ನಮ್ಮ ಜನಪದರಿಗೆ ಭೂಮಿ ಕೇವಲ ಮಣ್ಣಲ್ಲ. ಕೋಟ್ಯಂತರ ಜೀವಿಗಳಿಗೆ ಆಹಾರ, ರಕ್ಷಣೆ ನೀಡಿ ಸಲಹುವ ಮಹಾಮಾತೆ. ಹಾಗಾಗಿ ಭೂಮಿ ತಾಯಿಯ ಆರಾಧನೆಗೆ ವಿವಿಧ ರೀತಿಯ ಕ್ರಿಯೆಗಳು ಆಚರಣೆಗಳು, ಮಾರ್ಗಗಳು ಭಾರತದ ಎಲ್ಲಾ ಕಡೆ ಪ್ರಚಲಿತದಲ್ಲಿವೆ. ಉತ್ತರ ಕರ್ನಾಟಕದ ಸೀಗಿ ಹುಣ್ಣಿಮೆ, ಮಲೆನಾಡಿನ ಭೂಮಿ ಹುಣ್ಣಿಮೆ, ಬಯಲು ಸೀಮೆಯ ಹೊನ್ನಾರು, ಕೊಂತಿಹಬ್ಬ, ತುಳುನಾಡಿನವರ ಖೆಡ್ವಾಸ, ಸೋಲಿಗ ಆದಿವಾಸಿಗಳ ಭೂಮ್ತಾಯಿ ಪೂಜೆ, ಅಲ್ಲದೆ ದೇಶದ ಇತರ ರಾಜ್ಯಗಳಾದ ರಾಜಸ್ಥಾನದ ಹಿರ್ಸೋತಿ, ಪಶ್ಚಿಮ ಬಂಗಾಳದ ಹಲ್ ಚಲ್ ಇವೆಲ್ಲಾ ಭೂಮಿಗೆ ಧನ್ಯವಾದ ಸಲಿಸುವ ಆಚರಣೆಗಳೇ.

ಪಂಚಭೂತಗಳಾದಿಯಾಗಿ ಪ್ರಕೃತಿಯ ಎಲ್ಲಾ ಘಟಕಗಳಲ್ಲೂ ನಮ್ಮ ರೈತ ಮಕ್ಕಳು  ದೈವತ್ವವನ್ನು ಕಂಡು ಗೌರವಿಸುತ್ತಾರೆ. ಅದರಲ್ಲಿಯೂ ಅವರಿಗೆ ನೆಲೆ, ಅನ್ನ, ಆಶ್ರಯ  ನೀಡುವ ಭೂಮಿಯ ಮೇಲೆ ಅಪಾರ ಗೌರವ, ಭಕ್ತಿ, ಶ್ರದ್ಧೆಗಳನ್ನಿಟ್ಟುಕೊಂಡಿರುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಯಾರಿಗಾದರೂ ಏನನನ್ನಾದರೂ ಧೃಢೀಕರಿಸಬೇಕಾದರೆ ಭೂಮ್ತಾಯಿ ಮೇಲೆ ಆಣೆ ಹಾಕುವುದು ಹಳ್ಳಿಗರಲ್ಲಿ ಸರ್ವೇ ಸಾಮಾನ್ಯ. ಹಾಗಾಗಿ ಭೂಮಿ ಕುರಿತಾದ ಅವರ ಆಚರಣೆಗಳೂ ಸಹ ನಾಡಿನಾದ್ಯಂತ ಸಮೃದ್ಧವಾಗಿವೆ.  

ಹೊನ್ನಾರು

ಹೊನ್ನಾರು ಅಥವಾ ಹೊನ್ನೇರು ಎಂದು ಕರೆಯುವ ಇದು ಕೃಷಿ ವರ್ಷದ ಮೊದಲ ಆಚರಣೆ ಎನ್ನಬಹುದು. ದಕ್ಷಿಣ ಕರ್ನಾಟಕದಲ್ಲಿ ವಿಶೇಷವಾಗಿ ಕಂಡುಬರುತ್ತದೆ.

ಹೊನ್ನೇರು ಎಂದರೆ ಹೊನ್ನಿನ ಏರು, ಅರ್ಥಾತ್ ಬಂಗಾರದ ನೇಗಿಲು. ಮೊದಲ ಮಳೆ ಬಿದ್ದ ಹೊತ್ತಲ್ಲಿ ರೈತರಿಗೆ ನೆಲ ಉಳುವ ಸಂಭ್ರಮ. ನೆಲ ಉಳುವ ಮುನ್ನ ಭೂಮ್ತಾಯಿಯನ್ನು ಪ್ರಾರ್ಥಿಸಿ, ನೇಗಿಲು, ಮೇಣಿ, ನೊಗ ಹಾಗೂ ಜೋಡೆತ್ತುಗಳಿಗೆ ಅರಿಶಿಣ-ಕುಂಕುಮದ ಬೊಟ್ಟಿಟ್ಟು, ಅರಿಶಿನ ಲೇಪಿಸಿದ ಅಂಗುನೂಲು  ಕಟ್ಟಿ, ಅಕ್ಷತೆ ಇಟ್ಟು ಹೂವಿನ ಎಳೆಯನ್ನು ಸುತ್ತಿ ಪೂಜೆ ಸಲ್ಲಿಸುವ ಆಚರಣೆ ಎಲ್ಲೆಡೆ ಕಾಣಬಹುದು. ರಾತ್ರಿ ನೆನೆಸಿಟ್ಟ ಅಕ್ಕಿ ಮತ್ತು ಎಳ್ಳಿಗೆ ಕಾಯಿ ಬೆಲ್ಲ ಹಾಕಿ ಕಲಸಿದ ಎಡೆಯನ್ನು ಮೊದಲು  ದನಗಳಿಗೆ ತಿನ್ನಿಸುತ್ತಾರೆ, ಉಳಿದಿದ್ದನ್ನು ಬಂದವರಿಗೆ ಹಂಚಲಾಗುತ್ತದೆ. ಇಷ್ಟೆಲ್ಲಾ ಮಾಡುವುದು ಮನೆಯ ಹೆಣ್ಣುಮಕ್ಕಳು. ಪೂಜಾ ವಿಧಾನಗಳು ಮುಗಿದ ನಂತರ ಹೊಲವನ್ನು ಸಾಂಕೇತಿಕವಾಗಿ ಮೂರು ಸುತ್ತು ಉಳುಮೆ ಮಾಡಲಾಗುತ್ತದೆ. ಕೆಲವರು ಹೊಲದಲ್ಲಿ ತೇವವಿದ್ದರೆ ಸ್ವಲ್ಪ ಹೆಚ್ಚೇ ಉಳುಮೆ ಮಾಡುತ್ತಾರೆ.

ಜೀನ್ ಮಲ್ಲತ್ತದ ವಿಶೇಷ ಹೊನ್ನೇರು: ಜೀನ್ ಮಲ್ಲತ್ತ ಒಂದು ಚಿಕ್ಕ ಗ್ರಾಮ. ಕನಕಪುರದ ಹತ್ತಿರ ಕರ್ನಾಟಕ-ತಮಿಳು ನಾಡು ಗಡಿಯಲ್ಲಿ ಕಾಡಿನ ಒಳಗಿರುವ ಇದು ಭೌಗೋಳಿಕವಾಗಿ ತಮಿಳು ನಾಡಿಗೆ ಸೇರಿದ್ದರೂ ಸಹ ಜನರು ಕನ್ನಡಿಗರೇ. ಭಾಷೆ, ವೇಷ, ಊಟ, ಉಪಚಾರ ಎಲ್ಲವೂ ಕನ್ನಡಮಯ. ನೆಂಟಸ್ತಿಕೆಯೂ ಸಹ ಕನ್ನಡನಾಡಿನ ಜೊತೆಗೇ. ಇಲ್ಲಿ ನಡೆಯುವ ಹೊನ್ನೇರು ಪೂಜೆ ಬೇರೆ ಪ್ರದೇಶಗಳಿಗಿಂತ ಭಿನ್ನ. ಬೇರೆ ಪ್ರದೇಶಗಳಲ್ಲಿ ಈ ಪೂಜೆಯು ವೈಯಕ್ತಿಕ ನೆಲೆಯಲ್ಲಿ ಆಚರಿಸಲ್ಪಟ್ಟರೆ ಜೀನ್ ಮಲ್ಲತ್ತ ಗ್ರಾಮದಲ್ಲಿ ಸಾಮೂಹಿಕ ಕ್ರಿಯೆಯಾಗಿ ಆಚರಿಸಲ್ಪಡುತ್ತದೆ.

ಇಲ್ಲಿರುವ ಮಾರಮ್ಮ ಸುತ್ತ ಹನ್ನೆರಡು ಹಳ್ಳಿಗಳಿಗೂ ಗ್ರಾಮದೇವತೆ. ಯುಗಾದಿ ಕಳೆದ ಹದಿನೈದು ದಿನಗಳಿಗೆ ಗ್ರಾಮದ ಎಲ್ಲರೂ ಸೇರಿ ಮಾರಮ್ಮನ ಹಬ್ಬವನ್ನು ಒಂದು ವಾರ ಕಾಲ ನಡೆಸುತ್ತಾರೆ. ಪ್ರತಿ ದಿನ ಒಂದೊಂದು ವಿಧಿ-ವಿಧಾನಗಳ ಆಚರಣೆಯಿರುತ್ತದೆ. ಅದರಲ್ಲಿ ಮೊದಲ ದಿನ ರಾತ್ರಿ ಹೊನ್ನಾರು ಅಥವಾ ಹೊನ್ನೇರು ಪೂಜೆಯನ್ನು ಅತ್ಯಂತ ವಿಶಿಷ್ಟವಾಗಿ ಮಾಡಲಾಗುತ್ತದೆ. ಸುತ್ತ-ಮುತ್ತಲ ಹದಿನಾರು ಹಳ್ಳಿಗಳಿಗೂ ಈ ಜಾತ್ರೆಯಲ್ಲಿ ನಡೆಯುವುದೇ ಅಧಿಕೃತ ಹೊನ್ನೇರು. ಇಲ್ಲಿ ಹೊನ್ನೇರು ಪೂಜೆ ಮುಗಿಯುವವರೆಗೆ ಎಂತಹ ಹದ ಮಳೆಯಾಗಿದ್ದರೂ ಸಹ ಹೊಲಕ್ಕೆ ಏರು ಕಟ್ಟುವಂತಿಲ್ಲ.

ಹೊನ್ನೇರು ಪೂಜೆ ನಡೆಯುವುದು ಸರಿರಾತ್ರಿ ಎರಡು ಗಂಟೆ ಸಮಯಕ್ಕೆ.

ಇತರೆಡೆಗಳಲ್ಲಿ ನಿಜವಾದ ನೇಗಿಲು, ಜೋಡೆತ್ತುಗಳನ್ನು ಹೂಡಿ ಪೂಜೆ ಮಾಡಿದರೆ ಇಲ್ಲಿ ಮನುಷ್ಯರನ್ನೇ ಎತ್ತುಗಳನ್ನಾಗಿಸಲಾಗುತ್ತದೆ. ತಲೆಗೆ ಪೇಟ ಕಟ್ಟಿ, ಕೊಂಬುಗಳನ್ನು ಹೋಲುವಂತೆ ಎರಡು  ಕಡ್ಡಿಗಳನ್ನು ಸಿಗಿಸಿಕೊಂಡ ಇಬ್ಬರ ಮೇಲೆ ನೇಗಿಲು-ನೊಗ ಹೂಡಿ ಒಬ್ಬ ಗಡ್ಡಧಾರಿ ವ್ಯಕ್ತಿ ಉಳುವವನಂತೆ ನಟಿಸುತ್ತಾನೆ. ನೇಗಿಲ ಮುಂದೆ ಕಂಕುಳಲ್ಲಿ ಹುಲ್ಲಿನ ಕಂತೆ ಇಟ್ಟುಕೊಂಡ ಮತ್ತೊಬ್ಬ ವ್ಯಕ್ತಿ ಸ್ವಲ್ಪ-ಸ್ವಲ್ಪ ಹುಲ್ಲನ್ನು ಎಸೆಯುತ್ತಾ ನಡೆಯುತ್ತಾನೆ. ದೇವಾಲಯದ ಮುಂದೆ ವೃತ್ತಾಕಾರದಲ್ಲಿ ಸುತ್ತುವ ಇವರನ್ನು ನೋಡಲು ಜನ ಸುತ್ತಲೂ ನೆರೆಯುತ್ತಾರೆ. ಇವರು ಸುತ್ತುತ್ತಾ ಇರಬೇಕಾದರೆ ಊರ ತೋಟಿ ಮತ್ತು ಇವರ ನಡುವೆ ನಡೆಯುವ ಹಾಸ್ಯ ಲೇಪಿತ ಸಂಭಾಷಣೆ ಹೀಗಿರುತ್ತದೆ.

ತೋಟಿ- ಯಾವೂರು?

ವೇಷಧಾರಿಗಳು- ನಮ್ದು ಉತ್ತರ ದೇಶ.

ತೋಟಿ- ಅಲ್ಲಿಂದ ಬಂದು ಇಲ್ಲ್ಯಾಕೆ ಏರು ಕಟ್ಟಿದ್ದೀರಿ?

ವೇಷಧಾರಿಗಳು- ಮಳೆ ಬಂದ್ಬುಡ್ತಲ್ಲ ಅದಕ್ಕೆ.

ತೋಟಿ- ನಮ್ ಹೊಲದಲ್ಯಾಕೆ ಬಂದಿದ್ದೀರಿ?

ವೇಷಧಾರಿಗಳು- ಹೊಟ್ಟೇ ತುಂಬಿಸ್ ಬೇಕಲ್ಲ ಅದಿಕ್ಕೆ … .. … ಈ ರೀತಿ ಅದೂ-ಇದೂ ಮಾತನಾಡುತ್ತಾ, ನಗಸಾರ ಮಾಡುತ್ತಾ ಬೆಳಗಿನ ಜಾವದವರೆಗೂ ನಡೆಯುತ್ತದೆ. ನಂತರ ಮೆರವಣಿಗೆ ಮಾಡಿ ಮದುವೆ ಮಾಡುವ ಸಾಂಕೇತಿಕ ವಿಧಿಯೊಂದಿಗೆ ಹೊನ್ನೇರು ಪೂಜೆ ಮುಗಿಯುತ್ತದೆ.

ಮಣ್ಣಿನ ಋಣ ತೀರಿಸುವ `ಭೂಮಿ ಹುಣ್ಣಿಮೆ’

ಭತ್ತದ ಕದಿರು ಹೊರಬರುವ ಸಂದರ್ಭದಲ್ಲಿ ಭೂಮಾತೆ ಗರ್ಭಿಣಿ ಆದಳೆಂದು ಭಾವಿಸಿ, ಅವಳಿಗೆ ಸೀಮಂತ ಮಾಡಿ ಆಕೆಯ ಸುಪ್ತ ಬಯಕೆಗಳನ್ನು ತೀರಿಸುವ ಅರ್ಥಪೂರ್ಣ ಆಚರಣೆಯೇ ಈ ವಿಶಿಷ್ಟ `ಭೂಮಿ ಹುಣ್ಣಿಮೆ’.  ಇದು ರೈತ ಬಂಧುಗಳು ಭೂಮಿಗೆ ಋಣ ತೀರಿಸುವ ಅನನ್ಯ ವಿಧಾನ. ಭೂಮಿಯನ್ನು ಸ್ತ್ರೀಗೆ ಹೋಲಿಸುವುದು ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿ ಕಂಡುಬರುತ್ತದೆ. ಭೂಮಿ ಹುಣ್ಣಿಮೆ ಅದರ ಒಂದು ರೂಪ. ಸಾಮಾನ್ಯವಾಗಿ ಮಲೆನಾಡಿಗರು ಬತ್ತದ ಗದ್ದೆಯ ತಾಕಿನಲ್ಲಿ ಇದನ್ನು ಆಚರಿಸಿದರೆ ಉತ್ತರಕರ್ನಾಟಕದಲ್ಲಿ ಹೊಲಗಳಲ್ಲಿ ಆಚರಿಸುತ್ತಾರೆ.  ಉತ್ತರ ಕರ್ನಾಟಕದಲ್ಲಿ `ಶೀಗೆ ಹುಣ್ಣಿಮೆ’ ಎಂದೂ ಮಲೆನಾಡು ಪ್ರದೇಶದಲ್ಲಿ `ಭುಮ್ಮಣಿ ಹಬ್ಬ’ ಎಂದೂ ಇದನ್ನು ಕರೆಯುತ್ತಾರೆ. 

 

ಹಚ್ಚಮ್ಲಿ ಹಾಲಮ್ಲಿ

ಹಿತ್ಲಾಗಿನ ಹೀರೆಕಾಯಿ ಹಾಹೂಹು…

ಮುಂದಿನ ಸಾಲಾಗೆ

ಮತ್ತಷ್ಟು ಬೆಳೆ ಬಲ್ಲಿ ಹಾಹೂಹು…

ಎಂಬುದು ಈ ಆಚರಣೆಯ ಸಂದರ್ಭದಲ್ಲಿ ಹೇಳುವ ವಾಡಿಕೆ ಪದ.

 

`ಭುಮ್ಮಣಿ’ ಬುಟ್ಟಿಯ ಚಿತ್ತಾರ: ಮಲೆನಾಡಿನಾದ್ಯಂತ ಮತ್ತು ಅರೆಮಲೆನಾಡಿನ ಭಾಗಗಳಲ್ಲಿ ಈ ಹಬ್ಬ ನಡೆಯುವುದು ಸೀಗೆ (ಶೀಗೆ) ಹುಣ್ಣಿಮೆಯ ದಿವಸ.  ಆ ಹುಣ್ಣಿಮೆಗಿಂತ ಒಂದು ವಾರ ಮೊದಲೇ ಬರುವ ವಿಜಯ ದಶಮಿಯಂದೇ ಹಬ್ಬಕ್ಕೆ ಚಾಲನೆ.  ಭೂಮಿ ಹುಣ್ಣಿಮೆ ಹತ್ತಿರ ಬರುತ್ತಿದ್ದಂತೆ ಮನೆಯ ಗಂಡಸರು  ಒಂದೆರಡು ಬಿದಿರನ್ನು ಕಡಿದು, ನೀಟಾಗಿ ಸಿಗಿದು ಬುಟ್ಟಿ ಹೆಣೆಯುತ್ತಾರೆ, ನಂತರ ಆ ಬುಟ್ಟಿಗಳು ಸೀದಾ ಮನೆಯ ಹೆಂಗಸರ ಕೈಗೆ ಹೋಗುತ್ತವೆ.  ಅವುಗಳನ್ನು ಪೂಜಿಸಿದ ನಂತರ ಸಾರಿಸಿ, ಚೆನ್ನಾಗಿ ಒಣಗಿಸಿ ಎತ್ತಿಡುತ್ತಾರೆ. ಇವು ಹಬ್ಬದ ಮುಖ್ಯ ಪರಿಕರಗಳು.  ಬುಮ್ಮಣ್ಣಿ ಬುಟ್ಟಿ ಮತ್ತು ಹಚ್ಚಂಬ್ಲಿ ಬುಟ್ಟಿಗಳೆಂದು ಕರೆಯುವ ಇವುಗಳನ್ನು ಒಂದು ವಾರ ಮುಂಚೆಯೇ ನೆನೆ ಹಾಕುತ್ತಾರೆ.  ಮಾರನೇ ದಿನ ಬುಟ್ಟಿಗಳಿಗೆ ಮಣ್ಣು ಕಟ್ಟಿ ಸಗಣಿಯಿಂದ ಸಾರಿಸುತ್ತಾರೆ.  ಮರುದಿನ ಜೇಡಿ ಮಣ್ಣು ಕಟ್ಟಿ ಚೆನ್ನಾಗಿ ಒಣಗಿದ ಮೇಲೆ ಚಿತ್ತಾರ ಬಿಡಿಸುವ ಕೆಲಸ.

ಈ ಚಿತ್ತಾರ ಬಿಡಿಸುವ ಕೆಲಸ ಬಹು ಆಕರ್ಷಣೀಯ ಮತ್ತು ಬಹು ಸೂಕ್ಷ್ಮ ಕೌಶಲ್ಯವೂ ಹೌದು. ಹಾಗಾಗಿ ಭೂಮಿ ಹುಣ್ಣಿಮೆಯು ಕೇವಲ ಹಬ್ಬ ಮಾತ್ರವಲ್ಲದೆ ಗ್ರಾಮೀಣ ಕಲೆಯೊಂದರ ಹೆಜ್ಜೆ ಗುರುತೂ ಹೌದು. ಚಿತ್ತಾರ ಅಂದರೆ ಕುಂಚದ ಕಲೆ ಅಲ್ಲ. ಇದು ಅಪ್ಪಟ ಗ್ರಾಮೀಣ ಕಲೆ.

ಗೇರುಕಾಯಿ, ಅಕ್ಕಿ ಮತ್ತು ಉದ್ದಿನ ಕಾಳನ್ನು ಕಪ್ಪಗೆ ಹುರಿದು ಪುಡಿ ಮಾಡುತ್ತಾರೆ.  ಕುದಿಯುವ ನೀರಿಗೆ ನೇರಳೆ ಚಕ್ಕೆ ಹಾಕಿ ಈ ಪುಡಿಯನ್ನು ಬೆರೆಸಿದರೆ ಬುಟ್ಟಿಗಳ ಮೇಲೆ ಚಿತ್ರ ಬರೆಯಲು ಬಣ್ಣ ತಯಾರು.  ಅಕಸ್ಮಾತ್ ಈ ಬಣ್ಣವೇನಾದರೂ ಗಟ್ಟಿಯಾದರೆ ಸ್ವಲ್ಪ ತೊಂಡೆ ಸೊಪ್ಪಿನ ಹಸಿರು ರಸ ಹಾಕುತ್ತಾರೆ.  ಹೊಳೆಯಲ್ಲಿ ಸಿಗುವ ಕೆಂಪು ಕಲ್ಲನ್ನು ಅರೆದುಕೊಂಡರೆ ಅಪ್ಪಟ ಕೆಂಪು ಬಣ್ಣ ತಯಾರು.  ಭತ್ತದ ಗರಿಕೆ, ಬಾಳೆ ದಿಂಡಿನಿಂದ ಮಾಡಿದ ಸಣ್ಣ ಕಡ್ಡಿ ಅಥವಾ ಪುಂಡಿ ನಾರನ್ನೇ ಬ್ರಷ್ಯಾಗಿಸಿಕೊಂಡು ಹೆಣ್ಣುಮಕ್ಕಳು ಚಿತ್ರ ಬಿಡಿಸಲು ಕೂರುತ್ತಾರೆ.

ಮೊದಲು ಬಿಳಿ ಬಣ್ಣವನ್ನು  ಬುಟ್ಟಿಯ ಮೇಲ್ಭಾಗದಲ್ಲಿ  ಹಾಗೂ ಕೆಳಭಾಗದಲ್ಲಿ  ನಾಲ್ಕು ಸುತ್ತು ಬರುವಂತೆ ಗೆರೆ ಎಳೆಯುತ್ತಾರೆ.  ಇದೇ ರೀತಿ ಬುಟ್ಟಿಯ ತಳಭಾಗದಲ್ಲೂ ಎರಡು ಗೆರೆ ಎಳೆಯುತ್ತಾರೆ.  ನಂತರ ಕೆಮ್ಮಣ್ಣಿನಿಂದ ನಾಜೂಕಾಗಿ ಬಿಳಿಗೆರೆಗೆ ತಾಗಿಕೊಂಡಂತೆ ಕೆಂಪು ಗೆರೆ ಎಳೆದು ಅಂದಗೊಳಿಸುತ್ತಾರೆ.

ನಂತಗರ ಒಂದೊಂದೇ ಬದಿಗೆ ಗಿಡ, ಮರ, ಮನೆ, ಹೊಲ, ಗದ್ದೆ, ನೇಗಿಲು, ಕುಂಟೆ, ಬಾಲಕ-ಬಾಲಕಿ, ರಸ್ತೆ, ಹೊಳೆ, ಕೆರೆ ಸೂರ್ಯ, ಚಂದ್ರ, ನಕ್ಷತ್ರ, ಆಕಾಶ, ಎತ್ತು ಗಾಡಿ, ಆಕಳು, ಎತ್ತು, ಎಮ್ಮೆ ಹಗ್ಗ,

ಸೂರ್‍ಯ-ಚಂದ್ರ, ಪ್ರಾಣಿ-ಪಕ್ಷಿ, ಗಿಡ-ಮರ, ಮಕ್ಕಳು, ದಂಪತಿಗಳು, ಏಣಿ, ಹುಲ್ಲಿನ ಬಣವೆ, ಹಾವು, ಬೇಸಾಯೋಪಕರಣಗಳು ಹೀಗೆ ತಮ್ಮರಿವಿಗೆ ನಿಲುಕಿದ ಎಲ್ಲವನ್ನು ಬುಟ್ಟಿಗಳ ಮೇಲೆ ಬಿಡಿಸುತ್ತಾ ಹೋಗುತ್ತಾರೆ. ಬಿಳಿ ಜೇಡಿ ಮಣ್ಣಿನಿಂದ ಚಿತ್ರ ಬಿಡಿಸಿದ  ನಂತರ ಆ ಚಿತ್ರಗಳ ಅಂಚಿಗೆ ಕೆಮ್ಮಣ್ಣು ಹಚ್ಚಿ ಇನ್ನಷ್ಟು ಮೆರುಗು ನೀಡುತ್ತಾರೆ. ಬುಟ್ಟಿಯ ಮೇಲೊಮ್ಮೆ ಕಣ್ಣಾಡಿಸಿದರೆ ಅಪ್ಪಟ ಗ್ರಾಮೀಣ ಪರಿಸರದ ಚಿತ್ರಗಳೇ ಅಲ್ಲಿ ಕಾಣಿಸುತ್ತವೆ.  ಬುಟ್ಟಿಯ ಒಳಮೈಯಲ್ಲೂ ಭತ್ತದ ಸಸಿ, ತರಕಾರಿ ಬಳ್ಳಿ, ಬಾವಿ, ಹಗ್ಗ ಹೀಗೆ ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಪರಿಕರ, ಕಸುಬುಗಳ ಎಲ್ಲ ವಿಧದ ಚಿತ್ತಾರಗಳನ್ನು ಬಿಡಿಸುತ್ತಾರೆ. ಬಿದಿರಿನಿಂದ ಹೆಣೆದ ಸಾದಾ ಬುಟ್ಟಿಗಳು ಇವರ ಕುಸುರಿ ಕೆಲಸಕ್ಕೆ ಸಿಲುಕಿ ಕ್ರಮೇಣ ಬುಮ್ಮಣ್ಣಿ ಬುಟ್ಟಿಗಳಾಗಿ ಮಾರ್ಪಾಟಾಗುತ್ತವೆ.  ಮೂರು ನಾಲ್ಕು ದಿವಸಗಳ ಈ ಸೂಕ್ಷ್ಮ ಮತ್ತು ಶ್ರದ್ಧೆಯ ಕೆಲಸ ಮನೆಯ ಹೆಂಗಸರದ್ದು.

ಹಬ್ಬದ ದಿನ ಈ ಬುಟ್ಟಿಯೊಳಗೆ ಮಾತ್ರ ಆಹಾರ ಪದಾರ್ಥಗಳು ಮತ್ತು ಪೂಜೆಯ ಸಾಮಗ್ರಿಗಳನ್ನು ಹಾಕಿಕೊಂಡು ಗದ್ದೆಗೆ ಹೋಗಬೇಕೆಂಬುದು ಸಂಪ್ರದಾಯ.  ಇತರ ಯಾವುದೇ ಬುಟ್ಟಿ ಅಥವಾ ಪಾತ್ರೆಯಲ್ಲಿ ತೆಗೆದುಕೊಂಡು ಹೋಗುವಂತಿಲ್ಲ.  ಸಾಮಾನ್ಯವಾಗಿ ಎರಡು ಬುಟ್ಟಿಗಳನ್ನು ತೆಗೆದುಕೊಂಡು ಹೋಗುವುದು ವಾಡಿಕೆ, ದೊಡ್ಡ ಕುಟುಂಬವಾದರೆ ಮೂರ್‍ನಾಲ್ಕು ಬುಟ್ಟಿ ಕೊಂಡೊಯ್ಯುತ್ತಾರೆ. ಅಷ್ಟರ ಮಟ್ಟಿಗೆ ಈ ಭುಮ್ಮಣಿ ಬುಟ್ಟಿಗಳಿಗೆ ವಿಶೇಷ ಮಹತ್ವವಿದೆ. ಗದ್ದೆಯಲ್ಲಿ ಪೂಜೆಯ ಕ್ರಿಯೆಗಳೆಲಾ ಮುಗಿದು ಹೊಲಕ್ಕೆ ಬಾಗಿನ ಅರ್ಪಿಸಿದ ನಂತರ ವಾಪಸಾಗುವಾಗಲೂ  ಇವೇ ಬುಟ್ಟಿಗಳಲ್ಲಿ ಉಳಿದ ವಸ್ತುಗಳನ್ನು ಹಾಕಿಕೊಂಡು ಬರುತ್ತಾರೆ.

ಇನ್ನು ಭೂಮಿ ಹುಣ್ಣಿಮೆಯಲ್ಲಿ ಮಾಡುವ  ಅಡುಗೆ ವೈವಿಧ್ಯವೊ! ಬಣ್ಣನೆಗೆ ನಿಲುಕದ್ದು. ಇತರೆ  ಹಬ್ಬಗಳಲ್ಲಿ ಅಮ್ಮಮ್ಮಾ ಎಂದರೆ ಏಳೆಂಟು ಬಗೆಯ ಅಡುಗೆ ಇದ್ದೀತು.  ಆದರೆ ಭೂಮಿ ಹುಣ್ಣಿಮೆಗೆ ಕಡಿಮೆ ಎಚಿದರೂ ಇಪ್ಪತ್ತೈದು ತರಹದ ಅಡುಗೆಗಳಿರುತ್ತವೆ. ಹಬ್ಬಕ್ಕೆ ಮಾಡುವ ತರಾವರಿ ಅಡುಗೆಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ.  ಅಲಸಂದೆ ಪಲ್ಯ, ಚೌಳಿಕಾಯಿ ಪಲ್ಯ, ಅಮ್ಟೆಕಾಯಿ ಪಲ್ಯ, ಹೀರೆಕಾಯಿ ಪಲ್ಯ, ಸೌತೆಕಾಯಿ ಪಚಡಿ, ಸೌತೆಕಾಯಿ ಕಡಬು, ಕೆಸುವಿನ ಕಡುಬು, ಅರಿಶಿನದ ಎಲೆ ಕಡುಬು.. ಬಾಯಲ್ಲಿ ನೀರು ಬಂತೆ? ಇನ್ನೂ ಮುಗಿದಿಲ್ಲ, ಹೋಳಿಗೆ, ಪಾಯಸ, ಹೆಸರು ಬೇಳೆ, ನೆಲ್ಲಕ್ಕಿ ಅನ್ನ, ಕೂಟು, ಸಾಂಬಾರು… ಇತ್ಯಾದಿ  ಇತ್ಯಾದಿಗಳ ಜತೆಗೆ ಉಪ್ಪು ಹಾಕದೆ ಬೇಯಿಸಿದ ಸಾವಿರ ಸೊಪ್ಪಿನ ಪಲ್ಯ ಭೂಮಿ ತಾಯಿಗೆ ಎಡೆ ಹಾಕಲು ವಿಶೇಷವಾಗಿ ಮಾಡುತ್ತಾರೆ.  ಬಯಲಲ್ಲಿ ಮತ್ತು ಹೊಲಗಳಲ್ಲಿ ಕಣ್ಣಿಗೆ ಬೀಳುವ ಎಲ್ಲಾ ಜಾತಿ ಸೊಪ್ಪುಗಳನ್ನೂ ಸ್ವಲ್ಪ-ಸ್ವಲ್ಪ ತಂದು ಉಪ್ಪು ಹಾಕದೆ ಬೇಯಿಸುತ್ತಾರೆ.  ಇದಕ್ಕೆ ಕುಂಬಳ ಮತ್ತು ಬದನೆ ಎಲೆಗಳನ್ನು ಮಾತ್ರ ಹಾಕುವಂತಿಲ್ಲ.  ಭೂಮಿ ತಾಯಿಗೆ ಅದು ನಿಷಿದ್ಧ ಎಂಬ ನಂಬಿಕೆ. 

ಇದಲ್ಲದೆ ಭೂಮಿಗೆ ಚೆಲ್ಲಲು ಚರಗ ಅಥವಾ ಹಚ್ಚಂಬ್ಲಿ ಕಡ್ಡಾಯವಾಗಿ ಇರಲೇಬೇಕು.  ಮಜ್ಜಿಗೆ, ಹಸಿ ಶುಂಠಿ ಹಾಕಿ ಮಾಡಿದ ಅನ್ನದ ಉಂಡೆಯನ್ನು ಹಚ್ಚಿಂಬ್ಲಿ ಎನ್ನುತ್ತಾರೆ.  ಇಷ್ಟೆಲ್ಲಾ ತರಹೇವಾರಿ ಅಡುಗೆಗೆ ಹೊಂದಿಸಿಕೊಳ್ಳಲೇ ಒಂದು ವಾರ ಬೇಕು.  ಭೂಮಿ ಹುಣ್ಣಿಮೆಯ ಹಿಂದಿನ ಇಡೀ ರಾತ್ರಿ ಮನೆ ಹೆಣ್ಣು ಮಕ್ಕಳಿಗೆ ಅಡುಗೆ ಮಾಡುವುದೇ ಕೆಲಸ.

ಹುಣ್ಣಿಮೆಯ ದಿವಸ ಬೆಳ್ಳಂಬೆಳಿಗ್ಗೆ ಚಿತ್ತಾರಗೊಂಡ ಬುಮ್ಮಣ್ಣಿ ಬುಟ್ಟಿಗಳಲ್ಲಿ ಎಡೆ, ಪೂಜಾ ಸಾಮಗ್ರಿಗಳನ್ನೆಲ್ಲಾ ತುಂಬಿಕೊಂಡು ಮನೆ ಮಂದಿಯೆಲ್ಲಾ ಗದ್ದೆಗೆ ಹೋಗುತ್ತಾರೆ.  ಒಂದು ನಿಗದಿತ ಸ್ಥಳದಲ್ಲಿ ಬಾಳೆ ಕಂದು, ಕಬ್ಬಿನ ಜಲ್ಲೆಗಳನ್ನು ನಿಲ್ಲಿಸಿ ಚಪ್ಪರ ಮಾಡಿ ಅದಕ್ಕೆ ಮಾವಿನ ತೋರಣ ಕಟ್ಟಿ, ಒಂದು ಹಿಡಿ ಬತ್ತದ ಪೈರನ್ನು ಒಟ್ಟುಕೂಡಿಸಿ ಅದಕ್ಕೆ ಬಳೆ-ಬಿಚ್ಚೋಲೆ ಮತ್ತು ತಾಳಿಯನ್ನು ತೊಡಿಸುತ್ತಾರೆ.  ಅದರ ಮುಂದೆ ಕಳಸ ಇಟ್ಟು ಮಾಡಿದ ಎಲ್ಲಾ ಅಡುಗೆಗಳ ಎಡೆ ಇಟ್ಟು ಪೂಜಿಸುತ್ತಾರೆ.  ಶಂಖ-ಜಾಗಟೆಯ ಸದ್ದು ಇಡೀ ಗದ್ದೆ ತುಂಬ ಮೊಳಗುತ್ತದೆ.

ಇಲ್ಲಿ ಇಲಿಗಳಿಗೂ ಎಡೆ ಉಂಟು! ಅಕಸ್ಮಾತ್ ಎಡೆ ಇಡದಿದ್ದರೆ ಅವು ಗದ್ದೆಯನ್ನೆಲ್ಲಾ ಕಡಿಯುತ್ತದೆಂದು ನಂಬಿಕೆ.  ಇಲಿಗಳಲ್ಲದೆ ಕಾಗೆಗಳಿಗೂ ಎಡೆ ಹಾಕುತ್ತಾರೆ.  ಕಾಗೆಗಳಿಗೆ ಎಡೆ ಇಟ್ಟು `ಗುಳಿಯೋ ಬಾ ಗುಳಿಯೋ ಬಾ’ ಎಂದು ಕೂಗುತ್ತಾರೆ.  ಇದಾದ ನಂತರ ಭೂಮಿಗೆ ಮೀಸಲಾದ ಎಡೆಯನ್ನು ಗದ್ದೆಯ ಒಂದು ಮೂಲೆಯಲ್ಲಿ ಹೂಳುತ್ತಾರೆ. ಆ ಸ್ಥಳವನ್ನು ನೆನಪಿನಲ್ಲಿಟ್ಟುಕೊಂಡು ಕುಯಿಲಿನ ಸಮಯದಲ್ಲಿ ಇದನ್ನು ಈಚೆ ತೆಗೆದು ಸುಟ್ಟು ಬತ್ತ ತುಂಬುವ ಕಣಜಕ್ಕೆ ಹಾಕುತ್ತಾರೆ. ಹೀಗೆ ಮಾಡುವುದರಿಂದ ಕಣಜದಲ್ಲಿ ಸಂಗ್ರಹಿಸಿದ ಭತ್ತಕ್ಕೆ ಹುಳು ಬೀಳುವುದಿಲ್ಲವಂತೆ॒

ಎಡೆ ಹಾಕುವ ಕ್ರಿಯೆಯ ನಂತರ ಗಂಡಸರು ಎಲ್ಲಾ ಬೆಳೆಗಳಿಗೂ ಹಚ್ಚಂಬ್ಲಿ  ಎರಚಿಕೊಂಡು ಬರುತ್ತಾರೆ.    ಪೂಜೆಯ ನಂತರ ಎಲ್ಲರೂ ಪರಸ್ಪರ ಕೈಗೆ ಕೆಂಪುದಾರ ಕಟ್ಟಿಕೊಳ್ಳುತ್ತಾರೆ.  ಈ ದಾರವನ್ನು ಭತ್ತದ ಒಕ್ಕಣೆ ಸಂದರ್ಭದಲ್ಲಿ ತೆಗೆದು ಭತ್ತ ತುಳಿಸುವ ರೋಣುಗಲ್ಲಿಗೆ ಕಟ್ಟಬೇಕು.  ಅಲ್ಲಿಯವರೆಗೆ ತೆಗೆಯುವಂತಿಲ್ಲ.  ಅಷ್ಟೇ ಅಲ್ಲದೆ  ಸಾವಿರ ಸೊಪ್ಪು ಬೇಯಿಸಿದ ಪಾತ್ರೆಯನ್ನು ದೀಪಾವಳಿಯ ಮರು ದಿನವೇ ತೊಳೆಯಬೇಕು.  ಅಂದರೆ ಈ ಆಚರಣೆ ಕೇವಲ ಒಂದೆರದು ದಿವಸದ್ದಲ್ಲ.  ಇದರ ವ್ಯಾಪ್ತಿ ಇಡೀ ಅರ್ಧ ವರ್ಷಕ್ಕೆ ಆವರಿಸಿಕೊಂಡಿರುತ್ತದೆ.

ಮಲೆನಾಡಿನ ಕುಣುಬಿ ಜನಾಂಗದವರಲ್ಲಿ ಹೊತ್ತು ಮೂಡುವ ಮುನ್ನವೇ ಗದ್ದೆಗೆ ಹಚ್ಚಂಬ್ಲಿ ಚೆಲ್ಲುವ ಪದ್ಧತಿ ಇದೆ.

ಪೂಜೆಯ ನಂತರ ಎಲ್ಲರೂ ಅಲ್ಲೇ ಊಟ ಮಾಡಿ ಮನೆಗೆ ಮರಳುತ್ತಾರೆ.  ಮರಳಿದ ನಂತರ ಗಂಡಸರು ಸೋಬೇಟೆ ಆಡಲು ಕಾಡಿಗೆ ಹೊರಟರೆ ಹೆಂಗಸರು ಮನೆಯಲ್ಲಿ ವಿವಿಧ ರೀತಿಯ ಆಟವಾಡುತ್ತಾ ವಿರಮಿಸುತ್ತಾರೆ.  ಸಂಜೆಗೆ ಮಾಂಸದಡಿಗೆಯ ವಿಶೇಷ.

ಈ ಆಚರಣೆಯ ಸಂದರ್ಭದಲ್ಲಿ ಮಲೆನಾಡಿನಾದ್ಯಂದ ರಮಣೀಯ ವಾತಾವರಣವಿರುತ್ತದೆ. ಎಲ್ಲೆಲ್ಲೂ ಹಚ್ಚಹಸುರು, ಆಗೊಮ್ಮೆ-ಈಗೊಮ್ಮೆ ಹನಿಯುವ ಮಳೆ, ಎಳನೀರಿನಂತೆ ಶುಭ್ರವಾಗಿ ಹರಿಯುವ ನೀರು… ಇಂತಹ ಹೊತ್ತಲ್ಲಿ ಬೆಳ್ಳಂಬೆಳಿಗ್ಗೆ ಇಬ್ಬನಿ ಆರುವ ಮುಂಚೆಯೇ ನಡೆಯುವ ಭೂಮ್ತಯಿಗೆ ನಮಿಸುವ ಭೂಮಿಹುಣ್ಣಿಮೆ ಅತ್ಯಂತ ಅರ್ಥಪೂರ್ಣ ಆಚರಣೆ.

ಮಕ್ಕಳ `ಗುಡ್ಡೆ ಹುಣ್ಣಿಮೆ’

ಮಲೆನಾಡಿನ ಕೆಲವು ಭಾಗದ ಹಳ್ಳಿಗಳಲ್ಲಿ ಮಕ್ಕಳೇ ಸೇರಿಕೊಂಡು ಆಚರಿಸುವ ವಿಶಿಷ್ಟ ಹಬ್ಬ `ಗುಡ್ಡೆ ಹುಣ್ಣಿಮೆ’. ಉತ್ತಿ ಬಿತ್ತಿದ ಹೊಲಕ್ಕೆ ಕುಟುಂಬದ ಹಿರಿಯರು ಭೂಮಿ ಹುಣ್ಣಿಮೆಯ ಮೂಲಕ ಬಾಗಿನ ಅರ್ಪಿಸಿದಂತೆ ಗುಡ್ಡೆ ಅಥವಾ ಊರ ಹೊರಗಿನ ಬೇಣದ ಹುಲ್ಲಿಗೆ ಪೂಜೆ ಸಲ್ಲಿಸುವ  ಪರಿ ಇದು.  ಇದನ್ನು ಮಕ್ಕಳೇ ಆಚರಿಸುವುದು ವಿಶೇಷ.  ಹೊಲದಲ್ಲಿ ನಡೆಯುವ ದೊಡ್ಡವರ ಭೂಮಿ ಹುಣ್ಣಿಮೆ ಹಬ್ಬದಲ್ಲಿ ಮಕ್ಕಳೂ ಇರುತ್ತಾರೆ. ಆದರೆ ಇಲ್ಲಿ ಮಕ್ಕಳೇ ತಮಗೆ ತಿಳಿದಂತೆ ಹಬ್ಬವನ್ನು ಆಚರಣೆ ಮಾಡುತ್ತಾರೆ.

ಹಬ್ಬದ ದಿನ ಬೆಳಿಗ್ಗೆ ಪ್ರತಿ ಮನೆಗೂ ಒಬ್ಬರಂತೆ ಮಕ್ಕಳು ಗುಂಪಾಗಿ ಸೇರಿ ಪೂಜೆಗೆ ಬೇಕಾಗುವ ಬಾಳೆ ಎಲೆ, ಸಣ್ಣ ಬಳೆ, ಹಬ್ಬದ ಅಡಿಗೆ, ಹೋಳಿಗೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಭುಮ್ಮಣಿ ಬುಟ್ಟಿಯಲ್ಲಿ ಹಾಕಿಕೊಂಡು ಹೊರಡುತ್ತಾರೆ. ಗ್ರಾಮಕ್ಕೆ ಹತ್ತಿರದ ಬೇಣಕ್ಕೆ ಹೊರಟು, ಅಲ್ಲಿ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ ಮದ್ಯಾಹ್ನದ ಸುಮಾರಿಗೆ ಎಲ್ಲ ಮಕ್ಕಳೂ ಮನೆಗೆ ಹಿಂತಿರುಗುತ್ತಾರೆ.

ಗುಡ್ಡದ ಬಳಿ ಸಾಗುವ ಮಕ್ಕಳ ದಂಡು ಅಲ್ಲಿನ ಸಪಾಟಾಗಿರುವ ಸ್ವಲ್ಪ ಜಾಗವನ್ನು ಸ್ವಚ್ಛ ಮಾಡಿ ಮನೆಯಿಂದ ತಂದಿರುವ ಕಂಬಳಿಯನ್ನು ಸಾಲಾಗಿ ಹಾಸಿ ಎಲ್ಲರೂ ಕುಳಿತುಕೊಳ್ಳುತ್ತಾರೆ. ನಂತರ ಹುಲುಸಾಗಿ ಬೆಳೆದಿರುವ ಹುಲ್ಲಿಗೆ  ವಿನಮ್ರವಾಗಿ ಪೂಜೆ ಸಲ್ಲಿಸುವ ಕಾರ್ಯ ಆರಂಭ. ಗುಡ್ಡೆಗೆ ಬಾಗಿನ ಅರ್ಪಿಸುವುದಕ್ಕೆ ನಾ ಮೊದಲು-ನೀಮೊದಲು ಎಂದು  ಸ್ಪರ್ಧೆಯೇ ನಡೆಯುವುದು ಸಾಮಾನ್ಯ.  ಪೂಜೆ ಮುಗಿಸಿದ ಮಕ್ಕಳು ತಾವು ಮನೆಯಿಂದ ತಂದಿದ್ದ ಅಡುಗೆ, ಹಣ್ಣು-ಹಂಪಲುಗಳನ್ನು  ನಾಲ್ಕೈದು ಬಾಳೆ ಎಲೆಯಲ್ಲಿ ಹಾಕಿ (ಎಡೆ) ಸಾಲಾಗಿ ಇಡುತ್ತಾರೆ.  ತೆಂಗಿನ ಕಾಯಿ ಒಡೆದು ಎಲ್ಲರೂ ಕೈ ಮುಗಿದರೆ ಅಲ್ಲಿಗೆ ಗುಡ್ಡೆಗೆ ಬಾಗಿನ ಅರ್ಪಿಸುವ  ಸಂಪ್ರದಾಯ ಮುಗಿದಂತೆ.  ಇದಾದ ನಂತರ ಹಾಕಿದ ಎಡೆಯನ್ನು ಊಟ ಮಾಡುವುದು ನಡೆಯುತ್ತದೆ.

ಈ ಗುಡ್ಡೆ ಹುಣ್ಣಿಮೆಗೆ  ದೊಡ್ಡವರ ಸಂಪರ್ಕವೇ ಇರದು. ಆಚರಣೆಯ ಮೊದಲಿನಿಂದ ಹಿಡಿದು ಕೊನೆಯ ತನಕವೂ ಮಕ್ಕಳದೇ ಜವಾಬ್ದಾರಿ,  ಮಾರ್ಗದರ್ಶಕರೂ ಅವರೇ, ಮಾಡುವವರೂ ಅವರೇ. ಇದೆಲ್ಲಾ ಮುಗಿದ ನಂತರ ಸಣ್ಣ ರಂಪಾಟ ಮಾಡಿಕೊಂಡು ಮನೆಗೆ ಮರಳುತ್ತದೆ ಈ ಮಕ್ಕಳ ದಂಡು. ಬಹುಶಃ ತಮ್ಮ ದನ, ಎಮ್ಮೆ ಮುಂತಾದ ಜಾನುವಾರುಗಳಿಗೆ ಸದಾ ಹಚ್ಚ ಹಸುರಾದ ಮೇವುಣಿಸುವ ಗುಡ್ಡವನ್ನು ಗೌರವಿಸುವ ಸಲುವಾಗಿ ಈ ಆಚರಣೆ ಬೆಳೆದು ಬಂದಿರಬಹುದು.

ತುಳು ನಾಡಿನ ಖೆಡ್ವಾಸ

ಖೆಡ್ವಾಸ ಎಂಬುದು ತುಳುನಾಡಿನವರ ಭೂಮಿ ಪೂಜೆ. ನಮ್ಮ ರಾಜ್ಯದ ಪಶ್ಚಿಮ ದಿಕ್ಕಿನಲ್ಲಿ ಅರಬ್ಬೀ ಸಮುದ್ರದ ಕರಾವಳಿಗೆ ಚಾಚಿಕೊಂಡಿರುವ ಪ್ರದೇಶವೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು. ಇಲ್ಲಿನ ಬಹುತೇಕ ಜನಪದರ ಮಾತೃ ಭಾಷೆ ತುಳು. ಹಾಗಾಗಿ ಈ ಪ್ರದೇಶಕ್ಕೆ ಮುಂಚಿನಿಂದಲೂ ತುಳುನಾಡು ಎಂಬ ಮತ್ತೊಂದು ಹೆಸರಿನಿಂದಲೂ ಕರೆಯುತ್ತಾರೆ. ಈ ತುಳು ನಾಡಿನ ಸಂಸ್ಕೃತಿ ಅತ್ಯಂತ ವಿಶಿಷ್ಟವಾದದ್ದು, ಇಲ್ಲಿನ ಕೃಷಿಕರಲ್ಲಿ ಹತ್ತು ಹಲವು ಅಪರೂಪದ ಬೇಸಾಯ ಸಂಬಂಧಿ ಆಚರಣೆಗಳನ್ನು ಕಾಣಬಹುದು. ಅವುಗಳಲ್ಲಿ ಅತ್ಯಂತ ಮುಖ್ಯವಾದದ್ದು ಖೆಡ್ವಾಸ. (ಈ ಪುಸ್ತಕದ ಬೇರೆ-ಬೇರೆ ಅಧ್ಯಾಯಗಳಲ್ಲಿ ತುಳುನಾಡಿನ ಇನ್ನಿತರೆ ಕೃಷಿ ಆಚರಣೆಗಳ ಮಾಹಿತಿಯನ್ನು ನೀಡಲಾಗಿದೆ.)

ಖೆಡ್ವಾಸ ಆಚರಣೆಯಲ್ಲಿ ಹೆಣ್ಣು ಮಕ್ಕಳದೇ ಪ್ರಧಾನ ಪಾತ್ರ. ಅವರು ಹೊತ್ತು ಮೂಡುವ ಮುನ್ನ ಅಂಗಳವನ್ನು ಸಾರಿಸಿ ಸ್ವಚ್ಚಗೊಳಿಸಿ ಅಲ್ಲಿ ಮೊರದಗಲದ ವೃತ್ತವೊಂದನ್ನು ಬರೆಯುತ್ತಾರೆ. ಆ ವೃತ್ತಕ್ಕೆ ಸರೋಳಿ, (ಒಂದು ರೀತಿಯ ಮರ) ಮಾವಿನ ಚಿಗುರು, ಹಲಸಿನ ಚಿಗುರುಗಳನ್ನಿಟ್ಟು ಮಣ್ಣಿನ ದೀಪ ಹಚ್ಚಿಡುತ್ತಾರೆ. ಖೆಡ್ವಾಸದ ಮೂರು ದಿನ ಭೂಮಿ ತಾಯಿ ಬ್ರಹಿಷ್ಠೆಯಾಗಿರುತ್ತಾಳೆಂಬ ನಂಬಿಕೆಯಿಂದ ಭೂಮಿಯ  ಉಳುಮೆಯಾಗಲೀ, ಅಗೆತವಾಗಲೀ ಮಾಡುವುದಿಲ್ಲ. ಅಷ್ಟೇ ಅಲ್ಲದೆ ಗಿಡ-ಮರಗಳನ್ನೂ ಸಹ ಕಡಿಯುವಂತಿಲ್ಲ. ಖೆಡ್ವಾಸದ ಸಂದರ್ಭದಲ್ಲಿ ನನ್ನೆರಿ ಅಕ್ಕಿ ಎಂಬ ವಿಶಿಷ್ಟ ಅಡುಗೆಯನ್ನು ತಯಾರಿಸುತ್ತಾರೆ.

ಭೂಮಿ ಮತ್ತು ರೈತನ ಸಂಬಂಧವನ್ನು ಗಟ್ಟಿಗೊಳಿಸುವ ಭೂಮಿ ಕುರಿತಾದ ಆಚರಣೆಗಳು ಒಟ್ಟಾರೆ ಕೃಷಿ ಆಚರಣೆಗಳ ಪೈಕಿ ಅತ್ಯಂತ ಪ್ರಮುಖವಾದವು.