ಸೂ. ವೈರಿ ಭಟಕುಲ ವಿಲಯ ರುದ್ರನು
ದಾರತೇಜೋಭದ್ರನಾ ಭಾ
ಗೀರಥೀಸುತ ಧರಿಸಿದನು ಕುರುಸೇನೆಯೊಡೆತನವ

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವರಾಯನಲ್ಲಿಗೆ
ಕಾಳೆಗದ ಕಾತರಿಗರಿವರಟ್ಟಿದರು ಭಟ್ಟರನು
ಕೇಳಿದನು ಕುರುಭೂಮಿಯಲಿ ರಿಪು
ಜಾಲದುದಯವನಂದು ಕುರುಕುಲ
ಮೌಳಿ ಕರೆಸಿದನಾಪ್ತರನು ಪರಿಮಿತಕೆ ಮಂತ್ರಿಗಳ ೧

ರವಿಜ ಗುರುಸುತ ಶಲ್ಯ ಕಲಶೋ
ದ್ಭವರು ಸೌಬಲರಾದಿಯಾದವ
ರವನಿಪಾಲನ ಕಂಡರಂದೇಕಾಂತ ಭವನದಲಿ
ಅವನಿಪತಿ ಹದನೇನು ರಿಪುಪಾಂ
ಡವರ ಬೀಡಿನ ಗುಪ್ತದನುಮಾ
ನವನು ಚಿತ್ತಯಿಸಿದರೆ ಬೆಸಸುವುದೆನಲು ನೃಪ ನುಡಿದ ೨

ಸಂದಣಿಸಿ ಕುರುಭೂಮಿಯಲಿ ತಾ
ಮಂದಿ ಬಿಟ್ಟುದು ನಾಡ ಗಾವಳಿ
ಬಂದುದಲ್ಲಿಗೆ ಕಳುಹಿದರು ದೂತರನು ದುರ್ಜನರು
ನಂದಗೋಪನ ಮಗನ ಕೊಂಡೆಯ
ದಿಂದ ಕಲಿಯೇರಿದರು ಕೃಪಣರ
ಕೊಂದಡಹುದಪಕೀರ್ತಿಯಿದಕಿನ್ನೇನು ಹದನೆಂದ ೩

ಭೂರಿ ನೆರೆದುದು ನಾಡ ಗಾವಳಿ
ಭಾರ ಧೃಷ್ಟದ್ಯುಮ್ನನದು ಗಡ
ಚಾರದೇವನ ಜೋಕೆ ಮಂದಿಯ ಕಾಹು ಕಟ್ಟು ಗಡ
ಧಾರುಣಿಯ ಲಂಪಟರು ಕದನವ
ಹಾರಿ ಬಂದರು ಗಡ ಕೃತಾಂತನ
ಭೂರಿ ಭೂತದ ಧಾತುವಾಯಿತು ಲೇಸು ಲೇಸೆಂದ ೪

ನಾಡ ಮನ್ನೆಯ ಗಿನ್ನೆಯರುಗಳ
ಕೂಡಿಕೊಂಡೆಮ್ಮೊಡನೆ ಕಲಹವ
ಬೇಡಿ ಮಹಿಪಾಲನೆಯ ಪಟ್ಟಕೆ ನೊಲನೊಡ್ಡುವರು
ನೋಡಿರೈ ನಿರುಪಮವಲಾ ಕಾ
ಡಾಡಿಗಳ ಕಲಿತನವನೆನೆ ಮಾ
ತಾಡಿದನು ಕಲಿಕರ್ಣನಾತನ ಮನದ ಮೈಸಿರಿಯ ೫

ನೆರೆದ ದೊದ್ದೆಯನೊರಸಬಹುದೇ
ನರಿದು ಜೀಯ ವಿರೋಧಿರಾಯರ
ನೆರವಿ ತಾನೇಗುವುದು ಗಹನವೆ ನಿನ್ನ ವೀರರಿಗೆ
ಕರಿಗಳಿಗೆ ಪ್ರತ್ಯೇಕವಿವೆ ಕೇ
ಸರಿಗಳೆಮ್ಮನು ಕಳುಹು ನಿಮ್ಮಡಿ
ಪರಿಮಿತಕೆ ಬರಲಾವ ಭಾರವಿದೆಂದನಾ ಕರ್ಣ ೬

ಕಲಕುವೆನು ಪಾಂಡವರ ಸೇನಾ
ಜಲಧಿಯನು ತೇರಿನಲಿ ತಲೆಗಳ
ಕಳುಹುವೆನು ಕದನದಲಿ ಕೈದೋರಿದ ಕುಠಾರಕರ
ಹೊಳಲ ಹೊರಶೂಲದಲಿ ರಿಪುಗಳ
ಸೆಳಸುವೆನು ತಾ ವೀಳೆಯವನೆಂ
ದಲಘುಭುಜಬಲ ಕರ್ಣ ನುಡಿದನು ಕೌರವೇಂದ್ರಂಗೆ ೭

ಕುಲಿಶ ಪರಿಯಮತೇಕೆ ನೇಗಿಲ
ಬಳಿಯ ಹುಲುವೆಟ್ಟಕೆ ವಿರೊಧಿಗ
ಳಳಿಬಲಕೆ ಕಲಿಕರ್ಣ ನೀ ಪರಿಯಂತ ಸಂಗರವೆ
ಹೊಳಲ ಪರಿವಾರಕ್ಕೆ ಸಾರಿಸು
ಕೆಲಬಲದ ರಾಯರಿಗೆ ದೂತರ
ಕಳುಹಿ ನೆರಹಿಸು ಕಾದಿಸೆಂದನು ಕೌರವರ ರಾಯ ೮

ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿದನು ಚತುರಂಗಬಲವನು
ಬೇಗದಲಿ ಕೊಳುಗುಳಕೆ ಕಳುಹಿಸು ಗೆಲಿಸು ಕಾಳೆಗವ
ತಾಗಿ ಬಾಗದ ಮರುಳುತನದು
ದ್ಯೋಗವಿದಕೇನೆಂಬೆನಕಟಕ
ಟೀಗಲದ್ದುದು ಕೌರವಾನ್ವಯವೆಂದನಾ ದ್ರೋಣ ೯

ಹಿಂದೆ ಗಳಹುವನಿವನು ಬಾಯಿಗೆ
ಬಂದ ಪರಿಯಲಿ ಪಾಂಡುತನಯರ
ಕೊಂದನಾಗಳೆ ಕರ್ಣ ನಿನ್ನಾರೊಡನೆ ಸಂಗ್ರಾಮ
ಹಿಂದೆ ಹಮ್ಮಿದ ಸಮರದೊಳು ನಡೆ
ತಂದು ಖೇಚರನಡಸಿ ಕಟ್ಟಿದ
ಡಂದು ನಿನ್ನನು ಬಿಡಿಸಿದವನರ್ಜುನನೊ ರವಿಸುತನೊ ೧೦

ಸಾಹಸಿಗಳಲ್ಲಿಲ್ಲ ಹರಿ ತುರು
ಗಾಹಿ ಪಾಂಡವರೈವರಡವಿಯ
ಮೇಹುಗಾರರು ಬಂದ ಭೂಭುಜರೆಲ್ಲ ತಾ ನೆರವಿ
ಆಹವಕೆ ನಿನ್ನೂರ ತಳವರ
ಗಾಹಿನವರನು ಕಳುಹುವುದು ಸಂ
ದೇಹವೇ ನೀನಿಲ್ಲಿ ಸುಖದಲಿ ರಾಜ್ಯ ಮಾಡೆಂದ ೧೧

ಎಲೆ ಸುಯೋಧನ ಕಾಳುಗೆಡೆದರೆ
ಫಲವನಿದರಲಿ ಕಾಣೆನಹಿತರ
ಬಲದ ಭಾರಣೆ ಬಿಗುಹು ಭೀಮಾರ್ಜುನರು ಬಲ್ಲಿದರು
ನಳಿನನಾಭನ ಮಂತ್ರಶಕ್ತಿಯ
ಬಲುಹು ನೀವ್ ನಿರ್ದೈವರವರ
ಗ್ಗಳ ಸದೈವರು ಕೆಟ್ಟಿರಿನ್ನೇನೆಂದನಾ ದ್ರೋಣ ೧೨

ಅಸುರರಿಪುವಿನ ಮಾತ ನೀ ಮ
ನ್ನಿಸದೆ ಕೌರವಕುಲವನದ್ದಿದೆ
ನುಸಿಗಳಿವದಿರು ಮುನಿದು ಪಾರ್ಥನನೇನ ಮಾಡುವರು
ಅಸುರರಲಿ ಸುರರಲಿ ಭುಜಂಗ
ಪ್ರಸರದಲಿ ಭೀಮಾರ್ಜುನರ ಸೈ
ರಿಸುವರುಂಟೇ ಕೆಟ್ಟಿರಿನ್ನೇನೆಂದನಾ ದ್ರೋಣ ೧೩

ಅವರಿಗಸುರಾಂತಕ ಸಹಾಯನು
ನಿವಗೆ ಗಂಗಾಸುತನ ಬಲವಾ
ಹವವನೀತನ ನೇಮದಲಿ ನೆಗಳುವುದು ನೀತಿಯಿದು
ಅವರಿವರ ಮಾತಿನಲಿ ಫಲವಿ
ಲ್ಲವನಿಪತಿ ಕೇಳೆನಲು ಕಲಶೋ
ದ್ಭವನ ಮತದಲಿ ಬಳಿಕ ಮಣಿದನು ಕೌರವರ ರಾಯ ೧೪

ಮತವಹುದು ತಪ್ಪಲ್ಲ ಗಂಗಾ
ಸುತನ ತಿಳುಹುವ ವೀರಪಟ್ಟವ
ನತುಳ ಬಲಭೀಷ್ಮಂಗೆ ಕಟ್ಟುವೆನೆನುತ ಕುರುರಾಯ
ಮತದ ನಿಶ್ಚಯದಿಂದ ಗುರು ಗುರು
ಸುತನ ಕಳುಹಿದನಿತ್ತಲಬುಜ
ಪ್ರತತಿಯುತ್ಸಹವಡಗೆ ಪಡುವಣ ಕಡಲೊಳಿನನಿಳಿದ ೧೫

ವಿನುತ ಸಂಧ್ಯಾದೇವಿಗಭಿವಂ
ದನ ಜಪಾದಿ ಸಮಸ್ತದೇವಾ
ರ್ಚನೆಯ ಮಾಡಿಯೆ ರವಿತನೂಜನ ಕರಸಿ ಪಂತಿಯಲಿ
ಜನಪನಾರೋಗಿಸಿದನಾಪ್ತಾ
ವನಿಪ ಸಚಿವರು ಸಹಿತ ಭೀಷ್ಮನ
ಮನೆಗೆ ಬಂದನು ಕೌರವೇಶ್ವರನಂದಿನಿರುಳಿನಲಿ ೧೬

ಮುಂದೆ ಹರಿದರು ಕೈಯ ಕಂಬಿಯ
ಸಂದಣಿಯ ಪಡೆವಳರು ಗಂಗಾ
ನಂದನಂಗೀ ಹದನನರುಹಲು ಬಂದನಿದಿರಾಗಿ
ಕಂದುಮೋರೆಯ ರಾಯನನು ತೆಗೆ
ದಂದಣದೊಳಾಲಿಂಗಿಸುತ ನಲ
ವಿಂದ ಮನ್ನಿಸಿ ತಂದನರಮನೆಗುಚಿತವಚನದಲಿ ೧೭

ಏನಿರುಳು ನೀ ಬಂದ ಹದನೆಲೆ
ಮಾನನಿಧಿ ಬೇಕಾದರೆಮ್ಮನು
ನೀನು ಕರೆಸುವುದರುಪುವುದು ನಿಜಕಾರ್ಯಸಂಗತಿಯ
ಏನ ಹೇಳುವೆ ನಗೆಯನನುಸಂ
ಧಾನದಲಿ ಪಾಂಡವರು ಕುರುಭೂ
ಮೀನಿವಾಸಕೆ ಬಂದು ಬಿಟ್ಟರು ಕಿರಿದು ದಳಸಹಿತ ೧೮

ಹರಿಯ ಹಿಸುಣಿಕೆಯವರ ಚಿತ್ತವ
ಬೆರಸಿ ವೈರವ ಬೆಳಸಿ ಬಂದರು
ಧರೆಯ ಭಾಗವ ಬೇಡಿ ಕದನವ ಮಸೆದರೆಮ್ಮೊಡನೆ
ಹರನ ಸಮದಂಡಿಗಳು ನೀವೆಮ
ಗಿರಲು ಬಯಿಸುವ ವೀರನಾವನು
ಮರುಳುತನವನು ಧರ್ಮಪುತ್ರನೊಳರಿಯಲಾಯ್ತೆಂದ ೧೯

ಬಂದರೇ ಪಾಂಡವರು ಸುದ್ದಿಯ
ತಂದರೇ ನಿನ್ನವರು ನಿನಗೇ
ನೆಂದು ಭಾಷೆಯ ಕೊಟ್ಟರೀ ಕರ್ಣಾದಿ ನಾಯಕರು
ಇಂದುಸಂತತಿ ಗುರುವರಲ್ಲಾ
ಬಂದರೇನಪರಾಧವೇ ಇ
ನ್ನೆಂದು ಪರಿಯಂತವರು ನವೆವರು ಎಂದನಾ ಭೀಷ್ಮ ೨೦

ಜಗದ ಗುರುವಲ್ಲಾ ಮುರಾಂತಕ
ನಗಣಿತೋಪಮಮಹಿಮನಲ್ಲಾ
ಸಗುಣ ನಿರ್ಗುಣನಾ ಮಹಾತ್ಮನನಂತ ರೂಪವನು
ವಿಗಡಿಸಲು ಜಯವಹುದೆ ಜಾಣರ
ಬಗೆಗೆ ಬಹುದೇ ನಿನ್ನ ಮತವೆಲೆ
ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ ೨೧

ಮಿಕ್ಕ ಮಾತೇಕಿನ್ನು ನೀ ಹಿಂ
ದಿಕ್ಕಿ ಕೊಂಬರೆ ಕೊಲುವನಾವನು
ಮಕ್ಕಳಾವೆನಬೇಡ ಬಲ್ಲೆವು ನಿನ್ನ ವಿಕ್ರಮವ
ಹೊಕ್ಕು ಹಗೆಗಳ ಹೊಯ್ದು ದಿಗುಬಲಿ
ಯಿಕ್ಕಿ ನನ್ನಯ ಹರುಷಜಲಧಿಯ
ನುಕ್ಕಿಸಲು ಬೇಕೆನಲು ಕೇಳಿದು ಭೀಷ್ಮನಿಂತೆಂದ ೨೨

ದೈವಬಲವವರಲ್ಲಿ ನೀವೇ
ದೈವಹೀನರು ಧರ್ಮಪರರವ
ರೈವರೂ ಸತ್ಪುರುಷಶೀಲರು ನೀವಧಾರ್ಮಿಕರು
ಮುಯ್ವನಾನುವುದವರ್ಗೆ ಭುವನವು
ಬೈವುದೈ ನಿಮ್ಮಿನಿಬರನು ನಿಮ
ಗೈವಡಿಯ ಸಹಸಿಗಳವರು ದುರ್ಬಲರು ನೀವೆಂದ ೨೩

ದಯವನತ್ತಲು ತಿದ್ದಿ ನಮ್ಮನು
ಭಯಮಹಾಬ್ಧಿಯೊಳದ್ದಿ ಸಮರದ
ಜಯವನವರಿಗೆ ಮಾಡಿ ನಮ್ಮಭಿಮತವ ನೀಗಾಡಿ
ನಯವ ನೀವೊಡ್ಡುವರೆ ನಿಮ್ಮನು
ನಿಯಮಿಸುವರಾರುಂಟು ಭಾಗ್ಯೋ
ದಯವಿಹೀನನು ತಾನೆನುತ ಕುರುರಾಯ ಬಿಸುಸುಯ್ದ ೨೪

ಉಚಿತವನು ನಾನರಿಯೆ ವಾರ್ಧಕ
ರಚಿತ ನಿಜವನು ನುಡಿಯೆ ನಿನಗವು
ರುಚಿಸವೇ ಮಾಣಲಿಯದಂತಿರಲೀ ಕುಮಂತ್ರಿಗಳ
ವಚನವತಿಗಾಢದಲಿ ನಟ್ಟುದು
ಸಚಿವ ನಯವಿನ್ನೇಕೆ ಸೇನಾ
ನಿಚಯಕೆಮ್ಮನು ಮೊದಲಿಗನ ಮಾಡರಸ ಹೋಗೆಂದ ೨೫

ಖಳನ ಕಳುಹಿದನತಿಬಳನು ತ
ನ್ನೊಳಗೆ ನೆನೆದನು ಪಾಂಡುನಂದನ
ರುಳಿವು ತನ್ನದು ಮೀರಿ ಕಾದುವಡಸುರರಿಪುವಿಹನು
ಅಳುಕಿ ಕಾದುವಡಿತ್ತ ಹಾವಿನ
ಹಳವಿಗೆಯ ಕಡುಮೂರ್ಖನಿಗೆ ಬೆಂ
ಬಲವ ಕಾಣೆನು ತನಗೆ ಹದನೇನೆನುತ ಚಿಂತಿಸಿದ ೨೬

ಆದಡೇನಿದಿರಾದ ರಿಪುಬಲ
ವಾದುದನು ಸಂಹರಿಸಿ ಮಕ್ಕಳ
ಕಾದು ಬಿಸುಡುವೆನೊಡಲನಾ ಸಂಗ್ರಾಮಭೂಮಿಯಲಿ
ಆದುದಾಗಲಿ ಬಳಿಕ ಮಾಡುವ
ಭೇದ ಬೇರಿಲ್ಲೆನುತ ಹೃತ್ಸಂ
ವಾದವನು ಬೀಳ್ಕೊಟ್ಟು ಗಂಗಾಸೂನು ಪವಡಿಸಿದ ೨೭

ಮಗನೊಡನೆ ಮೂದಲಿಸಿ ಭೀಷ್ಮನು
ಹೊಗುವ ಗಡ ಪರಸೇನೆಯನು ಕಾ
ಳೆಗವ ನೋಡುವೆನೆಂಬವೊಲು ತಲೆದೋರಿದನು ದಿನಪ
ನಗೆಯುಡಗಿ ನಾಚಿದವು ಕುಮುದಾ
ಳಿಗಳು ಮುಂಗಾಣಿಕೆಯ ಹರುಷದೊ
ಳಗಿದು ವಿರಹವ ಬೀಳುಕೊಟ್ಟುವು ಜಕ್ಕವಕ್ಕಿಗಳು ೨೮

ಆರಸನುಪ್ಪವಡಿಸಿದನವನೀ
ಶ್ವರವಿಹಿತಸತ್ಕರ್ಮವನು ವಿ
ಸ್ತರಿಸಿದನು ಚಾವಡಿಗೆ ಬಂದನು ಹರುಷದುಬ್ಬಿನಲಿ
ಚರರನಟ್ಟಿದನಖಿಳಧರಣೀ
ಶ್ವರ ನಿಕಾಯಕೆ ಸಕಲ ಸುಭಟರ
ಬರಿಸಿದನು ತರಿಸಿದನು ಪಟ್ಟಕೆ ಬೇಹ ವಸ್ತುಗಳ ೨೯

ಗುರುತನುಜ ರವಿಸೂನು ಮಾದ್ರೇ
ಶ್ವರ ಕೃಪದ್ರೋಣಾದಿಗಳು ಬಂ
ದರಮನೆಯ ಹೊಕ್ಕರು ನದೀನಂದನನ ಬಳಿವಿಡಿದು
ನೆರೆದರವನೀ ನಿರ್ಜರರು ಕೇ
ಸರಿಯ ಪೀಠವ ರಚಿಸಿ ವೈದಿಕ
ಪರಿಣತರ ಮತದಿಂದ ವಿಸ್ತರಿಸಿದರು ಮಂಗಳವ ೩೦

ಕಮಲಜನ ಹೋಲುವೆಯ ಧಾರುಣಿ
ಯಮರಕರದಲಿ ನಿಗಮ ಪೂತೋ
ತ್ತಮ ಸುವಾರಿಗಳಿಳಿದವಜಸನ್ನಿಭನ ಮಸ್ತಕಕೆ
ಕಮಲಜನ ಕರದಿಂದ ಗಂಗಾ
ವಿಮಲನದಿಯಿಳಿತಂದು ಸಾರ್ದುದೊ
ಹಿಮಗಿರಿಯನೆಂಬಂತಿರಿಳಿದುದು ಪಟ್ಟದಭಿಷೇಕ ೩೧

ಆರತಿಯನೆತ್ತಿದರು ತಂದು
ಪ್ಪಾರತಿಯ ಸೂಸಿದರು ನೃಪಪರಿ
ವಾರವೆಲ್ಲವು ಬಂದು ಕಂಡುದು ಕಾಣಿಕೆಯ ನೀಡಿ
ಕೌರವೇಂದ್ರನ ಮೋಹರದ ಗುರು
ಭಾರ ಭೀಷ್ಮಂಗಾಯ್ತು ಸಮರದ
ವೀರಪಟ್ಟವನಾಂತನಾಚಾರ್ಯಾದಿಗಳು ನಲಿಯೆ ೩೨

ಈ ನದೀನಂದನನ ಬಲದಲಿ
ಸೇನೆ ಶಿವಗಂಜುವುದೆ ಕುಂತೀ
ಸೂನುಗಳಿಗಾರಣ್ಯಜಪವಿನ್ನವರಿಗಿಳೆಯೇಕೆ
ಮಾನನಿಧಿ ಭೀಷ್ಮಂಗೆ ಸಮರಸ
ಮಾನ ಭಟನಿನ್ನಾವೆನಂದು ಮ
ನೋನುರಾಗದ ಮೇಲೆ ಕೌರವರಾಯ ಬಣ್ಣಿಸಿದ ೩೩

ಎಲೆ ಮರುಳೆ ಭೂಪಾಲ ಕೌರವ
ಕುಲಪಿತಾಮಹನಹನು ಧರ್ಮಂ
ಗಳಲಿ ಪರಿಣತನಹನು ಕಾಳೆಗವೆತ್ತಲಿವರೆತ್ತ
ಗಳದ ಗರಳನ ದೊರೆಯ ಭಟಮಂ
ಡಲಿಯೊಳಗೆ ಮನ್ನಣೆಯೆ ಹೇಳೈ
ಕಳಿದ ಹರೆಯಂಗೆಂದು ಗಹಗಹಿಸಿದನು ಕಲಿಕರ್ಣ ೩೪

ತೊಗಲು ಸಡಿಲಿದ ಗಲ್ಲ ಬತ್ತಿದ
ಹೆಗಲು ನರುಕಿದ ನರೆತ ಮೀಸೆಯ
ಜಗುಳ್ದ ಹಲುಗಳ ಹಾಯಿದೆಲುಗಳ ನೆಗ್ಗಿದವಯವದ
ಅಗಿಯಲಲುಗುವ ತಲೆಯ ಮುಪ್ಪಿನ
ಮುಗುದನೀತನ ಕಾದಹೇಳಿದು
ನಗೆಯ ಸುರಿದೈ ರಾಯ ಕಟಕದೊಳೆಂದನಾ ಕರ್ಣ ೩೫

ಇಲ್ಲಿ ಭೀಷ್ಮನು ರಾಘವನ ಬಲ
ದಲ್ಲಿ ಜಾಂಬವನುಭಯವೀರರು
ಬಲ್ಲಿದರು ಬಳಿಕುಳಿದ ಸುಭಟರ ಶೌರ್ಯವೊಪ್ಪುವುದೆ
ನಿಲ್ಲು ನೀ ಕೊಲಲೆಳಸುವರೆ ಹಗೆ
ಯಲ್ಲಿ ಗೊಪ್ಪಿಸಿ ಕೊಲಿಸಲೇತಕೆ
ಬಿಲ್ಲಿನಲಿ ಬಡಿದಡ್ಡಗೆಡಹುವೆನೆಂದನಾ ಕರ್ಣ ೩೬

ಹಾ ನುಡಿಯದಿರು ನಿನ್ನ ಹವಣಿನ
ಮಾನಿಸನೆ ಸುರಸಿಂಧುಜನು ತಾ
ನೀನು ಮಿಗೆ ಮೇಲರಿಯೆ ಜವ್ವನದುಬ್ಬುಗೊಬ್ಬಿನಲಿ
ನೀನು ಸರಿಯೇ ರಾಮಕಟಕದ
ಹಾನಿಯನು ತಲೆಗಾಯ್ತು ಜಾಂಬವ
ಗೇನು ಕೊರತೆಯೆನುತ್ತ ಜರೆದನು ಗರುಡಿಯಾಚಾರ‍್ಯ ೩೭

ರಣದೊಳೊಡ್ಡಿದರಾತಿಗಳನೀ
ಹಣೆಯ ಪಟ್ಟದ ವೀರ ಜಯಿಸಲು
ಹಣವಿಗಾನೋಲೈಸೆ ಮಾಡುವೆನಡವಿಯಲಿ ತಪವ
ರಣದೊಳಿವನಡಗೆಡೆದನಾದರೆ
ಮಣಿಯದಿರಿದಪೆನನ್ನೆಬರ ಮಾ
ರ್ಗಣೆಯನಾಹವದೊಳಗೆ ಸಂಧಿಸೆನೆಂದನಾ ಕರ್ಣ ೩೮

ಗಳಹದಿರು ರಾಧೇಯ ನಿನ್ನಯ
ಕುಲವ ನೋಡದೆ ಮೇರೆದಪ್ಪುವ
ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ
ಕಲಿಗಳುಳಿದಂತೆನ್ನ ಸರಿಸಕೆ
ನಿಲುವನಾವನು ದೇವದಾನವ
ರೊಳಗೆ ನಿನ್ನೊಡನೊರಲಿ ಫಲವೇನೆಂದನಾ ಭೀಷ್ಮ ೩೯

ಕೇಳು ನೃಪ ಕೇಳೈ ಜಯದ್ರಥ
ಕೇಳು ಗುರುಸುತ ಶಲ್ಯ ಕುಂಭಜ
ಕೇಳು ದುಶ್ಶಾಸನ ವಿಕರ್ಣ ಸುಲೋಚನಾದಿಗಳು
ಕಾಳೆಗದೊಳರಿ ದಶಸಹಸ್ರ ನೃ
ಪಾಲಕರ ಮಣಿಖಚಿತನಿರ‍್ಮಲ ೪೦
ಮೌಳಿಗಳ ದಿಗುಬಲಿಯ ಕೊಡುವೆನು ದಿವಸ ದಿವಸದಲಿ ಹರಿಯ

ಚಕ್ರವ ತುಡುಕಿಸುವೆ ವಾ
ನರಪತಾಕನ ರಥವ ಹಿಂದಕೆ
ಮುರಿಯಲಿಸುವೆನು ಮಹಿಮರಿಬ್ಬರ ನಡೆವಳಿಯ ಕೆಡಿಸಿ
ಸುರನರೋರಗರೊಳಗೆ ಮೀಟಾ
ದರಿಗೆ ಕಟ್ಟಿದ ತೊಡರು ಇವನು
ಬ್ಬರಿಸಿ ನುಡಿದರೆ ನೊರಜ ಕೊಲುವರೆ ಕೈದುವೇಕೆಂದ ೪೧

ಜಲಧಿಯುಬ್ಬಿದವೊಲು ಸಭಾಮಂ
ಡಲಿಯ ಸೌಹೃದವಾಗ್ವಿವಾದದ
ಕಳಕಳಿಕೆ ದಿಗುತಟವ ಗಬ್ಬರಿಸಿದುದು ಗಾಢದಲಿ
ಕೆಲರು ಭೀಷ್ಮನನಿನತನೂಜನ
ಕೆಲರು ಕೊಂಡಾಡಿದರು ಕೌರವ
ನಳುಕಿ ಭೀಷ್ಮನ ಬೇಡಿಕೊಂಡನು ವಿನಯಪರನಾಗಿ ೪೨

ಬೀಳುಕೊಂಡುದು ರಜನಿ ಮರುದಿನ
ವಾಳುಕುದುರೆಯ ನೆರಹಿ ಧರಣೀ
ಪಾಲ ಸುಮುಹೂರ್ತದಲಿ ಹೊಯ್ಸಿದನಂದು ಹೊರಗುಡಿಯ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳಕೋಟಿಗಳುರುಚತುರ್ಬಲ
ಮೇಳವಿಸಿ ನಡೆದುದು ಸಮಸ್ತ ಮಹಾಮಹೀಶ್ವರರು ೪೩

ವೀರ ಧೃತರಾಷ್ಟ್ರಂಗೆ ವರ ಗಾಂ
ಧಾರಿಗೆರಗಿದನವರ ಹರಕೆಯ
ಭೂರಿಗಳ ಕೈಕೊಂಡನವನೀಸುರರಿಗಭಿನಮಿಸಿ
ಚಾರುಚಮರದ ನಿಕರದವರೊ
ಯ್ಯಾರಿಸಲು ಜಯರವದ ರಭಸದು
ದಾರ ಮೆರೆಯಲು ಬೀಳುಕೊಂಡನು ರಾಜಮಂದಿರವ ೪೪

ಒಡನೊಡನೆ ಕರಿತುರಗವೇರಿದ
ರೊಡನೆ ಹುಟ್ಟಿದ ಶತಕುಮಾರರು
ಗಡಣದಾಪ್ತರು ಕರ್ಣ ಶಕುನಿ ಜಯದ್ರಥಾದಿಗಳು
ಅಡಸಿದವು ಸೀಗುರಿಗಳಭ್ರವ
ತುಡುಕಿದವು ಝಲ್ಲರಿಗಳಂತ್ಯದ
ಕಡಲವೊಲು ಪಡೆ ನಡೆಯೆ ಹಸ್ತಿನಪುರವ ಹೊರವಂಟ ೪೫

ಭುಗುಭುಗಿಪ ಚಂಬಕನ ಗಜಕೋ
ಟಿಗಳ ಮುಂದಣ ಡೌಡೆಗಳ ಭೂ
ಗಗನವೊಡನೊಡನೊದರೆ ಮೊರೆವ ಗಭೀರಭೇರಿಗಳ
ಅಗಿವ ಪಟಹ ಮೃದಂಗ ಕಹಳಾ
ದಿಗಳ ಕಳಕಳ ರಭಸ ದಶದಿ
ಕ್ಕುಗಳ ಮಾತಾಡಿಸೆ ಮಹಾಬಲ ತೆರಳಿತಿಭಪುರಿಯ ೪೬

ಅಗಿವ ವಜ್ರದ ಹೊಳೆಕೆಗಳೊ ದಿಟ
ಹಗಲ ತಗಡೋ ಮೇಣು ಮಿಂಚಿನ
ಬಗೆಯ ಸೆಕ್ಕೆಯೊ ಸೂರ‍್ಯಕಾಂತಚ್ಛವಿಯ ತೆಕ್ಕೆಗಳೊ
ಜಗುಳಿದೊರೆಗಳ ಜಾಳಿಗೆಯ ಹೊಗ
ರೊಗಲು ಝಳಪಿಸೆ ಹೊಳೆ ಹೊಳೆವ ಕೈ
ದುಗಳ ಹಬ್ಬುಗೆವೆಳಗು ಗಬ್ಬರಿಸಿದುದು ದಿಗುತಟವ ೪೭

ಜಲಧಿಗಳ ಕುಡಿದುದು ನಭೋಮಂ
ಡಲವ ಸೆಳೆದುದು ಸುರನದಿಯ ಮು
ಕ್ಕುಳಿಸಿತಖಿಲಾದ್ರಿಗಳ ನುಂಗಿತು ದಿವವನಳುಕಿಸಿತು
ನೆಲನ ಸವೆಸಿತು ನೇಸರಿನ ಕಂ
ಗಳನು ಕದುಕಿತು ನೆನೆಯ ಬಾರದು
ನಳಿನಭವ ಹರನಾದನೆನಲುಚ್ಚಳಿಸೆ ಪದಧೂಳಿ ೪೮

ಸುರಿವ ಗಜಮದಧಾರೆಯಲಿ ಹೊಸ
ಶರಧಿಗಳು ಸಂಭವಿಸಿದವು ನೃಪ
ವರರ ಮಕುಟದ ಮಣಿಯೊಳಾದರು ಚಂದ್ರಸೂರಿಯರು
ಗಿರಿಗಳಾದುವು ದಂತಿಯಲಿ ಪಡಿ
ಧರಣಿಯಾದವು ಛತ್ರಚಮರದ
ಲರರೆ ನೂತನಸೃಷ್ಟಿಯಾಯ್ತು ವಿರಿಂಚಸೃಷ್ಟಿಯಲಿ ೪೯

ಅರರೆ ನಡೆದುದು ಸೇನೆ ಕುಲಗಿರಿ
ಯೆರಡು ಕೂರುಮ ಘಣಿಪರಿಬ್ಬಿ
ಬ್ಬರ ದಿಶಾಮಾತಂಗಗಳ ಹದಿನಾರನಳವಡಿಸಿ
ಸರಸಿಜೋದ್ಭವ ಸೃಜಿಸದಿರ್ದರೆ
ಧರಿಸಲಾಪುದೆ ಧರಣಿಯೆನೆ ಕುರು
ಧರೆಗೆ ಬಂದುದು ಸೇನೆ ಪಯಣದ ಮೇಲೆ ಪಯಣದಲಿ ೫೦

ನಡೆದು ಬಂದುದು ಕೌರವೇಂದ್ರನ
ಪಡೆ ಕುರುಕ್ಷೇತ್ರಕ್ಕೆ ಮೂಡಣ
ಕಡೆಯಲಳವಡಿಸಿದರು ಬೀಡಾಯಿತ್ತು ವಹಿಲದಲಿ
ಗುಡಿಗಳನು ಬಿಡಿಸಿದರು ಲೋಹದ
ತಡಿಕೆಗಳನಳವಡಿಸಿ ಬೀಡಿನ
ನಡುವೆ ರಚಿಸಿದರವನಿಪಾಲನ ರಾಜಮಂದಿರವ ೫೧

ಅಳವಿ ನಾಲ್ವತ್ತೆಂಟರೊಳಗಿ
ಟ್ಟಳಿಸಿ ಬಿಟ್ಟುದು ಸೇನೆ ಕೋಟಾ
ವಳಯವಗಳಲ್ಲಲ್ಲಿ ತಳಿ ಮುಳುವೇಲಿ ಪಡಿಯಗಳು
ಕೆಲದೊಳೊಪ್ಪುವ ಭೋಗವತಿ ನಿ
ರ‍್ಮಲ ಗಭೀರೋದಕದ ನದಿ ಕುರು
ಬಲದ ಪಾಳಯದಂಗವಿದು ಕೇಳೈ ಮಹೀಪಾಲ ೫೨

ಪಡೆಯ ಮುಂಗುಡಿ ಭೀಷ್ಮನದು ಬಲ
ನೆಡನು ಪಿಂಗುಡಿಯಾತನದು ನೃಪ
ಗಡಣಬೀಡಿನ ಕಾಹು ಗಂಗಾಸುತನ ಗುರುಭಾರ
ನಡೆವಡಾತನ ನೇಮ ಮರಳಿದು
ಬಿಡುವಡಾತನ ಮಾತು ಕೌರವ
ಪಡೆಗೆ ಭಾರಿಯ ವಜ್ರಪಂಜರವಾದನಾ ಭೀಷ್ಮ ೫೩

ಕೇಳು ಜನಮೇಜಯ ಧರಿತ್ರೀ
ಪಾಲ ಧೃತರಾಷ್ಟ್ರಂಗೆ ಮಕ್ಕಳ
ಮೇಲೆ ನೆನೆಹಾಯ್ತಧಿಕಶೋಕೋದ್ರೇಕ ಪಲ್ಲವಿಸೆ
ಕಾಳೆಗದೊಳೇನಾದರೋ ಭೂ
ಪಾಲತಿಲಕರು ದೃಗುವಿಹೀನರ
ಬಾಳಿಕೆಯ ಸುಡಲೆನುತ ತನ್ನೊಳು ಹಿರಿದು ಚಿಂತಿಸಿದ ೫೪

ಆ ಸಮಯದಲಿ ರಾಯ ವೇದ
ವ್ಯಾಸಮುನಿ ನಡೆತಂದು ಗತಪರಿ
ತೋಷನನು ಸಂತೈಸಿ ಕರೆಸಿದನಂದು ಸಂಜಯನ
ಆ ಸಮರವೃತ್ತಾಂತ ನಿನಗೆ ಸ
ಮಾಸ ವಿಸ್ತಾರವಾಗಿರಲಿ ಭೂ
ಮೀಶತಿಲಕಂಗರುಹುವುದು ನೀನೆಂದು ನೇಮಿಸಿದ ೫೫

ಪರಮ ವೇದವ್ಯಾಸ ಮುನಿಪನ
ಕರುಣವಾಗಲು ಕಂಗಳಿಗೆ ಗೋ
ಚರಿಸಿತೀ ಭಾರತ ಮಹಾಸಂಗ್ರಾಮ ಸೌರಂಭ
ಧುರದ ವೃತ್ತಾಂತವನು ಚಿತ್ತೈ
ಸರಸ ತಿಳುಹುವೆನೆಂದು ಸಲೆ ವಿ
ಸ್ತರಿಸ ಬಗೆದನು ಸಂಜಯನು ಧೃತರಾಷ್ಟ್ರಭೂಪತಿಗೆ ೫೬

ಅವಧರಿಸು ಧೃತರಾಷ್ಟ್ರ ಗಂಗಾ
ಭವನ ನೇಮದಲಂದು ಮಹದಾ
ಹವಕೆ ನಡೆದುದು ಕಟಕವಲ್ಲಿಯುಲೂಕನೆಂಬುವನು
ಇವರು ಕಳುಹಿದೊಡವನು ರಿಪು ಪಾಂ
ಡವರ ಹೊರಗೈತಂದನಿನ್ನಾ
ಹವಕೆ ನಿಂದಿರು ಧರ‍್ಮಪುತ್ರ ವಿಳಂಬವೇಕೆಂದ ೫೭

ಅಗ್ಗಳೆಯನೆಮ್ಮರಸ ಸಂಪ್ರತಿ
ನೆಗ್ಗಿ ಕೆಟ್ಟಿರಿ ನೀವು ನಿಮಗೀ
ಹುಗ್ಗಿಗರು ಹುರಿಗೂಡಿ ಗೆಲಿದಿನ್ನಿಳೆಯ ಕೊಡಿಸುವರೆ
ಅಗ್ಗಿ ತಾ ಮಾತೇಕೆ ರಣದಲಿ
ನುಗ್ಗುನುಗ್ಗಾಗದೆ ಸಹೋದರ
ರೊಗ್ಗು ಮುರಿಯದೆ ಮಾಣದರೆಗೇಡಾಯ್ತು ನಿಮಗೆಂದ ೫೮

ಬೆಂಬಲಕೆ ತಾನೆಂದು ಬಯಲ ವಿ
ಡಂಬದಿಲಿ ಕಾಳೆಗವ ಮಸೆದರೆ
ನಂಬಿ ಕೆಟ್ಟಿರಿ ಕೃಷ್ಣನನು ನೀವೇನ ಮಾಡುವಿರಿ
ಇಂಬುಗೆಟ್ಟುದು ರೀತಿ ರಣಕೆ ತ್ರಿ
ಯಂಬಕನನಮರಾಧಿಪನ ಕೈ
ಕೊಂಬನೇ ಕೌರವನೆನಲು ಖತಿಗೊಂಡನಾ ಭೀಮ ೫೯

ಸೀಳು ಕುನ್ನಿಯ ಬಾಯನೆಲವೋ
ತೋಳ ತೀಟೆಯನವನ ನೆತ್ತಿಯ
ಮೇಲೆ ಕಳೆವೆನು ಕಲಕುವೆನು ಕೌರವ ಬಲಾಂಬುಧಿಯ
ಹೇಳು ಹೋಗೀ ನಾಯನಾಡಿಸಿ
ಕೇಳುತಿರಲೇಕಹಿತ ಕುರುಕುಲ
ಕಾಲಭೈರವನೆಂದು ನಿನ್ನೊಡೆಯಂಗೆ ಹೇಳೆಂದ ೬೦

ಮಾಡಲಿದ್ದುದು ಬಹಳ ಪೌರುಷ
ವಾಡಿ ಕೆಡಿಸಲವೇಕೆ ಕೌರವ
ರಾಡಿ ಕೆಡಿಸಲಿ ಮಾಡಿ ಕೆಡಿಸಲಿ ಚಿಂತೆ ನಮಗೇಕೆ
ಮಾಡಿದೆವು ಗುರುಭಾರವನು ಮುರ
ಗೇಡಿಯಲಿ ರಣಪಾರಪತ್ಯವ
ಮಾಡುವಾತನು ಕೃಷ್ಣನೆಂದನು ಧರ‍್ಮಸುತ ನಗುತ ೬೧
ವೈರಿದೂತನ ಕಳುಹಿದನು ಕೈ
ವಾರಿಗಳು ಜಯಜಯಯೆನಲು ಹೊಂ
ದೇರ ತರಸಿದನಬುಜನಾಭನ ಪದಯುಗಕೆ ನಮಿಸಿ
ವಾರುವದ ಖುರನಾಲ್ಕರಲಿ ಮಣಿ
ಚಾರು ಕನಕವ ಸುರಿದು ಧರ‍್ಮಜ
ತೇರನೇರಿದನೊದರಿದವು ನಿಸ್ಸಾಳ ಕೋಟಿಗಳು ೬೨

ಹರಿಯ ಬಲವಂದಣ್ಣನಂಘ್ರಿಗೆ
ಶಿರವ ಚಾಚಿ ನಿಜಾಯುಧವ ವಿ
ಸ್ತರಿಸಿ ಪವನಜ ಪಾರ್ಥಮಾದ್ರೀಸುತರು ರಥವೇರಿ
ಧುರಕೆ ನಡೆದರು ದ್ರುಪದ ಸಾತ್ಯಕಿ
ವರ ವಿರಾಟಾದಿಗಳು ಚೂಣಿಯೊ
ಳುರವಣಿಸಿದರು ಸೇನೆ ನಡೆದುದು ಮುಂದೆ ಸಂದಣಿಸಿ ೬೩

ಬಳಿಕ ಧೃಷ್ಟದ್ಯುಮ್ನನಾಜ್ಞೆಯೊ
ಳಳವಿಗೊಟ್ಟುದು ಸೇನೆ ಮೂಡಣ
ಜಲಧಿಗಾಂತುದು ಪಶ್ಚಿಮೋದಧಿಯೆಂಬ ರಭಸದಲಿ
ಪಳಹರದ ತೋಮರದ ಕುಂತಾ
ವಳಿಯ ಚಮರಚ್ಛತ್ರಮಯ ಸಂ
ಕುಳದಿನಾದುದು ಭೂತ ನಾಲ್ಕಾಕಾಶಗತವಾಗಿ ೬೪