ರಾಜಂ ನಿಳಿಂಪಭೂಪಮ
ನೋಜಂ ಕೌಶಾಂಬಿಯೆಂಬ ನಗರದೊಳಿರ್ಪಂ
ರಾಜಾರಾಜನನುಪಮ
ತೇಜಂ ರಾಜೇಂದ್ರಚಂದ್ರನೆಂಬ ನರೇಂದ್ರಂ  ೧೯೦

ಆ  ರಾಜೇಂದ್ರನ ರಾಜಭವನದೊಳಗೆ

ನವಕಾಲಾಗರು ಧೂಪಧೂಮಮಲಿನಂ ನಾನಾವಿಧಾನೂನ ಚಿ
ತ್ರವಿತಾನೋತ್ತಮರತ್ನಭಿತ್ತಿರುಚಿರಂ ಸತ್ಕಾಂಚನೋದಂಚ ಜಾ
ಳವಿಳಾಶೋಭಿತಮಾಗುಳಂ ಸೊಗಯಿಕುಂ ಶೋಭಾವಹಂ ಚಿತ್ರಸಂ
ಭವ ಲಕ್ಷ್ಮೀನಿಳಯಂ ಸಮಸ್ತಜನಚೇತೋಹಾರಿ ಶಯ್ಯಾಗೃಹಂ ೧೯೧

ಅಂತೊಪ್ಪುವ ಶಯ್ಯಾಗೃಹದೊಳ್ ನೂತನರತ್ನರಚಿತ ಚಂಚತ್ಕಾಂಚನಮಯ ಮಂಚಾಗ್ರ ಸ್ಥಿತ ಮಂದಾಕಿನೀ ಪುಳಿನಾಯಮಾನ ಪ್ರಚ್ಚದಾಚ್ಪಾದಿತಮಷ್ಟ ಶಯ್ಯಾತಳದೊಳ್ ಮಂದ ವಿಸರ್ಪಿಣಿಯೆಂಬುದೊಂದು ಪೇನಿರ್ಪುದು ಅಲ್ಲಿಗೆ ಡುಂಡುಕನೆಂಬ ತಿಗುಣೆ ಬಂದು, ಅನುಂ ನಿನ್ನ ಸಮೀಪದೊಳಿರ್ಪೆನೆನೆ ಪೇನಿಂತೆಂದುದು : ನೀಪ್ಪೊಡೆ ವಿಷಮಶೀಲಂ, ನಿನ್ನನೊಳಕೊಂಡಂದು ಕೃಷ್ಣೋರಗನನೊಳಕೊಂಡ ಡುಂಡುಭಂಗಗಳ ಕಥೆಯೆನಗಕ್ಕುಮೆನೆ, ಡುಂಡುಕನದೆಂತೆನೆ ಮಂದವಿಸರ್ಪಿಣಿ ಪೇೞ್ಗುಂ:

೧೯೦. ಕೌಶಾಂಬಿ ಎಂಬ ನಗರದಲ್ಲಿ ದೇವೆಂದ್ರ ಮನೋಜನಾದ (?)  ಅನುಪಮ ತೇಜನಾದ ರಾಜೇಂದ್ರಚಂದ್ರನೆಂಬ ರಾಜಾರಾಜನು ಇದ್ದನು, ವ|| ಆ ರಾಜೇಂದ್ರನ ರಾಜಭವನದೊಳಗೆ ೧೯೧: ಹೊಸ ಕಾಲಾಗರು ಧೂಪದಿಂದ ಮಲಿನವಾದ, ನಾನಾ ವಿಧದ ಉತ್ತಮ ಚಿತ್ರಗಳ ಮೇಲ್ಕಟ್ಟಿನಿಂದ ಕೂಡಿದ ಉತ್ತಮ ರತ್ನಭಿತ್ತಿಯಿಂದ ಶೋಭಿಸುವ ಒಳ್ಳೆಯ ಬಂಗಾರದಿಂದ ಹೊಳೆಯುವ ಜಾಳವಿಳಾಶೋಭಿತವಾಗಿ ಯಾವಾಗಲೂ ರತಿನಿಲಯವಾಗಿ ಸಮಸ್ತಜನ ಚೇತೊಹಾರಿ ಯಾಗಿ ಶಯ್ಯಾಗೃಹವು ಶೋಭಾವಹವಾಗಿ ಸೋಗಯಿಸುತ್ತಿತ್ತು. ವ|| ಹಾಗೆ ಶೋಭಿಸುವ ಶಯ್ಯಾಗೃಹದಲ್ಲಿ ನೂತನ ರತ್ನರಚಿತವಾದ ಹೊಳೆಯುವ ಹೊನ್ನಿನ ಮಂಚದಲ್ಲಿ ಗಂಗಾನದಿಯ ಮರಳಿನಂತೆ ಹಾಸುಬಟ್ಟೆಯಿಂದ ಅಚ್ಛಾದಿತವಾದ ಶಯ್ಯಾತಳದಲ್ಲಿ ಮಂದವಿಸರ್ಪಿಣಿ ಎಂಬ ಒಂದು ಹೇನು ವಾಸಮಾಡಿ ಕೊಂಡಿತ್ತು. ಅಲ್ಲಿಗೆ ಡುಂಡುಕನೆಂಬ ತಿಗಣೆ ಬಂದು ನಾನೂ ನಿನ್ನ ಸಮೀಪದಲ್ಲಿರುವೆನು ಎನ್ನಲು ಹೇನು ಹೀಗೆಂದಿತು. ನಿನಾದರೋ ವಿಷಮಶೀಲನು: ನಿನ್ನನ್ನು ಒಳಕ್ಕೆಸೇರಿಸಿಕೊಂಡರೆ ಕೃಷ್ಣೋರಗನನ್ನು ಸೇರಿಸಿಕೊಂಡ ಡುಂಡುಭಗಳ ಕಥೆಯಂತೆ ಆದೀತು ಎನ್ನಲು ಡುಂಡುಕನು ಅದೇನೆಂದು ಕೇಳಲು ಮಂದವಿಸರ್ಪಿಣಿ ಹೇಳಿತು: