ನ್ಯಗ್ಭೂತಸುರಪುರಂ ಸುವ
ಣಿಗ್ಭಾಸಿ ಸಮಸ್ತವಸ್ತು ಪರಿಪ್ರರ್ಣಂ ಸ
ಮೃಗ್ಭವನರುಚಿರಮುತ್ತರ
ದಿಗ್ಭಾಗದೊಳುಂಟು ಮಧುರೆಯೆಂಬುದು ನಗರಂ ೨೩೨

ಅಂತಾ ನಗರದೊಳಗೆ ಧರ್ಮಬುದ್ದಿಯುಂ ದುಷ್ಟಬುದ್ದಿಯುಮೆಂಬರಿರ್ವರ್ ವಣಿಕ್ಪುತ್ರರ್ ಪುದುವಿನೊಳ್ ಪರದುವೋಗಿ ಪಿರಿದಪ್ಪ ಪೊನ್ನ ಪಡೆದು ಮಗುೞ್ದು ಬಂದು ನಿಜಜನ್ಮಭೂಮಿಯಪ್ಪ ಮಧುರಾಪುರದ ಬಹಿರುದ್ಯಾನವನದೊಳಗೆ ಬೀಡಂ ಬಿಟ್ಟರ್ದರಾತ್ತಿಯೊಳ್ ಧರ್ಮಬುದ್ಧಿ ದುರ್ಬುದ್ಧಿಯಪ್ಪದುಷ್ಟಬುದ್ಧಿಯಂ ಕರೆದು ಪೊನ್ನಂ ಪಚ್ಚುಕೊಳ್ವಮೆನೆ ದುಷ್ಟಬುದ್ಧಿ ಪಾಪಬುದ್ಧಿಯಾಗಲ್ಬಗೆದಿಂತೆಂದಂ: ನಾವೀ ಪೊನ್ನಂ ಪಚ್ಚುಕೊಂಡು ಮನೆಯೊಳ್ ಸ್ವೇಚ್ಚೆಯಿಂದಿರ್ಪ ವರಲ್ಲಂ ಮತ್ತಂ ಪರದುವೋಗಲ್ವೇೞ್ಕುಮದುಕಾರಣದಿಂ ನಿನಗಮೆನಗಂ ಬೀಯಕ್ಕೆ ತಕ್ಕನಿತ್ತು ಪೊನ್ನಂ  ಕೊಂಡು ಮಿಕ್ಕ ಪೊನ್ನನೆಲ್ಲಮನಿಲ್ಲಿಯೆ ಮಡಂಗುವಮೆನೆ, ಧರ್ಮಬುದ್ದಿಯಾ ಪಾಪಕರ್ಮನಂ ತನ್ನ  ಮನದನ್ನನೆಂದೆ ಬಗೆದುಮದರ್ಕೊಡಂಬಟ್ಟೊಂದು ಮಹವಟವಿಟಪಿಯ ಕೆಲದೊಳ್ ಪೊನ್ನಂ ಪೊಳ್ದು ಮಱುದಿವಸಮಿರ್ವರುಂ ಪೊೞಲಂ ಪೊಕ್ಕು ಇಷ್ಟವಿಷಯ ಕಾಮಬೋಗ ಸುಖಂಗಳನನುಭವಿಸುತಿರ್ದು ದುಷ್ಟಬುದ್ಧಿ ಧರ್ಮಬುದ್ಧಿಯುಂ ವಂಚಿಸಿ ಪೋಗಿ ಪೊನ್ನನೆಲ್ಲಮಂ ಕೊಂಡು ಕುೞ*ಯಂ ಮುನ್ನಿನಂತೆ ಪೊಳ್ದು ಕೆಲವಾನುಂ ದಿವಸಕ್ಕೆ ತಾನೆ ಧರ್ಮಬುದ್ಧಿಚಿiಲ್ಲಿಗೆ ವಂದು ಬೀಯಕ್ಕೆ ಪೊನ್ನಿಲ್ಲವಿನ್ನುಂ ಕಿಱೆದು ಪೊನ್ನಂ ತೆಗುದುಕೊಳ್ವಂ ಬನ್ನಿಮೆಂದೊಡಂಗೊಂಡು ಪೋಗಿ ಪೂೞ್ದೆಡೆಯೊಳ್ ಪೊನ್ನಂ ಕಾಣದೆ ಇನ್ನಸಿರದಿರ್ದೊಡೆ ಅನೃತಂ ತನ್ನ ಮೇಲೆ ವರ್ಪುದೆಂದು ಪೊನ್ನನೆಲ್ಲಮಂ ನೀನೆ ಕೊಂಡೆಯೆಂಬುದುಂ

ಅತಿಕುಟಿಲಮನಂ ಧನಲು
ಬ್ಧತೆಯಿಂದಂ ದುಷ್ಟಬುದ್ಧಿ ನುಡಿದಂ ಪುಸಿಯಂ
ಮತಿಗೆಟ್ಟು ’ತಸ್ಕರಸ್ಯಾ
ನೃತಂ ಬಲಂ’ ಎನಿಪ ವಾಕ್ಯವಂ ನೆನೆಯುತ್ತುಂ  ೨೩೩

ಅಂತು ದುಷ್ಟಬುದ್ಧಿ ಮುನ್ನಮೆ ಹಾ ! ಹಾ ! ಕೆಟ್ಟನೆಂದು ಬಾಯಂ ಬಸಿಱಂ ಪೊಯ್ದುಕೊಂಡು ಪುಯ್ಲಿಟ್ಟು ಧರ್ಮಬುದ್ಧಿಯ ಮೇಲೆ ಕಳವನಿಟ್ಟು ಕಾಪೞ*ದು ನುಡಿಯೆ ತತ್ಕೂರ್ಮೆಗಿಡಲ್ನುಡಿದು  ನೀಂ ಗೆಲೆ ಬಾಯಾರ್ದು ಪೋಗಲ್ಪಡೆಯ ವಿಚಾರಂಗೆಯ್ವಮೆಂದು ಧಮಾದಿಕರಣರಲ್ಲಿಗೆ ಬಂದಿರ್ವರುಂ ತತ್ಪ್ರಪಂಚಮೆಲ್ಲಮಂ ಸವಿಸ್ತರಂ ನುಡಿದು ಕಡೆಯೊಳ್ ದುಷ್ಟಬುದ್ಧಿಯಿಂತೆದಂ: ಪೊನ್ನೆಲ್ಲಮನೀತನೆ ಕಳೆದುಕೊಂಡದರ್ಕೆ ಸಾಕ್ಷಿಯುಂಟೆನೆ ಸಭಾಸದರ್ ಸಾಕ್ಷಿಯಂ ಪೇೞೆನೆ ಪೊನ್ನಂ ಮಡಗುವಾಗಳೀತನುಮಾನುಮಲ್ಲದೆ ಮನುಷ್ಯರ್ ಪೆಱರಿಲ್ಲ ತತ್ಸನ್ನಿಧಾನಸ್ಥಿತಮಪ್ಪ ವಟವೃಕ್ಷಮೇ ಸಾಕ್ಷಿಯೆಂಬುದುಂ ಧರ್ಮಾಕರಣರ್ ವಿಸ್ಮಯಂಬಟ್ಟು ಈತನ ಮಾತು ಅಶ್ರುತಪೂರ್ವಮೀ ಚೋದ್ಯಮಂ ನೋಡುವಮೆಂದು ಧರ್ಮಬುದ್ಧಿಯಂ ಕರೆದು ನೀನೀ ಸಾಕ್ಷಿಯಂ ಕೈಕೊಳ್ವದೆಂದೊಡಾತಂ ವೃಕ್ಷಂ ಸಾಕ್ಷಿಯೆಂದು ಮುನ್ನಂ ಪೇೞ್ದರುಂ ಕೇಳ್ದರುಮಿಲ್ಲಮದಲ್ಲದೆಯುಂ,

ಶ್ಲೋ || ಗೃಹಿಣಃ ಪುತ್ರಿಣೋ ಮೂಲಾಃ ಕ್ಷತ್ರವಿಟ್ಛೂದ್ರಯೋನಯಃ
ಇತ್ಯುಕ್ತಾಸ್ಸಾಕ್ಷ್ಯ ಮರ್ಹಂತಿ ನಯಕೋವಿದಮಾಪದಿ  ||೧೨೨||

ಟೀ|| ಗೃಹಸ್ಥರಪ್ಪ ಪುತ್ರರುಗಳುಳ್ಳ ಕ್ಷತ್ರಿಯವೈಶ್ಯಶೂದ್ರರುಗಳು ಆಪತ್ತಿನಲ್ಲಿ ನೀತಿವಿದರನೆ ಸಾಕ್ಷಿಯೆಂದು ಕೈಕೊಳ್ವರ್ ಎಂದೆ ಶ್ಲೋಕಂಗಳೊಳಂ ಆವಾವ ವಿಷಯದೊಳಂ ಪ್ರಾಪ್ತಮನುಷ್ಯರೆ ಸಾಕ್ಷಿಯಪ್ಪರೆಂದು ಪೇೞ್ದರಲ್ಲದೆ ವೃಕ್ಷಂ ಸಾಕ್ಷಿಯೆಂದು ಪೇೞ್ದರಿಲ್ಲ; ಎಂತು ಕೈಕೊಳ್ವೆನೆನೆ ಧರ್ಮಾಕರಣದವರಿಂತೆಂದರ್:

ಶ್ಲೋ|| ಅದಿತ್ಯಚಂದ್ರಾವನಿಲೋನಲಶ್ಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ
ಅಹಶ್ಚ ರಾತ್ರಿಶ್ಚ ಉಭೆ ಚ ಸಂಧ್ಯೇ ಧರ್ಮಸ್ಯ ಜಾನಾತಿ ನರಸ್ಯ ವೃತ್ತಂ      ||೧೨೩||

ಟೀ|| ಸೂರ‍್ಯಚಂದ್ರಮರುಗಳು ವಾಯು ಅಗ್ನಿ ಆಕಾಶ ಭೂಮಿ ಉದಕ ಹೃದಯ ಯಮನು ಹಗಲಿರುಳು ಉದಯ ಬಯ್ಗುಗಳು ಧರ್ಮವು ಎಂಬಿವು ಮನುಷ್ಯರ ನಡೆವಳಿಯ ನಡೆವುವು. ಎಂಬುದು ವಾಕ್ಯಮುಂಟು. ಮನುಷ್ಯರ ಸುಕೃತದುಷ್ಕೃತಂಗಳಂ ದೈವಗಳಱ*ಗುಮದಱ*ಂದೀ ಸಾಕ್ಷಿಯುಮುಚಿತಂ. ಮನುಷ್ಯಂ ಮೊದಲಾಗಿ ನುಡಿವುದರಿಂದೆಂದೊಡೆ ಮರನಂ ನುಡಿಸುವುದು ಪರಮಗಹನಮೀ ಸಾಕ್ಷಿಯಂ ಕೈಕೊಳ್ವುದೆನೆ ಧರ್ಮಬುದ್ಧಿ ಕರಮೊಳ್ಳಿತ್ತು ಕೈಕೊಂಡೆನೆನೆ ಧರ್ಮಾಕರಣದವರಂದು ಪೋೞ್ತು ಪೋದುದು ನಾಳೆ ಪೋಗಿ ಕೇಳ್ವಮೆನೆ ತಮ್ಮ ತಮ್ಮ ಮನೆಗೆಲ್ಲರುಂ ಪೋದರ್ ಅನ್ನೆಗಂ ದುಷ್ಟಬುದ್ಧಿಯುಂ ತನ್ನ ಮನೆಗೆ ಬಂದು ತಮ್ಮಯ್ಯನ ಕಯ್ಯಂ ಪಿಡಿದುಕಟ್ಟೆಕಾಂತಕ್ಕುಯ್ದು  ತದ್ವೃತ್ತಾಂತಮೆಲ್ಲಮಂ ತಿಳಿಯೆ ಪೇೞ್ದು ನಿಮ್ಮೊಂದು ವಚನಮಾತ್ರದಿಂ ನಮ್ಮ ಪರಿಗ್ರಹಮೆಲ್ಲಂ ಪಲವುಕಾಲಂ ಪಸಿಯದುಂಡು ಬಾೞ್ವಂತರ್ಥಂ ಸಾರ್ದಪುದು ನೀವಾ ಮರದ ಪೊೞಲೊಳಡಂಗಿರ್ದು ಧರ್ಮಬುದ್ಧಿಯೆ ಪೊನ್ನಂ ಕೊಂಡುಯ್ದನೆಂದು ನುಡಿಯಿಮೆಂಬುದು ಮಾತನಿಂತೆಂದಂ:

ಧರಣೀವಳಯಂ ಚಿಃ ಎನೆ
ಪರಧನಮಂ ಕಪಟವೃತ್ತಿಯಿಂ ವಂಚಿಸಿಕೊಂ
ಡುರುರಾಜ್ಯಶ್ರೀಸಹಿತಂ
ನಿರುತದೊಳಂದಿೞ*ದ ಕೌರವಂ ರೌರವಮಂ  ೨೩೪

ಅಚಿತದಱ*ಂ ಪರಧನಹರಣಮುಂ ಪರಸ್ತ್ರೀಗಮನಮುಂ ವಿಶ್ವಾಸಘಾತುಕಮುಂ ಸ್ವಾಮಿದ್ರೋಹಮುಂ ಇವೆಲ್ಲಮೇಗೆಯ್ದು ಕಿಡಿಸಿಗುಮಿಂತಪ್ಪುದೆಲ್ಲಮಂ ನೀನಱ*ದಿರ್ದೆನ್ನುಮಂ ಸಾಕ್ಷಿ ಮಾಡಿ ನುಡಿಸಿ ಕಿಡಿಸಲ್ಬಗೆದೆ ನಿನ್ನ ಪೞುವಗೆ ನಮ್ಮ ಕುಲಮನೆಲ್ಲಮನೞ*ವ ಬಗೆ. ಅದಲ್ಲದೆಯುಂ ನಿನ್ನ ಕಂಡೀಯುಪಾಯಕ್ಕಪಾಯಂ ಬಹುಳಮದೆಂತೆನೆ:

ಶ್ರೂಯತೇ ಹಿ ಸಮುದ್ರಾಂತೇ ನ ಕುಲೈರ್ಭಕ್ಷಿತೋ ಬಕಃ

ಎಂಬ ಕಥೆಯಂ ಕೇಳ್ವಱ*ವುದಿಲ್ಲಕ್ಕುಮೆನೆ ದುಷ್ಟಬುದ್ಧಿಯದೆಂತೆನೆ ಪ್ರೇಮಮತಿ ಪೇಳ್ಗುಂ:

೨೩೨; ಅಮರಾವತಿಯನ್ನು  ಕೀಳುಮಾಡಿದ ಒಳ್ಳೆಯ ವ್ಯಾಪಾರಿಗಳಿಂದ ಶೋಭಿಸುವ ಸಮಸ್ತ ವಸ್ತು ಪರಿಪೂರ್ಣವಾದ ಒಳ್ಳೆಯ ಭವನಗಳಿಂದ ಅಲಂಕೃತವಾದ ಮಧುರೆಯೆಂಬ ನಗರವು ಉತ್ತರ ದಿಕ್ಕಿನಲ್ಲಿದೆ. ವ|| ಆ ನಗರದಲ್ಲಿ ದರ್ಮಬುದ್ಧಿಯೂ ದುಷ್ಟಬುದ್ಧಿಯೂ ಎಂಬ ಇಬ್ಬರು ವ್ಯಾಪಾರಿಗಳು ಒಟ್ಟಿಗೆ ವ್ಯಾಪಾರಕ್ಕಾಗಿ  ಹೋಗಿ ಬಹಳ ಹೊನ್ನನ್ನು ಪಡೆದು ಹಿಂದುರುಗಿ ಬಂದು ಜನ್ಮಭೂಮಿಯಾದ ಮಧುರಾಪುರದ ಬಹಿರುದ್ಯಾನದಲ್ಲಿ ಬೀಡುಬಿಟ್ಟರು. ಅರ್ಧ ರಾತ್ರಿಯ ಸಮಯ  ಧರ್ಮಬುದ್ಧಿಯು ದುರ್ಬುದ್ಧಿಯಾದ ದುಷ್ಟಬುದ್ಧಿಯನ್ನು ಕರೆದು ಹೊನ್ನನ್ನು ಪಾಲು ಮಾಡಿಕೊಳ್ಳೊಣ ಎನ್ನಲು ದುಷ್ಟಬುದ್ಧಿ ಪಾಪಬುದ್ಧಿಯನ್ನು ಬಗೆದು ಹೀಗೆಂದನು: ನಾವು ಈ ಹೊನ್ನನ್ನು ಪಾಲು ಮಾಡಿಕೊಂಡು ಮನೆಯಲ್ಲಿ ಸ್ವೇಚ್ಚೆಯಿಂದ ಇರುವುದು ಸಾದ್ಯವಿಲ್ಲ ಮರಳಿ ವ್ಯಾಪಾರಕ್ಕೆ ಹೋಗಬೇಕು ಅದರಿಂದ ನಿನಗೂ ನನಗೂ ವ್ಯಯಕ್ಕೆ ಬೇಕಾದಷ್ಟು ಹೊನ್ನನ್ನು ತೆಗೆದುಕೊಂಡು ಉಳಿದ ಹೊನ್ನೆಲ್ಲವನ್ನೂ ಇಲ್ಲಿಯೇ ಇಟ್ಟು ಹೋಗೋಣ ಎಂದನು ಅದಕ್ಕೆ  ಧರ್ಮಬುದ್ಧಿಯೂ ಆ ಪಾಪಕರ್ಮನನ್ನು ತನ್ನಂಥವನೇ ಎಂದು ಬಗೆದು ಅದಕ್ಕೆ ಒಡಂಬಟ್ಟು ಒಂದು ದೊಡ್ಡ ಅಲದ ಮರದ ಬಳಿಯಲ್ಲಿ ಹೊನ್ನನ್ನು  ಹೂಳಿ ಮರುದಿನ ಇಬ್ಬರೂ ನಗರಕ್ಕೆ ಹೋಗಿ ಇಷ್ಟ ವಿಷಯ ಕಾಮಭೋಗಗಳನ್ನೂ ಅನುಭವಿಸುತ್ತಿದ್ದರು. ದುಷ್ಟಬುದ್ಧಿಯು ಧರ್ಮಬುದ್ಧಿಯನ್ನು ವಂಚಿಸಿ ಹೋಗಿ ಹೊನ್ನನ್ನೆಲ್ಲ ಕೊಂಡು ಹೊಂಡವನ್ನು ಮೊದಲಿನಂತೆ ಮುಚ್ಚಿದನು. ಸ್ವಲ್ಪ ದಿನಗಳ ಮೇಲೆ ತಾನೇ ಧರ್ಮಬುದ್ಧಿಯಲ್ಲಿಗೆ ಬಂದು ವ್ಯಯಕ್ಕೆ ಇನ್ನು ಹೊನ್ನಿಲ್ಲ: ಮತ್ತಷ್ಟು ಸ್ವಲ್ಪ ಹೊನ್ನನ್ನು ತೆಗೆದುಕೊಂಡು ಬರೋಣ ಎಂದು ಒಟ್ಟಿಗೆ ಹೋಗಿ ಹೂಳಿದ  ಸ್ಥಳವನ್ನು ಅಗೆಯಲು ಹೊನ್ನನ್ನು ಕಾಣದೆ ಉಸಿರದೆ ಇರಲು ಸುಳ್ಳು ತನ್ನ ಮೇಲೆ ಬರುವುದೆಂದು ಹೊನ್ನನ್ನೆಲ್ಲ ನೀನೆ ತೆಗೆದಿರಬೇಕು ಎಂದನು. ೨೩೩. ಅತಿಕುಟಿಲ ಮನಸ್ಸಿನ ದುಷ್ಟಬುದ್ಧಿ ಮತಿಗೆಟ್ಟು ಧನಲೋಭದಿಂದ  ‘ ತಸ್ಕರಸ್ಯಾನೃತಂ ಬಲಂ ಎಂಬ ವಾಕ್ಯವನ್ನು ನೆನೆದು ಸುಳ್ಳನ್ನು ಅಡಿದನು. ವ|| ಹಾಗೆ ದುಷ್ಟಬುದ್ಧಿಯು ಮೊದಲೆ ಹಾ ! ಹಾ ! ಕೆಟ್ಟೆನೆಂದು ಬಾಚಿiನ್ನೂ ಹೊಟೆಯನ್ನೂ ಹೊಡೆದುಕೊಳ್ಳುತ್ತಾ ಕೂಗಾಡಿ ಧರ್ಮಬುದ್ಧಿಯ ಮೇಲೆ ಕಳವನ್ನು ಅರೋಪಿಸಿದನು. ಧರ್ಮಬುದ್ಧಿಯು ವಿಚಾರಮಾದೋಣವೆಂದು ಧರ್ಮಾಕರಣರಲ್ಲಿಗೆ ಬಂದು ಇಬ್ಬರೂ ಆ ವಿಚಾರವನ್ನೆಲ್ಲ ಸವಿಸ್ತಾರವಾಗಿ ನುಡಿದು ಕಟ್ಟಕಡೆಗೆ ದುಷ್ಟಬುದ್ಧಿಯು ಹೀಗೆಂದನು: ಹೊನ್ನೆಲ್ಲವನ್ನೂ ಈತನೇ ಕದ್ದಿರುರುವನು ಎಂಬುದಕ್ಕೆ ಸಾಕ್ಷಿಯಿದೆ ಎನ್ನಲು ಸಭಾಸದರು ಸಾಕಿ ಯನ್ನು ಹೇಳು ಎಂದನು. ಹೊನ್ನನ್ನು ಇಡುವಾಗ ಈತನೂ ನಾನೂ ಅಲ್ಲದೆ  ಮನುಷ್ಯರು ಬೇರೆ ಯಾರೂ ಇರಲಿಲ್ಲ. ಅಲ್ಲಿದ್ದ ವಟವೃಕ್ಷವೇ ಸಾಕ್ಷಿ ಎಂದು ಹೇಳಿದನು.  ಧರ್ಮಾಕರಣರು ವಿಸ್ಮಯಪಟ್ಟು ಈತನ ಮಾತು ಹಿಂದೆಂದೂ ಕೇಳದ ವಿಚಾರ. ಈ ಚೋದ್ಯವನ್ನು ನೋಡೋಣ ಎಂದು ಧರ್ಮಬುದ್ಧಿಯನ್ನು ಕರೆದು ನೀನು ಈ ಸಾಕ್ಷಿಯನ್ನು ಒಪ್ಪಿಕೊಳ್ಳುವುದು ಎನ್ನಲು ಅತನು ವೃಕ್ಷಸಾಕ್ಷಿಯನ್ನು ಈ ಹಿಂದೆ ಹೇಳಿದವರೂ ಕೇಳಿದವರೂ ಇಲ್ಲ ಅಲ್ಲದೆ ಶ್ಲೋ|| ಗೃಹಸ್ಥರೂ ಮಕ್ಕಳೊಂದಿಗರೂ ಅದ ಕ್ಷತ್ರಿಯ ವೈಶ್ಯ ಶೂದ್ರರು ಆಪತ್ತಿನಲ್ಲಿ ನೀತಿವಿದರನ್ನೆ ಸಾಕ್ಷಿಯೆಂದು ಕೈಕೊಳ್ಳುವರು. ಪ್ರಾಪ್ತ ಮನುಷ್ಯರೇ ಸಾಕ್ಷಿಯಾಗುವರು ಎಂದು ಹೇಳಿದರಲ್ಲದೆ ವೃಕ್ಷಸಾಕ್ಷಿಯೆಂದು ಹೇಳಿದವರಿಲ್ಲ, ಹೇಗೆ ಒಪ್ಪಿಕೊಳ್ಳಲಿ ? ಎಂದನು ಅದಕ್ಕೆ ಧರ್ಮಾಕರಣರು ಹೀಗೆಂದರು: ಶ್ಲೋ ಸೂರ‍್ಯ, ಚಂದ್ರ ವಾಯು, ಅಗ್ನಿ, ಆಕಾಶ, ಭೂಮಿ, ಉದಕ, ಹೃದಯ, ಯಮ, ಹಗಲಿರುಳು ಉದಯ, ಅಸ್ತಮಾನ, ಧರ್ಮ ಎಂಬಿವು ಮನುಷ್ಯನ ನಡೆವಳಿಕೆಯನ್ನು ಅರಿಯುವುವು. ವ || ಮನುಷ್ಯರ ಸುಕೃತ ದುಷ್ಕೃತಗಳನ್ನು ದೈವಗಳು ತಿಳಿಯುವುವು. ಅದರಿಂದ ಈ ಸಾಕ್ಷಿಯೂ ಉಚಿತವಾದುದು. ಸಾಕ್ಷಿಯ ವಿಚಾರದಲ್ಲಿ  ಮನುಷ್ಯನೇ ನುಡಿಯುವುದು ಅಸಾದ್ಯವೆಂದ ಮೇಲೆ ಮರವನ್ನು ಮಾತನಾಡಿಸುವುದು ಪರಮಗಹನವಾದ ವಿಚಾರ. ಈ ಸಾಕ್ಷಿಯನ್ನು ಅಂಗೀಕರಿಸುವುದು ಎಂದರು ಅದಕ್ಕೆ ಧರ್ಮಬುದ್ಧಿಯು ಒಳ್ಳೆಯದು ಹಾಗೆಯೇ ಆಗಲಿ ಎಂದನು. ಧರ್ಮಾಕರಣರು ಇಂದು ಹೊತ್ತು ಹೋಯಿತು. ನಾಳೆ ಹೋಗಿ ಕೇಳೋಣ ಎನ್ನಲು ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು. ಅಷ್ಟರಲ್ಲಿ ದುಷ್ಟಬುದ್ಧಿಯು ತನ್ನ ಮನೆಗೆ ಬಂದು ತನ್ನ ತಂದೆಯ ಕೈಯನ್ನು ಹಿಡಿದು ಏಕಾಂತಕ್ಕೆ ಕರೆದು ಆ ವೃತ್ತಾಂತವೆಲ್ಲವನ್ನೂ ತಿಳಿಸಿ ನಿಮ್ಮ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲ ದೂರವಾಗಿ ಹಲವು ಕಾಲದವರೆಗೆ ಹಸಿಯದೆ ಉಂಡು ಬಾಳುವಷ್ಟು ಹಣ ಬರುವುದು ನೀವು ಆ ಮರದ ಪೋಟರೆಯಲ್ಲಿ ಅಡಗಿದ್ದು ಧರ್ಮಬುದ್ಧಿಯೇ ಹಣವನ್ನು ಕೊಂಡುಹೋದನೆಂದು ಹೇಳಿರಿ ಎನ್ನಲು ಅವನು ಹೀಗೆಂದನು: ೨೩೪: ಸಮಸ್ತ ಪ್ರಪಂಚವೂ ಛೀಮಾರಿ ಹಾಕಲು ಪರಧನವನ್ನು ಕಪಟವೃತ್ತಿಯಿಂದ ವಂಚಿಸಿ ಪಡೆದು ಅಂದು ಕೌರವನು ರಾಜ್ಯಶ್ರೀಸಹಿತ ರೌರವವನ್ನು ಅನುಭವಿಸಿದನಲ್ಲವೇ? ವ || ಅದರಿಂದ ಪರಧನಹರಣವೂ ಪರಸ್ತ್ರೀಗಮನವೂ ವಿಶ್ವಾಸಘಾತುಕವೂ ಸ್ವಾಮಿದ್ರೋಹವು ಇವೆಲ್ಲ ಏನು ಮಾಡಿದರೂ ಕೆಡುಕನ್ನು ಉಂಟುಮಾಡುವುವು. ಇವೆಲ್ಲವನ್ನೂ ನೀನು ತಿಳಿದಿದ್ದೂ ನನ್ನನ್ನು ಸಾಕ್ಷಿ ಮಾಡಿ ನುಡಿಸಿ ಕೆಡಿಸಲು ಯೋಚಿಸಿದೆ. ನಿನ್ನ ಕ್ಷುಲ್ಲಕ ಯೋಚನೆಯು ನಮ್ಮ ಕುಲವನ್ನೆ ನಾಶ ಮಾಡುವ  ರೀತಿಯದು. ಅಲ್ಲದೆ ನಿನ್ನ ಈ ಬಗೆಯ ಉಪಾಯಕ್ಕೆ ಅಪಾಯ ಬಹಳವಿದೆ. ‘ಶ್ರೂಯತೇ ಹಿ ಸಮುದ್ರಾಂತೇ ನಕುಲೈರ್ಭಕ್ಷಿತೋ ಬಕಃ’ ಎಂಬ ಕಥೆಯನ್ನು ನೀನು ಕೇಳಿರಲಿಕ್ಕಿಲ್ಲ ಎನ್ನಲು ದುಷ್ಟಬುದ್ಧಿಯು ಅದೇನು ಎಂದು ಕೇಳಲು ಪ್ರೇಮಮತಿ ಹೇಳುವನು: