ವೃಕ ಭಲ್ಲೂಕ ಸುಗಂಡ ಚಂಡಹರಿಣಶ್ರೇಣೀರುರೂರೂಗ್ರ ಶ
ಲ್ಯಕ ಸಾರಂಗ ಶಶಾವಳೀ ಶರಭ ಗೋಲಾಂಗೂಲ ಮಾಲಾ ಹರಿ
ಪ್ರಕರಾಭೀಳಸೃಗಾಳಜಾಳ ಮದುವಚ್ಛುಂಡಾಲ ಶಾರ್ದೂಲ ಕಾ-
ಕಕುಳ ವ್ಯಾಳಕರಾಳ ವಿಸುರದರಣ್ಯಾನೀಮಹೀದೇಶದೊಳ್  ೧೩೮

ದರ್ಧರ ವಿಕ್ರಮನುರುತರ
ದೋರ್ದಂಡಸಹಾಯನಿರ್ಪುದೆಂದುಮಜೇಯಂ
ನಿರ್ದಯನನುಪಮ ನಖಮುಖ
ನಿರ್ದಾರಿತವನ್ಯನಾಗಸಂಘಂ ಸಿಂಗಂ  ೧೩೯

ಆ ಮೃಗಾರಾಜಂ ಸಾಮಜವೆಲ್ಲವಂ ತವೆ ಕೊಂದು ತಿಂದು ಬೞೆಕ್ಕಮಾಹಾರಂಬಡೆಯ ದಡವಿಯ ಮೃಂಗಳನೆಲ್ಲಮನಿಂಬಿಟ್ಟು ತಿನ್ನುತ್ತಿರೆ;  ಮೃಗಂಗಳೆಲ್ಲಮೊಂದಾಗಿ ತಮ್ಮೊಳಾಳೋ ಚನಂಗೆಯ್ದು ಮೃಗೇಂದ್ರನಲ್ಲಿಗೆ ಬಂದು ಪೊಡೆವಟ್ಟು,

ಬಿನ್ನಪವೀ ಮೃಗನಿವಹಂ
ನಿನ್ನಾಜ್ಞೆಯೊಳಿರ್ಕುಮೀ ಮಹಾಟವಿಯೊಳ್ ಶೌ-
ರ್ಯೋನ್ನತ ಕಾವುದು ನೀನೆ-
ಮ್ಮನ್ನಯವಿದ ಧರ್ಮಮಾರ್ಗದಿಂ  ಗಜವೈರಿ  ೧೪೦

ಎಂದು ದೇವಾ !  ನೀವಿನಿತುಕಾಲವೆಮ್ಮಂ ಪೊರೆಯಲಾಯ್ತೀಗಳ್ ನಿಮಗೆಡರಾದಲ್ಲಿ ನಾವೆಲ್ಲಮಿರ್ಪೊಡೇತರ್ಕೆ  ಬಾೞ್ತೆ ನಿಮಗೆ ಕರಿಗಳ್ ದೊರೆಕೊಳ್ವನ್ನಂ ನಿಚ್ಚಲೊಂದೊಂದು ಮೃವನಟ್ಟುವೆವದಂ ಕೈಕೊಂಡಿಂತು ನಡೆವಿರಪ್ಪೊಡೆ ನಿರ್ವಹಿಪೆವಾಗದೊಡೋಡಿ ಪೋಪೆವೆನೆ, ಮೃಗಾರಾಜನಂತೆಗೆಯ್ವೆನೆಂದೊಡಂಬಟ್ಟು, ಬಾಯಾಳೆಂಬ ಬಳ್ಳುಮಂ ಬಾರಿಕನಂ ಮಾಡಿ ಪಲಕಾಲಂ ಸಲುತಮಿರ್ಪುದುಂ ಒಂದು ದಿನಮಾ ಸಿಂಗಕ್ಕೆ ಮಾರಿ ಬರ್ಪಂತೆ ದೀರ್ಘಕರ್ಣನೆಂಬ ಮೊಲಕ್ಕೆ ಬಾರಿ ಬರ್ಪುದುಮಾ ಮೊಲನುಪಾಯಕುಶಲನಪ್ಪುದಱೆಂ ಕಾಲಜ್ಞಾನಮಂ ಕಾಲಜಯಮುಮುಂ  ಬಲ್ಲ ಪರಮಯೋಗಿಯಂತೆ ತನಗಾಸನ್ನಕಾಲಾಪಾಯಕ್ಕೆ ಜಯೋಪಾಯಮಂ ಮನದೊಳಗೆ ಬಗೆದು, ‘ವಾಕ್ಯಂ || ನಾಶಕ್ಯಂ ಬುದ್ಧಿಮತಃ ಪುರುಷಸ’ ಎಂಬ ವಾಕ್ಯೋಕ್ತಿಯಿಂ ಬುದ್ಧಿವಂತರ್ಗೆ ಕೇಡಿಲ್ಲೆಂದು ನಿಶ್ಚೈಸಿಕೊಂಡು ದಿನಾಂತಂಬರೆಗಂ ತಡೆದು ಬೞೆಕ್ಕೆಲ್ಲಿಯುಂ ನಿಲ್ಲದೆ, ಪೆಱಗಂ ನೋಡುತ್ತುಂ ಭಯಾತುರನಂತೆ ಬಂದುಂ ಮರಣಭ್ರಾಂತಿಯಂ ಚಿಂತಿಸಿ ಬರುತ್ತುಂ ತೊಟ್ಟನೆ ಮುಂದಿರ್ದ ಪುರಾಣಕೂಪಮಂ ಕಂಡು ತೃಷೆಯಿಂ ನೀರ್ಗುಡಿಯವೇೞ್ಕೆಂದು  ನೋಡಿ ಏಱೆ ಇೞೆಯಲುಂ ಬಾರದ ಸ್ವಚ್ಛಜಲದೊಳ್ ತನ್ನ ಪ್ರತಿಬಿಂಬಮಂತು ಬಿಂಬಿಸುವುದಂ ಕಂಡು ಈ ಸಿಂಹಮನಿಲ್ಲಿಯೆ ಕೊಲಲುಂ  ಗೆಲಲುಂ ಸಾಲ್ಗುಮೆಂದುತ್ಸಾಹದಿಂದುಪಾಯನಿಪುಣನಪ್ಪ ಶಶಕನಾ ಸಿಂಹಮನಿಲ್ಲಿ ತಂದು ಕೊಲ್ವೆಂ, ಕೊಲಲಾಱದಂದು, ‘ಸಾವಂಗೆ ಸಮುದ್ರಂ ಮೊೞೆಕಾಲುದ್ದಂ’ ಎಂಬಂತೆ ‘ಕಿರ್ಚಿನೊಳ್ ಬಿೞ್ದಂಗೆ ಸಾವು ತಪ್ಪದು’ ಎಂಬಂತೆ, ಅವಂ ಮುನಿದು ಇರ್ಮಡಿಸಿ ಕೊಂದಪನೋ ಭಯಮೇಕೆನಗಿಲ್ಲಿ,

ಶ್ಲೋ|| ಕ್ಷಣ ವಿದ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೇ   ||೫೧||

ಎಂಬ ವಾಕ್ಯದಿಂ ಪರಮಯೋಗಿಯಂತೆ ತನಗಾಸನ್ನಕಾಲ ಜಯೋಪಾಯಮಂ ಮನದೊಳ್ ಬಗೆದು ದಿನಾಂತಂಬರೆಗಂ ತಡೆದು, ಬೞೆಕೆಲ್ಲಿಯುಂ ನಿಲ್ಲದೆ ಪೆಱಗಂ ನೋಡುತ್ತುಂ ಭಯಾತುರನಂತೆ ಬಂದು,

ಭ್ರುಕುಟಿಪುಟರಕ್ತ ನೇತ್ರನ-
ನಕಾಲಕಾಲೋಗ್ರನಂ ಭಯಂಕರ ದಂಷ್ಟ್ರಾ-
ಪ್ರಕರಾಳವದನನಂ ದೀ-
ಘಕರ್ಣನೆಯ್ದಿದನರಣ್ಯಮೃಗವಲ್ಲಭನಂ  ೧೪೧

ಅಂತೆಯ್ದಿವಂದ ದೀರ್ಘಕರ್ಣನಂ ಕಂಡು ಜಠರಾನಳಶಿಖಾಕಳಾಪದಂದಹ್ಯಮಾನಮಾನಸಂ ಸಿಂಗಂ ಮುಳಿದೇನೆಲವೋ! ನೀನಿನಿತು ಪೊೞರ ಬಲದೊಳ್ ತಡೆದೆ ? ಈಗಳ್ ಬರುತಡಿಗಡಿಗೆ ಪೆಱಗಂ ನೋಡುತ್ತಾಂ ಭಯತುರನಾಗಿ ಬಂದೆ, ನಿನ್ನಂ ಕಾವನೆಂಬನುಳ್ಳೊಡೆ ತೋಱವನಂ ಮುನ್ನಮಾಪೊಶನಂಗೊಂಡು ಬೞೆಕ್ಕೆ ನಿನ್ನಂ ಪ್ರಾಣಾಹುತಿಗೆಯ್ವೆನೆಂಬುದುಂ : ದೇವ ! ನಿಮ್ಮ ಕೋಪಮುಂ ಪ್ರತಾಪಮುಮೆಮ್ಮಂದಿಗರಪ್ಪ ಬಡವುಗಳ್ಗಲ್ಲದೆ ಪೆಱರ್ಗಿಲ್ಲ. ಆದೊಡಂ ಬರ್ಪಾಗಳೊಂದು ಸಿಂಹಂ ಬರಲೀಯದೆ ತಡೆದಡ್ಡಂ ಬಂದೆನ್ನಂ ಬರವಿನ ವೃತ್ತಾಂತಮಂ ಬೆಸಗೊಂಡಿತೆಂದುದು :

ತುಂಗಗಜಂಗಳ್ಗಳ್ಕಿ ಮೃ
ಗಂಗಳನಾಯ್ದಱಸಿ ತಿಂಬುದಪ್ಪೊಡೆ ಪೆಱತೇಂ
ಸಿಂಗಮದಲ್ಲಿಗಾ ಪೋಗಾ
ಸಿಂಗಂ ತಾಂ ಗಾವಸಿಂಗಮೆಂದುದು ನಿನ್ನಂ  ೧೪೨

ಎಂದು ನಿಮ್ಮಡಿಯನನೇಕ ಪ್ರಕಾರದಿಂ ಱೋಡಾಡಿ ಬಯ್ಯುತೆನ್ನಂ ಬರಲೀಯದೆ ಕಾಡುತ್ತಿರ್ದ ಕಾರಣದಿನಿನ್ನೆಗಂ ತಡೆದೆನೆಂದು ಪೇೞ್ವುದುಂ, ಕೇಸರಿಯಾಸುರಂ ಮಸಗಿ ಕ್ಷುಧಾಗ್ನಿಯೊಡನೆ  ಕೋಪಾಗ್ನಿ ಪೆರ್ಚೆ ಮೊಲದ ಮಾತಿನ ಬಲೆಯೊಳ್ ಸಿಲ್ಕಿ ಕಡುಮುಳಿದು, ತನ್ನನಿಂತು ಕಡೆನುಡಿದ ಸಿಂಗಮಿರ್ಪೆಡೆಯಂ ತೋಱೆನೆ ಮೊಲನೆಂದುದು: ಆ ಸಿಂಗನತಿಬಲನಪ್ಪುದಱೆಂ ದೇವರ್ ಪೋಗಿ ಪೆಱಗೆ ಹೀನಮಕ್ಕುಮದಾಗಳುೞೆದ ಮೃಗಗಂಗಳೆಲ್ಲ ಹಾಸ್ಯಂಗೆಯ್ದಪ್ಪುವದಱೆಂದೆನ್ನನಾರೋಗಿಸಿ ಸುಖದೊಳಿರಿಂ.  ‘ಜೀವನ್ ಭದ್ರಾಣಿ ಪಶ್ಯತಿ’ ಎಂಬ ನೀತಿಯುಂಟುಪ್ಪುದಱೆಂ ನಿಷ್ಕಾರಣಂ ಸಾಯದೆನ್ನಂ ಕೊಳ್ಳಿಮೆನಲಾ ಸಿಂಗಂ ಕೇಳ್ದು ನೀನುಸಿರದವನಿರ್ದೆಡೆಯಂ ತೋಱು ನಡೆಯೆನಲಾ ದೀರ್ಘಕರ್ಣನಂತೆಗೆಯ್ವೆನೆಂದು ಮುಂದಿಟ್ಟೊಡಗೊಂಡು ಬಂದ ತರ್ಕ್ಯ ಪರಾಕ್ರಮನಷ್ಟ ನಿಮ್ಮಂ ಮೆಚ್ಚದೆ ಮಚ್ಚರಿಸುವ ಸಿಂಹಮಿಲ್ಲಿರ್ದುದೆಂದು,

ತರಳ ಸಾಟಿಕ ಭಿತ್ತಿರು-
ಚಿರಮಂ ತಾಂ ತಾರಾಹಾರಶಶಿವಿಶದಾಂಭಃ
ಪರಿಪೂರ್ಣಮನುರತರಮಂ
ಪುರಾಣಕೂಪಮನಗಾಧಮಂ ಭೀಕರಮಂ  ೧೪೩

ಅಂತಾ ಬಾವಿಯಂ ತೋಱೆ ದೇವಾ ! ನೋಡಿಮೆನಲೊಡಂ, ಕೋಪಾನ್ಧಂ ಕೂಪದೊಳಗಂ ನೋಡುವುದುಮಲ್ಲಿ ಪ್ರತಿಬಿಂಬಿಸಿದ ತನ್ನ ರೂಪಮಂ ಮತ್ತೊಂದು ಸಿಂಹಮೆ ಗೆತ್ತು.

ಕೋಪಾಳನನಳುರೆ ಮಹಾ
ಕೂಪದೊಳಿಭವೈರಿ ಪಾಯ್ದು ಸತ್ತುದು ಘನ ಶೌ-
ರ‍್ಯೋಪೇತನಾದೊಡಂ ಸಲೆ
ಕೋಪಾತುರನಪ್ಪನಾವನುಂ ಬೞ್ದಪನೇ  ೧೪೪

ಅಂತಾ  ಸಿಂಹಮಂ ಬುದ್ಧಿಯ ಬಲದೊಳ್ ಮೊಲಂ ಮೊದಲಾಗಿ ಕೊಂದುದೆಂದೊಡೆ ವಿಶುದ್ಧಬುದ್ಧಿಯುಂ ನಿಶ್ಚಯಾತ್ಮಕನುಮಪ್ಪಾತನೆತ್ತಿಕೊಂಡ ಕಜ್ಜಂ ಪಲಸಿನ ಮರದಂತೆ ಫಲಮನೆತ್ತಿಕೊಂಡು ಬರಲಕ್ಕುಂ

ಅದು ಕಾರಣದಿಂ ಭಾವಿಸೆ
ಸದಮಳಮತಿಯುತನೆನಿಪ್ಪವಂಗೆಂತುಂ ತೀ-
ರದ ಕಜ್ಜಮುಂಟೆ ಬುದ್ಧಿಯೊ-
ಳೆದೆವೆರಸಿದ ನರರಸಾಧ್ಯರಂ ಸಲೆ ಗೆಲ್ವರ್  ೧೪೫

ಎಂದಿಂತನೇಕದೃಷ್ಟಾಂತಂಗಳಂ ತೋಱೆ ನುಡಿದ ದವನಕನ ಮಾತಂ ಕರಟಕಂ ಕೇಳ್ದು ನೀನುಪಾಯ ಕುಶಲನುಂ ಕುಶಾಗ್ರಬುದ್ಧಿಯುಮಪ್ಪುದರ್ಕೇನುಂ ಸಂದೆಯಮಿಲ್ಲ. ತಡೆಯದೆ ನೀನೆತ್ತಿದ ಕಜ್ಜದ ಕಡೆಯೆನೆಯ್ದಿಸೆಂಬುದುಮಂತೆಗೆಯ್ವೆನೆಂದು,

ಪೃಥ್ವೀ ವೃತ್ತಂ || ಶಠಪ್ರಕೃತಿ ನಿರ್ಗುಣಂ ಸಕಲಧರ್ಮ ಭೂಜಾವಳೀ
ಕುಠಾರನಿರದೆಯ್ದಿದಂ ದವನಕಂ ಮೃಗಾಶ
ಕಠೋರನಖರಾಹತದ್ವಿರದ ಕುಂಭಪೀಠಸ್ಥಳೀ
ಲುಠದ್ರುರ ದಾರುಣೋಲ್ಲಸಿತ ಕೇಸರೋದ್ಭಾಸಿಯಂ ೧೪೬

ಅಂತೆಯ್ದಿ ಪೊಡೆಮಟ್ಟು ಸಮುಚಿತಸ್ಥಾನದೊಳ್ ಕುಳ್ಳಿರ್ದು ತಲೆಯಂ ಬಾಗಿ ನೆಲನನುಂಗುಟದಿಂ ಬರೆಯುತಿರ್ದ ದವನಕನ ಕೃತಕವೇಷಮಂ ಕಂಡು ಪ್ರಾಕೃತವೇಷಮೆಂದು ನಂಬಿ ಪಿಮಗಳಕನಿಂತೆಂದಂ: ಏಂ ದವನಕ ! ನೀನಿಂತು ಚಿಂತಾಕ್ರಾಂತನುಂ ಭ್ರಾಂತಚಿತ್ತನುಮಾಗಿರ್ಪುದಾವ ಕಾರಣಂ ಪೇೞೆನೆ ದವನಕನಿಂತೆಂದಂ:

ದೇವ ಸರಭಸದಿನೀ ಸಂ-
ಜೀವಕನೆಂಬೆೞ್ತು ಕೆಲೆದೊಡಾ ಧ್ವನಿಗೊಂದಂ
ಭಾವಿಸದೆ ನೀಂ ಭಯಂಬ-
ಟ್ಟೀ ವನಮಂ ಬಿಟ್ಟು ಪೋಪೆನೆಂಬುದುಮಾಗಳ್  ೧೪೭

ಆಂ ನಿಮ್ಮಡಿಯ ಭಯಮಂ ಕಳೆಯಲೆಂದಾ ಮಹಾಸತ್ತ್ವ ಸಂಪನ್ನನಂ ನಿಮ್ಮೊಳ್ ಕೂಡುವುದುಂ ಕೂಡಿದೊಡಾ ಪಾಪಕರ್ಮಂ ಪೊಲೆಗೆಳೆಯಂತೆಯುಂ ಶಾಂತಿಗೆಯ್ಯೆ ಬೇತಾಳಂ ಮೂಡಿದಂತೆ ತಾಂ ಜಾತಿಯೊಳ್ ಪಶುವಪ್ಪುದಱೆಂ ಮೊಱೆಯಂ ಧರ್ಮಮುಮನಱೆಯದಾ ಮೂಢಂ ನಿನ್ನ ರಾಜ್ಯಕ್ಯಾಸೆವಟ್ಟು ನಿನ್ನಂ ಕೊಂದಪನೆಂದು ಸಮಕಟ್ಟುತಿರ್ದಪನದನಾನಱೆದೆನಪ್ಪುದಱೆಂದಿಲ್ಲಿ ಕರ್ತವ್ಯಮಾವುದೆಮದು ಚಿಂತಿಸಿದಪೆನೆಂದು ಬಿನ್ನಪಂಗೆಯ್ವುದುಂ, ಪಿಂಗಳಕನಿಂತೆಂದಂ:

ಅನುರಕ್ತಂ ಭಕ್ತಂ ಹಿತ-
ನೆನಗೀಗಳ್ ಜೀವಮಾಗಿ ಸಂಜೀವಕನಿಂ-
ಬೆನೆ ನಡಪುತಿರ್ದಪಂ ಮ-
ತ್ತಿನಿಸುಂ ವಿಪರೀತಮಪ್ಪುದಂ ಕಂಡಱೆಯೆಂ  ೧೪೮

ಅಂತುಮಲ್ಲದೀಗಳೆನಗೆ ಅತ್ಯಾಸನ್ನವರ್ತಿಯಪ್ಪುದಱೆಂ ನಮ್ಮ ದುಷ್ಟಪರಿಗ್ರಹಂ ಕೆಮ್ಮನೆ ದ್ವೇಷಂಗೆಯ್ದು ತಾವೆಲ್ಲರಾಱದೆ ನಿನ್ನನುಪೇಕ್ಷಿಸಿದರವಂದಿರ ಮಾತಂ ಕೇಳಲುಂ ನೀಂ ಮನಂಗುಡುಲ್ವೇಡೆಂದು ನುಡಿವುದುಂ,  ದವನಕನಿಂತೆಂದಂ: ನಾನಾವ ಕಜ್ಜವನಾದೊಡಂ  ತ್ರಿಕಾಲಜ್ಞಾನಿಯ ಕಾಣ್ಕೆಯಂತೆ ಕಂಡುದಂ ಸಮಸ್ತಶಾಸ್ರ್ತಶ್ರವಣಪರಿಣತಂ ಕೇಳ್ದ ನಿಶ್ಚಯಾರ್ಥದಂತೆ ಕೇಳ್ದುದನಲ್ಲದೆ ಜಾತ್ಯಂಧನಂತೆ ಪೆಱರ ಕಾಣ್ಕೆಯೊಳ್ ಕಂಡುದಂ ಜಾತಿಬರನಂತನ್ಯರ ಕಿವಿಯೊಳ್ ಕೇಳ್ದುದಂ ನುಡಿವನಲ್ಲೆಂ, ದೇವರೆನ್ನ ಬುದ್ಧಿಯ ನೆಗೞ್ದ ಸಾಹಸಂಗಳುಮಂ ಪುರುಷಕಾರಂಗಳುಮನಱೆತುಮಱೆಯದಂತೆ ಪರಪ್ರೇರಕನುಮನವಿಚಾರಕನುಮಂ ಮಾಡಿ ನುಡಿದಿರ್, ಎಂತುಂ ವಾಕ್ಯಂ || ‘ಯಃ ಸಂಪರಃ ದೋಷಾನ್ವೇತ್ತಿ ತಸ್ಯ ದೋಷ ಬಹುತ್ವಂ ಪ್ರಖ್ಯಾಪಯತಿ’ ಎಂಬ ನೀತಿಯನಱೆವೆನಪ್ಪುದಱೆಂದಾಂ ಕಂಡು ಕೇಳ್ದು ನುಡಿವೆನಲ್ಲದೆ ವೃಥಾ ಪರನಿಂದಗೆಯ್ವೆನಲ್ಲಂ, ಇದು ಸ್ವಾಮಿಕಾರ್ಯಮಪ್ಪು ದಱೆಂದುಪೇಕ್ಷಿಸಿರ್ಪುದು ಅನುಜೀವಿಗಳ್ಗೆ ಗುಣಮಲ್ಲಂ- ಅದಱೆಂ ನುಡಿದಪೆನದೆಂತನೆ:

೧೩೮. ಒಂದು ತೋಳ, ಕರಡಿ, ಒಳ್ಳೆಯ ಕೊರಳಿನ ಹೊಳೆಯುವ ಹರಿಣಗಳ ಸಾಲು, ಬಿಳಿಪಟ್ಟೆಯನ್ನುಳ್ಳ ಸಾರಂಗ, ಭಯಂಕರವಾದ ಕಣೆಹಂದಿ, ಸಾರಂಗ, ಮೊಲಗಳು, ಹುಲಿ, ಕಪಿಗಳ ಗುಂಪು ಸಿಂಹ ಸಮೂಹ, ಭಂಯಂಕರವಾದ ನರಿಗಳ ಮಂದೆ, ಮದದಿಂದ ಕೊಡಿದ ಆನೆ, ಶಾರ್ದೂಲ, ಕಾಗೆಗಳ ಗುಂಪು, ಸರ್ಪಗಳಿಂದ ಭೀಕರವಾಗಿ ಹೊಳೆಯುವ ಕಾಡಿನಲ್ಲಿ. ೧೩೯. ದುರ್ಧರವಿಕ್ರಮನೂ, ದೋರ್ದಂಡಸಹಾಯನೂ, ಅಜೇಯನೂ, ನಿರ್ದಯನೂ, ಅಸಾಧಾರಣವಾದ ನಖಮುಖಗಳಿಂದ ಕಾಡಿನ ಆನೆಗಳ ಸಮೂಹವನ್ನು  ಸೀಳಿದವನೂ ಆದ ಸಿಂಹವಿತ್ತು. ವ|| ಆ ಮೃಗಾರಾಜನು ಆನೆಗಳನ್ನೆಲ್ಲ ಕೊಂಡು ತಿಂದ ಬಳಿಕ ಎಲ್ಲಿಯೂ ಆಹಾರ ಸಿಕ್ಕದೆ ಕಾಡಿನಲ್ಲಿದ್ದ  ಸಿಕ್ಕ ಸಿಕ್ಕ ಬಡ ಪ್ರಾಣಿಗಳನ್ನೆಲ್ಲ ತಿನ್ನತೊಡಗಿತು. ಆಗ ಮೃಗಗಳೆಲ್ಲ ಒಂದಾಗಿ ತಮ್ಮ ತಮ್ಮಲ್ಲೆ ಆಲೋಚನೆ ಮಾಡಿ ಮೃಗೇಂದ್ರನಲ್ಲಿಗೆ ಬಂದು ನಮಸ್ಕರಿಸಿ ಹೀಗೆಂದವು : ೧೪೦. ಗಜವೈರಿ ! ಈ ಮಹಾ  ಅರಣ್ಯದಲ್ಲಿ ವಾಸಿಸುವ ಈ ಮೃಗಸಮೂಹವು ನಿನ್ನ ಆಜ್ಞೆಗೆಒಳಪಟ್ಟವು. ಶೌರ್ಯೋನ್ನತನೂ, ನೀತಿಜ್ಞನೂ ಆದ ನೀನು ನಮ್ಮನ್ನೆಲ್ಲ ಧರ್ಮಮಾರ್ಗದಿಂದ ಕಾಪಾಡಬೇಕು. ವ|| ದೇವಾ ! ನೀವು ಇಷ್ಟರವರೆಗೆ  ನಮ್ಮನ್ನು ಕಾಪಾಡಿದಿರಿ. ಈಗ ನಿಮಗೆ ಅಪಾಯ ಸಂಭವಿಸಿರಲು ನಾವು ನಿಮ್ಮ ಉಪಕಾರಕ್ಕಾಗದಿದ್ದರೆ ನಾವಿದ್ದೂ ಏನು ಪ್ರಯೋಜನ ? ನಿಮಗೆ ಆನೆಗಳು ಸಿಗುವ ತನಕ ಪತಿನಿತ್ಯವೂ ನಿಮ್ಮ ಬಳಿಗೆ ಒಂದೊಂದು ಮೃಗಗಳನ್ನೂ ನಿಮ್ಮ  ಆಹಾರಕ್ಕಾಗಿ ಕಳುಹಿಸುವೆವು. ಈ ವಿಚಾರ ನಿಮಗೆ ಸಮ್ಮತವೆನಿಸಿದರೆ ನಾವು ಇಲ್ಲೆ ಇರುವೆವು ; ಇಲ್ಲವಾದಲ್ಲಿ ಇಲ್ಲಿಂದ ಓಡಿಹೋಗುವೆವು. ಆ ಮಾತಿಗೆ ಮೃಗರಾಜನು ಹಾಗೆಯೇ ಮಾಡುವೆ ಎಂದು ಒಪ್ಪಿ ಬಾಯಾಳೆಂಬ  ನರಿಯನ್ನು ಸರದಿಗಾರನನ್ನಾಗಿ ನೇಮಿಸಿ ಕೆಲವು ಕಾಲ ಕಳೆಯಿತು. ಹೀಗಿರುವ ಒಂದು ದಿನ ಆ ಸಿಂಹಕ್ಕೆ ಮಾರಿ ಬರುವಂತೆ ದೀರ್ಘಕರ್ಣನೆಂಬ ಮೊಲದ ಸರದಿ ಬಂತು . ಆ ಮೊಲವು ಉಪಾಯಕುಶಲನಾದುದರಿಂದ  ಕಾಲಜ್ಞಾನವನ್ನೂ, ಕಾಲಜಯವನ್ನೂ ಬಲ್ಲ ಪರಮಯೋಗಿಯಂತೆ ತನಗೆ ಬಂದ ಅಪಾಯಕ್ಕೆ ಜಯೋಪಾಯವನ್ನು ಮನಸ್ಸಿನಲ್ಲೆ ಯೋಚಿಸಿತು. ‘ ನಾಶಕ್ಯಂ ಬುದ್ಧಿಮತಃ ಪುರುಷಸ್ಯ’ ಎಂಬಂತೆ ಮಾತನಾಡುವುದಲ್ಲಿ ಬುದ್ಧಿವಂತರಾದವರಿಗೆ ಕೇಡಿಲ್ಲ ಎಂಬುದನ್ನು ನಿಶ್ಚಯಿಸಿ ಸಂಜೆಯವರೆಗೆ ಕಾದಿದ್ದು ಬಳಿಕ  ಎಲ್ಲಿಯೂ ನಿಲ್ಲದೆ ಹಿಂದೆ ನೋಡುತ್ತ ಭಯಾತುರಗೊಂಡವನಂತೆ ಬಂದು ತನ್ನ ಮರಣಭ್ರಾಂತಿಯನ್ನೂ ಚಿಂತಿಸಿತು. ಇದ್ದಕ್ಕಿದಂತೆ ತನ್ನ ಎದುರಿನಲ್ಲೆ ಇದ್ದ ಒಂದು ಹಳೆಯಬಾವಿಯನ್ನೂ ಕಂಡು ಬಾಯರಿಕೆಯಿಂದ ನೀರನ್ನು ಕುಡಿಯಬೇಕೆಂದು ನೋಡಿತು. ಇಳಿದು ಹತ್ತಲಾಗದ ಆ ಬಾವಿಯ ಸ್ವಚ್ಛ ಜಲದಲ್ಲಿ ತನ್ನ ಪ್ರತಿಬಿಂಬವು ಇದ್ದ ಹಾಗೆಯೇ ಬಿಂಬಿಸುವುದನ್ನು ಕಂಡಿತು. ಈ ಸಿಂಹವನ್ನೂ ಇಲ್ಲಿಯೇ ಕೊಲ್ಲಲೂ, ಗೆಲ್ಲಲೂ ಸಾಧ್ಯ ಎಂದು ಉತ್ಸಹದಿಂದ ಉಪಾಯನಿಪುಣನಾದ ಆ ಮೊಲವು ಆ ಸಿಂಹನನ್ನು ಇಲ್ಲಿಗೆ ತಂದು ಕೊಲ್ಲುವೆ. ಒಂದು ವೇಳೆ ಕೊಲ್ಲಲಾಗದಿದ್ದರೆ ‘ಸಾಯುವವನಿಗೆ ಸಮುದ್ರ ಮೊಳಕಾಲುದ್ದ’ ಎಂಬಂತೆಯೂ, ‘ ಕಿಚ್ಚಿನಲ್ಲಿ ಬಿದ್ದವನಿಗೆ  ಸಾವು ತಪ್ಪದು’ ಎಂಬಂತೆಯೂ ತನಗೆ ಸಾವು ತಪ್ಪಿದ್ದಲ್ಲ.  ಹೆಚ್ಚೆಂದರೆ ಅವನು ನನ್ನ ಮೇಲೆ ಇಮ್ಮಡಿ ಕೋಪಗೊಂಡು ಕೊಂದಾನಷ್ಟೇ ! ಹೀಗಿರಲು ನಾನೇಕೆ ಭಯಪಡಬೇಕು. ಶ್ಲೋ|| ಕ್ಷಣಮಾತ್ರದಲ್ಲಿ ದ್ವಂಸವಾಗುವ ಕಾಯಕ್ಕೆ ಯುದ್ಧದಲ್ಲಿಯಾಗಲಿ ಮರಣದಲ್ಲಿಯಾಗಲಿ ಏಕೆ ಚಿಂತೆ ವ|| ಎಂದು ಯೋಚಿಸಿ ಸಂಜೆಯವರೆಗೆ ಕಾದಿದ್ದು ಬಳಿಕ ಎಲ್ಲಿಯೂ ನಿಲ್ಲದೆ ಹಿಂದಕ್ಕೆ ನೋಡುತ್ತ ಭಯಾತುರನಂತೆ ಬಂದಿತು. ೧೪೧. ಹುಬ್ಬು ಗಂಟಿಕ್ಕಿದ ಕೆಂಡಕಾರುವ ಕಣ್ಣುಗಳ, ದಾಡೆ ಹಲ್ಲುಗಳಿಂದ  ಕರಾಳಮುಖವಾದ ಮೃಗವಲ್ಲಭನನ್ನು ಮೊಲ ಕಂಡಿತು. ವ|| ಹಾಗಿ ಬಂದ ದೀರ್ಘಕರ್ಣನನ್ನು ಕಂಡು ಜಠರಾಗ್ನಿಜ್ವಾಲೆಯಿಂದ ಸುಟ್ಟ ಮನಸ್ಸಿನ ಸಿಂಹ ಸಿಟ್ಟಿನಿಂದ ಉರಿದೇಳುತ್ತ ಹೀಗೆಂದಿತು : ಎಲವೋ ! ನೀನಿಷ್ಟು ಹೊತ್ತು ತಡವಾಗಿ ಬರಲು ಕಾರಣರಾರು ? ಈಗ ಬರುವಾಗ ಹೆಜ್ಜೆ  ಹೆಜ್ಜೆಗೂ ಭಯಾತುರನಾಗಿ ಹಿಂದೆ ನೊಡುತ್ತ ಬಂದೆ. ನಿನ್ನ ಒಡೆಯನೆಂಬುವನು ಯಾರದರೂ ಇದ್ದರೆ ತೋರಿಸು. ಮೊದಲು ಅವನನ್ನು ಆಪೋಶನ ಮಾಡಿ ಅನಂತರ ನಿನ್ನನ್ನು ಪ್ರಾಣಾಹುತಿ ಮಾಡುವೆ.  ಅದಕ್ಕೆ ದೀರ್ಘಕರ್ಣನು  ಹೀಗೆಂದಿತು : ನಿಮ್ಮ ಕೋಪವೂ ಪ್ರತಾಪವೂ ನಮ್ಮಂಥ ಬಡವರ ಮೇಲಲ್ಲದೆ ಬೇರೆ ಏನೂ ಇಲ್ಲ. ಆದರೂ ನಾನು ಬರುತ್ತಿದ್ದಾಗ ದಾರಿಯಲ್ಲಿ ಒಂದು ಸಿಂಹ ನನ್ನನ್ನು  ಬರಲು ಬಿಡದೆ ತಡೆದು ಅಡ್ಡಗಟ್ಟಿತು. ಆಗ ಆ ಕೇಸರಿ ಭಯಂಕರವಾಗಿ ಗರ್ಜಿಸಿ ಕ್ಷುದಾಗ್ನಿಯೊಡನೆ ಕೋಪಾಗ್ನಿಯೂ ಹೆಚ್ಚಿ ಮೊಲದ ಮಾತಿನ ಬಲೆಗೆ ಸಿಕ್ಕಿ ಬಿದ್ದಿತು.  ತನ್ನನ್ನು  ಈ ರೀತಿ  ತಿರಸ್ಕರಿಸಿದ ಸಿಂಹವಿರುವ ಕಡೆಯನ್ನೂ ನನಗೆ ತೋರಿಸು ಎಂದಿತು. ದೀರ್ಘಕರ್ಣನು ಹಾಗೇಯೆ ಆಗಲಿ ಎಂದು ಸಿಂಹವನ್ನು ಮುಂದೆ ಮಾಡಿಕೊಂಡು ಬಂದು ನಿಮ್ಮನ್ನು ಮೆಚ್ಚದೆ ಮತ್ಸರಿಸುವ ಅಸಾಧರಣ ಪರಕ್ರಮಿಯಾದ ಸಿಂಹ ಇಲ್ಲಿದೆ ಎಂದು  ೧೪೩. ಸಟಿಕದ ಭಿತ್ತಿಯಂತೆ ಹೊಳೆಯುವ, ಮುತ್ತಿನ ಹಾರದಂತೆ, ಚಂದ್ರನಂತೆ ತಿಳಿಜಲವುಳ್ಳದೂ ಭಯಂಕರವೂ ಅತ್ಯಂತ  ಆಗಾಧವೂ  ಆದ ಒಂದು ಹಳೆಯ  ಬಾವಿಯನ್ನೂ ತೋರಿಸಿತು. ಹಾಗೆ ಆ ಬಾವಿಯನ್ನು ತೋರಿಸಿ ದೇವಾ !  ನೋಡಿರಿ ಎನ್ನಲು ಕೋಪಾಂಧನಾದ ಆ ಕೇಸರಿ ಕೂಪದೊಳಕ್ಕೆ ನೋಡಲು ಅಲ್ಲಿ ಪ್ರತಿಬಿಂಬಿಸಿದ ತನ್ನ ರೂಪವನ್ನೇ ಮತ್ತೊಂದು ಸಿಂಹವೆಂದು ಭ್ರಮಿಸಿತು. ೧೪೪. ಕೋಪದಿಂದ ಮಹಾ ಕೂಪದಲ್ಲಿ  ಬಿದ್ದು ಸತ್ತಿತ್ತು. ಎಷ್ಟೇ  ಶೌರ್ಯವಂತನಾದರೂ ಕೋಪಾತುರನಾದವನು ಎಂದಾದರೂ ಬಾಳುವನೇ ? ವ || ಹಾಗೆ ಆ ಸಿಂಹವನ್ನು ಬುದ್ಧಿ ಬಲದಿಂದ ಒಂದು ಮೊಲ  ಕೊಂದಿತು. ಹಾಗೆಯೇ ವಿಶುದ್ಧಬುದ್ಧಿಯುಳ್ಳವನೂ ದೃಢನಿರ್ಧಾರವುಳ್ಳವನೂ ಕೈಕೊಂಡ ಕಾರ್ಯ ಹಲಸಿಮರ ಹಣ್ಣು ಬಿಟ್ಟಂತೆ ಫಲಪ್ರದವಾಗುವುದು. ೧೪೫. ಬುದ್ಧಿವಂತರಾದವರಿಗೆ ಸಾಧ್ಯವಾಗದ ಕೆಲಸವುಂಟೇ? ವ || ಈ ರೀತಿ ಅನೇಕ ದೃಷ್ಟಾಂತಗಳನ್ನೂ ತೋರಿ ಹೇಳಿದ ದವನಕನ ಮಾತನ್ನು ಕರಟಕನು ಕೇಳಿ ನೀನು ಉಪಾಯಕುಶಲನೂ  ಕುಶಾಗ್ರ ಬುದ್ಧಿಯುಳ್ಳವನೂ ಆಗಿರುವುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ತಡಮಾಡದೆ ನೀನು ಯೋಚಿಸಿದ ಕಾರ್ಯವನ್ನು  ಕೊನೆಗೊಳಿಸು ಎಂದು ಹೇಳಿತು. ಅಂತೆಯೇ ೧೪೬. ಹಟವಾದಿಯೂ, ನಿರ್ಗುಣನೂ, ಸಕಲ ಧರ್ಮ ವೃಕ್ಷಗಳಿಗೆ  ಕುಠಾರ ಸ್ವರೂಪನೂ ಆದ ಕಠೋರವಾದ ಉಗುರುಗಳ ಹೊಡೆತಕ್ಕೆ ಆನೆಗಳ ಕುಂಭಸ್ಥಳಗಳನ್ನು ಒಡೆದು ರಕ್ತಸಿಕ್ತ ಕೇಸರಗಳಿಂದ ಶೋಭಿಸುವ ಮೃಗಾಶನಲ್ಲಿಗೆ ದವನಕನು ಹೋಗಿ  ವ||ನಮಸ್ಕರಿಸಿ ಸಮುಚಿತಸ್ಥಾನದಲ್ಲಿ ಕುಳಿತು ತಲೆಬಾಗಿ ನೆಲವನ್ನು ಬರೆಯುತ್ತಿದ್ದ ದವನಕನ ಕೃತಕವೇಷವನ್ನು ಕಂಡು ಇದು ಪ್ರಾಕೃತವೇಷವೆಂದು ಭಾವಿಸಿ ಪಿಂಗಳಕ ಹೀಗೆಂದ : ಏನು ದವನಕ ! ನೀನು ಹೀಗೆ ಚಿಂತಾಕ್ರಾಂತನೂ ಭ್ರಾಂತ ಚಿತ್ತನೂ ಆಗಿರಲು ಕಾರಣವೇನು ? ಅದಕ್ಕೆ ದವನಕನು ಹೀಗೆ ಹೇಳಿದ :  ೧೪೭: ದೇವಾ ! ಈ ಸಂಜೀವಕ ಎಂಬ ಎತ್ತು ರಭಸದಿಂದ ಕಲೆಯಲು ಆ ಧ್ವನಿಗೆ ಭಯಪಟ್ಟು ಈ ವನವನ್ನೇ ಬಿಟ್ಟು ಹೋಗುವೆನೆಂದೆಯಲ್ಲವೇ ! ವ || ನಾನು ಪೂಜ್ಯರಾದ ನಿಮ್ಮ ಭಯವನ್ನು ನಿವಾರಿಸಲೆಂದು ಆ ಮಹಾಸತ್ತ್ವಸಂಪನ್ನನನ್ನು ನಿಮ್ಮೊಡನೆ ಕೂಡಿಸಿದೆ. ಆದರೆ ಆ ಪಾಪಿಷ್ಟ ದುಷ್ಟ  ಸ್ನೇಹಿತನಂತೆಯೂ ಶಾಂತಿಮಾಡಲು ಬೇತಾಳ ಮೂಡಿದಂತೆಯೂ ತಾನು ಜಾತಿಯಲ್ಲಿ ಪಶುವಾದುದರಿಂದ ಸಂಬಂಧವನ್ನೂ ಧರ್ಮವನ್ನೂ ಅರಿಯದ ಮೂಢನಾದುದರಿಂದ ನಿನ್ನ ರಾಜ್ಯಕ್ಕಾಸೆಪಟ್ಟು ನಿನ್ನನ್ನು ಕೊಲ್ಲಬೇಕೆಂದು ಹವಣಿಸುತ್ತಿರುವನು. ಅದನ್ನು ನಾನು ತಿಳಿದುದರಿಂದ ಈಗ ನನ್ನ ಕರ್ತವ್ಯವೆನೆಂದು ಚಿಂತಿಸುತ್ತರುವೆನೆಂದು ಬಿನ್ನವಿಸಲು ಪಿಂಗಳಕನು ಹೀಗೆ ಹೇಳಿದನು:  ೧೪೮, ಅನುರಕ್ತನೂ,  ಭಕ್ತನೂ, ಹಿತನೂ ಆಗಿರುವ  ನನ್ನ ಜೀವವಾಗಿರುವ  ಸಂಜೀವಕನು ನನಗೆ ಸರಿಯಾಗಿ ನಡೆದುಕೊಳ್ಳುತ್ತಿರುವನು. ಈಗ  ವಿರೋಧವಾಗಿ ನಾನು ವರ್ತಿಸಲಾರೆ. ವ|| ಅಲ್ಲದೆ, ಈಗ ನನಗೆ ಅತ್ಯಾಸನ್ನಕಾಲವಾದುದರಿಂದ ನಮ್ಮ ವೈರಿಗಳು ಸುಮ್ಮಸುಮ್ಮನೆ ದ್ವೇಷಿಸುತ್ತ ನಿನ್ನನ್ನು ಉಪೇಕ್ಷಿಸಿದರು. ಅವರ ಮಾತನ್ನೂ ಕೇಳಬೇಡ ; ಅದಕ್ಕೆಲ್ಲ ಮನಸ್ಸು ಕೊಡಬೇಡ. ಅದಕ್ಕೆ ದವನಕನು ಹೀಗೆಂದನು : ನಾನು ಯಾವ ಕೆಲಸವನ್ನಾದರೂ  ತ್ರಿಕಾಲಜ್ಞಾನಿಯ ದರ್ಶನದಂತೆ ಕೇಳಿದುದನ್ನು ಅಲ್ಲದೆ ಹುಟ್ಟು ಕುರುಡನಂತೆ ಬೇರೆಯವರು ಕಂಡುದನ್ನು, ಹುಟ್ಟು ಕಿವುಡನಂತೆ  ಬೇರೆಯವರು ಕೇಳಿದುದನ್ನು ನುಡಿಯುವವನಲ್ಲ. ಪೂಜ್ಯರಾದ ತಾವು ನನ್ನ ಸಾಹಸಗಳನ್ನು, ಸಾಮರ್ಥ್ಯಗಳನ್ನು ಲಿಕ್ಕಿಸದೆ ವೈರಿಪ್ರೇರಕನೆಂಬಂತೆ, ಅವಿಚಾರಕನೆಂಬಂತೆ ನೋಡಿದಿರಿ ‘ಯಃ ಸಂಪರಃ ದೋಷಾನ್ವೇತ್ತಿ ತಸ್ಯ ದೋಷಬಹ್ಮತ್ವಂ ಪ್ರಖ್ಯಾಪಯತಿ’  ಎಂಬ ನೀತಿಯನ್ನು ಅರಿತವನಾದುದರಿಂದ ಕಂಡು, ಕೇಳಿ ಹೇಳುವೆನಲ್ಲದೆ ಸುಮ್ಮನೆ ಬೇರೆಯವರನ್ನು ನಿಂದಿಸುವವನು ನಾನಲ್ಲ. ಇದು ಸ್ವಾಮಿ ಕಾರ್ಯವಾದುದರಿಂದ ಇದನ್ನು ಉಪೇಕ್ಷಿಸುವುದು ಭೃತ್ಯರ ಗುಣವಲ್ಲ.

ಸ್ವಾಮಿಹಿತನಪ್ಪವಂ ಸ್ವ
ಸ್ವಾಮಿಗೆ ಹಿತಮಪ್ಪ ಕಜ್ಜಮುಳ್ಳೊಡೆ ಪಿರಿದುಂ
ಪ್ರೇಮದಿನಱೆಪುವುದಱೆಪದೊ-
ಡೇಮಾತಿಹಪರವಿರುದ್ಧಮಪ್ಪುದಮೋಘಂ  ೧೪೯

ಅಱೆದುದನಾಳ್ದನೊಳ್ ಮಱಸಿ  ಮಾಣ್ದಿರದೊಯ್ಯನೆ ಪೇೞದಾತನೇ-
ತಱ ಹಿತನೆಯ್ದೆ ಕೂರ್ಪವರ ಪೇೞ್ದುದನಿಂಬೆನೆ ಕೇಳಿದಾತನೇ-
ತಱ ವಿಭು ಮಂತ್ರಿಯುಂ ನೃಪತಿಯುಂ ಬಗೆಗೊಂಡನುಕೂಲವೃತ್ತಿಯೊಳ್
ನೆಱೆದಿರೆ ಕೂಡುಗುಂ ನಿಖಿಲರಾಜ್ಯವಿಭೂತಿಗಳಾವ ಕಾಲಮುಂ  ೧೫೦

ಹಿತನಪ್ಪ ಭೃತ್ಯನೆಂದುಂ
ಪತಿಗಪಜಯಮಾಗದಂತು ನೆಗೞ್ವುದು ಪತಿದು-
ರ್ಮತಿಯಾಗಿ ದುಷ್ಟಜನಸಂ-
ಗತಿಗೆಱಗಿದೊಡೆಱಗಲೀಯದರ್ಪುದಮೋಘಂ ೧೫೧

ಎಂತುಂ ಪೂರ್ವೋಕ್ತಮಿಂತೆಂಬುದಲ್ತೆ

ಶ್ಲೋ || ಯದಿಷ್ಟಂ ತಸ್ಯ ತದ್ಬ್ರೂ ಯಾತ್ ಯಸ್ಯ ನೇಚ್ಛೇತ್ಪರಾಭವಂ
ಏಷಏವ ಸತಾಂ ಧರ್ಮೋ ವಿಪರೀತಮತೋನ್ಯಥಾ ||೫೨||

ಟೀ|| ಆವನಾವನೋರ್ವಂಗೆ  ಹೊಲ್ಲೆಹಮಂ ಬಯಸುವಾತನಾತಂಗನುಕೂಲಮಾಗಿಯೆ ಪೇೞ್ವುದು: ಲೇಸಂ ಬಯಸುವಾತಂ  ಅಕಾರ‍್ಯಮನನುಕೂಲವಾಗಿ ನುಡಿಯಲಾಗದು ಎಂದಿಂತನುರಕ್ತನಪ್ಪ ಸದ್ಭೃತ್ಯಂಗಂ ಸಚಿವಂಗಂ ಪೇೞ್ದೇಗುಣಂಗಳನಾನಱೆವೆನಾಗಿಯುಂ ನೀ ಕಿಡೆ ಕಿಡಲುಂ ನೀಂ ಬಾೞೆ  ಬಾೞಲುಮಿರ್ದೆನಾಗಿಯುಂ ಕಂಡ ಕಜ್ಜಮಂ ದೇವರ್ಗಱೆಯೆ ಬಿನ್ನಪಂಗೆಯ್ದೆನೆಂಬುದುಂ; ಪಿಂಗಳಕನಿಂತೆಂದಂ: ನೀನೀಗಳ್ ನುಡಿದ ಮಾತಿನಿತುಮಾಪ್ತಂಗಂ  ಹಿತವಂಗಂ ನುಡಿಯಲಪ್ಪು ದಾದೊಡಮವಾಙ್ಮನಸಗೋಚರಮಪ್ಪಾತ್ಮತತ್ತ್ವಮಂ ತತ್ವವಿಚಾರಪಾರಗರುಂ ಅನುಮಾನಪ್ರಮಾಣರುಮಾಗಿ ಕೈಕೊಂಡುರ್ವರೊಂದನೆ ಕಂಡೆಂತುಂ ನಿಶ್ಚಯಿಸಲುಮೇಕವಾಕ್ಯರಾಗಲುಮಱೆದಪರಿಲ್ಲದಱೆಂ ಅಂತಪ್ಪಾತ್ಮ ತತ್ತ್ವಮನೆನಗಱೆಪಿದ ಸದಾಚಾರನುಂ ಸತ್ಪರುಷನುಮಪ್ಪ ಸಂಜೀವಕನ ಗುಣಂಗಳುಮಂ ಪ್ರತ್ಯಕ್ಷಪ್ರಮಾಣಂಗಳಿನಾವಱೆದಿರ್ದುಂ ನಮಗಾತಂ ತಪ್ಪುವನೆಂದು ನಿಶ್ಚೈಸಲ್ಬರ್ಕುಮೆ  ಎನೆ ದವನಕಂ ಮುಗುಳ್ನನಗೆ ನಗುತ್ತಿಂತೆಂದಂ :

ಶ್ಲೋ || ಅಭ್ರಾಂತಶ್ಚ ನೃಪೋ  ನಾಸ್ತಿ ಶ್ರೋತ್ರಿಯೇ ನಾಸ್ತಿ ಬುದ್ಧಿಮಾನ್
ಅವಿದಗ್ಧಾಂಗನಾ ನಾಸ್ತಿಕಿರಾಟೋ ನಾಸ್ತಿ ನಿಶ್ಯಠಃ  ||೫೩||

ಟೀ||  ಮರುಳನಲ್ಲದರಸಿಲ್ಲ: ಬುದ್ಧಿಯುಳ್ಳ ಛಾಂದಸರಿಲ್ಲ ಜಾಣೆಯಲ್ಲದ ಸ್ತ್ರೀಯಿಲ್ಲ. ಹುಸಿಯಾದ ವ್ಯವಹಾರಿಯಿಲ್ಲ ಎಂಬೀ  ಶ್ಲೋಕಾರ್ಥ ಮುಂಟಪ್ಪು ದಱೆಂ ‘ಪರಮಾಣು ಪ್ರಮಾಣನೊರ್ವ ಕ್ಷತ್ರಿಯನ ಮೇಲೆ ಪರ್ವತ ಪ್ರಮಾಣ ಪಂಚಶತ ಪಿಶಾಚಂಗಳಿರ್ಪುವು’ ಎಂಬ ನಾಣ್ನುಡಿಯುಂಟು. ‘ಅರಸುಮಾನೆಯುಂ ತಿರಿಪುವರಿಚ್ಚೆ’ ಎಂಬ ಲೋಕಗಾದೆಯೇಕೆ ಪುಸಿಯಕ್ಕುಂ? ಇದೆಲ್ಲಂ ಸಂಜೀವಕನೆಂಬ ಹಸುವಂ ತಂದು ನಿಮ್ಮೊಳ್ ಕೂಡಿದೆನ್ನ ಮರುಳ್ತನಮಲ್ಲದೆ ನಿಮ್ಮೊಳಿನಿತುಂ ದೋಷಮಿಲ್ಲ; ಅದಂತಿರ್ಕೆ, ಆತನನಾಂ  ತಂದು ಕಾಣಿಸಿ ಕೂಡಿದಂದಿಂ ತೊಟ್ಟು ಇಂದುವರಮೆನ್ನಂ ಕರಂ  ಮನ್ನಿಸಿ ನಡಪುತ್ತಿರ್ದು ಈಗಳುಂ ಎನ್ನಂ ತನ್ನಾತನೆಂದೇ ಬಗೆದೆನ್ನಂ ಕಟ್ಟೇಕಾಂತಕ್ಕುಯ್ದಿತೆಂದಂ:

೧೪೯: ಸ್ವಾಮಿಹಿತನಾದವನು ತನ್ನ ಒಡೆಯನಿಗೆ ಹಿತವಾದ ಕಾರ್ಯವಿದ್ದಲ್ಲಿ ಪ್ರೀತಿಯಿಂದ ತಿಳಿಸಬೇಕು, ತಿಳಿಸಿದಿದ್ದಲ್ಲಿ ಇಹಪರಗಳಲ್ಲಿ ವಿರೋಧ ಉಂಟಾಗುವುದು. ೧೫೦: ತಿಳಿದುದನ್ನು  ಆಳುವನನಲ್ಲಿ ಮರೆಸಿ ಹೇಳದವನು ಎಂಥ ಸೇವಕ ? ಹೇಳಿದುದನ್ನು ಉಚಿತವರಿತು ಕೇಳದವನು ಎಂಥಾ ಸ್ವಾಮಿ ? ಪ್ರಭುವೂ ಮಂತ್ರಿಯೂ  ಕೂಡಿ ನಡೆದರೆ ಎಲ್ಲ ಕಾಲದಲ್ಲೂ  ಸಕಲ ರಾಜ್ಯವಿಭೂತಿಗಳೂ ಕೂಡಿ ಬರುವುವು. ೧೫೧. ಹಿತನಾದ ಭೃತ್ಯನು ಎಂದೂ ತನ್ನ ಒಡೆಯನಾದವನಿಗೆ ಅಪಜಯವಾಗದಂತೆ ನಡೆದುಕೊಳ್ಳತಕ್ಕದ್ದು. ಪತಿ ದುರ್ಮತಿಯಾಗಿ ದುಷ್ಟರ ಸಹವಾಸಕ್ಕೆರಗಿದರೆ ಹಾಗಾದಂತೆ ನೋಡಿಕೊಳ್ಳತಕ್ಕದ್ದು .

ಶ್ಲೋ|| ಒಬ್ಬನಿಗೆ ಕೆಟ್ಟದ್ದನ್ನು ಬಯಸುವತನು ಆತನಿಗೆ ಅನುಕೂಲವಾಗಿ ಹೇಳಬೇಕು. ಲೇಸನ್ನೂ ಬಯಸುವಾತನು  ಅಕಾರ್ಯವನ್ನು ಅನುಕೂಲವಾಗಿ ನುಡಿಯಲಾಗದು. ಹೀಗೆ ಅನುರಕ್ತನಾದ ಸದ್ಭೃತ್ಯನ, ಸಚಿವನ ಗುಣಗಳನ್ನು ತಿಳಿದ ನಾನು. ನೀನು ಕೆಡಲು ಕೆಡಲಿಕ್ಕೂ, ನೀನು ಬಾಳಲೂ  ಬಾಳಲಿಕ್ಕೂ ಸಿದ್ಧನಾಗಿರುವುದರಿಂದಲೇ ನನಗೆನಿಸಿದ ವಿಚಾರವನ್ನು  ಪೂಜ್ಯರಿಗೆ ಬಿನ್ನಯಿಸಿದೆ. ಅದಕ್ಕೆ ಪಿಂಗಳಕನು ಹೀಗೆ ನುಡಿದನು.  ನೀನು  ಈಗ ಹೇಳಿದ ಮಾತೆಲ್ಲ ಆಪ್ತನಿಗೂ ಹಿತನಿಗೂ ಹೇಳಬೇಕಾದುದಾದರೂ ಅವಾಙ್ಮನಸಗೋಚರವಾದ ಆತ್ಮತತ್ತ್ವವನ್ನು ನನಗೆ ಉಪದೇಶಿಸಿದ ಸದಾಚಾರನೂ ಸಾಧುವೇಷನೂ ಸತ್ಪರುಷನೂ ಆದ ಸಂಜೀವಕನ ಗುಣಗಳನ್ನು ಪತ್ಯಕ್ಷವಾಗಿಯೂ  ಪ್ರಮಾಣಪೂರ್ವಕವಾಗಿಯೂ ನಾವು ತಿಳಿದಿದ್ದೂ ಅವನು ಎರಡೆಣಿಸುವನೆಂದು ಹೇಗೆ ನಿಶ್ಚಯಿಸುವುದು ? ಆಗ ದವನಕ ಮುಗುಳ್ನಗುತ್ತ ಹೀಗೆಂದ ಶ್ಲೋ || ಮರುಳನಲ್ಲದ ಅರಸಿಲ್ಲ ಬುದ್ಧಿವಂತನಾದ ಬ್ರಾಹ್ಮಣನಿಲ್ಲ, ಜಾಣೆಯಲ್ಲದ ಸ್ತ್ರೀಯಿಲ್ಲ ; ಹುಸಿಯದ ವ್ಯವಹಾರಿಯಿಲ್ಲ  ಎಂಬ ಶ್ಲೋಕಾರ್ಥವಿರುವುದರಿಂದ ‘ಪರಮಾಣುಪ್ರಮಾಣನಾದ ಒಬ್ಬ ಕ್ಷತ್ರಿಯನ ಮೇಲೆ ಪರ್ವತ ಪ್ರಮಾಣದ ಐನೂರು ಪಿಶಾಚಗಳಿರುವುವು’ ಎಂಬ ನಾಣ್ನುಡಿಯುಂಟು. ‘ಅರಸೂ ಆನೆಯೂ ತಿರುಗಿಸುವರ ಇಚ್ಛೆ’ ಎಂಬ ಲೋಕದ ಗಾದೆ ಏಕೆ ಸುಳ್ಳಾಗುವುದು? ಇದೆಲ್ಲವೂ ಸಂಜೀವಕ ಎಂಬ  ಪಶುವನ್ನು ನಿಮ್ಮಲ್ಲಿ ತಂದು ಕೂಡಿಸಿದ ನನ್ನ ಮರುಳುತನವಲ್ಲದೆ ನಿಮ್ಮಲ್ಲಿ ಲೇಶವೂ ದೋಷವಿಲ್ಲ. ಅದು ಹಾಗಿರಲಿ. ಆತನನ್ನು ನಾನು ನಿಮಗೆ ಕಾಣಿಸಿ ಕೂಡಿಸಿದಂದಿನಿಂದ ಇಂದಿನವರೆಗೆ ನನ್ನನ್ನು ಚಿನ್ನಾಗಿ ಮನ್ನಿಸಿ ನಡೆಸುತ್ತಿದ್ದು ಈಗಲೂ ನನ್ನನ್ನು ತನ್ನವನೆಂದೇ ಬಗೆದು ನನ್ನನ್ನು ಏಕಾಂತಕ್ಕೆ ಕರೆದು ಹೀಗೆಂದ :

ಅಪದ್ವಿನೀತನಂ ಧೃತ-
ಕೋಪನನಜ್ಞಾನಿಯಂ ಕೃತಘ್ಞನನೆಂದುಂ
ಪಾಪಿಯನವಿಚಾರಿಯನಿಂ-
ತೀ ಪಿಂಗಳಕನನಶೇಷದೋಷವಿಳನಂ  ೧೫೨

ಇಂತಪ್ಪನನಾಳ್ದನೆಂದೋಲಗಿಪರ್ಗೇನಾನುಮೊಂದು ನೆವದಿಂದಾತನ ಕೈಯೊಳೇ ಸಾವಗದೆ ಪೋಗದು, ಅವನಂ ನೀಂ ಮುನ್ನಂ ಶಾಂತನಂ ಪಿರಿಯನುಮಾಗಿ ಪೇೞ್ದೆ ಈಗಳಾತನ ಪುರುಷಾರ್ಥದ ಪುರುಳುಂ ಶಕ್ತಿಯಳವುಂ ಕಲಿತನದ ಗುಣ್ಪುಂ ಪರಾಕ್ರಮದ ಬಿಣ್ಪುಂ ಕರತಳಾಮಳಕಮಾಗಿರ್ದಪ್ಪುದು, ಆ ಹರಿಯನೊಂದು ನರಿಯಂ ಕೊಲ್ವಂತಶ್ರಮದಿಂದೆ ಕೊಂದು ಗಜಾದಿ ಮೃಗಗಣಮಂ  ನಿರ್ಬಾಧೆಯಿಂ ನಿಶ್ಚಿಂತಮಿರ್ಪಂತು ಮಾೞ್ಪೆನೆಂದು ಮತ್ತಮಿಂತೆಂದಂ:

ಅಸದೃಶ್ಯ ಮೆನಿಪ್ಪ ಭವದೀ-
ಯ ಸತ್ತಮಂ ಬಗೆಯದಾತ್ಮಸತ್ತ್ವಮೆನೆ ಸಮ-
ರ್ಥಿಸಿ ದೇವ ‘ವೀರಭೋಜ್ಯಾ
ವಸುಂಧರಾ’ ಎಂದು ನುಡಿದನಾ ವೃಷಭೇಂದ್ರಂ  ೧೫೩

ಮೃಗರಾಜನ ಶಕ್ತಿತ್ರಯ-
ದ ಗುಣ್ಪುಮಂ ಬಾಹುಬಲದ ತಿಣ್ಪುಮನಱೆದೆಂ
ಬಗೆಯೊಳ್ ಕೊಂದಾತನನಾ
ಮೃಗರಾಜ್ಯಶ್ರೀಯನಾವಾಗಂ ಕೈಕೊಳ್ವೆಂ  ೧೫೪

ಎಂಬಂ, ಅದಲ್ಲದೆಯುಂ,

ವೃಷಭೇಂದ್ರ ನಂದಮೀಗಳ್
ವಿಷಮತರಂ ಮುನ್ನಿನಂದಮಲ್ಲಂ ಬಗೆಯಂ
ವಿಷಾಧರವಲ್ಲಭ ಭೂಷಣ
ವೃಷಭನುಮಂ  ದೇವ ನಿಮ್ಮನೇಂ ಬಗೆದಪ್ಪನೇ  ೧೫೫

ಸಕಲೋರ್ವೀತಳಪೂಜ್ಯಮಪ್ಪಭವದೀಯ ಪ್ರಾಜ್ಯರಾಜ್ಯಕ್ಕೆ ಕ-
ಟಕನಾದಂ ಕ್ರಮದಿಂದೆ ಸಂವರಿಸಿದಂ ಕ್ರೋಧಾದಿ ವರ್ಗಂಗಳಂ
ಸುಕರಂ ಭಾವಿಸಿ ನೋಡೆ ದೇವ ಪೆಱತೇಂ ಸಂಜೀವಕಂ ದಾವಪಾ-
ವಕನಾದಂ ಭವದಿಷ್ಟ ಸೇವಕಗಣಕ್ಕೇಂ ಪರ್ಚುವೇಂ ಮಂತಣಂ ೧೫೬

ಕೇಸರಿ ಚಕ್ರವರ್ತಿ ಪೇಱತೇಂ ನಿನಗಲ್ತು ವಿರೋನಾಯಕ
ತ್ರಾಸಕನೆಂಬ ಪೆಂಪನೊಳಕೊಂಡ ಹಿರಣ್ಯಕನಂ ಪರಾಕ್ರಮೋ-
ದ್ಭಾಸಿಯನ್ಮಾತ ತೀಕ್ಷ್ಣ ನಖರಂಗಳಿನಾಸುರಮಾಗಿ ಸೀೞ್ದ ಪುಂ-
ಸ್ಕೇಸರಿಗಂ ಬಲಾಕನಸಾಧ್ಯತರಂ ನೆಗೞ್ವಂ ವೃಷಾಪಂ  ೧೫೭

ಮತ್ತಂ; ನಿನಗೆ ಶತ್ರುಮಿತ್ರೋದಾಸೀನರಾಗಿರ್ದವರ್ಗಗಳಲ್ಲಿಗೆ ತನ್ನ ಗುಪ್ತಚರರನಟ್ಟಿ ತನಗೆ ಮಾಡಿಕೊಳುತಿರ್ದಪನದೆಂತೆನೆ :

೧೫೨: ಅಪದ್ವಿನೀತನೂ, ಕೋಪಿಷ್ಠನೂ,ಅಜ್ಞಾನಿಯೂ, ಕೃತಘ್ನನೂ, ಪಾಪಿಯೂ, ಅವಿಚಾರಿಯೂ ಆದ ವ|| ಈ ಪಿಂಗಳಕನನ್ನು  ಓಲಗಿಸು ವವರಿಗೆ ಏನಾದರೊಂದು ನೆವದಿಂದ ಆತನ ಕೈಯಿಂದಲೇ  ಸಾವಾಗದೆ ಇರದು. ಅವನನ್ನು ನೀನು ಮೊದಲು  ಶಾಂತನೂ ಹಿರಿಯನು ಎಂದು ಹೇಳಿದೆ. ಈಗ ಆತನ ಪುರುಷಾರ್ಥದ ಹುರುಳನ್ನೂ ಶಕ್ತಿಯನ್ನೂ  ಪರಾಕ್ರಮವನ್ನೂ ತಿಳಿದಿರುವೆ. ಸಿಂಹವನ್ನು ಒಂದು ನರಿಯನ್ನು ಕೊಲ್ಲುವಂತೆ ಆಶ್ರಮದಿಂದ ಕೊಂದು  ಗಜಾದಿಮೃಗಗಳಿಗೆ ನಿರ್ಬಾಧೆಯೂ ನಿಶ್ವಿಂತೆಯೂ ಉಂಟಾಗುವಂತೆ ಮಾಡುವೆನೆಂದು ನುಡಿದ .೧೫೩. ದೇವಾ ! ಅಸದೃಶ್ಯವಾದ ನಿಮ್ಮ ಸಾಮರ್ಥ್ಯವನ್ನು ಬಗೆಯದೆ ತನ್ನ ಸಾಮರ್ಥ್ಯವನ್ನೇ ದೊಡ್ಡದೆಂದು ಸಮರ್ಥಿಸಿ ‘ವೀರಭೋಜ್ಯ ವಸುಂಧರಾ’ ಎಂದು  ಆ ವೃಷಭೇಂದ್ರನು ನುಡಿಯಬಹುದೇ? ೧೫೪. ಮೃಗರಾಜನ  ಶಕ್ತಿತ್ರಯವನ್ನೂ ಬಾಹುಬಲದ  ತೀವ್ರತೆಯನ್ನೂ  ಅರಿತುಕೊಂಡು ಉಪಾಯದಿಂದ ಮೃಗರಾಜನನ್ನು ಕೊಂದು ಈ ವನಕ್ಕೆ ಅಪತಿಯಾಗುವ ಎಂದು ಯೋಚಿಸುತ್ತಿರುವನು. ೧೫೫.  ಈಗ ಆ ವೃಷಭೇಂದ್ರನ ಪರಿ ವಿಷಮತರವಾಗಿದೆ. ಅವನು ಈಗ  ಮೊದಲಿನಂತಿಲ್ಲ. ಈಶ್ವರನ ವಾಹನವಾದ ವೃಷಭೇಂದನನ್ನೂ ಅವನ ಲೆಕ್ಕಿಸುತ್ತಿಲ್ಲ  ಎಂದ ಮೇಲೆ ನಿಮ್ಮನ್ನು ಬಗೆಯುವನೇ ? ೧೫೬. ಸಕಲೋರ್ವಿಗೂ ಪೂಜ್ಯನಾದ  ನಿನ್ನ  ಸಾಮ್ರಾಜ್ಯಕ್ಕೆ ಅವನು ಕಂಟಕನಾಗಿ ಪರಿಣಮಿಸಿದ್ದಾನೆ. ಕ್ರಮವಾಗಿ ಕ್ರೋಧಾ  ಅರಿವರ್ಗವನ್ನು ರೂಢಿಸಿಕೊಳ್ಳುತ್ತಿದ್ದಾನೆ. ದೇವ,  ಹೆಚ್ಚೇನು ಹೇಳಲಿ, ಸಂಜೀವಕನು ಬೆಂಕಿಯಂತೆ ರ್ವಸುತ್ತಿದ್ದಾನೆ. ಹೀಗಿರುವಾಗ ನಿಮ್ಮ ಇಷ್ಟವಾದ ಸೇವಕಜನರೊಂದಿಗೆ ಮತ್ತೇಕೆ ಮಂತಣ? ೧೫೭, ಸಿಂಹ ಚಕ್ರಿಯೆ, ನಿನಗಿರಲಿ, ವಿರೊನಾಯಕನಿಗೆ ಪರಮ ಸಂಕಟಕರವಾಗಿದ್ದ ಹಿರಣ್ಯಾಕ್ಷನನ್ನು ತೀಕ್ಷ್ಣವಾದ ಉಗುರುಗಳಿಂದ ಭಯಂಕರವಾಗಿ ಸೀಳಿ ಕೊಂದ ಸಾಕ್ಷಾತ್ ನರಸಿಂಹನಿಗೂ ಅವನು ಅಸಾಧ್ಯನಾಗಿದ್ದಾನೆ . ಮತ್ತೆ, ನಿನಗೆ ಶತ್ರು, ಮಿತ್ರ, ಉದಾಸೀನರಾಗಿದ್ದವರ ಬಳಿಗೆಲ್ಲ ಗುಪ್ತಚಾರರನ್ನು ಕಳುಹಿಸಿಕೊಟ್ಟು ಅವರೆಲ್ಲರನ್ನೂ ತನ್ನ ಪಕ್ಷವಾಗಿ ಮಾಡಿಕೊಳ್ಳುತ್ತಿದ್ದಾನೆ. ಹೇಗೆಂದರೆ ೧೫೮. ವೃಕ ಶಾರ್ದೂಲ, ವರಾಹ ಮುಖ್ಯರ ಮನಸ್ಸನ್ನು ಒಲಿಸಿಕೊಂಡಿದ್ದಾನೆ., ಶ್ವಾಪದ  ಪ್ರಕರ ಅಮಾತ್ಯರದಲ್ಲಿಯೂ, ಗಜಾಪರಲ್ಲಿಯೂ ನಂಟಸ್ತಿಕೆ ಬೆಳೆಸಿದ್ದಾನೆ. ನೀತಿ ವಿರುದ್ಧ ವಾದೆಡೆಗಳಲ್ಲಿ  ಇದು ನಿನ್ನ ಸಪ್ತಾಂಗವನ್ನು ಹಾಳು ಮಾಡುತ್ತಿದ್ದಾನೆ. ಅಲ್ಲದೆ ಪೂಜ್ಯರು ತನ್ನ ಸಮಾನಬಲರಾದುದರಿಂದ ಸಮಬಲರಲ್ಲಿಯೂ, ಅಕ ಬಲರಲ್ಲಿಯೂ ಯುದ್ಧ ನಿಷಿದ್ಧ; ಜಯಸಂದೇಹ ಎಂದು ತಿಳಿದವನಾದುದರಿಂದ ತಮಗೆ ಬಲಕ್ಷಯವಾಗುವಂತೆ ಸಂಜೀವಕನು ಏನಾದರೂ ತಂತ್ರ  ಮಾಡಿ ಸಂಸಾರಿಯೂ ಪರಾಕ್ರಮಿಯೂ ಆದ ನಿಮಗೆ ದಿವ್ಯಮುನಿ ಹೇಳುವಂತೆ  ವೈರಾಗ್ಯವನ್ನು ಬೋಸುತ್ತಿರುವನು.

ವೃಕಶಾರ್ದುಲ ವರಹಮುಖ್ಯರ ಮನಂಗೊಂಡಂ ಮಹಾಶ್ವಾಪದ
ಪ್ರಕರಾಮಾತ್ಯರೊಳಂ ಗಜಾಪರೊಳಂ ನಂಟರ್ತನಂಗೊಂಡನ-
ಪ್ರಕಟಂ ನೀತಿವಿರುದ್ಧ ಮಾದೆಡೆಯೊಳಂ ತಾನೆಂಬ  ಸನ್ಮಂತ್ರಿಯಿಂ
ವಿಕಳಂ ಮಾಡುವನಿಂತು ತೊಟ್ಟನೆ ಭವತ್ಸಪ್ತಾಂಗವಂ ಪುಂಗವಂ  ೧೫೮

ಅದಲ್ಲದೆಯುಂ ದೇವರ್ ತನಗೆ ಸಮನಬಲರಪ್ಪುದಱೆಂ ಸಮಬಲನೊಳಮಕಬಲನೊಳಂ ಯುದ್ಧಂ ನಿಷಿದ್ಧಂ ಜಯಂ ಸಂದೆಯ ಮೆಂದಱೆವನಪ್ಪುದಱೆಂ ದೇವರ್ಗೆ ಬಲಕ್ಷಯಮಪ್ಪಂತು ಸಂಜೀವಕನು ಮೇನಾನುಮೊಂದಂ  ತಂತ್ರಿಸಿ ಸಂಸಾರಿಯುಂ ಪರಾಕ್ರಮಿಯುಮಪ್ಪ ನಿನಗೆ ದಿವ್ಯ  ಮುನಿಗೆ ಪೇೞ್ವಂತೆ ನಿವೃತ್ತಿಧರ್ಮಮಂ ಪೇೞ್ದೊಡದನೇ ಕ್ಷತ್ರಧರ್ಮಮಂ ಪತ್ತುವಿಟ್ಟು ನೀಂ  ನೆಗೞುತಿರ್ಪ ಕಾರಣಂ,

ಬಿಡದೀಗಳ್ ಮೃಗಯಾನಿಮಿತ್ತಮೆಸೆವೀ ಕಾಂತಾರದೊಳ್ ವ್ಯಾಧರಾ-
ಗಡೆಯತ್ಯಾಗ್ರಹದಿಂ ತೊೞಲ್ವರೞೆದಿತ್ತೀಗಳ್ ಮೃಗವ್ರಾತಮಿಂ
ಪಡೆಮಾತೇಂ ಮದಗಂಧಸಿಂಧುರ ಘಟಾಚಕ್ರಂ ಮನೋರಾಗದಿಂ
ಕುಡಿಗುಂ ಸಂತತಮೀಗಳಂಜದೆ ಭವತ್ಕ್ರೀಡಾಸರೋವಾರಿಯಂ  ೧೫೯

ಪಿರಿದಾಳಾ ಪದೊಳೇಂ ಮೃಗ
ಪರಿವೃಢ ನೀಂ ನಂಬು ನಂಬದಿರ್  ಕೈಕೊಳ್ ಮೇಣ್
ಪರಿಹರಿಸು ಗಂಧಸಿಂಧುರ
ವಿರೋ *ನಿನ್ನಿಚ್ಛೆ ನಿನಗಮಂಜದೆ ನುಡಿವೆಂ  ೧೬೦

ಹರಿಣೀನೇತ್ರೆಯನಬ್ಜಷಂಡಮುಖಿಯಂ  ಬಿಂಬೋಷ್ಠಿಯಂ ಕುಂದ ಸೌಂ-
ದರದಂತೋಜ್ಜ್ವಲೆಯಂ ಸುರೂಪವತಿಯಂ ಶ್ಯಾಮಾಂಗಿಯಂ ಭೂರಿಭೂ-
ಧರ ತುಂಗಸ್ತನೆಯಂ ಮಯೂರಕಚಭಾರಾಕ್ರಾಂತೆಯಂ ದೇವ  ಶಾ-
ಕ್ವರಚಕ್ರೇಶ್ವರನೀ ವನಪ್ರಮದೆಯಂ ಕೈಕೊಳ್ಳದೇಂ ಮಾಣ್ಬನೇ  ೧೬೧

ಶ್ಲೋ|| ಯಸ್ಮಿನ್ನೇ ವಾಕಂ ಭಾರಮರೋಪಯತಿ ಪಾರ್ಥಿವಃ
ಸುತೇ ವಾ  ತತ್ಕುಲೀನೇ ವಾ ಸ್ವಲಕ್ಮ್ಷೀಹರತೇ ತದಾ||೫೪||

ಟೀ|| ಅರಸಂ  ತನ್ನ ಮಗನಲ್ಲಿಯಾದೊಡಂ ತನ್ನ ಕುಲದಲ್ಲಿಯಾದೊಡಂ ಅವನೋರ್ವನ ಮೇಲೆ ರಾಜ್ಯಭಾರಮಂ ಹೊಱೆಸಿಯಿಹಂ ತಾನಾವ ನೈಶ್ವರ್ಯವನಪಹರಿಸಬೇಕಾಗಿ ಮಾಡಿದವಂ ಮತ್ತಮದನಲ್ಲದೆಯುಂ,

ಶ್ಲೋ|| ಮೂಲಭೃತ್ಯೇ ಸಾಪರಾಧೇಪ್ಯಾಗತಂ ತು ನ ಮಾನಯೇತ್
ಪೂರ್ವಾತ್ರಿತೇನ ರಾಜ್ಯಂ ಚ ಸಾಧ್ಯತೇ ನ  ಪರೇಣ  ಚ         ||೫೫||

ಟಿ|| ಪೞೆಯನಾಗಿರ್ದವನ ಮೇಲಪರಾಧದೊಡಂ ಪೊಸತಾಗಿ ಬಂದಾ ತಂಗೆ ಸತ್ಕಾರಮಂ ಮಾಡಲಾಗದು ; ತನ್ನ ಪೂರ್ವ್ವಾಶ್ರಿತನಲ್ಲದೆ ಮತ್ತೊರ್ವಂ ರಾಜ್ಯಮಂ ಸಾಸಲಱೆಯಂ, ಎಂಬ ನೀತಿಯುಂಟದಱೆಂದೀ ಸಂಜೀವಕನನಾಪ್ತನೆಂದು ಮಂತ್ರಿಯಂ ಮಾಡಿ ಕೊಂಡಾಡಿ ತೇಜವನಿತ್ತು  ಮೂಲಬಲ ಮನೆಲ್ಲಮನವಜ್ಞೆಗೈದು ವಿರಕ್ತ ಪ್ರಕೃತಿಯು ಮೇಕಾಕಿಯುಮಾದೆ. ಅದು ಕಾರಣದಿಂ ನಿನ್ನ ರಾಜ್ಯಕ್ಕಾತನೇ  ನೇತೃವಾದನೆಂದು  ನುಡಿದ ದವನಕನ ನಿಷ್ಟುರಾಲಾಪಂಗಳ್ಗೆ ಪಿಂಗಳಕಂ  ಕರಂ  ಮುಳಿದಿಂತೆಂದಂ :

೧೫೯. ಅದರಿಂದ  ನೀವು ಕ್ಷಾತ್ರ ಧರ್ಮವನ್ನು ತ್ಯಜಿಸುವಂತಾಯಿತು. ಮದ್ದಾನೆಗಳ ಹಿಂಡು ನಿರ್ಭಯವಾಗಿ ನಿಮ್ಮ  ಕ್ರೀಡಾ ಸರೋವರದ ನೀರನ್ನು ಕುಡಿಯುವಂತಾಯಿತು. ೧೬೦, ಮೃಗಾಪ ! ಹೆಚ್ಚು ಮಾತಿನಿಂದ ಏನು ಪ್ರಯೋಜನ? ನೀನು ನಂಬು ಬಿಡು ನಾನು ಹೇಳಿದ ವಿಚಾರವನ್ನು ಕೈಗೊಳ್ಳು, ಬಿಡು ಅದು ನಿನ್ನ ಇಷ್ಟ ; ನನಗೆನ್ನಿಸಿದುದನ್ನು ನಾನು ಅಂಜದೆ ನಿನಗೆ ತಿಳಿಸಿದೆ. ೧೬೧. ಜಿಂಕೆಗಳೆಂಬ ಕಣ್ಣುಗಳು, ತಾವರೆಗೊಳವೆಂಬ ಮುಖ, ಬಿಂಬಫಲದ ತುಟಿ ಮಲ್ಲಿಗೆಯ ಸೌಂದರ್ಯಗಳರುವ  ಶ್ಯಾಮಾಂಗಿಯಾದ, ನವಿಲುಗರಿಗಳ  ಸಿರಿಮುಡಿಯುಳ್ಳ ಈ ವನಸ್ತ್ರೀಯನ್ನು  ಆ ವೃಷಭನು  ಅಪಹರಿಸದೆ ಬಿಡುವನೆ. ಶ್ಲೋ || ಅಪರಾಧ ಮಾಡಿದ್ದರೂ ಹೊಸತಾಗಿ ಬಂದವನನ್ನು ಸತ್ಕರಿಸಬಾರದು. ಪೂರ್ವಶ್ರಿತನಲ್ಲದೆ  ಮತ್ತೊಬ್ಬನು ರಾಜ್ಯವನ್ನು ಸಾಸಲರಿಯನು ಎಂಬ ನೀತಿಯುಂಟು. ಈ ಸಂಜೀವಕನನ್ನು ಆಪ್ತನೆಂದು ಮಂತ್ತಿಯನ್ನಾಗಿ ಮಾಡಿ ಕೊಂಡಾಡಿ ಮೂಲಬಲವೆಲ್ಲವನ್ನೂ ಅವಜ್ಞೆಗೈದು ವಿರಕ್ತನೂ ಏಕಾಕಿಯೂ ಆದೆ. ಅದರಿಂದಾಗಿ ನಿನ್ನ ರಾಜ್ಯಕ್ಕೆ ಅವನೇ ಒಡೆಯನೆನಿಸಿದನು. ಹೀಗೆ ನೀಡಿದ ದವನಕನ ನಿಷ್ಠುರಾಲಾಪಕ್ಕೆ ಪಿಂಗಳಕನು ಸಿಟ್ಟಾಗಿ ಹೀಗೆಂದನು :

ದವನಕ ನೀನೇನೆಂದೊಡ-
ಮವಶ್ಯವಾಂ ಮುಳಿವುದಿಲ್ಲವಾ ಭದ್ರಮನಂ-
ಗೆ ವೃಷೋತ್ತಮಂಗೆ ಧರ್ಮೋ-
ಕ್ತಿವಿದಿತ ಸಂಜೀವಕಂಗೆ ನಿಷ್ಕಾರಣದಿಂ ೧೬೨

ಅದಱೆಂ ಸಂಜೀವಕನೆನನೇಗೆನೆಯ್ದೊಡಮೊಳ್ಳಿತ್ತು.ನೀನುಸಿರದಿರೆಂಬುದುಂ ಮತ್ತಂ ದವನನಿಂತೆಂದಂ :

ಶ್ಲೋ|| ಸ್ವಾಮಿಹಿತ ನಿಷ್ಠುರಾಣಂ ವಿಜ್ಞಾಪಯತಾಂ ಯಥೋಚಿತಂ ಕಾಲೇ
ಭೃತ್ಯಾನಾಂ ಯಸ್ತಸ್ಮಾನ್ ಮೃತ್ಯುರಪಿ ಶ್ಲಾಘನೀಯೋ ಸೌ ||೫೬||

ಟೀ|| ಭೃತ್ಯರೊಳಗಾವನಾನೊರ್ವಂ ವೇಳೆಯಲ್ಲಿ ಯಥೋಚಿತವಾಗಿ ಆಳ್ದಂಗೆ ಹಿತಮಪ್ಪ ನಿಷ್ಠುರಮಂ ಬಿನ್ನಪ್ಪಂಗೆಯ್ದಪನಾ ಭೃತ್ಯನೊಡೆಯನಿಂ ಹೊಲ್ಲೆಹಂ ಬಂದೊಡಂ ಕೊಂಡಾಡಬೇಕು, ಎಂಬುದುಪಜೀವಿಗೆ ಗುಣಮೆಂದು ಪೇೞ್ದ ನೀತಿಯುಂಟಪ್ಪುದಱೆಂ ನೀನೆನ್ನಂ ಏಗೆಯ್ದೊಡಮಕ್ಕುಂ, ಭವದೀಯ ರಾಜಲಕ್ಷ್ಮೀ ಗರ್ವಪರ್ವತಾರೂಢನುಂ ಬಲಾಕನುಮಪ್ಪ ಸಂಜೀವಕನಂ ಕಿಡಿಸುವುದೇ ನಯಂ. ಪೂರ್ವೋಕ್ತ ಮಿಂತೆಂಬುದಲ್ತೆ;

ಶ್ಲೋ|| ವಿರುದ್ಧಸ್ಯ ಚ ಭೃತ್ಯಸ್ಯ ದಂತಸ್ಯ ಚಲಿತಸ್ಯ ಚ
ಅಮಾತ್ಯಸ್ಯ ಚ ದುಷ್ಟಸ್ಯ  ಮೂಲಾದುದ್ಧರಣಂ ಸುಖಂ ||೫೭||

ಟೀ|| ಪಗೆಯಪ್ಪ ಭೃತ್ಯನಂ, ಅಲುಗಾಡುವ  ಹಲ್ಲಂ, ದುಷ್ಟನಪ್ಪ ಮಂತ್ರಿಯಂ ಬೇರ್ವೆರಿಸಿ ಕೀೞ್ವುದೇ ಸುಖಂ, ಅದೆಂತೆನೆ:

ಶ್ಲೋ || ಗಚ್ಚದೂರಮಪಿ ಯತ್ರನಂದಸೇ  ಪೃಚ್ಛ ಬಾಲಮಪಿ ಬುದ್ಧಿ ವಿಸ್ತರಂ
ದೇಹಿ ದೇಹಮಪಿ  ಪಾತ್ರ ಆಗೆತೇ ಛಿಂಚಿ ಬಾಹುಮಪಿ ದುಷ್ಟಮಾತ್ಮನಃ  ||೫೮||

ಟೀ|| ಎನಿತು ದೂರಮಾದೊಡಂ ತನಗೆ ಸುಖವುಂಟಾದಲ್ಲಿಗೆ ಪೋಪುದು. ಚಿಕ್ಕಾತನಾದೊಡಂ ಬುದ್ಧಿವಂತನಲ್ಲಿ ಕಾರ್ಯಮಂ ಕೇಳ್ವುದು: ಸತ್ಪಾತ್ರಕ್ಕೆ ಶರೀರವನಾದೊಡಂ ಕುಡುವುದು: ದೋಷಮುಳ್ಳೊಡೆ ತನ್ನ ತೋಳನ್ನಾದೊಡಂ ಕಡಿದು ಬಿಡುವುದು, ಎಂಬುದು ಅದೆಲ್ಲಮಂ ಕೇಳ್ದು ಪಿಂಗಳಕನಿತೆಂದಂ: ಸಂಜೀವಕನಪ್ಪೊಡೆನಗೆ ಪರಮವಿಶ್ವಾಸಿಯುಂ ಸದ್ಭೃತ್ಯನುಮಾಗಿರ್ಪನೆಂತು ತಪ್ಪುವನೆನೆ, ದವನಕನಿಂತೆಂದಂ; ಆವಂ ಭೃತ್ಯಾಭೃತ್ಯನೆಂಬುದನೇ ಕಾಂತಿಕಮಪ್ಪುದದೆಂತೆಂದೊಡೆ :

೧೬೨. ದವನಕ ! ಆ ಭದ್ರಮನಸ್ಕನೂ, ವೃಷೋತ್ತಮನೂ, ಧರ್ಮಾಜ್ಞನೂ ಎನಿಸಿದ ಸಂಜೀವಕನ ಬಗೆಗೆ ನಿಷ್ಕಾರಣವಾಗಿ ನೀನು ಏನೂ ಹೇಳಿದರೂ ನಾನು ಸಿಟ್ಟಾಗುವವನಲ್ಲ. ವ|| ಅದರಿಂದ ಸಂಜೀವಕನು ನನಗೆ ಏನು ಮಾಡಿದರೂ ಒಳ್ಳೆಯದಕ್ಕೆ;  ನೀನು ಸುಮ್ಮನಿರು ! ಬಳಿಕ ದವನಕನು ಹೀಗೆ ಹೇಳಿದನು. ಶ್ಲೋ|| ಯಾವ ಭೃತ್ಯನು ಸಕಾಲದಲ್ಲಿ ಯಥೋಚಿತವಾಗಿ ಒಡೆಯನಿಗೆ ಹಿತವಾದ ನಿಷ್ಠುರವನ್ನು ಬಿನ್ನಯಿಸುವನೋ ಅಂಥ ಸೇವಕ ತನ್ನ ಒಡೆಯನಿಂದ ಕೇಡುಂಟಾದರೂ ಕೊಂಡಾಡಬೇಕು ಎಂದು ನೀತಿಯುಂಟು. ಅದರಿಂದ ನೀನು ನನ್ನನ್ನು ಏನು ಮಾಡಿದರೂ ಅನುಭವಿಸುವೆ. ತಮ್ಮ  ರಾಜ್ಯಾಶ್ರಯದ  ಐಶ್ವರ್ಯವನ್ನು ಅನುಭವಿಸಿ ಗರ್ವಪರ್ವತಾರೂಢನೂ ಬಲಾಕನೂ ಆದ ಸಂಜೀವಕನನ್ನು ಕೆಡಿಸುವುದೇ ನೀತಿ. ಶ್ಲೋ|| ಹಗೆಯಾದ ಭೃತ್ಯನನ್ನು ಅಲುಗಾಡುವ ಹಲ್ಲನ್ನು ದುಷ್ಟನಾದ ಮಂತ್ರಿಯನ್ನೂ ಬೇರು ಸಹಿತವಾಗಿ ಕೀಳುವುದೇ ಸುಖಕರ. ಶ್ಲೋ|| ಎಷ್ಟೇ ದೂರವಿದ್ದರೂ ತನಗೆ ಸುಖವೆನಿಸಿದಲ್ಲಿಗೆ ಹೋಗುವುದು ; ಚಿಕ್ಕವನಾದರೂ ಬುದ್ಧಿವಂತನಲ್ಲಿ ಆಲೋಚನೆಯನ್ನು ಕೇಳುವುದು ; ಸತ್ಪಾತ್ರಕ್ಕೆ  ತನ್ನದೇಹವನ್ನಾದರೂ ಕೊಡುವುದು ; ದೋಷಯುಕ್ತವಾಗಿದ್ದರೆ ತನ್ನ ತೋಳನ್ನಾದರೂ ಕಡಿದು ಬಿಡುವುದು. ಅದೆಲ್ಲವನ್ನು ಕೇಳಿ ಪಿಂಗಳಕನು ಹೀಗೆಂದನು : ಸಂಜೀವಕನು ನನಗೆ ಪರಮ ವಿಶ್ವಾಸಿಯೂ,     ಸದ್ಭೃತ್ಯನೂ ಎನ್ನಿಸಿಕೊಂಡಿದ್ದಾನೆ. ಅಂಥವನು ನನಗೆ  ಹೇಗೆ ತಪ್ಪುವನು ?ಅದಕ್ಕೆ ದವನಕನು ಹೀಗೆ ಹೇಳಿದನು.

ಅರಸನೋಲೈಸುವರಾ-
ದರದಿಂ ಬಲಹೀನರಾಗಿ ಸೇವಕರೆಂದುಂ
ವರರಾಜ್ಯಂ ಶ್ರೀ ಸಹಿತಂ
ದೊರಕಲ್ ಕೈಕೊಳ್ಳದಿರ್ಪರಾರೀ ಜಗದೊಳ್  ೧೬೩

ಅದಲ್ಲದೆಯುಂ,ಶ್ಲೋ|| ನ ಚಾಸ್ತಿ ಪುರುಷೋ ರಾಜ್ಞಾಂ ಯೋ ನ ಕಾಮಯತೇ  ಶ್ರಿಯಂ
ಅಶಕ್ತಾಶ್ರಿಯಮಾನೇತುಂ ನರೇಂದ್ರಂ ಪರ‍್ಯುಪಾಸತೇ  ||೫೯||

ಟೀ|| ಅರಸರುಗಳ ಐಶ್ವರ‍್ಯಮಂ ಬಯಸದಿರ್ಪ ಮನುಷ್ಯರೆಂದುಮಿಲ್ಲ. ಅಶಕ್ತರಪ್ಪವರ್ ಬಹಳೈಶ್ವರ್ಯಮಂ ಪಡೆಯಬೇಕೆಂದರಸರನೋಲೈಸುವರ್,

ಶ್ಲೋ|| ಅನೇಕ ದೋಷದುಷ್ಟೋಪಿ ಕಾಯಃ ಕಸ್ಯ ನ ವಲ್ಲಭಃ
ಕುರುವನ್ನಪಿ ವ್ಯಲೀಕಾನಿ ಯಃ ಪ್ರಿಯಃ ಪ್ರಿಯ ಏವ ಸಃ  ||೬೦||

ಟೀ|| ಅನೇಕ ದೋಷದಿಂ ದುಷ್ಟಮಪ್ಪುದಾದೊಡಂ  ಶರೀರವಾರ್ಗೆ ಪ್ರಿಯವಲ್ಲ? ಅವಿವೇಕಿಗಳ್ ಶತ್ರುಕಪಟದಿಂ ಮಾೞ್ಪ ಹಿತಮಂ  ಕಂಡು ಪ್ರಿಯಮೆಂದೇ ಬಗೆವರ್

ಪ್ರಿಯನಾದನತ್ಯವಶ್ಯಂ
ಪ್ರಿಯನಕ್ಕುಂ ದುಷ್ಟನಾಗಿಯುಂ ಸಲೆ ದುಷ್ಟಾ-
ಶ್ರಯಮಾಗಿಯುಂ ಶರೀರಂ
ಪ್ರಿಯವಾದುದು ಸಕಲ ವಸುಮತೀತಳಕೆಲ್ಲಂ  ೧೬೪

ಅದಱೆಂ ಸಂಜೀವಕಂಗೆ ನೀಂ ಕೊರ್ಪೆಯಪ್ಪ ಕಾಣದಿಂದಾತನೆನಿತು ಪೊಲ್ಲಮೆಗೆಯ್ದನಾದೊಡ ಮೊಳ್ಳಿದನೆಂದು ನುಡಿದಪೆ. ಇದು ನಿನ್ನ ಅಜ್ಞಾನಮಲ್ಲದೆ  ಪರಮಜ್ಞಾನಮಲ್ಲೆಂದು ಮತ್ತಮಿಂತೆಂದಂ :

ಅನುಪಮಾಬಲಂ ಮಹಾಕಾ-
ಯನೆನಗೆ ಪಿರಿದುಂ ಸಹಾಯನೆಂದೇನಾನುಂ
ಮನದೊಳ್ ನೆನೆವೈ ವೃಷಭೇಂ-
ದ್ರನನದು ಕೂಡದು ಮೃಗೇಂದ್ರ ನಿನಗೀ ಪದದೊಳ್  ೧೬೫

ಅದೆಂತನೆ,  ಶ್ಲೋ || ಕಿಂ ಗಜೇನ ಪ್ರಮೆತ್ತೇನ ಕಿಂ ದುಷ್ಟೇನ ಚ ಮಂತ್ರಿಣಾ
ಕಿಂ ಧನೇನಾತಿದುಃಖೇನ ಕಿಂ ಮಿತ್ರೇಣ  ಶಠೇನ ಚ  ||೬೧||

ಟೀ|| ಸೊರ್ಕಿದಾನೆಯಿಂ, ದುಷ್ಟನಾದ ಮಂತ್ರಿಯಿಂ, ಹಿರಿದು ದುಃಖವಹ ಧನದಿಂ, ಕಪಟಿಯಾದ ಮಿತ್ರನಿಂದೇಂ ಪ್ರಯೋಜನಂ, ಅದುಕರಣದಿಂ ಸಂಜೀವಕನಪ್ಪೊಡೆ ನಿಮ್ಮಡಿಗೊಂದು ಪ್ರಯೋಜನ ಮಾತ್ರನಲ್ಲಂ, ಎನ್ನ ಬಿನ್ನಪವನಧರಿಸುವಿರಪ್ಪೊಡೆ ಪರಿಹರಿಸುವುದೆ ಕಾರ‍್ಯಮದಲ್ಲದಾಗಳ್ ಪಿರಿದುಮಪಾಯಮಕ್ಕುಮದೆಂತನೆ

ಶ್ಲೋ|| ಸತಾಂ ಮತಿಮತಿಕ್ರಮ್ಯ ಯೋ ಸತಾಂ ವರ್ತತೇ ವಶೇ
ಅಚಿರಾತ್ ಸಸ್ಥಿತಸ್ಥಾನೇ ದ್ವಿಷತಾಂ ವರ್ತತೇ ವಶೇ ||೬೨||

ಟೀ|| ಅವನೊರ್ವಂ ಸಜ್ಜನರ ಬುದ್ಧಿಯನತಿಕ್ರಿಮಿಸಿ ದುರ್ಜನರ ವಶದೊಳಿರ್ದಪಂ ಆತಂ ತಾನಿರ್ದ ಠಾವಿನಲ್ಲೆ ಹಗೆವರ್ಗೆ ಸಾಧ್ಯವಹಂ, ಅದಲ್ಲದೆಯುಂ,

ಶ್ಲೋ||  ಅಪ್ರಿಯಸ್ಯಾಪಿ ವಚಸಃ ಪರಿಣಾಮವಿರೋನಃ
ವಕ್ತಾ ಶ್ರೋತಾ ಚ ಯಾತ್ರಾಸ್ತಿ ರಮಂತೇ ತತ್ರ ಸಂಪದಃ||೬೩||

ಟೀ|| ಅಪ್ರಿಯವಾದೊಡಂ ಮೇಲೆ ಹಿತಕರಮಪ್ಪ ನುಡಿಯಂ ನುಡಿಯಬಲ್ಲವನುಂ ನುಡಿದುದನಱೆದು ಕೇಳಬಲ್ಲವನುಮೆಲ್ಲಿಯಂಟು ಅಲ್ಲಿ ಸಂಪತ್ತುಮಪ್ಪುವು.

ಮತ್ತಮಲ್ಲದೆಯುಂ,

ಶ್ಲೋ|| ಸುಲಭಾಃ ಪುರುಷಾ ರಾಜ್ಞಃ ಸತತಂ ಪ್ರಿಯವಾದಿನಃ
ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ  ||೬೪||

ಟೀ|| ಅರಸಿಂಗೆ ಎಲ್ಲಾ ಹೊತ್ತು ಹಿತವಂ ನುಡಿವ ಮನುಷ್ಯರ್ ಹಲವರುಂಟು: ಅಪ್ರಿಯವಾಗಿಯುಂ ಹಿತವಂ  ನುಡಿದವವನುಂ ಕೇಳಬಲ್ಲವನುಂ ದುರ್ಲಭಂ- ಎಂಬೀ ರಾಜನೀತಿಯ ಕ್ರಮಂಗಳನತಿಕ್ರಮಿಸಿ ನಡೆವುದು ಉಚಿತಮಲ್ಲೆಂದು ನುಡಿದ ದವನಕನ ಮಾತನಾಕರ್ಣಿಸಿ ಪಿಂಗಳಕನಿಂತೆದಂ :

ಶರಣಾಗತನೆಂದತ್ಯಾ-
ದರದಿಂ ಕೈ ಕೊಂಡು ಮಗುೞ್ದು ಸಂಜೀವಕಂ
ಪರಮಸ್ನೇಹಿತನಂ ಪರಿ-
ಹರಸುವನಲ್ಲೆಂ ಸಮಸ್ತಗುಣಸಂಯುತನಂ  ೧೬೬

ಅಂತುಮಲ್ಲದಾತಂಗಾನೇತಱೊಳಂ ಪೊಲ್ಲೆನಲ್ಲೆಂ, ಏನಾನುಂ ನಿರ್ಮಳಧರ್ಮಮಾರ್ಗಾನುವರ್ತಿಯಪ್ಪುದಱೆಂದೆನ್ನಂ ತನ್ನ ಸಹಧರ್ಮಿಯಪ್ಪಂತು ಧರ್ಮೋಪದೇಶಂಗೆಯ್ದನಪ್ಪುದಱೆಂ ಗುರುಸ್ಥಾನನುಂ ಶರಣಾಗತನಪ್ಪುದಱೆಂ  ಪುತ್ರಸ್ಥಾನನುಮರ್ಗಿಪಂ. ಅಂತಪ್ಪಾತಂಗೆಂತುಂ ತಪ್ಪುವನಲ್ಲೆಂ.

ಶ್ಲೋ || ಕ್ಷುದ್ರೇಪಿ ನೂನಂ ಶರಣಂ ಪ್ರಪನ್ನೇ
ಮಮತ್ವಮುಚ್ಚೈಶ್ಯಿರಸಾಂ ಸತೀವ  ||೬೫||

ಟೀ|| ದುಷ್ಟನಾದೊಡಂ ಶರಣ್ಬೊಕ್ಕನಲ್ಲಿ ಮಹಾಪುರುಷರ್ಗೆ ಪಿರಿದು ಸ್ನೇಹಮುಂಟಾಗಿಹುದು.

೧೬೩:  ಸೇವಕರು ಬಲಹೀನರಾದುದರಿಂದಲೇ ಅರಸರನ್ನು ಓಲೈಸುವರು. ಶ್ರೇಷ್ಟವಾದ ರಾಜ್ಯವು ಐಶ್ವರ್ಯಸಹಿತ ಸಿಕ್ಕುವುದಾದರೆ ಜಗತ್ತಿನಲ್ಲಿ  ಯಾರು ತಾನೇ ಅದನ್ನು ಬಯಸಲಿಕ್ಕಿಲ್ಲ ! ಅರಸರ ಐಶ್ವರ್ಯವನ್ನು ಬಯಸದಿರುವ ಮನುಷ್ಯರಿಲ್ಲ. ಶ್ಲೋ || ಅಶಕ್ತರಾದವರು ಬಹಳ ಐಶ್ವರ್ಯವನ್ನು ಪಡೆಯಬೇಕೆಂದು ಅರಸರನ್ನು ಓಲೈಸುವರು ಶ್ಲೋ || ಅನೇಕ ದೋಷಗಳಿಂದ ಕೆಟ್ಟುಹೋಗಿದ್ದರೂ ಶರೀರವು ಯಾರಿಗೆ ತಾನೇ ಪ್ರಿಯವಾಗಿಲ್ಲ? ಅವಿವೇಕಿಗಳು ಶತ್ರುವು ಕಪಟಬುದ್ಧಿಯಿಂದ ಮಾಡುವ ಹಿತವನ್ನು ಕಂಡು ಪ್ರಿಯವೆಂದೇ ನಂಬುವರು. ಅದರಿಂದ ಸಂಜೀವಕನ ಬಗೆಗೆ ನಿನಗೆ ವಿಶ್ವಾಸವಿರುವುದರಿಂದ ಆತನು ಎಂಥ ನೀಚಕಾರ್ಯ ಮಾಡಿದರೂ ಅವನು ಒಳ್ಳೆಯವನೆಂದು ನೀನು ನುಡಿಯುತ್ತಿರುವೆ. ಇದು ನಿನ್ನ ಅಜ್ಞಾನವೇ ಹೊರತು ಪರಮಜ್ಞಾನವಲ್ಲ. ೧೬೫. ಅನುಪಮಬಲನೆಂದೂ ಮಹಾಕಾಯನೆಂದೂ ಅತ್ಯಂತಸಹಾಯಕನೆಂದೂ ನಿನ್ನ ಮನಸ್ಸಿನಲ್ಲಿ ವೃಷಭೇಂದ್ರನ ಬಗೆಗೆ ವಿಶ್ವಾಸವಿಟ್ಟುಕೊಂಡಿರಬಹುದು ಹಾಗಿದ್ದಲ್ಲಿ ಅದು ಕೂಡದು. ಶ್ಲೋ|| ಸೊಕ್ಕಿದಾನೆಯಿಂದಲೂ ದುಷ್ಟಮಂತ್ರಿಯಿಂದಲೂ ಹಿರಿದಾದ ದುಃಖವನ್ನುಂಟು ಮಾಡುವ  ಧನದಿಂದಲೂ ಕಪಟಮಿತ್ರನಿಂದಲೂ ಏನು ಪ್ರಯೋಜನ? ಅದರಿಂದ ಸಂಜೀವಕನು ಮಹಾಪ್ರಭುಗಳಗೆ ಒಂದು ಪ್ರಯೋಜನಕ್ಕೂ ಬರುವವನಲ್ಲ. ನನ್ನ ಮಾತನ್ನು ಕೇಳುವಿರಾದರೆ ಅವನನ್ನು ನಿವಾರಿಸುವುದೇ ಸೂಕ್ತ: ಅಲ್ಲದಿದ್ದರೆ ದೊಡ್ಡ ಅಪಾಯವುಂಟು. ಶ್ಲೋ|| ಯಾವನು ಸಜ್ಜನರ ಬುದ್ಧಿಯನ್ನು ಅತಿಕ್ರಮಿಸಿ ದುರ್ಜನರ ವಶದಲ್ಲಿರುವನೋ ಅವನು ತಾನಿದ್ದ ಸ್ಥಳದಲ್ಲಿಯೇ ಹಗೆಯ ವಶವಾಗುವನು.  ಶ್ಲೋ|| ಅಪ್ರಿಯವಾದರೂ ಮುಂದೆ ಹಿತಕರವಾದ ನುಡಿಯನ್ನು ಹೇಳಬಲ್ಲವನೂ ಹೇಳಿದುದನ್ನೂ ತಿಳಿದು ಕೇಳಬಲ್ಲವನೂ ಇರುವಲ್ಲಿ ಸಂಪತ್ತು ಇರುವುದು. ಅರಸನಿಗೆ ಸದಾಕಾಲವೂ ಹಿತವಾದುದನ್ನು ನುಡಿಯಬಲ್ಲ. ಮನುಷ್ಯರು ಅನೇಕರಿರುವರು. ಅಪ್ರಿಯವಾದರೂ ಹಿತವನ್ನು ಹೇಳುವವನೂ ಕೇಳಬಲ್ಲವನೂ ಸಿಕ್ಕುವುದು ದುರ್ಲಭ. ಈ ರಾಜನೀತಿಯ ಕ್ರಮಗಳನ್ನು ಅತಿಕ್ರಮಿಸಿ ನಡೆಯುವುದು ಉಚಿತವಲ್ಲ ಎಂದು  ನುಡಿದ ದವನಕನ  ಮಾತನ್ನು ಕೇಳಿ ಪಿಂಗಳಕನು ಹೀಗೆಂದನು: ೧೬೬. ಶರಣಾತಗತನೆಂದು ಅತ್ಯಾದರದಿಂದ ಸಂಜೀವಕನನ್ನು ಸ್ವೀಕರಿಸಿ ಈಗ ಅಂಥ ಪರಮ ಸ್ನೇಹಿತನನ್ನು ನಾನು ಬಿಡಲಾರೆ. ವ|| ಅಲ್ಲದೆ ಆತನ ಬಗೆಗೆ ನಾನು ಇಷ್ಟರವರೆಗೆ ಯಾವುದರಲ್ಲೂ ದುಷ್ಟನಾಗಿ ವರ್ತಿಸಲಿಲ್ಲ. ಏನಾದರೂ ಸದ್ಧರ್ಮಮಾರ್ಗಾನುವರ್ತಿ ಯಾಗುವುದಾದಲ್ಲಿ ತನ್ನ ಸಹಧರ್ಮಿಯಾಗುವಂತೆ ಧರ್ಮೋಪದೇಶ ಮಾಡಿದುದರಿಂದ ಗುರುಸ್ಥಾನನೂ ಶರಣಾಗತನಾದುದರಿಂದ ಪುತ್ರಸ್ಥಾನನೂ ಆಗಿರುವನು. ಅಂಥವನಿಗೆ ಏನಾದರೂ ನಾನು ತಪ್ಪಲಿಕ್ಕಿಲ್ಲ. ಶ್ಲೋ || ದುಷ್ಟನಾದರೂ ಶರಣುಬಂದವನಲ್ಲಿ ಮಹಾಪುರುಷರಿಗೆ ಹಿರಿಯ ಸ್ನೇಹವುಂಟಾಗುವುದು.

ಸುರಪತಿ ಗೃಧ್ರನಾಗಿ ತಗುಳಲ್ ಮಱೆಪೊಕ್ಕ ಕಪೋತನಂ ಕ್ಷಿತೀ-
ಶ್ವರ ಕುಲಚಕ್ರವರ್ತಿ ಶಿಬಿಯೆಂಬ ನೃಪೋತ್ತಮನಾತ್ಮಮಾಂಸಮಂ
ಸುರಪತಿಗಿತ್ತು ರಕ್ಷಿಸಿ ಪಯೋಪರೀತಧರಿತ್ರಿ ಬಣ್ಣಿಸು-
ತ್ತಿರೆ ತಳೆದಂ ಶರತ್ಸಮಯ ಚಂದ್ರಕರೋಜ್ವ್ಜಲ ರುಂದ್ರಕೀರ್ತಿಯಂ  ೧೬೭

ಆತತಕೀರ್ತಿ ರಾಮನೃಪನಾತ್ಮಕುಲಾಂಗನೆಯಂ ಮನೋಜ್ಞೆಯಂ
ಸೀತೆಯನುಯ್ದ ರಾವಣನ ತಮ್ಮನನಾತನ ಪಕ್ಷವೆನ್ನದೀ
ಭೂತಳವಾಸಿಗಳ್ ಪೊಗೞೆರಕ್ಷಿಸಿ  ತುಂಗನಿಜಪ್ರತಾಪಮಂ
ಸೇತುವರಂ ನಿಮಿರ್ಚಿ ತಳೆದಂ ಜಸಮಂ ರಘುವಂಶಮಂಡನಂ  ೧೬೮

ಕುಲಿಶಾಸ್ತ್ರಭೀತಿಯಿಂ ಬರೆ
ಜಲನಿ ಮುಂ ಮಱೆಗೆ ಕುಲಪರ್ವತ ಸಂ-
ಕುಲಮಂ ರಕ್ಷಿಸಿ ತಳೆದ-
ತ್ತಳಘುತರಶ್ರೀಯನಸಮಗಂಭೀರತೆಯಂ  ೧೬೯

ಎಂದು ನುಡಿದ ಪಿಂಗಳಕಂಗೆ ದವಕನಿಂತೆಂದಂ: ದೇವಾ ! ಸಂಜೀವಕಂ ನಿಮ್ಮಡಿಯಾಪತ್ಯಮಂ ಕೊಳಲ್ ಬಂದು ಮುನ್ನಮೆ ತನ್ನ ಗರ್ಜನೆಗೆ ಭಯಂಬಟ್ಟೀ ನೆಲನಂ ಪತ್ತವಿಟ್ಟು ಪೋಪಂತು ಮೞ್ಪೆನೆಂದು ಸಮಕಟ್ಟಿಕೊಂಡು ಬಂದಿರ್ದಂ. ಅದಲ್ಲದೆಯುಂ ಅದು ಕಡೆ ಸಲ್ಲದಿರ್ದೊಡೆ ಭಯಸ್ಥನಾಗಿ ಬಂದು ನಿಮಗೆ ಶರಣಾಗತನಾದಂ ಬಕವೇಷಿಯುಂ ಬದ್ಧದ್ವೇಷಿಯುಂ ಬುದ್ಧಿವಂತನುಮಪ್ಪುದಱೆಂ.

ಶ್ಲೋ|| ಸ್ವಾರ್ಥಮುದ್ಧರತೇ ಪ್ರಾಜ್ಞಃ ಸ್ವಾರ್ಥಭ್ರಂಶೋ ಹಿ ಮೂರ್ಖತಾ ||೬೬||

ಟೀ|| ಬುದ್ಧಿವಂತನಪ್ಪುದಱೆಂ ತನ್ನ ಕಾರ‍್ಯವನೆ ಮಾಡಿಕೊಳ್ವುದು: ತನ್ನ ಕಾರ‍್ಯವಂ ಕೆಡಿಸುವುದೆ ಮೂರ್ಖತೆ, ಅದು ಕಾರಣಂ ತನ್ನ ಕಾರ‍್ಯವಪ್ಪನ್ನೆವರಮಾತಂ,

ಶ್ಲೋ|| ಬಹಿಸ್ಸರ್ವಕಾರಪ್ರವಣ ರಮಣೀಯಂ ವ್ಯವಹರನ್
ಪರಾನೂಹ್ಯಸ್ಥಾನಾನ್ಯಪಿ ತನುತರಾಣಿ ಸ್ಥಗಯತಿ
ಜಗದ್ವಿದ್ದಾನೇವಂ ನಿಪುಣಮತಿಸಂಧಾಯ ಕಪಟೈಃ
ತಟಸ್ಥ ಸ್ವಾನರ್ಥಾನ್ ಘಟಯತಿ ಚ ಮೌನಂ ಚ ಭಜತೇ||೬೭||

ಟೀ|| ಬಹಿರಾಕಾರವೆಲ್ಲಂ ಚೆಲ್ವಾಗಿರ್ಪಂತು ವ್ಯವಹರಿಸುವಂ: ಪರರ ದೆಸೆಯಿಂ ತನ್ನ ಮರ್ಮಸ್ಥಾನಂಗಳನತ್ಯಂತ ಸೂಕ್ಷ್ಮಮಾದೊಡಂ ಮಱಸುವಂ ಪ್ರೌಢತರಬುದ್ಧಿಯನುಂಟು ಮಾಡಿ ನಿರ್ವಾಹೋಪಾಯಂಗಳಿಂ ತಟಸ್ಥನಾಗಿ ತನಗೆ ಪ್ರಯೋಜನಮಪ್ಪುದಂ ಮಾಡಿಕೊಳುತ್ತುಂ ನುಡಿಯದಿಹಂ ಎಂಬ ನೀತಿಯೊಳಾತಂ ಪರಿಣತನಪ್ಪುದಱೆಂ ತನ್ನ ಮಾೞ್ಪ ಕಜ್ಜಮನೆನ್ನರುಮಱೆಯದಂತು ನೆಗೞ್ದಪಂ. ಪಾವು ಪಾವಿನ ಪಜ್ಜೆಯನಱೆವಂತೆಮ್ಮಂದಿಗರ್ಗಲ್ಲದಾತನಭಿಪ್ರಾಯಮಂ ಪೆಱರ್ಗಱೆಯಲ್ ಬಾರದು. ಆ ಧೂರ್ತಂ ಸ್ವಾರ್ಥಸಿದ್ಧಿಯಪ್ಪನ್ನೆವರಮಿಂತಿರ್ದಪನಲ್ಲದೆ ತನ್ನ ದುರ್ಜನತ್ವಮನೆಂತುಂ ಬಿಡಂ ಅದೆಂತನೆ:

ಶ್ಲೋ|| ದುರ್ಜನಃ ಪ್ರಕೃತಿಂ ಯಾತಿ ಸೇವ್ಯಮಾನೋಪಿ ಯತ್ನತಃ
ಸ್ವೇದನಾಭ್ಯಂಜನೋವಾಯೈಃ ಶ್ವಪುಚ್ಛಮಿವ ನಾಮಿತಂ  ||೬೭||

ಟೀ|| ದುರ್ಜನಸ್ವಾಭಾವಮಂ ಕಂಡು ಯತ್ನದಿಂ ನಡೆಸುವೊಡಂ ನೈಜಗುಣಂ ಬಿಡದು. ಅದು ಎಹಗೆಂದೊಡೆ ನಾಯಬಾಲಮಂ ಕಾಸಿ ತಿರ್ದಿದೊಡಂ ಕೊಂಕು ಮಾಣದಹಗೆ- ಎಂದು ನುಡಿದ ಮೃಗಧೂರ್ತಕನ ನುಡಿಯಂ ಪಿಂಗಳಕಂ ಕೇಳ್ದು : ಈ ಪಾಪಿಗಾ ಪಶುವಿನ ಮೇಲೆ ಕೋಪಂ ಪೋದುದಿಲ್ಲೇಗೆಯ್ವೆನೆಂದು ಬೆಱಗಾಗಿ ಮಾಱುಮಾತಂ ಕುಡಲಱೆಯದಿರ್ದನಂ ಕಂಡು ದವನಕನಿಂತೆಂದಂ; ದೇವಾ ! ನಿಮ್ಮ ಮುನ್ನಿನ ಭವದ ಅಗಣ್ಯಪುಣ್ಯೊದಯದಿಂ ಮೃಗಾ ರಾಜನಾಗಿ ಪುಟ್ಟಿದೆ: ಎಮ್ಮಂತಪ್ಪ ಪೞೆಯರುಮನಾಪ್ತರುಮನವಜ್ಞೆಗೆಯ್ದೆಲ್ಲಿಯಾನುಂ ಬಂದ ಚಲ್ಲವೊತ್ತನ ಬೆಲ್ಲವಾತುಗಳಂ ಕೈಕೊಂಡು ರಾಜ್ಯಮಂ ಕಿಡಿಸಲ್ಬಗೆದೆಯಪ್ಪೊಡದನುಪೇಕ್ಷಿಸಲ್ಬಾರದೆಂತನೆ:

ಶ್ಲೋ || ನೃಪಃ ಕಾಮಾಸಕ್ತೋ ನ ಗಣಯತಿ ಕಾರ್ಯಂ ನ ಚ ಹಿತಂ
ಯಥೇಷ್ಟಂ ಸ್ವಚ್ಛಂದೋ ವಿಹರತಿ ಚ ಮತ್ತೋ ಗಜ ಇವ  ||೬೮||

ತದಾಧಾತ್ಮಃ ಪಶ್ಚಾತ್ಪತ್ತತಿ ಸ ಯದಾ ಶೋಕ ಗಹನೇ
ತದಾಮಾತ್ಯೇ ದೋಷಾನ್ ಕ್ಷಿಪತಿ ನ ನಿಜಂ ವೇತ್ಯವಿನಯಂ     ||೬೯||

ಟೀ|| ಒಂದಿಚ್ಛೆಯಲ್ಲಿ ಆಸಕ್ತನಾಗಿರ್ದರಸು ತನಗೆ ಕಾರ‍್ಯವಂ ತನಗೆ ಹಿತವಪ್ಪುದಂ ಬಗೆಯಂ, ಮದಸೊರ್ಕಿದಾನೆಯಂತೆ ತನ್ನಿಚ್ಛೆಯಿಂ ಬೇೞ್ಪನಿತು ವಿಸಟಂಬರಿವಂ. ಅವುರ್ಬಿಂದೊದುಬಾರಿ ದುಃಖಬಡೆವಂ, ಆ ವೇಳೆಯಲ್ಲಿ ಸ್ವಭಾವವಿನಯಮಂ ಬಿಟ್ಟು ಪ್ರಧಾನನ ಮೇಲೆ ದೋಷಂಗಳನಾರೋಪಿಸುವಂ, ಮತ್ತಮದಲ್ಲದೆಯುಂ,

ಜನನಾಥಂ ಕಾಮಾಸ-

ಕ್ತನಾಗಿ ಮದದಂತಿಯಂತೆ ಚರಿಯಿಸಿ ತುದಿಯೊಳ್
ತನಗಾಪತ್ತಾದೊಡಮಾ-
ತ್ಯನಿಂದಮಾಯ್ತೆಂಗುಮಱೆಯನಾತ್ಮಸ್ಥಿತಿಯಂ – ೧೭೦

ಅದಱೆಂ

ಆಗ್ರಹದಿಂ ಬಾರಿಪುದು ದು-
ರಾಗ್ರಹನನಕಾರ್ಯಮಾರ್ಗಯುಕ್ತನನಾಕೇ-
ಶಗ್ರಹಣಾಂತ ಸಾಧುಜ-
ನಾಗ್ರಣಿಯುಂ ಹಿತನುಮೆನಿಪ ಸಚಿವಂ ನೃಪನಂ  ೧೭೧

ಎಂದಿತು ದವನಕಂ ನೂಱೆಯುಂ ತೋಱೆ ನುಡಿಯೆ, ಪಿಂಗಳಕಂ ಕಿನಿಸಿ ಕೆರಳ್ದು ಕಿಡಿಕಿಡಿವೋಗಿ, ಪಲವು ಮಾತಿನೊಳೇಂ, ಈ ಬೂತಂ ನಿರುತ್ತರಂ ಮಾಡಿದಪೆನೆಂದಿಂತೆಂದಂ : ಎಲವೋ ! ನೀಂ ಪೞಮೆಯನೆ ತೋಱೆ ಕೀರಿ ಕಿಡೆ ನುಡಿದಪೆ ,ಒಂದೆಡೆಗೆ ಪೞೆಯನಿಂ ಪೊಸಂಬನೆ ಲೇಸು.

ಅದೆಂತನೆ ,ಶ್ಲೋ|| ಮೂಷಕಾ ಗೃಹಜಾತಾಶ್ಚ ಹಂತವ್ಯಾಹ್ಯಪಕಾರಿಣಃ
ಉಪಪ್ರದಾನೈರ್ಮಾರ್ಜಾರೋ ಹಿತಕೃದ್ರಕ್ಷ ತೇ ಬುಧೈಃ ||೭೦||

ಟೀ|| ಇಲಿಗಳ್  ಮನೆಯಲ್ಲಿ ಪುಟ್ಟಿದುವಾದೊಡಂ ಅಪಕರಿಗಳಾದುದಱೆಂ ಕೊಲ್ಲಿಸಿ ಕೊಂಬುವು. ಲೋಗರ ಕೈಯಲ್ಲಿ ಕೊಂಡು ಸಲಹಿದ ಬೆಕ್ಕು ಹಿತಂ ಮಾಡುವ ಕಾರಣದಿಂ ರಕ್ಷಿಸಿ ಕೊಳಲ್ಪಟ್ಟುದು. ಮತ್ತಮಲ್ಲದೆಯುಂ

ಇಲಿಗಳ್ ಮನೆಯೊಳ್ ಪುಟ್ಟಿಯು-
ಮಲಸದೆ ತವೆ ತೋಡಿ ಮೆನಗಳಂ ಕಿಡಿಸುವವೊಲ್
ಖಲನೆನಿತು ಪೞೆಯನಾದೊಡ-
ಮಿಲೇಶ್ವರಂಗೞೆವನೊಡರಿಕುಂ ದುಷ್ಟತೆಯಿಂ  ೧೭೨

ಅದಱೆಂ ಕೇವಳಂ ಪೞಮೆಯೇ ಪ್ರಯೊಜನಮಿಲ್ಲ. ನೀಂ ಪೞೆಯನಾದೊಡಂ ಧೂರ್ತನು ಮಪ್ರಯೋಜಕನುಮಪ್ಪೆ: ಗೞಪದಿರ್, ಅನುಮಾತನುಂ ಪರಸ್ಪರೋಪಕಾರಿಗಳದಱೆಂದೋರೋರ್ವರ್ಗೆ ತಪ್ಪುವರಲ್ಲೆನೆ ದವನಕನಿಂತೆಂದಂ :  ದೇವಾ ! ಸಂಜೀವಕನಪ್ಪೊಡೆ ನೀಚನುಂ  ನಿಸ್ತ್ರಿಂಶನುಮಾಗಿರ್ದನವನಂ ನಂಬಿದಂದು ಪೊಲ್ಲಮಕ್ಕುಮದೆಂತೆನೆ :

ಶ್ಲೋ || ಉಪಕರ್ತರಿ ಸಜ್ಜನೇಪಿ ನೀಚಃ ಕೃತಕಸ್ತ್ಯಪಕರ್ತುಮೀಹತೇ
ಅತಏವ ಹತೋ ವನೇ  ಸುಪುತ್ರೋಹ್ಯುಪಕರ್ತಾ ಕಥಕೇನ ವಾನರಃ ||೭೧||

ಟೀ|| ಉಪಾಕಾರವಂ ಮಾಡಿದ ಸಜ್ಜನನಲ್ಲಿಯಾದೊಡಂ ನೀಚನಾಗಿರ್ದವನಪಕಾರವನೇ ಮಾಡಲುದ್ಯೋಗಿಸುವಂ, ಅದೆಹಗೆಂದೊಡೆ ವನದೊಳ್ ತನ್ನ ಮಱೆಗಳೊಡಗೂಡಿರ್ಪುದೊಂದು  ವಾನರಂ ಕಥಕನೆಂಬ ಬೇಡಂಗುಪಕಾರವಂ ಮಾಡಿ ಕೊಲಿಸಿಕೊಳಲ್ಪಟ್ಟುದು ಎಂಬ ಕಥೆಯಂತಕ್ಕುಮೆನೆ, ಪಿಂಗಳಕದೆಂತೆನೆ ದವನಕಂ ಪೇೞ್ಗುಂ:

೧೬೭. ಹಿಂದೆ ದೇವೇಂದ್ರನು ಗೃಧ್ರವೇಷದಿಂದ ಬಂದಾಗ ಮರೆಹೊಕ್ಕ ಪಾರಿವಾಳವನ್ನು ರಕ್ಷಿಸಲು ಶಿಬಿಚಕ್ರವರ್ತಿಯು ತನ್ನ ಮಾಂಸವನ್ನು ದೇವೇಂದ್ರನಿಗೆ ಕೊಟ್ಟು ಮೂರು ಲೋಕವೂ ಅವನ ದಾನಗುಣವನ್ನು ಬಣ್ಣಿಸುವಂತಾಯಿತು. ೧೬೮. ಶ್ರೀರಾಮನು ತನ್ನ ಸತಿಯಾದ ಸೀತೆಯನ್ನು ರಾವಣ ಕದ್ದೊಯ್ದರೂ ಅವನ ತಮ್ಮ ವಿಭೀಷಣನು ಶ್ರೀರಾಮನ ಮರೆಹೋಗಲು ಅವನನ್ನು ರಕ್ಷಿಸಿ ರಘುವಂಶಮಂಡನನೆನಿಸಿದನು. ೧೬೯. ದೇವೇಂದ್ರನ ವಜ್ರಾಯುಧದ ಹತಿಯನ್ನು ತಪ್ಪಿಸಿಕೊಳ್ಳಲೂ ತನ್ನ ಆಶ್ರಯಕ್ಕೆ ಬಂದ ಕುಲಪರ್ವತಗಳನ್ನು ರಕ್ಷಿಸಿ ಜಲನಿಯು ತನ್ನ ಅಸಮಗಂಭೀರತೆಯನ್ನು ಮೆರೆಯಿತು. ವ||ಈ ರೀತಿ  ಹೇಳಿದ  ಪಿಂಗಳಕನಿಗೆ ದವನಕನು ಹೀಗೆ ನುಡಿದನು : ದೇವಾ ! ಸಂಜೀವಕನು ನಿಮ್ಮ ಅಪತ್ಯವನ್ನು ವಶಪಡಿಸಿಕೊಳ್ಳಲು ಬಂದ ಮೊದಲೇ ತನ್ನೊಂದು ಗರ್ಜನೆಗೆ ಭಯಪಟ್ಟು  ಈ ನೆಲವನ್ನು ಬಿಟ್ಟು ಹೋಗುವಂತೆ ಸ್ಪರ್ಧೆಯಿಂದ  ಇಲ್ಲಿಗೆ ಬಂದಿರುವನು. ಅದಾಗದಿರುವುದರಿಂದ ಭಯದಿಂದ ನಿಮಗೆ ಶರಣಾಗತನಾದನು. ಅಲ್ಲದೆ ಅವನು ಬಕವೇಷಿಯೂ ಬದ್ಧ ದ್ವೇಷಿಯೂ ಬುದ್ದಿವಂತನೂ ಆಗಿರುವುದರಿಂದ ಶ್ಲೋ|| ಬುದ್ಧಿವಂತನಾದನು ತನ್ನ ಕಾರ್ಯವನ್ನು ಮಾಡಿಕೊಳ್ಳತಕ್ಕದ್ದು. ಅದರಿಂದ ತನ್ನ ಕಾರ್ಯವಾಗುವರೆಗೆ ಆತನು ಬಾಹ್ಯಕಾರವೆಲ್ಲ ಚೆನ್ನಾಗಿರುವಂತೆ ವ್ಯವಹರಿಸುವನು: ಪರರಿಗೆ ತನ್ನ ಮರ್ಮಸ್ಥಾನಗಳನ್ನು ತೋರಿಸುವುದಿಲ್ಲ. ಪ್ರೌಢಬುದ್ಧಿಯಿಂದ ಉಪಾಯಗಳನ್ನೊಡ್ಡಿ ತಟಸ್ಥನಾಗಿದ್ದು ತನಗೆ ಪ್ರಯೋಜನವಾದುದನ್ನು ಮಾಡಿಕೊಳ್ಳುತ್ತ ಮೌನವಾಗಿರುವನು. ಈ ನೀತಿಯಲ್ಲಿ ಸಂಜೀವಕನು ನಿಪುಣನಾದುದರಿಂದ ತಾನು ಮಾಡುವ ಕಾರ್ಯವನ್ನು ಯಾರಿಗೂ ತಿಳಿಯದಂತೆ ಮಾಡುವನು. ಹಾವು ಹಾವಿನ ಹೆಜ್ಜೆಯನ್ನು ಅರಿಯುವಂತೆ ನಮ್ಮವರಿಗಲ್ಲದೆ ಅವನ  ವಿಚಾರವನ್ನು ಬೇರೆಯವರು ಅರಿಯುವುದು ಅಸಾಧ್ಯ. ಆ ಧೂರ್ತನು ಸ್ವಾರ್ಥಸಿದ್ಧಿಯಾಗುವರೆಗೆ ಹೀಗಿದ್ದು ತನ್ನ ದುರ್ಜನತ್ವವನ್ನು ಎಂದಿಗೂ ಬಿಡನು. ಶ್ಲೋ || ದುರ್ಜನ ಸ್ವಭಾವವನ್ನು ಕಂಡು ಯತ್ನದಿಂದ ನಡೆಯಿಸಿದರೂ ನೈಜಗುಣ ಬಿಡದು. ನಾಯಬಾಲವನ್ನು ಕಾಸಿ ತಿದ್ದಿದರೂ ಅದರ ಡೊಂಕು ಪರಿಹರಿಸದು. ಮೃಗಧೂರ್ತನ ಮಾತನ್ನು ಪಿಂಗಳಕನು  ಕೇಳಿ ಈ ಪಾಪಿಗೆ ಆ ಪಶುವಿನ ಮೇಲಿನ ಕೋಪ ಹೋಗಿಲ್ಲ ;  ಏನು ಮಾಡಲಿ ಎಂದು ಬೆರಗಾಗಿ ಮರು ನುಡಿಯಲಾರದೆ ಇದ್ದ ಪಿಂಗಳಕನನ್ನು ಕಂಡು ದವನಕನು ಹೀಗೆಂದನು: ದೇವಾ ! ನಿಮ್ಮ ಪೂರ್ವಜನ್ಮದ ಅಗಣ್ಯಪುಣ್ಯದಿಂದ ಮೃಗಾರಾಜನಾಗಿ ಹುಟ್ಟಿದೆ, ನಮ್ಮಂಥ ಹಳೆಯರನ್ನೂ ಆಪ್ತರನ್ನೂ ಅವಜ್ಞೆಗೈದು ಎಲ್ಲಿಂದಲೋ ಬಂದ ಚಾಡಿಕೋರನ  ಬೆಲ್ಲವಾತುಗಳನ್ನು ಕೈಕೊಂಡು ರಾಜ್ಯವನ್ನು ಕೆಡಿಸಲು ಬಗೆದೆಯಾದರೆ ಅದನ್ನು ಉಪೇಕ್ಷಿಸಬಾರದು. ೧೭೦. ಕಾಮಾಸಕ್ತನಾದ ಅರಸನು ತನ್ನ ಹಿತವನ್ನು ಬಗೆಯನು. ಮದ್ದಾನೆಯಂತೆ ತನ್ನ ಇಚ್ಛಾನುಸಾರವಾಗಿ ಅಲೆದಾಡುವನು. ಆ ಮದದಿಂದ ಮಹಾದುಃಖವನ್ನು  ಅನುಭವಿಸುವನು. ಆ ಸಮಯದಲ್ಲಿ ಸ್ವಭಾವಸಹಜವಾದ ಅವಿನಯವನ್ನು ಬಿಟ್ಟು ಪ್ರಧಾನನ ಮೇಲೆ ದೋಷವನ್ನು ಆರೋಪಿಸುವನು. ಅದರಿಂದ ಬಲವಂತವಾಗಿ ೧೭೧. ಅಕಾರ್ಯಮಾರ್ಗಯುಕ್ತನಾದ ಆ ದುರಾಗ್ರಹನನ್ನು ತೊರೆಯುವುದು ವಿಹಿತ. ವ|| ಹೀಗೆಂದು ದವನಕನು ಸೂಕ್ಷ್ಮವನ್ನು ಹೇಳಲು ಪಿಂಗಳಕನು ಕಿಡಿಕಿಡಿಯಾಗಿ ಹಲವು ಮಾತಿನಿಂದೇನು ಪ್ರಯೋಜನ? ; ಈ ಬುತನ್ನು ನಿರುತ್ತರಗೊಳಿಸುವೆನದೆಂದು ಹೀಗೆ ನುಡಿದನು: ಎಲವೋ ! ನೀನು ಹಳೆಯದನ್ನೇ ಹೇಳಿ ಹೇಳಿ ನೀಚವಾದುದನ್ನು ನುಡಿಯುತ್ತಿರುವೆ. ಒಂದು ದೃಷ್ಟಿಯಿಂದ ಹಳೆಯನಿಗಿಂತ ಹೊಸಬನೆ ಲೇಸು. ಶ್ಲೋ || ಇಲಿಗಳು ಮನೆಯಲ್ಲಿ ಹುಟ್ಟಿದುವಾದರೂ ಅಪಕಾರಿಗಳಾಗಿರುವುದರಿಂದ ಕೊಲ್ಲಿಸಿಕೊಳ್ಳುವುವು.  ಜನರ ಕೈಯಿಂದ ಕೊಂಡು ಸಾಕಿದ ಬೆಕ್ಕು ಹಿತವನ್ನುಂಟು ಮಾಡುವುದರಿಂದ ಬದುಕಿ ಉಳಿದುಕೊಳ್ಳುತ್ತದೆ ! ವ|| ಅದರಿಂದ ಕೇವಲ ಹಳಮೆಯಿಂದ ಪ್ರಯೋಜನವಿಲ್ಲ. ನೀನು ಹಳೆಯನಾದರೂ ಧೂರ್ತನೂ ಅಪ್ರಯೋಜಕನೂ ಆಗಿರುವೆ ಹರಟಬೇಡ. ನಾನೂ ಆತನೂ ಪರಸ್ಪರ ಉಪಕಾರಿಗಳಾದುದರಿಂದ ಪರಸ್ಪರ ತಪ್ಪುವುದಿಲ್ಲ. ಅದಕ್ಕೆ ದವನಕನು ಹೀಗೆಂದನು: ದೇವಾ! ಸಂಜೀವಕನು ನೀಚನೂ  ನಿಸ್ತ್ರಿಂಶನೂ ಆಗಿರುವುದರಿಂದ ಅವನನ್ನು ನಂಬಿದರೆ ಕೇಡು ಸಂಭವಿಸದೆ ಇರದು. ಶ್ಲೋ || ಉಪಾಕಾರವನ್ನು ಮಾಡಿದ ಸಜ್ಜನನಿಗಾದರೂ ನೀಚನಾದವನು ಅಪಕಾರವನ್ನೇ ಎಣಿಸುವನು. ವನದಲ್ಲಿ ತನ್ನ ಮರಿಗಳೊಡಗೂಡಿಕೊಂಡಿದ್ದ ಒಂದು ವಾನನರನು ಕಥಕನೆಂಬ ಬೇಡನಿಗೆ ಉಪಾಕಾರವನ್ನು ಮಾಡಿ ಅವನಿಂದ ಕೊಲ್ಲಿಸಿಕೊಂಡಿತು. ಆ ಕಥೆಯಂತೆ ಆದೀತು ಎನ್ನಲು ಪಿಂಗಳಕನು ಅದೇನು ಎಂದು ಕೇಳಲು ದವನಕನು ಹೇಳತೊಡಗಿದನು: