ವ||  ಮತ್ತಮದಲ್ಲದೆಯುಂ ಅರಸುಗಳ್ಗೆ ವಿರಸಮದವಸರದೊಳ್ ಚಾಗಿಯಂ ಲುಬ್ಧನೆಂಬರ್ ಭೋಗಿ ಯಪ್ಪನಂ ಪೂಜೆಗನೆಂಬರ್ ಸೌಭಾಗ್ಯಮುಳ್ಳವನಂ ಪಾಣ್ಬನೆಂಬರ್ : ತ್ಯಾಗಿಯಂ ಅರ್ಥದೂಷಕನೆಂಬರ್ ಅರ್ಥದೂಷಕನಂ ತ್ಯಾಗಿಯೆಂಬರ್: ಎಗೆಯ್ದುಂ ಪೆಱವೆಣ್ಗಾಟಿಸುವನಂ ಶುಚಿಯೆಂಬರ್: ಶುಚಿಯಂ ಅಶುಚಿಯೆಂಬರ್: ಧೂರ್ತನಂ ಛಾಂದಸನೆಂಬರ್; ಮೇಕುದೋಱೆ ಓರೊರ್ವರ ಗುಣಕ್ಕೆ ಮಚ್ಚರಿಸಿ ತೋಱುತ್ತಿರ್ಪರೀ ಕಾಲದರಸುಗಳ್ ಅದಲ್ಲದೆಯಂ

ಅಕ್ಕರ || ಒರ್ವನನೞ್ಗೆಪರೊರ್ವನ ಮುನ್ನಂ ಬೞೆಕ್ಕವನೊಳ್ಘುಣಂಗಳಂ
ಕೊರ್ವಿಪರೊರ‍್ವನ ನೋಡಿ ಸೈರಿಸದೆ ಪುರುಡಿಪಂತಿರೆ ಪೊರೆವರ್ ಮ-
ತ್ತೊರ್ವನಂ ಮುನಿಸಿನೊಳ್ ಕಳೆವರೞಂದೊರ್ವನಂ ಕೂ-
ರ್ತೊರ್ವನಂ ಕೂರದಂತಿರ್ಪರರಸುಗಳವಿಚಾರರಪ್ಪುದಱೆಂ  ೧೦೨

ತ್ರಿಪದಿ || ಹಿತವನತಿಭಕ್ತನನ್ವಿತನಿವಂ ಸುಭೃತ್ಯಂ
ಕೃತಕೃತ್ಯನೆನ್ನರ್ ಪಿಸುಣಿಂದೆ ಕಿಡಿಪರೀ
ಕ್ಷಿತಿಪತಿಗಳಿಂತವಿಚಾರದಿಂ  ೧೦೩

ಇಂತಪ್ಪವಿವೇಕಿಗಳುಮಜ್ಞಾನಿಗಳುಮಪ್ಪರಸುಗಳನೋಲೈಸುವುದರಿದು. ಎಂತುಂ ಸೇವಾವೃತ್ತಿಯೇ ಕಷ್ಟಮದೆಂತನೆ:

ಶ್ಲೋ || ಪ್ರಣಮತ್ಯುನ್ನತಿ ಹೇತೋರ್ಜೀವಿತ ಹೇತೋರ್ವಿಮುಂಚತಿ ಪ್ರಾಣಾನ್
ದುಃಖೀಯತಿ ಸುಖಹೇತೋಃ ಕೋ ಮೂಢಸ್ಸೇವಕಾದಪರಃ  ||೨೨||

ಟೀ|| ಉನ್ನತನಾಗಿರ್ಪೆನೆಂಬವಂ ತನ್ನೊಡೆಯಂಗೆ ಪೊಡೆಮಡವೇೞ್ಕುಂ ಜೀವಿತಮಂ ಕೊಂಡು ಬಾೞ್ವನೆಂಬವಂ ಪ್ರಾಣಮಂ ಕುಡಲ್ವೇೞ್ಕುಮದಲ್ಲದೆ ಸುಖಂಬಡೆವೆನೆಂಬವಂ ದುಃಖಂ  ಬಡುವನದು ಕಾರಣಂ ಓಲಗಿಪವನಿಂ  ಮೂಢನಾರುಮಿಲ್ಲ. ಮತ್ತಲ್ಲದೆಯುಂ,

ಶ್ಲೋ|| ಭೇತವ್ಯಂ ನೃಪತೇಸ್ತತಸ್ಸಚಿವತೋ ಧೂರ್ತಾಸ್ತತಸ್ಸೌಹೃದೋ
ಯೇ ದೈನ್ಯೇನ ಭವಂತಿ ಯಸ್ಯ ಭವನೇ ಲಬ್ದಪ್ರಸಾದಾ ವಿಟಾಃ
ಕೃಚ್ಛಾತ್ಮೋದರಪೂರಣಾರ್ಥಮನಿಶಂ ವ್ಯರ್ಥೀ ಕೃತಾಯಾಸತ
ಸ್ಸೇವಾಂ ಲಾಘವಕಾರಿಣೀಂ ಖಲು ಬುಧಾಃ ಸ್ಥಾನೇಶ್ವವೃತ್ತಿಂ ವಿದುಃ  ||೨೩||

ಟೀ|| ಸೇವಕಂ ಮೊದಲೊಳರಸಂಗಂ ತದನಂತರಂ ಪ್ರಧಾನರ್ಗಂ ಅರಸಿನ ಮಿತ್ರರ್ಗಂ ಸಲುಗೆಯನ್ನುಳ್ಳವರ್ಗಂ ಧೂರ್ತಜನಕ್ಕಂ ಭೀತನಾಗಿರವೇೞ್ಕುಂ ಅದಲ್ಲದೆ ತನ್ನ ದೈನ್ಯದಿಂ ಸುಖಂಬಡೆವೆನೆಂಬ ಲಂಪಳಿಕೆ ಯಾಯಾಸಮಹುದು. ಇಂತು ಲಘುತರಮಪ್ಪ ಸೇವೆಯಿಂ ತನ್ನಿಚ್ಛೆಯೊಳ್ ಬರ್ದುಂಕುವ ಶುನಕಂ ಲೇಸೆಂದು ವಿದ್ವಾಂಸರ್ ಪೇೞ್ವರ್ -ಎಂಬ ಪುರಾತನ ನೀತಿವಾಕ್ಯಮುಂಟುಪ್ಪುದ ಱೆಂ ಸೇವಾ ವೃತ್ತಿ ಕಷ್ಟಂ ರಾಜಸೇವೆಯೆಂಬುದು ಜೀವನೋಪಾಯಕ್ಕೆ ಕಾರಣಂ  ಎನಗೆ ಜೀವಿತಂ ಪುಲ್ಲುಂ ನೀರುಂ : ಇವುಳ್ಳೊಡೆ ಸಾಲ್ಗುಂ ಅವೀಗಳೆಲ್ಲಿಯುಂ ಸುಲಭಂ; ಅದಱೆನೋಲಗದೊಳಪ್ಪ ಸೌಖ್ಯಂ ಬಾರ್ತೆಯಿಲ್ಲಂ :ಎಂತುಂ,

೧೦೧. ಕುಲಹೀನನ್ನು ಕುಲಜಾತನೆನ್ನುವರು ಪರಾಕ್ರಮಿಯನ್ನು ಅತ್ಯಂತ ಹೇಡಿ ಎಂದು ಮಾತಾನಾಡುವರು. ಕಡುಹೇಡಿಯನ್ನು ಪರಮ ಪರಾಕ್ರಮಿಯೆನ್ನುವರು. ಎಲ್ಲರೂ ಒಪ್ಪುವಂತೆ ಸತ್ಯವನ್ನು ನುಡಿಯುವವನನ್ನು ಹುಸಿಕನೆನ್ನುವರು: ಸುಳ್ಳಿಗನನ್ನು ಭೂಮಿಯಲ್ಲಿ ಇವನಷ್ಟು ಸತ್ಯವಂತ ಬೇರೆಯಿಲ್ಲ ಎನ್ನುವರು. ಇದು ಅರಸರಿಗೆ ಸ್ವಾಭಾವಿಕ, ಇಂಥ ಅವಿವೇಕಿಗಳೂ ಅಜ್ಞಾನಿಗಳು ಅದ ಅರಸರ ಸೇವೆ ಮಾಡುವುದು. ಅಸಾಧ್ಯ. ವ || ಅಲ್ಲದೆ ಅರಸರಿಗೆ ವಿರಸವಾದ ಸಂದರ್ಭದಲ್ಲಿ ತ್ಯಾಗಿಯನ್ನು ಲುಬ್ಧನೆಂದು ಹೇಳುವರು. ಭೋಗಿಯನ್ನು  ಪೂಜಾರಿ ಎಂಬರು. ಸೌಭಾಗ್ಯಶಾಲಿಯನ್ನು ವ್ಯಭಿಚಾರಿ ಎನ್ನುವರು: ತ್ಯಾಗಿಯನ್ನು ಅರ್ಥದೂಷಕ ಎನ್ನ್ನುವರು . ಅರ್ಥದೂಷಕನನ್ನು  ತ್ಯಾಗಿ ಎನ್ನುವರು. ಎನು ಮಾಡಿದರೂ ಪರಸ್ತ್ರೀಯರನ್ನು ಬಯಸುವವರನ್ನು ಶುದ್ಧರು ಎನ್ನುವರು: ಶುದ್ಧರನ್ನು ಅಶುದ್ಧರು ಎನ್ನುವರು. ಧೂರ್ತನನ್ನು ವೇದವಿದನೆನ್ನುವರು ; ಸ್ಪರ್ಧೆಮಾಡಿ  ಒಬ್ಬೊಬ್ಬರ ಗುಣಕ್ಕೆ ಮತ್ಸರಿಸಿ ಈ ಕಾಲದ ಅರಸರು ತೋರಿಬರುವರು. ಅದಲ್ಲದೆ ೧೦೩. ಅರಸರು ಅವಿಚಾರಿಗಳಾದುದರಿಂದ ಮೊದಲು ಒಬ್ಬನನ್ನು ಕ್ಷೀಣವಾಗುವಂತೆ ಮಾಡುವರು : ಬಳಿಕ ಅವನ ಒಳ್ಳೆಯ ಗುಣಗಳನ್ನು ಕೊಬ್ಬಿಸುವರು. ಒಬ್ಬನನ್ನು ನೋಡಿ ಸಹಿಸದೆ ಸ್ಪರ್ಧೆಯೇಳುವಂತೆ ಕಾಪಾಡುವರು. ಮತ್ತೊಬ್ಬನನ್ನು ಮುನಿಸಿನಿಂದ ನಾಶ ಮಾಡುವರು. ಅಕ್ಕರೆಯಿಂದ ಒಬ್ಬನನ್ನು ಪ್ರೀತಿಸಿ ಮತ್ತೊಬ್ಬನನ್ನು ಪ್ರೀತಿಸದೆ ಇರುತ್ತಾರೆ. ೧೦೩. ಹೀಗೆ ಕ್ಷಿತಿಪತಿಗಳೂ ಅವಿಚಾರದಿಂದ ಹಿತನೂ, ಅತಿಭಕ್ತನೂ ಅನ್ವಿತನೂ ಸುಭೃತ್ಯನೂ ಕೃತಕೃತ್ಯನೂ ಆಗಿರುವನೂ ಎಂದು ಹೇಳುವುದಿಲ್ಲ ಚಾಡಿಯಿಂದ ಕೆಡಿಸುವರು. ವ|| ಇಂತಹ ಅವಿವೇಕಿಗಳೂ ಅಜ್ಞಾನಿಗಳೂ ಅದ ಅರಸರನ್ನು ಸೇವಿಸುವುದು ಅಸಾಧ್ಯ. ಹೇಗಿದ್ದರೂ ಸೇವಾವೃತ್ತಿಯೇ ಕಷ್ಟವಾಗಿದೆ. ಹೇಗೆಂದರೆ. ಶ್ಲೋ|| ಉನ್ನತನಾಗಿರುವೆನೆಂಬವನು ತನ್ನ ಒಡೆಯನಿಗೆ ಬಗ್ಗಿಕೊಂಡಿರಬೇಕು ಜೀವಿಸಿಕೊಂಡಿರುವನೆಂಬುವನು ಸಮಯ ಬಂದರೆ ಪ್ರಾಣವನ್ನೂ ಕೊಡಬೇಕು. ಸುಖಪಡಬೇಕೆಂಬುವವನು ದುಃಖವನ್ನು ಅನುಭವಿಸಬೇಕು, ಅದಕ್ಕಾಗಿ ಸೇವಕನಿಗಿಂತ ಮೂಢನಾದವನು ಯಾರು ಇಲ್ಲ. ಶ್ಲೋ|| ಸೇವಕನಾದವನು ಮೊದಲು ಅರಸನಿಗೂ ಅನಂತರ ಪ್ರಧಾನರಿಗೂ ಅರಸನ ಮಿತ್ರರಿಗೂ ಧೂರ್ತರಿಗೂ ಭೀತನಾಗಿರಬೇಕು ಅಲ್ಲದೆ ತನ್ನ ದೈನ್ಯದಿಂದ ಸುಖ ಪಡುವೆನೆಂಬವನು ಲಂಪಟತನದ ಕಷ್ಟವನ್ನು ಸಹಿಸಬೇಕು. ಇಂಥ  ಹಗುರವಾದ ಸೇವಾ ಕಾರ್ಯಕ್ಕಿಂತ ಸ್ವತಂತ್ರವಾಗಿ ಬದುಕುವ ನಾಯಿಯಾಗಿರುವುದು ಲೇಸು. ರಾಜಸೇವೆ ಜೀವನೋಪಾಯಕ್ಕಾಗಿ ನನಗೆ, ಪ್ರಾಣ, ಹುಲ್ಲು ನೀರು ಇವುಗಳಿದ್ದರೆ ಸಾಕು. ಅವು ಈಗ ಎಲ್ಲಿಲ್ಲಿಯೂ ಸುಲಭವಾಗಿ ದೊರಕುವುವು. ಅದಕ್ಕೇಕೆ ಓಲಗಕ್ಕೆ ಹೋಗಬೇಕು.

ಸಾಲದೆ ಸೋಲದೆ ಪೊಡೆಮ-
ಟ್ಟೋಲೈಸದೆ ನಿಚ್ಚವಯಣಮಿಲ್ಲದೆ ತನ್ನಿ-
ರ್ದಾಲಯದೊಳಿರ್ದು ಬಾೞ್ವುದೆ
ಭೂಲೋಕಮನಾಳ್ವ ಸೊಗದಿನಗ್ಗಳಮಲ್ತೇ ೧೦೪

ಎಂದು ಸಂಜೀವಕಂ ನುಡಿದ ಸಾಭಿಪ್ರಾಯವಚನಂಗಳಂ ದವನಕಂ ಕೇಳ್ದು ಚೋದ್ಯಂಬಟ್ಟು ಆಃ! ಇದು ಶಾಪೋಹತಮಾದ ಮಾನವನಾಗಲೇಂ ಕೇವಲಂ ವೃಷಭನಾಗಲಱೆಯದು. ಇದಱ ಮಾತಂ ಕೇಳ್ದೆನಗಂ ಮೊದಲಾಗಿ ಮನದೊಳ್ ಸಮ್ಮೋಹನಮಾದಪುದು, ಈ ಸಂಜೀವಕನುಯ್ದಾ ಪಿಂಗಳಕನೊಳ್ ಕೂಡಿ ಕೆಳೆಯನಂ ಮಾಡಿದೆನಪ್ಪೊಡಿದುವೇ ಪ್ರಧಾನನಕ್ಕಂ ಅದಂದು

ಶ್ಲೋ || ಏಕದ್ರವ್ವಾಭಿಲಾಷಿತ್ವಂ ಮಹತಾಂ ವೈರಕಾರಣಂ  ||೨೪||

ಟೀ|| ಒಂದೇ ಪದಾರ್ಥದಲ್ಲಿ ಆಶೆಪಡುವುದು ದೊಡ್ಡವರುಗಳಲ್ಲಿಯೂ ವೈರವನ್ನುಂಟು ಮಾಡುತ್ತದೆ. ಎಂಬಂತಿದಕಮೆನಗಂ ಬದ್ಧವೈರಮಕ್ಕುಂ. ಅದಱೆಂದೀತನನುಯ್ದು ಸ್ವಯಂಕೃತಾನರ್ಥಮಂ ಮಾಡಿಕೊಳ್ಳದಿದಾವ ಕಾರಣಯೆಂದಾತ್ಮಗತಂ ಬಗೆದು ಮತ್ತಮೀ ವೃಷಭನನಾಂ ತರ್ಪೆನೆಂದು ಪಿಂಗಳಕಂಗೆ ಪೂಣ್ಣು ಬಂದೀಗಳ್ ಸ್ವಾರ್ಥಮನಾಳೋಚಿಸಿ ಪುರುಷಾರ್ಥಮಂ ಬಿಸುಟೆನಪ್ಪೊಡೆ.

ಶ್ಲೋ || ಪ್ರಾರಬ್ಧಸ್ಯಾಂತಗಮನಂ ಮಹಾ ಪುರುಷ ಲPಣಂ ||೨೫||

ಟೀ|| ತೊಡಗಿದ ಕೆಲಸವನ್ನು ಕೊನೆಗಾಣಿಪುದೇ ಮಹಾಪುರುಷರ ಲಕ್ಷಣವು ಎಂಬುದು ಕಿಡುಗುಂ-ತುದಿಯೊಳ್ ಎನಗಪ್ಪು ದಾಗಲೀಗಳೀತನನೇತೆಱದೊಳಾದೊಡಮೊಡಂಬಡಿಸಿ ಪಿಂಗಳಕನಲ್ಲಿಗಯ್ವೆನೆಂಬುದನೆ ನಿಶ್ಚಯಿಸಿ ಸಂಜೀವಕಂಗಿಂತೆಂದಂ: ನೀನಪ್ಪೊಡೆ ಪಶು: ನಿನ್ನಂ ಮತ್ತೊರ್ವಂ ರಕ್ಷಿಸದಂದು ನಿನಗೆ ಕ್ಷುದಮೃಗೋಪದ್ರವಮಕ್ಕುಮೆಂದು ಪೇೞ್ವೆಂ ಅದಲ್ಲದೆಯುಂ ದೃಢಕಠಿನದೇಹನಪ್ಪ ನಿನ್ನಂ ಕಂಡಾ ಸಿಂಹಂ ಇದೊಂದಪೂರ‍್ವಮೃಗಮೆಂದು ಮುಳಿದಂದು ಜವಂ ಮುಳಿದಂತಕ್ಕುಮೆಂದು ಹಿತವಂ ಬಗೆದೊಡಂಗೊಂಡು ಪೋದಪೆನಲ್ಲದೆ ನಿನ್ನಿಂದಮೆನ್ನಾಳ್ದಂಗಮೊಂದು ವಸ್ತುಸಾಧ್ಯಮಕ್ಕುಮೆಂದು ಯ್ವೆನಿಲ್ಲ ನೀನಮೋಘಂ ರಾಜದರ್ಶನಂಗೆಯ್ದುದುಚಿತಮದೆಂತನೆ :

ಶ್ಲೋ || ಗಂತವ್ಯಾ ರಾಜಸಭಾದ್ರಷ್ಟವ್ಯಾ ರಾಜಪೂಜಿತಾಃ ಪುರುಷಾಃ
ಯದ್ಯಪಿ ನ ಭವೇದರ್ಥೋ ಭವೇದನರ್ಥ ಪ್ರತೀಕಾರಃ ||೨೯||

ಟೀ ||  ನೃಪಸಭೆಯನೈದಲೆವೇೞ್ಕುಂ ನೃಪರ್ ಮನ್ನಿಸುವ ಪುರುಷರಂ ಕಾಣಲೆವೇೞ್ಕುಂ  ಎತ್ತಲಾನು ಮರ್ಥವಿಲ್ಲದಿರ್ದೊಡಂ ತನಗೆ ಬಂದನರ್ಥಮಂ ಪರಿಹರಿಸಲ್ ಬಹುದು ಎಂಬ ರಾಜನೀತಿಯುಂಟು. ಇದನಱೆವೊಡೆ ನೀನೆನ್ನ ಬುದ್ಧಿಯಮಂ ಕೇಳ್ದು ಸುಖಂಬಾಳ್ವೊಡೆ ಎನ್ನಾಳ್ದನಂ ಕಂಡು ನಿಶ್ಚಿಂತ ಪಿರ್ಪೆಯಾದೊಡೆ ಎನ್ನೊಡನೆ ಬಹುದೊಳ್ಳಿತೆಂದು ನಯಭಯಮಂ ತೋಱೆ ನುಡಿದ ದವನಕನ ನುಡಿಗೆ ಸಂಜೀವಕಂ ಕರಮೊಳ್ಳಿತೆಂದಳ್ಳಿ ನೀನೆಂತುಮೆನ್ನನುಯ್ದಲ್ಲದೆ ಮಾಣೆಯಪ್ಪೊಡೆ ನಿನ್ನಾಳ್ದ ನೊಳಭಯವಚನಮಂ ಪಡೆದು ಬಂದೆನ್ನನೊಡಗೊಂಡು ಪೋಗೆಂಬುದುಂ,ದವನಕನಂತೆಗೆಯ್ವೆನೆಂದು ಬರುತ್ತೆ ‘ ಮಱೆದ ಬಿಲ್ಗೆ ಮೂವರಂಜಿದರ್ ಎಂಬ ನಾೞ್ನುಡಿಯಿವರೊಳ್ ಕಾಣಲಾದುದೆಂದು ನಗುತ್ತುಂ ಬರ್ಪ ನರಿಯಂ ಪಿಂಗಳಕಂ ದೂರಾಂತರದೊಳ್ ಕಂಡಿವಂ ತಡೆದು ಬರ್ಪ ಬರವೇ ಕಾರ‍್ಯಸಿದ್ಧಿಯಂ ಪೇೞಪ್ಪುದೆಂದು ಬಗೆವಿನಮೆಯ್ದೆವಂದು ಪೊಡೆವಟ್ಟ ದವನಕನ ಮೊಗಮಂ ನೋಡಿ ನಾಡಿಯುಂ ತಡೆದೆಯೆಂಬುದುಮಾ ದವನಕನಿಂತೆಂದ:  ಮಹಾಭದ್ರಕಾರನಂ ರೌದ್ರಕೋಪಾಟೋಪನನೇ ಕೋಪಾಯದಿನೆಂತಾನುಂ ಸಂಧಾನಕ್ಕೊಡಂಬಡಿಸಿದೊಡೆ ಮತ್ತಮಾ ಧೂರ್ತನೆೞ್ತ್‌ನಂದಮನೆ ಮಾಡಿ ಮರ‍್ಯಾದೆಯೊಳೆರ್ಮೆಯೊಡಂಬಟ್ಟು ಒರ್ಮೆಯೊಡಂಬಡದೆಯುಂ ಬಳಗಮಿಕ್ಕಿ ಕಾಡಿದೊಡೆ ಮತ್ತಮೆಂತಾನುಮೊಡಂಬಡಿಸಿ ದೇವರ  ಶ್ರೀಪಾದಮಂ ಕಾಣಲ್ವರ್ಪಂತು ಮಾಡಿದೆಂ ಇದೆಲ್ಲಮಂ ದೇವರ್ಗೆ ಪೂರ‍್ವಸೂಚನೆಗೆಯ್ದು ಬೞೆಕ್ಕೊಡಗೊಂಡು ಬರ್ಪೆನೆಂದು ಬಂದೆಂ  ದೇವರುಮಾ ಸಂಜೀವಕಂ ಬಂದು ಕಾಣಲೊಡಂ ಪರಮಮಿತ್ರನಂ ಕಂಡಂತೆ ಸಂಭ್ರಮವೆರಸು ಮನ್ನಿಸಿ ಸಂಭಾಷಣಂಗೆಯ್ವುದೆನೆ ಪಿಂಗಳಕನಂತೆಗೆಯ್ವೆಂ ನೀನೀಗಳೇ ಪೋಗಿ ಬೇಗಮೊಡಗೊಂಡು ಬರ್ಪುದೆನೆ ದವನಕಂ ಸಂಜೀವಕಲ್ಲಿನಗೆಯ್ದಿವಂದು

ಕರುಣಂಗೆಯ್ದಂ ಮೃಗಗಣ
ಪರಿವೃಢನಿನ್ನಂಜವೇಡವಾದಂ ಪ್ಯಣ್ಯಂ
ದೊರೆಕೊಂಡುದು ನಿನಗೀಗಳ್
ಶರಣಾಗತವಜ್ರಪಂಜರಂ ಪಿಂಗಳಕಂ  ೧೦೫

ಎಂದು ಪಲವು ತೆರದಿಂ ಸಂಜೀವಕನೊಳಾದ ಭಯಂ ಪತ್ತುವಿಡೆ ಸಂತಸಂಬಡೆ ನುಡಿದೊಡಂಗೊಂಡು ಬಂದು ದೇವಾ ಸಂಜೀವಕಂ ಬಂದನೆಂದು ಬಿನ್ನಪಂಗೆಯ್ವದುಮಾ ಮೃಗೇಂದ್ರನಿಂದ್ರಪದವಿ ಕೈಸಾರ್ದಂತೆ ಪರಮಾನಂದಮನೆಯ್ದಿ ತಂದು ಕಾಣಿಸೆಂಬುದುಂ ದವನಕಂ ಪಡಿಯಱಂಬೆರಸು ಪೋಗಿ ಸಂಜೀವಕನಂ ಕಾಣಿಸಲೊಡಂ ಮೃಗೇಂದ್ರಂ ವೃಷಭೇಂದ್ರನ ಮೊಗಮನಾದರಂಬೆರಸು ನೀಡುಂ ಭಾವಿಸಿ ನೋಡಿ ಪೀಠಾಂತರಕ್ಕೆ ಕರೆದು,

ಉದಿತಸ್ಮೇರನಿಭೇಂದ್ರವೈರಿ ನಯದಿಂ  ಕೈನೀಡಿ ಗೋಮುಖ್ಯ ಬ-
ಲ್ಲಿದಿರೇ ಸಂತಸಮೇ ಕಂ ಕುಶಲಮೇ ಕ್ಷೇಮಾಂಗಮೇ ದೇವ ಸಂ-
ಪದಮುಂ ಬಲ್ಲಿದೆವಾಂ ಕರಂ ಕುಶಲಮುಂ ಕ್ಷೇಮಾಂಗಮೀಗಳ್ ಭವ-
ತ್ಪದಪಂಕೇಜವಿಳೋಕನಜಾತದಯೆಯಿಂದಾದೆಂ ಮೃಗಾಶ್ವರಾ ೧೦೬

ಸದಯಂ  ಮುಕ್ತಭಯಂ ನಮದ್ದವನಕಾಸ್ಯಾಲೋಕನಸ್ಮೇರ ಸ-
ದ್ವದನಂ ಸ್ವಾಗತಪೂರ‍್ವಾಮಾತ್ಮಕರಮಂ ಸಂಜೀವಕಂಗೊಲ್ದು ನೀ-
ಡಿದನುದ್ಭಿನ್ನಮದಾಂಧಸಿಂದುರಘಟಾಸಂಘಟ್ಟಕುಂಭಾಗ್ರನಿ-
ರ‍್ಯದಸೃಕ್ಕುಂಕುಮಪಂಕಪಂಕಿಳಸಟಾಳಂ ಮೃಗಾಶ್ವರಂ  ೧೦೭

ಅಂತು ಸಮದಕುಂಜರಘಟಾಪುಂಜ ಭಂಜನಂ ಮೃಗಾರಾಜಂ ಕೈನೀಡಿ ಸಂಜೀವಕನ ನನೇಕ ಪ್ರಕಾರ ಸನ್ಮಾನ ಕ್ರಿಯೆಗಳಿಂ ತಣಿಪಿ ಬೞೆಕ್ಕಿಂತೆಂದಂ :

ಶರಭವ್ಯಾಘೋಗ್ರಖಡ್ಗಿಪ್ರಕರ ಖರ ಭಯಾಕ್ರಾಂತಮಂ ಕ್ರೂರವಾನೇ
ಚರಚಂಚಚಾಪಮೌರ್ವೀರವಬರಿತದಿಕ್ಚಕ್ರಮಂ ಸಿಂಹಸಂಘಾ-
ತರವೈಕಾಭೀಳಮಂ ಭೀಕರ ಕುಧರ ಗುಹಾರೌದ್ರಮಂ ಘೋರಮಾದ್ಯ-
ದ್ದ್ವಿರದವವ್ಯಾಕೀರ್ಣಮಂ ನಿರ್ಜನವನಮನಿದಂ ಬಂದು ನೀನೆಚಿತು ಪೊಕ್ಕೈ  ೧೦೮

ಎಂದು ಬೆಸಗೊಳ್ವುದುಂ ಸಂಜೀವಕನಾತ್ಮೀಯ ವನಪ್ರವೇಶಕಾರಣಂ ಸಪ್ರಪಂಚಂ ಬಿನ್ನಪಂಗೆಯ್ಯೆ ಪಂಚಾನನಂ ಕೇಳ್ದಿಂತೆಂದಂ:

೧೦೪. ಸಾಲದೆ ಸೋಲದೆ ಬಾಗಿ ವಂದಿಸಿ ಸೇವೆ ಮಾಡದೆ ನಿತ್ಯ ಪ್ರಯಾಣವಿಲ್ಲದೆ ತನ್ನ ಮನೆಯಲ್ಲಿದ್ದು ಬಾಳುವುದೇ  ಭೂಲೊಕವನ್ನು ಅಳುವ ಸುಖಕ್ಕಿಂತ ಶ್ರೇಷ್ಟವಾದುದಲ್ಲವೇ? ವ || ಸಂಜೀವಕನು ನುಡಿದ ಸಾಭೀಪ್ರಾಯ ವಚನಗಳನ್ನು ಅಳುವ ಸುಖಕ್ಕಿಂತ ಶ್ರೇಷ್ಟವಾದುದಲ್ಲವೇ? ವ|| ಸಂಜೀವಕನು ನುಡಿದ ಸಾಭಿಪ್ರಾಯವಚನಗಳನ್ನು ಕೇಳಿ ದವನಕನು ಆಶ್ಚರ್ಯಪಟ್ಟು ಆಃ ಇದು ಶಾಪಗ್ರಸ್ತವಾದ ಮಾನವನಾಗಿರಲೇಬೇಕು. ಇದು ಕೇವಲ  ವೃಷಭವಲ್ಲ ಇದರ ಮಾತನ್ನೂ ಕೇಳಿದ ನನಗೂ ಮನಸ್ಸಿನಲ್ಲಿ ಸಮ್ಮೋಹನ ಮೊಳೆಯುತ್ತಿದೆ. ಈ ಸಂಜೀವಕನು ಕರೆದುಕೊಂಡು ಹೋಗಿ ಆ ಪಿಂಗಳಕನೊಡನೆ ಸಂದರ್ಶನ ಮಾಡಿಸಿದರೆ ಇವನೇ ಪ್ರಧಾನಾದಾನು ! ಶ್ಲೋ||  ಏಕದ್ರವ್ಯಾಭಿಲಾಷಿತ್ವಂ ಮಹತಾಂ ವೈರಕಾರಣಂ ಒಂದೇ ವಸ್ತುವಿಗೆ ಆಸೆಪಡುವುದು ದೊಡ್ಡವರಲ್ಲಿಯೂ ವೈರವನ್ನಂಟುಮಾಡುತ್ತದೆ ಎಂಬಂತೆ ಇದಕ್ಕೂ ನನಗೂ ಅಕಾರಣವಾಗಿ ಬದ್ಧ ವೈರ ಸಂಭವಿಸುವುದು, ಅದರಿಂದ ಈತನನ್ನು ಕರೆದುಕೊಂಡು ಹೋಗಿ ಸ್ವಯಂಕೃತವಾದ ಅನರ್ಥವನ್ನು ಏಕೆ ತಂದುಕೊಳ್ಳಬೇಕು ಎಂದು ಮನಸ್ಸಿನಲ್ಲಿಯೇ ಯೋಚಿಸಿದನು. ಈ ವೃಷಭನನ್ನೂ ನಾನು ತರುವೆನು ಎಂದು ಪಿಂಗಳಕನಿಗೆ ಮಾತು ಕೊಟ್ಟು ಬಂದು ಈಗ ಸ್ವಾರ್ಥದಿಂದ ಪುರುಷಾರ್ಥವನ್ನು ತ್ಯಜಿಸುವುದು ತರವಲ್ಲ. ಶ್ಲೋ || ಪ್ರಾರಬ್ಧ ಸ್ಯಾಂತಗಮನಂ ಮಹಾಪುರುಷ ಲPಣಂ -ತೊಡಗಿದ ಕೆಲಸವನ್ನು ಕೊನೆಗಾಣಿಸುವುದೇ ಮಹಾಪುರುಷರ ಲಕ್ಷಣ ಎಂಬುದು ಕೆಡುವುದು, ಕೊನೆಯಲ್ಲಿ ನನಗೆ ಏನೇ ಆಗಲಿ : ಇವನನ್ನು ಯಾವ ರೀತಿಯಿಂದಲಾದರೂ ಒಡಂಬಡಿಸಿ ಪಿಂಗಳಕನಲ್ಲಿಗೆ ಕರೆತ ರುವೆನೆಂದು ನಿರ್ಧರಿಸಿ ಸಂಜೀವಕನಿಗೆ ಹೀಗೆಂದನು ನೀನು ಪಶು ನಿನ್ನನ್ನೂ ಮತ್ತೊಬ್ಬನು ಯಾರಾದರೂ ರಕ್ಷಿಸದಿದ್ದರೆ ನಿನಗೆ ಕ್ಷುದ್ರಮೃಗಗಳ ಉಪದ್ರವ ತಪ್ಪಿದ್ದಲ್ಲ ಅಲ್ಲದೆ ದೃಢಕಠಿನದೇಹಿಯಾದ ನಿನ್ನನ್ನು ಕಂಡು ಈ ಸಿಂಹ ಇದೊಂದು ಅಪೂರ್ವ ಮೃಗವೆಂದು  ಮುಳಿದರೆ ಯಮನ ಕೋಪಕ್ಕೆ ತುತ್ತಾದಂತೆಯೇ  ಸರಿ ಎಂದು ಹಿತವನ್ನು ಬಗೆದು ಒಡಗೊಂಡು ಹೋಗುವೆನಲ್ಲದೆ ನಿನ್ನಿಂದ  ನನ್ನ ಒಡೆಯನಿಗೆ ಏನಾದರೂ ಪ್ರಯೋಜನವಾದೀತೆಂದು ನಾನು ನಿನ್ನನ್ನು ಕರೆದುಕೊಂಡು ಹೋಗುತ್ತಿಲ್ಲ! ನೀನು ಕೂಡಲೇ ರಾಜನನ್ನು  ಕಾಣುವುದು ಉಚಿತ. ಶ್ಲೋ|| ನೃಪಸಭೆಯನ್ನು ಪ್ರವೇಶಿಸಲೇ ಬೇಕು; ನೃಪರು ಮನ್ನಿಸುವ ಪುರುಷರನ್ನು ಕಾಣಲೇಬೇಕು. ಇದರಿಂದ ಪ್ರಯೋಜನವಿಲ್ಲದಿದ್ದರೂ ತನಗೆ ಬಂದ ಅನರ್ಥವನ್ನು ಪರಿಹರಿಸಿಕೊಳ್ಳಬಹುದು ಎಂಬ ರಾಜನೀತಿಯುಂಟು. ನೀನು ನನ್ನ ಬುದ್ದಿವಾದವನ್ನು ಕೇಳುವಿಯಾದರೆ ಸುಖವಾಗಿ ಬಾಳಬೇಕೆಂದಿದ್ದರೆ ನನ್ನ ಒಡೆಯನನ್ನ ಕಂಡು ನಿಶ್ಚಿಂತನಾಗಿರಬೇಕೆಂದಿದ್ದರೆ ನನ್ನೊಡನೆ ಬರುವುದು ಒಳ್ಳೆಯದು. ಹೀಗೆ ನಯಭಯವನ್ನು  ತೋರಿಸಿ ನುಡಿದ ದವನಕನ ಮಾತಿಗೆ ಸಂಜೀವಕನು ಹಾಗೇಯೇ ಆಗಲಿ ಎಂದು ಹೀಗೆಂದನು: ನೀನು ಎಂತೂ ನನ್ನನ್ನು ಕರೆದುಕೊಂಡು ಹೋಗದೆ ಬಿಡುವವನಲ್ಲವಾದರೆ ನಿನ್ನ ಅರಸನಿಂದ ಅಭಯವಚನವನ್ನು  ಪಡೆದು ಬಂದು ನನ್ನನ್ನೂ ಕರೆದುಕೊಂಡು ಹೋಗು. ಹಾಗೆಯೇ ಆಗಲಿ ಎಂದು ದವನಕನು ‘ಮುರಿದ  ಬಿಲ್ಲಿಗೆ ಮೂವರು ಅಂಜಿದರು ಎಂಬ ನಾಣ್ನುಡಿ ಇವರಲ್ಲಿ ಕಂಡು ಬಂತು ಎಂದು ನಗುತ್ತ ಬರುತ್ತಿದ್ದ ನರಿಯನ್ನು ಪಿಂಗಳಕನು ದೂರದಿಂದ ಕಂಡು ಇವನು ನಿಧಾನವಾಗಿ ಬರುವ ರೀತಿಯೇ ಕಾರ್ಯಸಿದ್ಧಿಯನ್ನು ಸೂಚಿಸುವುದು ಎಂದು ಅಲೋಚಿಸುತ್ತಿರಲು ಬಂದು ನಮಸ್ಕರಿಸಿ ದವನಕನ ಮುಖವನ್ನು ನೋಡಿ ಬಹಳ ತಡವಾದುದೇಕೆ ಎನ್ನಲು ದವನಕನು ಹೀಗೆ ಹೇಳಿದನು: ಮಹಾಭದ್ರಕಾರನನ್ನು ರೌದ್ರಕೋಪಾಟೋಪವನ್ನು ಅನೇಕ ಉಪಾಯಗಳಿಂದ  ಹೇಗೋ ಸಂಧಾನಕ್ಕೆ ಒಪ್ಪಿಸಿ ದೇವರ ಶ್ರಿಪಾದವನ್ನು ಸಂದರ್ಶಿಸುವಂತೆ ಮಾಡಿದೆ. ಇದೆಲ್ಲವನ್ನೂ ದೇವರಿಗೆ ಪೂರ್ವಸೂಚನೆ ಕೊಟ್ಟು ಬಳಿಕ ಕರೆತರುವೆನೆಂದು ಬಂದೆ . ಪ್ರಭುಗಳು ಆ ಸಂಜೀವಕನೂ ಬಂದಾಗ ಪರಮಮಿತ್ರರನ್ನು ಕಾಣುವಂತೆ ಸಂಭ್ರಮದಿಂದ ಮನ್ನಿಸಿ ಮಾತನಾಡಿಸಬೇಕು ಪಿಂಗಳಕನು  ಹಾಗೇಯೇ ಆಗಲಿ ಎನ್ನಲು ದವನಕನು ಸಂಜೀವಕನಲ್ಲಿಗೆ ಬಂದು,೧೦೫, ಮೃಗಾರಾಜನು ಕರುಣೆದೋರಿದನು. ಇನ್ನು ಅಂಜದಿರು ನೀನು  ಪುಣ್ಯವಂತ ನಮ್ಮರಸನು ಶರಣಾಗತ ವಜ್ರಪಂಜರ ಎಂದು ಸಂಜೀವಕನ ಭಯವನ್ನು ಪರಿಹರಿಸಿದನು. ವ|| ಅಲ್ಲಿಂದ ಪಿಂಗಳಕನಲ್ಲಿಗೆ ಸಂಜೀವಕನನ್ನು ಕರೆದುಕೊಂಡು ಬಂದು ದೇವಾ ! ಸಂಜೀವಕನು ಬಂದನು ಎನ್ನಲು ಆ ಮೃಗೇಂದ್ರನು ಇಂದ್ರಪದವಿ ಸಿಕ್ಕಿದವನಂತೆ ಪರಮಾನಂದಭರಿತನಾಗಿ ಅವನನ್ನು ಕರೆದುಕೊಂಡು ಬಾ ಎಂದನು. ದವನಕನು ಪ್ರತೀಹಾರಿಯೊಡನೆ ಹೋಗಿ ಸಂಜೀವಕನು ಕಾಣಿಸಲು ಮೃಗೇಂದ್ರನು ವೃಷಭೇಂದ್ರನ ಮುಖವನ್ನು ಆದರದಿಂದ ಚೆನ್ನಾಗಿ   ನೋಡಿ ತನ್ನ ಪಾದಪೀಠಾಂತರಕ್ಕೆ ಕರೆದು ಪ್ರೀತಿಯಿಂದ ಕೈನೀಡಿ ಹೀಗೆಂದನು: ೧೦೬. ಗೋಮುಖ್ಯನೇ ! ಸಂತೋಷವೇ, ಕುಶಲವೇ, ಕ್ಷೇಮವೇ? ಅದಕ್ಕೆ ಸಂಜೀವಕನು, ದೇವಾ ! ನಿಮ್ಮ ಸಂಪದವನ್ನೂ ಬಲ್ಲೆವು. ನಾವು ನಿಮ್ಮ ಪಾದಪಂಕೇಜವಿಳೋಕ ಜಾತದಯೆಯಿಂದ ಕುಶಲರಾದೆವು ಎಂದನು. ೧೦೭.ಸದಯನೂ, ಭಯಮುಕ್ತನೂ, ಮದಾಂಧಸಿಂಧುರಘಟಾಸಂಘಟ್ಟಕುಂಭಾಗ್ರ ನಿರ್ಯದಸೃ ಕ್ಕುಂಕುಮಪಂಕಳಸಟಾ ಜಾಳನೂ ಆದ ಮೃಗಾಶ್ವರನು ಸ್ವಾಗತಪೂರ್ವಕವಾಗಿ ತನ್ನ ಕರವನ್ನು ಸಂಜೀವಕನಿಗೆ ಒಲಿದು ನೀಡಿದನು. ವ|| ಹಾಗೆ ಸಮದಕುಂಜರಘಟಾಪುಂಜಭಂಜನನಾದ ಮೃಗರಾಜನು ಕೆನೀಡಿ ಸಂಜೀವನನ್ನು ಅನೇಕ ಪ್ರಕಾರ ಸನ್ಮಾನಕ್ರಿಯೆಗಳಿಂದ ತೃಪ್ತಿಪಡಿಸಿ ಬಳಿಕ ಹೀಗೆಂದನು : ೧೦೮. ಶರಭ, ವ್ಯಾಘ್ರ, ಖಡ್ಗ ಮೃಗಗಳ ಸಮೂಹದಿಂದ ಕ್ರೂರವೂ ಭಯಂಕರವೂ, ದುಷ್ಟರಾದ ಬೇಡರ ಹೊಳೆಯುವ ಬಿಲ್ಲಿನ ಹಗ್ಗದ ಟಂಕಾರದಿಂದ ಕಿವುಡಾದ ದಿಕ್ಕುಗಳೂ, ಸಿಂಹಸಮೂಹ ವೊಂದರಿಂದಲೇ ಭಯಂಕರವಾಗಿಯೂ, ಭಯಂಕರ ಪರ್ವತ ಗುಹೆಗಳಿಂದ ರೌದ್ರವೂ, ಘೋರವಾದ   ಮದ್ದಾನೆಗಳಿಂದ ತುಂಬಿರುವುದೂ, ನಿರ್ಜನವೂ ಆದ ಈ ವನವನ್ನು ನೀನು ಹೇಗೆ ಪ್ರವೇಶಿಸಿದೆ ವ|| ಎಂದು ವಿಚಾರಿಸಲು ಸಂಜೀವಕನು ತನ್ನ ವನ ಪ್ರವೇಶಕಾರಣವನ್ನು ವಿವರವಾಗಿ ಬಿನ್ನೈಸಲು ಸಿಂಹನು ಕೇಳಿ ಸಂಜೀವಕನಿಗೆ ಈ ರೀತಿ ಹೇಳಿದನು:

ಕ್ರೂರ ವನೇಚರ ಪ್ರಕರಮಂ ದ್ದಿರದೋತ್ಕರಮಂ ಭಯಂಕರಾ-
ಕಾರ ಚಮೂರುಸಂಕುಳಮನುದ್ಧತ ಭೀಕರ ಸೂಕರಾಳಿಯಂ
ಸಾರದೆ ಭದ್ರ ನೀನಿರು ಮದೀಯ ಭುಜಾಪರಿಪಾಲಿತೋರು ಕಾಂ-
ತಾರದೊಳಚ್ಛನೀರದೊಳನೇಕತೃಣಕ್ಷುಪ ಗುಲ್ಮಜಾಲದೊಳ್  ೧೦೯

ಎಂದಿಂತು ಪಿಂಗಳಕಂ ಸಂಜೀವಕಂಗೆ ಸಂತುಷ್ಟನುಮಾಗಿ ಬುದ್ಧಿಯಂ ಪೇೞ್ಜುದುಂ. ಮಹಾಪ್ರಸಾದಮಂತೆಗೆಯ್ವೆನೆನಲೊಡಮೆರಡರ್ಕಂ ಪರಸ್ಪರ ಸ್ನೇಹಮಾಗೆ ಬೞೆಕ್ಕೆ ಸಂಜೀವಕನಂ  ವಿಸರ್ಜಿಸಿ, ದವನಕನ ಮೊಗಮಂ ನೋಡಿ,

ಶ್ಲೋ || ಪ್ರತ್ಯಕ್ಷೇ ಗುರುವಃ ಸ್ತುತ್ಯಾಃ ಪರೋಕ್ಷೇ ಮಿತ್ರಬಾಂಧವಾಃ
ಕರ್ಮಾಂತೇ ದಾಸಭೃತ್ಯಾಶ್ಚ ನ ತು ಪುತ್ರೋ ಮೃತಾಃ ಸ್ರ್ತೀಯಃ  ||೨೭||

ಟೀ||  ಗುರುವಂ ಮುಂದೆ ಪೊಗೞ್ವುದು ಮಿತ್ರರಂ ಬಂಧುಗಳಂ ಪಿಂದೆ ಪೊಗೞ್ವುದು ಕೆಲಸದ ಕಡೆಯಲ್ಲಿ ದಾಸಭೃತ್ಯರನ್ನು ಪೊಗೞ್ವುದು ಮಗನನೆಂದುಂ ಪೊಗೞಲಾಗದು ಸ್ತ್ರೀಯಂ ಸತ್ತ ಬೞೆಕ್ಕ ಪೊಗೞ್ವುದು ಎಂಬ ನೀತಿಯುಂಟು. ಈತನೆನಗೆ ಕೃತಕ್ಲೇಶನಪ್ಪುದಱೆಂದಿಯ ವಸರದೊಳೆ ಸಂತಸಂ ಬಡಿಸಲ್ವೇೞ್ಕುಮೆಂದಿಂತೆಂದಂ: ನಿನ್ನಂತಪ್ಪಾಪ್ತಿ ಮಂತ್ರಿ ಮಂತ್ರಿಪುತ್ರನಿಂದೆಮಗೆ ಮನೋರಥಸಿದ್ಧಿಯಾದುದೆಂದು ದವನಕಂ ಸಪ್ರಸಾದ ವಚನಂಗಳಿಂ ಸಂತಸಂಬಡೆ ನುಡಿದು ಬೞೆಕ್ಕೆ ನೀರುನುಣಲ್ ಪೋಗಲ್ ಬಗೆದಲ್ಲಿಂ ತಳರ್ದು

ಅಳಿಮಾಳಾನೀಳನೀಳೋತ್ಪಳದಳವಿಳಸತ್ಕಂಜಕಿಂಜಲ್ಕಪುಂಜಾ
ವಿಳ ಕಾಳಿಂದೀನದೀತೀರಮನತಿಮುದದಿಂದೆಯ್ದೆವಂದಂ ಪಿಪಾಸಾ
ಕುಳಿತಂ ಪಂಚಾನನಂ ಶ್ವಾಪದಗಣಸಹಿತಂ ಭಿನ್ನವನ್ಯೇಭಕುಂಭ-
ಸ್ಥಳಶುಂಭದ್ದಿಂಬಕಾವಗ್ರಹಗಗನಸಿರಾಸಿಕ್ತಸಿಕ್ತಾಂಗ ಪೀಠಂ ೧೧೦

ಅಂತೆಯ್ದಿಂ,

ಯಮುನವಾರಿಯನಿಂದ್ರನೀಲಮಣಿ ಭೃಂಗಾಕಾರಿಯಂ ಪ್ರಾಣಿವ-
ರ್ಗ ಮನೋಹಾರಿಯನಜ್ಜ್ವಲಾಂಬುಜ ರಜಶ್ರೀಭಾರಿಯಂ ಸ್ವೇಚ್ಚೆಯಿಂ
ಸಮೃಗವ್ರಾತನಭೀತಚೇತನತುಳಂ ಪೀರ್ದಂ ಗಜಾರಾತಿ ಪಂ-
ಚಮುಖಂ ತೀಕ್ಷ್ಣನಖಂ ಸಕೇಸರಶಿಖಂ ವಿಕ್ರಾಂತಲಕ್ಷೀಸಖಂ ೧೧೧

ಅಂತು ಪಿಂಗಳಕಂ ಯಮುನಾಜಳಮನೀಂಡಿ ಮಗುೞ್ದು ಬಂದು ನಿಜಭುಜಪರಿಪಾಲಿತ ಕಾಂತಾರಮಂ ಪೊಕ್ಕು ಅರಮನೆಗೆ ಬಂದು ದೆಸೆದೆಸೆಗೆಯ್ದಿ ಸಕಲಮೃಗಗಣ ಸಮೇತಂ ತಾನುಂ ಸಂಜೀವಕನುಂ ವಿನೋದಪ್ರಾಣ ಮುತ್ರರಾಗಿರ್ದೆಡೆಯೊಳೊಂದು ದಿವಸಂ ಪಿಂಗಳಕನನೇಕ ಕರಿಣೀ ಕಳಭವ್ರಾತಮನಸಂಖ್ಯಾತಮಂ ಕೊಂಡು ಕಾಕಾನೀಕಜಂಬುಕ ನಿಕುರುಂಬಕ್ಕೆ ಸೋವತಂ ಮಾಡುವುದಂ ಸಂಜೀವಕಂ ಕಂಡು ಕರುಣರಸಾರ್ದ್ರಹೃದಯನಾಗಿ ತಾಂ ಮುನ್ನಮೇ ಧರ್ಮರ್ವಾವರ್ಧನ  ಚಂದ್ರಾಯಮಾನನಪ್ಪ  ವರ್ಧಮಾನ ಮನೆಯೊಳಿರ್ಪಂದಷ್ಟಾದಶಪುರಾಣಶ್ರುತಿಸ್ಮೃತಿರಾಮಾಯಣ ಭಾರತಾದಿ ಕಥಾಶ್ರವಣ ಪರಿಣತನುಂ ಮನ್ವತ್ರಿವಸಿಷ್ಠ ಹಾರೀತಯಾಜ್ಞವಲ್ಕ್ಯಾಂಗಿರಸಸಂಯಮನಾಪಸ್ತಂಬ ಸಂವರ್ತ ಕಾತ್ಯಾಯನ ಬೃಹಸ್ಪತಿ ಪಾರಾಶರ ವ್ಯಾಸಂಬರೀಷ ಗೌತಮ ಸತ್ಯಂತಪ ಭೃಗು ಕಾಶ್ಯಪ ವಿಶ್ವಾಮಿತ್ರ ವಾಮದೇವ ಲೋಕಾಯತಾದಿ ಸಮಸ್ತ ಮುನಿಮುಖ್ಯ ಮುಖವಿನಿರ್ಗತ ಶ್ರುತಿ ಸ್ಮೃತಿ ವಿಹಿತ ಧರ್ಮವಿಚಾರಪಾರಗನಪ್ಪ ಕಾರಣದಿಂ ವಾರಣಗಣಕ್ಕಕಾರಣಮಪ್ಪ ಪ್ರಾಣಹಾನಿಯುಮಿಷ್ಟಂಗ  ದೃಷ್ಟಹಾನಿಯುಮಾಹದಂತು ಮಾಡುವೆನೆಂದು ಮನದೊಳ್ ನನೆದು  ಪಿಂಗಳಕನಲ್ಲಿಗೆ ವಂದಿತೆಂದುಂ

ಆರೈದು ನೋಡೆ ಧರ್ಮಮೆ
ಸಾರಂ ಸಂಸಾರಿಗದಱೆನುತ್ತಮ ಧರ್ಮಾ-
ಧಾರಮತಿಯಾಗಿ ನಗೆೞ್ವುದು
ಘೋರಾಘವಿದೂರನೆನಿಪ ಪುರುಷಂ ಧರೆಯೊಳ್ ೧೧೨

ಅನಿಮಿಚಚಾಪದಂತೆ ಸಿರಿ ಶಾರದ ನೀರದಕಾಂತಿಯಂತೆ ಯೌ-
ವನದೆಸಕಂ ತೃಣಾಗ್ರಗತವಾಃಕಣಿಕಾಗಣದಂತೆ ಸಂದ ಜೀ-
ವನಮುದಱೆಂ ಭವಪ್ರಭವ ಜೀವಿಗೆ ನಿರ್ಮಲಧರ್ಮಾಮಾರ್ಗದೊಳ್
ಮನಮೊಸೆದಾಗಳುಂ ನಡೆಯವೇೞ್ಪುದು ವಿಶ್ವಮೃಗೇಂದ್ರವಲ್ಲಭಾ ೧೧೩

ಅದಲ್ಲದೆಯುಂ,

ಶ್ಲೋ|| ಇಷ್ಟಾಯ ದುರ್ಮತಿಂ ದದ್ಯಾತ್ ಯೋ ನಾಮ ನರಕಂ ವ್ರಜೇತ್
ತಸ್ಮಾತ್ಸರ್ವಪ್ರಯತ್ನೇನ ಇಷ್ಟಂ ಧರ್ಮೇಣ ಯೋಜಯೇತ್  ||೨೮||

ಟೀ|| ಇಷ್ಟಂಗಾವನದೊರ್ವಂ ದುರ್ಬುದ್ಧಿಯನಿತಪನವಂ ನರಕದೊಳಗಿೞೆವನದು ಕಾರಣದಿಂ ಸರ್ವಪ್ರಯತ್ನ ದಿಂದಿಷ್ಟಂಗೆ ಧರ್ಮವನೆ ಮಾಡಿಕುಡಲ್ವೇೞ್ವದು ಎಂಬ ನೀತಿವಚನಮುಂಟಪ್ಪುದಱೆಂ ನಿಮ್ಮಡಿಗಳ್ಗೆ ಹಿತೋಪದೇಶಂಗೆಯಲ್ ಬಂದೆಂ ಇದಂ ದಿವ್ಶಚಿತ್ತದಿಂದವಧರಿಸಿ ಕೈಕೊಳ್ಮ್ವದೆಂದನೇಕ ಪ್ರಕಾರ ವಚನರಚನೆಗಳಿಂ ಪಂಚಮುಖನಂ ತನಗಭಿಮುಖನಂ ಮಾಡಿ ಸವಿಸ್ತರಂ ಪೇೞಲ್ ತಗುಳ್ದಿಂತೆಂದಂ: ದೇವರ್ ಮುನ್ನಿನ ಭವದೊಳ್ ಮಾಯಾಪುರಮೆಂಬ  ಪಟ್ಟಣದೊಳ್ ಸಿಂಹವರ್ಮನೆಂಬರಸಾಗಿ ರಾಜ್ಯಂಗೆಯ್ಯುತ್ತುಂ ಪಲವು ಕಾಲದಿಂ ಮೇಲೆ ಸಂಸಾರಸುಖಕ್ಕಲಸಿ ತಪೊವನದೊಳ್ ನೆಲಸಿ ನಿಲುತ್ತುಮಾಪ್ತಾಗಮ ಪದಾರ್ಥಂಗಳನಱೆಯದೆ ಗುರೂಪದೇಶಂಗೊಳ್ಳದೆ ಪಂಚಾಗ್ವಿಸಾಧಕನಪ್ಪ ತಪೋಧನನಂ ಕಂಡಾನುಮಿಂತೆ ತಪಂಗೆಯ್ಯೆ ಕೇವಲಜ್ಞಾನಂ ಪುಟ್ಟುವಲ್ಲಿ ಜನ್ಮಾಂತರ ದುಷ್ಟರ್ಮ ವಾಸನೆ ಮಿಗೆ ಗುರುಗಳಾಜ್ಞೆಯನವನಜ್ಞೆಗೆಯ್ದು ತಾಪಸಕನ್ಯೆಯಂ ಕಂಡು  ಸಾಪೇಕ್ಷನಾಗಿ ನೋಡುವುದುಮಾ ತಪಸ್ವಿ ಕಂಡು ಮುಳಿದೆನಗೆ ಪಶುವಿನ ಬಸಿಳ್ ಬರ್ಪುದೆಂದು ಶಾಪವನೀಯೆ ಶಾಪಕ್ಕಳ್ಕಿ ಕೈಕೊಂಡು ನಿವ್ಮ್ಮಡಿಗಳಲ್ಲಿ ದಯೆಯುಳ್ಳೊಡೆ ಧರ್ಮಶ್ರವಣಮುಳ್ಳವರ್ಗಳ ಮನೆಯಲ್ಲಿ ಪುಟ್ಟುವಂತು ಜಾತಿಸ್ಮರನಪ್ಪಂತು ವರಮಂ ದಯೆಗೆಯ್ಯಿಮೆನೆ, ತಪಸ್ವಿ ಕಾರಣ್ಯದಿಂ ತಥಾಸ್ತುವೆನಲದಱೆಂ ನಿರ್ಮಳಧರ್ಮಮಾರ್ಗನಪ್ಪ ವರ್ಧಮಾನನ ಮನೆಯೊಳ್ ಪಶುವಾಗಿ ಪುಟ್ಟಿ ಧರ್ಮಾಧರ್ಮಂಗಳನಱೆವೆನಪ್ಪುದಱೆಂ ನಿಮಗೆ ತಿಳಿಪಿದಪೆನದೆಂತೆನೆ:

೧೦೯. ಈ ಕಾಡಿನಲ್ಲಿರುವ ಕ್ರೂರವಾದ ಮೃಗಪ್ರಕರವನ್ನೂ ಆನೆಗಳ ಸಮೂಹವನ್ನು ಭಯಂಕರ ಅಕಾರದ  ವ್ಯಾಘ್ರಸಮೂಹವನ್ನು ಭೀಕರ ಸೂಕರಗಳನ್ನೂ ಸೇರದೆ ನನ್ನ ಭುಜಗಳಿಂದ ಪರಿಪಾಲಿತವಾದ ಅಚ್ಚೋದಸರೊವರಗಳಿಂದಲೂ, ತೃಣಗುಲ್ಮಗಳಿಂದಲೂ ಕೂಡಿದ ಈ ಅರಣ್ಯದಲ್ಲಿ ವಾಸಮಾಡಿಕೊಂಡಿರು. ವ|| ಅದಕ್ಕೆ ಸಂಜೀವಕನು ಮಹಾಪ್ರಸಾದ ಹಾಗೇಯೇ  ಆಗಲಿ ಎನ್ನಲು, ಎರಡಕ್ಕೂ ಮಹಾಸ್ನೇಹವುಂಟಾಗಲು ಪಿಂಗಳಕನು ಸಂಜೀವಕನು ಹೋಗಬಿಟ್ಟು ದವನಕನ ಮುಖ ನೋಡಿ ಹೀಗೆ ಹೇಳಿದನು: ಶ್ಲೋ|| ಗುರುಗಳನ್ನೂ ಪ್ರತ್ಯಕ್ಷವಾಗಿ ಹೊಗಳಬೇಕು ಬಂಧುಮಿತ್ರರನ್ನು ಪರೋಕ್ಷವಾಗಿ ಸ್ತುತಿಸಬೇಕು ಕೆಲಸವಾದ ಮೇಲೆ ದಾಸಭೃತ್ಯರನ್ನು ಪ್ರಶಂಸಿಸಬೇಕು ಮಗನನ್ನು ಎಂದಿಗೂ ಹೊಗಳಬಾರದು ಸ್ರೀಯರನ್ನು ಸತ್ತಮೇಲೆ ಹೋಗಳಬೇಕು ಎಂಬ ನೀತಿಯುಂಟು. ಈತನು ನನಗೆ ಕ್ಲೇಶವನ್ನಂಟು ಮಾಡಿದುದರಿಂದ ಈಗಲೇ ಈತನನ್ನು ಸಂತೋಷಪಡಿಸಬೇಕು ಎಂದು ಮನಸ್ಸಿನಲ್ಲೇ ಅಲೋಚಿಸಿ ನಿನ್ನಂಥ ಆಪ್ತ ಮಂತ್ರಿ ಪುತ್ರನಿಂದ ನಮಗೆ ಮನೋರಥಸಿದ್ಧಿಯಾಯಿತು ಎಂದು ಸಂತಸದ ನುಡಿಗಳಿಂದ ದವನಕನೂ ಸಂತೋಷಪಡುವಂತೆ ಮಾಡಿದನು. ಅಲ್ಲಿಂದ ನೀರು ಕುಡಿಯಲು ಯಮುನಾನದಿಗೆ ಹೋರಟನು. ೧೧೦. ದುಂಬಿಗಳ ಸಮೂಹದಷ್ಟು ಕಪ್ಪಗಿರುವ ಕನ್ನೈದಿಲೆಗಳಿಂದ ಕೂಡಿದುದೂ ಅರಳಿರುವ ಕಮಲದ ಕೇಸರಗಳಿಂದ ವ್ಯಾಪ್ತಾವಾದುದೂ ಅದ ಯಮುನಾನದೀತೀರಕ್ಕೆ ಬಾಯಾರಿಕೆಯಿಂದ ಕೂಡಿದ ಪಿಂಗಳಕನು ಪ್ರಾಣಿ ಪ್ರಪಂಚದೊಡನೆ ಸಂತೋಷದಿಂದ ಬಂದನು. ೧೧೧. ಪ್ರಾಣಿವರ್ಗ  ಮನೋಹಾರಿಯೂ ಉಜ್ಜ್ವಲಾಂಬುಜ ರಸಶ್ಯ್ರೀಭಾರಿಯೂ ಆದ ಯಮುನಾವಾರಿಯನ್ನೂ ತೀಕ್ಷ್ಣನಖನೂ ಸಕೇಸರಶಿಖನೂ, ವಿಕ್ರಾಂತಲಕ್ಷೀಸಖನೂ ಅದ ಪಂಚಮುಖನೂ ಹೀರಿದನು. ವ|| ಹಾಗೆ ಪಿಂಗಳಕನು ಯಮುನಾಜಲವನ್ನು ಕುಡಿದು ತನ್ನ ಅರಮನೆಗೆ ಬಂದು ಸಕಲಮೃಗಗಣಸಮೇತನಾಗಿ ತಾನೂ, ಸಂಜೀವಕನೂ ಪ್ರಾಣಮಿತ್ರರಾಗಿದ್ದ ಅದೊಂದು ದಿನ ಪಿಂಗಳಕನು ಅನೇಕ ಕರಿಣೀಕಳಭವ್ರಾತವನ್ನು ಕೊಂದು ಕಾಕಾನೀಕಜಂಬುಕನಿಕರಕ್ಕೆ ಔತಣವನ್ನೂ ಮಾಡಿದನು. ಇದನ್ನು ಕಂಡು ಸಂಜೀವಕನು ಕರುಣರಸಾರ್ದ್ರಹೃದಯನಾಗಿ ತಾನು ಮೊದಲೇ ಧರ್ಮ ರ್ವಾವರ್ಧನಚಂದ್ರನಾದ ವರ್ಧಮಾನನ ಮನೆಯಲ್ಲಿ ಬೆಳೆದವನಾದುದರಿಂದ ಅಷ್ಟಾದಶಪುರಾಣ ಶ್ರುತಿ ಸ್ಮೃತಿ ರಾಮಾಯಾಣ ಮಹಾಭಾರತ ಮೊದಲಾದ ಕಥಾ ಶ್ರವಣಪರಿಣತನೂ ಮನು, ಅತ್ರಿ, ವಸಿಷ್ಠ, ಹಾರೀತ ಯಾಜ್ಞವಲ್ಕ್ಯ, ಅಂಗೀರಸ, ಸಂಯಮನ ಅಪಸ್ತಂಬ, ಸಂವರ್ತ ಕಾತ್ಯಾಯನ ಬೃಹಸ್ಪತಿ ಪರಾಶರ, ವ್ಯಾಸ ಅಂಬರೀಷ, ಗೌತಮ ಸತ್ಯಂತಪ ಭೃಗು,ಕಾಶ್ಯಪ  ವಿಶ್ವಾಮಿತ್ರ, ವಾಮದೇವ ಲೋಕಾಯತ ಮೊದಲಾದ ಸಮಸ್ತ ಮುನಿಮುಖ್ಯರ ಮುಖಗಳಿಂದ ಹೊರಟ ಶ್ರುತಿ ಸ್ಮೃತಿ ವಿಹಿತ ಧರ್ಮವಿಚಾರಪಾರಂಗಂಗತನಾದುದರಿಂದಲೂ  ಆನೆಗಳ ಸಮೂಹಕ್ಕೆ ಅಕಾರಣವಾಗಿ ಪ್ರಾಣ ಹಾನಿಯೂ ಇಷ್ಟನಿಗೆ ಅದೃಷ್ಟಹಾನಿಯೂ ಆಗದಂತೆ ಮಾಡುವೆನು ಎಂದು ಮನಸ್ಸಿನಲ್ಲೇ ನೆನೆದೆ ಪಿಂಗಳಕನಲ್ಲಿಗೆ ಬಂದು ಹೀಗೆಂದನು. ೧೧೨. ವಿಚಾರಿಸಿ ನೋಡಿದರೆ ಸಂಸಾರಿಗೆ ಧರ್ಮವೇ ಜಗತ್ತನಲ್ಲಿಶ್ರೇಷ್ಟವಾದುದು. ಆದರಿಂದ ಉತ್ತಮ ಧರ್ಮಮತಿಯಾಗಿ ನಡೆದುಕೊಳ್ಳುವುದರಿಂದ ಮನುಷ್ಯನು ಘೋರವಾದ ಪಾಪಗಳಿಂದ ದೂರನಾಗುವನು. ೧೧೩, ಕಾಮನ ಬಿಲ್ಲಿನಂತೆ ಶರತ್ಕಾಲದ ಮೋಡದಂತೆಯೂ ಸಿರಿ, ಯೌವನ ಕ್ಷಣಿಕವಾದುದು. ಹುಲ್ಲಿನ ತುದಿನ ನೀರಿನ ಹನಿಯಂತೆ ಆಯುಸ್ಸು ಶಾಶ್ವತವಾದುದಲ್ಲ ಆದುದರಿಂದ ವಿಶ್ವ ಮೃಗೇಂದ್ರವಲ್ಲಭಾ! ಪ್ರತಿಯೊಂದು ಪ್ರಾಣಿಯೂ ನಿರ್ಮಲವಾದ ಧರ್ಮಮಾರ್ಗದಲ್ಲಿ ಮನಸ್ಸಿಟ್ಟು ನೆನೆಯಬೇಕು. ಅಲ್ಲದೆ ಶ್ಲೋ|| ಪ್ರಿಯನಾದವನಿಗೆ ಯಾರು ದುರ್ಬದ್ದಿಯನ್ನು ಉಪದೇಶಿಸುವನೋ ಅವನು ನರಕಭಾಜನನಾಗುವನು. ಅದರಿಂದ ಸರ್ವಪ್ರಯತ್ನಗಳಿಂದಲೂ ಸ್ನೇಹಿತರಿಗೆ ಧರ್ಮವನ್ನೇ ಬೋಸಬೇಕು ಎಂಬ ನೀತಿವಾಕ್ಯ ಉಂಟು. ಅದರಿಂದ ನಿಮಗೆ ಹಿತೋಪದೇಶವನ್ನು ಮಾಡೋಣ ಎಂದು ಬಂದೆ. ಇದನ್ನು ದಿವ್ಯಚಿತ್ತದಿಂದ ಅವಧರಿಸಿ ಸ್ವೀಕರಿಸಬೇಕು ಅನೇಕ ಪ್ರಕಾರ ವಚನರಚನೆಗಳಿಂದ ಪಂಚಮುಖವನ್ನೂ  ತನಗೆ ಅಭಿಮುಖನನ್ನಾಗಿಸಿ ಸವಿಸ್ತಾರವಾಗಿ  ಹೇಳತೊಡಗಿದನು: ಪ್ರಭುಗಳು ಪೂರ್ವಜನ್ಮದಲ್ಲಿ ಮಾಯಾಪುರ ಎಂಬ ಪಟ್ಟಣದಲ್ಲಿ ಸಿಂಹವರ್ಮ ಎಂಬ ಅರಸನಾಗಿ ರಾಜ್ಯಭಾರ ಮಾಡುತ್ತಿದ್ದಿರಿ. ಹಲವು ಕಾಲದ ಮೇಲೆ ಸಂಸಾರ ಸುಖಕ್ಕೆ ಅಸಹ್ಯಪಟ್ಟು ತಪೋವನದಲ್ಲಿ ನೆಲಸಿದಿರಿ, ಅಲ್ಲಿ ಅಪ್ತಾಗಮಪದಾರ್ಥಗಳನ್ನು ತಿಳಿದುಕೊಳ್ಳದೆ. ಗುರೂ ಪ್ರದೇಶವನ್ನು ಸ್ವೀಕರಿಸದೆ ಪಂಚಾಗ್ನಿಸಾಧಕನಾದ ಒಬ್ಬ ತಪೋಧನನ್ನು  ಕಂಡು  ತಾನೂ ಹೀಗೆಯೇ ತಪಸ್ಸು ಮಾಡುವೆನೆಂದು ಪಂಚಾಗ್ನಿತಾಪತಪ್ತನಾಗಿ ಭಾವಶುದ್ಧಿಗೆಟ್ಟು ಕೋಪಾಗ್ನಿ ಹೆಚ್ಚಿ ರೌದ್ರಧ್ಯಾನದಿಂದ  ಸತ್ತು ಅತುಳಬಲಪರಾಕ್ರಮಿಯಾದ ಸಿಂಹವಾಗಿ ಹುಟ್ಟಿದಿರಿ. ನಾನೂ ತಪೋವನದಲ್ಲಿ ಹಲವು ಕಾಲ ತಪಸ್ಸನ್ನು ಮಾಡಿ ಕೇವಲ ಜ್ಞಾನ ಹುಟ್ಟುತ್ತಿದ್ದಾಗ ಜನ್ಮಾಂತರ ದುಷ್ಕರ್ಮವಾಸನೆಯಿಂದಾಗಿ ಗುರುಗಳ ಆಜ್ಞೆಯನ್ನು ತಿರಸ್ಕರಿಸಿ ತಾಪಸಕನ್ಯೆಯನ್ನು ಕಂಡು ಸಾಪೇಕ್ಷನಾಗಿ ನೋಡಿದೆ. ಆ ತಪಸ್ವಿ ನನ್ನನ್ನು  ಕಂಡು ಕೋಪಿಸಿ ಪಶುವಿನ ಹೊಟ್ಟೆಯಲ್ಲಿ ಹುಟ್ಟು ಎಂದು ಶಾಪಕೊಡಲು ಶಾಪಕ್ಕೆ ಹೆದರಿ ದಯವಿಟ್ಟು ಧರ್ಮಶ್ರರಣರ ಮನೆಯಲ್ಲಿಹುಟ್ಟವಂತೆಯೂ  ಜಾತಿಸ್ಮರನಾಗುವಂತೆಯೂ ಅನುಗ್ರಹಿಸಿ ಎಂದು ಬೇಡಿಕೊಂಡೆ. ತಪಸ್ವಿ ಕರುಣೆಯಿಂದ ತಥಾಸ್ತು ಎಂದು ಹೇಳಲು ನಿರ್ಮಲಧರ್ಮನಾದ ವರ್ಧಮಾನನ ಮನೆಯಲ್ಲಿ ಹುಟ್ಟಿ ಧರ್ಮಧರ್ಮಗಳನ್ನು ತಿಳಿಯುವಂತಾಯಿತು. ಆದರಿಂದ ನಿಮಗೆ ಅದನ್ನು ಬೋಸಿದೆ.