ದ್ವಾಪರ ಯುಗದಲ್ಲಿ ರಾಜ್ಯವಾಳಿದ ಅರಸು ವಂಶಗಳಲ್ಲಿ ಚಂದ್ರವಂಶ ಬಹಳ ಪ್ರಸಿದ್ಧ. ಚಂದ್ರವಂಶದಲ್ಲಿ ಶಂತನು ಮಹಾರಾಜ ಪ್ರಸಿದ್ಧನಾದ ದೊರೆ. ಅವನು ಹಸ್ತಿನಾವತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ. ದೇವಲೋಕದಲ್ಲೆಲ್ಲ ಅತಿ ರೂಪವತಿ ಎಂದು ಹೆಸರಾದ ಗಂಗೆ ಅವನ ಹೆಂಡತಿ. ಈ ದಂಪತಿಗಳಿಗೆ ಮಗನಾಗಿ ದೇವವ್ರತ ಹುಟ್ಟಿದ. ಗಂಗಾದೇವಿ ಮಗನನ್ನು ಮಹಾರಾಜನಿಗೆ ಒಪ್ಪಿಸಿ ದೇವಲೋಕಕ್ಕೆ ಹೋಗಬೇಕಾಗಿ ಬಂತು. ದೇವಲೋಕಕ್ಕೆ ಹೋದವಳು ಹಿಂದಿರುಗಿ ಬರಲಿಲ್ಲ.

ಶಂತನು ಮಹಾರಾಜ ದೇವವ್ರತನ ಯೋಗಕ್ಷೇಮದ ಭಾರತ ಹೊತ್ತ. ಅವನು ಮಗನಿಗೆ ತಾಯಿ ತಂದೆ ಎಲ್ಲ ಆಗಿ ಬಲು ಪ್ರೀತಿಯಿಂದ ಸಾಕಿದ. ಲಾಲನೆ ಪಾಲನೆ ಮಾಡಿ ಬೆಳೆಸಿದ. ಯೋಗ್ಯ ಗುರುಗಳಿಂದ ವೇದಶಾಸ್ತ್ರ ಪುರಾಣಗಳನ್ನು ಪಾಠ ಮಾಡಿಸಿದ. ಪ್ರಸಿದ್ಧ ಋಷಿ, ಪರಾಕ್ರಮಿ ಪರಶುರಾಮನಿಂದ ಬಿಲ್ಲು ವಿದ್ಯೆ ಹೇಳಿಸಿದ. ತಂದೆ ಶಂತುನುವೇ ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದ. ದೇವವ್ರತ ತಂದೆಯನ್ನು ನೋಡಿ ಸತ್ಯ, ಧರ್ಮ, ನ್ಯಾಯಗಳ ತಿಳಿವಳಿಕೆ ಪಡೆದ. ಹೀಗೆ ದೇವವ್ರತ ರಾಜ್ಯಭಾರತ ಮಾಡುವುದಕ್ಕೆ ಬೇಕಾದ ಸಕಲ ವಿದ್ಯೆಗಳನ್ನು ಕಲಿತು ದೊಡ್ಡವನಾದ.

ದೇವವ್ರತನಿಗೆ ತಾಯಿ ಹತ್ತಿರ ಇಲ್ಲವಲ್ಲ ಎಂಬುದು ಒಂದೇ ಕೊರತೆ. ಅದನ್ನು ಬಿಟ್ಟರೆ ತಂದೆ ಎಲ್ಲ ಸುಖಗಳನ್ನು ಕೊಟ್ಟಿದ್ದರು. ಅವನ ಪಾಲಿಗೆ ಶಂತನು ಮಹಾರಾಜ ಸ್ವರ್ಗದಿಂದ ಇಳಿದು ಬಂದ ದೇವರು.

ದೇವವ್ರತ ರಾಜ್ಯಭಾರವನ್ನು ವಹಿಸಿಕೊಳ್ಳುವುದಕ್ಕೆ ಎಲ್ಲ ರೀತಿಯಲ್ಲಿ ಅರ್ಹತೆ ಪಡೆದಿದ್ದ. ಶಂತನು ಮಗನಿಗೆ ಯುವರಾಜ ಪದವಿಯ ಪಟ್ಟಾಭಿಷೇಕ ಮಾಡಿದ.

ದೇವವ್ರತನಿಗೆ ರಾಜ್ಯಾಡಳಿತವನ್ನು ಒಪ್ಪಿಸಿಬಿಟ್ಟಿದ್ದಾನೆ ಮಹಾರಾಜ . ಅದರಿಂದ ಬೇಕಾದಷ್ಟು ವಿರಾಮವಿದೆ.

ಯಾರು ನೀನು?’

ಶಂತನು ಮಹಾರಾಜನಿಗೆ ಒಂದು ದಿನ ಬೇಟೆ ಆಡಬೇಕೆಂದು ಮನಸ್ಸಾಯಿತು. ಬೇಟೆಯ ಪಡೆ ಯಮುನಾ ತೀರಕ್ಕೆ ಹೋಗಿ ಬೀಡು ಬಿಟ್ಟಿತು.

ಒಂದು ದಿನ ಶಂತನು ಯಮುನಾ ನದಿಯ ದಂಡೆಯ ಮೇಲೆ ಸಂಚಾರ ಹೊರಟ. ಆ ಸಮಯದಲ್ಲಿ ಘಮ ಘಮಿಸುವ ಸುವಾಸನೆಯ ತಂಗಾಳಿ ಅವನ ಮುಖವನ್ನು ಹಿತವಾಗಿ ತಾಡಿತು. “ಹಾ! ಎಂಥ ಸುಗಂಧ!” ಎಂದು ಮಹಾರಾಜ ಸುಖ ಅನುಭವಿಸಿದ. ಈ ಸುಗಂಧ ಎಲ್ಲಿಂದ ಬಂತು?

ಶಂತನು ಮಹಾರಾಜನ ಕುತೂಹಲ ಕೆರಳಿತು. ಅವನು ಸುಗಂಧ ಬಂದ ದಿಕ್ಕಿನ ಜಾಡನ್ನು ಹಿಡಿದು ಹೊರಟ. ಆಗಲೇ ಇನ್ನೊಂದು ಆಶ್ಚರ್ಯ ಕಾದಿತ್ತು.

ಶಂತನು ಮಹಾರಾಜ ಒಬ್ಬ ಚೆಲುವೆ ಹುಡುಗಿಯನ್ನು ಕಂಡ. ಅವಳು ಅತಿ ಸುಂದರಿಯಾಗಿದ್ದಳು. ದೇವಲೋಕದ ಸುಂದರಿಯರನ್ನು ಮೀರಿಸುತ್ತಿದ್ದಳು ಚೆಲುವಿನಲ್ಲಿ. ಅವಳು ಜೊತೆಗೆ ವಿಚಿತ್ರದ ಹುಡುಗಿಯಾಗಿದ್ದಳು.

ಚೆಲುವೆ ಹುಡುಗಿಯ ದೇಹದಿಂದ ಸುಗಂಧ ಹೊರ ಸೂಸುತ್ತಿತ್ತು. ಅದು ಆ ಪ್ರದೇಶವನ್ನೆಲ್ಲ ಸುಗಂಧಮಯವಾಗಿ ಮಾಡಿತ್ತು. ಮಹಾರಾಜ ಅವಳ ಚೆಲುವಿಗೆ,ಸುತ್ತ ಹರಡಿದ್ದ ಸುಗಂಧಕ್ಕೆ ಬೆರಗಾದ. ಅವಳನ್ನು ಕೇಳಿದ “ನೀನು ಯಾರು, ಚೆಲುವೆ? ನೀನು ಕಿನ್ನರಳೋ! ಗಂಧರ್ವಳೋ! ದೇವತೆಯೋ! ಮಾನವಳೋ! ಹೇಳು.”

ಚೆಲುವೆ ಮುಸುಮುಸು ನಗುತ್ತ ನುಡಿದಳು-“ಪೂಜ್ಯ, ನಾನು ಗಂಧರ್ವಳಲ್ಲ, ಕಿನ್ನರಿಯಲ್ಲ, ದೇವತೆಯೂ ಅಲ್ಲ. ಒಬ್ಬ ಸಾಮಾನ್ಯ ಮನುಷ್ಯಳು. ದಾಶರಾಜನ ಮಗಳು ಸತ್ಯವತಿ . ನನ್ನನ್ನು ಯೋಜನಗಂಧಿ ಎಂದೂ ಕರೆಯುತ್ತಾರೆ.”

ಶಂತನು ಮಹಾರಾಜನಿಗೆ ಅವಳನ್ನು ಮದುವೆ ಆಗಬೇಕಲು ಅನ್ನಿಸಿತು. ಮಹಾರಾಜ ತನ್ನ ಆಸೆಯನ್ನು ತಿಳಿಸಿದ: “ಚೆಲುವೆ , ನೀನು ನನ್ನನ್ನು ಮದುವೆ ಆಗುವಿಯಾ? ನಾನು ಹಸ್ತಿನಾವತಿಯ ಮಹಾರಾಜ. ಶಂತನು. ಮದುವೆ ಆದರೆ ನೀನು ನನ್ನ ರಾಜ್ಯಲಕ್ಷ್ಮೀಯಾಗುವೆ.”

ಮಹಾರಾಜನ ಮಾತು ಕೇಳಿ ಸತ್ಯವತಿ ನಾಚಿದಳು. ತಲೆ ತಗ್ಗಿಸಿ ನೆಲ ನೋಡುತ್ತಾ ಹೀಗೆ ಹೇಳಿದಳು, “ಮಹಾರಾಜ,  ನಾನು ತಂದೆಯುಳ್ಳವಳು. ಅವರು ಒಪ್ಪಿದರೆ ನೀವು ನನ್ನನ್ನು ಮದುವೆಯಾಗಬಹುದು.”

ಶಂತನು ಮಹಾರಾಜ ಉತ್ತರ ಕೊಡುವುದರೊಳಗೆ ಅವಳು ಹೊರಟುಹೋಗಿದ್ದಳು.

ತಂದೆಗೆ ಏತರ ಚಿಂತೆ?

ಶಂತನು ಮಹಾರಾಜ ಒಂದೆರಡು ದಿವಸಗಳಲ್ಲಿ ದಾಶರಾಜನನ್ನು ಹೋಗಿ ನೋಡಿದ. ತನ್ನ ಅಪೇಕ್ಷೆಯನ್ನು ತಿಳಿಸಿದ.

ದಾಶರಾಜನಿಗೆ ಆಶ್ಚರ್ಯವಾಯಿತು. ಮಹಾರಾಜನ ಪದವಿ ಏನು? ತನ್ನ ಪದವಿ ಏನು? ಮದುವೆಯ ಸಂಬಂಧ ಸಾಧ್ಯವೇ? ಏನೆಂದು ಉತ್ತರ ಕೊಡುವುದು?

ಶಂತನು ಮಹಾರಾಜನೇ ತೊಡಕನ್ನು ಬಿಡಿಸಿದ. ಅವನು ಭರವಸೆ ಕೊಟ್ಟ – “ದಾಶರಾಜ, ನಾನು ಮಹಾರಾಜನೆಂದು ಆತಂಕ ಪಡಬೇಡಿ.  ಮನಸ್ಸು ಬಿಚ್ಚಿ ಮಾತಾಡಿ. ಬಂಧುವಿನಂತೆ ಭಾವಿಸಿಕೊಳ್ಳಿ.”

ದಾಸರಾಜನಿಗೆ ಸರಾಗವಾಯಿತು. ಧೈರ್ಯ ಬಂತು. ಅವನು ಹೇಳಿದ – ಮಹಾರಾಜ, ತಾವು ಸುಜನರು. ನನ್ನ ಮಗಳನ್ನು ನಿಮಗೆ ಸಂತೋಷವಾಗಿ ಕೊಡಬಹುದು. ಆದರೆ ನಿಮಗೆ ಒಬ್ಬ ದೊಡ್ಡ ಮಗನಿದ್ದಾನೆ.  ಯುವರಾಜನಾಗಿ ರಾಜ್ಯಾಡಳಿತ ನೋಡಿಕೊಳ್ಳುತ್ತಿದ್ದಾನೆ.

ಶಂತನು ಮಹಾರಾಜ, “ಅದರಿಂದ ಏನು ಆತಂಕ?” ಎಂದು ಕೇಳಿದ.

ದಾಶರಾಜ ಉಗುಳು ನುಂಗಿಕೊಂಡು ಒಣಗಿದ ಗಂಟಲಿನಲ್ಲಿ ಹೇಳಿದ – “ಮಹಾರಾಜ, ನಾನು ಹೆಣ್ಣಿನ ತಂದೆ. ಅವಳ ಒಳ್ಳೆಯದನ್ನು ಯೋಚಿಸುತ್ತಿದ್ದೇನೆ. ನಾಳೆ ಅವಳಿಗೆ ಮಗನಾದರೆ ಗತಿ ಏನು? ಸಿಂಹಾಸನಕ್ಕೆ ಹಕ್ಕುದಾರ ಯುವರಾಜ ತಾನೆ?”

ಶಂತನು ಮಹಾರಾಜ ದಾಶರಾಜನ ಮಾತು ಕೇಳಿ ಬೆಚ್ಚಿದ. ದಾಶರಾಜ ಹೇಳಿದ- “ನನ್ನ ಮಗಳ ಮಗನಿಗೆ ರಾಜ್ಯಭಾರವನ್ನು ಕೊಡುವುದಾದರೆ ಆಗಬಹುದು . ಸಂತೋಷದಿಂದ ನಿಮಗೆ ಮಗಳನ್ನು ಧಾರೆಯೆರೆದು ಕೊಡುತ್ತೇನೆ. ಹೀಗೆ ಪ್ರಾರ್ಥಿಸಿದೆನೆಂದು ಕೋಪಗೊಳ್ಳಬೇಡಿ. ದಯೆಯಿಟ್ಟು ಕ್ಷಮಿಸಿ. ನಾನು ಹೆಣ್ಣಿನ ತಂದೆ.”

ಶಂತನು ಮಹಾರಾಜ ಸತ್ಯವತಿಯನ್ನು ಮದುವೆ ಆಗಿ ರಾಣಿಯನ್ನಾಗಿ ಮಾಡಿಕೊಳ್ಳಬೇಕೆಂದು ಅಂದುಕೊಂಡಿದ್ದ. ಹೀಗಾಗುವುದೆಂದು ತಿಳಿದಿರಲಿಲ್ಲ. ಯೋಚಿಸಿ ನಿರ್ಧಾರಕ್ಕೆ ಬಂದ. ಖಂಡಿತವಾದ ದನಿಯಲ್ಲಿ ಹೇಳಿದ – “ದಾಶರಾಜ, ನನಗೆ ದೇವವ್ರತ ಹೆಮ್ಮೆಯ ಮಗ. ಅವನು ನನ್ನ ಪ್ರಾಣವಾಗಿದ್ದಾನೆ. ನಾನು ಮಗನಿಗೆ ದ್ರೋಹ ಮಾಡುವುದಿಲ್ಲ.” ಹೀಗೆ ನುಡಿದು ಶಂತನು ಮಹಾರಾಜ ಕೂಡಲೆ ಅಲ್ಲಿಂದ ಹೊರಟುಬಿದ್ದ. ಮನಸ್ಸೆಲ್ಲ ಸತ್ಯವತಿಯಲ್ಲಿ ಇತ್ತು. ದೇಹ ಯಂತ್ರದಂತೆ ಚಲಿಸುತ್ತಿತ್ತು.

ಶಂತನು ಮಹಾರಾಜ ಬೇಟೆಯನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟ. ಹಸ್ತಿನಾವತಿಗೆ ಹಿಂತಿರುಗಿದ. ಚಿಂತೆಯಿಂದ ಮುಖದ ಕಳೆ ಹೋಯಿತು. ಆರೋಗ್ಯ ಕೆಟ್ಟಿತು. ಇತರರೊಡನೆ ಸೇರದೆ ಒಬ್ಬನೇ ಮಂಕಾಗಿ ಕಾಲ ಕಳೆಯಲು ಪ್ರಾರಂಭಿಸಿದ.

ದೇವವ್ರತನಿಗೆ ಮಹಾರಾಜನ ಸ್ಥಿತಿಯನ್ನು ನೋಡಿ ಮನಸ್ಸಿಗೆ ಕಳವಳವಾಯಿತು. ತಂದೆಯ ಬಳಿಗೆ ಹೋದ. ಅವನ ಪಾದಗಳಿಗೆ ನಮಸ್ಕರಿಸಿದ.

ಶಂತನು, “ಬಂದೆಯಾ ಮಗನೆ! ಬಾ, ಹತ್ತಿರ ಕುಳಿತುಕೊ” ಎಂದು ಪ್ರೀತಿಯಿಂದ ಹತ್ತಿರ ಕರೆದ.

ದೇವವ್ರತ ತಂದೆಯ ಪಾದಗಳ ಬಳಿ ಕುಳಿತು ಹೇಳಿದ – “ತಂದೆ, ನೀವು ಸತ್ಯ ನ್ಯಾಯ ಧರ್ಮಗಳಿಗೆ ತಲೆಬಾಗಿ ರಾಜ್ಯಭಾರ ಮಾಡುವ ಧರ್ಮಪ್ರಭು. ಮಹಾಪರಾಕ್ರಮಿ. ನಿಮ್ಮ ರಾಜ್ಯದಲ್ಲಿ ಯುದ್ಧದ ಭೀತಿಯಿಲ್ಲ. ಪ್ರಜೆಗಳು ಸಂತೋಷದಿಂದ ಬಾಳುತ್ತಿದ್ದಾರೆ. ನಿಮ್ಮನ್ನು ಯಾವ ಚಿಂತೆ ಜೀವ ಹಿಂಡುತ್ತಿದೆ? ದಯವಿಟ್ಟು ಅಪ್ಪಣೆ ಕೊಡಿಸಬೇಕು.”

ಶಂತನು ಮಹಾರಾಜ ನಿಟ್ಟುಸಿರು ಸುಯ್ದು ಹೇಳಿದ – “ಅಪ್ಪ ದೇವವ್ರತ. ಆ ಚಿಂತೆ ನಿನಗೆ ಬೇಡ. ನಾನು ಲೋಕ ಮೆಚ್ಚುವಂತೆ ರಾಜ್ಯಭಾರ  ಮಾಡಿದ್ದೇನೆ. ದೇವರು ಮೆಚ್ಚುವ ಹಾಗೆ ನಡೆದುಕೊಂಡಿದ್ದೇನೆ.”

ದೇವವ್ರತನಿಗೆ ಈಗ ಮನಸ್ಸಿನಲ್ಲಿ ಹೊಸ ಚಿಂತೆ ಮೂಡಿತು. ತಂದೆಗೆ ತಾನು ಏನಾದರೂ ಅಪಚಾರ ಮಾಡಿರಬಹುದೇ? ಮಗುವಿನಂತೆ ಕೇಳಿಕೊಂಡ – “ಪೂಜ್ಯ ತಂದೆಯೇ, ನಾನು ತಪ್ಪು ಮಾಡಿದ್ದರೆ ಹೇಳಿ ತಿದ್ದಿಕೊಳ್ಳುತ್ತೇನೆ. ಪ್ರಾಯಶ್ಚಿತ್ತ ಮಾಡಿಕೊಂಡು ಕ್ಷಮಾಪಣೆ ಕೇಳಿಕೊಳ್ಳುತ್ತೇನೆ.”

ಶಂತನು ಅಂತಃಕರಣದಿಂದ ನುಡಿದ – “ಮಗನೇ ದೇವವ್ರತ, ನೀನೇ ನನ್ನ ಪ್ರಾಣ. ಸಕಲ ಶಾಸ್ತ್ರಗಳನ್ನು ಬಲ್ಲವನು. ಆದುದರಿಂದ ಎಂದಿಗೂ ತಪ್ಪು ದಾರಿಯನ್ನು ತುಳಿಯುವವನಲ್ಲ. ನೀನು ಮಹಾ ಪರಾಕ್ರಮಿ. ಹಾಗೆಂದು ಕಾರಣವಿಲ್ಲದೆ ಯಾರನ್ನೂ ದಂಡಿಸುವವನಲ್ಲ. ಪ್ರಜೆಗಳು ನನಗೆ ನಡೆದುಕೊಳ್ಳುವಂತೆಯೇ ನಿನಗೂ ಭಕ್ತಿ ಗೌರವಗಳಿಂದ ನಡೆದುಕೊಳ್ಳುತ್ತಿದ್ದಾರೆ. ಇಂತಹ ಮಗನಲ್ಲಿ ನಾನು ಯಾವ ತಪ್ಪುಗಳನ್ನು ಹುಡುಕಬಹುದು?”

ದೇವವ್ರತನಿಗೆ ತಂದೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಮಹಾ ಕಷ್ಟವಾಯಿತು. ಯಾವುದೋ ರಹಸ್ಯವನ್ನು ಮುಚ್ಚಿಡುತ್ತಿದ್ದಾರೆ ಎನ್ನಿಸಿತು.

ದೇವವ್ರತ ತಂದೆಯನ್ನು ಬಿಟ್ಟು ನೇರವಾಗಿ ಆಲೋಚನಾ ಮಂದಿರಕ್ಕೆ ಬಂದ. ಸಾರಥಿಗೆ ಕೂಡಲೆ ಕರೆ ಕಳಿಸಿದ. ಅವನಿಂದ ನಡೆದುದನ್ನೆಲ್ಲ ಕೇಳಿ ತಿಳಿದುಕೊಂಡ. “ತಂದೆಯ ಸಂತೋಷ ಮುಖ್ಯ. ಅವರಿಗಾಗಿ ಏನನ್ನಾದರೂ ತ್ಯಾಗ ಮಾಡುತ್ತೇನೆ” ಎಂದ.

ದೇವವ್ರತ ಸತ್ಯವತಿಯ  ತಂದೆಯ ಮನಗೆ ಹೊರಟ.

ಇದು ನನ್ನ ಪ್ರತಿಜ್ಞೆ!”

ದಾಶರಾಜ ದೇವವ್ರತನನ್ನು ಗೌರವದಿಂದ ಉಪಚಾರ ಮಾಡಿದ. ಅನಂತರ ದೇವವ್ರತ ಹೇಳಿದ- “ದಾಶರಾಜ, ನಾನು ಎಲ್ಲ ವಿಷಯಗಳನ್ನು ಕೇಳಿ ತಿಳಿದುಕೊಂಡಿದ್ದೇನೆ. ನಿಧಾನವಾಗಿ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಹೆಸರು ದೇವವ್ರತ. ಎಂದರೆ ದೇವರಲ್ಲಿ ನಿಷ್ಠೆಯಿಂದ ನಡೆದುಕೊಳ್ಳುವವನು ಎಂದರ್ಥ. ನನಗೆ ತಂದೆಯೇ ದೇವರು. ಆದುದರಿಂದ ತಂದೆ ದೇವರಿಗಾಗಿ ಸಿಂಹಾಸನವನ್ನು ಬಿಟ್ಟುಕೊಟ್ಟಿದ್ದೇನೆ. ಇದು ನನ್ನ ಸತ್ಯ ಪ್ರತಿಜ್ಞೆ.”

ದಾಶರಾಜ ದೇವವ್ರತನ ದೃಢ ಪ್ರತಿಜ್ಞೆಯನ್ನು ಕೇಳಿ ಬೆರಗಾದ, ಸಂತೋಷಪಟ್ಟ.  ಅವನಿಗೆ ಅಷ್ಟಕ್ಕೇ ತೃಪ್ತಿಯಾಗಲಿಲ್ಲ. ಇನ್ನೊಂದು ಸಂಶಯವನ್ನು ಎತ್ತಿದ – “ನೀನು ಮಹಾನುಭಾವ. ನುಡಿದಂತೆ ನಡೆದುಕೊಳ್ಳುವವನು. ನಿನಗೆ ಮಗನಾದರೆ ಅವನು ಸಿಂಹಾಸನಕ್ಕಾಗಿ ನನ್ನ ಮಗಳ ಮಗನೊಡನೆ ಹೊಡೆದಾಡುವನು. ಆಗ ಗತಿ ಏನು?”

ದೇವವ್ರತ ಘೊಳ್ಳೆಂದು ನಕ್ಕುಬಿಟ್ಟ. ದಾಶರಾಜನ ಸಂಶಯವನ್ನು ಪರಿಹರಿಸಿದ – “ನನ್ನ ತಂದೆದೇವರಿಗಾಗಿ ಸಿಂಹಾಸನವನ್ನು ಬಿಟ್ಟೆನೆಂದು ಪ್ರತಿಜ್ಞೆ ಮಾಡಿದೆ. ಈಗ ನನ್ನ ತಾಯಿದೇವರಿಗಾಗಿ ಇನ್ನೊಂದು ಪ್ರತಿಜ್ಞೆ ಮಾಡುತ್ತೇನೆ. ಕೇಳಿ, ನನ್ನ ಭೀಷ್ಮ ಪ್ರತಿಜ್ಞೆಯನ್ನು. ಭೂಮಿ ತಾಯಿಯ ಆಣೆ, ಸೂರ್ಯಚಂದ್ರರ ಆಣೆ, ನನ್ನ ತಂದೆ ತಾಯಿಯರ ಆಣೆ. ನಾನು ಮದುವೆಯಾಗುವುದಿಲ್ಲ. ಎಲ್ಲ ಹೆಂಗಸರು ನನ್ನ ತಾಯಿಯ ಸಮಾನ. ಇದು ನನ್ನ ಸತ್ಯ ಪ್ರತಿಜ್ಞೆ.”

ದಾಶರಜ ಸಂತೋಷದಿಂದ ಮಹಾರಾಜನಿಗೆ ತನ್ನ ಮಗಳನ್ನು ಮದುವೆ ಮಾಡಲು ಒಪ್ಪಿದ.

ಶಂತನು ಮಹಾರಾಜ ಮಗನ ಸತ್ಯ ಪ್ರತಿಜ್ಞೆಯನ್ನು ಕೇಳಿ ಬೆರಗಾದ. ಕೊಂಡಾಡಿದ. ಮಗನ ಮಹಾತ್ಯಾಗವನ್ನು ಮೆಚ್ಚಿ ವರ ಕರುಣಿಸಿದ – “ಮಗನೇ, ಎಂತಹ ಭೀಷ್ಮ ಪ್ರತಿಜ್ಞೆ ಮಾಡಿದೆ! ಇಂದಿನಿಂದ ನಿನ್ನ ಹೆಸರು ಭೀಷ್ಮನೆಂದು ಲೋಕಪ್ರಸಿದ್ಧವಾಗಿ ಶಾಶ್ವತವಾಗಿ ಉಳಿಯಲಿ. ನೀನು ಬಯಸಿದಾಗ ಮಾತ್ರ ಸಾವು ಬರಲಿ. ನೀನು ಸ್ವೇಚ್ಛಾ ಮರಣಿಯಾಗು. ಇದು ನಿನಗೆ ನನ್ನ ವರ.”

ಭೀಷ್ಮ ಲೋಕಪ್ರಸಿದ್ಧನಾದ ಮಹಾಪುರುಷನಾದ.

ಇತರರಿಗಾಗಿ ಎಲ್ಲ ಹೊಣೆ ಹೊತ್ತ ಭೀಷ್ಮ

ಮಹಾರಾಜ ಶಂತನು. ಸತ್ಯವತಿ ಇವರ ಮದುವೆ ವೈಭವದಿಂದ ನೆರವೇರಿತು . ಭೀಷ್ಮನ ಸಂತೋಷಕ್ಕೆ ಮಿತಿಯೇ ಇಲ್ಲ. ಅವನಿಗೆ ತಂದೆಯ ಚಿಂತೆಯನ್ನು ಪರಿಹರಿಸಿದ ತೃಪ್ತಿ.

ಭೀಷ್ಮನು ಸತ್ಯವತಿಯ ಬಳಿಗೆ ಹೋದ. ಅವಳಿಗೆ ಕೈಮುಗಿದು ಹೇಳಿದ – “ಚಿಕ್ಕಮ್ಮ, ನನಗೆ ನೀವು ಬೇರೆಯಲ್ಲ. ನನ್ನ ತಾಯಿ ಗಂಗಾದೇವಿ ಬೇರೆಯಲ್ಲ. ನೀವು ಅವರಷ್ಟೇ ದೊಡ್ಡವರು ನನಗೆ. ನನ್ನಲ್ಲಿ ಯಾವ ಸಂಕೋಚವೂ ಬೇಡ. ಏನು ಬೇಕೋ ಅಪ್ಪಣೆ ಕೊಡಿಸಿ. ತಲೆಯ ಮೇಲೆ ಹೊತ್ತು ಪಾಲಿಸುತ್ತೇನೆ.”

ಸತ್ಯವತಿ ಭೀಷ್ಮನ ಮಾತುಗಳಿಗೆ ಹಿಗ್ಗಿದಳು. ಅವಳೆಂದಳು – “ಮಗನೇ , ನೀನು ಸತ್ಯವ್ರತನೆಂದು ನನಗೆ ಗೊತ್ತು. ನನಗೆ ನಿನ್ನಲ್ಲಿ ಪೂರ್ಣ ನಂಬಿಕೆ ಇದೆ.”

ಶಂತನು ಮತ್ತು ಸತ್ಯವತಿ ಭೀಷ್ಮನಿಗೆ ರಾಜ್ಯದ ಹೊಣೆ ಒಪ್ಪಿಸಿ ಸುಖವಾಗಿದ್ದರು. ಸತ್ಯವತಿಗೆ ಇಬ್ಬರು ಗಂಡು ಮಕ್ಕಳಾದರು – ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ಅರಮನೆ ಮಕ್ಕಳಿಂದ ನಂದಗೋಕುಲವಾಯಿತು. ಆದರೆ ಅಷ್ಟರಲ್ಲಿ ಶಂತನು ಮಹಾರಾಜ ಸತ್ತುಹೋದ. ಸತ್ಯವತಿ ದುಃಖದಲ್ಲಿ ಮುಳುಗಿದಳು. ಭೀಷ್ಮನಿಗೆ ತನ್ನ ಮಕ್ಕಳು ಇಬ್ಬರ ಸಂರಕ್ಷಣೆಯನ್ನು ವಹಿಸಿದಳು. ಭೀಷ್ಮ, ಚಿತ್ರಾಂಗದ ವಿಚಿತ್ರವೀರ್ಯರ ರಕ್ಷಣೆ ಹೊತ್ತ.

ಚಿತ್ರಾಂಗದ ಸಕಲ ವಿದ್ಯೆಗಳನ್ನು ಕಲಿತು ರಾಜ್ಯಭಾರ ಮಾಡುವ ವಯಸ್ಸಿಗೆ ಬಂದ. ಭೀಷ್ಮ ಸತ್ಯವತಿಯ ಬಳಿಗೆ ಹೋಗಿ ಬಿನ್ನಹ ಮಾಡಿದ – “ಚಿಕ್ಕಮ್ಮ, ಚಿತ್ರಾಂಗದ ರಾಜ್ಯಭಾರ ಮಾಡುವ ವಯಸ್ಸಿಗೆ ಬಂದಿದ್ದಾನೆ. ನೀವು ಅಪ್ಪಣೆ ಕೊಟ್ಟರೆ ಅವನಿಗೆ ಪಟ್ಟಾಭಿಷೇಕ ಮಾಡಬಹುದು.”

ಸತ್ಯವತಿ ನುಡಿದಳು – ಮಗನೇ, ನನ್ನ ಮಕ್ಕಳನ್ನು ನಿನಗೆ ಒಪ್ಪಿಸಿಬಿಟ್ಟಿದ್ದೇನೆ. ಸಹೋದರರ ಯೋಗಕ್ಷೇಮ ನಿನ್ನದು.  ಪಟ್ಟಾಭಿಷೇಕವನ್ನು ಮಾಡು.”

ಭೀಷ್ಮ ಚಿತ್ರಾಂಗದನಿಗೆ ಪಟ್ಟಾಭಿಷೇಕ ಮಾಡಿದ. ರಾಜ್ಯಾಡಳಿತ ಒಪ್ಪಿಸುವ ಕಾಲದಲ್ಲಿ ಹೀಗೆ ಉಪದೇಶ ಮಾಡಿದ – “ತಮ್ಮ, ನೀನು ಬುದ್ಧಿವಂತ, ಪರಾಕ್ರಮಿ. ತಂದೆಯಂತೆಯೇ ಧರ್ಮದಿಂದ ರಾಜ್ಯಭಾರ ಮಾಡು.

ಚಿತ್ರಾಂಗದ ಭೀಷ್ಮನ ಉಪದೇಶವನ್ನು ತಲೆಯ ಮೇಲೆ ಹೊತ್ತು ರಾಜ್ಯಭಾರ ಮಾಡಿದ. ಅವನು ಒಂದು ಸಲ ಶತ್ರುಗಳ ಮೇಲೆ ದಂಡೆತ್ತಿ ಹೋದ. ರಣರಂಗದಲ್ಲಿ ವೀರಮರಣ ಹೊಂದಿದ. ಸಿಂಹಾಸನ ಬರಿದಾಯಿತು. ಸತ್ಯವತಿಗೆ ದುಃಖದ ಮೇಲೆ ದುಃಖ ಬಂತು.

ಭೀಷ್ಮ ಸತ್ಯವತಿಯ ಅಪ್ಪಣೆ ಪಡೆದು ವಿಚಿತ್ರವೀರ್ಯನನ್ನು ಸಿಂಹಾಸನದ ಮೇಲೆ ಕೂಡಿಸಿದ. ಆ ಸಮಯದಲ್ಲಿ ಚಿತ್ರಾಂಗದನಿಗೆ ಹಿತೋಪದೇಶ ಮಾಡಿದಂತೆಯೇ ವಿಚಿತ್ರವೀರ್ಯನಿಗೂ ಉಪದೇಶ ಮಾಡಿದ.

ವಿಚಿತ್ರವೀರ್ಯ ಮದುವೆಯ ವಯಸ್ಸಿಗೆ ಬಂದಿದ್ದ. ಭೀಷ್ಮ ತಮ್ಮನಿಗೆ ಕಾಶಿರಾಜನ ಮೂವರು ಕುಮಾರಿಯರನ್ನು ಮದುವೆ ಮಾಡಬೇಕೆಂದು ಯೋಚಿಸಿದ.

ಸತ್ಯವತಿಯ ಅಪ್ಪಣೆ ಪಡೆದು ಕಾಶಿರಾಜನ ಪಟ್ಟಣಕ್ಕೆ ಪ್ರಯಾಣ ಬೆಳೆಸಿದ.

ವೀರ ಭೀಷ್ಮ

ಭೀಷ್ಮ ಸೇನಾಬಲವನ್ನು ತೆಗೆದುಕೊಂಡು ಕಾಶಿರಾಜನ ಪಟ್ಟಣವನ್ನು ಸೇರಿದ. ಇದೇ ಸಮಯದಲ್ಲಿ ಕಾಶಿರಾಜ ತನ್ನ ಕುಮಾರಿಯರಿಗೆ ಸ್ವಯಂವರವನ್ನು ಏರ್ಪಡಿಸಿದ್ದ. ತನಗೆ ಬೇಕಾದ ಗಂಡನನ್ನು ಹುಡುಗಿಯೇ ಆರಿಸಿಕೊಳ್ಳುವ ಪದ್ಧತಿಯೇ ಸ್ವಯಂವರ.

ಭೀಷ್ಮ ಸ್ವಯಂವರ ಸಭಾ ಮಂಟಪವನ್ನು ಹೊಕ್ಕ. ಭೀಷ್ಮ ಬಂದನೆಂದು ಎಲ್ಲರಿಗೂ ಆಶ್ಚರ್ಯ. ಕಾಶಿರಾಜನ ಮಕ್ಕಳು ಅಂಬೆ, ಅಂಬಿಕೆ ಮತ್ತು ಅಂಬಾಲಿಕೆ ಹೂಮಾಲೆಗಳನ್ನು ಕೈಯಲ್ಲಿ ಹಿಡಿದು ಸ್ವಯಂವರ ಮಂಟಪದಲ್ಲಿ ಕಾಣಿಸಿಕೊಂಡರು. ಕಾಶಿರಾಜನ ಕಡೆಯವರು ಒಬ್ಬೊಬ್ಬ ರಾಜರ ಗುಣಗಾನ ಮಾಡಿ ಪರಿಚಯ ಮಾಡಿಕೊಟ್ಟರು. ಭೀಷ್ಮನ ಸರದಿ ಬಂತು. ಸಭೆಯಲ್ಲಿ ರಾಜರು ಗುಸುಗುಸು ಮಾತಾಡಲು ಪ್ರಾರಂಭಿಸಿದರು. – “ಮದುವೆಯೇ ಆಗುವುದಿಲ್ಲ  ಎಂದು ಪ್ರತಿಜ್ಞೆ ಮಾಡಿದ ಭೀಷ್ಮನು ಇವನೇ ಏನು? ಇವನೆಂತಹ ಬ್ರಹ್ಮಚಾರಿ! ನಾಚಿಕೆಗೇಡು.”

ಭೀಷ್ಮನು ರಾಜರ ಮಾತು ಕೇಳಿ ರೋಷದಿಂದ ಎದ್ದು ನಿಂತ. ಕಣ್ಣುಗಳಲ್ಲಿ ಕೋಪದ ಉರಿ ಎದ್ದಿತ್ತು. ಒರೆಯಲ್ಲಿದ್ದ ಕತ್ತಿಯನ್ನು  ಹೊರತೆಗೆದು ಝಳಪಿಸಿದ. ಎದೆ ಚಾಚಿ ಸಿಂಹಗರ್ಜನೆ ಮಾಡಿದ – “ಸ್ವಯಂವರಕ್ಕೆ ಬಂದಿರುವ ರಾಜರುಗಳೇ, ಕೇಳಿ. ನಾನು ಮದುವೆಯಾಗಲು ಬಂದಿಲ್ಲ. ಮದುವೆ ಆಗುವುದಿಲ್ಲ ಎಂದು ಭೀಷ್ಮ ಪ್ರತಿಜ್ಞೆ ಮಾಡಿದ್ದೇನೆ. ಸಾಯುವವರೆಗೂ ನಾನು ಬ್ರಹ್ಮಚಾರಿಯಾಗಿಯೆ ಉಳಿಯುವೆನು. ನನಗೆ ಪ್ರಾಣವಾದ ಒಬ್ಬ ತಮ್ಮನಿದ್ದಾನೆ. ಅವನೇ ಸದ್ಗುಣ ಸಂಪನ್ನನಾದ ವಿಚಿತ್ರವೀರ್ಯ. ಅವನು ಹಸ್ತಿನಾವತಿಯ ರಾಜ. ಅವನು ಯುವಕ. ಸುಂದರ ಪುರುಷ. ಮಹಾಪರಾಕ್ರಮಿ. ಪ್ರಜಾಪ್ರೇಮಿ. ಧರ್ಮಪ್ರಭು. ಸ್ವಯಂವರ ಮಂಟಪಕ್ಕೆ ಬರುವುದು ಅವನ ಗೌರವಕ್ಕೆ ಕಡಿಮೆ. ಆದುದರಿಂದ ಅವನ ಪರವಾಗಿ ನಾನು ಬಂದಿದ್ದೇನೆ. ಈಗ ಕಾಶಿರಾಜನ ಮೂವರು ಕುಮಾರಿಯರನ್ನೂ ನಾನು ಹಸ್ತಿನಾವತಿಗೆ ಕರೆದುಕೊಂಡು ಹೋಗುತ್ತೇನೆ. ವಿಚಿತ್ರವೀರ್ಯನಿಗೆ ಮದುವೆ ಮಾಡುತ್ತೇನೆ. ನಿಮ್ಮಲ್ಲಿ ಪರಾಕ್ರಮಿಗಳಿದ್ದರೆ ನನ್ನೊಡೆನ ಯುದ್ಧ ಮಾಡಿ ರಾಜಕುಮಾರಿಯನ್ನು ಗೆದ್ದುಕೊಳ್ಳಿರಿ.”

ಭೀಷ್ಮನ ಸಿಂಹಗರ್ಜನೆಗೆ ಸ್ವಯಂವರ ಮಂಟಪ ನಡುಗಿಹೋಯಿತು. ರಾಜರು ಭೀಷ್ಮನನ್ನು ಎದುರಿಸುವುದು ತಮ್ಮಿಂದ ಆಗದೆಂದು ತಲೆ ಬಗ್ಗಿಸಿಬಿಟ್ಟರು. ಸಾಲ್ವರಾಜ ಅಂಬೆಯನ್ನು ಸ್ವಯಂವರದಲ್ಲಿ ಗೆಲ್ಲಬೇಕೆಂದು ಬಂದಿದ್ದ. ಅವನು ಎದ್ದು ನಿಂತು ಭೀಷ್ಮನನ್ನು ಎದುರಿಸಿದ. ಕತ್ತಿಯನ್ನು ಬೀಸುತ್ತ ಕೊಬ್ಬಿದ ಗೂಳಿಯ ಹಾಗೆ ಹುಂಕರಿಸಿದ – “ಭೀಷ್ಮ, ನೀನೊಬ್ಬನೆ ಗಂಡುಗಲಿಯಲ್ಲ. ಯಾರು ಶೂರರೋ ನೋಡೋಣ. ಯುದ್ಧಕ್ಕೆ ಬಾ.”

ಸಾಲ್ವರಾಜ ದಳಪತಿಯಾದ. ಸ್ವಯಂವರಕ್ಕೆ ಬಂದಿದ್ದ ರಾಜರು ಅವನೊಡನೆ ಸೇರಿಕೊಂಡು ಭೀಷ್ಮನ ಮೇಲೆ ಬಿದ್ದರು. ಭೀಷ್ಮನು ಪ್ರಳಯ ರುದ್ರನಾಗಿ ಶತ್ರುಗಳನ್ನು ಕೊಚ್ಚಿಕೆಡಹಿದ. ಸಾಲ್ವರಾಜ ಸೋತು ಹೋದ. ಅವನನ್ನು ನಂಬಿದ್ದ ರಾಜರು ಓಡಿಹೋದರು.

ಅಂಬೆ ಭೀಷ್ಮನನ್ನು ಬೇಡಿಕೊಂಡಳು – “ಧರ್ಮಾತ್ಮ, ನಾನು ಮನಸ್ಸಿನಲ್ಲಿ ಗಂಡನೆಂದು ಸಾಲ್ವರಾಜನನ್ನು ಒಪ್ಪಿಕೊಂಡಿದ್ದೇನೆ. ನ್ಯಾಯ ಧರ್ಮವನ್ನು ತಿಳಿದ ನೀವು ನನಗೆ ದಾರಿ ತೋರಿ.”

ಭೀಷ್ಮ ಅಂಬೆಯ ಬೇಡಿಕೆಯನ್ನು ಕೇಳಿ ದಯಾಮಯನಾಗಿ ನುಡಿದ – “ತಾಯಿ, ನಿನ್ನನ್ನು ಬಿಟ್ಟುಬಿಡುವೆನು. ಸಾಲ್ವರಾಜನನ್ನು ಮದುವೆಯಾಗಿ ಸುಖವಾಗಿ ಬಾಳು. ನಿನಗೆ ಮಂಗಳವಾಗಲಿ.”

ಗುರುವೇ ಹೇಳಿದರೂ ಪ್ರತಿಜ್ಞೆ ಮುರಿಯಲಾರ

ಭೀಷ್ಮನನ್ನು ಬಿಟ್ಟು ಅಂಬೆ ಸಾಲ್ವರಾಜನ ಬಳಿಗೆ ಹೋದಳು. ಯುದ್ಧದಲ್ಲಿ ಸೋತೆನೆಂದು ಅವನಿಗೆ ಜೀವವೇ ಬೇಡವಾಗಿತ್ತು. ಅವನು ಅಂಬೆಯನ್ನು ನೋಡಿ ತಲೆ ತಗ್ಗಿಸಿದ. ಬೇಸರದಿಂದ ಹೇಳಿದ – “ನಾನು ಭೀಷ್ಮನಿಂದ ಸೋತಿದ್ದೇನೆ. ಅವನು ನಿನ್ನನ್ನು ಯುದ್ಧಮಾಡಿ ಜಯಿಸಿದ. ಆದುದರಿಂದ ನೀನು ಭೀಷ್ಮನ ಸ್ವತ್ತು.”

ಅಂಬೆ ಮತ್ತೆ ಭೀಷ್ಮನಲ್ಲಿಗೆ ಬಂದಳು. ಭೀಷ್ಮನ ಪಾದಗಳಿಗೆ ಬಿದ್ದಳು. ಸಾಲ್ವರಾಜ ಹೇಳಿದುದನ್ನು ತಿಳಿಸಿದಳು- “ದಯಾಮಯ, ಸಾಲ್ವರಾಜ ನನ್ನನ್ನು ಕೈಬಿಟ್ಟ. ನಮ್ಮ ತಂದೆ ನನ್ನನ್ನು ಸೇರಿಸಿಕೊಳ್ಳುವುದಿಲ್ಲ. ನನಗೆ ನೀವೇ ಗತಿ ಇನ್ನು. ಕೈಬಿಡಬೇಡಿ.”

ಭೀಷ್ಮ ಏನೂ ಮಾಡುವಹಾಗಿರಲಿಲ್ಲ. ಅವನು ತನ್ನ ಪ್ರತಿಜ್ಞೆ ಬಿಡುವಂತಿಲ್ಲ. ಅವನು ಅಂಬೆಗಾಗಿ ಮರುಗಿದ. ಸಮಾಧಾನದ ನುಡಿ ನುಡಿದ – “ತಾಯಿ, ನೀನು ಮೊದಲಿಂದಲೂ ಮನಸ್ಸಿನಲ್ಲಿ ಸಾಲ್ವರಾಜ ಗಂಡನೆಂದು ಸಂಕಲ್ಪ ಮಾಡಿಕೊಂಡವಳು. ಆದುದರಿಂದ ಅವನೇ ನಿನಗೆ ಪತಿ. ನಾನು ಬ್ರಹ್ಮಚಾರಿ. ವಿಚಿತ್ರವೀರ್ಯನಿಗೆ ನಿನ್ನನ್ನು ಮದುವೆ ಮಾಡಲು ಸಾಧ್ಯವಿಲ್ಲ. ನಿನ್ನ ಹಣೆಯ ಬರಹವನ್ನು ನಾವು ತಪ್ಪಿಸಲು ಸಾಧ್ಯವಿಲ್ಲ.”

ಅಂಬೆಯ ಗೋಳಾಟ ಹೇಳತೀರದು. ಆದರೆ ಭೀಷ್ಮನ ಮನಸ್ಸು ಕರಗಲಿಲ್ಲ. ಅಂಬೆ ಪರಶುರಾಮನ ಬಳಿಗೆ ಹೋದಳು. ಪರಶುರಾಮ ಭೀಷ್ಮನಿಗೆ ಗುರುವೆಂದು ಅವಳು ಬಲ್ಲಳು. ಅವನಿಂದ ಹೇಳಿಸಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದ್ದಳು. ಪರಶುರಾಮನಿಗೆ ತನ್ನ ಗೋಳು ಹೇಳಿಕೊಂಡಳು. ಅವನ ಹೃದಯ ಕರಗಿತು.  ಅಂಬೆಯನ್ನು ಕರೆದುಕೊಂಡು ಭೀಷ್ಮನ ಬಳಿಗೆ ಬಂದ.

ಭೀಷ್ಮ “ಗುರುವನ್ನು ಕಂಡೆನಲ್ಲ” ಎಂದು ಸಂತೋಷಪಟ್ಟ. ಅಂಬೆಯು ಗುರುವಿನೊಡನೆ ಬಂದಿರುವುದನ್ನು ಕಂಡು ಕುಗ್ಗಿಹೋದ. ಅಂಬೆ ತನಗೆ ಏನೋ ಸಂಕಟ ತಂದಿದ್ದಾಳೆ ಎಂದು ಅರ್ಥಮಾಡಿಕೊಂಡ. ಭೀಷ್ಮ ಗುರುದೇವನ ಪಾದಮುಟ್ಟಿ ನಮಸ್ಕರಿಸಿದ. ಪರಶುರಾಮ ಭೀಷ್ಮನಿಗೆ ತಾನು ಬಂದ ಕಾರಣವನ್ನು ತಿಳಿಸಿದ – “ವತ್ಸ, ನೀನು ನನ್ನ ಪ್ರಿಯ ಶಿಷ್ಯ. ನನ್ನ ಅಪ್ಪಣೆಯನ್ನು ಪಾಲಿಸುವಿ ಎಂಬ ನಂಬಿಕೆ ನನಗಿದೆ. ಅಂಬೆಯನ್ನು ಹಿಡಿದು ತಂದವನು ನೀನು. ಆದುದರಿಂದ ಅಂಬೆಯನ್ನು ಸ್ವೀಕರಿಸುವುದು ನಿನ್ನ ಧರ್ಮ.”

“ಇದು ನನ್ನ ಪ್ರತಿಜ್ಞೆ!”

ಭೀಷ್ಮ ಪರಶುರಾಮನಿಗೆ ಕೈಮುಗಿದು ನುಡಿದ. “ಗುರುದೇವ, ನಾನು ಬ್ರಹ್ಮಚಾರಿ. ಮದುವೆ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದನ್ನು ನೀವು ಬಲ್ಲಿರಿ. ಪ್ರತಿಜ್ಞೆಗೆ ಭಂಗ ತರಬೇಡಿ. ಕ್ಷಮಿಸಿ.”

ಪರಶುರಾಮನಿಗೆ ಕೋಪ ಬಂತು. ಉರಿಗಣ್ಣು ಬಿಟ್ಟು ಸಿಡಿಲಿನಂತೆ ಗುಡುಗಿದ – ‘ಭೀಷ್ಮ, ನನ್ನನ್ನು ಎದುರು ಹಾಕಿಕೊಂಡು ಈವರೆಗೆ ಯಾರೂ ಬದುಕಿಲ್ಲ. ನೀನು ನನ್ನನ್ನು ತಿರಸ್ಕಾರ ಮಾಡಿದರೆ ನಾಶವಾಗಿ ಹೋಗುವೆ. ಕ್ಷತ್ರಿಯ ಕುಲವನ್ನು ಇಪ್ಪತ್ತೊಂದು ಸಲ ಸಂಹಾರ ಮಾಡಿದ ಗಂಡುಗೊಡಲಿಯ ರಾಮ ನಾನು.”

“ಗುರುದೇವ, ಚೆನ್ನಾಗಿ ಬಲ್ಲೆ. ಆದರೆ ಆಗ ಭೀಷ್ಮ ಎಂಬ ಮಹಾಕ್ಷತ್ರಿಯನ ಅವತಾರವಾಗಿರಲಿಲ್ಲ. ನೀವು ಇದನ್ನು ಬಲ್ಲಿರಷ್ಟೆ?”

ಪರಶುರಾಮನಿಗೆ ತಡೆಯಲಾರದಷ್ಟು ಸಿಟ್ಟು ಬಂದಿತು. ಗುರು ಶಿಷ್ಯರಿಗೆ ಕಾಳಗವೇ ಪ್ರಾರಂಭವಾಯಿತು. ಗುರು ಶಿಷ್ಯ ಇಬ್ಬರೂ ಬಾಣಗಳಿಂದ ಹಣಾಹಣಿ ಯುದ್ಧ ಮಾಡಿದರು.

ಗುರು ಸೋತರೆ ತನಗೆ ಅಪಕೀರ್ತಿ – ಭೀಷ್ಮ ಹಾಗೆ ಭಾವಿಸಿಕೊಂಡ.

ಶಿಷ್ಯ ಸೋತರೆ ನನಗೆ ಅಪಮಾನ – ಪರಶುರಾಮ ಹಾಗೆ ಭಾವಿಸಿಕೊಂಡ. ಆದುದರಿಂದ ಯಾರೂ ಸೋಲಲಿಲ್ಲ. ಯಾರೂ ಗೆಲ್ಲಲಿಲ್ಲ.

ಪರಶುರಾಮ ಶಿಷ್ಯನ ಬಿಲ್ಲುಗಾರಿಕೆಯನ್ನು ಮೆಚ್ಚಿಕೊಂಡ. “ಭೀಷ್ಮನಂಥ ಶಿಷ್ಯನಿಂದ ಸೋಲುವುದೂ ಗುರುವಿಗೆ ಕೀರ್ತಿಯೇ” ಎಂದು ಹೆಮ್ಮೆಪಟ್ಟ. ಅದೇ ಸಮಯದಲ್ಲಿ ಭೀಷ್ಮನ ಒಂದು ಬಾಣ ಬಂದು ಪರಶುರಾಮನನ್ನು ತಾಗಿತು. ಅವನು ಮೂರ್ಛೆ ಬಿದ್ದ.

ಭೀಷ್ಮ ಕೂಡಲೆ ಕೈಯ್ಯಲ್ಲಿದ್ದ ಬಿಲ್ಲುಬಾಣಗಳನ್ನು ನೆಲದ ಮೇಲೆ ಎಸೆದ. “ಗುರುದ್ರೋಹವಾಯಿತು” ಎಂದು ಸಂಕಟದಿಂದ ಪರಶುರಾಮನ ಕಡೆ ಓಡಿದ. “ನನ್ನ ಬಾಳು ಸುಡಲಿ. ಗುರುದ್ರೋಹ ಮಾಡಿದ ಪಾಪಿ ನಾನು” ಎಂದು ಪಶ್ಚಾತ್ತಾಪಪಟ್ಟ.

ಪರಶುರಾಮ ಮೂರ್ಛೆಯಿಂದ ಎಚ್ಚೆತ್ತ. ಶಿಷ್ಯನನ್ನು ಪ್ರೀತಿಯಿಂದ ಬಾಚಿ ತಬ್ಬಿಕೊಂಡ. ಅಭಿಮಾನದಿಂದ ಹೊಗಳಿದ – “ಪ್ರಿಯ ಶಿಷ್ಯ ಭೀಷ್ಮ. ಸೋತೆನೆಂದು ನನಗೆ ಕೋಪವಿಲ್ಲ. ನಿನ್ನಂಥ ಶಿಷ್ಯನಿಂದ ಸೋಲುವುದೂ ಗುರುವಿಗೆ ಹೆಮ್ಮೆಯೇ. ಭೂಲೋಕದಲ್ಲಿ ನಿನ್ನ ಸಮಾನರಾದ ಕ್ಷತ್ರಿಯರಿಲ್ಲ. ನಿನ್ನ ಪ್ರತಿಜ್ಞೆಗೆ ಜಯವಾಯಿತು.”

ಭೀಷ್ಮ ಗುರುವಿಗೆ ತಲೆಬಾಗಿದ . ಗುರು ಶಿಷ್ಯನನ್ನು ಆಶೀರ್ವದಿಸಿದ. ಆದರೆ ಆ ಸಮಯದಲ್ಲಿ ಅಂಬೆ ಕಸಿವಿಸಿ ಹೊಂದಿ ಹೊರಟುಹೋಗಿದ್ದಳು. ಅವಳು ಎಲ್ಲಿಗೆ ಹೋದಳು?

‘ನಿನ್ನಂಥ ಶಿಷ್ಯನಿಂದ ಸೋಲುವುದೂ ಗುರುವಿಗೆ ಹೆಮ್ಮೆಯೇ’

ಭೀಷ್ಮ ಮಹಾ ಸಂಭ್ರಮದಿಂದ ವಿಚಿತ್ರವೀರ್ಯನ ಮದುವೆ ಮಾಡಿದ.

ಮೊಮ್ಮಕ್ಕಳ ಬಾಳು

ಮಹರ್ಷಿ ವ್ಯಾಸರ ಆಶೀರ್ವಾದದಿಂದ ಅಂಬಿಕೆ ಅಂಬಾಲಿಕೆಯರಿಗೆ ಮಕ್ಕಳಾದವು. ಅಂಬಿಕೆಯಲ್ಲಿ ಧೃತರಾಷ್ಟ್ರನೆಂಬ ಹುಟ್ಟುಕುರುಡು ಮಗ ಹುಟ್ಟಿದ. ಅಂಬಾಲಿಕೆಯಲ್ಲಿ ಪಾಂಡುವೆಂಬ ಮಗ ಹುಟ್ಟಿದ.

ಧೃತರಾಷ್ಟ್ರನಿಗೆ ಗಾಂಧಾರಿ ಹೆಂಡತಿ ಗಾಂಧಾರಿಗೆ ನೂರು ಜನ ಗಂಡುಮಕ್ಕಳು. ಒಬ್ಬಳು ಹೆಣ್ಣುಮಗಳು. ಗಂಡುಮಕ್ಕಳೇ ಕೌರವರು. ಕೌರವರಲ್ಲಿ ದುರ್ಯೋಧನ ದೊಡ್ಡವನು. ದುಶ್ಯಾಸನ ಎರಡನೆಯವನು. ಅಚ್ಚುಮೆಚ್ಚಿನ ತಮ್ಮ. ದುರ್ಯೋಧನ ಹಟಮಾರಿ. ಅಷ್ಟೇ ಅಲ್ಲ. ಹೊಟ್ಟೆಕಿಚ್ಚಿನವನು ಕೂಡ. ದುಶ್ಯಾಸನ ಅಣ್ಣನ ಕೆಲಸಗಳಿಗೆಲ್ಲ ಸಹಾಯಕ.

ಪಾಂಡುವಿನ ಮಕ್ಕಳು ಪಂಚಪಾಂಡವರು – ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ. ಯುದಿಷ್ಠಿರನ ಗುಣಗಳಿಂದ ಜನರು ಅವನನ್ನು ಧರ್ಮರಾಜ ಎಂದು ಕರೆಯುತ್ತಿದ್ದರು.

ಧೃತರಾಷ್ಟ್ರ ಹುಟ್ಟುಕುರುಡ. ಅದರಿಂದ ಪಾಂಡುವಿಗೆ ಭೀಷ್ಮರು ಪಟ್ಟ ಕಟ್ಟಿದರು. ಪಾಂಡು ಮಹಾರಾಜ ಬಹಳ ಕಾಲ ಬದುಕಲಿಲ್ಲ. ಧೃತರಾಷ್ಟ್ರನೇ ರಾಜ್ಯಭಾರ ಮಾಡಬೇಕಾಯಿತು. ಪಾಂಡವರು ದೊಡ್ಡಪ್ಪನ ಸಂರಕ್ಷಣೆಯಲ್ಲಿ ಬೆಳೆದರು.

ಭೀಷ್ಮನು ಕೌರವ ಪಾಂಡವ ರಾಜಕುಮಾರರಿಗೆ ದ್ರೋಣಾಚಾರ್ಯರಿಂದ ಬಿಲ್ಲುವಿದ್ಯೆ ಹೇಳಿಸಿದ. ಈ ರಾಜಕುಮಾರರಿಗೆ ಕೃಪಾಚಾರ್ಯರು ಇನ್ನೊಬ್ಬ ಗುರುಗಳು. ಅರ್ಜುನ ದ್ರೋಣಾಚಾರ್ಯರ ಪಟ್ಟದ ಶಿಷ್ಯನೆಂದು ಪ್ರಸಿದ್ಧನಾದ. ಭೀಮ, ದುರ್ಯೋಧನ ಗದೆಯ ಪ್ರಯೋಗದಲ್ಲಿ ಪ್ರವೀಣರು. ಆದರೆ ಭೀಮ ದುರ್ಯೋಧನನಿಗಿಂತ ದೇಹಬಲದಲ್ಲಿ ಹೆಚ್ಚು. ಆದುದರಿಂದ ದುರ್ಯೋಧನನಿಗೆ ಭೀಮಾರ್ಜುನರನ್ನು ಕಂಡರೆ ಹೊಟ್ಟೆಕಿಚ್ಚು. ಭೀಮನನ್ನು ಕಂಡರಂತೂ ಉರಿದುರಿದು ಬೀಳುವನು.

ಪಾಂಡವರಿಗೆ ದ್ರೌಪದಿ ಹೆಂಡತಿಯಾದಳು. ಅರ್ಜುನ ಮತ್ಸ್ಯಯಂತ್ರವನ್ನು ಭೇದಿಸಿ ದ್ರೌಪದಿಯನ್ನು ಗೆದ್ದ. ದುರ್ಯೋಧನ ಈ ಪರೀಕ್ಷೆಯಲ್ಲಿ ಸೋತು ಹೋದ. ಆದುದರಿಂದ ದ್ರೌಪದಿಯ ಮೇಲೂ ಅವನಿಗೆ ದ್ವೇಷ.

ಭೀಷ್ಮರು ಕೌರವ ಪಾಂಡವರ ದಾಯಾದಿತನವನ್ನು ಕಂಡು ಮರುಗಿದರು. ಈ ದಾಯಾದಿ ಸಹೋದರರನ್ನು ದೂರದೂರ ಇಡಲು ಯೋಚಿಸಿದರು. ಹಸ್ತಿನಾವತಿಯ ಜೊತೆಗೆ ಇಂದ್ರಪ್ರಸ್ತ ಎಂಬ ಇನ್ನೊಂದು ರಾಜಧಾನಿಯ ನಿರ್ಮಾಣವಾಯಿತು. ಧೃತರಾಷ್ಟ್ರ ಅವನ ಮಕ್ಕಳು ಹಸ್ತಿನಾವತಿಯಲ್ಲಿ ಉಳಿದರು. ಧರ್ಮರಾಜನಿಗೆ ಇಂದ್ರಪ್ರಸ್ಥದಲ್ಲಿ ಪಟ್ಟಾಭಿಷೇಕವಾಯಿತು. ಧರ್ಮರಾಜ ರಾಜಸೂಯ ಯಾಗ ಮಾಡಿದ. ದುರ್ಯೋಧನನ ಹೊಟ್ಟೆಕಿಚ್ಚು ಇನ್ನೂ ಹೆಚ್ಚಿತು.

ದುರ್ಯೋಧನ ಪಾಂಡವರನ್ನು ನಾಶಮಾಡಲು ಹಟತೊಟ್ಟ. ಸೋದರಮಾವ ಶಕುನಿ ಅವನಿಗೆ ದುರ್ಬೋಧೆ ಮಾಡಿದ. ಧರ್ಮರಾಜನಿಗೆ ಪಗಡೆಯಾಟ ಎಂದರೆ ಚಪಲ. ಪಗಡೆಯಾಟದಿಂದಲೇ ಧರ್ಮರಾಜನನ್ನು ಸೋಲಿಸಲು ದುರ್ಯೋಧನ ಶಕುನಿ ಯೋಚಿಸಿದರು. ಪಗಡೆಯಾಟದಲ್ಲಿ ಧರ್ಮರಾಜ ರಾಜ್ಯ ಸೋತ. ಸಹೋದರರನ್ನು ಸೋತ. ದ್ರೌಪದಿಯನ್ನೂ ಸೋತ.

ದುರ್ಯೋಧನ ಕೇಕೆ ಹಾಕಿದ. ದ್ರೌಪದಿಗೆ ಅಪಮಾನ ಮಾಡಲು ಪ್ರಯತ್ನಿಸಿದ.

ಭೀಮ ಹಲ್ಲುಹಲ್ಲು ಕಡಿದ. ದುರ್ಯೋಧನನ ತೊಡೆ ಮುರಿಯುತ್ತೇನೆ, ದುಶ್ಯಾಸನನ ಹಲ್ಲು ಮುರಿದು ಕರುಳು ಬಗೆಯುತ್ತೇನೆ ಎಂದು ಪ್ರತಿಜ್ಞೆ ಮಾಡಿದ.

ಭೀಷ್ಮ, ದ್ರೋಣ, ಧೃತರಾಷ್ಟ್ರ, ಗಾಂಧಾರಿ, ದುರ್ಯೋಧನನಿಗೆ ಬುದ್ಧ ಹೇಳಿದರು.  ಅವರ ಬಲವಂತಕ್ಕೆ ಒಪ್ಪಿ ಪಾಂಡವರನ್ನು ಬಿಟ್ಟುಬಿಟ್ಟ. ಅವರು ತಮ್ಮ ರಾಜಧಾನಿಗೆ ಹಿಂದಿರುಗಿದರು.

ದುರ್ಯೋಧನ ತೆಪ್ಪಗಿರಲಿಲ್ಲ. ಈ ಸಲ ತಂದೆಯನ್ನು ಬಲವಂತಪಡಿಸಿದ. ಪಗಡೆಯಾಟಕ್ಕೆ ಧರ್ಮರಾಜನನ್ನು ಪುನಃ ಕರೆಸಿಕೊಂಡ. ಈ ಸಲವೂ ಧರ್ಮರಾಜ ಶಕುನಿಯೊಡನೆ ಪಗಡೆಯಾಟ ಆಡಿ ಸೋತುಹೋದ. ಪಾಂಡವರಿಗೆ ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಒದಗಿತು. ಅಜ್ಞಾತವಾಸ ಎಂದರೆ ತಲೆ ಮರೆಸಿಕೊಂಡಿರುವುದು. ಸಿಕ್ಕಿಬಿದ್ದರೆ ಮತ್ತೆ ಹನ್ನೆರಡು ವರ್ಷ ವನವಾಸ. ಒಂದು ವರ್ಷ ಅಜ್ಞಾತವಾಸ.

ಪಾಂಡವರು ದೈವಭಕ್ತರು, ಸತ್ಯವಂತರು. ಅವರಿಗೆ ಶ್ರೀಕೃಷ್ಣನ ಸಹಾಯ. ಆದುದರಿಂದ ಅವರು ವನವಾಸದಲ್ಲಿ ಎಷ್ಟು ಕಷ್ಟ ಬಂದರೂ ಸಹಿಸಿಕೊಂಡರು. ವನವಾಸ, ಅಜ್ಞಾತವಾಸಗಳನ್ನು ಮುಗಿಸಿದರು.

ಪಾಂಡವರು, ಅವರ ಕಡೆಯವರು ಸೇರಿ ಮಂತ್ರಾಲೋಚನೆ ನಡೆಸಿದರು. ಮೊದಲು ಸಂಧಿಗೆ ಪ್ರಯತ್ನಪಡಬೇಕು. ದುರ್ಯೋಧನ ಒಪ್ಪದಿದ್ದರೆ ಯುದ್ಧ ಮಾಡಬೇಕು ಎಂದು ತೀರ್ಮಾನವಾಯಿತು.  ಶ್ರೀಕೃಷ್ಣ ರಾಯಭಾರ ವಹಿಸಿ ಹಸ್ತಿನಾವತಿಗೆ ಹೋಗಲು ಒಪ್ಪಿದ.

ಶ್ರೀಕೃಷ್ಣ ರಾಯಭಾರ

ರಾಯಭಾರದ ಸಭೆ ಸೇರಿತು. ದುರ್ಯೋಧನನು ಭೀಷ್ಮ, ದ್ರೋಣ, ಪರಶುರಾಮ, ಕೃಪಾಚಾರ್ಯ ಮೊದಲಾದ ಹಿರಿಯರ ಸಭೆ ಸೇರಿಸಿದ್ದ. ಅವನಿಗೆ ಬಲಭುಜವಾಗಿದ್ದ ಶಕುನಿ, ಕರ್ಣ, ದುಶ್ಯಾಸನ ಇವರೂ ಸಭೆಯಲ್ಲಿ ಇದ್ದರು.

ಕೃಷ್ಣ ದುರ್ಯೋಧನನಿಗೆ ಬುದ್ಧಿವಾದ ಹೇಳಿದ-

“ಕೌರವೇಶ್ವರ, ಕೇಳು, ನನ್ನ ವಚನಗಳು ಈಗ ನಿನಗೆ ಕಿವಿಗೆ ಕಾಸಿದ ಸೀಸದಂತೆ ಕರ್ಣಕಠೋರವಾಗಿರಬಹುದು. ಮುಂದೆ ಅದೇ ನನ್ನ ಮಾತುಗಳು ನಿನಗೆ ಬಹು ಪ್ರಿಯವಾಗುತ್ತವೆ. ಪಾಂಡವರಿಗೆ ಅವರ ಅರ್ಧ ರಾಜ್ಯವನ್ನು ಬಿಟ್ಟು ಕೊಡು. ಪಾಂಡವರು ನಿನ್ನ ಸಹೋದರರು. ಅವರು ತುಂಬ ಕಷ್ಟಪಟ್ಟಿದ್ದಾರೆ. ಅವರನ್ನು ಕೂಡಿಕೊಂಡು ಬದುಕು. ಯುದ್ಧವಾದರೆ ಒಬ್ಬರನ್ನು ಒಬ್ಬರು ಕೊಲ್ಲುತ್ತಾರೆ. ಎಲ್ಲಾ ಹಾಳಾಗಿ ಹೋಗುತ್ತಾರೆ.”

ದುರ್ಯೋಧನ ಮೀಸೆಯ ಮೇಲೆ ಕೈಹಾಕಿದ. ಗಹಗಹಿಸಿ ನಕ್ಕ. ದುಶ್ಯಾಸನ, ಶಕುನಿ, ಕರ್ಣರ ಮುಖ ನೋಡಿದ. ಗರ್ವದಿಂದ ಗರ್ಜಿಸಿದ – “ಶ್ರೀ ಕೃಷ್ಣ, ನೀನು ಗೊಲ್ಲ, ಪಾಂಡವರು ಅಡವಿಯ ತಿರುಕರು.  ನಿನಗೆ ಅವರಿಗೆ ಸರಿಯಾಗಿದೆ ಸ್ನೇಹ . ಕೇಳು, ಕಿವಿಗೊಟ್ಟು ಕೇಳಲು. ನಾನು ಪಾಂಡವರಿಗೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನೂ ಕೊಡುವುದಿಲ್ಲ. ನಮಗೆ ಸಂಧಿ ಬೇಡ. ಯುದ್ಧ ಬೇಕು. ನಿನ್ನ ಮಿತ್ರರಾದ ಪಾಂಡವರು ಯುದ್ಧಮಾಡಿ ಅರ್ಧ ರಾಜ್ಯವನ್ನು ಗೆದ್ದುಕೊಳ್ಳಲಿ.”

ಭೀಷ್ಮರು ಪಾಂಡವ ಕೌರವರಿಗೆ ದೊಡ್ಡ ತಾತ. ಈಗಾಗಲೆ ಅವರಿಗೆ ವಯಸ್ಸಾಗಿತ್ತು. ದಾಯಾದಿಗಳ ದ್ವೇಷವು ಬೆಳೆಯದಂತೆ ಅವರು ತುಂಬ ಪ್ರಯತ್ನಿಸಿದ್ದರು. ಈಗ ಹೇಳಿದರು: “ದುರ್ಯೋಧನ, ಶ್ರೀಕೃಷ್ಣನ ಮಾತನ್ನು ಕೇಳು. ಪಾಂಡವರ ರಾಜ್ಯವನ್ನು ಹಿಂದಕ್ಕೆ ಕೊಡು. ಯುದ್ಧವಾದರೆ ನಿನಗೂ ಒಳ್ಳೆಯದಲ್ಲ. ಜನಕ್ಕೂ ಒಳ್ಳೆಯದಲ್ಲ.”

ದೃತರಾಷ್ಟ್ರ ಗಾಂಧಾರಿ, ಪರಶುರಾಮ ಎಲ್ಲ ದುರ್ಯೋಧನನಿಗೆ ಹೀಗೆಯೇ ಬುದ್ಧಿವಾದ ಹೇಳಿದರು. ಅವನು ಅವರ ಬುದ್ಧಿವಾದಕ್ಕೆ ಕಿವುಡನಾಗಿದ್ದ.

ಯುದ್ಧವೇ ನಿಶ್ಚಯವಾಯಿತು.

ಕುರುಸೈನ್ಯದ ಅಧಿಪತಿ ಭೀಷ್ಮ

ಪಾಂಡವರ ಸೇನೆ ಕುರುಕ್ಷೇತ್ರದಲ್ಲಿ ಬಂದಿಳಿಯಿತು.

ದುರ್ಯೋಧನನಿಗೆ ಈ ವರ್ತಮಾನ ಬಂತು. ಅವನು ಕೂಡಲೆ ಮಂತ್ರಾಲೋಚನೆಯ ಸಭೆಯನ್ನು ಕೂಡಿಸಿದ. ಭೀಷ್ಮರು. ದ್ರೋಣಾಚಾರ್ಯರು, ಕೃಪಾಚಾರ್ಯರು, ಕರ್ಣ, ಶಕುನಿ, ದುಶ್ಯಾಸನ ಸಭೆ ಸೇರಿದರು. ದುರ್ಯೋಧನ ಎಲ್ಲರ ಮಂತ್ರಾಲೋಚನೆ ಕೇಳಿದ.

ದ್ರೋಣಾಚಾರ್ಯರು ಸರಿಯಾದ ಸಲಹೆ ಕೊಟ್ಟರು – “ಕೌರವೇಶ್ವರ, ಪಾಂಡವರು ಸಾಮಾನ್ಯರಲ್ಲ. ಏಳು ಅಕ್ಷೌಹಿಣಿ ಸೇನೆಯನ್ನು ಹೊಂದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ದೈವಬಲವಿದೆ. ಶ್ರೀಕೃಷ್ಣನೇ ಅವರಿಗೆ ಬೆಂಬಲನಾಗಿದ್ದಾನೆ. ಶ್ರೀ ಕೃಷ್ಣನಿಗೆ ಪಾಂಡವರು ಪ್ರಾಣ. ನಮಗೆ ಭೀಷ್ಮಾಚಾರ್ಯರು ಬೆಂಬಲರಾಗಿದ್ದಾರೆ. ಅವರು ನಮಗೆಲ್ಲ ಹಿರಿಯರು.  ಭೀಷ್ಮಾಚಾರ್ಯರಿಗೇ ಸೈನ್ಯಾಧಿಪತ್ಯದ ಪಟ್ಟ ಕಟ್ಟು.”

ದುರ್ಯೋಧನ ಅವರ ಅಪ್ಪಣೆಯಂತೆ ಭೀಷ್ಮರಿಗೆ ಸೈನ್ಯಾಧಿಪತ್ಯದ ಪಟ್ಟ ಕಟ್ಟಿದ. ಅನಂತರ ಅಭಿಮಾನದಿಂದ ನುಡಿದ – “ಕುರುಕುಲ ಪಿತಾಮಹರಾದ ಭೀಷ್ಮರು ನಮ್ಮ ಹನ್ನೊಂದು ಅಕ್ಷೌಹಿಣಿ ಸೇನೆಯ ಸೇನಾಧಿಪತಿಗಳು. ಅವರ ಸೇನೆ ಪರಮೇಶ್ವರನಿಗೂ ಹೆದರುವುದಿಲ್ಲ. ಪಾಂಡವರು ತಿರುಗಿ ಅರಣ್ಯದ ಪಾಲಾದಂತೆಯೇ. ಭೀಷ್ಮರ ಸರಿಸಮರು ಯಾರಿದ್ದಾರೆ ಪಾಂಡವರ ಸೇನೆಯಲ್ಲಿ?”

ಕರ್ಣನಿಗೆ ರೇಗಿತು ದುರ್ಯೋಧನನ ನುಡಿ ಕೇಳಿ. ಅವನು ಗರ್ಜಿಸಿದ – “ಕೌರವೇಶ್ವರ, ನಿನಗೆ ಬುದ್ಧಿ ಕೆಟ್ಟಿದೆ. ಭೀಷ್ಮರು ಧರ್ಮಪಂಡಿತರು. ಅವರ ಚರ್ಮ ಸುಕ್ಕುಗಟ್ಟಿದೆ. ಗಲ್ಲ ಬತ್ತಿದೆ. ಹಲ್ಲು ಬಿದ್ದಿದೆ. ಮೀಸೆ ಬೆಳ್ಳಗೆ ನರೆತಿದೆ. ತಲೆ ನಡುಗುತ್ತಿದೆ. ಹೆಗಲು ಜೋತು ಬಿದ್ದಿದೆ. ಬೆನ್ನುಗೂನು ಬಿದ್ದಿದೆ. ಇಂಥವನು ಸೇನಾಧಿಪತಿಯಾದರೆ ಲೋಕ ನಗದೆ? ಭೀಷ್ಮರನ್ನು ಯುದ್ಧದಲ್ಲಿ ಕೊಲ್ಲಿಸಬೇಕೆಂದಿದ್ದರೆ ಶತ್ರುಗಳೇಕೆ? ನಾನೇ ಬಿಲ್ಲಲಿನ ಠೇಂಕಾರದಿಂದ ಕೊಂದು ಬಿಡುತ್ತೇನೆ.”

ದ್ರೋಣರು ಎದ್ದರು. ಸಿಂಹದಂತೆ ಗರ್ಜಿಸಿದರು – ಕರ್ಣ, ಬಾಯಿಬಡುಕತನವನ್ನು ಸಾಕುಮಾಡು. ಯೌವನದ ಕೊಬ್ಬಿನಿಂದ ಹರಟಬೇಡ. ನೀನು ಭೀಷ್ಮಾಚಾರ್ಯರಿಗೆ ಸಮನೇ? ಅವರು ಕುರುಕುಲ ಪಿತಾ ಮಹರು. ನಮಗೆಲ್ಲ ಹಿರಿಯರು.”

ಭೀಷ್ಮರು ಎದ್ದರು. ಸಿಂಹಗಾಂಭೀರ್ಯದಿಂದ ಪ್ರತಿಜ್ಞೆ ಮಾಡಿದರು – “ಪ್ರತಿ ದಿನವೂ ಸಂಜೆಯೊಳಗೆ ಶತ್ರು ಸೇನೆಯಲ್ಲಿ ಹತ್ತು ಸಾವಿರ ತಲೆಗಳನ್ನು ಚಂಡಾಡದಿದ್ದರೆ ನಾನು ಭೀಷ್ಮನಲ್ಲ. ಶ್ರೀಕೃಷ್ಣನ ಕೈಯ್ಯಲ್ಲಿ ಚಕ್ರ ಹಿಡಿಸದಿದ್ದರೆ ನಾನು ಭೀಷ್ಮನಲ್ಲ. ಹನುಮಧ್ವಜದ ಅರ್ಜುನನ ರಥವನ್ನು ಹಿಂದಕ್ಕೆ ಸರಿಸದಿದ್ದರೆ ನಾನು ಭೀಷ್ಮನಲ್ಲ. ಕರ್ಣನಂಥವರು ಬೊಗಳಿದರೆ ಏನಾಯಿತು?”

ಮಂತ್ರಾಲೋಚನೆಯ ಸಭೆಯು “ಭೀಷ್ಮಾಚಾರ್ಯಾರಿಗೆ ಜಯವಾಗಲಿ” ಎಂದು ಜಯಕಾರ ಮಾಡಿತು.

ಆದರೆ ಕರ್ಣ ಭೀಷ್ಮಾಚಾರ್ಯರು ಬದುಕಿರುವವರೆಗೆ ತಾನು ಯುದ್ಧಮಾಡುವುದಿಲ್ಲ ಎಂದು ಹೇಳಿ ಕೋಪದಿಂದ ಹೊರಟುಹೋದ.

ಭೀಷ್ಮರು ಪ್ರತಿಜ್ಞೆಯಂತೆ ನಡೆದರು

ಭೀಷ್ಮರು ಸೈನ್ಯಾಧಿಪತಿಯಾಗಿ ಹನ್ನೊಂದು ಅಕ್ಷೌಹಿಣಿ ಸೇನೆಯನ್ನು ನಡೆಸಿದರು. (ಒಂದು ಅಕ್ಷೌಹಿಣಿ ಎಂದರೆ ೨೧,೮೭೦ ಆನೆಗಳು, ೨೧,೮೭೦ ರಥಗಳು. ೬೫,೬೧೦ ಕುದುರೆಗಳು. ೧,೦೯,೩೫೦ ಕಾಲಾಳುಗಳು) ಅದು ಪಾಂಡವಸೇನೆಯನ್ನು ಕುರುಕ್ಷೇತ್ರದಲ್ಲಿ ಸಂಧಿಸಿತು. ಯುದ್ಧ ಪ್ರಾರಂಭವಾಗುವುದಕ್ಕೆ ಮುಂಚೆ ಧರ್ಮರಾಜ ಬಂದು ಭೀಷ್ಮರ ಆಶೀರ್ವಾದ ಪಡೆದ. ಅರ್ಜುನನಿಗೆ ಶ್ರೀ ಕೃಷ್ಣ ಸಾರಥಿಯಾದ.

ಕೌರವ ಸೇನೆಗೂ ಪಾಂಡವ ಸೇನೆಗೂ ಹಣಾಹಣಿ ಯುದ್ಧವಾಯಿತು. ಭೀಷ್ಮರು ತಮ್ಮ ಪ್ರತಿಜ್ಞೆಯನ್ನು ಉಳಿಸಿಕೊಂಡರು. ಪ್ರತಿ ದಿನವೂ ಸಂಜೆಯೊಳಗೆ ಶತ್ರು ಸೇನೆಯ ಹತ್ತು ಸಾವಿರ ತಲೆಗಳನ್ನು ತುಂಡರಿಸಿ ಕೆಡಹಿದರು. ಹೀಗೆ ಎರಡು ದಿವಸಗಳು ಕಳೆದವು.

ಮೂರನೆಯ ದಿನ ಅರ್ಜುನನೇ ಭೀಷ್ಮರನ್ನು ಎದುರಿಸಿದನು. ಅವನು ತನ್ನ ಪಿತಾಮಹನ ಮೇಲೆ ಬಾಣಗಳ ಸುರಿಮಳೆಯನ್ನೇ ಸುರಿಸಿದನು.

“ಓಹೋ! ಪರಮೇಶ್ವರನ ಗರುಡಿಯಲ್ಲಿ ಕಲಿತವನು ಅಲ್ಲವೇ ನೀನು? ನನ್ನ ಬಾಣಗಳನ್ನು ತಡೆದುಕೊ” ಎಂದು ಭೀಷ್ಮರು ಅರ್ಜುನನ ಮೇಲೆ ತಾವೂ ಬಾಣಗಳ ಮಳೆಗೆರೆದರು. ಆದರೆ ಅರ್ಜುನನ ಬಾಣಗಳನ್ನು ಎದುರಿಸುವುದು ಭೀಷ್ಮರಿಗೆ ಕಷ್ಟವಾಯಿತು. ಶ್ರೀಕೃಷ್ಣನನ್ನು ಅರ್ಜುನನಿಂದ ಬೇರೆ ಮಾಡಿದ ಹೊರತು ಅರ್ಜುನನ್ನು ಗೆಲ್ಲುವುದು ಅಸಾಧ್ಯ ಎನ್ನಿಸಿತು.

ಭೀಷ್ಮರು ಪರಶುರಾಮನು ಕೊಟ್ಟಿದ್ದ ಬಾಣವನ್ನು ಬಿಲ್ಲಿಗೆ ಹೂಡಿದರು. ಶ್ರೀ ಕೃಷ್ಣನ ಹಣೆಗೆ ಗುರಿಯಿಟ್ಟು ಹೊಡೆದರು. ಕೆಂಪು ಗರಿಯ ದುಂಬಿ ಕಮಲಕ್ಕೆ ತಾಗಿದರೆ ಹೇಗಿರುತ್ತದೆ? ಹಾಗೆ ಕೆಂಗರಿಯ ಬಾಣ ಶ್ರೀಕೃಷ್ಣನ ಮುಖಕಮಲವನ್ನು ತಾಗಿತು. ಶ್ರೀಕೃಷ್ಣ ಬಾಣವನ್ನು ಹಣೆಯಿಂದ ಕಿತ್ತನು. ಕೂಡಲೆ ಹಣೆಯಿಂದ ರಕ್ತ ಚಿಮ್ಮಿತು. ಅವನ ದೇಹವೆಲ್ಲ ರಕ್ತದಿಂದ ಅಭಿಷೇಕವಾಗಿ ಹೋಯಿತು. ಶ್ರೀ ಕೃಷ್ಣ ಪ್ರಳಯಕಾಲದ ರುದ್ರನಾದ. “ಭೀಷ್ಮನನ್ನು ಕೊಂದುಬಿಡುತ್ತೇನೆ” ಎಂದು ರಥದಿಂದ ಧುಮುಕಿದ. ಚಕ್ರ ಹಿಡಿಯುವುದಿಲ್ಲ ಎಂದು ದುರ್ಯೋಧನನ ಮುಂದೆ ಪ್ರತಿಜ್ಞೆ ಮಾಡಿದ್ದ. ಆ ಪ್ರತಿಜ್ಞೆ ಎಲ್ಲಿ ಹೋಯಿತೋ? ಶ್ರೀ ಕೃಷ್ಣ ಚಕ್ರಧಾರಿಯಾಗಿ ಭೀಷ್ಮನಿಗೆ ಎದುರಾದ.

ಭೀಷ್ಮರು ಚಕ್ರಧಾರಿಯಾಗಿರುವ ಶ್ರೀಕೃಷ್ಣನನ್ನು ನೋಡಿದರು. ರಥದಿಂದ ಧುಮುಕಿದರು. ಬಿಲ್ಲು ಬಾಣಗಳನ್ನು ನೆಲದ ಮೇಲೆ ಚೆಲ್ಲಿದರು. ಎರಡೂ ಕೈಗಳನ್ನು ಮೇಲೆತ್ತಿ ಕೈಜೋಡಿಸಿ ಸ್ತೋತ್ರ ಮಾಡಿದರು-

“ಕೃಷ್ಣ, ನನ್ನಂಥ ಬಾಲಕನಲ್ಲಿ ಗುಣದೋಷಗಳನ್ನು ಹುಡುಕುವುದೇ? ನಾನು ನಿನ್ನ ಪರಮಭಕ್ತ. ನನ್ನ ಮೇಲೆ ಕೋಪನೇ? ನೀನು ನನ್ನನ್ನು ಕೊಂದರೆ ಸಂತೋಷವೇ. ಸ್ವರ್ಗವೂ ಸಿಕ್ಕುತ್ತದೆ ಬಾ. ಕೃಷ್ಣ.”

ಶ್ರೀಕೃಷ್ಣನು ಭೀಷ್ಮರ ಮಾತು ಕೇಳಿ ನಾಚಿದನು. ಸುದರ್ಶನ ಚಕ್ರವನ್ನು ಅಡಿಗಿಸಿಬಿಟ್ಟನು. ಅರ್ಜುನನ ರಥಕ್ಕೆ ಹಿಂದಿರುಗಿದನು. ಭೀಷ್ಮರ ಪ್ರತಿಜ್ಞೆ ನೆರವೇರಿತು.

ಪ್ರತಿ ದಿನ ಹತ್ತು ಸಾವಿರ ಮಂದಿಯ ತಲೆಗಳನ್ನು ತುಂಡರಿಸಿದರು.

ಶ್ರೀಕೃಷ್ಣನ ಕೈಯ್ಯಲ್ಲಿ ಚಕ್ರ ಹಿಡಿಸಿದರು.

ಹನುಮಧ್ವಜದ ಅರ್ಜುನನ ರಥವನ್ನು ಹಿಮ್ಮೆಟ್ಟಿಸಿದರು.

ಬಾಣಗಳ ಹಾಸಿಗೆಯಲ್ಲಿ ಭೀಷ್ಮರು

ಒಂಬತ್ತು ದಿವಸಗಳು ಕಳೆದುಹೋದವು. ಭೀಷ್ಮರದೇ ಕೈ ಮೇಲಾಗಿತ್ತು. ಧರ್ಮರಾಜ ಯುದ್ಧದ ಬಿಸಿಯಿಂದ ಕಂಗೆಟ್ಟ. ಯುದ್ಧವನ್ನು ಹೇಗೆ ಗೆಲ್ಲುವುದೆಂದು ಕೃಷ್ಣನ ಸಲಹೆ ಕೇಳಿದ. ಭೀಷ್ಮರನ್ನು ಮೊರೆ ಹೋಗುವುದೇ ಅದಕ್ಕೆ ಉಪಾಯವೆಂದು ಕೃಷ್ಣ ಹೇಳಿದ.

ಧರ್ಮರಾಜ ಶ್ರೀಕೃಷ್ಣನನ್ನು ಮುಂದಿಟ್ಟುಕೊಂಡು ರಾತ್ರಿ ರಹಸ್ಯವಾಗಿ ಭೀಷ್ಮರನ್ನು ಹೋಗಿ ನೋಡಿದ.

ಧರ್ಮರಾಜ ಭೀಷ್ಮರ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡ – “ಅಜ್ಜ, ನಾವು ನಿನ್ನ ಮೊಮ್ಮಕ್ಕಳು. ನಿನ್ನನ್ನು ನಾವೂ ಗೆಲ್ಲಲಾಗದು. ದೇವತೆಗಳೂ ಗೆಲ್ಲಲಾರರು. ನಾವು  ಲೆಕ್ಕವಿಲ್ಲದಷ್ಟು ಮಂದಿಯನ್ನು ಕಳೆದುಕೊಂಡಿದ್ದೇವೆ. ದಯೆಯಿಟ್ಟು ನಮ್ಮನ್ನು ಗೆಲ್ಲಿಸಬೇಕು.”

ಶ್ರೀಕೃಷ್ಣನೂ ಧರ್ಮರಾಜನ ಬೇಡಿಕೆಗೆ ದನಿಗೂಡಿಸಿ ಭೀಷ್ಮರನ್ನು ಪ್ರಾರ್ಥಿಸಿದ – “ಪೂಜ್ಯರೇ, ಕೌರವರು, ಪಾಂಡವರು, ಇಬ್ಬರೂ ನಿಮಗೆ ಮೊಮ್ಮಕ್ಕಳು. ಪಾಂಡವರನ್ನು ಮೊದಲಿಂದ ಸಾಕಿ ಸಲಹಿದವರು ನೀವು. ಪಾಂಡವರು ಸಜ್ಜನರು. ನಿಮ್ಮನ್ನೇ ನಂಬಿಕೊಂಡಿರುವವರು. ಅವರು ತಮ್ಮ ಮಾತಿನಂತೆ ನಡೆದುಕೊಂಡರು. ಆದರೆ ದುರ್ಯೋಧನ ರಾಜ್ಯ ಕೊಡಲಿಲ್ಲ. ಅವರನ್ನು ಕಾಪಾಡುವುದು ನಿಮ್ಮ ಕರ್ತವ್ಯ.”

ಭೀಷ್ಮರು ಶ್ರೀಕೃಷ್ಣನು ಪಾಂಡವರ ಪಕ್ಷಪಾತಿ ಎಂದು ಚೆನ್ನಾಗಿ ಬಲ್ಲರು. ಕೌರವರು ದುರುಳರು, ಅಧರ್ಮದವರು. ಕೃಷ್ಣ ಅವರನ್ನು ಸಂಹರಿಸದೆ ಬಿಡ. ತಾವು ದೇಹದಿಂದ ಕೌರವನ ಕಡೆ. ಅವನ ರಾಜ್ಯದಲ್ಲಿದ್ದು ಬಾಳಿದವರು.  ಅವನು ರಾಜ. ಆದರೆ ಧರ್ಮದ ರೀತಿಯಿಂದ ಪಾಂಡವರ ಪಕ್ಷಪಾತಿಗಳು. ಅವರಿಗೇ ಬೆಂಬಲ ಕೊಡುವುದು ಧರ್ಮ. ತಮ್ಮ ಕಡೆಗಾಲ ಸಮೀಪಿಸಿದಂತೆ ಕಾಣುತ್ತದೆ ಎಂದು ತೀರ್ಮಾನಿಸಿದರು. ಅವರು ಹೀಗೆ ಹೇಳಿದರು – “ವತ್ಸ ಧರ್ಮರಾಜ, ಕೃಷ್ಣನ ರಾಯಭಾರವನ್ನು ತಿರಸ್ಕರಿಸಿದಾಗಲೇ ದುರ್ಯೋಧನ ಹಾಳಾದ. ನಿಮಗೆ ಜಯವಾಯಿತು. ನನ್ನ ಮುಂದೆ ಶಿಖಂಡಿಯನ್ನು ತಂದು ನಿಲ್ಲಿಸಿದರೆ ಬಿಲ್ಲು ಬಾಣಗಳನ್ನು ಕೆಳಗೆ ಹಾಕಿ ಬಿಡುವೆನು; ಯುದ್ಧವನ್ನು ನಿಲ್ಲಿಸಿಬಿಡುವೆನು.”

ಭೀಷ್ಮರು ಬಲ್ಲರು ಶಿಖಂಡಿಯ ಜನ್ಮಾಂತರವನ್ನು. ಭೀಷ್ಮನಿಂದ ತಿರಸ್ಕಾರ ಹೊಂದಿದ ಅಂಬೆಯೇ ಈ ಜನ್ಮದಲ್ಲಿ ಶಿಖಂಡಿ. ಪರಮೇಶ್ವರನನ್ನು ಕುರಿತು ತಪಸ್ಸುಮಾಡಿ ವರ ಪಡೆದಳು. ಭೀಷ್ಮರನ್ನು ಸಂಹಾರ ಮಾಡುವ ಸಲುವಾಗಿ ಶಿಖಂಡಿಯಾಗಿ ಹುಟ್ಟಿದಳು. ಗಂಡಸಲ್ಲದವನೊಡನೆ ಯುದ್ಧ ಮಾಡುವುದಿಲ್ಲ ಎಂದು ಭೀಷ್ಮರ ನಿಶ್ಚಯ.

ಹತ್ತನೆಯ ದಿನ ಸೂರ್ಯೋದಯವಾಯಿತು. ಯುದ್ಧ ಪ್ರಾರಂಭವಾಯಿತು. ಭೀಷ್ಮರು ಭಯಂಕರವಾಗಿ ಯುದ್ಧವನ್ನು  ಆರಂಭಿಸಿದರು. ಶ್ರೀಕೃಷ್ಣನು ಸಾರಥಿಯಾದ ಅರ್ಜುನ ಭೀಷ್ಮರನ್ನು ಎದುರಿಸಿ ಭೀಕರವಾಗಿ ಯುದ್ಧ ಮಾಡುತ್ತಿದ್ದಾನೆ. ಅಷ್ಟರೊಳಗೆ ಶಿಖಂಡಿ ಬಿಲ್ಲು ಬಾಣಗಳನ್ನು ಹಿಡಿದು ಅರ್ಜುನನ ರಥದ ಮುಂದೆ ಬಂದು ನಿಂತ. ಭೀಷ್ಮರು ಶಿಖಂಡಿಯನ್ನು ಕಂಡುದೇ ತಡ. ತಮ್ಮ ಬಿಲ್ಲು ಬಾಣಗಳನ್ನು ಭೂಮಿಯ ಮೇಲೆ ಎಸೆದುಬಿಟ್ಟರು. ಆಗಲೆ ಲೆಕ್ಕವಿಲ್ಲದಷ್ಟು ಅರ್ಜುನನ ಬಾಣಗಳು ಭೀಷ್ಮರ ಮೇಲೆ ಬಿದ್ದು ಅವರನ್ನು ನಿತ್ರಾಣವಾಗಿ ಮಾಡಿದ್ದವು. ಅವರು ಕುಸಿದು ಬಿದ್ದರು.

ಭೂಮಿಯ ಮೇಲೆ ಬಿದ್ದ ಅರ್ಜುನನ ಬಾಣಗಳೇ ಭೀಷ್ಮರಿಗೆ ಬಾಣದ ಹಾಸಿಗೆ. ಅವರ ಅದರ ಮೇಲೆ ಮಲಗಿದರು.

ಭೀಷ್ಮರು ಬಾಣಗಳ ಹಾಸಿಗೆಯಲ್ಲಿ ಮಲಗಿದರು.

ಭೀಷ್ಮರು ತಮ್ಮ ಪಾದಗಳ ಬಳಿ ನಿಂತಿದ್ದ ಅರ್ಜುನನ್ನು ನೋಡಿ ಕೇಳಿದರು – “ವತ್ಸ, ತಲೆದಿಂಬು ಬೇಕಲ್ಲ! ಅದನ್ನೂ ಬಾಣಗಳಿಂದಲೇ ಮಾಡಿಕೊಡು.”

ಅರ್ಜುನ ಭೀಷ್ಮರ ತಲೆ ಎತ್ತಿದ. ಮೊಣಕಾಲೂರಿ ಬಿಲ್ಲಿಗೆ ಬಾಣಗಳನ್ನು ಹೂಡಿ ತಲೆದಿಂಬು ಮಾಡಿದ. ಅವರು ಅದರ ಮೇಲೆ ತಲೆಯಿಟ್ಟು ಮಲಗಿದರು.

ಅಷ್ಟರೊಳಗೆ ದುರ್ಯೋಧನ, ಕರ್ಣ ದ್ರೋಣ, ಕೃಪ ಮೊದಲಾದವರು ಬಂದಿದ್ದರು. ಧರ್ಮರಾಜ, ಕೃಷ್ಣ ಭೀಮ ಮೊದಲಾದವರೂ ಬಂದಿದ್ದರು.

ಭೀಷ್ಮರಿಗೆ ಬಾಯಾರಿಕೆ ಆಯಿತು “ನೀರು” ಎಂದು ಕೇಳಿದರು. ದುರ್ಯೋಧನ ತನ್ನ ಕಡೆಯವರಿಗೆ ನೀರು ತರಲು ಅಪ್ಪಣೆ ಮಾಡಿದ. ಭೀಷ್ಮರು ನೋವಿನಲ್ಲೂ ನಕ್ಕರು. ದುರ್ಯೋಧನನನ್ನು ಕುರಿತು ಹೇಳಿದರು –

“ವತ್ಸ ನನಗೆ ಬೇಕಾಗಿರುವುದು ನೀನು ತರಿಸುವ ನೀರಲ್ಲ. ನನಗೆ ಬೇಕಾಗಿರುವುದು ಬೇರೆ ನೀರು.”

ಭೀಷ್ಮರು ಈಗ ಅರ್ಜುನನ ಕಡೆ ತಿರುಗಿದರು. ಅರ್ಜುನ ಭೀಷ್ಮರ ಅಪೇಕ್ಷೆಯನ್ನು ಅರ್ಥ ಮಾಡಿಕೊಂಡ. ಬಿಲ್ಲಿಗೆ ಬಾಣ ಹೂಡಿ ನೆಲಕ್ಕೆ ಹೊಡೆದ. ನೆಲದಿಂದ ಪವಿತ್ರವಾದ ನೀರು ಚಿಮ್ಮಿಬಂದಿತು. ಭೀಷ್ಮರು ಗಂಗಾ ಜಲವನ್ನು ಕುಡಿದು ತೃಪ್ತಿ ಹೊಂದಿದರು.

ಭೀಷ್ಮರು ದುರ್ಯೋಧನನಿಗೆ ಕಡೆಯ ಬುದ್ಧಿವಾದ ಹೇಳಿದರು. “ಮಗನೆ ದುರ್ಯೋಧನ, ಹಟವನ್ನು ಬಿಡು. ಹಗೆತನ ಬೇಡ, ಧರ್ಮರಾಜನ ಕೂಡ ಸಂಧಿ ಮಾಡಿಕೊ. ಸಹೋದರರು ದಾಯಾದಿತನ ಬಿಟ್ಟು ಸುಖವಾಗಿ ಬಾಳಿ.”

ಕಡೆಯ ಮಾತು: ಧರ್ಮವನ್ನು ರಕ್ಷಿಸು

ಭೀಷ್ಮರು ಉತ್ತರಾಯಣ ಎಂಬ ಪವಿತ್ರ ಕಾಲ ಬರುವುದನ್ನೆ ಎದುರು ನೋಡುತ್ತಿದ್ದರು. ವೈಕುಂಠದ ಬಾಗಿಲು ಉತ್ತರಾಯಣ ಪುಣ್ಯಕಾಲದ ದಿನ ತೆಗೆಯುವುದು, ಶ್ರೀಮನ್ನಾರಾಯಣನ ಪುಣ್ಯದರ್ಶನ ಅಂದು ಲಭಿಸುವುದು ಎಂದು ನಂಬಿ ಕಾದರು.

ಈ ಮಧ್ಯೆ ಭೀಷ್ಮರ ಮಾತು ಕೇಳದೆ ದುರ್ಯೋಧನ ಯುದ್ಧವನ್ನು ಮುಂದುವರಿಸಿದ. ದ್ರೋಣ, ದುಶ್ಯಾಸನ, ಕರ್ಣ ಮೊದಲಾದ ತನ್ನ ಆಪ್ತರನ್ನೆಲ್ಲ ಕಳೆದುಕೊಂಡ. ಕಡೆಗೆ ಅವನೂ ಭೀಮನ ಗದೆಗೆ ತುತ್ತಾದ. ತೊಡೆ ಮುರಿದುಕೊಂಡು ಸತ್ತ.

ಧರ್ಮರಾಜನಿಗೆ ಪಟ್ಟಾಭಿಷೇಕ ಆಯಿತು. ಧರ್ಮರಾಜ ಶ್ರೀಕೃಷ್ಣನ ಸಹಿತ ಭೀಷ್ಮರ ದರ್ಶನಕ್ಕೆ ಬಂದ. ಭೀಮ, ಅರ್ಜುನ, ನಕುಲ, ಸಹದೇವ, ದ್ರೌಪದಿ ಬಂದಿದ್ದರು. ಎಲ್ಲರೂ ಭೀಷ್ಮರ ಪಾದಗಳನ್ನು ಮುಟ್ಟಿ ಕಣ್ಣಿಗೊತ್ತಿಕೊಂಡರು. ಭೀಷ್ಮರು ಅವರುಗಳನ್ನು ಆಶೀರ್ವದಿಸಿದರು. ಧರ್ಮರಾಜನಿಗೆ ಕಡೆಯ ಉಪದೇಶ ಕೊಟ್ಟರು: “ವತ್ಸ ಧರ್ಮರಾಜ, ಧರ್ಮವನ್ನು ರಕ್ಷಿಸು. ದುಷ್ಟರನ್ನು ಶಿಕ್ಷಿಸು. ಸತ್ಯವನ್ನು ಬಿಡಬೇಡ. ಸ್ವಧರ್ಮವನ್ನು ಕಾಪಾಡಿಕೋ. ‘ನಾನು’ ಎಂಬ ಅಹಂಕಾರವನ್ನು ಬಿಡು. ಪ್ರಜೆಗಳಿಗಾಗಿ ರಾಜ್ಯಭಾರ ಮಾಡು. ಎಲ್ಲರಿಗೂ ಮಂಗಳವಾಗಲಿ.”

ಭೀಷ್ಮರು ಶ್ರೀಕೃಷ್ಣನನ್ನು ಕಣ್ಣುತುಂಬ ನೋಡಿದರು. ಆನಂದದಿಂದ, “ಎಲ್ಲಿ ಕೃಷ್ಣನೋ ಅಲ್ಲಿ ಧರ್ಮ. ಎಲ್ಲಿ ಧರ್ಮವೋ ಅಲ್ಲಿ ಜಯ. ಸ್ವಾಮಿ, ನಿನಗೆ ನಮಸ್ಕಾರ. ಸರ್ವಲೋಕಗಳ ಸ್ವಾಮಿ ನೀನು. ಈ ಭೂಮಿಯ ಜೀವನ ನನಗೆ ಸಾಕಾಯಿತು. ಧರ್ಮಕ್ಕೆ ಜಯವಾಯಿತು. ನನಗೆ ಅದೇ ಸಂತೋಷ. ಹೋಗುತ್ತೇನೆ” ಎಂದರು.

ಭೀಷ್ಮರು ನಿರೀಕ್ಷಿಸುತ್ತಿದ್ದ ಉತ್ತರಾಯಣಕಾಲ ಬಂತು. ಭೀಷ್ಮರ ಪ್ರಾಣ ಅವರ ದೇಹವನ್ನು ಬಿಟ್ಟು ಶ್ರೀಮನ್ನಾರಾಯಣನ ಪಾದಗಳಲ್ಲಿ ಹೋಗಿ ಸೇರಿಕೊಂಡಿತು.

ವ್ಯಾಸಮಹರ್ಷಿಗಳು ಸಂಸ್ಕೃತದಲ್ಲಿ ಮಹಾಭಾರತವನ್ನು ಬರೆದಿದ್ದಾರೆ. ಅದ್ಭುತ ವ್ಯಕ್ತಿತ್ವದ ಭೀಷ್ಮರ ಜೀವನದ ಕಥೆಯನ್ನು ಅಲ್ಲಿ ವಿವರವಾಗಿ ಹೇಳಿದ್ದಾರೆ.

ಭಾರತವನ್ನು ಓದಿ ಭಾರತೀಯರು, ಲೋಕದ ಜನ ಉದ್ಧಾರವಾಗೋಣ. ಭೀಷ್ಮರಂತೆ ದಿವ್ಯ ಜೀವನ ಬಾಳೋಣ.

* * *