ಸಮುದ್ರ ತೀರದೊಳೊಂದು ಮರದೊಳ್ ಬಕಮಿಥುನಮಿರ್ಕುಂ ಅವಱ ತತ್ತಿಗಳನಾ ಮರದ ಕೆಲದ ಪುತ್ತಿನೊಳಿರ್ಪುದೊಂದು ಸರ್ಪಂ ಪರಿತಂದು ಮರನನಡರ್ದು ತಿನುತಿರೆ ಬಕಂ ಕಲುಷಿತಚಿತ್ತನಾಗಿಯೇಗೆಯ್ಯಲುಮಱೆಯದೊಂದು ದಿವಸಂ ಸಮುದ್ರತೀರದೊಳ್ ನಿಂದು ಜಾನಿ ಸುತಿರ್ಪುದನೊಂದು ಕರ್ಕಟಕಂ ಕಂಡೇಂ ಭಾವಾ ! ನೀನಂದಾಹಾರಚಿಂತೆಯ ಮಾಣ್ದು ವೇಹಾರಂ ಗೆಯ್ವರಂತೆ ಕಣ್ಣಂ ತಿಣ್ಣಂ ಮುಚ್ಚಿಕೊಂಡಿರ್ಪ ಕಾರಣಮಾವುದೆನೆ ಬಕನಿಂತೆಂದುದು : ಎನಗೆ ಮನದ ಮಱುಕಂ ಪಿರಿದುಮಹಾರಕ್ಕೆಂತು  ಚಿಂತೆಗೆಯ್ವೆನೆನೆ ಕರ್ಕಟಕದೇಂ ನಿಮಿತ್ತಮೆನೆ ತದ್ವತ್ತಾಂತಮೆಲ್ಲಮಂ ಬಕಂ ಪೇಳ್ ಕೇಳ್ದಿಂತೆಂದುದು:

ಅಂತಪ್ಪೊಡುರಗನಂ ಕೊ
ಲ್ವಂತಪ್ಪುಪದೇಶಮೊಂದನಾಂ ಪೇೞ*ದಪೆಂ
ನೀಂ ತಪ್ಪದೆ ಪಿಶಿತಮನು
ಯ್ದಂತಾ ನಕುಲಂಗಳಾಡುವೆಡೆಯಿಂ ತೊಟ್ಟುಂ  ೨೩೫

ಉರಗನ ಪುತ್ತುವರಂ ಸೈ
ತಿರೆ ಸಾಲಿಟ್ಟಂತೆ ಮಾಂಸಖಂಡಮನಿಡೆ ಮುಂ
ಗುರಿಗಳ್ ಲಬ್ಧಾಸ್ವಾದದಿ
ನುರುಗನುಮಂ ತಿಂಗುಮೆಂದು ಪೇೞ್ವುದುಮಾಗಳ್   ೨೩೬

ಅಂತೆಗೆಯ್ವೆನೆಂದುಮಾ ಬಕಂ ಮೀಂಗಳನಾಗಳೆ ಕೊಂಡು ತಂದು ಕರ್ಕಟಂ ಪೇಳ್ದಂದ ದೊಳಿಕ್ಕುವುದುಂ ಮುಂಗುರಿಗಳ್ ಮತ್ಸ್ಯಮಾಂಸಮಂ ತಿನುತಂ ಬಂದು ಪುತ್ತುಮನೈದುವುದುಂ: ಉರಗಂ ಪೊಱಮಟ್ಟು ಮರನನಡರ್ವುದಂ ಕಂಡದಂ ಶತಖಂಡಂ ಮಾಡಿ ಕೊಂದು ತಿಂದು ಮತ್ತಂ ಮಱುದಿವಸಮಾ ಮಾರ್ಗದಿಂ ಬಂದೆಲ್ಲಿಯುಮಡಗಂ ಪಡೆಯದೆ ಮರನನಡರ್ದು ಪಾವಿನ ಬಾಯಿಂ ಬರ್ದುಂಕಿದ ತತ್ತಿಗಳಂ ನಕುಲಂಗಳ್ ತಿಂದುವು.

ಅದಱ*ಂ, ಶ್ಲೋ || ಉಪಾಯಂ ಚಿಂತೆಯೇತ್ ಪ್ರಾಜ್ಞಸ್ತಥಾಪಾಯಂ ಚ ಚಿಂತಯೇತ್ ಶ್ರೂಯತೇ ಹಿ ಸಮುದ್ರಾಂತೇ ನಕುಲೈರ್ಭಕ್ಷಿತೋ ಬಕಃ  ||೧೨೪||

ಟೀ||  ಬಲ್ಲವರುಪಾಯಮಂ ಚಿಂತಿಸುವುದು. ಮೇಲೆ ಬರ್ಪಪಾಯಮಂ ಚಿಂತಿಸುವುದು ಅದೇನು ಕಾರಣಮೆಂದೊಡೆ ಸಮುದ್ರತೀರದಲ್ಲಿರ್ದ ಬಕನ ತತ್ತಿಗಳಂ ಮುಂಗುರಿಗಳ್ ತಿಂದು ವಪ್ಪುದೆ ಕಾರಣಮಾಗಿ ಎಂಬ ಕಥೆಯ ದುಷ್ಟಬುದ್ಧಿ ಕೇಳ್ದು ನೀನೊಂದು ಭಣಿತೆಯ ಕಥೆಯಂ ಪೇೞ್ದು ನಮ್ಮ ನಿರ್ವಾಹಮಂ ಕಿಡಿಸದೆನ್ನೆಂದುದಂ ಗೆಯ್ಯೆಂದು ತನ್ನ ತಂದೆಯನೊಡಂಬಡಿಸುತಿರ್ಪಿನ ಮಾದಿತ್ಯನಪರಗಿರಿಯೆಯ್ದುವುದಂ

ಮೇದಿನಿಯ ಕ್ರಮಕ್ರಮದೆ ಪರ್ವಿದುದಾತ್ತನಭೋವಿಭಾಗಮಾ
ಚ್ಛಾದಿತದಿಙ್ಮುಖಂ ವ್ಯವಹಿತಾಖಿಲದೃಷ್ಟಿಪಥಂ ತಮಾಲ ಭೃಂ
ಗೋದರ ನೀರದಾಗಮ ಘನ ಪ್ರಕಾರಂಜನ ಪುಂಜ ಕೋಕಿಲಾ
ಬ್ಬೋದರಕಾಯಕಾಂತಿ ಶಿತಿಕಂಠಗಳಪ್ರ್‌ತಿಮಪ್ರಭಂ ತಮಂ  ೨೩೭

ಅಂತು ಕವಿದ ಕತ್ತಲೆಯೊಳ್ ದುಷ್ಟಬುದ್ಧಿ ತನ್ನ ತಂದೆಯಂ ಕೊಂದಲ್ಲದೆ ಮಾಣೆನೆಂದುಯ್ವಂತುಯ್ದು ಬಳಾರಿಯ ಮನೆಯಂ ಪರಕೆಯ ಕುಱ*ಯಂ ಪುಗಿಸುವಂತೆ ವಟವಿಟಪಿ ಕೋಟರಕುಟೀರಾಂತರಮಂ ಪುಗಿಸಿ ಬವರಮಂ ಗೆಲ್ವೆನೆಂದು ರಾಗಿಸಿ ಮನೆಗೆವಂದು ನಿದ್ರಾಂಗ ನಾಸಕ್ತನಾದಂ. ಅನ್ನೆಗಮಿತ್ತಂ

ಪರಧನಹರಣಾರ್ಥಂ ನಿಜ
ಗುರುವಧೆಯುಂ ಮಾೞ್ಪ ದುಷ್ಟಬುದ್ಧಿಯ ಕಥೆಯಂ
ನಿರುತಂ ನೋಡಲ್ ಬರ್ಪಂ
ತಿರೆ ಬಂದಂ ಪೂರ್ವರಿಗೆ ಸರಸಿಜಮಿತ್ರಂ  ೨೩೮

ಅಂತಾದಿತ್ಯೋದಯಮಾಗಲೊಡಂ ಧರ್ಮಬುದ್ಧಿ ದೇವಗುರು ದ್ವಿಜಪೂಜೆಗಳಂ ಮಾಡುತ್ತುಂ ತಡೆಯ ದುಷ್ಟಬುದ್ಧಿ ಮುಖಮಂ ತೊಳೆಯದೆ ಬಂದು ಧರ್ಮಾಕರಣಕ್ಕಿಂತೆಂದಂ:

ಪ್ರತ್ಯರ್ಥೀ ಬಂದನಿಲ್ಲ ಪಿರಿದುಂ ಪೊೞ್ತು ಪೋದುದು: ಎನಗೆ ಕರ್ತವ್ಯಮಾವುದೆಂದು ನುಡಿಯುತಿರ್ಪನ್ನೆಗಂ, ಧರ್ಮಬುದ್ಧಿಯ ಬರವಂ ಕಂಡಾಕ್ಷಣದೊಳ್ ಧರ್ಮಾಕರಣರ್ ನಡೆಯಿಂ ನಿಮ್ಮರ್ವರ ಬವರಮಂ ತಿರ್ದುವಮೆಂದು ವಟವೃಕ್ಷದ ಸಮೀಪಕ್ಕೆ ವಂದಷ್ಟವಿಧಾರ್ಚನೆ ಯಿಂದರ್ಚಿಸಿತದನಂತರಮಾಯಿರ್ವರುಮಂ ನುಡಿಸಿ ಬಳಿಕ್ಕಾ ಮರನನಿಂತೆಂದರ್:

ಶ್ಲೋ: ಬ್ರೂಹಿ ಸಾಕ್ಷಿನ್ಯಥಾವೃತ್ತಂ ಲಂಬಂ ತೇ ಪಿತರಸ್ತವ
ತಥಾವಾಕ್ಯಮುದೀಕ್ಷಂತೇ ಉತ್ಪತಂತು ಪತತಂತು ವಾ  ||೧೨೪||

ಟೀ|| ಎಲೈ ವೃಕ್ಷವೇ, ಪಿತೃಗಳ್ ನಿನ್ನನ್ನೇ ಅವಲಂಬಿಸಿ ಇದರ್ಹರು: ನಿನ್ನ ವಾಕ್ಯವನೆ ಇಚ್ಛೈಸಿಹರು: ಉತ್ಪತನವಾಗಲಿ ಪತನವಾಗಲಿ ಯಥಾವೃತ್ತಹ ಸಾಕ್ಷಿಯನೆ ನುಡಿ.

ಶ್ಲೋ || ನಗ್ನೋ ಮುಂಡಃ ಕಪಾಲೀ ಚ ಭಿಕ್ಷಾರ್ಥೀ ಕ್ಷುತ್ಪಿಪಾಸಿತಃ
ಅಂಧಶ್ಯತ್ರುಗೃಹಂ ಗಚ್ಪೇದ್ಯಸ್ಸಾಕ್ಷೀಚಾನ್ಲತಂ ವದೇತ್ ||೧೨೫||

ಟೀ|| ಅವನೊರ್ವ ಸಾಕ್ಷಿ ಅನೃತವಂ ನುಡಿವನು ಅವನು ದಿಂಗಂಬರನು ಬೋಳನು ಕಾಪಾಲಿಕನು, ಬಿಕ್ಷುಕನು ಹಸಿವು ತೃಷೆಯುಳ್ಳತಾನು ಕುರುಡನು ಅಗಿ ಹಗೆಯ ಮನೆಗೆ ತಿರಿದುಂಬುದಕ್ಕೆ ಹೋಹನು. ಎಂಬುದು ವಾಕ್ಯಮುಂಟು ಸಾಕ್ಷಿಯಾಗಿ ತಪ್ಪಿ ನುಡಿವರ್ಗೆ ಪಾಪಮೆ ಸಂಭವಿಸುವುದು ನೀನಪ್ಪೊಡೆ ಯಕ್ಷಾದಿ ದಿವ್ಯದೇವತಾವಾಸಮುಂ ಸೇವ್ಯಮುಮಪ್ಪ ವೃಕ್ಷಮದು ಕಾರಣದಿಂ ನಿನ್ನಂ ಸಾಕ್ಷಿಮಾಡಿ ಕೇಳ್ದಪೆವು. ನೀಂ ತಪ್ಪದೆ ನುಡಿಯೆಂದು ಧರ್ಮಾಕರಣಂ ಧರ್ಮಶ್ರವಣಂಗೆ ಯ್ದುಸಿರದಿರ್ಪುದುಂ ಪೋಳಲೋಳಡಂಗಿರ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿ ಮತಿಗೆಟ್ಟು ಧರ್ಮಗತಿಯಂ ಬಿಟ್ಟು ’ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗುಂ’ ಎಂದು ನುಡಿವಂತೆ ಧರ್ಮಬುದ್ಧಿಯೆ ಧನಮಂ ತೆಗೆದುಕೊಂಡನೆಂದು ನುಡುವುದುಂ ನೆರವಿಯುಂ ಧರ‍್ಮಾಕರಣಮುಂ ಚೋದ್ಯಂಬಟ್ಟಿರೆ ಧರ್ಮಬುದ್ಧಿ ’ಧರ್ಮೋಜಯತಿ ನಾಧರ್ಮ ಇತ್ಯಮೋಘ ಕೃತಂ ವಚಃ’ ಎಂಬೀ ವಾಕ್ಯಂ ತಪ್ಪಲಱ*ಯದಪ್ಪುದಱ*ಂದೆನಗಮಿದಂ ಚೋದ್ಯಮಿದು ದೈವಮಲ್ಲಕ್ಕುಮಂತಪ್ಪೊಡೆ ಸತ್ಯಮನೇಕೆ ನುಡಿಯದು. ಇದೇನಾನು ಮೊಂದು ಕೃತ್ರಿಮಮಾಗಲೆವೇೞ್ಕುಮೆಂದಾ ಮರನಂ ಬಲವಂದು ನೋಡಿ ಪಿರಿದಪ್ಪ ಪೊೞಲುಮನಲ್ಲಿಯೆ ಮನುಷ್ಯಸಂಚಾರಮಾಗಿರ್ದುದುಮಂ ಕಂಡು ನಿಶ್ಚೈಸಿ ಧರ್ಮಬುದ್ಧಿ ಧರ್ಮಾಕರಣರ್ಗಿಂತೆಂದಂ ’ಕಿರಾಟೋ ನಾಸ್ತಿ ನಿಶ್ಯಠಃ’ ಎಂಬ ವಾಕ್ಯಾರ್ಥದಿಂ ಹುಸಿಯಾದ ಬೇಹಾರಿಯೇ ಇಲ್ಲ. ನಾಂ ಬೇಹಾರಿಯಪ್ಪುದಱ*ಂದೆಮ್ಮ ಜಾತಿಧರ್ಮಕ್ಕೆ ಧರ್ಮಬುದ್ಧಿಯಧರ್ಮಬುದ್ಧಿಯಾಗಿ ಧನಮಂ ಬಂಚಿಸಿಕೊಂಡೆನ್ನ ಮನೆಗುಯ್ವೆನೆಂಬನ್ನೆಗಂ ನೇಸರ್ಮೂಡಿದೊಡುಯ್ಯಲಿಂಬಿಲ್ಲದೆ ಮರದ ಪೊೞಲೊಳಗಿಟ್ಟು ಬಂದು ಮಱುದಿವಸಂ ಪೋಗಿ ನೋಳ್ಪನ್ನೆಗಂ ಆ ಪೊನ್ನನೊಂದು ಪನ್ನಗಂ ಸುತ್ತಿಪಟ್ಟಿರ್ದೊಡೆ ಕೊಳಲಂಜಿ ಪೋದೆಂ: ನೀಮಿಲ್ಲಿರ್ದುಂತೆ ನೋಡುತ್ತುಮಿರಿಂ: ಪೊೞಲೊಳಗೆ ಪೊಗೆಯನಿಕ್ಕಿ ಪಾವಂ ಪೊಱಮಡಿಸಿ ಕಳ್ದುಕೊಂಡೊಡವೆಯಂ ಕುಡುವೆನೆಂದು ಧರ್ಮಬುದ್ಧಿ ಪುಲ್ಲಂ ಪುಳ್ಳಿಯಂ ತರಿಸಿಯಾ ಪೋೞಲೊಳಗಡಸಿ ತುಂಬಿ ದುಷ್ಟಬುದ್ಧಿಯ ಮನೆಚಿiಳ್ ಕಿಚ್ಚ ನಿಕ್ಕುವಂತೆ ಕಿಚ್ಚನಿಕ್ಕಲೊಡಂ ಪೊಗೆ ಸುತ್ತಿಯುರಿಯಟ್ಟಲ್ ಪ್ರೇಮಮತಿ ಧೃತಿಗೆಟ್ಟು ಪುಯ್ಯಲಿಟ್ಟು ಪೊೞಲೊಳಗಿಂದಂ ಸುರುಳ್ದುರುೞ್ದು ಕಂಠಗತಪ್ರಾಣನಾಗಿರ್ಪುದುಂ ಧರ್ಮಾಕರಣರ್ ಕಂಡು ದುಷ್ಟಬುದ್ಧಿಯ ತಂದೆಯಪ್ಪುದಂ ಸಂದೆಯಮಿಲ್ಲೆಂದರಿದು ಈ ಪಾಪಕರ್ಮನಪ್ಪ ದುಷ್ಪುನಿಂ ನಿನಗಿಂತಪ್ಪ ದುರ್ಮರಣಂ ಸಮನಿಸಿದುದೆಂದು ನುಡಿವುದಂ ಪ್ರೇಮಮತಿಯಿಂತೆಂದಂ: ಇನಿತನ್ಯಾಯಮನಾನೆ ಮಾಡೆದೆನೆನ್ನ ಮಗನ ಮೇಲೆ ದೋಷಮಾವುದುಮಿಲ್ಲೆಂದು ಲೋಕಾಂತರಿತನಾದಂ, ಅದೆಲ್ಲಮಂ ಕಂಡು ಧರ್ಮಾಕರಣರ್ ತಮ್ಮೊಳಿಂತೆಂದರ್;

ಸಮುದ್ರತೀರದ ಒಂದು ಮರದಲ್ಲಿ ಬಕಮಿಥುನಗಳಿದ್ದುವು. ಅವುಗಳ ತತ್ತಿಗಳನ್ನು ಆ ಮರದ ಬಳಿಯ ಹುತ್ತದಲ್ಲಿದ್ದ ಒಂದು ಸರ್ಪವು ಬಂದು ಮರವನ್ನೆರಿ ತಿನ್ನುತ್ತಿರಲು ಬಕವು ಕಲುಷಿತ ಚಿತ್ತದಿಂದ ಏನು ಮಾಡುವುದೆಂದು ತಿಳಿಯದೆ ಒಂದು ದಿವಸ ಸಮುದ್ರತೀರದಲ್ಲಿ ನಿಂತು ಜಾನಿಸುತ್ತಿತ್ತು ಅದನ್ನು ಕಂಡು ಒಂದು ಏಡಿ ಏನು ಭಾವಾ ! ನೀನು ಇಂದು ಅಹಾರಚಿಂತೆಯನ್ನು ಬಿಟ್ಟು ತಪಸ್ವಿಗಳಂತೆ ಕಣ್ಣನ್ನು ತೀಕ್ಷ್ಣವಾಗಿ ಮುಚ್ಚಿಕೊಂಡಿರುವ ಕಾರಣವೇನು ಎನ್ನಲು ಬಕವು ಹಿಗೆಂದಿತು: ನನಗೆ ಮನೋಚಿಂತೆ ಅಕವಾಗಿದೆ : ಅಹಾರದ ಚಿಂತೆ ಹೇಗುಂಟಾದೀತು ಎನ್ನಲು ಏಡಿ ಅದೇನು ಎಂದು ಕೇಳಲು ಆ ವೃತ್ತಾಂತವೆಲ್ಲವನ್ನೂ ಬಕವು ಕೇಳಿ ಹೀಗೆಂದಿತು: ೨೩೫. ಹಾಗಾದರೆ ಸರ್ಪವನ್ನು  ಕೊಲ್ಲುವಂಥ ಉಪದೇಶವೊಂದನ್ನು ತಿಳಿಸುವೆ. ನೀನು ಮತ್ಸ್ಯದ ಮಾಂಸವನ್ನು ತಂದು ಮುಂಗುರಿಗಳು ಆಡುವ ಸ್ಥಳದಿಂದ ೨೩೬: ಸರ್ಪದ ಹುತ್ತದ ವರೆಗೆ ಸರಿಯಾಗಿ ಸಾಲಾಗಿ ಮಾಂಸ ಖಂಡಗಳನ್ನು ಇಡಲು ವ || ಮುಂಗುರಿಗಳು ಮೀನುಗಳನ್ನು ತಿನ್ನುತ್ತ ಬಂದು ಹುತ್ತವನ್ನು ಸೇರಿದವು. ಉರಗವು ಹೊರಹೊರಟು ಮರವನ್ನೆರುವುದನ್ನು ಕಂಡು ಅದನ್ನು ಶತಖಂಡ ಮಾಡಿಕೊಂದವು. ಮರುದಿವಸ ಆ ಮಾರ್ಗದಲ್ಲಿಯೇ ಬಂದು ಎಲ್ಲಿಯೂ ಮಾಂಸವನ್ನು ಕಾಣದೆ ಮರವನ್ನೇರಿ ಹಾವಿನ ಬಾಯಿಯಿಂದ ಬದುಕಿದ ತತ್ತಿಗಳನ್ನು ಮುಂಗುರಿಗಳು ತಿಂದವು. ಶ್ಲೋ || ಅದರಿಂದ ಪ್ರಾಜ್ಞರಾದವರು ಉಪಾಯವನ್ನು ಚಿಂತಿಸಬೇಕು. ಅದರಿಂದ ಬರುವ ಅಪಾಯವನ್ನು ಚಿಂತಿಸಬೇಕು. ಸಮುದ್ರ ತೀರದಲ್ಲದ್ದ ಬಕನ ತತ್ತಿಗಳನ್ನು ಮುಂಗುರಿಗಳು ಹಾಗೆಯೇ ತಿಂದುವಲ್ಲವೆ ವ|| ದುಷ್ಟಬುದ್ಧಿಯು ಆ ಕಥೆಯನ್ನು ಕೇಳಿ ನೀನು ಒಂದು ದಂತಕಥೆಗಳನ್ನು ಹೇಳಿ ನಮ್ಮ ಕಾರ್ಯವನ್ನು ಕೆಡಿಸದೆ ನಾನು ಹೇಳಿದುದನ್ನು ಮಾಡು ಎಂದು ತನ್ನ ತಂದೆಯನ್ನು ಒಪ್ಪಿಸುತ್ತಿರಲು ಸಂಜೆಯಾಯಿತು. ೨೩೭. ಆಕಾಶವನ್ನು ಆವರಿಸಿ ದಿಕ್ಕುಗಳನ್ನು ಮುಚ್ಚಿ ದೃಷ್ಟಿಯನ್ನು ತಡೆದು ಹೊಗೆ ತುಂಬಿ ಮಳೆಗಾಲದ ಮೋಡ, ಕಾಡಿಗೆಯ ರಾಶಿ, ಕೋಗಿಲೆ ವಿಷ್ಣುವಿನ ಕಾಯ ಕಾಂತಿ, ಶಿವನ ಕುತ್ತಿಗೆಯ  ಬಣ್ಣದ ಕತ್ತಲೆ ಕ್ರಮೇಣ ಹಬ್ಬಿತು. ಕವಿದ ಕತ್ತಲೆಯಲ್ಲಿ  ದುಷ್ಟಬುದ್ದಿ ತನ್ನ ತಂದೆಯನ್ನು ಕೊಲ್ಲದೆ ಬಿಡೆನೆಂಬಂತೆ ಕರೆದುಕೊಂಡು ಹೋಗಿ ಮಾರಿಯ ಗುಡಿಗೆ ಕುರಿಯನ್ನು  ಕೊಂಡು ಹೋಗುವಂತೆ ಮರದ ಪೊಟ್ಟರೆಗೆ ಹೊಗಿಸಿ ಗೆದ್ದೆನೆಂದು ಮನೆಗೆ ಬಂದು ನಿದ್ದೆಮಾಡಿದನು. ೨೩೮; ಪರಧನವನ್ನು ಕಳಲಿಕ್ಕಾಗಿ ತನ್ನ ತಂದೆಯನ್ನು ವಸುವ ದುಷ್ಟಬುದ್ಧಿಯ ಕಥೆಯನ್ನು ತಾನು ನೋಡಲು ಬರುವಂತೆ ಪೂರ್ವದಲ್ಲಿ  ಸೂರ್ಯ  ಉದಯಿಸಿದನು. ವ || ಬೆಳಗಾಗಲು ಧರ್ಮಬುದ್ಧಿಯು ದೇವ, ಗುರು, ದ್ವಿಜಪೂಜೆಗಳನ್ನು ಮಾಡುತ್ತ ಕಳೆದನು. ದುಷ್ಟಬುದ್ಧಿ ಮುಖವನ್ನು ತೊಳೆಯದೆ ಬಂದು ಧರ್ಮಾಕರಣರಿಗೆ ಹೀಗೆಂದನು: ಪ್ರತ್ಯರ್ಥಿ ಬಂದಿಲ್ಲ ಬಹಳ ಹೊತ್ತಾಯಿತು ನಾನೇನು ಮಾಡಬೇಕು ಎಂದು ಕೇಳುತ್ತಿರಲು ಧರ್ಮಬುದ್ಧಿಯ ಬರವನ್ನು ಕಂಡು ಧರ್ಮಾಕರಣರು ನಡೆಯಿರಿ. ನಿಮ್ಮಿಬ್ಬರ ಜಗಳವನ್ನು ತೀರ್ಮಾನಿಸುವೆವು ಎಂದು ವಟವೃಕ್ಷದ ಸಮೀಪಕ್ಕೆ ಬಂದರು. ಅಷ್ಟ ವಿಧಾರ್ಚನೆಯಿಂದ ಅಲದ ಮರವನ್ನು ಅರ್ಚಿಸಿ ಅನಂತರ ಅವರಿಬ್ಬರನ್ನೂ ವಿಚಾರಿಸಿ ಆ ಮರವನ್ನು ಕುರಿತು ಹೀಗೆಂದರು: ಶ್ಲೋ: ಎಲೈ ವೃಕ್ಷವೇ ಪಿತೃಗಳು ನಿನ್ನನ್ನೇ ಅವಲಂಬಿಸಿರುವರು. ನಿನ್ನ ವಾಕ್ಯವನ್ನೆ ಬಯಸುತ್ತಿರುವರು. ಉದ್ದಾರವಾಗಲಿ ಅಧೋಗತಿಯಾಗಲಿ ಸತ್ಯವಾದ ಸಾಕ್ಷಿಯನ್ನೆ ನುಡಿ ಎಂದರು. ಅಲ್ಲದೆ ಶ್ಲೋ || ಯಾವ ಸಾಕ್ಷಿ ಸುಳ್ಳು ಹೇಳುವನೋ ಅವನು ದಿಗಂಬರನೂ ಬೋಳನೂ ಕಾಪಾಲಿಕನೂ ಭಿಕ್ಷಕನೂ ಹಸಿವು ಬಾಯಾರಿಕೆಯುಳ್ಳವನೂ ಕುರುಡನೂ ಆಗಿ ಹಗೆಯ ಮನೆಗೆ ತಿರಿದುಣ್ಣುವುದಕ್ಕೆ ಹೋಗುವನು. ವ || ಸಾಕ್ಷಿಯಾಗಿ ಸುಳ್ಳಾಡುವವರಿಗೆ ಪಾಪವೇ ಸಂಭವಿಸುವುದು ನೀನಾದರೋ ಯಕ್ಷಾದಿ ದಿವ್ಯದೇವತಾವಾಸವೂ ಸೇವ್ಯವೂ ಅದ ವೃಕ್ಷವಾಗಿರುವೆ. ಅದರಿಂದ ನಿನ್ನನ್ನು ಸಾಕ್ಷಿ ಮಾಡಿ ಕೇಳುವೆವು. ನೀನು ತಪ್ಪದೆ ನುಡಿಯೆಂದು ಧರ್ಮಾಕರಣರು ಕೇಳಿದರು, ಪ್ರೆಟರೆಯಲ್ಲಿ ಅಡಗಿದ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿ ಮತಿಗೆಟ್ಟು ಧರ್ಮಗತಿಯನ್ನು ಬಿಟ್ಟು ಪ್ರಕೃತಿವಿಕೃತಿಯಾದ ಮನುಷ್ಯನ ಅಯುಷ್ಯ ಕುಂದುವುದು ಎಂದು ಜನರು ಹೇಳುವಂತೆ ಧರ್ಮಬುದ್ಧಿಯೇ ಧನವನ್ನು ತೆಗೆದುಕೊಂಡಿರುವನೆಂದು ಹೇಳಿದನು ನೆರವಿಯೂ ಧರ್ಮಾಕರಣರೂ ಅದನ್ನು ಕೇಳಿ ವಿಸ್ಮಯಗೊಂಡುರು . ಆಗ ದರ್ಮಬುದ್ಧಿಯು ‘ ಧರ್ಮೋ ಜಯತಿ ನಾಧರ್ಮ ಇತ್ಯಮೋಘಕೃತಂ ವಚಃ ಎಂಬ ವಾಕ್ಯ ಸುಳ್ಳಗುವುದು ಸಾಧ್ಯವಿಲ್ಲ. ನನಗೂ ಇದು ಆಶ್ಚರ್ಯ. ಇದು ದೈವವಲ್ಲ: ಆಗಿದ್ದರೆ ಸತ್ಯವನ್ನೆಕೆ ನುಡಿಯದು, ಇದೆನೋ ಒಂದು ಕೃತ್ತಿಮವಾಗಿರಲೇಬೇಕು ಎಂದು ಆ ಮರಕ್ಕೆ ಸುತ್ತು ಬಂದು ದೊಡ್ಡ ಪ್ರೆಟರೆಯನ್ನೂ ಮನುಷ್ಯ ಸಮಚಾರವಾಗಿದ್ದ ಚಿಹ್ನೆಯನ್ನೂ ಕಂಡು ಧರ್ಮಾಬುದ್ಧಿಯು ಧರ್ಮಾಕರಣವನ್ನು ಕುರಿತು ಹೀಗೆಂದನು : ಕಿರಾಟೋ ನಾಸ್ತಿ ನಿಶ್ಯಠಃ’ ಹುಸಿಯಾದ ವ್ಯಾಪಾರಿಯೇ ಇಲ್ಲ ! ನಾನು ವ್ಯಾಪಾರಿಯಾಗಿರುವುದರಿಂದ ನನ್ನ ಜಾತಿ ಧರ್ಮಕ್ಕೆ ಧರ್ಮಬುದ್ಧಿ ಅಧರ್ಮಬುದ್ಧಿಯಾಗಿ ಧನವನ್ನು ವಂಚಿಸಿ ನನ್ನ ಮನೆಗೆ ಕೊಂಡು ಹೋಗುವೆನು ಎಂದು ಮನಸ್ಸಿನಲ್ಲೆ ಎಣಿಸಿಕೊಂಡೆನು. ಅಗ ಸೂರ್ಯ  ಮೂಡಿದುದರಿಂದ ತೆಗೆದುಕೊಂಡು ಹೋಗಿ ನೋಡಲು ಆ ಹೊನ್ನನ್ನು ಒಂದು ಸರ್ಪ ಸುತ್ತಿಕೊಂಡು ಮಲಗಿರುವುದನ್ನು ಕಂಡು ಕೊಂಡು ಹೋಗಲು ಅಂಜಿದೆನು ನೀವೆಲ್ಲ ಇಲ್ಲಿಯೇ ಇದ್ದು ಹಾಗೆಯೇ ನೋಡುತ್ತ ಇರಿ. ಪೊಟರೆಯಲ್ಲಿ ಹೊಗೆಯನ್ನು ಹಾಕಿ ಹಾವನ್ನು ಹೊರಹೊರಡಿಸಿ ಕದ್ದ ಒಡವೆಯನ್ನು ಕೊಡುವೆನು ಎಂದು ಧರ್ಮಬುದ್ಧಿ ಹುಲ್ಲನ್ನು ಕಟ್ಟಿಗೆಯನ್ನೂ ತರಿಸಿ ಆ ಪೊಟರೆಯಲ್ಲಿ ತುಂಬಿ ದುಷ್ಟಬುದ್ಧಿಯ ಮನೆಗೆ  ಕಿಚ್ಚು ಹಾಕುವಂತೆ ಬೆಂಕಿ ಹಾಕಿದನು. ಹೊಗೆ ಸುತ್ತಿ ಬೆಂಕಿ ಧಗಧಗಿಸಲು ಪ್ರೇಮಮತಿ ಧೈರ್ಯಗೆಟ್ಟು ಬೊಬ್ಬೆ ಹಾಕಿ ಪೊಟರೆಯೊಳಗಿನಿಂದ ಹೊರಳಿ ಉರುಳಿ ಕಂಠಗತಪ್ರಾಣನಾದುದನ್ನು ಧರ್ಮಾಕರಣರು ಕಂಡು ದುಷ್ಟಬುದ್ಧಿಯ ತಂದೆಯಾಗಿರುವುದರಲ್ಲಿ ಸಂದೇಹವಿಲ್ಲ ಎಂದು ತಿಳಿದರು. ಈ ಪಾಪಕರ್ಮನಾಗಿರುವ ದುಷ್ಟಮಗನಿಂದ ನಿನಗೆ ಇಂಥ ದುರ್ಮರಣ ಉಂಟಾಯಿತು ಎಂದು ಹೇಳಿದರು ಅದಕ್ಕೆ ಪ್ರೇಮಮತಿ ಹೀಗೆಂದನು. ಇಷ್ಟೆಲ್ಲ ಅನ್ಯಾಯಕ್ಕೆ ನಾನೇ ಕಾರಣನಾದೆ; ನನ್ನ ಮಗನಲ್ಲಿ ಯಾವ ದೋಷವು ಇಲ್ಲ ಎಂದು ಲೋಕಾಂತರಕ್ಕೆ ಹೋದುನು. ಅದೆಲ್ಲವನ್ನೂ ಕಂಡು ಧರ್ಮಾಕರಣರು ತಮ್ಮಲ್ಲೆ ಹೀಗೆಂದುಕೊಂಡರು:

ಪುರುಷೊತ್ತಮನಾದರದಿಂ
ಪರೋಪಕಾರಾರ್ಥಮಿತ್ತನಾತ್ಮೀಯಕಳೇ
ಬರಮಂ ಸುತರಕ್ಷಾರ್ಥ
ಶರೀರಮಂ ಜನಕನೀವುದಾವುದು ಚೋದ್ಯಂ  ೨೩೯

ಎಂದು ಸಭಾಸದರ್ ಪರೆದೆರ್ದು ಪೋದರ್, ಅದಱ*ಂ

ಶ್ಲೋ|| ದುಷ್ಟಬುದ್ದೇಸ್ಸುಬುದ್ಧೇಶ್ಚ ದ್ವಯೋರ್ಧರ್ಮಸ್ಯ ಸಂಶ್ರಯಾತ್
ಪುತ್ರಸ್ಯಾಪ್ಯತಿ ಪಾಂಡಿತ್ಯಾತ್ ಪಿತಾ ಧೂಮೇನ ಮಾರಿತಃ  ||೧೨೬||

ಟೀ|| ದುಷ್ಟಬುದ್ಧಿಯುಂ ಸುಬುದ್ಧಿಯುಮೆಂಬಿರ್ವರೊಳಗೆ ದುಷ್ಟಬುದ್ಧಿ ದುರ್ಬುದ್ಧಿಯಿಂ ತನ್ನ ತಂದೆಯಂ ಹೊಗೆಯಿಂದಂ ಮರಣವನೈದಿಸಿದನು ಎಂಬ ಕಥೆಯಂತೆ ನಿನ್ನ ಪಾಂಡಿತ್ಯದಿಂ ಪತಿಗಿನಿತನರ್ಥಮಾದುದು. ‘ತಮ್ಮಡಿಗೆ ಮೊರೆವ ಶ್ವಾನಂ ದಮ್ಮಿಯನೇಕೆ ಬಾೞಲಿತ್ತಪ್ಪದು ಎಂಬಂತೆ ನೀನುೞ*ದರಂ ಬಾಳಲುಂ ಬರ್ದುಂಕಲೇಕಿತ್ತಪೆಯೆನೆ ದವನಕನಿಂತೆದಂ: ಎೞ್ತಂ ಸಿಂಗಂ ಕೊಂದೊಂಡೆ ನಿನಗಾವುದು ಭಯಂ ಬಂದಪ್ಪುದೆನೆ ಮತ್ತಂ ಕರಟಕನಿಂತೆಂದಂ : ದಾಸೀ ಮೇಷ ವಿರುದ್ದೇನ ವಾನರಾಃ ಪ್ರಳಯಂಗತಾಃ ಎಂಬ ಕಥೆಯಂ ನಿನಗೆ ಪೇಳ್ದಪೆಂ ಕೇಳೆಂದಿಂತೆಂದಂ:

೨೩೯. ಪರೋಪರಕ್ಕಾಗಿ ತನ್ನ ದೇಹತ್ಯಾಗ ಮಾಡಿದನು ಪುರುಷೋತ್ತಮನು. ತನ್ನ ಮಗನ ರಕ್ಷಣೆಗೆಂದು ತಂದೆ ತನ್ನ ಶರೀರವನ್ನು ಕೊಡುವುದು ಏನಾಶ್ಚರ್ಯ ವ|| ಎಂದು ಸಭಾಸದರು ಅಲ್ಲಿಂದ ಚೆದುರಿ ಎದ್ದು ಹೋದರು ಅದರಿಂದ ಶ್ಲೋ || ದುಷ್ಟಬುದ್ಧಿಯೂ ಸುಬುದ್ಧಿಯೂ ಎಂಬಿಬ್ಬರೊಳಗೆ ದುಷ್ಟಬುದ್ಧಿಯ ದುರ್ಬುದ್ಧಿಯಿಂದ ತನ್ನ ತಂದೆಯನ್ನು ಹೊಗೆಗೆ ಸಿಕ್ಕಿಸಿ ಕೊಂದನು. ವ || ಅದರಿಂದ ನಿನ್ನ ಅತಿಪಾಂಡಿತ್ಯದಿಂದ ಒಡೆಯನಿಗೆ  ಇಷ್ಟೆಲ್ಲ ಅನರ್ಥವುಂಟಾಯಿತು. ತನ್ನ ಯಜಮಾನನಿಗೆ ಬೊಗಳುವ ನಾಯಿ ಧರ್ಮಿಯನ್ನೇಕೆ ಬದುಕಲು ಬಿಡುವುದು ? ಎಂಬಂತೆ ನೀನು ಉಳಿದವರನ್ನು ಬದುಕಲು ಏಕೆ ಬಿಡುವೆ ಎಂದಿತು. ಅದಕ್ಕೆ ದವನಕನು ಹೀಗೆಂದನು ಎತ್ತನ್ನು ಸಿಂಹ ಕೊಂದರೆ ನಿನಗೇನು ಭಯ ಎನ್ನಲು   ಕರಟಕನು ಹಿಗೆಂದನು: ದಾಸೀಮೇಷ ವಿರುದ್ಧೇನ ವಾನಾರಾಃ ಪ್ರಳಯಂಗತಾಃ ಎಂಬ ಕಥೆಯನ್ನು ನಿನಗೆ ಹೇಳುವೆನು ಕೇಳು: