿಯಂತೆ
ಬಿಗಿದ ಹೊದೆಗಳ ಹರಿದು ಬಿಲ್ಲಿಂ
ದುಗುಳಿಸಿದನಂಬುಗಳನಳವಿಗೆ
ತೆಗೆದು ಪಾಂಡವ ಬಲವ ಬೆಂಬತ್ತಿದನು ಖಾತಿಯಲಿ  ೭

ಕೊಂಡುಬಹ ಬಲುನಾಯಕರ ಖತಿ
ಗೊಂಡು ದಡಿಯಲಿ ಹೊಯ್ಸಿ ಸೇನೆಯ
ಹಿಂಡೊಡೆಯದೋಜೆಯಲಿ ಹುರಿಯೇರಿಸಿ ಮಹೀಶ್ವರರ
ಗಂಡುಗಲಿಯಭಿಮನ್ಯು ಸಾತ್ಯಕಿ
ಚಂಡಬಲ ಹೈಡಿಂಬರನು ಸಮ
ದಂಡಿಯಲಿ ಮೋಹರಿಸಿ ಸಮರಕೆ ನಡೆದನಾ ಭೀಷ್ಮ  ೮

ತಳಿತ ಸೇನಾಜಲಧಿ ಲಗ್ಗೆಯ
ಮೊಳಗಿನಲಿ ಮೊನೆದೋರಿ ಭೀಷ್ಮನ
ಹಳಚಿದರು ಹರಹಿನಲಿ ಕವಿದರು ಕೋಡಕೈಗಳಲಿ
ಎಲೆಲೆ ಪಾಂಡವ ಸೈನ್ಯಸಾಗರ
ಮಲೆತುದೋ ಬರಹೇಳು ಮಾರಿಯ
ಬಳಗವನು ಹೆಣದಿನಿಹಿಕಾರರ ಕರೆಯಿ ರಕ್ಕಸರ  ೯

ಸೂಸಿದರು ಸರಳುಗಳನಗಲಕೆ
ಹಾಸಿ ಹಬ್ಬಿದವಶ್ವ ನಿಕರವ
ಕೀಸಿದವು ಕೀಲಿಸಿದವಾನೆಗಳುದರದೆಲುವಿನಲಿ
ಬೀಸಿ ಬಿಸುಟವು ಪಾಯ್ದಳವ ರಥ
ರಾಸಿಗಳ ಜರುಹಿದವು ಬಲ ವಾ
ರಾಸಿಯಲಿ ತಾಯ್ಮಳಲ ಮೊಗೆದವು ಭೀಷ್ಮನಂಬುಗಳು  ೧೦

ಅಡಸಿ ತುಂಬಿತು ಗಗನ ತಲೆಗಳ
ಗಡಣದಲಿ ದೆಸೆಯೆಲ್ಲ ಬಾಣದ
ಕಡಿಯಮಯವಾಯಿತ್ತು ಹೆಣಮಯವಾಯ್ತು ರಣಭೂಮಿ
ಕಡುಗಲಿಯ ಕೈಚಳಕದಂಬಿಂ
ಗೊಡಲ ತೆತ್ತುದು ವೈರಿಬಲ ಬಿಡೆ
ಜಡಿದುದಂತಕನಗರವದ್ಭುತವಾಯ್ತು ಸಂಗ್ರಾಮ  ೧೧

ಹೊಡೆಗೆಡೆದವಾನೆಗಳು ಥಟ್ಟಿಗೆ
ಕೆಡೆದವಗ್ಗದ ತುರಗದಳ ಮೈ
ಗಡಿತದಲಿ ಮುಂಕೊಂಡು ಹೊರಳಿತು ಕೂಡೆ ಪಾಯದಳ
ಮಡ ಮುರಿದು ನುಗ್ಗಾಯ್ತು ರಥ ಬೆಳು
ಗೊಡೆ ಪತಾಕಾದಂಡ ಚಮರಿಗ
ಳುಡಿದು ಬಿದ್ದವು ಕೇಣವಿಲ್ಲದೆ ತರಿದನರಿಬಲವ  ೧೨

ಮಂಡಿಸಿತು ನೊರೆರಕುತ ಕರುಳಿನ
ಜೊಂಡು ಮಸಗಿತು ಕಡಿದ ಖಂಡದ
ದಿಂಡು ತಳಿತುದು ತೊಗಲ ಕೊಯ್ಲಿನ ಮುರಿದ ಮೂಳೆಗಳ
ಜೊಂಡೆ ನರವಿನ ಜುರಿತ ಮಿದುಳಿನ
ಹೊಂಡೆಯದ ತೊರಳಿಗಳ ಕೊರಳಿನ
ತುಂಡುಗಳ ಕಾಲಾಂತಕನ ಹೆಬ್ಬೆಳಸು ಹುಲುಸಾಯ್ತು  ೧೩

ಆಗ ಹೂಡಿದನಾಗ ಬಾಣವ
ತೂಗಿ ಬರೆಸೆಳೆದೆಚ್ಚನಹಿತರ
ನಾಗ ತಾಗಿದವಂಬು ಬಲ್ಲವರಾರು ಕೈಲುಳಿಯ
ಬಾಗಿಹುದು ಬಲು ಬಿಲ್ಲು ಕಿವಿವರೆ
ಗಾಗಿ ರಿಪುಬಲ ನಿಮಿಷ ನಿಮಿಷಕೆ
ನೀಗಿಹುದು ನಿಟ್ಟುಸಿರನೆಲೆ ಭೂಲಾಪ ಕೇಳೆಂದ ೧೪

ಬೀಳುತಿರ್ದರು ಭಟರು ಮತ್ತೆ ಛ
ಡಾಳಿಸಿತು ತಲೆಮಾರಿಗಳು ಹೆಣ
ಸಾಲನೆಡಹಿದರರುಣವಾರಿಯ ತೊರೆಯನೀಸಿದರು
ಆಳು ಹೊಕ್ಕುದು ದಂತಿಘಟೆಗಳು
ತೂಳಿದವು ಕಡುಹೆದ್ದು ತುರುಗದ
ಮೇಲೆ ರಾವುತರಳವಿಗೊಟ್ಟುದು ತೇರ ಬಾಹೆಯಲಿ  ೧೫

ಆಳು ಕುದುರೆಯ ಬೀಯಮಾಡಿ ನೃ
ಪಾಲ ಮಾಡುವುದೇನು ದೊರೆಗಳು
ಕಾಳೆಗಕೆ ಮೈದೋರಬಾರದೆ ಭೀಮ ಫಲುಗುಣರು
ಚಾಳ ನೂಕಿಸಿ ಹೊತ್ತುಗಳೆವರು
ಹೇಳಿ ಫಲವೇನಿನ್ನು ರಣ ಹೀ
ಹಾಳಿ ತಮಗಿಲ್ಲೆಂದು ಗಹಗಹಿಸಿದನು ಕಲಿಭೀಷ್ಮ  ೧೬

ದಿವಿಜ ನಗರಿಯ ಸೂಳೆಗೇರಿಗೆ
ಕವಿವ ಮನವೇ ಮುಂದು ಹಜ್ಜೆಗೆ
ತವಕಿಸುವರಳುಕುವರೆ ಮೇಣ್ ಕೈತಪ್ಪ ಮಾಡಿಸೆನು
ಕವಿಯಿರೈ ಕಾಲಾಳು ರಾವುತ
ರವಗಡಿಸಿರೈ ಜೋದರೆಸಿರೈ
ನವ ಮಹಾರಥರಂಬ ಕರೆಯಿರೆನುತ್ತ ಕವಿದೆಚ್ಚ ೧೭

ಕಡಿದು ಬಿಸುಟನು ತುರಗ ದಳವನು
ಕೆಡಹಿದನು ಹೇರಾನೆಗಳ ತಡೆ
ಗಡಿದನೊಗ್ಗಿನ ರಥವನುರೆ ಕೊಚ್ಚಿದನು ಕಾಲಾಳ
ಹೊಡಕರಿಸಿ ಹೊದರೆದ್ದು ಮುಂದಕೆ
ನಡೆನಡೆದು ಕೈಮಾಡಿ ಕಾಯದ
ತೊಡಕನೊಲ್ಲದೆ ತೆಕ್ಕೆಗೆಟ್ಟಿತು ಭಟರು ನಾಕದಲಿ ೧೮

ಆಳು ಮುರಿದವು ಮೇಲೆ ಹೊಕ್ಕು ನೃ
ಪಾಲಕರು ಬೊಬ್ಬಿರಿದು ಭೀಷ್ಮನ
ಕೋಲ ಕೊಳ್ಳದೆ ಕೊಂಡು ಹರಿದರು ರಥದ ಹೊರೆಗಾಗಿ
ಆಳುತನದಂಗವಣೆಯೊಳ್ಳಿತು
ಮೇಳವೇ ಬಳಿಕೇನು ಪೃಥ್ವೀ
ಪಾಲರಲ್ಲಾ ಪೂತು ಮಝ ಎನುತೆಚ್ಚನಾ ಭೀಷ್ಮ ೧೯

ಅಂಗವಿಸಿ ಮರಿಹುಲ್ಲೆ ಖುರದಲಿ
ಸಿಂಗವನು ಹೊಯ್ವಂತೆ ನೃಪರು
ತ್ತುಂಗ ಸಹಸಿಯ ಮೇಲೆ ಕೈಮಾಡಿದರು ಖಡ್ಗದಲಿ
ಅಂಗವಣೆಯನು ಹೊಗಳುತಾ ದಿವಿ
ಜಾಂಗನಾ ಕಾಮುಕರ ಮಾಡಿಯ
ಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ  ೨೦

ಧರಣಿಪತಿಗಳು ಹತ್ತು ಸಾವಿರ
ವುರುಳಿತಾ ದಿವಸದಲಿ ಹಿಂದಣ
ಕೊರತೆಯುಳಿಲೆಕ್ಕಕ್ಕೆ ಕೊಂದನು ಹತ್ತು ಸಾವಿರವ
ಮರಳಿ ಮೂಸಾವಿರವ ಮತ್ತಂ
ತೆರಡು ಸಾವಿರ ಮತ್ತೆ ಐಸಾ
ವಿರವ ಸವರಿದನಹಿತ ಬಲದಲಿ ಭೂಪ ಕೇಳೆಂದ  ೨೧

ಭುವನ ನೆರೆ ಹೊಗೆವಂದು ಹೆಚ್ಚಿದ
ಶಿವನ ಖತಿ ಮೈದೋರಿತೆನೆ ರಿಪು
ನಿವಹದಲಿ ನೆಲೆಗೊಂಡುದೀತನ ಖಾತಿ ಕೊಪ್ಪರಿಸಿ
ಜವನ ಪುರಿಗಿಂಬಿಲ್ಲ ಕೊಂಡೊ
ಯ್ವವರು ಕೈಗುಂದಿದರು ಗಂಗಾ
ಭವನು ಕೊಲುವುದ ಬಿಡನಿದೇನೆನುತಿರ್ದುದಮರಗಣ  ೨೨

ಬಲವನದ ಹೊದರೆಲ್ಲಿ ಸೇನಾ
ಜಲನಿಧಿಯ ಸುಳಿವೆಲ್ಲಿ ಸುಭಟರ
ಕಳಕಳದ ಕಡುಹೆಲ್ಲಿ ಖರೆಯದ ರಥಿಕರವರೆಲ್ಲಿ
ಹೊಳೆದು ಮೊಳಗಿದನಲ್ಲಿ ಬಾಣದ
ಬಲೆಯ ಬೀಸಿದನಲ್ಲಿ ರಕುತದ
ಹೊಳೆಯ ಹರಿಸಿದನಲ್ಲಿ ಗಂಗಾಸೂನು ಖಾತಿಯಲಿ  ೨೩

ಕಡುಹು ಹಿರಿದೋ ಕಾಲರುದ್ರನ
ಪಡೆಯಲಾಡುವನೀತನೋ ಮೈ
ಗೊಡದಿರೋ ಬಲಹೊರಳಿಯೊಡೆಯಲಿ ಹೋಗಿ ದೆಸೆದೆಸೆಗೆ
ತಡೆಯಲರಿದೋ ತಡವು ಮಾಡದಿ
ರೊಡಲ ಬದುಕಿಸಿಕೊಳ್ಳಿ ನೋಡುವ  ೨೪
ರೊಡೆಯರನು ಬಳಿಕೆನುತ ಮುರಿದುದು ಪಾಂಡುಸುತಸೇನೆ

ಜರಿದುದಲ್ಲಿಯದಲ್ಲಿ ಭರದಲಿ
ತೆರಳಿತಲ್ಲಿಯದಲ್ಲಿ ಹಿಂದಕೆ
ಮರಳಿತಲ್ಲಿಯದಲ್ಲಿ ರಾಯರ ಕಣ್ಣ ಸನ್ನೆಯಲಿ
ತಿರುಗಿತಲ್ಲಿಯದಲ್ಲಿ ಭಟರೆದೆ
ಬಿರಿದುದಲ್ಲಿಯದಲ್ಲಿ ಭೀಷ್ಮನ
ಸರಳಗಾಳಿಗೆ ಬೆಸುಗೆಯೊಡೆದುದು ವೈರಿಬಲಮೇಘ  ೨೫

ಬಲವ ನಿಲಿಸಲು ನೂಕದನಿಲಜ
ನಳುಕಿದನು ಸಹದೇವ ಹಿಂದಣಿ
ಗೊಲೆದ ಧೃಷ್ಟದ್ಯುಮ್ನ ನಕುಲರು ನೆನೆದರನುಚಿತವ
ಕಲಿ ಘಟೋತ್ಕಚನಧಮ ಧರ‍್ಮವ
ಬಳಸಿದನು ಪಾಂಚಾಲ ಮತ್ಸ್ಯರು  ೨೬
ಹಲರು ನಡೆದುದೆ ಮಾರ್ಗವೆಂದೇ ಮುರುಹಿದರು ಮುಖವ       ಹದುಳವಿಡುವವರಿಲ್ಲ ಸೇನೆಯ
ಮೊದಲಿಗರು ಮುನ್ನೋಟವಿಕ್ಕಿತು
ಕದನದಲಿ ಕೈಸೂರೆಗೊಟ್ಟರು ಜಯವ ತಮತಮಗೆ
ಎದೆಯ ನೀವಿದನಹಿತ ನೃಪನ
ಭ್ಯುದಯವೆರಡೆಲೆಯಾಯ್ತು ಸಾಹಸಿ
ಸದೆದನೋ ಕಲಿ ಭೀಷ್ಮನೆಂದುದು ಮೇಲೆ ಸುರಕಟಕ  ೨೭

ಸಕಲ ದೆಸೆಯಲಿ ಮುರಿದು ಬಹ ನಾ
ಯಕರ ಕಂಡನು ಪಾರ್ಥನಸುರಾಂ
ತಕಗೆ ತೋರಿದನಕಟ ನೋಡಿದಿರೆಮ್ಮವರ ವಿಧಿಯ
ನಕುಲನಿಲ್ಲಾ ಭೀಮನೋ ಸಾ
ತ್ಯಕಿಯೊ ಸೇನಾಪತಿಯೊ ಕಟಕಟ
ವಿಕಳರೋಡಿದರೋಡಲಿದಿರಿಗೆ ರಥವ ಹರಿಸೆಂದ  ೨೮

ಮಾತು ಹಿಂಚಿತು ತೇರು ಸೇನಾ
ವ್ರಾತವನು ಹಿಂದಿಕ್ಕಿ ಗಂಗಾ
ಜಾತನಿದಿರಲಿ ನಿಂದುದೇನೆಂಬೆನು ಮಹಾದ್ಭುತವ
ಸೋತು ಚೆಲ್ಲಿದ ಸೇನೆ ಹರ್ಷದೊ
ಳಾತು ನಿಂದುದು ಮತ್ತೆ ಭಂಗದ
ಮಾತದೇತಕೆ ಕೇಳು ಜನಮೇಜಯ ಮಹೀಪಾಲ  ೨೯

ಬಲವನಾಯಕವೇ ವೃಥಾ ಹುಲು
ದಳದೊಳಗೆ ನಿಮ್ಮಗ್ಗಳಿಕೆ ಕೈ
ಯಳವ ಮನಗಲಿತನದಳವ ಬಿಲುಗಾರತನದಳವ
ಬಲಿಯಿರೇ ನಮ್ಮೊಡನೆ ಮೆಚ್ಚಿಸಿ
ಬಳಿಕ ಹಡೆಯಿರೆ ಬಿರುದನೆನುತವೆ
ಫಲು ಗುಣನು ಕೈಯಿಕ್ಕಿದನು ಗಂಗಾಕುಮಾರನಲಿ  ೩೦

ನಾವು ವೃದ್ಧರು ಬಿರುದು ಗಿರುದಿನ
ಲಾವಣಿಗೆ ನಮಗೇಕೆ ಹೇಳೈ
ನೀವಲೈ ಜವ್ವನದ ಭಂಟರು ರಣದ ಧುರಭರಕೆ
ನೀವಿರಲು ನಿರ್ನಾಯಕವೆ ಸೇ
ನಾವಳಿ ಮಹಾದೇವ ಮೂದಲೆ
ಗಾವು ಲಕ್ಷ್ಯವೆ ಹೇಳು ಫಲುಗುಣ ಎಂದನಾ ಭೀಷ್ಮ  ೩೧

ಕಟಕಿಯೇಕಿದು ಪರಶುರಾಮನ
ಪಟುತನಕೆ ಮದ್ದರೆದೆನೆಂಬೀ
ನಿಟಿಲನೇತ್ರನ ಭುಜಬಲಕೆ ಸಮಜೋಳಿ ಗಡ ನೀವು
ಕುಟಿಲ ಭಣಿತೆಯನರಿಯೆನಿದರೊಳು
ಭಟರು ನೀವಹುದೆನ್ನ ಶರ ಸಂ
ಘಟನವನು ಚಿತ್ತಯಿಸಿಯೆಂದನು ಪಾರ್ಥ ನಸುನಗುತ  ೩೨

ಅವರು ಪೂರ‍್ವರು ಪರಶುರಾಮ
ಪ್ರವರರನು ಮೆಚ್ಚಿಸಿದೆವೀಗಳಿ
ನವರು ಕಡುಜಾಣಾಯ್ಲರೆಂದು ಸುರೇಖರೆಂದಿಹರು
ಅವರ ಮೆಚ್ಚಿಸಬಹುದು ನೀವಾ
ಹವ ಸುವಿದ್ಯಾ ದುರ್ವಿದಗ್ಧರು
ನಿವಗೆ ನಾವಿದಿರಾಗಬಲ್ಲೆವೆಯೆಂದನಾ ಭೀಷ್ಮ  ೩೩

ಬರಿಯ ಮಾತೋ ಚಾಪ ವಿದ್ಯದೊ
ಳರಿತವುಂಟೋ ಹೊತ್ತುಗಳೆಯದೆ
ಹೆರಿಸಿರೇ ನಾರಿಯನು ನಿಮ್ಮಯ ಬಾಣಗರ್ಭಿಣಿಯ
ಅರಿಯಬಹುದೆನಲಹುದಹುದು ಕೈ
ಮರೆಯದಿರು ಕೈಕೊಳ್ಳೆನುತ ಬೊ
ಬ್ಬಿರಿದು ಪಾರ್ಥನನದ್ದಿದನು ಬಾಣಾಂಬುರಾಶಿಯಲಿ  ೩೪

ಒಳ್ಳಿತೈ ಕೈ ಚಳಕವಾವನ
ಲಿಲ್ಲ ಹರಹರ ಪರಶುರಾಮನ
ನಲ್ಲಿ ಮೆಚ್ಚಿಸಿದಂದವಿನಿತೋ ಮತ್ತೆ ಬೇರುಂಟೊ
ಒಳ್ಳೆಗರನೋಡಿಸಿದ ಸಹಸವ
ನಿಲ್ಲಿ ತೋರಲು ನೆನೆದಿರೇ ತ
ಪ್ಪಲ್ಲ ತಪ್ಪಲ್ಲೆನುತ ಕಣೆಗಳ ಕಡಿದನಾ ಪಾರ್ಥ  ೩೫

ಖೋಡಿ ಮಾಡದಿರೆಲೆ ಕಿರೀಟಿ ವಿ
ಭಾಡಿಸುವುದರಿದೇ ದೊಠಾರಿಸಿ
ಯಾಡುವುದು ದೊರೆಗುಚಿತವೇ ಗರುವಾಯಿಗಂಗವಿದೆ
ನೋಡು ನೋಡಾದರೆ ಕಪರ್ದಿಯ
ಕೂಡೆ ನೀ ಹೊಯಿದಾಡಿ ಬಿಲ್ಲ ಸ
ಘಾಡನಹೆ ದಿಟ ಕಾದುಕೊಳ್ಳೆನುತೆಚ್ಚನಾ ಭೀಷ್ಮ ೩೬

ಇದು ಹೊಸತು ಬಾಣಾಬ್ಧಿ ವೇಲೆಯ
ನೊದೆದು ಹಾಯ್ದುದೊ ಭುವನವಳಿವಂ
ದುದಯಿಸಿದ ಮಳೆಗಾಲವೋ ಮಾಮಾ ಶರಾವಳಿಯೊ
ಹೊದರಡಸಿ ಕಿಡಿಯೆದ್ದು ದೆಸೆಗಳ
ಹೊದಿಸಿದವು ಹೊಳೆದರ್ಜುನನ ಮು
ತ್ತಿದವು ಕೆತ್ತಿದವರಿಯ ಸೀಸಕ ಜೋಡು ಮೊಚ್ಚೆಯವ  ೩೭

ಹನುಮ ಮಸೆಗಂಡನು ಮುರಾಂತಕ
ಕನಲಿದನು ಕಡುನೊಂದು ಪಾರ್ಥನ
ತನುವಿನಲಿ ಹೆಬ್ಬಟ್ಟೆಯಾದುದು ಬಾಣಪಥಿಕರಿಗೆ
ಮೊನೆಯಲುಗು ಮುಕ್ಕುರುಕೆ ರಥವನು
ತನಿಗೊಡಹಿ ಮುಗ್ಗಿದವು ತೇಜಿಗ
ಳನುವರಕೆ ಮುಖದಿರುಹಿದವು ಕಲಿ ಭೀಷ್ಮನುಪಟಳಕೆ  ೩೮

ಬಸಿವ ರಕುತವ ಬಳಿದು ಖಾತಿಯ
ಮಸಕದಲಿ ಕೈಮರೆದು ಮಿಗೆ ದ
ಳ್ಳಿಸುತ ಹೊಗರಿಡುತೌಡುಗಚ್ಚುತ ಹುಬ್ಬುಗಳ ಬಲಿದು
ಹೊಸ ಮಸೆಯ ಬಾಯ್ಧಾರೆಗಳ ಶರ
ವಿಸರವನು ತೊಡಚಿದನು ಭೀಷ್ಮನ
ಮುಸುಕಿದನು ಮಗುಳೆಚ್ಚು ಪುನರಪಿ ಕರೆದನಂಬುಗಳ  ೩೯

ಮುತ್ತಿದವು ನರನಂಬು ಫಣಿಗಳು
ಹುತ್ತ ಹೊಗುವಂದದಲಿ ಕಂಡವ
ಕುತ್ತಿ ಹಾಯ್ದವು ಕೆತ್ತಿ ಹರಿದವು ಕಿಬ್ಬರಿಗಳೆಲುವ
ಮೆತ್ತಿದವು ಕೈ ಮೈಗಳಲಿ ತಲೆ
ಯೊತ್ತಿದವು ವಜ್ರಾಂಗಿಯಲಿ ಭಟ
ನತ್ತಲಿತ್ತಲೆನಲ್ಕೆ ಬಳಸಿದವಾ ನದೀಸುತನ  ೪೦

ಜೋಡು ಹರಿದುದು ತಾಳ ಹಳವಿಗೆ
ನೀಡಿ ಕೆಡೆದುದು ಸಾರಥಿಗಳಸು
ಹೂಡಿತಂತಕಪುರಿಗೆ ತೇಜಿಗಳಸುವ ಕಾರಿದವು
ಗೂಡು ಗೊಂಡುದು ವಿಕ್ರಮಾನಳ
ನಾಡಬಾರದು ಭೀಷ್ಮನನು ಕೈ
ಗೂಡಿ ಕವಿಯಲಿ ದ್ರೋಣ ಗುರುಸುತರೆಂದುದಖಿಲಜನ  ೪೧

ಸಾರು ಫಡ ಕೆಲಬಲದ ಹಂಗಿನ
ವೀರನೇ ಕಲಿ ಭೀಷ್ಮ ಮುನಿದರೆ
ಹೋರಟೆಗೆ ಬರಹೇಳು ಭರ್ಗನನಿವನ ಪಾಡೇನು
ಮೇರೆಗಿದ್ದೆನು ಮಕ್ಕಳೆಂದೇ
ವೈರಬಂಧವ ಬಿಟ್ಟೆನಕಟ ವಿ
ಕಾರಿತನವೇ ನಮ್ಮೊಡನೆಯೆನುತೆಚ್ಚನಾ ಭೀಷ್ಮ  ೪೨

ಎಸಲು ಕಡಿದನು ಪಾರ್ಥನೀತನ
ವಿಶಿಖವನು ತರಿದವನು ಕಿಡಿ ದ
ಳ್ಳಿಸುವ ಧಾರೆಯ ಭೂರಿ ಬಾಣದ ಬಲೆಯ ಬೀಸಿದನು
ಕುಸುರಿದರಿದನು ಮತ್ತೆ ಜೋಡಿಸಿ
ನಿಶಿತ ಶರದಲಿ ಬಳಿಕಲವನಿಗೆ
ಹಸುಗೆ ಮಾಡಿದನಿತ್ತ ಸವೆದವು ಸರಳು ಸಮರದಲಿ  ೪೩

ಉರಗಬಾಣವನಿವರು ಕರೆದರು
ಗರುಡ ಶರದಲಿ ಪಾರ್ಥ ತವಿಸಿದ
ನುರಿಯ ವಿಶಿಖವನಿವರು ನಂದಿಸಿದರು ಜಲಾಸ್ತ್ರದಲಿ
ಗಿರಿಶಿಳೀಮುಖಕಿವರು ವಜ್ರವ
ಹರಿಸಿದರು ತಿಮಿರಾಸ್ತ್ರವೆದ್ದರೆ
ತರಣಿಮಾರ್ಗಣದಿಂದ ತರಿದನು ಭೀಷ್ಮ ವಹಿಲದಿ  ೪೪

ಆವ ವಿಧದಲಿ ಪಾರ್ಥನೆಸುವನ
ದಾವ ಬೇಗದಿ ಮುರಿವನೀತನ
ದಾವ ಚಾಪ ರಹಸ್ಯವಿದ್ಯೆಗಳೊಳಗೆ ಬಳಸಿದನೊ
ಆ ವಿಧದಲಾ ಪರಿಯಲಾ ಸಂ
ಭಾವನೆಯಲಾ ಲುಳಿಯಲಾ ನಾ
ನಾ ವಿಧಾನದಲೊದಗಿ ಸರಿ ಮಿಗಿಲೆನಿಸಿದನು ಭೀಷ್ಮ  ೪೫

ಎರಡು ಶರದಲಿ ನರನು ಭೀಷ್ಮನ
ಕರದ ಕಾರ‍್ಮುಕ ದಂಡವನು ಕ
ತ್ತರಿಸಿದನು ಕೈಯೊಡನೆ ಕೊಂಡನು ಭೀಷ್ಮ ಹೊಸ ಧನುವ
ಸರಳ ಸೂಟಿಯ ತೋರಿಸಿದಡ
ಬ್ಬರಿಸಿ ಫಲುಗುಣನೈದು ಬಾಣದ
ಲರಿ ಭಟನ ಚಾಪವನು ಕಡಿ ಮೂರಾಗಿ ಖಂಡಿಸಿದ  ೪೬

ಮತ್ತೆ ಹೊಸ ಚಾಪದಲಿ ಭೀಷ್ಮನು
ಮಿತ್ತು ಖತಿಗೊಂಡಂತೆ ಶರದಲಿ
ಕೆತ್ತನಾಕಾಶವನು ಕಡಿದನು ಪಾರ್ಥ ನಿಮಿಷದಲಿ
ಮುತ್ತಯನ ಕರತಳದ ಧನುವನು
ಕತ್ತರಿಸಿದನು ಹಿಡಿಯಲೀಯದೆ
ಹತ್ತುಸಾವಿರ ಬಿಲ್ಲು ಸವೆದವು ಕುರುಪಿತಾಮಹನ  ೪೭

ಉಲಿಯೆ ಕಿರು ಘಂಟೆಗಳು ಹೊಳ ಹೊಳ
ಹೊಳೆವ ಶಕ್ತಿಯ ತುಡುಕಿ ಭೀಷ್ಮನು
ಫಲುಗುಣನನಿಡೆ ಕಡಿದು ಬಿಸುಟನು ನೂರು ಬಾಣದಲಿ
ಸೆಳೆದು ಫಲುಗುಣ ತಿರುಹಿ ಭೀಷ್ಮನ
ತಲೆಯ ಲಕ್ಷಿಸಿ ಹೊನ್ನ ಘಂಟೆಗ
ಳುಲಿಯೆ ಬಿಟ್ಟೇರಿಂದಲಿಡೆ ಖಂಡಿಸಿದನಾ ಭೀಷ್ಮ  ೪೮

ಆವ ಚಾಪವ ತುಡುಕಿ ಕೆನ್ನೆಗೆ
ತೀವಿ ತೆಗೆಯದ ಮುನ್ನ ಫಲುಗುಣ
ನೋವದೆಸುವನು ಕಡಿದು ಬಿಸುಡುವನಿವರ ಬಿಲ್ಲುಗಳ
ಆವ ದಿವ್ಯಾಸ್ತ್ರವನು ಕುಂತಿಯ
ಮಾವ ತೊಡುವನು ತೊಡದ ಮುನ್ನ ಶ
ರಾವಳಿಯ ಮುಂಕೊಂಡು ಖಂಡಿಸಿ ಪಾರ್ಥನೆಸುತಿರ್ದ ೪೯

ಮೇಲೆ ಹೇಳಿಕೆಯಾಯ್ತು ಕೌರವ
ರಾಳಿನಲಿ ದುಶ್ಶಾಸನಂಗೆ ಕ
ರಾಳ ಭೂರಿಶ್ರವ ಜಯದ್ರಥ ಗುರು ಕೃಪಾದ್ಯರಿಗೆ
ಕೋಲ ಹೊದೆಗಳ ಬಂಡಿಯಲಿ ನಿ
ಸ್ಸಾಳ ಸೂಳಿನ ಲಗ್ಗೆಯಲಿ ಹೇ
ರಾಳದೊಡ್ಡವಣೆಯಲಿ ಪಡಿಬಲ ಕವಿದುದುರವಣಿಸಿ  ೫೦

ನರನ ಬೆಂಬಲವಾಗಿ ಪಾಂಚಾ
ಲರನು ಮತ್ಸ್ಯನ ಭೀಮಸೇನನ
ವರ ನಕುಲ ಸಹದೇವ ಧೃಷ್ಟದ್ಯುಮ್ನ ಸಾತ್ಯಕಿಯ
ಅರಸನಟ್ಟಿದನಿತ್ತಲಂಬಿನ
ತಿರುಹುವೆರಳಿನ ಮೊರೆವ ಬಿಲ್ಲಿನ
ವರ ರಥದ ದುವ್ವಾಳ ಮೆರೆಯೆ ಶಿಖಂಡಿ ನಡೆತಂದ  ೫೧