ಬಲವೈರಿಸಾರವಜ್ರಾಕ ಭಯಚಕಿತೋದ್ಧೂತ ಮೈನಾಕಗೋತ್ರಾ
ಚಲಪಕ್ಷತ್ರಾಯಿಯಿಂದುಪ್ರಿಯತಮನತಿಗಂಬೀರನಂತರ್ನಿವಿಷ್ಟಾ
ಖಿಲಲೋಕಂ ನಕ್ರಚಕ್ರಸ್ಮರದುರುತರಯಾದಶ್ಚರಾಧ್ಯಾಸಿತ ಪ್ರೋ
ತ್ಕಲಿತಾಂಭಃ ಕುಂಭಿ ಕುಂಭೋನ್ಮದ ರಸವಿಲಸತ್ಕೋಭರೌದ್ರಂ ಸಮುದ್ರಂ ೨೧೦

ಅಂತಾ ಸಮುದ್ರದ ತೀರೈಕ ಪ್ರದೇಶದೊಳ್ ಮಧುರಲಾಪೆಯುಂ ಚಂಡಪರಾಕ್ರಮನುಮೆಂಬ ಟಟ್ಟಿಭಮಿತುನಂ ಸುಖದಿನಿರ್ದೊಂದು ದೆವಸಂ ಮಧುರಾಲಾಪೆ ನಿಜಪ್ರಾಣೇಶ್ವರಂಗಿತೆಂದಳ್: ಈ ಸಮುದ್ರತೀರಮಪಾಯಬಹುಳಮೆನಗಂ ಪ್ರಸವಸಮಯಮತ್ಯಾಸನ್ನವಾದಪ್ಪುವುದು ಇನ್ನಿಲ್ಲಿರಲ್ಬಾರದು. ಪೆಱತೊಂದು ನಿರಾಕುಳಮಪ್ಪಡೆನಡೆಮಾಡಿ ಬಂದೆನ್ನೊಡಗೊಂಡು ಪೋಗಿಮೆಂಬುದುಂ ಟಟ್ಟಿಭನಿಂತೆದಂ: ಇಲ್ಲಿಂದಗ್ಗಳಮಪ್ಪ ನಿರಾಕುಳಸತ್ಥಾಮಂ ಪಡೆಯಲ್ಬಾರದೆನೆ ಮಧುರಲಾಪೆ ಮತ್ತಮಿಂತೆಂದಳ್: ಈ ಸಮುದ್ರಂ ಮೇಲೆ ಭೋರೆದೆತ್ತಿ ಬಂದೀ ತತ್ತಿಗಳಂ ಕೊಂಡು ಪೋದೋಡುತ್ತರ ಕಾಲಕ್ಕೆಗೆಯ್ವಂ ಪೇೞ*ಮೆನೆ ಚಂಡಾಪರಾಕ್ರಮನಿಂತೆಂದ:

ಬಡಬಾನಲಂಗೆ ಸಾಸಿ
ರ್ಮಡಿಯೆನಿಸದ ರೌದ್ರಕೋಪಮಂ ತಳೆದೆನ್ನೊಳ್
ತೊಡರ್ದುಮಕಾರಣ ವೈರಮ
ನೊಡರ್ಚಿಯುಂ ಕಡಲದಾರ ಮರೆಯಂ ಪುಗುವಂ   ೨೧೧

ಎನೆ ಮಧುರಲಾಪೆ ಮನಿನಗಿನಿತುವರಮನರ್ಥಮನಕೃಷ್ಟಿಗೆಯ್ದುಕೊಳ್ವ ಕಾರಣಮೇನೆನುತ್ತಂ

ಹಿತರುಂ ಸ್ನೇಹಿತರುಂ ಪಂ
ಡಿತರುಮೆನಿಪ್ಪವರ ವಚನಮಂ ಕೇಳಿದ ದು
ರ್ಮತಿಯಪ್ಪವಂಗವಶ್ಯಂ
ಸತತಂ ಕೇಡಾಗದಿರದು ಕಜ್ಜದ ಕಡೆಯೊಳ್  ೨೧೧

ಎಂಬ ನೀತಿಗಳೊಳವು. ಎನ್ನ ಮಾತಂ ಕೇಳದೆ ಕಲಹಕ್ಕ ಕಚ್ಚೆಯಂ ಕಟ್ಟುವ ನಿನಗೆ ಕಚ್ಛಪ ಕಥೆಯಾಗದೆ ಪೋಗದೆನೆ ಚಂಡಪರಾಕ್ರಮನದೆಂತನೆ ಮಧುರಲಾಪೆ ಪೇಳ್ಗುಂ:

೨೧೦. ಇಂದ್ರನ ಘನವಾದ ವಜ್ರಾಯುಧವಾದ ಅತಿಶಯ ಭಯದಿಂದ ಚಕಿತವಾಗಿ ಮೇಲಕ್ಕೆದ್ದ ಮೈನಾಕವೇ ಮೊದಲಾದ ಕುಲಪರ್ವತ ರೆಕ್ಕೆಗಳನ್ನೂ ಸಲಹಿದುದು, ಚಂದ್ರನಿಗೆ ಅತ್ಯಂತ ಪ್ರಿಯನಾಗಿರುವುದು ಅತ್ಯಂತ ಗಂಭೀರನೂ, ಅಖಿಲ ಲೋಕಗಳನ್ನೂ ಒಳಗೊಂಡವನೂ, ಮೊಸಳೆಗಳ ಸಮೂಹದಿಂದ ಅತ್ಯಂತ ಶೋಭಿಸುವುದು ಜಲಚರಪ್ರಾಣಿಗಳ ಆವಾಸದಿಂದ ಕ್ಷುಭಿತವಾದುದು ನೀರಾನೆಯ ಕುಂಭಸ್ಥಲದ ಮದಜಲದಿಂದ ಶೋಬಿಸುವುದು, ಕ್ಷೋಬೆಯಿಂದ ರೌದ್ರವಾದುದು ಅದ ಸಮುದ್ರದ ತೀರದಲ್ಲಿ ವ|| ಒಂದು ಪ್ರದೇಶದಲ್ಲಿ ಮಧುರಲಾಪೆಯೂ ಚಂಡಪರಕ್ರಮನೂ ಎಂಬ ಟಟ್ಟಿಭಗಳು ಸುಖದಿಂದ ಇದ್ದವು. ಒಂದು ದಿನ ಮಧುರಲಾಪೆ ತನ್ನ ಪ್ರಾಣೇಶನೊಡನೆ ಹೀಗೆಂದಳು: ಈ ಸಮದ್ರ ತೀರವು ಬಹಳ ಅಪಾಯಕರವಾಗಿದೆ. ನನಗೂ ಪ್ರಸವಕಾಲ ಹತ್ತಿರ ಹತ್ತಿರವಾಗುತ್ತ ಬಂತು. ಇನ್ನು ಇಲ್ಲಿರಬಾರದು ಬೇರೊಂದು ಸುರಕ್ಷಿತವಾದ ಸ್ಥಳವನ್ನ್ನು ನೋಡಿ ನನ್ನನ್ನು ಕರೆದುಕೊಂಡು ಹೋಗಿರಿ. ಅದಕ್ಕೆ ಟಟ್ಟಿಭನು ಇದಕ್ಕಿಂತ ಸುರಕ್ಷಿತವಾದ ಸ್ಥಳ ಸಿಕ್ಕಲಾರದು ಎನ್ನಲು ಮಧುರಲಾಪೆ ಮತ್ತೆ ಹೀಗೆಂದಳು. ಈ ಸಮದ್ರವು ಮೇಲಕ್ಕೆ ಬೋರೆಂದು ಅಪ್ಪಳಿಸಿ ಈ ತತ್ತಿಗಳನ್ನು ತೆಗೆದುಕೊಂಡು ಹೋದರೆ ಬಳಿಕ ಏನು ಮಾಡಲಿ ಹೇಳಿರಿ ಎನ್ನಲು ಚಂಡಪರಾಕ್ರಮನು ಹೀಗೆಂದನು: ೨೧೧: ಬಡಬಾಗ್ನಿಗಿಂತಲೂ ಸಾವಿರಮಡಿ ರೌದ್ರಕೋಪವನ್ನು ತಳದೆ ನನ್ನಲ್ಲಿ ಅಕಾರಣ ವೈರವನ್ನು ಕಟ್ಟಿಕೊಂಡು ಕಡಲು ಯಾರ ಮೊರೆಯನ್ನು ಹೊಕ್ಕು ಬದುಕೀತು!

ವ|| ಅಗ ಮಧುರಲಾಪೆ ನಿನಗಿನ್ನೂ ಅನರ್ಥವನ್ನೂ ಅಕರ್ಷಿಸುವ ಬುದ್ಧಿಯಾಕೆ? ೨೧೨: ಹಿತರೂ ಸ್ನೇಹಿತರೂ ಪಮಡಿತರೂ ಎನ್ನಿಸುವರ ಮಾತನ್ನು ಕೇಳದ ದುಷ್ಟನಿಗೆ ಕಾರ್ಯಾಂತದಲ್ಲಿ ಕೇಡಾಗದೆ ಇರದು ಎಂಬ  ನೀತಿಯುಂಟು ವ|| ನನ್ನ ಮಾತನ್ನು ಕೇಳದೆ ಕಲಹಕ್ಕೆ ಕಚ್ಚೆ ಕಟ್ಟುವ ನಿನಗೆ ಕಚ್ಚಪಕಥೆಯಂತಾಗದೆ ಇರದು ಎನ್ನಲು ಚಂಡಾಪರಾಕ್ರಮನು ಅದೇನೆನ್ನಲು ಮಧುರಲಾಪೆ ಹೇಳತೊಡಗಿದಳು ಒಂದು ಸರೋವರದಲ್ಲಿ ಸಕಟ ವಿಕಟಗಳೆಂಬ ಎರಡು ಹಂಸೆಗಳಿದ್ದವು. ಆ ಹಂಸೆಗಳಿಗೂ ವಾಚಾಲನೆಂಬ ಒಂದು ಅಮೆಗೂ ಪರಮಮಿತ್ರತ್ವವುಂಟಾಗಿ ಹಲವು ಕಾಲವಿದ್ದವು. ಅನಾವೃಷ್ಟಿಯಿಂದಾಗಿ ಒಮ್ಮೆ ಆ ಕೊಳ ಬತ್ತಲು ನಾವು ಇಲ್ಲಿರಬಾರದು; ಮಾನಸ ಸರೋವರಕ್ಕೆ ಹೋಗುವೆವೆ ಎಂಬ ಹಂಸೆಗಳ ಮಾತನ್ನೂಕೇಳಿ ಅಮೆ ಹೀಗೆಂದಿತು:

ನೀವಿಲ್ಲದೆ ನಾನಿಲ್ಲಿ ನಿರ್ವಹಿಸಲಾರೆ ನನ್ನನೂ ಕರೆದುಕೊಂಡು ಹೋಗಿರಿ ಎನ್ನಲು ಕಲಹಂಸೆಗಳು ಹೀಗೆಂದುವು ನೀನಾದರೋ ಬಹುಭಾಷಿ ತುಂಬಿದ ಸಿದ್ದಿಗೆಯಂತೆ ರಥದ ಗಾಲಿಯಂತೆ ಬಟ್ಟಿತ್ತಾಗಿರುವೆ. ನಿನ್ನನ್ನು ಹೇಗೆ ಸಾಗಿಸಲಿ ಎಂದು ಕೇಳಿದವು ಅದಕ್ಕೆ ಅಮೆ ಅದಕ್ಕೊಂದು ಕಥೆಯಿದೆ. ಅದನ್ನು ಕೇಳಿ ಎಂದು ಹೇಳಲು ಪ್ರರಂಬಿಸಿತು ೨೧೩: ಉಜ್ಜಯಿನಿಲ್ಲಿ ಡಾವರ ಡಾಕಿನಿ ಶಾಕಿನಿ ಮೊದಲಾದ ದೇವತೆಗಳ ಕಥೆಗಳನ್ನು ಹೇಳಲು ಬಲ್ಲ ಒಬ್ಬಳು ಕನ್ಯೆಯಿದ್ದಳು ವ|| ಅವಳು ಸಾವಿರಗದ್ಯಾಣಕ್ಕಲ್ಲದೆ  ಕಥೆಯನ್ನು ಹೇಳುವವಳಾಗಿರಲಿಲ್ಲ. ಈ ವಿಚಾರವನ್ನು ದೇವದತ್ತನೆಂಬ ಬ್ರಾಹ್ಮಣನು ಕೇಳಿ ಬ್ರಾಂತಿಗೊಂಡು ಸಾವಿರ ಹೊನ್ನನ್ನು ಕೊಂಡು ಮಹಾರಾಣ್ಯದ ಮಾರ್ಗವಾಗಿ ಬರುತ್ತಿದ್ದನು. ಅವನನ್ನು  ಒಬ್ಬ ರಾಕ್ಷಸನು ಕಂಡು ಹಿಡಿದು ತಿನ್ನಲೆಂದು ಹವಣಿಸಿತು. ದೇವದತ್ತನು ತಾನು ಹೋಗುವ ವೃತ್ತಾಂತವನ್ನೆಲ್ಲ ರಾಕ್ಷಸನಿಗೆ ತಿಳಿಯುವಂತೆ ಹೇಳಿ ಕಥೆಯ ಕಾರಣದಿಂದಾಗಿ ಬಹಳ ಕಷ್ಟದಿಂದ ಹೊನ್ನನ್ನು ಪಡೆದು ಬಂದೆ. ನನ್ನ ಮನಸ್ಸಿನ ಅಪೇಕ್ಷೆಯನ್ನು ಕೆಡಿಸದೆ ಐದು ರಾತ್ರಿಗಳ ಅವಕಾಶವನ್ನು ಕೊಟ್ಟೆಯಾದರೆ ಕಥೆಯನ್ನು ಕೇಳಿ ತಡಮಾಡದೆ ಬರುವೆನು ಮುಂದಾಗುವುದು ಅಗಲಿ ನನ್ನನ್ನು ನಂಬುವುದು ಎಂದನು. ರಾಕ್ಷಸನು ಅದಕ್ಕೆ ಒಡಂಬಟ್ಟು ನೀನು ಹಸಿದು ಬಂದೆ ಎಂದು ಅತನಿಗೆ ಸಾಕಷ್ಟು ಆಹಾರವನ್ನು ಕೊಡಲು ಅದನ್ನು ಸ್ವೀಕರಿಸಿ ರಾಕ್ಷಸನನ್ನು ಬೀಳ್ಕೊಂಡು ಹೊಗಿ ಬೇಗನೆ ಉಜ್ಜಯನಿಯನ್ನು ಸೇರಿ ಪಟ್ಟಣವನ್ನು  ಹೊಕ್ಕು ಡಾವರ ದಾಕಿನಿಯ ಮನೆಯನ್ನು ಅರಸತೊಡಗಿದನು.