ಡಾವರದಾಕಿನಿ ಸಾಕಿನಿ
ದೇವತೆ ಕತೆವೇಳಲತಿಶಯಂ ಬಲ್ಲಳ್ ನಾ
ನಾವಿಧದ ಗಾಳುಗುಂಟಣಿ
ಬೂವಳಯದೊಳೆಸೆವ ಕನ್ನೆಯುಜ್ಜಯಿನಿಯೊಳಂ  ೨೧೩

ಅಂತಾಕೆ ಸಾಸಿರ ಗದ್ಯಾಣಕ್ಕಲ್ಲದೆ ಕಥೆಯಂ ಪೇೞ್ವಳಲ್ಲೆಂಬುದಂ ದೇವದತ್ತನೆಂಬ ಬ್ರಾಹ್ಮಣಂ ಕೇಳ್ದುಬ್ರಾಂತಿಗೊಂಡು ಸಾಸಿರ ಪೊನ್ನಂ ಕೊಂಡು ಮಹಾರಣ್ಯದೊಳಗೆ ಬರ್ಪನನೊರ್ವ ಬೊಮ್ಮರಕ್ಕಸಂ ಕಂಡು ಪಿಡಿದು ತಿನಲೆಂದು ತೆಗೆವುದುಂ ದೇವದತ್ತಂ ತನ್ನ ಪೋಪ ವೃತ್ತಾಂತವೆಲ್ಲಮಂ ರಕ್ಕಸಗಱ*ಯೆ ಪೇಳ್ದು ಕಥೆಯ ಕಾರಣಮಾಗಿ ಪಿರಿದಾಯಾಸದಿಂದರ್ಥಮಂ ಪಡೆದು ಬಂದೆನೆನ್ನ ಮನದೞ*ಯಂ ಕಿಡಿಸದೆ ಪಂಚಾರಾತ್ರಿಯನೆಡೆಗೊಟ್ಟೆಯಪ್ಪೊಡೈದೆ ಕಥೆಯಂ ಕೇಳ್ದು ತಡೆಯದೆ ಬರ್ಪೆನಂತಪ್ಪುದಕ್ಕೆ ನನ್ನಂ ನಂಬುವುದೆನೆ, ರಕ್ಕಸನದರ್ಕೊಡಂಬಟ್ಟು ನೀಂ ಪಸಿದು ಬಂದೆಯೆಂದಾತಂಗೆ ತಕ್ಕನಿತಾಹಾರಮಂ ಕುಡೆ ಕೊಂಡು ರಕ್ಕಸನಂ  ಬೀೞ್ಕೊಂಡು ಪೋಗಿ ಭೋಂಕನೆ ಉಜ್ಜಯಿನಿಯನೆಯ್ದಿ ಪೊಳಲ ಪೊಕ್ಕು ಡಾವರಡಾಕಿನಿಯ ಮನೆಯನಱಸುತ್ತುಂ ಬಂದು,

ದೇವರ ದೊರೆಯ ವಿದಗ್ಧಜ
ನವಳಿಯುಮನಲಗೆಗಟ್ಟಿ ಮಱುತ್ತುಂ ನಾ
ನಾ ವಿಧದೊಳೆ ಪೊಕ್ಕಾಡುವ
ಡಾವರಡಾಕಿನಿಯ ಮನೆಯನಾಗಳ್ ಕಂಡಂ  ೨೧೪

