ಕಪಟ ಪ್ರಪಂಚ ಪರಿಣತ
ನುಪಾಯನಿಪುಣಾಭಿದಾನ ಜಂಬುಕನುದ್ಯ
ದ್ವಿಪುಳತರಮಪ್ಪ ಗಿರಿವರ’
ದುಪಕಂಠದ ಬಿಲದೊಳಿರ್ಪುದತಿಮುದದಿಂದಂ  ೮೯

ವ|| ಆ ಜಂಬುಕನೊಂದು ದಿವಸಮಾಹಾರವಿಹಾರಕ್ಕೆ ಪೋಪುದುಮದಱ ಬಿಲಕ್ಕೊಂದು ಪುಲಿ ಬಂದು ಪೊಕ್ಕಿರ್ದುದನ್ನಗಂ ಕರೆದಾನಂ ಬೇಗದೊಳಾ ನರಿ ಬಂದು ಬಾಗಿಲೊಳ್ ನಿಂದು ಪುಲಿಯಂ ಪಜ್ಜೆಯುಮಂ ಸೊಪ್ಪಾದ ಬಿಲನುಮಂ ಕಂಡು ಇದೆತ್ತಾನುಮೊಂದಪಾಯಮಾಗದೆ ಪೊಗದೆಂದು ಶಂಕಿಸಿ ಕಿಱೆದೆಡೆಯಂ ಪೆಱಮೆಟ್ಟಿ ಬಂದು ನಿಂದು ಈ ಚೋದ್ಯಮನುಪಾಯದೊಳೇ ನೋಡುವೆನೆಂದು ಬಿಲನಂ ಪೆಸರ್ಗೊಂಡು ಪಲವುಂ ಸೂೞ್ ಕರೆಯಲ್ ಆ ಬಿಲಂ ನುಡಿಯದಿರ್ಪುದುಂ ಬಿಲ್ಲನೆ ನೀನಿನಿತು ಕಾಲಂ ನಾಂ ಬರ್ಪಾಗಳಿದಿರ್ವಂದು ಸೇವೆಯಂ ಮಾಡುತ್ತಿರ್ದುಯ್ ಈಗಳದುಗೆಟ್ಟು ಕರೆದೊಡಂ ಮೊದಲಾಗಿ ಸರಂದೋಱೆದಪೆಯಿಲ್ಲ ಪೆಱನೋರ್ವಂಗೆ ಕೂರ್ತೆಯಕ್ಕುಂ ಮೇಣ್ ಬಲ್ಲಿದನಿರ್ದನಕ್ಕು ಮಲ್ಲದೊಡೀಗಳೇಕು ಸಿರರ್ದಿರ್ದಪೆ? ಅದೊಡಮೇಂ ನಿನ್ನ ಗುಣಕ್ಕಿನ್ನೊರ್ಮೆ ನಿನ್ನಲ್ಲಿಗೆ ಬರ್ಪೆನೆಂದು ಮತ್ತಂ ಬಿಲನಂ ಕರೆವುದುಂ ಪುಲಿ ಇದೆಲ್ಲಮಂ ಕೇಳ್ದು ಬಿಲನೆನಗೆ ಭಯಸ್ಥನಾಗಿ ಸರಂದೊ ಱಲಣ್ಮದಿರ್ದುದಾಗಲ್ವೇೞ್ಕು ಮಿನ್ನಾನಾದೊಡಂ ಸರಂದೊಱೆ ನರಿಯಂ ಬರಿಸಿ ತಿಂಬೆನೆಂಬೞೆವಗೆಯಂ ಬೇಡರಂತೆ ಬಗೆದು ಹೂಂಕಾರಂಗೆಯ್ವುದುಂ ಆ ಧ್ವನಿಯಂ ನರಿ ಕೇಳ್ದು ತನ್ನ ಬುದ್ದಿಗೆ ತಾನೆ ಮೆಚ್ಚಿ,

ಶ್ಲೋ|| ಅನಾಗತಂ ಯಃ ಕುರುತೇ ಸ ಶೋಭತೇ ನ ಶೋಭತೆ ಯೋ ನ ರೋತ್ಯನಾಗತಂವನೇ ವಸನ್ನತ್ರ ಜರಾಮುಪಾಗತೋ ಬಲಸ್ಯವಾಚೋ ನ ಕದಾನಚನಶ್ರುತಾಃ  ||೧೩||

ಟೀ|| ಅವನೊರ್ಬಂ  ಮೇಲಪ್ಪ ಕಜ್ಜವನಱೆದು ಮಾಡದಿರ್ದಪನವನನೊಪ್ಪಲಱೆಯೆಂ ನಾನೀ ವನದುರ್ಗದೊಳಿರ್ದು ರ್ವಾಕವನೆಯ್ದಿದೆಂ ಬಿಲದ ನುಡಿಯನೆಂದುಂ ಕೇಳ್ದುದಿಲ್ಲ. ಎಂದಿಂತು ಪಲಕಾಲಮೀ ವನದೊಳಿರ್ದುಂ ಈ ವನದೊಳಾಡಿಯಂ ಬಲ್ಲೆಂ ಬಿಲಂ ನುಡಿವುದಂ ಗಿಂಡಂಗಳ್ ನಡೆವುದಂ ನಾನೆಂದು ಕಂಡುಂ ಕೇಳ್ದುಮಱೆಯೆನೆಂದು ಆ ನರಿ ಬಗೆಯೊಳ್ ಪಿರಿಯನಪ್ಪುದಱೆಂ ತನ್ನ ಬುದ್ಧಿಗೆ ತಾನೆ ಮೆಚ್ಚಿ ಅಯೆಡೆಯಂ ಬಿಟ್ಟೋಡಿ ಬರ್ದುಂಕಿತು.

ಅಂತುಮಲ್ಲದೆಯುಂ ‘ಅತ್ಮಾರ್ಥಂ ಪೃಥಿವೀಂ ತ್ಯಜೇತ್ ತನ್ನ ನಿಮಿತ್ತಮಾಗಿ ಭೂಮಿಯಂ ಬಿಡುವುದೆಂಬ ನೀತಿಶಾಸ್ತ್ರಮುಂಟು. ತಾನುಳ್ಳೊಡೆ ಮೂರುಲೋಕಮುಂಟು ಎಂಬ ನಾಣ್ಣುಡಿಯುಂಟು. ಆತ್ಮರಕ್ಷಣಮೇ ಪರಮಪುರುಷಾರ್ಥಮೆಂಬ ಸರ್ವಜನಸವ್ಮ್ಮತಂಮಂ ಕೇಳ್ದುಂ ಕಂಡು ಮಱೆದುಮಿಂತಪ್ಪ ಸ್ಥಾನದೊಳೆಂತಿರ್ಪಮೆನೆ ದವನಕನಿಂತೆಂದಂ: ಇನಿತುವರಂ ದೇವರ ಮನದೊಳತಿಭಯಮುಳ್ಳೊಡಿದು ವಿಸ್ಮಯಮಪ್ಪುದಾದೊಡಂ ನಿಮಗಿನಿತು ಭಯಂ ಮಾಡಿದಂಗೆ ನೀಂ ಪೇಳ್ದಿ ಗುಣಂಗಳೊಳ ವಿಲ್ಲೆಂಬುದುಮಂ ಅವನೊರ್ವನೋ ಚತುರ್ಬಲಸಮೇತನೋ ಎಂಬುದುಮನಾರಯ್ದು ನಿಶ್ಚಯಂ ಶತ್ರು ಬಲವಂತನಾದುದನಱೆದಿಂ  ಬಳಿಕ್ಕಂ ಅದರ್ಕೆ ತಕ್ಕುದಂ ನೆಗೆೞ್ವೆನೆಂದು ಪಲವುಮುಪಾಯದಿಂ ತಿಳಿಪಿ ನಿಲಿಸಿ.

ಶ್ಲೋ || ಕ್ಷೀಣೇ ಕೋಶೇ ಪ್ರಜಾನಾಶೇ ಶತ್ರೌ ನಿಕಟವರ್ತಿನಿ
ನ  ಸ್ಥಾತವ್ಯಂ  ನ ಯೋದ್ಧವ್ಯಂ ತದ್ದೇಶಂ ಚ ಪರಿತ್ಯಜೇತ್  ||೧೪||

ಟೀ|| ಭಂಡಾರಂ ಸವೆದೆಡೆ ಪ್ರಜೆ ಕೆಟ್ಟೆಡೆ ಹಗೆ ಸಮೀಪವಾದೆಡೆಯಲ್ಲಿರಲಾಗದು. ಯುದ್ಧಂ ಮಾಡಲಾಗದು. ಆ ದೇಶಮಂ ಬಿಟ್ಟು ಪೋಪುದು ಎಂಬುದುನಱೆದು ಈ ನಯಂಗಳೊಳಗೆ ನಿನಗೆ ಶತ್ರುಸಂಕಟಮೆಂಬ ಶಂಕೆಯಿಲ್ಲದೆ ಸಪ್ತಾಂಗದೊಳೇಕಾಂಮಗಮಪ್ಪುದುಂ ವಿಕಳ ಮಾದುದಿಲ್ಲ. ಸಾಮಾದ್ಯುಪಾಯಂಗಳಿಂ ಶತ್ರುಗಳಂ ವಶಂ ಮಾಡಲಾರದೆ ಅಪಸರಣಮೇ ಶರಣಮಾಗಿರ್ದುದುವಂ ಪ್ರಯೋಗಿಸದೆ ಶಬ್ದಶ್ರವಣಮಾತ್ರಕ್ಕೆ ಭಯಂ ಗೊಂಡೋಡಿದಿರಪ್ಪೊಡೆ

ಶ್ಲೂ|| ಪೂರ್ವಮೇವ ಮಜ್ಞಾತಂ ಪುರ್ವಮೇತದ್ವಿವೇಚಿತಂ
ಅನುಪ್ರವಿಶ್ಯ ವಿಜ್ಞಾತಂ ಯಾವುದ್ದಾರು ಚ ಚರ್ಮ ಚ ||೧೫||

ಟೀ|| ಮುನ್ನಮಿದೆನ್ನಿಂದಱೆಯಲ್ಪಟ್ಟಿತು, ಮುನ್ನಮೆನಗೀಯವಸ್ಥೆಯೊಳಗೆ ಹೊಕ್ಕಱೆಯಲ್ಪಟ್ಟಿತು, ಮರನುಂ ತೊವಲುಂ ಎಂಬುದು-ಎಂಬ ಕಥೆಯಂತಕ್ಕುಮೆನೆ ಪಿಂಗಳಕನದೆಂತೆನೆ ದವನಕಂ ಪೇೞ್ಗುಂ :

೮೯. ಕಪಟಪ್ರಪಂಚಪರಿಣತನಾದ ಉಪಾಯ ನಿಪುಣ ಎಂಬ ಅಭಿದಾನದ ಒಮದು ಜಂಬುಕನು ಒಂದು ಪರ್ವತದ ತಪ್ಪಲಿನ ಬಿಲದಲ್ಲಿ ಅತ್ಯಂತ ಸಂತೋಷದಿಂದ ಮನೆ ಮಾಡಿಕೊಂಡಿತ್ತು. ಆ ಜಂಬುಕನು ಒಂದು ದಿನ ಆಹಾರವಿಹಾರಕ್ಕೆ ಹೋಗಲು ಅದರ ಬಿಲಕ್ಕೆ ಒಂದು ಹುಲಿ ಬಂದು ಹೊಕ್ಕಿತು, ಸ್ವಲ್ಪ ಹೊತ್ತಿನಲ್ಲೇ ಆ ನರಿ ಬಂದು ಬಾಗಿಲಲ್ಲಿ ನಿಂತು ಹುಲಿಯ ಹೆಜ್ಜೆಗಳನ್ನು ಹಾಳಾದ ಬಿಲವನ್ನು ಕಂಡು ಇದು ಎನೋ ಅಪಾಯವಲ್ಲದೆ ಇರದು ಎಂದು ಮನಸ್ಸಿನಲ್ಲಿ ಸಂದೇಹಿಸಿತು, ಸ್ವಲ್ಪ ಹಿಂದಕ್ಕೆ ಸರಿದು  ಈ ಚೋದ್ಯವನ್ನ್ನ ಉಪಾಯದಿಂದಲೇ ನೋಡುವನೆಂದು  ಬಿಲವನ್ನು ಹೆಸರಿಟ್ಟು ಹಲವು ಬಾರಿ ಕರಿಯಲು ಆ ಬಿಲವು ಮರುಮಾತು ಕೊಡಲಿಲ್ಲ. ೧ ಬಿಲನೆ ನೀನಿಷ್ಟು ಕಾಲ ನಾನು ಬರುವಾಗ ಇದಿರುಗೊಂಡು ಸೇವಿಸುತ್ತಿದೆ. ಈಗ ಅದನ್ನು ಬಿಟ್ಟು ಕರೆದರೂ ಮಾತನಾಡುವುದಿಲ್ಲ : ಬೇರೊಬ್ಬನನ್ನು ಪ್ರೀತಿಸಿರಬೇಕು ಅಲ್ಲದೆ ಅವನು ಬುದ್ಧಿವಂತನಿರಬೇಕು. ಅಲ್ಲದಿದ್ದಲ್ಲಿ ಈಗ ಏಕೆ? ಮಾತನಾಡದೆ ಇರುವೆ ! ಅದರೇನು ನಿನ್ನ ಗುಣಕ್ಕಾಗಿ ಇನ್ನೊಮ್ಮೆ ಕರೆಯುವೆ ಇನ್ನೂ ಮಾತನಾಡದಿದ್ದಲ್ಲಿ ಬೇರೊಂದು ಬಿಲವನ್ನು ಅರಸಿಕೊಳ್ಳುವೆ ; ಮಾತಾಡಿದರೆ ನಿನ್ನ ಬಿಲಕ್ಕೆ ಬರುವೆ ಎಂದು ಮತ್ತೊಮ್ಮೆ ಬಿಲವನ್ನು ಕರೆಯತೊಡಗಿತು. ಹುಲಿಯು ಇದನ್ನೆಲ್ಲ ಕೇಳಿ ಬಿಲವು ನನಗೆ ಹೆದರಿ ಮಾತಾಡದೆ ಸುಮ್ಮನಿದ್ದಿರಬೇಕು : ಇನ್ನು ನಾನಾದರೂ ಮಾತಾಡಿ ನರಿಯನ್ನು ಬರುವಂತೆ ಮಾಡಿ ತಿಂದು ಬಿಡುವೆ ಎಂದು ಹೀನಾಪೇಕ್ಷೆಯಿಂದ ದಡ್ಡರಂತೆ ಯೋಚಿಸಿ ಹೂಂಕರಿಸಲು  ಅ ಧ್ವನಿಯನ್ನು ನರಿಯು ಕೇಳಿ ತನ್ನ ಬುದ್ದಿಗೆ ತಾನೇ ಮೆಚ್ಚಿಕೊಂಡಿತು. ಶ್ಲೋ|| ಯಾವನು ಮೇಲಾದ ಕಾರ್ಯವನ್ನು ಅರಿತೂ ಮಾಡದಿರುವನೋ ಅವನನ್ನು ನಂಬುವುದು ಕಷ್ಟ ನಾನು ಈ ವನದುರ್ಗದಲ್ಲಿದ್ದು ವಾರ್ಧಕ್ಯವನ್ನು ಹೊಂದಿದೆ: ಬಿಲದ ನುಡಿಯನ್ನು ಎಂದೂ ಕೇಳಿಲ್ಲ. ಹೀಗೆ ಹಲವುಕಾಲ ಈ ವನದಲ್ಲಿದ್ದೂ ಈ ವನದಲ್ಲಿ ಆಡಿಯೂ ಬಲ್ಲೆ.  ಬಿಲ ನುಡಿಯುವುದನ್ನು, ಗಿಡಗಳು ನಡೆಯುವುದನ್ನು ನಾನು ಎಂದೂ ಕಂಡು ಕೇಳಿಯೂ ಅರಿಯೆನು. ಎಂದು ಆ ನರಿ ಮನಸ್ಸಿನಲ್ಲಿ ಹಿರಿಯನಾದುದರಿಂದ ತನ್ನ ಬುದ್ದಿಗೆ ತಾನೇ ಮೆಚ್ಚಿ ಆ ಎಡೆಯನ್ನೂ ಬಿಟ್ಟು ಓಡಿ ಬದುಕಿಕೊಂಡಿತು. ಆಲ್ಲದೆ‘ ಆತ್ಮಾರ್ಥಂ ಪೃಥಿವೀಂ  ತ್ಯಜೇತ್- ತನಗಾಗಿ  ಭೂಮಿಯನು ಬಿಡಬೇಕು- ಎಂಬ ನೀತಿಶಾಸ್ತ್ರವಿದೆ. ತಾನುಂಟೋ ಮೂರು ಲೋಕವುಂಟು, ಎಂಬ ನಾಣ್ಣುಡಿಯೂ ಇದೆ, ಆತ್ಮ ರಕ್ಷಣೆಯೇ ಪರಮಪುರುಷಾರ್ಥ ಎಂಬ ಸರ್ವಜನಸಮ್ಮತವನ್ನು  ಕೇಳಿಯೂ ಕಂಡೂ ಅರಿತೂ ಇಂಥ  ಅಪಾಯಕರವಾದ ಸ್ಥಳದಲ್ಲಿ ಹೇಗಿರಬಲ್ಲೆನು ? ಅದಕ್ಕೆ ದವನಕನು ಹೀಗೆಂದನು: ನಿಮಗೆ ಇಷ್ಟೊಂದು ಭಯವನ್ನುಂಟುಮಾಡಿದವನಲ್ಲಿ ನೀವು ಹೇಳಿದ ಗುಣಗಳು ಇವೆಯೋ ಇಲ್ಲವೋ ಎಂಬುದನ್ನು ಅವನೊಬ್ಬನೆ  ಚರ್ತುಬಲಸಮೆತನೋ ಎಂಬುದನ್ನೂ ವಿಚಾರಿಸಿ ನಿಶ್ಚಯವಾಗಿಯೂ ಶತ್ರುವು  ಅಕ ಬಲನೆಂದು ತಿಳಿದ ಮೇಲೆ ಅದಕ್ಕೆ ತಕ್ಕುದಾದುದನ್ನು ಮಾಡುವೆ ಎಂದು ಹಲವು ಉಪಾಯಗಳಿಂದ ತಿಳಿಸಿ ನಿಲ್ಲಿಸಿದನು. ಶ್ಲೋ|| ಭಂಡಾರ ಬರಿದಾದರೆ ಪ್ರಜೆಗಳು ನಾಶವಾದರೆ ಹಗೆಗಳು ಸಮೀಪದಲ್ಲಿದ್ದರೆ ಆ  ದೇಶದಲ್ಲಿರಬಾರದು: ಅಂಥಲ್ಲಿ ಯುದ್ದ ಮಾಡಬಾರದು  ಆ ದೇಶವನ್ನು ಬಿಟ್ಟುಹೋಗಬೇಕು ಎಂಬುದನ್ನು ತಿಳಿದು ಈ ನೀತಿಗಳಲ್ಲಿ ನಿನಗೆ ಶತ್ರು ಸಂಕಟ ಎಂಬ ಶಂಕೆಯಿಲ್ಲದೆ  ಸಪ್ತಾಂಗಗಳಲ್ಲಿ ಒಂದು ಅಂಗವೂ ಕೊರತೆಯಿಲ್ಲ. ಸಾಮಾದಿ ಉಪಾಯಗಳಿಂದ ಶತ್ರುಗಳನ್ನು ವಶಪಡಿಸಿಕೊಳ್ಳಲಾರದೆ ಓಡಿಹೋಗುವುದೇ ಶರಣಾಗಿರುವುದು. ಅದನ್ನೂ ಪ್ರಯೋಗಿಸದೆ ಶಬ್ದ ಶ್ರವಣ ಮಾತ್ರಕ್ಕೆ ಭಯಗೊಂಡು ಓಡಿದರೆ ಶ್ಲೋ|| ಮೊದಲೊಮ್ಮೆ ಇದು ನನಗೆ ಅನುಭವಕ್ಕೆ ಬಂದಿತು.  ಮೊದಲೊಮ್ಮೆ ನನಗೆ ಈ ಅವಸ್ಥೆಯ ಅರಿವಾಗಿತ್ತು: ಅದು ಮರ ಮತ್ತು ಅದರ ರೆಂಬೆಯೆಂಬುದು ಮತ್ತೆ ಅರಿವಾಯಿತು ಆ ಕಥೆಯಂತೆ ಅದೀತು ಎನ್ನಲು ಪಿಂಗಳಕನು ಅದೇನು ಎನ್ನಲು ದವನಕನು ಹೇಳುವನು.