ಮುಕ್ತ, ಮುಕ್ತ ಧಾರಾವಾಹಿ ನೋಡಿದ್ದವರಿಗೆ ವಾಯುಗುಣ ಬದಲಾವಣೆ ಎನ್ನುವುದು ಖಂಡಿತ ಎದೆಗೆ ಒದ್ದಿರುತ್ತದೆ. ಏಕೆಂದರೆ ಒಂದಲ್ಲ ಒಂದು ತೊಂದರೆಯನ್ನು ಎದುರಿಸುವ ಶಾಂಭವಿ ಟೀಚರ್ರವರ ಕುಟುಂಬಕ್ಕೆ ಇತ್ತೀಚೆಗೆ ಅತಿವೃಷ್ಟಿಯ ಹೊಸ ಕುತ್ತು ಎದುರಾಗಿದೆ. ಅದಕ್ಕೆ ಕಾರಣ: ಜಾಗತಿಕ ವಾಯುಗುಣ ಬದಲಾವಣೆ. ಜಾಗತಿಕ ವಾಯುಗುಣ ಬದಲಾವಣೆಯಿಂದಾಗಿಯೇ ಊರೆಲ್ಲ ಕೊಚ್ಚಿಕೊಂಡು ಹೋಗುವಷ್ಟು ಮಳೆಯಾಗಿದೆ ಎಂದು ಧಾರಾವಾಹಿ ಪ್ರತಿಬಿಂಬಿಸಿದೆ. ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಧಾಂಧಲೆ ನಡೆಸಿದ ಅತಿವೃಷ್ಟಿಗೂ ಇದೇ ಕಾರಣವಿರಬಹುದು ಎಂದೂ ಧಾರಾವಾಹಿ ಸೂಚ್ಯವಾಗಿ ಹೇಳುತ್ತದೆ. ಶಾಂಭವಿ ಟೀಚರ್ರವರ ತೊಂದರೆಗಳನ್ನು ನೋಡಿ ಅಯ್ಯೋ ಪಾಪ ಎನ್ನುವ ಮುನ್ನ ಈ ಗತಿ ನಮಗೂ ನಿಮಗೂ ಬರಬಹುದೇ ಎಂದು ಒಮ್ಮೆ ಚಿಂತಿಸಿ ಎನ್ನುತ್ತಿದೆ ಕಳೆದ ವಾರವಷ್ಟೆ ಬಿಡುಗಡೆಯಾದ ವಿಶ್ವಬ್ಯಾಂಕ್ನ ಒಂದು ವರದಿ. ಹಾಗೆಯೇ ಅಮೆರಿಕೆಯ ಪ್ರತಿಷ್ಠಿತ ಸಂಶೋಧನಾ ಪತ್ರಿಕೆ ದಿ ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ನಲ್ಲಿ ಪ್ರಕಟವಾಗಿರುವ ಒಂದು ಸಂಶೋಧನೆ, ನಮ್ಮ ನಿಮ್ಮ ಈ ಜಾಗೃತಿ ಮುಂದೆ ಭೂಮಿಯನ್ನು ಎಷ್ಟು ತಣ್ಣಗಿರಿಸೀತು ಎಂದು ಲೆಕ್ಕ ಹಾಕಿದೆ.

ಹೌದೇ! ಜಾಗತಿಕವಾಗಿ ಭೂಮಿ ಬಿಸಿಯೇರಿದರೆ ಅದರ ಝಳ ಏರ್ಕಂಡೀಷನ್ಡ್ ಸಿಟಿ ಎಂದು ಹೆಸರಾಗಿರುವ ಬೆಂಗಳೂರು, ಮೈಸೂರನ್ನೂ ತಾಕೀತೇ? ಈ ಬಗ್ಗೆ ಅನುಮಾನವೇ ಬೇಡ. ಎರಡು ಶತಮಾನಗಳಿಂದ ಭೂಮಿಯ ವಾತಾವರಣದ ಸರಾಸರಿ ಉಷ್ಣತೆ ಸುಮಾರು 0.8 ಡಿಗ್ರಿ ಸೆಲ್ಶಿಯಸ್ನಷ್ಟು ಏರಿದೆ ಎಂದು ಅಂತಾರ್ರಾಷ್ಟ್ರೀಯ ವಾಯುಗುಣ ಬದಲಾವಣೆ ಸಮಿತಿ (ಐಪಿಸಿಸಿ) ಕಳೆದ ವರ್ಷವೇ ವರದಿ ಮಾಡಿತ್ತು. ಈ ಝಳಕ್ಕೆ ನಾವು ನಮ್ಮ ನೂರೆಂಟು ಚಟುವಟಿಕೆಗಳಿಂದಾಗಿ ವಾತಾವರಣಕ್ಕೆ ಅಧಿಕವಾಗಿ ಕೂಡಿಸುತ್ತಿರುವ ಕಾರ್ಬನ್ಡಯಾಕ್ಸೈಡ್ ಅನಿಲವೇ ಪ್ರಮುಖ ಎಂದೂ ಅದು ವರದಿ ಮಾಡಿತ್ತು. ಕಾರ್ಬನ್ ಡಯಾಕ್ಸೈಡ್ ಉತ್ಪಾದನೆಯ ಪ್ರಮಾಣವನ್ನು ಕುಗ್ಗಿಸಿದಲ್ಲಿ ಭವಿಷ್ಯದಲ್ಲಿ ಇದರಿಂದಾಗುವ ಪರಿಣಾಮಗಳನ್ನು ಕುಗ್ಗಿಸಬಹುದು ಎನ್ನುವುದು ವಿಜ್ಞಾನಿಗಳ ಅಂಬೋಣ. ಅಷ್ಟೇ ಅಲ್ಲ. ಈ ವಾಯುಗುಣ ಬದಲಾವಣೆ ಈಗ ಅಂತಾರ್ರಾಷ್ಟ್ರೀಯ ವ್ಯಾಪಾರ ಹಾಗೂ ರಾಜಕೀಯದ ಮೇಲೂ ಪ್ರಭಾವ ಬೀರುತ್ತಿದೆ. ಅಮೆರಿಕೆಯ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವಾಯುಗುಣ ಬದಲಾವಣೆಯನ್ನು ತಡೆಗಟ್ಟಲು ಎಲ್ಲ ಕ್ರಮಗಳನ್ನೂ ಕೈಗೊಳ್ಳುವ ಭರವಸೆ ನೀಡಿಯೇ ಚುನಾವಣೆ ಗೆದ್ದಿದ್ದರು.

ಇದೇ ಡಿಸೆಂಬರ್ನಲ್ಲಿ ಡೆನ್ಮಾರ್ಕ್ನ ಕೋಪನ್ಹೇಗನ್ನಲ್ಲಿ ಜರುಗಲಿರುವ ವಿಶ್ವಸಂಸ್ಥೆಯ ವಾಯುಗುಣ ಬದಲಾವಣೆ ಕುರಿತ ಶಿಖರ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ವಿಶ್ವಬ್ಯಾಂಕ್ ತನ್ನ ಜಾಗತಿಕ ಅಭಿವೃದ್ಧಿ ವರದಿಯನ್ನು ಪ್ರಕಟಿಸಿದೆ. ಅಭಿವೃದ್ಧಶೀಲ ರಾಷ್ಟ್ರಗಳ ಬೆಳವಣಿಗೆಯನ್ನು ಪ್ರಭಾವಿಸುವ ಹಲವಾರು ಅಂಶಗಳಲ್ಲಿ ಜಾಗತಿಕ ವಾಯುಗುಣ ಬದಲಾವಣೆ ಪ್ರಧಾನವಾಗಿದೆ ಎನ್ನುವುದು ವರದಿಯ ಸಾರಾಂಶ. ಇದು ಜಾಗತಿಕವಾಗಿ ಎಲ್ಲ ರಾಷ್ಟ್ರಗಳ ಆಕ ಸ್ಥಿತಿಗತಿಗಳನ್ನೂ ಬಾಧಿಸಲಿದೆ ಎನ್ನುತ್ತದೆ ವರದಿ. ಖಯಾವ ರಾಷ್ಟ್ರಕ್ಕೂ ಇದರ ಪ್ರಭಾವದಿಂದ ವಿನಾಯಿತಿ ಇಲ್ಲ,ಖ ಎನ್ನುವ ವರದಿ ಅಭಿವೃದ್ಧಶೀಲ ರಾಷ್ಟ್ರಗಳ ಆಕತೆಗೇ ಇದರಿಂದ ಹೆಚ್ಚಿನ ಪೆಟ್ಟಾಗಲಿದೆ ಎಂದು ಭವಿಷ್ಯ ನುಡಿದಿದೆ. ಕಳೆದ ಐದು ದಶಕಗಳಲ್ಲಿ ವಿವಿಧ ರಾಷ್ಟ್ರಗಳು ಸಾಧಿಸಿದ ಮುನ್ನಡೆಯೆಲ್ಲವೂ ವಾಯುಗುಣ ಬದಲಾವಣೆಯಿಂದಾಗಿ ನಿರರ್ಥಕವಾಗಲಿದೆ ಎನ್ನುತ್ತದೆ ವರದಿ. ಬಿಸಿಯೇರಿದ ಭೂಮಿಯಿಂದಾಗಿ, ಅಕಾಲ ಮಳೆ-ಬರ ಪರಿಸ್ಥಿತಿಗಳು, ಅತಿವೃಷ್ಟಿ ಆಗುವುದರ ಜೊತೆಗೇ ತೀರ ಪ್ರದೇಶಗಳಲ್ಲಿ ಹೆಚ್ಚಾಗುವ ಸಮುದ್ರ ಕೊರೆತ, ತೀವ್ರ ಛಳಿ-ಬೇಸಿಗೆಯಂತಹ ವಿದ್ಯಮಾನಗಳು ಜೀವಕ್ಕೆ ಅಪಾಯ ತಂದೊಡ್ಡುವುದರ ಜೊತೆಗೇ ಆಕತೆಗೂ ಸವಾಲೊಡ್ಡಲಿವೆಯಂತೆ. ಭಾರತದಲ್ಲಿ ಕಳೆದ ಎರಡು ದಶಕದಿಂದ ಕುಸಿಯುತ್ತಿರುವ ಭತ್ತದ ಇಳುವರಿ ಇದಕ್ಕೆ ಒಂದು ಉದಾಹರಣೆ ಎನ್ನುತ್ತದೆ ವರದಿ. 2003ನೇ ಇಸವಿಯಲ್ಲಿ ಯುರೋಪಿನ ಹಲವು ರಾಷ್ಟ್ರಗಳನ್ನು ತಾಕಿದ ಬಿರುಬೇಸಗೆಯಿಂದಾಗಿ ಸುಮಾರು 70000 ಮಂದಿ ಮರಣಿಸಿದ್ದರು. ಕೆನಡಾದ ಪ್ರಮುಖ ಉದ್ಯಮವಾದ ಸಾಗುವಾನಿ ಉದ್ಯಮ ಕೀಟಬಾಧೆಯಿಂದ ಸೊರಗುತ್ತಿರುವುದಕ್ಕೂ ಜಾಗತಿಕ ವಾಯುಗುಣ ಬದಲಾವಣೆಯೇ ಕಾರಣವಂತೆ.

ಹಾಗಿದ್ದರೆ ಇದನ್ನು ತಡೆಯಲು ಸಾಧ್ಯವಿಲ್ಲವೇ? ತಡೆಯಲು ಸಾಧ್ಯವಿಲ್ಲ, ಆದರೆ ನಿಧಾನಗೊಳಿಸಬಹುದು ಎನ್ನುತ್ತಾರೆ ಹವಾಮಾನ ತಜ್ಞರು. ಅದಾಗಬೇಕಾದರೆ ನಾವು ವಾತಾವರಣಕ್ಕೆ ಕೂಡಿಸುತ್ತಿರುವ ಕಾರ್ಬನ್ಡಯಾಕ್ಸೈಡ್ನ ಪ್ರಮಾಣವನ್ನು ಕುಗ್ಗಿಸಬೇಕು. ಇದೊಂದು ರೀತಿ ಬೆಕ್ಕಿಗೆ ಗಂಟೆ ಕಟ್ಟುವ ಸಮಾಚಾರ. ಏಕೆಂದರೆ ಕಾರ್ಬನ್ಡಯಾಕ್ಸೈಡ್ ಪ್ರಮಾಣವನ್ನು ಕುಗ್ಗಿಸುವುದು ಎಂದರೆ ಇಂಧನದ ಬಳಕೆ ಕುಗ್ಗಿಸುವುದು ಎಂದೇ ಅರ್ಥ. ಅರ್ಥಾತ್ ಆಕತೆಯ ಅಡಿಪಾಯವಾಗಿರುವ ಇಂಧನದ ಬಳಕೆಯನ್ನು ಕುಗ್ಗಿಸಿದರೆ, ಅಭಿವೃದ್ಧಿಯೂ ಕುಗ್ಗುವುದಿಲ್ಲವೇ? ನಾವು ಎಂದಿಗೂ ಹಿಂದುಳಿಯಲೇ ಬೇಕೆ? ಹೀಗೆ ಈಗ ಇದೊಂದು ಅಂತಾರ್ರಾಷ್ಟ್ರೀಯ ರಾಜಕೀಯ ವಿವಾದವಾಗಿ ಪರಿಣಮಿಸಿದೆ.  ವಿವಿಧ ರಾಷ್ಟ್ರಗಳು ಕಾರ್ಬನ್ ಡಯಾಕ್ಸೈಡ್ ಉತ್ಪಾದನೆಯನ್ನು ನಿಯಂತ್ರಿಸಲು ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಆಲೋಚಿಸುತ್ತಿವೆ. ಮತ್ತೊಂದೆಡೆ, ಇಂಧನದ ಸದ್ಬಳಕೆಯಾಗುವ ಹಾಗೂ ಕಾರ್ಬನ್ ಡಯಾಕ್ಸೈಡ್ ಉತ್ಪಾದನೆಗೆಳಸದಂತಹ ತಂತ್ರಜ್ಞಾನಗಳ ಬಳಕೆಗೆ ಒತ್ತು ನೀಡಬೇಕೆಂಬ ಒತ್ತಾಯವೂ ಹೆಚ್ಚುತ್ತಿದೆ.  ಹೊಸ ತಂತ್ರಜ್ಞಾನಗಳಿಂದಷ್ಟೆ ಈ ಸಮಸ್ಯೆಗೆ ಪರಿಹಾರ ಸಾಧ್ಯವೇ? ಹೊಸ ತಂತ್ರಜ್ಞಾನ ಲಭ್ಯವಾದರೂ ಅದು ಜನಬಳಕೆಗೆ ಬರುತ್ತದೆನ್ನುವುದು ಖಚಿತವೇನಲ್ಲವಲ್ಲ?

ಯಾವುದೇ ಹೊಸ ತಂತ್ರಜ್ಞಾನದ ನೆರವಿಲ್ಲದೆ, ಕಾನೂನಿನ ಒತ್ತಾಯವಿಲ್ಲದೆ, ಕೇವಲ ನಮ್ಮ ನಡವಳಿಕೆಯನ್ನು ಒಂದಿಷ್ಟು ಬದಲಿಸಿಕೊಂಡರೆ ಕಾರ್ಬನ್ಡಯಾಕ್ಸೈಡ್ ಪ್ರಮಾಣವನ್ನು ಎಷ್ಟರಮಟ್ಟಿಗೆ ಕುಗ್ಗಿಸಬಹುದು ಎಂದು ಅಮೆರಿಕೆಯ ಮಿಷಿಗನ್ ವಿಶ್ವವಿದ್ಯಾನಿಲಯದ ಪರಿಸರವಿಜ್ಞಾನ ಹಾಗೂ ಸಮಾಜಶಾಸ್ತ್ರ ವಿಭಾಗದ ಮೈಖೇಲ್ ವಾಂಡೆನ್ಬರ್ಗ್ ಮತ್ತು ತಂಡ ಸಂಶೋಧನೆ ನಡೆಸಿದೆ. ವಾಂಡೆನ್ಬರ್ಗ್ರವರ ಪ್ರಕಾರ ಅಮೆರಿಕೆಯ ಪ್ರಜೆಗಳು ತಮ್ಮ ನಿತ್ಯ ಜೀವನದಲ್ಲಿ ತುಸು ಕಅಡ್ಜಸ್ಟ್ಕಿ ಮಾಡಿಕೊಂಡರೆ ಪ್ರತಿ ವರ್ಷವೂ ಶೇಕಡ 20ರಷ್ಟು ಕಾರ್ಬನ್ ಡಯಾಕ್ಸೈಡ್ ಪರಿಸರಕ್ಕೆ ಸೇರದಂತೆ ತಡೆಯಬಹುದಂತೆ.  ಕಾನೂನು ಹೇರಿದರೆ ಆಗುವುದಕ್ಕಿಂತಲೂ ಇದು ಹೆಚ್ಚು ಪರಿಣಾಮಕಾರಿ ಎನ್ನುತ್ತಾರೆ ವಾಂಡೆನ್ಬರ್ಗ್.

ಈ ಕ್ರಮಗಳಾದರೂ ಯಾವುವು? ನಾವು ಬಳಸುವ ವಾಹನಗಳ ಇಂಧನ ಕ್ಷಮತೆಯನ್ನು ಸುಸ್ಥಿತಿಯಲ್ಲಿಟ್ಟರೆ ಶೇಕಡ 5ರಷ್ಟು ಕಾರ್ಬನ್ ಡಯಾಕ್ಸೈಡ್ ಕಡಿಮೆ ಉತ್ಪಾದನೆಯಾದಂತೆ. ಅಮೆರಿಕನ್ನರು ಸ್ನಾನದ ಮನೆಗಳಲ್ಲಿ ಬಳಸುವ ಷವರ್ಗಳಲ್ಲಿ ನೀರಿನ ಹರಿವನ್ನು ತುಸು ಕಡಿಮೆ ಮಾಡಿದರೂ ಸಾಕು ಗ ವರ್ಷವೊಂದಕ್ಕೆ 5.4 ಮಿಲಿಯನ್ ಟನ್ ಕಾರ್ಬನ್ ಡಯಾಕ್ಸೈಡ್ ಉತ್ಪಾದನೆ ಕಡಿಮೆಯಾಗುತ್ತದೆ.  ನಿತ್ಯ ಬಳಕೆಯ ವಿದ್ಯುತ್ ಉಪಕರಣಗಳ ಮಿತ ಬಳಕೆಯಿಂದ 11 ಮಿಲಿಯನ್ ಟನ್ ಉತ್ಪಾದನೆ ಕುಗ್ಗಿಸಬಹುದು. ವಾಹನಗಳ ಟೈರ್ಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ 32 ಮಿಲಿಯನ್ ಟನ್ ಕಾರ್ಬನ್ ಡಯಾಕ್ಸೈಡ್ ಉತ್ಪಾದನೆ ಕಡಿಮೆಯಾಗುತ್ತದೆ. ವಾಹನ ಚಾಲಿಸುವ ರೀತಿ ಗಅತಿ ವೇಗ ಇಲ್ಲವೇ ಅತಿ ನಿಧಾನವಾಗಿ ಓಡಿಸುವ ಅಭ್ಯಾಸ ಗ ಯನ್ನು ಬದಲಿಸಿಕೊಂಡರೂ ಕಾರ್ಬನ್ಡಯಾಕ್ಸೈಡ್ ಪ್ರಮಾಣವನ್ನು ಕುಗ್ಗಿಸಬಹುದು. ಉಪಕರಣಗಳು ಬಳಕೆಯಲ್ಲಿ ಇಲ್ಲದಿದ್ದಾಗ ವಿದ್ಯುತ್ ಸ್ವಿಚ್ಗಳನ್ನು ಆಫ್ನಲ್ಲಿ ಇಡುವುದರಿಂದಲೂ 3.2 ಮಿಲಿಯನ್ ಟನ್ ಕಾರ್ಬನ್ ಡಯಾಕ್ಸೈಡ್ ಉತ್ಪಾದನೆ ತಡೆಯಬಹುದಂತೆ!

ಅಮೆರಿಕನ್ನರು ಉತ್ಪಾದಿಸುವಷ್ಟು ಕಾರ್ಬನ್ಡಯಾಕ್ಸೈಡ್ ನಾವು ಉತ್ಪಾದಿಸುತ್ತಿಲ್ಲ ಎಂದಿರಾ? ನಿಜ. ಭಾರತೀಯ ಪ್ರಜೆಯ ಚಟುವಟಿಕೆಯಿಂದ ಉತ್ಪಾದನೆಯಾಗುವ ಕಾರ್ಬನ್ಡಯಾಕ್ಸೈಡ್ ಪ್ರಮಾಣದ 250 ಪಟ್ಟು ಹೆಚ್ಚು ಅನಿಲ ಅಮೆರಿಕದ ಪ್ರಜೆಯಿಂದಾಗಿ ಆಗುತ್ತಿದೆ. ಆದರೆ ನಮ್ಮ ನಡವಳಿಕೆಗಳು ಅವರದಕ್ಕಿಂತಲೂ ಭಿನ್ನವೇನಲ್ಲವಲ್ಲ? ಪೋಲೀಸರು ಕೇಳದಿದ್ದರೆ ನಾವೆಷ್ಟು ಮಂದಿ ನಾವಾಗಿಯೇ ಪೊಲ್ಯುಷನ್ ಚೆಕ್ ಮಾಡಿಸುತ್ತೇವೆ? ಜಾಗತಿಕ ವಾಯುಗುಣ ಬದಲಾವಣೆಯನ್ನು ತಡೆಯುವುದಕ್ಕೆ ಹೊಸ ತಂತ್ರಜ್ಞಾನಗಳು ಬೇಕು. ನಿಜ. ಆದರೆ ಈ ತಂತ್ರಜ್ಞಾನಗಳು ಸಿದ್ಧವಾಗುವುದಕ್ಕೂ ಮುನ್ನ ನಮ್ಮ ಚಟುವಟಿಕೆಗಳನ್ನು ತುಸು ಬದಲಿಸಿಕೊಂಡರೆ ಇದರ ದುಷ್ಟರಿಣಾಮವನ್ನು ಇನ್ನಷ್ಟು ಮುಂದೂಡಬಹುದಲ್ಲವೇ?

1. World Development Report 2010, World Bank, www.worldbank.org, 2009.

2. John Bonner et al., Nature Nanotechnology, doi:10.1038/nnano.2009.305 (2009)