ಭೂಲಾ ಭಾಯಿ ದೇಸಾಯಿ

೧೯೪೫ ರ ನವೆಂಬರ್ ತಿಂಗಳು.

ದೆಹಲಿಯ ಕೆಂಪುಕೋಟೆಯಲ್ಲಿ ಒಂದು ವಿಶಿಷ್ಟ ರೀತಿಯ ವಿಚಾರಣೆ ನಡೆಯುತ್ತಿತ್ತು.

ವಿಚಾರಣೆ ನಡೆಸುತ್ತಿದ್ದವರು ಸೈನ್ಯದ ಅಧಿಕಾರಿಗಳು. ಅವರ ನ್ಯಾಯಾಲಯದ ಮುಂದೆ ಅಪರಾಧಿಗಳು ಎನಿಸಿ ಕೊಂಡು ನಿಂತವರು ಮೂರು ಜನ ಭಾರತೀಯ ಸೈನ್ಯದ ಅಧಿಕಾರಿಗಳು. ಎರಡನೆಯ ಮಹಾಯುದ್ಧ ನಡೆಯುತ್ತಿದ್ದಾಗ ಜಪಾನೀಯರ ಕೈಗೆ ಸಿಕ್ಕ ಭಾರತೀಯ ಸೈನಿಕರು ಅನಂತರ ಭಾರತ ರಾಷ್ಟ್ರೀಯ ಸೈನ್ಯ (ಇಂಡಿಯನ್ ನ್ಯಾಷನಲ್ ಆರ್ಮಿ-ಐ.ಎನ್.ಎ.) ರಚಿಸಿಕೊಂಡರು, ಭಾರತದ ಸ್ವಾತಂತ್ರ್ಯಕ್ಕಾಗಿ ಇಂಗ್ಲೆಂಡಿನ ವಿರುದ್ಧ ಹೋರಾಡಲು ತೀರ್ಮಾನಿಸಿದರು. ಈ ಸೈನ್ಯದ ಸ್ಫೂರ್ತಿ ನೇತಾಜಿ ಸುಭಾಷ್ ಚಂದ್ರ ಬೋಸರು.

ಮತ್ತೆ ಇವರು ಇಂಗ್ಲಿಷರ ಸೈನ್ಯದ ಕೈಗೆ ಸಿಕ್ಕರು. ಐ.ಎನ್.ಎ. ಯ ಸೈನಿಕರು ಭಾರತದಲ್ಲಿ ಸೈನ್ಯವನ್ನು ಸೇರಿದಾಗ ಭಾರತದ ಚಕ್ರವರ್ತಿಗೆ (ಇಂಗ್ಲೆಂಡಿನ ರಾಜನಿಗೆ) ನಿಷ್ಠರಾಗಿರುವುದಾಗಿ ಪ್ರಮಾಣ ಮಾಡಿದ್ದರು, ಆದುದರಿಂದ ಅವರೆಲ್ಲ ರಾಜದ್ರೋಹಿಗಳು ಎಂದು ಆಗಿನ ಭಾರತದ ಸರ್ಕಾರದ ವಾದ. ಆ ಸೈನಿಕರಲ್ಲಿ ಮೂವರನ್ನು ವಿಚಾರಣೆಗೆ ಗುರಿಮಾಡಿತು.

ಭಾರತವೆಲ್ಲ ಕೆರಳಿ ನಿಂತಿತು. ಇವರ ಪರವಾಗಿ ವಿಚಾರಣೆ ಯಲ್ಲಿ ಭಾಗವಹಿಸಲು ಪ್ರಸಿದ್ಧ ವಕೀಲರ ತಂಡವೇ ಸಿದ್ಧವಾಯಿತು. ಈ ತಂಡದ ಮುಖಂಡರಾದರು ಒಬ್ಬ ವಕೀಲರು.

ತೀರ ಕಾಯಿಲೆ, ಆದರೂ-

ಅವರಿಗೆ ಆರೋಗ್ಯ ಏನೂ ಚೆನ್ನಾಗಿರಲಿಲ್ಲ. ಕಾಲುಗಳು ಊದಿಕೊಂಡಿದ್ದವು. ಹೃದಯದ ತೊಂದರೆ. ಆದರೂ ವಿಚಾರಣೆಯಲ್ಲಿ ಭಾಗವಹಿಸುತ್ತಿದ್ದರು. ಎಷ್ಟೋ ಬಾರಿ ಅವರಿಗೆ ನಡೆಯಲಾಗುತ್ತಿರಲಿಲ್ಲ. ಅವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಕೊಂಡು ಕರೆದುಕೊಂಡು ಬರಬೇಕಾಗಿತ್ತು. ಆದರೂ ವಿಚಾರಣೆಗೆ ಮನೆಯಲ್ಲಿ ಗಂಟೆ ಗಟ್ಟಲೆ ಕುಳಿತು ಓದುವರು, ಇತರ ವಕೀಲರೊಡನೆ ಸಮಾಲೋಚನೆ ನಡೆಸುವರು, ನ್ಯಾಯಾಲಯದಲ್ಲಿ ಕುಳಿತು ವಾದ ನಡೆಸುವರು.

ಒಂದು ದಿನ ವಕೀಲರ ಕಾಲುಗಳು ತುಂಬಾ ಊದಿಕೊಂಡಿದ್ದವು. ಅವರ ವೈದ್ಯರು ಪರೀಕ್ಷಿಸಿದರು, ಹೃದಯದ ಸ್ಥಿತಿಯೂ ಚೆನ್ನಾಗಿರಲಿಲ್ಲ. ಅವರು ತೀರ ಕಾಯಿಲೆಯ ಸ್ಥಿತಿಯಲ್ಲಿದ್ದರು.

“ನೀವು ವಿಶ್ರಾಂತಿ ತೆಗೆದುಕೊಳ್ಳಲೇಬೇಕು” ಎಂದರು ವೈದ್ಯರು.

ವಕೀಲರು ಒಪ್ಪಿಲಿಲ್ಲ. ಅವರಿಗೂ ವೈದ್ಯರಿಗೂ ತುಂಬಾ ವಾದವಾಯಿತು. “ನೀವು ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಮುಂದೆ ವಿಚಾರಣೆಗೆ ಹೋಗುವುದಕ್ಕೆ ಆಗುವುದಿಲ್ಲ” ಎಂದರು ವೈದ್ಯರು.

ಕಡೆಗೆ ವಕೀಲರು ತಾವು ನ್ಯಾಯಾಲಯಕ್ಕೆ ಹೋಗಿ, ವಕೀಲರ ಕೊಠಡಿಯಲ್ಲಿ ಕುಳಿತು ವಿಚಾರಣೆ ನಡೆಯುವುದನ್ನು ಕೇಳುವುದಾಗಿ ಹೇಳಿದರು.

ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ-

ವಿಚಾರಣೆ ಪ್ರಾರಂಭವಾಯಿತು. ಈ ವಕೀಲರೊಡನೆ ಸಮಾಲೋಚನೆ ಮಾಡಿಲ್ಲದಿದ್ದ ಇನ್ನೊಬ್ಬ ವಕೀಲರು ತಾವೇ ಬುದ್ಧಿವಂತರೆಂದುಕೊಂಡು, ಈ ವಕೀಲರನ್ನೂ ಅವರ ಜೊತೆಗೆ ಕೆಲಸ ಮಾಡುತ್ತಿದ್ದವರನ್ನೂ ಕೇಳದೆಯೇ ಆಪಾದಿತರ ಪರವಾಗಿ ಮೊಕದ್ದಮೆ ನಡೆಸಲು ಪ್ರಾರಂಭಿಸಿದರು.

ಸ್ವಲ್ಪಹೊತ್ತಿನಲ್ಲೆ ಆಪಾದಿತರ ಪಕ್ಷ ಕಷ್ಟಕ್ಕೆ ಸಿಕ್ಕಿಕೊಂಡಿತು. ಹಿರಿಯ ವಕೀಲರು ಅಷ್ಟು ದಿನ ಪಟ್ಟಿದ್ದ ಕಷ್ಟವೂ ವ್ಯರ್ಥವಾಗುತ್ತಿತ್ತು.

ವಕೀಲರ ಕೊಠಡಿಯಲ್ಲಿ ಕುಳಿತಿದ್ದ ವಕೀಲರು ತಮ್ಮನ್ನು ಕುರ್ಚಿಯಲ್ಲಿ ಕೂಡಿಸಿಕೊಂಡು ವಿಚಾರಣೆ ನಡೆಯುತ್ತಿದ್ದ ಕೊಠಡಿಗೆ ಕರೆದುಕೊಂಡು ಹೋಗುವಂತೆ ತಮ್ಮ ಕಡೆಯವರಿಗೆ ಹೇಳಿದರು. ಅವರ ಸ್ನೇಹಿತರಿಗೆ ಅಧೈರ್ಯ, ವೈದ್ಯರು ‘ಬೇಡ’ ಎನ್ನುತ್ತಿದ್ದಾರೆ. ಆದರೂ ವಕೀಲರು ಹೋದರು, ವಿಚಾರಣೆಯಲ್ಲಿ ಪ್ರವೇಶಿಸಿದರು, ಯಾವುದೋ ಅಂಶಗಳನ್ನೆತ್ತಿ ವಿಚಾರಣೆಯನ್ನು ಮುಂದಕ್ಕೆ ಹಾಕಿಸಿದರು.

ಅನಂತರ ತಾವಾಗಿ ನುಗ್ಗಿದ್ದ ವಕೀಲರಿಗೆ ಹೇಳಿದರು: “ತಾವು ದಯೆಯಿಟ್ಟು ಈ ವಿಚಾರಣೆಯಲ್ಲಿ ಪ್ರವೇಶಿಸಬೇಡಿ.” ತಮ್ಮ ಸಹೋದ್ಯೋಗಿಗಳಿಗೆ ಹೇಳಿದರು: “ಮತ್ತೆ ವಿಚಾರಣೆ ಪ್ರಾರಂಭವಾದ ಮೇಲೆ ನಾನೇ ಮೊಕದ್ದಮೆ ನಡೆಸುತ್ತೇನೆ. ನಾನು ಸಾಯುವುದೇ ಆದರೂ ಚಿಂತೆ ಇಲ್ಲ. ಆದರೆ ಈ ದೇಶಭಕ್ತರ ಪ್ರಾಣಕ್ಕೆ ಅಪಾಯವಾಗುವುದು ಬೇಡ.”

ವಿಚಾರಣೆ ಮುಗಿಯುವವರೆಗೆ ಅವರೇ ಭಾಗ ವಹಿಸಿದರು. ಅಪಾದಿತರ ಪರವಾಗಿ ಅವರು ವಾದಿಸಿ ಮಾಡಿದ ಭಾಷಣ ಅದ್ಭುತವಾಗಿತ್ತು. “ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಪ್ರತಿಯೊಬ್ಬರ ಹಕ್ಕು, ರಾಷ್ಟ್ರಸೇವೆ ರಾಜದ್ರೋಹವಾಗಲಾರದು” ಎಂದು ಗುಡುಗಿದರು. ಅವರ ವಿರೋಧಿಗಳಾಗಿದ್ದ ಇಂಗ್ಲಿಷರೂ ತಲೆದೂಗುವಂತೆ ವಾದಿಸಿದರು.

ಆ ವಕೀಲರೇ ಭೂಲಾಭಾಯಿ ದೇಸಾಯಿ.

ಬಾಲ್ಯ-ವಿದ್ಯಾಭ್ಯಾಸ

ಭೂಲಾಭಾಯಿ ಗುಜರಾತಿನ ಬುಲ್‌ಸಾರಿಗೆ ಸೇರಿದ ಚಿನಾಯ್ ಹಳ್ಳಿಯಲ್ಲಿ ಅಕ್ಟೋಬರ್ ೧೩, ೧೮೭೭ ರಲ್ಲಿ ಹುಟ್ಟಿದರು. ತಂದೆಯ ಹೆಸರು ಜೀವನ್‌ಜಿಭಾಯಿ. ತಾಯಿ ರಮಾಬಾಯಿ. ತಂದೆಗೆ ವರ್ಷಕ್ಕೆ ದೊರೆಯುತ್ತಿದ್ದುದು ೨೦ ರೂಪಾಯಿಗಳ ವೇತನ. ಜೊತೆಗೆ ಸರ್ಕಾರದ ವಕೀಲರೂ ಆಗಿದ್ದರು. ಇದರಿಂದಲೂ ಸ್ವಲ್ಪ ಸಂಪಾದಿಸುತ್ತಿದ್ದರು. ಆದರೂ ಸಂಸಾರಕ್ಕೆ ಸಾಲದು.

ಆಗಿನ ಕಾಲಕ್ಕೆ ಶಾಲೆಗಳು ಹೆಚ್ಚಾಗಿ ಇರಲಿಲ್ಲ. ದೂರದೂರಕ್ಕೆ ಶಾಲೆಗಳು ಇರುತ್ತಿದ್ದವು. ಕಲಿಯಬೇಕೆಂಬ ಆಸೆ ಭೂಲಾಭಾಯಿಗೆ. ವಯಸ್ಸು ಏಳು ಆಗಿದ್ದಾಗ ಹುಡುಗ ಭೂಲಾಭಾಯಿ ಐದು ಮೈಲಿ ದೂರದ ಶಾಲೆಗೆ ನಡೆದು ಹೋಗುತ್ತಿದ್ದ. ಗುಜರಾತಿ ಭಾಷೆ ಕಲಿಯುತ್ತಿದ್ದ. ವಯಸ್ಸು ಹದಿನಾಲ್ಕು ಆಗುತ್ತಲೇ ಮುಂಬಯಿಗೆ ಬಂದ. ನ್ಯೂ ಹೈಸ್ಕೂಲಿಗೆ ಸೇರಿದ.

ಮುಂಬಯಿಯಲ್ಲಿ ತೇಜ್‌ಪಾಲ್ ವಿದ್ಯಾರ್ಥಿ

ನಿಲಯದಲ್ಲಿ ವಸತಿ ಮತ್ತು ಊಟ. ರಾಷ್ಟ್ರೀಯ ಕಾಂಗ್ರೆಸಿನ ಮೊಟ್ಟಮೊದಲ ಅಧಿವೇಶನ ನಡೆದುದೂ ಇಲ್ಲೇ.

ಭೂಲಾಭಾಯಿ ಬುದ್ಧಿವಂತ, ತುಂಟ. ಉಪಾಧ್ಯಾಯರಿಗೆ ಇವನ ಮೇಲೆ ಬಲು ಪ್ರೀತಿ. ಮೆಟ್ರಿಕ್ ಪರೀಕ್ಷೆಯಲ್ಲಿ ಮೊದಲ ಶ್ರೇಣಿಯಲ್ಲಿ ಉತ್ತೀರ್ಣನಾದ. ಕಾಲೇಜು ಸೇರಿದ. ಪರ್ಷಿಯನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಧಿಕ ಅಂಕ ಗಳಿಸಿದ. ಕ್ರಮೇಣ ಪದವೀಧರನಾದ. ಅನಂತರ ಎಂ.ಎ. ಪರೀಕ್ಷೆಯಲ್ಲೂ ಮೊದಲ ಶ್ರೇಣಿಯಲ್ಲಿ ಉತ್ತೀರ್ಣನಾದ.

೧೮೯೯ರಲ್ಲಿ ಅವನ ತಂದೆ ತೀರಿಕೊಂಡರು.

ಉಪಾಧ್ಯಾಯರಾಗಿ

ಸಂಸಾರ ಸಾಗಬೇಕಲ್ಲ? ಭೂಲಾಭಾಯಿ ಅಹಮದಾ ಬಾದಿಗೆ ಬಂದರು. ಕಾಲೇಜಿನಲ್ಲಿ ಉಪಾಧ್ಯಾಯರಾದರು. ತುಂಟ ಹುಡುಗರು ಸುಮ್ಮನಿರುತ್ತಾರೆಯೇ? ಹೊಸಬರು ಬಂದರೆ ಮತ್ತಷ್ಟು ತಮಾಷೆ. ಸೀಟಿ ಹೊಡೆಯುವುದು, ಮಿಯಾವ್ ಎನ್ನುವುದು, ಬೆಂಚು ಕುಟ್ಟುವುದು, ಕಾಗದದ ಚೆಂಡು ಎಸೆಯುವುದು ಎಲ್ಲ ನಡೆಯಿತು. ಒಳ್ಳೆಯ ವಿದ್ಯಾರ್ಥಿಗಳು ಹೀಗೆ ಮಾಡುವುದಿಲ್ಲ. ಭೂಲಾಭಾಯಿ ಕೋಪ ಮಾಡಿಕೊಳ್ಳಲಿಲ್ಲ. ಐದು ನಿಮಿಷ ಸುಮ್ಮನೆ ನಿಂತಿದ್ದರು. ಆಮೇಲೆ ಕೇಳಿದರು: “ಆಯಿತೇ ನಿಮ್ಮ ಗಲಾಟೆ. ಇನ್ನೂ ಏನಾದರೂ ಇದೆಯೇ?” ಇವರ ಧೈರ್ಯ ನೋಡಿ ಹುಡುಗರು ಬೆಪ್ಪಾದರು. “ನೀವು ವಯಸ್ಸಾದ ಕಾಲೇಜು ವಿದ್ಯಾರ್ಥಿಗಳು. ಎಳೆಯ ಮಕ್ಕಳಲ್ಲ. ಮರ್ಯಾದೆಯಿಂದ ನಡೆದುಕೊಳ್ಳುವುದು ನಿಮ್ಮ ಕರ್ತವ್ಯ. ಮರ್ಯಾದೆ ಕೊಟ್ಟವನಿಗೆ ಮರ್ಯಾದೆ ದೊರೆಯುತ್ತೆ, ಇದು ಲೋಕ ನೀತಿ” ಎಂದರು ಭೂಲಾಭಾಯಿ. ಅಂದಿನಿಂದ ವಿದ್ಯಾರ್ಥಿಗಳು ಇವರೊಡನೆ ಮರ್ಯಾದೆಯಿಂದ ನಡೆದುಕೊಳ್ಳಲು ಪ್ರಾರಂಭಿಸಿದರು.

 

‘ಮರ್ಯಾದೆ ಕೊಟ್ಟವನಿಗೆ ಮರ್ಯಾದೆ ದೊರೆಯುತ್ತದೆ.’

 

ಕಾಲೇಜಿನ ಮುಖ್ಯಾಧಿಕಾರಿಗಳಾದ ಆನಂದ ಶಂಕರ ಧೃವ ಅವರಿಗೆ ಭೂಲಾಭಾಯಿಯವರಲ್ಲಿ ತುಂಬ ಪ್ರೀತಿ. ‘ವಸಂತ’ ಎಂಬ ಗುಜರಾತಿ ವಾರಪತ್ರಿಕೆಯನ್ನು ಧೃವ ನಡೆಸುತ್ತಿದ್ದರು. ಈ ಪತ್ರಿಕೆಗೆ ಲೇಖನಗಳನ್ನು ಬರೆಯುವಂತೆ ಭೂಲಾಭಾಯಿಗೆ ಪ್ರೋತ್ಸಾಹ ನೀಡಿದರು. ಅವರು ಬರೆದ ಲೇಖನಗಳನ್ನು ಪ್ರಕಟಿಸಿದರು. ಉಪಾಧ್ಯಾಯ ವೃತ್ತಿ ಬಿಟ್ಟು ವಕೀಲರಾಗುವಂತೆ ಸಲಹೆ ಕೊಟ್ಟರು.

ವಕೀಲರು

ಇತ್ತ ಉಪಾಧ್ಯಾಯರಾಗಿ ಪಾಠ ಕಲಿಸುತ್ತಾ ಅತ್ತ ವಿದ್ಯಾರ್ಥಿಯಾಗಿ ನ್ಯಾಯಶಾಸ್ತ್ರ ಕಲಿಯುತ್ತಿದ್ದರು ಭೂಲಾ ಭಾಯಿ. ವಕೀಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಕೀಲ ರಾದರು. ಅನಂತರ ಮುಂಬಯಿಯ ಉಚ್ಚ ನ್ಯಾಯಾಲಯದ ವಕೀಲರಾದರು. ಭಾರತೀಯ ವಿದ್ಯಾಭವನದ ಸಂಸ್ಥಾಪಕರ ರಾದ ಕೆ. ಎಂ. ಮುನ್ಷಿ ಇವರ ಸಹಾಯಕ ವಕೀಲರಾಗಿದ್ದರು. ಭೂಲಾಭಾಯಿಯವರದು ಅಸಾಧಾರಣ ಜ್ಞಾಪಕ ಶಕ್ತಿ. ತಾವು ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳುವ ಭಾಷಾಪ್ರಭುತ್ವವಿತ್ತು. ಅಲ್ಲದೆ ತಮಗೆ ಒಪ್ಪಿಸಲ್ಪಟ್ಟ ಮೊಕದ್ದಮೆ ಗಳನ್ನು ಶ್ರದ್ಧೆ ವಹಿಸಿ ಓದಿ, ಗ್ರಹಿಸಿ ಕೋರ್ಟಿನಲ್ಲಿ ಗೆಲ್ಲುತ್ತಿದ್ದರು.

ಭೂಲಾಭಾಯಿಯವರಿಗೆ ಹದಿನೈದು ವರ್ಷ ವಯಸ್ಸಾಗಿದ್ದಾಗಲೇ ಮದುವೆಯಾಯಿತು. ಹೆಂಡತಿ ಇಚ್ಛಾಬಾಯಿ. ಇವರ ಒಬ್ಬನೇ ಮಗ ಧೀರೂಭಾಯಿ ಸಹ ವಕೀಲನಾದ.

ತಮ್ಮ ವಕೀಲವೃತ್ತಿಯ ಪ್ರಾರಂಭದಲ್ಲಿಯೇ ಭೂಲಾಭಾಯಿ ಕೆಲವು ಬಹು ಕಷ್ಟದ ಮೊಕದ್ದಮೆಗಳಲ್ಲಿ ಗೆದ್ದರು. ಹಲವು ಪ್ರಸಿದ್ಧ ಮೊಕದ್ದಮೆಗಳಲ್ಲಿ ಅವರು ವಕೀಲರಾಗಿ ಭಾಗವಹಿಸಿದರು. ಕೆಲವೇ ವರ್ಷಗಳಲ್ಲಿ ಬಿಡುವಿಲ್ಲದಷ್ಟು ಕೆಲಸವಾಯಿತು, ತಿಂಗಳಿಗೆ ಸಾವಿರಾರು ರೂಪಾಯಿಗಳ ವರಮಾನ ಬಂದಿತು. ಸುಮಾರು ನಲವತ್ತು ವರ್ಷಗಳ ಕಾಲ ಅವರು ಭಾರತದ ಅತಿ ಶ್ರೇಷ್ಠ ಮತ್ತು ಪ್ರಸಿದ್ಧ ವಕೀಲರಲ್ಲಿ ಒಬ್ಬರೆನಿಸಿದರು. ತಮ್ಮ ಬುದ್ಧಿಸಾಮರ್ಥ್ಯದಿಂದ ಅನೇಕ ಮೊಕದ್ದಮೆಗಳಲ್ಲಿ ಭೂಲಾ ಭಾಯಿ ಜಯಪಡೆದು ಕೀರ್ತಿ ಗಳಿಸಿದರು. ಕೈತುಂಬ ಹಣವೂ ಬಂದಿತು.

ಮುಂಬಯಿ ಗವರ್ನರ್ ಮಂತ್ರಿಮಂಡಲದ ಸದಸ್ಯರಾಗಲು ಭೂಲಾಭಾಯಿಗೆ ಆಹ್ವಾನವಿತ್ತರು. ಆದರೆ ಹೆಂಡತಿಗೆ ತುಂಬಾ ಕಾಯಿಲೆಯಾಗಿದ್ದುದರಿಂದ ಇವರು ಒಪ್ಪಿಕೊಳ್ಳಲಿಲ್ಲ.

ಬಾರ್ದೋಲಿ ಸತ್ಯಾಗ್ರಹ

ಆಗ ಭಾರತ ಗುಲಾಮಗಿರಿಯಲ್ಲಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಜನರನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ ಗಾಂಧೀಜಿ ನಿರತರಾಗಿದ್ದರು. ಬಾರ್ದೋಲಿ ಗುಜರಾತಿಗೆ ಸೇರಿದ್ದ ಒಂದು ತಾಲೂಕು. ಮುಂಬಯಿ ಸರ್ಕಾರ ಈ ತಾಲೂಕಿನ ಭೂಕಂದಾಯ ಹೆಚ್ಚಿಸಲು ತೀರ್ಮಾನಿಸಿತು. ವಕೀಲರಾದ ವಲ್ಲಭಭಾಯಿ ಪಟೇಲರು ಬಾರ್ದೋಲಿಗೆ ಹೋದರು. ವಿಷಯ ಸಂಗ್ರಹಿಸಿದರು. ಬಡ ರೈತರು ಈ ದುಬಾರಿಯ ಕಂದಾಯ ಕೊಡಲಾರರು ಎಂಬ ತೀರ್ಮಾನಕ್ಕೆ ಬಂದರು. ಹೆಚ್ಚುವರಿ ಕಂದಾಯ ವಿಧಿಸಬೇಡಿ ಎಂದು ರೈತರ ಪರ ಸರ್ಕಾರಕ್ಕೆ ಮೊರೆ ಇಟ್ಟರು. ಸರ್ಕಾರ ಪ್ರಾರ್ಥನೆಗೆ ಕಿವಿಗೊಡಲಿಲ್ಲ. ಮಹಾತ್ಮ ಗಾಂಧಿಯವರ ಸಲಹೆಯಂತೆ ಕಂದಾಯ ಕೊಡುವುದಿಲ್ಲ ಎಂದು ಚಳವಳಿ ಪ್ರಾರಂಭಿಸಿದರು. ಇದರ ಪರಿಣಾಮವಾಗಿ ರೈತರು ತಮ್ಮ ಭೂಮಿ, ಮನೆ, ದನ, ಕರು, ಪಾತ್ರೆ ಪದಾರ್ಥ ಎಲ್ಲವನ್ನೂ ಕಳೆದುಕೊಳ್ಳಬಹುದು; ಜೈಲಿಗೂ ಹೋಗಬೇಕಾಗಬಹುದು. ನಾನಾ ಬಗೆಯ ಕಷ್ಟ ಸಂಕಟ ಸಹಿಸಬೇಕಾಗಬಹುದು. ಕೋಪ-ತಾಪಕ್ಕೆ ಕಾರಣ ಏನೇ ಇರಲಿ ಶಾಂತಿ ಕೆಡಿಸಿ ಕೊಳ್ಳಬಾರದು; ಹಿಂಸಾ ಮಾರ್ಗ ಹಿಡಿಯಬಾರದು; ಅಹಿಂಸೆ ತೊರೆಯಬಾರದು-ಹೀಗೆ ಮಹಾತ್ಮ ಗಾಂಧಿ ಮತ್ತು ವಲ್ಲಭಭಾಯಿ ಪಟೇಲರು ಜನರನ್ನು ಎಚ್ಚರಿಸುತ್ತಿದ್ದರು.

ಸರ್ಕಾರ ಭಯಂಕರ ದಬ್ಬಾಳಿಕೆ ನಡೆಸಿತು. ಅನೇಕರನ್ನು ಬಂಧಿಸಿತು, ದಂಡ ವಿಧಿಸಿತು, ಶಿಕ್ಷಿಸಿತು, ಭೂಮಿ ವಶಪಡಿಸಿಕೊಂಡಿತು, ಹರಾಜು ಮಾಡಿತು. ಹರಾಜು ಮಾಡಿದ ಮನೆ, ಭೂಮಿ, ದನಕರು, ಪಾತ್ರೆ ಪದಾರ್ಥ ಇವನ್ನು ಕೊಳ್ಳಲು ಸ್ಥಳೀಯರು ನಿರಾಕರಿಸಿದರು. ಸರ್ಕಾರ ಪಠಾನರನ್ನು ಬರಮಾಡಿಕೊಂಡಿತು. ಅವರು ಎಲ್ಲ ಮಾಲನ್ನೂ ಕೊಂಡರು. ಎಲ್ಲ ವನ್ನೂ ಕಳೆದುಕೊಂಡ ರೈತರು ಬಹಳ ಕಷ್ಟನಷ್ಟಕ್ಕೆ ಒಳಗಾದರು. ಏನೇ ಕಷ್ಟ ಬಂದರೂ ರೈತರು ಅಧೈರ್ಯಪಡಲಿಲ್ಲ ಅಹಿಂಸೆಯ ಮಾರ್ಗ ಬಿಡಲಿಲ್ಲ. ಕಂದಾಯ ನಿರಾಕರಣೆಯ ಈ ಸತ್ಯಾಗ್ರಹಕ್ಕೆ ಸರ್ಕಾರ ಮಣಿಯಿತು. ಬಂಧನದಲ್ಲಿದ್ದವರನ್ನೆಲ್ಲ ಬಿಡುಗಡೆ ಮಾಡಿತು. ವಶಪಡಿಸಿಕೊಂಡಿದ್ದ ಆಸ್ತಿಯನ್ನು ಹಿಂತಿರುಗಿಸಿತು. ಕೆಲಸ ಕಳೆದುಕೊಂಡಿದ್ದ ಸರ್ಕಾರಿ ನೌಕರರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿತು. ರೈತರು ಎಷ್ಟು ಕಂದಾಯ ಕೊಡಬಲ್ಲರು ಎಂದು ನಿರ್ಧರಿಸಲು ವಿಚಾರಣಾ ಸಮಿತಿಯನ್ನು ಸರ್ಕಾರ ನೇಮಿಸಿತು.

ಇಂಗ್ಲಿಷ್ ನ್ಯಾಯಾಧೀಶರು ಈ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ರೈತರ ಪರ ವಿಷಯ ಮಂಡಿಸಲು ವಕೀಲರು ಅಗತ್ಯ. ಈ ಗುರುತರ ಹೊಣೆ ವಹಿಸಿಕೊಳ್ಳುವಂತೆ ಮಹಾತ್ಮ ಗಾಂಧೀಜಿ ಭೂಲಾಭಾಯಿ ದೇಸಾಯಿ ಅವರಿಗೆ ಪತ್ರ ಬರೆದು ವಲ್ಲಭಭಾಯಿ ಪಟೇಲರ ಕೈಗೆ ಕೊಟ್ಟರು. ವಲ್ಲಭಭಾಯಿ ಪಟೇಲರು ಸ್ವತಃ ದೊಡ್ಡ ಸನ್ಮಾನ್ಯ ವಕೀಲರು. ಆದರೂ ಗಾಂಧೀಜಿ ಈ ಹೊಣೆಯನ್ನು ಭೂಲಾಭಾಯಿ ಅವರಿಗೆ ವಹಿಸಿಕೊಟ್ಟದ್ದು ಗಮನಾರ್ಹ.

ಭೂಲಾಭಾಯಿಯವರಿಗೆ ವಲ್ಲಭಭಾಯಿ ಸ್ವತಃ ಗಾಂಧಿಯವರ ಕಾಗದ ತಂದುಕೊಟ್ಟರು. ಭೂಲಾಭಾಯಿ ಬಹಳ ಸಾಮರ್ಥ್ಯದಿಂದ ರೈತರ ಪರ ವಾದ ಮಂಡಿಸಿದರು. ಒಮ್ಮೆ ಒಂದು ಸಂದರ್ಭದಲ್ಲಿ ಆಂಗ್ಲ ಅಧ್ಯಕ್ಷರು ಕುಚೋದ್ಯದ ಮಾತು ಆಡಿದರು. ವಲ್ಲಭಭಾಯಿ ಪಟೇಲರು ಇದರಿಂದ ತುಂಬ ಕೋಪಗೊಂಡರು. ಈ ವಿಚಾರಣೆಯಲ್ಲಿ ಭಾಗವಹಿ ಸುವುದು ಬೇಡ ಎಂದು ಹೊರಕ್ಕೆ ನಡೆದರು. ಕೋಪದಿಂದ ಕೆಲಸ ಕೆಡುತ್ತದೆ ಎಂದು ಭೂಲಾಭಾಯಿ ಶಾಂತ ಚಿತ್ತದಿಂದ ವಾದ ಮುಂದುವರಿಸಿದರು. ದೇಸಾಯಿ ಅವರ ಸಾಮರ್ಥ್ಯ ದಿಂದ ರೈತರ ಪಕ್ಷಕ್ಕೆ ಜಯ ದೊರೆಯಿತು. ಸರ್ಕಾರ ಕಂದಾಯ ಇಳಿಸಿತು. ಸತ್ಯಾಗ್ರಹಕ್ಕೆ ಜಯವಾಯಿತು.

ವಲ್ಲಭಭಾಯಿ ಪಟೇಲರು ಜನಪ್ರಿಯ ಸರ್ದಾರ್ ಆದರು. ಕೀರ್ತಿ ಗಳಿಸಿದರು. ಮಹಾತ್ಮ ಗಾಂಧಿಯವರ ಹೊಗಳಿಕೆಗೆ ಪಾತ್ರರಾದರು.

ಹೆಂಡತಿ ಇನ್ನಿಲ್ಲ

ರೋಗದಿಂದ ನರಳುತ್ತಿದ್ದ ಇಚ್ಛಾಬಾಯಿ ಮತ್ತು ಮಗ ಧೀರೂಭಾಯಿ ಇಬ್ಬರೂ ಚಿಕಿತ್ಸೆಗೆ ಯುರೋಪಿಗೆ ಹೋದರು. ತಾನು ಬಹುಕಾಲ ಬದುಕಲಾರೆನೆಂದು ಇಚ್ಛಾಬಾಯಿ ಗ್ರಹಿಸಿದಳು. ಪರದೇಶದಿಂದ ಪತಿಗೆ ದೀರ್ಘ ಪತ್ರ ಬರೆದಳು. ‘ರಾಜಕೀಯಕ್ಕೆ ಗಮನ ಕಡಮೆ ಮಾಡಿ ಗೃಹಕೃತ್ಯಕ್ಕೆ ಹೆಚ್ಚು ಗಮನ ನೀಡಿರಿ. ಮಗನಿಗೆ ಒಳ್ಳೆಯ ವಧು ತಂದು ಮದುವೆ ಮಾಡಿ. ಪರದೇಶದ ಬಿನ್ನಾಣದ ಬೆಡಗಿನ ಬೊಂಬೆ ಬೇಡ. ಇದರಿಂದ ಸಂಸಾರದಲ್ಲಿ ಯಾರಿಗೂ ಸುಖವಿರದು. ನನ್ನ ಒಡವೆಗಳನ್ನು ಪೆಟ್ಟಿಗೆಯಲ್ಲಿಟ್ಟು ಮೊಹರು ಮಾಡಿರುವೆ. ಅವುಗಳನ್ನು ಧೀರು ಹೆಂಡತಿಗೆ ಕೊಡಿ. ಧೀರು ಒಳ್ಳೆಯ ನಡತೆಯ ವಿದ್ಯಾವಂತ. ಅವನೇ ನಮಗೆ ಸರ್ವಸ್ವ. ಆದ್ದರಿಂದ ಅವನನ್ನು ಚೆನ್ನಾಗಿ ನೋಡಿಕೊಳ್ಳಿ. ಧರ್ಮರಾಯನಂತೆ ನಿಮ್ಮ ನಡೆನುಡಿ. ಈ ಗುಣ ಹೀಗೆಯೇ ಮುಂದುವರಿಯಲಿ’-

ಈ ಧಾಟಿಯಲ್ಲಿ ಸತಿ ಪತಿಗೆ ಪತ್ರ ಬರೆದಿದ್ದಳು. ಅವರು ಸಾಕುತ್ತಿದ್ದ ಚಂದು ಎಂಬ ಹುಡುಗಿ, ರಣಛೋಡ್ ಎಂಬ ಹುಡುಗ ಅವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದಳು.

ಇಚ್ಛಾಬಾಯಿ ಬಹುಕಾಲ ಬದುಕಲಿಲ್ಲ. ಭೂಲಾಭಾಯಿ ವಿಧುರರಾದರು.

ಗಂಡಹೆಂಡತಿ ಮೂವತ್ತು ವರ್ಷ ಕಾಲ ಕೂಡಿ ಬಾಳಿದ್ದರು.

ಸ್ವಾತಂತ್ರ್ಯ ಸಮರ

ಈ ಕಾಲಕ್ಕೆ ಸ್ವಾತಂತ್ರ್ಯದ ಬಯಕೆಯ ಬಿರುಗಾಳಿ ಬಲವಾಗಿ ಬೀಸುತ್ತಿತ್ತು. ಹೋರಾಟ ಹೂಡಬೇಕೆಂದು ತರುಣರು ಹಿರಿಯರನ್ನು ಒತ್ತಾಯಪಡಿಸುತ್ತಿದ್ದರು. ಲಾಹೋರ್ ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯದ ಕಹಳೆ ಊದಿತು. ಪೂರ್ಣ ಸ್ವರಾಜ್ಯ ನಮ್ಮ ಗುರಿ ಎಂದು ಸಾರಿತು. ಇದರ ಸಂಕೇತವಾಗಿ ತರುಣ ಜವಾಹರಲಾಲ್ ನೆಹರು ರಾವಿ ನದಿಯ ದಂಡೆಯ ಮೇಲೆ ೧೯೨೯ ರ ಡಿಸೆಂಬರಿನ ಕಡೆಯ ದಿನ ನಡುರಾತ್ರಿ ತ್ರಿವರ್ಣ ಧ್ವಜ ಏರಿಸಿದರು. ಎಲ್ಲೆಲ್ಲೂ ಶಾಸನಭಂಗ ಚಳವಳಿ ನಡೆಯಿತು. ಕೇಂದ್ರ ಶಾನಸನ ಸಭೆ ನಡೆಯುತ್ತಿದ್ದಾಗ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತ ಪ್ರೇಕ್ಷಕರ ಗ್ಯಾಲರಿಯಿಂದ ಬಾಂಬು ಎಸೆದರು. ಯಾರಿಗೂ ಪೆಟ್ಟಾಗಲಿಲ್ಲ ಇಬ್ಬರೂ ಬಂಧಿತರಾಗಿ ವಿಚಾರಣೆಗೆ ಗುರಿಯಾದರು. ವೈಸರಾಯ್ ಲಾರ್ಡ್ ಇರ್ವಿನ್ ಪ್ರಯಾಣ ಮಾಡುತ್ತಿದ್ದ ರೈಲುಗಾಡಿಯ ಕೆಳಗೆ ಸಿಡಿಮದ್ದು ಸಿಡಿಯಿತು.

ಉಪ್ಪು ಎಲ್ಲರಿಗೂ ಬೇಕಾದದ್ದು. ಸರ್ಕಾರ ಅದರ ಮೇಲೆ ತೆರಿಗೆ ಹಾಕಿತು. ಇದನ್ನು ತೆಗೆಯಿರಿ ಎಂದು ಗಾಂಧೀಜಿ ಪ್ರಾರ್ಥಿಸಿದರು. ಸರ್ಕಾರ ಕಿವಿಗೊಡಲಿಲ್ಲ.

ಮಾರ್ಚ್ ೧೨, ೧೯೩೦ ರಂದು ಮಹಾತ್ಮ ಗಾಂಧೀಜಿ ತಮ್ಮ ಸಾಬರಮತಿ ಆಶ್ರಮದಿಂದ ೭೯ ಆಶ್ರಮವಾಸಿ ಗಳೊಂದಿಗೆ ೨೪೧ ಮೈಲಿಗಳ ದೂರದ ದಾಂಡಿಗೆ ಹೊರಟರು. ದಿನವಹಿ ಎಂಟು-ಹತ್ತು ಮೈಲಿ ನಡೆಯುತ್ತಿದ್ದರು. ದಾಂಡಿ ಸಮುದ್ರ ತೀರದ ಹಳ್ಳಿ. ಶಾಸನದ ಪ್ರಕಾರ ಉಪ್ಪನ್ನು ತಯಾರು ಮಾಡುವುದು ಅಪರಾಧ. ಉಪ್ಪು ತಯಾರುಮಾಡಿ ಶಾಸನ ಭಂಗ ಮಾಡುವ ಉದ್ದೇಶದಿಂದಲೇ ಗಾಂಧೀಜಿ ಹೊರಟಿದ್ದರು. ಶಾಸನ ಭಂಗ ಮಾಡಿದರು. ಗಾಂಧೀಜಿ ಮತ್ತು ಎಲ್ಲ ಸಂಗಡಿಗರೂ ಬಂಧಿತರಾದರು. ಈ ಜೈತ್ರಯಾತ್ರೆ ದಾಂಡೀ ಯಾತ್ರೆ ಎಂದು ಲೋಕಪ್ರಸಿದ್ಧವಾಗಿದೆ.

ಸೆರೆಮನೆ

ಗಾಂಧೀಜಿ ಮತ್ತು ಸಂಗಡಿಗರು ಶಿಕ್ಷಿತರಾಗುತ್ತಲೇ ದೇಶದಲ್ಲೆಲ್ಲಾ ಶಾಸನಭಂಗ ಚಳವಳಿ ಪ್ರಾರಂಭವಾಯಿತು. ಮುಂಬಯಿಯಲ್ಲಿ ನಡೆದ ದೊಡ್ಡ ಮೆರವಣಿಗೆಯನ್ನು ಪೊಲೀಸರು ತಡೆದರು. ಜನರು ರಸ್ತೆಯಲ್ಲೇ ಕುಳಿತರು. “ನನ್ನ ಎದೆಗೆ ಗುಂಡು ಹಾರಿಸಿ” ಎಂದು ಒಬ್ಬ ಯುವಕ ಎದೆ ತೋರಿ ನಿಂತ. ಸುಮಾರು ಒಂದು ಲಕ್ಷ ಜನರು ಜೈಲು ಸೇರಿದರು. ಈ ಚಳವಳಿಗಳಿಂದ ವಿಚಲಿತರಾದ ಭೂಲಾಭಾಯಿ ತಾವು ಸೇರಿದ್ದ ಲಿಬರಲ್ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದರು. ‘ನಮ್ಮ ದೇಶದಲ್ಲೇ ತಯಾರಾಗುವ ಪದಾರ್ಥ ಬಳಸಿ’ ಎಂಬ ಚಳವಳಿಯ ನಾಯಕರಾದರು. ಮುಂಬಯಿಯಲ್ಲಿ ಸ್ವದೇಶಿ ಸಭಾ ಸ್ಥಾಪಿಸಿದರು. ೮೦ ಹತ್ತಿ ಬಟ್ಟೆ ತಯಾರಿಸುವ ಗಿರಣಿಗಳು ಸಭೆಗೆ ಸೇರಿದವು. ಸ್ವದೇಶೀ ಆಂದೋಳನದ ಪರಿಣಾಮವಾಗಿ ಬ್ರಿಟಿಷರ ವ್ಯಾಪಾರಕ್ಕೆ ಧಕ್ಕೆಯಾಯಿತು. ಇದಕ್ಕೆಲ್ಲ ಭೂಲಾ ಭಾಯಿ ಕಾರಣವೆಂದು ಅವರನ್ನು ಸರ್ಕಾರ ಬಂಧಿಸಿತು. ಒಂದು ವರ್ಷದ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿತು. ನಾಸಿಕ್ ಜೈಲಿಗೆ ಸಾಗಿಸಿತು. ಭೂಲಾಭಾಯಿಯರವ ಬಂಧನಕ್ಕೆ ವಿರೋಧ ವ್ಯಕ್ತಪಡಿಸಲು ಇಡೀ ಮುಂಬಯಿ ಹರತಾಳ ಆಚರಿಸಿತು. ದೇಶದಾದ್ಯಂತ ಖಂಡನಾ ಸಭೆಗಳು ನಡೆದವು.

 

ಐ.ಎನ್.ಎ. ವಿಚಾರಣೆಯಲ್ಲಿ ಭೂಲಾಭಾಯಿ

ಜೈಲುವಾಸ

 

ಭೂಲಾಭಾಯಿ ಜೈಲಿನಲ್ಲಿ ತಮ್ಮದೇ ಆದ ದಿನಚರಿ ರೂಪಿಸಿಕೊಂಡರು. ಭಗವದ್ಗೀತೆಯ ಪಠನದಿಂದ ದಿನಚರಿ ಪ್ರಾರಂಭವಾಗುತ್ತಿತ್ತು. ಹೊರಗಿನಿಂದ ಪುಸ್ತಕಗಳನ್ನು ತರಿಸಿ ಕೊಂಡು ಓದಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಸುಮಾರು ೩೦೦ ಪುಸ್ತಕಗಳನ್ನು ಓದಿರಬಹುದು. ಅವರು ಓದಿದ ಪುಸ್ತಕಗಳ ಪಟ್ಟಿ ಈಗಲೂ ಇದೆ. ಸ್ವಲ್ಪ ಕಾಲ ರಾಟೆಯಿಂದ ನೂಲು ತೆಗೆಯುತ್ತಿದ್ದರು. ಅವರು ಮಗನಿಗೆ ಬರೆಯುತ್ತಿದ್ದ ಕಾಗದಗಳಲ್ಲಿ ಮತ್ತೆಮತ್ತೆ ಈ ಮಾತನ್ನೇ ಹೇಳುತ್ತಿದ್ದರು: ’ನನಗೆ ತಿಳಿದಂತೆ ನಾನು ಯಾರಿಗೂ ಕೆಡಕು ಮಾಡಿಲ್ಲ. ಈ ವಯಸ್ಸಿನಲ್ಲಿ ದೇಶಸೇವೆ ಮಾಡುವ ಭಾಗ್ಯವನ್ನು ದೇವರು ಅನುಗ್ರಹಿಸಿದ್ದಾನೆ. ಮುಂದೆ ನಾವು ಕೆಲಸ ಮಾಡಬೇಕಾದದ್ದು ತುಳಿತಕ್ಕೆ ಸಿಕ್ಕ ಮೂಕ ದೇಶ ಬಾಂಧವರೊಡನೆ, ಅನಕ್ಷರಸ್ಥ ರಾದ, ಬಡವರಾದ ಕೋಟ್ಯಂತರ ಮಂದಿಯೊಡನೆ, ಅವರಿಗಾಗಿ.’

ಭೂಲಾಭಾಯಿಗೆ ಹಲ್ಲುನೋವು ಕಾಣಿಸಿಕೊಂಡಿತು. ಕೀವು ಕಟ್ಟಿಕೊಂಡು ತುಂಬ ಬಾಧೆ ಕೊಟ್ಟಿತು. ಶಸ್ತ್ರಚಿಕಿತ್ಸೆ ಅಗತ್ಯವಾಯಿತು. ಈ ಕಾರಣದಿಂದ ಅವಧಿ ಮುಗಿಯುವು ದರೊಳಗಾಗಿ ಇವರ ಬಿಡುಗಡೆ ಆಯಿತು.

ಭೂಲಾಭಾಯಿ ಮಗ ಮತ್ತು ಸೊಸೆಯರೊಡನೆ ದೇಹಸ್ಥಿತಿ ಸುಧಾರಿಸಿಕೊಳ್ಳಲು ವಿದೇಶಕ್ಕೆ ಹೋದರು. ಲಂಡನ್ನಿನಲ್ಲಿ ಪಾರ್ಲಿಮೆಂಟ್ ಸದಸ್ಯರು ಮತ್ತು ವಿದ್ಯಾರ್ಥಿಗಳ ಸಭೆಗಳಲ್ಲಿ ಭಾರತದ ಸ್ಥಿತಿ ಕುರಿತು ಭಾಷಣ ಮಾಡುತ್ತಿದ್ದರು. ಭಾರತಕ್ಕೆ ಬಂದ ಮೇಲೆ ಇವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಿಸಿಕೊಳ್ಳಲಾಯಿತು.

ಕೇಂದ್ರ ಶಾಸನ ಸಭೆ

೧೯೩೪ ರಲ್ಲಿ ಭೂಲಾಭಾಯಿ ಕೇಂದ್ರ ಶಾಸನ ಸಭೆಗೆ ಗುಜರಾತಿನಿಂದ ಚುನಾಯಿತರಾದರು. ಶಾಸನ ಸಭೆಗೆ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಆದರು. ಹತ್ತು ವರ್ಷಗಳಿಗೂ ಹೆಚ್ಚು ಕಾಲ ಕೇಂದ್ರ ಶಾಸನ ಸಭೆಯ ಸದಸ್ಯರಾಗಿದ್ದರು.

ತಮ್ಮ ಪ್ರತಿಭೆ, ಬುದ್ಧಿಸಾಮರ್ಥ್ಯ, ಮಾತುಗಾರಿಕೆ ಇವುಗಳಿಗೆ ಶಾಸನ ಸಭೆ ಒಳ್ಳೆಯ ಅವಕಾಶ ಭೂಲಾಭಾಯಿಗೆ ಒದಗಿಸಿತು. ಆಗ ಶಾಸನ ಸಭೆಯಲ್ಲಿ ರಾಷ್ಟ್ರವಾದಿಗಳ ಸಂಖ್ಯೆ ತೀರ ಕಡಿಮೆ. ಸರ್ಕಾರದ ಪರ ಮಾತನಾಡುವವರೇ ಹೆಚ್ಚು. ಬಹು ಮಂದಿಗೆ ಸರ್ಕಾರವನ್ನು ಕಂಡರೆ ಹೆದರಿಕೆ. ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸುವುದರಲ್ಲಿ, ಖಂಡಿಸುವುದರಲ್ಲಿ ಭೂಲಾಭಾಯಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ತಮ್ಮ ಮಾತಿನ ವೈಖರಿಯಿಂದ ಎಲ್ಲರನ್ನೂ ಚಕಿತಗೊಳಿಸುತ್ತಿದ್ದರು. ರೈಲ್ವೆ ಮತ್ತು ಇತರ ಸರ್ಕಾರದ ಇಲಾಖೆಗಳಲ್ಲಿ ಭಾರತೀಯರಿಗೆ ಯೋಗ್ಯ ಸ್ಥಾನ ಕೊಡ ಬೇಕೆಂದು ಹೋರಾಡುತ್ತಿದ್ದರು. ಇಂಗ್ಲಿಷ್, ಹಿಂದಿ, ಪಾರ್ಸಿ, ಗುಜರಾತಿ, ಉರ್ದು ಭಾಷೆಗಳಲ್ಲಿ ಉತ್ತಮ ಭಾಷಣ ಮಾಡುತ್ತಿದ್ದರು. ರಾಯಪುರ ಪೌರಸಭೆ ಭೂಲಾಭಾಯಿ ಅವರಿಗೆ ಸನ್ಮಾನಪತ್ರ ಅರ್ಪಿಸಿ ಗೌರವಿಸಿತು. ಇವರು ಮುಂಬಯಿ ಕಾಂಗ್ರೆಸಿನ ಅಧ್ಯಕ್ಷರಾಗಿ ಆರಿಸಲ್ಪಟ್ಟರು. ಈ ರೀತಿಯಲ್ಲಿ ಎಲ್ಲರ ಮನ್ನಣೆಗೂ ಪಾತ್ರರಾಗಿದ್ದರು.

ಎರಡನೆಯ ಮಹಾ ಯುದ್ಧ

೧೯೩೯ ರ ಸೆಪ್ಟೆಂಬರ್ ತಿಂಗಳಲ್ಲಿ ಎರಡನೆಯ ಪ್ರಪಂಚ ಯುದ್ಧ ಪ್ರಾರಂಭವಾಯಿತು. ಈ ಘೋರ ಸಂಗ್ರಾಮ ಪ್ರಪಂಚದ ಅರ್ಧ ಭಾಗವನ್ನೇ ಆವರಿಸಿತು. ಯುದ್ಧ ಆರು ವರ್ಷಗಳ ದೀರ್ಘ ಕಾಲ ಸಾಗಿತು. ಯುದ್ಧದಲ್ಲಿ ಭಾಗವಹಿಸಿದ್ದ ಎಲ್ಲ ದೇಶಗಳೂ ಅಪಾರ ಕಷ್ಟನಷ್ಟ ಅನುಭವಿಸಿದವು. ಮನೆ, ಮಠ, ಮಕ್ಕಳು, ಮಾನ, ಧನ ಎಲ್ಲವನ್ನೂ ಎಷ್ಟೋ ಸಂಸಾರಗಳು ಕಳೆದುಕೊಂಡವು. ಲಕ್ಷಾಂತರ ಮಕ್ಕಳು ಅನಾಥರಾದರು. ವಿಶ್ವಸಮರ ಪ್ರಾರಂಭವಾದ ಕೆಲವು ದಿನಗಳ ಅನಂತರ ವೈಸರಾಯರು ಭೂಲಾಭಾಯಿಯವರನ್ನು ಬರ ಮಾಡಿಕೊಂಡು ವಿಚಾರ ವಿವರಗಳನ್ನು ಇಲ್ಲಿ ನಡೆದ ಮಾತು ಕತೆಯ ವಿವರಗಳನ್ನು ಗಾಂಧೀಜಿಯವರಿಗೆ ಭೂಲಾಭಾಯಿ ಬರೆದು ತಿಳಿಸಿದರು.

ಜರ್ಮನಿಯ ವಿರುದ್ಧ ಬ್ರಿಟನ್ ಯುದ್ಧ ಘೋಷಿಸಿತ್ತು. ಭಾರತವೂ ಬ್ರಿಟನ್ ಪರ ಎಂದು ವೈಸರಾಯರು ಘೋಷಿಸಿ ದರು. ಹಿಟ್ಲರ್ ಸರ್ವಾಧಿಕಾರಿ. ಪ್ರಜಾಪ್ರಭುತ್ವದ ವಿರೋಧಿ. ಬ್ರಿಟನ್ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡುತ್ತಿದೆ. ಆದ್ದರಿಂದ ಈ ಕಷ್ಟ ಸಮಯದಲ್ಲಿ ಇಂಗ್ಲೆಂಡಿಗೆ ಭಾರತ ನೆರವು ನೀಡಬೇಕೆಂದು ವೈಸರಾಯರ ವಾದ. ನಮ್ಮ ದೇಶದಲ್ಲಿ ನಾವೇ ಪರಾಧೀನರು, ನಮಗೆ ಸ್ವಾತಂತ್ರ್ಯ ಕೊಡಿ, ಆಗ ನಾವು ಮನಃಪೂರ್ವಕ ಸಹಕಾರ ಕೊಡುತ್ತೇವೆ-ಇದು ಕಾಂಗ್ರೆಸಿನ ನಿಲುವು.

ಮತ್ತೆ ಸೆರೆಮನೆ

ಸುಮಾರು ಒಂದೂವರೆ ವರ್ಷ ಭೂಲಾಭಾಯಿ ಯವರು ಕೇಂದ್ರ ಶಾಸನ ಸಭೆಯ ಅಧಿವೇಶನಗಳಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ೧೯೪೦ ರ ನವೆಂಬರ್ ೧೯ ರಂದು ಸಭೆಗೆ ಹೋಗಿ ಭಾಷಣ ಮಾಡಿದರು. ಬ್ರಿಟನ್ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿದೆ, ಆದ್ದರಿಂದ ಭಾರತ ಯುದ್ಧದಲ್ಲಿ ಅದಕ್ಕೆ ನೆರವಾಗಬೇಕು ಎಂದಲ್ಲವೆ ಇಂಗ್ಲಿಷರು ಹೇಳುತ್ತಿದ್ದುದು? ಭೂಲಾಭಾಯಿ ತಮ್ಮ ಭಾಷಣದಲ್ಲಿ ಕೇಳಿದರು: “ಪ್ರಜಾಪ್ರಭುತ್ವವನ್ನು ನೀವು ಹೊಗಳುವುದೆಲ್ಲ ಮೋಸ ಅಲ್ಲವೆ? ಪ್ರಜಾಪ್ರಭುತ್ವ ಎನ್ನುತ್ತೀರಿ, ಯಾರ ಪ್ರಜಾಪ್ರಭುತ್ವ? ನಿಮ್ಮ ಪ್ರಜಾಪ್ರಭುತ್ವ, ನಮ್ಮ ಗುಲಾಮಗಿರಿ ಇದಕ್ಕಾಗಿ ಅಲ್ಲವೆ ನೀವು ಯುದ್ಧ ಮಾಡುತ್ತಿರುವುದು?”

ಈ ಸಂಕಟ ಸಮಯದಲ್ಲಿ ಹೆಚ್ಚು ತೊಂದರೆ ಕೊಡಬಾರದು ಎಂದು ದೊಡ್ಡ ಚಳವಳಿ ನಡೆಸದೆ ವೈಯಕ್ತಿಕ ಸತ್ಯಾಗ್ರಹ ನಡೆಸುವ ಉಪಾಯ ಗಾಂಧೀಜಿ ತೋರಿದರು. ವಿನೋಬ ಭಾವೆ, ಜವಾಹರಲಾಲ್ ನೆಹರು, ರಾಜ ಗೋಪಾಲ ಚಾರಿ ಮೊದಲಾದ ಹಿರಿಯ ನಾಯಕರು ಒಬ್ಬೊಬ್ಬರಾಗಿ ಬಂಧಿತರಾದರು. ಭೂಲಾಭಾಯಿ ದೇಸಾಯಿ ಮುಂಬಯಿ ಯಲ್ಲಿ ಸತ್ಯಾಗ್ರಹ ಆಚರಿಸಿದರು. ಇವರೊಡನೆ ಸರೋಜಿನಿ ನಾಯುಡು ಮತ್ತು ಮುಂಬಯಿ ವಿಧಾನ ಪರಿಷತ್ತಿನ ಸಭಾಧ್ಯಕ್ಷ ಪಕ್ವಾಸಾ ಜೊತೆಗೂಡಿದರು. ಮೂವರೂ ಡಿಸೆಂಬರ್ ೧೯೪೦ ರಲ್ಲಿ ಬಂಧಿತರಾದರು. ಭೂಲಾ ಭಾಯಿಯವರನ್ನು ಯರವಾಡಾ ಜೈಲಿಗೆ ಸೇರಿಸಲಾಯಿತು.

ಭೂಲಾಭಾಯಿ ಜೈಲಿನಲ್ಲಿ ಹೆಚ್ಚು ಕಾಲ ಓದುವುದಕ್ಕೆ ವಿನಿಯೋಗಿಸುತ್ತಿದ್ದರು. ಪತಂಜಲಿಯ ಯೋಗ ಸೂತ್ರದ ಅಭ್ಯಾಸ ನಡೆಸಿದರು. ದಿನಚರಿ ಬರೆಯುತ್ತಿದ್ದರು. ಆಧುನಿಕ ಕಾಲದ ಚರಿತ್ರೆ ಪುಸ್ತಕಗಳನ್ನು ಓದಿದರು. ಮಗ ಧೀರೂಭಾಯಿ ಮತ್ತು ಸೊಸೆ ಮಾಧುರಿ ಅವರು ಭೂಲಾಭಾಯಿಯನ್ನು ಕಾಣಲು ಬಂದಿದ್ದರು. ಆಗ ಕೆಲವು ಹೂವಿನ ಸಸಿಗಳನ್ನು ಕೊಟ್ಟು ಹೋದರು. ಈ ಸಸಿಗಳನ್ನು ತಮ್ಮ ಆವರಣದಲ್ಲಿ ಭೂಲಾಭಾಯಿ ನೆಟ್ಟು ಅಕ್ಕರೆಯಿಂದ ನೀರೆರೆದು ಬೆಳೆಸಿದರು. ಗಿಡಮರ ಎಂದರೆ ಅವರಿಗೆ ತುಂಬ ಪ್ರೀತಿ. ದೇಶದ ಆಗುಹೋಗುಗಳನ್ನು ಕುರಿತು ಆಳವಾಗಿ ಚಿಂತಿಸುತ್ತಿದ್ದರು.

 

ಭೂಲಾಭಾಯಿಯವರು ಸೆರೆಮನೆಯ ಆವರಣದಲ್ಲಿ ಸಸಿಗಳನ್ನು ಅಕ್ಕರೆಯಿಂದ ಬೆಳೆಸಿದರು.

ಏನೇ ಆದರೂ ಜೈಲಿನ ಜೀವನಕ್ಕೆ ಒಗ್ಗಿಕೊಳ್ಳುವುದು ಸುಲಭವಲ್ಲ. ಭೂಲಾಭಾಯಿಗೆ ಕಾಯಿಲೆಯಾಯಿತು. ಜೈಲಿನ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣವಾಗಲಿಲ್ಲ. ಆದ್ದರಿಂದ ಇವರನ್ನು ಪುಣೆಯ ಸೆಸೂನ್ ಆಸ್ಪತ್ರೆಗೆ ಸೇರಿಸಲಾಯಿತು. ಆಸ್ಪತ್ರೆಯಿಂದ ಇವರನ್ನು ೧೯೪೧ ರ ಸೆಪ್ಟೆಂಬರ್ ೧೬ರಂದು ಬಿಡುಗಡೆ ಮಾಡಲಾಯಿತು.

ಐ.ಎನ್.ಎ.

ವಿಶ್ವ ಸಂಗ್ರಾಮದಲ್ಲಿ ಜಯಭೇರಿ ಬಾರಿಸುತ್ತ ಹಿಟ್ಲರ್ ನಡೆದಿದ್ದ. ಅವನ ಸೇನೆಯ ಮುನ್ನಡೆ ತಡೆಯುವುದು ಅಸಾಧ್ಯ ವಾಗಿತ್ತು. ಬ್ರಿಟನ್ ಪರ ಅನೇಕ ಯುದ್ಧರಂಗಗಳಲ್ಲಿ ಭಾರತದ ಸೇನೆಗಳೂ ಹೋರಾಡುತ್ತಿದ್ದವು. ಭಾರತದ ರಾಷ್ಟ್ರನಾಯಕರು ಏನು ಮಾಡಿಯಾರೋ ಎಂದು ಸರ್ಕಾರಕ್ಕೆ ಹೆದರಿಕೆ. ಸುಭಾಷ್‌ಚಂದ್ರ ಬೋಸರು ಭಾರತದ ಮಹಾ ಸಾಹಸಿ. ಸುಭಾಷ್ ಬೋಸರನ್ನು ಗೃಹಬಂಧನದಲ್ಲಿಡಲಾಯಿತು. ಆದರೆ ಧೀರ ಸುಭಾಷ್ ಒಂದು ರಾತ್ರಿ ವೇಷ ಮರೆಸಿಕೊಂಡು ಕಲ್ಕತ್ತೆಯಿಂದ ಪರಾರಿಯಾದರು. ಬಹಳ ಶ್ರಮದಿಂದ ಕಾಬೂಲ್ ಮಾರ್ಗವಾಗಿ ಮಾಸ್ಕೊ ಸೇರಿದರು. ರಷ್ಯದಿಂದ ಜರ್ಮನಿಗೆ ಬಂದು ಹಿಟ್ಲರನನ್ನು ಸಂದರ್ಶಿಸಿದರು. ಸೆರೆಯಾಗಿದ್ದ ಭಾರತೀಯ ಸೈನಿಕರು ಬ್ರಿಟಿಷರ ವಿರುದ್ಧ ಹೋರಾಡುವಂತೆ ಮಾಡುವ ಪ್ರಯತ್ನ ಕೈಗೊಂಡರು.

ಇದೇ ಕಾಲಕ್ಕೆ ಬ್ರಿಟನ್ ಮತ್ತು ಮಿತ್ರ ರಾಷ್ಟ್ರಗಳ ವಿರುದ್ದ ಸಮಯಸಾಧಕ ಜಪಾನ್-ಅನಿರೀಕ್ಷಿತವಾಗಿ ಯುದ್ಧ ಹೂಡಿತು. ಸಿಂಗಾಪುರ ಮತ್ತು ಬರ್ಮಾ ಪ್ರದೇಶಗಳು ಜಪಾನಿನ ವಶವಾದವು. ಜಪಾನಿನ ಮುನ್ನಡೆ ತಡೆಯಲು ಭಾರತದ ಸೇನೆಗಳನ್ನು ಬರ್ಮ ಗಡಿ ಪ್ರದೇಶಕ್ಕೆ ಕಳುಹಿಸಲಾಯಿತು. ಈ ಸೇನೆಗಳು ಸೋತಾಗ ಬ್ರಿಟಿಷ್ ಅಧಿಕಾರಿಗಳೂ ಸೈನಿಕರೂ ತಾವು ತಪ್ಪಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡರು. ನಲವತ್ತು ಸಾವಿರಕ್ಕೂ ಹೆಚ್ಚು ಭಾರತೀಯ ಸೈನಿಕರು ಜಪಾನಿಯರ ಕೈವಶರಾದರು. ಈ ವೇಳೆಗೆ ಸಾಹಸಿ ಸುಭಾಷ್‌ಚಂದ್ರ ಬೋಸರು ಜಪಾನ್ ತಲುಪಿದರು. ಅಲ್ಲಿನ ಸರ್ಕಾರದ ಬೆಂಬಲ ಪಡೆದು ಸೆರೆಯಾಗಿದ್ದ ಸೇನಾಧಿಕಾರಿಗಳು ಮತ್ತು ಇತರರ ನೆರವಿನಿಂದ ಆಜಾದ್ ಹಿಂದ್ ತಾತ್ಕಾಲಿಕ ಸರ್ಕಾರ ಸ್ಥಾಪಿಸಿದರು. ಜಪಾನಿಗೆ ಶರಣಾಗತರಾಗಿದ್ದ ಭಾರತೀಯ ಸೈನಿಕರನ್ನು ಬಳಸಿಕೊಂಡು ಬ್ರಿಟನ್ನಿನ ವಿರುದ್ಧ ಯುದ್ಧ ಮಾಡುವುದು ಬೋಸರ ಉದ್ದೇಶ. ‘ಜೈಹಿಂದ್’, ‘ದಿಲ್ಲಿ ಚಲೋ’ ಇವರ ಘೋಷಣೆಯಾಗಿತ್ತು.

ಈ ಪ್ರಯತ್ನದಲ್ಲಿ ಸ್ವಲ್ಪ ಯಶಸ್ಸೂ ಗಳಿಸಿದರು. ಆದರೆ ವಿಮಾನ ಅಪಘಾತದಲ್ಲಿ ತೀರಿಕೊಂಡರು.

ಚಲೇ ಜಾವ್ ಚಳವಳಿ

ಬ್ರಿಟನ್ ಅಳಿಯುತ್ತೋ ಉಳಿಯುತ್ತೋ ಎಂಬ ಭೀಕರ ಸಂಕಟದಲ್ಲಿ ಸಿಲುಕಿಕೊಂಡಿತ್ತು. ಹೀಗಿದ್ದರೂ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟು ಸಹಕಾರ ಪಡೆಯಲು ಒಪ್ಪುತ್ತಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಮಹಾತ್ಮ ಗಾಂಧಿಯವರು ‘ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ) ಆಂದೋಳನಕ್ಕೆ ಕರೆಕೊಟ್ಟರು. ‘ಮಾಡು ಅಥವಾ ಮಡಿ’ ಆದೇಶ ಕೊಟ್ಟರು ಭಾರತೀಯರಿಗೆ. ಭಾರತದ ಸ್ವಾತಂತ್ರ್ಯಕ್ಕಾಗಿ ಶಕ್ತಿಮೀರಿ ದುಡಿಯುತ್ತೇನೆ, ಈ ಕಡೆಯ ಹೋರಾಟದಲ್ಲಿ ಮಡಿಯಲೂ ಸಿದ್ಧ-ಈ ರೀತಿಯ ಪ್ರತಿಜ್ಞೆ ಮಾಡಬೇಕೆಂದು ಕರೆಕೊಟ್ಟರು. ಉಗ್ರ ಸ್ವರೂಪದ ಹೋರಾಟ ನಡೆಯಿತು.

ಸರ್ಕಾರ ತೀವ್ರ ಪ್ರತೀಕಾರ ಕ್ರಮ ಕೈಗೊಂಡಿತು. ‘ಚಲೇ ಜಾವ್’ ಚಳವಳಿ ಪ್ರಾರಂಭವಾಗುತ್ತಲೇ ಗಾಂಧೀಜಿ ಮತ್ತು ಇತರ ಎಲ್ಲ ನಾಯಕರನ್ನೂ ಬಂಧಿಸಿತು. ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ಅಬುಲ್ ಕಲಂ ಆಜಾದರು ಅಂದು ಭೂಲಾ ಭಾಯಿ ಅವರ ಮನೆಯಲ್ಲೇ ತಂಗಿದ್ದರು. ನಡುರಾತ್ರಿಯಲ್ಲಿ ಪೋಲೀಸರು ಆಜಾದರನ್ನು ಬಂಧಿಸಿದರು. ಆದರೆ ಭೂಲಾ ಭಾಯಿಯವರನ್ನು ಬಂಧಿಸಲಿಲ್ಲ. ಸಭೆ, ಮೆರವಣಿಗೆ ನಡೆಸ ಕೂಡದೆಂದು ವಿಶೇಷ ಆಜ್ಞೆಗಳು ಹೊರಟವು. ಆಜ್ಞೆ ಉಲ್ಲಂಘಿಸಲು ಪ್ರಯತ್ನಿಸಿದರು. ಸಾವಿರಾರು ಜನರು ಸೆರೆಮನೆ ಸೇರಿದರು. ನೂರಾರು ಮಂದಿ ಗುಂಡಿನೇಟಿಗೆ ಬಲಿಯಾಗಿ ಅಮರರಾದರು.

ಒಂದು ಕಹಿ ಪ್ರಸಂಗ

ಹೊರಗೆ ಉಳಿದಿದ್ದ ಭೂಲಾಭಾಯಿ ಅನೇಕ ಬಗೆಯಲ್ಲಿ ಆಂದೋಳನಕ್ಕೆ ನೆರವು ನೀಡುತ್ತಿದ್ದರು. ಹಿಂದು-ಮುಸಲ್ಮಾನರಲ್ಲಿ ಐಕ್ಯತೆಯ ಅಭಾವ ಭಾರತಕ್ಕೆ ಬ್ರಿಟಿಷರು ಸ್ವಾತಂತ್ರ್ಯ ನಿರಾಕರಿಸಲು ಪ್ರಮುಖ ನೆಪವಾಗಿತ್ತು. ಭೂಲಾ ಭಾಯಿಯವರೂ ಸಹ ಈ ಉಭಯ ಕೋಮುಗಳಲ್ಲಿ ಸೌಹಾರ್ದ ನೆಲಸುವಂತೆ ಬಹು ಪ್ರಯತ್ನ ಮಾಡಿದರು. ಮುಸ್ಲಿಮ್ ಲೀಗಿನ ಮುಖಂಡರಾಗಿದ್ದ ಲಿಯಾಖತ್ ಆಲಿ ಖಾನ್ ಅವರೊಡನೆ ಮಾತುಕತೆ ನಡೆಸಿದರು. ಒಂದು ಒಪ್ಪಂದ ಸಾಧ್ಯವಾಗುವಂತೆ ಕಂಡುಬಂದಿತು. ಆದರೆ ಕಡೆಗೆ ಸಂಧಾನ ವಿಫಲವಾಯಿತು. ಈ ಪ್ರಸಂಗದಲ್ಲಿ ಭೂಲಾಭಾಯಿ ಯವರಿಗೆ ತುಂಬಾ ಅನ್ಯಾಯವಾಯಿತು. ಅವರು ಶುದ್ಧ ಮನಸ್ಸಿನಿಂದ, ನಿಷ್ಠೆಯಿಂದ ಮಾತುಕತೆ ನಡೆಸಿದ್ದರೂ ಅವರು ಕಾಂಗ್ರೆಸಿಗೆ ವಿರುದ್ಧವಾಗಿ ಕೆಲಸ ಮಾಡಿದರು, ಕಾರ್ಯಕಾರಿ ಸಮಿತಿಯನ್ನು ಕಡೆಗಣಿಸಿದರು ಎಂದು ಅನೇಕ ಮಂದಿ ಕೂಗೆಬ್ಬಿಸಿದರು. ಗಾಂಧೀಜಿಯವರೂ ಕಾಂಗ್ರೆಸಿನ ಕಾರ್ಯದರ್ಶಿಗಳೂ ಇದು ಸುಳ್ಳು ಎಂದರೂ ಅಪಪ್ರಚಾರ ನಿಲ್ಲಲಿಲ್ಲ. ಇದರ ಪರಿಣಾಮವಾಗಿ ೧೯೪೫ ರಲ್ಲಿ ನಡೆದ ಚುನಾವಣೆಯಲ್ಲಿ ಉಮೇದುದಾರರಾಗಿ ನಿಲ್ಲಲು ಭೂಲಾಭಾಯಿಯವರಿಗೆ ಕಾಂಗ್ರೆಸ್ ಅವಕಾಶ ಕೊಡಲಿಲ್ಲ. ಅವರಂತಹ ಪ್ರತಿಭಾವಂತ ಪ್ರತಿನಿಧಿ ಸಿಕ್ಕುವುದೇ ಕಾಂಗ್ರೆಸಿಗೆ ಕಷ್ಟವಾಗಿತ್ತು, ಆದರೂ ಅಪಪ್ರಚಾರಕ್ಕೆ ಅವರು ಬಲಿಯಾದರು. ಆದರೆ ಶಿಸ್ತಿನ ಭೂಲಾಭಾಯಿ ಪ್ರತಿಭಟಿಸಿ ಸ್ವತಂತ್ರ ಉಮೇದುದಾರರಾಗಿ ಸ್ಪರ್ಧಿಸಲಿಲ್ಲ. ಆದರೆ ಅವರ ಮನಸ್ಸು ತುಂಬಾ ಕಹಿಯಾಯಿತು.

ಐ. ಎನ್. ಎ. ವಿಚಾರಣೆ

ವಿಶ್ವ ಸಮರ ಆರು ವರ್ಷಗಳಿಗೂ ಹೆಚ್ಚು ಕಾಲ ನಡೆಯಿತು. ಅಮೆರಿಕ ಮತ್ತು ರಷ್ಯ ರಾಷ್ಟ್ರಗಳ ಸಹಾಯದಿಂದ ಬ್ರಿಟನ್ ಅಂತ್ಯದಲ್ಲಿ ಜಯಗಳಿಸಿತು. ಸುಭಾಷರ ಆಜಾದ್ ಹಿಂದ್ ಸೇನೆ ಬ್ರಿಟಿಷರ ವಿರುದ್ಧ ತಿರುಗಿಬಿದ್ದಿತಷ್ಟೆ. ಇದಕ್ಕಾಗಿ ಪ್ರತೀಕಾರ ಮಾಡಲು ಭಾರತ ಸರ್ಕಾರ ನಿರ್ಧರಿಸಿತು. ಈ ಯೋಧರ ಸೈನ್ಯವನ್ನು ಐ.ಎನ್.ಎ. ಎಂದರೆ, ಇಂಡಿಯನ್ ನ್ಯಾಷನಲ್ ಆರ್ಮಿ ಎಂದು ಕರೆಯುವುದು ವಾಡಿಕೆ. ಈ ಸೇನಾ ಪಡೆಗೆ ಸೇರಿದ ನಾಲ್ಕು ಸಾವಿರಕ್ಕೂ ಹೆಚ್ಚು ಯೋಧರು ಬ್ರಿಟಿಷ್ ಸೇನೆಗಳ ವಿರುದ್ಧ ಹೋರಾಡಿ ಸತ್ತರು. ಕೆಲವು ಆಜಾದ್ ಹಿಂದ್ ಸೇನಾಧಿಕಾರಿಗಳನ್ನು ರಣರಂಗದಲ್ಲಿಯೇ ಗುಂಡಿಟ್ಟು ಕೊಲ್ಲಲಾಗಿತ್ತು. ಹಲವು ಅಧಿಕಾರಿಗಳೂ ಯೋಧರೂ ಬ್ರಿಟಿಷರಿಗೆ ಸೆರೆಯಾಗಿದ್ದರು. ಪುಸ್ತಕದ ಪ್ರಾರಂಭದಲ್ಲಿ ಹೇಳಿದ ಹಾಗೆ, ಇವರೆಲ್ಲ ರಾಜದ್ರೋಹಿಗಳು ಎಂದು ಬ್ರಿಟಿಷ್ ಸರ್ಕಾರದ ವಾದ. ಈ ಸೇನಾಧಿಕಾರಿಗಳೂ ಸೈನಿಕರೂ ಮೊದಲು ಭಾರತ ಸರ್ಕಾರದ ಅಧೀನ ನೌಕರರಾಗಿದ್ದರು. ರಾಜಭಕ್ತಿಯ ದೀಕ್ಷೆ ತೆಗೆದುಕೊಂಡಿದ್ದರು. ಜಪಾನಿಯರ ಕಡೆ ಸೇರಿ ಬ್ರಿಟಿಷರ ವಿರುದ್ಧ ಯುದ್ಧ ಮಾಡಿರುವುದು ರಾಜದ್ರೋಹ. ಈ ಮಹಾಪರಾಧಕ್ಕೆ ಮರಣದಂಡನೆಯೇ ತಕ್ಕ ಶಿಕ್ಷೆ. ಹೀಗೆಂದು ಭಾರತ ಸರ್ಕಾರ ತೀರ್ಮಾನಿಸಿ ಷಾ ನವಾಜ್ ಖಾನ್, ಕ್ಯಾಪ್ಟನ್ ಸಹಗಲ್, ಜಿ. ಎಸ್. ಧಿಲ್ಲೋನ್ ಈ ಮೂವರು ಐ.ಎನ್.ಎ. ಸೇನಾಧಿಕಾರಿ ಗಳನ್ನು ರಾಜದ್ರೋಹದ ಆಪಾದನೆಗೆ ಗುರಿ ಮಾಡಿದರು. ಈ ಮೂವರಲ್ಲಿ ಒಬ್ಬ ಮುಸ್ಲಿಮ್, ಮತ್ತೊಬ್ಬ ಹಿಂದು, ಇನ್ನೊಬ್ಬ ಸಿಖ್ ಇದ್ದುದು ಗಮನಾರ್ಹ.

ದಿಲ್ಲಿಯ ಪ್ರಸಿದ್ಧವಾದ ‘ಲಾಲ್‌ಕಿಲ್ಲ’ ಅಥವಾ ಕೆಂಪು ಕೋಟೆಯಲ್ಲಿ ವಿಚಾರಣೆ ಪ್ರಾರಂಭವಾಯಿತು. ಇದೇ ಕೆಂಪುಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಏರಿಸು ವುದು ಇವರ ಗುರಿಯಾಗಿತ್ತು. ಈಗ ಇಲ್ಲಿಯೇ ಇವರ ವಿಚಾರಣೆ. ಕಾಲಚಕ್ರದ ಗತಿ ಅತಿ ವಿಚಿತ್ರ. ವಿಚಾರಣೆ ನಡೆಸು ವವರು ಸೇನಾಧಿಕಾರಿಗಳು. ನ್ಯಾಯಶಾಸ್ತ್ರ ಪರಿಣತರಲ್ಲ. ಸಿವಿಲ್ ನ್ಯಾಯಾಧೀಶರಲ್ಲ. ಸರ್ಕಾರದ ಪರ ೩೦ ಸಾಕ್ಷಿಗಳು.

ಅಪಾದಿತರು ದೇಶಭಕ್ತರು. ಇವರ ಜೀವ ಉಳಿಸಬೇಕು. ಇದು ರಾಷ್ಟ್ರದ ಒಮ್ಮತವಾಗಿತ್ತು. ಹಿಂದು-ಮುಸ್ಲಿಮ್-ಸಿಖ್ ನಾಯಕರು ಈ ಪ್ರಯತ್ನದಲ್ಲಿ ಒಟ್ಟಾದರು. ಸರ್ ತೇಜಬಹದ್ದೂರ್ ಸಪ್ರು, ಕೈಲಾಸನಾಥ ಕಾಟ್ಜು, ಅಸಫ್ ಅಲಿ, ಜವಾಹರಲಾಲ್ ನೆಹರು, ಭೂಲಾಭಾಯಿ ಮೊದಲಾಗಿ ೧೭ ಸುಪ್ರಸಿದ್ಧ ವಕೀಲರು ಅಪಾದಿತರ ಪರ ಇದ್ದರು. ಮೂವರು ಸೇನಾಧಿಕಾರಿಗಳ ಮೇಲೂ ಕೊಲೆ ಮತ್ತು ರಾಜದ್ರೋಹದ ಅಪರಾಧ ಹೊರಿಸಲ್ಪಟ್ಟಿತ್ತು.

ಭೂಲಾಭಾಯಿಯವರೇ ಪ್ರಮುಖ ವಕೀಲರಾಗ ಬೇಕೆಂದು ಎಲ್ಲ ವಕೀಲರ ಅಪೇಕ್ಷೆ. ಅವರ ಆರೋಗ್ಯ ಬಹಳ ಕೆಟ್ಟಿತ್ತು. ಲಿಯಾಖತ್ ಅಲಿ ಖಾನರೊಡನೆ ಮಾತುಕತೆ ನಡೆದ ಪ್ರಸಂಗ ದಲ್ಲಿ ಕಾಂಗ್ರೆಸಿನ ಹಲವು ನಾಯಕರೇ ಭೂಲಾಭಾಯಿಯವರಿಗೆ ಅನ್ಯಾಯ ಮಾಡಿದ್ದರು. ಅವರನ್ನು ಕೇಂದ್ರ ಶಾಸನ ಸಭೆಗೆ ಆರಿಸಲಿಲ್ಲ. ಇಷ್ಟಾದರೂ ಭೂಲಾಭಾಯಿ ಈ ಕಷ್ಟದ ಹೊಣೆ ಹೊತ್ತರು.

೧೯೪೫ರ ನವೆಂಬರ್ ೫ರಂದು ವಿಚಾರಣೆ ಪ್ರಾರಂಭ ವಾಯಿತು, ಡಿಸೆಂಬರ್ ೩೧ರಂದು ಮುಗಿಯಿತು.

ಭೂಲಾಭಾಯಿ ವಾದ

ದೇಶದಲ್ಲಿ ದೇಶಭಕ್ತಿ ಹರಡಿಸಲು ಈ ವಿಚಾರಣೆ ಒಳ್ಳೆಯ ಅವಕಾಶ ಕೊಟ್ಟಿತು. ಆಪಾದಿತರು ನಿರಪರಾಧಿ ಗಳೆಂದು ತೋರಿಸಲು ಹೊಸ ವಾದಸರಣಿಯನ್ನು ಭೂಲಾಭಾಯಿ ಅನುಸರಿಸಿದರು. ಇದು ಅವರ ವಾದ:

“ಇಲ್ಲಿನ ಶಾಸನಗಳಂತೆ ಈ ಮೂವರೂ ಅಪರಾಧಿ ಗಳೆಂದು ಸರ್ಕಾರ ಹೇಳಬಹುದು. ಆದರೆ ಅಂತರರಾಷ್ಟ್ರೀಯ ಶಾಸನದ ಪ್ರಕಾರ ಇವರು ಅಪರಾಧಿಗಳಾಗಲಾರರು. ಯಾವ ಸ್ವತಂತ್ರ ರಾಷ್ಟ್ರದ ಇತಿಹಾಸ ನೋಡಿದರೂ ಮೊದಲು ರಾಜಭಕ್ತಿಯ ಪ್ರತಿಜ್ಞೆ ತೆಗೆದುಕೊಂಡವರೇ ಸಮಯ ಒದಗಿ ಬಂದಾಗ ಬಂಡಾಯಗಾರರಾಗಿ ಪರಾಧೀನ ದೇಶವನ್ನು ಬಂಧ ಮುಕ್ತ ರಾಷ್ಟ್ರವಾಗಿ ಮಾಡಿದ್ದಾರೆ.

“ಇಂಗ್ಲೆಂಡಿನ ಇತಿಹಾಸದಲ್ಲಿ ಮೊದಲ ಚಾರ್ಲ್ಸ್ ದೊರೆಯ ಗತಿ ಆದುದೇನು? ದ್ವಿತೀಯ ಜೇಮ್ಸ್ ಚಕ್ರವರ್ತಿಯ ಪಾಡು ಏನಾಯಿತು? ಅಮೆರಿಕಾಕ್ಕೆ ಬಂದು ನೆಲೆಸಿದವರಲ್ಲಿ ಬ್ರಿಟಿಷರ ಸಂಖ್ಯೆಯೇ ಅಧಿಕ. ಅಮೆರಿಕ ಮತ್ತು ಬ್ರಿಟನ್‌ಗಳ ನಡುವೆ ಹೋರಾಟ ನಡೆದು ಅಮೆರಿಕ ಸ್ವತಂತ್ರವಾಗಲಿಲ್ಲವೇ? ಆಫ್ರಿಕದ ಬೋರ್ ಬಂಡಾಯದಲ್ಲಿ ಬ್ರಿಟಿಷ್ ಪ್ರಜೆಗಳು ಬ್ರಿಟಿಷ್ ಸೇನೆಗಳ ವಿರುದ್ಧ ಯುದ್ಧದಲ್ಲಿ ತೊಡಗಲಿಲ್ಲವೆ? ಇವರನ್ನು ರಾಜದ್ರೋಹಿಗಳೆಂದು ವಿಚಾರಣೆ ನಡೆಸಿ ಯಾರನ್ನಾದರೂ ಗಲ್ಲಿಗೆ ಏರಿಸಲಾಯಿತೇ? ದ್ವಿತೀಯ ವಿಶ್ವ ಸಮರದಲ್ಲಿ ಬ್ರಿಟಿಷ್ ಸೇನೆಗಳು ಅಮೆರಿಕದ ಸೇನಾಧಿಪತಿಯ ನಾಯಕತ್ವದಲ್ಲಿ ಹೋರಾಡಲಿಲ್ಲವೇ? ಹೀಗೆಂದ ಮಾತ್ರಕ್ಕೆ ಬ್ರಿಟಿಷರು ಅಮೆರಿಕದ ಗುಲಾಮರಾದರು ಎಂದು ಹೇಳಬಹುದೇ?

“ಆಜಾದ್ ಹಿಂದ್ ಯೋಧರು ಜಪಾನ್ ಪರ ಹೋರಾಡಲಿಲ್ಲ. ಅವರು ಹೋರಾಟ ನಡೆಸಿದ್ದು ಸುಭಾಷ್ ಬಾಬು ರಚಿಸಿದ್ದ ಸ್ವತಂತ್ರ ಭಾರತ ಸರ್ಕಾರದ ಪರ. ಇದಕ್ಕೆ ಸಾಕಷ್ಟು ಸಾಕ್ಷ್ಯಾಧಾರವಿದೆ. ಕರ್ನಲ್ ಹಂಟ್ ಜಪಾನಿನ ಸೇನಾಧಿಕಾರಿ ಕರ್ನಲ್ ಫುಜಿವಾರ ಅವರಿಗೆ ಸುಮಾರು ೪೫,೦೦೦ ಭಾರತೀಯ ಸಿಪಾಯಿಗಳನ್ನು ಶರಣಾಗತರಾಗಿ ಒಪ್ಪಿಸಿದರು. ಈ ಯುದ್ಧ ಬಂಧಿಗಳನ್ನು ಸ್ವೀಕರಿಸುತ್ತ, ‘ನೀವು ಇಂದಿನಿಂದ ಸ್ವತಂತ್ರರು. ಬ್ರಿಟಿಷ್ ಚಕ್ರವರ್ತಿಯ ಆಳುಗಳಲ್ಲ. ನೀವು ತೆಗೆದುಕೊಂಡಿದ್ದ ರಾಜಭಕ್ತಿಯ ದೀಕ್ಷೆಯಿಂದ ಮುಕ್ತರಾಗಿದ್ದೀರಿ’ ಎಂದು ವಿವರಿಸಿದರು. ಅನಂತರ ಎಲ್ಲರನ್ನೂ ಕ್ಯಾಪ್ಟನ್ ಮೋಹನ ಸಿಂಗರ ಅಧೀನಕ್ಕೆ ಒಪ್ಪಿಸಿದರು. ಫುಜಿವಾರ ಜಪಾನ್ ಭಾಷೆಯಲ್ಲಿ ಮಾತನಾಡಿಸಿದರು. ಭಾರತೀಯ ಸಿಪಾಯಿಗಳಿಗೆ ಅರ್ಥವಾಗಲೆಂದು ಇವರ ಭಾಷಣವನ್ನು ಇಂಗ್ಲಿಷ್ ಮತ್ತು ಹಿಂದುಸ್ಥಾನಿ ಭಾಷೆಗಳಲ್ಲಿ ಭಾಷಾಂತರಿಸಿ ತಿಸಳಿಸಲಾಯಿತು. ಅಂದಿನಿಂದ ಆಜಾದ್ ಹಿಂದ್ ಯೋಧರು ಭಾರತದ ಮುಕ್ತಿಗಾಗಿ ಹೋರಾಡುವ ಸ್ವತಂತ್ರ ಸಿಪಾಯಿ ಗಳಾದರು. ರಾಜಭಕ್ತಿಗಿಂತ ರಾಷ್ಟ್ರಭಕ್ತಿ ಹಿರಿದಾಗುವ ಕಾಲ ಬರುತ್ತದೆ. ಹಣದಾಸೆಯಿಂದ ಜನ ಸೇನೆಗೆ ಸೇರುತ್ತಾರೆ. ನಿಯಮದಂತೆ ರಾಜಭಕ್ತಿಯ ಪ್ರತಿಜ್ಞೆ ತೆಗೆದುಕೊಳ್ಳುತ್ತಾರೆ ಅಷ್ಟೆ. ಇದು ಮನಃಪೂರ್ವಕ ತೆಗೆದುಕೊಂಡ ದೀಕ್ಷೆಯಲ್ಲ. ರಾಷ್ಟ್ರಭಕ್ತಿ ಯನ್ನು ಕೊಳ್ಳಲು ಸಾಧ್ಯವಿಲ್ಲ. ಅದು ಮಾರಾಟದ ಸರಕಲ್ಲ. ಹೃದಯ ಅದರ ಜನ್ಮ ಸ್ಥಾನ. ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂದು ನಮ್ಮ ಪೂರ್ವಿಕರು ಹೇಳಿರುದವುದಿಲ್ಲವೆ? ಹೆತ್ತ ತಾಯಿಗಿಂತ, ಸ್ವರ್ಗಕ್ಕಿಂತ ಜನ್ಮಭೂಮಿ ಹಿರಿದು.

“ಈ ಮೂವರು ಅಪಾದಿತರು ಮತ್ತು ಇತರ ಆಜಾದ್ ಹಿಂದ್ ಸೇನೆಯ ವೀರ ಯೋಧರು ತಮ್ಮ ಜನ್ಮಭೂಮಿಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದುದು ದ್ರೋಹವೇ? ತಮ್ಮ ಕಾರ್ಯಚರಣೆಯಲ್ಲಿ ಕೆಲವರನ್ನು ಕೊಂದಿರಬಹುದು. ಇದು ಕೊಲೆಯೇ? ಇದು ಕೊಲೆಯಲ್ಲ. ಕರ್ತವ್ಯಪಾಲನೆ. ಭಾರತಾಂಬೆ ತನ್ನ ಬಂಧನ ಮುಕ್ತಿಗಾಗಿ ಹಾತೊರೆಯುತ್ತಿದ್ದಾಗ ನಡೆಸಿದ ಹೋರಾಟ ರಾಜನ ವಿರುದ್ಧವಲ್ಲ. ರಾಷ್ಟ್ರದ ಸ್ವಾತಂತ್ರ್ಯದ ಪರ. ಆತ್ಮಸಾಕ್ಷಿಯ ಕರೆಗೆ ಓಗೊಟ್ಟ ಮಾರ್ದನಿ. ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ಅಂತರ್ವಾಣಿಯ ಕರೆಗೆ ಓಗೊಟ್ಟು ವರ್ತಿಸದಿದ್ದಲ್ಲಿ ಯಾವ ದೇಶವೂ ಸ್ವತಂತ್ರ ವಾಗುತ್ತಿರಲಿಲ್ಲ, ಈ ಪ್ರಪಂಚದಲ್ಲಿ.

“ಆಜಾದ್ ಹಿಂದ್ ಸೇನೆಯ ಕೆಲವು ದಳಗಳು ಭಾರತದ ಗಡಿ ದಾಟಿ ಪ್ರವೇಶಿಸಿದವು. ಆಗ ಸ್ವಾತಂತ್ರ್ಯ ಯೋಧರಿಗೆ ಆದ ಆನಂದಕ್ಕೆ ಪಾರವೇ ಇಲ್ಲ. ಈ ಪುಣ್ಯ ಭೂಮಿಯ ಮೇಲೆ ಅಡಿಯಿಟ್ಟೆವಲ್ಲಾ ಎದು ಹಿಗ್ಗಿದರು. ಕುಣಿದಾಡಿದರು. ಭೂಮಿಯ ಮೇಲೆ ಬಿದ್ದು ಉರುಳಾಡಿದರು, ಚುಂಬಿಸಿದರು. ಮೃತ್ತಿಕೆಯನ್ನು ವಿಭೂತಿಯೆಂದು ಹಣೆಗೆ ಹಚ್ಚಿಕೊಂಡರು. ತಿವರ್ಣ ಧ್ವಜ ಏರಿಸಿ ‘ಜೈಹಿಂದ್’, ‘ಸ್ವತಂತ್ರ ಭಾರತಕ್ಕೆ ಜಯವಾಗಲಿ’ ಎಂದು ಘೋಷಿಸಿದರು. ಇವರು ರಾಜದ್ರೋಹಿಗಳಲ್ಲ, ರಾಷ್ಟ್ರಭಕ್ತರು.”

ವಿಚಾರಣೆ ಮುಗಿಯಿತು

ಭೂಲಾಭಾಯಿಯವರ ದೇಹಸ್ಥಿತಿ ಕೆಟ್ಟಿತ್ತು. ಅವರು ಒಂದೇ ಸಮನೆ ಎರಡು ದಿನ ಅಪಾದಿತರ ಪರ ವಾದಿಸಿದರು. ವಾದ ಮಾಡುವಾಗ ‘ನೋಟ್ಸ್’ ಅಥವಾ ಟಿಪ್ಪಣಿ, ಮಾಡ ಬೇಕಾದ ಮುಖ್ಯಾಂಶ ಏನೂ ಬರೆದುಕೊಂಡಿರಲಿಲ್ಲ. ಅವರ ಸ್ಮರಣ ಶಕ್ತಿ ಅಷ್ಟು ಅದ್ಭುತ. ಈ ಶ್ರಮದ ಪರಿಣಾಮವಾಗಿ ದೇಹಾರೋಗ್ಯ ಮತ್ತಷ್ಟು ಕೆಟ್ಟಿತು. ವಿಶ್ರಾಂತಿ ತೆಗೆದುಕೊಳ್ಳು ವಂತೆ ವೈದ್ಯರು ಹೇಳಿದರು. ಭೂಲಾಭಾಯಿ ಒಪ್ಪಲಿಲ್ಲ.

ಈ ದೇಶಭಕ್ತರಿಗೆ ನ್ಯಾಯ ದೊರಕುವಂತಿರಲಿಲ್ಲ. ಮೂವರಿಗೂ ಜೀವಾವಧಿ ಗಡೀಪಾರು ಶಿಕ್ಷೆ ಆಯಿತು.

ಪಂಡಿತ ಜವಾಹರಲಾಲ್ ನೆಹರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಭೂಲಾಭಾಯಿಗೆ ಪತ್ರ ಬರೆದರು. ಅವರ ಸ್ಮರಣ ಶಕ್ತಿ, ಚಿಂತನ ಶಕ್ತಿ, ವಾಕ್ ಪ್ರವಾಹ, ವಾದಸರಣಿ ಅದ್ಭುತವೆಂದು ಹೊಗಳಿದರು.

ಜೀವನ ಯಾತ್ರೆ ಮುಗಿಯಿತು

ವಿಚಾರಣೆ ಮುಗಿಸಿಕೊಂಡು ಭೂಲಾಭಾಯಿ ದೆಹಲಿಯಿಂದ ಮುಂಬಯಿಗೆ ಬಂದರು. ಮುಂಬಯಿ ನಗರದ  ಮಹಾಜನರು ತಾಜ್ ಮಹಲ್ ಹೋಟೆಲಿನಲ್ಲಿ ಸತ್ಕಾರ ಏರ್ಪಡಿಸಿ ಬೆಳ್ಳಿಯ ಕರಂಡದಲ್ಲಿ ಸನ್ಮಾನ ಪತ್ರ ಅರ್ಪಿಸಿದರು. ಭೂಲಾಭಾಯಿಯವರ ವಾದ ಭಾರತದ ಸೈನಿಕರನ್ನು ದೇಶಭಕ್ತಿಯಿಂದ ಹುರಿದುಂಬಿಸಿತು. ಸೇನೆ ಬಂಡಾಯ ಮಾಡಬಹುದು, ಶಿಕ್ಷಿತರನ್ನು ಬಿಡುಗಡೆ ಮಾಡಿ ಎಂದು ಬ್ರಿಟಿಷ್ ಸೇನೆಗಳ ಮಹಾ ದಂಡನಾಯಕ ವೈಸರಾಯರಿಗೆ ಬರೆದರು. ಮೂವರೂ ಬಂಧಮುಕ್ತರಾದರು.

ಭಾರತ ಸ್ವತಂತ್ರವಾಯಿತು. ಶಿಕ್ಷೆಗೆ ಗುರಿಯಾಗಿದ್ದ ಷಾ ನವಾಜ್ ಖಾನ್ ಕೇಂದ್ರದ ಮಂತ್ರಿ ಪದವಿಗೆ ಏರಿದರು.

ಭೂಲಾಭಾಯಿ ಕಾಯಿಲೆಯಾಗಿ ಹಾಸಿಗೆ ಹಿಡಿದರು. ಉತ್ತಮ ವೈದ್ಯ ಚಿಕಿತ್ಸೆ ನಡೆಸಿದರೂ ಗುಣವಾಗಲಿಲ್ಲ. ಮಹಾತ್ಮ ಗಾಂಧೀಜಿ ಸ್ವತಃ ಇವರ ಮನೆಗೆ ಬಂದು ದೇಹಸ್ಥಿತಿ ವಿಚಾರಿಸಿಕೊಂಡು ಹೋದರು. ದಿನವಹಿ ತಂತಡಂಡವಾಗಿ ಇವರನ್ನು ಕಾಣಲು ಜನರು ಬರುತ್ತಿದ್ದರು. ಆಜಾದ್ ಹಿಂದ್ ವೀರಯೋಧರನ್ನು ಉಳಿಸಿದ ಭೂಲಾಭಾಯಿ ದೇಸಾಯಿ ತನ್ನ ಪ್ರಾಣವನ್ನೇ ಮುಡಿಪಾಗಿ ಅರ್ಪಿಸಿ ೧೯೪೬ರ ಮೇ ೬ ರಂದು ದೇಹತ್ಯಾಗ ಮಾಡಿದರು.