ಮದಗಜಸಂಕುಳದಿಂ ಶ್ವಾ
ಪದದಿಂದಂ ಗಿರಿಗುಹಾಳಿಯಿಂದಕ ಭಯ-
ಪ್ರದಮೆನಿಪ ಘೋರಕಾಂತಾ-
ರದೊಳೆ ಮಹಾಭೀರುವೆಂಬ ಜಂಬುಕನಿರ್ಕುಂ  ೯೦

ಆ ಜಂಬುಕನೊಂದು ದಿವಸಂ ಆಹಾರ ವಿಹಾರಕಾಂಕ್ಷೆಯಿಂದಡವಿಯೆಲ್ಲಮಂ ತೊಳಲ್ದು ಎಲ್ಲಿಯುಮೇನುಮಂ ಪಡೆಯದೆ ತನಗೆ ಸಹಾಯನಪ್ಪುದೊಂದು ವಾಯುಸನಿರ್ದಲ್ಲಿಗೆ ಬರ್ಪುದು ಮಾ ವಾಯಸಂ  ಇದಿರ್ವಂದು ಎಲೆ ಭಾವ, ಏಂ ಬಡವಾದಿರೆನೆ ಪಲವು ದಿವಸಮಾಹಾರಂಬಡೆಯದೆ ಬಡವಾಗಿ ನಿನ್ನಲ್ಲಿ ಆಸೆಪಟ್ಟು ಬಂದೆನೆಂಬುದುಂ ಇದಾವ ಗಹನಮೀಗಳಾಂ ಪೋಗಿ ಬರ್ಪನ್ನೆವರ ಮಿಲ್ಲಿಯೇ   ನಿಲ್ಲಿಮೆಂದು ವಾಯುವೇಗದಿಂ ವಾಯಸಂ ಪೋಗಿ ಬಂದು ಈ ತೋರ್ಪನದಿಯ ತೀರದೊಳ್ ಚತುರ್ಬಲಯುತರಿರ್ವರರಸುಗಳ್ ಕಾದಿದಲ್ಲಿ ಪೆಣಮಯಮಾಗಿರ್ದರಣ್ಯ ಭೂಮಿಯಂ ಕಂಡೆಂ ನಿನ್ನೊಡಲ ಬಡತನಂ ಕಿಡುವಿನಮಾಹಾರಕ್ಕೆಡೆಯಾದುದಲ್ಲಿಗೆ ಪೋಗೆಂದು ಪೇೞ್ವುದುಮಾ ನರಿ ಪರಿದು ಸಮರರಂಗಭುಮಿಯನೆಯ್ದಿ ಅನೇಕ ಶಬಾಳೋಕನಜಾತಹರ್ಷನಾಗಿರ್ಪುದುಂ ಕಿಱೆದಾನುಂ ಬೇಗಕ್ಕೆ ಭೋಂಕನೆ ಪೊಣ್ಮಿದ ಭಯಂಕರಧ್ವಾನಮಂ ಕೇಳ್ದೆಲ್ಲಿಯುಂ ನಿಲಲಣ್ಮದೆ ಓಡಿಬರ್ಪುದುಂ ಲಂಬಕರ್ಣನೆಂಬುದೊಂದು ಜಂಬುಕಂ ಕಂಡಿದೇನೆಲೆ ಭಾವಾ! ನೀನೇತರ್ಕೆ ಭಯಾತುರನಾಗಿ ಬರ್ಪೆ ಎನೆ, ಕೊಳಗುಳಂ ನಿರ್ಮಾನುಷ್ಯಗೋಚರಮೆಂದು ಬಗೆದು ಪೋಪನ್ನೆಗಂ ನೆಲಂ ಮೊೞಗಿದಂತಪ್ಪುದೊಂದು  ಭಯಂಕರದ್ವಾನಮಾಗಲದಂ  ಕೇಳ್ದೋಡಿ ಬಂದೆನೆಂಬುದುಂ ಆ ಜಂಬುಕನೆಂದುದು: ಆ ದ್ವಾನಮಾವ್ಯದೆಂದುಱೆಯದೆ ದೂರಭೀರುವಾಗಿ ಪೋಗಲ್ವೇಡ ಅಯೆದೆಯನೆನಗೆ ತೋಱು ಬಾ ಎಂದೊಡಂಗೊಂಡು ಬಂದು ನೋಡುವನ್ನೆಗಂ.ಶಿಖರಿ ಶಿಖರಾನುಕಾರಿಯಪ್ಪುದೊಂದು ಭೇರಿ ಸಮೀರಣಪ್ರೇರಿತ ಭೂರುಹಶಾಖಾಗ್ರಹತಿ ಯಿಂದತಿ ಪ್ರಘೋಷಂಗೆಯ್ದು ತದಾಹತಿಯಿಲ್ಲದಾಗಳ್ ನಿಶ್ಯಬ್ದಮಾಗಿಯುಂ ಇರ್ಕುಮದಂ ಕಂಡಾ ಜಂಬುಕಂ ಮನುಷ್ಯಸಂಚಾರಮಿಲ್ಲದುದಂ ನಿಶ್ಚಯಮಾಗಱೆದಾರಯ್ದು ಬಲವಂದು ನಿಂದು ನೋಡಿ ಮತ್ತಲ್ಲಿಯೇನಾನುಮಿ, ರ್ಕುಮೆಂದು ಶಂಕೆಯಿಂ  ಭೇರಿಯಂ ಕಣ್ಣಂ ವಿದಾರಿಸಿಯದಱೊಳೇನುಮಂ ಕಾಣದೆ  ಲಂಬಕರ್ಣಂ ಆ ನರಿ ದುರರುಭೀರುವಾದುದರ್ಕೆ ಹಾಸ್ಯಂಗೆಯ್ದುದು ಅದು ಕಾರಣದಿಂ ನೀಂ  ಶಬ್ದ ಮಾತ್ರಕ್ಕೆ ಬೆರ್ಚಿದೊಡಿಂತಪ್ಪ ನಗೆಗೆಡೆಯಪ್ಪಿರದಱೆಂ  ದೇವರೆನ್ನನಟ್ಟಿಯಾರಯ್ಯ ಬಳಿಕ್ಕದರ್ಕೆ ತಕ್ಕುದಂ ನೆಗೞ್ವುದೆಂಬುದಂ ಪಿಂಗಳಕಂ ನಿನ್ನ ಮನದೊಳಿದುವೆ  ಕಜ್ಜಮಪ್ಪೊಡೆ ಪೋಗೆಂದು ಮತ್ತಮಿಂತೆಂದಂ ಈ ಬೆಸನಪ್ಪೊಡೆ ದೂತರ್ಗೆ ಭಟ್ಟರ್ಗೆ ಪರಿಗರ್ಗಲ್ಲದೆ ನೀಂ ಮಾಡಲ್ತಕ್ಕುದಲ್ಲ: ಇಂತಪ್ಪ ವಿಷಮಾನ್ವೇಷಣಕ್ಕೆಂತಟ್ಟುವೆನೆನೆ ದವನಕಂ ದೇವರ್ ಬೆಸಸಿದಂತರಸುಗಳುಂ ತಮ್ಮಾಜ್ಞೆ  ಸಲ್ವಲ್ಲಿಗಲ್ಲದೆ ಮೇಣ್ ಮಿತ್ರರಲ್ಲಿಗಲ್ಲದೆ ಶತ್ರುಗಳಲ್ಲಿಗೆ ಮುನ್ನಮೆ ಪ್ರಧಾನರುಮಂ ಪಸಾಯ್ತರುಮನಟ್ಟಲಾಗದೆಂಬ ರಾಜನೀತಿಯನಱೆವಿರಾಗಿಯಂ ಪೋದೆಡೆ ಯೊಳೇನಾನುಮಪಾಯ ಮಕ್ಕುಮೆಂಬ ಶಂಕೆಯಿಚಿದೆನಗೆ ಕಾರುಣ್ಮಂಗೆಯ್ದಿರಾಗಿಯಂ ಬೆಸಸಿದಿರ್ ಈಯೆಡೆಗೆ ಮಹಾ ಪ್ರಸಾದಮಾದೊಡಂ ದೇವರ್ಗಿಂತಪ್ಪತಿ ಕುತೂಹಲಂ ಪುಟ್ಟಿದೀಯೆಡೆಯೊಳೀ ಬೆಸನಲ್ತು ಮತ್ತಾವ ಬೆಸಕ್ಕವಾವ ತೆಱದೊಳಾನೆ ಸಾಲ್ವೆನೆಂದು ನುಡಿಯೆ ಪಿಂಗಳಕಂ ಸಂತಸಂಬಟ್ಟಿಂತೆಂದಂ;

ಶ್ಲೋ || ಅಪ್ರಾಜ್ಞೇನ ಚ ಕಾತರೇಣ ಗುಣಸ್ಸಾ ತ್ ಸಾನುರಾಗೇಣ ಕಃ
ಪ್ರಜ್ಞಾ ವಿಕ್ರಮಶಾಲಿನೋಪಿ ಹಿಭವೇತ್ ಕಿಂ ಭಕ್ತಿಹೀನಾತ್ಪಲಂ
ಪ್ರಜ್ಞಾ ವಿಕ್ರಮ ಭಕ್ತಯಃ ಸಮುದಿತಾ ಯೇಷಾಂ ಗುಣಾ ಭೂತಯೇ
ತೇ ಭೃತ್ಯಾನೃಷತೇಃ ಕಳತ್ರಮಿತರೇ ಸುಪತ್ಸುಚಾಪತ್ಸುಚ ||೧೬||

ಟೀ|| ಬುದ್ದಿಹೀನನುಂ  ಕಾತರನುಮಾಗಿರ್ಪವಂ  ಸ್ನೇಹಿತನುಮಾದುದಱೆಂದಾವ ಲೇಸುಂಟು ಬುದ್ಧಿ ಪರಾಕ್ರಮಗಳಿಂದೊಳ್ಪುವೆತ್ತವನಾದೊಡಂ ಭಕ್ತಿಯಿಲ್ಲದವನೇತರ್ಕಂ ಬಾರ್ತೆಯಿಲ್ಲಂ  ಬುದ್ಧಿಪರಾಕ್ರಮಭಕ್ತಿಗಳ್ ಅರ್ಕೆಲಬರ್ಗೊಳವಾ ಭೃತ್ಯರಸುಗಳ್ಗೆ ಪೆಂಡಿರ್ಮಕ್ಕಳೋಪಾದಿಯಲ್ಲಿ ಸಂಪತ್ತಾದೊಡಂ ವಿಪತ್ತಾದೊಡಂ  ಬಿಡರ್ ಎಂದು ಪೂರ‍್ವಾಚಾರ‍್ಯರ್ ಪೇೞ್ದ ಸದ್ಭೃತ್ಯರ  ಲಕ್ಷಣಂಗಳ್ ನಿನಗೆ ಕ್ಷೇಮಮುಂ ಎನಗೆ ತೇಜಮುಮೆಂತಕ್ಕುಮಂತೆ ಮಾಡೆಂದು ಬೇಗಂ ಪೋಗೆಂಬುದುಂ ದವನಕಂ ಪೋದಂ ಅನ್ನೆಗಮಿತ್ತಂ ಪಿಂಗಳಕನಾತ್ಮಗತದೊಳಿಂತೆಂದಂ:

೯೦. ಮದ್ದಾನೆಗಳ ಸಮೂಹದಿಂದಲೂ  ಪ್ರಾಣಿಗಳಿಂದಲೂ  ಗಿರಿಗುಹೆಗಳಿಂದಲೂ  ಅತ್ಯಂತ  ಭಯಂಕರವಾದ ಗೋರ ಕಾಮತಾರದಲ್ಲಿ ಮಹಾಬೀರರು ಎಂಬ ಹೆಸರಿನ ಜಂಬಕವಿತ್ತು. ವ|| ಆ ಜಂಬುಕನು ಒಂದು ದಿನ ಆಹಾರ ವಿಹಾರಕಾಂಕ್ಷೆಯಿಂದ ಅಡವಿಯೆನ್ನಲ್ಲ ತೊಳಲಿ ಎಲ್ಲಿಯೂ  ಏನನ್ನು ಪಡೆಯದೆ ತನ್ನ ಸ್ನೇಹಿತನಾದ ಒಂದು ವಾಯಸದ ಬಳಿಗೆ ಹೋಯಿತು. ಆ ಕಾಗೆ ಎದುರುಗೊಂಡು, ಎಲೆ ಭಾವ! ಎಕೆ ಬಡವಾಗಿದ್ದಿರಿ  ಎನ್ನಲು ಹಲವು ದಿನಗಳಿಂದ ಆಹಾರ ಪಡೆಯದೆ ನಿನ್ನಲ್ಲಿಗೆ ಆಸೆಪಟ್ಟು ಬಂದೆ ಎಂದಿತು. ಇದೆಂಥ ಮಹಾಕಾರ್ಯ ಈಗ ನಾನು ಹೋಗಿ ಹಿಂದಿರುಗುವವರೆಗೆ ನೀವು ಇಲ್ಲಿಯೇ ನಿಲ್ಲಿರೆ ಎಂದು ವಾಯುವೇಗದಿಂದ ವಾಯಸವು ಹೋಗಿ ಮರಳಿತು. ಇಲ್ಲಿಗೆ  ಕಾಣಿಸುತ್ತಿರುವ ನದೀತೀರದಲ್ಲಿ ಚತುರ್ಬಲಯುತರಾದ ಇಬ್ಬರು ರಾಜರು ಹೋರಾಡಿ ಹೆಣಮಯವಾಗಿರುವ ರಣಭೂಮಿಯನ್ನು ಕಂಡೆನು. ನಿನ್ನ ಒಡಲ ಬಡತನ ಕಳೆಯುವಷ್ಟರಲ್ಲಿ ಅಹಾರವುಂಟು ಅಲ್ಲಿಗೆ ನಡೆ ಎಂದು ವಾಯಸವು ಹೇಳಿತು, ಆ ನರಿ ಹೋಗಿ ಸಮರಭೂಮಿಯನ್ನು ಸೇರಿ ಅನೇಕ ಶವಗಳನ್ನು ನೋಡಿದುದರಿಂದ ಉಂಟಾದ ಹರ್ಷದಿಂದ ತುಂಬಿತ್ತು ಸ್ವಲ್ಪ ಸಮಯದಲ್ಲಿ  ಅನಿರೀಕ್ಷಿತವಾಗಿ ಹೊಮ್ಮಿದ ಭಯಂಕರಧ್ವಾನವನ್ನು ಕೇಳಿ ಎಲ್ಲಿಯೂ ನಿಲ್ಲದೆ ಓಡಿಬರಲು ಲಂಬಕರ್ಣ ಎಂಬ ಹೆಸರಿನ ಒಂದು ಜಂಬುಕನು ಕಂಡು ಇದೇನು ಎಲೆ ಭಾವಾ ! ನೀನು ಎಕೆ ಭಯಾತುರನಾಗಿ ಓಡಿಬರುತ್ತಿರುವೆ ಎಂದು  ಕೇಳಿತು.  ಅದಕ್ಕೆ ಮಹಾ ಭೀರುವು ಕೊಳಗುಳವು ಮನುಷ್ಯರಹಿತವೆಂದು ಭಾವಿಸಿ ಹೋದರೆ ನೆಲ ಮೊಳಗಿಂದಂತಹ ಒಂದು ಭಯಂಕರ ದ್ವಾನವಾಗಲು  ಅದನ್ನು ಕೇಳಿ ಓಡಿಬಂದೆ ಎಂದಿತು, ಅದಕ್ಕೆ ಜಂಬುಕನು ಹೀಗೆಂದಿತು ಆ ಶಬ್ದವು ಏನೆಂಬುದನ್ನು  ತಿಳಿಯದೆ ದುರಭೀ*ರುವಾಗಿ ಹೋಗಬೇಡ ಆ ಪ್ರದೇಶವನ್ನು ನನಗೆ ತೋರಿಸುವ ಬಾ ಎಂದು ನರಿಯನ್ನು ಒಡಗೊಂಡು  ಬಂದು ನೋಡಿತು. ಪರ್ವತದ ಶಿಖರವನ್ನು ಅನುಕರಿಸುವಂಥ ಒಂದು ಭೇರಿ  ಗಾಳಿಯಿಂದ ಪ್ರೇರಿತವಾದ ಮರದ ಕೊಂಬೆಯ ಹೊಡೆತದಿಂದ ಅತಿ ಘೋಷವನ್ನು ಮಾಡಿ ಹಾಗೆ ಗಾಳಿಯಿಲ್ಲದಾಗ  ನಿಶ್ಯಬ್ದವಾಗಿರುವುದನ್ನು ಆ ನರಿ ಕಂಡಿತು, ಮನುಷ್ಯ ಸಂಚಾರ ಇಲ್ಲದಿರುವುದನ್ನು ನಿಶ್ಚಯಮಾಡಿಕೊಂಡು ವಿಚಾರಿಸಿ ಆ ಭೇರಿಯನ್ನು ಸುತ್ತಿ ಮತ್ತೆ ಅದರಲ್ಲಿ ಎನಾದರೂ ಇದ್ದಿತೆಂದು ಸಂದೇಹದಿಂದ ಭೇರಿಯ ಕಣ್ಣನ್ನು ಹರಿದು ನೋಡಿ ಏನನ್ನೂ ಕಾಣದೆ ಲಂಬ ಕರ್ಣನು ಆ ನರಿ ದೂರಭೀರುವಾದುದಕ್ಕೆ ಪರಿಹಾಸ ಮಾಡಿತು. ಆದ್ದರಿಂದ ನೀವು ಶಬ್ದ ಮಾತ್ರಕ್ಕೆ ಹೆದರಿದರೆ ಇಂತಹ ಪರಿಹಾಸಕ್ಕೆ ಒಳಗಾಗುವಿರಿ, ದೇವರು ನನ್ನನ್ನು  ಅಲ್ಲಿಗೆ ಅಟ್ಟಿ ಬಳಿಕ ಅದಕ್ಕೆ ತಕ್ಕುದನ್ನು ಕೈಕೊಳ್ಳಬಹುದು ಎಂದಿತು ಅದಕ್ಕೆ ಪಿಂಗಳಕನು ನಿನ್ನ ಮನಸ್ಸಿನಲ್ಲಿ ಇದೇ ಉಪಾಯ ಸರಿ ಎಂದು ಕಂಡರೆ ಹೋಗಿ ಬಾ ಎಂದು ಹೀಗೆಂದಿತು: ಈ ಕಾರ್ಯವನ್ನು  ದೂತರೂ, ಭಟ್ಟರೂ ಪರಿಜನರೂ ಮಾಡಬೇಕಾದುದಲ್ಲದೆ ನೀನು ಮಾಡುವುದು ಉಚಿತವಲ್ಲ * ಇಂಥ ವಿಷಮಾನ್ವೇಷಣಕ್ಕೆ ನಿನ್ನನ್ನು ಹೇಗೆ ಅಟ್ಟಲಿ ? ಅದಕ್ಕೆ ದವನಕ ಹೇಳಿತು: ದೇವರು ಹೇಳಿದಂತೆ ಅರಸರು ತಮ್ಮ ಆಜ್ಞೆ ನೆರವೇರುವಲ್ಲಿಯೂ,ಮಿತ್ರರಲ್ಲಿಯೂ ಮೊದಲೇ ಪ್ರಧಾನರನ್ನು ಕಳುಹಿಸಬೇಕಲ್ಲದೆ ಶತ್ರುಗಳಲ್ಲಿಗೆ ಅಟ್ಟಬಾರದು ಎಂದು ರಾಜ ನೀತಿಯನ್ನು ಅರಿತವರಾಗಿದ್ದಿರಿ. ಹೋದ ಕಡೆಯಲ್ಲಿ ಎನಾದರೂ  ಅಪಾಯ ಸಂಭವಿಸೀತು ಎಂಬ ಸಂದೇಹದಿಂದ ನನಗೆ ದಯೆ ತೋರಿಸಿದಿರಿ ಎಂದು ಹೇಳಿದಿರಿ ಇಂಥ ಸಂದರ್ಭದಲ್ಲಿ  ನಿಮಗೆ ಹೋಗಬೇಕೆಂಬ  ಬಯಕೆ ಅತೀವವಾಗಿದ್ದರೂ ದೇವರಿಗೆ  ಇಂಥ ಅತಿ ಕುತೂಹಲ ಹುಟ್ಟಿದ ಸ್ಥಳಕ್ಕೆ ಈ ಕಾರ್ಯ ಅನುಚಿತ ಇನ್ನು ಯಾವ ಕಾರ್ಯಕ್ಕಾದರೂ ಯಾವ ರೀತಿಯಲ್ಲೂ ನಾನೇ ಸಾಕಾಗುತ್ತೇನೆ. ಪಿಂಗಳಕನಿಗೆ ದವನಕನ ಮಾತನ್ನು ಕೇಳಿ ಸಂತೋಷವಾಗಿ ಹೀಗೆಂದಿತು: ಶ್ಲೋ||  ಬುದ್ಧಿಹೀನನೂ ಕಾತುರನೂ ಅಗಿರುವವನು ಸ್ನೇಹಿತನಾಗುವುದರಿಂದ ಯಾವ ಲೇಸುಂಟು ? ಬುದ್ಧಿ ಪರಾಕ್ರಮ ಸದ್ಗುಣಗಳಿಂದ ಕೂಡಿದವನಾದರೂ ಭಕ್ತಿಯಿಲ್ಲದವನು ಯಾವ ಕೆಲಸಕ್ಕು  ಬಾರನು ಬುದ್ಧಿ ಪರಾಕ್ರಮ ಭಕ್ತಿಗಳು ಯರಲ್ಲಿ ಉಂಟೋ  ಆ ಭೃತ್ಯರು ಅರಸರನ್ನು ಹೆಂಡತಿ ಮಕ್ಕಳಂತೆ ಸಂಪತ್ತಿನಲ್ಲೂ ಕೈಬಿಡಲಾರರು. ಪೂರ್ವಾಚಾರ್ಯರು  ಹೇಳಿದ ಸದ್ಭೃತ್ಯರ ಲPಣಗಳು ನಿನ್ನಲ್ಲಿ ಚೆನ್ನಾಗಿವೆ. ಇನ್ನು ನಿನಗೆ  ನಾನು ಏನೆಂದು ಉಪದೇಶಿಸಲಿ ನಿನಗೆ ತೇಜಸ್ಸು ನನಗೆ ಶ್ರೇಯಸ್ಸು ಉಂಟಾಗುವಂತೆ ನಡೆದುಕೋ ಬೇಗ ಹೋಗಿ ಬಾ! ದವನಕನು ಹೋದನು. ಇತ್ತ ಪಿಂಗಳಕನು ತನ್ನ ಮನಸ್ಸಿನಲ್ಲಿಯೇ ಹೀಗೆಂದುಕೊಂಡನು.

ಅವಮಾನಿತನಪ್ಪುದಱೆಂ
ದವನಕನೆತ್ತಾನುಮೆನಗವಕ್ರಿಯೆಯನೊಡ-
ರ್ಚುವನೊ ಮನವಱೆಯದಾದನಿಂ-
ತವಿವೇಕಿಯೆನಾಗಿ ಪೋಗಲಟ್ಟಿದೆನವನಂ ||೯೧||

ಅಂತು ಕ್ಷುದ್ರ ಲುಬ್ದಭೀತಾವಮಾನಿತರಪ್ಪರನೆಂತುಂ ವಿಶ್ವಾಸಿಸಲ್ ಬಾರದೆಂದರ್ಥ ಶಾಸ್ತ್ರಾಭಿಪ್ರಾಯಮುಂಟು. ದವನಕಂ ಪೞೆಯ ಮಗನೆಂಬಿನಿತಲ್ಲದೆ ಇನಿತು ದೆವಸಮವಮಾನಿತನಾಗಿರ್ದನಪ್ಪುದಱೆಂ ತನ್ನ ಪೞಮೆಯಂ ಮಱೆದು ಪಗೆವಂ ಬಲ್ಲಿದನಪ್ಪೊಡೆ ಅವನೊಳ್ ಕೂಡಿ ಮೇಲೆವಂದೊಡತಿಭರಮಕ್ಕುಂ ಅವನೇನಂ ಮಾಡಿದಪನೆಂಬುದನರಿಯಲ್ ಬಾರದುದರಿಂದೀ ಸ್ಥಾನಮಂ ಬಿಟ್ಟು ಪೆಱತೊಂದು ದುರ್ಗಸ್ಥಾನದೊಳಿರ್ದು ನೋೞ್ಟೆನೆಂದಾತ್ಮಗತಂಗೆಯ್ದು ಮತ್ತಂ ಸತ್ತ್ವಾವಲಂಬನಾಗಿ,

ಶ್ಲೋ || ಆಹಾರ ನಿದ್ರಾಭಯ ಮೈಥುನಂಚ ಸಾಮಾನ್ಯಮೇತತ್ಪಶುಭಿರ್ನರಾಣಾಂ
ಜ್ಞಾನಂ ನರಾಣಾಮಕೋ ವಿಶೇಷಃ  ಜ್ಞಾನೇನಹೀನಃ ಪಶುಭಿಸ್ಸಮಾನಃ ||೧೭||

ಟೀ|| ಭೋಜನ, ನಿದ್ರೆ, ಭೀತಿ, ಸ್ರ್ತೀಸಂಗಮೆಂಬೀ ನಾಲ್ಕುಂ ಪಶುಗಳ್ಗಂ ಮನುಜರ್ಗಂ  ಸರಿ. ಜ್ಞಾನಮೇ ಮನುಷ್ಯರೊಳಕಂ ಜ್ಞಾನಮಿಲ್ಲದವಂ ಪಶುವಿನ ಸಮಾನಂ ಎಂಬ ನಿಸರ್ಗಗುಣದೊಳಾದ ಭಯಂ ದೇಶಕಾಲ ವಿಕಳತೆಯಿಂದೆನಗಂ ಮನೋಭಂಗಮನೆ ಮಾಡಿದಪ್ಪುದು. ಸುಸ್ವಾಮಿಗಂ ವಿಶ್ವಾಸಿಯಪ್ಪ ಪೞೆಯರುಮಾಪ್ತರುಮೆಂದುಂ ತಪ್ಪುವರಲ್ಲೆಂಬುದು ಸಮಸ್ತ ನೀತಿಶಾಸ್ತ್ರ ಪರಾನುಮತ ದೊಳಮನುಭವದೊಳಂ ಪ್ರತ್ಯಕ್ಷಮುಂ ಪ್ರಮಾಣ ಮುಮಾಗಿರ್ಪುದು ಅಪ್ತನನಾಪ್ತನೆಂದು ಹಿತನನಹಿತನೆಂದುಮವಿಚಾರದಿಂ ಸಂದೆಗಂಬಡುವಂಗೆಂದುಂ ಸುಖಮಾಗಲಱೆಯದು. ದವನಕನಪ್ಪೊಡೆ ಉಪಧಾವಿಶುದ್ಧನಪ್ಪ ಮಂತ್ರಿಪುತ್ರಂ ಎನಗೆಂದುಂ ತಪ್ಪುವನಲ್ಲೆಂದು  ನಿಶ್ಚಿಂತಮನನಾಗಿರ್ಪುದುಮಿತ್ತಲ್

ಪ್ಲಕ್ಷ ಕದಂಬ ನಿಂಬ ಪನಸಾರ್ಜುನ ತಾಲ ಲವಂಗ ಲುಂಗ ರು-
ದ್ರಾಕ್ಷ ತುರುಷ್ಕಮುಷ್ಕ ನಿಚುಳಾಮ್ರ ಕರಂಜ ವಟಾದ್ಯನೇಕ ವೃ
ಕ್ಷಕ್ಷುಪವೀರುಧೌಷಧಪರೀತ ಸಮುನ್ನತ ಕೂಟ ಕೋಟಿ ರೌ
ದ್ರಕ್ಷಿತಿ ಭೃದ್ಗುಹಾಗಹನಮಂ ಕಳಿದಾ ಮೃಗಧೂರ್ತನೆಯ್ದಿದಂ   ೯೨

ವ|| ಅಂತೆಯ್ದಿ

ಪಾವೃಡದ ಭ್ರಮೇಘಪಟಲಾಂತರಿತೇಂದುವಿಭಾಸಿಯುಂ ಸುರಾ-
ಜೀವಜಃ ಕದಂಬವನ ಕೈರವಚಾರು ಕಳಿಂದನಕನ್ಯಕಾ
ಜೀವನರ್ವತಾಯತ ತಮಾಲವನಾಂತರದಲ್ಲಿ ನಿಂದ ಸಂ-
ಜೀವಕನಂ ಮೃಗೇಂದ್ರಸಚಿವಾಗ್ರಣಿ ಕಂಡನಖಂಡನಸತ್ತ್ವನಂ  ೯೩

ವ|| ಅಂತು ಕಂಡು ಮುನ್ನಮಡವಿಯೊಳ್ ನಡೆವ ಬೀಡಿನೆೞ್ತುಗಳಂ ದೂರದೊಳ್ ನೋಡಿಯುಂ ಸಮೀಪದೊಳಾಡಿಯಂ ಅಱೆವುದಾಗಿಯೂ ಸಂಜೀವಕಂ ಸ್ವೇಚ್ಚಾವಿಹಾರದಿಂ ವರ್ಣ ಗಂಧಗತಿಸ್ವರಂಗಳಿನ ಪೂರ‍್ವಾಂಗನುಪ್ಪುದಱೆಂ ಕಿಱೆದು ಬೇಗಂ ಸಂದೆಗಂಬಟ್ಟು ಸಮೀಪಕ್ಕೆ ಬಂದು ನಿಶ್ಚಯಮೆೞ್ತಪ್ಪುದನಱೆದು ನರಿ ಹರಿಯ ಮರುಳ್ತನಕ್ಕೆ ನಕ್ಕು ನಾನೀಯೆೞ್ತನೆೞ್ತಂ  ಕಂಡೆನೆಂದು ನಿಷ್ಕಪಟವೃತ್ತಿಯಿಂ ಕೂರ್ತು ನಮ್ಮರಸಂಗೆ ಪೇೞ್ದೆನಪ್ಪೊಡೆ ನಾನೇತರ್ಕಂ ಬಾರ್ತೆಯಾಗಲಱೆಯೆಂ ಅದಱೆಂದರಸಂಗೆ ನಾನೇ  ಮುಖ್ಯಪ್ರಧಾನನಾಗಿರ್ಪೊಡಂ ಕೃಪೆಯಂ ಪಡೆವನಪ್ಪೊಡಂ: ಇದೇಕಾರಣ ಮೆಂದಱೆದು ಇದಂ ಪಿರಿದುಮಾಡಿ ಪೇೞ್ವೆನೆಂಬ ಬಗೆ ಮನದೊಳ್ ಮಿಗೆ ಮಾಣದಾಕ್ಷಣದೊಳಲ್ಲಿಂ ತಳರ್ದು

ಸತತಗತಿವೇಗದಿಂ ಪರಿ-
ಚಿತಮಾರ್ಗದೆ ಮಗುೞ್ದು ಬಂದು ಪೂರ್ವಾಸ್ಥಾನ-
ಸ್ಥಿತನಂ ಕಂಡಂ ಮೃಗಗಣ
ಪತಿಯಂ ಮೃಗಧೂರ್ತನಧ್ವಜಕ್ಲೇಶಾರ್ತಂ  ೯೪

ವ|| ಅಂತು ಕಂಡು ವಿನಯವಿನಮಿತ್ತೋತ್ತಮಾಂಗನಾಗಿ ದವನಕಂ ಸಮುಚಿತಾಸನದೊಳ್ ಕುಳ್ಳಿರ್ದಿಂತೆಂದಂ:

ವನಮಾತಂಗಘಟಾಮ-
ರ್ದನ ಶಬ್ದಶ್ರವಣಮಾತ್ರದಿಂದಂ ನೀಂ ಪೇ
ೞ್ದನಿತರ್ಕಮಗ್ಗಳಂ ದೇ
ವ ನಿಶ್ಚಯಂ ಬಗೆವೊಡವನ ರೌದ್ರಾಕಾರಂ                      ೯೫

ವ||  ಅ  ಮಹಾರೌದ್ರಭದ್ರಾಕಾರನ ಪೊಡರ್ಪಿನಳವಿಗೞೆದು ದರ್ಪಮಂ ಪೇಳ್ವೊಡೆ ಕಾಲಿಂದಿಯ ಮಡುವನಿರ್ಬಗೆಯಾಗಿ ಪಾಯ್ದು ಕದಡುವಿನಂ ಜಲಕೇಳಿಯಾಡಿ ಪೊಱಮಟ್ಟುನಿಂದು ಜಾತಹರ್ಷನಾಗಿ ಬೆಟ್ಟುಗಳ್ ಬಿರಿಯೆ ನಿಷ್ಠುರಧ್ವಾನಂಗೆಯ್ದು ಮೇದಿನಿಯನೆತ್ತಿದಾದಿವರಾಹನಂತೆ ದರಿಗಳಂ ಕೋಡೊಳ್ ಕುತ್ತಿಯೆತ್ತಿ ಬಿದಿರ್ದೀಡಾಡತಿರ್ದು ಕಟ್ಟೆಗಟ್ಟಿದಂತಾಗಿ ಜಗುನೆಯಲ್ಲಿ ಪರಿಪರಿದು ಬೇಗಂ ಮಾಣ್ದಿರೆಯುಂ ಮತ್ತಂ ಸುಣಿ ಸೊಕ್ಕೆ  ಕೊಣಕುತುಂ ದೆಸೆದೆಸೆಗೆ ಪರಿದು ಪಿರಿಯ ಮರಂಗಳನುಱದೆ ಕೊಂಡು ನೂಂಕಿ ಪೊತ್ತುಂ ಪರಿಯುತ್ತುಂ ಪೊಣರ್ದುದ್ದಂ ನೆಗೆದು ಕುನಂಗಿ ಭರದಿಂ ತಲೆಯೆತ್ತಿಯುರ್ಬಿ ನಭಮಂ ನುಂಗಲೊಡರ್ಚಿದಂತೆ ಮೇಘಮಂ ನೋಡಿ ದೆಸೆದೆಸೆಯಂ ವಾಸಿಸಿ ನಲವರಿದು ಪ್ರಾಣಿಗಳೊಳ್ ತನಗದಿರದಿದಿರಾಂಪರೊರ್ವರುಮಂ ಕಾಣದೆ ಸಮಸ್ತಸಮುದ್ರ ಮುದ್ರಿತಮೇದಿನಿಯನಡಿಗೊೞಂಗಿನೊಳ್ ಮಡಂಗಿರಿಸಲ್ಬಗೆದು ಗರ್ವಪರ‍್ವತಾರೂಢನಾಗಿ ಪರ‍್ವತಮಂ ತಾಗೆ  ಬೇಗದೊಳ್ ಕೆಡೆವ ಕೋಡುಂಗಲ್ಗಳಂ ಕೋಡೋಳಾಂತೀಡಾಡುತ್ತುಂ ಜಗದ ಮೃಗಮೆಲ್ಲಮಂ ಜವನೆ ನೆವಮಿಟ್ಟು ನುಂಗಲುಂ ನೊಣೆಯಲುಂ ಪುಟ್ಟಿದಂತಪ್ಪ ಮಹಾದ್ಭುತಮನಭೂತಪೂರ್ವಮಂ ರುದ್ರನ ಭದ್ರ ವೃಷಭನನಿನಿಸನುಕರಿಸುವುದುಮಂ ಕಂಡೆನೆಂದು ಮಹಾದ್ಬುತಭಯರೌದ್ರ ಭಯಾನಕವೀರರಸಂಗಳನೆ ಕಪಟಕ್ರಿಯೆಯಿಂ ಪಿರಿದುಮಾಡಿ ಪೇೞ್ವುದುಂ: ಪಿಂಗಳಕಂ ಭಗ್ನಮನನಾಗಿ ಕಿಱೆದು ಬೇಗಂ ಪಂದೆಯಂ ಪಾವಡರ್ದಂತೆ ಮೇಗುಸಿರ್ವಿಟ್ಟು ಹಮ್ಮದಂಬೋಗಿ ಮುಮ್ಮನೆ ಬೆಮರ್ತು ತನ್ನಿಂ ತಾ ಚೇತರಿಸಿ ಕಾತರತೆಯ ಮಾಣ್ದು ದವನಕಂಗೆ ಪಿಂಗಳಕನಿಂತೆಂದಂ:

ಇಂತಪ್ಪ ರೌದ್ರನುಂ ಕ —
ಲ್ಪಾಂತನಕಪ್ರತಿಮನಪ್ಪನುಂ ನಿನ್ನಂ ಕಂ-
ಡೆಂತು ಕಡೆಗಣಿಸಿ ಕೊಲ್ಲದೆ
ಸಂತಂ ಬರಲಿತ್ತನದಱ ತೆಱನಂ ಪೇೞ  ೯೬

೯೧; ಅವಮಾನಿತನಾದುದರಿಂದ ದವನಕನು ಎಲ್ಲಿಯಾದರೂ ನನಗೆ ಅಹಿತವನ್ನು ಎಣಿಸಿಯಾನೋ ಏನೋ! ಅವನ ಇಂಗಿತವನ್ನು ಅರಿಯದೆ ನಾನು ಹೀಗೆ ಅವಿವೇಕಿಯಾಗಿ ಅವನನ್ನು ಕಳುಹಿಸಿಕೊಟ್ಟನು. ವ|| ಕ್ರದ್ದರೂ, ಲುಬ್ದರೂ, ಭೀತರೂ, ಅವಮಾನಿತರೂ ಅದವರಲ್ಲಿ ಏನಾದರೂ ವಿಶ್ವಾಸವನ್ನು ಇಡಬಾರದು ಎಂದು ಅರ್ಥಶಾಸ್ರ್ತದ ಅಭಿಪ್ರಾಯವಿದೆ, ದವನಕನೂ ಹಳೆಯ ಮಂತ್ರಿಯ ಮಗ ಎಂಬುದಲ್ಲದೆ ಇಷ್ಟು ದಿನಗಳವರೆಗೆ ಅವಮಾನಿತನಾಗಿದ್ದವನು. ಅವನೇನು ಮಾಡುತ್ತಾನೋ ಎಂದು ನಂಬುವುದು ಕಷ್ಟ. ಅದರಿಂದ ಈ ಸ್ಥಾನವನ್ನು ಬಿಟ್ಟು ಬೇರೊಂದು ದುರ್ಗಸ್ಥಾನದಲ್ಲಿದ್ದು ನೋಡುವೆನು ಎಂದು ಆತ್ಮಗತವಾಗಿ ಅಂದುಕೊಂಡು ಪುನಃ ಸತ್ತ್ವಾವಲಂಬನಾದನು. ಶ್ಲೋ || ಭೋಜನ ನಿದ್ದೆ ಭೀತಿ ಸ್ತ್ರೀಸಂಗ, ಎಂಬ ಈ ನಾಲ್ಕು ಪಶುಗಳಿಗೂ, ಮನುಷ್ಯರಿಗೂ ಸಮಾನವಾದ ವಿಷಯಗಳು; ಜ್ಞಾನವೇ ಮನುಷ್ಯರಲ್ಲಿ ಶ್ರೇಷ್ಟವಾದುದು.  ಜ್ಞಾನವಿಲ್ಲದವ ಪಶುವಿಗೆ ಸಮಾನ. ಈ ರೀತಿಯ ನೈಸರ್ಗಿಕವಾದ ಭಯ ದೇಶಕಾಲವಿಕಳತೆಯಿಂದ ನನಗೂ ಮನೋಭಂಗವನ್ನುಂಟುಮಾಡುವುದು. ಸುಸ್ವಾಮಿಗೆ ವಿಶ್ವಾಸಿಯಾದ ವೃದ್ದಜನರೂ ಆಪ್ತರೂ ಎಂದು ತಪ್ಪುವುದಿಲ್ಲ ಎಂದು ನೀತಿ ಶಾಸ್ತ್ರದಲ್ಲಿಯೂ ಅನುಭವದಲ್ಲಿಯೂ ಪ್ರತ್ಯಕ್ಷವೂ ಪ್ರಮಾಣವೂ ಆದ ವಿಚಾರ, ಅಪ್ತನ್ನು ಅನಾಪ್ತನೆಂದೂ ಹಿತನನ್ನು ಅಹಿತನೆಂದೂ ಅವಿಚಾರದಿಂದ ಸಂದೇಹಪಡುವವನಿಗೆ ಎಂದೆಂದೂ  ಸುಖವಾಗದು, ದವನಕನು ಉಪದಾವಿಶುದ್ಧನಾದ ಮಂತ್ರಿ ಪುತ್ರ. ನನಗೆಂದೂ ತಪ್ಪುವವನಲ್ಲ ಎಂದು ನಿಶ್ಚಿಂತಮನನಾಗಿದ್ದನು. ೯೨. ಇತ್ತ, ಬಸರಿ ಕಡವೆ ಬೇವು ಹಲಸು ಮತ್ತಿ ತಾಳೆ ಲವಂಗ, ಲುಂಗ, ರುದ್ರಾಕ್ಷ, ಸಾಂಬ್ರಾಣಿ ಮುಷ್ಕ ತೊರಗಣಿಗಿಲೆ, ಮಾವು ಹನಗಲು, ಅಲ ಮೊದಲಾದ ಅನೇಕ ಮರ ಪೊದರು ಪೊದೆಗಳೇ ಮೊದಲಾದ ವನಸ್ಪತಿಗಳಿಂದ ಕೂಡಿದ ಎತ್ತರವಾದ ಶಿಖರಾಗ್ರಗಳಿಂದ ಭಯಂಕರವಾದ ಬೆಟ್ಟ ಗುಹೆಗಳಿಂದ ಕೂಡಿದ ಅರಣ್ಯವನ್ನು ದಾಟಿ ಆ ನರಿ ಹೋಯಿತು. ೯೩. ಮಳೆಗಾಲದ ಮೋಡದ ಮರೆಯ ಚಂದ್ರನಂತೆ ಹೊಳೆಯುವ ಸುರಾಜೀವರಜಸ್ಸಾದ ಕಂದಂಬವನದ ಬಿಳಿನೈದಿಲೆಯಂತೆ ಸುಂದರವಾದ ಯಮುನಾ ನದಿಯ ನೀರಿನಿಂದ ಪುಷ್ವವಾಗಿ ಬೆಳೆದ ಹೊಂಗೆಯ ಮರಗಳಿಂದ ಕೂಡಿದ ಅರಣ್ಯದಲ್ಲಿ ನಿಂದ ಅಖಂಡಸತ್ತ್ವನಾದ ಸಂಜೀವಕನನ್ನುಮೃಗೇಂದ್ರಸಚಿವಾಗ್ರಣಿ ಕಂಡನು. ವ|| ಹಾಗೆ ಕಂಡು ಮೊದಲು ಅಡವಿಯಲ್ಲಿ ಮೇಯುತ್ತಿದ್ದ ಊರಿನ ಎತ್ತುಗಳನ್ನು ದೂರದಿಂದ ನೋಡಿಯೂ ಸಮೀಪದಿಂದ ಅಡಿಯೂ ತಿಳಿದಿರುವುದರಿಂದಲೂ, ಸಂಜೀವಕನೂ ಸ್ವೇಚ್ಚಾವಿಹಾರದಿಂದಾಗಿ ವರ್ಣ, ಗಂಧ, ಗತಿ ಸ್ವರಗಳಲ್ಲಿ  ಅಪೂರ್ವಾಂಗ ನಾಗಿ ಕಂಡುಬಂದುದರಿಂದಲೂ ಸ್ವಲ್ಪ ಸಂದೇಹಗ್ರಸ್ತನಾಗಿ ಸಮೀಪಕ್ಕೆ ಬಂದು ನಿಶ್ಚಯವಾಗಿಯೂ ಎತ್ತೆಂಬುದನ್ನು ತಿಳಿದು ನರಿ ಹರಿಯ ಮರುಳುತನಕ್ಕೆ ನಕ್ಕಿತು. ನಾನು ಈ ಎತ್ತನ್ನು ಕಂಡೆ ಎಂದು ನಿಷ್ಕಪಟವೃತ್ತಿಯಿಂದ ವಿಶ್ವಾಸದಿಂದ ನಮ್ಮ ಅರಸನಿಗೆ ಹೇಳಿದನಾದರೆ ನಾನು ಯಾವ ಕೆಲಸಕ್ಕೂ ಬರಲಾರೆ ಅರಸನಿಗೆ ನಾನೇ ಮುಖ್ಯ ಪ್ರಧಾನನಾಗಬೇಕೆಂಬ ಕೃಪೆಚಿiನ್ನು ಪಡೆಯಬೇಕಾದರೆ ಇದೇ ಉಪಾಯ ಎಂಬುದನ್ನು ತಿಳಿದು ಇದನ್ನು ದೊಡ್ಡದು ಮಾಡಿ ಹೇಳುವೆ ಎಂದು ದವನಕನ ದೃಢನಿಶ್ಚಯಮಾಡಿ ಅಲ್ಲಿಂದ ಹೊರಟನು. ಸತತಗತಿವೇಗದಿಂದ ಪರಿಚಿತಮರ್ಗದಲ್ಲಿ ಹಿಂದಿರುಗಿ ಬಂದು  ಅ ಮೃಗಧೂರ್ತನು ಮೃಗಪತಿಯನ್ನು ಸೇರಿದನು. ದವನಕನು ವಿನಯವಿನಮತ ಉತ್ತಮಾಂಗನಾಗಿ ಉಚಿತಾಸನದಲ್ಲಿ ಕುಳಿತು ಹೀಗೆಂದ : ವನಮಾತಂಗಘಟಾಮರ್ದನ! ಶಬ್ದ ಶ್ರವಣಮಾತ್ರದಿಂದಲೇ ನೀನು ಕಲ್ಪಿಸಿಕೊಂಡ ಅವನ ರೌದ್ರಕಾರ ನಿಜವಾಗಿಯೂ ಅದಕ್ಕಿಂತ ಹಿರಿದಾದುದು. ಆ ಮಹಾರೌದ್ರಭದ್ರಾಕಾರನ ಸಾಮರ್ಥ್ಯವನ್ನು ವರ್ಣಿಸಲು ಅಸಾದ್ಯ. ಕಾಳಿಂದೀನದಿಯನ್ನು ಎರಡು ಭಾಗವಾಗುವಂತೆ ನುಗ್ಗಿ ಅದು ಕದಡಿ ಹೋಗುವಂತೆ ಜಲಕೇಳಿಯಾಡಿ ಹರ್ಷಚಿತ್ತನಾಗಿ ನಿಂತು ಬೆಟ್ಟಗಳು ಮೇದಿನಿಯನ್ನು ಎತ್ತಿದ ಅದಿವರಾಹನಂತೆ ಕಂದರಗಳನ್ನು ಕೋಡುಗಳಿಂದ ಕುತ್ತಿ ಎತ್ತಿ ಚೆಲ್ಲುವನು. ಯಮುನೆಯಲ್ಲಿ ಬಿರಿಯುವಂತೆ ನಿಷ್ಠುರಧನಮಾಡಿ ಸ್ನಾನಮಾಡಿ ಮೇಲೆದ್ದು ಸೊಕ್ಕಿ ದಿಕ್ಕು ದಿಕ್ಕಿಗೆ ಹಾರಿ ದೊಡ್ಡ ದೊಡ್ಡ ಮರಗಳನ್ನು ಲಕ್ಷ್ಯ ಮಾಡದೆ ನೂಕುವನು- ಆಕಾಶವನ್ನೆ ನುಂಗುವೆನೆಂಬಂತೆ ಮೋಡಗಳನ್ನು ನೋಡಿ ದಿಕ್ಕುಗಳನ್ನು ಮೂಸಿ ಪ್ರಾಣಿಗಳಲ್ಲಿ ತನಗೆ ಹೆದರದೆ ಪ್ರತಿಭಟಿಸುವ ಒಬ್ಬರನ್ನೂ ಕಾಣದೆ ಸಮಸ್ತಸಮುದ್ರತಮೇದಿನಿಯನ್ನು ತನ್ನ ಕಾಲಿನ ಗೊರಸಿನಡಿಯಲ್ಲಿ ಇಟ್ಟುಕೊಳ್ಳಬೇಕೆಂದು ಗರ್ವಪರ್ವತಾರೂಢನಾಗಿ ಪರ್ವತವನ್ನು ಅಪ್ಪಳಿಸಿದನು. ಆಗ ಬಿದ್ದ ಕೋಡುಗಲ್ಲುಗಳನ್ನು ತನ್ನ ಕೊಂಬುಗಳಲ್ಲಿ ಧರಿಸಿದನು. ಜಗತ್ತಿನಲ್ಲಿರುವ ಮೃಗಗಳನ್ನೆಲ್ಲ ಯಮನೇ ನುಂಗಿ ನೀರು ಕುಡಿಯಲು ಹುಟ್ಟಿದಂತಹ ಮಹಾದ್ಭುತನೂ, ಅಭೂತಪೂರ್ವನೂ ಆಗಿ ರುದ್ರನ ಭದ್ರವೃಷಭನನ್ನು ಅನುಕರಿಸುವಂತಿರುವುದನ್ನ್ನು ನಾನು ಕಂಡೆ ಎಂದು ಮಹಾದ್ಭುತ ಭಯರೌದ್ರ ಭಯಾನಕ ವೀರರಸಗಳನ್ನು ಕಪಟಕ್ರಿಯೆಯಿಂದ ದೊಡ್ಡದು ಮಾಡಿ ಹೇಳಿದನು. ಇದನ್ನು ಕೇಳಿದ ಪಿಂಗಳಕನು ಭಗ್ನಮನಸ್ಕನಾಗಿ ಸ್ವಲ್ಪ ಹೊತ್ತಿನಲ್ಲೆ  ಡಿಯನ್ನು ಹಾವು ಅಡರಿದಂತೆ ಮೇಲುಸಿರು ಬಿಟ್ಟು ಮೂರ್ಚ್ಛೆಹೋಗಿ ಬೆವರಿ ತನ್ನಿಂದ ತಾನೇ ಚೇತರಿಕೊಂಡು ಕಾತರತೆಯಿಂದ ಸಂವರಿಸಿಕೊಂಡು ದವನಕನಿಗೆ ಹೀಗೆಂದನು: ಇಂತ ರೌದ್ರನೂ ಕಲ್ಪಾಂತಕನ ಸಮನಾದವನೂ ಅದ ಅವನು ನಿನ್ನನ್ನು ಕಂಡು ಹೇಗೆ ಕೊಲ್ಲದೆ ಸುಮ್ಮನೆ  ಬಿಟ್ಟನೆಂಬುದನ್ನು ತಿಳಿಸು. ವ|| ಅಗ ದವನಕನು ಹೇಳಿದನು: