ಮಹಾಗಹನಮಧ್ಯದೊಳೊಂದು ಸರೋವರಮುಂಟು ಅಲ್ಲಿ ಪಲವು ಮತ್ಸ್ಯಂಗಳಿರ್ಪುದು ಮೊಂದು ಬಕಂ ಕಂಡು ತಾನೊಂದು ನೆವದಿಂದಾ ಮೀನ್ಗಳಂ ತಿಂದು ಕಾಲಮಂ ಕಳೆವೆನೆಂದು ತಪೋರೂಪಮಂ ಕೈಕೊಂಡು ಕಿಱೆಮೀಂಗಳೆಲ್ಲಮಂ ನೆಱೆಯೆ ತಿಂದು ಪಿರಿಯಮೀಂಗಳ್ ದೊರೆಕೊಳ್ಳದೊಡೀ ಮೀಂಗಳನಾವ ಪಾಂಗಿನೊಳ್ ನಾ ತಿಂಬೆನೆಂದು ನೀರ ತಡಿಯೊಳ್ ಮೋನಂಗೊಂಡು ಜಾನಿಸುತ್ತಿರೆ ಆ ಬಕನಂ ಮೀಂಗಳೆಲ್ಲಂ ಕಂಡು ನಿಮ್ಮಡಿ ನೀವಿಂತೇಕೆ ಚಿಂತಾಕ್ರಾಂತರಾಗಿರ್ಪಿರೆನೆ ಬಕನಿಂತೆಂದುದು :

ಪಲಕಾಲಂ ಸುಖದಿಂದಂ
ನೆಲಸಿರ್ದುಂ ನೀಮುಮಾಮೀ ಪೂಗೊಳದೊಳ್
ಕೆಲವುದಿನಕ್ಕಾನಿಲ್ಲಿಂ
ತೊಲಗುವುದಂ ನಿಮಗೆ ಸಾವುಮಂ ಕಂಡಿರ್ದೆಂ ||೧೩೪||

ಅಂತು ಕಂಡು ನಿಮ್ಮನಗಲ್ದೆಂತು ಪೋಪೆಂ ಇರ್ದೆಂತು ರಕ್ಷಿಸುವೆನೆಂದು ಚಿಂತಿಸಿದಪೆನೆನೆ ಮತ್ಸ್ಯ ಸಮೂಹಂಗಳಿಂತೆಂದುವು : ತಮಗೆ ಮರಣಮೇ ಕಾರಣಪ್ಪುದದಂ ನೀವಱೆಯೆ ಪೇೞೆಮೆನೆ ಬಕಂ ವಿಕಟಮಪ್ಪುದೊಂದು ಕಥೆಯಂ ಪೇೞ್ದು ಮತ್ಸ್ಯಂಗಳಂ ನಂಬಿಸಿ  ತಿಂಬೆನೆಂದಿಂತೆಂದುದು: ವಾಕ್ಯಂ|| ’ರಾಜಾ ಕಾಲಸ್ಯ ಕಾರಣಂ’ ಎಂಬ ವಾಕ್ಯೋಕ್ತಿಯುಂಟುಪ್ಪುದಱೆಂದೀ ದೇಶಮನಾಳ್ವರಸಂ ನಿಜಕುಲಾಂಗನೆಯೊಳೆಂದುಂ ಋತುಕಾಲ ಸಂವಿವಿರಕ್ತನುಂ ದೇವಾಗ್ನಿದ್ವಿಜಗುರು ಪಿತೃತರ್ಪಣಂಗಳಂ  ಮಾೞ್ಪನುಮಲ್ಲಮದಱೆಂದಾತನಪಚಾರಣಮೆ ಕಾರಣಮಾಗಿ ಪನ್ನೆರಡು ವರ್ಷಮನಾವೃಷ್ಟಿಯಾದಪ್ಪುದು ಈ ಕೊಳನುಂ ಬತ್ತಿದಪ್ಪುದು, ನಿಮಗಪಾಯವಪ್ಪುದೆಂದು ಪೇೞ್ವುದುಂ ಅಂತಪ್ಪೊಡೆ ನಿಮ್ಮಡಿ ನೀವೆಮ್ಮನೀಯಪಾಯಸ್ಥಳದಿಂ ಪೊಱ ಮಡುವುಪಾಯಮಂ ಮಾಡಿದಿರಪ್ಪೊಡೆ ತನ್ನ ನಿಮ್ಮ ಧರ್ಮದಿಂ ಸುಖಂಬಾೞ್ವೆವೆಂಬುದುಂ ಕರಮೊಳ್ಳಿತಿಲ್ಲಿಗೊಂದು ಯೋಜನಾಂತರದೊಳೊಂದು ಮಹಾನದಿಯುಂಟಲ್ಲಿಗೆ ನಿಮ್ಮಂ ದಿವಸಗತಿಯಿಂದುಯ್ವೆನೆಂದೊಡಂಬಡಿಸಿ ಪೇೞ್ದ ಕಪಟತಪೋಧನಂಗೆ ಮೀನ್ಗಳಿಂತೆಂದವು.  ತಮ್ಮಂ ನಂಬಿದರಂ ಸೋರೆಯ ಕಾಯ್ ಮುಂತಾಗಿ ನದಿಯ ತಡಿಯಂ ಸಾರ್ಚವುದೆಂದೊಡೆ ನೀಂ ತಪೋವೃದ್ಧರುಂ ತ್ರಿಕಾಲದರ್ಶಿಗಳುಂ  ಸಕಳಭೂತಂಗಳಂ ಸವನಾಗಿ ಕಾಣ್ಬ ಕರುಣಾರಸಾರ್ದ್ರ ಹೃದಯರಪ್ಪುದಱೆಂ ನಿಮ್ಮಂ ನಂಬಿ ಬಂದಪೆವೆಂಬುದುಂ ಕರಮೊಳ್ಳಿತ್ತೆಂದು ನಂಬೆ ನುಡಿದೊಡಂಬಡಿಸಿ ನಿಚ್ಚಲೊಂದೊಂದು ಮೀನಂ ಕರ್ಚಿಕೊಂಡು ಪೋಗಿ ಪಿರಿದಪ್ಪುದೊಂದು ಶಿಲಾತಳದ ಮೇಲಿಕ್ಕಿ ನಿಜಚಂಚುಪುಟದಿಂ ಶತಖಂಡಂ ಮಾಡಿ ತಿಂದು  ಬೆಣ್ಣೆಯಂ ತಿಂದ ಬೆಕ್ಕಿನಂತೆ ಅಱೆಯಲೀಯದೆ ಮತ್ತೆಯುೞೆದ ಮತ್ಸ್ಯಂಗಳನೀ ತೆಱದೊಳ್ ತಿನುತಿರ್ದು ಮತ್ಸ್ಯಮಾಂಸಂ ಸಮೆದತ್ತಿನ್ನೇನಂ ತಿಂಬೆನೆನುತ್ತಿರೆ, ಕರ್ಕಟಕಮಂ ಸಮೀಪಕ್ಕೆ ಕರೆದು, ಮಗನೆ, ನೀಂ ಕರಂ ಗರ್ಭಸುಖಿ, ಬಿಸಿಲಾಗದನ್ನಂ ಬೇಗಂ ಬಾ, ನಿನ್ನನುಯ್ದಿರಿಸಿ ಬೞೆಕ್ಕೀ ಮೀಂಗಳನುಯ್ವೆನೆಂದೊಡೆ ಏಡಿ  ಬರ್ದುಂಕಿದೆನೆಂದು ಮುಂದೆ ನಿಲೆ, ನಿಜಕಂಠತಳಮಂ ಪತ್ತಿಸಿಕೊಂಡು ಶಿಲಾತಳಮನೆಯ್ದೆವರ್ಪುದುಂ, ಕರ್ಕಟಕನು ಪಾಯನಿಪುಣಂ ನಾಲ್ದೆಸೆಯುಮಂ ನೋಡಿ ನದನದೀ ತಟಾಕ  ಸರೋವರಂಗಳನೊಂದುಮಂ ಕಾಣದೆ ಮತ್ಸ್ಯಾಸ್ಥಿಮಯಮಾಗಿರ್ಪ ಶಿಲಾತಳಮಂ ನೋಡಿ ಪಾವಿನ ಪೇಳಿಗೆಯಂ  ಬಿಟ್ಟು ನೋಡಿದ ಮರ್ಕಟನಂತೆ ಬೆಕ್ಕಸಂಬಟ್ಟುಮೀ ವಿಶ್ವಾಸಘಾತುಕಂ ತನ್ನುಮಂ ತಿನ್ನದೆ ಮಾಣ್ಪಂ, ಈಯಪಾಯಕ್ಕೆ ವಂಚನೋಪಾಯಮಾವುದುಮಿಲ್ಲ, ಎನಗೆ ಪರಿಚ್ಛೇದಮೇ  ಕಾರ‍್ಯಮದೆಂತೆನೆ :

೧೩೪. ನಾನೂ ನೀವೂ ಹಲವು ಕಾಲದಿಂದ  ಈ ಸರೋವರದಲ್ಲಿ ಒಟ್ಟಿಗೆ ಇದ್ದೆವು. ಕೆಲವು ದಿನಗಳಲ್ಲಿ ನಾನು  ಇದನ್ನೂ ಬಿಟ್ಟು ಹೋಗುವೆ. ಅನಂತರ ನಿಮಗೆ ಸಾವು ತಪ್ಪಿದಲ್ಲ. ವ|| ಆದರೆ ನಿಮ್ಮನ್ನಗಲಿ ನಾನೆಂತು ಹೋಗಲಿ ,ಇದ್ದು  ನಿಮ್ಮನ್ನೆಲ್ಲ ಹೇಗೆ ರಕ್ಷಿಸಲಿ ಎಂದು ಚಿಂತಿಸುತ್ತಿರುವೆ. ಅದಕ್ಕೆ ಆ ಮೀನುಗಳು ತಮಗೆ ಮರಣ ಯಾವ ಕಾರಣದಿಂದ ಸಂಭವಿಸುವುದು ಎಂಬ ವಿಚಾರವನ್ನು ದಯಮಾಡಿ ಅರುಹ ಬೇಕು ಎನ್ನಲು ಬಕ ವಿಕಟವಾದ ಒಂದು ಕಥೆಯನ್ನು ಹೇಳಿ ಮೀನುಗಳನ್ನು ನಂಬಿಸಿ ತಿನ್ನುವೆನೆಂದು ಹೀಗೆ ಹೇಳಿತು : ವಾ ||  ‘ರಾಜಾ ಕಾಲಸ್ಯ ಕಾರಣಂ’ ಎಂಬ ಉಕ್ತಿಯುಂಟು. ಅದರಿಂದ ಈ ದೇಶವನ್ನು ಆಳುವ ಅರಸ ತನ್ನ ಕುಲಾಂಗನೆಯೊಡನೆ ಯಾವಾಗಲೂ ಸಂಗವಿರಕ್ತನಾಗಿ ದೇವ ಅಗ್ನಿ ದ್ವಿಜ ಗುರು ಪಿತೃತರ್ಪಣಗಳನ್ನು ಮಾಡುವವನಲ್ಲ. ಅದರಿಂದ ಆತನ ಕೆಟ್ಟ ನಡತೆಯ ಕಾರಣದಿಂದ ಹನ್ನೆರಡು ವರ್ಷಗಳವರೆಗೆ ಅನಾವೃಷ್ಟಿ ಸಂಭ*ವಿಸುವುದು. ಈ ಕೊಳವೂ ಬತ್ತಿಹೋಗುವುದು. ಅದರಿಂದ ನಿಮಗೆ ಅಪಾಯ ತಪ್ಪದು. ಅದಕ್ಕೆ ಮೀನುಗಳು  ಹಾಗಿದ್ದರೆ ಸ್ವಾಮಿ ! ನೀವು ನಮ್ಮನ್ನು ಈ ಅಪಾಯಸ್ಥಳದಿಂದ ಹೋರಟು ಹೋಗುವ ಉಪಾಯವನ್ನು ಮಾಡಿದರೆ ನಾವು ನಿಮ್ಮ ದಯೆಯಿಂದ ಬದುಕಿಕೊಳ್ಳುವೆವು, ಎಂದು ಹೇಳಿತು. ಹಾಗಾದರೆ ಒಳ್ಳೆಯದು ; ಇಲ್ಲಿಂದ ಒಂದು ಯೋಜನ ದೂರದಲ್ಲಿ ಮಹಾನದಿ ಇದೆ.  ಅಲ್ಲಿಗೆ ನಿಮ್ಮನ್ನೂ ದಿನದಿನವೂ ಒಯ್ಯುವೆನೆಂದು ಆ ಮೀನುಗಳು ಒಡಂಬಡಿಸಿದ ಆ ಕಪಟ ತಪೋಧನನಿಗೆ ಮೀನುಗಳೆಂದವು : ತಮ್ಮನ್ನು ನಂಬಿದವರನ್ನು ಸೋರೆಕಾಯಿಯೂ ದಡಕ್ಕೆ  ಮುಟ್ಟಿಸುವುದೆಂದ ಮೇಲೆ ತಪೋವೃದ್ಧರೂ, ತ್ರಿಕಾಲಜ್ಞರೂ, ಕರುಣರ ಸಾರ್ದ್ರಹೃದಯರೂ ಆದ ನಿಮ್ಮನ್ನು ನಂಬಿ ಬರುವೆವು. ಒಳ್ಳೆಯದು, ಹಾಗೆಯೇ ಮಾಡಿ ಎಂದು ನಂಬುವಂತೆ ನುಡಿದು ಅದು ಒಡಂಬಡಿಸಿತು. ನಿತ್ಯವೂ ಒಂದೊಂದು ಮೀನನ್ನು ಕಚ್ಚಿಕೊಂಡು ಹೋಗಿ ದೊಡ್ಡದೊಂದು ಬಂಡೆಯ ಮೇಲೆಹಾಕಿಕೊಂಡು ತನ್ನ ಕತ್ತರಿಯಂಥ ಕೊಕ್ಕಿನಿಂದ ತುಂಡು ತುಂಡು ಮಾಡಿ ತಿಂದು  ಬೆಣ್ಣೆ ತಿಂದ ಬೆಕ್ಕಿನಂತೆ ತನಗೇನು ತಿಳಿಯದಂತಿತ್ತು ಉಳಿದ ಮೀನುಗಳನ್ನು ಇದೇ ರೀತಿಯಲ್ಲಿ ತಿನ್ನುತ್ತಿದ್ದು ಮತ್ಸ್ಯಗಳು  ಮುಗಿದುವು ; ಇನ್ನೇನನ್ನು ತಿನ್ನಲಿ  ಎಂದು ಆಲೋಚಿಸುತ್ತಿರಲು ಒಂದು ಏಡಿಯನ್ನೂ ಕಂಡಿತು. ಆ ಏಡಿಯನ್ನು ಹತ್ತಿರಕ್ಕೆ ಕರೆದು, ಮಗನೇ! ನೀನು ಯಾವಾಗಲೂ ನೀರಿನತಳದಲ್ಲಿ ಸುಖವಾಗಿ ಇರುವನು. ಬಿಸಿಲೇರುವ ಮೊದಲು ಬೇಗ ಬಾ ; ನಿನ್ನನ್ನೂ ಕರೆದುಕೊಂಡು ಹೋಗಿಬಿಟ್ಟು ಮರಳಿ ಈ ಮೀನುಗಳನ್ನು ಒಯ್ಯುವೆ ಎಂದಿತು. ಅದಕ್ಕೆ ಏಡಿ ಬದುಕಿದೆಯಾ ಬಡಜೀವವೇ ಎಂದು ಮುಂದೆ ಬರಲು ತನ್ನ ಕಂಠಪ್ರದೇಶದ ಅದನ್ನು  ಹತ್ತಿಸಿಕೊಂಡು ಬಂಡೆಯ ಹತ್ತಿರ ಬರುತ್ತಿತ್ತು. ಕರ್ಕಟನು ಉಪಾಯನಿಪುಣನಾಗಿತ್ತು. ಸುತ್ತಲೂ ನೋಡಿ ನದಿ, ಕೆರೆ ಸರೋವರಗಳಲ್ಲಿ ಯಾವುದೊಂದನ್ನು ಕಾಣದೆ ಮೀನುಗಳ ಮೂಳೆಗಳ ರಾಶಿಯಿಂದ ತುಂಬಿದ ಬಂಡೆಯನ್ನು ಕಂಡು ಹಾವಿನ ಬುಟ್ಟಿಯ  ಮುಚ್ಚಳವನ್ನು ತೆರೆದು ನೋಡಿದ ಮಂಗನಂತೆ ಬೆದರಿತು. ಈ ವಿಶ್ವಾಸಘಾತುಕ ತನ್ನನ್ನೂ ತಿನ್ನದೆ ಬಿಡನು. ಈ ಅಪಾಯಕ್ಕೆ ವಂಚನೋಪಾಯ ಯಾವುದೂ ಇಲ್ಲ. ನನಗೆ ಪರಿಚ್ಛೇದವೇ ಈಗ  ತಕ್ಕ ಉಪಾಯ.

ತನ್ನಂ ಕೊಲ್ವುದನಱೆದೊಡೆ
ಮುನ್ನಂ ತಾಂ ಕೊಲ್ಗೆ ಪಗೆವನಂ ಶಂಕಿಸದು-
ತ್ಪನ್ನಮತಿಯಪ್ಪವಂ ಪೋ
ತನ್ನಪ್ಪುದದಕ್ಕೆ ದೈವವಶದಿಂ ತುದಿಯೊಳ್  ೧೩೫

ಅನಿಮಿಷ ಸಪತ್ನ ಬಕ ಕಂ
ಠನಾಳಮಂ ಭೀಮನೊತ್ತುವಂದದಿನೊತ್ತಿ
ತ್ತನಿಮಿಷ ಸಪತ್ನಬಕಕಂ
ಠನಾಳಮಂ ಪಱೆಯ ಕೋಡಿನೊಳ್ ಕರ್ಕಟಕಂ  ೧೩೬

ಅಂತು ಕರ್ಕಟಕಂ ನಿಜಕರ್ಕಶ ಕರ್ತರಿಗ್ರಹಣದಿಂ ಬಾಳಮೃಣಾಳನಾಳೋಪಮ ಬಕಕಂಠನಾಳಮಂ ಕತ್ತರಿಸಿತ್ತು. ಅದಱೆಂ,

ಶ್ಲೋ|| ಭಕ್ಷಯಿತ್ವಾ ಬಹೂನ್ ಮತ್ಸ್ಯಾನ್ ಉತ್ತಮಾಧಮಾ ಮಧ್ಯಮಾನ್
ಅತಿಲೌಲ್ಯಾದ್ಬಕಃ ಕಶ್ಚಿತ್ ಮೃತಃ ಕರ್ಕಟ ಸಂಗ್ರಹಾತ್  || ೪೯||

ಟಿ|| ಪಿರಿದುಂ ಲಂಟನಪ್ಪೊಂದಾನೊಂದು ಬಕನುತ್ತಮ ಮಧ್ಯಮಾಧಮಾಂಗಳಪ್ಪ ಮೀಂಗಳಂ ದಿನಕ್ರಮದಿಂ ತಿಂದುದಲ್ಲದೆ ಬಂದೆಸಡಿಯಂ  ತಿಂಬೆನೆಂದು ಕೊಂಡೊಯ್ಯತ್ತುಮಿರಲಾ ಯೆಸಡಿ ತನ್ನ ಗೋಣನಿಱುಂಕಿ ಕೊಂದುದು.

೧೩೫. ಉತ್ಪನ್ನಮತಿಯಾದವನು ತನ್ನನ್ನು ಕೊಲ್ಲುವನೆಂದು ತಿಳಿದ ಕೂಡಲೇ ಹಗೆಯನ್ನು ಸಂದೇಹಿಸದೆ ಸಂಹರಿಸತಕ್ಕದ್ದು ಎಂದು ೧೩೬. ಬಕಾಸುರನ ಕಂಠನಾಳವನ್ನು ಭೀಮಸೇನನು ಒತ್ತಿಕೊಂದಂತೆ  ಆ ಕರ್ಕಟಕನು ಬಕನ ಕಂಠನಾಳವನ್ನು ತನ್ನ  ಕೊಂಡಿಯಿಂದ ಹರಿಯಿತು. ವ|| ಹಾಗೆ ಆ ಕರ್ಕಟಕನು ತನ್ನ ಕರ್ಕಶವಾದ ಕತ್ತರಿ ಪ್ರಯೋಗದಿಂದ ಎಳೆಯ ತಾವರೆಯ ದಂಟಿನಂತೆ ಕೋಮಲವಾದ ಬಕನ ಕಂಠನಾಳವನ್ನು ಕತ್ತರಿಸಿತು. ಹೀಗೆ ಅತಿಲಂಪಟನಾದ ಒಂದು ಬಕ ಹಿರಿಕಿರಿಯ ಮೀನುಗಳನ್ನು ದಿನದಿನವೂ ತಿಂದುದಲ್ಲದೆ ಬಂದು ಏಡಿಯನ್ನು ತಿನ್ನುವೆನೆಂದು ಅದನ್ನು ಕೊಂಡುಯ್ಯುತ್ತಿರಲು ಆ ಏಡಿ ತನ್ನ ಗೋಣನ್ನೇ ಇರುಕಿ ಕೊಂದಿತು. ವ|| ಹಾಗೆ ಆ ಬಕನಿಗಿಂತ ಹೆಚ್ಚು ಚಪಲನಾದ ಸರ್ಪನಿಗೆ ಅಪಾಯಕರವಾದ ಉಪಾಯವನ್ನು ಹೇಳುವೆ.  ಎಲ್ಲಿಂದಾದರೂ ಒಂದು ಕನಕಸೂತ್ರವನ್ನು ತಂದು ಆ ಸರ್ಪವಿರುವ ಹುತ್ತದೊಳಕ್ಕೆ ಇಟ್ಟರೆ ಆಭರಣದ ಒಡೆಯರು ಒಡವೆಯ  ನೆಪದಿಂದ ಹುತ್ತವನ್ನು ಅಗೆದು ಹಾವನ್ನು ಕೊಲ್ಲುವರು. ಹೀಗೆ ಹೇಳಲು ಹಾಗೆಯೇ ಮಾಡುವೆನೆಂದು ಆ ಕಾಗೆ ಹೋಗಿ ತೀರ್ಥಸ್ನಾನಕ್ಕೆಂದು ಬಂದ ನೃಪವಿಲಾಸಿನಿಯರು ತಮ್ಮ ಆಭರಣಗಳನ್ನು ಕಳಚಿ ದಡದಲ್ಲಿ ಇಟ್ಟಿರಲು ಅವುಗಳಲ್ಲಿ ಒಂದನ್ನು ಕಚ್ಚಿಕೊಂಡು ಹಾರಿ ಬಂತು. ಅದನ್ನು ಅನುಸರಿಸಿ ಆ ಆಭರಣಗಳ ಕಾವಲುಗಾರರು ಹಿಂದಿನಿಂದ ಅಟ್ಟಿಕೊಂಡು ಬಂದರು.

ಅಂತಾ ಬಕನಿಂದಂ ಅತಿಚಪಳನಪ್ಪ ಸರ್ಪಂಗಮಪಾಯಮಪ್ಪುಪಾಯಮಂ ನಿನಗೆ ಪೇೞ್ದ ಪೆನೆಲ್ಲಿಯಾನುಮೊಂದು ಕನಕಸೂತ್ರಮಂ ತಂದಾ ಸರ್ಪನಿರ್ಪ ಪುತ್ತಿನೊಳಿಕ್ಕಿದೊಡೆಯಾ ತುಡುಗೆಯೊಡೆರೊಡವೆಯ ಕಾರಣಮಾಗಿ ಪುತ್ತನಗುೞ್ದು ಪಾವಂ ಕೊಲ್ವರನೆ ಅಂತೆಗೆಯ್ವೆನೆಂದಾ ವಾಯಸಂ ಪೋಗಿ ತೀರ್ಥಸ್ನಾನಾರ್ಥಂ ಬಂದ ನೃಪವಿಲಾಸಿನಿಯರ್ ತುಡುಗೆಯಂ  ಕೞಲ್ಚಿ ತಡಿಯೊಳ್ ಬೈತಿಟ್ಟಿರಲವಱೊಳಗೊಂದಂ ಕರ್ಚಿಕೊಂಡಾಕಾಶಮಾರ್ಗಕ್ಕೆ ನೆಗೆಯಲಾ ತುಡುಗೆಯ ಕಾಪಿನವರ್  ಬೆನ್ನನೆ ಬರೆವರೆ :

ಅತಿಶಯ ಕಾಂಚನಸೂತ್ರಾಂ
ಚಿತಚಂಚಚ್ಚಂಚು ಮೆಲ್ಲಮೆಲ್ಲನುರಗೇಂದ್ರೋಪ
ಸ್ಥಿತಭೂರುಹಮಂ ಸಾರ್ದುದು
ಸುತವಿರಹೋದ್ರೇಕ ಜನಿತಶೋಕಂ ಕಾಕಂ  ೧೩೭

ಅಂತಾ ಕಾಗೆಯುಂ ತುಡುಗೆಯೊಡೆಯರ್ ತನ್ನನೆಯ್ದಿವರಲೊಡಂ ವಿಷಧರಂಗೆ ವಿಷಮ ನಿಕ್ಕುವಂತೆ ಪುತ್ತಿನೊಳಗಾ  ಕನಕಸೂತ್ರವನಿಕ್ಕುವುದುಮವಂದಿರ್ ಪುತ್ತನಗುೞ್ದು ಪಾವಂ ಕೊಂದರ್.

ಅದಱೆಂದುಪಾಯನಿಪುಣನಪ್ಪಂಗೆ ಆವ ಕಾರ‍್ಯಮುಂ ಸಾಧ್ಯಮಲ್ಲದಿರದೆನೆ  ಕರಟಕನೆಂದಂ: ಎನಿತುಪಾಯಕುಶಲನಾದೊಡಂ ದುರ್ಬಲಂಗಂ ಅಸಹಾಯಂಗಂ ಪ್ರತಿಕೂಲಂಗೆಯ್ದನಪ್ಪವಂಗಮಾವ ಕಜ್ಜಮುಂ ಬೆಜ್ಜೆಯಿಲ್ಲದ ಬೇನೆಯಂತೆ ತೀರಲಱೆಯದೆನೆ ದವನಕನೆಂದಂ: ಅಂತಲ್ತು ಸಮ್ಯಗುಪಾಯ ನಿಪುಣನಪ್ಪವಂಗೆಲ್ಲಮನುಕೂಲಮಪ್ಪುದು, ಒಂದುಂ ಸಂದೆಯಮಿಲ್ಲದೆಂತೆನೆ :

ಶ್ಲೋ || ಬುದ್ಧಿರ್ನ ವಿದ್ಯತೇ ಯಸ್ಯ ಬಲಂ ತಸ್ಯ ಕರೋತಿ ಕಂ
ಮಹಾಬಲೋಪಿ ಪಂಚಾಸ್ಯಃ ಶಶಕೇನ ನಿಪಾತಿತಃ  ||೫೦||

ಟೀ|| ಬುದ್ಧಿಯಿಲ್ಲದಂಗೆ ಶಕ್ತಿಯಿರ್ದುಂ ಪ್ರಯೋಜನಮಿಲ್ಲ. ಅದೆಂತೆನೆ, ಬಲವಂತನಪ್ಪುದೊಂದು ಸಿಂಹಮಂ ಮೊಲಂ ಕೊಂದುದು, ಎಂಬೀ ಕಥೆಯಂ ನೀಂ ಕೇಳ್ದುದಿಲ್ಲಕ್ಕುಮೆನೆ ಕರಟಕನದೆಂತನೆ ದವನಕಂ ಪೇೞ್ಗುಂ :

೧೩೭. ಸುತವಿರಹದಿಂದ ನೊಂದ  ಆ ಕಾಗೆ ಉರಗೇಂದ್ರನಿದ್ದ  ಮರದ ಮೇಲೆ ಬಂದು ಕುಳಿತಿತು. ವ|| ಆಭರಣಗಳ ಕಾವಲಿನವರು ತನ್ನನ್ನು ಅಟ್ಟಿಸಿಕೊಂಡು ಬರುತ್ತಿರಲು ವಿಷಧರನಿಗೆ ವಿಷವಿಕ್ಕುವಂತೆ  ಆ ಹುತ್ತದೊಳಕ್ಕೆ ಆ ಕನಕ ಸೂತ್ರವನ್ನು ಹಾಕಲು ಅವರು ಹುತ್ತವನ್ನು ಅಗೆದು ಹಾವನ್ನು ಕೊಂದರು. ಅದರಿಂದ ಉಪಾಯಕುಶಲನಾದವನಿಗೆ ಯಾವ ಕಾರ್ಯವೂ ಸಾಧ್ಯವಾಗದೆ ಇರದು. ಅದಕ್ಕೆ ಕರಟಕನು ಎಷ್ಟು  ಉಪಾಯವಿದ್ದರೂ ದುರ್ಬಲನಿಗೂ ಅಸಹಾಯಕನಿಗೂ ಪ್ರತಿಕೂಲವನ್ನು ಹೊಂದಿದವನಿಗೂ ಯಾವ ಕಾರ್ಯವೂ ಮದ್ದಿಲ್ಲದ ರೋಗದಂತೆ ಪ್ರಯೋಜನಕ್ಕೆ ಬಾರದು ಎಂದು ಹೇಳಿದನು. ಅದಕ್ಕೆ ದವನಕನು ಹೀಗೆಂದನು : ಹಾಗಲ್ಲ, ಒಳ್ಳೆಯ ಉಪಾಯನಿಪುಣನಾದವನಿಗೆ ಎಲ್ಲವೂ ಅನುಕೂಲವಾಗುವುದು ; ಇದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಶ್ಲೋ|| ಬುದ್ಧಿಯಿಲ್ಲದವನಿಗೆ ಶಕ್ತಿಯಿದ್ದೂ ಪ್ರಯೊಜನವಿಲ್ಲ. ಬಲಶಾಲಿಯಾದ ಒಂದು ಸಿಂಹವನ್ನು ಒಂದು ಮೊಲ ಕೊಂದಿತು. ಈ ಕಥೆಯನ್ನು ನೀನು ಕೇಳಿರಲಿಕ್ಕಿಲ್ಲವಲ್ಲವೇ? ಆಗ ಕರಟಕನು ಅದೇನೆಂದು ಕೇಳಲು ದವನಕ ಹೇಳತೊಡಗಿದ :