ಭೂಮಿ ವಾಸಯೋಗ್ಯವಾಗಿರುವುದರಿಂದ ಇಲ್ಲಿ ಜೀವಿಗಳಿವೆಯೋ ಅಥವಾ ಇಲ್ಲಿ ಜೀವಿಗಳಿರುವುದರಿಂದ ಅದು ವಾಸಯೋಗ್ಯವಾಗಿದೆಯೋ?

ಭೂಮಿಯ ಮೇಲಿನ ಜೀವ (Life)ವನ್ನು ಕುರಿತ ಅನೇಕ ಪ್ರಶ್ನೆಗಳಿಗೆ, ಮಂಗಳ ಮತ್ತು ಶುಕ್ರ ಗ್ರಹಗಳಲ್ಲಿ ಇದ್ದಿರಬಹುದಾದ ಜೀವಕ್ಕಾಗಿ ನಡೆಸಿದ ಹುಡುಕಾಟ ಉತ್ತರ ನೀಡಿದೆ. ಯಾವುದೇ ಗ್ರಹದಲ್ಲಿ ಜೀವಿಗಳ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ಅಲ್ಲಿನ ವಾತವರಣದಲ್ಲಿರುವ ಅನಿಲ ಘಟಕಗಳ ವಿಶ್ಲೇಷಣೆಯೇ ನಂಬಲರ್ಹವಾದ ಆಧಾರ. ಏಕೆಂದರೆ, ಯಾವುದೇ ಜೀವಿ ತಾನು ಬದುಕುಳಿಯಲು ಅಲ್ಲಿನ ವಾತವರಣವನ್ನು ಬಳಸಿಕೊಳ್ಳಲೇಬೇಕು. ಹೀಗೆ ಬಳಸಿಕೊಂಡಾಗ ಅದು ಅಲ್ಲಿನ ವಾತಾವರಾಣವನ್ನು ಗಮನಾರ್ಹವಾಗಿ ಬದಲಿಸುತ್ತದೆ. ಅಂದರೆ, ಒಂದು ಜೀವಂತ ಗ್ರ್ರಹದ ವಾತಾವರಣಕ್ಕೂ ನಿರ್ಜೀವ ಗ್ರಹದ ವಾತಾವರಣಕ್ಕೂ ಅಗಾಧ ವ್ಯತ್ಯಾಸವಿರುತ್ತದೆ.

ಅಸಾಧಾರಣ ವಾತಾವರಣ

ಹೋಲಿಕೆಯಲ್ಲಿ ಭೂಮಿ ಅಸಾಧಾರಣ ವಾತಾವರಣವನ್ನು ಹೊಂದಿದೆ. ಮಂಗಳ ಗ್ರಹದಲ್ಲಿ ಶೇ. ೯೫ ರಷ್ಟು ಕಾರ್ಬನ್ ಡೈಆಕ್ಸೈಡ್ ಇದೆ. ಶುಕ್ರ ಗ್ರ್ರಹದಲ್ಲಿ ಶೇ. ೯೬.೫ ರಷ್ಟಿದೆ. ಆದರೆ ಭೂಮಿಯ ಮೇಲೆ ಇದರ ಪ್ರಮಾಣ ಕೇವಲ ಶೇ.೦.೦೩. ಇದೇ ತರದ ತೀವ್ರ ವ್ಯತ್ಯಾಸ ಭೂಮಿಯ ವಾತಾವರಣದಲ್ಲಿರುವ ಸಾರಜನಕ ಮತ್ತು ಆಮ್ಲಜನಕದ ಪ್ರಮಾಣದಲ್ಲಿ ಇದೆ.

ಮಂಗಳನಲ್ಲಿ ಶೇ. ೨.೭,  ಶುಕ್ರನಲ್ಲಿ ಶೇ. ೩.೫ ರಷ್ಟು ಸಾರಜನಕವಿದೆ. ಅದೇ ಭೂಮಿಯಲ್ಲಿ ಶೇ. ೭೯ ರಷ್ಟು ಇದೆ. ಮಂಗಳನಲ್ಲಿ ಸೇ. ೦.೧೩ರಷ್ಟು ಆಮ್ಲಜನಕ ಇದ್ದರೆ ಶುಕ್ರನಲ್ಲಿ ಅದು ತುಸುವೇ ಇದೆಯಷ್ಟೆ. ಭೂಮಿಯಲ್ಲಿ ಆಮ್ಲಜನಕದ ಪ್ರಮಾಣ ಶೇ. ೨೧ರಷ್ಟಿದೆ. ಅಷ್ಟೇ ಆಶ್ಚರ್ಯಕರವಾದದ್ದು, ಭೂಮಿಯಲ್ಲಿ ತುಸುವೇ ಮಿಥೇನ್ ಇದೆ.  ಉಳಿದೆರಡರಲ್ಲಿ ಇಲ್ಲವೇ ಇಲ್ಲ.

ಮಿಥೇನ್ ಸೂರ್ಯ ರಶ್ಮಿಯಲ್ಲಿ ಆಮ್ಲಜನಕದೊಡನೆ ವರ್ತಿಸಿ ಕಾರ್ಬನ್ ಡೈಆಕ್ಸೈಡ್ ಮತ್ತು ನೀರಿನ ಬಾಷ್ಪವನ್ನು ಉತ್ಪಾದಿಸುತ್ತದೆ. ಈ ಕ್ರಿಯೆ ನಿರಂತರವಾಗಿ ನಡೆಯಲು ಪ್ರತಿವರ್ಷ ಸುಮಾರು ೫೦೦ ದಶಲಕ್ಷ ಟನ್ ಮಿಥೇನ್ ಮತ್ತು ಆಮ್ಲಜನಕ ವಾತಾವರಣಕ್ಕೆ ಮರುಪೂರೈಕೆಯಾಗಬೇಕು. ಇಲ್ಲವಾದರೆ ಅಲ್ಪಕಾಲದಲ್ಲಿಯೇ ವಾತಾವರಣದಲ್ಲಿ ಮಿಥೇನ್ ಮತ್ತು ಆಮ್ಲಜನಕ ಖಾಲಿಯಾಗಿ ಕಾರ್ಬನ್ ಡೈಆಕ್ಸೈಡ್‌ನ ಪ್ರಮಾಣ ಅಧಿಕವಾಗಿ ಬಿಡುತ್ತದೆ. ಈ ಸ್ಥಿತಿ ಭೂ ಗ್ರ್ರಹವನ್ನು ಮಂಗಳ ಮತ್ತು ಶುಕ್ರ ಗ್ರ್ರಹದಂತೆ ನಿರ್ಜೀವಗೊಳಿಸುತ್ತಿತ್ತು.

ಭೂಮಿಯಲ್ಲಿ ಮಿಥೇನ್ ಮತ್ತು ಆಮ್ಲಜನಕ ಎರಡನ್ನೂ ಮರುಪೂರೈಕೆ ಮಾಡುವ ವ್ಯವಸ್ಥೆ ಇದೆ.  ಇವೆರಡೂ ಕ್ರಮವಾಗಿ ಜೀವಿಗಳ ಉಪಾವಚಯ ಮತ್ತು ದ್ಯುತಿಸಂಶ್ಲೇಷಣ ಕ್ರಿಯೆಯ ಉತ್ಪನ್ನಗಳಾಗಿವೆ.

ಭೂಮಿಯ ಮೇಲೆ ಜೀವ ಉಳಿಯಲು ಕೇವಲ ಸರಿಯಾದ ರಾಸಾಯನಿಕಗಳ ಮಿಶ್ರಣವಿದ್ದರಷ್ಟೆ ಸಾಲದು. ಸರಿಯಾದ ತಾಪಮಾನ ಕೂಡ ಇರಬೇಕು.

ನಿರ್ಜೀವ ಶುಕ್ರ ಮತ್ತು ಮಂಗಳ ಗ್ರ್ರಹಗಳ ಮೇಲ್ಮೈ ತಾಪಮಾನ ಕ್ರಮವಾಗಿ ೪೫೯ ಡಿಗ್ರಿ ಸೆಲ್ಸಿಯಸ್ ಮತ್ತು – ೫೩ ಡಿಗ್ರಿ ಸೆಲ್ಸಿಯಸ್ ಇದೆ. ಭೂಮಿ ನಿರ್ಜೀವವಾಗಿದಿದ್ದರೆ ಅದರ ಮೇಲೆ ತಾಪಮಾನ ೨೪೦ ಮತ್ತು ೩೪೦ ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತಿತ್ತು. ಈ ತಾಪಮಾನ ನಮಗೆ ತಿಳಿದಿರುವಂತೆ ಯಾವ ಜೀವಿಯನ್ನೂ ಉಳಿಯಗೊಡುತ್ತಿರಲಿಲ್ಲ. ಜೀವಿಗಳಿರುವ ನಮ್ಮ ಸಮಕಾಲೀನ ಭೂಮಿಯ ತಾಪಮಾನ ಸರಾಸರಿ ೧೩ ಡಿಗ್ರಿ ಸೆಲ್ಸಿಯಸ್ ಇದೆ. ಅಂದರೆ, ಭೂತಾಪ ನಿಯಂತ್ರಣದಲ್ಲಿ ಜೀವಿಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತಿರಬೇಕು.

ಸುಮಾರು ೩೮೦೦ ದಶಲಕ್ಷ ವರ್ಷಗಳ ಹಿಂದೆ, ಭೂಮಿಯ ಮೇಲೆ ಜೀವ ಉಗಮವಾದ ಹೊತ್ತಲ್ಲಿ, ಸೂರ್ಯ ಈಗಿರುವುದಕ್ಕಿಂತ ಶೇ. ೨೫ ರಷ್ಟು ತಣ್ಣಗಿದ್ದ. ಆಗಲೂ ಭೂಮಿಯ ಮೇಲ್ಮೈ ತಾಪಮಾನ ಸುಮಾರು ೨೩ ಡಿಗ್ರಿ ಸೆಲ್ಸಿಯಸ್ ಇದ್ದಿರಬೇಕೆಂದು ಅಂದಾಜುಗಳು ಸೂಚಿಸುತ್ತವೆ. ಇದು ಈಗಿರುವದಕ್ಕಿಂತ ಅಷ್ಟೇನು ಭಿನ್ನವಿಲ್ಲ. ಇದು ಸಾಧ್ಯವಾದದ್ದು ಹೇಗೆ?

ಕಾರ್ಬನ್ ಡೈಆಕ್ಸೈಡ್ ಒಂದು ಪರಿಣಾಮಕಾರಿ ‘ಹಸಿರು ಮನೆ’ ಅನಿಲ. ಇದು ಸೂರ್ಯ ಪ್ರಕಾಶವನ್ನು ಇಡಿಯಾಗಿ ಒಳಬಿಡುತ್ತದೆ. ಕಡಿಮೆ ಶಕ್ತಿಯ ಶಾಖವಿಕಿರಣವನ್ನು ಹಿಡಿದಿಟ್ಟುಕೊಂಡು ಉಳಿದವನ್ನು ವಾತವರಣಕ್ಕೆ ಹಿಂದಿರುಗಿಸುತ್ತದೆ. ಹೀಗೆ ಹಿಡಿದಿಟ್ಟುಕೊಂಡ ಶಾಖವೇ ಭೂಮಿಯ ತಾಪಮಾನವನ್ನು ನಿರ್ಧರಿಸುತ್ತದೆ. ಸೂರ್ಯ ಶೇ. ೨೫ ರಷ್ಟು ತಣ್ಣಗಿದ್ದಾಗಲು ಭೂತಾಪ ಸುಮಾರು ೨೩ ಡಿಗ್ರಿ ಸೆಲ್ಸಿಯಸ್ ಇತ್ತು ಎಂದರೆ ಆಗ ಭೂ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್‌ನ ಪ್ರಮಾಣ ಈಗಿರುವುದಕ್ಕಿಂತ ಸುಮಾರು ೧೦೦೦ ಪಟ್ಟು ಹೆಚ್ಚಾಗಿದ್ದಿರಬೇಕು.

ಮುಂದೆ ಸೂರ್ಯನ ಬಿಸಿ ಹೆಚ್ಚಿದಂತೆ, ಜೀವಿಗಳಿಗೆ ಸಮ್ಮತವಾದ ಉಷ್ಣತೆಯನ್ನು ಕಾಯ್ದುಕೊಳ್ಳಲು, ಆಗಿದ್ದ ಕಾರ್ಬನ್ ಡೈಆಕ್ಸೈಡ್‌ನ ಪ್ರಮಾಣ ಮತ್ತು ಅದರ ಹೊದಿಕೆಯ ದಪ್ಪ ಕಡಿಮೆಯಾಗುವುದೊಂದೇ ದಾರಿಯಾಗಿತ್ತು. ಇಲ್ಲವಾದರೆ ಅಷ್ಟು ದಪ್ಪದ ಹಸಿರುಮನೆ ಅನಿಲ ಹೊದಿಕೆಯು ಹಿಡಿದಿಟ್ಟುಕೊಂಡ ಶಾಖವು ಭೂಮಿಯನ್ನು ಕೆಂಡದುಂಡೆ ಮಾಡಿಬಿಡುತ್ತಿತ್ತು.

ಆದರೆ ಹಾಗಾಗಲಿಲ್ಲ! ಸೂರ್ಯನ ಬಿಸಿಗೆ ಅನುಗುಣವಾಗಿ ಹೊದಿಕೆ ತೆಳುವಾಗುತ್ತ್ತಾ ಹೋಯಿತು. ಈ ಕೆಲಸವನ್ನು ಮಾಡಿದ್ದು ಕೆಲವೊಂದು ಭೂ ಜೀವಿಗಳು. ಅವುಗಳು ಹೊದಿಕೆಯಿಂದ ಕಾರ್ಬನ್ ಡೈಆಕ್ಸೈಡನ್ನು ಪಡೆದು, ಅದನ್ನು ಸುಣ್ಣದಕಲ್ಲಿನ ರೂಪಕ್ಕೆ ಪರಿವರ್ತಿಸಿ, ಸಾಗರಗಳಲ್ಲಿ ಗುಡ್ಡೆ ಹಾಕಿದವು. ಈ ಪ್ರಕ್ರಿಯೆ ಆಗ ಅಸ್ತಿತ್ವದಲ್ಲಿದ್ದ ಭೂಜೀವಿಗಳ ಜೀವರಸಾಯನಿಕ ಜಗತ್ತಿನಲ್ಲಿ ನಡೆದ ಅಸಾಧಾರಣ ಕ್ರಾಂತಿಯ ಒಂದು ಭಾಗವಾಗಿತ್ತು.

ಕಾರ್ಬನ್ ಡೈಆಕ್ಸೈಡ್‌ನ ಬಳಕೆ ಕೇವಲ ಒಮ್ಮುಖ ಕ್ರಿಯೆಯಾಗಿದಿದ್ದರೆ ಈ ಗ್ರ್ರಹವನ್ನು ಬೆಚ್ಚಗಿಡಲು ಅವಶ್ಯಕವಾಗಿದ್ದ ಹೊದಿಕೆ ಕೆಲವೇ ದಶಲಕ್ಷ ವರ್ಷಗಳಲ್ಲಿ ಸಂಪೂರ್ಣವಾಗಿ ಕರಗಿಹೋಗುತ್ತಿತ್ತು. ಆಗ ಭೂಮಿ ವಾಸಯೋಗ್ಯವಲ್ಲದ ಕಡುಶೀತಲ ಕೂಪವಾಗುತ್ತಿತ್ತು. ಈ ಆಪತ್ತಿನಿಂದ ಭೂಮಿಯನ್ನು ರಕ್ಷಿಸಿದ್ದು ಜೀವ ಜಗತ್ತು.

ಜೀವಿಗಳ ಉಳಿವಿಗೆ ರಾಜಿ ಸೂತ

ಜೀವಿಗಳ ಉಳಿವಿಗೆ ಅಗತ್ಯವಾಗಿದ್ದ ಆಮ್ಲಜನಕ ಮತ್ತು ಕಾರ್ಬನ್ ಡೈಆಕ್ಸೈಡ್‌ನ ಸರಿ ಮಿಶ್ರಣ ವಾತಾವರಣದಲ್ಲಿ ಇರುವಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಜೀವಿಗಳು ಮಾಡಿಕೊಂಡಿದ್ದವು. ಈ ಎಲ್ಲದರ ಕೇಂದ್ರದಲ್ಲಿ ದ್ಯುತಿಸಂಶ್ಲೇಷಣ ಕ್ರಿಯೆ ಇತ್ತು. ಅದು ಕಾರ್ಬನ್ ಡೈಆಕ್ಸೈಡನ್ನು ಉಪಯೋಗಿಸಿಕೊಂಡು ಆಮ್ಲಜನಕವನ್ನು ಉತ್ಪಾದಿಸುತ್ತಿತ್ತು. ನೀಲಿ ಹಸಿರು ಪಾಚಿಯಂಥ ಸಯನೊ ಬ್ಯಾಕ್ಟೀರಯಾಗಳು ದ್ಯುತಿಸಂಶ್ಲೇಷಣ ಕ್ರಿಯೆ ನಡೆಸುವುದನ್ನು ಕಂಡುಕೊಂಡಿದ್ದಂತೆ ಇತರೆ ಬ್ಯಾಕ್ಟೀರಿಯಾಗಳು ದ್ಯುತಿಸಂಶ್ಲೇಷಕಗಳ ತಾಜ್ಯವಸ್ತುಗಳು ಮತ್ತು ಸತ್ತ ದೇಹಗಳನ್ನು ತಿಂದು ವಿಘಟಿಸುವ ವಿಧಾನಗಳನ್ನು ಕಂಡುಕೊಂಡಿದ್ದವು. ಮುಕ್ತ ಆಮ್ಲಜನಕವಿಲ್ಲದ ಪ್ರಪಂಚದಲ್ಲಿ ಈ ವಿಘಟಕಗಳು ಮಿಥೇನ್ ಮತ್ತು ಕಾರ್ಬನ್ ಡೈಆಕ್ಸೈಡನ್ನು ಉತ್ಪಾದಿಸುತ್ತಿದ್ದವು. ಹೀಗಾಗಿ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲಜನಕದ ಬಳಕೆ ಮತ್ತು ಮರುಪೂರೈಕೆ ಸದಾ ನಡೆಯುತ್ತಿರುತ್ತದೆ. ಮತ್ತು ಇದು ಯಾವ ದರದಲ್ಲಿ ಆಗುತ್ತಿದೆ ಎಂದರೆ ಯಾವ ಕಾಲಕ್ಕೂ ಎರಡರ ಮಿಶ್ರಣ ಜೀವಿಗಳಿಗೆ ಪೂರಕವಾಗಿರುವಂತೆ ಇರುತ್ತದೆ. ಎರಡರ ನಡುವೆ ಒಂದು ರೀತಿಯ ಕ್ರಿಯಾಶೀಲ ಸಮತೋಲ ಸದಾ ಇರುತ್ತದೆ. ಹೀಗಾಗಿಯೆ ಕಳೆದ ೭೦೦ ದಶಲಕ್ಷ ವರ್ಷಗಳಿಂದ ಆಮ್ಲಜನಕದ ಮಟ್ಟ ವಾತಾವರಣದಲ್ಲಿ ಶೇ. ೨೧ ರಲ್ಲಿ ಸ್ಥಿರವಾಗಿದೆ. ಇದು ಸ್ವಲ್ಪ ಹೆಚ್ಚಾಗಿದ್ದರೂ, ಉದಾ: ಶೇ. ೨೫ರಷ್ಟಿದ್ದಿದ್ದರೂ, ಸತತ ಅಗ್ನಿ ಕೆರೆಳಿಕೆಯುಂಟಾಗಿ, ತೇವಾಂಶದಿಂದ ಕೂಡಿದ ಉಷ್ಣವಲಯದ ಕಾಡುಗಳು ದಹಿಸಿಹೋಗುತ್ತಿದ್ದವು. ತೃಪ್ತಿಕರವಾದ ರಾಜಿ ಸೂತ್ರವನ್ನಿಲ್ಲಿ ಕಾಣಬಹುದು.

ಸಮುದ್ರ ಆಲ್ಗೀಗಳು ಸಮುದ್ರದಲ್ಲಿ ಸಮೃದ್ಧವಾಗಿರುವ ಗಂಧಕವನ್ನು ಹೀರಿಕೊಂಡು ಒಂದು ವಿಶಿಷ್ಟ ಪದಾರ್ಥವನ್ನು (ಡೈಮಿಥೈಲ್ ಸಲ್ಪೋನಿಯ ಪೋಷಿಯೋನೆಟ್) ತಯಾರಿಸುತವೆ. ಈ ಪದಾರ್ಥ ಆವಿಶೀಲವಲ್ಲದ ಒಂದು ತಟಸ್ಥ ದ್ರವ. ಆಲ್ಗೀಗಳ ಕೋಶದೊಳಗಿರುವ ಈ ಪದಾರ್ಥ ಅವುಗಳ ಒಡಲೊಳಗಿನ ಅಭಿಸರಣ ಒತ್ತಡದ ನಿಯಂತ್ರಣಕ್ಕೆ ಮತ್ತು ಅವು ಒಣಗದಂತೆ ಬಾಳಲು ತೀರ ಅಗತ್ಯ. ಆಲ್ಗೀ ಸತ್ತ ನಂತರ ಈ ದ್ರವ್ಯ ಡೈಮಿಥೈಲ್ ಸಲ್ಪೇಡ್ ಆಗಿ ವಿಭಜನೆಗೊಳ್ಳುತ್ತದೆ. ಡೈಮಿಥೈಲ್ ಸಲ್ಫೇಡ್ ತುಂಬ ಆವಿಶೀಲವಾದದ್ದು. ಉತ್ಪತ್ತಿಯಾದ ಕೆಲವೇ ಕ್ಷಣಗಳಲ್ಲಿ ಅನಿಲ ರೂಪವನ್ನು ಧರಿಸಿ ವಾತವರಣವನ್ನು ಸೇರಿಬಿಡುತ್ತದೆ. ತೀರದ ಮೇಲಿನ ಮಂದಮಾರುತ ಇದನ್ನು ಹೊತ್ತು ದಡಕ್ಕೆ ತರುತ್ತದೆ. ಈ ಮಧ್ಯೆ, ಅನಿಲವು ಪ್ರಯಾಣಿಸಿದಂತೆ ಆಮ್ಲಜನಕದೊಡನೆ ಸಂಯೋಗಗೊಂಡು ಗಂಧಕದ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಗಂಧಕದ ಆಕ್ಸೈಡ್ ಮಳೆಯ ಮೂಲಕ ನೆಲವನ್ನು ಸೇರುತ್ತದೆ.

ಈ ಪ್ರಕ್ರಿಯೆಯು ಬಹು ಮುಖ್ಯವಾಗಿ ಗೈಯನ್ ಚಟುವಟಿಕೆ. ಭೂಮಿಯ ಮೇಲಿನ ಗಂಧಕ ನೆಲಜೀವಿಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಇದಕ್ಕೆ ಬದಲಾಗಿ ಭೂ ಜೀವಿಗಳು ಸಮುದ್ರಕ್ಕೆ ಹರಿಯುವ ಪೋಷಾಕಾಂಶಗಳ ವರ್ಧನೆ ಮಾಡುತ್ತದೆ. ಹೀಗೆ ಗಂಧಕ ವಿನಿಮಯದಲ್ಲಿ ಭೂಜೀವಿಗಳು ಮತ್ತು ಸಮುದ್ರ ಜೀವಿಗಳ ನಡುವೆ ಅನುಕೂಲಕರ ಹೊಂದಾಣಿಕೆ ಇದೆ.

ನಮ್ಮ ಅಂಗಾಂಶಗಳಲ್ಲಿರುವ ದ್ರಾವಣಕ್ಕೆ ಹೋಲಿಸಿದರೆ ಈಗಿನ ಸಮುದ್ರದ ನೀರು ಸುಮಾರು ನಾಲ್ಕು ಪಟ್ಟು ಹೆಚ್ಚು ಲವಣಾಂಶವನ್ನು ಹೊಂದಿದೆ. ಅಲ್ಲದೆ, ಈ ಲವಣಾಂಶ ಮಟ್ಟವು ಬಹಳಷ್ಟು ಸಹಜ ಜೀವಕೋಶಗಳು ಉಳಿಯಲು ಸಾಧ್ಯವಿರುವ ಮಿತಿಗೆ ಹತ್ತಿರವಾಗಿದೆ. ಏಕೆ ಸಮುದ್ರವು ಈಗಿರುವುದಕ್ಕಿಂತ ಅನೇಕ ಪಟ್ಟು ಹೆಚ್ಚು ಉಪ್ಪಾಗಿಲ್ಲ?

ಅದಕ್ಕೆ ಕಾರಣ ಮ್ಯಾಟ್ ಸಮುದಾಯಕ್ಕೆ ಸೇರಿದ ಬಾಕ್ಟೀರಿಯಾಗಳು ಎಂದು ತಿಳಿದು ಬಂದಿದೆ. ಅವು ಹರಳು ರೂಪದ ಉಪ್ಪಿಗೆ ಒಂದು ರೀತಿಯ ವಾರ್ನಿಶ್‌ನ ಲೇಪನ ಮಾಡಿ ಅದು ಮಳೆ ಮತ್ತು ಉಬ್ಬರವಿಳಿತಗಳ ಒಡೆತಕ್ಕೆ ಸಿಕ್ಕಿ ಕರಗುವುದನ್ನು ತಡೆಯುತ್ತದೆ. ಸಮುದ್ರ ನೀರಿನ ಲವಣಾಂಶ ಮಟ್ಟವನ್ನು ಜೀವಿಗಳ ಬದುಕಿಗೆ ಮಾರಕವಲ್ಲದ ಮಿತಿಯೊಳಗೆ ಇಡುತ್ತದೆ.

ಇದೇ ರೀತಿಯ ಅನೇಕ ಗೈಯನ್ ಚಟುವಟಿಕೆಗಳನ್ನು ಭೂ ವಾತಾವರಣಗಳಲ್ಲಿ ಕಾಣಬಹುದು.

ಮೇಲಿನೆಲ್ಲಾ ಅಂಶಗಳನ್ನು ಗಮನಿಸಿದರೆ ಜೀವರಾಶಿಯು ನಿಸ್ಸಂಶಯವಾಗಿ ವಾತಾವರಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವಲ್ಲಿ ಅಸಾಧರಣ ಸಮಯ ಸಾಧಕತನವನ್ನು ತೋರಿಸಿವೆ ಎಂಬುದು ವೇದ್ಯವಾಗುತ್ತದೆ. ಜೀವವು ತನ್ನೆಲ್ಲಾ ಸಮಗ್ರತೆಯಲ್ಲಿ ವಾತಾವರಣವನ್ನು ಪರಿವರ್ತಿಸುವುದರ ಮೂಲಕ ಅದರ ಮೇಲೆ ಮಹತ್ತರ ಪ್ರಭಾವವನ್ನು ಬೀರಿದೆ. ಆದ್ದರಿಂದ ಈಗ ನಾವು ಕಾಣುತ್ತಿರುವ ಭೂ ಗ್ರ್ರಹದ ಮೇಲೆ ಆಗಿರುವ ಎಲ್ಲಾ ವಿಕಾಸ ಮತ್ತು ಅಭಿವೃದ್ದಿ ಜೀವರಾಶಿಯ ಫಲವಾಗಿದೆ. ಜೀವವಿಲ್ಲದಿದ್ದರೆ ಭೂ ಗ್ರ್ರಹ ಈಗಿರುವಂತೆ ಬಹುವರ್ಣೀಯವಾಗಿರುತ್ತಿರಲಿಲ್ಲ.

ಗೈಯಾ ಹೈಪಾಥಿಸಿಸ್

ಸತ್ತ ಗ್ರ್ರಹ ಜೀವಂತ ಗ್ರ್ರಹಕ್ಕಿಂತ ಭಿನ್ನವಾಗಿರುವ ಗಣನೆಗಳನ್ನು ಆಧರಿಸಿ ೧೯೭೨ ರಲ್ಲಿ ಜೇಮ್ಸ್ ಲವ್‌ಲಾಕ್ ‘ಗೈಯಾ-ಹೈಪಾಥಿಸಿಸ್’ ಅನ್ನು ಪ್ರತಿಪಾಧಿಸಿದರು. ಗೈಯಾ – ಪ್ರಾಚೀನ ಗ್ರೀಕರು ಭೂ ದೇವಿಗೆ ಕೊಟ್ಟ ಹೆಸರು. ತಾತ್ವಿಕವಾಗಿ ಈ ಹೈಪಾಥಿಸಿಸ್ ಹೇಳುವುದೇನೆಂದರೆ – ಭೂಮಿಯ ಮೇಲೆ ಜೀವ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಅಖಂಡ ೩೫೦೦ ದಶಲಕ್ಷ ವರ್ಷಗಳವರೆಗೆ ಭೂಮಿಯು ಜೀವಿಗಳು ಬದುಕಲು ಹಿತಕರವಾದ ಗ್ರ್ರಹವಾಗಿ ಉಳಿದಿದೆ. ಜೀವಿಗಳು ಈ ಗ್ರ್ರಹವನ್ನು ಜೀವರಾಶಿಗಳ ಬದುಕಿಗೆ ಲಾಯಕ್ಕಾದ ಸ್ಥಿತಿಯಲ್ಲಿ ಇಟ್ಟಿವೆ. ನಾವು ಅತ್ಯುತ್ತಮ ಎನ್ನಬಹುದಾದ ಗ್ರ್ರಹದಲ್ಲಿ ಜೀವಿಸುತ್ತಿದ್ದೇವೆ. ಗೈಯಾ ಹೈಪಾಥಿಸಿಸ್ ಜೀವ ಪ್ರಭೇಧಗಳನ್ನು ಅವುಗಳ ಭೌತಿಕ ಮತ್ತು ರಾಸಾಯನಿಕ ವಾತಾವರಣದೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವಂತೆ ನೋಡುತ್ತದೆ. ಈ ಬೆಸುಗೆ ಎಷ್ಟು ನಿಕಟವಾದದ್ದೆಂದರೆ ಅವೆಲ್ಲವು ಏಕತ್ರ ಭೇದಿಸಲಾಗದ ವಿಕಸನ ಪ್ರಕ್ರಿಯೆಯನ್ನು ಪ್ರತಿನಿಧಿಸುತ್ತವೆ.

ಪ್ರಸಿದ್ದ ಜೀವ ವಿeನಿ ಲಿನ್ನ್ ಮಾರ್ಗುಲೀಸ್ ಅವರ ಬೆಂಬಲದಿಂದಾಗಿ ಗೈಯಾ ಹೈಪಾಥಿಸಿಸ್ ಖಚಿತ ನೆಲೆಯನ್ನು ಪಡೆಯಿತು. ಆಕೆಯ ಪ್ರಧಾನ ಕೆಲಸ ಜೀವಿಗಳ ನಡುವಿನ ಸಹ ಜೀವನ ಮತ್ತು ಸಹಕಾರ ಯಾವಾಗಲೂ ತಮ್ಮ ಯಶಸ್ವಿ ಅಸ್ತಿತ್ವಕ್ಕೆ ಪೂರಕವಾಗಿತ್ತು ಮತ್ತು ವಿಕಸನಕ್ಕೆ ಚೋಧಕವಾಗಿತ್ತು ಎಂಬುದನ್ನು ತೋರಿಸಿದೆ.

ಜೀವರಾಶಿಯು ಸಮೃದ್ಧ ಮತ್ತು ಸಂಪದ್ಭ್ಬರಿತವಾಗಿರುವುದು ಕೇವಲ ಅದು ಅದೃಷ್ಟವಶಾತ್ ಸೂಕ್ತವಾದ ಗ್ರ್ರಹವನ್ನು ಕಂಡುಕೊಂಡಿದೆ ಎಂಬ ಕಾರಣಕ್ಕಾಗಿಯೆ ಅಲ್ಲಾ. ಬದಲಿಗೆ, ಜೀವಿಗಳಿಗೆ ಆಶ್ರಯ ನೀಡುವ ಸಾಮರ್ಥ್ಯವುಳ್ಳ ಗ್ರ್ರಹವನ್ನು ಸ್ಪಷ್ಟಿಸಲು ಜೀವರಾಶಿಯು ಭೂಮಿಯ ಸಂಪನ್ಮೂಲಗಳನ್ನು ಬಳಸಿಕೊಂಡಿದೆ ಎಂಬ ವಾದವು ಬಹಳಷ್ಟು ವಿeನಿಗಳಿಂದ ಕಟು ಟೀಕೆಗೆ ಒಳಗಾಗಿದೆ. ಗ್ರಹದ ಸ್ವನಿಯಂತ್ರಣಕ್ಕೆ ಜೀವಿಗಳು ಮುಂದಾಲೋಚನೆಯ ಸಾಮರ್ಥ್ಯವನ್ನು ಪ್ರದರ್ಶಿಸಬೇಕಾಗುತ್ತದೆ. ಇದು ಅಸಾಧ್ಯ ಎಂಬುದು ಅವರ ಟೀಕೆಗೆ ಕಾರಣ.

ಆದಾಗ್ಯೂ ಗೈಯಾ ಹೈಪಾಥಿಸಿಸ್ ಅರೆ ಬೆಂದ ಸಿದ್ಧಾಂತವಾಗಿ ಉಳಿಯುವ ಬದಲು ಉತ್ಕೃಷ್ಟವಾಗಿ ಪರೀಕ್ಷಿಸಬಹುದಾದದ್ದು ಎಂದು ಸಾಧಿವಾಗಿದೆ. ಯಾವುದೇ ದೂರಾಲೋಚನೆ ಅಥವಾ ಯೋಜನೆಗಳನ್ನು ರೂಪಿಸುವ ಸಾಮರ್ಥ್ಯವಿಲ್ಲದೆ ಸಜೀವಿಗಳು ಕೇವಲ ಮೇಲ್ಮೈ ಪ್ರತಿಫಲನ ಸಾಮರ್ಥ್ಯ ಮತ್ತು ಹಸಿರುಮನೆ ಅನಿಲ ಮಟ್ಟವನ್ನು ಬದಲಿಸುವ ಮೂಲಕ ಭೂ ಮೇಲ್ಮೈ ತಾಪವನ್ನು ನಿಯಂತ್ರಿಸಬಲ್ಲವು ಎಂಬುದನ್ನು ಜೇಮ್ಸ್ ಲವ್‌ಲಾಕ್ ಅನೇಕ ಮಾದರಿಗಳಿಂದ ಸ್ಥಾಪಿಸಿ ತೋರಿಸಿದ್ದಾರೆ.

ಗೈಯಾ ಹೈಪಾಥಿಸಿಸ್‌ನಲ್ಲಿ ಅಂತರ್ಗತವಾಗಿರುವ ಒಂದು ಭಾವನೆ ಇದೆ – ಸರಿ ಪ್ರಮಾಣದ ಅಗತ್ಯ ಪೋಷಕಾಂಶವನ್ನು ಇಡೀ ಜೀವ ವ್ಯವಸ್ಥೆ ಮೂಲಕ ಹರಿಸುವ ಕೆಲಸವನ್ನು ಸಜೀವಿಗಳ ಚಟುವಟಿಕೆ ನಿರ್ವಹಿಸುತ್ತಿದೆ. ಇಡೀ ಗೈಯಾ ವ್ಯವಸ್ಥೆ ಬಿಸಿ ರಕ್ತದ ಪ್ರಾಣಿಗಳ ಶರೀರ ರಚನೆಯೊಂದಿಗೆ ಅನೇಕ ಸಾಮ್ಯ ಲಕ್ಷಣಗಳನ್ನು ಹೊಂದಿದೆ. ವಾತವರಣವು ಇಡೀ ಜಗತ್ತಿನ ಶ್ವಾಸಕೋಶವಾಗಿ ವರ್ತಿಸುತ್ತದೆ. ಸಮುದ್ರಗಳು ಮತ್ತು ಸಾಗರಗಳನ್ನೊಳಗೊಂಡ ನೀರಿನ ವ್ಯವಸ್ಥೆ ಪರಿಚಲನ ವ್ಯವಸ್ಥೆಯಲ್ಲಿ ರಕ್ತದಂತೆ ಹರಿದಾಡುತ್ತದೆ. ಇಡೀ ವ್ಯವಸ್ಥೆಯ ಎಲ್ಲ ಸಜೀವಿ ಘಟಕಗಳು ಜೀವಕೋಶಗಳು ಮತ್ತು ಅಂಗಾಂಶಗಳಂತೆ ವರ್ತಿಸುತ್ತವೆ. ಈ ಎಲ್ಲವೂ ಅಪ್ರeಪೂರ್ವಕವಾಗಿ ಯಾವುದಾದರೊಂದು ಪಾತ್ರವನ್ನು ನಿಯಂತ್ರಣ ಪ್ರಕ್ರಿಯೆಯಲ್ಲಿ ವಹಿಸುತ್ತವೆ.

ಮನುಕುಲಕ್ಕೆ ಎಚ್ಚರಿಕೆ

ಇಷ್ಟಾಗಿ ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಜೀವಿಗಳು ಕಾಣಿಸಿಕೊಂಡ ನಂತರ ಅವು ಭೂಗ್ರಹವನ್ನು ಜೀವಂತವಾಗಿ ಮುಂದುವರೆಸಿಕೊಂಡು ಹೋಗಲು ಕಾರಣವಾಗಿವೆ ಎಂಬುದನ್ನು ಒಪ್ಪಿಕೊಳ್ಳಬಹುದಾದರೂ ಭೂಮಿಯ ಮೇಲೆ ಮೊದಲ ಜೀವಿ ಕಾಣಿಸಿಕೊಳ್ಳಲು ಅದಕ್ಕೆ ತಕ್ಕುದಾದ ವಾತವರಣ ಇಲ್ಲಿ ಇದ್ದಿರಲೇಬೇಕಲ್ಲವೇ? ಅಂದರೆ ಭೂಮಿಯ ಮೇಲೆ ಜೀವಿಗಳಿಗೆ ವಾಸ ಯೋಗ್ಯವಾದ ವಾತಾವರಣವಿದ್ದುದ್ದರಿಂದಲೇ ಇಲ್ಲಿ ಜೀವಿಗಳಿವೆ ಎಂದು ಹೇಳಬೇಕಾಗುತ್ತದೆ. ಈ ಬಗ್ಗೆ ಲವ್‌ಲಾಕ್ ಏನೂ ಹೇಳುವುದಿಲ್ಲ. ಆದರೂ ಇಂದಿನ ಭೂಮಿ ಜೀವಂತವಾಗಿರಲು ಇಲ್ಲಿನ ಜೀವವೇ ಕಾರಣ ಎಂಬುದರಲ್ಲಿ ಸಂಶಯವಿಲ್ಲ. ಈವತ್ತಿನ ನಮಗೆ ಇದೇ ಮುಖ್ಯ.

ಇಡೀ ಭೂಮಿಯನ್ನು, ಅದರೆಲ್ಲ ಜೀವರಾಶಿಗಳೊಂದಿಗೆ, ಒಂದು ಏಕಜೀವಿಯನ್ನಾಗಿ ಕಾಣುವ ಗೈಯಾ ತಾನೂ ಜೀವಂತವಾಗಿರಲು ಅಗತ್ಯವಾದ ಸ್ವನಿಯಂತ್ರಣ ಮತ್ತು ಸ್ವಪರಿಷ್ಕರಣ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರತಿಪಾದಿಸುವ ‘ಗೈಯಾ ಹೈಪಾಥಿಸಿಸ್’ ಮನುಕುಲಕ್ಕೆ ಒಂದು ಎಚ್ಚರಿಕೆ ಕೊಡುತ್ತದೆ. ಜೀವ ಪೂರಕವಾದ ಜೀವ ಮತ್ತು ಪರಿಸರದ ನಡುವಿನ ಸೂಕ್ಷ್ಮ ಅಂತರ್ ಸಂಭಂಧವನ್ನು ನಾವು ಯಾವುದೇ ಚಟುವಟಿಕೆಯಿಂದ ಹಾಳು ಮಾಡಿದರೆ ಅದು ನಮ್ಮೆಲ್ಲರ ವಿನಾಶವನ್ನು ತರುತ್ತದೆ. ಅಂದರೆ ಪರಿಸರದಲ್ಲಿ ಮನುಷ್ಯನ ಕೈವಾಡ ಆದಷ್ಟು ಕನಿಷ್ಠವಿರಬೇಕು. ಗೈಯಾದ ಸ್ವನಿಯಂತ್ರಣ ಮತ್ತು ಸ್ವಪರಿಷ್ಕರಣ ಸಾಮರ್ಥ್ಯದ ಮಿತಿಯನ್ನು ಮೀರಿಹೋಗಬಾರದು. ಆದರೆ ಇಂದು ಮನುಷ್ಯ ತನ್ನ ಅನೇಕಾನೇಕ ಚಟುವಟಿಕೆಗಳಿಂದ, ಮುಖ್ಯವಾಗಿ ಕೈಗಾರಿಕಾ ಚಟುವಟಿಕೆಗಳು ಮತ್ತು ವ್ಯಾಪಕ ಕಾಡುನಾಶದಂತಹ ಚಟುವಟಿಕೆಗಳಿಂದ, ಗೈಯಾ ಹೇಳುವ ಅಂತರ್‌ಸಂಬಂಧವನ್ನು ಛಿದ್ರಗೊಳಿಸುತ್ತಿದ್ದಾನೆ. ಇದರಿಂದ ಕೇಡು ಖಂಡಿತ.