ಹಗಲಿನಲ್ಲಿ ಕತ್ತೆತ್ತಿ ನೋಡಿದಾಗ ಜ್ವಲಿಸುವ ಸೂರ್ಯ ರಾತ್ರಿ ಆಕಾಶ ನೋಡಿದರೆ ತಂಪಿನ ಬೆಳಕನ್ನು ಹಬ್ಬಿಸುವ ಚಂದ್ರ, ಮಿನುಗುವ ನಕ್ಷತ್ರ, ನೀಹಾರಿಕೆ, ಗೆಲಕ್ಸಿಗಳಿಂದ ಕೂಡಿದ ಬ್ರಹ್ಮಾಂಡಕ್ಕೆ ಹೋಲಿಸಿದರೆ ನಮ್ಮ ಭೂಮಿ ಸಣ್ಣದೊಂದು ‘ಕಣ’ ಎನ್ನಬಹುದು. ನಮ್ಮ ಭೂಮಿಯು ಸದಾ ಪ್ರದಕ್ಷಿಣೆ ಹಾಕುತ್ತಿರುವ ಸೂರ್ಯನಿಗೆ ಹೋಲಿಸಿದರೂ ಬಹಳ ಸಣ್ಣದು. ಇಂತಹ ಭೂಮಿಯ ವ್ಯಾಸ ಸುಮಾರು 6,400 ಕಿಮೀ. ಭೂಮಿಯ ಸೃಷ್ಟಿ ಯಾವಾಗ ಆಯಿತು? ಭೂಮಿಗೆ ಅಂತ್ಯ ಇದೆಯಾ? ಹಾಗಾದರೆ ಇದರ ವಯಸ್ಸು ಎಷ್ಟು? ಎನ್ನುವಂತಹ ಪ್ರಶ್ನೆಗಳು ನಮ್ಮನ್ನೆಲ್ಲ ಕಾಡಿವೆ, ಕಾಡುತ್ತಿವೆ.

ಹತ್ತನೇ ತರಗತಿಯ ‘ವಿಶ್ವ’ ಪಾಠ ಬೋಧನೆ ಮಾಡುವಾಗ ನನ್ನ ವಿದ್ಯಾರ್ಥಿ ‘ಸರ್ ಭೂಮಿಯ ವಯಸ್ಸು ಎಷ್ಟು’ ಎಂದು ಕೇಳಿಯೇ ಬಿಟ್ಟ. ಅದಕ್ಕೆ ನಾನು ಥಟ್ಟನೆ ಸುಮಾರು 450 ಕೋಟಿ ವರ್ಷಗಳು ಎಂದು ಹೇಳಿದೆ. ಮತ್ತೊಬ್ಬ ವಿದ್ಯಾರ್ಥಿ ‘ಸರ್ ಸುಮಾರು ಅಂತ ಯಾಕೆ ಅಂತೀರಿ, ನಿಖರವಾಗಿ ಹೇಳಿ’ ಎಂದು ಕೇಳಿದ.

ಮನುಷ್ಯರ, ಗಿಡಗಂಟೆಗಳ, ಪ್ರಾಣಿಗಳ ವಯಸ್ಸನ್ನು ಕ್ರಮವಾಗಿ ಗುರುತಿಸಲು ನಮ್ಮ ಜೀವಮಾನ ಕಾಲದಲ್ಲಿ ಅಥವಾ ಒಂದೆರಡು ತಲೆಮಾರುಗಳಲ್ಲಿ ಸಾಧ್ಯವಿರುವುದರಿಂದ ಯಾರೊಬ್ಬರ ಅಥವಾ ಯಾವುದೊಂದರ ವಯಸ್ಸು ಇಷ್ಟೆ ಎಂದು ಖಚಿತವಾಗಿ ಹೇಳಿಬಿಡಬಹುದು. ಆದರೆ ಭೂಮಿಯ ವಯಸ್ಸನ್ನು ಎಷ್ಟು ತಲೆಮಾರುಗಳಿಂದ ತಾನೆ ಗುರುತಿಸಲು ಸಾಧ್ಯ. ಮನುಷ್ಯ, ಸಸ್ಯ, ಸೂಕ್ಷ್ಮಾಣು ಜೀವಿಗಳು ಕಾಣಿಸಿಕೊಳ್ಳುವುದಕ್ಕೆ ಮುಂಚೆಯೇ ಭೂಮಿಯ ಉದಯವಾಗಿದೆ. ಆದ್ದರಿಂದ  ನಿಖರವಾಗಿ ಹೇಳಲು ಸಾಧ್ಯವೇ?

ಆದರೂ ನಾನು ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಲೇಬೇಕಾಗಿತ್ತು. ಆದ್ದರಿಂದ ವಿದ್ಯಾರ್ಥಿಗೆ ‘ನೋಡಪ್ಪ ಭೂಮಿಯ ವಯೋ ನಿರ್ಧಾರ ನಿಖರವಾದುದಲ್ಲ. ಆದರೆ ಪೂರ್ಣವಾಗಿ ತಪ್ಪು ಎನ್ನುವಂತಿಲ್ಲ. ಸ್ವಲ್ಪ ಹೆಚ್ಚು ಕಡಿಮೆ ಅನ್ನುತ್ತಾರಲ್ಲ ಹಾಗೆ ಸರಿಸುಮಾರಾದ ಲೆಕ್ಕಾಚಾರ.’

ಇದೆಲ್ಲ ಹೇಗಾದರೂ ಇರಲಿ ಭೂಮಿಯ ವಯಸ್ಸಿನ ನಿರ್ಧಾರಕ್ಕೆ ವಿಜ್ಞಾನಿಗಳು ಅನುಸರಿಸುವ ವಿಧಾನ ಯಾವುದು ಎಂಬುದನ್ನು ಸ್ವಲ್ಪ ನೋಡೋಣ. ಭೂಮಿಯ ವಯಸ್ಸಿಗೆ ಸಂಬಂಧಿಸಿದ ವಿವರಗಳಿಗೆ ವಿಜ್ಞಾನಿಗಳು ಆಶ್ರಯಿಸಿದ ವಸ್ತು ಸೀಸ.

ಸೀಸ (Lead) ನಮಗೆ ಸಾಮಾನ್ಯವಾದ ವಸ್ತು. ಆದರೆ ಭೂರಾಸಾಯನಿಕ ವಿಜ್ಞಾನಿಗಳ ಕುತೂಹಲದ ಪ್ರಶ್ನೆಗೆ ಉತ್ತರ ಕೊಟ್ಟ ಲೋಹ.

ಒಂದೇ ಧಾತುವಿನ, ವಿವಿಧ ರಾಶಿಗಳುಳ್ಳ ಪರಮಾಣುಗಳನ್ನು ಐಸೊಟೋಪುಗಳೆನ್ನುತ್ತಾರೆ.  ಭೂಮಿಯಲ್ಲಿ ಸಿಗುವ ಸೀಸ (ಪರಮಾಣು ಸಂಖ್ಯೆ-82) ನಾಲ್ಕು ಐಸೊಟೋಪುಗಳ ಮಿಶ್ರಣ.  ಸೀಸ-206, ಸೀಸ-207 ಮತ್ತು ಸೀಸ-208 ಕ್ರಮವಾಗಿ ಯುರೇನಿಯಂ-238, ಯುರೇನಿಯಂ-235 ಮತ್ತು ಥೋರಿಯಂ-232 ಐಸೊಟೋಪುಗಳ ವಿಕಿರಣಶೀಲತೆಯಿಂದ ರೂಪುಗೊಂಡುವು (ಧಾತು ಹೆಸರಿನ ಎದುರಿನ ಸಂಖ್ಯೆ ಪರಮಾಣು ನ್ಯೂಕ್ಲಿಯಸ್ಸಿಲ್ಲಿರುವ ನ್ಯೂಟ್ರಾನ್ ಮತ್ತು ಪ್ರೋಒಟ್ಟು ಸಂಖ್ಯೆ ಅಥವಾ ರಾಶಿ ಸಂಖ್ಯೆ). ಸೀಸ-204, ಹೀಗೆ ಸೃಷ್ಟಿಯಾಗದೆ ಸಹಜವಾಗಿರುವಂಥದ್ದು.

ವಿಕಿರಣ ಶೀಲತೆ ಮುಗಿದು ಉಲ್ಕಾಶಿಲೆಗಳಲ್ಲಿ ಶೇಖರವಾದ ನಾಲ್ಕು ಬಗೆಯ ಸೀಸಗಳ ಮಿಶ್ರಣವನ್ನು ‘ಆದಿಸೀಸ’ (ಪ್ರೈಮಾರ್ಡಿಯಲ್ ಲೆಡ್) ಎನ್ನುತ್ತಾರೆ. ಇದರಲ್ಲಿರುವ ನಾಲ್ಕು ಬಗೆಯ ಸೀಸಗಳ ಸಾಪೇಕ್ಷ ಪ್ರಮಾಣಗಳನ್ನು ಅಳೆಯಬಹುದು.

ಭೂಮಿಯಲ್ಲಿ ಸಿಗುವ ಶಿಲೆಯಲ್ಲಿ ಸೀಸ-204ರ ಪ್ರಮಾಣ ಬದಲಾಗದಿದ್ದರೂ ಉಳಿದ ಮೂರು ಐಸೊಟೋಪುಗಳ ಪ್ರಮಾಣಗಳು ಕಾಲ ಕಳೆದಂತೆ ಬದಲಾಗುತ್ತವೆ. ಇದನ್ನೂ ಅಳೆಯಬಹುದು.  ಭೂಮಿಯಲ್ಲಿ ಈಗ ಇರುವ ಸೀಸದ ಮಿಶ್ರಣವನ್ನು ‘ಆಧುನಿಕ ಸೀಸ’ ಎನ್ನೋಣ.

ಆದಿಸೀಸ ಮತ್ತು ಆಧುನಿಕ ಸೀಸಗಳಲ್ಲಿ ಐಸೊಟೋಪು ಪ್ರಮಾಣಗಳ ನಿಷ್ಪತ್ತಿ ಒಂದೇ ತೆರನಾಗಿರುವುದಿಲ್ಲ. ಅದನ್ನು ಅಳೆದು, ವ್ಯತ್ಯಾಸವನ್ನರಿತು ಭೂಮಿಯು ಎಂದಿನಿಂದ ವಿಕಾಸವಾಯಿತು ಎಂದು ತಿಳಿಯಬಹುದು. ವಿಕಿರಣಶೀಲತೆಯಿಂದ ಉಂಟಾಗುವ ಸೀಸ ಐಸೊಟೋಪಗಳ ಪ್ರಮಾಣಗಳು ಕಾಲ ಕಳೆದಂತೆ ಹೆಚ್ಚಾಗುವುದೂ ಇದರಿಂದ ‘ಆಧುನಿಕ ಸೀಸ’ದ ಸಂಯೋಜನೆ ‘ಆದಿಸೀಸ’ದ ಸಂಯೋಜನೆಗಿಂತ ಭಿನ್ನವಾಗಿರುವುದೂ ಈ ಕಾಲಮಾಪನದಲ್ಲಿ ಉಪಯೋಗವಾಗುತ್ತದೆ.

ಈ ರೀತಿಯ ಲೆಕ್ಕಾಚಾರದಿಂದ ಭೂಮಿಯ ವಯಸ್ಸು 455 ಕೋಟಿ ವರ್ಷ ಎಂದು ಅಂದಾಜು ಮಾಡಿದ್ದಾರೆ.

ಆದರೆ ಯಾವೊಂದು ಮಾದರಿಯೂ ಭೂಮಿಯ ವಯಸ್ಸನ್ನು ಒದಗಿಸುವಷ್ಟು ಸಮರ್ಥವಾಗಿಲ್ಲ. ಮಾಸ್‌ಸ್ಪೆಕ್ಟ್ರೊಮೀಟರ್ ಎಂಬ ಉಪಕರಣದ ಸಹಾಯದಿಂದ ಈ ಮಾದರಿಗಳ ಪ್ರಮಾಣ ತಿಳಿದುಕೊಂಡು, ಇವುಗಳ ಆಧಾರದ ಮೇಲೆ ರೇಡಿಯೋ ವಿಕಿರಣ ವಸ್ತುಗಳು ವಿಘಟಿಸುವುದು ಗೊತ್ತಿರುವುದರಿಂದ ಆ ಮಾದರಿ ಎಷ್ಟು ಕಾಲದಿಂದ ವಿಘಟಿತವಾಗುತ್ತದೆ ಎಂಬುದನ್ನು ಲೆಕ್ಕ ಹಾಕಬಹುದು. ಅನೇಕ ಮಾದರಿಗಳ ಪ್ರಯೋಗಗಳ ನಂತರ ಭೂಮಿಯ ವಯಸ್ಸೆಷ್ಟು ಎಂಬುದನ್ನು ಸರಿಸುಮಾರಾಗಿ ಅಂದಾಜು ಮಾಡಬಹುದು. ಹಾಗಾಗಿ ಇಂದಿನ ಅಂದಾಜಿನ ಪ್ರಕಾರ ಭೂಮಿಯ ವಯಸ್ಸು 455 ಕೋಟಿ ವರ್ಷಗಳೆಂದು ಲೆಕ್ಕಹಾಕಲಾಗಿದೆ.