ಅಭೀಳಮೆಂಬ ಜನಪದಮುಂಟು ಅಲ್ಲಿ
ಅಂಚಿತ ದೇವತಾಭವನಸಂಕುಳದಿಂ ಗಣಿಕಾನಿವಾಸದಿಂ
ಕಾಂಚನ ಕೂಟಕೋಟಿಗಳಿನುತ್ತಮ ಧಾರ್ಮಿಕರಿಂ ಮುನೀಂದ್ರರಿಂ
ಕ್ರೌಂಚ ರಥಾಂಗರಂಜಿತ ಸರೋರುಹಷಂಡದಿನಾದಮಪ್ಪುಗುಂ
ಕ್ರೌಂಚಪುರಂ ಪುರಂದರಪುರಪ್ರತಿಮಂ ಧರೆಯೊಳ್ ನಿರಂತರಂ  ೧೨೦

ಆ ಪುರದೊಳ್ ದೇವಶರ್ಮನೆಂಬ ಗೊರವನುಗ್ರೋಗ್ರ ತಪೋನುಷ್ಠಾನನಿಷ್ಠಿತಚಿತ್ತನಾಗಿ ಪಲಕಾಲಮಿರ್ಪಂ ಆತಂಗೆ ಧಾರ್ಮಿಕರಪ್ಪಗ್ರಜ್ಮರೆಲ್ಲಂ ಸೋಮಸೂರ‍್ಯಗ್ರಹಣಾದಿ ಪುಣ್ಯತಿಥಿಗಳೊಳ್ ಭಕ್ತಿಪೂರ್ವಕಂ ಸುವರ್ಣದಾನಮಂ ಕುಡೆ, ಪಲವುಕಾಲಕ್ಕೆ ಸಹಸ್ರ ಸಂಖ್ಯೆಯಾದ ಪೊನ್ನಂ ದೇವಶರ್ಮಂ ಸರ್ವಪ್ರಯತ್ನದಿಂ ತಾಯ್ ಮಗನಂ ಉತ್ತಮ ಸತ್ತ್ವಸಂಪನ್ನಂ ಶರಣಾಗತನಂ ಧಾರ‍್ಮಿಕಂ ಧರ್ಮಮಂ ಯಶೋವೃತ್ತಿ ಯಶಮಂ ಸತ್ಪುರುಷನಾಶ್ರಿತರಂ ನಿಸರ್ಗಭೀರು ಪ್ರಾಣಂಗಳಂ  ಶೂರಂ  ವಿಕ್ರಾಂತಮಂ  ಮಹಾಸತಿ ಪತಿವ್ರತಾಗುಣಮಂ ಲುಬ್ಧ ಧನಮಂ ಮನಸ್ವಿ ಮಾನಮಂ ರಕ್ಷಿಸುವವೊಲ್ ರಕ್ಷಿಸುತಿರ್ಪುದುಮಾ ಪುರದೊಳ್ ದ್ಯೂತವ್ಯಸನವಿಕಳಭೂತಿಯಾಢಭೂತಿಯೆಂಬ ಧೂರ್ತನೊರ್ವನಿರ್ಪಂ ಆತಂ ತನಗೇನುಮಿಲ್ಲದೆ ಪರಿಭ್ರಮಿಸುತಿರ್ದುದೇವಶರ‍್ಮಂಗೇನಾನುಂಧನಮುಂಟೆಂಬುದುಂ ಕೇಳ್ದು ತಾನುಮಱೆವನಾಗಿ   ದೇವಶರ್ಮನಲ್ಲಿಗೆ ಪೋಗಿ ಸಾಷ್ಟಾಂಗ ಪ್ರಣತನಾಗಿ ನಿಮ್ಮಡಿ ವಿದ್ಯಾರ್ಥಿಯಾಗಿ ಬಂದೆನ್ನಂ ಕೈಕೊಳ್ವುದೆನೆ ತಪಸ್ವಿ ಕರಮೊಳ್ಳಿತ್ತೆಂದು ಕೈಕೊಂಡಿರೆ ಪರಮಭಕ್ತಿಯಿಂದಾಷಾಭೂತಿ ಬೆಸಗೆಯ್ಯುತ್ತಿರೆ ಪಲುವು ಕಾಲಕ್ಕೆ  ತೀರ್ಥಯಾತ್ರಾಸಕ್ತಚಿತ್ತನಾಗಿ ದೇವಶರ್ಮಂ ತನಗೆ ತಕ್ಕನಿತು ದ್ರವ್ಯಮಂ ದಾನಂಗೆಯ್ಯಲ್ವೇೞ್ಕುಮೆಂದು ದೇವರ ಪೇಳಿಗೆಯೊಳಿಕ್ಕಿ ಬೞೆಕ ತಾನುಮಾಷಾಡಭೂತಿಯುಂ ಕ್ರೌಂಚಪುರಮಂ ಪೊಱಮಟ್ಟು ಕಿಱೆದಂತರಮಂ ಪೋಗಿ,

ಅಂಚೆಗಳೋಳಿಯಂ ಝಷನಿಕಾಯದಿನುತ್ತಮಸಾರಸಂಗಳಿಂ
ಕ್ರೌಂಚಕುಳಂಗಳಿಂ ಬಕಕದಂಬಕದಿಂ ವರಚಕ್ರಚಕ್ರದಿಂ
ಚಂಚದಳಿವ್ರಜಾವೃತಸರೋಜ ನವೋತ್ಪಲ ಕೈರವಂಗಳಿಂ-
ದಂಚಿತಮಾದ ಪದ್ಮವನಮಂ  ಮುನಿ ಕಂಡನುದಾರತೀರಮಂ  ೧೨೧

ಅಂತು ಕಂಡಾ ಸರೋವರದೊಳ್ ದೇವಶರ್ಮಂ ದೇವಪೂಜೆಯಂ ಮಾಡಿ ಪೋಪಮೆಂದಾಷಾಢ ಭೂತಿಯಂ ಮಾತ್ರಾಭಾಂಡಕ್ಕೆ ಕಾಪಿರಿಸಿ ಪಾದಪ್ರಕ್ಷಾಳನಂಗೆಯ್ದು ಭಸ್ಮೋದ್ದೂಳಿತಗಾತ್ರನಾಗಿ ದೇವತಾಸಮಾರಾಧನೆಗೆ ಕುಳ್ಳಿರ್ದು,

ಹರನಂ ಶಂಕರನಂ ಜಿತತ್ರಿಪುರನಂ ನೇತ್ತಾಗ್ನಿಭಸ್ಮೀಕೃತ
ಸ್ಮರನಂ  ತುಂಗಹಟಜ್ವಟಾಭರನನುದ್ಯದ್ಭಕ್ತಿಭಾರನತಂ
ವರಗಂಗಾಧರನಂ ಮೃಡಾಣಿವರನಂ ವ್ಯಾಲೋಲಬಾಲೇಂದು ಶೇ-
ಖರನಂ ತಾಳ್ದಿದನಾತ್ಮಹೃತ್ಕಮಳದೊಳ್ ಯೋಗಿಂದ್ರ ವೃಂದಾರಕಂ  ೧೨೨

ಅಂತು ತಾಳ್ದಿ ಪರಮಾತ್ಮಧ್ಯಾನಾನಮಾನಸನಾಗಿ ತಪೋಧನಂ ಪರಮಾತ್ಮಾವಸ್ಥೆಗೆ ಸಂದುದುಮಂ ಕೆಲದೊಳ್ ಪೆಱ ರಾರುಮಿಲ್ಲದುದುಮಂ ಕಂಡಾಷಾಢಭೂತಿ ತಾಂ ಛಿದ್ರಾನ್ವೇಷಿಯಪ್ಪುದಱೆಂ ತನಗಿದುವೆ ಪದನೆಂದು ಬಗೆದು

ಶ್ಲೋ|| ವಿಶ್ವಾಸಪ್ರತಿಪನ್ನಾನಾಂ ವಂಚನಂ ಕಾ ವಿದಗ್ಧತಾ || ೪೦||
ಟೀ|| ವಿಶ್ವಾಸಿಸಿದವರೊಳ್ ವಂಚನೆಚಿiನೆಸಗುವುದಾವ ಪ್ರೌಢಿಮೆ ?

ಎಂಬೀ ಸುಭಾಷಿತಮಂ ಬಗೆಯದೆ ಆ ದುರಾತ್ಮನಾ ಮಹಾತ್ಮನ ಧನಮಂ ಕೊಂಡು ಬ್ರಹ್ಮಸ್ವ ಹರಣಮಂ ಸುವರ್ಣಹರಣಮಂಗೆಯ್ದಾ ಪಾತಕಂ ನರಕಗತಿಗೆಯ್ದುವ ಧೂರ್ತತನದಿಂಕುಟಿಲ ಮಾರ್ಗಾಂತಗರ್ತನಾಗಿ ಪೋಗೆ ಕಿಱೆದಾನುಂ ಬೇಗದಿಂ ದೇವಶರ್ಮಂ  ದೇವಪ್ರೂಜಾವಿಧಾನಮಂನಿವರ್ತಿರ್ಸಿ ದೆಸೆದೆಸೆಯಂ ನೋಡ ಕೆಲದೊಳಿರ್ದ ಮಾತ್ರಾಭಾಂಡಿಕೆಯುಮನಾಷಾಢಭೂತಿಯುಮಂ ಕಾಣದೆ ಅರ್ಥ ನಾಶದಿಂ ವಿಕಳಚಿತ್ತನಾಗಿನಿಸಾನುಂ ಬೇಗದಿಂ ತನ್ನಿಂ ತಾನೆ ಸಂಭವಿತಾತ್ಮನುಮಾಗಿ ಪಲಕಾಲದಿಂ ಪಡೆದರ್ಥಂ ನಿರರ್ಥಂ ಕೆಟ್ಟುದೆಂದು ಚಿಂತಾಕ್ರಾಂತನಾಗೆ, ತನ್ನಿಂ ತಾನೆ ಸಚಿತೈಸಿಕೊಂಡಿಂತೆಂದಂ:

ಶ್ಲೋ|| ದಾತವ್ಯಂ ಭೋಕ್ತವ್ಯಂ ಸತಿ ವಿಭವೇ ನೈವ ಸಂಚಯೇದರ್ಥಂ
ಪಶ್ಯೇಹ ಮಧುಕರಣಾಂ ಸಚಿಚಿತಮರ್ಥಂ ಹರಂತ್ಯನ್ಯೇ

ಟೀ|| ವಸುವುಂಟಾದೊಡೆ ಪರಪುರುಷಾರ್ಥಮಂ ಮಾೞ್ಪುದು ತಾನುಣ್ಬುದು ಅಲ್ಲದೆ ಸಂಚಿತಮಾಗಿರಿಸಲಾಗದೆಂತನೆ ಜೇನನೊಳಂಗಳ್ ತುಪ್ಪವನಿರಿಸಿದೊಡೆ ಲೋಗರ್ ಕೊಂಡು ಪೋಪರ್ ಎಂಬೀ ನೀತಿಶಾಸ್ರ್ತಾಭಿಪ್ರಾಯಮಾದುದು, ಎಲ್ಲಮದೃಷ್ಟವಶಮಲ್ಲದೆ ಎನ್ನ ವಶಮಲ್ಲಮೆಂದು ಖೇದಮಂ ಮಾಣ್ದಿರ್ಪುದುಂ. ಆ ಸಮಯದೊಳ್ ಮಹಾಟವಿಯೊಳಾಡುತಿರ್ಪ ಕಱೆವಿಂಡು ನೀರುಣಲ್ ಬಗೆದು ಬಂದಲ್ಲಿ ನೀರನುಂಡು ಕೊರ್ವಿ ಕೊಣಕಿಟ್ಟು ತಗರೆರಡುಂ ಭರಂಗೆಯ್ದು ತಾಗುವುದುಂ ನಡುವಿರ್ದ ನರಿ ಕರಿಮೆಟ್ಟಿದ ಸೋರೆಯ ಕಾಯಂತೆ ಜಿಗಿಜಿಗಿಯಾಗಿ ಸತ್ತೊಡದಂ ದೇವಶರ್ಮಂ ಕಂಡು ಜಂಬುಕೋ ಮೇಷಯುದ್ಧೇನ ವಯಂಚಾಷಾಢಭುತಿನಾ ಎಂದಲ್ಲಿಂ ತಳರ್ದು  ಕಿಱೆದಂತರ ದೊಳಿರ್ದೊಂದೂರಂ ಕಂಡು ಅಲ್ಲಿಗೆ  ವರ್ಪನ್ನೆಗಂ

ಮುಗಿಯೆ ಸರೋಜಷಂಡಲಮಲರ್ದೊಪ್ಪೆ ನವೋತ್ಪಲರಾಜಿ ಜಕ್ಕವ-
ಕ್ಕಿಗಳ  ಮನಕ್ಕೆ ತಾಪವೊದವುತ್ತಿರೆ ವಿದ್ರುಮ ಭಂಗಕಾಂತಿ ಕೈ-
ಮಿಗೆ ಘನವೀಯೊಳ್ ನಿಜಕುಳಾಯತನಕ್ಕೆ ಪಾಱೆ ಪ-
ಕ್ಕಿಗಳ ಪರಾಂಬುರಾಶಿಗಿೞೆದಂ ನಳಿನೀವನಜೀವೀತೇಶ್ವರಂ  ೧೨೩

ಅಂತಾದಿತ್ಯಸ್ತಗಿರಿಯನೆಯ್ದುವುದುಮಾ ಗೊರವನೂರ ಚತುಷ್ಟಥಮಧ್ಯದೊಳ್ ಬೞಲ್ದೆೞಲ್ದ ಮೆಯ್ಯಿಂ ಶ್ರಮಶ್ರಾಂತ್ಯಾಕ್ರಾಂತನಾಗಿ ಮೇಗುಸಿರ್ವಟ್ಟು ಸುಯ್ಯಂ ಗೂಢಪ್ರಾಣಿಯಂತೊಳವೊಕ್ಕಡಂಗಿದ ಕಣ್ಣುಂ ಬಱಗಾಲದ ಕೆಱೆಯಂತೆ ನೆಱೆ ಬತ್ತಿದ ಬಾಯುಂ ಬೇತಾಳನ ಬಸಿಱಂತೆ ಬೆನ್ನಂ ಪತ್ತಿದ ಬಸಿಱುಂಬೆರಸು ಬರ್ಪ ವೃದ್ಧಾತಾಪಸನಂ ಕಂಡವರ್ಗೆಲ್ಲಂ ಕರುಣಮಾಗಲ್ ಅಲ್ಲಿಯ ಮೂಲಿಗನಪ್ಪ ಪಟ್ಟಸಾಲಿಗಂ ಕಂಡು ತನ್ನ ಮನೆಗೊಡಗೊಂಡು ಪೋಗಿ ಪರಮಭಕ್ತಿಯಿಂದಂ ಪಥಪರಿಶ್ರಮವನಾಱಸಿ ಬೞೆಕ್ಕೆ ತನ್ನ ಪೆಂಡತಿಯಂ ಕರೆದು ಈ ತಪೋಧನಂಗೆ ನಿವಾತಪ್ಪೆಡೆಯೊಳ್ ಪೞ್ಕೆಗೆಡೆ ಮಾಡಿ ಕುಡೆಂದು ಪೇೞ್ದು ತಾಂ ಮಧುಪಾನಕ್ರೀಡಾನಿರತನಾಗಿ ಪೋಗಲ್ ಬಗೆದು ಚಿತ್ರಾಂಬರಪರಿಧಾನನುಂ ಕರ್ಪೂರಮಿಶ್ರಿತನಮಲಯಜರಸಲಿಪ್ತಗಾತ್ರನುಂ ಸುರಭಿಕುಸುಮಾಮಾಲಾಲಂಕೃತೋತ್ತಮಾಂಗನುಂ ಸರ್ವಾಭರಣ ಭೂಷಿತನುಮಾಗಿ ಕತಿಪಯಸಮಾನಶೀಲವ್ಯಸನಹಾಯರ್ವೆರಸು

ಕಮನೀಯೋದಾರ ಚಾಮೀಕರ ಚಷಕ ಚಯನ್ಯಸ್ತಮ್ವಾಕ ಗಂಗಾಂ-
ಧ ಮದಾಳಿವ್ರಾತಝಂಕಾರಿಯನಕಮನೋಹಾರಿಯಂ ಮತ್ತನೃತ್ಯ-
ತ್ಪ್ರಮದಾ ಕಸ್ತೂರಿಮಿಶ್ರಿತ ಗುರುಕಬರೀನಿಗರ್ಳತ್ಟುಷ್ಟಸಂದೋ-
ಹi ನುದ್ಯತ್ಟಾನ ಭೂರಂಗಮನತಿಮುದದಿಂದೆಯಿ*ದಂ ತಂತುವಾಯಂ  ೧೨೪

ಅನ್ನೆಗಮಿತ್ತಲ್ ತಂತುವಾಯಿಕೆ ತಪೊಧನಂಗೆ ಮನೆಯೋವರಿಯೊಳ್ ಪಾಸಿಕೊಟ್ಟು ನಿಮ್ಮಡಿ ನೀವಿಲ್ಲಿ ಸುಖನಿದ್ರೆಗೆಯ್ಯಿಮೆಂದು ತಾಂ ಜೋಡಾಡಲ್ ಬಗೆದು ಮನೆಯಾಣ್ಮಂ ಬಾರದನ್ನಂ ಕೞ್ತಲೆಪೋಗದನ್ನಂ ಚಂದ್ರೋದಯಮಾಗದನ್ನಂ ತನ್ನ ಮನೋರಥಮಂ ತೀರ್ಚುವೆನೆಂದು ದೂತಿಯಂ ಕರೆದು ತನ್ನಾತನಂ ಸಂಕೇತನಿಕೇತನಕ್ಕೊಡಗೊಂಡು ಬರ್ಪುದೆಂದು ಪೇೞ್ದಟ್ಟೆ,

ತೋಯನಿಧಾನಫೇನ ವಿಶದೋತ್ತಮವಸ್ತ್ರಮನುಟ್ಟು ಪುಷ್ಪಮಾ-
ಲಾಯುತೆಯಾಗಿ ರಾಗದಿನುಪೇಶ್ವರನೊಳ್ ನೆರೆವೞ್ಕಱೆಂ ಪ್ರಸೂ-
ನಾಯುಧತಾಪತಪ್ತೆ ಕಡುಗೞ್ತಲೆಯೊಳ್ ಹರಿಣಾಕ್ಷಿ ಪುಂಶ್ಚಲೀ
ನಾಯಕೆ ತುಂತುವಾಯಿಕೆ ನಿಜಾಲಯದಿಂ ಪೊಱಮಟ್ಟಮಳೞ್ತೆಯಿಂ ೧೨೫

ಅಂತು ತುಂತುವಾಯಿಕೆಪೊಱಮಟ್ಟು ಕಿಱೆದಂತರಂ ಪೋಗುತ್ತುಂ ಕಟ್ಟಿದಿರೊಳ್ ತಾರ್ಮುಟ್ಟಾಗೆ ಮದಿರಾಮದೋನ್ಮತ್ಮನಾಗಿ ತನ್ನಿಚ್ಛೆಯಿಂ ಮೆಚ್ಚಿದಂತೆ ಗೞಪುತ್ತುಂ ಬರ್ಪ ಮನೆಚಿiiಣ್ಮನ ಸರಮಂ ಭೋಕನೆ ಸಮೀಪದೊಳ್ ಕೇಳ್ದು ಬಟ್ಟೆಯೊಳ್ ಪೋಪ ಬೆಳ್ಳಾಳ್ ಕಳ್ಳಾಳ ಸರಮಂ ಕೇಳ್ದಂತೆ ಪೆಪ್ಪಳಿಸಿ ಮಗುೞ್ದು ಮನೆಗೆ ಬಂದು ವಿಶೇಷಾಲಂಕಾರಮುಮಂ ಶೃಂಗಾರಮುಮಂ ಕಳೆದು ಪೂರ್ವಸ್ವರೂಪಮಂ ತಾಳ್ದಿರುತಿರ್ಪನ್ನೆಗಂ ಬೆನ್ನನೆ ಬಂದು ಮುಂದೆ ನಿಂದಿರ್ದ ಗಂಡನಂ  ಕಂಡು ಪ್ರಚಂಡೆ ವಂಚನೋಪಾಯಮಂ ಕಾಣದೆ ಬಿಲ್ಲುಂ ಬೆಱಗುಮಾಗಿರೆ ಕಂಡೆದೇನೇನೆಂದು  ಬೆಸಗೊಂಡೊಡವಳ್ ಸನ್ನಿಪಾತಮೆಡೆಗೊಂಡರವೋಲೇನುಮೆನಲರಿಯದಿರೆಯುಂ ಮಂತ್ರವಾದಿಯಂ ಕಂಡ ಗ್ರಹದಂತೆ ಸಮ್ಮುಖದೊಳ್ ನೋಡಲಣ್ಮದಿರೆಯುಂ ಆ ತಂತುವಾಯಂ ಮುನ್ನಮೆ ತನ್ನ  ಪೆಂಡತಿ ಜೋಡೆಯೆಂದು ಸಂದೇಹಂಬಡುವಾತನವಳ ವಿಪರೀತವೇಷಂ ತನಗೆ ರೋಚಮನೀಯೆ ಸಾಯೆ ಸದೆಬಡಿದು ಮನೆಯ ನಡುಗಂಭದೊಳಡಸಿ ಕಟ್ಟಿ ಕಳ್ಳಸೊರ್ಕಿನೊಳಮವಳ ಪೊರ್ಕುಳಿಯೊಳಂ ಬೞಲ್ದು ನಿದ್ರಿತನಪ್ಪುದುಂ ಅನ್ನೆಗಂ ನೆರಮನೆಯ ನಾವಿದನ ಪೆಂಡತಿಯಪ್ಪ ದೂದವಿ ಪಾದರಿಗನಂ   ಸಂಕೇತಸ್ಥಾನದೊಳಿರಿಸಿ ಪರಿತಂದು ಕಟ್ಟುವಟ್ಟಿರ್ದ ಕೆಳದಿಯಂ ಕಂಡು ತದ್ವೃತಾಂತಮನೆಲ್ಲಮನಱೆಪಲ್ ಆಕೆಯ ಕಟ್ಟುಗಳಂ ಬಿಟ್ಟನ್ನೆಗಂ ತನ್ನಲ್ಲಿ ಕಟ್ಟಿಸಿಕೊಂಡು ನಿನ್ನ ಮನೋವಲ್ಲಭನೊಳ್ ನೆರೆದು ಬೇಗಂ ಬರ್ಪುದೆಂದು ಪೇೞ್ದು

ಒಟ್ಟೈಸಿ ಕರ್ಮವಶದಿಂ
ತೊಟ್ಟನೆ ಮತಿಗೆಟ್ಟು ದೂತಿ ಕಟ್ಟಿಸಿಕೊಂಡಳ್
ಮುಟ್ಟುಗೆಡೆ ತಾನೆ ತನ್ನಂ
ಕಟ್ಟಿದುದಂ ಕಳೆಯಲಾರ್ಗಮೇಂ ಬಂದಪುದೇ  ೧೨೭

ಅಂತು ಕಟ್ಟಿಸಿಕೊಂಡು ಕೞ್ತಲೆಯೊಳ್ ತಲೆಗರೆದಿರ್ಪುದುಮಿನಿಸಾನುಂ ಬೇಗದಿಂ ತಂತುವಾಯ  ನೆೞ್ಚತ್ತು ಮತ್ತಮಾಕೆಯನನೇಕ ಪ್ರಕಾರದಿಂ ಬಯ್ದು ನಿನ್ನ ಬೇಟದ ಮಿಂಡನಾವನವನಂ ಪೇೞೆಂದು ಬೆಸಗೊಳೆ ದೂತಿ ಭೀತಿಯಿಂದುಸಿರಿಸಿಕ್ಕದಿರೆ, ಸೈರಿಸಲಾೞದೀ ತೊತ್ತಿಂಗೆ ತಕ್ಕುದಂ ಮಾೞ್ಪೆನೆಂದು ಬಗೆದು,

ಆಡಿದವಳಾಡಿ ಪೋದಳ್
ನೋಡಲ್ ಬಂದವಳ್ಗೆ ಮೂಗು ಪೋಯ್ತೆಂಬಿನಿತಂ
ಮಾಡುವೆನೆಂಬಂತಿರ್ದಾ
ಜೋಡೆಯ ಮೂಗಿಂಗೆ ಮೃತ್ಯು ಮೂಡುವ ತಱದಿಂ  ೧೨೭

ಅಂತಾ ತಂತುವಾಯನೆೞ್ದು ಅವಳ ಮೂಗನರಿದು ಮತ್ತಂ ನಿದ್ರಾಂಗನಾಸಂಗತನಾದಂ, ಇತ್ತಲ್ ತಂತುವಾಯಿಕೆ ಜಾರನೊಳ್ ನೆರೆದು ಸುರತಸುಖಮನನುಭವಿಸುತಿರ್ಪನ್ನೆಗಮಿತಲ್

ಸೌಂದರನಂ ಪ್ರತಾಪಪರನಪ್ಪ ನಿಜೇಶನನೊಲ್ಲದೆಲ್ಲರುಂ
ನಿಂದಿಸೆ ತೀಕ್ಷ್ಣಮಪ್ಪ ನೃಪದಂಡನೆಗಳ್ಕದೆ ಮೆಯ್ಗೆ ಮೆಚ್ಚದೊಂ-
ದಂದದೆ ಪಾಣ್ಬರೊಳ್ ನೆರೆವ ಪಾಣ್ಬೆಯರಾಟಮನೀಕ್ಷಿಸಲ್ ಮನಂ-
ದಂದಿರದೇಱೆದಂ ಮುದದ ಚಂದ್ರಮನಿಂದ್ರಹರಿನ್ನಗೇಂದ್ರಮಂ  ೧೨೮

ಅಂತಾ ಚಂದ್ರೋದಯವಾದುದಂ ತಂತುವಾಯಿಕೆ ಕಂಡು ಬೆಗಡುಗೊಂಡು ಪಾಣ್ಬನಂ ಬೀೞ್ಕೋಂಡು ಪೊಱಮಟ್ಟು

ಸುರತಮದೋತ್ಥಘರ್ಮಜಲಬಿಂದುಮನೋಹರಹಾರೆ ವಲ್ಲಬಾ-
ಧರಮಧುಪಾನನಿರ್ಗತಮನೋಭವತಾಪೆ ನಖವ್ರಣಾವಳೀ
ಸುರಿತಘನೋರುಯುಗ್ಮೆನೃಪದಂಡಭಯಾತುರೆ ತಂತುವಾಚಿi ಸೌಂ-
ದರಿ ಕಡುವೇಗದಿಂ ಕುಟಿಲಮಾರ್ಗದಿನೆಯ್ದಿದಳಾತ್ಮಗೇಹಮಂ೧೨೯

ಅಂತೆಯ್ದಿ ಕೞ್ತಲೆಯೊಳ್ ಕಟ್ಟುವಡೆದಿರ್ದಾ  ದ್ರೋಹಿಯಂ ಕಂಡಾ ಪತಿದ್ರೋಹಿ ಸಾರ್ದುನಿಮ್ಮ ಭಾವನೇನನುಮೆಂದ ಮಾತುಳ್ಳೊಡೆ ಪೇಳನಲೇನಂ ಪೇಳ್ವಂ? ಪೊಕ್ಕಿಯಲ್  ಪೊಗಿ ಮೂಗಿವಡೆದರ್ ಎಂಬ ನಾಣ್ಣುಡಿ ತನ್ನೊಳ್ ಸನ್ನಿದಮಾದುರ್ದಿದರ್ಕೆ ತಕ್ಕುದಂ ನೆಗಳಲ್ವೇಕ್ಕುಂ  ಈ ಕಟ್ಟುಗಳಂ ಬೇಗಂ ಬಿಡಿಸೆಂದು ಬಿಡಿಸಿಕೊಂಡು ಪೋದಳ್ ಇತ್ತಲ್ ತಂತುವಾಯಿಕೆಯುಂ ತನಗೆ ಮುಂತಪ್ಪ ನಿರ್ಗಮೋಪಾಯಮಂ ಚಿಂತಿಸಿಕೊಂಡು ಸಂತಸಂಬಟ್ಟಿನ್ನೀ  ಬೆಳ್ಳನನಾಳವಾಡಲ್ ಬಲ್ಲೆನೆಂದು ಬUದು ಗೃಹಮದ್ಯಸ್ತಂಭವಷ್ಟಂಬೆಚಿiiಗಿರೆ ತಂತುವಾಯನೆಳ್ದು ಈಗಳ್ ನಿನ್ನ ರೂಪವಿಲಾಸವಿಭ್ರಮಂಗಳ್ ಮಂಗಳಮಾಗಿರ್ದುದನೀ ಪದದೋಳ್ ನಿನ್ನ ಮನೋವಲ್ಲಭನಲ್ಲಿಗೆ ಪೋಗಿ ತೋರದೇಕೆ ಮಾಣ್ಣೆ? ಎಂದು ವಿರಸಮಪ್ಪ ಸರಸವಚನಗಳಂ ನುಡಿಯೆ ತುಂತುವಾಯಿಕೆಂತೆಂದಳ್:

ನೀನಿಂತು ಕರಂ ಕಯ್ಗೆ-
ಯ್ದಾನಂದಮನಸ್ಕನಾದೊಡಾನುಂ ನಿನಗ-
ತ್ಯಾನಂದಂ ಮಾಡುವೆನೆಂ-
ಬೀ ನೆವದಿಂದೆಸೆಯೆ ಪಸದನಂಗೊಂಡಿರ್ದೆಂ  ೧೩೦

ಅಂತಿರ್ದೊಡದನೆ ದೋಷಂಗೆಯ್ದು ರೋಷಗ್ರಹಾವೇಶನಾಗಿ ನಿಷ್ಕಾರಣಂ ಪರಿಭವಿಸಿ ನೋಯಿಸಿದೆ. ಅದೊಡಮೇಂ ಅನಂತಪ್ಪ ಒರ್ಬ ತಾಯ್ಗಂ ತಂದಗಂ ಪುಟ್ಟಿದೆನಾದೊಡೆ ನಾಂ ಪತಿವ್ರತೆಯಾದೊಡೆ, ಮನೆದೈವಂಗಳೆನಗೆ ಸನ್ನಿದಮಾದೊಡೆನ್ನ ಮುಗು ಮುನ್ನಿನಂತಾಗಲೀ ಕಟ್ಟಿರ್ದಕಟ್ಟೆಲ್ಲಂ ಬಿಟ್ಟುಪೋಗಲೆವೇೞ್ಕುಂ ಅದಲ್ಲದಾಗಳುಂ ಮಹಾಸತಿಯಲ್ಲೆಂದು ಪ್ರತಿಜ್ಞೆಯ್ಯೆ ತಂತುವಾಯಂ ವಿಸ್ಮಯಂಬಟ್ಟೀ ಕೌತುಕಮಂ ನೋೞ್ಪೆನೆಂದು ತೃಣಾಗ್ನಿಯಂ ಸಂದಿಸಿ ತಂದು ನೋಡಲ್ ಪೂರ್ವರೂಪಿಯುಮಪೂರ್ವಸ್ವರೂಪಿಯುಮಾಗಿರ್ದಾ ಮಾಯಾವಿಯಂ ಕಂಡು ರೋಮಾಂಚಕಂಚುಕಿತ ಕಾಯಂ ತಂತುವಾಯಂ  ಕೈಗಳಂ ಮುಗಿದು,

ವನಜಾಕ್ಷಿ ದೋಷಿಯಲ್ಲದ
ನಿನಗೆ ಕರಂ ಪೊಲ್ಲಗೆಯ್ದೆನೆಂದಿರದಾತ್ಮಾಂ-
ಗನೆಯ ಪದಕ್ಕೆಱಗಿದನೆ-
ನ್ನನುಮಱೆಗುಮೆ ಧೂರ್ತೆಯಪ್ಪ ಕಾಂತೆಯ ಮನಮಂ  ೧೩೧

ಅಂತಿರೆ ತಂತುವಾಯನಾ ಜೋಡೆಯಂ ಸಂತಸಂಬಡಿಸಿ ಸುಖನಿದ್ರಿತನಾದಂ. ಅದೆಲ್ಲಮನಲ್ಲಿ ಪಟ್ಟಿರ್ದ ವೃದ್ಧತಾಪಸಂ ಕಂಡುಂ,

ನಂಬಿಪರೆನ್ನರಪ್ಪರುಮನೇತೆಱದಿಂ ಸಲೆ ನಂಬೆ ಪಾಣ್ಬೆಯರ್
ಡಂಬಿಪರಿಂತನೇಕವಿಧದಿಂದೆ ವಿಚಾರಿಸಿ ನೋಡೆ ಪೆಂಡಿರಂ
ನಂಬಲೆಯಾಗ ನಂಬದಿರಲಾಗವರಿಲ್ಲದೆ ಬಾೞಲಾಗದೇ-
ನೆಂಬುದಿದರ್ಕೆ ತಕ್ಕುದನೆ ಬಲ್ಲವನುಳ್ಳೊಡೆ ದೇವನಲ್ಲನೇ  ೧೩೨

ಎಂದು ದೇವಶರ್ಮಂ ಚೋದ್ಯಂಬಟ್ಟಿರ್ಪಿನಮಿತ್ತಂ ದೂದವಿಯುಂ ನಿಜ ನಿವಾಸಕ್ಕೆ ಪೋಗಿ  ಇದರ್ಕೇಗೆಯ್ವೆನಚಿದು ಚಿಂತಿಸುತಿರ್ಪನ್ನೆಗಮಿತ್ತಲ್

ಭುವಜನವಿನುತಪಾದಂ
ದಿವಸಕರಂ ನಿಖಿಳಕಮಲವನಕಾಹ್ಲಾದಂ
ಪ್ರವಿದಿತ ಕೌಶಿಕಪಾದಂ
ದಿವಿಜಾಶಾಶಿಖರಿಶಿಖರಶೇಖರನಾದಂ  ೧೩೩

ಅಂತಾದಿತ್ಯೋದಯಾಮಾಗಲೊಡಂ ದೂದವಿಯ ಗಂಡಂ ಬಂದು ಅರಸರ್ ಬೆಸವೇೞ್ದರ್, ಬೇಗಂ ಕ್ಷುರಭಾಂಡಮನೀಯೆಂದು ಬೇಡಿದೊಡವಳ್ ಧೂರ್ತೋಕ್ತಿಯಿಂ ತನ್ನ ದೋಷಮಂ ಪರಿಹರಿಸಲಿದೊಂದು ಉಪಾಯಮಾದುದೆಂದು ಬಾಳಂ ಕಲ್ಲಮೇಲೀಡಾಡಿದೊಡದು ಮುಕ್ಕುವೋದುದುಂ ಕಂಡು ಕಡುಮುಳಿದು ನಾವಿದನಾ ಬಾಳನವಳ ಮೇಲೆ ಮಗುೞ್ದೇಡಾಡಿದೊಡವಳ್ ಮೂಗನಕಾರಣಂ ಕೊಯ್ದನೆಂದು ಮೂಗಂ ಮತ್ತಂ ನೆತ್ತರ್ ಸುರಿವಿನಮೊರಸಿ  ಹಾಹಾಕ್ರಂದನರವದಿಂ ಹುಯ್ಯಲಿಡುವ ಕರುಣಾರವಮಂ ತಳವಾಱಂ ಕೇಳ್ದು ಪರಿತಂದು ನಾವಿದನುಮನವನ ಪೆಂಡತಿಯಮಂಪಿಡಿದೊಡಗೊಂಡು ಪೋಗಿ ಧರ್ಮಾಕರಣದ ತಾಣಾಂತರದೊಳಿರಿಸಿದಂ ಅನ್ನೆಗಂ ದೇವಶರ್ಮಂ ತನ್ನ ಬಗೆದೆಡೆಗೆ ಪೋಗಲೆಂದು ಬರುತ್ತಂ ಪಿರಿದಾಗಿ ನೆಱೆದಿರ್ದ ಜಿನಮಂ ಕಂಡಿದಿನಿಸಾನುಂ ಕೌತುಕಮಾಗಲೆವೇೞ್ಕುಮಿದಂ ನೋಡುವೆನೆಂದು ಪೋಗಿ  ನೋಡತಿರ್ಪನ್ನೆಗಂ ಧರ್ಮಾಕರಣದವರ್ ನಾವಿದನಂ ಕರೆದು ನೀನಿವಳ ಮೂಗನೇ ಕಾರಣಂ ಪಱೆದೆ ಪೇೞೆಂದು ಪಲವು ಸೂೞುಂ ಬೆಸಗೊಂಡೊಡವಂ ಮತಿಭ್ರಾಂತಿಯಿಂದುಸಿರದಿರ್ಪುದುಮದಂ ಕಂಡು ಪೆಂಡತಿಯ ಮೂಗನ ಕಾರಣದಿನರಿವವನಂ ಜವನ ಬಾಱೆಗಟ್ಟುವುದೆ ಧರ್ಮಮೆಂದು ಧರ್ಮಾಕರಣಂ ದಂಡಧರಂಗೆ ಪೇೞ್ವುದುಮಾ ತಳಾಱರಾ ನಾವಿದನಂ ಪಿಡಿದುಯ್ಯುತಿರ್ದಾಗಳ್ ದೇವಶರ್ಮನನ್ನೆಗಂ ಮಾಣೆಂದು ಧರ್ಮಾಕರಣರ್ಗಿಂತೆಂದಂ: ಈ ಪಾತಕಿಯ ಮಾತಂ ನಂಬಿ ದೋಷಿಯಲ್ಲದನಂ ಕೊಲಿಸುವುದು ಧರ್ಮಮಲ್ಲೆಂದು ನುಡುವುದುಂ ನೀನೆಚಿತಱೆವೆಯೆಂದು ಧರ್ಮಾಕರಣರ್ ಬೆಸಗೊಂಡೊಡೆ ದೇವಶರ್ಮನಿಂತೆಂದಂ:

ಶ್ಲೋ|| ಜಂಬುಕೋ ಮೇಷಯುದ್ಧೇನ ವಯಂಚಾಷಾಡಭೂತಿನಾ
ದೂತಿಕಾ ತಂತುವಾಯೇನ ತ್ರಯೋನರ್ಥಾಸ್ಸ್ವಯಂಕೃತಾಃ  ||೪೪||

ಟೀ|| ತಗರ್ ಕಾದುವಲ್ಲಿ ನಡುವೊಕ್ಕು ನರಿ ಸತ್ತುದು. ಆಷಾಢಭೂತಿಯಿಂದಂ ದೇವ ಶರ್ಮನಪ್ಪೆನ್ನ ಧನಂ ಪೋದುದು ಸಾಲಿಗನ ಕೈಯೊಳ್ ದೂದವಿಯಪ್ಪವಳ್ ವೃಥಾ ಮೂಗಂ ಕೊಯಿಸಿಕೊಂಡಳ್ ಈ ಮೂಱನರ್ಥಂಗಳ್ ತಮ್ಮಿಂ ತಾವೆ ಮಾಡಿಕೊಂಡುವು. ಎಂದಿಂತಿವರ ಕಥಾ  ವೃತ್ತಾಂತಮಂ ಧರ್ಮಾಕರಣರ್ಗೆ ಪೇೞ್ದು ನಾವಿದನ ಸಾವಂ ಮಾಣಿಸಿದಂ.

ಎಂಬಂತೆ ಸಂಜೀವಕನೆಂಬ ಪಾತಕನಂ ತಂದು ಪಿಂಗಳಕನೊಳ್ ಕೂಡಿ ಸ್ವಯಂಕೃತಾ ನರ್ಥಮಂ ಮಾಡಿಕೊಂಡೆವೆನೆ ಕರಟಕನಿಂತೆದಂ: ಮಂತ್ರನಿಶ್ಚಯಮಿಲ್ಲದೆ  ಅನಾಲೋಚಿತ ಕಾರ‍್ಯಾನುಷ್ಟಾನ ವಿಪತ್ತಿಯೊಳಿದಂ ಮೊದಲೊಳಿಂತೆ ಮಾಡದೆ ಪೊಲ್ಲದಾಯ್ತೆಂದು ಬೞೆಕ್ಕ ಕಾಣ್ಬ ಕಾಣ್ಕೆಯಿಂ ಮುನ್ನಮೆ ಕಾಣ್ಬಂಗಾವ ಕಾರ‍್ಯಮುಮಸಾಧ್ಯಮಾಗಲಱೆಯದು, ಇನ್ನಾದೊಡಂ ನಿನ್ನ ಪಶ್ಚಾತ್ತಾಪಮಂ ಮಾಣ್ದು ನಿನ್ನ ಪುತ್ರಮಿತ್ರಕಲತ್ರಬಾಂಧವರ್ ಪಸಿದು ಸಾಯದಂತಪ್ಪು ಪಾಯಮನೀಯವಸರದೊಳ್ ಮಾಡಿ ನಿನ್ನ ಬುದ್ಧಿಯನಿಲ್ಲಿ ತೋಱಲ್ ಬಲ್ಲೆಯಪ್ಪೊಡೆ ತೋಥೆನೆ ದವನಕನಂತೆಗೆಯ್ವೆನೆಂದಿತೆಂದಂ:

ಶ್ಲೋ || ಆಸನ್ನ ಕಾರ‍್ಯಸ್ಥ ಸಮುದ್ಭವಾರ್ಥಂ ಆಗಾಮಿನೋರ್ಥಸ್ಯ ಚ ಸಂಗ್ರಹಾರ್ಥಂ
ಅನರ್ಥಕಾರ್ಯ ಪ್ರತಿಘಾತನಾರ್ಥಂ ಯನ್ಮಂತ್ರ್ಯತೇ ಸಾ ಪರಮೋ ಹಿ ಮಂತ್ರಃ ||೪೫||

ಟೀ|| ಆಗಿರ್ದ ಕಾರ್ಯದ ಪೆರ್ಚುಗೆಗಂ ಮುಂತಪ್ಪ ಕಜ್ಜಮುಮಂ ಮಾೞ್ಪುದರ್ಕ ಮನರ್ಥಕಮಪ್ಪ  ಕಜ್ಜದ ಪ್ರತೀಕಾರಕ್ಕಮಾವುದಾನೊಂದಾಲೋಚನೆಗೆಯ್ದು ಮಾೞ್ಪುದುತ್ತಮಮಂತ್ರಂ ಅದು ಕಾರಣದಿನೀಗಳ್ ಪಿಮಗಳಕನಪ್ಪೊಡೆ ಮಹಾವ್ಯಸನಮಂ  ಕೈಕೊಂಡಂ: ಅದಾವುವೆಂದೊಡೆ ಅರಸನಪ್ಪಾತಂಗೆ ಸ್ವಭಾವ ಪ್ರದೋಷ ಪ್ರಸಂಗಗುಣಪ್ರತಿಲೋಮ ಪೀಡನಮೆಂದಯ್ದು ಮೂಲವ್ಯಸನಂಗಳಕ್ಕುಂ ಅವಱೊಳ್ ಸ್ವಾಮ್ಯಮಾತ್ಯ ಜನಪದ ದುರ್ಗ ಸುಹೃತ್ ಕೋಶದಂಡಮೆಂಬೇೞಂಗದೊಳೇಕಾಂಗಂ ವಿಕಳಮಾದೊಡಂ ಸ್ವಭಾವಮೆಂಬುದಕ್ಕುಂ ಬಾಹ್ಯಾಂತಃ ಪ್ರಕೃತಿಗಳೆರಡುಮೊರ್ವ್ಮೆಯೆಪ್ರಕೋಪಂಗೆಯ್ವುದು ಪ್ರದೋಷಮೆಂಬುದಕ್ಕುಂ  ಅಂಗನಾ ದ್ಯೂತ ಮೃಗಯಾ ಪಾನ ವಾಗ್ದಂಡ ಹರ್ಷಾರ್ಥದೂಷಣಂಗಳೆಂಬೇೞುಂ ಪ್ರಸಂಗಗುಣಮೆಂಬುದಕ್ಕುಂ ಕಾಂತಾ ದ್ಯೂತ ಮೃಗಯಾ ಪಾನಂಗಳ್ ನಾಲ್ಕುಂ ಕಾಮಜಂಗಳ್ ಉೞೆದ ವಾಗ್ದಂಡ ಹರ್ಷಾರ್ಥ ದೂಷಣಂಗಳ್ ಮೂಱುಂ ಕ್ರೋಧಜಂಗಳಕ್ಕುಂ ಸಂ ವಿಗ್ರಹಚಿiiನಾಸನ ದ್ವೈನಭಾನ ಸಮಾಶ್ರಯಂಗಳೆಂಬಾಱುಗುಣಂಗಳೊಳಂ ಸಂಕಾರ‍್ಯದೆಡೆಯೊಳ್ ವಿಗ್ರಹಮನೆತ್ತಿಕೊಳ್ವುದುಂ ವಿಗ್ರಹಮಪ್ಪೆಡೆಯೊಳ್ ಸಂಯನೊಡರ್ಚವುದುಮುೞೆದ ಗುಣಂಗಳುಮನೀಯಂದದೊಳ್ ಪ್ರತಿಲೋಮಂಗೆಯ್ವುದುಂ ಪ್ರತಿಲೋಮವೆಂವ ವ್ಯಸನಮಕ್ಕುಂ ವೈರಾಗ್ಯ, ಅಗ್ನಿ, ಉದಕ ವ್ಯಾತಂಕ, ಮಾರಿಗುತ್ತ ದುರ್ಭಿಕ್ಷ, ಅತಿವೃಷ್ಟಿ ಅನಾವೃಷ್ಟಿಗಳೆಂಬೆಂಟುಂ ಪೀಡನಮೆಂಬುದಕ್ಕುಂ ಇಂತೈದುಂವ್ಯಸನಂಗಳೊಳ್ ನಮ್ಮರಸನಪ್ಪ ಪಿಂಗಳಕಂ ಪಶುವಿಂಗೆ ವಶಗತವಾಗಿ ವಿರಕ್ತಪ್ರಕೃತಿಯಪ್ಪುದರಿಂ ಸ್ವಭಾವಮೆಂಬ ವ್ಯಸನಂಗೂಡಿ ವಿರಕ್ತನಾಗಿರ್ದಪಂ. ಅದಱೆಂದಾತಂಗೆ ಸಂಜೀವಕನೊಳ್ ವಿರಕ್ತಿಯಂ ಮಾಡುವುದೆ ಕಜ್ಜಮೆನೆ ಕರಟಕಂ ಅಂತಪ್ಪೊಡೆ  ನಿನ್ನ ಪೇೞ್ದ ಗುಣಂಗಳೀಗಳಿವರಿರ್ಬರ್ಗಂ ವಿರಕ್ತಿಯಂ ಮಾಡುವುದುಂ ನಾಡೆಯುಂ ಗಹನಮೆನೆ, ದವನಕನದಾವಗಹನಂ, ಬುದ್ಧಿಸಾಧ್ಯಮಾವುದುಮಿಲ್ಲೆಂಬುದಂ ಕೇಳ್ದಱೆವುದಿಲ್ಲಕ್ಕುಮೆಂದಿಂತೆಂದಂ :

ಶ್ಲೋ|| ಉಪಾಯೇನ ಹಿತಂ ಕುರ‍್ಯಾದನ್ಯಶಕ್ತಿ ಪರಾಕ್ರಮೈಃ
ಕಾಕೀ ಕನಕಸೂತ್ರೇಣ ಕೃಷ್ಣಸರ್ಪಮಘಾತಯತ್  ||೪೬||

ಟೀ|| ಉಪಾಯದಿಂದಂ ತನಗೆ ಹಿತವಂ ಮಾಡಿಕೊಂಬುದು: ಆವನೊರ್ವಂಗೆ ಪರಾಕ್ರಮಶಕ್ತಿಯಲ್ಲದಿರ್ದೊಡಮನ್ಯಶಕ್ತಿ ಪರಾಕ್ರಮದಿಂ ಸಾಸಿಕೊಂಬುದು: ಕಾಗೆ ತಂದ ಕನಕ ಸೂತ್ರದಿಂ ಕೃಷ್ಣಸರ್ಪನೆಹಗೆ ಮರಣಮನೆಯ್ದಿತ್ತಹಗೆ ಅದೆಂತನೆ, ಕರಟಕಂ ಪೇೞ್ದುದು:

೧೨೦. ಸುಪ್ರಸಿದ್ಧನಾದ ದೇವಾಲಯಸಮೂಹದಿಂದಲೂ ಗಣಿಕಾನಿವಾಸದಿಂದಲೂ ಚಿನ್ನದ ಬೆಟ್ಟದ ಶಿಖರಗಳಿಂದಲೂ ಉತ್ತಮ ಧಾರ್ಮಿಕರಿಂದಲೂ ಮುನೀಮ್‌ದ್ರರಿಂದಲೂ ಕ್ರೌಂಚ ಚಕ್ರವಾಕಗಳಿಂದ ಶೋಭಿಸುವ ಸರೋಜಸಮೂಹದಿಂದಲೂ ಕ್ರೌಂಚಪುರವು ಇಂದ್ರನ ಅಮರಾವತಿಗೆ ಸಮಾನಾಗಿ ಧರೆಯಲ್ಲಿ ಅತಿಶಯವಾಗಿ ಸದಾ ಶೋಭಿಸುತ್ತಿತ್ತು. ವ||  ಆ ಪಟ್ಟಣದಲ್ಲಿ ದೇವಶರ್ಮನೆಂಬ ಶೈವಬ್ರಾಹ್ಮಣನು ಉಗ್ರೋಗ್ರ ತಪೋನುಷ್ಠಾನ ಚಿತ್ತನಾಗಿ ಹಲವು ಕಾಲದಿಂದ ಇದ್ದನು. ಅವನಿಗೆ ರಾಜರು ಸೂರ‍್ಯ ಚಂದ್ರ ಗ್ರಹಣಾದಿ ಪುಣ್ಯ ತಿಥಿಗಳಲ್ಲಿ  ಭಕ್ತಿಪೂರ್ವಕವಾಗಿ ಸುವರ್ಣದಾನವನ್ನು ಕೊಡಲು ಕಾಲಕಳೆದೆಂತೆ ಆ ಹೊನ್ನು ಸಹಸ್ರ ಸಂಖ್ಯೆಯಾಗಿ ಬೆಳೆಯಿತು. ದೇವಶರ್ಮನು ಅದನ್ನೂ ತಾಯಿಯು ತನ್ನ ಮಗನನ್ನು ಉತ್ತಮ, ಸತ್ತ್ವ ಸಂಪನ್ನನು ತನ್ನ ಶರಣಾಗತನನ್ನು, ಧಾರ್ಮಿಕನು ಧರ್ಮವನ್ನು, ಯಶೋವೃತ್ತಿಯು ಯಶಸ್ಸನ್ನು, ಸತ್ಪರುಷರು ಆಶ್ರಿತರನ್ನೂ ನಿಸರ್ಗಭೀರು ಪ್ರಾಣವನ್ನೂ, ಶೂರನು  ವಿಕ್ರಾಂತವನ್ನೂ,  ಮಹಾಸತಿ ಪತಿವ್ರತಾಗುಣವನ್ನು, ಲೋಭಿಯು ಧನವನ್ನೂ ಮನಸ್ವಿಯು ತನ್ನ ಮಾನವನ್ನು ರಕ್ಷಿಸುವಂತೆ ಕಾಪಾಡಿಕೊಂಡಿದ್ದನು ಆ ಪಟ್ಟಣದಲ್ಲಿ ದ್ಯೂತವ್ಯಸನದಿಂದ ವಿಕಳಭೂತಿಯಾದ ಆಷಾಢಭೂತಿಯಾದ ಧೂರ್ತನಿದ್ದನು. ಆತನು ತನಗೇನೂ ಗತಿಯಿಲ್ಲದೆ ಪರಿಭ್ರಮಿಸುತ್ತಿರಲು ದೇವಶರ್ಮನ ಹತ್ತರ ಧನವುಂಟು ಎಂಬುದನ್ನ ಕೇಳಿ ತಿಳಿದುಕೊಂಡು ದೇವಶರ್ಮನಲ್ಲಿಗೆ  ಹೋಗಿ ಸಾಷ್ಟಾಂಗಪ್ರಣತನಾದನು. ಸ್ವಾಮಿ, ವಿದ್ಯಾರ್ಥಿಯಾಗಿ ಬಂದ ನನ್ನನ್ನು ಸ್ವೀಕರಿಸಬೇಕು ಎಂದು ಹೇಳಲು ದೇವಶರ್ಮನು ಅವನನ್ನು ಸ್ವೀಕರಿಸಿದನು. ಪರಮ ಭಕ್ತಿಯಿಂದ ಆಷಾಡಭೂತಿಯು ಗುರುವಿನ ಕೈಂಕರ್ಯವನ್ನು ಮಾಡಿದನು. ಕೆಲವು ದಿನಗಳಲ್ಲಿ  ತೀರ್ಥಾಯಾತ್ರಾಸಕ್ತಚಿತ್ತನಾಗಿ ದೇವಶರ್ಮನು ತನಗೆ ದಾನಮಾಡಲು ಸಾಕಾಗುವಷ್ಟು ದ್ರವ್ಯವನ್ನು ದೇವರ ಪೆಟ್ಟಿಗೆಯಲ್ಲಿಟ್ಟು ಆಷಾಢಭೂತಿಯೊಡನೆ ಕ್ರೌಂಚಪುರದಿಂದ ಯಾತ್ರೆಗೆಂದು ಹೊರಟನು. ೧೨೧. ಹಂಸಗಳ ಸಾಲಿನಿಂದಲೂ ಮೀನುಗಳ ರಾಶಿಯಿಂದಲೂ ಉತ್ತಮ ಸಾರಸ ಪಕ್ಷಿಗಳಿಂದಲೂ ಕ್ರೌಂಚಸಮೂಹದಿಂದಲೂ ಬಕಸಮೂಹದಿಂದಲೂ ಶ್ರೇಷ್ಟವಾದ ಚಕ್ರವಾಕಗಳಿಂದಲೂ ಚಂಚಲವಾದ ದುಂಬಿಗಳಿಂದ ಆವೃತವಾದ ಕಮಲ ಕನ್ನೈದಿಲೆ, ಬಿಳಿಯ ನೈದಿಲೆಗಳಿಂದಲೂ ಪ್ರಸಿದ್ಧವಾದ ಸರೋವರದ ವಿಸ್ತಾರವಾದ ತೀರವನ್ನು ಆ ಬ್ರಾಹ್ಮಣನು ಕಂಡನು. ಆ ಸರೋವರದಲ್ಲಿ ದೇವಶರ್ಮನು ದೇವಪೂಜೆಯನ್ನು ಮಾಡಿ ಹೋಗೋಣವೆಂದು ಆಷಾಢಭೂತಿಯನ್ನು ತನ್ನ ದ್ರವ್ಯಕ್ಕೆ ಕಾವಲು ಇರಿಸಿ ಪಾದಪ್ರಕ್ಷಾಳನಮಾಡಿ ಭಸ್ಮೋದ್ಧೂಳಿತಗಾತ್ರನಾಗಿ ದೇವತಾಸಮಾರಾಧನೆಗೆ ಕುಳಿತು ೧೨೨, ಹರನೂ,  ಶಂಕರನೂ, ತ್ರಿಪುರನನನ್ನು ಗೆದ್ದವನೂ, ಸ್ಮರನನ್ನು ಸುಟ್ಟವನೂ, ಉನ್ನತ ಜಟಾಧರನೂ, ಅತಿಶಯ ಭಕ್ತಿಗೆ ಬಾಗಿದವನೂ ಗಂಗಾಧರನೂ, ಮೃಡಾಣೀವರನೂ, ಚಂದ್ರಶೇಖರನೂ ಆದ ಶಿವನನ್ನು ಧ್ಯಾನಿಸಿದನು. ಶ್ರೇಷ್ಠನು ತನ್ನ ಹೃತ್ಕಮಲದಲ್ಲಿ ಧರಿಸಿದನು. ಪರಮಾತ್ಮಧ್ಯಾನಾನಮಾನಸನಾದ ದೇವಶರ್ಮನು ಪರಮಾತ್ಮಾವಸ್ಥೆಗೆ ಸಂದುದನ್ನೂ,   ಹತ್ತಿರದಲ್ಲಿ ಬೇರೆ ಯಾರೂ ಇಲ್ಲದಿರುವುದನ್ನೂ ಕಂಡು ಆಷಾಢಭೂತಿಯೂ ತಾನು ಛಿದ್ರಾನ್ವೇಷಿಯಾದುದರಿಂದ ತನಗೆ ಇದೇ ತಕ್ಕ ಸ್ಥಾನವೆಂದು ಭಾವಿಸಿದನು. ಶ್ಲೋ|| ವಿಶ್ವಾಸ ಪ್ರತಿಪನ್ನಾನಾಂ ವಂಚನಂ ಕಾ ವಿದಗ್ಧತಾ -ವಿಶ್ವಾಸವನ್ನಿಟ್ಟವರನ್ನು ವಂಚಿಸುವುದು ಎಂಥ  ಪ್ರೌಢಿಮೆ – ವ|| ಎಂದು ಬಗೆಯದೆ ಆ ದುರಾತ್ಮನು ಆ ಮಹಾತ್ಮನ ಧನವನ್ನು  ಕೊಂಡುಹೋದನು. ದೇವಶರ್ಮನು ಸ್ವಲ್ಪ  ಹೊತ್ತಿನಲ್ಲಿ ದೆಸೆದೆಸೆಗೆ ನೋಡಿ ಹತ್ತಿರದಲ್ಲಿದ್ದ ಪೆಟ್ಟಿಗೆಯನ್ನೂ ಅಷಾಢಭೂತಿಯನ್ನೂ ಕಾಣದೆ ಅರ್ಥನಾಶದಿಂದ ವಿಕಳಚಿತ್ತನಾಗಿ ಹಲವು ಕಾಲದಿಂದ ಪಡೆದ ಹಣ ನಿರರ್ಥಕವಾಗಿ ನಾಶವಾಯಿತೆಂದು ಚಿಂತಾಕ್ರಾಂತನಾಗಿ ತನ್ನನ್ನು ತಾನೇ ಸಂತೈಸಿಕೊಂಡನು. ಶ್ಲೋ|| ಐಶ್ವರ್ಯವಿದ್ದಲ್ಲಿ ಪುರುಷಾರ್ಥವನ್ನು ಮಾಡಬೇಕು ತಾನು ಅದನ್ನು ಅನುಭವಿಸಬೇಕಲ್ಲದೆ ಕೂಡಿಡಬಾರದು. ಜೇನು ನೋಣಗಳು ತುಪ್ಪವನ್ನು ಕುಡಿಟ್ಟರೆ  ಜನರು ಕೊಂಡು ಹೋಗುವರು ! ಎಂಬ ನೀತಿಶಾಸ್ತ್ರದ ಅಭಿಪ್ರಾಯವಾಯಿತು. ಎಲ್ಲವೂ ಅದೃಷ್ಟವಶವಲ್ಲದೆ ನನ್ನಿಂದ ಏನೂ ನಡೆಯದು ಎಂದು ಖೇದವನ್ನು ಬಿಟ್ಟಿದ್ದನು. ಆ ಸಮಯದಲ್ಲಿ ಅಡವಿಯಲ್ಲಿ ಆಡುತ್ತಿದ್ದ ಕುರಿ ಹಿಂಡು ನೀರು ಕುಡಿಯಬೇಕೆಂದು ಬಂದಿತು, ಎರಡು ತಗರುಗಳು ಕೊಣಕಿಟ್ಟು ತಮ್ಮತಮ್ಮಲ್ಲೇ ಕಿಡಿಗುಟ್ಟಿದಂತೆ ಹೋರಾಡುತ್ತಿದ್ದವು. ನೆತ್ತಿಯೊಡೆದು ಸುರಿಯುತ್ತಿದ್ದ  ಬಿಸಿ  ನೆತ್ತರನ್ನೂ ಮಾಂಸದ ಮುದ್ದೆಯನ್ನೂ  ಕಂಡು ಕ್ಷುಧಾರ್ತನಾದ ಒಂದು ಮೃಗಧೂರ್ತನು  ಆ ಮಾಂಸಖಂಡದ ಹತ್ತಿರ  ಬರಲು ಆ ತಗರೆರಡೂ ಮತ್ತೊಮ್ಮೆ ಹೋರಾಡಲು ನಡುವಿದ್ದ ನರಿಯು ಆನೆ ಮೆಟ್ಟಿದ  ಸೋರೆಯ ಕಾಯಿಯಂತೆ ಜಿಗಿ ಜಿಗೆಯಾಗಿ ಸತ್ತುದನ್ನು ದೇವಶರ್ಮನು ಕಂಡನು. ಜಂಬುಕೋ ಮೇಷಯುದ್ಧೇನ ವಯಂಚಾಷಾಡಭೂತಿನಾ ಎಂದು ಅಲ್ಲಿಂದ ಹೊರಟು ಸ್ವಲ್ಪ ದೂರದಲ್ಲಿದ್ದ ಊರನ್ನು ಕಂಡು ಅಲ್ಲಿಗೆ ಬರುವಷ್ಟರಲ್ಲಿ  ೧೨೩. ಕಮಲಗಳು ಕಣ್ಣು ಮುಚ್ಚಿದವು ನೈದಿಲೆಗಳು ಅರಳಿದವು ಚಕ್ರವಾಕಪಕ್ಷಿಗಳಿಗೆ ವಿರಹವುಂಟಾಯಿತು. ದೊಡ್ಡ ಬೀದಿಗಳಲ್ಲಿ ಹವಳದ  ಬಣ್ಣದ  ಕಾಂತಿ ವ್ಯಾಪಿಸಲು ಹಕ್ಕಿಗಳು  ತಮ್ಮ ಗೂಡುಗಳಿಗೆ ಹಾರಿದುವು. ಸೂರ‍್ಯನು ಪಶ್ಚಿಮಾಂಬುಗೆ ಇಳಿದನು. ವ|| ಹಾಗೆ ಸಂಜೆಯಾಗಲು ಆ ಮುನಿಯು ಆ ಊರಿನ ನಾಲ್ಕು ದಾರಿಗಳು ಕೂಡುವೆಡೆಯಲ್ಲಿ ಬಳಲಿದ ಶರೀರದಿಂದ ಬಿದ್ದು ಮೇಲುಸಿರು ಬಿಡುತ್ತಿದ್ದ ಗೂಢಪ್ರಾಣಿಯಂತೆ ಒಳಹೊಕ್ಕ   ಕಣ್ಣಿನ  ಬರಗಾಲದ ಕರೆಯಂತೆ ಬತ್ತಿದ್ದ ಬಾಯಿಯ, ಬೇತಾಳನ ಹೊಟ್ಟೆಯಂತೆ ಬೆನ್ನಿಗೆ ಹತ್ತಿದ ಹೊಟ್ಟೆಯಿಂದ ಕೂಡಿ ಬರುತ್ತಿದ್ದ ವೃದ್ಧತಾಪಸನನ್ನು ಕಂಡು ಅವರಿಗೆಲ್ಲ ಕರುಣೆ ಹುಟ್ಟಿತು. ಆ ಊರಿನ ಮೂಲಿಗನಾದ ಒಬ್ಬ ಪಟ್ಟಸಾಲಿಗನು ಅವನನ್ನು ಕಂಡು ತನ್ನ ಮನೆಗೆ ಕರೆದುಕೊಂಡು ಹೋಗಿ ಪರಮಭಕ್ತಿಯಿಂದ ಅವನ ಪಥಪರಿಶ್ರಮವನ್ನು ಆರಿಸಿ ಬಳಿಕ ತನ್ನ ಹೆಂಡತಿಯನ್ನು ಕರೆದು ಈ ತಪೋಧನನಿಗೆ ನಿರ್ವಾತವಾದ ಎಡೆಯಲ್ಲಿ ಹಾಸಿಗೆ ಹಾಸಿಕೊಡು ಎಂದನು. ಅವನು ಮಧುಪಾನಕ್ರೀಡಾನಿರತನಾಗಿ ಹೋಗಲು ಯೋಚಿಸಿ ಚಿತ್ರಗಳಿಂದ ಕೂಡಿದ ಬಟ್ಟೆಯನ್ನುಟ್ಟು ಕರ್ಪೂರಮಿಶ್ರಿತ ನವಮಲಯಜರಸವನ್ನು ಮೆಯ್ಗೆ ಬಳಿದುಕೊಂಡು ಪರಿಮಳ ಪುಷ್ವವನ್ನು ತಲೆಯಲ್ಲಿ ಮುಡಿದುಕೊಂಡು ಕೆಲವರು  ಸಮಾನಶೀಲ ಸ್ನೇಹಿತರನ್ನು ಕರೆದುಕೊಂಡು ಹೊರಟನು. ೧೨೪. ಮನೋಹರವೂ ಶ್ರೇಷ್ಟವೂ ಆದ ಚಿನ್ನದ ಬಟ್ಟಲುಗಳ ಸಮೂಹಕ್ಕೆ ಸುರಿದ ಮದ್ಯದ ವಾಸನೆಯಿಂದ ಕೂಡಿದ, ಮದಿಸಿದ ದುಂಬಿಗಳ ಸಮೂಹದ ಶಬ್ದದಿಂದ ಕೂಡಿದ ಅತ್ಯಂತ ಮನೋಹರವಾದ ಮದದಿಂದ ಕುಣಿಯುವ ಸ್ತ್ರೀಯರ ಕಸ್ತೂರೀಮಿಶ್ರಿತ ತೋರಹೆರಳಿನಿಂದ ಬೀಳುತ್ತಿರುವ  ಪುಷ್ವರಾಶಿಯಿಂದ ಕೂಡಿದ ಶ್ರೇಷ್ಟವಾದ ಪಾನ ಭೂಮಿಯನ್ನು ತಂತುವಾಯನು ಅತ್ಯಂತ ಸಂತೋಷದಿಂದ ತಲುಪಿದನು. ವ|| ಅಷ್ಟರಲ್ಲಿ ಇತ್ತ ತಂತುವಾಯಿಕೆಯು ಮನೆಯ ಓವರಿಯಲ್ಲಿ ಹಾಸಿಕೊಟ್ಟು ಸ್ವಾಮೀ ನೀವು ಇಲ್ಲಿ ಸುಖವಾಗಿ ನಿದ್ರಿಸಿರಿ ಎಂದು ತಾನು ಜೋಡಾಡಲು ಮನೆಯ ಯಜಮಾನನು ಬರುವುದರೊಳಗೆ ಬೆಳಗಾಗುವುದರೊಳಗೆ ಚಂದ್ರೋದಯವಾಗುವ ಮೊದಲು ತನ್ನ ಮನೋರಥವನ್ನು ಈಡೇರಿಸಿಕೊಳ್ಳುವೆನೆಂದು ದೂತಿಯನ್ನೂ ಕರೆದು ತನ್ನಾತನನ್ನು ಸಂಕೇತ ನಿಕೇತನಕ್ಕೆ ಕರೆದುಕೊಂಡು ಬಾ ಎಂದು ಹೇಳಿದಳು. ಶ್ವೇತಾಂಬರಧಾರಿಯಾಗಿ, ಪುಷ್ವಮಾಲಾಯುತೆಯಾಗಿ ಕಡುಕತ್ತಲೆಯಲ್ಲಿ ಆ ಕಾಮಾಂಧೆ ತುಂತುವಾಯಿಕೆ ತನ್ನ ಮನೆಯಿಂದ ಹೊರ ಹೊರಟಳು. ವ|| ಹಾಗೆ ಸ್ವಲ್ಪ ದೂರ ಹೋಗುತ್ತಿರಲು ಎದುರುಗಡೆ ಮದಿರಾಮನದೋನ್ಮತ್ತನಾಗಿ ಸ್ವೇಚ್ಛೆಯಿಂದ ಹರಟುತ್ತಾ ಬರುತ್ತಿದ್ದ ಮನೆಯ ಯಜಮಾನನ ಸ್ವರವನ್ನು  ಕೇಳಿ ದಾರಿಯಲ್ಲಿ  ಹೋಗುವ ಅಂಜುಬುರುಕನು ಕಳ್ಳನನ್ನು ಕಂಡಂತೆ ಭಯಭ್ರಾಂತಳಾಗಿ ಮನೆಗೆ ಹಿಂದಿರುಗಿದಳು. ತನ್ನ ಮೆಯ್ಮೇಲಿನ  ವಿಶೇಷಲಂಕಾರವನ್ನೂ ಶೃಂಗಾರವನ್ನೂ  ತೆಗೆದು ಹಾಕಿ ಮೊದಲಿನ ರೂಪದಲ್ಲಿಯೇ ಇರಲು ಹೀಂದಿನಿಂದಲೇ ಬಂದು ಮುಂದೆ ನಿಂತಿದ್ದ ಗಂಡನನ್ನು  ಕಂಡು ಆ ಪ್ರಚಂಡೆ ವಂಚನೋಪಾಯವನ್ನು ಕಾಣದೆ ಬೆರಗಾಗಿ ಇದೇನೆಂದು ಕೇಳಿದರೆ ಸನ್ನಿಪಾತರೋಗಗ್ರಸ್ತರಂತೆ ಬಾಯಿ ಬಿಡದಿರಲು ಅ ತಂತುವಾಯನು ತನ್ನ ಹೆಂಡತಿ ಜೋಡೆಯೆಂದು ಮೊದಲಿಂದ ಸಂದೇಹ ಪಡುತ್ತಿದ್ದನಾದುದರಿಂದ ಅವಳ ವಿಪರೀತವೇಷ ತನಗೆ ರೋಷವನ್ನಂಟುಮಾಡಲು ಅವಳನ್ನು ಸಾಯುವಂತೆ ಹೊಡೆದು ಮನೆಯ ನಡುಗಂಬಕ್ಕೆ ಕಟ್ಟಿದನು. ಕಳ್ಳಿನ ಸೊಕ್ಕಿನಿಂದಲೂ ಹೋರಾಟದಿಂದಲೂ ನಿದ್ರಾಮುದ್ರಿತನಾದನು. ಅಷ್ಟರಲ್ಲಿ ದೂತಿಯಾದ ನೆರೆಮನೆಯ ನಾವಿದಂನ ಹೆಂಡತಿ ಹಾದರಿಗನನ್ನು ಸಂಕೇತಸ್ಥಾನದಲ್ಲಿಟ್ಟು ಬಂದು ಬಂತಳಾದ ಗೆಳತಿಯನ್ನುಕಂಡು ವೃತ್ತಾಂತವೆಲ್ಲವನ್ನೂ ತಿಳಿದು ಅವಳ ಕಟ್ಟನ್ನು ಬಿಚ್ಚಿ ತನ್ನನ್ನು ಕಂಬಕ್ಕೆ ಕಟ್ಟಿಸಿಕೊಂಡು ನಿನ್ನ ಮನೋವಲ್ಲಭನೊಡನೆ ಕೂಡಿ ಬೇಗ ಬಾ ಎಂದು ಹೇಳಿದಳು! ೧೨೬. ಕರ್ಮ ವಶದಿಂದ ಆ ದೂತಿಯು ಮತಿಗೆಟ್ಟು ಕಟ್ಟಿಸಿಕೊಂಡು ಕೆಟ್ಟಳು. ತಾನಾಗಿ ಕಟ್ಟಿಸಿಕೊಂಡುದನ್ನು ಯಾರಿಂದಲಾದರೂ ಬಿಡಿಸಿಕೊಳ್ಳುವುದೂ ಸಾಧ್ಯವೇ? ವ|| ಸ್ವಲ್ಪ ಹೊತ್ತಿನಲ್ಲಿ ತಂತುವಾಯನು ಎಚ್ಚತ್ತು ಅವಳನ್ನು ನಾನಾ ವಿಧದಿಂದ ಬಯ್ದು ನಿನ್ನ ಬೇಟದ ಮಿಂಡನು ಯಾವನವನು ಹೇಳೆನ್ನಲು ದೂತಿಯು ಭೀತಿಯಿಂದ ಊಸಿರಿಡದಿರಲು ಸಹಿಸಲಾರದೆ ಇವಳಿಗೆ ತಕ್ಕ  ಶಿಕ್ಷೆ ಮಾಡುವೆನೆಂದು  ಬಗೆದನು. ೧೨೭. ಆಡಿದವಳು ಆಡಿ ಹೋದಳು ನೋಡಬಂದವಳಿಗೆ ಮೂಗು ಹೋಯ್ತು ಎಂಬ ಇಷ್ಟನ್ನು ಮಾಡುವನೆಂದು  ಆ ಜೋಡೆಯ ಮೂಗಿಗೆ ಮೃತ್ಯದೂಡುವಂತೆ ವ|| ಅವಳ ಮೂಗನ್ನು  ಕೊಯ್ದು ಮತ್ತೆ ನಿದ್ರಾಂಗನಾಸಂಗತನಾದನು. ಇತ್ತ ತಂತುವಾಯಿಕೆಯು ಜಾರನೊಡನೆ ಕೂಡಿ ಸುರತಸುಖವನ್ನನುಭವಿಸುತ್ತರಲು, ೧೨೮. ಸುಂದರನೂ ಪ್ರತಾಪಶಾಲಿಯೂ ಆದ ತನ್ನ ಪತಿಯನ್ನು ಒಲ್ಲದೆ ಎಲ್ಲರೂ ನಿಂದಿಸಲು ತೀಕ್ಷ್ಣವಾದ ನೃಪದಂಡನೆಗೆ ಅಳುಕದೆ ಶರೀರಸುಖಕ್ಕಾಗಿ ವಿಟರೊಡನೆ ಕೂಡುವ ವ್ಯಭಿಚಾರಿಣಿಯರ ಆಟವನ್ನು ಈಕ್ಷಿಸಲು ಮನಸ್ಸು ಮಾಡಿ ಸಂತೋಷದಿಂದ ಚಂದ್ರನು ಉದಯಪರ್ವತವನ್ನು  ಏರಿದನು. ವ ||  ಹಾಗೆ ಆ ಚಂದ್ರೋದಯವಾದುದನ್ನೂ ತಂತುವಾಯಿಕೆ ಕಂಡು  ಆಶ್ಚರ್ಯಗೊಂಡು ವಿಟನನ್ನು ಬೀಳ್ಕೋಟ್ಟು ಹೊರಹೊರಟಳು. ೧೨೯. ಸುರತದ ಸೊಕ್ಕಿನಿಂದ ಮೂಡಿದ ಬೆವರಿನ ಬಿಂದುಗಳ ಮನೋಹರಹಾರವುಳ್ಳವಳೂ, ವಲ್ಲಭನ ಅಧರದ ಮಧುಪಾನದಿಂದ ಕಾಮತಾಪವನ್ನು ಪರಿಹರಿಸಿಕೊಂಡವಳೂ. ನಖಕ್ಷತ್ರಗಳ ಸಾಲುಗಳಿಂದ ಹೊಳೆಯುವ ತೋರವಾದ ಎರಡು ತೊಡೆಗಳುಳ್ಳವಳೂ ರಾಜನ ಶಿಕ್ಷೆಗೆ  ಹೆದರಿದವಳೂ ಆದ ಆ ತಂತುವಾಯನ ಸುಂದರಿ ಬೇಗ ಬೇಗನೆ ಒಳದಾರಿಯಿಂದ ತನ್ನ ಮನೆಯನ್ನು ಸೇರಿದಳು. ವ || ಕತ್ತಲೆಯಲ್ಲಿ ಕಟ್ಟಿಸಿಕೊಂಡಿದ್ದ ದ್ರೋಹಿಯನ್ನು ಆ ಪತಿದ್ರೋಹಿ ಕಂಡು, ನಿಮ್ಮ ಭಾವನೇನಾದರೂ ಹೇಳಿದನೇ ಎನ್ನಲು ಅವಳು, ಏನುಹೇಳಲಿ ಹೊಕ್ಕು ಇರಿಯಲು ಹೋದರೆ ಮೂಗರಿದರು ಎಂಬಂತೆ ಆಯಿತು. ಇದಕ್ಕೆ ತಕ್ಕುದನ್ನು ಮಾಡಬೇಕು. ಈ ಕಟ್ಟುಗಳನ್ನು ಬೇಗ ಬಿಡಿಸೆಂದು ಬಿಡಿಸಿಕೊಂಡು ಹೋದಳು. ಇತ್ತ ತಂತುವಾಯಿಕೆ ತನ್ನ ನಿರ್ಗಮೋಪಾಯವನ್ನು ಆಲೋಚಿಸಿ ಸಂಸತಪಟ್ಟು ಇನ್ನು ಈ ದಡ್ಡನಿಗೆ ಮೋಸಮಾಡಲು ಬಲ್ಲೆ ಎಂದು ಗೃಹಮಧ್ಯ ಸ್ತಂಭಾವಷ್ಟಂಭೆಯಾಗಿ ನಿಂತಳು. ಅಷ್ಟರಲ್ಲಿ ಆ ತಂತುವಾಯನು ಎದು, ಈಗ ನಿನ್ನ ರೂಪ ವಿಲಾಸ ವಿಭ್ರಮಗಳನ್ನು ನಿನ್ನ ಮನೋವಲ್ಲಭನಿಗೆ ತೋರಿಸದೆ ಏಕೆ ಸುಮ್ಮನಿರುವೆ ಎಂದು ವಿರಸವಾದ ಸರಸವಚನಗಳನ್ನು ನುಡಿಯಲು ತಂತುವಾಯಿಕೆ ಹೀಗೆಂದಳು: ೧೩೦. ನೀನು ಹೀಗೆ  ಚೆನ್ನಾಗಿ ಅಲಂಕೃತನಾಗಿ ಅನಂದಮನಸ್ಕನಾಗಿರಲು ನಾನು ನಿನಗೆ ಅತ್ಯಾನಂದವನ್ನು ಮಾಡುವೆನು ಎಂಬ ಈಕಾರಣದಿಂದ ಶೋಭಿಸುವಂತೆ ಅಲಂಕಾರ ಮಾಡಿಕೊಂಡಿದ್ದೆ. ವ|| ಹಾಗಿರಲು ನೀನು ಅದನ್ನೇ ದೋಷವೆಂದು ಬಗೆದು ರೋಷಗ್ರಹಾವೇಶನಾಗಿ ನಿಷ್ಕಾರಣವಾಗಿ ನನ್ನನ್ನು ನೋಯಿಸಿದೆ. ನಾನು ಒಬ್ಬ ತಂದೆ ತಾಯಿಗಳಿಗೆ ಹುಟ್ಟಿದುದು ನಿಜವಾದರೆ, ಪತಿವ್ರತೆಯಾಗಿದ್ದರೆ, ಮನೆದೇವ ನನ್ನನ್ನು ಒಲಿದುದು ನಿಜವಾಗಿದ್ದರೆ ನನ್ನ ಮೂಗು ಮೊದಲಿನಂತೆ ಆಗಲಿ ;  ನನ್ನನ್ನು ಕಟ್ಟಿದ ಈ ಕಟ್ಟೆಲ್ಲ ಬಿಚ್ಚಿಹೋಗಲಿ. ಹಾಗಾಗದಿದ್ದರೆ ನಾನು ಮಹಾಸತಿಯಲ್ಲ ಎಂದು ಪ್ರತಿಜ್ಞೆ ಮಾಡಿದಳು. ತಂತುವಾಯನು ವಿಸ್ಮಯದಿಂದ ಈ ಕೌತುಕವನ್ನು ನೋಡುವೆ ಎಂದು ಹುಲ್ಲುಬೆಂಕಿಯನ್ನು ತಂದು ಹಿಡಿದು ನೋಡಲು ಪೂರ್ವ ರೂಪಿಯೂ ಅಪೂರ್ವಸ್ವರೂಪಿಯೂ  ಆಗಿದ್ದ ಆ ಮಾಯಾವಿಯನ್ನೂ ಕಂಡನು. ರೋಮಾಂಚನಗೊಂಡು ಆ ತಂತುವಾಯಿಕೆಗೆ ಕೈಗಳನ್ನು ಮುಗಿದು, ೧೩೧. ವನಜಾಕ್ಷಿ ! ನಿರ್ದೋಷಿಯಾದ ನಿನಗೆ ನಾನು ನೀಚಕಾರ್ಯವನ್ನು ಎಸಗಿದೆ ಎಂದು ತನ್ನ ಅಂಗನೆಯ ಪಾದಕ್ಕೆರಗಿದನು. ಧೂರ್ತೆಯಾದ ಕಾಂತೆಯ ಮನಸ್ಸನ್ನು ಅರಿಯುವುದು ಎಂಥವನಿಂದಲೂ ಸಾಧ್ಯವೇ! ವ|| ಹಾಗೆ ತಂತುವಾಯನು ಆ ಹಾದರಗಿತ್ತಿಯನ್ನೂ ಸಂತೋಷಪಡಿಸಿ ಸುಖನಿದ್ರತನಾದ. ಅದಲ್ಲವನ್ನು ಅಲ್ಲೆ ಮಲಗಿದ್ದ ವೃದ್ಧತಾಪಸನು ಕಂಡು ಮನಸ್ಸಿನಲ್ಲಿಯೇ ಹೀಗೆಂದುಕೊಂಡನು :* ೧೩೨. ವೇಶ್ಯೆಯರು ಎಂಥವರನ್ನೂ ನಂಬುವಂತೆ ಮಾಡುವರು.  ಅನೇಕ ವಿಧಗಳಿಂದ ಮೋಸಗೊಳಿಸುವರು. ಹೆಂಡಿರನ್ನೂ ನಂಬೂವುದೂ ಕಷ್ಟ, ನಂಬದಿರುವುದೂ ಕಷ್ಟ; ಅವರಿಲ್ಲದೆ ಬಾಳವುದೂ ಕಷ್ಟ. ಇದಕ್ಕೇನೆನ್ನಲಿ ಅವರನ್ನು ಹೇಗೆ ನೋಡಿಕೊಳ್ಳಬೇಕೆಂಬುದನ್ನು ತಿಳಿದವನಿದ್ದರೆ ಅವನೇ ದೇವತೆಯಲ್ಲವೇ! ವ|| ಎಂದು ದೇವ ಶರ್ಮನು ಆಶ್ಚರ್ಯಪಟ್ಟನು.  ಇತ್ತ ಆ ನಾವಿದನ ಹೆಂಡತಿ ತನ್ನ ಮನೆಗೆ ಹೋಗಿ ಇದಕ್ಕೇನು ಮಾಡಲಿ ಎಂದು ಚಿಂತಿಸುತ್ತಿದ್ದಳು. ಅತ್ತ ಭುವಜನವಿನುತಪಾದನೂ ಸಮಸ್ತ ಕಮಲವನಕ್ಕೆ ಆಹ್ಲಾದನೂ, ವಿದಿತಕೌಶಿಕಪಾದನೂ ಆದ ಸೂರ‍್ಯನು  ಉದಯಪರ್ವತದ  ಶಿಖರವನ್ನೂ ಎರಿದನು. ವ|| ಹಾಗೆ ಆದಿತ್ಯೋದಯವಾಗಲು  ಆ ದೂತಿಯ ಗಂಡ ಬಂದು  ಅರಸರ ಕರೆ ಬಂದಿದೆ, ಬೇಗನೆ ಕ್ಷೌರದ ಪೆಟ್ಟಿಗೆಯನ್ನೂ ಕೊಡು ಎಂದು ಕೇಳಿದನು. ಅವಳು ಕೆಟ್ಟ ಮಾತುಗಳಿಂದ ತನ್ನ ದೋಷವನ್ನು ಪರಿಹರಿಸಿಕೊಳ್ಳಲು ಇದು ತಕ್ಕ ಉಪಾಯ  ಎಂದು ಬಾಳನ್ನೂ ಕಲ್ಲಮೇಲೆ ಕೆಡೆಯಲು ಅದು ಮುಕ್ಕಾಗಿ ಹೋಯಿತು. ಅದನ್ನು ಕಂಡು ಸಿಟ್ಟಾಗಿ ಆ ನಾವಿದ ಬಾಳನ್ನು ಅವಳ ಮೇಲೆ ಎಸೆಯಲು ಅವಳು ತನ್ನ ಮೂಗನ್ನು ಅಕಾರಣವಾಗಿ ಕೊಯ್ದನೆಂದು ಮತ್ತಷ್ಟು ನೆತ್ತರೂ ಸುರಿಯುವಂತೆ ಒರಸಿಕೊಂಡು ಹಾಹಾಕ್ರಂದನದಿಂದ ಹುಯ್ಯಲಿಡತೊಡಗಿದಳು. ಈ ಗೋಳನ್ನೂ  ಹತ್ತಿರವಿದ್ದ ತಳವಾರನು ಕೇಳಿ  ನಾವಿದನನ್ನು ಆತನ ಹೆಂಡತಿಯನ್ನೂ ಹಿಡಿದುಕೊಂಡು ನ್ಯಾಯಸ್ಥಾನಕ್ಕೆ  ಎಳೆದುಕೊಂಡು ಹೋದನು. ಅಷ್ಟರಲ್ಲಿ ದೇವಶರ್ಮನು ತನ್ನ ಇಚ್ಛೆ ಬಂದ ಕಡೆಗೆ ಹೋಗುತ್ತ ಗುಂಪುಗೂಡಿದ್ದ ಜನರನ್ನು ಕಂಡು ಇದೆನೋ ಆಶ್ಚರ್ಯವಿರಬೇಕೆಂದು ನೋಡತೋಡಗಿದನು. ನ್ಯಾಯಕಾರಿಗಳು ನಾವಿದನನ್ನು ಕರೆದು ನೀನಿವಳ ಮೂಗನ್ನೂ ಯಾವ ಕಾರಣದಿಂದ ಕೊಯ್ದೆ ಎಂದು ಹಲವು ಬಾರಿ ಕೇಳಿದರೂ ಅವನು ಮತಿಭ್ರಾಂತಿಯಿಂದ ಉತ್ತರ ಕೊಡದಿರಲು ಹೆಂಡತಿಯ ಮೂಗನ್ನೂ ನಿಷ್ಕಾರಣವಾಗಿ ಕೊಯ್ಯುವವನನ್ನೂ ಯಮನ ಸರದಿಗೆ ಕೊಡುವುದು ಧರ್ಮವೆಂದು ನ್ಯಾಯಾಕಾರಿಗಳು  ದಂಡಧರನಿಗೆ ಆಜ್ಞೆಯಿತ್ತರು. ಆ ತಳವಾರರು ಆ ನಾವಿದನನ್ನು ಹಿಡಿದೆಳೆಯುತ್ತಿರಲು ದೇವ ಶರ್ಮನು ಅವರನ್ನು ತಡೆದು ಈ ಪಾತಕಿಯ ಮಾತನ್ನು ನಂಬಿ ನಿರ್ದೋಷಿಯಾದವನನ್ನು ಕೊಲ್ಲಿಸುವುದು ಧರ್ಮವಲ್ಲ ಎಂದನು. ಅದಕ್ಕೆ ನೀನು ಹೇಗೆ ಈ ವಿಚಾರವನ್ನೂ ತಿಳಿದುಕೊಂಡೆ ಎಂದು  ನ್ಯಾಯಾಕಾರಿಗಳು ಕೇಳಲು ದೇವಶರ್ಮನು ಹೀಗೆಂದನು ;  ಶ್ಲೋ || ಟಗರುಗಳು ಕಾಯುತ್ತಿದ್ದಾಗ ನಡುವೆ ಹೊಕ್ಕು ನರಿ ಸತ್ತಿತು. ಆಷಾಢಭೂತಿಯಿಂದ ದೇವಶರ್ಮನಾದ ನನ್ನ ಧನ ಕದ್ದು ಹೋಯಿತು. ಸಾಲಿಗನ ಕೈಯಿಂದ ದೂತಿಯಾದವಳು ವೃಥಾ ಮೂಗನ್ನೂ ಕೊಯಿಸಿಕೊಂಡಳು. ಈ ಮೂರು ಅನರ್ಥಗಳು ತಮ್ಮಿಂದ ತಾವೇ ಮಾಡಿಕೊಂಡವು. ಹೀಗೆ ಇವರ ಕಥಾವೃತ್ತಾಂತವನ್ನು ನ್ಯಾಯಾಕಾರಿಗಳಿಗೆ ದೇವಶರ್ಮನು ತಿಳಿಸಿ ನಾವಿದನ ಸಾವನ್ನು  ತಪ್ಪಿಸಿದನು. ವ|| ಹಾಗೆಯೇ ಸಂಜೀವಕನೆಂಬ ಪಾತಕನನ್ನು ಕರೆದುಕೊಂಡು ಬಂದು ಪಿಂಗಳಕನೊಡನೆ ಸೇರಿಸಿ ಸ್ವಯಂಕೃತವಾದ ಅನರ್ಥವನ್ನು ಮಾಡಿಕೊಂಡೆವು. ಆಗ ಕರಟಕನು ಹೀಗೆಂದನು ; ಮಂತ್ರಾಲೋಚನೆಯಿಲ್ಲದೆ ಮೊದಲೇ ಆಲೋಚಿಸದೆ ಮಾಡಿದುದರಿಂದ ಹೀಗೆ ಹೊಲಸಾಯಿತು. ಕಾರ್ಯಾನಂತರ ಆಗುವ ಆಲೋಚನೆಗಿಂತ ಮುಂದಾಲೋಚನೆಯಿರುವ ವ್ಯಕ್ತಿಗೆ ಯಾವ ಕಾರ್ಯವೂ ಅಸಾಧ್ಯವಲ್ಲ. ಇನ್ನಾದರೂ ನಿನ್ನ ಪಶ್ಚಾತಾಪವನ್ನು  ತೊರೆದು ನಿನ್ನ ಹೆಂಡತಿ ಮಕ್ಕಳು ಹಸಿದು ಸಾಯದ ಹಾಗೆ ಒಂದು ಉಪಾಯವನ್ನು ಮಾಡಿ ನಿನ್ನ ಬುದ್ಧಿ ಶಕ್ತಿಯನ್ನು ಮೆರೆಯಿಸು. ಆಗ ದವನಕನು ಹಾಗೆಯೇ ಮಾಡುವೆನೆಂದು ಹೀಗೆಂದನು : ಶ್ಲೋ|| ಆಗಿ ಹೋದ ಕಾರ್ಯದ ಹೆಚ್ಚಳಕ್ಕೂ ಮೊದಲೇ ಆಗಬೇಕು ಕಾರ್ಯವನ್ನು ಮಾಡುವುದಕ್ಕೂ ಅನರ್ಥವಾದ  ಕಾರ್ಯದ ಪ್ರತೀಕಾರಕ್ಕೂ ಯಾವುದಾದರೂ ಒಂದು ಆಲೋಚನೆ ಮಾಡಿ ಮಾಡುವುದು ಉತ್ತಮ ಯೋಚನೆ. ಆ ಕಾರಣದಿಂದ ಈಗ ಪಿಂಗಳಕನಿಗೆ ಮಹಾವ್ಯಸನ ಪ್ರಾಪ್ತವಾಯಿತು. ಅರಸನಾದವನಿಗೆ. ಸ್ವಭಾವ, ಪ್ರದೋಷ, ಪ್ರಸಂಗಗುಣ, ಪ್ರತಿಲೋಮ, ಪೀಡನ ಎಂಬ ಐದು ವಿಧದ ಮೂಲ ವ್ಯಸನಗಳಿವೆ. ಅವುಗಳಲ್ಲಿ ಸ್ವಾಮಿ, ಅಮಾತ್ಯ, ಜನಪದ, ದುರ್ಗ, ಸುಹೃತ್, ಕೋಶ, ದಂಡ ಎಂಬ ಏಳೂ ಅಂಗಗಳಲ್ಲಿ ಒಂದು ಅಂಗ ವಿಕಳವಾದರೂ ಅದು  ಸ್ವಭಾವವೆನಿಸುವುದು. ಬಾಹ್ಯ ಅಂತರಂಗಗಳು ಎರಡೂ ಒಮ್ಮೆಯೇ ಪ್ರಕೋಪ ಮಾಡುವುದು ಪ್ರzxoಷವೆನಿಸುದು. ಅಂಗನಾ, ದ್ಯೂತ, ಮೃಗಯಾ, ಪಾನ, ವಾಗ್ದಂಡ, ಹರ್ಷ, ಅರ್ಥದೂಷಣಗಳೆಂಬ ಏಳೂ ಪ್ರಸಂಗಗುಣ ಎಂದೆನಿಸುವುವು, ಕಾಂತಾ, ದ್ಯೂತ, ಮೃಗಯಾ, ಪಾನ ಎಂಬ ನಾಲ್ಕು ಕಾಮದಿಂದ ಹುಟ್ಟಿದವುಗಳು. ಉಳಿದ ವಾಗ್ದಂಡ, ಹರ್ಷ, ಅರ್ಥದೂಷಣಗಳು ಮೂರು ಕ್ರೋಧದಿಂದ  ಹುಟ್ಟಿದವುಗಳು. ಸಂ, ವಿಗ್ರಹ, ಯಾನ, ಆಸನ,  ದ್ವೈ*ಭಾವ, ಸಮಾಶ್ರಯಗಳೆಂಬ ಆರುಗುಣಗಳಲ್ಲಿ  ಸಂಕಾರ್ಯದಲ್ಲಿ  ವಿಗ್ರಹವನ್ನು ಮಾಡುವುದೂ, ವಿಗ್ರಹವಾಗುವಲ್ಲಿ ಸಂ ಮಾಡುವುದೂ, ಉಳಿದ ಗುಣಗಳನ್ನೂ ಈ ರೀತಿಯಲ್ಲಿ ಪ್ರತಿಲೋಮ ಮಾಡುವದೂ  ಪ್ರತಿಲೋಮ ಎಂಬ  ವ್ಯಸನವೆನಿಸುವುದು. ವೈರಾಗ್ಯ, ಅಗ್ನಿ, ಉದಕ, ವ್ಯಾತಂಕ, ಮಾರಿಗುತ್ತ, ದುರ್ಭಿಕ್ಷ, ಅತಿವೃಷ್ಟಿ, ಅನಾವೃಷ್ಟಿಗಳೆಂಬ ಎಂಟೂ ಪೀಡನವೆನಿಸುವುವು. ಹೀಗೆ ಈ ಐದು ವ್ಯಸನಗಳಲ್ಲಿ ನಮ್ಮರಸನಾದ ಪಿಂಗಳಕನು ಪಶುವಿಗೆ ವಶಗತನಾಗಿ ವಿರಕ್ತ ಪ್ರಕೃತಿಯವನಾಗಿದ್ದಾನೆ. ಅದರಿಂದ ಅವನಲ್ಲಿ ಸಂಜೀವಕನ ಬಗೆಗೆ ವಿರಕ್ತಿಯನ್ನು ಹುಟ್ಟಿಸುವುದೇ ಉಪಾಯ. ಆಗ ಕರಟಕನು ನೀನು ಹೇಳಿದ ಗುಣಗಳಲ್ಲಿಯೂ ಅವರಿಬ್ಬರಲ್ಲಿಯೂ ವಿರಕ್ತಿಯನ್ನು ಉಂಟುಮಾಡುವುದು ಇನ್ನೂ ಉತ್ತಮ ಎನ್ನಲು, ದವನಕನು ಅದು ಯಾವ ದೊಡ್ಡ ಕೆಲಸ, ಬುದ್ಧಿಗೆ ಅಸಾಧ್ಯವಾದುದು ಯಾವುದು ಇಲ್ಲ ಎಂಬುದನ್ನೂ ನೀನು ಬಹುಶಃ  ಕೇಳಿರಲಿಕ್ಕಿಲ್ಲ ಎಂದು ಹೀಗೆಂದನು : ಶ್ಲೋ|| ಉಪಾಯದಿಂದ ತನಗೆ ಹಿತವನ್ನುಂಟು ಮಾಡಿಕೊಳ್ಳಬೇಕು, ಯಾರಿಗಾದರೂ ಸ್ವಂತ ಶಕ್ತಿಯಿಲ್ಲದಿದ್ದಲ್ಲಿ ಅನ್ಯರ ಶಕ್ತಿ ಪರಾಕ್ರಮಗಳಿಂದ ಅದನ್ನೂ ಸಾಸಿಕೊಳ್ಳಬೇಕು ; ಕಾಗೆ ತಂದ ಕನಕಸೂತ್ರದಿಂದ ಕೃಷ್ಣಸರ್ಪ ಮರಣ ಹೊಂದಿದ ಹಾಗೆ ! ಆ ಕಥೆ ಏನು ಎನ್ನಲು ದವನಕನು ಹೇಳತೊಡಗಿದನು :