ಮಹಾನದೀತೀರದೊಳಿರ್ಪುದೊಂದು ಮಹಾವಟವಿಟಪಿ ಕೋಟರಮೆ ಕುಲಾಯಮಾಗಿ ಕಾಕಮಿಥುನ ಮಿರ್ಕುಂ. ಅವಱ ತತ್ತಿಗಳನಾ ಮರದ ಮೊದಲ ಪುತ್ತನೊಳಿರ್ಪುದೊಂದು ಪಾವು ಪಲಕಾಲಂ ತಿನುತ್ತಿರೆ, ಆ ವಾಯಸಂ ತಪ್ತಾಯಸರಸಮಂ ಕುಡಿದಂತೆ ಮಲುಮಲನೆ ಮಱುಗಿ ಸೈರಿಸಲಾಱದೆ ಈ ಪಾವಿಂಗಾನಾವುದಾನುಮೊಂದುಪಾಯದೊಳ್ ಸಾವಂ ಮಾೞ್ಪೆನೆಂದು ತನಗೆ ಪರಮಮಿತ್ರನಪ್ಪುದೊಂದು ಜಂಬುಕನಲ್ಲಿಗೆ ವಂದು ಶೋಕಂಗೆಯ್ಯೆ: ಜಂಬುಕಂ- ಏಂ ಕಾರಣಂ ಶೋಕಂಗೆಯ್ದಪೆ ಎಂದು ಬೆಸಗೊಳೆ ವಾಯಸಂ ಪೇೞ್ಗುಂ: ಅನಿರ್ಪ ಮರದ ಮೊದಲ ಪುತ್ತಿನೊಳಿರ್ಪುದೊಂದು ಮಹಾಸರ್ಪನೆನ್ನ ಪೆಂಡತಿಯ ಪ್ರಸೂತಿಕಾಲಮಂ ಪಾರ್ದು ಪರಿತಂದು ತತ್ತಿಗಳಂ ತಿಂದೆನಗೆ ವಿಷಾದಂ ಮಾಡುತಿರ್ದಪುದದು ಕಾರಣಂ ನೀನೆನಗೆ ಪರಮಮಿತ್ರನಪ್ಪೊಡೆ ಉರಗನಂ ಕೊಲ್ವುಪಾಯಮಂ ಪೇಳಲ್ವೇೞ್ಟುದು ಎಂತುಂ ಸುಭಾಷಿತಮಿಂತೆಂಬುದಲ್ತೆ:

ಶ್ಲೋ|| ಆತುರೇ ವ್ಯಸನೇ ಪ್ರಾಪ್ತೇ ದುರ್ಭಿಕ್ಷೇ ಶತ್ರುವಿಗ್ರಹೇ
ರಾಜದ್ವಾರೇ ಶ್ಮಶಾನೇ ಚ ಯಸ್ತಿಷ್ಠತಿ ಸ ಬಾಂಧವಃ  ||೪೭||

ಟೀ|| ವ್ಯಾಯಲ್ಲಿ ಕ್ಲೇಶದಲ್ಲಿ, ಬಱಹಿನಲ್ಲಿ ಹಗೆಗಳ್ ಕೊಲಬಂದಲ್ಲಿ ಅರಮನೆಯ ದ್ವಾರದಲ್ಲಿ ಶ್ಮಶಾನದಲ್ಲಿ ತನಗಾದವರೇ ಬಂಧುಗಳ್- ಎಂದು ಪೇೞ್ದ ಸತ್ಪರುಷರ ಗುಣಮಂ ಕೈಕೊಂಡು ಎನ್ನ ಪಗೆ ಸಾಧ್ಯಮಪ್ಪಂತು ಮಾಡುವುದೆನೆ ನರಿ ಕರಮೊಳ್ಳಿತ್ತಂತೆಗೆಯ್ವೆನೆಂದೀ ಯೆಡೆಗೊಂದು ವಾಕ್ಯಮುಂಟದೆಂತನೆ :

ಶ್ಲೋ|| ಅತಿ ಲೌಲ್ಯಾದ್ಬಕಃ ಕಶ್ಚಿತ್ ಮೃತಃ ಕರ್ಕಟ ಸಂಗ್ರಹಾತ್ ||೪೮||

ಎಂಬ ಕಥೆಯಂ ಸರ್ಪಂಗಾಂ ಮಾೞ್ಪೆನೆನೆ ವಾಯಸನದೆಂತೆನೆ ಪೇೞ್ಗುಂ :

ಮಹಾ ನದೀತೀರದಲ್ಲಿರುವ ಒಂದು ಮಹಾವಟವೃಕ್ಷದ ಪೊಟ್ಟರೆಯನ್ನೇ ಮನೆಮಾಡಿಕೊಂಡು ಕಾಗೆಯ ದಂಪತಿಗಳಿದ್ದವು. ಅವುಗಳ ಮೊಟ್ಟೆಗಳನ್ನು ಆ ಮರದ ಬುಡದ ಹುತ್ತದಲ್ಲಿರುವ ಒಂದು ಹಾವು ಹಲವುಕಾಲದಿಂದ ತಿನ್ನುತ್ತಿರಲು, ಆ ವಾಯಸ ಕಾದ ಕಬ್ಬಿಣದ ರಸವನ್ನು ಕುಡಿದಂತೆ ಮಲುಮಲನೆ ಮರುಗಿ ಸಹಿಸಲಾಗದೆ ಈ ಹಾವನ್ನು ಏನಾದರೊಂದು ಉಪಾಯವನ್ನು  ಮಾಡಿ ಕೊಲ್ಲಬೇಕೆಂದು ತನಗೆ ಪರಮ ಮಿತ್ರನಾದ ಜಂಬುಕನಲ್ಲಿಗೆ  ಬಂದು ಶೋಕ ಮಾಡಿತು. ಜಂಬುಕನು ಯಾವ ಕಾರಣದಿಂದ ಶೋಕಿಸುವೆ ಎನ್ನಲು ವಾಯಸ ಹೇಳಿತು : ನಾನು ವಾಸವಾಗಿರುವ ಮರದ ಬುಡದ ಹುತ್ತದಲ್ಲಿರುವ ಒಂದು ಮಹಾ ಸರ್ಪವು ನನ್ನ ಹೆಂಡತಿಯ ಪ್ರಸೂತಿ ಕಾಲವನ್ನು ನಿರೀಕ್ಷಿಸಿ ಹರಿದು ಬಂದು ಮೊಟ್ಟೆಗಳನ್ನು ತಿಂದು ನನಗೆ  ವಿಷಾದವನ್ನಂಟುಮಾಡುತ್ತಿದೆ. ಅದಕ್ಕಾಗಿ ನೀನು ನನ್ನ ಪರಮಮಿತ್ರನಾದುದರಿಂದ ಈ ಉರಗವನ್ನು ಕೊಲ್ಲುವ ಉಪಾಯವನ್ನು  ಹೇಳಬೇಕು. ಶ್ಲೋ || ವ್ಯಾಯಲ್ಲಿ ಕಷ್ಟದಲ್ಲಿ ಬರಗಾಲದಲ್ಲಿ ಹಗೆಗಳು ಕೊಲ್ಲಲು ಬಂದಾಗ ಅರಮನೆಯ ದ್ವಾರದಲ್ಲಿ ಶ್ಮಶಾನದಲ್ಲಿ ತನಗೆ ಯಾರು ಸಹಾಯಕರಾಗುವರೋ ಅವರೇ ನಿಜವಾದ ಬಂಧುಗಳು ಎಂದು ಹೇಳಿದ ಸತ್ಪುರುಷರ ಮಾತನ್ನು ಕೇಳಿ ನನ್ನ ಕಾರ್ಯ ಕೈಗೊಡುವಂತೆ ಮಾಡಬೇಕು. ಆಗ ನರಿಯು, ಒಳ್ಳೆಯದು ಹಾಗೆಯೇ ಮಾಡುವೆ : ಈ ಸಂದರ್ಭಕ್ಕೆ ಒಂದು ಸೂಕ್ತಿ ಇದೆ ಎಂದು ಹೇಳತೊಡಗಿತು : ಶ್ಲೋ|| ‘ಅತಿಲೌಲ್ಯಾದ್ಬಕಃ ಕಶ್ಚಿತ್ ಮೃತಃ ಕರ್ಕಟಸಂಗ್ರಹಾತ್’ ಎಂಬ ಕಥೆಯನ್ನು ಸರ್ಪನಿಗೆ ನಾನು ಮಾಡುತ್ತೇನೆ ಎನ್ನಲು ವಾಯಸವು ಅದೇನೆಂದು ಕೇಳಲು ಜಂಬುಕ ಹೇಳತೊಡಗಿತು: ವ|| ದೊಡ್ಡ ಕಾಡಿನ ನಡುವೆಯೊಂದು ಸರೋವರವುಂಟು. ಅದರಲ್ಲಿ ಹಲವು ಮೀನುಗಳಿರುವುದನ್ನು ಒಂದು ಕೊಕ್ಕರೆ ಕಂಡಿತು. ಒಂದು ಉಪಾಯದಿಂದ  ತಾನು ಆ ಮೀನುಗಳನ್ನು ತಿಂದು ಕಾಲಕಳೆಯುವೆನೆಂದು ಆ ಕೊಕ್ಕರೆ ತಪಸ್ವಿಯ ರೂಪವನ್ನು ಧರಿಸಿತ. ಕಿರಿಯ ಮೀನುಗಳೆಲ್ಲ ಮುಗಿಯಲು ದೊಡ್ಡ ಮೀನುಗಳು ಸಿಗದಿರಲು ಈ ಮೀನುಗಳನ್ನು ಯಾವ ಉಪಾಯದಿಂದ ತಿನ್ನಲಿ ಎಂದು ನೀರಿನ ದಡದಲ್ಲಿ ಮೌನದಿಂದ ಜಾನಿಸುತ್ತಿತ್ತು. ಆ ಬಕನನ್ನು ಮೀನುಗಳು ಕಂಡು, ಸ್ವಾಮಿ ! ನೀವು ಹೀಗೆ ಚಿಂತಾಕ್ರಾಂತರಾಗಿರಲು ಕಾರಣವೇನೆಂದು ಕೇಳಿದುವು. ಅದಕ್ಕೆ ಬಕನು ಹೀಗೆಂದಿತು :