ಒಂದು ಮಹಾಟವಿಯೊಳ್ ಕಂಬಳಕನೆಂಬ ಬೇಡನೊಂದು ಪುಲಿ ತನ್ನನಟ್ಟಿವರೆ  ಪ್ರಾಣ ಭಯದಿಂ ದೆಸೆಗಾಣದೆ ಪುರಾಣಕೂಪದೊಳ್ ಬಿರ್ದಂ. ಆ ಪುಲಿಯುಂ ಕೋಪಾಂಧನಪ್ಪುದಱೆಂದಲ್ಲಿಯೆ ಬಿರ್ದುದು. ಅನ್ನೆಗಮೊಂದು ಚಪಲಕನೆಂಭ ಕಪಿ ನೀರ್ಗುಡಿಯಲೆಂದು ಬಾವಿಯಂ ಪುಗುತಂದು ತತ್ಕೂಪ ಸಮೀಪದೊಳ್ ನಿಂದು ಪೋಗಲಿಂಬಿಲ್ಲದೆ ತಡಿವಿಡಿದೆಳಲುತ್ತಿರ್ದ ಸರ್ಪನ ಬಾಲಮಂ ಬಳ್ಳಿಯೆಂದು ಬಗೆದು ಪಿಡಿದಿೞೆಯುತ್ತುಮಹಿಸಹಿತಂ ಬಿರ್ದುದು, ಅನ್ನೆಗಂ :

ಮಲರಹಿತನನೂನದಯಾ
ನಿಲಯನದೃಷ್ಟಾರ್ಥಿ ತೀರ್ಥಯಾತ್ರಾಶ್ರಮ ವಿ-
ಹ್ವಲಮಾನಸಂ ಪಿಪಾಸಾ-
ಕುಲಿತಂ ಶಿವಭೂತಿಯೆಂಬ ಪಾರ್ವಂ ಬರುತುಂ  ‘೧೭೫

ತತ್ಕೂಪಮಂ ಕಂಡು ತನ್ನ ಕಯ್ಯ ಕಳಶಮಂ ಬಳ್ಳಿಯೊಳ್ ಕಟ್ಟಿ ನೀರಂ ತೆಗೆವಾಗಳದಂ ಪುಲಿ ಪಿಡಿದು ನೇಲ್ವುದುಮದು ಕಯ್ಗೆ ಬಿಣ್ಣಿತ್ತಾದೊಡದಂ ನೋೞ್ಪೆನೆಂದು ಬಲಿದು ಪಿಡಿದು ಮೆಲ್ಲನೆ ತೆಗೆದು, ಪುಲಿ ಪೊಱಮಟ್ಟು ಪೊಡೆವಡೆ ಕಂಡು ಚೋದ್ಯಂಬಟ್ಟು, ನೀನೀ ಬಾವಿಯೊಳ್ ಬಿೞ್ದ ಕಾರಣಮಾವುದೆಂದು ವಸುಧಾಮರಂ ಬೆಸಗೊಳೆ, ತಾನುಂ ಬೇಡನುಂ ವ್ಯಾಳನುಂ ಗೋಲಾಂಗೂಲನುಂ ಬಿರ್ದ ಕಾರಣಮಂ ಪೇೞ್ದು ನಿಮ್ಮಡಿಗಳ ಕೃಪೆಯಿಂ  ಮೃತ್ಯುಮುಖದಿಂ ಪೊಱಮಟ್ಟು ಬರ್ದುಂಕಿದೆ. ಈ ತೋರ್ಪ  ಪಿರಿಯ ಗಿರಿಯ ತೞ್ಪಲ ಗುಹೆಯೊಳಿರ್ದಪೆನಲ್ಲಿಗೆ ಬನ್ನಿಂ, ನಿಮಗಮೌಲ್ಯಮಪ್ಪ ವಸ್ತುಗಳನೀವೆನೆಂದೊಡೆ ನೀಂ ಪೇೞ್ದ ಪ್ರಾಣಿಗಳಂ ತೆಗೆದು ತೀರ್ಥಯಾತ್ರೆಗೆಯ್ದು ಮಗುೞ್ದು ಬರ್ಪಲ್ಲಿ ನಿನ್ನಲಿಗೆ ಬರ್ಪೆನೆಂದೊಡಾ ಶಾರ್ದೂಲಂ, ಅಂತಪ್ಪೊಡೆ ಈ ವ್ಯಾಧನಂ ತೆಗೆಯದಿರಿಂ ನೀಚಂಗೆನಿತುಪಕಾರಂಗೆಯ್ದೊಡಮೊಳ್ಳಿತ್ತುಗೆಯ್ವನಲ್ಲದೆಂತೆನೆ :

ಶ್ಲೋ || ಉಪಾಕಾರೋಪಿ ನೀಚಾನಾಂ ಅಪಕಾರಾಯ ಕಲ್ಪತೇ
ಪಯಃಪಾನಂ ಭುಜಂಗಾನಾಂ ಕೇವಲಂ ವಿಷವರ್ಧನಂ  ||೭೨||

ಟೀ|| ನೀಚಂಗುಪಕಾರವಂ ಮಾಡಿದೊಡೆ ಅಪಕಾರವನೆ ಮಾಡುವನಲ್ಲದೆ ಶಾಂತನಾಗಲರಿಯಂ, ಅದೆಂತೆಂದೊಡೆ ಹಾವಿಂಗೆ ಹಾಲನೆಱೆದೊಡೆ ವಿಷಂ ಪೆರ್ಚುವಂತೆ- ಎಂಬೀ ಶ್ಲೋಕಾರ್ಥಮನವಧರಿಸಿ ನೆಗೞ್ವುದೆಂದು ಪುಲಿ ಪೇೞ್ದು ಪೋಪುದುಂ ಆ ಪಾರ್ವಂ ತತ್ಕೂಪಸ್ಥಮಪ್ಪ ವ್ಯಾಳನುಮಂ ಗೋಲಾಂಗೂಲನುಮಂ ತೆಗೆವುದುಮವೆರಡುಂ ಪೊಱಮಟ್ಟು ಪೊಡೆಮಟ್ಟು ಬೞೆಯಂ ವಳೀಮುಖನಿಂತೆಂದುದು: ನಿಮ್ಮಡಿ ನಿಮ್ಮ ಪ್ರಸಾದದಿಂದೆನಗೆ ಪುನರ್ಜನ್ಮಮಾದುದು. ಆಂಬದರಿಕಾಶ್ರಮದುಪವನದೊಳಿರ್ಪೆಂ ಅಲ್ಲಿಗೆತ್ತಾನುಂ ಬಂದಿರಪ್ಪೊಡೆನ್ನಾರ್ಪ ಶಕ್ತಿಯಿಂ ಭಕ್ತಗೆಯ್ವೆನೆಂದು ಗೋಲಾಂಗೋಲಂ ಪೇೞ್ದು ಪೋಪುದುಂ ಉರಗಂ ನಿಮ್ಮಡಿ, ನೀಮೆನಗೆ ಪ್ರಾಣೋಪಕಾರಂಗೆಯ್ದಿರ್ ನಿಮ್ಮಗೇನಾನುಮಧ್ವಾನಮಾದಾಗಳೆನ್ನಂ ನೆನೆದೊಡಾಂ ಬಂದು ದೇವರ ಸೇವೆಯಂ ಮಾಡಿ ಪೋಪೆನೆಂದುರುಗಂ ಪೇೞೆ ಪೋಪುದುಂ, ಆ ದ್ವಿಜಂ ತನ್ನ ಮನದೊಳಿಂತೆಂದು ಬಗೆದು,

ಪೊಲ್ಲ ಗಡ ತೆಗೆಯಲಪ್ಪೊಡೆ
ಭಿಲ್ಲನನೆಂದೆನಗೆ ಪುಂಡರೀಕಂ ಪೇೞ್ದ-
ತ್ತಿಲ್ಲುಭಯಪಕ್ಷಪಾತಮೆ
ಪೊಲ್ಲದು ಪೊಲ್ಲದೆ ಪರೊಪಕಾರವ್ಯಸನಂ  ೧೭೬

ಎಂತುಂ  ‘ಯತ್ಪರಾರ್ಥಂ ಶರೀರಂ’ ಎಂಬ ಸುಭಾಷಿತಂ ಪೇೞ್ದೆಂತೆ ಈ ಪುರುಷನಂ ತೆಗೆಯದಂದು ಕಾಪುರುಷನಪ್ಪೆಂ ತನ್ನಪ್ಪುದಕ್ಕೆಂದು ಪರೋಪಕಾರವಿಭೂತಿ ಶಿವಭೂತಿ

ಕರುಣಾರಸಾರ್ದ್ರಹೃದಯಂ
ದುರಾತ್ಮನೆನ್ನದೆ ಕಿರಾತನಂ ತೆಗೆದನಿಳಾ-
ಮರಜನವಿನುತಂ ಭಾವಿಸೆ
ಪರಹಿತನಿರತಾತ್ಮನಪ್ಪವಂಗಱೆದುಂಟೇ  ೧೭೭

ಅಂತು ತೆಗೆವುದುಂ ಕಿರಾತನುಂ ಪೊಡೆವಟ್ಟು ನಿಮ್ಮಡಿಯ ಧರ್ಮದಿಂ ನಾ ಬರ್ದುಂಕಿದೆಂ. ಆಂ ಪದ್ಮನಗರದೊಳಿರ್ಪೆಂ. ನೀಮೆತ್ತಾನುಂ ಬಾರ್ತೆಯಪ್ಪೊಡಲ್ಲಿಗೆ ಬನ್ನಿಂ. ಎನ್ನಾರ್ಪನಿತು ಶಕ್ತಿಯೊಳುಪಕರಿಸಿದಪ್ಪೆನೆಂದು ಪೋದುಂ, ಶಿವಭೂತಿಯುಂ ಕೆಲವು ಕಾಲಕ್ಕೆ ತೀರ್ಥಯಾತ್ರೆಗೆಯ್ದು ಮಗುೞ್ದು ಬರುತ್ತುಂ ಉತ್ತುಂಗಶಿಖರಿಯ ತಪ್ಪಲೊಳ್ ಬರ್ಪುದನಾ ವ್ಯಾಘ್ರಂ ಕಂಡು ಶೀಘ್ರ ಮಿದಿರಂಬಂದು ಶಿವಭೂತಿಗೆ ಪಾದಾಕ್ರಾಂತನಾಗಿ ತನ್ನಿರ್ಪ ಗುಹೆಗೊಡಂಗೊಂಡು ಪೋಗಿ’

ಹಾರಾಂಗದ ಕುಂಡಲ ವಿ-
ಸ್ತಾರ ಕಿರೀಟಾದ್ಯಮೂಲ್ಯಭೂಷಣಚಯಮಂ
ಚಾರುಗುಣಾಂಕಿತನಿರದೆ ಚ-
ಮೂರಂ ಶಿವಭೂತಿಗಿತ್ತುದತ್ಯಾದರದಿಂ  ೧೭೮

ಅಂತು ತೊಡಿಗೆಗಳಂ ಪುಲಿಯಿಂ ಪಡೆದು ಶಿವಭೂತಿ ಪರಮವಿಭೂತಿಗಾಸ್ಪದನಾದೆನೆಂದು ಸಂತಸಂಬಟ್ಟಲ್ಲಿಂ ತಳರ್ದು ಬದರಿಕಾಶ್ರಮವನಕ್ಕೆ ಬಂದು ಪಥಪರಿಶ್ರಮವನಾಱೆಸಲೆಂದು ಧರಾಮರಂ ಮಾಮರದಡಿಯೊಳ್ ವಿಶ್ರಮಿಸಿರ್ಪುದುಮಾ ವನದೊಳಿರ್ಪ ಬಲೀಮುಖಂ ಕಂಡತಿಪ್ರೀತಿಯಿಂ ಪ್ರಸನ್ನಮುಖನಾಗಿ ಬಂದು ಪೊಡೆಮಟ್ಟು,

ಪನಸಾಮ್ರ ಜಂಬು ಜಂಬೀ-
ರ ನಾರಿಕೇಳೀ ಕಪಿತ್ಥ ಕದಳೀನಾರಂ-
ಗ ನವೀನ ಫಲಾವಳಿಯಂ
ವಿನಯದಿನಾ ದ್ವಿಜವರಂಗೆ ಕಪಿವರನಿತ್ತಂ  ೧೭೯

ಅಂತು ಶಾಖಾಚರಂ ತಂದಿತ್ತ ಫಲಂಗಳಂ ಕೊಂಡು ಶಿವಭೂತಿಯುಮಂದಿನ ದಿವಸಮಲ್ಲಿರ್ದು ಕೆಲವಾನಂ ದಿವಸಕ್ಕೆ ಪದ್ಮನಗರಮನೆಯ್ದಿ ಕಂಬಳಕನ ಮನೆಯನಱಸುತ್ತಂ ಬರ್ಪುದುಮಾ ಕಿರಾತಂ ಕಂಡು ಪೊಡೆವಟ್ಟು ಮನೆಗೊಡಂಗೊಂಡೊಯ್ದು ಶಿವಭೂತಿಗಭ್ಯಾಗತಕ್ರಿಯೆಯಂ ಮಾಡಲುಪಾಯಮಿಲ್ಲದುಸಿರದಿರ್ಪನಂ ಕಂಡೇಂ ಮಗನೆ ! ಚಿಂತಿಸುತಿರ್ದಪೆಯೆಂಬುದುಂ ನಿಮ್ಮಡಿಗಳುಂ ಬಿಜಯಂಗೆಯ್ದಿರಾನುಂ ನಿರುಪಾಯನಾಗೆರ್ದಪೆನೆಂಬುದುಂ ಇನ್ನುಮಿದರ್ಕೊಂದುಂ ಚಿಂತೆಗೆಯ್ಯಲ್ವೇಡಿನ್ನುಂ ನಿನಗೆ ಬಾಳ್ವುಪಾಯಮನಾನೇ ಮಾಳ್ಪೆನೆಂದೇಕಾಂತದೊಳ್ ಕುಳ್ಳಿರ್ದು ತನ್ನ ತಂದ ಮೂಲ್ಯವಸ್ತುಗಳನವಂಗೆ ತೋಱುವುದುಂ,

ಎನಗೆ ಹಿತಂ ಬ್ರಾಹ್ಮಣನೀ-
ತನೆನ್ನದವಿವೇಕಿಯಾಗಿ ಶಿವಭೂತಿಗೆ ತೊ-
ಟ್ಟನೆ ಬಗೆದನಹಿತಮಂ ತ-
ದ್ವನಚರನೆಂತುಂ ಕೃತಘ್ನರೇನಂ ಮಾಡರ್  ೧೮೦

ಅಂತು ಬಗೆದು ಪೊೞಲನಾಳ್ವರಸನಲ್ಲಿಗೆ ಪೋಗಿ, ದೇವಾ ! ನಿಮ್ಮ ತುಡುವಾಭರಣಂಗಳಂ ಪಲವಮೂಲವಸ್ತುಗಳಂ ತಂದೆನ್ನ ಮನೆಯೊಳೊರ್ವ ಪಾರ‍್ವನಿರ್ದಪನೆಂದು ಪೇೞ್ದುಮರಸಂ, ತಳಾಱರ್ಗೆ ಪೇೞಲೊಡಮವರ್ ಪರಿದಾ ಪಾರ್ವನಂ ಪಿಡಿದು ಪೆಡಗಯ್ಯಂ ಕಟ್ಟಿ ತಂದೊಪ್ಪಿಸುವುದುಮರಸನಾತನ ಕಯ್ಯೊಳಿರ್ದ ವಸ್ತುಗಳೆಲ್ಲಮಂ ಕೊಂಡು ಬೞೆಕ್ಕೆ ಸೆಱೆಯೊಳಿಕೆ, ಕಿಱೆದು ಬೇಗಂ ಬೆಱಗಾಗಿರ್ದು ತನ್ನ ಮರುಳ್ತನಕ್ಕೆ ತಾನೆ ಹಾಸ್ಯಂಗೆಯ್ದು ತನಗೆ ಬಂಧನ ಮೋಕ್ಷೋಪಾಯಮಂ ಚಿಂತಿಸಿ, ನಿನಗಧ್ವಾನಮಾದಾಗಳೆನ್ನಂ ನೆನೆವುದೆಂದು ಪಾವು ಪೇೞ್ದು ಪೋದುದಂ ನೆನೆದು ನೋೞ್ಪೆನೆಂದು ನೆನೆಯಲೊಡಮಾ ಪಾವು ಮನದಿಂ ಮುನ್ನವೆ ಬಂದು ಪೊಡೆಮಟ್ಟು, ಬೆಸನೇನೆಂಬುದುಮೀ ಪೊೞಲನಾಳ್ವರಸನ್ನೆರ್ಥಮೆಲ್ಲಮಂ ಕೊಂಡುದಲ್ಲದೆಯುಮೆನಗಿಂತಪ್ಪವಸ್ಥೆಯಂ ಮಾಡಿದನಿದರ್ಕೆ ತಕ್ಕುದಂ ನೀನೆ ಬಲ್ಲೆಯೆಂಬುದುಮಿದಾವ ಗಹನಮರಸನ ಪಿರಿಯ ಮಗನನೀಗಳೆ ಪೋಗಿ ಕೊಂದಪೆಂ, ನಿಮಗಲ್ಲದೆ ಪೆಱರಾರ್ಗಂ ಸಾಧ್ಯಮಾಗೆಂ, ನೀಮೊಂದುಪಾಯದಿಂ ಬಂದು ನೀರನಭಿಮಂತ್ರಿಸಿ ತಳಿಯಲೊಡಂ ನಿರ್ವಿಷಮಪ್ಪೆಂ ಅಲ್ಲಿ ನಿಮ್ಮ ಸ್ವಾರ್ಥಮೆಲ್ಲಮಂ ತೀರ್ಚಿಕೊಳ್ಳಿಮೆಂದು ಪೇೞ್ದು ಪೋಗಿ ನಂದನವನದೊಳಾಡುತ್ತಿರ್ದ ನೃಪನಂದನನಂ ಕಂಡಾಗಳ್.

ಸಕಲಕಲಾಧರನಂ ರಾ-
ಹು ಕೊಳ್ವ ತೆಱದಿಂ ವಿಷಾತಿಭೀಕರದಂಷ್ಟ್ರಾ
ನಿಕರಂ ಕೊಂಡುದು ನರಪಾ-
ಲಕಸುತನಂ ಮಿತ್ರಕಾರ‍್ಯತತ್ಪರನುರಗಂ  ೧೮೧

ಅಂತು ಪಾವು ಕೊಳಲೊಡಂ, ವಿಷಮವಿಷಧರವಿಷದೂಷಿತನಾಗಿರ್ದ ಕುಮಾರನಂ ಗಾರುಡಿಗರ್ ಬಂದು ಕಂಡು ತಮ್ಮತಮ್ಮಱೆವಂದದಿಂ ಮಂತ್ರಿಸಿದೊಡೆಂತುಂ ನಿರ್ವಿಷಮಾಗದಿರ್ಪುದು ಮರಸಂ ಕಂಡೀ ಕುಮಾರನನೆತ್ತಿದಂಗೆ ಬೇಡಿತ್ತಂ  ಕುಡುವೆನೆಂದು  ಡಂಗುರಂಬೊಯ್ಸಲೊಡಂ ಶಿವಭೂತಿ ಕೇಳ್ದು ತಾನೆತ್ತುವೆನೆಂದು ಪೇೞ್ದೊಡರಸಂ ಕೇಳ್ದು ಪರಿತಂದು ಶಿವಭೂತಿಯಂ ಸೆಱೆಯಂ ಬಿಟ್ಟೊಡಗೊಂಡು ಪೋಪುದುಮಾತಂ ಪೋಗಿ ಗುಂಡಿಗೆಯ ನೀರನಭಿಮಂತ್ರಿಸಿ ತಳಿಯಲೊಡಂ, ಕುಮಾರಂ ದಷ್ಟನಿಷ್ಟನಂ ಕಂಡಂತೆ ಭೋಂಕನೆರ್ದುಕುಳ್ಳಿರ್ದನಂ ಕಂಡರಸಂ ಸಂತೋಷಂಬಟ್ಟು ಶಿವಭೂತಿಗೆ ಪಿರಿದುಂ ವಿಭೂತಿಯಂ ಮಾಡಿ ಆತಂಗೆ ಕಿರಾತನಿಂದಾದವಸ್ಥೆಯಂ ಕೇಳ್ದಾ ಕಿರಾತನಂ ಯಮಪುರಕ್ಕೆ ಕಳುಪಿದಂ.

ಅದು ಕಾರಣದಿಂದೀ ಪಾಪಕರ್ಮನಂ ನಂಬಲ್ವೇಡ: ಕೆಡೆನೂಂಕೆಂಬುದುಂ ಮರ್ಕಟ ನಿಂತೆಂದುದು; ಈತನನಾವ ತೆಱದಿಂ ನೂಂಕುವನಲ್ಲೆಂ ಪೋಗನೆ, ಪುಲಿ ಪೋದುದು. ಇತ್ತಂ ತರುಚರಂ ವನಚರಂ ಪಸಿದನೆಂದು ಫಲಾವಳಿಯಂ ತರಲ್ಪೋಪುದುಮಾ ಪಾಪಾಕರ್ಮನದಱ ಮಱೆಗಳಂ ಕಂಡಿವೆನ್ನ ಕುಟುಂಬಕ್ಕೊಂದೆರಡು ದಿವಸದಾಹಾರಮಕ್ಕುಮೆಂದವಂ ತೆಗೆದುಕೊಂಡು ಪೋದಂ. ಅದಱೆಂ

ಏ ಪಡೆಮಾತೀ ಜಗದೊಳ್
ಕೋಪನನಂ ಪಾಪರೂಪನಂ ನಂಬಿದವಂ-
ಗಾಪತ್ತಱೆವಿವೇಕಮನ-
ಸ್ತಾಪ ಪರಂಪರೆಗಳೆಂಬಿವಕ್ಕುಮಮೋಘಂ  ೧೮೨

ಎಂದು ದವನಕಂ ಪೇೞ್ದ ಕಥೆಯಂ ಪಿಂಗಳಕಂ ಕೇಳ್ದಿಂತೆಂದಂ:

ವಿಷಮಮತಿ ನಿನ್ನ ಪೇೞ್ದುದೆ
ವಿಶೇಷಮತಮಪ್ಪುದಾದೊಡಂ ವೃಷಭೇಂದ್ರಂ
ಪಶು ನಿಷ್ಪಾಪಂ ಧಾರ್ಮಿಕ-
ನಶೇಷನೀತಿಜ್ಞನುಂ ಕೃತಜ್ನನುಮಪ್ಪಂ  ೧೮೩

ಅದಱೆಂ ಸಂಜೀವಕನೊಳಾದ ವಿಶ್ವಾಸಂ ದೋಷಮಲ್ಲೆನೆ ಮತ್ತಂ ದವಕನಿಂತೆಂದಂ : ಸಂಜೀವಕನ ತತ್ಕೂರ್ಮೆಯನಿನ್ನೆವೇೞ್ವೆ ಕ್ಷತ್ರಿಯಧರ್ಮವರ್ತಿಯಪ್ಪ ನಿನಗೆ ಯತಿಧರ್ಮಮಂ ಪತ್ತಿಸಿದಂ. ನೀನುಮದಱಂತೆ ಕೆಲವು ದಿನಕ್ಕೆ ಪುಲ್ಲಂ ತಿಂದು ಪಶುತ್ವಮಂ ಪೊರ್ದದಿರೆ ಎಂತುಂ,

ವಾಕ್ಯಂ || ಸಂಸರ್ಗಜಾ ದೋಷಗುಣಾ ಭವಂತಿ

ಟೀ|| ದೋಷಗುಣಗಳು ಸಹವಾಸದಿಂದುಂಟಾಗುವವು-ಎಂಬ ಸುಭಾಷಿತಾರ್ಥಮೇಕೆ ತಪ್ಪುಗುಮೆನೆ, ಪಿಂಗಳಕನದೆಂತೆನೆ, ದವನಕಂ ಪೇೞ್ಗುಂ:

೧೭೫. ಒಂದು ದೊಡ್ಡ ಕಾಡಿನಲ್ಲಿ ಕಂಬಳಕನೆಂಬ ಬೇಡನು ಒಂದು ಹುಲಿಯು ತನ್ನನ್ನು  ಅಟ್ಟಿಕೊಂಡು ಬರಲು ಪ್ರಾಣಭಯದಿಂದ ದಿಕ್ಕುಗಾಣದೆ ಒಂದು ಹಳೆಯ ಬಾವಿಯಲ್ಲಿ ಬಿದ್ದನು. ಆ ಹುಲಿಯೂ ಕೋಪಾಂಧನಾಗಿ ಅದೇ ಬಾವಿಯಲ್ಲಿ ಬಿದ್ದಿತು. ಅಷ್ಟರಲ್ಲಿ ಚಪಲಕನೆಂಬ ಒಂದು ಕಪಿ ನೀರು ಕುಡಿಯಬೇಕೆಂದು ಆ ಬಾವಿಯ ಬಳಿಗೆ ಬಂದು ಅದರ ಸಮೀಪದಲ್ಲಿ ನಿಂತು ಹೋಗಲು ದಾರಿಯಿಲ್ಲದೆ ದಡವನ್ನು ಹಿಡಿದುಕೊಂಡು ಜೋತಾಡುತ್ತಿದ್ದ ಸರ್ಪನ ಬಾಲವನ್ನು ಬಳ್ಳಿಯೆಂದು ತಿಳಿದು ಹಿಡಿದು ಇಳಿಯುತ್ತಿರಲು ಆ ಸರ್ಪಸಹಿತವಾಗಿ ಬಿದ್ದಿತು. ಅಷ್ಟರಲ್ಲಿ ೧೭೫. ತೀರ್ಥಯಾತ್ರಾರ್ಥಿಯಾದ ದಯಾಪರನಾದ ಬಾಯಾರಿದ ಶಿವಭೂತಿಯೆಂಬ ಬ್ರಾಹ್ಮಣನು ಬಂದನು. ವ|| ಆ ಬಾವಿಯನ್ನು ಕಂಡು ತನ್ನ ಕಯ್ಯ ಕಲಶವನ್ನು ಬಳ್ಳಿಯಿಂದ ಕಟ್ಟಿ ನೀರನ್ನು ತೆಗೆಯುತ್ತಿರಲು ಅದನ್ನು ಹುಲಿ ಹಿಡಿದು ನೇಲುತ್ತಿರಲು ಕುಯ್ಗೆ ಭಾರವಾದರೂ ಅದನ್ನು ನೋಡೊಣವೆಂದು ಬಲವಾಗಿ ಹಿಡಿದು ಮೇಲಕ್ಕೆ ತೆಗೆಯಲು ಹುಲಿ ಹೊರಕ್ಕೆ ಬಂದು ನಮಸ್ಕರಿಸುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟುನು. ನೀನು ಈ ಬಾವಿಯಲ್ಲಿ  ಬಿದ್ದ ಕಾರಣವೇನು ಎಂದ ಶಿವಭೂತಿ ಕೇಳಲು ತಾನೂ, ಬೇಡನೂ, ಸರ್ಪನೂ, ಗೋಲಾಂಗೂಲನೂ ಬಿದ್ದ ಕಾರಣವನ್ನು  ಅದು ಹೇಳಿತು. ನಿಮ್ಮ ಕೃಪೆಯಿಂದ ಮೃತ್ಯುಮುಖದಿಂದ ಪಾರಾಗಿ ಬದುಕಿದೆ, ಇಲ್ಲಿಗೆ ತೋರುವ ದೊಡ್ಡ ಪರ್ವತದ ತಪ್ಪಲ ಗುಹೆಯಲ್ಲಿ ನಾನಿರುವೆನು. ಅಲ್ಲಿಗೆ ಬನ್ನಿ. ನಿಮಗೆ ಅಮೂಲ್ಯವಾದ ವಸ್ತಗಳನ್ನು ಕೊಡುವನು ಎನ್ನಲು ನೀನು ಹೇಳಿದ ಪ್ರಾಣಿಗಳನ್ನು ಹೊರಕ್ಕೆ ತೆಗೆದು  ತೀರ್ಥಯಾತ್ರೆ ಮಾಡಿ ಹಿಂದಿರುಗಿ ಬರುವಾಗ ನಿನ್ನಲ್ಲಿಗೆ ಬರುವೆನೆಂದು ಹೇಳಿದನು ಅದಕ್ಕೆ ಆ ಶಾರ್ದೂಲನು ಹಾಗಾದರೆ  ಈ ವ್ಯಾಧನೊಬ್ಬನನ್ನು ತೆಗೆಯಬೇಡಿರಿ. ನೀಚನಿಗೆ ಎಷ್ಟೇ ಉಪಕಾರ ಮಾಡಿದರೂ ಒಳ್ಳೆಯದನ್ನು ಮಾಡುವವನಲ್ಲ. ಶ್ಲೋ || ನೀಚನಿಗೆ ಉಪಾಕಾರವನ್ನು ಮಾಡಿದರೆ ಅಪಕಾರವನ್ನೇ ಬಗೆಯುವನಲ್ಲದೆ ಶಾಂತವಾಗಲರಿಯನು. ಹಾವಿಗೆ ಹಾಲೆರದರೆ ವಿಷಮಾತ್ರ ಅಕವಾಗುತ್ತದೆ. ವ|| ಇದನ್ನು ತಿಳಿದ ವರ್ತಿಸಿರಿ ಎಂದು  ಹುಲಿಯು ಹೇಳಿ ಹೋಯಿತು. ಆ ಬ್ರಾಹ್ಮಣನು ಆ ಬಾವಿಯಲ್ಲಿ ಬಿದ್ದಿದ್ದ ಸರ್ಪನನ್ನೂ, ಗೋಲಾಂಗೂಲವನ್ನೂ ತೆಗೆಯಲು ಅವು ಹೊರಬಂದು ನಮಸ್ಕರಿಸಿ ವಲೀಮುಖ ಹೀಗೆಂದಿತು : ಪೂಜ್ಯರೇ, ನಿಮ್ಮ ಪ್ರಸಾದದಿಂದ ನನಗೆ ಪುನರ್ಜನ್ಮವಾಯಿತು ನಾನು ಬದರಿಕಾಶ್ರಮದ ಉಪವನದಲ್ಲಿರುವೆ. ಅಲ್ಲಿಗೆಂದಾದರೂ ತಾವು ಬಂದಾಗ ನನ್ನಿಂದಾದ ಶಕ್ತಿಯಿಂದ ಭಕ್ತಿಯನ್ನು ಮಾಡುವೆನೆಂದು ಗೋಲಾಂಗೂಲವು ಹೇಳಿಹೋಯಿತು. ಸರ್ಪನು ನೀವು ನನಗೆ ಪ್ರಾಣೋಪಕಾರವನ್ನು ಮಾಡಿದಿರಿ. ನಿಮಗೇನಾದರೂ ಕಷ್ಟ ಬಂದಲ್ಲಿ ನನ್ನನ್ನು ನೆನೆದ ಕೂಡಲೇ ಬಂದು ತಮ್ಮ ಸೇವೆ ಮಾಡಿ ಹೋಗುವೆನೆಂದು ಹೇಳಿಹೋಯಿತು. ಆಗ ಬ್ರಾಹ್ಮಣನು ತನ್ನ ಮನಸ್ಸಿನಲ್ಲಿ ಹೀಗೆಂದು ಆಲೋಚಿಸಿದನು. ೧೭೬. ಆ ಭಿಲ್ಲನನ್ನು ಹೊರತೆಗೆದರೆ ಕೇಡಾಗುವುದೆಂದು ಆ ಹುಲಿ ಹೇಳಿಹೋಯಿತಷ್ಟೆ. ಇಲ್ಲ ಉಭಯ ಪಕ್ಷಪಾತವೇ ನೀಚವಾದುದು. ಪರೋಪಕಾರ ಎಂದಾದರೂ ನೀಚಕಾರ್ಯವೇ ?  ವ|| ಹೇಗೂ ‘ಯತ್ಪರಾರ್ಥಂ ಶರೀರಂ’ ಎಂಬ ಸುಭಾಷಿತವು ಹೇಳಿದಂತೆ    ಈ ಪುರುಷನನ್ನು ತೆಗೆಯದಿದ್ದಲ್ಲಿ ಕಾಪುರುಷನೆನಿಸುವೆನು, ತನಗಾಗುವುದಾಗಲಿ ಎಂದು ಪರೋಪಕಾರ ವಿಭೂತಿಯೆನಿಸಿದ ಆ ಶಿವಭೂತಿ ೧೭೭. ಕರುಣಾರಸಾರ್ದ್ರಹೃದಯನಾಗಿ ದುರಾತ್ಮನೆಂದು ಎಣಿಸದೆ ಆ ಕಿರಾತನನ್ನು ಹೊರಕ್ಕೆ ತೆಗೆದನು. ಪರಹಿತನಿರತಾತ್ಮರಿಗೆ ಅಸಾಧ್ಯವಾದುದುಂಟೇ ? ವ|| ಹಾಗೆ ತೆಗೆಯಲು ಕಿರಾತನೂ ನಮಸ್ಕರಿಸಿ ನಿಮ್ಮಿಂದಾಗಿ ಬದುಕಿದೆ. ನಾನು ಪದ್ಮನಗರದಲ್ಲಿ ವಾಸಮಾಡಿಕೊಂಡಿರುವೆ. ನಿಮಗೆಲ್ಲಿಯದರೂ ಅನುಕೂಲವಾದಗ ಅತ್ತಕಡೆ ಚಿತ್ತೈಸಿರಿ. ನನ್ನಿಂದಾದಷ್ಟು ಭಕ್ತಿಯಿಂದ ನಿಮ್ಮನ್ನು ಉಪಚರಿಸವೆನೆಂದು ಹೇಳಿ ಹೊರಟುಹೋದನು. ಶಿವಭೂತಿಯೂ ಕೆಲವುಕಾಲಕ್ಕೆ ತೀರ್ಥಯಾತ್ರೆ ಪೂರೈಸಿ ಹಿಂದಿರುಗಿ ಬರುತ್ತಿರಲು ಉತ್ತುಂಗ  ಶಿಖರಿಯ ತಪ್ಪಲಲ್ಲಿ ಅವನು ಬರುತ್ತಿರುವುದನ್ನು ಆ ವ್ಯಾಘ್ರ ಕಂಡು ಶೀಘ್ರವಾಗಿ ಎದುರುಗೊಂಡು ಶಿವಭೂತಿಗೆ ನಮಸ್ಕರಿಸಿ ತಾನಿರುವ ಗುಹೆಗೆ ಕರೆದುಕೊಂಡು ಹೋಯಿತು. ೧೭೮. ಹಾರ ಅಂಗದ, ಕುಂಡಲ, ಕಿರೀಟಾದಿ ಅಮೂಲ್ಯ ಭೂಷಣಗಳನ್ನು ಆದರಪೂರ್ವಕವಾಗಿ ಶಿವಭೂತಿಗೆ ಕೊಟ್ಟಿತು. ವ|| ಹಾಗೆ ಆ ತೊಡಿಗೆಗಳನ್ನು ಹುಲಿಯಿಂದ ಪಡೆದು ಶಿವಭೂತಿಯು ಮಹಾ ಐಶ್ವರ್ಯಕ್ಕೆ ಆಸ್ಪದವಾಯಿತೆಂದು ಸಂತೊಷಪಟ್ಟು ಅಲ್ಲಿಂದ ಹೊರಟನು. ಬದರಿಕಾಶ್ರಮವನಕ್ಕೆ ಬಂದು ಪಥಪರಿಶ್ರಮವನ್ನು ಆರಿಸಿಕೊಳ್ಳಲೆಂದು ಶಿವಭೂತಿ ಒಂದು ಮಾವಿನಮರದಡಿಯಲ್ಲಿ ವಿಶ್ರಮಿಸಿಕೊಂಡಿರಲು ಆ ವನದಲ್ಲಿದ್ದ ಬಲೀಮುಖನು ಕಂಡು ಅತಿ ಪ್ರೀತಿಯಿಂದ ಪ್ರಸನ್ನಮುಖನಾಗಿ  ಬಂದು ನಮಸ್ಕರಿಸಿ.೧೭೯. ಹಲಸು, ಮಾವು, ನೇರಳೆ, ಕಿತ್ತಳೆ, ತೆಂಗು, ಬಾಳೆ, ಬೇಲ ಮೊದಲಾದ ಹೊಸ ಹೊಸ ಹಣ್ಣುಗಳನ್ನು  ತಂದು ವಿನಯಪೂರ್ವಕವಾಗಿ ಆ ಕಪಿವರನು ಕೊಟ್ಟನು. ವ|| ಹಾಗೆ ಶಾಖಾಚರನು ತಂದಿತ್ತ ಫಲಗಳನ್ನು ಕೊಂಡು ಶಿವಭೂತಿಯು ಅಂದು ಅಲ್ಲಿಯೇ ಉಳಿದು ಕೆಲವು ದಿನಗಳ ಬಳಿಕ ಪದ್ಮನಗರವನ್ನು ಸೇರಿ ಕಂಬಳಕನ ಮನೆಯನ್ನು ಅರಸುತ್ತ ಬರಲು ಆ ಕಿರಾತನು ಕಂಡು ನಮಸ್ಕರಿಸಿ ಮನೆಗೆ ಕರೆದುಕೊಂಡು ಬಂದು ಶಿವಭೂತಿಗೆ ಅಭ್ಯಾಗತ ಕ್ರಿಯೆಯನ್ನು ಮಾಡಲು ಉಪಾಯವಿಲ್ಲದೆ ಸುಮ್ಮನೆ ಇದ್ದುದನ್ನು ಕಂಡು ಮಗನೆ ಏನು ಚಿಂತಿಸುತ್ತಿರುವೆ ಎಂದು ಕೇಳಿದನು. ಅದಕ್ಕೆ ಆ ಬೇಡನು ನಿಮ್ಮಡಿಗಳು ಚಿತ್ತೈಸಿದಿರಿ: ನಾನು ನಿಮ್ಮನ್ನು ಸತ್ಕರಿಸಲು ನಿರುಪಾಯನಾಗಿರುವೆನೆಂದನು. ಇನ್ನು ನೀನು ಇದಕ್ಕಾಗಿ ಚಿಂತಿಸಬೇಡ : ನಿನಗೆ ಬದುಕುವ ಉಪಾಯವನ್ನು ನಾನೇ ಯೋಚಿಸುವೆನೆಂದು ಏಕಾಂತದಲ್ಲಿ ಕುಳಿತುಕೊಂಡು ತಾನು ತಂದ ಅಮೂಲ್ಯ ಆಭರಣಗಳನ್ನು ತೋರಿಸಿದನು. ಆಗ ಆ ವನೇಚರನು ೧೮೦. ಈ ಬ್ರಾಹ್ಮಣ ತನಗೆ ಹಿತವನ್ನಂಟು ಮಾಡಿದವನೆಂದು ಬಗೆಯದೆ ಶಿವಭೂತಿಗೆ ಅಹಿತವನ್ನು ಎಣಿಸಿದನು. ಕೃತಘ್ನರೇನು ಮಾಡಲಿಕ್ಕಿಲ್ಲ ! ವ|| ಆ ನಗರವನ್ನು ಆಳುವ ಅರಸನಲ್ಲಿಗೆ ಹೋಗಿ ದೇವಾ ! ನೀವು ಧರಿಸುವ ಆಭರಣಗಳನ್ನು ತಂದ ಒಬ್ಬ ಬ್ರಾಹ್ಮಣನು ನನ್ನ ಮನೆಯಲ್ಲಿರುವನು ಎಂದು ಹೇಳಿದನು. ಅರಸನು ತನ್ನ ತಳಾರರಿಗೆ ಆಜ್ಞಾಪಿಸಲು ಅವರು ಅಲ್ಲಿಗೆ ಧಾವಿಸಿ ಅವನ ಹೆಡಗಯ್ಯನ್ನು ಕಟ್ಟಿ ತಂದು ಅರಸನಿಗೆ ಒಪ್ಪಿಸಲು ಅವನು ಬ್ರಾಹ್ಮಣನ ಕಯ್ಯಲ್ಲಿದ್ದ ಆಭರಣಗಳೆನ್ನಲ್ಲ ಕಸಿದುಕೊಂಡು  ಸೆರೆಮನೆಯಲ್ಲಿಟ್ಟನು. ಬ್ರಾಹ್ಮಣನು ತನ್ನ ಮರುಳುತನಕ್ಕೆ ತಾನೇ ಹಾಸ್ಯಮಾಡಿ ತನ್ನ ಬಂಧನದ ಬಿಡುಗಡೆಯ ಉಪಾಯವನ್ನು ಚಿಂತಿಸಿ ನಿನಗೆ ಕಷ್ಟ ಬಂದಾಗ ನನ್ನನ್ನು ನೆನೆ ಎಂದು ಹಾವು ಹೇಳಿದ ಮಾತನ್ನು ನೆನೆಪಿಸಿಕೊಂಡು ಹಾಗೆ  ಸ್ಮರಿಸಿಕೊಳ್ಳಲು ಆ ಹಾವು ಆಲೋಚಿಸುವ ಮೊದಲೇ ಅಲ್ಲಿಗೆ ಬಂದು ನಮಸ್ಕರಿಸಿ ನನ್ನಿಂದೇನಾಗಬೇಕೆಂದು ಕೇಳಿತು. ಈ ಊರಿನ ಅರಸನು ನನ್ನ ಐಶ್ವರ್ಯವನ್ನೆಲ್ಲ ದೋಚಿಕೊಂಡು ನನಗೆ ಇಂಥ ಅವಸ್ಥೆಯನ್ನಂಟುಮಾಡಿದನು. ಇದಕ್ಕೆ ತಕ್ಕುದನ್ನು ನೀನೇ ಬಲ್ಲೆ ಎಂದು ಹೇಳಿದನು. ಅದಕ್ಕೆ ಸರ್ಪನು ಇದಾವ ಮಹಾಕಾರ್ಯ ಅರಸನ ಹಿರಿಯ ಮಗನನ್ನು ಈಗಲೇ ಹೋಗಿ ಕೊಂದುಬಿಡುವೆನು. ನಿಮಗಲ್ಲದೆ ಗುಣಮಾಡಲು ಬೇರೆ ಯಾರಿಗೂ ಸಾಧ್ಯವಾಗದಂತೆ ಮಾಡುವೆನು. ನೀವು ಬಂದು ನೀರನ್ನು ಅಭಿಮಂತ್ರಿಸಿ ತಳಿದ ಕೂಡಲೇ ನಿರ್ವಿಷನಾಗುವೆ. ಆಗ ನಿಮ್ಮ ಉದ್ದೇಶವನ್ನು ನೆರವೇರಿಸಿಕೊಳ್ಳಿರಿ ಎಂದು. ೧೮೧. ನಂದನವನದಲ್ಲಿ ಆಡುತ್ತಿದ್ದ ಅರಸುಮಗನ್ನು ಆ ಮಿತ್ರಕಾರ್ಯತತ್ಪರನಾದ ಉರಗ ಕಚ್ಚಿತು.  ವ|| ವಿಷಸರ್ಪ ಕಚ್ಚಿದ ರಾಜಕುಮಾರನನ್ನು ಗಾರುಡಿಗರು ಬಂದು ಕಂಡು ತಮ್ಮ ತಮ್ಮ ತಿಳುವಳಿಕೆಗೆ ಅನುಗುಣವಾಗಿ ಮಂತ್ರಿಸಿದರೂ ನಿರ್ವಿಷವಾಗದೆ ಇರಲು ಅರಸನು ಈ ರಾಜಕುಮಾರನನ್ನು ಏಳಿಸಿದವನಿಗೆ ಬೇಡಿದುದನ್ನು ಕೊಡುವೆನು ಎಂದು ಡಂಗುರ ಸಾರಲು ಅದನ್ನು ಕೇಳಿ ಶಿವಭೂತಿಯು ತಾನು ರಾಜಕುಮಾರನನ್ನು ಬದುಕಿಸುವೆನೆಂದು ಹೇಳಲು ಅವನನ್ನು ಸೆರೆಯಿಂದ ಬಿಡಿಸಿದರು.  ತನ್ನ ಗುಂಡಿಗೆಯ ನೀರನ್ನು ಅಭಿಮಂತ್ರಿಸಿ ತಳಿಯಲು ರಾಜಕುಮಾರನು ದಷ್ಟನು ತನ್ನ  ಇಷ್ಟವನ್ನು ಕಂಡವನಂತೆ ಭೋಂಕನೆ ಎದ್ದು ಕುಳಿತನು. ಅರಸನು ಕಂಡು ಸಂತೋಷಪಟ್ಟು ಶಿವಭೂತಿಗೆ ಬೇಕಾದಷ್ಟು ಐಶ್ವರ್ಯವನ್ನು ಕೊಟ್ಟು ಆತನಿಗೆ ಕಿರಾತನಿಂದ ಒದಗಿದ ದುರವಸ್ಥೆಯನ್ನು ತಿಳಿದು ಆ ಕಿರಾತನನ್ನು ಯಮಪುರಕ್ಕೆ ಕಳುಹಿಸಿದನು. ಅದರಿಂದ  ಈ ಪಾಪಕರ್ಮವನ್ನು ನಂಬಬೇಡ: ಬೀಳುವಂತೆ ಕೆಳಕ್ಕೆ ನೂಕು ಎನ್ನಲು ಆ ಮರ್ಕಟನು ಹೀಗೆಂದನು : ಈತನನ್ನು ನೀನು ಎಷ್ಟು ಹೇಳಿದರೂ ನೂಕಲಾರೆ: ಇಲ್ಲಿಂದ ಹೊರಟುಹೋಗು ಎನ್ನಲು ಹುಲಿ ಅಲ್ಲಿಂದ ಹೋಯಿತು. ಇತ್ತ ಆ ತರುಚರ ವನಚರನು ಹಸಿದನು ಎಂದು ಫಲಾವಳಿಯನ್ನು ತರಹೋಗಲು ಆ ಪಾಪಾಕರ್ಮನು ಆ ಕಪಿಯ ಮರಿಗಳನ್ನು ಕಂಡು ಇವು ನನ್ನ ಕುಟುಂಬಕ್ಕೆ ಒಂದೆರಡು ದಿನಗಳವರೆಗೆ  ಆಹಾರಕ್ಕಾದೀತು ಎಂದು ಕೊಂಡುಹೋದನು. ೧೮೨. ಅದರಿಂದ ಕೋಪಿಯನ್ನೂ ಪಾಪಕರ್ಮಿಯನ್ನೂ ನಂಬಿದವನಿಗೆ ಆಪತ್ತು ತಪ್ಪಿದ್ದಲ್ಲ ವ|| ಎಂದು ದವನಕನು ಹೇಳಿದ ಕಥೆಯನ್ನು ಪಿಂಗಳಕನು ಕೇಳಿ  ಹೀಗೆಂದನು. ೧೮೩ ವಿಷಮಮತಿ ! ನೀನು ಹೇಳಿದುದು ನಿಜವಾದರೂ ವೃಷಭೇಂದ್ರನು ನಿಷ್ಪಾಪಿ, ಪಶು, ಧಾರ್ಮಿಕನು, ನೀತಿಜ್ಞ, ಕೃತಜ್ಞ, ವ|| ಅದರಿಂದ ಸಂಜೀವಕನೊಡನೆ ನನಗೆ ಉಂಟಾದ ಸ್ನೇಹ ನಿರ್ದುಷ್ಟವಾದುದು.  ಅದಕ್ಕೆ ದವನಕನು ಹೀಗೆಂದನು : ಸಂಜೀವಕನ ಸ್ನೇಹವನ್ನು ಏನೇಂದು ಬಣ್ಣಿಸಲಿ ? ಕ್ಷತ್ರಿಯಧರ್ಮವರ್ತಿಯಾದ ನಿನಗೆ ಯತಿಧರ್ಮವನ್ನು ಅಂಟಿಸಿದ. ನೀನೂ ಅದರಂತೆ ಕೆಲವು ದಿನಗಳಲ್ಲಿ ಹುಲ್ಲು ತಿಂದು ಪಶುತ್ವವನ್ನು ಹೊಂದುವೆ. ವಾ || ‘ಸಂಸರ್ಗ ಜಾ ದೋಷಗುಣಾ ಭವಂತಿ’ ಎಂಬ ಸುಭಾಷಿತದ ಅರ್ಥ ಏಕೆ ತಪ್ಪುವುದು ? ಎನ್ನಲು ಪಿಂಗಳಕನು ಅದೇನು ಎಂದು ಕೇಳಲು ದವನಕನು ಹೇಳತೊಡಗಿದನು.