ಸಗರಪುರಮೆಂಬ ಪುರದೂಳ್
ಸಗರಾನ್ವಯದರಸನಕವಿಭವಂ ಪೆಸರಿಂ
ಸಗರಂ ತಗರಂ ಪೋರಿಪ
ಬಗೆಯಿಂ ತಗರಂ ವಿನೋದದಿಂದಂ ಪೊರೆದಂ  ೨೪೦

ಅಂತಾತಂ ಪಲವುಂ ತಗರನಾಳ್ದು ಮಾಡದೊಳಂ ಮಂದುರದೊಳಂ ಕಟ್ಟಿಸಿದೊಡೊರ್ವ ಸೊರ್ಕಿದ ತೊೞ್ತು  ತೊೞ್ತುತೆಲಸಕ್ಕರಮನೆಯುಂ ಪುಗುವ ಪೊಱಮಡುವ ಸೂೞೊಳೆಲ್ಲಂ ಒಂದು ತಗರಂ ಬಗೆಯದೆ ಬಡಿಯುತ್ತುಮಿರ್ಪುದುಮೊಂದು ದಿವಸಮಾ ತೊೞ್ತು ತನಗೆ ಪಕ್ಕಾಗಿ ಬಂದು ಮುಂದೆ ನಿಲೆ ಸಂಜಾತರೋಷಂ ಮುಳಿದು ಕಡೆಯೆ ಪಾಯ್ದೊಡವಳ್ ಕಡುಮುಳಿದು ಪಿರಿಯದೊಂದುರಿವ ಕೊಳ್ಳಿಯಂ ತಂದಾ ತಗರಂ ಪೊಯ್ಯಲೊಡನದಱಮೆಯ್ಯನುರಿ ಪತ್ತಲ್ ಕಟ್ಟಿದ ನೇಣಂ ಪಱ*ಯೆ ಪಾಯ್ದಾ ತಗರ್ ಪರಿದು ಕುದುರೆಯ ಮುಂದುರಮಂ ಮಾರಿ ಪುಗುವಂತೆ ಪೊಕ್ಕು ಚರಣಿಯ ಪೊಲ್ಲೊಳ್ ಪೊರೞಲೊಡಮಾ ಪುಲ್ಲು ಪೊತ್ತಿ ಪೊಗೆದುರಿದು ಮಂದುರಮಂ ಪೊತ್ತಿದೊಡಲ್ಲಿಯರೆಬೆಂದ ತುರಗಂಗಲನರಸಂ ಕಂಡು ಅಶ್ವವ್ಶೆದ್ಯರಂ ಕರೆದಿವರ್ಕೆ ತಕ್ಕ ಚಿಕಿತ್ಸೆಯಿಂ ಪೇೞ*ಮನೆ ವೈದ್ಯರಿದರ್ಕೆ ಮರ್ಕಟಂಗಳ ನೆಣನುಂ ನೆತ್ತರುಂ ಮರ್ದೆಂದೊಡರಸನ ಬೆಸದೊಳ್ ಪುರಜನಮುಂ ಪರಿಜನಮುಂ ಪರಿತಂದು ತರುಚರಂಗಳಂ ನಿರವಶೇಷಂಗಳಮ ಮಾಡಿ ಕೊಂದರ್ ಅದರಂ, ಅದಱ*ಂ

ಶ್ಲೋ || ದಾಸೀಮೇಷನವಿರುದ್ಧೇನ ವಾನರಾಃ ಪ್ರಳಯಂಗತಾಃ
ತಸ್ಮಾತ್ಕಲಹ ಸಂಕೀರ್ಣಂ ದೂರತಃ ಪರಿವರ್ಜಯೇತ್   ||೧೨೭||

ಟೀ|| ತಗರ ಮತ್ತೆ ತೊತ್ತಿನ ಕಲಹದಿಂ ಕಪಿಗಳ್ ಕೆಟ್ಟವು. ಅದಱ*ಂ ಕಲಹಶೀಲನಂ ದೂರದೊಳಿರಿಸವೇೞ್ಕುಂ ಎಂದು ಮತ್ತಂ’

ಕಲಹಸ್ಥಾನಂಗಳೊಳಂ
ಕಲಹಪ್ರಿಯರಪ್ಪ ನರರ ಸಂವಾದದೊಳಂ
ನೆಲಸಿದ ಸಾಧುಜನಾಳಿಗೆ
ಪಲತೆಱದಿನಪಾಯಮಕ್ಕುಮೆಂತುಂ ತುದಿಯೊಳ್  ೨೪೧

ಅದಱ*ಂ ಕಲಹಕ್ಕೆ ಕಾರಣಮಿಲ್ಲದ ಪರಮಮಿತ್ರನಂ ಭೇದಿಸಿ ಕಾದಿಸಿದ ಕಲಹದ ಪ್ರಿಯಂ ನೀಂ, ನಿನ್ನ ಸಮೀಪದೊಳಿನ್ನಿರಲಾಗದೆಂದು ಕರಟಕಂ ದವನಕನನಗಲ್ದು ಪೋದಂ. ಅನ್ನೆಗಮಿತ್ತಲ್ ತಾರಪರ್ವತದ ತೞ್ಪಲೊಳ್ ಬೆೞ*ರ್ದ ಗಂಡನಗಮಂ ಪೊಲ್ತಿರ್ದ ಗೋಪತಿಯಂ ಮೃಗಾದಿಪತಿ ನೋಡಿ ಕರುಣಾರಸಾರ್ದ್ರಹೃದಯನಾಗಿ ಮನಂ ಮಿಕ್ಕು ಖಿನ್ನನಾಗಿರ್ದ ಪಿಂಗಳಕನಲ್ಲಿಗೆ ದವನಕಂ ಬಂದು ದೇವಾ ! ನೀಮೀ ದ್ರೋಹನ ಮುಂದೆ ನಿಂದಿರ್ದೇನೆಂದು ಚಿಂತಿಸುತಿರ್ದಪಿರೆನೆ ಪಿಂಗಳಕಂ ಕಡುಮುಳಿದೆಲೆ ಪಾತಕ ! ಮುನ್ನಂ ನಿನ್ನ ಪ್ರೇರಣೆಯಿಂದೀ ಪಶುವಂ ಕೊಂದು ದುರ್ಗತಿಯಂ ಮಾಡಿಕೊಂಡೆಂ. ಇನ್ನಾಂ ನಿನಗೆ ಮುಳಿದೊಡೆನ್ನ ಜಸಂ ಮಸುಳಿಗುಮುಸಿರದೆ ಪೋಗು ಮೇಲಪ್ಪುದಂ ನಾನೆ ಬಲ್ಲೆನೆನೆ ನರಿ ಹರಿಯ ಪುರುಷಾಕಾರದ ಪುರುಳನಱ*ಪುದಪ್ಪುದಱ*ಂ ಶಂಕಿಸದೆ ಮತ್ತಮಿಂತೆಂದುದು. ದೇವಾ ! ನಿನೆನ್ನೆನೇಗೆಯ್ದೋಡಮಕ್ಕುಂ ಸಿಂಹದೊಡನೆೞ್ತು ಪೋರ್ದುದೆಂಬುದಂ ಕಥೆಗಳೊಳಪ್ಪೊಡಂ ಕೇಳ್ದುದಿಲ್ಲ, ಸಂಜೀವಕಂ ನಿನ್ನ ಮುನ್ನಿನ ಭವದ ಪಗೆ ಪಶುವಾಗಿ ಪುಟ್ಟಿ,

ಶ್ಲೋ || ಖಾದೇ ಹಾಸ್ಯೇನ್ನಪಾನಾದೌ ಶತ್ರುಣಾ ಸಹಬೋಜನಂ
ಸಂಬಂಧಮಪಿ ಕುರ್ವಿತ ತತ್ರ ವೈರಮನುಸ್ಮರೇತ್  ||೧೩೮||

ಟೀ|| ಮೆಲ್ವಲ್ಲಿ ನಗುವಲ್ಲಿ ಅನ್ನಪಾನಾದಿಕಂಗಳಲ್ಲಿ ನುಡಿವಲ್ಲಿ ವಿರೋಗಳ ಸಹಬೋಜನವನೂ ಸಂಬಂಧವಾದರೂ ಮಡುವುದು, ಅಲ್ಲಿ ತನ್ನ ವೈರಮಂ ನೆನೆವುದು ಎಂಬುದಂ ಬಗೆದು ನಿಮ್ಮೊಳ್ ಕೊರ್ಬಿ ಕೋಡಿಟ್ಟು ಮೆಲ್ವಾಯ್ದು ಸತ್ತುದು. ನೀನುಂ ನಿನ್ನಾಯುಷ್ಯಬಲದಿಂ ಬರ್ದುಂಕಿದೆ. ಇಂತಪ್ಪ ಪಗೆಯಂ ಕೊಂದು ಸಂತೋಷಂಬಡುವುದಲ್ಲದೆ ಚಿಂತೆಗೆಯ್ಯಲ್ವೇಡೆನೆ ಮತ್ತಂ ಪಿಂಗಳಕನಿಂತೆಂದಂ: ಸಂಜೀವಕನೆನಗೆ ತಪ್ಪಿದೊಡಾಂ ಸೈರಿಸುವುದೆ ಧರ್ಮಮದಲ್ಲದಾನದರ್ಕೆ ತಪ್ಪುವದೆಂತುಂ ಧರ್ಮಮಲ್ಲದೆಂತೆನೆ:

ಶ್ಲೋ||ಅಪಶ್ಯಲಕ್ಷ್ಮೀಹರಣಾರ್ಥ ವೈರತಾಮಚಿಂತಯಿತ್ವಾ ಚ ತದದ್ರಿಮರ್ದನಂ
ದದೌ ನಿವಾಸಂ ಹರಯೇ ಮಹೋದರ್ವಿಮತ್ಸರಾ ರಯಾಂ
ಹಿ ವೃತ್ತಯಃ ||೧೩೯||

ಟೀ|| ಮಂದರಾಚಲದಿಂದ ನೋಯೆ ಕಡೆದೊಡಂ ಅಲ್ಲಿ ಹುಟ್ಟಿದಂತಪ್ಪ ಲಕ್ಷ್ಮಿಯಂ ಕೊಂಡಡಂ ವಾರಿ ಹರಿಯಿರಲ್ಕೆಡೆಗೋಟ್ಟುದಲ್ಲದೆ ವೈರಮಂ ನೆನೆದುದಿಲ್ಲ. ಅದು ಕಾರಣಮಾಗಿ ಹಿರಿಯರ ನೆಗೞ್ತೆಗಳವೆಂದುಂ  ದೋಷವನೈದುವುದಲ್ಲ ಎಂಬುದು ಮಹಾಸತ್ಪುರುಷರ ಚರಿತಂ ಇಂತಪ್ಪು ದನಾಂ ಬಗೆಯದೆ ಸಂಜೀವಕನಂ ಕೊಂದೀ ಜಗದೊಳ್ ನಿಂದಿಸಿಕೊಂಡೆಂ. ಇನ್ನಿದಾದುನಪ್ಪೆಂ.  ಆಗಲಾಱದ ಪಕ್ಷಂ ಮುಮಕ್ಷುವೃತ್ತಿಯೊಳಿರ್ಪೆನೆನೆ ದವನಕನಿಂತೆಂದಂ: ದೇವಾ ! ನೀವೊರ್ಬರಲ್ಲಿದು ಮುನ್ನಂ ರಾಜತನೂಜನಪ್ಪಂ ಯುಷ್ಟಿರಂ ಮೊದಲಾಗಿ ಸೋದರರಂ ದಾಯಾದರೆಂದು ಕೊಂದು ಬೞೆಕ್ಕೆ  ವೈರಾಗ್ಯಂ ಪುಟ್ಟಿ ರಾಜ್ಯಂಗೆಯ್ಯಲೊಲ್ಲದಿರೆ, ಗುರುಜನಮುಂ ಬಂಧುಜನಮುಮಾತನಂ ತಿಳಿಪಿ ರಾಜ್ಯಂಗೆಯಿಸಿದರದಱ*ಂ ದೇವಾ ನೀವೀ ಪಶ್ಚಾತ್ತಾಮಪಂ ಮಾಣ್ದು ನಿಶ್ಚಿಂತರಾಗಿರ್ಪುದೆನೆ ಪಿಂಗಳಕನಲ್ಲಿಂ ತಳರ್ದು ಮತ್ತಮೊಂದು ರಮ್ಯಪ್ರದೇಶಕ್ಕೆ ವೋಗಿ,

ಭ್ರಾಜಿಷ್ಣು ಸಮದ ಸಾಮಜ
ರಾಜಿಶಿರಃಪೀಠದಳನದಕ್ಷಂ ರಾಜ
ತ್ತೇಜೋನಿ ಬಲದೊಳ್ ಮೃಗ
ರಾಜಂ ಸುಖಂಸಕಥಾವಿನೋದದೊಳಿರ್ದಂ  ೨೪೨

ಕಾದಿ ಗೆಲಲ್ಕಸಾಧ್ಯರೆನೆ ಸಂದ ಸರಿತ್ಸುತ ಕುಂಭಜರ್ಕಳಂ
ಭೇದಿಸಿ ಕಾದಿ ಗೆಲ್ದನಕಂ ಯಮನಂದನನೆಂದೊಡೊಂದೆ ಸಾ
ಮಾದಿನಯಂಗಳೊಳ್ ಸುನಯ ಸಾಧನಮಪ್ಪುದು ಭೇದಮಂತದಂ
ಭೇದಿಸಿ ದುರ್ಗಸಿಂಹ ಮತದಿಂದಮೆ ಗೆಲ್ಗೆ ವಿರೋವರ್ಗಮಂ ೨೪೩

ಉದಯೋತ್ತುಂಗನಗ ಸ್ವಭಾವದಿನಪಂ ಪ್ರೋದ್ದಾಮಧರ್ಮ ಕ್ಷಮಾ
ಜದ ಬೇರ್ ಸ್ವಾಮಿಹಿತೌಘ ನಿರ್ಮಲ ಮಹಾರತ್ನಾಕರಂ ನೀತಿಶಾ
ಸ್ತ್ರದ ಮಂತ್ರಕ್ಕದೈವತಂ  ದ್ವಿಜಕುಲ ಶ್ರೀಕೇಳಿ ಸಂವಾಸಮೆಂ
ಬುದು ಸರ‍್ವೋರ‍್ವರೆ ಧರ‍್ಮನಿರ್ಮಲ ಯಶಸ್ಸದ್ವರ್ಗನಂ  ದುರ್ಗನಂ  ೨೪೪

ಇದು ವಿನಮದಮರರಾಜಮೌಳಿ ಮಾಣಿಕ್ಯ ಮರೀಚಿ ಮಂಜರೀ ಪುಂಜರಂಜಿತ ಭಗವದ್ಭವಾನೀವಲ್ಲಭ ಚರಣ ಸರಸಿರುಹ ಷಟ್ಚರಣಂ ಶ್ರೀಮನ್ಮಹಾಸಂವಿಗ್ರಹಿ ದುರ್ಗಸಿಂಹ ವಿರಚಿತಮಪ್ಪ ಪಂಚತಂತ್ರದೊಳ್ ಭೇದಪ್ರಕರಣ ವರ್ಣನಂ ಪ್ರಥಮತಂತ್ರಂ ಸಮಾಪ್ತಂ

೨೪೦: ಸಗರಪುರ ಎಂಬ ಪಟ್ಟಣದಲ್ಲಿ  ಸಗರವಂಶದ ಸಗರನೆಂಬ ಹೆಸರಿನ ಅರಸನು ಟಗರುಕಾಳಗಕ್ಕಾಗಿ ಟಗರುಗಳನ್ನು ಸಾಕುತ್ತಿದ್ದ. ವ|| ಹೀಗೆ ಅನೇಕ ಟಗರುಗಳನ್ನು ರೊಪ್ಪದಲ್ಲಿ ಕಟ್ಟಿಸಿದ. ಒಬ್ಬಳು ಸೊಕ್ಕಿದ ತೊತ್ತು ಅರಮೆನೆಗೆ ತೊತ್ತುಗೆಲಸಕ್ಕಾಗಿ ಹೋಗಿಬರುವ ಸಮಯದಲ್ಲೆಲ್ಲ ಒಂದು ಟಗರನ್ನು ಚೆನ್ನಾಗಿ ಹೊಡೆಯುತ್ತಿದ್ದಳು. ಒಂದು ದಿನ ಸರಿಯಾದ ಕಾಲ ಬರಲು ಕೋಪಗೊಂಡ ಟಗರು ಅವಳನ್ನು ಕೆಡೆಯಲು ಅವಳು ಸಿಟ್ಟಾಗಿ ಉರಿಯುವ ಕೊಳ್ಳಿಯೊಂದನ್ನು ತಂದು ಆ ಟಗರನ್ನು ಹೊಡೆಯಲು ಅದರ ಮೆಯ್ಗೆ ಬೆಂಕಿ ಹಿಡಿಯಲು ಅದು ಕಟ್ಟಿದ ನೇಣನ್ನು ಹರಿದುಕೊಂಡು ಮಾರಿ ಹೊಗುವುಂತೆ ಕುದುರೆಯ ಲಾಯವನ್ನು ಹೊಕ್ಕಿತು. ಅದು ಅಲ್ಲಿಯ ಹುಲ್ಲಿನ ಮೇಲೆ ಹೊರಳಡಾಲು ಆ ಹುಲ್ಲು ಹೊತ್ತಿ ಹೊಗೆದು ಉರಿದು ಲಾಯವನ್ನು ಸುಡಲು ಅಲ್ಲಿ ಅರ್ಧ ಬೆಂದ ತುರಗಗಳನ್ನು ಕಂಡು ಅಶ್ವವೈದ್ಯರನ್ನು ಕರೆದು ಇವುಗಳಿಗೆ ತಕ್ಕ ಚಿಕಿತ್ಸೆ ಏನೆಂದು ಕೇಳಿದನು. ವೈದ್ಯರು ಇದಕ್ಕೆ ಮರ್ಕಟಗಳ ನೆಣವೂ ನೆತ್ತರೂ ಮದ್ದು ಎಂದು ಹೇಳಿದರು. ರಾಜನ ಅಪ್ಪಣೆಯಂತೆ ಪುರಜನರೂ ಪರಿಜನರೂ  ಹೋಗಿ ಮಂಗಗಳನ್ನೆಲ್ಲ ಕೊಂದರು. ಅದರಿಂದ ಶ್ಲೋ|| ಟಗರು ಮತ್ತು  ತೊತ್ತಿನ ಕಲಹದಿಂದ ಕಪಿಗಳು ಸತ್ತವು. ಅದರಿಂದ ಕಲಹಶೀಲನನ್ನು ದೂರದಲ್ಲೇ ಇರಿಸಬೇಕು. ಅಲ್ಲದೆ ೨೪೧. ಕಲಹಸ್ಥಾನಗಳಲ್ಲಿಯೂ ಕಲಹಪ್ರಿಯರಾದ ಜನರ ಸಂವಾದದಲ್ಲಿಯೂ ನೆಲೆಸಿದ ಸಾಧುಜನರಿಗೆ ಹಲವು ರೀತಿಯ ಅಪಾಯಗಳು ಕೊನೆಯಲ್ಲಿ ತಪ್ಪಿದ್ದಲ್ಲ. ವ|| ಅದರಿಂದ ಕಲಹಕ್ಕೆ  ಕಾರಣನಲ್ಲದ ಪರಮಮಿತ್ರನನ್ನು ಭೇದಿಸಿ ಕಾಡಿಸಿದ ಕಲಹಪ್ರಿಯ ನೀನು; ನಿನ್ನ ಸಮೀಪದಲ್ಲಿ  ಇನ್ನು ಇರಬಾರದೆಂದು ಕರಟಕನು ದವನಕನನ್ನು ಬಿಟ್ಟುಹೋದನು. ಅಷ್ಟರಲ್ಲಿ ಇತ್ತ ತಾರಪರ್ವತದ ತಪ್ಪಲಲ್ಲಿ  ಬಿದ್ದಿದ್ದ ಗಂಡಪರ್ವತವನ್ನು ಹೋಲುತ್ತಿದ್ದ ಗೋಪತಿಯನ್ನು ಮೃಗಾಪತಿ ನೋಡಿ ಕರುಣರಸಾರ್ದ್ರಹೃದಯನಾಗಿ ಮನಸ್ಸು ಮೀರಿ ಖಿನ್ನನಾಗಿದ್ದ ಪಿಂಗಳಕನಲ್ಲಿಗೆ ದವನಕನು ಬಂದು ಹೀಗೆಂದನು: ದೇವಾ; ನೀವು ಈ ದ್ರೋಹಿಯ ಮುಂದೆ ನಿಂತು ಏನೆಂದು ಚಿಂತಿಸುತ್ತಿದ್ದೀರಿ? ಅದಕ್ಕೆ ಪಿಂಗಳಕನು ಕಡುಕೋಪದಿಂದ ಎಲೆ ಪಾತಕಿ! ಮೊದಲು ನಿನ್ನ ಪ್ರೇರಣೆಯಿಂದ ಈ ಪಶುವನ್ನು ಕೊಂದು ದುರ್ಗತಿಯನ್ನು ಮಾಡಿಕೊಂಡೆ; ಇನ್ನು ನಾನು ನಿನ್ನ ಮೇಲೆ ಸಿಟ್ಟಾದರೆ ನನ್ನ ಯಶಸ್ಸು ಕುಂದುವುದು; ಉಸಿರೆತ್ತದೆ ಇಲ್ಲಿಂದ ಹೋಗು; ಮುಂದಾಗುವುದನ್ನು ನಾನೇ ಬಲ್ಲೆ ಎಂದನು. ನರಿ ಸಿಂಹದ ಕಠೋರ ಸ್ವಬಾವವನ್ನು ತಿಳಿಯದಿದ್ದುದರಿಂದ ಸಂದೇಹಿಸದೆ  ಪುನಃ ಹೀಗೆಂದಿತು: ದೇವಾ! ನೀನು ನನ್ನನ್ನು ಏನು ಮಾಡಿದರೂ ಸರಿ. ಸಿಂಹದೊಡನೆ ಎತ್ತು ಹೋರಾಡಿತು ಎಂಬುದನ್ನು ಕಥೆಗಳಲ್ಲೂ ಕೇಳಿರಲಿಲ್ಲ. ಸಂಜೀವಕನು ನಿನ್ನ ಪೂರ್ವಜನ್ಮದ ಶತ್ರು. ಪಶುವಾಗಿ ಹುಟ್ಟಿ ಶ್ಲೋ|| ಮೆಲ್ಲುವಲ್ಲಿ, ನಗುವಲ್ಲಿ, ಅನ್ನಪಾನಾದಿಗಳಲ್ಲಿ, ನುಡಿವಲ್ಲಿ ವಿರೋಗಳ ಸಹಭೋಜನವನ್ನೂ ಸಂಬಂಧವನ್ನೂ ಮಾಡಬೇಕು; ಅಲ್ಲಿ ತನ್ನ ವೈರವನ್ನು ನೆನೆಯಬೇಕು ವ || ಎಂದು ಬಗೆದು ನಿಮ್ಮೊಡನೆ ಕೊಬ್ಬಿ ಕೋಡಿನಿಂದ ಹೋರಾಡಿ ಸತ್ತದು. ನೀನೂ ನಿನ್ನ ಆಯುಷ್ಯ ಬಲದಿಂದ ಬದುಕಿದೆ. ಇಂತಹ ಹಗೆಯನ್ನು ಕೊಂದು ಸಂತೋಷಪಡಬೇಕೇ ಹೊರತು ಚಿಂತಿಸಿಸುವುದು ತರವಲ್ಲ ಎಂದನು. ಅದಕ್ಕೆ ಪಿಂಗಳಕನು ಹೀಗೆಂದನು: ಸಂಜೀವಕನು ನನ್ನ ಮೇಲೆ ತಪ್ಪುಮಾಡಿದರೆ ನಾನು ಸಹಿಸುವುದೇ ಧರ್ಮ, ಅದಕ್ಕೆ ನಾನು ತಪ್ಪುವುದು ಎಷ್ಟಕ್ಕೂ ಧರ್ಮವಲ್ಲ. ಶ್ಲೋ|| ಮಂದರಾಚಲದಿಂದ ನೋಯುವಂತೆ ಕಡೆದರೂ ಅಲ್ಲಿ ಹುಟ್ಟಿದಂಥ ಲಕ್ಷ್ಮೀಯನ್ನು ತೆಗೆದುಕೊಂಡರೂ ವಾರಿ ವಿಷ್ಣುವಿಗೆ ಎಡೆಕೊಟ್ಟಿತಲ್ಲದೆ ವೈರವನ್ನು ನೆನೆಯಲಿಲ್ಲ. ಅದರಿಂದ ಮಹಾತ್ಮರ ಕೆಲಸವೆಂದೂ ದೋಷದಿಂದ ಕೂಡಿರುವುದಿಲ್ಲ. ಇದು ಮಹಾ ಸತ್ಪರುಷರ  ಚರಿತೆ. ವ|| ಹೀಗಿರುವುದನ್ನು ನಾನು ಬಗೆಯದೆ ಸಂಜೀವಕನನ್ನು ಕೊಂದು ಈ ಜಗತ್ತಿನಲ್ಲಿ ನಿಂದಿತನಾದೆ. ಇನ್ನು ಇದರ ಗತಿಯನ್ನೇ ನಾನು ಹೊಂದುವೆ; ಆಗದಿದ್ದಲ್ಲಿ ವೈರಾಗ್ಯ ವೃತ್ತಿಯಿಂದಿರುವೆ ಎಂದಿತು. ಅದಕ್ಕೆ ದವನಕನು ಹೀಗೆಂದನು ದೇವಾ ! ನೀವೊಬ್ಬರಲ್ಲ. ಹಿಂದೆ ಕ್ಷತ್ರಿಯಕುಮಾರನಾದ ಯುಷ್ಠಿರನು ಸಹೋದರರನ್ನು ದಾಯಾದಿಗಳೆಂದು ಕೊಂದು ಬಳಿಕ ವೈರಾಗ್ಯ ಹುಟ್ಟಿ ರಾಜ್ಯಭಾರ ಮಾಡದಿರಲು ಗುರುಜನರೂ ಬಂಧುಜನರೂ ಆತನಿಗೆ ಬುದ್ಧಿ ಹೇಳಿ ಪುನಃ ರಾಜ್ಯಭಾರ ಮಾಡುವಂತೆ ಮಾಡಿದರು. ಅದರಿಂದ ದೇವಾ! ನೀವು ನಿಶ್ಚಿಂತರಾಗಿರಬೇಕು ಎಂದಿತು. ಪಿಂಗಳಕನು ಅಲ್ಲಿಂದ ಹೊರಟು ಮತ್ತೊಂದು ರಮ್ಯಪ್ರದೇಶಕ್ಕೆ  ಹೋಗಿ, ೨೪೨. ಕಾಂತಿಯುತನೂ ಮದ್ದಾನೆಗಳ ಕುಂಭಸ್ಥಳಗಳನ್ನು ಭೇದಿಸುವದರಲ್ಲಿ ಶಕ್ತನೂ ಆದ ಮೃಗರಾಜನು ಹೊಳೆಯುವ ತೇಜೋನಿಬಲದೊಡನೆ ಸುಖಸಂಕಥಾ ವಿನೋದದಿಂದಿದ್ದನು. ೨೪೩. ಕಾದಾಡಿ ಗೆಲ್ಲಲು ಅಸಾಧ್ಯರಾದ ಪ್ರಸಿದ್ಧರಾದ ಭೀಷ್ಮದ್ರೋಣಾದಿಗಳನ್ನು ಭೇದಿಸಿ ಕಾದಾಡಿ ಯುದಿಷ್ಠಿರನು ಗೆದ್ದನು. ಅದರಿಂದಸಾಮಾದಿ ನೀತಿಗಳಿಂದ ಸುನೀತಿ  ಸಾಧನವಾಗುವುದು ಭೇದ ನೀತಿ, ಅದರಿಂದ ವಿರೋವರ್ಗವನ್ನು ದುರ್ಗಸಿಂಹ ಮತದಿಂದ  ಭೇದಿಸಿ ಗೆಲ್ಲಲಿ. ೨೪೪. ಉನ್ನತವಾದ ಉದಯಪರ್ವತದ ಸಹಜ ಸೂರ‍್ಯನೂ, ಅತ್ಯಂತ ಶ್ರೇಷ್ಠವಾದ ಧರ್ಮವೃಕ್ಷದ ಬೇರಾಗಿದ್ದವನೂ, ಒಡೆಯನಿಗೆ ಹಿತಕಾರ್ಯಗಳನ್ನು ಮಾಡುವುದರಲ್ಲಿ ಪರಿಶುದ್ಧವಾದ ಸಮುದ್ರದಂತಿರುವವನೂ,ಬ್ರಾಹ್ಮಣಕುಲವೆಂಬ ಲಕ್ಷ್ಮಿಯ ಕ್ರೀಡಾಗಾರನೂ, ಶಿಷ್ಟಸಮೂಹಕ್ಕೆ ಸೇರಿದವನೂ ಆದ ದುರ್ಗಸಿಂಹನನ್ನು ಸಮಸ್ತ ಪ್ರಪಂಚ ಹೀಗೆ ಕೊಂಡಾಡುವುದು. ವ|| ಇದು ವಿನಮದಮರರಾಜಮೌಳಿ ಮಾಣಿಕ್ಯಮರೀಚಿ ಮಂಜರೀಪುಂಜರಹಿತ ಭಗವದ್ಭವಾನೀವಲ್ಲಭ ಚರಣ ಸರಸಿರುಹ ಷಟ್ಚರಣ ಶ್ರೀಮನ್ಮಹಾಸಂವಿಗ್ರಹಿ ದುರ್ಗಸಿಂಹ ವಿರಚಿತವಾದ ಪಂಚತಂತ್ರದಲ್ಲಿ ಭೇದಪ್ರಕರಣ ವರ್ಣನ ಎಂಬ ಪ್ರಥಮತಂತ್ರವು ಸಮಾಪ್ತವಾಯಿತು.