ಅಂತು ಕಂಡು ಮನೆಯೊಳಗಂ ಪೊಕ್ಕು ಡಾವರಡಾಕಿನಿಯ ಮುಂದೆ ಪೊಡೆವಟ್ಟು ತಾಯೆ ಕತೆಯಂ ಪೇೞ*ಮೆಂದೊಡಾಗಳ್ ಕುಂಟಣಿ ಕರಮೊಳ್ಳಿತ್ತೇಕಚಿತ್ತದಿಂ ಕೇಳಿಮೆಂದಿಂತೆಂದಳ್; ಒರ್ಮೆ ಕಂಡವರ್ ಮತ್ತಮೆ ಕಂಡೊಂಡೆ ನಂಟರ್ ಇದುವೆ ಪರಮಾರ್ಥಂ ಕಥೆಯೆನೆ ದೇವದತ್ತಂ ವಿಸ್ಮಯಂಬಟ್ಟು ಕುಂಟಣಿಯಂ ಬೀಳ್ಕೋಡು ಮತ್ತಮ ರಕ್ಕಸನಲ್ಲಿಗೆ ಬರ್ಪುದುಂ ಅತನಿದಿರಂ ಬಂದೇಂ ಭಾವ! ಬಂದಿರ್ ಎಂದು ಬೞ*ಕ್ಕೆ ನಿಮಗೆ ಪೇೞ್ದ ಕಥೆಯಂ ಪೇೞ*ಮೆನೆ ದೇವದತ್ತನಿಂತೆಂದಂ :

ವರಗುಣಗಣಯುತರೆನಿಪರ್
ಧರೆಯೊಳಗೋರೊರ್ಮೆ ಕಂಡು ಮತ್ತಂ ಕಂಡಂ
ದಿರದವರೆ ನಂಟರೆಂಬುದು
ಪರಮಾರ್ಥಂ ಕಥೆಯಿದೆಂದು ಕುಂಟಣಿ ಪೇೞ್ದಳ್  ೨೧೫

ಎಂದೊಡ ಕಥೆಯಂ ರಕ್ಕಸಂ ಕೇಳ್ದು ಬೆಕ್ಕಸಂಬಟ್ಟು ನಿನ್ನನಾಂ ಮುಂ ಕಂಡನಿತೆಯಲ್ತು ನಿನಗಾಹಾರಮನಿಕ್ಕಿದೆನಱ*ಂ ನೀನೆನೆಗೆ ನಂಟನೆ ಎಂದು ರಕ್ಕಸಂ ಮೊದಲಾಗಿ ರಕ್ಷಿಸಿದಂ. ಎಂದೊಡೆ ನೀವೆನ್ನನೆಂತುಪೇಕ್ಷಿಸಿ ಪೊದಪಿರೆನೆ ಕಳಹಂಸೆಗಳಿಂತೆಂದವು: ನೀನೆಂದಂತೆ

ವಾಕ್ಯಂ: ಸತಾಂ ಸಾಪ್ತಪದಂ ಮೈತ್ರಂ

ಟೀ|| ತಮ್ಮೊಡನೆ ಬಿಡದಿಪರಂ ನಡೆದಪನೇ ಸಜ್ಜನರ್ಗೆ ಕೆಲೆಯೆನಿಪನು. ಎಂಬುಕ್ತಿಯುಂಟು. ನಿನ್ನನೊಂದುಪಾಯದದೊಳೊಯ್ದಪ್ಪೆವು. ಆ ವೇಳೆಯೊಳಾರೇನನೆಂದೊಡಂ ನೀನೇನಂ ಕಂಡೊಡಂ ನುಡಿಯಲಾಗದು. ಎಮ್ಮ ಮಾತಂ ಮಿಕ್ಕು ನುಡಿದೆಯಾದೊಡೆ ಸೊಸೆಯ ಮಾತಂ ಕೇಳದತ್ತೆಯ ಕಥೆಯಂತಕ್ಕುಮೆನೆ ಕಚ್ಛಪನದೆಂತೆನೆ ಕಳಹಂಸೆಗಳ್ ಪೆೞ್ಗುಂ;

೨೧೪.ಅವಳ ಮನೆಯನ್ನು ಅಂತು ಹುಡುಕಿದನು. ವ|| ಮನೆಯೊಳಗೆ ಹೋಗಿ ಡಾವರ ಡಾಕಿನಿಯ ಮುಂದೆ ಹೊನ್ನನ್ನಿಟ್ಟು ನಮಸ್ಕರಿಸಿ ‘ತಾಯೇ ಕಥೆಯನ್ನು ಹೇಳಿರಿ’  ಎಂದನು ಅಗ ಆ ಕುಂಟಣಿ ‘ಬಹಳ ಒಳ್ಳೆಯದಾಯಿತು ಏಕಾಗ್ರಚಿತ್ತದಿಂದ ಕೇಳಿರಿ’ ಎಂದು ಹೀಗೆ ಆರಂಭಿಸಿದಳು: ಒಮ್ಮೆ ಕಂಡವರು ಮತ್ತೊಮ್ಮೆ ಕಂಡರೆ ನಂಟರು. ಇದೇ ಪರಮಾರ್ಥವಾದ ಕಥೆ ಎಂದು ಹೇಳಿದಳು. ದೇವದತ್ತನು ವಿಸ್ಮಯಪಟ್ಟು ಕುಂಟಣಿಯನ್ನು ಬೀಳ್ಕೊಂಡು ಮತ್ತೆ ರಕ್ಕಸನಲ್ಲಿಗೆ ಬಂದನು. ಆತನು ಎದುರುಗೊಂಡು ಏನು ಭಾವನವರೇ! ಬಂದಿರಿ ಎಂದು ಬಳಿಕ ನಿಮಗೆ ಹೇಳಿದ ಕಥೆಯನನ್ನು ಹೇಳಿರಿ ಎಂದು ಕೇಳಲು ದೇವದತ್ತನು ಹೀಗೆಂದನು: ೨೧೫. ಗುಣಯುತರೆನ್ನಿಸುವರು ಒಮ್ಮೆ ಕಂಡು ಮತ್ತೊಮ್ಮೆ ಕಾಣುವ ಪ್ರಸಂಗ ಬಂದರೆ ಅವರೇ ನಂಟರಾಗುವರು ಎಂಬುದೇ ಪರಮಾರ್ಥವುಳ್ಳ ಕಥೆ ಎಂದು ಕುಂಟಣಿ ಹೇಳಿದಳು ಎಂದನು. ವ|| ಆ ಕಥೆಯನ್ನು  ರಾಕ್ಷಸನು ಕೇಳಿ ಅಶ್ಚರ್ಯಪಟ್ಟು ನಿನ್ನನ್ನು ನಾನು ಮೊದಲು ಕಂಡದ್ದು ಮಾತ್ರವಲ್ಲ; ನಿನಗೆ ಊಟಹಾಕಿದೆ. ಅದರಿಂದ ನೀನು ನನಗೆ ನಂಟನೇ ಆಗಿರುವೆ ಎಂದು ದೇವದತ್ತನನ್ನು ರಕ್ಷಿಸಿದನು. (ಇಪ್ಪತ್ತನೆಯ ಕಥೆಯ ಶೇಷ) ಹೀಗಿರುವಾಗ ನೀವು ನನ್ನನ್ನು ಹೇಗೆ ಉಪೇಕ್ಷಿಸಿ  ಹೋಗುವಿರಿ ಎನ್ನಲು ಕಲಹಂಸೆಗಳು ಹೀಗೆಂದವು: ವಾ|| ‘ಸತಾಂ ಸಾಪ್ತಪದಂ ಮೈತ್ರಂ’ ವ || ತಮ್ಮೊಡನೆ ಏಳಡಿಯವರೆಗೆ ನಡೆದವನೇ ಸಜ್ಜನರಿಗೆ ಗೆಳೆಯನಿನಿಸುವನು ಎಂಬ ಉಕ್ತಿಯುಂಟು. ನಿನ್ನನ್ನು ಒಂದು ಉಪಾಯದಿಂದ ಒಯ್ಯುವೆವು. ಆ ವೇಳೆಯಲ್ಲಿ ಯಾರು ಏನೆಂದರೂ ನೀನು ಏನನ್ನು ಕಂಡರೂ ನುಡಿಯಬಾರದು. ನಮ್ಮ ಮಾತನ್ನು ಮೀರಿ ನುಡಿದೆಯಾದರೆ ಸೊಸೆಯ ಮಾತನ್ನು ಕೇಳದ ಅತ್ತೆಯ ಕಥೆಯಂತಾಗುವುದು ಎನ್ನಲು ಆಮೆ ಅದೇನು ಎಂದು ಕೇಳಲು ಹಂಸೆಗಳು ಹೇಳಿದವು: