ವನವಾಸ ಕಾಲದಲ್ಲಿ ಸೀತೆಗೆ ನೀರಡಿಕೆಯಾದಾಗ,ಬಾಣ ಬಿಟ್ಟು ಭೂಮಿಯಿಂದ ನೀರು ಚಿಮ್ಮಿಸಿದ್ದನಂತೆ ಶ್ರೀರಾಮ. ನೀರೇನೋ ಬಂತು. ಆದರೆ ಬಾಣ ಎಲ್ಲಿ ಹೋಯಿತು. ಭೂಮಿಯಲ್ಲೇ ನಾಟಿಕೊಂಡು ಗಿಡವಾಯಿತೇ? ಆದರೆ  ಬಾಣ ಹೊಡೆಯದಿದ್ದರೂ, ಅಗೆದಾಗ ಸಿಗುವುದು ಈ ಗೆಡ್ಡೆಗಳು.ಬಾಣದ ತುದಿಯಂತೆ ಚೂಪಾಗಿರುವ ಈ ಗೆಡ್ಡೆಗಳು.  ಒಮ್ಮೆ ನೆಟ್ಟ ಗಿಡಗಳು ನಾಲ್ಕಾರು ವರ್ಷ ಫಲ ಕೊಡುವುದಲ್ಲದೆ ಮೇಲಿನ ಸಸ್ಯ ಒಣಗಿದರೂ, ಕೆಳಗಿನ ಗೆಡ್ಡೆ ಜೀವಂತವಾಗಿರುತ್ತದೆ ಭೂಗರ್ಭದ ನಿಧಿಯಂತೆ. ಅದೇ ‘ಆರೋ ರೂಟ್’ ಗೆಡ್ಡೆ. ಬಾಣದಂತೆ ಚೂಪಾದ ಗೆಡ್ಡೆ. ಹಿಂದೆ ಬಿಲ್ಲು ಬಾಣಗಳನ್ನು ಬಳಸುತ್ತಿದ್ದ  ಕಾಲದಲ್ಲಿ, ಗುಂಪು ಘರ್ಷಣೆಯ ಸಮಯದಲ್ಲಿ  ವಿಷಪೂರಿತ ಬಾಣ ಪ್ರಯೋಗ ವಾದಾಗ, ದೇಹದಿಂದ ವಿಷ ತೆಗೆಯಲು ಈ ಗೆಡ್ಡೆಯ ಬಳಕೆಯಾಗುತ್ತಿತ್ತಂತೆ. ಗೆಡ್ಡೆಯನ್ನು ಅರೆದು, ಅಥವ ಎಲೆಗಳನ್ನು ಅರೆದು ಆ ಜಾಗಕ್ಕೆ ಹಾಕಿ ಕಟ್ಟುತ್ತಿದ್ದರಂತೆ. ಇದಕ್ಕೆಲ್ಲ ದಾಖಲಾತಿ ಇಲ್ಲ. ಆದರೂ ಈ ಗೆಡ್ಡೆಗೆ ಆ ಹೆಸರು ಶಾಶ್ವತವಾಗಿ ಉಳಿದು ಕೊಂಡಿದೆ. 

ಆರೋರೂಟ್ ಗಿಡ

ಬಾಣದಂತೆ ಚೂಪಾಗಿರುವ ಗೆಡ್ಡೆಯ ಗಿಡಕ್ಕೆ ಒಬೀಡಿಯೆನ್ಸ್ ಪ್ಲಾಂಟ್ ಎಂಬ ಹೆಸರೂ ಇದೆ. ವಿಧೇಯ ಸೈನಿಕನಂತೆ ನೇರವಾಗಿ ನಿಲ್ಲುವ ಎಲೆಗಳು ಇದಕ್ಕೆ ಕಾರಣ ವಿರ ಬೇಕು. ‘ಮರಾಂಟ ಅರುಂಡನೇಸಿ’ ಸಸ್ಯ ಕುಟುಂಬಕ್ಕೆ ಸೇರಿದ್ದು. ವೆಸ್ಟ್ ಇಂಡೀಸ್, ಆಸ್ಟ್ರೇಲಿಯ, ಏಷ್ಯ ಮತ್ತು ಆಫ್ರಿಕ ಖಂಡಗಳಲ್ಲಿ ಹೆಚ್ಚು ಬೆಳೆಯುತ್ತಾರೆ. ಗುಂಪಾಗಿ ಬರುವ ಎಲೆಗಳು ಗಿಡದತ್ತ ನೋಡುವಂತೆ ಆಕರ್ಶಿಸುತ್ತವೆ. ಆರೆಂಟು ತಿಂಗಳಲ್ಲಿ ಗೆಡ್ಡಗಳಾಗುತ್ತವೆ.  ಸುಲಭವಾಗಿ ಜೀರ್ಣವಾಗುವ ಪಿಷ್ಟ (ಸ್ಟಾರ್ಚ್) ಹೆಚ್ಚಾಗಿ ಇರುವುದರಿಂದ ಈ ಗೆಡ್ಡೆಗಳಿಗೆ  ಬೇಡಿಕೆ ಹೆಚ್ಚು.

ಮೊಳಕೆ ಬಂದ ಗೆಡ್ಡೆ, ಪಕ್ಕದಲ್ಲಿ ಬರುವ ಕಂದುಗಳಿಂದ ಸಸ್ಯಾಭಿವೃದ್ಧಿ ಮಾಡ ಬಹುದು. ನೇರವಾಗಿ ಚೂಪಾಗಿ ಬೆಳೆಯುವ ಹಸಿರು ಎಲೆಗಳು. ಗಿಡ  ಎರೆಡು ಅಡಿ ಎತ್ತರಕ್ಕೆ ಬೆಳೆಯುತ್ತವೆ. ಬಿಳಿಯ ಹೂಗಳು. ಒಂದು ವರ್ಷ ಬೆಳೆದ ಗಿಡಗಳಲ್ಲಿ ಗೆಡ್ಡೆಗಳಾಗುತ್ತವೆ. ಗೆಡ್ಡೆಗಳನ್ನು ಕಿತ್ತ ತಕ್ಷಣ ನಾಟಿ ಮಾಡ ಬೇಕು. ಅದು ಚೆನ್ನಾಗಿ ಬೆಳೆಯಲು ಅವಕಾಶ ವಾಗುತ್ತದೆ.

ಕಿತ್ತ ಗೆಡ್ಡೆಗಳನ್ನು ಚೆನ್ನಾಗಿ ತೊಳೆದು, ಸಣ್ಣದಾಗಿ ಕತ್ತರಿಸಿ ಕೊಳ್ಳ ಬೇಕು. ಸಣ್ಣಗೆ ರುಬ್ಬಿದ ದ್ರಾವಣವನ್ನು ಪಾತ್ರೆಯಲ್ಲಿ ಇಟ್ಟಾಗ, ತಳದಲ್ಲಿ ನುಣ್ಣಗಿರುವ ಪುಡಿ ಸಂಗ್ರಹ ವಾಗುತ್ತದೆ. ಮೇಲಿನ ತಿಳಿ ಬಗ್ಗಿಸಿ, ಪುಡಿಯನ್ನು ಒಣಗಿಸ ಬೇಕು. ಇದೇ ಬಳಸಲು ಯೋಗ್ಯವಾದ ಆರೋರೂಟ್ ಪುಡಿ, ಬೆಳ್ಳಗೆ, ನುಣ್ಣಗೆ ಇರುವುದು.

ಅತಿ ಸಣ್ಣ ಮಕ್ಕಳಿಗೆ ಇದರ ಗಂಜಿ (ಮಣ್ಣಿ) ಮಾಡಿ ಕೊಡುತ್ತಾರೆ. ಸುಲಭವಾಗಿ ಜೀರ್ಣವಾಗುವ ಈ ಗಂಜಿ ವಯಸ್ಸಾದವರಿಗೆ ಮತ್ತು ರೋಗ ಗ್ರಸ್ತರಿಗೆ ಒಳ್ಳೆಯ ಆಹಾರ. ಮಾರುಕಟ್ಟೆಯ ಪುಡಿಗೆ ಬೇರೆ ಗೆಡ್ಡೆಗಳ ಪುಡಿ ಕಲಬೆರಕೆಯಾಗ ಬಹುದು.ಇದು ನುಣುಪಾಗಿ ಇರುವುದಿಲ್ಲ. ಶುದ್ಧ ಪುಡಿ ನುಣುಪಾಗಿ ಇರುತ್ತದೆ, ವಾಸನೆ ಇರುವುದಿಲ್ಲ. ಹಾಗಾಗಿ ಬಿಸ್ಕೆಟ್ಸ್, ಪುಡ್ಡಿಂಗ್ಸ್, ಕೇಕ್, ಸಾಸ್, ಐಸ್ ಕ್ರೀಮ್ಸ್ ಮಾಡುವಾಗ ಬಳಸಿಕೊಳ್ಳ ಬಹುದು. ಹೊಟ್ಟೆಯ ಸಮಸ್ಯೆ ಇರುವವರಿಗೆ ‘ಆರೋರೂಟ್ ಬಿಸ್ಕತ್ತುಗಳು’ ಒಳ್ಳೆಯ ಆಹಾರವಾಗ ಬಲ್ಲದು. ನೀರಿನ ಅಂಶ ಹೋಗಿ ಗಟ್ಟಿಯಾಗಲು, ಈ ಪುಡಿಯ ಬಳಕೆಮಾಡ ಬಹುದು. ಮಕ್ಕಳ ಆಹಾರ , ಪ್ರಾಣಿಗಳ ಆಹಾರ, ಬೆಳಗಿನ ತಿಂಡಿ ತಯಾರಿಕೆಯಲ್ಲಿ ( ಬ್ರೇಕ್ ಫಾಸ್ಟ್ ಸೀರಿಯಲ್ಸ್) ಸಹ ಬಳಕೆಯಾಗುತ್ತದೆ.

ಹಿತ್ತಿಲಿನಲ್ಲಿ ಬೆಳೆದರೆ, ಪುಡಿ ಮಾರಾಟವನ್ನು ಸಣ್ಣ ಮಟ್ಟದ ಗೃಹೋದ್ಯೋಗವನ್ನಾಗಿ ಮಾಡಿಕೊಳ್ಳ ಬಹುದು. ನಮ್ಮದೇ ಬೆಳೆ, ನಮ್ಮದೇ ಶ್ರಮವಾದಾಗ ಲಾಭ ಇಮ್ಮಡಿ, ಎನ್ನುತ್ತಾರೆ ಈ ಜನ. (ಇದನ್ನು ಕರಾವಳಿಯ ಮಂದಿ ‘ಕೂವೆ ಹುಡಿ’ ಎಂದು ಕರೆಯುತ್ತಾರೆ). ಕಾಲ ಬದಲಾದಂತೆ, ಈ ಹುಡಿಯ ರೂಪು-ರೇಷೆಗಳೂ ಬದಲಾಗುತ್ತಿದೆ. ಐಸ್ ಕ್ರೀಮ್  ಮಾಡಲು ಸಹ ಈ ಪುಡಿ ಬಳಕೆಯಾಗುತ್ತಿದೆ.

ಗುಡ್ಡ ಗಾಡಿನ ಜನರು ಇದನ್ನು ಔಷಧಿಯಾಗಿ ಸಹ ಬಳಸುತ್ತಿದ್ದರು .ವಿಷಕ್ರಿಮಿಗಳು  ಕಚ್ಚಿದಾಗ, ವಿಷದ ಬಾಣ ಚುಚ್ಚಿಕೊಂಡಾಗ  ಗೆಡ್ಡೆಯನ್ನು ಅರೆದು ಪೇಸ್ಟ್ ಮಾಡಿ ಹಚ್ಚುತ್ತಾರಂತೆ. ದಾಖಲಾತಿ ಇಲ್ಲದ ಕಾರಣ ಈ ಔಷಧಗಳು ಜನ ಸಾಮಾನ್ಯರಿಂದ ದೂರವಾದವು. ಔಷಧಿಯಾಗಿ ಅಲ್ಲದಿದ್ದರೂ, ಆಹಾರವಾಗಿ, ಸುಲಭದಲ್ಲಿ ಬೆಳೆದು ಬಳಸ ಬಹುದು.  ಸುಸ್ಥಿರ ಆಹಾರ ಪದ್ಧತಿಗೆ ಸೇರ್ಪಡೆಯಾಗ ಬಹುದಾದ ಗೆಡ್ಡೆ ಆರೋರೂಟ್.

(ಚಿತ್ರ: ಎ.ಆರ್.ಎಸ್. ಶರ್ಮ)