ಕಾಮ್ಯಕವನವೆಂಬ ವನದಲ್ಲಿ ಕಥಕನೆಂಬ ಬೇಡನಿರ್ಪಂ. ಆತನೊಂದು ದೆವಸಂ ಬೇಂಟೆವೋಗಿ ವಯೋಕನಪ್ಪುದೊಂದು ಪುಲಿಯಂ ಕಂಡು ಅದನೆಚ್ಚು ತಪ್ಪುವುದುಂ, ಆ ಪುಲಿ ಮುನಿದವನನೆೞ್ಪಟ್ಟಲೊಡಂ,

ಮನದಿಂ ಬೇಗಂ ಕಪಿಯೂ-
ಧನಿಲಯಮಂ ವಿಪುಲತರವಟೋರ್ವೀರುಹಮಂ
ಘನಕೂಟಮಂ ಪಲಾಯನ
ಜನಿತ ವಿಷಾದಂ ನಿಷಾದನೆಯ್ದಿದನಾಗಳ್  ೧೭೩

ಅಂತೆಯ್ದಿ ತರುಶಿಲೆಯಂ ಪಿಡಿದಿರ್ಪನನಲ್ಲಿರ್ಪುದೊಂದು ಕಪಿ ಕಂಡು ಬೇಗಮಿದಿರಂ ಬಂದು ಅಂಜದಿರೆಂದು ಕೈಯಂ ಪಿಡಿದು ತೆಗೆವುದುಂ, ಆ ಜರಚ್ಚಮೂರಂ ಕಂಡು, ಎಲೈ ಶಾಖಾಚರ, ನೀನೀ ವನೇಚರನಂ ತೆಗೆದನಗೆಯ್ದಲ್ಬಾರದಂತು ದೂರಂ ಮಾಡಲ್ವೇಡ ಇವನಪ್ಪೊಡೆ ಮಹಾಪಾತಕಂ ವಿಶ್ವಾಸಘಾತುಕಂ ತನಗಿಂಬುವರೆ ನಿನಗಂ ತಪ್ಪದಿರ್ಪನಲ್ಲಿವನನದಱೆಂ ಕೆಡೆನೂಂಕು, ಕೊಂದು ತಿಂದಪೆನೆಂದೊಡಾ ಕಪಿ ಕುಪಿತನಾಗಿ ಶರಣ್ಬೊಕ್ಕ ಪುಳಿಂದನನೊಪ್ಪಿಸುವನಲ್ಲೆಂ ನಿನ್ನ ಬಂದ ಬಟ್ಟೆಯನೆ ಪೋಗೆಂದೊಡೆ, ಮತ್ತಂ ಪುಲಿಯಿಂತೆಂದುದು:ವಲಿಮುಖ ನೀತಿ ಬಹಿರ್ಮುಖ

ಮಲಿನಾತ್ಮನನೆನ್ನ ಮಾತುಗೇಳದೆ ನೀನೀ
ಖಲನನೊಳಕೊಂಡೊಡೆಲೆ ಕಂ-
ಬಲಕಂ ಶಿವಭೂತಿಗಾದ ಕಥೆಯಂತಕ್ಕುಂ  ೧೭೪

ಎಂಬುದುಂ ಅದೆಂತೆಂದು ಗೋಲಾಂಗೂಲಂ ಬೆಸಗೊಳೆ,  ಶಾರ್ದೂಲಂ ಪೇೞ್ಗುಂ:

ವ|| ಕಾಮ್ಯಕ ಎಂಬ ವನದಲ್ಲಿ ಕಥಕನೆಂಬ ಬೇಡನಿದ್ದನು ಆತನೊಂದು ದಿನ ಬೇಟೆಗೆಂದು ಹೋಗಿ ವಯಸ್ಸಾದ ಒಂದು ಹುಲಿಯನ್ನು ಕಂಡು ಅದನ್ನು ಹೊಡೆಯಲು ಹೋಗಿ ಗುರಿ ತಪ್ಪಲು ಆ ಹುಲಿ ಕೋಪದಿಂದ ಅವನನ್ನು ಅಟ್ಟಿಕೊಂಡು ಬಂತು. ೧೭೩. ಆಗ ಆ ನಿಷಾದನು ಮನೋವೇಗದಿಂದ ಒಂದು ದೊಡ್ಡ ಮರದ ಮೇಲಿರುವ ಕಪಿಗಳ ಮನೆಗೆ ಓಡಿಬಂದನು. ವ || ಮರದ ಕೊಂಬೆಯನ್ನು ಹಿಡಿದು ಮೇಲಕ್ಕೇರುತ್ತಿದ್ದ ಬೇಡನನ್ನು ಕಂಡು ಒಂದು ಕಪಿ ಬೇಗನೆ ಎದುರುಗೊಂಡು ಅಂಜದಿರು ಎಂದು  ಕೈ ಹಿಡಿದು ರಕ್ಷಿಸಿತು. ಆ ಹಳೆಯ ಹುಲಿ ಇದನ್ನು ಕಂಡು ,ಎಲೈ ಶಾಖಾಚರ ! ನೀನು  ವನೇಚರನನ್ನು  ಹತ್ತಿರ ಸೇರಿಸಿ ನನಗೆ ಸಿಕ್ಕದಂತೆ ದೂರಗೊಳಿಸಬೇಡ. ಇವನು ಮಹಾಪಾತಕನು: ವಿಶ್ವಾಸಘಾತುಕನು : ಅನುಕೂಲಸಮಯ ಬಂದಲ್ಲಿ ನಿನಗೂ ಕೇಡನ್ನಂಟುಮಾಡದಿರನು. ಅದರಿಂದ ಇವನನ್ನು ಕೇಳಕ್ಕೆ ಬೀಳಿಸು: ಕೊಂದು ತಿಂದು ಬಿಡುವೆ ಎಂದು ಹೇಳಿತು. ಅದಕ್ಕೆ ಆ ಕಪಿ ಕುಪಿತನಾಗಿ ಶರಣು ಬಂದ ಪುಳಿಂದನನ್ನು ಒಪ್ಪಿಸಲಾರೆ ; ನೀನು ಬಂದ ದಾರಿ ಹಿಡಿ ಎನ್ನಲು ಮತ್ತೊಮ್ಮೆ ಹುಲಿ ಹೀಗೆಂದಿತು; ೧೭೪: ಎಲೈ ವಲೀಮುಖ ! ನನ್ನ ಮಾತು ಕೇಳದೆ ನೀನು ಈ ಖಳನನ್ನು ಒಳಕೊಂಡರೆ ಕಂಬಲಕನಿಗೂ ಶಿವಭುತಿಗೂ ಆದ ಕಥೆಯಂತೆ ಆದೀತು ಎಂದಿತು. ವ|| ಅದೇನೆಂದು ಗೋಲಾಂಗೂಲ ಕೇಳಲು ಆ ಶಾರ್ದೂಲ ಅದನ್ನು ಹೇಳತೊಡಗಿತು: