ಬೊಮ್ಮದೇವನ ಮೊಮ್ಮಂ ಶ್ರತಿವಿಹಿತಕರ್ಮಾನುಷ್ಠಾನುನಿಷ್ಠನಪ್ಪ ರಾವಣಂ ಕಾಮಾತುರನಾಗಿ ರಾಮನಂ ವಂಚಿಸಿ ಭೂಮಿಜೆಯನುಯ್ಯೆ ತದ್ವಿಯೋಗವಿಹ್ವಲೀ ಬೂತಚಿತ್ತಂ ರಘುವಂಶಜಾತಂ ಸೇತುವಂ ಬಂಧನಂಗೆಯ್ದು ಮೇಲೆವರಲಿರ್ಪುದಂ ರಾವಣಂ ಕೇಳ್ದು ತತ್ಕಾರ‍್ಯ ಪರ‍್ಯಾಲೋಚನೆಚಿiಳಿರ್ದಲ್ಲಿ ವಿಭೀಷಣನಿಂತೆದಂ:

ಶತಧೃತಿಪಾತ್ರನುಂ ಜಿತಗತ್ತ್ರಯವೀರನುಮಾಗಿ ನೀಂ ಮಹಾ
ಸತಿಗವನೀಜೆಗನ್ಯವಧುಗಾಟಿಸೆ ವಾಸವ ವಹ್ನಿ ಧರ್ಮ ನೈ
ರತಿ ವರುಣಾನಿಲಾರ್ಥಪಹರರ್ ನಗುವರ್ ಮುಳಿಗಂ ಮುರಾರಿ ವಾ
ಕ್ಪತಿ ಪೞ*ಗಂ ಮನೋಜರಿಪು ಪೇಸುಗುಮಗ್ಗದ ಕೀರ್ತಿ ಮಾಸುಗಂ    ೨೨೬

ಎಂಬುದುಮಲ್ಲದೆಯುಂ, ’ಪರದಾರತಮನಮನಾಯುಃ’ ಪರೆವೆಣ್ಣೊಳ್ ಕೂಡುವವನಾಯುವರೆಗುಂ ಎಂಬುದು ಶಾಸ್ತ್ರಾರ್ಥಮುಂಟದಱ*ಂ ಸೀತೆಯಂ ರಾಮಗೊಪ್ಪಿಸುವುದೆ ನೀತಿಯುಂ ನಿರ್ವಾಹಮುಮೆಂದು ಸತ್ಪುರುಷವಿಭೂಷಣನಪ್ಪ ವಿಭೀಷಣಂ ಸುಭಾಷಿತಗಳಂ ನುಡಿಯೆ ತನಗಿಚ್ಚಾವಿಘಾತಿಯಂ ಮಾಡಿದನೆಂಬನಿತಱೊಳಾ ದನುಜನನುಜನಂ ಮೊದಲಾಗಿ ಕೊಲಲ್ಬಗೆದಂ. ಪಿಂಗಳಕನಪ್ಪೊಡೆ ಕೇವಲಂ ರಜೋಮೂರ್ತಿಯಮನತಿವರ್ತಿಯುಮಾಗಿರ್ಪನಂತುಮಲ್ಲದೆಯುಂ

ಶ್ಲೋ || ನ ವದೇತ್ಸ್ವಾ ಮಿನಿ ಕ್ರುದ್ಧೇ ಯುಕ್ತಮಪ್ಯುತ್ತರಂ ಬುಧಃ
ಜ್ವರಾದೌ ದುಗ್ಧಪಾನಂ ಹಿ ವಿಷಮಾಹುರ್ಮನೀಷಿಣಃ  ||೧೧೪||

ಟೀ|| ಅರಸು ಕುಪಿತನಾದಲ್ಲಿ ಉಚಿತವಹ ಉತ್ತರವಾದೊಡಂ ಬಲ್ಲವರ್ ನುಡಿಯಲಾಗದು. ಜ್ವರದ ಮೊದಲಲ್ಲಿ ಹಾಲಂ ಕುಡಿದೊಡಂ ವಿಷವಹುದೆಂದು ಬುದ್ಧಿವಂತರ್ ಪೇಳ್ವರ್ ಎಂಬ ನೀತಿವಾಕ್ಯಮುಂಟಪ್ಪುದಲ್ಲದೆ ಪಲವು ದಿವಸಮಾಹಾರಂಬಡೆಯದೆ ಕೆಂಗೋಲ್ಮಸಗಿದ ಸಿಂಹಕ್ಕೆ ಪೂಣಿಗತನದಿಂದೇನಾನುಮೊಂದಂ ನುಡಿದೆನಪ್ಪೊಡೆನ್ನನೆ ಮುನ್ನಮಾಪೋಶನಂಗೊಳ್ಗುಮನದಱ*ಂ ನುಡಿವುದಂತಿರ್ಕೆ ಅದಿರ್ದ ದೆಸೆಯಂ ಮೊದಲಾಗಿ ನೋಡಲಣ್ಮೆನದಲ್ಲದೆಯುಂ,

ಸಂಜೀವಕ ನೀನೆನಿತೆನಿ
ತಂಜಿದೊಡಂ ಕುಂಜರಾರಿ ಕೊಲ್ಲದೆ ಮಾಣಂ
ಕಂಜೋದರನುಂ ಹರನುಂ
ಕಂಜಾಸನನುಂ ಕಡಂಗಿ ಕಾವೊಡಮೀಗಳ್  ೨೨೭

ಎನೆ ಗವಾಪನದೆಲ್ಲಮಂ ಕೇಳ್ದಾದೊಡಮಿನ್ನೆಂತು ಶಕ್ಯ್ತನುರೂಪದಿಂ ಸಾಹಸಂಗೈದಪ್ಪೆಂ ಪಿಂಗಳಕನೆನಗೆ ತಪ್ಪಂ ಬಗೆವಾಗಳೆಂತಿರ್ಪನಱ*ಯೆ ಪೇಳ್ವನೆ ದವನಕಂ ಪೇೞ್ಗು; ಆ ಸಿಂಗಂ ಮುನ್ನಿನಿರ್ಪಂದಮಲ್ಲದೆ ಶಿಲಾತಳದ ಮೇಲೆ ಕಾಲುಮಂ ಬಾಲಮುಮನುಡುಗಿಯಡಂಗಿಸಿ ಕಿವಿಯಂ ಕತ್ತರಿಸಿ ಶರೀರಮಂ ಸಂಕೋಚಿಸಿ ನಟ್ಟ ದಿಟ್ಟಿಗಳ್ವೆರಸು ನಿನ್ನೆ ನೋಡುತ್ತಮಿರ್ಕುಮಪ್ಪೊಡಾಗಳೆ ಯುದ್ಧಸನ್ನದ್ದನೆಂದಱ*ಯೆಂದು ಪೇೞ್ದೆರಡರ್ಕಂ ಪರಸ್ಪರವಿರೋಧಮಂ ಮಾಡಿ ಪ್ರಕೋಪಂಗೊಳಿಸಿ ಮಾಣದಾಕ್ಷಣದೊಳೆ ದವನಕಂ ಕರಟಕನಲ್ಲಿಗೆ ಬಂದು ಎನ್ನೆತ್ತಿಕೊಂಡ ಕಜ್ಜದ Pಡೆಯೆನೆಯ್ದಿಸಿ  ಬಂದೆನೆಂಬುದುಂ ಕರಟಕನಿಂತೆದಂ:

ಶ್ಲೋ|| ಭಿನ್ನತ್ತಿಸಮ್ಯಕ್ಪ್ರಹಿತೋ ಭೇದೋಪಾಯಸ್ಥಿರಾಂ ಮತಿಂ
ಭೂಧರಾನ್ ಕರ್ಕಶಶಿಲಾನ್ ಮಹಾಶನಿರಿವೋದಕಂ  ||೧೧೫||

ಟೀ|| ಲೇಸಾಗಿ ಪ್ರಯೋಗಿಸಿದ ಭೇದೋಪಾಯವು ಸ್ಥಿರವಹ ಮತಿಯಂ ಭೇದಿಸುವುದು: ಅದು ಹೇಗೆಂದೊಡೆ   ಬೆಟ್ಟಿತಪ್ಪ ಕಲ್ಲುಗಳುಳ್ಳ ಬೆಟ್ಟಮಂ ಸಿಡಿಲುಂ ನೀರುಂ ಬೇದಿಸುವಹಗೆ ಎಂದಿತಾ ನರಿಗಳ್ ತಮ್ಮೊಳ್ ನುಡಿಯುತಿರ್ಪನ್ನೆಗಮಿತ್ತಲ್,

ಸಂಜೀವಕನೆಂದಂತೆನ
ಗಂ ಜೀವನದಾಸೆಯದು ನಿರಾಸೆಯುಮಾಯ್ತಿ
ನ್ನಂಜದೆ ಕಾದುವೆನಂಜಿದೊ
ಡಂ ಜವನಿನ್ನೆನ್ನ ಬೞ*ಕನೇನುಱ*ದಪನೇ  ೨೨೮

ಅದಱ*ಂದೀಗಳೆ ಪೋಗಿ ತಾಗಿ ತಳ್ತಿಱ*ವೆಂ ಬೞ*ಕ್ಕೆ ತನ್ನಪ್ಪುದಕ್ಕೆಂದು ಬೋರೆನೆ ಬಂದಾ ಸನ್ನಮುಮತಿದೂರಮುಮಲ್ಲದೆ ನಿಂದು ದವನಕಂ ಪೇಳ್ದ ಚಿಹ್ನಂಗಳನಾ ಸಿಂಗದ ಮೊಗದೊಳ್ ಕಂಡು ಕಡುಗಲಿಯಪ್ಪುದುಮದಱ ಚೇಷ್ಟೆಯುಮಂ ಪಿಂಗಳಕಂ ಕಂಡು ಕಡುಮುಳಿದು

ಬಳವದರಿಕುಂಭಿ ಕುಂಭ
ಸ್ಥಳಕ್ಕೆ ಪಾಯ್ವಂತೆ ಪಾಯ್ದನಕಬಲಂ ಪಿಂ
ಗಳಕಂ ಮಾಣದೆ ಗೋಮಂ
ಡಳ ಮುಖ್ಯನ ಮೇಲೆ ಕಲುಷ ಕಲುಷಿತವದನಂ  ೨೨೯

ಅಂತು ಪಾಯ್ವುದುಂ ಸಂಜೀವಕಂ ವಜ್ರಷಾಣನಿಶಿತವಿಷಾಣಯುಗಳದಿಂ ಕಂಠೀರವನಕಂಡಪ್ರದೇಶಮನಿಱ*ದು ಪಿರಿದುಂ ಪೊೞ್ತು ತಳ್ತಿಱ*ದು ಕಾದಿ,

ಬಳಿಭುಗ್ಗೃಧ್ರ  ಕದಂಬಮಂಬರದೊಳುಗ್ರಶ್ವಾಪದಶ್ರೇಣಿ ಭೂ
ತಳದೊಳ್ ನರ್ತಿಸೆ ಕೋಪಪಾವಕಶಿಖಾಜಾಲಾತಿರೌದ್ರನನಂ
ಕುಳಿಶಾಗ್ರೋಗ್ರ ಪರಿಸುರನ್ನಖಮುಖವ್ಯಾಳಗ್ನ ಮಾತಂಗಜಾಂ
ಗಳಕಂ ಪಿಂಗಳಕಂ ಗವಾದಿಪತಿಯಂ ಕೊಂದಂ ಭುಜಾದಂಡದಿಂ  ೨೩೦

ಅಂತುಕೊಂದತಿಕ್ರಾಂತನಾಗಿ ವಸಂತಸಮಯ ಕಿಂಶುಕೋಪಮನಖಮುಖದಿನಾತ್ಯಾಸುರಮಾಗಿರ್ದ ನಿಜಸ್ವಾಮಿಯಂ ಕಂಡು ಕರಟಕಂ ದವನಕಂಗಿತೆಂದಂ: ನಿನ್ನಂತಪ್ಪ ದುರ್ಮತಿಯ ಕಾರಣದಿಂ ಪಿಮಗಳಕಂಗೆ ಧರ್ಮಹಾನಿಯುಂ ಯಶೋಹಾನಿಯುಮಾಗಿ ಮಾಣದೆ ಪ್ರಾನಹಾನಿಯುಮಾಗ ಲಿರ್ದುದಿದಾತನ ದೋಷಮಲ್ಲದೆ ನಿನ್ನ ದೋಷಮಲ್ಲದೆಂತೆನೆ :

೨೨೬; ಬ್ರಹ್ಮನ ಮೊಮ್ಮಗನೂ ಜಗತ್ತ್ರವೀರನೂ ಆಗಿ ನೀನು ಪರಸ್ತ್ರೀಯರನ್ನು ಬಯಸಿದರೆ ಇಂದ್ರಾಗ್ನಿ ಯಮ ನೈಋತಿ ವರುಣ ವಾಯು ಕುಬೇರರು ನಗುವರು: ಮುರಾರಿ ಮುಳಿಯುವನು: ವಾಕ್ಪತಿ ಹಳಿಯುವನು* ಹರನು ಹೇಸುವನು. ಶ್ರೇಷ್ಠವಾದ ಕೀರ್ತಿ ಮಾಸುವುದು. ವ|| ಅಲ್ಲದೆ ಪರದಾರಗಮನಮನಾಯುಃ ಹೆರರ ಹೆಣ್ಣಿನಲ್ಲಿ ಕೂಡುವವನ ಅಯುಸ್ಸು ನಾಶವಾಗುವುದು. ಅದರಿಂದ ಸೀತೆಯನ್ನು ರಾಮನಿಗೆ ಒಪ್ಪಿಸುವುದೇ ನೀತಿಯೂ ಕರ್ತವ್ಯವೂ ಅಗಿದೆ ಎಂದು ಸತ್ಪುರುಷವಿಭೂಷಣನು ಸುಭಾಷಿತಗಳನ್ನು ನುಡಿದನು. ತನ್ನ ಬಯಕೆಗಳನ್ನು ವಿರೋಸಿದನೆಂಬ ಕಾರಣದಿಂದ ಅ ದನುಜನು ತನ್ನ ತಮ್ಮನನ್ನು ಮೊದಲು ಕೊಲ್ಲ ಬಗೆದನು. ಪಿಂಗಳಕನಾದರೋ ಕೇವಲ ರಜೋಮೂರ್ತಿಯುತ, ಅತಿವರ್ತಿಯೂ ಅಗಿರುವನು ಅಲ್ಲದೆ ಶ್ಲೋ || ಅರಸನು ಕುಪಿತನಾಗಿದ್ದಲ್ಲಿ ಉಚಿತವಾದ ಉತ್ತರವಾದರೂ ಬಲ್ಲವರು ನುಡಿಯಬಾರದು. ಜ್ವರದ ಮೊದಲಲ್ಲಿ ಹಾಲನ್ನು ಕುಡಿದರೂ ವಿಷವಾಗುವುದೆಂದು ಬುದ್ಧಿವಂತರೂ ಹೇಳುವರು. ವ || ಹಲವು ದಿವಸ ಅಹಾರ ಪಡೆಯದೆ ಕೋಪಗೊಂಡ ಸಿಂಹಕ್ಕೆ ಏನಾದರೂ ನಾನು ವಿಚಾರದೃಷ್ಟಿಯಿಚಿದ ಮಾತನಾಡಿದರೆ ನನ್ನನ್ನೆ  ಮೊದಲು ಆಪೋಶನ ಕೊಳ್ಳುವನು. ಅದರಿಂದ ಮಾತನಾಡುವುದು ಹಾಗಿರಲಿ. ಅದು ಇರುವ ದೆಸೆಯನ್ನು ನೋಡುವ ಸಾಮರ್ಥ್ಯವೂ ನನಗಿಲ್ಲ. ೨೨೭. ಸಂಜೀವಕ ನೀನು ಎಷ್ಟು ಅಂಜಿದರೂ ಸಿಂಹವು ನಿನ್ನನ್ನು ಕೊಲ್ಲದೆ ಬಿಡನು. ಹರಿಹರಬ್ರಹ್ಮಾದಿಗಳು ನಿನ್ನನ್ನು ಕಾಪಾಡುವುದಾದರೂ ಬಿಡನು ಎನ್ನಲು ವ|| ಆ ಎತ್ತು ಇದೆಲ್ಲವನ್ನು ಕೇಳಿ ಅದರೂ ನನ್ನ ಶಕ್ತ್ಯನುಸಾರ ಸಾಹಸ ಮಾಡುವೆ ಪಿಂಗಳಕನು ನನಗೆ ತಪ್ಪನ್ನು ಬಗೆವಾಗ ಹೇಗಿರುವನು ಎಂದಾದರೂ ತಿಳಿಸು ಎಂದು ಕೇಳಿಕೊಂಡಿತು  ಅದಕ್ಕೆ ದವನಕ ಹೇಳಿತು: ಆ ಸಿಂಹವು ಮೊದಲಿದ್ದ ರೀತಿಯಲ್ಲಿ ಇಲ್ಲದೆ ಶಿಲಾತಲದ ಮೇಲೆ ಕಾಲನ್ನೂ ಬಾಲವನ್ನೂ ಉಡುಗಿ ಅಡಿಗಿಸಿಕೊಟ್ಟುಕೊಂಡು ಕಿವಿಯನ್ನು ಕತ್ತರಿಸಿ ಶರೀರವನ್ನು ಸಂಕೋಚಿಸಿ ನೆಟ್ಟ ದೃಷ್ಟಿಯಿಂದ ನಿನ್ನನ್ನೇ ನೋಡುತ್ತಾ ಇದ್ದರೆ ಅಗಲೇ ಯುದ್ಧಸನ್ನದ್ದವಾಗಿದೆಯೆಂದು ತಿಳಿ ಎಂದು ಹೇಳಿ ಎರಡಕ್ಕೂ ಪರಸ್ಪರ ವಿರೋಧವನ್ನುಂಟುಮಾಡಿ ಪ್ರಕೋಪಗೊಳಿಸಿತು. ಅಲ್ಲಿಂದ ದವನಕನು  ಕರಟಕನಲ್ಲಿಗೆ ಬಂದು ನಾನು ಕೈಕೊಂಡ ಕೆಲಸವನ್ನು ಕಡೆಗೊಳಿಸಿ ಬಂದೆನೆಂದಿತು, ಅದಕ್ಕೆ ಕರಟಕನು ಹೀಗೆಂದನು: ಶ್ಲೋ ಚೆನ್ನಾಗಿ ಪ್ರಯೋಗಿಸಿದ ಭೇದೋಪಾಯವು ಕಠೋರವಾದ ಕಲ್ಲುಗಳುಳ್ಳ ಬೆಟ್ಟವನ್ನೂ ಸಿಡಿಲೂ ನೀರೂ ಭೇದಿಸುವ ಹಾಗೆ ಎಂಥ ದೃಢಚಿತ್ತನನ್ನೂ ಭೇದಿಸುವುದು ಎಂದು ಆ ನರಿಗಳು ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದವು. ೨೨೮. ಇತ್ತ ಸಂಜೀವಕನು ತನಗೆ ಇನ್ನು ಜೀವನದ ಆಸೆ ನಿರಾಶೆಯಾಯಿತು, ಇನ್ನು ಹೆದರದೆ ಕಾದುವೆನು ; ಅಂಜಿದರೆ ಏನಾದರೂ ಯಮನು ನನ್ನನ್ನು ಬಿಡುವನೆ ! ವ || ಅದರಿಂದ ಈಗಲೇ ಹೋಗಿ ಪ್ರತಿಭಟಿಸುವೆ ಬಳಿಕ ತನಗಾಗುವುದು ಅಗಲಿ ಎಂದು ಭಾವಿಸಿ ಬೇಗನೆ ಬಂದನು. ಅತ್ಯಂತ ಹತ್ತಿರವೂ ಅತಿದೂರವೂ ಅಗದಂತೆ ನಿಂತು ದವನಕನು ಹೇಳಿದ ಗುರುತುಗಳನ್ನು ಆ ಸಿಂಹದ ಮುಖದಲ್ಲಿ ಕಂಡು ಕಡುಗಲಿಯಾದ ಸಂಜೀವಕನ ಚೇಷ್ಟೆಯನ್ನು ಪಿಂಗಳಕನು ಕಂಡು ಕೋಪಾವಿಷ್ಟನಾಗಿ ೨೨೯. ಮದ್ದಾನೆಗಳ ಕುಂಭಸ್ಥಲಕ್ಕೆ ಹಾಯುವಂತೆ ಅಮಬಲನಾದ ಪಿಂಗಳಕನು ಸಂಜೀವಕನ ಮೇಲೆ ಕಲುಷಕಲುಷಿತವದನನಾಗಿ ಎರಗಿದನು. ವ|| ಸಂಜೀವಕನು ಕೂಡ ವಜ್ರಷಾಣನಿಶಿತವಿಷಾಣಯುಗಳದಿಂದ ಕಂಠೀರವನ ಕಂಠಪ್ರದೇಶವನ್ನು ೨೩೦. ಕಾಗೆ ಹದ್ದುಗಳ ಸಮೂಹವು ಅಕಾಶದಲ್ಲೂ ಕ್ರೂರಪ್ರಾಣಿಗಳ ಗುಂಪು ಭೂಮಿಯಲ್ಲೂ ನರ್ತಿಸಲು ಕೋಪಾಗ್ನಿಯಿಂದ ರೌದ್ರಾನನನಾದ, ವಜ್ರಾಯುಧದ ಹಾಗೆ ಹೊಳೆಯುವ ಉಗುರುಗಳನ್ನು ಮದ್ದಾನೆಗಳ ಮೇಲೆ ನಾಟಿದವನೂ  ಇರಿದು ಬಹಳ ಹೊತ್ತಿನವರೆಗೆ ಕಾದಾಡಿದನು. ಪಿಂಗಳಕನು ಸಂಜೀವಕನನ್ನು ತನ್ನ ಭುಜಾದಂಡದಿಂದ ಕೊಂದನು. ವ|| ಅತ್ಯಂತ ಭಯಂಕರನಾಗಿದ್ದ ನಿಜಸ್ವಾಮಿಯನ್ನು ಕರಟಕನು ಕಂಡು ದವನಕನೊಡನೆ ಹೀಗೆಂದನು: ನಿನ್ನಂತಹ ದುರ್ಮಂತ್ರಿಯ ಕಾರಣದಿಂದ ಪಿಂಗಳಕನಿಗೆ ಧರ್ಮಹಾನಿಯೂ ಯಶೋಹಾನಿಯೂ ಅಗಿ ಪ್ರಾಣಹಾನಿಯೂ ಅಗುತ್ತಿತ್ತು. ಇದು ಅತನ ದೋಷವಲ್ಲದೆ ನಿನ್ನ ದೋಷವಲ್ಲ.

ಶ್ಲೋ|| ದುರ್ಮಂತ್ರಿಣಂ ಕಮುಪಯಾಂತಿ ನ ನೀತಿದೋಷಾಃ
ಸಂತಾಪಯಂತಿ ಕಮಪಥ್ಯಭುಜಂ ನ ರೋಗಾಃ
ಕಂ ಶ್ರೀರ್ನದರ್ಪಯತಿ ಕಂನ ನಿಹನ್ತಿ ಮೃತ್ಯುಃ
ಕಂ  ಸ್ತ್ರೀಕೃತಾ ವಿಷಯಾಃ ಪರಿತಾಪಯಂತಿ  ||೧೧೬||

ಓ|| ದುರ್ಮಂತ್ರಿಯಾಗಿರ್ದವನ ನೀತಿದೋಷಂಗಳ್ ತಾಗದಿರವು. ಅಪಥ್ಯದಲುಂಬವನ ವ್ಯಾದಿಗಳ್ ಪೀಡಿಸುವುವು. ಐಶ್ವರ‍್ಯವೆಂತಹನುನುಂ ಸೊಕ್ಕಿಸುವುದು ಮೃತ್ಯುವೆಂತಹನನುಂ ಕೊಲ್ಲುವುದು ಸ್ತ್ರೀಯರು ಮಾಡಿದಂಥ ವಿಷಯಗಳಾವನಾದೊಡಂ ಸಂತಾಪಂಬಡಿಸುವುವು ಮತ್ತಂ

ಶ್ಲೋ || ಸಾಮೈವ ಹಿ ಪ್ರಯೋಕ್ತಮಾದೌ ಕಾರ‍್ಯಂ ವಿಜಾನತಾ
ಸಾಮಸಿದ್ಧೊ ಹಿ ವಿಜಯೋ ನ ಪ್ರಯಾತಿ ಪರಾಭವಂ  ||೧೧೭||

ಟೀ|| ಕಾರ‍್ಯವನಱ*ವಾತನು ಮೊದಲಲ್ಲಿ ಸಾಮವೆನೆ ಪ್ರಯೋಗಿಸುವುದು, ಸಾಮಂ ಸಿದ್ಧಿಸಿದೊಡೆ ವಿಜಯವಹುದು ಸೋಲವನೈದನು ಅದೆಂತೆಂದೊಡೆ,

ಶ್ಲೋ || ಸಾಮಾದಿದಂಡಪರ‍್ಯಂತಂ ನಯಃ ಪ್ರೋಕ್ತಶ್ಚತುರ್ವಿಧಃ
ತೇಕ್ಷಾಂ ದಂಡಸ್ತು ಪಾಪೀಯಾನ್ ತಸ್ಮಾದಂಡಂ ವಿಸರ್ಜಯೇತ್  ||೧೧೮||

ಟೀ|| ಸಾಮಾದಿಯಾಗಿ ದಂಡಪರ‍್ಯಂತಮಾವುಪಾಯಂ ನಾಲ್ಕು ತೆಱನಕ್ಕುಂ ಅವರೊಳಗೆ ದಂಡಮೆಂಬುದು ಪಾಪವನ್ನುಳ್ಳುದು ಅದು ಕಾರಣದಿಂ ದಂಡಮಂ ಬಿಟ್ಟು ಕಳೆವುದು.

ಶ್ಲೋ || ನ ಮಯೂಖೇನ ರತ್ನಾನಾಂ ನಾತಪೇನ ನ ವಹ್ನಿನಾ
ಸಾಮ್ನೈವ ಪ್ರಭಯಾ ಯಾತಿ ವಿದ್ವಷಪ್ರಭವಂ ತಮಃ   ||೧೧೯||

ಟೀ|| ಶತ್ರುವಿಂ ಜನಿಸಿದ ಕತ್ತಲೆಯೆಂಬುದು ರತ್ನದ ಬೆಳಗಿಂದಂ ಬಿಸಿಲಿಂದಂ, ಕಿರ್ಚಿಂದಂ ಕಿಡುವುದಿಲ್ಲ: ಸಾಮದ ಬೆಳಗಿಂದಮೆ ಕಿಡುವುದು.

ಶ್ಲೋ|| ಕಾರ‍್ಯಾಣ್ಯುತ್ತಮದಂಡ ಸಾಹಸಮಯಾ ನ್ಯಾಯ ಸ ಸಾಧ್ಯಾನಿ ಯೇ
ಪ್ರೀತ್ಯಾ ಸನ್ನಮಯಂತಿ ನೀತಿಕುಶಲಾಃ ಸಾಮ್ನೈವ ತೇ ಮಂತ್ರಿಣಃ
ನಿಸ್ಸಾರಾಲ್ಪ ಫಲಾನಿ ಯೇತ್ವವಿನ ವಾಂಛಂತಿ ದಂಡಾಧಮಾ
ಸ್ತೇಷಾಂ ದುರ್ಣಯಚೇಷ್ಟಿತೈರ್ನರಪತೇರಾರೋಪ್ಯತೇ ಶ್ರೀಸ್ತುಲಾಂ  ||೧೨೦||

ಟೀ|| ಆರ್ ಕೆಲಂಬರ್ ನೀತಿಕುಶಲರ್ ದಂಡಸಾಹಸಮಯವಹ ಅಸಾದ್ಯಮಪ್ಪ ಕಾರ‍್ಯಂಗಳಂ ಸಾಮದಿಂದವೆ ಮಾಡಿ ನೃಪಂಗೆ ಸಂತೋಷಂಬಡಿಸುವರ್ ಅವರೀಗಲೆ ಮಂತ್ರಿಗಳ್ ಅರ್ ಕೆಲಂಬರ್ ತೆಱನಱ*ಯದೆ ನಿಸ್ಸಾರಮಾಗಿ ಅಲ್ಪಫಲವಹಂತಹವನೆ ಮಾಡಲಿಚ್ಚೈಸಿಹರ್ ಅವರ್ ದಂಡಾಧಮರೆನಿಸಿಕೊಂಬರ್ : ಅವರ ದುರ್ಣಯಚೇಷ್ಟೆಗಳಿಂ ನೃಪನೈಶ್ವರ‍್ಯಂ ತೊಲೆಯಲ್ಲಿ ತೂಗಿಸಿಕೊಂಬುದು.

ಜಯಮಂ ಸ್ವಾಮಿಗೆ ಮೊದಲೊಳ್
ಬಯಸುವ ಸಚಿವಂ ಸಮಸ್ತ ಕಾರ‍್ಯಂಗಳೊಳಂ
ನಯಶಾಸ್ತ್ರಕ್ರಮದಿಂದಂ
ಪ್ರಯತ್ನದಿಂ ಸಾಮಮಂ ಪ್ರಯೋಗಿಪುದುಚಿತಂ  ೨೩೧

ಅದಱ*ಂ ನೀತಿಶಾಸ್ತ್ರಾಭಿಪ್ರಾಯೋಪಾಯನಿಪುಣನುಂ ಸ್ವಾಮಿಹಿತನುಂ ಚತುರಪಧಾವಿಶುದ್ಧನುಮಲ್ಲದ ನಿರ್ಬುದ್ಧಿಯನನ್ವಯಾಗತನೆಂಬನಿತಱೊಳೆ ಮಂತ್ರಿಯಿಂ ಮಾಡಿದ ಕಾರಣದಿಂ ನಿನ್ನ ದುರ್ಮಂತ್ರದಿಂ ಮೃಗಾರಾಜನಪ್ಪ ಪಿನಗಳಕಂಗಿತಪ್ಪವಸ್ಥೆಯಾದುದು,

ಶ್ಲೋ || ದುಷ್ಟಬುದ್ಧಿಸ್ಸುಬುದ್ಧಿಶ್ಚದ್ವಯೋರ್ಧರ್ಮಸ್ಯ ಸಂಶ್ರಯಾತ್  ||೧೨೧||

ಎಂಬ ಕಥೆಯಂತಾದುದೆನೆ ದವನಕನದೆಂತೆನೆ ಕರಟಕಂ ಪೇೞ್ಗುಂ:

ಶ್ಲೋ|| ದುರ್ಮಂತ್ರಿಯಾದವನ ನೀತಿ ದೋಷಗಳು ತಾಗದೆ ಇರವು. ಅಪಥ್ಯದಲ್ಲಿ ಉಣ್ಣುವವನನ್ನು ವ್ಯಾಗಳು ಪೀಡಿಸುವುವು.  ಐಶ್ವರ್ಯವು ಎಂಥವನನ್ನೂ ಸೊಕ್ಕಿಸುವುದು: ಮೃತ್ಯು ಎಂಥವನನ್ನು ಕೊಲ್ಲುವುದು ಸ್ತ್ರೀಯರು ಮಾಡಿದಂಥ ವಿಷಯಗಳು ಯಾರನ್ನಾದರೂ ಸಂತಾಪಪಡಿಸುವುವು. ಶ್ಲೋ || ಅಲ್ಲದೆ ಕಾರ‍್ಯವನ್ನರಿತವನು ಮೊದಲು ಸಾಮವನ್ನೆ ಪ್ರಯೋಗಿಸಬೇಕು ಸಾಮ ಸಿದ್ಧಿಸಿದರೆ ವಿಜಯಾವಾಗುವುದು : ಸೋಲುವುದಿಲ್ಲ. ಶ್ಲೋ|| ನಾಲ್ಕು ರೀತಿಯ ಉಪಾಯಗಳಿವೆ. ಅವುಗಳಲ್ಲಿ ದಂಡವೆನ್ನುವುದು ಪಾಪಕರವಾದುದು: ಅದರಿಂದ ದಂಡವನ್ನು ನಿವಾರಿಸಿಕೊಳ್ಳಬೇಕು. ಶ್ಲೋ || ಶತ್ರುವಿನಿಂದ ಜನಿಸಿದ ಕತ್ತಲೆ ರತ್ನದ ಬೆಳಕಿನಿಂದಲೂ ಬಿಸಿಲಿನಿಂದಲೂ ಕಿಚ್ಚಿನಿಂದಲೂ ಕೆಡುವುದಿಲ್ಲ: ಸಾಮದ ಬೆಳಕಿನಿಂದಲೇ ಕೆಡುವುದು. ಶ್ಲೋ|| ನೀತಿಕುಶಲರಾದವರು ದಂಡ ಸಾಹಸಮಯವಾದ ಅಸಾದ್ಯವಾದ ಕಾರ್ಯಗಳನ್ನು ಸಾಮದಿಂದ ಮಾಡಿ ನೃಪನನ್ನು ಸಂತೋಷಪಡಿಸುವರೋ ಅವರೇ ನಿಜವಾದ ಮಂತ್ರಿಗಳು: ಯಾರು ಕ್ರಮವನ್ನರಿಯದೆ ನಿಸ್ಸಾರವಾದ ಅಲ್ಪಫಲವನ್ನುಂಟುಮಾಡುವರೋ ಅವರು ದಂಡಾಧಮರೆನಿಸಕೊಳ್ಳುವರು. ಅವರ ದುರ್ನೀತಿಯಿಂದಾಗಿ ನೃಪನ ಐಶ್ವರ್ಯವು ತುಲೆಯಲ್ಲಿ ತೂಗಿಸಿಕೊಳ್ಳುವುದು. ೨೩೧. ತನ್ನ ಸ್ವಾಮಿಗೆ ಜಯವನ್ನು ಹಾರೈಸುವ ಸಚಿವನು ಸಮಸ್ತ ಕಾರ್ಯಗಳಲ್ಲಿಯೂ ನೀತಿಶಾಸ್ತ್ರಕ್ರಮದಿಂದ ಸಾಮೋಪಾಯವನ್ನು ಪ್ರಯೋಗಿಸುವುದು ಉಚಿತ ವ || ನೀತಿಶಾಸ್ತ್ರೋಪಾಯನಿಪುಣನೂ ಸ್ವಾಮಿಹಿತನೂ ಚತುರಪಧಾವಿಶುದ್ಧನೂ ಅಲ್ಲದ ಮೂಢನನ್ನು ವಂಶಪಾರಂಪರ್ಯದಿಂದ ಬಂದವನೆಂಬ ಒಂದೇ ಕಾರಣದಿಂದ ಮಂತ್ರಿಯನ್ನಾಗಿ ಮಾಡಿದ ಕಾರಣವಾಗಿದೆ, ಅದರಿಂದ ನಿನ್ನ ದುರ್ಮಂತ್ರದಿಂದ ಮೃಗಾರಾಜನಾದ ಪಿಂಗಳಕನಿಗೆ ಇಂತಹ ಅವಸ್ಥೆಯಾಯಿತು. ಶ್ಲೋ || ‘ದುಷ್ಟಬುದ್ಧಿಸ್ಸುಬುದ್ಧಿಶ್ಚದ್ವಯೋರ್ಧಮಸ್ಯ ಸಂಶ್ರಯಾತ್ ಎಂಬ ಕಥೆಯಂತಾಯಿತು. ವ|| ದವನಕನು ಅದೇನು ಎಂದು ಕೇಳಲು ಕರಟಕನು ಹೇಳಿದನು.