ಪ್ರಾಚೀನಕಾಲದಿಂದಲೂ ಮಾನವನನ್ನು ಗಾಢವಾಗಿ ತಟ್ಟಿರುವ, ಮುಟ್ಟಿರುವ ವಸ್ತುಗಳಲ್ಲೂ ಭೂಮಿ ಒಂದು ಆಧಾರಭೂತ ಸಂಗತಿ. ಮಾನವನಿಗಿಂತ ಮೊದಲೇ ಹುಟ್ಟಿಬಂದ ಜೀವ ಜಂತುಗಳಿಂದಲೂ ಅನೇಕ ಕೋಟಿ ವರ್ಷಗಳ ಹಿಂದೆ ಹುಟ್ಟಿಬಂದ ಭೂಮಿ ರಚನೆ ಒಂದು ನಿಗೂಢ ವಿಷಯ. ಈ ಸೃಷ್ಟಿ ಯಾವಾಗ ಮತ್ತು ಯಾರಿಂದ ಸೃಷ್ಟಿಯಾಯಿತು? ಸೃಷ್ಟಿನಿರ್ಮಾಣ ಆಗುವ ಮುಂಚೆ ಏನಿತ್ತು? ಸೃಷ್ಟಿಯ ವಿಸ್ತಾರ ಎಷ್ಟು? ಎಂಬಿತ್ಯಾದಿ ಪ್ರಶ್ನೆಗಳಿಗೆ ಮಾನವ ಉತ್ತರ ನೀಡಲಾರ. ಆದರೆ ಕೆಲವು ಹೊಸ ಸಿದ್ಧಾಂತಗಳು ದೇವರ ಸ್ಥಾನದಲ್ಲಿ ಬೇರೆಯ ಹೆಸರಿನ ಅಂತಹದೇ ಸಿದ್ಧಾಂತಗಳನ್ನು ಹೋಲುವುದರಿಂದ ಅವುಗಳನ್ನು ‘ಮೂಢನಂಬಿಕೆಗಳು’ ಎನ್ನುವುದಕ್ಕಿಂತ ‘ಮೂಲ ನಂಬಿಕೆಗಳು’ ಎಂದು ಕರೆಯುವುದು ಸೂಕ್ತವೆನಿಸುತ್ತದೆ.

ಅಗಣಿತ ಪದಗಳು

ಮಾನವನ ಸರ್ವಮುಖದ ಅನುಭವಗಳಿಗೆ ಆಧಾರವಾದ ಭೂಮಿಯನ್ನು ಕುರಿತು ಇರುವ ಅಗಣಿತ ಪದಗಳಲ್ಲಿ ಕೆಲವನ್ನು ಮಾತ್ರ ವಿವರಿಸಬಹುದು.

ಅದಿತಿ, ಅವನಿ, ಅನಂತೆ, ಇಳೆ, ಇಡೆ, ಇಕ್ಕರು, ಇರೆ, ಇಹ, ಉರ್ವರೆ, ಕು, ಕುಂಭಿನಿ, ಗಹ್ವರಿ, ಜಗತ್ತು, ಜಗತೀತಲ, ಜಮೀನು, ತಿರೆ, ಧರೆ, ಧರಣಿ, ಧಾರಿಣಿ, ಧಾತ್ರಿ, ನಿಶ್ಚಲ, ನೆಲ, ಪ್ರಪಂಚ, ಪೃಥ್ವಿ, ಪೊಡವಿ, ಬುವಿ, ಭುವನ, ಭೂಗೋಳ, ಭೂ, ಭೂತಲ, ಭೂದೇವಿ, ಭೂಮಿಕೆ, ಭೂಮಾತೆ, ಮಹಿ, ಮೇದಿನಿ, ರುಂಹರಿ, ರೂಢಿ, ವಸುಧೆ, ವಸುಂಧರೆ, ವಸುಮತಿ, ವಿಪುಲೆ, ವಿಶ್ವಂಭರಾ, ಸ್ಥಲ, ಕ್ಷಿತಿ, ಕ್ಷ್ಮಾ, ಈ ಪದಗಳಲ್ಲಿ ಜನಪದ, ಶಿಷ್ಟಪದ ಎರಡೂ ವಿಧದ ಬಳಕೆ ನುಡಿಗಳನ್ನು ಕಾಣಬಹುದಾಗಿದೆ.

ಪುರಾಣ

ಜಗತ್ತಿನಾದ್ಯಂತ ಭೂಮಿಯನ್ನು ಭೂಮಾತೆ ಅಥವಾ ಭೂದೇವಿ ಎಂದು ತಿಳಿದು ಪೂಜಿಸುವುದು ಬಹುಶಃ ಯಾವುದೇ ವಿಧದ ಪೂಜೆಯಷ್ಟೇ ವಿಶಾಲಾರ್ಥವನ್ನು ಒಳಗೊಂಡಿದೆ. ಇದರ ಮೂಲ ಉದ್ದೇಶ ಬಿತ್ತನೆ ಮತ್ತು ಬೆಳವಣಿಗೆಯ ಮಾಂತ್ರಿಕ ಸ್ವರೂಪ, ಬೀಜವನ್ನು ಸ್ವೀಕರಿಸುವ ಭೂಮಿಯನ್ನು ದೈವತ್ವದ ಕಲ್ಪನೆಯಿಂದ ಆರಾಧಿಸುತ್ತಾರೆ. ಫಲವನ್ನು ಕೊಡುವ ಈ ಭೂಮಿಯನ್ನು ಸಾಮಾನ್ಯವಾಗಿ ಸ್ತ್ರೀ ಅಂದರೆ ಮಾತೃದೇವತೆ ಎಂದೇ ತಿಳಿಯುತ್ತಾರೆ. ನಮ್ಮ ಜಾನಪದರು ಮೂಲತಃ ಮಳೆರಾಜನನ್ನು ಗಂಡು, ಭೂಮಿಯನ್ನು ಹೆಣ್ಣು ಎಂಬ ಅರ್ಥ ಕೊಡುತ್ತಾರೆ. ಜಾನಪದರ ದೃಷ್ಟಿಯಲ್ಲಿ ಇವೆರಡು ಗಂಡು-ಹೆಣ್ಣು ಎಂಬ ಕಲ್ಪನೆಯನ್ನು ಪಡೆದುಕೊಂಡಿವೆ.

ಪುರಾಣ

ಭೂಮಿದೇವಿ ಮಹಾವಿಷ್ಣುವಿನ ಹೆಂಡತಿ. ವರಾಹಕಲ್ಪ (ಅವತಾರ)ದಲ್ಲಿ ಹಿರಣಾಕ್ಷ ಭೂಮಿಯನ್ನು ಎತ್ತಿಕೊಂಡು ಹೋಗಿ ನೀರಿನಲ್ಲಿ ಮುಳಗಿದನು. ಮಹಾವಿಷ್ಣುವು ವರಾಹರೂಪವನ್ನು ತಾಳಿ ನೀರಿಗಿಳಿದು ದಾಡೆಯ ಮೇಲೆ ಹೊತ್ತು ಭೂಮಿಯನ್ನು ಮೇಲೆ ತಂದನು. ಹೀಗೆ ಮೇಲೆ ಬಂದ ಭೂಮಿಯು ನೀರಿನ ಮೇಲೆ ಕಮಲದ ಹೂವಿನಂತೆ ತೇಲುತ್ತಿರುವುದನ್ನು ಕಂಡು ಭೂದೇವಿ ಸಂತೋಷಗೊಂಡು ಸುಂದರವಾದ ರೂಪದಿಂದ ಅಲ್ಲಿ ನಿಂತಳು. ಸೂರ್ಯರ ಕಾಂತಿಯನ್ನುಳ್ಳ ಭೂದೇವಿಯನ್ನು ಕಂಡು ಮಹಾವಿಷ್ಣು ಅವಳಲ್ಲಿ ಅನುರಕ್ತನಾಗಿ ದೇವ ವರ್ಷದವರೆಗೂ ಅವಳೊಡನೆ ಸಂಭೋಗ ಮಾಡಿದನು. ಆ ವೇಳೆಯಲ್ಲಿಯೇ ಭೂಮಿದೇವಿ ಮಹಾವಿಷ್ಣುವಿನ ಹೆಂಡತಿಯಾಗುವುದು ಇವರಿಬ್ಬರ ಸಂಬಂಧದಿಂದಾಗಿ ಮಂಗಲ ಎಂಬ ಮಗನೊಬ್ಬ ಹುಟ್ಟಿದನು.

ಹಿರಣಾಕ್ಷ ಎಂಬ ಅಸುರನಿಂದ ಭೂಮಿದೇವಿಗೆ ನರಕಾಸುರ ಹುಟ್ಟಿದನು. ಹಿರಣಾಕ್ಷನೇ ಹಂದಿಯ ರೂಪದಲ್ಲಿ ಭೂಮಿದೇವಿಯನ್ನು ತನ್ನ ದಾಡೆಯ ಮೇಲಿಟ್ಟುಕೊಂಡು ಪಾತಾಳಕ್ಕೆ ಹೋದನು. ಹೀಗೆ ಭೂಮಿದೇವಿಯು ಅವನ ಸ್ಪರ್ಶವನ್ನು ಪಡೆದ ಮೇಲೆ ಗರ್ಭಿಣಿಯಾದಳು. ನರಕಾಸುರ ಈ ರೀತಿಯ ಸ್ಪರ್ಶದಿಂದ ಹುಟ್ಟಿದನೆಂದು ಭಾಗವತದ ದಶಮ ಸ್ಕಂದದಲ್ಲಿ ಹೇಳಿರುವುದನ್ನು ಕಾಣಬಹುದು.

[1]

ಪುರಾಣ

ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ ಪಾರ್ವತಿಯು ಭೂಮಿದೇವಿಗೆ ಶಾಪ ಹಾಕಿದ ಕಥೆಯನ್ನು ಹೇಳಲಾಗಿದೆ. ಒಮ್ಮೆ ಶಿವ ಮತ್ತು ಪಾರ್ವತಿಯರು ವರ್ಷಗಟ್ಟಲೇ ಲೈಂಗಿಕ ಸುಖದಲ್ಲಿ ನಿರತರಾಗಿದ್ದಾಗ ಭೂಮಿಯು ಅಡಿಯಿಂದ ನಡುಗಲಾರಂಭಿಸಿತು. ದೇವದೇವತೆಗಳೆಲ್ಲಾ ಶಿವನ ಬಳಿಗೆ ಹೋಗಿ ಭೋಗದಿಂದ ವಿಮುಖನಾಗುವಂತೆ ಬೇಡಿಕೊಂಡರು. ಶಿವನು ಒಪ್ಪಿಕೊಂಡನು. ಆದರೆ ಶಿವನಿಂದ ಹೊರಚಲ್ಲಿದ ವೀರ್ಯವು ಭೂಮಿಯ ಮೇಲೆ ಬಿದ್ದಿತು. ಇದರಿಂದ ಕೋಪಗೊಂಡ ಪಾರ್ವತಿಯು ಭೂಮಿದೇವಿಗೆ “ಭೂಮಿದೇವಿ” ನೀನು ನಾನಾ ರೂಪಗಳನ್ನು ತಾಳಿ ಹಲವರ ಹೆಂಡತಿಯಾಗು. ಒಬ್ಬ ಮಗನಿಗೆ ಜನ್ಮ ಕೊಡುವ ಕಾರ್ಯದಿಂದ ನನ್ನನ್ನು ತಡೆದದ್ದಿರಿಂದ ಮುಂದೆ ನಿನಗೂ ಮಕ್ಕಳು ಆಗದೆ ಇರಲಿ ಎಂದು ಶಾಪಕೊಟ್ಟಳು.[2]

ಮೇಲಿನ ಮೂರು ಪುರಾಣಗಳನ್ನು ಪರಾಮರ್ಶಿಸಿ ನೋಡಿದಾಗ, ಅವುಗಳಲ್ಲಿ ಸತ್ಯ ಸಂಗತಿಗಳನ್ನು ಹೇಳುವುದು ಕಷ್ಟ ಸಾಧ್ಯವಾದರೂ, ಈ ಪುರಾಣಗಳ ಹಿನ್ನೆಲೆಯಲ್ಲಿ ಎಷ್ಟೋ ವಾಸ್ತವ ಹುದುಗಿಕೊಂಡಿರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು.

ಭೂಮಿ : ಜನಪದ ಹಾಡುಗಳಲ್ಲಿ

“ಭೂಮಿದೇವಿ ನಿನ್ನ ಮಗಳೆಲ್ಲಿ ಹೋದಳು
ನೀನರಿಯದ ಸ್ಥಳವಿಲ್ಲ
ಹೋಗಬಹುದೇ ಜಗಜಗದಾ ಅಗ್ನೀಲಿ
ಹೋಗಬಹುದೇ ಗಗನವನು
ಹೋಗಬಹುದೇ ಗಗನದಗಲದುರಿಯ ನಂ
ಮೃಗ ಬೈಲಿಗಾಯ್ತಲ್ಲೋತಮ್ಮ”
(ರಾಮಾಯಣದ ಕಥೆಗಳು)”[3]

“ದೇವರಾಯನವ ಭೂಮಿಯೆಲ್ಲ ಹು
ಟ್ಟಿಸಿದ ಆಟದೊಳಗ
ಬರೀ ಭೂಮಿಯೊಳಗೇನು ಮೋಜು ಅಂತ
ನೆನಿದ ಮನಸಿನೊಳಗ;
ಮನಸಿಗೆ ಬಂದ್ಹಾಂಗ ಮಾಡಬಲ್ಲನವ
ಒಂದ ಚಣದಾಗ
ಗಂಡು-ಹೆಣ್ಣುಗಳ ಹುಟ್ಟಿಸಿ ಪ್ರೀತಿಯ
ಇಟ್ಟವರೆದಿಯಾಗ”
(ನಲ್ವಾಡುಗಳು)”[4]

“ಯಾವ ದೇವರಿಗಿಂತ ಮಾಸಿಸದೇವರ ಕಟ್ಟ
ಭೂಮಿನೇ ಹೊತ್ತಿ ತಲಿಬಾರಾ! ಮಾಸಿಸದೆವು
ಗಂಗೀದಲ್ ಹೋಗಿ ಸೆರಗೊಡ್ಡಿ ! ಏನೆಂಬೂದು
ಅರ್ದ ಬಾರಗಳ ಇಳಿಸಕ್ಕ”[5]
(ಕಾರವಾರ ಜಿಲ್ಲೆಯ ಜನಪದ ಗೀತೆಗಳು)

“ಬಿತ್ತುವ ತಮ್ಮಯ್ಯ ಎತ್ತಿಗೇನಂದಾನ
ಹತ್ತು ಖಂಡಗ ಬೆಳಿಲೆಂದ ! ಭೂಮಿತಾಯಿ
ಮುತ್ತಿನುಡಿಯಕ್ಕಿ ನಿನಗೆಂದ”
(ಗರತಿಯ ಹಾಡು)”[6]

“ಇಂದ್ರಲೋಕ
ಚಂದ್ರಲೋಕ
ಭೂಮಿ ಜಯಮಂಗಳ
ನೆತ್ತಿಯಲ್ಲಿ ಬುಗಡಿ ಚುಕ್ಕಿ
ರಾಮ ರುಕ್ಮರ”
(ಜನಪದ ಶಿಶುಪ್ರಾಸಗಳು)”[7]

ಪಂಚಭೂತದ ಪರಿಕಲ್ಪನೆ ಕುರಿತು ಲಂಬಾಣಿಗರು ವರ್ಣಿಸುವ ಒಂದು ಪದ್ಯ
“ಪಾಂಚ ತತ್ವೇರೊ ದಿವೊ ಲಗಾನ
ದೂರ ಹಟಾಯೋ ಅಂಧಕಾರೇನ
ಪಾಂಚಿ ತತ್ವೇರ ನಾಮ ವಾಚನ
ಆಕಾಶ, ವಾಯುರೆ, ಅಗ್ನಿ
ವಜಿ ಜಲ, ಪೃಥ್ವಿರೆ ಪಾಂಚಿ”
(ಗೋರೂರ ಗೀದ)”[8]

ಮೇಲಿನ ಕನ್ನಡ ಜನಪದ ಹಾಡುಗಳನ್ನು ಗಮನಿಸಿದಾಗ ಭೂಮಿಯನ್ನು ಕುರಿತು ಜನಪದದ ಪರಿಕಲ್ಪನೆಗಳ ಪರಿಚಯವಾಗುತ್ತದೆ. ಭೂದೇವಿಯನ್ನು ಕುರಿತು ಜಾನಪದರು ಆಕಾಶವು ಬಹಳ ದೂರದ ಸ್ಥಳ, ಅಲ್ಲಿಗೆ ಕನ್ಯೆ ಕೊಡಲು ಹಿಂಜರಿಯುವ ಕಲ್ಪನೆ ರಾಮಾಯಣದ ಗೀತೆಗಳಲ್ಲಿ ಬರುತ್ತದೆ. ಭಗವಂತನು ಈ ಭೂಮಿಯನ್ನು ಒಂದು ಕ್ಷಣದಾಗ ಹುಟ್ಟಿಸಿದ, ಅವನು ಮನಸ್ಸು ಮಾಡಿದರೆ ಬೇಕಾದುದನ್ನು ಮಾಡಬಲ್ಲನವ ಎಂದು “ನಲ್ವಾಡುಗಳು” ಹಾಡುಗಳಲ್ಲಿ ಬರುತ್ತದೆ. ಮಹಾಶೇಷನು ತನ್ನ ಅರ್ಧ ಭಾರವನ್ನು ಇಳಿಸಲು ಗಂಗೆಯ ಹತ್ತಿರ ಕೇಳಿಕೊಂಡಾಗ, ಗಂಗೆ ಮಹಾಶೇಷನಿಗೆ ಶಿರಸಿಯ ಸೀತಮ್ಮನ ಹತ್ತಿರ ಹೋಗಲು ತಿಳಿಸಿದಳು. ಅಂತೆಯೇ ಮಹಾಶೇಷ ಮಾರಿಕಾಂಬೆಯ ಮುಂದೆ ತನ್ನ ಕಷ್ಟವನ್ನು ತೋಡಿಕೊಳ್ಳುತ್ತಾನೆ ಎಂಬ ಕಲ್ಪನೆ, ಕಾರವಾರ ಜಿಲ್ಲೆಯ ಜನಪದ ಗೀತೆಗಳು ಎಂಬ ಜನಪದ ಹಾಡಿನಲ್ಲಿದೆ. ಭೂಮಿತಾಯಿಯನ್ನು ಕುರಿತು ಜನಪದ ತ್ರಿಪದಿಗಳಲ್ಲಿ ಸಾಕಷ್ಟು ಪ್ರಸ್ತಾಪ ಬರುತ್ತದೆ. ರೈತನು ಭೂದೇವಿ ಮತ್ತು ಎತ್ತುಗಳಿಗೆ ದೇವತೆಗಳೆಂದು ಪೂಜಿಸುವುದು ಸರ್ವೇಸಾಮಾನ್ಯವಾದ ಸಂಗತಿ. ತಮ್ಮ ಹೊಲ ಗದ್ದೆಗಳಲ್ಲಿ ಹುಲುಸಾಗಿ ಬೆಳೆದುನಿಂತ ಪೈರನ್ನು ಫಲಬಂದ ತಕ್ಷಣವೇ ಅವಳಿಗರ್ಪಿಸುವುದು ಅವಳ ಆರಾಧನೆಯ ಒಂದು ಭಾಗವೇ ಆಗಿದೆ. ನಮ್ಮ ಜನಪದ ಸಂಸ್ಕೃತಿಯ ಉತ್ಪನ್ನಗಳಲ್ಲಿ ‘ಶಿಶುಪ್ರಾಸಗಳು’ ಮುಖ್ಯವಾದವುಗಳಾಗಿವೆ. ಮಕ್ಕಳ ವಯೋಮಾನಕ್ಕೆ ಸಹಜವಾದ ಕುತೂಹಲ ಬೆಳೆಯುತ್ತದೆ. ಇಂದ್ರಲೋಕ, ಚಂದ್ರಲೋಕ ಭೂಮಿ ಜಯಮಂಗಳ ಇತ್ಯಾದಿಯಾಗಿ ವರ್ಣಿಸುತ್ತಾರೆ. ಇಂಥ ಕಡೆಗಳಲ್ಲಿ ಮಕ್ಕಳ ಭಾವನಾತ್ಮಕ ಲೋಕದ ಪರಿಚಯನಮಗಾಗುತ್ತದೆ. ಪಂಚಭೂತದ ಪರಿಕಲ್ಪನೆ ಬಗ್ಗೆ “ಗೋರೂರ ಗೀದ” (ಲಂಬಾಣಿ ಹಾಡು) ಪುಸ್ತಕದಲ್ಲಿ ಐದು ತತ್ವದ ದೀಪವನ್ನು ಹಚ್ಚಿ ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಿದನು ಎಂಬ ವರ್ಣನೆ ಬರುತ್ತದೆ.

ಜಾನಪದರು ಭೂಮಿಯನ್ನು ಮಾತೃ-ದೇವತೆ ಎಂದು ಪೂಜ್ಯ ಭಾವನೆಯಿಂದ ಕಂಡಿದ್ದಾರೆ. ಭೂಮಿಯನ್ನೇ ಹಾಸಿ ಆಕಾಶವನ್ನೇ ಹೊದ್ದು ನಿಸರ್ಗದೊಡನೆ ಏಗುತ್ತಾ ಬದುಕುವ ಜಾನಪದೀಯರದ್ದು ಸಾಹಸಮಯ ಜೀವನ. ನಿಸರ್ಗದ ಕ್ರಿಯೆಯೊಂದಿಗೆ ತಾವು ಕ್ರಿಯಾ ಶೀಲರಾದವರು. ಯಾವುದಕ್ಕೂ ತಮ್ಮ ಸುತ್ತಲಿನ ಭೌಗೋಲಿಕ ಪರಿಸ್ಥಿತಿ ಪರಿಸರಗಳೊಡನೆ ನೇರವಾಗಿ ಸಂಘರ್ಷಕ್ಕೆ ಇಳಿದವರು. ಭೂತಾಯಿಯ ಜೊತೆ ಅವರಿಗೆ ಎಂಥ ಬಿಡಿಸದ ನಂಟಿತ್ತೋ ಬಲ್ಲವರಾರು? ನಿದ್ದೆ ತಿಳಿದು ಎದ್ದ ಬೆಳಗಿನಲ್ಲಿ

ಏಳೂತನಾನೆದ್ದು ಯಾರ್ಯಾರ ನೆನೆಯಲಿ
ಏಳ್ಳು ಜೀರಿಗೆ ಬೆಳೆಯೋಳ ಭೂಮಿತಾಯಿ
ಎದ್ದೊಂದು ಗಳಿಗಿ ನೆನದೇನ ||

ಎಂದು ರೈತನು ಭೂಮಿತಾಯಿಯನ್ನು ಸ್ತುತಿಸುತ್ತಾನೆ. ಮಾನವನ ಬದುಕಿಗೆ ಭೂಮಿಯೇ ಸರ್ವಸ್ವ ಎಲ್ಲ ಸುಖ ದುಃಖಗಳೂ, ತಾಳ್ಮೆ, ಸಹನೆ, ಆಶ್ರಯ ಮುಂತಾದ ಗುಣಗಳಿಗೆ ಹಡೆದ ತಾಯಿಯಷ್ಟೇ, ಭೂತಾಯಿ ಕೂಡ ಹಿರಿಮೆಯುಳ್ಳವಳು ಎಂದು ನಂಬಿಕೆ. ಭೂಮಿತಾಯಿ ಬಂಜೆಯಾದರೆ ಮನುಷ್ಯ ಮಾತ್ರವಲ್ಲ ಇಡೀ ಜೀವಕೋಟಿಯೇ ನಿರ್ನಾಮವಾಗುತ್ತದೆ. ಭೂಮಿತಾಯಿಯ ತೊಡೆಯ ಮೇಲೆ ಹಾಯಾಗಿ ಮಲಗಿ ನಕ್ಷತ್ರಲೋಕದ ವೈಚಿತ್ರಗಳನ್ನು ಊಹಿಸಿದರು. ತನ್ನೆಲ್ಲ ಆಗು ಹೋಗುಗಳಿಗೆ ಕಾರಣಿಭೂತಳಾದ ಭೂಮಿತಾಯಿಯನ್ನು ಮರೆತರೆ ತಮ್ಮ ಸರ್ವನಾಶವಾಗುತ್ತದೆಂದು ಮನುಷ್ಯ ಅರಿತುಕೊಂಡಿದ್ದಾನೆ.

ಸ್ಮಿತ ಥಾಮ್ಸನ್ ಅವರ ಗ್ರಂಥದಲ್ಲಿ ಭೂಮಿಗೆ ಸಂಬಂಧಿಸಿದ ಆಶಯಗಳ ಪಟ್ಟಿಯಿದೆ. ಭಾರತೀಯ ಮತ್ತು ಕನ್ನಡ ಜಾನಪದಕ್ಕೆ ಸಂಬಂಧಿಸಿದ ಆಶಯಗಳು.

೧.       ಆಕಾಶ ತಂದೆ ಮತ್ತು ಭೂಮಿ ತಾಯಿ : ಎ, ೬೨೫
೨.       ಭೂಮಿ ಮತ್ತು ಆಕಾಶದ ಮದುವೆ : ಟಿ, ೧೨೬,೩
೩.       ಆಕಾಶ ಲೋಕದ ಹೆಣ್ಣು ಭೂಮಿಯ ಲೋಕದ ಗಂಡನ್ನು ಮದುವೆಯಾಗುವುದು ಟಿ. ೧೧೧.೨
೪.       ಆಕಾಶದಿಂದ ಭೂಮಿಗೆ ಬಿದ್ದ ಹೆಣ್ಣು : ಎ. ೨೧.೧

ಭೂಮಿ : ಜನಪದ ಗಾದೆಗಳಲ್ಲಿ

೧.       ಭೂಮಿ ಹುಣ್ಣಿಮೆ ದಿನ ಕಾಕೆ ಮರಿ ಮರೆತ್ಹಂಗೆ
೨.       ಭೂಮಿಯನ್ನು ಆದಿಶೇಷ ಹೊತ್ತಿದ್ದರೆ
ಆದಿಶೇಷನನ್ನು ಹೊತ್ತಿರುವವರು ಯಾರು? (ವೈಜ್ಞಾನಿಕ ದೃಷ್ಟಿ)
೩.       ಒಡೆಯನಿಲ್ಲದ ಭೂಮಿ ಕೆಡಕಿಗೆ ಕಾರಣ
೪.       ಒಂದು ತೋಟ, ಅದರಲ್ಲೊಂದು ಪಾರಿವಾಳದ ಮಚ್ಚು ಇದ್ದರೆ ಭೂಮಿಗೆ ಸ್ವರ್ಗ ಬಂದ ಹಾಗೆ (ಸ್ಪೆಯಿನ್ ಗಾದೆ)
೫.       ಬರೀ ಬಿಸಲಾದರೆ ಭೂಮಿ ಮರಭೂಮಿಯಾಗುವುದು (ಜೆಕೋಸ್ಲವೇಕಿಯ ಗಾದೆ)
೬.       ದೇವಲೋಕಕ್ಕೆ ಹೋದರೂ ಭೂಲೋಕ ತಪ್ಪದು?
೭.       ಈಶ್ವರಾಂಶವಿಲ್ಲದೆ ಇಳೆಯನ್ನು ಆಳುವುದಕ್ಕೆ ಆಗುವುದಿಲ್ಲ.
೮.       ಭೂಮಿಗಿಂತ ಅಗಲವಿಲ್ಲ, ಆಕಾಶಕ್ಕಿಂತ ಎತ್ತರವಿಲ್ಲ.
೯.       ಆಕಾಶದ ಮಳೆ, ಭೂಮಿತಾಯಿ ಬೆಳೆ.

ಭೂಮಿ : ಕನ್ನಡ ಗಾದೆಗಳಲ್ಲಿ

೧.       “ಎಲ್ಲಾ ಅವನಿಯಲ್ಲಿ ಹೇಮವಿರ್ಪುದೆ?
ಇಪ್ಪುದೊಂದು ಠಾವಿನಲ್ಲಿ”
(ಪ್ರಭುದೇವರು ‘ಅಲ್ಲಮ ವಚನಗಳು’ -೧೧೬೦)

೨.       “ವಾರಣಾಧಿಪತಿಯಪ್ಪೈರಾವಣಂ ತಾಳ್ಬುವಂತೆವೊಲೇಂ ಬಾಲ
ಪಿ ಪೀಲಿಕಂ ತಳುವುದೇ ವಿಶ್ವಂಭರಾ ಭಾರಮಂ”
(ಕಮಲಭವ-ಶಾಂತೀಶ್ವರ ಪುರಾಣಂ-೧೨೩೫)

೩.       “ಧರೆ ಬೀಜಂಗಳ ನುಂಗೆ ಹರ ಕೊಲ್ಲಲ್ ಪರ ಕಾಯ್ವನೇ”?
(ಪುಲಿಗೆರೆ ಸೋಮನಾಥ-ಶೋಮೇಶ್ವರ ಶತಕ -೧೪೦೦)

೪.       “ಧರೆ ನನ್ನದೆಂದು ನೆನೆವರೆ? ಸರ್ವರು ಮುನ್ನ ಪಿಡಿದಾಳ್ದುದಲ್ತೆ?”
(ರತ್ನಾಕರವರ್ಣಿ-ಭರತೇಶ ವೈಭವ -೧೫೬೦)

೫.       “ತಿರೆಯೊಳ್ ಕಾಲ್ಗೆಡೆ ಬೊಟ್ಟೊಡಂ ತಿರೆಯನೇ
ಆಧಾರವಂ ಗೆಯ್ವವೋಲ್”
(ಮುದ್ದಣ ‘ಅದ್ಭುತ ರಾಮಾಯಣ’-೧೯೦೦)

ಭೂಮಿ : ಮಳೆ ನಕ್ಷತ್ರಗಳಲ್ಲಿ

ಪಂಚಾಂಗದ ಪ್ರಕಾರ ಚೈತ್ರಮಾಸ ಆರಂಭವಾಗಿ ಯುಗಾದಿಯ ನಂತರ ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಮತ್ತು ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ೧೪ ದಿವಸಕ್ಕೊಂದರಂತೆ ಒಟ್ಟು ೨೭ ನಕ್ಷತ್ರಗಳು ಬರುತ್ತವೆ.

ಈ ಇಪ್ಪತ್ತೇಳು ಮಳೆ ನಕ್ಷತ್ರಗಳಲ್ಲಿ ಹನ್ನೆರಡು ನಕ್ಷತ್ರಗಳಲ್ಲಿಯೇ ಕಾಲ ಮೇಘವೆನ್ನುತ್ತಾರೆ. ಉಳಿದ ಮೇಘಗಳಿಗೆ ಅಕಾಲ ಮೇಘವೆಂಬ ಹೆಸರು ರೋಹಿಣ್ಯಾ ಸ್ವಾತಂತ್ರ್ಯವಾಗಿ ಹನ್ನೆರಡು ಮಳೆಗಳು ಆಗದೆ ಹೋದರೆ ಭೂಮಿಯಲ್ಲಿ ಯಾವ ಬೆಳೆಯೂ ಬರುವುದಿಲ್ಲ. ಅಶ್ವಿನಿಯಿಂದ ತೊಡಗಿ ಹುಬ್ಬ ಮಳೆಯವರೆಗೆ ಮುಂಗಾರು ಆದರೆ, ಉತ್ತರೆಯಿಂದ ಅನುರಾಧ ಮಳೆಯವರೆಗೆ ಹಿಂಗಾರು. ಈ ಕ್ರಮಕ್ಕೆ ಅನುಗುಣವಾಗಿಯೇ ಭೂಮಿಯ ಉಳುಮೆ, ಬಿತ್ತನೆ, ಆರೈಕೆ, ಕಟಾವು ಒಕ್ಕಣೆ ಮುಂತಾದವುಗಳನ್ನು ಕ್ರಮಗೊಳಿಸಿಕೊಂಡಿದ್ದಾರೆ. ಪ್ರತಿಯೊಂದು ಮಳೆಯ ವಿಶಿಷ್ಟ ಲಕ್ಷಣಗಳನ್ನು ರೈತ ಗುರುತಿಸಿದ್ದಾನೆ. ಪ್ರತಿ ಮಳೆಗೆ ಸಂಬಂಧಿಸಿದಂತೆ ಕಂಡು ಕೊಂಡಿರುವ ಪ್ರಚಲಿತ ಗಾದೆಮಾತುಗಳು ಅವನ ಅನುಭವದ ಮೊತ್ತದಂತಿದೆ. ಮಳೆ ಜಾನಪದ ಸ್ಮೃತಿಯಂತಿವೆ.”[9]

 

ಭೂಮಿಗೆ ಸಂಬಂಧಿಸಿದ ನಂಬಿಕೆಗಳು

. ದೈವತ್ವಕ್ಕೆ ಸಂಬಂಧಿಸಿದ ನಂಬಿಕೆಗಳು

೧. ಭೂಮಿಯನ್ನು ಭೂಮಿತಾಯಿ ಎಂದೂ ತಾಳ್ಮೆ, ಸಹನೆ, ಆಶ್ರಯ ಮುಂತಾದ ಗುಣಗಳಿಗೆ ಹೆಸರಾದ ಹಡೆದ ತಾಯಿಗಿಂತಲೂ ಭೂತಾಯಿ ಹೆಚ್ಚಿನವಳೆಂಬ ನಂಬಿಕೆ.

೨. ಭೂಮಿ ಆಶ್ರಯದಾತಗಳಾದ ದೇವತೆ, ಅನ್ನ ಆಶ್ರಯಕ್ಕೆ ದಾರಿಯಾದ್ದರಿಂದ ಭೂಮಿಯ ಮೇಲಿನ ಮಾನವರು ಸೂಕ್ತ ನೈತಿಕ ಜೀವನ ನಡೆಸಬೇಕು. ಏಕೆಂದರೆ ಭೂಮಿಯು ಪಾಪ ಪುಣ್ಯಗಳ ಸಮತೂಕದ ಆಧಾರದ ಮೇಲೆ ನಿಂತತಾಣ.

೩. ಭೂಮಿ ಸಕಲ ವಸ್ತುಗಳನ್ನು ತನ್ನಲ್ಲಿ ನುಂಗಿಕೊಂಡು ಜಗತ್ತನ್ನು ಸ್ವಚ್ಛಗೊಳಿಸುವ ತಾಯಿಯೂ ಅಹುದು. ಈ ಭೂಮಿಯ ಮೇಲೆ ಎಷ್ಟು ಕೊಳೆ ಇದ್ದರೂ ಇದನ್ನು ಆಕೆ ತನ್ನಲ್ಲಿ ತೆಗೆದುಕೊಳ್ಳುತ್ತಾಳೆ.

೪. ಭೂಮಿಗೆ ಆದಿ ಅಂತ್ಯಗಳಿಲ್ಲ, ಹೊಲಸೆಂಬುದಿಲ್ಲ, ಆದರೂ ಆಕೆಯನ್ನು ಶುದ್ಧಿಯಾಗಿಡುವುದು ಎಲ್ಲರ ಕರ್ತವ್ಯ. ಆದ್ದರಿಂದ ಆಕೆಯಲ್ಲಿರುವ ಪೂಜ್ಯಭಾವನೆಯಿಂದ ಮಣ್ಣನ್ನು ಅನೇಕ ರೂಪದಲ್ಲಿ ಮತ್ತು ರೀತಿಯಲ್ಲಿ ಪೂಜಿಸಲಾಗುವುದು.

೫. ಭೂಮಿಯನ್ನು ದೇವರೆಂದು ಪೂಜಿಸಿದರೂ, ಅವಳನ್ನು ಸಂಪೂರ್ಣ ರೂಪದಿಂದ ಪೂಜಿಸಬೇಕೆ ಹೊರತು ಸಂಕೀರ್ಣ ರೂಪದಿಂದಲ್ಲ ಎಂಬುದು ನಂಬಿಕೆ. ಆದ್ದರಿಂದಲೇ ಅವಳಿಗೆ ಗುಡಿಗೋಪುರುಗಳು ನಿಷಿದ್ಧ, ಹಳ್ಳಿಗಳಲ್ಲಿ ಒಂದು ಪವಿತ್ರ ವೃಕ್ಷದ ಕೆಳಗಡೆ ಕಲ್ಲು ಮಣ್ಣು ಮಡಕೆ ಗಾಜಿನ ಚೂರುಗಳಲ್ಲಿ ಒಂದು ಗುಡ್ಡವನ್ನು ಮಾಡಿ, ಅಲ್ಲಿಗೆ ಜನರು ಸಾಮೂಹಿಕವಾಗಿ ಒಂದು ಹರಕೆ ಕಾಣಿಕೆಗಳ ಸಮೇತ ಪೂಜೆ ಮಾಡುತ್ತಾರೆ.

೬. ಗಂಗೆಯು ನೀರಲ್ಲಿ ಬಿದ್ದವನನ್ನು ನೂರುಬಾರಿ ತೇಲಿಸುವಳೆಂದೂ, ಭೂಮಿಯು ಸಹನೆಯ ಮೂರ್ತಿ ಎಂದೂ ತಿಳಿದಿದ್ದೇವೆ.

೭. ಭೂಮಿ ಬಾಯಿ ಬಿಡುವುದೂ, ಜಲಪ್ರಳಯವಾಗುವುದೂ ಮನುಷ್ಯಕೋಟಿಯ ಅವನತಿಗಾಗಿಯೇ, ಇಂಥ ದುಷ್ಟ ಶಿಷ್ಟ ಶಕ್ತಿಗಳೆರಡನ್ನೂ ಒಳಗೊಂಡಿರುವ ಕಾರಣ ಅವನ್ನು ಭಯ ಭಕ್ತಿಯಿಂದ ಆರಾಧಿಸುವುದು ನಡೆದು ಬಂದಿದೆ.

೮. ಸ್ತ್ರೀಯರಿಗೆ ಅತ್ಯಂತ ಕಷ್ಟಕರವಾದ ಪ್ರಸಂಗಗಳು ಬಂದಾಗ, ಕೆಲವು ಮಂತ್ರಗಳನ್ನುಚ್ಛರಿಸುತ್ತಾ ಭೂಮಿಗೆ ನಮಸ್ಕರಿಸಿದರೆ ಪರಿಹಾರವಾಗುವುದೆಂಬ ಭಾವನೆ ಇತ್ತು.

೯. ಸ್ತ್ರೀ ಅವಮಾನವಾಗುವ ಸಂದರ್ಭದಲ್ಲಿ ಭೂಮಿಯು ಬಾಯಿಬಿಟ್ಟು ಅವಳನ್ನು ಸೇರಿಸಿಕೊಳ್ಳುವುದೆಂಬ ನಂಬಿಕೆ.

೧೦. ಸೀತೆಯನ್ನು ಅವಳ ತಾಯಿಯಾದ ಭೂದೇವಿಯು ತನ್ನ ಮಡಿಲಿಗೆ ಸೇರಿಸಿಕೊಂಡಳು ಎಂಬ ನಂಬಿಕೆ.

. ನಿಸರ್ಗಕ್ಕೆ ಸಂಬಂಧಿಸಿದ ನಂಬಿಕೆಗಳು

೧. ಸಕಲ ಪ್ರಾಣಿಗಳ, ಗಿಡ-ಮರಗಳ, ಜಲನಿಧಿಗಳ ತಾಣ ಈ ಭೂಮಿ. ಇದು ವಿಶಾಲವಾಗಿ, ಚಪ್ಪಟೆಯಾಗಿದೆ ಎಂಬುದು ನಂಬುಗೆ.

೨. ಪಾಪ ಹೆಚ್ಚಾದಾಗ ಈ ಭಾರವನ್ನು ತಾಳಲಾರದೆ ಭೂ-ತಾಯಿ ಭೂಕಂಪನ ಮುಂತಾದವುಗಳನ್ನು ತಂದು ಇಂತಹ ವ್ಯಕ್ತಿಗಳನ್ನು ತನ್ನಲ್ಲಿ ನುಂಗಿ ತನ್ನ ಭಾರವನ್ನು ಕಡಿಮೆ ಮಾಡಿಕೊಳ್ಳುತ್ತಾಳೆ. ಆದ್ದರಿಂದ ಜಾನಪದರು ಯಾರನ್ನಾದರೂ ಬೈಯ್ಯುವಾಗ ಭೂಮಿಗೆ ಭಾರವಾಗಬೇಡವೆಂದು ಬಯ್ಯುತ್ತಾರೆ.

೩. ಜನಪದರ ದೃಷ್ಟಿಯಲ್ಲಿ ಭೂಮಿಯು ಸೂರ್ಯ-ಚಂದ್ರರಿಗಿಂತಲೂ ದೊಡ್ಡದು. ಸೂರ್ಯ ಚಂದ್ರರು ಭೂಮಿಯ ಸುತ್ತ ತಿರುಗುತ್ತಾರೆ.

೪. ಭೂಮಿ-ಸೂರ್ಯ ಮುಳುಗುವುದನ್ನು ಒಡಪಿನ ರೀತಿಯಲ್ಲಿ, ತಾಯಿಯ ಹೊಟ್ಟೆಯಲ್ಲಿ ಮಗ ಹೋಗುತ್ತಾನೆ ಎಂದೂ ಹೇಳುತ್ತಾರೆ.

೫. ಸೂರ್ಯ ಚಂದ್ರರು ದೇವರ ಮಕ್ಕಳು, ಇವರ ತಾಯಿ ಭೂದೇವಿ.

೬. ಭೂದೇವಿ, ಗಂಗಾಮಾತೆಯರು ಈ ಪ್ರಪಂಚದ ಸ್ಥಿತಿ – ಲಯಗಳೆರಡಕ್ಕೂ ಕಾರಣ ಕರ್ತರಾಗಿದ್ದಾರೆ. ಅತ್ಯಂತ ಕ್ಷಮಾಶೀಲರೂ ಸಹನಾಭೂತಿಯುಳ್ಳವರೂ ಆಗಿದ್ದು ನಮ್ಮ ಅನೇಕ ತಪ್ಪುಗಳನ್ನು ಮನ್ನಿಸಿ ನಮ್ಮನ್ನು ಕಾಪಾಡುವರೆಂದು ಅವರನ್ನು ಆರಾಧಿಸುತ್ತ ಬಂದಿದ್ದೇವೆ.

. ವ್ವವಸಾಯಕ್ಕೆ ಸಂಬಂಧಿಸಿದ ನಂಬಿಕೆಗಳು

೧. ಭೂಮಿಯನ್ನು ನೋಯಿಸಬಾರದೆಂದು ಉಳುವಾಗ ರೈತರು ದೊಡ್ಡ ನೇಗಿಲನ್ನು ಉಪಯೋಗಿಸುವುದಿಲ್ಲ. ಅಲ್ಲದೆ ರಸಗೊಬ್ಬರ ಮುಂತಾದವನ್ನು ಹಾಕಿದರೆ ಆಕೆ ಮಲಿನವಾಗಿ ಕೋಪಗೊಂಡು ಬೆಳೆ ನೀಡುವುದಿಲ್ಲವೆಂದೂ ನಂಬುತ್ತಾರೆ.

೨. ನಮ್ಮಲ್ಲಿ ಸುಗ್ಗಿಯ ಅಧಿದೇವತೆಯೆಂದು ಗೌರಿಯನ್ನು ಪೂಜಿಸುವರು. ಸ್ತ್ರೀಯ ತಲೆಯ ಮೇಲೆ ಹೂವಿನ ಗೊಂಚಲನ್ನು ಸ್ತ್ರೀರೂಪದಲ್ಲಿ ಮಾಡಿ, ವಸ್ತ್ರ ಒಡವೆಗಳಿಂದಲಂಕರಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಈ ರೀತಿಯ ಆರಾಧನೆಗಳಿಂದ ಹರ್ಷಿಸುವ ಭೂದೇವಿ ಸಂತೃಪ್ತಳಾಗಿ ಮತ್ತಷ್ಟು ವರ್ಧಿಸುತ್ತಾಳೆ ಎಂದೇ ನಂಬಿಕೆ.

೩. ಸುಗ್ಗಿಯ ಕಾಲದಲ್ಲಿ, ಕಣದಲ್ಲಿ ಸ್ವಲ್ಪ ಧಾನ್ಯವನ್ನು ನೈವೇದ್ಯಮಾಡಿ ಪೂಜೆ ಮಾಡಿದರೆ, ಮುಂದಿನ ವರ್ಷ ಸಮೃದ್ಧಿಯಾದ ಬೆಳೆ, ಕಟ್ಟಡಗಳನ್ನು ಕಟ್ಟಲು ತಳಪಾಯ ಹಾಕುವಾಗ, ಮೊದಲನೆ ಕಲ್ಲನ್ನು ಹಾಕುವುದಕ್ಕೆ ಮುಂಚೆ ಕೆಳಗೆ ತೆಂಗಿನಕಾಯಿ, ಬೆಳ್ಳಿಯ ನಾಣ್ಯ, ಹವಳ ಮುತ್ತುಗಳನ್ನು ಒಂದು ಅರಿಸಿನ ಬಟ್ಟೆಯಲ್ಲಿ ಕಟ್ಟಿ, ಭೂಮಿಗೆ ಕಾಣಿಕೆ ಒಪ್ಪಿಸಬೇಕೆಂದು ನಂಬಿಕೆ ಇದೆ.

೪. ಭೂದೇವಿಯ ಪ್ರತಿಮಾಸದಲ್ಲಿ ಏಳುದಿನವೂ ಪ್ರತಿವಾರದಲ್ಲಿ ಸೋಮವಾರವೂ ನಿದ್ರಿಸುತ್ತಾಳೆಂದು ಬಗೆದು ಆಗ ಉಳುವುದು ಮುಂತಾದ ಆರಂಭವನ್ನು ಮಾಡದೆ ಅವಳಿಗೆ ಸಂಪೂರ್ಣ ಬಿಡುವು ಕೊಡುವರು.

. ಬಲಿಗೆ ಸಂಬಂಧಿಸಿದ ನಂಬಿಕೆಗಳು

೧. ನರಬಲಿ ಹರಕೆ ಕಾಣಿಕೆಗಳನ್ನು ನದಿಗೆ, ಭೂಮಿಗೆ ಅರ್ಪಿಸುವುದು ಎಲ್ಲಾ ದೇಶದಲ್ಲೂ ಎಲ್ಲಾ ಕಾಲದಲ್ಲೂ ನಡೆದು ಬಂದಿದೆ.

. ರೋಗರುಜಿನಗಳಿಗೆ ಸಂಬಂಧಿಸಿದ ನಂಬಿಕೆಗಳು

೧. ಆಸೆಗಳನ್ನು ಇಟ್ಟುಕೊಂಡು ಸತ್ತವರು, ತೊನ್ನ ಮುಂತಾದ ಪಾಪದಿಂದ ಬಂದ ರೋಗದಿಂದ ಸತ್ತವರನ್ನು, ಸತ್ತ ಬಾಣತಿ ಮತ್ತು ಬಸುರಿಯರನ್ನು ಕೆಳವರ್ಗಕ್ಕೆ ಸೇರಿದ ಪ್ರಾಣಿಗಳಾದ ನಾಯಿ, ಕತ್ತೆ, ಕಾಗೆ ಮುಂತಾದವನ್ನು ನೆಲದಲ್ಲಿ ಹುಗಿಯುವುದಿಲ್ಲ. ಹೀಗೆ ಮಾಡಿದರೆ ಭೂತಾಯಿ ಮೈಲಿಗೆಯಾಗುತ್ತಾಳೆಂಬ ನಂಬಿಕೆ ಇದೆ. ಆದ್ದರಿಂದ ಇವನ್ನು ಸುಡುವುದು ವಾಡಿಕೆ. ಹೀಗೆ ಮಾಡದೆ ಹೂಳಿದರೆ ಭೂಮಿ ತಾಯಿ ಮಲಿನಗೊಂಡು ತನ್ನ ಪ್ರಿಯಕರನಾದ ವರುಣನನ್ನು ಕೂಡ ಬಯಸದೆ ದೂರ ಉಳಿಯುವಳು. ಈ ಕಾರಣದಿಂದ ಮಳೆ ಬರದೆ ಬರಗಾಲ ಬರುತ್ತದೆ ಎಂಬ ನಂಬಿಕೆ ಇದೆ.

. ಇತರೇ ನಂಬಿಕೆಗಳು

೧. ಹಸುವಾಗಲಿ, ಎಮ್ಮೆಯಾಗಲಿ, ಹಾಲುಕೊಡಲು ಮೊದಲು ಮಾಡಿದಾಗ ಭೂಮಿಗೆ ಐದು ಅಥವಾ ಏಳು ತೊಟ್ಟು ಹಾಲನ್ನು ಕರೆದು ಪ್ರಥಮ ಕಾಣಿಕೆ ಅರ್ಪಿಸಿದ ನಂತರವೇ ಮನುಷ್ಯರು ಉಪಯೋಗಿಸುವುದು.

೨. ನಿಂತು ಉಚ್ಚೆಹೊಯ್ದರೆ ಭೂತಾಯಿಯ ಬಾಯಲ್ಲಿ ಹೊಯ್ದಂತೆ, ಆದ್ದರಿಂದ ಕುಂತು ಉಚ್ಚೆ ಹೊಯ್ಯಬೇಕು ಎಂಬ ನಂಬಿಕೆ.

“ಪ್ರಪಂಚದಾದ್ಯಂತ ಭೂಮಿಯನ್ನು ಸ್ತ್ರೀಯಂದೆ ಭಾವಿಸಿ ಮಾತೃದೇವತೆಯೆಂದೇ ಪೂಜಿಸುತ್ತಾರೆ. ಆದ್ದರಿಂದಲೇ ಪ್ರತಿಯೊಬ್ಬನು ತನ್ನ ದೇಶವನ್ನು ತಾಯ್ನಾಡು ಎಂದು ಸಂಬೋಧಿಸುವುದು. ಭೂಮಿಯ ಅನೇಕ ಸಸ್ಯಗಳನ್ನು ದೇವತೆಗಳೆಂದು ಪೂಜಿಸುವುದು ಸರ್ವೇಸಾಮಾನ್ಯವಾದ ಸಂಗತಿ. ಭೂದೇವಿಯ ಕೃಪೆಯಾಗದೆ ಬೆಳೆಯಾಗದೆಂದು ನಂಬಿ, ಫಲಬಂದ ತಕ್ಷಣವೇ ಅವಳಿಗರ್ಪಿಸುವುದು ಅವಳ ಆರಾಧನೆಯ ಒಂದು ಭಾಗವೇ ಆಗಿದೆ.”[10] ಜನಪದರು ತಮ್ಮ ಎಲ್ಲ ಆಗುಹೋಗುಗಳಿಗೆ ಭೂಮಿತಾಯಿಯೇ ಕಾರಣ ಎಂದು ನಂಬುತ್ತಾರೆ. ತಮ್ಮ ಎಲ್ಲ ಶ್ರೇಯಸ್ಸಿಗೆ ಅವಳೇ ಕಾರಣ ಎಂದು ತಿಳಿಯುತ್ತಾರೆ. ಅವರ ಬದುಕಿನ ಕೇಂದ್ರಶಕ್ತಿ ಭೂಮಿತಾಯಿ. ಆದ್ದರಿಂದ ಅವಳನ್ನು ಪೂಜ್ಯಭಾವನೆಯಿಂದ ಕಾಣುವುದನ್ನು ಮೇಲಿನ ನಂಬಿಕೆಗಳು ಇನ್ನಷ್ಟು ದೃಢಪಡಿಸುತ್ತದೆ. ನಿಸರ್ಗಕ್ಕೆ ಸಂಬಂಧಿಸಿದ ಕೆಲವು ನಂಬಿಕೆಗಳಲ್ಲಿ ಕೆಲವು ವೈಜ್ಞಾನಿಕ ವಾಗಿ ಸಮರ್ಥನೀಯ ನಿಯಮವಾದವು. ಭೂಮಿಗೆ ರಸಗೊಬ್ಬರ ಹಾಕಿದರೆ ಆಕೆ ಮಲಿನವಾಗಿ ಕೋಪಗೊಂಡು ಬೆಳೆ ಕೊಡುವುದಿಲ್ಲ ಎಂಬುದು ಅಂಥ ಒಂದು ನಂಬಿಕೆ. ಭೂಮಿಯಲ್ಲಿ ಹೆಚ್ಚಿನ ರಸಗೊಬ್ಬರ ಹಾಕುವುದರಿಂದ ಭುಮಿಯು ಕ್ರಮೇಣ ತನ್ನ ಸತ್ವವನ್ನು ಕಳೆದುಕೊಂಡು ಶಕ್ತಿ ಕುಂದುತ್ತದೆ. ಭೂಮಿ ಬಂಜರಾಗುವ ಸಾಧ್ಯತೆ ಇದೆ ಎಂಬ ಆಶಯ ಅರ್ಥಪೂರ್ಣವಾದುದು.

“ನಂಬಿಕೆ ಮಾನವ ಜೀವನದ ಸರ್ವಕ್ಷೇತ್ರಗಳಲ್ಲಿಯೂ ವ್ಯಾಪಿಸಿಕೊಂಡಿದೆ, ಅದೇ ಅವನ ಜೀವನವನ್ನು ರೂಪಿಸುತ್ತಿದೆ. ಅದೇ ಸಂಸ್ಕೃತಿಯ ತಿರುಳು ಎನ್ನಬೇಕಾಗುತ್ತದೆ. ಜಗತ್ತಿನ ಶ್ರೇಷ್ಠ ವಿಜ್ಞಾನಿಗಳು ಸಹ ದಿನ ಬೆಳಗಾದರೆ ನಂಬಿಕೆಗಳಿಗೆ ಆತುಕೊಂಡಿರುತ್ತಾರೆ”[11]

 

ಭೂಮಿಗೆ ಸಂಬಂಧಿಸಿದ ಜನಪದ ಕಥೆಗಳು

ಜನಪದ ಕಥೆ

ಆಕಾಶ ಮತ್ತು ರಾತ್ರಿ ಮಿನುಗುವ ತಾರೆಗಳು ಜನಪದರ ಲಕ್ಷದಲ್ಲಿ ಬಂದಿವೆ. ಇವರ ನಂಬಿಕೆಯಂತೆ ಮೊದಲು ಆಕಾಶವು ಭೂಮಿಗೆ ಬಹಳ ಹತ್ತಿರದಲ್ಲಿದ್ದಿತು. ಅವು ಎಷ್ಟು ಹತ್ತಿರದಲ್ಲಿದ್ದವೆಂದರೆ ಎತ್ತರವಾದವರು ಅದನ್ನು ಮುಟ್ಟಬಹುದಿತ್ತು ಮತ್ತು ಏನನ್ನಾದರೂ ಕುಟ್ಟುವಗ ಅದು ಆಕಾಶಕ್ಕೆ ಬಡಿಯುತ್ತಿತ್ತು. ಇದಕ್ಕೆ ಬೇಸತ್ತ ಜನರು ಆಕಾಶವನ್ನು ಮೇಲೆ ಹೋಗಲು ಕೇಳಿಕೊಂಡರು. ಆದರೆ ಅದು ಸಾಧ್ಯವಾಗಲಿಲ್ಲ ಕೊನೆಗೆ ತಮ್ಮ ಆಶ್ರಯದಾತೆಯಾದ ಭೂಮಿಯನ್ನೇ ಸ್ವಲ್ಪ ಹಿಂದೆ ಸರಿಯಲು ಕೇಳಿಕೊಂಡರು. ಆಗ ಭೂಮಿಯು ಎಷ್ಟು ದೂರ ಸರಿಯಬೇಕು ಎಂದು ಜನರನ್ನು ಕೇಳಿದಾಗ ಅವರಲ್ಲಿ ಒಂದು ಅಭಿಪ್ರಾಯ ಬರಲಿಲ್ಲ. ಆಗ ಭೂಮಿಯು ನಾನು ಹಿಂದೆ ಸರಿಯುತ್ತ ಹೋಗುತ್ತೇನೆ, ನಿಮಗೆ ಸಾಕೆನಿಸಿದಾಗ ನಿಲ್ಲು ಎಂದು ಹೇಳಿರೆಂದು ಜನರಿಗೆ ತಿಳಿಸಿ ಸರಿಯಲು ಪ್ರಾರಂಭಿಸಿತು. ಜನರಲ್ಲಿ ಏಕಾಭಿಪ್ರಾಯವಿಲ್ಲದ್ದರಿಂದ ಬಹಳ ದೂರ ಸರಿಯಿತು ಎಂದು ಜನಪದ ನಂಬಿಕೆ. ಇಂದು ಆಕಾಶದಲ್ಲಿ ಮಿನುಗುವ ತಾರೆಗಳೂ ಅಲ್ಲಿ ಹೇಗೆ ಬಂದವೆಂಬುದಕ್ಕೆ ತಮ್ಮದೇ ಆದ ವಿವರಣೆ ನೀಡುತ್ತಾರೆ. ಇಲ್ಲಿ ಎರಡು ಅಭಿಪ್ರಾಯಗಳು ಅಥವಾ ಎರಡು ವಿಧದ ಕತೆಗಳು ಬರುತ್ತವೆ. ಒಂದರಂತೆ, ಆಕಾಶದಲ್ಲಿ ಮಿನುಗುವ ವಸ್ತುಗಳು ಸ್ವರ್ಗಲೋಕದಲ್ಲಿರುವ ಬೀದಿಯ ದೀಪಗಳು. ಇಲ್ಲಿಯಂತೆ ಅಲ್ಲಿಯೂ ಆಗ ರಾತ್ರಿಯಾಗುವುದರಿಂದ ದೇವತೆಗಳು ಬೆಳಕಿಗೆಂದು ದೀಪ ಹಚ್ಚುತ್ತಾರೆ. ಈ ಬೆಳಕು ಭೂಮಿಯ ಮೇಲೂ ಬೀಳುತ್ತದೆ. ಇನ್ನೊಂದು ನಂಬಿಕೆಯಂತೆ ಭೂಮಿಯ ಮೇಲೆ ಧರ್ಮಿಷ್ಟರಾಗಿ ನಡೆದುಕೊಂಡವರು ಸತ್ತ ನಂತರ ಆಕಾಶದಲ್ಲಿ ನಕ್ಷತ್ರಗಳಾಗಿ ಉಳಿದು, ಮೇಲಿನಿಂದಲೇ ತಮ್ಮವರಿಗೆ ಬೆಳಕು (ಮಾರ್ಗದರ್ಶನ) ನೀಡುತ್ತಾರೆ. ಹೆಚ್ಚಿನ ಧರ್ಮ ಮಾಡಿದವರು ದೊಡ್ಡ ಹಾಗೂ ಪ್ರಕಾಶಮಾನವಾದ ತಾರೆಗಳೂ, ಸ್ವಲ್ಪ ಧರ್ಮಮಾಡಿದವರು ಸಣ್ಣ ಮತ್ತು ಸ್ವಲ್ಪ ಪ್ರಕಾಶಮಾನವಾದ ತಾರೆಗಳು ಆಗುತ್ತಾರೆ. ಅಲ್ಲದೆ ಭೂಮಿಯ ಮೇಲಿಂದ ಧರ್ಮಾತ್ಮರು ಹೋದಂತೆ ಆಕಾಶದಲ್ಲಿ ಹೊಸ ಹೊಸ ತಾರೆಗಳೂ ಹುಟ್ಟುತ್ತವೆಂಬ ನಂಬಿಕೆಯೊಂದಿದೆ. ಇದರಂತೆ ತಾರೆಗಳು ತಮ್ಮ ಸ್ವರ್ಗದಲ್ಲಿನ ಆಯುಷ್ಯವನ್ನು ಮುಗಿಸಿದ ನಂತರ ಮತ್ತೆ ಭೂಮಿಗೆ ಬರುತ್ತಾರೆ. ಈ ನಂಬಿಕೆಯಿಂದ ಜನಪದರು ನಕ್ಷತ್ರಗಳು ಬೀಳುವುದನ್ನು (Shooting Stars) ಕಂಡಾಗ ಭೂಮಿಯ ಮೇಲೆ ಒಬ್ಬ ಪುಣ್ಯಾತ್ಮ ಹುಟ್ಟುತ್ತಾನೆಂದು ನಂಬುತ್ತಾರೆ.”[12]

ಜನಪದ ಕಥೆ

ನಮ್ಮಲ್ಲಿ ಉಪಲಬ್ದವಿದ್ಧ ಜನಪದ ಕಥೆಗಳಲ್ಲಿ ಆಕಾಶದ ‘ಚಂದ್ರ’ ಬಂದು ಭೂಮಿಯ ಹುಡುಗಿಯನ್ನು ಮೋಹಿಸಿ ಮದುವೆಯಾಗಿ ಅವಳನ್ನು ಆಕಾಶಕ್ಕೆ ಕರೆದುಕೊಂಡು ಹೋಗಿ ಸಂಸಾರ ಮಾಡಿದ ವಿಷಯ ಬರುತ್ತದೆ. ಈ ಕಥೆಯಿಂದ ಭೂಮಿ ಆಕಾಶಗಳ ಸಂಬಂಧವನ್ನು ಕಲ್ಪಿಸುವುದರ ಜೊತೆಗೆ ಇಂದಿನ ನಮ್ಮ ಆಕಾಶಯಾನದ ಪ್ರಯೋಗಗಳು ತೀರ ಹಳೆಯ ಕಲ್ಪನೆಗಳೆನ್ನುವುದು ಖಚಿತವಾಗುತ್ತದೆ. ಅಷ್ಟೇ ಅಲ್ಲದೆ ಭೂಮಿ ತಾಯಿ, ಆಕಾಶ ತಂದೆ, ಎನ್ನುವ ಆಧ್ಯಾತ್ಮ ವಿಚಾರಕ್ಕೆ ವಿಶೇಷ ಪುಷ್ಟಿ ದೊರೆಯುತ್ತದೆ. ಇಂದು ಗಗನಯಾನವನ್ನೇ ಮಹಾ ಸಾಹಸವೆಂದು ಪರಿಗಣಿಸಿದ ನಮಗೆ ಜನಪದರು ‘ಚಂದ್ರ’ನನ್ನು ತಮ್ಮ ಅಳಿಯನನ್ನಾಗಿ ಮಾಡಿಕೊಂಡಿದ್ದರು. ಅಂತೆಯೇ ನಾವೆಲ್ಲ ಚಂದ್ರನನ್ನು ‘ಚಂದೂಮಾಮಾ’ ಎಂದು ಕರೆಯುತ್ತೇವೆ ! ಭೂಮಿ ಆಕಾಶಗಳು ಬೀಗರೂ ಆಗಿದ್ದವು ಎನ್ನುವುದನ್ನು ಬರುವ ವೈಜ್ಞಾನಿಕಯುಗ ಸತ್ಯವಾಗಿಸಿದರೆ ಆಶ್ಚರ್ಯಪಡಬೇಕಾದ ಮಾತೇನೂ ಇಲ್ಲ.”[13]

ಭೂಮಿಯನ್ನು ಕುರಿತು ನಮ್ಮ ಜನಪದರು ಈ ಮೇಲಿನ ಎರಡು ಜನಪದ ಕಥೆಗಳಲ್ಲಿ ತಮ್ಮದೇ ಆದ ವಿವರಣೆ ನೀಡುತ್ತಾರೆ. ಭೂಮಿಯ ಮೇಲೆ ಧರ್ಮಿಷ್ಟರಾಗಿ ನಡೆದುಕೊಂಡವರು ಸತ್ತನಂತರ ಆಕಾಶದಲ್ಲಿ ನಕ್ಷತ್ರಗಳಾಗಿ ಉಳಿದು ಮೇಲಿನಿಂದಲೇ ತಮ್ಮವರಿಗೆ ಬೆಳಕು ನೀಡುತ್ತಾರೆ. ಎರಡನೆಯ ಕಥೆಯಲ್ಲಿ ಜನಪದರು ಚಂದ್ರನನ್ನು ತಮ್ಮ ಅಳಿಯನನ್ನಾಗಿ ಮಾಡಿಕೊಂಡಿದ್ದರು. ಅಂತೆಯೇ ನಾವೆಲ್ಲ ಚಂದ್ರನನ್ನು ‘ಚಂದೂಮಾಮಾ’ ಎಂದು ಕರೆಯುತ್ತೇವೆ! ಭೂಮಿ ಆಕಾಶಗಳು ಬೀಗರೂ ಆಗಿದ್ದವು ಎನ್ನುವ ನಂಬುಗೆ, ಪುಣ್ಯಮಾಡಿ ಸತ್ತವರು ಮಾತ್ರ ಚಿಕ್ಕೆಗಳಾಗುತ್ತಾರೆಂಬುದು ಜನಪದರ ನಂಬುಗೆ. ಆದ್ದರಿಂದ ಮಕ್ಕಳ ತೊಟ್ಟಿಲಿಗೆ ಆಕಾಶದ ಸಾಕಾರವಾದ ಛತ್ತನ್ನು ಕಟ್ಟಿದರು. ಅದರಲ್ಲಿ ಸೂರ್ಯ, ಚಂದ್ರ, ಚಿಕ್ಕಿ, ಭೂಮಿ ಇತ್ಯಾದಿಗಳನ್ನು ನಿರ್ಮಿಸಿ ಮಕ್ಕಳಿಗೆ ಕಥೆಗಳ ಮುಖಾಂತರ ಸಂತೋಷಪಡಿಸಿದರು.

ಉಪಸಂಹಾರ

ವಾಸ್ತವವಾಗಿ ಪಂಚಭೂತಗಳು ಎನ್ನುವ ಮಾತು ಶಿಷ್ಟಪದ ಸಮುದಾಯದ ಪರಿಕಲ್ಪನೆ. ಏಕೆಂದರೆ ನಿಸರ್ಗದ ನಿಗೂಢ, ಅದ್ಭುತ ಆಶ್ಚರ್ಯಕರ ವಸ್ತುಗಳಾದ ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ. ಈ ಐದು ವಸ್ತುಗಳಲ್ಲದೆ ತನ್ನ ಸುತ್ತಮುತ್ತಲೂ ಹರಡಿದ ಹಲವು ಹತ್ತಾರು ವಿಸ್ಮಯಕರ ವಸ್ತುಗಳಿಗೆ ಮುಖಾಮುಖಿಯಾಗಿ ಬಾಳಿದವನು ಮನುಷ್ಯ. ಹಿಂಡು ಹಿಂಡಾಗಿ ಅಲೆಯುತ್ತಿದ್ದ ಮಾನವ ಸಮುದಾಯಗಳು ಪಶುಪ್ರಾಣಿಗಳಿಗಿಂತ ಭಿನ್ನವಾದ ಜೀವನ ಕ್ರಮವನ್ನು, ಜೀವನ ಸ್ವರೂಪವನ್ನು ನಿರ್ಮಿಸಿ ಬದುಕಿದವರು. ಅವರ ಅನುಭವಕ್ಕೆ ಬಂದ ಕಲ್ಲು, ಮರ, ಬಳ್ಳಿ, ಕೆರೆ, ಹಳ್ಳ, ನದಿ, ಜ್ವಾಲಾಮುಖಿ, ಬೆಂಕಿ, ಪಶುಪ್ರಾಣಿ, ಪಕ್ಷಿ ಒಂದೊಂದನ್ನು ಬೆರಗುಗಣ್ಣುಗಳಿಂದ ನೋಡಿದ. ಅಗಣಿತ ಅದ್ಭುತವಾಗಿ ಸಮುದಾಯಗಳಿಗೆ ತಮ್ಮ ಅನುಭವದ ತೆಕ್ಕೆಗೆ ಬಂದ ಪ್ರತಿಯೊಂದು ವಸ್ತುವು ಅದ್ಭುತವಾಗಿ ಕಂಡಿದ್ದರೆ ಅಚ್ಚರಿಯಲ್ಲ. ಈ ಬಗೆಯ ಪ್ರತಿಯೊಂದು ವಸ್ತುವನ್ನು ಅವರು ಪೂಜಿಸಿದ್ದರೆ ಬೆರಗುಪಡುವ ಸಂಗತಿಯಿಲ್ಲ. ಈ ಕಾರಣದಿಂದಲೇ ಕುಲಸಂಕೇತಾರಾಧನೆ (Totouism) ಇಂದ ಮೊದಲುಗೊಂಡು ಎನಿನಿಸಮ್ (Aninisim) ಸರ್ವಚೈತನ್ಯವಾದದವರೆಗೆ ಅನೇಕ ಧಾರ್ಮಿಕ ಹಿನ್ನೆಲೆಯ ಸ್ಥಿತ್ಯಂತರಗಳನ್ನು ಆಧ್ಯಾತ್ಮಿಕ ವೈವಿಧ್ಯಗಳನ್ನು ಚರ್ಚಿಸಲಾಗುತ್ತದೆ. ಈ ಕಾರಣದಿಂದ ಹೀಗೆ ಚದುರಿದ ಜಾನಪದ ವಸ್ತು ಸಂಗತಿಗಳನ್ನು ಪಂಚಭೂತಗಳ ಚೌಕಟ್ಟಿನಲ್ಲಿ ತಂದು ಚರ್ಚಿಸುವ ಮತ್ತು ಅವುಗಳನ್ನು ಅರಿಯುವ ಒಂದು ಸಾಹಸವನ್ನು ಶಿಷ್ಟಪದ ಸಮಾಜ ಮಾಡಿತೆಂದು ಕಾಣುತ್ತದೆ. ವಾಸ್ತವವಾಗಿ ಜಾನಪದರ ಜೀವನ ಆನುಭವ ಈ ಯಾವ ಚೌಕಟ್ಟಿಗೂ ನಿಲುಕುವಂಥದಲ್ಲ. ಭೂಮಿಯನ್ನು ತಾಯಿಯಂದು ಪೂಜಿಸಿದ ಜನಪದರೆ ಈ ನೆಲದ ತಾಯಿಯನ್ನು ಮಣ್ಣು ಕೊಡುವ ಅಗಣಿತ ಅನುಭವಗಳನ್ನು ವಿವಿಧ ಸಂದರ್ಭಗಳ ಹಿನ್ನೆಲೆಯಲ್ಲಿ ಬಗೆಬಗೆಯ ಅರ್ಥದ ಛಾಯೆಗಳನ್ನು ಕಾಣುವ ಸಂಗತಿ ಕೂಡ ವಿಸ್ಮಯಕಾರಿಯಾಗಿದೆ. ಉದಾ : ಮಣ್ಣು ಎನ್ನುವ ಪದವನ್ನು ಜನಪದರು ಬಳಸುವ ರೀತಿಯನ್ನು ನೋಡಿ ನೆಲದ ತಾಯಿ ಎಂದರೂ ಕೂಡ ಮಣ್ಣು ತಾನೆ. ಮಣ್ಣು ಜನಪದರಿಗೆ ಕೊಡುವ ಅನುಭವ ಎಷ್ಟು ಬಗೆಯದು. ವಚನಕಾರರು ಮಡಕೆ ಮಾಡುವರೆ ಮಣ್ಣೆ ಮೊದಲು ಎಂದು ಹೇಳುತ್ತಾರೆ. ಹಣತೆ ಮಾಡುವುದಕ್ಕೆ ಮಣ್ಣು ಮೊದಲು ಬೇಕು. ಆದರೆ ಬರಿ ಮಣ್ಣು ಹಣತೆ ಆಗುವುದಿಲ್ಲ. ಹದಗೊಳಿಸಿದ ಅರಲು ಮಾಡಿ ಹದಗೊಳಿಸಿ ಸುಟ್ಟಾಗ ಮಣ್ಣು ಹಣತೆ ಆಗುತ್ತದೆ. ಹದಗೊಳಿಸಿದ ನೆಲ ಮಳೆಯಾದಾಗ ಬಿತ್ತಿದರೆ ಅದೇ ಮಣ್ಣು ಹೊಲವಾಗುತ್ತದೆ. ಹಸಿಯಾಗುತ್ತದೆ. ಭಾಷಿಕ ದೃಷ್ಟಿಯಿಂದ “ಮಣ್ಣು, ಜನಪದರ ಬದುಕಿನ ಅಥವಾ ಮಾನವ ಜೀವನದ ಆಧಾರ. ಮಣ್ಣು ಅವರಿಗೆ ಕೊಟ್ಟ ಅನುಭವಗಳು ಎಷ್ಟು ಬಗೆ? ಕೆಲವು ಶಬ್ದಗಳನ್ನು ನೋಡಿ: ಅ) ಮಣ್ಣಿನ ಹದ, ಮಣ್ಣು ತಿಂದೀ; ‘ಮಣ್ಣಾಗಿಟ್ಟು ಬಂದ್ಯಾ’ ಮಣ್ಣ ಮಾಡೇನ? ‘ಮಣ್ಣ ಕೊಟ್ಟು ಬಂದೆ’[14]

೧. ಮಣ್ಣಿನ ಹದ ಒಕ್ಕಲಿಗನಿಗೆ ತುಂಬ ಅಗತ್ಯವಾದಂಥ ಒಂದು ತಿಳುವಳಿಕೆ.

೨. ಮಣ್ಣುತಿಂದಿ, ಇಲ್ಲದ ಧಿಮಾಕು ಮಾಡಿದರೆ ಮಣ್ಣು ತಿಂದಿ ಅಥವಾ ದುಡಿಯದಿದ್ದರೆ ಮಣ್ಣು ತಿಂದಿ.

೩. ಒಂದು ಕೂಸಿನ ಸಾವಾದಾಗ ಇನ್ನು ಅದು ಬದುಕಿ ಅರಳಬೇಕಾದ ಜೀವ ಒಂದು ನೆಲದಲ್ಲಿ ಹೂತು ಬಂದ ಜನಪದರು ನನ್ನ ಕೂಸಿನ ಮಣ್ಣಾಗ ಇಟ್ಟ ಬಂದ್ಯಾ ಈ ರೀತಿ ನೆಲ, ಭೂಮಿ, ಮಾನವನ ಜೀವನಕ್ಕೆ ತಾಯಿಯಾಗಿ ರಕ್ಷಣೆ ಮಾಡಿದ ಸಂಗತಿ ಅಪೂರ್ವವಾದದ್ದು. ಆಧುನಿಕ ಕಾವ್ಯದಲ್ಲೂ ಕೂಡ ಈ ಭುಮಿತಾಯಿಯನ್ನು ನಮ್ಮ ನಾಡಿನ ಖ್ಯಾತ ವರಕವಿ ದ.ರಾ. ಬೇಂದ್ರೆಯವರು “ಮೊದಲಗಿತ್ತಿ” ಎಂದು ಕರೆಯುತ್ತಾರೆ.

ಮೊದಲಗಿತ್ತಿಯಂತೆ ಮೆರೆಯುವಿಯೇ ತಾಯಿ
ಮೊದಲಗಿತ್ತಿಯಂತೆ ಮೆರೆಯುತಿಹೆ ||ಪ||

ಹಿಂಡಾಗಿ ಪುಂಡರು ಅಂಡಲೆಯಲು ನಿನ್ನ
ನೆತ್ತರು ಒರೆಹಚ್ಚಿ ನೋಡಿರುವೆ
ಪಾತಗ ಕಂಡರು ಕೆಲ ತಾಯಿಗಂಡರು
ಅವರನ್ನು ಮಡಿಲಾಗ ಮಡಗಿಸಿಹೆ
ಹದಿನಾರು ರಾಜರು ತಲೆಕೆಳಗಾದರು
ಆದರು ತಲೆಯೆತ್ತಿ ನಿಂತಿರುವೆ
ನಿನ್ನ ತೇಜದ ಮುಂದೆ ರಾಜತೇಜವು ಕೂಸು!

ಮೊದಲಗಿತ್ತಿಯು ನೀನು ಮರೆಯುತಿಹೆ
ಒಕ್ಕುಡಿತೆ ಅರೆಮುಕ್ಕು ಎನುತೆನುತೆ ಹಲಕೆಲವು
ಪಾನಿಪತ್ತುಗಳನ್ನು ಮುಕ್ಕಳಿಸುವೆ
ಕೊಡಲಿ ರಾಮನು ಎರೆದ ಕೆನ್ನೀರ ಜಳಕಕ್ಕೆ
ಕೂದಲು ನೆನೆಯಲಿಲ್ಲೆನ್ನುತಿಹೆ”[15]

(ನಾದಲೀಲೆ – ಮೊದಲಗಿತ್ತಿ ದ.ರಾ. ಬೇಂದ್ರೆ)

ಈ ಪದ್ಯದಲ್ಲಿ ಭೂಮಿತಾಯಿಯ ಸಹನಶೀಲತೆ ಮತ್ತು ನಿತ್ಯನೂತನತೆಯನ್ನು ವರ್ಣಿಸಲಾಗಿದೆ.[16]

ಒಟ್ಟಾರೆ ಜನಪದರು ಸಂತೋಷದಿಂದ, ಪ್ರೀತಿಯಿಂದ ಬದುಕುವ ಮಂಗಲ ದಿನಕ್ಕಾಗಿ ನಾವು ಕಾಯೋಣ.


[1]     ಕನ್ನಡ ಜಾನಪದ ವಿಶ್ವಕೋಶ ಸಂಪುಟ ೨, ಸಂ. ಡಾ. ಚಂದ್ರಶೇಖರ ಕಂಬಾರ ೧೯೮೫ ಪುಟ ೧೫೧೨, ೧೫೧೩

[2]     ಕನ್ನಡ ಜಾನಪದ ವಿಶ್ವಕೋಶ ಸಂ. ೨, ಸಂಪಾದಕರು ಡಾ. ಚಂದ್ರಶೇಖರ ಕಂಬಾರ ೧೯೮೫ ಪುಟ ೧೫೧೨

[3]      ಗೀತೆಗಳು ಸಂಪುಟ-೧, ಸಂ. ಮತ್ತಿಘಟ್ಟ ಕೃಷ್ಣಮೂರ್ತಿ ಪುಟ ೩೯೪

[4]     ನಲ್ವಾಡುಗಳು, ಬೆಟಗೇರಿ ಕೃಷ್ಣಶರ್ಮ ೧೯೯೦ ಪುಟ ೬೭

[5]      ಗರತಿಯ ಹಾಡು, ಚೆನ್ನಮಲ್ಲಪ್ಪ, ಲಿಂಗಪ್ಪ ೧೯೯೦ ಪುಟ ೬೭

[6]     ಕಾರವಾರ ಜಿಲ್ಲೆಯ ಜನಪದ ಗೀತೆಗಳು, ಡಾ. ಎನ್.ಆರ್. ನಾಯಕ ೧೯೮೨

[7]     ಜನಪದ ಶಿಶುಪ್ರಾಸಗಳು, ಶ್ರೀಕಂಠ ಕೂಡಿಗೆ ೧೯೮೧ ಪುಟ ೧೦

[8]     ಗೋರೂರ, ಗೀದ, ಜಗನ್ನಾಥ ಪವಾರ ೧೯೬೯ ಪುಟ ೧೫

[9]     ವಿವರಣೆಗೆ ನೋಡಿ : ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ ಡಾ. ಎಂ. ಜಿ. ಈಶ್ವರಪ್ಪ ೧೯೯೫

[10]     ಮೂಢನಂಬಿಕೆ ಮತ್ತು ಮಹಿಳೆ, ಎಂ. ಲೀಲಾವತಿ ೧೯೭೫ ಪುಟ ೧೦.

[11]    ಜಾನಪದ ಅಧ್ಯಯನ, ಡಾ. ದೇ. ಜವರೇಗೌಡ ೧೯೭೬ ಪುಟ ೨೯೩

[12]    ಜಾನಪದ ಸಮಾಜ ಮತ್ತು ಸಂಸ್ಕೃತಿ, ಡಾ. ಕೆ. ಜಿ. ಗುರುಮೂರ್ತಿ ೧೯೭೦ ಪುಟ ೧೦೭, ೧೦೮

[13]    ಜಾನಪದ ಸಾಹಿತ್ಯದರ್ಶನ ಭಾಗ-೧೨ “ಗ್ರಹ-ನಕ್ಷತ್ರ”, ಡಾ. ಮ.ಗು. ಬಿರಾದಾರ ೧೯೯೪ ಪುಟ ೧೩೬

[14]    ಜಾನಪದ ಮತ್ತು ಸಮೂಹ ಮಾಧ್ಯಮ, ಸಂ. ಡಾ. ಸೋಮಶೇಖರ ಇಮ್ರಾಪೂರ ೧೯೯೦ ಪುಟ ೨೫

[15]    ನಾದಲೀಲೆ, ಸಂ. ಡಾ. ವಾಮನ ಬೇಂದ್ರೆ ೧೯೮೭ ಪುಟ ೪೦

[16]    ಈ ಪ್ರಬಂಧವನ್ನು ಸಿದ್ಧಪಡಿಸುವ ವಿವಿಧ ಹಂತದಲ್ಲಿ ಸೂಕ್ತ, ಮಾಹಿತಿ ಸಲಹೆಗಳನ್ನು ನೀಡಿದ ಗುರುವರ್ಯ ಡಾ. ದೇವೇಂದ್ರಕುಮಾರ ಹಕಾರಿ ಅವರಿಗೆ ನಾನು ಋಣಿ.