ಧಾರುಣ ಧಾರಿಣೀಧರ ಗುಹಾವಳಿಯಿಂ ಮದಾವಾರಣಂಗಳಿಂ
ಕ್ರೂರಮೃಗಂಗಳಿಂ ಶಬರಸಂಕುಲದಿಂದತಿರೌದ್ರಮಪ್ಪ ಕಾಂ
ತಾರದೊಳಿರ್ಪುದೊಂದು ಹರಶೌರ‍್ಯಗುಣಪ್ರಕರಂ ನಖಾಗ್ರ ನಿ
ರ್ದಾರಿತ ವನ್ಯಸಾಮಜ ಸಮಾಜಕಟಂ ಪೆಸರಿಂ ಮದೋತ್ಕಟಂ ೨೦೩

ಆ ಮೃಗಾರಾಜಂ ತನಗೆ ಕಾಗೆಯುಂ  ಸೃಗಾಲನುಂ ಶಾರ್ದೂಲನುಂ  ಅನುಚರರಾಗಿ ಕಾಂತಾರಾಂತರಾಳದೊಳ್ ತೊೞಲುಮಿತ್ತರೆ ನಡೆವ ಬೀಡಿನೊಳೊಂದೊಟ್ಟೆ ಪೊಲಂಬುಗೆಟ್ಟು ಬಂದಾಡುತಿರ್ದುದನತಿದೂರದೊಳ್ ಕಂಡುದೊಂದಪೂರ್ವಮಪ್ಪ ಮಗೃಮದೆತ್ತಣಿಂ ಬಂದುದಿನ್ನೆತ್ತಲ್ ಪೋದುಪ್ಪುದಾವ ಜಾತಿ ಪೆಸರೇನೆಂಬುದಂ ಬೆಸಗೊಂಡು ಬಾಯೆಂದು ವಾಯಸಮಂ ಕಳುಪಲ್ ಅದು ವಾಯುವೇಗದಿಂ ಪರಿದೊಟ್ಟೆಯನೆಯ್ದೆವಂದದಱ ವೃತ್ತಾಂತಮನೆಲ್ಲಮನಱ*ದಾಗಳೆ ಮಗುೞ್ದು ಬಂದಿಂತೆಂದುದು:

ಮದಗಜ ಭಿದುವಿದಲನಕೋ
ವಿದ ಜಾತಿಯೊಳೊಟ್ಟೆ ನಾಮದಿಂ ಕಥಕನೆನಿ
ಪ್ಪುದು ನಿನ್ನ ದೆಸೆಯಿನಭಯ
ಪ್ರದಾನಮಂ ಪಡೆದು ಭೃತ್ಯನಾಗಲ್ಬಂದಂ  ೨೦೪

ಎಂಬುದುಮಾ ಮೃಗಾರಾಜನಂಜದಿರೆಂದು ತಂದು ಕಾಣಿಸೆನಲೊಡಂ ವಾಯಸಮಾಗಳೆ ಪೋಗಿಯೊಟ್ಟೆಯನಂಜದಿರೆಂದು     ನಂಬೆ  ನುಡಿದೊಡಂಬಡಿಸಿಯೊಡಂಗೊಂಡು ಬಂದು ಮುಂದಿಟ್ಟು ಕಾಣಿಸುವುದುಮದಱ ವಿಕಟರೂಪಮಂ ಕಂಡು ಮದೋತ್ಕಟಹರ್ಷನಾಗಿ ನಮಗೊಂದು ವಿನೋದಪಾತ್ರಮಿದೊಂದಾದುದೆಂದು ಸಂತೋಷಂಬಟ್ಟೊಂದು ದೆವಸಮವಿರಳಮದಾಂಬು ಧಾರಾಮಲಿನಗಂಡಮಂಡಲನಪ್ಪುದೊಂದು ಶುಂಡಾಲನ ಮೇಲೆ ಪಾಯ್ದು ತದೀಯ ದಂತಾಶನಿಘಾತವ್ರಣವೇದನಾ ವಿಹ್ವಲೀಭೂತಚೇತನನಾಗಿ ಮಹಾಗುಹಾಂತರಮಂ ಪೊಕ್ಕು ವೇದನಾ ಪರವಶತೆಯಿಂ ಪಲವುದಿನಮಹಾರಕ್ಕೆ ಪೊಱಮಡಲಾಱದೆ ಬಾಡಿದ ಮೊಗಮುಂ ಬಡವಾದೊಡಲುಂಬೆರಸು ಗುಹೆಯ ಬಾಗಿಲೊಳ್ ಬಂದಿರ್ದ ತನ್ನನುಚರರಂ ಕಂಡು, ಮದೋತ್ಕಟನಿಂತೆದಂ:

ಆನುಂ ಪೊಱಮಡಲಾಱೆಂ
ನೂನಂ ಮನಮಿಕ್ಕಿ ಪಸಿದು ಸಾಯದೆ ನೀಮೆ
ತ್ತಾನುಂ ಪಡೆವೊಡೆ ಪಿಶಿತಮ
ನೇನಾನುಮನಱಸಿ ತಿನ್ನಿಮೆನಗಂ ತನ್ನಿಂ  ೨೦೫

ಎಂದು ಪೇೞ್ವುದುಮವು ತಮ್ಮೋಳೋರೊರ್ವರ ಮೊಗಮಂ ನೋಡಿ ಬೞ*ಕ್ಕೆ ನರಿಯಿಂತೆಂದುದು: ಆನುಂ ಕಾಗೆಯುಂ ಪೆಱರಾರಾನುಂ ಕೊಂದು ತಿಂದೀಡಾಡಿದ ಪಿಶಿತಮನಾಯ್ದಱಸಿ ತಿಂದು ಜೀವಿಸುವೆವೆಮ್ಮೊಡನಾಡಿರ್ದ ಕಾರಣದಿಂದೀ ಪುಲಿಯುಮೊಂದಿಲಿಯನಪ್ಪೊಡಂ ಕೊಲಲಣ್ಮದಿಂತಪ್ಪ ಮೈಗಲಿಗಳೆನೆ ಮದೋತ್ಕಟಂತೆದಂ:

ಶ್ಲೋ || ಯಾದೃಶೀ ಜಾಯತೇ ಬುದ್ಧಿಃ ವ್ಯವಸಾಯಶ್ಚ ತಾದೃಶಃ
ಸಹಾಯಸ್ತಾದೃಶೋ ಜ್ಞೇಯೋ ಯಾದೃಶೀ ಭವಿತವ್ಯತಾ  ||೧೦೧||

ಟೀ|| ಬುದ್ಧಿ ಆವ ಪ್ರಕಾರವಾಗಿಹುದು ಹಾಂಗೆಯೆ ವ್ಯವಸಾಯಮಿಹುದು ಭಾಗ್ಯವಾವ ಪ್ರಕಾರವಾದಹುದು ಸಹಾಯವೂ ಹಾಂಗೆಯಹುದು. ಎಂಬ ನೀತಿಯವಾಕ್ಯಮೆಕೆ ತಪ್ಪುಗುಂ. ಎನ್ನ ಭಾಗ್ಯಕ್ಕಂ ಭವಿತವ್ಯಕ್ಕಂ ಅನುಸಾರಿಗಳೆ ಸಹಾಯರಾದರಿವರ ಮೇಲೆ ದೋಷಮಿಲ್ಲೆಂದು ಮತ್ತವರ್ಗಿಂತೆಂದಂ: ಎನಗೆ ತರಲಾರದಿರ್ದೊಡಂ ನಿಮಗಪ್ಪನಿತಾಹಾರಮನಿಂದಿನೊಂದು ದಿವಸಕ್ಕಮಱಸಿಕೊಳ್ಳಿಂ ಪೋಗಿಮೆನೆ ಕಿಂಕರತ್ರಯಂ ಕಿಱ*ದಂತರಂ ಪೋಗಿ ನಾವಿನ್ನೇಗೆಯ್ವಮೆಂದು ತಮ್ಮೋಳಾಳೋಚಿಸುವಲ್ಲಿ  ನರಿಯೆಂದುದು: ಇಲ್ಲಿಗೊಂದುಪಾಯವ  ನಾನೇ ಬಲ್ಲೆಂ. ಈಯೊಟ್ಟೆಯಂ ಕೊಂದರಸಂಗಂ ನಮಗಂ ಒಂದೆರಡು ದಿವಸಕ್ಕಾಹಾರಮಂ ಮಾಡಿಕೊಂಡು ಬೞ*ಕ್ಕೆ ಮೇಲಪ್ಪುದಂ ಬಗೆದುಕೊಳ್ವಮೆಂದೊಡನದಂ ಕೊಲ್ವ ದೆಸೆಯಂ ಪೇೞ್ದೊಡಾಮಾತಂ ಕೇಳೆ ಒಟ್ಟೆಗಮಭಯಮಂ ಕೊಟ್ಟೆನೆಂದು ಮದೋತ್ಕಟಂ ನಮಗೆ ಮುಳಿಗುಮೆಂದು ಪುಲಿ ನುಡಿವುದುಂ ವಾಯಸಂ ನಿರಾಯಸದೊಳೆಡಂಬಡಿಸಲಾನೇ ಸಾಲ್ವೆನೆಂದು ಮದೋತ್ಕಟನಲ್ಲಿಗೆ ಬಂದಿಂತೆಂದುದು: ದೇವಾ! ಪೆಱತೆಡೆಯೊಳೆಲ್ಲಿಯುಮಾ ಹಾರಂಬಡೆಯಲಾರ್ತೆವಿಲ್ಲ. ಎನ್ನ ಬುದ್ಧಿಯಂ ಕೈಕೊಳ್ವಿರಪ್ಪೊಡೆ ನಮಗೊಂದರ್ಕಂ ಮುಟ್ಟಲ್ಲದೀಯೊಟ್ಟೆಯಂ ಕೊಂದೊಂದೆರಡು ದಿವಸದಾಹಾರಮಂ ನಿಮಗಪ್ಪನಿತಂ ಮಾಡಿಕೊಳ್ವುದೆನೆ ಮದೋತ್ಕಟನಿಂತೆಂದಂ:

ಒದವಿದ ದಯೆಯಿಂದಭಯ
ಪ್ರದಾನಪೂರ್ವಕಮಿರೆಂದು ಪೇೞ್ದೂಂ ಸಲೆ ನಂ
ಬಿದನಂ ಕೊಂದೊಡೆ ಪಾಪಮ
ದೊದವಿರ್ಕುಂ ಕೀರ್ತಿ ಮಾಸುಗುಂ ಧರೆ ಪೞ*ಗುಂ  ೨೦೬

ಅದಲ್ಲದೆಯುಂ,

ಶ್ಲೋ|| ನ ಗೋಪ್ರದಾನಂ ನ ಚ ಭೂಮಿದಾನಂ
ನಚಾನ್ನದಾನಂ ನ ಹಿರಣ್ಯದಾನಂ
ಸರ‍್ವಪ್ರದಾನೇಷ್ವಭಯಪ್ರದಾನಂ
ತಥಾ ಪ್ರದಾನಂ ಪ್ರವದಂತಿ ರಾಃ  ೧೦೨

ಟೀ|| ಗೋದಾನಂ ಭೂದಾನಂ ಅನ್ನದಾನಂ ಹಿರಣ್ಯದಾನಂ ಇವೆಲ್ಲವುಂ ಬಾರ್ತೆಯಲ್ಲ. ಸರ‍್ವದಾನಂಗಳೊಳಭಯಪ್ರದಾನಮೇ ಮುಖ್ಯಮೆಂದು ಬಲ್ಲರ್ ಪೇೞ್ದರ್. ಎಂಬ ಧರ್ಮಶಾಸ್ತ್ರಮುಂಟದಱ*ಂ ನಂಬಿದನಂ ಕೊಂದು ತಿಂಬುದು ಧರ್ಮಮಲ್ಲೆನೆ ವಾಯಸನಿಂತೆಂದುದು: ದೇವಾ! ಧರ್ಮಮಂ ನೀವೆತ್ತಲಱ*ವಿರ್.

೨೦೩. ಭಯಂಕರವಾದ  ಪರ್ವತ ಗುಹಾವಳಿಯಿಂದಲೂ ಮದ್ದಾನೆಗಳಿಂದಲೂ ಕ್ರೂರ ಪ್ರಾಣಿಗಳಿಂದಲೂ ಬೇಡರ ಗುಂಪಿನಿಂದಲೂ ಅತಿರೌದ್ರವಾದ ಒಂದು ಕಾಡಿನಲ್ಲಿ ಶೌರ್ಯಗುಣಗಳಿಂದಲೂ ಕಾಡಿನ ಮದ್ದಾನೆಗಳ ಹಿಂಡನ್ನು ಸೀಳಿದ ಉಗುರುಗಳಿಂದಲೂ ಕೂಡಿದ ಮದೋತ್ಕಟ ಎಂಬ ಹೆಸರಿನ ಒಂದು ಸಿಂಹವಿತ್ತು. ವ|| ಆ ಮೃಗಾರಾಜನು ಕಾಗೆಯನ್ನೂ ನರಿಯನ್ನೂ ಶಾರ್ದೂಲವನ್ನೂ ತನ್ನ ಭೃತ್ಯರನ್ನಾಗಿ  ಹೊಂದಿ ಕಾಂತಾರಾಂತರದಲ್ಲಿ ತೊಳಲಾಡುತ್ತಿತ್ತು. ಅಲ್ಲಿಗೆ ಒಂದು ಒಂಟೆ ದಾರಿತಪ್ಪಿ ಬಂದು ಆಡುತ್ತಿರುವುದನನ್ನು ಅತಿದೂರದಿಂದ ಕಂಡು ಆ ಅಪೂರ್ವವಾದ ಮೃಗ ಎಲ್ಲಿಂದ ಬಂತು, ಎಲ್ಲಿಗೆ ಹೋಗುವುದು, ಯಾವ ಜಾತಿಯದು, ಹೆಸರೇನು ಎಂಬುದನ್ನು ವಿಚಾರಿಸಿಕೊಂಡು ಬಾ ಎಂದು ಕಾಗೆಯನ್ನು ಕಳುಹಿಸಿತು. ಆ ಕಾಗೆ ವಾಯುವೇಗದಿಂದ ಹಾರಿ ಒಂಟೆಯ ಬಳಿಗೆ ಬಂದು ಅದರ ವೃತ್ತಾಂತವನ್ನೆಲ್ಲ ತಿಳಿದುಕೊಂಡು ಹಿಂದಿರುಗಿ ಬಂದು ಹೀಗೆಂದಿತು. ೨೦೪: ಮದಗಜಭಿದುವಿದಲನಕೋವಿದ! ಆ ಮೃಗವು ಒಂಟೆಯ ಜಾತಿಗೆ ಸೇರಿದುದು ಅದರ ಹೆಸರು ಕಥಕ. ನಿನ್ನಿಂದ ಅಭಯಪ್ರದಾನವನ್ನು ಪಡೆದು ನಿನ್ನ ಭೃತ್ಯನಾಗಿರಬೇಕೆಂದು ಬಂದಿದೆ. ವ|| ಅದಕ್ಕೆ ಸಿಂಹವು ಅಂಜದಿರೆಂದು ಒಂಟೆಗೆ ತಿಳಿಸಿ ಅದನ್ನು ತಂದು ನನ್ನ ಭೇಟಿಮಾಡಿಸು ಎಂದಿತು. ಕಾಗೆ ಕೂಡಲೇ ಹೋಗಿ ಹೆದರಬೇಡವೆಂದು ಹೇಳಿ ಒಂಟೆಗೆ ನಂಬಿಕೆ ಬರುವಂತೆ ತಿಳಿಸಿ ಸಿಂಹದ  ಬಳಿಗೆ ಕರೆದು ತಂದಿತು. ಒಂಟೆಯ ವಿಕಟ ರೂಪವನ್ನೂ ಕಂಡು ಮದೋತ್ಕಟನು ಉತ್ಕಟಹರ್ಷನಾಗಿ ನಮಗೊಂದು ವಿನೋದ ಪಾತ್ರಕ್ಕೆ ಇವನು  ಸಿಕ್ಕಿದನು ಎಂದು ಸಂತೋಷಪಟ್ಟಿತು. ಒಂದು ದಿನ ಸಿಂಹ ಒಂದು ಮದಭರಿತವಾದ  ಆನೆಯ ಮೇಲೆ ಬಿದ್ದು ಅದರ ದಾಡೆಯ ಹೋಡೆತದಿಂದ ಗಾಯಗೊಂಡು ತನ್ನ ಗುಹೆಯನ್ನು ಹೊಕ್ಕು ವೇದನಾಪರವಶತೆಯಿಂದ ಹಲವು ದಿನಗಳಿಂದ  ಆಹಾರಕ್ಕಾಗಿ ಹೊರ ಹೊರಡಲಿಲ್ಲ. ಬಾಡಿದ ಮೊಗದಿಂದಲೂ ಬಡವಾದ  ಒಡಲಿನಿಂದಲೂ ಕೂಡಿದ್ದ ಆ ಸಿಂಹ ಗುಹೆಯ ಬಾಗಿನಲ್ಲಿದ್ದ ತನ್ನ ಅನುಚರರೊಡನೆ ಹೀಗೆಂದಿತು: ೨೦೫. ನಾನೂ ಹೊರ ಹೊರಡಲಾರೆ ನೀವೂ ನನ್ನ ಚಿಂತೆಯಿಂದ ಹಸಿದು ಸಾಯದೆ ಎಲ್ಲಿಯಾದರೂ ಅರಸಿ ಮಾಂಸವನ್ನು ತಿನ್ನಿ; ಹಾಗೆಯೇ ನನಗೂ ಅಷ್ಟು ತನ್ನಿ. ವ|| ಅವು ತಮ್ಮತಮ್ಮಲ್ಲಿ ಒಬ್ಬೊಬ್ಬರ ಮುಖವನ್ನು ನೋಡಿ ಬಳಿಕ ನರಿ ಹೀಗೆಂದಿತು. ನಾನೂ, ಕಾಗೆಯೂ ಬೇರೆ ಯಾರಾದರೂ ಕೊಂದು ತಿಂದು ಚೆಲ್ಲಿದ ಮಾಂಸವನ್ನು ತಿಂದು ಜೀವಿಸುವೆವು. ನಮ್ಮ ಒಡನಾಡಿಯಾದ ಕಾರಣದಿಂದ ಈ ಹುಲಿ ಒಂದು ಇಲಿಯನ್ನು ಕೊಲ್ಲಲಾರದು. ಆಗ ಮದೋತ್ಕಟನು ಹೀಗೆಂದನು: ಶ್ಲೋ|| ಬುದ್ಧಿಯಂತೆ ವ್ಯವಸಾಯವಿರುವುದು: ಭಾಗ್ಯವು ಹೇಗೋ ಸಹಾಯವೂ ಹಾಗೆಯೇ. ನನ್ನ ಭಾಗ್ಯಕ್ಕೂ ಭವಿಷ್ಯಕ್ಕೂ ನನ್ನ ಅನುಚರರೆ  ಸಹಾಯಕರಾದರು ಇವರಲ್ಲಿ ದೋಷವಿಲ್ಲ ಎಂದು ಹೀಗೆ ಹೇಳಿತು: ವ || ನನಗೆ ತರಲು ಸಾಧ್ಯವಾಗದಿದ್ದಲ್ಲಿ ನಿಮಗೆ  ಬೇಕಾಗುವಷ್ಟು ಆಹಾರವನ್ನಾದರೂ ಇದೊಂದು ದಿನ ಹುಡಿಕಿಕೊಳ್ಳಿ, ಹೋಗಿ. ಆಗ ಆ ಮೂವರು ಭೃತ್ಯರು ಸ್ವಲ್ಪದೂರ ಹೋಗಿ ನಾವಿನ್ನೇನು ಮಾಡಲಿ ಎಂದು ಪರಸ್ಪರ ಆಲೋಚಿಸುತ್ತಿದ್ದಾಗ ನರಿ ಹೀಗೆಂದಿತು: ಈಗ ನನಗೊಂದು ಉಪಾಯ ಹೋಳೆಯಿತು. ಈ ಒಂಟೆಯನ್ನು ಕೊಂದು ಅರಸನಿಗೂ ನಮಗೂ ಒಂದೆರಡು ದಿವಸಕ್ಕೆ  ಆಹಾರ ಮಾಡಿಕೊಂಡು ಬಳಿಕ ಮುಂದಿನದನ್ನು ಯೋಚಿಸೋಣ ಎಂದು ಒಂಟೆಯನ್ನೂ ಕೊಲ್ಲುವ ಉಪಾಯವನ್ನು ಹೇಳುತ್ತಿರಲು ಆ ಮಾತನ್ನು ಕೇಳಿ ಒಂಟೆಗೆ  ಅಭಯವಚನವನ್ನು ಕೊಟ್ಟಿರುವೆನೆಂದು ಸಿಂಹ ನಮ್ಮ ಮೇಲೆ  ಸಿಟ್ಟಾಗುವನು ಎಂದು ಹುಲಿ ಹೇಳಿತು. ಆಗ ಕಾಗೆ ನಿರಾಯಸವಾಗಿ ಸಿಂಹವನ್ನು ಒಡಂಬಡಿಸುವುದಕ್ಕೆ ನಾನೇ ಸಾಕು ಎಂದು  ಮದೋತ್ಕಟನಿಗೆ ಬಂದು ಹೀಗೆಂದಿತು: ದೇವಾ ಬೇರೆಲ್ಲಿಯೂ ಆಹಾರವನ್ನು ಪಡೆಯಲು ಸಾದ್ಯವಾಗಲಿಲ್ಲ ನನ್ನ ಉಪಾಯವನ್ನು ಸಮ್ಮತಿಸುವಿರಾದರೆ  ನಮಗಾರಿಗೂ ಸಂಬಂಧವಿಲ್ಲದ ಈ ಒಂಟೆಯನ್ನೂ ಕೊಂದು ಒಂದೆರಡು ದಿವಸಕ್ಕೆ ನಿಮಗೆ ಸಾಕಾಗುವಷ್ಟು ಆಹಾರವನ್ನು ಮಾಡಿಕೊಳ್ಳುವುದು ಎನ್ನಲು ಮದೋತ್ಕಟ ಹೀಗೆಂದಿತು: ೨೦೬: ಅವನಲ್ಲಿ ಉಂಟಾದ ದಯೆಯಿಂದ ಅವನಿಗೆ ಅಭಯಪ್ರದಾನ ಮಾಡಿ  ನಂಬಿಸಿ ಅವನನ್ನು ಕೊಂದರೆ ಪಾಪ ಸಂಭವಿಸುವುದು;  ಕೀರ್ತಿ ಕುಂದುವುದು; ಲೋಕ ಹಳಿಯುವುದು. ಅಲ್ಲದೆ, ಶ್ಲೋ || ಗೋದಾನ, ಭೂದಾನ, ಅನ್ನದಾನ, ಹಿರಣ್ಯದಾನ ಇವೆಲ್ಲ ಪ್ರಯೋಜನವಿಲ್ಲ. ಸರ್ವದಾನಗಳಲ್ಲಿ  ಅಭಯದಾನವೇ ಮುಖ್ಯವೆಂದು ಬಲ್ಲವರು ಹೇಳಿರುವರು. ವ|| ಅದರಿಂದ ನಂಬನಿದವರನ್ನು ಕೊಂಡು ತಿನ್ನುವುದು ಧರ್ಮವಲ್ಲ ಎನ್ನಲು ಕಾಗೆ ಹೀಗೆಂದಿತು: ದೇವಾ! ಧರ್ಮನಿಮಗೇನು ಗೊತ್ತು? ಸಕಲ ವೇದಾಂತ ಪಾರಂಗತನಾದ ಗೌತಮ ಮಹಾಮುನಿ ಮಹಾಅರಣ್ಯವನ್ನು ಹೊಕ್ಕು ಉಗ್ರೋಗ್ರತಪೋನುಷ್ಠಾನಚಿತ್ತನಾಗಿ ಹಲವು ಕಾಲದವರೆಗೆ ನಿರಾಹಾರಿಯಾಗಿದ್ದ ಕಾರಣ ಪ್ರಾಣ ಹೊಗುವ ಸಮಯ ಬಂತು. ಹಿಂದೆ ನೋಡಿಕೊಂಡ  ಒಂದು ನಾಳೀಜಂಘನೆಂಬ ಮಂಗನು ಕಂಡು ಪೂಜ್ಯರೆ ನನ್ನ ಶರೀರವನ್ನು  ಆಹಾರ ಮಾಡಿಕೊಂಡು ಇನ್ನು ಕೆಲವುಕಾಲದವರೆಗೆ ತಪಸ್ಸು ಮಾಡಿರಿ ಎಂದು ಹೇಳಿತು. ಅದಕ್ಕೆ ಆ ಮುನಿ ತಾನು ಸಾಕಿದ ಪ್ರಾಣಿಯನ್ನೂ ತಿನ್ನುವುದು ಧರ್ಮವಲ್ಲ ಎನ್ನಲು, ಕಪಿ ತಾಪಸರ ಸಮೀಪದಲ್ಲೆ ಬೆಳೆದ ಕಾರಣ ತತ್ವವೇದಿಯಾದುದರಿಂದ ಮತ್ತೆ ಹೀಗೆಂದಿತು, ಪೂಜ್ಯರೆ ನಿಮಗೆ ಭ್ರಾಂತಿ ಇನ್ನೂ ಕಳೆಯಲಿಲ್ಲ ಶರೀರಕ್ಕಲ್ಲದೆ ಶರೀರಿಗೆ ಎಲ್ಲಿಯೂ ಕೇಡಿಲ್ಲ ‘ಪರೋಪಕಾರಾರ್ಥಮಿದಂ ಶರೀರಂ’ ಎಂಬುದನ್ನು ತಿಳಿದವನಾದುದರಿಂದ ಈ ಶರೀರವನ್ನು ನಿಮಗೆ ಅರ್ಪಿಸುವೆನು. ನೀವು ಇದನ್ನು ಸ್ವೀಕರಿಸಿ ಕೃತಾರ್ಥನನ್ನಾಗಿ ಮಾಡಿರಿ ಎಂದು ಪ್ರಾರ್ಥಿಸಲು ಪ್ರಾಣರಕ್ಷಣಾರ್ಥವಾಗಿ ಅವನು ತಾನು ಸಾಕಿದ ಕಪಿಯನ್ನೆ ತಿಂದನು. ಅಲ್ಲದೆ **”ಶರೀರಮಾದ್ಯಂ ಖಲು ಧರ್ಮಸಾಧನಂ”. ಶ್ಲೋ|| ಐಷ್ವರ್ಯವನ್ನೂ, ಮಿತ್ರನನ್ನೂ, ಹೆಂಡತಿಯನ್ನೂ ಭೂಮಿಯನ್ನೂ ಮರಳಿ ಪಡೆಯಬಹುದು. ಶರೀರವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬ ಶಾಸ್ತ್ರೋಕ್ತಿ ಉಂಟು. ವ|| ಅದರಿಂದ ನಿಮಗೂ  ಹುಣ್ಣಿನ ಬೇನೆ ತುಂಬ ತೀಕ್ಷ್ಣವಾಗಿದೆ, ಅಲ್ಲದೆ ಹಸಿವಿನ ಪಿಡೆಯಿಂದ ಶರೀರವನ್ನು ಸಂಹರಿಸಬಾರದು. ಕಥಕನು ಎಲ್ಲಿಂದಲೂ ಬಂದ ಕವಳ ಅದನ್ನು ತಿಂದರೆ ದೋಷವಿಲ್ಲ ನಿಮಗೆ ಮನೋವ್ಯಥೆಯಾಗದ ಹಾಗೆ ನಾವು ನಾಲ್ವರೂ ಬಂದು ನಮ್ಮನ್ನು  ನಿವೇದಿಸಿಕೂಳ್ಳುವೆವು. ನಿಮ್ಮ ಮನಸ್ಸಿಗೆ  ಬಂದವರನ್ನು ತಿನ್ನಿ ಎಂದು ಕಾಗೆ ಬಾಯಿಗೆ ಬಂದುದನ್ನು ಹರಟಿತು. ಅದಕ್ಕೆ ಮದೋತ್ಕಟನೂ ಒಡಂಬಟ್ಟು ಎಲ್ಲವನ್ನೂ ನೀನೆ ಬಲ್ಲೆ ಎಂದಿತು. ವಾಯಸವು ಸೃಗಾಲ, ಶಾರ್ದೂಲಗಳಲ್ಲಿಗೆ ಬಂದು ಒಂಟೆಯನ್ನು  ಮೊಟ್ಟನೆ ಮಾಡುವ ಕಾರ್ಯವನ್ನು ಹೇಳಿ ಒಡಂಬಡಿಸಿ ಬಂದೆನೆಂದು ಆ ವಿವರವನ್ನೆಲ್ಲ ತಿಳಿಸಿ ಬಳಿಕ ಕಥಕನನ್ನು ಕರೆದು ಹೀಗೆಂದಿತು. ನಮ್ಮ ಅರಸನು ಹಲವು ದಿನಗಳಿಂದ ಆಹಾರವನ್ನು ಪಡೆಯದೆ ಮರುಗುತ್ತಿರುವನು. ನಾವೂ ಬೇರೆ ಕಡೆಯಿಂದ ಆಹಾರ ಪಡೆಯುವುದು ಸಾಧ್ಯವಾಗಲಿಲ್ಲ. ನಮ್ಮನ್ನು ಅವನಿಗೆ ನಿವೇದಿಸಿಕೊಂಡಲ್ಲಿ ಹೇಗೂ ಒಪ್ಪುವನು. ಸುಮ್ಮನೆ ಇರದೆ ನಮ್ಮ ಋಣವನ್ನು ತೀರಿಸೊಣ ಬನ್ನಿ ಎಂದು ಧೂರ್ತತ್ರಯ ಕಥಕನೊಡನೆ ಸಿಂಹದ ಬಳಿಗೆ ಬಂದು ನಮಸ್ಕರಿಸಿ ಕಾಗೆ ಹೀಗೆಂದಿತು: ೨೦೭. ದೇವಾ! ನಿಮಗೆ ಬೇಕಾದ ಮಾಂಸವನ್ನು ಎಲ್ಲಿ ಹುಡುಕಿದರೂ ಪಡೆಯದಾದೆವು. ಆದರೂ ಕೆಟ್ಟುಹೋದುದೇನು? ನೀವಿದ್ದರೆ ಮತ್ತೆನನ್ನೂ ಪಡೆಯುವುದು ಸಾಧ್ಯ. ವ|| ಅದರಿಂದ ನಿಮ್ಮ ಇಂದಿನ ಆಹಾರಕ್ಕೆ ನನ್ನನ್ನೇ  ನಿವೇದಿಸಿಕೊಂಡಿರುವೆ. ದೇವರು ಸ್ವೀಕರಿಸುವುದು ಎನಲು ಮದೋತ್ಕಟ ಹೀಗೆಂದಿತು: ಕಾಗೆಯನ್ನು  ತಿನ್ನುವನೆಂದು ಹಳಿದಷ್ಟಕ್ಕೇ  ವಿಕ್ರಮಾದಿತ್ಯ ದೇವನನ್ನು ಲೋಕವು ಇನ್ನೂ ಹಳಿಯುತ್ತಿರುವುದು. ಅಲ್ಲದೆ ಕಾಗೆಯ ಮಾಂಸ ಊಟಕ್ಕೆ ಆಗದು ಎಂಬುದು ಲೋಕಪ್ರಸಿದ್ದವಾದುದರಿಂದ ಅದು ನಿಷಿದ್ದ. ಆಗ ಜಂಬಕನು  ಹೀಗೆಂದಿತು: ಹಾಗಾದರೆ ದೇವರು ನನ್ನನ್ನು ಆರೋಗಿಸಿ ನಿರೋಗಿಗಳಾಗಿರಿ ಎನ್ನಲು ಉತ್ತುಂಗಮತ್ತ ಮಾತಂಗಗಳನ್ನು ಕೊಂದು ತಿನ್ನುವ ಸಿಂಹವು ಒಂದು ನರಿಯನ್ನು ತಿಂದಿತು ಎಂದು ಲೋಕ ಅಪಹಾಸ್ಯ ಮಾಡೀತು. ಹುಲಿಯು ಕಲಿ ಎಂಬಂತೆ ಮುಂದೆ ಬಂದು ದೇವರು ನನ್ನನ್ನು ತಿಂದು ನಿಮ್ಮ ಶರೀರವನ್ನು ರಕ್ಷಿಸಿಕೊಳ್ಳಿರಿ ಎಂದಿತು ಅದಕ್ಕೆ ಸಿಂಹವು ನಾನು ವ್ರಣಶರೀರಿ ನನ್ನ ಹುಣ್ಣಿನೊಳಗೆ ನಿನ್ನ ರೋಮವು ಹೋದರೆ ಕೆಟ್ಟುಹೋಗುವೆ ನಿನ್ನ ಮಾಂಸವನ್ನು ಹೇಗೆ ತಿನ್ನಲಾದೀತು ಎಂದಿತು. ಇದೆಲ್ಲವನ್ನೂ ಕೇಳಿದ ಒಂಟೆಯು ದುಷ್ಟರನ್ನು ತಿನ್ನದ ಸಿಂಹವು ತನ್ನನ್ನೆ ನಂಬಿ ಬಂದ ನನ್ನನ್ನು ಹೇಗೂ ತಿನ್ನದು ಅದರಿಂದ ನಾನೂ ಸರದಿಯನ್ನು ಪಾಲಿಸುವೆನು ಎಂದು ಸಿಂಹದ ಬಳಿಗೆ ಬಂದು ಶರೀರವು ದೇವರ ಆಪತ್ತಿಗಾಗದಿದ್ದರೆ ಏನು ಪ್ರಯೋಜನ ನನ್ನ ಶರೀರವನ್ನು ಸ್ವೀಕರಿಸಿರಿ ಎನ್ನಲು ಮದೋತ್ಕಟನು ಮೌನದಿಂದಿರಲು ಸೃಗಾಲ ಶಾರ್ದೂಳ ಕಾಗೆಗಳು ಕಥಕನ ದೊಡ್ಡ ದೇಹವನ್ನು ಹರಿಹರಿದು ಕೊಂದವು. ಶ್ಲೋ ಹಲವರು ಪಂಡಿತರೂ ಕ್ಷುದ್ರರೂ ವಂಚನೆಯಿಂದ  ಜೀವಿಸುವವರೆಲ್ಲರೂ ಒಂಟೆಯನ್ನು ಕಾಗೆ ಮೊದಲಾದವು ಕೊಂದ ಹಾಗೆ ಲೇಸನ್ನು ಹೊಲೆಗೆಡಿಸುವವರು. ವ || ಅದರಿಂದ ದುಷ್ಟರ ನಡುವಿರುವ ಶಿಷ್ಟರಿಗೆ ಏನಾದರೂ ಸುಖ ಸಿಗದು ಪಿಂಗಳಕನಿಗೆ ನನಗೆ ಇಷ್ಟೆಲ್ಲ ಅನರ್ಥವನ್ನಂಟು ಮಾಡುವುದು ಕ್ಷುದ್ರ ಪರಿವಾರದ ಪ್ರೇರಣೆಯಿಂದಲ್ಲದೆ  ಬೇರೆ ಕಾರಣದಿಂದಲ್ಲ. ಅದಕ್ಕೆ ದವನಕನು ಹೀಗೆಂದನು; ನೀನು ಹೇಳಿದ ದೃಷ್ಟಾಂತಗಳು ಸುಳ್ಳಲ್ಲ ಶ್ಲೋ || ’ಬಹುವೋ ಬಲವಂತಶ್ವ ಉಪಾಯಜ್ಞಾಶ್ಚ ದುರ್ಜನಾಃ’ ಎಂಬ ಕಥೆಯುಂಟು ಸಂಜೀವಕನು ಅದೇನು ಎನ್ನಲು ದವನಕನು ಹೇಳತೊಡಗಿತು.