ಒಂದು ಮಹಾಟವಿಯೊಳ್ ಅತ್ಯಂತ ಶೋಭಾಕರಮಪ್ಪದೊಂದು ಸರೋಜಾಕರಮುಂಟು. ಅಲ್ಲಿ
ಶರಮದ್ಯಚ್ಚಾರು ಚಂದ್ರೋಪಮ ವಿಶದ ಸತ್ಪಕ್ಷಯುಗ್ಮಂ ಸರೋಜಾ
ಕರಲಕ್ಷ್ಮೀತಾರಹಾರಂ ತರುಣ ಬಿಸಲತಾ ಲೋಲನಾ ತಾಮ್ರಚಂಚ
ಚ್ಚರಣದ್ವಂದ್ವಂ ಸಲೀಲಾಗತಿ ವಿರಚಿತ ವಾರಾಂಗನಾಶಿಕ್ಷನತ್ಯಾ
ದರದಿಂದಿರ್ಪಂ ಸುಮಿತ್ರಂ ಪೆಸರೊಳದೃಶಂ ರಾಜಹಂಸಾವತಂಸಂ  ೧೯೨

ಆ ರಾಜಹಂಸಂಗಂ ಕನಕಾಕ್ಷನೆಂಬೊಂದಾಂದೆಗಂ ಪರಮಮಿತ್ರತ್ವಮಾಗಿ ಕೆಲವುಕಾಲಂ ಸಲುತ್ತಿರೆ, ಕನಕಾಕ್ಷನ ನಿವಾಸಮಪ್ಪ ಮಹಾವಟವೃಕ್ಷದ ಸಮೀಪದೊಳನೂನ ಮದಾಂಧಗಂಧ ಸಿಂಧುರ ಘಾಟಾನಿನಾದ ಬರಿತದಿಗಂತರಾಳಮುಂ ರಥಚಕ್ರಚೀತ್ಕಾರ ಭೀಕರಮುಂ ಹಯಹೇಷಾ ಬೀಷಣಮುಂ ಉದ್ಬಟಸುಭಟಹೂಂಕಾರಭಯಂಕರಮುಮಪ್ಪದೊಂದು ಮಹಾಕಟಕಂ ಬಂದು ಬಿಡುವುದುಂ ಅದು ಕಂಡಾನ್ದೆಗಾನಚಿದಂ ಪುಟ್ಟಿ ತನಗೆ ಪರಮಮಿತ್ರನಪ್ಪ ಸುಮಿತ್ರನಲ್ಲಿಗೆ ಬಂದು ಇಂತೆಂದುದು: ನಿನ್ನ ಮನೆಗೆಂದುಂ ಬಂದಾಂ ತುಷ್ಟನಾಗಿ ಪೋಪೆಂ, ನೀನೆನ್ನ ಮನೆಗೆಂದುಂ ಬಂದಱ*ಯೆ ಇಂದು ಬಂದೆನ್ನ ಸಿರಿಯುಮಂ ಸಂಪತ್ತುಮಂ ನೋೞ್ಪುದೆನೆ ರಾಜಹಂಸನಿಂತೆಂದಂ ! ನಿನ್ನ ಮನೆಯೆಂಬುದೆನ್ನ ಮನೆ, ಎನ್ನ ಮನೆಯೆಂಬುದು ನಿನ್ನ ಮನೆ ನೀಂ  ಬೇೞೂಂ ಬೇಱೆಂಬ ಭಿನ್ನಬುದ್ಧಿ ನಿನಗಂ ಬೇಡದೆಂತೆನೆ :

ಶ್ಲೋ || ಅಹಮಿಹೈವ ವಸನ್ನಪಿ ತಾವಕಸ್ತ್ವಮಪಿ ತತ್ರವಸನ್ನಪಿ ಮಾಮಕಃ
ಹೃದಯಸಂಗಮ ಏವ ಸುಸಂಗತಮೋ ನ ತನುಸಂಗಮ ಏವ ಸುಸಂಗಮಃ ||೭೬||

ಟೀ|| ನಾನಿಲ್ಲಿರ್ದುಂ ನಿನ್ನವನು, ನೀನಲ್ಲಿರ್ದುಂ ಎನ್ನವನು, ಮನಸ್ಸಂಗಮವೆ ಸಂಗಮವು, ಶರೀರ ಸಂಯೋಗಮೆಂಬುದು ಪ್ರಯೋಜನವಲ್ಲ ಎಂದಿತು. ಮಿತ್ರಂಗೆ ಪೇೞ್ದ ಲಕ್ಷಣಗಳೋಳವು, ನಿನಗಮೆನಮೇತಱೊಳಂ ವಿಕಲ್ಪಮಿಲ್ಲ ನಿಶ್ಚಿಚಿತಮಿರೆಂಬುದುಮಾಂದೆ ಇಂತೆಂದುದು: ನೀನೆಚಿದುದಪ್ಪುದಾದೊಡಂ ಲೌಕಿಕೋಕಿಯಿಂತಪ್ಪುದಲ್ತೆ:

ಶ್ಲೋ ದಾದಾತಿ ಪ್ರತಿಗೃಹ್ಣಾತಿ ಗೋಪ್ಯಮಾಖ್ಯಾತಿ ಪೃಚ್ಛತಿ
ಭುY ಭೋಯತೇ ಚೈವ ಷಡ್ವಿಧಂ ಪ್ರೀತಿಲಕ್ಷಣಂ  ||೭೭||

ಟೀ|| ತಾಂ ಕುಡುವುದು ಮಗೞ್ದವರ ಕಯ್ಯಲ್ಲೀಸು ಕೊಂಬುದು, ಗುಪ್ತವಪ್ಪ ಕಾರ‍್ಯವಂ ಪೇೞ್ವುದು ಮರಳಿ ತಾನವರಂ ಬೆಸಗೊಂಬುದು ತಾನುಂಬುದು ಮಗುೞ್ದವರ್ಗಿಕ್ಕಿಸುವುದು : ಎಂದಿತು ಪ್ರೀತಿಯಾಱುತೆಱನಕ್ಕುಂ. ಅದಱ*ಂ ನೀನಿಂದೆನ್ನ ಮನೆಗೆ ಬಾರದಂದು ನಿನ್ನ ಕೆಳೆ ಟಕ್ಕರ ಕೆಳೆಯಂತಕ್ಕುಮಲ್ಲದೆ ತಕ್ಕರ ಕೆಳೆಯಂತೊಪ್ಪಲಱ*ಯದು, ಅಮೋಘಂ ಬರಲ್ವೇೞ್ಕುಮೆಂದು ನಯಮಂ ನುಡಿದಾಗ್ರಹಂಗೆಯ್ದು ಕಾಲಂ ಪಿಡಿದು ನಾಂ ಪೋಗದಿರ್ದೊಡೆ ಕನಕಾಕ್ಷಂ ಮನಃಕ್ಷಂತಬಡುಗುಮೆಂದು ಪೋಗಲ್ಬಗೆದು, ‘ಸ್ನೇಹೋಪಿ ಕಾರಣಮನರ್ಥಪರಂಪರಾಯಾಃ ಅನರ್ಥ ಪರಂಪರೆಗೆ ಸ್ನೇಹಮೇ ಕಾರಣಂ ಎಂಬ ಅರ್ಥಮಂ ಯಥಾರ್ಥಂ ಮಾಡಲ್ಪೋಪಂತೆ ಸುಮಿತ್ರಂ ಕುಮಿತ್ರನಪ್ಪಾಂದೆಯ ಪಿಂದುಪಿಂದುನೆ ಬಂದು ರಾತ್ರಿಯಾಳಾ ರಾತ್ರಿಚರಸ್ಥಾನಮನೆಯ್ದೆ ವಂದಿರ್ಪುದುಂ:

ಒಂದು  ದೊಡ್ಡ ಅಡವಿಯಲ್ಲಿ ಅತ್ಯಂತ ಶೋಭಾಕರವಾದ ಒಂದು ಸರೋವರವಿತ್ತು. ೧೯೨. ಅಲ್ಲಿ ಶರಚ್ಚಂದ್ರನಂತೆ ಬೆಳ್ಳಗಿನ ಸುಂದರವಾದ ರೆಕ್ಕೆಯುಳ್ಳವನೂ, ಆ ಸರೋವರ ಲಕ್ಷ್ಮೀಯ ತಾರಹಾರನೂ, ಎಳೆಯ ತಾವರೆದಂಟುಗಳೊಡನೆ ಅಡುವವನೂ ನಸುಕೆಂಪಾದ ಹೊಳೆಯುವ ಪಾದಗಳುಳ್ಳವನೂ ! ತನ್ನ ಕ್ರೀಡಾಗತಿಯನ್ನು ವಾರಾಂಗನೆಯರಿಗೆ ಕಲಿಸಿದವನೂ ರಾಜಹಂಸಗಳಿಗೆ ಭೂಷಣಪ್ರಾಯನೂ ಆದ ಸುಮಿತ್ರನೆಂಬ ಅಸದೃಶವಾದ ಹೆಸರಿನವನು ಇದ್ದನು. ವ || ಆ ರಾಜಹಂಸನಿಗೂ ಕನಕಾಕ್ಷನೆಂಬ ಹೆಸರಿನ ಒಂದು ಅಂದೆಗೂ ಮಿತ್ರತ್ವವುಂಟಾಯಿತು. ಹೀಗೆ ಕೆಲವು ಕಾಲ ಕಳೆಚಿiಲು ಆ ಕನಕಾಕ್ಷನು ವಾಸ ಮಾಡಿಕೊಂಡಿದ್ದ ಮಹಾವಟವೃಕ್ಷದ ಸಮೀಪದಲ್ಲಿ ಒಂದು ಮಹಾಸೈನ್ಯವು ಬಂದಿಳಿಯಿತು. ಅದನ್ನು ಕಂಡು ಆ ಆಂದೆಗೆ ಆನಂದವಾಗಿ ತನ್ನ ಪರಮಮಿತ್ರನಾದ ಸುಮಿತ್ರನಲ್ಲಿಗೆ ಬಂದು ಹೀಗೆಂದಿತು: ನಿನ್ನ ಮನೆಗೆ ನಾನು  ಯಾವಾಗಲೂ ಬಂದು ಸಂತುಷ್ಟನಾಗಿ ಹೋಗುವೆ. ನೀನು ನನ್ನ ಮನೆಗೆ ಎಂದೂ ಬಂದವನಲ್ಲ. ಇಂದು ಬಂದು ನನ್ನ ಸಿರಿಯನ್ನೂ ವೈಭವವನ್ನೂ ಕಾಣಬೇಕು ಎನ್ನಲು ರಾಜಹಂಸ ಹೀಗೆಂದಿತು: ನಿನ್ನ ಮನೆಯೇ ನನ್ನ ಮನೆ; ನನ್ನ ಮನೆಯೇ ನಿನ್ನ ಮನೆ. ನೀನು ಬೇರೆ ನಾನು ಬೇರೆ ಎಂಬ ಭಿನ್ನಬುದ್ಧಿ ನಮ್ಮೊಳಗೆ ಬೇಡ. ಶ್ಲೋ|| ನಾನಿಲ್ಲಿದ್ದೂ ನಿನ್ನವನು, ನಿನಲ್ಲಿದ್ದೂ ನನ್ನವನು. ಮನಸ್ಸಂಗಮವೇ ಸಂಗಮ: ಶರೀರ ಸಂಯೋಗ ಪ್ರಯೋಜನವಿಲ್ಲ. ವ|| ಇದು ಮಿತ್ರ ಲಕ್ಷಣ. ನಿನಗೂ ನನಗೂ ಯಾವುದರಲ್ಲೂ ವಿಕಲ್ಪವಿಲ್ಲ; ನಿಶ್ಚಿಂತನಾಗಿರು ಎನ್ನಲು ಆಂದೆ ಹೀಗೆಂದಿತು; ನೀನು ಹೇಳಿದುದು ನಿಜವಾದರೂ ಲೌಕಿಕೋಕ್ತಿ ಹೀಗಿರುವುದಲ್ಲವೇ?

ಶ್ಲೋ || ಕೊಡುವುದು, ತೆಗೆದುಕೊಳ್ಳುವುದು, ರಹಸ್ಯ ವಿಚಾರಗಳನ್ನು ಹೇಳುವುದು, ಕೇಳುವುದು, ಊಟ ಮಾಡುವುದು, ಊಟ ಮಾಡಿಸುವುದು- ಹೀಗೆ ಪ್ರೀತಿಯೆಂಬುದು ಆರು ರೀತಿಯಾಗಿದೆ. ವ|| ಆದ್ದರಿಂದ ನೀನಿಂದು ನಮ್ಮ ಮನೆಗೆ ಬಾರದಿದ್ದಲ್ಲಿ ನಿನ್ನ ಗೆಳೆತನವು ಠಕ್ಕರ ಗೆಳೆತನದಂತೆ ಶೋಭಿಸಲಾರದು ಎಂದು ತಪ್ಪದೆ ಬರಬೇಕೆಂದು ಸ್ನೇಹದಿಂದ ವರ್ತಿಸಿ ಬಲಾತ್ಕರಿಸಿ ಕಾಲುಹಿಡಿಯಿತು. ಆಗ ಆ ರಾಜ ಹಂಸವು ತಾನು ಹೊಗದಿದ್ದಲ್ಲಿ ಕನಕ್ಷಾನ ಮನಸ್ಸಿಗೆ ನೋವಾಗುವ್ಯದೆಂದು, ಹೋಗುವುದೆಂದು ಯೋಚಿಸಿ ‘ಸ್ನೇಹೋಪಿ ಕಾರಣಮನರ್ಥ ಪರಂಪರಾಯಾಃ” ಆನರ್ಥ ಪರಂಪರೆಗೆ  ಸ್ನೇಹವೇ ಕಾರಣ ಎಂಬುದನ್ನು ಯಥಾರ್ಥಗೊಳಿಸಲು ಹೋಗುವುಂತೆ ಸುಮಿತ್ರನು ಕುಮಿತ್ರನಾದ ಆಂದೆಯ ಹಿಂದೆ ಹಿಂದೆ ಬಂದು, ರಾತ್ರಿಕಾಲದಲ್ಲಿ ಅದರ ನಿವಾಸವನ್ನು ಸೇರಿದವು.

ಎಸೆವೀ ಸಿಂಧುರಮೀ ರಥಪ್ರಕರಮೀ ಜಾತ್ಯಶ್ವಮೀ ರೌದ್ರವೀ
ರಸಮೂಹಂ ನೆಗೞ* ಮನೋಹರವಧೂಸಂದೋಹಮೀ ರಾಜಕ-
ಪ್ರಸರಂ ನಿಕ್ಕುವಮೆನ್ನದೆಂದು ವಿಹಗೇಂದ್ರಂಗಾಂದೆ ತೋಱ*ತ್ತು ಸಂ
ತಸದಿಂ ತೋಱದರಾರೊ ಬಂಧುಜನಕಾತ್ಮೀಯಾಕೈಶ್ವರ‍್ಯಮಂ  ೧೯೩

ಅಂತಾ ಪಿಂಗಲಿಯೆಂಬ ಆಂದೆಗೀರಾನಾ ಹಂಸಗೆ ಕಾಪುರುಷನಂತೆ ತನಗಿಲ್ಲದ ಮೈಮೆಯನುಂಟುಮಾಡಿ ನುಡಿಯುತಿರ್ಪನ್ನೆಗಂ ನಿಶಾವಸಾನಸಮಯದೊಳ್ ಪಯಣದ ಸೂಳುಗಾಳೆಗಳಂ ಪಿಡಿದು ಬೀಡೆತ್ತಲುದ್ಯೋಗಂಗೆಯ್ವದುಂ ಕಂಡು ಧವಲಪಕ್ಷಂ ಕನಕ್ಷಾಂಗಿಂತೆಂದಂ: ನಿನ್ನ ಪಡೆಯಪ್ಪೊಡೇಕಿಲ್ಲಿದೆಂತ್ತಿ ಪೋದಪುದು ಎಂಬುದುಂ, ಎನ್ನ ನಿಯಾಮಾಮಿಲ್ಲದೆತ್ತಲಱ*ಯದಿದ ನೀಗಳೆ ಮಾಣಿಸುವನೆಂದು ಬಲ್ಲಾಳಪ್ಪ ಬಿಲ್ಲ ಬಿನ್ನಣಿಯಿದಿರ ರೂಪನೆತ್ತಲೀಯದೊಂದೆ ಕೋಲಿಂದಿಸುವಂತೊಂದೆ ಕೊರಲೊಳೆತ್ತಲೀಯದೆ ಸೇವಿಸುವುದುಮಾ ಸರಮನರಸಂ ಕೇಳ್ದಿಂದಿನ  ಪಯಣಮುಪ್ಪಯಣಮೆಂದಂದಿನ ಪಯಣಂ ಮಾಣ್ದು ಮಱುದೆವಸಂ ಯಾಮಿನೀವಿರಾಮವಪ್ಪುದಂ ಪ್ರಯಾಣಭೇರಿಯಂ ಪೊಯ್ಸಿದಾಗಳದಂ ವಿಹಗೇಂದ್ರಂ ಕೇಳ್ದಾಂದೆಗೆಂದುದು: ಭಾವಾ ! ನಿನ್ನ ಬೀಡಿಂದೇಕೆತ್ತಿಪೋದಪ್ಪುದೆಂಬುದಮೆನ್ನಾಜ್ಞೆಯಿಲ್ಲದೆಲ್ಲಿಗಮೇಕೆ ಪೋಕುಂ ಚಂದ್ರೋದಯದೋಳ್ ಸಮುದ್ರಘೋಷಮುಮಾದಿತ್ಯೋದಯದೊಳೆನ್ನ ಬೀಡಿನ ಘೋಷಮುಮೆಂದುಮೀಯಂದಮೆ ಎಂದು ಮೞೆಗಾಲಮುಂಟೆಂದು ತಪ್ಪಿದ ಜೋಯಿಸಂ ಬಾವಿಯ ನೀರಡಕಿ ನೀರ್ವೊಯ್ದನೆಂಬ ಕಥೆಯಮತೆ ಪುಸಿಯರಸುತನದ ಬೆಸನದೊಳ್ ತೊಡೆರ್ದುಸಿರದಿರ್ದೆನಪ್ಪೊಡೆ ಎನ್ನ ಕೆಳೆಯನೊಳಗನಱ*ದಪನೆಂದು ನಾಲ್ಕೈದು ಕೊರಲಂ ಸಿಲ್ಕುವಳಿದು ಮತ್ತಂ ಮೇಲ್ಮಟ್ಟದಾ ಸರಮಂ ಕೇಳ್ದು ಆ ಪಡೆ ಪಯಣಮನಂದುಂ ಮಾಣ್ಬುದುಂ, ಅದೆಲ್ಲಮನರಸಂ ಕೇಳ್ದು ಮಱುದಿವಸಮರ್ಧರಾತ್ರಿಯೊಳ್ ಪೋಗಲುದ್ಯೋಗಂಗೆಯ್ವುದುಂ: ರಾಜಹಂಸಂ ಕಂಡೇಂ ಗಡಾ ಕನಕಾಕ್ಷಾ ! ನಿನ್ನ ಪಡೆ ಪೇೞ್ದ ಮುನ್ನಿನಂದಮಲ್ಲ ಇಂದು ನಡುವಿರುಳೆ ನಡೆಯಲೊಡರಿಸಿದಪ್ಪುದೆಂಬುದುಮಾಂದೆಯಿಂತೆಂದುದು:

೧೯೩. ಅಗ ಅಲ್ಲಿ ಶೋಭಿಸುತ್ತಿದ್ದ ಆನೆ, ರಥ, ಕುದುರೆ, ಸೈನ್ಯ, ಮನೋಹರಿಯರ ಸಂದೋಹಗಳೆಲ್ಲವೂ ನಿಶ್ಚಯವಾಗಿಯೂ ತನಗೆ ಸೇರಿದವು ಎಂದು ಆ ವಿಹಗೇಂದ್ರನಿಗೆ ಆಂದೆಯು ತೋರಿಸಿತು! ಬಂಧುಜನಕ್ಕೆ ಸಂತೋಷದಿಂದ ತಮ್ಮ ಐಶ್ವರ್ಯವನ್ನು ತೋರಿಸದೆ ಇರುವರು ಯಾರು? ವ|| ಹಾಗೆ, ಆ ಆಂದೆಯು ಕಾಪುರುಷನಂತೆ ತನಗಿಲ್ಲದ ಮಹಿಮೆಯನ್ನು ಆರೋಪಿಸಿ ಆ ರಾಜಹಂಸನೊಡನೆ  ನುಡಿಯುತ್ತಿರಲು ಮುಂಜಾನೆ ಪ್ರಯಾಣದ ಸರದಿ ಕಹಳೆಗಳು  ಬೀಡೆತ್ತಲು ಪ್ರಾರಂಭಿಸುವುದನ್ನು ಕಂಡು ಆ ಹಂಸವು ಕನಕಾಕ್ಷನೊಡನೆ ಹೀಗೆಂದು ಕೇಳಿತು: ಇದು ನಿನ್ನ ಸೈನ್ಯವಾಗಿದ್ದಲ್ಲಿ ಇದು ಇಲ್ಲಿಂದೇಕೆ ಹೋಗುತ್ತಿರುವುದು ಎಂದು ಕೇಳಲು ನನ್ನ ಅಪ್ಪಣೆಯಿಲ್ಲದೆ ಇದು ಇಲ್ಲಿಂದ ಹೋಗಲಾರದು; ಇದನ್ನೀಗಲೇ ತಡೆಯುವೆನೆಂದು ಒಕ್ಕೊರಲಿನಿಂದ ಕೂಗಲು ಅರಸನು ಇಂದಿನ ಪ್ರಯಾಣ ಉಪ್ಪಯಣ ಎಂದು ಅಂದಿನ ಪ್ರಯಾಣವನ್ನು ನಿಲ್ಲಿಸಿದನು. ಮರದಿನ ಮುಂಜಾನೆ  ಪ್ರಯಾಣ ಭೇರಿಯನ್ನು ಬಾರಿಸಲು ವಿಹಗೇಂದ್ರನು ಕೇಳಿ ಆಂದೆಗೆ ಹೇಳಿತು : ಭಾವ ! ನಿನ್ನ ಬೀಡಿನಿಂದ ಯಾಕೆ ಸೈನ್ಯ ಹೋಗುತ್ತಿರುವುದು ? ಅದಕ್ಕೆ ಆ ಆಂದೆ ನನ್ನ ಅಜ್ಞೆಯಿಲ್ಲದೆ ಅದೆಲ್ಲಿಗೆ ಹೋಗುವುದು ?? ಚಂದ್ರೋದಯದಲ್ಲಿ ಸಮುದ್ರಘೋಷದಂತೆ ಸೂರ್ಯೋದಯಕಾಲದಲ್ಲಿ ನನ್ನ ಬೀಡಿನ ಘೋಷವು   ಸಹಜ. ಮಳೆಗಾಲ ಉಂಟು ಎಂದು ತಪ್ಪು ಹೇಳಿದ ಜೋಯಿಸನು ಬಾವಿಯ ನೀರನ್ನೆತ್ತಿ  ಹೊಯ್ದನೆಂಬ ಕಥೆಯಂತೆ ಹುಸಿ ಅರಸುತನದ ವ್ಯಸನದಲ್ಲಿ ಸಿಲುಕಿ, ಮಾತಾಡದಿದ್ದಲ್ಲಿ ನನ್ನ ಗೆಳೆಯನು ನನ್ನ ರಹಸ್ಯವನ್ನು ಅರಿಯುವನೆಂದು ನಾಲ್ಕೈದು ಬಾರಿ ಕೂಗಿತು. ಆ ಸ್ವರ ವನ್ನು  ಕೇಳಿ ಆ ದಿನವೂ  ಪ್ರಯಾಣವನ್ನು ನಿಲ್ಲಿಸಿದರು. ಅದೆಲ್ಲವನ್ನೂ  ಅರಸನು ಕೇಳಿ ಮರುದಿನ ಅರ್ಧ ರಾತ್ರಿಯಲ್ಲಿ ಹೋಗಬೇಕೆಂದು ನಿಶ್ಚಯಿಸಲು ರಾಜಹಂಸವು ಕಂಡು, ಏನು ಕನಕಕ್ಷಾ! ನಿನ್ನ ಸೈನವು ನೀನು ಹೇಳಿದಂತೆ ಮಾಡುತ್ತಿಲ್ಲವಲ್ಲ: ಇಂದಿನ ನಡುವಿರುಳೇ ಹೊರಡುವುದು ಎನ್ನಲು ಆಂದೆಯು ಹೀಗೆಂದಿತು: ಈ ಸೈನ್ಯವನ್ನು ನಾನು ಮೊದಲು ಪರರಾಷ್ಟ್ರಕ್ಕೆ ಕಳುಹಿಸಬೇಕೆಂದಿರುವುದರಿಂದ ಅದು ಹೊರಟಿತು. ಅದನ್ನು ನಾನು ಇಂದು ಹೋಗಲು ಬಿಡುವುದಿಲ್ಲ ಎಂದು ಹಲವು ಬಾರಿ ಹಲ್ಲು ಕಚ್ಚಿ ಕರ್ಕಶವಾಗಿ ಕೂಗಲು, ಅದನ್ನು ಕೇಳಿದ ರಾಜನು ಈ ಶಕುನದ ಅರ್ಥವೆನೆಂದು ಶಕುನಿಗರನ್ನು ಕರೆಯಿಸಿ ಕೇಳಿದನು. ಅ ಶಕುನಿಗರಲ್ಲೊಬ್ಬನು ಹೀಗೆಂದನು: ಮೂರು ಬಾರಿ ಕೂಗಿದ  ಹಕ್ಕಿಯ ಸ್ವರದಲ್ಲಿ ನಮ್ಮ ಶತ್ರವಾಗಲೀ ಈ ಹಕ್ಕಿಯ ಮಿತ್ರನಾಗಲೀ ಸಾಯುವುದು ಎಂದು ಅರ್ಥವಾಗುವುದು: ಅದಕ್ಕೆ ಅರಸನು ನನ್ನ ಮನಸ್ಸೂ ನೀನು  ಹೇಳಿದ ಅರ್ಥವೂ ಒಂದೇ ಆಗಿದೆ. ಇದಕ್ಕೆ  ತಕ್ಕುದನ್ನು ನಾನೇ ಬಲ್ಲೆ ಎಂದು ಧರ್ನುವೇದಿಯೂ ಶಬ್ದವೇದಿಯೂ ಅದ ಒಬ್ಬ ಬಿಲ್ಲಾಳನನ್ನು ಕರೆಯಿಸಿ  ನಿತ್ಯವೂ ವಕ್ರವಾಗಿ ಕೂಗುತ್ತಿರುವ ಆ ಅನಿಷ್ಟಕರವಾದ ಹಕ್ಕಿಯನ್ನು ಕೊಂದು ಬಾ ಎಂದು  ಹೇಳಿದನು. ಆತನು ಹಾಗೆಯೇ  ಮಾಡುವೆನೆಂದು ಆಂದೆಯಿದ್ದ ಮರದ ಸಮೀಪಕ್ಕೆ ಬಂದು  ಅದರ ಸ್ವರವನ್ನು ಎಲ್ಲಿಯೂ ಕೇಳದೆ ಕೊಂಬೆಯಲ್ಲಿ ವಾಸಿಸುತ್ತಿದ್ದ ರಾಜ ಹಂಸವನ್ನು ಆಂದೆಯೆಂದೇ ತಿಳಿದು:

ಈ ಪಡೆಯನಾಂ ಮುನ್ನಂ ಪರಮಂಡಲಕ್ಕೆ ಪೇೞ್ದ ಕಾರಣದಿಂದೆತ್ತಲ್ಬಗೆದುಪ್ಪುದಿದನಾನಿಂದು ಪೋಗುಲೀಯೆನೆಂದು ಪಲವುಂ ಸೂೞುಲಿದು ಪಲ್ಗರ್ಚಿ ಕಲ್ಲಸರದಿಂ ಸಿಲ್ಕವಳಿದು ಮಾಣ್ಬುದುಮದೆಲ್ಲಮನರಸಂ ಕೇಳ್ದು ಶಕುನಿಗರಂ ಕರೆಯಿಸಿ. ಈ ಶಕುನಮದೇನಂ  ಪೇೞ್ದಪುದೆಂದು ಬೆಸಗೊಳ್ವುದುಂ: ಅಲ್ಲಿ  ಶಕುನಿಗರೊಳೊರ್ವ ನಿಂತೆಂದಂ: ಈ ಪಕ್ಷಿ ನುಡಿದ ಮೂಱುಂ ಸರದಭಿಪ್ರಾಯದೊಳ್ ನಮ್ಮ ಶತ್ರುವಕ್ಕೆ ಈ ಪಕ್ಷಿಯ ಮಿತ್ರನಕ್ಕೆ ಸಾಗುಮೆಂದು ಪೇೞ್ವುದುಂ ಎನ್ನ ಮನಮುಂ ನಿನ್ನ ಕಂಡ ಯುಕ್ತಿಯುಮೊಂದಾಗಿರ್ದುದು ಇನ್ನಿದರ್ಕೆ ತಕ್ಕುದನಾನೆ ಬಲ್ಲೆನೆಂದು ಧನುರ್ವೇದಿಯುಂ ಶಬ್ದವೇದಿಯುಮಪ್ಪ ಬಿಲ್ಲ  ಬಿನ್ನಣಿಯೊರ್ವನಂ ಕರೆದು ನಿಚ್ಚಂ ವಕ್ರಿಸುತ್ತಿರ್ಪ ನಿಚ್ಚಲವಕ್ಕಿಯನೆಚ್ಚು ಬಾಯೆಂದು ಪೇೞ್ದುದುಮಾತನಂತೆಗೆಯ್ವೆನೆಂದು ಆಂದೆಯಿರ್ದ ಮರದ ಸಮೀಪಕ್ಕೆ ಬಂದು ಬೞ*ಕ್ಕದಱ ಸರಮನೆಲ್ಲಿಯುಂ ಕೇಳಲಿಂಬಿಲ್ಲದೆ ಕೊಂಬಿನೊಳ್ ವಸಿಯಿಸಿ ಮಿಸುಗುತಿರ್ದ ರಾಜಹಂಸನಂ ಆಂದೆಯೆಂದೇ ಬಗೆದು,

ಭರದಿಂ ರಾಮಂ ಕಾಕಾ-
ಸುರನಂ ಮುನಿದಿಸುವ ತೆಱದಿನೆಚ್ಚಂ ವಿಹಗೇ-
ಶ್ವರನೆನಿಪ ಹಂಸನಂ ವರ
ಶರಾಸನಾಗಮವಿಶಾರದಂ ತತ್ ಕ್ಷಣದಿಂ  ೧೯೪

ಅಂತೆಚ್ಚ ಕೋಲಿಂ ಮುನ್ನಮೆ ಸುರುಳ್ದುರೞ್ದು ಹಂಸಂ ವಿಧ್ವಂಸಮನೆಯ್ದಿತ್ತು

(ಹದಿನಾಲ್ಕನೆಯ ಕಥೆಯ ಶೇಷ)

ಅದಱ*ಂ, ಶ್ಲೋ|| ಅಕಾಲಚರ‍್ಯಾಂ ವಿಷಮೇಷು ಗೋಷ್ಠೀಂ
ಕುಮಿತ್ರ ಸೇವಾಂ ನ ಕದಾಪಿ ಕುರ‍್ಯಾತ್
ಪಶ್ಯಾಂಡಜಂ ಪದ್ಮವನೇ ಪ್ರಸೂತಂ
ಧನುರ್ವಿಮುಕೇನ್ತ ಶರೇಣ ವಿದ್ಧಂ  ||೭೮||

ಟೀ|| ಅಕಾಲದಲ್ಲಿ ಚಲಿಸಲಾಗದು. ವಿಷಮರೊಡನೆ ಗೋಷ್ಠಿಯಂ ಮಾಡಲಾಗದು. ಕುಮಿತ್ರನ ಸಂಗಡ ಅಡಲಾಗದು: ಅದು ಹೇಗೆಂದೊಡೆ ಪದ್ಮವನದಲ್ಲಿ ಪುಟ್ಟಿದ ರಾಜ ಹಂಸೆಯಾಂದೆಯ ಕೆಳಗೊಂಡ ಕಾರಣದಿಂದೊಂದೆ ಬಾಣದಿಂ ಮರಣ ಮನೆಯ್ದಿತ್ತು. ಎಂದಿಂತು ಬುದ್ದಿವಂತನಪ್ಪೊಳ್ಳೆ ಪೇೞ್ದೊಡದಂ ಮಾಣದೆ ಮತ್ತಿನೊಳ್ಳೆಗಳ್ ದರ್ಪದಿಂ ಸರ್ಪನಂ ನಡುವಿಟ್ಟುಕೊಂಡಿರ್ಪುದುಮಾ ಪಾವು ಪಾಲಂ ಕುಡಿದು ಕೊರ್ಬಿ ನೆಱ*ದಾಡುತ್ತುಮಿರ್ದುದು. ಅನ್ನೆಗಮಿತ್ತಂ,

ಅಳಿನೀಸಂಕುಳವೇಷ್ಟಿತಪ್ರವಿಳಸನ್ಮಲ್ಲೀವನಂ ಚಾರುಪಾ
ಟಳಮಸ್ತಂ ಗತಕುಂದ ಮೆಸೆದತ್ತೆತ್ತಂ ದವೋಗಾಗ್ನಿದ-
ಗ್ಧಳತಾವ್ರಾತಮಪಾಸ್ತ ಮೇಘಮುದಿತಾ ಬ್ದೌಘಂ ನಿದಾಘಂ ಮಹೀ-
ತಳದೊಳ್ ತಪ್ತ ಮಹೀರಜಂ ದಿವಸ ಕೃತ್ತಾಪಾರ್ತದೇಹಿವ್ರಜಂ  ೧೯೫

ಅಂತೊಪ್ಪುವ ನಿದಾಘಸಮಯದೊಳ್ ಪ್ರಜಾಪಾಲ ಮಹೀಪಾಲಂ ಜಲಕ್ರೀಡಾಸಕ್ತಚಿತ್ತನಾಗಿ ಮದನಮತ್ತಮಾತಂಗ ಗಮನೆಯರುಂ ಮಾರವೀರಧನುಃ ಖಂಡಾಯಮಾನಭ್ರೂಲತಾ ವಿಭ್ರಮಭ್ರಾಜಿತೆಯರಂ ಮಣಿಮಯಂಜೀರಮಂಜು ಶಿಂಜಿತವಾಚಾಳಚಾರುಚರೆಣೆಯರುಂ ಮದಮದಿನರಾಮದೋನ್ಮತ್ತೆಯರುಂ ಮಕರ ಕೇತನ ರಾಜ್ಯಾದೇವತೆಯರು ಮಪ್ಪ  ನಿಜಾಂತಃ ಪುರಪ್ಯರಂ ಯರ್ವರಸು ಪೋಗಿ ಜಲಕ್ರೀಡೆಯಾಡುತಿರ್ಪುದುಂ ಅಂದಲ್ಲಿರ್ದ ಸರ್ಪನರಸಿಯಂ ಪಿಡಿದು ಬಿಡದಿರ್ಪುದುಮದನರಸಂ ಕಂಡೆಂತಾನುಂ ಬಿಡಿಸಿಕಳೆದಾ ಸರ್ಪನು ಮನೊಳ್ಳೆಗಳುಮಂ ಶತಖಂಡಂ ಮಾಡಿ ಕೊಲ್ಲಿಸಿದಂ, ಅದಱ*ಂ,

ಶ್ಲೋ**  ಸುಖಂ ವಸಂತಃ ಪಯಸಾ ಚ ಪುಷ್ಟಾಃ
ನೃಪಸ್ಯ ಭಾರ‍್ಯಾ ಸಹದೀಪ್ಯಮಾನಾಃ
ತೇ ಡುಂಡುಭಾ ಸರ್ಪಕೃತಾಪರಾಧಾನ್
ನಷ್ಟಾ ಧ್ರುವಂ ದುಷ್ಟ ಪರಿಗ್ರಹೇಣ  ||೭೯||

ಟೀ||’ಪಾಲಂ ಕುಡಿದು ಸುಖದೂಳ್ ನೃಪಸತಿಯರ ಕೂಡಿರ್ದೂಳ್ಳೆಗಳ್ ಸರ್ಪಕೃತಾಪರಾಧ ನಿಮಿತ್ತಂ ಕೊಲಿಸಿಕೊಳಲ್ಪಟ್ಟವು.

ಅದಱ*ಂ ನಿನ್ನನೊಳಕೊಂಡಂದೆನಗಮಾ ವಿಯಕ್ಕುಮೆಂದು ಮಂದವಿಸರ್ಪಿಣಿ ಪೇೞ್ವುದುಂ ಡುಂಡುಕನಿಂತೆಂದುದು*: ನಿನಗಿನಿತವಸ್ಥೆಯುಮನಿಷ್ಟಮುಮಾಗಲ್ವೇಡ, ಆನಿಲ್ಲಿರ್ಪೆನಲ್ಲೆಂ ಅತಿಥಿ ಯುಮನಭ್ಯಾಗತನುಮನವಜ್ಞೆಗೆಯ್ವುದೇತಱ ಧರ್ಮಂ, ಅದೆಂತೆನೆ,

ಶ್ಲೋ || ಗುರುರಗ್ನಿರ್ದ್ವಿಜಾತೀನಾಂ ವರ್ಣಾನಂ ಬ್ರಾಹ್ಮಣೋ ಗುರುಃ
ಪತಿರೇವ ಗುರುಸ್ತ್ರೀಣಾಂ ಸರ‍್ವಸ್ಯಾಭ್ಯಾಗತೋ ಗುರುಃ  ||೮೦||

ಟೀ|| ಬ್ರಾಹ್ಮಣಂಗೆ ಅಗ್ನಿಯೇ ಗುರು, ಕ್ಷತ್ರಿಂii ವೈಶ್ಯ ಶೂದ್ರರ್ಗೆ ಬ್ರಾಹ್ಮಣನೇ ಗುರು. ಸತಿಗೆ ಪತಿಯೇ ಗುರು, ಎಲ್ಲರ್ಗಮಭ್ಯಾಗತನೇ ಗುರು. ಮತ್ತಮದಲ್ಲದೆಯುಂ

ಶ್ಲೋ || ಅತಿಥಿರ್ಯಸ್ಯ ಭಗ್ನಾಶೋ ಗೃಹಾತ್ಪ್ರತಿ ನಿವರ್ತತೇ
ಸ ದತ್ವಾ ದುಷ್ಕೃತಂ ತಸ್ಯ ಪುಣ್ಯಮಾದಾಯ ಗಚ್ಛತಿ  ||೮೧||

ಟೀ|| ಅವನಾನೊರ್ವನ ಮನೆಗೆ ಬಂದತಿಥಿ ಭಗ್ನಮನಸ್ಕನಾದೊಡೆ  ತಾಂ ಮಾಡಿದ ಪಾಪಮಂ ಗೃಹಸ್ಥಂಗೆ ಕೊಟ್ಟು ಆ ಗೃಹಸ್ಥನುಪಾರ್ಜಿಸಿದ ಪುಣ್ಯಮನುಯ್ವಂ. ಎಂಬುದು ಮನೆವಾೞದಮ್ಮಮವೆಲ್ಲವಂ ನೀನೆ ಬಲ್ಲೆಯೆಂದೊಡೆ ಮಂದವಿಸರ್ಪಿಣಿ ಮತಿಭ್ರಾಂತಿಯಿಂ ದುಷ್ಟನುಂ ಶಿಷ್ಯನೆಂದೆಡೆಗೊಟ್ಟಿರಲ್ ಇತ್ತಲರಸಂ ಸಿರಿಮಂಚದೊಳ್  ಪವಡಿಸಲೊಡಂ,

ಪರಿತಂದು ತಿಂದು ಮಂಚಾಂ
ತರದೊಳ್ ತಚ್ಛಿದ್ರಭಾಗಮಂ ಪೊಕ್ಕುದತಿ-
ತ್ವರಿತಗತಿ ಮತ್ಕುಣಂ ಮುಖ
ಪರಿಪೀತನರೇಂದ್ರರುರ ವಾಃಕಣಮಾಗಳ್  ||೧೯೬||

ಅಂತು ಡುಂಡುಕತುಂಡ ಖಂಡಿತ ಶರೀರನರಸಂ ಭೋಂಕನೆೞ್ಚಱ*ಪುದುಂ ಸೆಜ್ಜೆಯ ಕಾಪಿನವರ್ ಪರಿತಂದು ಶೋಸಿ ನೋಡಿ ಪಚ್ಚಡಿಕೆಯಂ ಪತ್ತಿರ್ದ ಕೋಱೆಯಂ ಕಂಡರಸನಂಗೆ ನಿದ್ರಾಭಂಗಮಂ ಮಾಡಿದ ದ್ರೋಹನಿದಕ್ಕುಮೆಂದು ಮಂದವಿಸರ್ಪಿಣಿಯಂ ಕೊಂದರ್ ಅದಱ*ಂ,

ಶ್ಲೋ || ಯೋವಿನೀಸ್ಯ ಸಂಸ್ಥಾನಂ ದದಾತಿ ಸ ವಿನಶ್ಯತಿ
ಡುಂಡುಕಸ್ಯಾಪರಾಧೇನ ಹತಾ ಮಂದವಿಸರ್ಪಿಣೀ  ||೮೨||

ಟೀ || ಅವನಾನೊರ್ವಂ ದುರ್ಜನನನೊಳಕೊಂಡಿಹಂ ಅವಂ ಕಿಡುವಂ, ಅದು ಎಹಗೆಂದೊಡೆ ಡುಂಡುಕನೆಂಬ ತಿಗುಣೆಯ ಅಪರಾಧದಿಂ ಮಂದವಿಸರ್ಪಿಣಿಯೆಂಬ ಪೇನು, ಕೊಲಿಸಿಕೊಳಲ್ಪಟ್ಟುದು-ಎಂದಿಂತನೇಕ ಪ್ರಕಾರಮಾದುಪಕಥೆಗಳಂ ಕುಱ*ತು  ದುಷ್ಟಾಂತಂಗಳಂ ನೀತಿ ಶಾಸ್ತ್ರಭಿಪ್ರಾಯಂಗಳಂ ದವನಕಂ ಪೇೞ್ದು ಮತ್ತಮಿಂತೆಂದಂ: ನಿನ್ನ ಮರುಳ್ತನಕ್ಕೆ ಮುನ್ನಮೆ ಬೇಸತ್ತು ಬಿಟ್ಟು ಪರಿಗ್ರಹಮೆಲ್ಲಂ ಪರೆದುಪೋದುದು. ಅನುಂ ಕಾರ‍್ಯಸಹಾಯನಲ್ಲದೆ ಖಡ್ಗ ಸಹಾಯನಲ್ಲೆಂ. ಅಂತಾಗಿಯುಮೆನ್ನಱ*ವುದೆಲ್ಲಮಂ ನೆಱೆಯೆ ಬಿನ್ನಪಂಗೆಯ್ದೆಂ. ಇನ್ನಪ್ಪೊಡೆನ್ನ ಮೇಲೆ ದೊಷಮಿಲ್ಲ. ಮೇಲಪ್ಪುದುಂ ನೀನೆ ಬಲ್ಲೆಯೆಂಬುದುಮದಱ ಕುಮಂತ್ರದಿಂ ಪಿಂಗಳಕನೆಂಬ ಗ್ರಹಂ ಸದಾಗ್ರಹಮನೆಂತಾನುಂ  ಪತ್ತುವಿಟ್ಟಿಂತೆಂದುದು: ನೀನೆನಗಿನಿತಾಗ್ರಹಂಗೆಯ್ದು ಬುದ್ಧಿವೇೞ್ವುದೆಲ್ಲಮೆನ್ನ ಹಾನಿವೃದ್ಧಿಗಳ್ ನಿನ್ನವಪ್ಪ ಕಾರಣದಿಂ ಪೇೞ*ದೆ, ಆನುಮಿನಿತುಂ ಮಾರ್ಕೊಂಡುದೆಲ್ಲಂ ಸಂಜೀವಕನಪ್ಪೊಡೆ ಪಶು, ನಾನಪ್ಪೊಡೆ ಮೃಗಾರಾಜನದನೆಂತುಂ ಕೊಲ್ವೆನೆಂದಿರ್ದೆಂ. ನೀನೆಂದುದು ತಪ್ಪದು. ಅರಸುಗೆಯ್ವಾತಂ ಮಂತ್ರಿಯ ಪೇೞ್ಕೆಗೆಯ್ಯಲೆವೇೞ್ಕುಂ ಅದೆಂತೆನೆ:

ಶ್ಲೋ || ಸ ಕಿಂ ಸಖಾ ಸಾಧು ನ ಶಾಸ್ತಿ ಯೋಪಂ
ಹಿತಾನ್‌ನಯಸ್ಸಂಶ್ರುಣತೇ ಸ ಕಿಂ ಪ್ರಭುಃ
ಸದಾನುಕೂಲೇಷು ಹಿ ಕುರ್ವತೇ ರತಿಂ
ನೃಪೇಷ್ವಮಾತ್ಯೇಷು ಚ ಸರ್ವಸಂಪದಃ  ||೮೩||

ಟೀ|| ಸ್ನೇಹಿತಂಗೆ ಬುದ್ಧಿಗಲಿಸದ ಮಿತ್ರನುಂ ಒಡೆಯಂಗೆ ಹಿತವಂ ಮಾಡದ ಭೃತ್ಯನುಂ ಮಂತ್ರಿಯ ಮಾತಂ ಕೇಳದರಸುಂ ಇಂತಿವರ್ ಪ್ರಯೋಜನವಿಲ್ಲ. ಅನುಕೂಲನಹ ಪ್ರಧಾನನಲ್ಲಿಯುಂ ಅರಸನಲ್ಲಿಯುಂ  ಸಕಲ ಸಂಪತ್ತು ದೊರಕೊಂಬುದು – ಎಂದಿಂತಪ್ಪ ರಾಜನೀತಿಗಳೊಳವು. ಆಂ ನಿನ್ನ ಪೇೞ್ದ ಬುದ್ದಿಯೊಳ್ ಸಂಜೀವಕಂಗೆ ತಕ್ಕುದಂ ಮಾೞ್ಪೆನಾತನೆನಗೆ ತಪ್ಪಲ್ಬಗೆವುದನೆಚಿತಱ*ಯಲಕ್ಕು ವೆಂಬುದುಂ ದವನಕನಿತೆಂದಂ: ದೇವಾ! ನೀವೇಕಾಕಿಯಾಗಿರ್ದವಸರದೊಳ ಸಂಜೀವಕ್ಕಂ ನಿಮ್ಮಲ್ಲಿ ಮುನ್ನಂ ಬರ್ಪಂದಮಲ್ಲದೆ ಭೋರನೆ ಬಂದತಿದೂರಮುಮತ್ಯಾಸನ್ನಮುಮಲ್ಲದೆ ನಿಂದು ಪಿಂದುಮುಂದುಮನೆಡಬಲನುಮಂ ಬೆರ್ಚಿದಂತೆ ನೋೞ್ಕುಮಪ್ಪೊಡಾಗಳ್ ನಿಮಗೆ ತಪ್ಪಲ್ಬಗೆಯ  ಬಂದನೆಚಿದಱ*ಯಿಮೆಂದು ಪೇೞ್ವುದುಂ ಪಿಂಗಳಕಂ ಕರಂ ಮುಳಿದಿಂತೆಂದಂ:

೧೯೪. ರಾಮನು ಕಾಕಾಸುರನ ಮೇಲೆ ಕೋಪದಿಂದ ಬಾಣ ಪ್ರಯೋಗಿಸಿದಂತೆ  ಆ ಪಕ್ಷಿ ಶ್ರೇಷ್ಠನನ್ನು ತತ್ ಕ್ಷಣವೇ ಕೊಂದನು. ವ|| ಹಾಗೆ ಬಿಟ್ಟ ಬಾಣ  ಮುಟ್ಟುವುಮೊದಲೇ ಸುರುಳುರುಳಿ ಹಂಸ ವಿದ್ವಂಸವಾಯಿತು. (ಹದಿನಾಲ್ಕನೆಯ ಕಥೆ ಯ ಶೇಷ) : ಅದರಿಂದ, ಶ್ಲೋ || ಅಕಾಲದಲ್ಲಿ ಸಂಚಾರಿಸಬಾರದು, ವಿಷಮರೊಡನೆ ಗೋಷ್ಠಿಯನ್ನು ಮಾಡಬಾರದು: ಕುಮಿತ್ರನ ಸಂಗಡ ಮಾತನಾಡಬಾರದು. ಸರೋವರದಲ್ಲಿ ಹುಟ್ಟಿದ ರಾಜ ಹಂಸ ಆಂದೆಯ ಗೆಳೆತನ ಮಾಡಿದುದರಿಂದ ಒಂದೇ ಬಾಣದಿಂದ ಮರಣ ಹೊಂದಿತು. ವ|| ಈ ರೀತಿಯಲ್ಲಿ ಬುದ್ದಿವಂತನಾದ ಒಳ್ಳೆಯು ಹೇಳಿದರೂ  ಕೇಳದೆ ಉಳಿದ ಒಳ್ಳೆಗಳು ದರ್ಪದಿಂದ ಆ ಸರ್ಪವನ್ನು ತಮ್ಮ ನಡುವೆ ಇಟ್ಟುಕೊಂಡಿರಲು ಆ ಹಾವು ಹಾಲನ್ನು ಕುಡಿದು ಕೊಬ್ಬಿ ಒಳ್ಳೆಗಳೊಡನೆ ಕೂಡಿ ಆಡಿಕೊಂಡಿತು. ಅಷ್ಟರಲ್ಲಿ ಇತ್ತ, ೧೯೫ ಹೆಣ್ಣು ತುಂಬಿಗಳ ಸಮೂಹದಿಂದ ಸುತ್ತುವರಿದ ಚೆನ್ನಾಗಿ ಅರಳಿರುವ ಮಲ್ಲಿಗೆಯ ತೋಟ, ಸುಂದರ ಪಾದರಿ, ಮುಚ್ಚಿದ ಮೊಲ್ಲೆಯ ರಾಶಿ, ಕಾಡುಗಿಚ್ಚಿನ ಭಯಂಕರವಾದ ಅಗ್ನಿಯಿಂದ ದಗ್ಧವಾದ ಬಳ್ಳಿಗಳು, ಬೇಸಗೆ, ನೆಲದಲ್ಲಿ ಸುಡುವ ಧೂಳು, ಸೂರ‍್ಯನ ಬಿಸಿಲಿನ  ಝಳದಿಂದ ಅಯಾಸಗೊಂಡ  ಜೀವಿಗಳು ಎಲ್ಲಿಲ್ಲಿಯೂ ಕಂಡು ಬಂದವು. ವ|| ಅಂತಹ ಬೇಸಗೆಯ ಕಾಲದಲ್ಲಿ ಪ್ರಜಾ ಪಾಲ ರಾಜನು ಜಲಕ್ರೀಡಾಸಕ್ತನಾಗಿ ಮನ್ಮಥನ ಮದ್ದಾನೆಯ ನಡುಗೆಯುಳ್ಳವರೂ, ಮನ್ಮಥನ ಬಿಲ್ಲಿನ ತುಂಡೆಂಬಂತೆ ಹುಬ್ಬಿನ ಬಳ್ಳಿಯಿಂದ ಶೋಭಿಸುವವರೂ, ರತ್ನ ಖಚಿತವಾದ  ಕಾಲಂದುಗೆಯ ಮಧುರ ನಾದದಿಂದ ಕೂಡಿದ ಸುಂದರ ಪಾದೆಯರೂ, ಮದಮದ್ಯದಿಂದ ಉನ್ಮತ್ತೆಯರೂ, ಕಾಮರಾಜ್ಯದ ಅದೇವತೆಯರೂ ಆದ ತನ್ನ ಅಂತಃಪುರುದ ಚೆಲುವೆಚಿiರನ್ನು ಕೂಡಿಕೊಂಡುಹೋಗಿ ಜಲಕ್ರೀಡೆಯಾಡುತ್ತಿದ್ದನು. ಅಂದು ಅಲ್ಲಿದ್ದ ಸರ್ಪವು ಅರಸಿಯನ್ನು ಹಿಡಿದುಕೊಂಡು ಬಿಡದೆ ಇರಲು ಅರಸನು ಅದನ್ನು ಕಂಡು ಹೇಗೋ ಅದನ್ನು ಬಿಡಿಸಿ ಸರ್ಪವನ್ನೂ ಒಳ್ಳೆಗಳನ್ನೂ ನುಚ್ಚುನುರಿಗೊಳಿಸಿ ಕೊಲ್ಲಿಸಿದನು. ಶ್ಲೋ || ಅದರಿಂದ ಹಾಲು ಕುಡಿದು ಸುಖದಿಂದ ನೃಪಸತಿಯರನ್ನು ಕೂಡಿಕೊಂಡಿದ್ದ ಒಳ್ಳೆಗಳು ಸರ್ಪಕೃತಾಪರಾಧದಿಂದಾಗಿ ಸತ್ತು ಹೋದವು. ಅದರಿಂದ ನಿನ್ನನ್ನು ಒಳಕ್ಕೆ ಸೇರಿಸಿಕೊಂಡರೆ ನನಗೂ ಅದೇ ಗತಿಯಾದೀತು ಎಂದು ಮಂದವಿಸರ್ಪಿಣಿ ಹೇಳಲು ಡುಂಡುಕ ಹೀಗೆಂದಿತು: ನಿನಗೆ ಇಂಥ ಅನಿಷ್ಟವೂ  ಅವಸ್ಥೆಯೂ ಅಗುವುದು ಬೇಡ. ನಾನಿಲ್ಲಿರುವವನಲ್ಲ. ಅತಿಥಿಯನ್ನೂ ಅಭ್ಯಾಗತನನ್ನೂ ಅವಜ್ಞೆಗೆಯ್ಯುವುದು ಅದೆಂಥ ಧರ್ಮ ? ಹೇಗೆಂದರೆ, ಶ್ಲೋ|| ಬ್ರಾಹ್ಮಣನಿಗೆ ಅಗ್ನಿಯೇ ಗುರು, ಕ್ಷತ್ರಿಯಾ, ವೈಶ್ಯ, ಶೂದ್ರರಿಗೆ ಬ್ರಾಹ್ಮಣನೆ ಗುರು, ಸತಿಗೆ ಪತಿಯೇ ಗುರು, ಅಭ್ಯಾಗತನು ಸರ್ವರಿಗೂ ಗುರು. ಶ್ಲೋ || ಅಲ್ಲದೆ, ಯಾವಾನಾದರೊಬ್ಬನ ಮನೆಗೆ ಬಂದ ಅತಿಥಿ ಭಗ್ನ ಮನಸ್ಕನಾದರೆ ತಾನು ಮಾಡಿದ ಪಾಪವನ್ನು ಆ ಗೃಹಸ್ಥನಿಗೆ ಕೊಟ್ಟು ಆ ಗೃಹಸ್ಥ ಸಂಪಾದಿಸಿದ ಪುಣ್ಯವನ್ನು ಕೊಂಡು ಹೋಗುವನು. ವ|| ಈ ರೀತಿ ಹೇಳಲು ಮನೆ ವಾರ್ತೆಯ ಧರ್ಮವೆಲ್ಲವನ್ನೂ ನೀನೆ ಬಲ್ಲೆಯೆನ್ನಲು ಮಂದವಿಸರ್ಪಿಣಿ ಮತಿಭ್ರಾಂತಿಯಿಂದ ದುಷ್ಟನನ್ನು ಶಿಷ್ಟನೆಂದು ಸ್ವೀಕರಿಸಿತು. ಇತ್ತ ಅರಸನು ತನ್ನ  ಸಿರಿಮಂಚದಲ್ಲಿ ಪವಡಿಸಲು ೧೯೬: ಅತಿತ್ವರಿತಗತಿಯ, ರಾಜನ ರಕ್ತವನ್ನು ಕುಡಿದಿರುವ ಬಾಯಿಯ ಆ ತಿಗಣೆಯು ಮಂಚದ ಛಿದ್ರಭಾಗವನ್ನು ಹೊಕ್ಕಿತು. ಅಂತು ಡುಂಡುಕತುಂಡ ಖಂಡಿತ ಶರೀರನಾದ ಅರಸನು ಭೋಂಕನೆ ಎಚ್ಚರಗೊಳ್ಳಲು ಶಯ್ಯಾಗೃಹದ ಕಾವಲುಗಾರರು ಅಲ್ಲಿಗೆ ಓಡಿ ಬಂದು ಹುಡುಕಿ ನೋಡಲು ಹೊದೆವಸ್ತ್ರವನ್ನು ಹತ್ತಿಕೊಂಡಿದ್ದ ಕೂರೆಯನ್ನು ಕಂಡು ಅರಸನ ನಿದ್ರಾಭಂಗ ಮಾಡಿದ ದ್ರೋಹಿ ಇದೇ ಎಂದು ಮಂದವಿಸರ್ಪಿಣಿಯನ್ನು ಕೊಂದರು. ಅದರಿಂದ ಶ್ಲೋ || ದುರ್ಜನರನ್ನು ಸೇರಿಸಿಕೊಂಡವನು ಕೇಡುವನು. ಡುಂಡುಕನೆಂಬ ತಿಗಣೆಯ ಅಪರಾಧದಿಂದ ಮಂದವಿಸರ್ಪಿಣಿಯೆಂಬ  ಹೇನು  ಸತ್ತು ಹೋಯಿತು. ವ|| ಈ ರೀತಿ ಅನೇಕ ಉಪಕಥೆಗಳನ್ನು ಕುರಿತು ದೃಷ್ಟಾಂತಗಳನ್ನೂ ನೀತಿ ಶಾಸ್ತ್ರದ ಅಭಿಪ್ರಾಯಗಳನ್ನೂ ಹೇಳಿ ದವನಕನು ಬಳಿಕ ಹೀಗೆಂದನು: ನಿನ್ನ ಮರುಳುತನಕ್ಕೆ ಮೊದಲೇ ಬೇಸತ್ತು ಪರಿಗ್ರಹಗಳೆ ಹರಿದು ಹೋದವು. ನಾನೂ ಕಾರ್ಯ ಸಹಾಯನಲ್ಲದೆ  ಖಡ್ಗ ಸಹಾಯನಲ್ಲ. ಹಾಗಿದ್ದರೂ ನನಗೆ ತಿಳಿದ ಎಲ್ಲ ವಿಚಾರಗಳನ್ನೂ ಚೆನ್ನಾಗಿ ಭಿನ್ನೈಸಿದೆನು. ಇನ್ನು ನನಲ್ಲಿ ದೋಷವಿಲ್ಲ. ಮುಂದಾಗುವುದನ್ನು ನೀನೇ ಬಲ್ಲೆ ಎನ್ನಲು ಪಿಂಗಳಕನು  ಹೀಗೆಂದಿತು: ನೀನು ನನಗೆ ಇಷ್ಟೆ ಒತ್ತಾಯದಿಂದ ಬುದ್ದಿ ಹೇಳಿದುದೆಲ್ಲ ನನ್ನ ಹಾನಿವೃದ್ಧಿಗಳು ನಿನ್ನದಾದುರಿಂದ ಹೇಳಿದೆಯಷ್ಟೆ. ನಾನೂ ಇಷ್ಟರವರೆಗೆ ವಿರೋಸಿದುದು ಸಂಜೀವಕನು ಪಶುವಾಗಿರುವುದಕ್ಕಾಗಿ. ನಾನದರೋ ಮೃಗಾದಿರಾಜ ಅದನ್ನು ಹೇಗೆ ಕೊಲ್ಲಲ್ಲಿ ಎಂದಿದ್ದೆ. ನೀನು ಹೇಳಿದುದು ತಪ್ಪಲ್ಲ. ಅರಸನಾದವನು ಮಂತ್ರಿಯ ಮಾತನ್ನು ಅಂಗೀಕರಸಲೇಬೇಕು. ಶ್ಲೋ|| ಸ್ನೇಹಿತನಿಗೆ ಬುದ್ಧಿ ಹೇಳದ  ಮಿತ್ರನೂ ಒಡೆಯನಿಗೆ ಹಿತ ಬಯಸದ ಭೃತ್ಯನೂ ಮಂತ್ರಿಯ ಮಾತನ್ನು ಕೇಳದ ಅರಸನೂ ಪ್ರಯೋಜನವಿಲ್ಲ. ಅನುಕೂಲನಾದ ಅರಸನಲ್ಲಿಯೂ ಪ್ರಧಾನನಲ್ಲಿಯೂ ಸಕಲಸಂಪತ್ತೂ ಬಂದು ಸೇರುವುವು. ವ|| ನಾನು ನೀನು ಹೇಳಿದಂತೆ ಸಂಜೀವಕನಿಗೆ ತಕ್ಕುದನ್ನು ಮಾಡುವೆನು. ಆತನು ನನಗೆ ಎರಡೆಣಿಸುದುದನ್ನು ಹೇಗೆ ತಿಳಿಯುವುದು ಸಾಧ್ಯ ಎನ್ನಲು ದವನಕನು ಹೀಗೆಂದನು : ದೇವಾ ! ನೀನು ಏಕಾಕಿಗಳಾಗಿದ್ದ ಸಮಯದಲ್ಲಿ ಸಂಜೀವಕನು ನಿಮ್ಮಲ್ಲಿಗೆ ಎಂದಿನಂತೆ ಬರುವ ರೀತಿ ಬಿಟ್ಟು ಇದ್ದಕ್ಕಿದ್ದಂತೆ ಬಂದು ಅತಿ ದೂರವೂ  ಅತಿ ಹತ್ತಿರವೂ ಆಲ್ಲದಲ್ಲಿ ನಿಂತು ಹಿಂದೆ ಮುಂದೆ ಎಡಬಲಗಳನ್ನು ಹೆದರಿದವನಂತೆ ನೋಡಿದನಾದರೆ ನಿಮಗೆ ಎರಡೆಣಿಸಿ  ಬಂದೆನೆಂದು ತಿಳಿಯಿರಿ ಎಂದು ಹೇಳಿದನು. ಅದಕ್ಕೆ ಪಿಂಗಳಕನು ಸಿಟ್ಟಾಗಿ ಹೀಗೆಂದನು:

ಕೊರ್ಬಿದ ಶಾಕ್ವರನಂ ಭುಜ
ಗರ್ಬದೆ ಪಿಡಿದಡಸಿ ಸೀೞ್ದು ನಿಜಗರ್ಬದಗು
ರ್ಬುರ್ಬಿರೆ ಕೊರ್ಬಿರೆ ಕೊಂದಾಂ
ಪರ್ಬಂ ಮಾಡೆನೆ ಸೃಗಾಲ ನಾಳೆಯೆ ನಿನಗಂ  ೧೯೭.

ಎಂಬುದುಂ, ದವನಕಂ ಮಹಾಪ್ರಸಾದಮೆಂದು ನಾನಿನ್ನುಸಿರದಿರ್ದೊಡೆ ದೂತನಿರ್ದಿಷ್ಟಮಕ್ಕುಂ ಸಂಜೀವಕನಂ ಬೇಗಂ ಪ್ರಕೋಪಂಗೊಳಿಸುವೆನೆಂದಲ್ಲಿಂ ತಳರ್ದು ಬರುತ್ತುಂ ಕಠಿಣಹೃದಯನಪ್ಪ ಕಂಠೀರವನೆಂದುದನೆನಿಸಿದೆಂ, ಈ ಮೃದುಹೃದಯನಪ್ಪ ಸಂಜೀವಕನಂ ಭೇದಿಸಿವುದಾವ ಗಹನಮೆಂದು ಕೃತಕವಿಷಾದಂ  ದೀನವದನನಾಗಿ ಬಂದು ಮುಂದೆ ನಿಂದ ದವನಕಂ ಕಂಡು ಸಂಜೀವಕಂ ಮಿತ್ರಪ್ರತಿಪತ್ತಿಯೆಲ್ಲಮಂ ನೆಱೆಯೆ ಮಾಡಿ ಬೞ*ಕ್ಕಂನ್ನೂ ಭೂ ನಿನ್ನ ಮೋಗಂ ಖಿನ್ನವಾದ ಕಾರಣವೇನೆಂಬುದುಂ ಧೂರ್ತಜಂಬುಕನಿಂತೆಂದುದು:

ಶ್ಲೋ || ಸಂಪತ್ತಯಃ ಪರಾಯತ್ತಾಃ ಸದಾಚಿತ್ತಮನಿರ್ಮೃತಂ
ತಜ್ಜೀವಿತಮವಿಶ್ವಾಸ್ಯಂ ತೇಷಾಂ ಯೇ ರಾಜಸಂಶ್ರಯಾಃ  |೮೪||

ಟೀ|| ಆರ್ ಕೆಲಂಬರರಸನನೋಲೈಸುವರ್ ಅವರೈಶ್ವರ‍್ಯಂ ಪರಾನವಾಗಿಹುದು ಚಿತ್ತಮೆಂದುಂ ಸುಖಂಬಡೆಯದು, ಜೀವಿಸುಹವುಂ ನಂಬುಗೆಯಿಲ್ಲದುದು. ಮತ್ತಂ

ಶ್ಲೋ || ಆಚಾರ‍್ಯಾನ ಪರತಯಶ್ವ ತುಲ್ಯಶೀಲಾ
ನಹ್ಯೇಷಾಂ ಪರಿಚಿತಮಸ್ತಿ ಸೌಹೃದಂ ವಾ
ಶುಶ್ರೂಷಾಂ ಚಿರಮಪಿ ಸಂಭೃತಾಂ ಪ್ರಯತ್ನಾತ್
ಸಂಕುದ್ಧಾ ರಜ ಇವ ನಾಶಯಂತಿ ಮೇಘಾಃ  ||೮೫||

ಟೀ|| ಆಚಾರ‍್ಯರ್ ಅರಸುಗಳ್ ಸಮಾನಶೀಲರ್, ಅವರಲ್ಲಿ ಪರಿಚಯಭ್ಯಾಸವೆಂಬುದಿಲ್ಲ. ಮಿತ್ರಭಾವವುಮಿಲ್ಲ. ಕೋಪಿಸಿದರಾದೊಡೆ ಪ್ರಯತ್ನದಿಂ ಹಲವು ಕಾಲಂ ಮಾಡಿದ ಶುಶೂಷೆಯಂ ಕಿಡಿಸುವರ್i. ಅದೆಹಗೆಂದೊಡೆ ಮೇಘಂಗಳ್ ರಜವ ಕಿಡಿಸುವ ಹಾಗೆ. ಮತ್ತಂ

ಶ್ಲೋ|| ಶಾಸ್ತ್ರಂ ಸುನಿಶ್ಚಿತಯಾ ಪರಿಚಿಂತನೀಯಂ
ಆರಾತೋಪಿ ನೃಪತಿಃ ಪರಿಶಂಕನೀಯಃ
ಅಂಕೇ ಸ್ಥಿತಾಪಿ ಯುವತಿಃ ಪರಿರಕ್ಷಣೀಯಾ
ಶಾಸ್ತ್ರೇ ನೃಪೇ ಯುವತೌ ಚ ಕುತೋ ವಶಿತ್ವಂ  ||೮೬||

ಟೀ|| ಅತಿಬುದ್ದಿಯುಳ್ಳವರಾದೊಡಂ ಶಾಸ್ತ್ರಚಿಂತನೆಯಂ ಮಾಡವೇೞ್ಕುಂ. ಏಸು ಕಾಲಮೋಲೈಸಿದೊಡಂ ತನ್ನೊಡೆಯಂಗಂಜಬೇಕು, ತೊಡೆಯ ಮೇಲಿರ್ದೊಡಂ  ಸ್ತ್ರೀಯನಾ ರೈದುಕೊಂಡಿರಬೇಕು. ಶಾಸ್ತ್ರದಲ್ಲಿಯುಂ ನೃಪನಲ್ಲಿಯುಂ ಸ್ತ್ರೀಯರಲ್ಲಿಯುಂ ತನಗೆ ವಶವಾಯಿತೆಂದು ಮೆಯ್ಮಱೆದಿರಲಾಗದು.

ಪುಗುವುದು ಕಿಚ್ಚಂ ನುಂಗುವು
ದು ಗರಳಮಂ ಪಾಯ್ವುದಕಕುಧರಾಗ್ರದಿನು
ರ್ವಿಗೆ ಸೇವಿಸದಿರ್ಪುದಸೇ
ವ್ಯಗುಣಾನ್ವಿತನಪ್ಪ ನರಪನಂ ಮಾನಧನಂ  ೧೯೮

ಸ್ಥಿತಿಸಾರರಲ್ಲದನೀ
ಪತಿಗಳನೋಲೈಸಿ ಪಡೆವ ಧನಲಾಭದಿನು
ನ್ನತಗಿರಿಗುಹಾಂತರಾಳ
ಸ್ಥಿತಿ ಲಾಭಂ ಪೂಜ್ಯಮೆಂಬರಱ*ವವರೆಲ್ಲರ್  ೧೯೯

ಇಂತೆಂದು ದವನಕಂ ಭಾ
ಷಾಂತರದೋದುಗಳನೋದೆ ಗೋಪತಿಗೆ ಭಯ
ಭ್ರಾಂತಿ ಪಿರಿದಾಗಿ ಚಿಂತಾ
ಕ್ರಾಂತಮನಂ ದವನಕಂಗೆ ಮತ್ತಿಂತೆಂದಂ  ೨೦೦

ನೀನಿಂತು ಪಲವೋದನೋದಿ ಎನ್ನಂ ಪೊಲೆಗಿಡಿಸದೆ ಉಳ್ಳುದನುಳ್ಳದಂತೆ ಪೇೞೆನೆ ದವನಕ ನಿಂತೆಂದಂ:

ಅರಸುಗಳವಿಚಾರಪರರ್
ಪುರುಷದ್ವೇಷಿಗಳನಾಪ್ತರಹಿತರಪಾಯಂ
ಪಿರಿದದಱ*ಂ ನೃಪರೋಲಗ
ವರಿದಂಜುವೆನೆಂದೊಡಂದು ಪಲ ತೆಱೆದಿಂದಂ  ೨೦೧

ನೀನೆಂದೊಡಂ ನಿನ್ನನಾಂ ನಂಬಿಸಿ ನುಡಿದಾಗ್ರಹದಿಂ ತಂದೆಮ್ಮರಸರಗಾಳ್ಮಾಡಿದೊಡೆ ನೀನುಂ ಭೃತ್ಯಭಾವದಿಂ ನಡೆಯುತ್ತಿರೆ ಪಿಂಗಳಕನಿಂದು ತನ್ನಾಸ್ಥಾನದೊಳಿರ್ದು ನಿರ್ನಿಮಿತ್ತಂ ನಿನಗೆ ಮುನಿದು ಸಂಜೀವಕನಂ ಕೊಂದಲ್ಲದೆ ಮಾಣೆನೆಂದು ತೊಟ್ಟನೆ ಮಾರ್ಯಾದೆಗೆಟ್ಟು ನುಡಿದಂ ಅದನಾಂ ಕೇಳ್ದುಸಿರದಿರ್ದೆನಪ್ಪೊಡೆ ವಿಶ್ವಸಘಾತುಕತ್ವಮುಂ ಮಿತ್ರದ್ರೋಹಮುಮಪ್ಪುದೆಂದಱ*ಪಲ್ಬಂದೆನೆಂಬುದುಮಾ ಮಾತಂ ಕೇಳ್ದು ಸಂಜೀವಕಂ  ನಿರ್ಜೀವಕನಾಗಿ ಕಿಱ*ದು ಬೇಗಮಿರ್ದು ಬೞ*ಕಮಿಂತೆಂದಂ:

ಕನಸಿನೊಳಂ ನೆನಸಿನೊಳಂ
ಮನೋವಚಃಕಾಯಕರ್ಮವೆಂಬಿನಿತಱೊಳಂ
ತನಕೆ ಕರಂ ಹಿತನುಂ ಭ
ಕ್ತನುಮಪ್ಪನನೇಕೆ ಕೋಪಿಪಂ ಮೃಗರಾಜಂ  ೨೦೨

ಅದಲ್ಲದೆಯುಮಾತಂಗಾನೇತೆಱದೊಳಂ ಪೊಲ್ಲನಲ್ಲೆಂ. ಅಕಾರಣಂ ಮುನಿದಂ. ಎತ್ತಾನುಂ,

ಶ್ಲೋ|| ಕಾರಣೇನೈವ ಜಾಯಂತೇ ಮಿತ್ರಾಣಿ ರಿಪವಸ್ತಥಾ
ರಿಪವೋ ಯೇನ ಜಾಯಂತೆ ಕಾರಣಂ ತತ್ಪರಿತ್ಯಜೇತ್   ||೮೭||

ಟೀ|| ಒಂದು ಕಾರಣದಿಂ ಕೆಳೆಯರುಂ ಹಗೆಗಳಹರು. ಆವುದಾನೊಂದು ಕಾರಣದಿಂ ಪಗೆಗಳಾದರೆಂಬುದನಱ*ದು ಆ ಕಾರಣಮಂ ಬಿಟ್ಟು ಕಳೆವುದು. ಎಂಬೀ ನೀತಿಯುಂಟು. ಮೃಗೇಂದ್ರಂಗಮೆನಗಂ ವೈರಕಾರಣಮಾವುದದಂ ನೀನಱ*ವೆಯಪ್ಪೊಡೆ ಪೇೞ್. ಆ ಅಂದಮ ನಿಂದು ಮೊದಲ್ ಪತ್ತುವಿಟ್ಟು ನಡೆವೆನೆಂಬುದುಂ ಜಂಬುಕಮೆದೇಂ ಕಾರಣಮೆಂದಱ*ಯೆನೆನೆ ಮತ್ತಂ ಸಂಜೀವಕನಿಂತೆಂದಂ:

ಶ್ಲೋ||  ನಿಮಿತ್ತಮುದ್ದಿಶ್ಯ ಹಿ ಯಃ ಪ್ರಕುಪ್ಯತೇ
ಧ್ರುವಂ ಸತಸ್ಯಾಪಗಮೇ ಪ್ರಸೀದತಿ
ಅಕಾರಣದ್ವೇಷಿ ಮನೋ ಹಿ ಯಸ್ಯತತ್
ವ್ಶೆರಂ ಕದಾಸೌ ಪರಿತೋಷಮೇಷ್ಯತಿ  ||೮೮||

ಟೀ|| ಆವನೊರ್ವಂ ನಿಮಿತ್ತವನುದ್ದೇಶಿಸಿ ಕೋಪಿಸುವಂ ಆ ನಿಮಿತ್ತಂ ತೀರಲೇಗೆಯ್ದುಂ ಪ್ರಸನ್ನನಹಂ: ನಿಷ್ಕಾರಣಮಾವನೋರ್ವನ ಚಿತ್ತಂ ದ್ವೇಷಮುಳ್ಳುದಾಗಿಹುದು ಆತನ ವೈರಮೆಂದುಂ ತೀರಲರಿಯದು. ಎಂಬ ನೀತಿಯುಂಟಪ್ಪ ದಱ*ಂದಕಾರಣಕೋಪನುಂ ಪಾಪರೂಪನಪ್ಪಾ ಕೇಸರಿಗಾಸುರ ಕರ್ಮಂಗೆಯ್ಯಲ್ವೇಡೆಂದು ಧರ್ಮೋಪದೇಶಂಗೆಯ್ದು ಪರಲೋಕಕ್ಕುತ್ತರಸಾಧಕನಾಗಿ ನಡೆವೆಂ, ಎನಗಾತಂ ಮುನಿವಿದೆಲ್ಲಮವಿನೀತಸೇವೆಯ ಫಲಮದೆಂತೆನೆ :

ಶ್ಲೋ|| ಅರಣ್ಯರುದಿತಂ ಕೃತಂ ಶವಶರೀರಮುದ್ವರ್ತಿತಂ
ಸ್ಥಲೇಬ್ಜಮವರೋಪಿತಂ ಬರಕರ್ಣಜಾಪಃ ಕೃತಃ
ಶ್ವ ಪುಚ್ಛಮವನಾಮಿತಂ ಸತತಮೂಷರೇ ವರ್ಷಿತಂ
ತದಂಧ ಮುಖದರ್ಪಣಂ ಯದಬುಧೋ ಜನಸ್ಸೇವಿತಃ  ||೮೯||

ಟೀ|| ಅಡವಿಯೊೞುಹವುಂ ಹೆಣಕ್ಕೆ ಲೇಪನಂಗೆಯ್ವುದುಂ ನೆಲದಲ್ಲಿ ತಾವರೆಯಂ ಬಿತ್ತುಹವುಂ ಕಿವುಡಂಗೇಕಾಂತವಂ ಹೇೞಹವುಂ ನಾಯಬಾಲಮಂ ಕಾಸಿ ತಿರ್ದುಹವುಂ ಸೌಳುಮಣ್ಣಿನಲ್ಲಿ ಮೞೆ ಬರುಹವುಂ ಕುರುಡಂಗೆ ಕನ್ನಡಿಯಂ ತೋರುಹವುಂ ಮೂರ್ಖನಂ ಬುದ್ಧಿವಂತನೋಲೈಸುಹವುಂ ಇವಱೋಪಾದಿ ಎಂಬ ನೀತಿಕಾಱನ ಮಾತದೇಕೆ ತಪ್ಪುಗುಮಲ್ಲದೆಯುಂ ಆತನುಮಾಂ ಪೇೞ್ದ ಧರ್ಮೋಪದೇಶಮುಮಂ ಬಿಟ್ಟು ತನ್ನ ಮುನ್ನಿನ ದುಷ್ಟಮಂತ್ರಿಗಳ ಮಾತಂ ಕೈಕೊಂಡನದಱ*ಂ,

ಶ್ಲೋ|| ಗುಣಾ ಗುಣಜ್ಞೇಷು ಗುಣಾ ಭವಂತಿ
ತೇ ನಿರ್ಗುಣಂ ಪ್ರಾಪ್ಯ ಭವಂತಿ ದೋಷಾಃ
ಸುಸ್ವಾದುತೋಯಾಃ ಪ್ರವಹಂತಿ ನದ್ಯಃ
ಸಮುದ್ರಮಾಸಾದ್ಯ ಭವಂತ್ಯಪೇಯಾಃ  ||೯೦||

ಟೀ|| ಗುಣಂಗಳ್ ಗುಣಂಗಳನಱ*ವವರಲ್ಲಿ ಗುಣಂಗಳೆ ಅಹುವು. ದುರ್ಜನನಯ್ದಿದೊಡೆ ದೋಷಂಗಳೆ ಅಹುವು. ಅದು ಹೇಗೆಂದರೆ ಸ್ವಾದೂದಕವಪ್ಪ ನದಿಗಳ್ ಸಮುದ್ರವಂ ಕೂಡಿದ ಹಾಂಗೆ. ಅದಲ್ಲದೆಯುಂ,

ಶ್ಲೋ|| ಕೃತಶತಮಸತ್ಸು ನಷ್ಟಂ ಸುಭಾಷಿತಶತಕಂ ಚ ನಷ್ಟಮಜ್ಞೇಷು
ವಚನಶತಮವಚನಜ್ಞೇ ಬುದ್ಧಿಶತಂ ಚೇತ್ಯಚೇತನೇ ನಷ್ಟಂ ||೯೧||

ಟೀ|| ದುರ್ಜನಂಗೆ ನೂಱು ಲೇಸಂ ಮಾಡಿದೊಡಂ ಕಿಡುವುದು. ಅಱ*ಯದವನ ಮುಂದೆ ನೂಱು ಸುಭಾಷಿತವನೋಡಿದೊಡಂ ಕೆಡುವುದು. ಕೇಳದವಂಗೆ ನೂಱು ಮಾತಂ ಪೇೞ್ದೋಡಂ ಕೆಡುವುದು. ಮಱಹುಳ್ಳವಂಗೆ ನೂಱು ಬುದ್ದಿಯಂ ಪೇೞ್ದೋಡಂ ಕೆಡುವುದು. ಮತ್ತಂ.

ಶ್ಲೋ||  ದುರ್ಜನಗಮಾ ನಾರಃ ಪ್ರಾಯೇಣಾ ಪಾತ್ರಭೃದ್ಬವತಿ ರಾಜಾ
ಕೃಪಣಾನುಸಾರಿ ವಿತ್ತಂ ದೇವೋ ಗಿರ್ಯುದ ವರ್ಷಿತಶ್ಯಕ್ರಃ  ||೯೨||

ಟೀ|| ಸ್ತ್ರೀಯರ್ ನೀಚರಿಂದೆ ಭೋಗಿಸತಕ್ಕವರ್. ಅರಸುಗಳ್ ಯೋಗ್ಯರಲ್ಲದವರನೆ ಲೇಸಾಗಿ ಸಲಹುವರ್, ಅತಿಲೋಭಿಗಳ್ಗೆ ವಸ್ತು ಸೇರುವುದು. ಇಂದ್ರಂ ಗಿರಿಸಮುದ್ರಂಗಳಲ್ಲಿಯೆ ಮೞೆಯಂ ಕಱೆವಂ ಮತ್ತಂ.

ಶ್ಲೋ||ಸ್ನಿಗ್ಧೈರೇವಪ್ಯುಷಕೃತಮಪಿ ದ್ವೇಷ್ಯತಾಮೇತಿ ಕಿಂಚಿತ್
ಸ್ನಿಗ್ಧಾನ್ಯೈರಪಕೃತಮಪಿ ಪ್ರೀತಿ ಮೇವಾತನೋತಿ
ದುರ್ಗ್ರಾಹ್ಯತ್ವಂ ನೃಪತಿ ವಚಸಾಮೇಕ ಭಾವಾಶ್ರಯಾಣಾಂ
ಸೇವಾಧರ್ಮಃ ಪರಮಗಹನೋ ಯೋಗಿನಾಮಪ್ಯಗಮ್ಯಃ  ||೬೩||

ಟೀ|| ಸ್ನೇಹವುಳ್ಳವರುಪಕರಮಂ ಮಾಡಿದೊಡಂ ಕೋಪವಹುದು. ದುರ್ಜನರಪಕಾರವಂ ಮಾಡಿದೊಡದು ಸಂತೋಷವಾಗಿಹುದು. ಒಂದೇ ಸ್ವಭಾವವಪ್ಪ ನೃಪವಚನಂಗಳಾರ್ಗಂ ಸ್ವೀಕರಿಸಲ್ಬಾರದುವು. ಸೇವಾಧರ್ಮಮೆಂಬುದು ಅತ್ಯಂತಂ ನಿರ್ವಹಿಸಲ್ಬಾರದು.  ತಪಸ್ವಿಗಳ್ಗಾದೊಡಂ ಸಾಧ್ಯಮಲ್ಲ,

ಶ್ಲೋ|| ಮೌನಾನ್ಮೂಕಃ ಪ್ರವಚನಪಟುರ್ವಾಚಕೋ ಜಲ್ಪಕೋ ವಾ
ಪಾರ್ಶ್ವೇ ದೃಷ್ಟಃ ಕಿಮಪರಥವಾ ದೂರತೋಪ್ಯಪ್ರಗಲ್ಬಃ
ಕ್ಷಾಂತ್ಯಾಭೀರುರ‍್ಯದಿ ನ ಸಹತೇ ಪ್ರಾಯಶೋ ನಾಭಿಜಾತಃ
ಸೇವಾಧರ್ಮಃ ಪರಮಗಹನೋ ಯೋಗಿನಾಮಪ್ಯಗಮ್ಯಃ ||೯೪||

ಟೀ|| ಉಸಿಕನಿರ್ದೊಡೆ ಮೂಗುವಟ್ಟನೆಂದುಂ ಮಾತಱ*ದೊಡೆ ಗೞಹನೆಂದುಂ ಪಕ್ಕದೊಳಿರೆ ಧೃಷ್ಟನೆಂದುಂ ದೂರದೊಳಿರೆ ಜಾಣನಲ್ಲನೆಂದುಂ ಸೈರಿಸಿದೊಡೆ ಪಂದೆಯೆಂದುಂ ಸೈರಣೆಯಿಲ್ಲದೊಡೆ ಕೀೞನೆಂದುಂ ಪೞೆಗೆಡೆಯಕ್ಕುಂ. ಸೇವಾಧರ್ಮಮೆನ್ನರ್ಗಂ ಕಷ್ಟಂ. ಕಿತ್ತಡಿಗಳ್ಗಪ್ಪೊಡಂ ಮಾಡಲ್ಬಾರದು.

ಶ್ಲೋ|| ಪರಸೇವಾ ಮನುಷ್ಯಾಣಾಮಸಿಧಾರಾವಲೇಹನಂ
ಪಂಚಾನನ ಪರಿಷ್ವಂಗೋ ವ್ಯಾಳಿವದನಚುಂಬನಂ  ||೯೫||

ಟೀ|| ಪರಸೇವೆಯೆಂಬುದು ಬಾಳ ಬಾಯ್ದಾರೆಯಂ ನೆಕ್ಕಿದಂತೆಯುಂ ಸಿಂಗಮಾನಾಲಿಂಗಿಸಿದಂತೆಯುಂ ಪಾವಿನ ನಂಜುವಾಯನಂಜದೆ ಚುಂಬಿಸಿ ದಂತೆಯುಮಿರ್ಕುಂ. ಇಂತಪ್ಪ ಸೇವಾಧರ್ಮಮನಾಂ ಮುನ್ನಱ*ವಾತನಾಗಿಯುಮೇನಾನುಮೊಂದು ತೆಱದಿಂ ಹೊಲ್ಲೆಹಂಗೆಯ್ದೆನಕ್ಕು ಪಿಂಗಳಕನೇಕೆ ಮುನಿವಂ. ಇದನಾತನಂ ಬೆಸಗೊಂಡೀಯೊರ್ಮೆಗೆ ಕ್ಷಮಿಸುವಂತು ಮಾೞ್ಪೆಂ. ಅದಲ್ಲದಾಗಳ್ ಅರುಸುಗಳವಿಚಾರ ದಿಂದಾರಾನುಮಂ ಕೊಲಲುಂ ಕಿಡಿಸಲುಮೆಂದಿರ್ದರಲ್ಲದೆ ಮಂತ್ರಿಗಳಿಚ್ಚೆಯಂ ಪ್ರತಿಪಾಲಿಸರದೆಂತೆನೆ:

ಶ್ಲೋ|| ವೈದ್ಯೋ ವಿದ್ವಜ್ಜನೋಮಾತ್ಯೋ ಯಸ್ಯ ರಾಜ್ಞಂ ಪ್ರಿಯಂ ವದೇತ್
ಆರೋಗ್ಯ ಧರ್ಮಕೋಶೇಭ್ಯಃ ಕ್ಷಿಪ್ರಂ ಸ ಪರಿಹೀಯತೇ  |೯೬||

ಟೀ|| ವೈದ್ಯನುಂ ವಿದ್ವಾಂಸನುಂ ಮಂತ್ರಿಯುಂ ಅರಸಿನಿಚ್ಚೆಯೆನೆ ನುಡಿದಹರ್. ಆ ನೃಪರಾರೋಗ್ಯಧರ್ಮಕೋಶಂಗಳ ದೆಸೆಯಿಂ ಬೇಗಂ ಹೀಯಮಾನನಹನು ಎಂಬುದು ನೀತಿ ಶಾಸ್ತ್ರಮುಂಟು. ನೀನಪ್ಪುಡೆ ಪಿಂಗಳಕಂಗೆ ಮಂತ್ರಿಯಪ್ಪೆ ಈಗಳಾತನೆನ್ನನೞ*ದು ತನ್ನ ಜಸಮುಮಂ ಧರ್ಮಮುಮನೞ*ದುಕೊಳ್ಬಗೆದಂ. ಆನುಂ ಮುನ್ನಮೆ ನಿನ್ನಂ ನಂಬಿ ಬಂದಿರ್ದೆನದಱ*ಂ

ಶ್ಲೋ|| ಕಾರ‍್ಯೇಷುಯದಾಸನ್ನಂ ವಿನಿಪಾತೇ ಯತ್ಪ್ರದಾನಂ ಚ
ಶಕ್ಯಂ ಸುಖಾನುಬಂಧಂ ವಿಪುಳಫಲಂ ಯಚ್ಚ ಧರ್ಮಿಷ್ಠಂ  ||೯೭||

ಟೀ|| ಕಾರ‍್ಯಸನ್ನನಾಗಿರ್ದಲ್ಲಿ ಆನತನಾಗಿರ್ದಲ್ಲಿ ಸುಖಾನುಬಂಧದಲ್ಲಿ ಆವುದಾನೊಂದು ಧರ್ಮಾರ್ಥವಾಗಿ ಕೊಟ್ಟುದು ವಿಪುಳಫಲವಾಗಿಹುದು, ಎಂಬ ನೀತಿಯುಂಟಪ್ಪುದಱ*ಂದಿಲ್ಲಿಯಾಸನ್ನವಿನಿಪಾತಮಾಗಲಿರ್ದ ಕಾರ‍್ಯದ ಸಮಾವಸ್ಥೆಯಂ ನೀನಱ*ಯದಿರ್ದೆಯದಱ*ಂದೀಯವಸರದೊಳ್ ಪೊಕ್ಕು ನುಡಿದು ನಿರ್ಭಯಮಪ್ಪಂತು ಮಾಡಲ್ವೇೞ್ಕುಮೆನೆ ದವನಕನಿತೆಂದಂ: ನೀಂ ಪೇೞ್ದಂತೆ ಮೃಗಾರಾಜನ ಮನೆಯೊಳಗೆ ಮಂತ್ರಿಯಪ್ಪೆನಾಗಿಯುಂ

ಶ್ಲೋ|| ಮೃದುನಾ ಸಲಿಲೇನ ಭೇದ್ಯಮಾನಾಪಕೃಷ್ಯನ್ತಿ ಗಿರೇರಪಿ ಸ್ಥಲಾನಿ
ಉಷಜಾಪಕ ಕರ್ಣಜಾಪಕೌಘೈಃ ಕಿಮು ಚೇತಾಂಸಿ ಮೃದೂನಿ ಮಾನವಾನಾಂ  ||೯೮||

ಟೀ|| ಮೃದುವಹ ಮನುಷ್ಯರ ಚಿತ್ತಂಗಳ್ ಕೊಂಡೆಯರಿಂ ಕಿಡುವುದು. ಅದೆಹಗೆಂದೊಡೆ ಮೃದುವಹ ಉದಕದಿಂ ಭೇದಿಸಲ್ಪಟ್ಟ ಗಿರಿತಟಂಗಳೋಗಾಗಿ ಬೀಳ್ವಹಗೆ ಎಂಬ ನೀತಿಗಳೊಳವು. ಆತಂ ಕರ್ಣೇಜಪರ ಮಾತಂ ಕೇಳ್ದು ಕೈಕೊಂಡನೆಂಬುದಂ ಸಂಜೀವಕಂ ಭಾವಿಸಿ ಬೞ*ಕ್ಕಿಂತೆಂದಂ:

ಶ್ಲೋ || ನರಪತಿ ಹಿತಕರ್ತಾ ದ್ವೇಷ್ಯತಾಂ ಯಾತಿ ಲೋಕೋ
ಜನಪದ ಹಿತಕರ್ತಾ ತ್ಯಜ್ಯತೇ ಭೂಮಿಪಾಲೈಃ
ಇತಿ ಮಹತಿ ವಿರೋಧೇ ದೃಶ್ಯಮಾನೋ ಸಮಾನೇ
ನೃಪತಿ ಜನಪದಾನಾಂ ದುರ್ಲಭಃ ಕಾರ‍್ಯಕರ್ತಾ         ||೯೯||

ಟೀ|| ಅರಸಿಂಗೆ ಹಿತವ ಮಾಡುವಾತಂ ಪ್ರಜೆಗೆ ಹಗೆಯಹನು: ಪ್ರಜೆಗೆ ಹಿತವ ಮಾಡುವಾತನನರಸುಗಳ್ ಕೈಪಿಡಿಯರು: ಇಂತು ಮಹಂಥ ವಿರೋಧಂ ಸಮನಾಗಿ ಕಾಣಲ್ಪಡುತ್ತುಂ ಇರಲು ನೃಪಂಗಂ ಪ್ರಜೆಗಂ ಹಿತವಹಂತು ಮಾಡುವ ಮಂತ್ರಿ ದುರ್ಲಭನು ಎಂಬ ನಯಶಾಸ್ತ್ರಮೇಕೆ ತಪ್ಪುಗಂ, ಮುನ್ನಂ ಪೞ*ಯರುಮನಾಪ್ತರುಮಂ ಪೊಱಗಿಕ್ಕಿ ಪತಿಗೆ ಹಿತೋಪದೇಶಂಗೆಯ್ಯರದೆಂತೆನೆ: ಉಷ್ಟ್ರಂ ಕಾಕಾದಯೋ ಯಥಾ ಎಂಬ ಕಥೆಯಂತಕ್ಕುಮೆನೆ ದವನಕದೆಂತೆನೆ ಸಂಜೀವಕಂ ಪೇಳ್ಗುಂ :

೧೯೭: ಕೊಬ್ಬಿದ ಎತ್ತನ್ನು ಭುಜಬಲದಿಂದ ಹಿಡಿದು ಸೀಳಿ ಅದನ್ನು ಕೊಂಡು ನಾಳೆಯೇ ನಿನಗೆ ಹಬ್ಬವನ್ನು  ಮಾಡಿಸುವೆನು ! ವ || ದವನಕನು ಅದಕ್ಕೆ ಮಹಾಪ್ರಸಾದವೆಂದು ನಾನಿನ್ನು ಮಾತನಾಡದಿದ್ದರೆ ದೂತರನ್ನಟ್ಟಿಯಾನು. ಸಂಜೀವಕನನ್ನು ಅದಷ್ಟು ಬೇಗನೆ ಕೋಪಗೊಳಿಸುವೆನೆಂದು ಅಲ್ಲಿಂದ ಹೊರಟು ಬರುತ್ತ ಹೀಗೆ ಯೋಚಿಸಿತು: ಕಠಿಣ ಹೃದಯನಾದ ಕಂಠೀರವನು ಹೇಳಿದುದನ್ನೇ ಮಾಡಿಸಿದೆ. ಈ ಮೃದುಹೃದಯನಾದ ಸಂಜೀವಕನನ್ನು ಭೇದಿಸುವುದು ಯಾವ ಮಹಾಕಾರ್ಯ ಎಂದು ಕೃತಕವಾದ ವಿಷಾದದಿಂದ ದೀನವದನನಾಗಿ ಬಂದು ಮುಂದೆ ನಿಂತ ದವನಕನನ್ನು ಕಂಡು ಸಂಜೀವಕನು ಮಿತ್ರನನ್ನು ಬರಮಾಡಿಕೊಳ್ಳುವ ರೀತಿಯಲ್ಲಿ ಸ್ವಾಗತಿಸಿದನು. ಬಳಿಕ ನಿನ್ನ ಮುಖ ಖಿನ್ನವಾದ ಕಾರಣವೇನು ಎಂದು ಕೇಳಲು ಧೂರ್ತ ಜಂಬುಕ  ಹೀಗೆಂದಿತು; ಶ್ಲೋ|| ಅರಸರನ್ನು ಓಲೈಸುವವರ ಐಶ್ವರ್ಯ ಪರಾನವಾದುದು. ಅವರ ಚಿತ್ತ ಎಂದಿಗೂ ಸುಖವನ್ನು ಪಡೆಯದು ಜೀವಿಸುವದೂ ನಿಶ್ಚಯವಲ್ಲ ಅಲ್ಲದೆ, ಶ್ಲೋ || ಅಚಾರ್ಯರೂ ಅರಸರೂ ಸಮಾನಶೀಲರು. ಅವರಲ್ಲಿ ಪರಿಚಯ ಅಭ್ಯಾಸಗಳೆಂಬುದಿಲ್ಲ: ಮಿತ್ರತ್ವವೂ ಇಲ್ಲ. ಕೋಪಗೊಂಡಾರಾದರೆ ಪ್ರಯತ್ನದಿಂದ ಅನೇಕ  ಕಾಲ ಮಾಡಿದ ಶುಶ್ರೂಷೆಯನ್ನು ಮೇಘಗಳು ಧೂಳನ್ನು ಕೆಡಿಸುವಂತೆ ನಾಶಗೊಳಿಸುವರು. ಅಲ್ಲದೆ ಶ್ಲೋ|| ಅತಿಬುದ್ಧಿವಂತರೂ ಶಾಸ್ತ್ರಭ್ಯಾಸವನ್ನು ಮಾಡಬೇಕು. ಎಷ್ಟು ಕಾಲ ಸೇವೆ ಮಾಡಿದರೂ ತನ್ನ ಒಡೆಯನಿಗೆ ಅಂಜಬೇಕು. ತೊಡೆಯನ್ನೇರಿದ್ದರೂ ಸ್ತ್ರೀಯನ್ನು ವಿಚಾರಿಸಿಕೊಂಡಿರಬೇಕು. ಶಾಸ್ತ್ರದಲ್ಲಿಯೂ ಅರಸನಲ್ಲಿಯೂ ಸ್ತ್ರೀನಲ್ಲಿಯೂ ತನಗೆ ವಶವಾಯಿತೆಂದು ಮೆಯ್ಮರೆದು ಇರಲಾಗದು. ೧೯೮: ಕಿಚ್ಚನ್ನಾದರೂ ಹೊಗಬಹುದು,  ವಿಷವನ್ನಾದರೂ ನುಂಗಬಹುದು, ಎತ್ತರವಾದ ಬೆಟ್ಟದಿಂದ  ಭೂಮಿಗೆ ಧುಮಕಬಹುದು. ೧೯೯. ಗುಣಹೀನನಾದ ಅರಸನನ್ನು ಮಾನಧನನಾದವನು ಸೇವಿಸುವುದು ತರವಲ್ಲ. ಸ್ಥಿತಿಸಾರರಲ್ಲದ ರಾಜರನ್ನು ಓಲೈಸಿ ಪಡೆವ ಧನಲಾಭಕ್ಕಿಂತ ಉನ್ನತವಾದ ಗಿರಿಯ ಗುಹೆಯಲ್ಲಿ  ಬದುಕುವುದು ವಿಹಿತ. ೨೦೦. ಈ ರೀತಿ ದವನಕನು ಪರೋಕ್ಷವಾಗಿ ಹೇಳಲು ಆ ವೃಷಭಕ್ಕೆ ಭಯಭ್ರಾಂತಿ ಹೆಚ್ಚಾಗಿ ಚಿಂತಕ್ರಾಂತನಾಗಿ ದವಕನಿಗೆ ಹೀಗೆಂದಿತು: ವ || ನೀನು ಈ ರೀತಿ ಹಲವು ರೀತಿಯಲ್ಲಿ ಬಳಸುಮಾತುಗಳಿಂದ ಕಾಡದೆ ಇದ್ದುದನ್ನು  ಇದ್ದಂತೆ ಹೇಳು. ಅದಕ್ಕೆ ದವನಕನು ಹೀಗೆಂದನು: ೨೦೧: ಅರಸರು ಅವಿಚಾರಿಗಳು ಪುರುಷದ್ವೇಷಿಗಳು. ಆಪ್ತರಿಗೆ ಅಹಿತವನ್ನಂಟು ಮಾಡುವರು. ಅದರಿಂದ ಅಪಾಯ ಹಿರಿದಾದುದು. ನೃಪರ ಓಲಗವೆಂದರೆ ಅಂಜುವೆನೆಂದು ನೀನಂದು ಹಲವು ರೀತಿಯಲ್ಲಿ  ನನಗೆ ಹೇಳಿದರೂ, ವ || ನಿನ್ನನ್ನು ನಾನು ನಂಬಿಸಿ ಒತ್ತಾಯದಿಂದ ನi ಅರಸರ ಆಳನ್ನಾಗಿ ಮಾಡಿದೆ. ನೀನು ಭೃತ್ಯಭಾವದಿಂದ ನಡೆದುಕೊಂಡೆ. ಆದರೆ ಪಿಂಗಳಕನು ಇಂದು ನಿರ್ನಿಮಿತ್ತವಾಗಿ ತನ್ನ ಆಸ್ಥಾನದಲ್ಲಿ ನಿನ್ನ ಬಗೆಗೆ ಸಿಟ್ಟಾಗಿ ಸಂಜೀವಕನನ್ನು ಕೊಲ್ಲದೆ ಬಿಡೆನು ಎಂದು ಇದ್ದಕ್ಕಿಂದಂತೆ ಮಾರ್ಯಾದೆಗೆಟ್ಟು ನುಡಿದನು. ಅದನ್ನು ನಾನು ಕೇಳಿ ನಿನಗೆ ತಿಳಿಸದೆ ಇದ್ದಲ್ಲಿ ವಿಶ್ವಾಸಘಾತುಕನೂ ಮಿತ್ರದ್ರೋಹಿಯೂ ಅಗುವನೆಂದು ತಿಳಿಸಿ ಹೋಗೋಣವೆಂದು ಬಂದೆ. ಆ ಮಾತನ್ನು  ಕೇಳಿ ಸಂಜೀವಕನು ಜೀವಹೋದವನಂತಾಗಿ ಹೀಗೆಂದನು. ೨೦೨: ಕನಸು ಮನಸುಗಳಲ್ಲಿ ತನಗೆ ಮನೋವಚಃಕಾಯಕರ್ಮಗಲ್ಲಿ ಹಿತನೂ ಭಕ್ತನೂ ಅಗಿರುವವನ ಮೇಲೆ ವಿನಾಕಾರಣ ಮೃಗರಾಜನು ಯಾಕೆ ತಾನೇ ಕೋಪಿಸುವನು ?  ವ || ಅಲ್ಲದೆ ಅವನಿಗೆ ನಾನು ಯಾವ ರೀತಿಯಲ್ಲೂ ಕೆಡುಕನ್ನುಂಟುಮಾಡಿಲ್ಲ. ನಿಷ್ಕಾರಣವಾಗಿ ಮುನಿದನೆ?

ಶ್ಲೋ || ಒಂದಲ್ಲ ಒಂದು ಕಾರಣದಿಂದ ಗೆಳೆಯರೂ ಹಗೆಗಳೆನಿಸುವರು. ಆ ಕಾರಣವನ್ನು ತಿಳಿದುಕೊಂಡು ಹಗೆತನವನ್ನು ಬಿಟ್ಟು ಕಳೆಯಬೇಕು ಎಂಬ ನೀತಿಯುಂಟು. ವ|| ಮೃಗೇಂದ್ರನಿಗೂ ನನಗೂ ವೈರಕಾರಣವೆನೆಂದು ನಿನಗೆ ಗೊತ್ತಿದ್ದರೆ ತಿಳಿಸು ಅದನ್ನು ಇಂದಿನಿಂದ   ತೊರೆದುಬಿಡುವೆನು. ಆಗ ಜಂಬುಕನು ಆ ಕಾರಣವು ನನಗರಿಯದು ಎನ್ನಲು ಸಂಜೀವಕನು ಹೀಗೆಂದನು: ಶ್ಲೋ || ಯಾವನು ನಿಮಿತ್ತವನ್ನುದ್ದೇಶಿಸಿ ಕೋಪಿಸುವನೋ ಆ ನಿಮಿತ್ತವು ತೀರಿದ ಮೇಲೆ ಹೇಗಾದರೂ ಪ್ರಸನ್ನನಾಗುವನು. ನಿಷ್ಕಾರಣವಾಗಿ ಯಾವನ ಚಿತ್ತವು ದ್ವೇಷವನ್ನು ಹೊಂದುವುದೋ ಅಂಥವನ  ವೈರವು ಎಂದೆಂದೂ ತೀರುವುದು ಅಸಾದ್ಯ ಎಂಬ ನೀತಿ ಇದೆ. ವ|| ಅದರಿಂದ ಅಕಾರಣ ಕೋಪನೂ ಪಾಪರೂಪನೂ ಅದ ಕೇಸರಿಗೆ ಆಸುರಕರ್ಮ ನಿರತನಾಗಬೇಡವೆಂದೂ ಧರ್ಮೋಪದೇಶ ಮಾಡಿ ಪರಲೋಕಕ್ಕೆ ಉತ್ತರಸಾಧಕನಾಗಿ ನಡೆಯುವೆನು. ನನ್ನ ಮೇಲೆ ಅವನು ಮುನಿಯುವುದೆಲ್ಲ ಅವಿನೀತ ಸೇವೆಯ ಫಲ. ಶ್ಲೋ|| ಕಾಡಿನಲ್ಲಿ ಅಳುವುದೂ ಹೆಣಕ್ಕೆ  ಲೇಪನ ಮಾಡುವುದೂ ನೆಲದಲ್ಲಿ  ತಾವರೆ ಬೀಜವನ್ನೂ ಬಿತ್ತುವುದೂ ಕಿವುಡನಿಗೆ ಏಕಾಂತವನ್ನು ಹೇಳುವುದೂ ನಾಯಿಯ ಬಾಲವನ್ನು ಕಾಸಿ ತಿದ್ದುವುದೂ ಸೌಳುಮಣ್ಣಿನಲ್ಲಿ  ಮಳೆಯಾಗುವುದು ಕುರುಡನಿಗೆ ಕನ್ನಡಿ ತೋರುವುದೂ ಮೂರ್ಖನನ್ನೂ ಬುದ್ದಿವಂತನು ಓಲೈಸುವುದು ಇವರ ರೀತಿ ಎಂಬ ನೀತಿಕಾರನ ಮಾತೇಕೆ ತಪ್ಪಾಗುವುದು ? ವ|| ಆತನೂ ನಾನು ಹೇಳಿದ ಧರ್ಮೋಪದೇಶವನ್ನು ಬಿಟ್ಟು ತನ್ನ ಮೊದಲಿನ ದುಷ್ಟ  ಮಂತ್ರಿಗಳ ಮಾತನ್ನೂ ಕೇಳಿದನು ಅದರಿಂದ, ಶ್ಲೋ|| ಗುಣಗಳನ್ನು ತಿಳಿದುಕೊಳ್ಳುವರಲ್ಲಿ ಗುಣಗಳು ಗುಣಗಳೆ ಎನಿಸುವುವು. ಚುರ್ಜನನನ್ನು ಸೇರಿದರೆ ಸಿಹಿನೀರಿನ ನದಿಗಳು ಅಪೇಯವಾದ ಸಮುದ್ರವನ್ನೂ ಸೇರಿದ ಹಾಗೆ ದೋಷಗಳೇ ಅಗುವುವು. ಶ್ಲೋ || ದುರ್ಜನನಾದವನಿಗೆ ನೂರು ಒಳ್ಳೆಯದನ್ನು ಮಾಡಿದರೂ ಕೆಡುವುದು ಅರಿಯದವನ ಮುಂದೆ ನೂರು ಸುಭಾಷಿತವನ್ನು ಓದಿದರೂ ಕೆಡುವುದು, ಕೇಳದವನಿಗೆ ನೂರು ಮಾತನ್ನು ಹೇಳಿದರೂ ಕೆಡುವುದು. ಮರೆಯುವವನಿಗೆ ನೂರು ಬುದ್ದಿಯನ್ನು ಹೇಳಿದರೂ ಕೆಡುವುದು. ಶ್ಲೋ || ಸ್ತ್ರೀಯರು ನೀಚರಿಂದಲೆ ಭೋಗಿಸತಕ್ಕವರು. ಅರಸರು ಯೋಗ್ಯರಲ್ಲದವರನ್ನೇ ಚೆನ್ನಾಗಿ  ಸಲುಹುವರು. ಐಶ್ವರ್ಯವು ಅತಿಲೋಭಿಗಳನ್ನೆ ಸೇರುವುದು, ಇಂದ್ರನು ಗಿರಿಸಮುದ್ರಗಳಲ್ಲೇ ಮಳೆಯನ್ನು  ಸುರಿಯುವನು . ಶ್ಲೋ|| ಸ್ನೇಹವುಳ್ಳವರು ಉಪಕಾರವನ್ನು ಮಾಡಿದರೂ ಕೋಪವುಂಟಾಗುವುದು. ದುರ್ಜನರು ಅಪಕಾರವನ್ನು ಮಾಡಿದರೂ ಅದು ಸಂತೋಷವನ್ನುಂಟುಮಾಡುವುದು. ಒಂದೇ ಸ್ವಭಾವದ ನೃಪವಚನವನ್ನು ಯಾರೂ ಸ್ವೀಕರಿಸಬಾರದು; ಸೇವಾ ಧರ್ಮವನ್ನು ಎಂದೂ ನಿರ್ವಹಿಸಬಾರದು;  ಅದು ತಪಸ್ವಿಗಳಿಂದಲೂ ಸಾಧ್ಯವಿಲ್ಲ. ಶ್ಲೋ || ಮಾತನಾಡದಿದ್ದರೆ ಮೂಕನೆನ್ನುವರು. ಪ್ರವಚನಪಟುವಾದರೆ ಹರಟೆಕೋರನೆನ್ನುವರು, ಹತ್ತಿರ ಹೋದರೆ ಧೃಷ್ಟನೆನ್ನುವರು, ದೂರವಾದರೆ ಹೆಡ್ಡನೆನ್ನುವರು. ಸಮಾಧಾನಿಯಾಗಿದ್ದರೆ ಹೆದರಿಕೆಯ ಪುಕ್ಕನೆನ್ನುವರು. ಸಹಿಸದಿದ್ದರೆ ಕೀಳನೆಂದು ದೂರುವರು. ಅರಸರ ಸೇವೆಯನ್ನು ಮಾಡುವುದು ತಪಸ್ವಗಳಿಂದಲು ಸಾಧ್ಯವಿಲ್ಲ. ಶ್ಲೋ || ಪರಸೇವೆಯೆಂಬುದು ಕತ್ತಿಯ ಅಲಗನ್ನು  ನೆಕ್ಕಿದಂತೆಯೂ ಸಿಂಹವನ್ನು ಅಲಿಂಗಿಸಿದಂತೆಯೂ ಸರ್ಪಿಣಿಯನ್ನು ಚುಂಬಿಸಿದಂತೆಯೂ ಇರುತ್ತದೆ. ವ || ಇಂತಹ ಸೇವಾ ಧರ್ಮವನ್ನು ನಾನೂ ತಿಳಿದು ತಿಳಿದೂ ಒಂದಲ್ಲ ಒಂದು ರೀತಿಯಿಂದ ನೀಚವಾದುದನ್ನೆಸಗಿದೆ, ಇಲ್ಲದಿದ್ದರೆ ಪಿಂಗಳಕನೇಕೆ ನನ್ನ ಮೇಲೆ ಮುನಿವನು? ಇದನ್ನು ಅವನೊಡನೆ ಕೇಳಿ ಇದೊಂದು ಬಾರಿ  ಕ್ಷಮಿಸುವಂತೆ ಮಾಡುವೆ. ಅರಸರು ಅವಿವೇಕದಿಂದ ಯಾರನ್ನಾದರೂ ಕೊಲ್ಲಬೇಕೆಂದಿರುವರಲ್ಲದೆ ಮಂತ್ರಿಗಳ ಹಿತವಚನವನ್ನು ಪರಿಪಾಲಿಸರು. ಶ್ಲೋ|| ವೈದ್ಯನೂ ವಿದ್ದಜ್ಜನರೂ ಮಂತ್ರಿಯೂ ಅರಸನ ಇಚ್ಚೆಗನುಸಾರವಾಗಿ ನುಡಿದರೆ ಆ ರಾಜನ ಆರೋಗ್ಯ, ಧರ್ಮ, ಕೋಶಗಳು ಬೇಗನೆ ನಾಶಹೊಂದುವುವು. ವ|| ನೀನು ಪಿಂಗಳಕನ ಮಂತ್ರಿಯಾಗಿರುವೆ. ಈಗ ಆತನು ನನ್ನನ್ನು ಕೊಂದು ತನ್ನ ಯಶಸ್ಸನ್ನು ಧರ್ಮವನ್ನೂ ನಾಶಪಡಿಸಿಕೊಳ್ಳವನು. ನಾನೂ ನಿನ್ನನ್ನೇ ಮೊದಲು ನಂಬಿ ಬಂದವನು. ಶ್ಲೋ || ಕಾರ್ಯಾಸನ್ನನಾಗಿದ್ದಲ್ಲಿ ಆನತನಾಗಿದ್ದಲ್ಲಿ ಸುಖಾನುಬಂಧದಲ್ಲಿ ಏನಾದರೊಂದನ್ನು ಧರ್ಮಾರ್ಥವಾಗಿ ಕೊಟ್ಟದು. ವಿಪುಲಫಲವನ್ನಂಟುಮಾಡುವುದು. ವ|| ಅದರಿಂದ ಇಲ್ಲಿ ಆಸನ್ನ ವಿನಿಪಾತವಾಗಲಿರುವ ಕಾರ್ಯದ ಸಮಾವಸ್ಥೆಯನ್ನು ನೀನು ಅರಿಯದಿರುವೆ. ಅದರಿಂದ ಈ ಸಂದರ್ಭದಲ್ಲಿ ಹತ್ತಿರ ಹೋಗಿ ಹೇಳಿಕೊಂಡು  ನಿರ್ಭಯವಾಗುವಂತೆ ಮಾಡಬೇಕು. ಅದಕ್ಕೆ ದವನಕನು ಹೀಗೆಂದನು: ಶ್ಲೋ|| ನೀನು ಹೇಳಿದಂತೆ ಮೃಗರಾಜನ ಮನೆಯಲ್ಲಿ ನಾನೇ ಮಂತ್ರಿಯಾಗಿರುವ್ಯದರಿಂದ, ಶ್ಲೋ || ಮೃದುವಾದ ಮನುಷ್ಯರ ಚಿತ್ತಗಳು ಚಾಡಿಕೊರರಿಂದ ಕೆಡುವುವು. ಹೇಗೆಂದರೆ ಮೃದುವಾದ ಉದಕದಿಂದ ಭೇದಿತವಾದ ಗಿರಿತಟಗಳು ಒಳಗಾಗಿ ಬೀಳುತ್ತವೆ. ಆತನು ಚಾಡಿಕೋರರ ಮಾತನ್ನು ಕೇಳಿ ಕೈಕೊಂಡನೆಂಬುದನ್ನು ಸಂಜೀವಕನು ಭಾವಿಸಿ ಹೀಗೆಂದನು: ಶ್ಲೋ|| ಅರಸನಿಗೆ ಹಿತವನ್ನು ಮಾಡುವನು ಪ್ರಜೆಗೆ ಹಗೆಯಾಗುವನು. ಪ್ರಜೆಗೆ ಹಿತಮಾಡುವವನ್ನು ಅರಸರು  ಕೈಹಿಡಿಯರು.  ಈ ರೀತಿಯಿರುವ ವಿರೋಧವು ಸಮಾನವಾಗಿ ಕಂಡಿರಲು ನೃಪನಿಗೂ ಪ್ರಜೆಗೂ ಹಿತವಾಗುವಂತೆ ಮಾಡುವ ಮಂತ್ರಿ ದುರ್ಲಭ ಎಂಬ ನೀತಿಶಾಸ್ತ್ರವೇಕೆ ತಪ್ಪುವುದು ? ವ|| ಮೊದಲಿನ ಹಳೆಬರನ್ನು ಆಪ್ತರನ್ನು ಹೊರಗೆ ಹಾಕಿ ಪತಿಗೆ ಹಿತೋಪದೇಶವನ್ನು ಮಾಡರು. ಅದು ಹೇಗೆಂದರೆ ಒಂಟೆ ಕಾಗೆಗಳ ಕಥೆಯಾಂತಾಗುವುದು. ದವನಕನು ಅದೇನೆಂದು ಕೇಳಲು ಸಂಜೀವಕನು ಹೇಳಿದನು: