ಆಯತಚಿತ್ತ! ಮತ್ತಕಳಭೋತ್ಕರಮಂ ತವೆ ಕೊಂದ ಕಾರಣಂ
ವಾಯುಸಗೃಧ್ರ ಸಂಕುಳ ವೃಕಪ್ರಕರೋರು ತರಕ್ಷು ಋಕ್ಷಗೋ
ಮಾಯುನಿಕಾಯಮಂ ತಣಿಪಿ ವಿಶ್ವಮೃಗೇಶ್ವರ ಚಕ್ರವರ್ತಿಲ-
ಕ್ಷ್ಮೀಯುತ ಮಾಡಿಕೊಳ್ಳದಿರು ನೀನನಿಮಿತ್ತಮದೃಷ್ಟಹಾನಿಯಂ ೧೧೪

ಎಂದು ಮಾಣದೆ ಮತ್ತಮಿಂತೆಂದಂ: ನೀನೀ ಕ್ರೂರಕರ್ಮಮಂ ಪತ್ತುವಿಡದೆ ನಡೆದು ನರಕದೊಳ್ ನಾರಕರ್ ಮಾೞ್ಪ ಘೋರತರ ತಾಪಕ್ಕೆ ಪಕ್ಕಾಗಿ ನಿಷ್ಕಾರಣಂ ಕಿಡದೆ ಎನ್ನಪೇೞ್ವುದು ಗೆಯ್ವೆಯಪ್ಪೊಡೆ ವೃಥಾ ಪ್ರಾಣಿವಧೆಯಂ ಮಾಣ್ದು ಪರಲೋಕಸುಖಮಂ ಪಡೆದುಕೊಳ್ವುದೆ ಬುದ್ದಿಯೆನೆ ಪಿಂಗಳಕನಿಂತೆಂದಂ: ಸಮಸ್ತ ಪ್ರಾಣಿಗಳುಂ ತಂತಮ್ಮ ಜಾತಿಗೆ ತಕ್ಕಂದದೊಳೆ ಜೀವನೋಪಾಯಮಂ ಚಿಂತಿಸಿಕೊಂಡು ಬಾೞ್ವುದೆ  ಧರ್ಮಮದಱೆನೆನಗಂ ಕೊಲ್ವುದುಂ ತಿಂಬುದುಂ ಧರ್ಮವಲ್ಲದೆ ಪೆಱತು ಧರ್ಮಮಾವುದುಮಿಲ್ಲೆನೆ ಸಂಜೀವಕಂ ಪೇೞ್ಗುಂ : ಈ ಲೊಕದೊಳ್ ತತ್ತ್ವನಿಶ್ಚಯಂಗೆಯ್ವುದೆ ಕಾರಣಮಾಗಿ ಸಮಯಸಿದ್ಧಾಂತಂಗಳ್ ಪೆಲವಾದವು. ಅಲ್ಲಿ ಧರ್ಮಮಧರ್ಮಮೆಂದೆರಡೆ ಭೇದಮಕ್ಕುಂ ಅವಾವುವೆಂದೊಡೆ  ’ನ ಹಿಂಸ್ಯಾತ್ ಸರ್ವಭೂತಾನಿ ಎಂದು ಅಕಳಂಕ ತರ್ಕ ಪ್ರತಿಷ್ಠಾ ನಿಶ್ಚಯ  ಜೈನಸಿದ್ಧಾಂತಗಳುವಾದಿಗಳುಂ ಅಹಿಂಸಾ ಲಕ್ಷಣೋ ಧರ್ಮಃ ಎಂಬ ವೈಶೇಷಿಕ ನೈಯಾಯಿಕಸಾಂಖ್ಯ  ಮೀಮಾಂಸಕ ಷಟ್ತರ್ಕ ಸಿದ್ಧಾಂತವಾದಿಗಳುಂ ಈಯೊಂದೆಡೆಯೊಳ್ ಏಕವಾಕ್ಯರಾಗಿ ಪ್ರಾಣಿರಕ್ಷಣಮೆ ಪರಮಧರ್ಮಂ ಪ್ರಾಣಿವಧೆಯೆ ಪರಮಪಾತಕಮೆಂಬುದಱೆಂ ಪ್ರಾಣಿವಧೆಗೆಯ್ಯಲಾಗದೆನೆ ಮತ್ತು ಪಿಂಗಳಕನಿಂತೆಂದಂ ; ಅಂತಪ್ಪೊಡೆ ಶ್ರೋತ್ರಿಯರುಂ ಕ್ಷತ್ರಿಯರುಂ ಪಱೆಗುಟ್ಟಿ ಪಶುಯಾಗಂಗೆಯ್ದೀ ಲೋಕದೊಳ್ ಪಾತ್ರೀಭೂತರಂ ಪವಿತ್ರಗೋತ್ರರುಮಾಗಿ ಪರಲೋಕದೊಳ್ ಪಾಕಶಾಸನಸಮಾನ ಭೋಗಿಗಳಪ್ಪರೆಂದು ಈ ಲೋಕಮೆಲ್ಲಮದನೇ ಪ್ರಮಾಣಮಂ ಮಾಡಿ ನುಡಿದು ಪರಮಾರ್ಥಮಂ ಕಂಡುಮಂತೆ ನಡೆದಪರೆಂತನೆ ಮತ್ತಂ ಸಂಜೀವಕನಿಂತೆಂದಂ: ನೀವೆಂದಂತೆ ಬ್ರಾಹ್ಮಣರುಂ ಕ್ಷತ್ರಿಯರುಂ; ವೇದವಿಹಿತಕರ್ಮಾನುಷ್ಟಾನತತ್ಪರರಪ್ಪುದಱೆಂ ಯಾಗಾತಿಥಿಪಿತೃದೇವತಾನಿಮಿತ್ತಂ ವಿಪೂರ್ವಕಂ ಪ್ರಾಣಿವಧೆಗೆಯ್ವರಲ್ಲದೆ ವೃಥಾ ವ್ಯಥೆಗೆಯ್ವರಿಲ್ಲ ಅವರ್ಗಮಾ ಕರ್ಮಂ ಪುಣ್ಯಫಲಮನೀವುದೊಂದುಂ ಸಚಿದೆಯಮಿ  ಈಯಂದಮಲ್ಲದೆ ಪ್ರಾಣಿಗಳಂ ಕೊಂದೊಡಂ ತಿಂದೊಡಂ ಮಹಾಪಾತಕಗತಿಯ ನೆಯ್ದುವರದೆಂತೆನೆ :

೧೧೪. ಆಯತ ಚಿತ್ತ! ವಿಶ್ವಮೃಗೇಶ್ವರ ಚಕ್ರವರ್ತಿಲಕ್ಷ್ಮೀಯುತ ! ಮತ್ತ ಕಳಭಸಮೂಹವನ್ನು ಕೊಂದುದರಿಂದ ಕಾಗೆ ಹದ್ದು ತೋಳ ಹುಲಿ ಕರಡಿ ನರಿಗಳೇ ಮೊದಲಾ ಪ್ರಾಣಿಗಳನ್ನು ತೃಪ್ತಿ ನಿಷ್ಕಾರಣವಾಗಿ ನೀನು ಅದೃಷ್ಟ ಹಾನಿಯನ್ನು  ಮಾಡಿಕೊಳ್ಳದಿರು. ವ|| ನೀನು ಈ ಕ್ರೂರಕರ್ಮವನ್ನು ಮಾಡುತ್ತ ನರಕದಲ್ಲಿ ನಾರಕರು ಮಾಡುವ ಘೋರತರ ಪಾಶಕ್ಕೆ ತುತ್ತಾಗಿ ನಿಷ್ಕಾರಣವಾಗಿ ಕೆಡದೆ ನಾನು ಹೇಳಿದಂತೆ ಕೇಳುವೆಯಾದರೆ ವೃಥಾ ಪ್ರಾಣಿವಧೆಯನ್ನೂ ಬಿಟ್ಟು ಪರಲೋಕಸುಖವನ್ನು ಪಡೆಯುವುದೇ  ಬುದ್ಧಿವಂತಿಕೆ ಆಗ ಪಿಂಗಳಕನು ಹೀಗೆಂದನು: ಸಮಸ್ತ ಪ್ರಾಣಿಗಳು ತಮ್ಮ ತಮ್ಮ ಜಾತಿಗೆ ತಕ್ಕಂತೆ ಜೀವನೋಪಾಯವನ್ನು ಚಿಂತಿಸುತ್ತ ಬಾಳುವುದೇ ಧರ್ಮ, ಹಾಗೆಯೇ ಕೊಲ್ಲುವುದೂ ತಿನ್ನವುದೂ ನನ್ನ ಧರ್ಮ ಅದಕ್ಕೆ ಸಂಜೀವಕನು ಮತ್ತೆ ಹೇಳಿದನು ಲೋಕದಲ್ಲಿ ತತ್ತ್ವನಿಶ್ಚಯಮಾಡಲಿಕ್ಕಾಗಿ ಅನೇಕ ಸಿದ್ಧಾಂತಗಳು ಹುಟ್ಟಿಕೊಂಡವು ಅಲ್ಲಿ ಧರ್ಮ, ಅಧರ್ಮ, ಎಂದು ಎರಡೇ ಭೇದಗಳು, ನ‘ ಹಿಂಸ್ಯಾತ್ ಸರ್ವಭೂತಾನಿ  ಎಂಬುದು ಅವುಗಳಲ್ಲೊಂದು. ಇನ್ನೊಂದು ‘ ಅಹಿಂಸಾಲಕ್ಷಣೋ ಧರ್ಮಃ ಈ  ಒಂದೇ ವಿಷಯವನ್ನು ಏಕವಾಕ್ಯವಾಗಿ ಪ್ರಾಣಿರಕ್ಷಣೆಯೇ ಪರಮಧರ್ಮ ಪ್ರಾಣಿವಧೆಯೇ ಪಾಪಾಕರ್ಮ ಎಂದು ಹೇಳಿರುವರು ಅದರಿಂದ ಪ್ರಾಣಿವಧೆಯನ್ನು ಮಾಡುವುದು ವಿಹಿತವಲ್ಲ. ಅದಕ್ಕೆ ಪಿಂಗಳಕನು ಹೀಗೆಂದನು: ಹಾಗಾದರೆ ಶ್ರ್ರೋತ್ರಿಯರೂ ಕ್ಷತ್ರಿಯರೂ ಪಶುಯಜ್ಞಮಾಡಿ ಈ ಲೋಕದಲ್ಲಿ ಪವಿತ್ರಗೋತ್ರರೂ  ಪರಲೋಕದಲ್ಲಿ ಇಂದ್ರಸಮಾನ ಭೋಗಿಗಳೂ ಎನ್ನಿಸುವರಲ್ಲವೇ? ಈ ಲೋಕವೆಲ್ಲವೂ ಅದನ್ನೇ ಪ್ರಮಾಣವೆಂದು ತಿಳಿದು ಅದರಲ್ಲಿಯೇ ಪರಮಾರ್ಥವನ್ನು ಕಂಡು ಅದರಂತೆ ನಡೆಯುತ್ತಿದ್ದಾರಲ್ಲ, ಇದು ಹೇಗೆ ಧರ್ಮ? ಸಂಜೀವಕನು ಹೇಳಿದ: ನೀವು ಹೇಳಿದಂತೆ ಬ್ರಾಹ್ಮಣರೂ ಕ್ಷತ್ರಿಯರೂ ವೇದವಿಹಿತಕರ್ಮಾನುಷ್ಠಾನತತ್ಪರರಾದುದರಿಂದ ಯಾಗ, ಅತಿಥಿ ಪಿತೃದೇವತೆಗಳಿಗಾಗಿ ವಿ ಪೂರ್ವಕವಾಗಿ ಪ್ರಾಣಿವದೆ ಮಾಡುವರಲ್ಲದೆ ವೃಥಾ ಆಚರಿಸುತ್ತಿಲ್ಲ. ಅವರಿಗೆ ಆ ಕಾರ್ಯಗಳು ಪುಣ್ಯಫಲವನ್ನು ಕೊಡುತ್ತವೆ ಎಂಬುದರಲ್ಲಿ ಸಂದೇಹವಿಲ್ಲ ಈ ರೀತಿಯಲ್ಲಿ ಅಲ್ಲದೆ ಬೇರೆ ರೀತಿಯಲ್ಲಿ ಪ್ರಾಣಿಗಳನ್ನು ಕೊಂದರೂ ತಿಂದರೂ ಮಹಾ ಪಾತಕಕ್ಕೆ ಪಾತ್ರರಾಗುವರು:

ಶ್ಲೋ|| ಯಾವನ್ತಿ ಪಶುರೋಮಾಣಿ ತಾವದ್ಗತ್ವಾ ಹಿ ಮಾರಣಮ್
ವೃಥಾ ಪಶುತ್ವಮಾಪ್ನೋತಿ ನರಕಂ ಚೈವ ಗಚ್ಛತಿ  ||೨೯||

ಟೀ|| ಪಶುಗಳ ಮೆಯ್ಯೊಳೆನಿತು ರೋಮಮುಂಟನಿತು ಬಾರಿ ತಾಂ ಕೊಲಿಸಿಕೊಂಬಂ ವೃಥಾ ಪಶುವಧೆಯಂ ಮಾಡಿದವಂ: ನರಕವನೆಯ್ದುವಂ ಪಶುತ್ವವನೆಯ್ದುವಂ ಎಂಬುದು ಮಹಾಮನುಮುನಿಗಳ್ ಪೇೞ್ದ ವಾಕ್ಯಮುಂಟದಱೆಂ ವೃಥಾ ಪ್ರಾಣಿವಧೆಗೆಯ್ಯೆ ನರಕ ತಿರ‍್ಯಗ್ಯೋನಿಗಳೊಳನೇಕ ಕಾಲಂ ಬಹುಪ್ರಕಾರಜೀವಿಗಳಾಗಿ ಪುಟ್ಟುವರನೆ ಮತ್ತಂ ಪಿಂಗಳಕನಿಂತಂದಂ: ಓದುಗಳಂ ಬಲ್ಲ ಚದುರರೇನಾನುಮೊಂದನೆಲ್ಲಾ ತೆಱದಿಂ ಮಾೞ್ಪರದಱೆಂದೋದುಗಳುಂ ಪ್ರಮಾಣ ಮಲ್ಲಮೆತ್ತಾನುಂ ನಿನ್ನ ಪೇೞ್ವಂತೋದುಗಳುಂ ಪ್ರಮಾಣಮಪ್ಪೊಡೆ

ಶ್ಲೋ || ಯಾವಜ್ಜೀವಂ ಸುಖಂ ಜೀವೇತ್ ನಾಸ್ತಿ ಮೃತ್ಯೋರಗೋಚರಃ
ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ

ಟೀ|| ಎನ್ನೆವರಂ ಜೀವಿಸುವನನ್ನೆವರಂ ಸುಖಂಬಡುವುದು ; ಮೃತ್ಯುವಿಗೊಳಗಾಗದ ಪ್ರಾಣಿಯೇ ಇಲ್ಲ; ಬೂದಿಯಾದ ದೇಹಃ ಮರಳಿ ಪುಟ್ಟುವುದೇ ಇಲ್ಲಂ-ಎಂಬುದಿದು ಬೃಹಸ್ಪತಿಯ ಮತಂ ಇದು ಪ್ರತ್ಯಕ್ಷಾನುಭವಸಿದ್ಧಮದಂದಿದವೆ ಪ್ರಮಾಣಂ. ಬೆಂದ ಬೀಜಂ ಪುಟ್ಟದಂತೆ ಭಸ್ಮಾಂತರಿತದೇಹಂ ನಿಶ್ಚಯಂ ಪುಟ್ಟುವುದಿಲ್ಲ ಪರಲೋಕಮಂ ಕಂಡವರಿಲ್ಲ. ಅದು ಕಾರಣದಿಂದಾವ ಪ್ರಾಣಿಯಂ ತನಗೆ ತಾಂ ತನಗೆ ಪ್ರಾಣಮುಳ್ಳನ್ನೆಗಂ ಸುಖಮಂ ನೆಗದೞ್ವುದೆನೆ ಮತ್ತಂ ಸಂಜೀವಕನಿಂತೆಂದಂ: ದೇವಾ ! ನೀವಿಂತಪ್ಪಪಸಿದ್ಧಾಂತಮಂ ಪಿಡಿದು ನುಡಿದು ಕಿಡಬೇಡಿಮದೆಂತನೆ:

ಶ್ಲೋ|| ವೃಥಾ ಪಶುವಧೆಯನ್ನು ಮಾಡಿದವನು ಪಶುಗಳ  ಮೈಯಲ್ಲಿ ಎಷ್ಟು ರೋಮಗಳಿವೆಯೋ ಅಷ್ಟುಬಾರಿ ತನ್ನನ್ನು ಕೊಲ್ಲಿಸಿಕೊಳ್ಳುವನು. ಅಲ್ಲದೆ ನರಕವನ್ನೂ ಪಶುತ್ವವನ್ನು ಹೊಂದುವನು ಎಂದು ಮಹಾಮುನಿಗಳು  ಹೇಳಿದ ಮಾತು, ಅದಕ್ಕೆ ಪಿಂಗಲಕನು ಹೇಳಿದನು: ಓದನ್ನು ಬಲ್ಲ ಚತುರರು ಏನನ್ನಾದರೂ ಒಂದನ್ನು ಎಲ್ಲಾ ರೀತಿಗಳಿಂದ ಮಾಡಬಲ್ಲರು. ಅದುದರಿಂದ ಓದುಗಳು ಪ್ರಮಾಣವಲ್ಲ. ಶ್ಲೋ|| ಎಲ್ಲಿಯವರೆಗೆ ಜೀವಿಸುವುದು ಸಾಧ್ಯವೋ ಅಲ್ಲಿಯವರೆಗೆ ಸುಖಪಡಬೇಕು ಮೃತ್ಯುವಿಗೆ ಒಳಗಾದ ಪ್ರಾಣಿಯೇ ಇಲ್ಲ. ಬೂದಿಯಾದ ದೇಹವು ಮರಳಿ ಹುಟ್ಟುವುದೇ ಸಾಧ್ಯವಿಲ್ಲ ಎಂಬುದು ಬೃಹಸ್ಪತಿಯ ವಾಣಿ. ಇದು ಪ್ರತ್ಯಕ್ಷವಾಗಿ ಅನುಭವಸಿದ್ಧವಾದುದರಿಂದ ಇದೇ ಪ್ರಮಾಣ. ಬೆಚಿದ ಬೀಜ ಎಂದೂ  ಹುಟ್ಟದಿರುವಂತೆ ಭಸ್ಮಾಂತರಿತದೇಹ ಖಂಡಿತವಾಗಿಯೂ ಹುಟ್ಟುವುದಿಲ್ಲ. ಪರಲೋಕವನ್ನು ಕಂಡವರಿ. ಆದುದರಿಂದ ಯಾವ ಪ್ರಾಣಿಯಾದರೂ ಪ್ರಾಣವಿರುವವರೆಗೆ ಸುಖಪಡೆಯಬೇಕು. ಸಂಜೀವಕನು ಹೇಳಿದನು : ದೇವಾ ನೀವು  ಇಂಥ ಅಪಸಿದ್ಧಾಂತವನ್ನು ಎತ್ತಿ ಹಿಡಿದು ಕೆಡಬೇಡಿ.

ಶ್ಲೋ|| ಸಂದಿಗ್ಧೇಪಿ ಪರೇ ಲೋಕೇ ತ್ಯಾಜ್ಯಮೇವಾಶುಭಂ ಬುಧೈಃ
ಯದಿನಾಸ್ತಿ ತತಃ ಕಿಂ ಸ್ಯಾತ್ ಅಸ್ತಿ ಚೇನ್ನಾಸ್ತಿಕೋ ಹತಃ  ||೩೧||

ಟೀ|| ಪರಲೋಕಮೆತ್ತಲಾನುಮಾದಪ್ಪುದೋ ಆಗದೋ ಎಂಬ ಸಂದೆಯಮುಳ್ಳೊಡಂ ಬುದ್ಧಿವಂತರಪ್ಪರ್ ಪಾಪಮಂ ಮಾಡಲಾಗದು: ಪರಲೋಕಮೆತ್ತಲಾನುಮಿಲ್ಲದಿರ್ದೊಡಂ ಅಧರ್ಮಮಂ ಬಿಟ್ಟುದಱೆಂದಾವ  ಹಾನಿಯಪ್ಪುದು? ಏಗೆಯ್ದುಂ ಪರಲೋಕಮಿಲ್ಲೆಂಬ ನಾಸ್ತಿಕಂ ಕಿಡುವಂ-ಎಂಬುದು ತತ್ತ್ವವಾಕ್ಯಮುಂಟಪ್ಪುದಱೆಂ ಪರಮಿಲ್ಲೆಂಬವನಾಅಪಸಿದ್ಧಾಂಮನೆ ಪ್ರಮಾಣಮಂ ಮಾಡಿ ಕೇವಲ ಪಾಪಪರನಪ್ಪಂ ಪರಮುಂಟಾದ ಪಕ್ಷಂ ನಿಷಲಂ ಕಿಡುಗಂ ಧರ್ಮಪರನಷ್ಟಂ ತೀರ್ಥಯಾತ್ರಾನಿಮಿತ್ತಂ ದಂಡಕಾರಣ್ಯದೊಳ್ ಬರುತ್ತಿರಲ್ಲೊರ್ವಂ ಬ್ರಹ್ಮರಾಕ್ಷಸನಂ ಕಂಡು ತಿನಲೆಂದು ಬಗೆದು ಕೈಯಂ ಪಿಡಿದು

ವಾಕ್ಯಂ || ಕಃ ಪನ್ಥಾಃ ಕಾ ವಾರ್ತಾ ಕೋ ಮೋದತೇಕಸ್ಸೇವ್ಯತೇ  ||೩೨||

ಎಂಬುದಂ ಭಟ್ಟನಾತನ ಚೇಷ್ಟಾಭಾಷೆಗಳಿಂದಾತನಭಿಪ್ರಾಯಮನಱೆದು ಇಂತೆಂದಂ :

ಶ್ಲೋ|| ಪ್ರಾಣಾಘಾತಾನ್ನಿವೃತ್ತಿ: ಪರಧನಹರಣೇ ಸಂಯಮಃ ಸತ್ಯವಾಕ್ಯಂ
ಕಾಲೇ ಶಕ್ತ್ಯಾಪ್ರದಾನಂ ಯುವತಿಜನಕಥಾ ಮೂಕಭಾವಃ  ಪರೇಷಾಂ
ತೃಣಾಸ್ರೋತೋ ವಿಭಂಗೋ ಗುರುಷು ಚ ವಿನಯಃ ಸರ‍್ವಭೂತಾನುಕಂಪಾ
ಸಾಮಾನ್ಯರ ಸರ‍್ವಶಾಸ್ತ್ರೇಷ್ಟನುಪಹತವಿಶ್ಯ್ರೇಯಸಾಮೇಷಪಂಥಾಃ  ||೩೩||

ಟೀ|| ಪ್ರಾಣಿಗಳಂ ಕೊಲಲಾಗದು ಲೋಗರ ವಸ್ತುವಂ ಕೊಳಲಾಗದು  ಸತ್ಯವನೇ ನುಡಿವುದು ಕಾಲೋಚಿತದಲ್ಲಿ  ತನ್ನ  ಶಕ್ತಿಯನಱೆದು ದಾನಮಂ ಮಾೞ್ಪುದು; ಪರಸ್ರ್ತೀಯರ ಮಾತನಾಡುವಲ್ಲಿ ಮೂಕನಾಗಿರ್ಪುದು. ತೃಷ್ಣೆಯೆಂಬ ತೊಱೆಯಂ ಕಟ್ಟುವುದು: ಗುರುಗಳಲ್ಲಿ ವಿನಯಂಗೆಯ್ವುದು: ಸರ‍್ವ ಪ್ರಾಣಿಗಳಲ್ಲಿ ದಯೆಯನೆ ಮಾೞ್ಪುದು ಇವೆಲ್ಲಮೆಲ್ಲಾ  ಶಾಸ್ತ್ರಂಗಳಲ್ಲಿ ಸಾಧಾರಣಂ, ಕಿಡದ ವಿಧಾನಮನುಳ್ಳ ಇವು ಲೇಸುಗಳ್ಗೆ ಬಟ್ಟೆಯೆನಿಸುವುವು

ಶ್ಲೋ|| ಅಸ್ಮನ್ಯಹತ್ಯಂಡ ಕಟಾಹಮಧ್ಯೇ ಸೂರ‍್ಯಾಗ್ನಿನಾ ರಾತ್ರಿದಿನೇಂಧನೇನ
ಮಾಸರ್ತು ದರ್ವೀ  ಪರಿಘಟ್ಟನೇನ ಭೂತಾನಿ ಕಾಲಃ ಪಚತೀತಿ ವಾರ್ತಾ  ||೩೪||

ಟೀ|| ಬ್ರಹ್ಮಾಂಡಮೆಂಬ ಕೊಪ್ಪರಿಕೆಯ ಮಧ್ಯದಲ್ಲಿ ಸೂರ‍್ಯನೆಂಬಗ್ನಿಯಿಂ ಪಗಲಿರುಳೆಂಬ ಅಡುಗರ್ಬುಗಳಿಂ ಮಾಸಋತುಗಳೆಂಬ ಸಟ್ಟುಗದಿಂ ತೊಳಸುತ್ತುಂ ಭೂತಂಗಳಂ ಜವ ನಡುತಿರ್ದನಿಂತೆಂಬುದೆ ವಾರ್ತೆ

ಶ್ಲೋ|| ಪಂಚಮೇಹನಿ ಷಷ್ಠೇ ವಾ ಶಾಕಂ ಪಚತಿ ಯೋ ಗೃಹೇ
ಅನೃಣೋಹ್ಯಪರ ಪ್ರೇಷ್ಯಃ ಸ ರಾತ್ರಿಂಚರ ಮೋದತೇ ||೩೫||

ಟೀ|| ಐದುದಿನಕಾದೊಡಮಾಱುದಿನಕಾದೊಡಂ ತನ್ನ ಮನೆಯಲ್ಲಿ ಮಾದುರಮನಾ ದೊಡಮಟ್ಟು ಸಾಲಮಿಲ್ಲದೆ ಪರರಾಳಲ್ಲದುಂಡಿಹುದುಚಿತಮೇಲೆ ರಾತ್ರಿಂಚರ

ಶ್ಲೋ|| ಏಕಾ ಭಾರ‍್ಯಾ ತ್ರಯಃ ಪುತ್ರಾ ದ್ವೌಹಲೌ ದಶಧೇನವಃ
ಮಧ್ಯರಾಷ್ರಂತು ಸುಕ್ಷೇತಂ ಅಸ್ತಿ ಚೇದತಿ ಸೇವ್ಯತೇ ||೩೬||

ಟೀ|| ಒಬ್ಬಳೇ ಹೆಂಡತಿ ಮೂವರ್ ಪುತ್ರರ್ ಎರಡಾರ ಬೆವಸಾಯಂ ಹತ್ತುಹಸುಕಱೆಹ ಮಧ್ಯದೇಶದೊಳ್ ಸುಕ್ಷೇತ್ರಮಪ್ಪ ತಾಣದೊಳಿರ್ಪುದೇ ಸೇವ್ಯಂ ಎಂದಿತು ವರರುಚಿಭಟ್ಟಂ ನಿರತಿಶಯ  ಶ್ರೇಯಸ್ಕರಮಪ್ಪ ಧರ್ಮಮಂ ಪೇೞ್ವಲ್ಲಿ ಪ್ರಾಣಿರಕ್ಷಣಮೇ ಮುಖ್ಯಧರ್ಮಮೆಂದು  ಪೇೞ್ದಂ ಅದಲ್ಲದೆಯುಂ ವ್ಯಾಸಭಟ್ಟಂ ಮಹಾಭಾರತ ಕಥಾಪ್ರಪಂಚಮನನಾಗತಃ ಕಂಡದಂ ಗ್ರಂಥವಿ      ಸ್ತರಂ  ಮಾದಲ್ಬಗೆದು ಮುನ್ನಂ ವಾಲ್ಮೀಕಿಮುನಿ ರಾಮಾಯಣಮನನಾಗತಂ ಕಂಡಂದು ಗ್ರಂಥವಿಸ್ತರಂಗೆಯ್ದಲ್ಲಿ ಇನ್ನೆಮ್ಮಂತಪ್ಪನಾಗತಕರ್ತೃಗಳುಮಾಗದಿರ್ಕೆಂದಾಜ್ಞೆಯಂ ಮಾಡಿದ  ಕಾರಣಂ  ವ್ಯಾಸಮುನಿ ವಾಲ್ಮೀಕಿಗಳಲ್ಲಿಗೆ ಪೋಗಿ ವಿನಯವಿನಮಿತೋತ್ತಮಾಂಗನಾಗಿ ಕೈಗಳಂ ಮುಗಿದಿಂತೆಂದಂ:  ನಿಮ್ಮಡಿ ಧರ್ಮಾರ್ಥಕಾಮಮೋಕ್ಷ ಸಾಧನೊಪಾಯಸಾಧನಮಪ್ಪುದೊಂದು ಕಥೆಯಂ ಕಂಡೆ ಅದಂ ಕಬ್ಬಮಂ ಮಾಡಿದಪೆನುಗ್ರಹಂಗೆಯ್ಯಿಮೆನೆ ಮುನಿ ಮನದೊಳಗವಧರಿಸಿ ಬೞೆಕ್ಕಿಂತೆಂದಂ: ಅಂತಪ್ಪೊಡೆ ಕೇವಲಂ ಧರ್ಮಾಮಾವುದದಂ ಪೇೞೆಮೆನೆ ವ್ಯಾಸದೇವನವರ್ಗಿತೆಂದಂ :

ಶ್ಲೋ || ಶ್ರೂಯತಾಂ ಧರ್ಮಸರ‍್ವಸ್ವಂ ಶ್ರುತ್ವಾಚೈವಾವಧಾರ‍್ಯತಾಂ
ಆತ್ಮನ: ಪ್ರತಿಕೂಲಾನಿ ಪರೇಷಾಂ ನ ಸಮಾಚರೇತ್    ||೩೭||

ಟೀ|| ಎಲ ಧರ್ಮದ ತಿರುಳಂ ಕೇಳ್ವುದು ಕೇಳ್ದ ತೆಱನಂ ಲೇಸಾಗವಧರಿಪುದು ತನಗೆ ಪ್ರತಿಕೂಲಮಪ್ಪುದಂ ಪೆಱರ್ಗೆ ಮಾಡಲಾಗದು ಎಂದಿತು ಸಕಲ ಧರ್ಮದ ಸಾರಮಂ ಸಂಕ್ಷೇಪದಿಂ ವ್ಯಾಸಮುನಿ ಪೇೞ್ವನದು ಕಾರಣದಿಂ

ತನಗೆಂದುಂ ಕೇಡಿಲ್ಲದು-
ದನೆ ಬಯಸುವ ಮನುಜನಾವ ಜೀವಮುಮಂ ತ-
ನ್ನನೆ ಬಗೆವ ತೆಱದೆ ಬಗೆವುದು
ಮುನಿ ವೇದವ್ಯಾಸಮತಮಿದತಿಶಯಧರ್ಮಂ  ೧೧೪

ಅದಱೆಂ ಪ್ರಾಣಿವಧೆಯೇ ಪೊಲ್ಲದು ಸಕಲಪ್ರಾಣಿಹಿತಮೇ ಧರ್ಮಮೆಂದನೇಕ ಶ್ರುತದೃಷ್ಟಾನುಮಾನಂಗಳಿಂ ಸಂಜೀವಕಂ  ತಿಳಿಪೆ ಪಿಂಗಳಕಂ ಮೃದುಹೃದಯನಾಗಿ ಮತ್ತಮಿಂತೆಂದಂ:

ಎಲೆ ಪರಮಮಿತ್ರಪುಂಗವ
ವಿಲಸನ್ಮತಿ ನಿನ್ನ ಪೇೞ್ದ ಧರ್ಮಶ್ರವಣಂ
ಪಲತೆಱದಿದೆನ್ನ ಮನದೊಳ್
ನೆಲಸಿದುದಿನ್ನೊಂದು ಚಿಂತೆ ಮನದೊಳಗೆನ್ನಾ  ೧೧೫

ದಾವದೆನೆ ‘ಸ್ವಯಂ ಚತುಷ್ಟದಾದಿ ಸೇವ್ಯಃ ಎಂಬ ಅಭಿದಾನಮಾತ್ರಮದಲ್ಲದೆ ನೀನೆಂದಂತೆ ನೆಗೞ್ದು ಪುಲ್ಲಂ ಮೇಯಲಱೆಯಂ ಪಿಶಿತಾಹಾರಮಿಲ್ಲದೆ ಶರೀರಂ ನಿಲ್ಲದೇಗೆಯ್ವೆನೆನೆ: ಸಂಜೀವಕನಿಂತೆಂದಂ: ಅದೊಡಂ ನಿಮಗೆಂ ಹರ್ಷಮಾದಾನಗಳನೇಕ ಮೃಗಗಣಮನೆಯ್ದೆ ಕೊಲ್ಲದೆ ಕ್ಷುಧಾನಿವಾರಣಾರ್ಥಮಾಗಿ ನಿಮಗೆನಿತುವೇೞ್ಕುಮನಿತನೆ ಕೈಕೊಂಡು ನಿಶ್ಚಿಂತಮಿರ್ಪುದೆನಲ್ ಅಂತೆಗೆಯ್ವೆನೆಂದು ಕ್ರೂರಕರ್ಮಮಂ ಪತ್ತುವಿಟ್ಟು ಶುದ್ಧಚಿತ್ತನಾಗಿ ಸ್ವೋದರಪೂರಣಮಾತ್ರಕ್ಕೆ ತಕ್ಕನಿತನೇ ಸ್ವೀಕರಿಸಿ ನಿಶ್ಚಿಂತಮಿರ್ಪುದುಂ, ಕರಟಕ ದವನಕ  ಪ್ರಮುಖ ನಿಖಿಲ ಕ್ರೂರಮೃಗಂಗಳೆಲ್ಲಂ ಪಲವುದಿವಸಮಾಹಾರಂಬಡೆಯದೆ ಮಲುಮಲನೆ ಮಱುಗಿ ಸಾವನಿತವಸ್ಥೆ ಪುಟ್ಟಿ ಸೈರಿಸಲಾಱದೆ ಪಿಂಗಳಕನಲ್ಲಿಗೆ ಬಂದು ಪೊಡೆಮಟ್ಟುಮವಱೊಳಗೊಂದು ಜಾಂಬವಂತನೆಂಬ ಪುರಾಣ ಜಂಬುಕನಿಂತೆಂದುದು:

ನಿಮ್ಮಡಿ ಭಿನ್ನಪಮಂ ಕೇ-
ಳ್ದೆಮ್ಮಂ ನೀಂ ಪೊರೆದು ಪಲವು ಕಾಲಮನೀಗಳ್
ಕೆಮ್ಮನೆ ಪರಿಹರಿಸುವುದುಂ
ನಿಮ್ಮೊಡಲನೆ ಪೊರೆದು ಬಾೞ್ವುದುಂ ಗುಣದೊಳಗೇ  ೧೧೬

ಅಂತುಮಲ್ಲದೆಲ್ಲಿಯಾನುಂ ಬಂದ ಧೂರ್ತನಪ್ಪೆೞ್ತೆನ ಬುದ್ಧಿಯಂ ಕೈಕೊಂಡು ಅನ್ವಯಾಗತರುಂ ಹಿತರುಮಪ್ಪ ಪರಿಗ್ರಹಕ್ಕೆ ನೀಂ ವಿರಕ್ತನಾಗಿರ್ದಂದು

ಶ್ಲೋ|| ರಕ್ತಾದ್ವೃತ್ತಿಂ ಸಮಾಪದ್ಯಹ್ಯರಕ್ತಂ ತು ಪರಿತ್ಯಜೇಶ್  ||೩೮||

ಎಂಬ ಯುಕ್ತಿಯುಂಟುಪ್ಪುದರಿಂ ನೀನಿಂತು ವಿರಕ್ತನಾದುದನಱೆದಿಂ ಬೞೆಕ್ಕೆ ಪರಿಗ್ರಹಂ ಪೆಱನೊರ್ವಾಳ್ದನನಱಸಿ ಪೋಕುಮಂತಾದಂದು,

ಶ್ಲೋ|| ಯೋಧ್ರುವಾಣಿ ಪರಿತ್ಯಜ್ಯಾಧ್ರುವಾಣಿ ಪರಿಸೇವತೇ
ತಸ್ಯ ಧ್ರುವಾಣಿ ನಶ್ಯಂತಿ ಹೃಧ್ರುವಂ ನಷ್ಟಮೇವ ಚ  ||೩೯||

ಟೀ|| ಅವನೊರ್ವಂ ಸ್ಥಿರನಾಗಿರ್ಪುದಂ ಬಿಟ್ಟು ಅಸ್ಥಿರಮಾದಪ್ಪುವಂ ಸೇವಿಸುತ್ತಿರ್ದಪಂ ಅತಂಗೆ ಸ್ಥಿರಮಪ್ಪುವುಂ ಕಿಡುಗಂ ಅಸ್ಥಿರಮಪ್ಪುದೆಂತುಂ ಕೆಟ್ಟುದೇ -ಎಂಬ ನೀತಿವಾಕ್ಯಮುಂಟುಪ್ಪುದಱೆಂ ಮುಗಿಲ ನೀರಂ ನಚ್ಚಿ  ಡೊಣೆಯ ನೀರಂ ತುಳುಂಕಿದ ಕೋಡುಗದಂದಂ ನಿನಗಕ್ಕುಮದಱೆಂ ನಿನ್ನ ಸಂಜೀವಕನ ಬುದ್ಧಿಯುಮನೆನ್ನ ಬುದ್ಧಿಯುಮಂ ವಿಚಾರಿಸಿಕೊಳ್ವುದೆಂದು ಪಲತೆಱೆದಿಂ ನುಡಿದ ಪುರಾಣ ಜಂಬುಕನ ಮಾತಂ ಕೇಳ್ದು ಪಿಂಗಳಕನೀ ಪಾಪಿಗುತ್ತರಂಗೊಟ್ಟೊಡೆ ಪಾಪೋಪದೇಶಂಗೆಯ್ದಪನದಱೆಂ ‘ಮೌನಂ ಸರ‍್ವಾರ್ಥ ಸಾಧನಂ’ ಎಂಬುದುಂಟೆಂದುಸಿರದಿರ್ಪುದುಂ ಅಂತಿರ್ದಪಿಂಗಳಕನಂ ಕಂಡು ಮೃಗಂಗಳೆಲ್ಲಂ ತಮ್ಮ  ತಮ್ಮಿಚ್ಛೆಯೊಳ್ ಪರೆದುವೋದವು. ಅಲ್ಲಿ ದವನಕಂ  ಕರಟಕನ ಮೊಗಮಂ ನೋಡಿ.