ಸೂ. ಕುಲಕಮಲ ಖರಕಿರಣ ಪಾಂಡವ
ಬಲಕೆ ಶರಣಾಗತ ಜಲಧಿ ವರ
ನಿಲಯವೆನೆ ರಂಜಿಸಿತು ಗಂಗಾಸುತನ ಶರಶಯನ

ಕಂಡನರ್ಜುನನೌಕಿ ಕವಿದ ಶಿ
ಖಂಡಿಯನು ಮಝ ಪೂತು ಪಾಯಕು
ಗಂಡುಗಲಿಯಹೆ ಚಾಗು ತೊಟ್ಟೆಸು ಭೀಷ್ಮನವಯವವ
ಕೊಂಡು ನಡೆ ನೀನಂಜದಿರು ಕೈ
ಕೊಂಡು ನಿಲುವೆನೆನುತ್ತ ಫಲುಗುಣ
ಮಂಡಿಸಿದನಾಲಿದನು ಸೆಳೆದನು ಬೋಳೆಯಂಬುಗಳ  ೧

ಒದರಿ ಜೇವಡೆಗೈದು ಬಾಣವ
ಕೆದರಿದನು ಥಟ್ಟೈಸಿ ಚಾಪವ
ನೊದೆದು ಹಾಯ್ದವು ಕೋದವಂಬುಗಳರಿಯ ನೆತ್ತಿಯಲಿ
ಇದಿರೊಳುಲಿದು ಶಿಖಂಡಿ ಶರ ಸಂ
ಘದಲಿ ಹೂಳಿದನಾಗ ಭೀಷ್ಮನ
ಹೃದಯದಲಿ ವೈರಾಗ್ಯ ಮನೆಗಟ್ಟಿತ್ತು ನಿಮಿಷದಲಿ  ೨

ಎಲೆ ಮಹಾದೇವೀ ನಪುಂಸಕ
ನಲಿ ನಿರಂತರವೆಮಗೆ ಸಮರವೆ
ಗೆಲವಿದೊಳ್ಳಿತೆ ಸುಡು ಶಿಖಂಡಿಯ ಕೂಡೆ ಬಿಲುವಿಡಿದು
ಅಳುಕದೆಚ್ಚನಲಾ ದುರಾತ್ಮನ
ನಿಲವ ತೆಗೆ ತೆಗೆಯೆನುತ ಚಾಪವ
ನಿಳುಹಿದನು ರಥದೊಳಗೆ ಗಂಗಾಸೂನು ವಹಿಲದಲಿ  ೩

ನರನ ಸರಳಿಗೆ ಮೈಯ ಕೊಟ್ಟರೆ
ಮುರಿದು ರಥದಲಿ ನಿಂದು ನಿಜ ಮೋ
ಹರವ ನೋಡುತ ಶಲ್ಯ ಗುರು ಕೃಪ ಕೌರವಾನುಜರ
ಕರೆದು ನುಡಿದನು ಪಾರ್ಥನಂಬಿನ
ಹೊರಳಿ ಹೊಳ್ಳಿಸುತಿದೆ ಮದಂತಃ
ಕರಣ ಕುಂದಿತು ಕಾಯಲಾದರೆ ಬನ್ನಿ ನೀವೆಂದ  ೪

ಇವು ಶಿಖಂಡಿಯ ಬಾಣವೆವಾ
ಸವನ ಮಗನಂಬುಗಳು ವಿಲಯದ
ಶಿವನ ಶೂಲದ ಗಾಯಕಿವು ಮಿಗಿಲೇನನುಸುರುವೆನು
ಇವನು ಸೈರಿಸಲಾರೆನಿಂದ್ರನ
ಪವಿಯ ಹೊಯ್ಲನು ಹೊರುವೆನಂತ್ಯದ
ಜವನ ದಂಡದ ಹತಿಗೆ ಹೆದರೆನು ಕೇಳಿ ನೀವೆಂದ  ೫

ಪರಶು ರಾಮನ ಕೊಡಲಿ ಕಡಿತವ
ಧರಿಸಲಾಪೆನು ವಿಲಯಭೈರವ
ನಿರಿದಡಂಜೆನು ಸಿಡಿಲು ಹೊಡೆದರೆ ರೋಮ ಕಂಪಿಸದು
ಹರನ ಪಾಶುಪತಾಸ್ತ್ರ ಬಾದಣ
ಗೊರೆದರೆಯು ಲೆಕ್ಕಿಸೆನು ಪಾರ್ಥನ
ಸರಳ ಚೂಣಿಗೆ ಸಿಲುಕಿದೆನು ಪರಿಹರಿಸಿ ನೀವೆಂದ  ೬

ಹರಿಯ ಕೌಮೋದಕಿಯ ಹೊಯ್ಲನು
ಬೆರಳಲಾನುವೆನಖಿಲ ಕುಲಗಿರಿ
ಜರಿದು ಬೀಳುವಡಾನಲಾಪೆನು ನಖದ ಕೊನೆಗಳಲಿ
ಭರದಲಾದಿವರಾಹ ದಾಡೆಯ
ಲಿರಿದಡೆಯು ನರಸಿಂಹ ನಖದಲಿ
ಕೆರೆದಡೆಯು ಸೈರಿಸುವೆನಂಜುವೆನರ್ಜುನನ ಶರಕೆ  ೭

ಒಡಲನೊಚ್ಚತಗೊಂಡವಂಬಿನ
ಕುಡಿಗೆ ನೆರೆಯದು ರಕ್ತಜಲ ಬಳಿ
ವಿಡಿದು ಕವಿವಂಬುಗಳು ಬಂಬಲ್ಗರುಳ ಸೇದಿದವು
ಉಡಿದವೆಲು ಬಾಣಂಗಳೆಲುವಾ
ಗಡಸಿದುವು ತನಿರಕುತ ಮಾಂಸವ
ನುಡುಗಿದವು ಶರವಿವು ಶಿಖಂಡಿಯ ಬಾಣವಲ್ಲೆಂದ  ೮

ಚೇಳ ಬೆನ್ನಿನೊಳೊಡೆದು ಮೂಡುವ
ಬಾಲ ವೃಶ್ಚಿಕದಂತೆ ಮಸೆದಿಹ
ಬೋಳೆಯಂಬುಗಳೊಡೆದು ಮೊನೆದೋರಿದವು ಬೆನ್ನಿನೊಳು
ಕೋಲು ಪಾರ್ಥನವಿವು ಶಿಖಂಡಿಯ
ಕೋಲುಗಳು ತಾನಲ್ಲ ನಿಂದುದು
ಕಾಳೆಗವು ನಮಗೆನುತ ಮೆಲ್ಲನೆ ಮಲಗಿದನು ಭೀಷ್ಮ  ೯

ವೀರಭಟ ಭಾಳಾಕ್ಷ ಭೀಷ್ಮನು
ಸಾರಿದನು ಧಾರುಣಿಯನಕಟಾ
ಕೌರವನ ಸಿರಿ ಸೂರೆಯೋದುದೆ ಹಗೆಗೆ ಗೆಲವಾಯ್ತೆ
ಆರನಾವಂಗದಲಿ ಬರಿಸದು
ಘೋರ ವಿಧಿ ಶಿವಶಿವ ಎನುತ್ತಾ
ಸಾರಥಿಯು ಕಡುಖೇದದಲಿ ತುಂಬಿದನು ಕಂಬನಿಯ  ೧೦

ಹೂಳಿ ಹೋಯಿತು ಬಾಣದಲಿ ಮೈ
ತೋಳು ತೊಡೆ ಜೊಂಡೆದ್ದು ರಕುತದ
ಸಾಲುಗೊಳಚೆಯ ಕರುಳ ಕುಸುರಿಯ ಬಸಿವ ನೆಣವಸೆಯ
ಮೂಳೆಯೊಟ್ಟಿಲ ನೆಲನ ಮುಟ್ಟದ
ಜಾಳಿಗೆಯ ಹೊಗರೊಗುವ ಕೆಂಗರಿ
ಗೋಲ ಮಂಚದ ಮೇಲೆ ರಣದಲಿ ಭೀಷ್ಮ ಪವಡಿಸಿದ  ೧೧

ಒರಲಿ ಕೆಡೆದರು ಹಡಪಿಗರು ಸೀ
ಗುರಿಯವರು ಸತ್ತಿಗೆಯವರು ತ
ನ್ನರಮನೆಯ ವಿಶ್ವಾಸಿಗಳು ಬಿಲುಸರಳ ನೀಡುವರು
ಗುರುವಲಾ ಮುತ್ತಯ್ಯ ನಮ್ಮನು
ಹೊರೆದ ತಂದೆಗೆ ತಪ್ಪಿದರು ಕಡು
ನರಕಿಗಳು ಪಾಂಡವರು ಸುಡುಸುಡೆನುತ್ತ ಹೊರಳಿದರು  ೧೨

ಬೆದರು ತವನಿಧಿಯಾಯ್ತು ಪಟು ಭಟ
ರೆದೆಗಳಿಬ್ಬಗಿಯಾಯ್ತು ವೀರಾ
ಭ್ಯುದಯ ಕೈಸೆರೆಯೋಯ್ತು ಸುಕ್ಕಿತು ಮನದ ಸುಮ್ಮಾನ
ಹೊದರೊಡೆದು ಕುರುಸೇನೆ ತೆಗೆದೋ
ಡಿದುದು ಭಯಜಲಧಿಯಲಿ ತೇಕಾ
ಡಿದರು ಕೌರವ ಜನಪರೀ ಭೀಷ್ಮಾವಸಾನದಲಿ ೧೩

ಭೀತಿ ಬೀತುದು ಹರುಷವಲ್ಲರಿ
ಹೂತುದವರಿಗೆ ವಿಜಯ ಕಾಮಿನಿ
ದೂತಿಯರ ಕಳುಹಿದಳು ತನಿ ಹೊಗರೇರಿತುತ್ಸಾಹ
ಸೋತುದಾಹವ ಚಿಂತೆ ಜರಿದುದು
ಕಾತರತೆ ನುಡಿಗೆಡೆಗುಡದೆ ಭಾ
ವಾತಿಶಯವೊಂದಾಯ್ತು ಪಾಂಡವ ಬಲದ ಸುಭಟರಿಗೆ  ೧೪

ಮಲಗಿದನು ಕಲಿಭೀಷ್ಮನೆನೆ ತ
ಲ್ಲಳಿಸಿದನು ಕುರುರಾಯನುದರದೊ
ಳಿಳಿದುದಾಯುಧವೆಂಬ ತೆರದಲಿ ತಳ್ಳುವಾರಿದನು
ಬಲಿದುಸುರ ಬಿಸುಸುಯಿಲ ಹಬ್ಬಿದ
ಕಳಕಳದ ಕಂಬನಿಯ ಕಿಬ್ಬೊನ
ಲಿಳಿವ ಕದಪಿನ ಹೊತ್ತ ದುಗುಡದ ಮುಖದೊಳೈತಂದ  ೧೫

ಎಡೆಮುರಿದುದೈಶ್ವರ್ಯವಿನ್ನೇ
ನೊಡೆಯ ಭಿತ್ತಿಯ ಚಿತ್ರವಾದನು
ಕಡೆಗೆ ಬಂದುದೆ ಕೌರವಾನ್ವಯ ಶಿವಶಿವಾ ಎನುತ
ಹಿಡಿದ ದುಗುಡದ ಕವಿದ ಮುಸುಕಿನ
ಗಡಣದಲಿ ಗುರು ಕೃಪ ಜಯದ್ರಥ
ರೊಡನೊಡನೆ ಬರುತಿರ್ದುದಖಿಲ ಮಹೀಶ ಪರಿವಾರ ೧೬

ಕುದುರೆ ಕಂಬನಿಯಿಕ್ಕಿದವು ಮೈ
ಬಿದಿರಿದವು ದಂತಿಗಳು ಕಾಲಾ
ಳೊದರಿ ಕೆಡೆದವು ಕುಂದಿದವು ಕೈಮನದ ಕಡುಹುಗಳು
ಬೆದರಿ ಬಂದಿಗೆ ಸಿಲುಕಿತವನಿಪ
ನದಟು ವಿಕ್ರಮವಹ್ನಿ ತಂಪೇ
ರಿದುದು ಕಡುದುಮ್ಮಾನ ಕೇಣಿಯ ಹಿಡಿದುದುಭಯಬಲ  ೧೭

ಬಂದು ಭೀಷ್ಮನ ಚರಣ ಸೀಮೆಯ
ಲಂದು ಕಾಯವ ಕೆಡಹಿ ವಿಗತಾ
ನಂದ ಭೂಪತಿ ಹೊರಳಿದನು ಹೇರಾಳ ಶೋಕದಲಿ
ಒಂದು ಮಗ್ಗುಲ ಕೆಲದೊಳಿವರೈ
ತಂದು ನಂದರು ಗುರು ಕೃಪಾದಿಗ
ಳೊಂದು ಮಗ್ಗುಲ ಸಾರಿ ನಿಂದರು ಕೃಷ್ಣ ಪಾಂಡವರು  ೧೮

ಕವಿದ ಮುಸುಕಿನ ಕಂದಿದಾನನ
ದವನಿಪತಿ ಯಮಸೂನು ಗಂಗಾ
ಭವನ ಮಗ್ಗುಲ ಸಾರಿದನು ಕೈಚಾಚಿ ಕದಪಿನಲಿ
ಪವನಸುತ ಸಹದೇವ ಸಾತ್ಯಕಿ
ದಿವಿಜಪತಿಸುತರಾದಿ ಯಾದವ
ರವಿರಳದ ಶೋಕಾಗ್ನಿತಪ್ತರು ಪಂತಿಗಟ್ಟಿದರು  ೧೯

ಏನ ನೆನೆದಾವುದನೊಡರ್ಚಿದೆ
ನೇನ ಹೇಳುವೆನೆನ್ನ ಪುಣ್ಯದ
ಹಾನಿಯನು ಕೈತಪ್ಪ ನೆನೆದೆನು ನಿಮ್ಮ ಸಿರಿಪದಕೆ
ನಾನದಾವುದು ಧರ‍್ಮತತ್ವ ನಿ
ಧಾನವೆಂದರಿಯದೆ ಕೃತಾಂತಂ
ಗಾನು ಹಂಗಿಗನಾದೆನೆಂದೊರಲಿದನು ಯಮಸೂನು ೨೦

ಖೇದವೇಕೆಲೆ ಮಗನೆ ನಿನ್ನೋ
ಪಾದಿಯಲಿ ಸುಚರಿತ್ರನಾವನು
ಮೇದಿನಿಯೊಳಾ ಮಾತು ಸಾಕೈ ಕ್ಷತ್ರಧರ‍್ಮವನು
ಆದರಿಸುವುದೆ ಧರ‍್ಮ ನಿನಗಪ
ವಾದ ಪಾತಕವಿಲ್ಲ ಸುಕೃತ
ಕ್ಕೀ ದಯಾಂಬುಧಿ ಕೃಷ್ಣ ಹೊಣೆ ನಿನಗಂಜಲೇಕೆಂದ  ೨೧

ಮಗನೆ ಕೇಳೈ ಪಾರ್ಥ ಕೂರಂ
ಬುಗಳ ಹಾಸಿಕೆ ಚೆಂದವಾಯಿತು
ಹೊಗರಲಗ ತಲೆಗಿಂಬ ರಚಿಸೆನೆ ಪಾರ್ಥ ಕೈಕೊಂಡು
ಬಿಗಿದ ಬಿಲುಗೊಂಡೆದ್ದು ಮಂಡಿಸಿ
ಹೊಗರ ಕವಲಂಬೈದನೆಚ್ಚನು
ನೆಗಹಿದನು ಮಸ್ತಕವನಾ ಗಂಗಾಕುಮಾರಕನ ೨೨

ಹೊಳೆವ ಕಣೆಗಳ ಮಂಚ ತಲೆಗಿರಿ
ಬಳವಡಿಕೆಯಲಿ ಭೀಷ್ಮ ಸುಖದಲಿ
ಮಲಗಿದನು ಬಹಿರಂಗ ಭುವನವ್ಯಾಪ್ತಿಗಳ ಮರೆದು
ನಳಿನನಾಭನ ದಿವ್ಯ ರೂಪನು
ಬಲಿದು ಮನದಲಿ ಹಿಡಿದು ನೋವಿನ
ಕಳಕಳಕೆ ಧೃತಿಗೆಡದೆ ಮೆರೆದನು ಬಾಣಶಯನದಲಿ  ೨೩

ಒಡಲ ಜಡಿದವು ರೋಮ ರೋಮದೊ
ಳಡಸಿದಂಬುಗಳಂಗ ವೇದನೆ
ತೊಡಕಿತುಬ್ಬರಿಸಿದುದು ಢಗೆ ಗೋನಾಳಿ ನೀರ್ದೆಗೆಯೆ
ನುಡಿಯಲಾರೆನು ಮಕ್ಕಳಿರ ನೀ
ರಡಸಿದೆನು ಹಿರಿದಾಗಿಯೆನೆ ನಡ
ನಡುಗಿ ದುರ‍್ಯೋಧನನು ದೂತರ ಕರೆದು ನೇಮಿಸಿದ  ೨೪

ತರಿಸಿದನು ಹಿಮರುಚಿಯ ಹಿಂಡಿದ
ಪರಮ ಶೀತೋದಕವೊ ತಾನೆನೆ
ಸುರಭಿ ಪರಿಮಳ ಪಾನವನು ಪರಿಪರಿಯ ಕುಡಿನೀರ
ಸರಸ ಬಹುವಿಧ ಭಕ್ಷ್ಯ ಭೋಜ್ಯವ
ನೆರಹಿದನು ಕುಡಿನೀರ ಗಿಂಡಿಯ
ನರಸ ನೀಡಲು ಕಂಡು ನಕ್ಕನು ಭೀಷ್ಮನಿಂತೆಂದ  ೨೫

ಏರ ನೋವಿನೊಳಾದ ತೃಷ್ಣೆಯ
ನಾರಿಸುವರಿವರಳವೆ ಸಾಕಿವ
ತೋರದಿರು ತೆಗೆ ತೊಲಗು ಮೂಢರ ಪರಮಗುರು ನೀನು
ಆರಿತೈ ಗೋನಾಳಿ ಫಲುಗುಣ
ತೋರು ನಿನ್ನರಿತವನು ಸಲಿಲವ
ಬೀರು ಬೇಗದಿನೆನಲು ಬಿಲುಗೊಂಡೆದ್ದನಾ ಪಾರ್ಥ  ೨೬

ಸಲಿಲ ಬಾಣದಲಮಲ ಗಂಗಾ
ಜಲವ ತೆಗೆದನು ತಪ್ತ ಲೋಹದ
ಜಲದವೊಲು ತನಿಹೊಳೆವ ಸಲಿಲದ ಬಹಳ ಧಾರೆಗಳ
ಇಳುಹಿದನು ಸರಳಿಂದ ವದನದ
ಬಳಿಗೆ ಬಿಡೆ ಬಹಳಾರ್ತ ಭೀಷ್ಮನು
ಗೆಲಿದನಂತಸ್ತಾಪವನು ನರನಾಥ ಕೇಳೆಂದ  ೨೭

ಸಾಕು ಸಾಕೈ ತಂದೆ ನನ್ನನು
ಸಾಕಿಕೊಂಡೈ ಪಾರ್ಥ ಘನ ತೃ
ಷ್ಣಾಕುಲತೆ ಬೀಳ್ಕೊಂಡುದತಿಶಯ ತೃಪ್ತಿ ನನಗಾಯ್ತು
ಸಾಕೆನುತ ಫಲುಗುಣನ ಪರಮ ವಿ
ವೇಕವನು ಪತಿಕರಿಸಿ ನೆರೆ ಚಿಂ
ತಾಕುಳನ ಮಾಡಿದನು ಕೌರವ ರಾಯನನು ಭೀಷ್ಮ  ೨೮

ತಂದೆ ಕಂಡೈ ಕೌರವೇಶ ಪು
ರಂದರಾತ್ಮಜನತಿಬಳವ ನೀ
ನಿಂದೆ ಕಾಣಲುಬೇಹುದೈ ಹಲವಂಗದಲಿ ನರನ
ಹಿಂದೆ ಬಲ್ಲರು ದ್ರೋಣ ಕೃಪ ಗುರು
ನಂದನಾದಿಗಳೆಲ್ಲ ಕೇಳೈ
ಮಂದಮತಿತನ ಬೇಡವಿನ್ನು ಕೃಪಾಳುವಾಗೆಂದ ೨೯

ಅಳಿದರೊಡಹುಟ್ಟಿದರು ಹಲಬರು
ನೆಲನ ರಾಯರು ಸವೆದರತಿಬಲ
ರಳುಕುವರು ನರನೆಂದಡೀ ದ್ರೋಣಾದಿ ನಾಯಕರು
ಅಲಗಿನಂಬಿನ ಹಕ್ಕೆ ನಮಗಾ
ಯ್ತೊಳಜಗಳ ಸಾಕಿನ್ನು ಸೋದರ
ರೊಳಗೆ ಸಂಪ್ರತಿಯಾಗಿ ಬದುಕುವದೆಂದನಾ ಭೀಷ್ಮ  ೩೦

ನಿನಗರೋಚಕವೆಮ್ಮ ಮಾತುಗ
ಳನಿಬರಿಗೆ ಸೊಗಸುವುದು ಪಾಂಡವ
ರನುಮತವು ಬೇರಿಲ್ಲ ನಮ್ಮನುಮತದೊಳಡಗಿಹರು
ತನುಜ ಕದನದ ಕಡ್ಡತನ ಬೇ
ಡೆನಗಿದುಪಕಾರವು ವೃಥಾ ಕುರು
ವನಕೆ ವಹ್ನಿಯ ಬಿತ್ತಬೇಡಕಟೆಂದನಾ ಭೀಷ್ಮ  ೩೧

ಮಾತು ಕಿವಿಯೊಗದಾನು ಸಮರಂ
ಗಾತುರನು ಛಲದಂಕನೆಂಬೀ
ಖ್ಯಾತಿಯನು ಮೆರೆದಾತನಲ್ಲದೆ ರಾಜ್ಯ ಪದವಿಯಲಿ
ಸೋತ ಮನದವನಲ್ಲ ಭುವನ
ಖ್ಯಾತನೆನಿಪೊಂದಾಶೆಯನು ದಿಟ
ನೀತಿಗಳೆದರೆ ಬಳಿಕ ನಿಮ್ಮಯ ಮೊಮ್ಮನಲ್ಲೆಂದ ೩೨

ಮೊದಲಲೆಂದಿರಿ ನೀವು ಬಳಿಕೀ
ಯದುಕುಲಾಧಿಪ ಕೃಷ್ಣ ನೆರೆ ಹೇ
ಳಿದನು ಋಷಿಗಳು ಬೊಪ್ಪನವರೀ ಹದನ ಸಾರಿದರು
ವಿದುರ ಹೇಳಿದನೆಲ್ಲರಿಗೆ ತಾ
ನಿದುವೆ ಮತವೆನಗೊಬ್ಬಗೆಯು ಬಲು
ಗದನವೇ ಮತವೆಂದು ಹೇಳಿದೆ ಹಿಂದು ನಿಮಗೆಂದ  ೩೩

ಒಂದು ಮತವೆನಗೊಂದು ನುಡಿ ಮನ
ವೊಂದು ಮತ್ತೊಂದಿಲ್ಲ ಸಾಕಿದ
ನೆಂದು ಫಲವೇನಿನ್ನು ಸಂಧಿಯೆ ಪಾಂಡುತನಯರಲಿ
ಇಂದು ನಿಮಗೀ ಹದನ ನಾನೇ
ತಂದು ಬಳಿಕೆನ್ನೊಡಲ ಸಲಹುವ
ಚೆಂದವೊಳ್ಳಿತು ತಪ್ಪನಾಡಿದಿರೆಂದನವನೀಶ  ೩೪

ಕಾಯದಲಿ ಕಕ್ಕುಲಿತೆ ಯೇಕಿದ
ರಾಯಸವು ತಾನೇಸು ದಿನ ಕ
ಲ್ಪಾಯುಗಳಿಗೊಳಗಾಗಿ ಕಾಲನ ರಾಜಕಾರಿಯವು
ಹೇಯವೀ ಸಿರಿಯಿದರ ಮೈವಶ
ದಾಯತಿಕೆ ನಮಗಿಲ್ಲ ಪಾಂಡವ
ರಾಯ ಮಸ್ತಕಶೂಲನೆಂಬೀ ಬಿರುದ ಬಿಡೆನೆಂದ  ೩೫

ಎಲವೊ ಭೀಷ್ಮರ ಮಾತುಗಳ ನೀ
ನೊಲಿವರೆಯು ಸಂಧಾನದಲಿ ನೀ
ನಿಲುವರೆಯು ದೇಹಾಭಿಲಾಷೆಗೆ ಬಲಿವರೆಯು ಮನವ
ಒಲಿದ ಭೀಮನೆ ನಿನ್ನ ಸಂಧಿಯ
ಕಳಚಿ ನಿನ್ನೊಡಹುಟ್ಟಿದೀತನ
ತಿಳಿರಕುತವನು ಸುರಿವನಲ್ಲದೆ ಬಿಡುವನಲ್ಲೆಂದ  ೩೬

ಹಾ ನುಡಿಯದಿರು ನಿಲು ಪಿತಾಮಹ
ನೇನ ಬೆಸಸಿದುದಕೆ ಹಸಾದವು
ನೀನು ನಡೆ ಪಾಳಯಕೆ ಬಿಡುಗುರಿತನವ ಮಾಣೆಯಲ
ಮೌನಮುದ್ರೆಯ ಹಿಡಿಯೆನಲು ಪವ
ಮಾನನಂದನ ಖಾತಿಯಲಿ ಯಮ
ಸೂನುವನು ಬಿಡೆ ನೋಡಿ ಮೆಲ್ಲನೆ ಸರಿದನಲ್ಲಿಂದ ೩೭

ಬೀಳುಕೊಡಿರೇ ಸಾಕು ಭೀಮನು
ಬಾಲಭಾಷಿತನಾದನೀ ಭೂ
ಪಾಲ ಕೌರವನೆಂಬೆನೇ ಮೊದಲಿಗನು ಮೂರ್ಖರಿಗೆ
ಕಾಳೆಗದೊಳೊಡೆಹಾಯ್ದು ಸಾಯಲಿ
ಬಾಳಲೊಲಿದಂತಾಗಿ ಹೋಗಲಿ
ಹೇಳಿದಿರಿ ನಿಮ್ಮಂದ ತಪ್ಪಿಲ್ಲೆಂದನಸುರಾರಿ ೩೮

ಮುರಹರನ ಮಾತಹುದು ಸಾಕಿ
ನ್ನರಸ ದರ‍್ಮಜ ಹೋಗು ದ್ರುಪದಾ
ದ್ಯರಿಗೆ ನೇಮವು ಪಾರ್ಥ ಮರಳೈ ತಂದೆ ಪಾಳಯಕೆ
ಧರೆಯ ಲೋಲುಪ್ತಿಯಲಿ ಸಲೆ ಕಾ
ತರಿಸಿ ತಪ್ಪಿ ದೆವೆಮ್ಮೊಳೆಂಬೀ
ಧರಧುರವ ನೆನೆಯದಿರಿ ವಿಜಯಿಗಳಾಗಿ ನೀವೆಂದ ೩೯

ಇವರು ಕಳುಹಿಸಿಕೊಂಡರಾ ಮಾ
ಧವನ ಮೆಲ್ಲಡಿಗಳನು ಹೃದಯದೊ
ಳವಚಿ ಕಂಗಳು ತುಂಬಿ ದೇವನ ಮೂರ್ತಿಯನು ಹಿಡಿದು
ಸವೆಯದಮಳಾನಂದ ಬಹಳಾ
ರ್ಣವದೊಳಗೆ ಮುಳುಗಾಡಿ ಲಕ್ಷ್ಮೀ
ಧವನ ಕಳುಹಿದನಿತ್ತ ಬೀಳ್ಕೊಟ್ಟನು ಸುಯೋಧನನ  ೪೦

ಬವರದೊಳಗೌಚಿತ್ಯ ಪರಿಪಾ
ಕವನು ಬಲ್ಲಿರಿ ಕೌರವರ ಪಾಂ
ಡವರ ವೃತ್ತಾಂತದ ರಹಸ್ಯದ ನೆಲೆಯನರಿದಿಹಿರಿ
ನಿವಗೆ ಬೇರೊಂದಿಲ್ಲ ನಾವ್ ಹೇ
ಳುವುದು ಕೃಷ್ಣನ ನೇಮವನು ಮಾ
ಡುವುದೆನುತ ದ್ರೋಣಾದಿ ಸುಭಟರ ಕಳುಹಿದನು ಭೀಷ್ಮ  ೪೧

ಬೀಳುಕೊಂಡರು ರಾಯರಿಬ್ಬರು
ಪಾಳಯಂಗಳಿಗಿತ್ತ ಪಡುವಣ
ಶೈಲ ವಿಪುಲ ಸ್ತಂಭದೀಪಿಕೆಯಂತೆ ರವಿ ಮೆರೆದ
ಮೇಲು ಮುಸುಕಿನ ಮುಖದ ಚಿತ್ತದ
ಕಾಳಿಕೆಯ ದುಮ್ಮಾನಜಲಧಿಯ
ಕಾಲುವೆಗಳೆನೆ ಕೌರವರು ಹೊಕ್ಕರು ನಿಜಾಲಯವ  ೪೨

ಇವರು ಭೀಷ್ಮನ ಬೀಳುಕೊಂಡು
ತ್ಸವದ ಹರುಷದಲೊಮ್ಮೆ ಗಂಗಾ
ಭವಗೆ ತಪ್ಪಿದ ದುಗುಡ ಭಾರದಲೊಮ್ಮೆ ಚಿಂತಿಸುತ
ಕವಲು ಮನದಲಿ ಕಂಪಿಸುತ ಶಿಬಿ
ರವನು ಹೊಕ್ಕರು ನಿಖಿಲ ಸೇನಾ
ನಿವಹ ಸಹಿತವೆ ವೀರ ನಾರಾಯಣನ ಕರುಣದಲಿ  ೪೩

 

ಶ್ರೀಮದಚಿಂತ್ಯ ಗದುಗು ವೀರನಾರಾಯಣ ಚರಣಾರವಿಂದ
ಮಕರಂದ ಮಧುಪಾನ ಪರಿಪುಷ್ಟ ಚವಃಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟಕ ಭಾರತ ಕಥಾಮಂಜರಿಯೊಳ್
ಭೀಷ್ಮಪರ್ವ ಸಮಾಪ್ತವಾದುದು.