ಪ್ರಜಾಪಾಲನೆಂಬರಸು ಲೀಲೋದ್ಯಾನವನದೊಳ್ ಜಲಕೇಳಿ ನಿಮಿತ್ತಂ ಕ್ರೀಡಾಸರೋವರಮಂ ಮಾಡಿಸಿ ನೀರಂ ತೀವಿ ಮತ್ತಲ್ಲಿ ಜಲಕೇಳಿಯಾಡುವ ಗಾಡಿಕಾರ್ತಿಯರಂ ಕಾಡಲೆಂದೊಳ್ಳೆಗಳಂ ತಂದು ಬಿಡಿಸಿಯವರ್ಕೆ ಪಾಲನೆಱೆದು ನಡೆಪುತಿರ್ಪನ್ನೆಗಮಲ್ಲಿಗೊಂದು ಕೃಷ್ಣತರುಣೋರಗಂ ಬಂದು ಕೊರ್ಬಿಯಾಡುವ ಡುಂಡುಭಗಳಂ ಕಂಡು ಅನುಂ ನಿಮ್ಮೊಡನಿರ್ದಪೆನೆಂದೊಡೊಳ್ಳೆಗಳ್, ಕರಮೊಳ್ಳಿತ್ತು ಬನ್ನಿಮೆಂಬುದುಂ : ಅವಂ ಮಾರ್ಕೊಂಡುಮೊಂದು ಪುರಾಣಡುಂಡುಭನಿಂತೆಂದುದು. ಈ ವಿಷಧರಂ ಮಹಾವಿಷಧರಂ, ನಾವೆಲ್ಲಂ ವಿಷಧರರಾಗಿಯುಂ ನಿರ್ವಿಷರುಮದಱ*ಂದಿದರ್ಕಂ ನಮಗಂ ಸಹಚರತ್ವಮುಂ ಮಿತ್ರತ್ವಮುಮಾಗದದೆಂತೆನೆ ‘ಕುಮಿತ್ರ ಸೇವಾಂ ನ ಕದಾಪಿ ಕುರ‍್ಯಾತ್’ ಎಂಬ ಕಥೆಯಂ ಕೇಳ್ದಱ*ವುದಿಲ್ಲಕ್ಕುಮೆ ಎನೆ ಡುಂಡುಭಗಳದೆಂತನೆ ಪುರಾಣ ಡುಂಡುಭಂ ಪೇೞ್ಗುಂ:

ಪ್ರಜಾಪಾಲನೆಂಬ ಅರಸನು ಕ್ರೀಡೊದ್ಯಾನದಲ್ಲಿ ಜಲಕೇಳಿಗಾಗಿ ಕ್ರೀಡಾಸರೋವರವನ್ನೂ ಮಾಡಿಸಿ ನೀರನ್ನು ತುಂಬಿಸಿ ಅಲ್ಲಿ ಜಲಕೇಳಿಯಾಡುವ ಸುಂದರಿಯರನ್ನು ಕಾಡಲೆಂದು ಒಳ್ಳೆಗಳನ್ನೂ ತಂದು ಬಿಟ್ಟು ಅವುಗಳಿಗೆ ಹಾಲನ್ನೆರೆದು ಸಾಕುತ್ತಿದ್ದನು. ಅಷ್ಟರಲ್ಲಿ ಅಲ್ಲಿಗೆ ಬಂದ ಕೃಷ್ಣಸರ್ಪವು ಬಂದು ಕೊಬ್ಬಿಯಾಡುತ್ತಿದ್ದ ಡುಂಡುಭಗಳನ್ನು ಕಂಡು ನಾನೂ ನಿಮ್ಮೊಡನೆ ಇರುವೆನು ಎನ್ನಲು ಒಳ್ಳೆಗಳು ಒಳ್ಳೆಯದು ಬನ್ನಿ ಎಂದುವು. ಅವುಗಳನ್ನು ಪ್ರತಿಭಟಿಸಿ ಒಂದು ಹಳೆಯ ಒಳ್ಳೆ ಹೀಗೆಂದಿತು : ಈ ಹಾವು ಮಹಾವಿಷಧರ. ನಾವೆಲ್ಲ ಹಾವುಗಳಾದರೂ ನಿರ್ವಿಷಧರರು. ಅದರಿಂದ ಇದಕ್ಕೂ ನಮಗೂ ಸಹಚರ್ಯವುಂಟಾಗದು. ‘ ಕುಮಿತ್ರ ಸೇವಾಂ ನ ಕದಾಪಿ ಕುರ್ಯಾತ್’ ಎಂಬ ಕಥೆಯನ್ನು ನೀವು ಕೇಳಿರಲಿಕ್ಕಿಲ್ಲ ಎನ್ನಲು ಡುಂಡುಭಗಳು ಅದೇನೆಂದು ಕೇಳಲು ಹಳೆಯ ಒಳ್ಳೆ ಹೇಳಿತು: