ಸ್ತ್ರೀಯರ ಕುರಿತು ಭೈಗುಳಗಳು:

ಎಲ್ಲ ಜನಪದ ಸಮಾಜದಲ್ಲಿ ಬೈಗುಳಗಳು ಸಹಜವಾಗಿ ಇರುವಂತೆ ಭೈರರ ಸಮಾಜದಲ್ಲೂ ಇವು ಸಮೃದ್ಧವಾಗಿವೆ. ಬೈಗುಳಗಳನ್ನು ಆಯಾ ಪ್ರದೇಶದಲ್ಲಿ ರೂಢಿಯಾಗಿರುವ ಮಾತುಗಳಲ್ಲಿ ಹೇಳಲಾಗುವುದು. ಸ್ತ್ರೀಯರ ಕುರಿತ ತೀರ ಅಶ್ಲೀಲವಾದ ಪದಗಳು ಪುಂಖಾನು ಪುಂಖವಾಗಿ ಹೊರಹೊಮ್ಮುವುದು ಸಹಜ. ಇವುಗಳಲ್ಲಿ ಎರಡು ರೂಪದ ಬೈಗುಳಗಳನ್ನು ಗುರುತಿಸಬಹುದು:

ಅ) ಶಾಪ ಹಾಕುವ ಬೈಗುಳ         ಬ) ಅಶ್ಲೀಲ ಬೈಗುಳ       ಕ) ಕೆಟ್ಟ ಬೈಗುಳ

ಅ) ಶಾಪ ಹಾಕುವ ಬೈಗುಳಗಳು:

೧ ಇವನ ಮನೆ ಹಾಳಾಗಿ ಹೋಗ್ಲಿಕ್ಕೆ

೨ ಇವನ ವಂಶ ನಾಶವಾಗಲಿ

೩ ಮನೆ ಸುಟ್ಟು ಬೂದಿಯಾಗಲಿ

೪ ಹೆಂಡ್ರು ಮಕ್ಕಳ್‌ಸಾಯ್‌

೫ ಇವನ ಮನಿ ಮಣ್ಣ್‌ತಿನ್ನಲಿಕ್ಕೆ

೬ ಕೈಕಾಲು ಮರಗಟ್ಟಿ ಹೋಗ

೭ ಇವನ ಮಕ್ಕಳಿಗೆ ಗರ ಬಡಿಯ

೮ ಮಕ್ಕಳ ಹೊಂಡಕ್ಕೆ ಬೀಳಾ

೯ ನಿನ್‌ಸಂತಾನ ಹಾಳಾಗ್ಲಿ

೧೦ ನಿನ್ನ ಹುಲಿ ಹಿಡಿಯ

೧೧ ನಿನಗೆ ಮಾರಿಬೇನೆ ಬರ

೧೨ ನಿನಗೆ ಕುಷ್ಠ ಆಗಲಿಕ್ಕೆ

೧೩ ನಿನಗೆ ಕುಂಬಳ ಕಾಯಿ ಕಡಿಯ

೧೪ ನೀಂಗೆ ಬಾಳೆಕಾಯಿ ಕೊಚ್ಚ

೧೫ ಸತ್‌ಮಣ್‌ತಂದ್‌ಹೋಗೆ

೧೬ ನಿನ್ನ ಹೊಂಡ ತೋಡಿ ಇಡರೆ

೧೭ ನಿನ್ನ್ ಎದಿ ಮೇಲೆ ಕಲ್‌ಹೋರಕೆ

೧೮ ನಿನ್ನ ಕುಕ್ಕ ಮಾಲೇಲಿ ಇಡಕೆ

೧೯ ನಿನ್ನ ಗಾಳಿಗ ಜೋಪುಕೆ

-ಇತ್ಯಾದಿ

ಬ) ಅಶ್ಲೀಲ ಬೈಗುಳಗಳು:

ಕೋಪ ಹೆಚ್ಚಾದ ಹಾಗೆ ಬೈಗುಳ ಸೊಂಟದ ಕೆಳಗಿನ ಮಟ್ಟಕ್ಕೆ ಇಳಿಯುತ್ತದೆ. ಲೈಂಗಿಕ ಅಂಗಗಳನ್ನು ಹೆಸರಿಸಿಯೇ ಅಥವಾ ದ್ವೇಷಿಸಿಯೋ ಹೆಂಡಿರ, ಮಕ್ಕಳ ಗುಪ್ತಾಂಗಗಳ ಬಗ್ಗೆ ನಾಲಿಗೆಯನ್ನು ಲೀಲಾಜಾಲವಾಗಿ ಹರಿಯಬಿಡುತ್ತಾರೆ. ಇಂಥ ಬೈಗುಳಗಳನ್ನು ಸಭ್ಯರು ಕಿವಿಯಲ್ಲೂ ಕೇಳಲಾರರು. ಕೋಪಾಧಿಕ್ಯದಲ್ಲಿ ಆ ಮಾತುಗಳ ಅರ್ಥವನ್ನು ಬೈಯ್ಯುವವನು ಯೋಚಿಸುವುದಿಲ್ಲ. ಆದರೆ ಎದುರಾಳಿಗೆ ಅತಿ ಹೆಚ್ಚಾದ ಕೋಪಕ್ಕೆ ಕಾರಣವಾಗಿ ಬೈಯ್ಯುವವನನ್ನು ಕೊಂದು ಹಾಕುವಷ್ಟು ಕೋಪಕ್ಕೆ ಕಾರಣವಾಗಬಹುದು. ಇಂಥ ಬೈಗುಳು ಎದುರಾಳಿಯ ಸ್ವಾಭಿಮಾನಕ್ಕೆ ಕೊಟ್ಟ ಪೆಟ್ಟಾಗುತ್ತದೆ.

ಉದಾ:

೧. ನಿನ್ನ ತಾಯಿ ಹಡ

೨. ನಿನ್ನ ಹೆಂಡ್ರ ಹಡ

೩. ನಿನ್ನ ಮಗಳಿಗೆ ನನ್ನ ತುಣ್ಣಿ

೪. ನಿನ್ನದು ನನ್ನ ತುಣ್ಣಿಗೆ ಸಮ

೫. ಶಪ್ಪ ಹರಿ

೬. ನನ್ನ ಹಾಟು ನೆಕ್ಕು

೭. ನಿನ್ನ ಹೆಂಡ್ರಿಗೆ ಸಿಕ್ಕವರ ಹಡ

೮. ನಿನ್ನ ಮಗಳು ಸೂಳಿಯಾಗ

೯. ತುಲ್ಲು ಹರಿಕಿ

೧೦. ಹಾದರದ ಮುಂಡೆ

೧೧. ಸೂಳೆ ಮುಂಡೆ

೧೨. ಅಪ್ಪಂಗೆ ಹುಟ್ಟಿದು ಇಲ್ಲ

೧೩. ಬೇರೆ ತುಣ್ಣಿಗೆ ಹುಟ್ಟಿದವ

ಕ) ಕೆಟ್ಟ ಬೈಗುಳ:

ಕೆಲವಾರು ಕೆಟ್ಟ ನುಡಿಗಳಿಂದ, ನಿಂಧಾ ವಾಕ್ಯಗಳಿಂದ, ಅತ್ಯಂತ ಕೀಳು ಶಬ್ದಗಳಿಂದ ದ್ವೇಷಿ ಅಥವಾ ಎದುರಾಳಿಯನ್ನು ಬಯ್ಯಬಹುದು. ಇದಕ್ಕೆ ಎದುರಾಳಿಯು ವಂಶ, ಜಾತಿ, ಎಲ್ಲವೂ ಸೇರಿಕೊಳ್ಳುತ್ತದೆ. ಅಂಥ ಕೆಲವು ಉದಾಹರಣೆಗಳು:

೧. ಸೂಳೇ ಮಗ

೨. ಬೋಳೀ ಮಗ

೩. ಹಾದರಕ್ಕೆ ಹುಟ್ಟಿದವ

೪. ಬೇವಾರ್ಸಿ

೫. ರಂಡೆ ಮುಂಡೆ

೬. ಹಡಬೆಗೆ ಹುಟ್ಟಿದವ

೭. ನಂಗೆ ಹುಟ್ಟಿದವ

೮. ನಿನ್ನ ಮೋರೆಗೆ ಹಂದಿ ಉಚ್ಚಿಲಿ

೯. ಬ್ಯಾರಿಗೆ ಹುಟ್ಟಿದವ

ಈ ಬೈಗಳುಗಳನ್ನು ನೋಡಿದಾಗ ಲಿಂಗ ಪ್ರಭೇದದ ವಿಶ್ಲೇಷಣೆಯಲ್ಲಿ ಬೈಯ್ಗುಳಗಳು ಬಹಳ ಮುಖ್ಯವಾಗುತ್ತದೆ. ಶೋಷಕ ಸ್ಥಾನದಲ್ಲಿರುವ ಗಂಡು ಇದರ ಉತ್ಪಾದಕನಾಗಿರುವುದಿಲ್ಲ. ಬೈಯ್ಗುಳಗಳ ರೂಪಾವಳಿಗಳು ಹೇಳುತ್ತವೆ. ಗಂಡನ್ನು ಬಯ್ಯುವ ಸಂದರ್ಭದಲ್ಲೂ ಅದು ಹೆಣ್ಣಿನ ಮೂಲಕವೇ ವ್ಯಕ್ತಗೊಳ್ಳುತ್ತದೆ.

ಉದಾ:

೧. ಮುಂಡೇಮಗ

೨. ನಿನ್ನ ಹೆಂಡತಿ ರಂಡೆಯಾಗಲಿ

೩. ನಿನ್ನ ಅಬ್ಬೆ ಹೆಣ್ಣು ಹೆರಲಿ

೪. ನಿನ್ನ ಹೆಂಡತಿ ವಾಲಿ ಕಳಿಯ

೫. ನಿನ್ನ ಹೆಂಡತಿ ಹಡುಕೆ (ಸಂಭೋಗಿಸಲಿ)

ಇತ್ಯಾದಿಗಳು ನಿರಪರಾಧಿ ಹೆಣ್ಣಿನ ನಿಕೃಷ್ಟತೆಯನ್ನು ತೆರೆದಿಡುತ್ತವೆ. ಗಂಡಿನ ಅಧಿಕಾರಪ್ರವೃತ್ತಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ನಿರಂತರ ಹೋರಾಡುತ್ತಲೇ ಬಂದಿದೆ. ಅದಕ್ಕಾಗಿ ಮೌಲ್ಯದ ಹೆಸರಿನಲ್ಲಿ ಹೆಣ್ಣಿಗೆ ಕೆಲವೊಂದು ಗುಣ, ಪಾತ್ರಗಳನ್ನು ನಿರ್ದೇಶಿಸಿ ಅವನ್ನು ಸಹಜ ಎಂದು ಮಾತ್ಮೀಕರಣಗೊಳಿಸಲಾಗಿದೆ. ಗಾದೆಗಳು ಇಂತಹ ಸಾಮಾಜಿಕ ನೀತಿ-ನಿಯಮಗಳನ್ನು ಜಾರಿಗೊಳಿಸುವಲ್ಲಿ ಮತ್ತು ಪರುಷಾಧಿಕಾರದ ಸಾತತ್ಯಕ್ಕಗಿ ದುಡಿಯುತ್ತಿರುತ್ತವೆ. ಹೀಗಾಗಿ ಇವು ಪ್ರಕಟಿಸುವ ನಿಲುವು ಇಂತಹ ಮೌಲ್ಯಗಳನ್ನು ಸ್ವೀಕರಿಸುವುದೇ ಆಗಿದೆ.

ಉದಾ:

೧. ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ

೨. ಗಂಡು ಕೂತು ಕೆಟ್ಟ, ಹೆಣ್ಣು ತಿರುಗಿ ಕೆಟ್ಟಳು

೩. ಕಪ್ಪೆ ಸೊಕ್ಕಿದರೆ ಹಳ್ಳದಲ್ಲಿ ನಿಲ್ಲದು, ಹೆಣ್ಣು ಸೊಕ್ಕಿದರೆ ಮನೆಯಲ್ಲಿ ನಿಲ್ಲದು

೪. ಮಜ್ಜಿಗೆಯಲ್ಲಿದ್ದ ಬೆಣ್ಣೆ ಕೆಡುವುದಿಲ್ಲ, ಅಂಕೆಯಲ್ಲಿದ್ದ ಹೆಣ್ಣು ಕೆಡುವುದಿಲ್ಲ

೫. ಗಂಡು ನೋಡಿ ಹೆಣ್ಣು ಕೊಡಬೇಕು, ಮರ ನೋಡಿ ಬಳ್ಳಿ ನೆಡಬೇಕು

ಇತ್ಯಾದಿ ಗಾದೆಗಳು ಲಿಂಗಪ್ರಭೇದದ ಹಿನ್ನೆಲೆಯಲ್ಲಿ ಒಡೆದ ಗಂಡು-ಹೆಣ್ಣಿನ ಜಗತ್ತನ್ನು ನಿರ್ದೇಶಿಸುತ್ತವೆ. ಮತ್ತು ಹೆಣ್ಣಿಗೆ ಗಂಡಿನ ರಕ್ಷಣೆಯ ಅಗತ್ಯವನ್ನು ಒತ್ತಾಯಿಸುತ್ತವೆ.

ಜೀವನ ಚಕ್ರ

ಜನನ-ನಾಮಕರಣ:

ಭೈರರಲ್ಲಿ ಜಾತಿಯ ಅನುಭವಸ್ಥರಾದವರು ಬಂದು ಹೆರಿಗೆ ಕಾರ್ಯ ನಡೆಸುತ್ತಾರೆ. ಹೆರಿಗೆ ಮಾಡಿಸುವಾಗ ಮನೆಯಲ್ಲಿನ ಕೋಣೆಯೊಂದನ್ನು ಚಾಪೆ ಹಾಕಿ ಮರೆಮಾಡುತ್ತಾರೆ. ಇಬ್ಬರು ಮುದುಕಿಯರು ಮಾತ್ರ ಒಳಗಿದ್ದು, ನೋವು ಶುರುವಾದಾಗ ಗುದ್ದಭಾಗಕ್ಕೆ ಎಣ್ಣೆ ಸವರಿ ಮಗು ಬರಲು ಮೆದುಗೊಳಿಸುತ್ತಾರೆ. ಒಂದು ಮಡಿಕೆಯಲ್ಲಿ ಹದವಾಗಿ ಕಾಸಿದ ಬಿಸಿನೀರನ್ನು ಇಟ್ಟುಕೊಂಡಿರುತ್ತಾರೆ. ಗರ್ಭಿಣಿಯ ಜೊತೆ ಅನುಭವದ ಮಾತನಾಡಿ ಅವಳ ನೋವು ಶಮನ ಮಾಡುತ್ತ, ಹೆರಿಗೆ ಕೆಲಸ ನಡೆಸುತ್ತಾರೆ. ಹೆರಿಗೆ ತುಂಬಾ ತೊಂದರೆಯಾದಲ್ಲಿ ಮಾತ್ರತ ಸರ್ಕಾರಿ ಆಸ್ಪತ್ರೆಗೆ ಅಥವಾ ಹತ್ತಿರದ ನರ್ಸ್ ಇರುವಲ್ಲಿಗೆ ಬಂಡಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಇಲ್ಲದಲ್ಲಿ ಅವರನ್ನೇ ಕರೆದುಕೊಂಡು ಬರುತ್ತಾರೆ. ಹೆರಿಗೆಯಾದ ನಂತರ ಮಗುವನ್ನು ಬಿಸಿನೀರಿನಿಂದ ಶುದ್ಧಗೊಳಿಸುತ್ತಾರೆ. ಹೆರಿಗೆಯ ನಂತರದ ಕಸವನ್ನು ಕಾಸರಕನ ಮರದ ಹತ್ತಿರ ಹೊಂಡ ತೆಗೆದು ಹೂಳಿ, ಅದರ ಮೇಲೆ ಕಲ್ಲೊಂದನ್ನು ಮುಚ್ಚುತ್ತಾರೆ. ಏಳು ಮತ್ತು ಹನ್ನೊಂದನೇ ದಿನ ಸೂತಕ ಕಳೆಯುವ ಆಚರಣೆ ನಡೆಸುತ್ತಾರೆ. ಏಳನೇ ದಿನದ ಅಮೆ ತೊಳೆಯಲು ಹಳ್ಳದಲ್ಲಿ ಬಾಳೆ ಎಲೆಯಲ್ಲಿ ಬತ್ತಿದೀಪ ಹಚ್ಚಿ ಕಾಯಿ ಒಡೆಯುತ್ತಾರೆ. ಎಲ್ಲರೂ ಸ್ನಾನ ಮಾಡಿ ಏಳನೇ ಸೂತಕ ಕಳೆಯಿತು ಎನ್ನುತ್ತಾರೆ.

ಮಗುವು ಗಂಡಾಗಿದ್ದರೆ ಭೈರರಲ್ಲಿ ಸಕ್ಕರೆ ಕಾಸಿ ಹಂಚುತ್ತಾರೆ. ಹೆಣ್ಣು ಮಗುವಾದರೆ ಕೆಲವರು ಮಾತ್ರ (ಮೊದಲ ಮಗುವಾಗಿದ್ದಲ್ಲಿ) ಬೆಲ್ಲ ಹಂಚುತ್ತಾರೆ. ಕೆಲವರು ಏನನ್ನೂ ಸಿಹಿ ಹಂಚುವುದಿಲ್ಲ. ಮನೆಯವರಿಗೆ ಹನ್ನೊಂದು ದಿವಸದ ‘ಅಮೆ’ ಇರುತ್ತದೆ. ಹನ್ನೆರಡನೆಯ ದಿವಸ ಭಟ್ಟರ ಮನೆಯಿಂದ ‘ಪುಣ್ಯಾಹದ’ ನೀರು ತಂದು ಮನೆಯ ಒಳಗೆ ಹೊರಗೆ ಪ್ರೋಕ್ಷಿಸುತ್ತಾರೆ. ಆಗ ಮನೆಯವರೆಲ್ಲರೂ ಬಾವಿಯ ಹತ್ತಿರ ಸ್ನಾನ ಮಾಡಿ ಬರುತ್ತಾರೆ. ಮತ್ತೊಮ್ಮೆ ಭಟ್ಟರು ಕೊಟ್ಟ ತೀರ್ಥದ ನೀರನ್ನು ಪ್ರೋಕ್ಷಿಸಿ ವೆಂಕಟರಮಣ ಹಾಗೂ ಭೈರವರಿಗೆ ದೀಪ ಹಚ್ಚಿಟ್ಟು ನಮಸ್ಕಾರ ಮಾಡುತ್ತಾರೆ. ಆ ದಿನವೇ ತೊಟ್ಟಿಲ ಶಾಸ್ತ್ರವನ್ನು ಮಾಡುತ್ತಾರೆ. ಆ ದಿನವೇ ತೊಟ್ಟಿಲ ಶಾಸ್ತ್ರವನ್ನು ಮಾಡುತ್ತಾರೆ. ಆ ದಿನ ಬಾಗಿಲಿನ ನಾಲ್ಕೂ ಮೂಲೆಗೆ “ಕಾಸನ್‌ಸೊಪ್ಪು” ಸಿಕ್ಕಿಸುತ್ತಾರೆ. ಆ ದಿನ ಬಾಣಂತಿಯು ಬಿಸಿ ನೀರಿನಿಂದ ಮೈ ಒರೆಸಿಕೊಳ್ಳಬೇಕು. ಅದು ಅಮೆ ಹೊಂಡದ ಬಳಿ ಮಾಡಿಸುತ್ತಾರೆ. ಆ ಜಾಗದಲ್ಲಿ ಓಮ-ವನ್ನು ಮಿಶ್ರಮಾಡಿ ಬೆಲ್ಲ ನೀರು, ಕಳ್ಳ, ಎಲೆ, ಅಡಿಕೆ ಇವುಗಳನ್ನು ಇಡುತ್ತಾರೆ. ಇದನ್ನು ಮೂರು ಜನ ಹೆಂಗಸರು ಮಾಡುವುದು. ಇದನ್ನು ಆಮೆ ಹೊರಹಾಕುವ ಶಾಸ್ತ್ರ ಎಂದು ಕರೆಯುತ್ತಾರೆ. ಮನೆಯನ್ನು ಸಗಣಿಯಿಂದ ಸಾರಿಸಿ, ಒಳಗೆ ಹಸೆಚಿತ್ರಗಳನ್ನು ಬರೆಯುತ್ತಾರೆ. ತೊಟ್ಟಿಲಿಗೆ ಅಲಂಕಾರ ಮಾಡಿ ದೇವರ ಭಂಡಾರದ ಎದುರು ತೊಟ್ಟಿಲನ್ನು ಕಟ್ಟಿ ದೇವರ ಪ್ರಸಾದ ಹಾಕುತ್ತಾರೆ.

[1]

ಸಾಮಾನ್ಯವಾಗಿ ಮಗುವಿಗೆ ಮನೆಯ ಹಿರಿಯರ ಹೆಸರುಗಳನ್ನು ಇಡುತ್ತಾರೆ. ಆದರೆ ಈಗ ಆಧುನಿಕ ಹೆಸರುಗಳು, ಹಿಂದೂ ದೇವರ ಹೆಸರುಗಳು ರೂಢಿಗೆ ಬಂದಿವೆ. ಆದರೂ ಹಿರಿಯರ ಹೆಸರಿಟ್ಟ ನಂತರ ಬೇರೆ ಹೆಸರಿನಿಂದ ಕರೆಯುತ್ತಾರೆ. ಹಿಂದಿನವರ ಹೆಸರುಗಳನ್ನು ಹುಟ್ಟಿದ ವಾರಕ್ಕೆ ಸಂಬಂಧ ಹೊಂದಿಸಿ ಕರೆಯಲಾಗುತ್ತಿತ್ತು. ಅಂದರೆ ಸೋಮವಾರ-ಚೋಮು, ಮಂಗಳವಾರ- ಅಂಗಾರ, ಬುಧ-ಬೂದ, ಗುರು-ಗುರುವ, ಶುಕ್ರ-ಚುಕ್ರ, ತುಕ್ರ, ಶನಿವಾರ-ಚನಿಯ, ತನಿಯ ಹಾಗೆಯೇ ಚೋಮ, ಅಂಗಾರ ಮುಂತಾಗಿ ಸ್ತ್ರೀಯರಿಗೂ ಹೆಸರಿಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ವರ್ಗದಲ್ಲಿ ಸಾಮಾನ್ಯವಾಗಿ ಈ ರೀತಿಯಿಂದಲೇ ಹೆಸರಿಡುವ ಕ್ರಮವಿದೆ. ಇತ್ತೀಚೆಗೆ ಈ ರೀತಿಯ ಹಳೆಯ ಹೆಸರನ್ನು ಬಿಟ್ಟು ಪಾರ್ವತಿ, ಶಂಕರ, ದಾಕ್ಷಾಯಿಣಿ, ಗಿರಿಜೆ, ಲಕ್ಷ್ಮಿ, ಪಂಕಜ, ಕಮಲಾ ಇತ್ಯಾದಿ ಹೆಸರುಗಳು ರೂಢಿಯಲ್ಲಿ ಬಂದಿವೆ. ಹಿಂದೆಯೂ ಪಾಚು, ಪುಟ್ಟು, ಅಕ್ಕು, ತಿಮ್ಮು, ಪಾರ್ತಿ, ಕೊರಪ್ಪಳು, ಶುಕ್ರ, ಮುಂತಾಗಿ ವಾರದ ಹೆಸರನ್ನು ಕೇಳಿ ಇಡುತ್ತಿದ್ದರು. ನಾಮಕರಣದ ನಂತರ ಬಂದವರು ಮಗುವಿನ ತೊಟ್ಟಿಲಿಗೆ ಒಂದು ರೂಪಾಯಿ ಹಣ ಹಾಕುತ್ತಾರೆ. ನಂತರ ಊಟ ಹಾಕುತ್ತಾರೆ. ಆ ದಿನ ಕೋಳಿ, ಮೀನಿನ ಪದಾರ್ಥ ಮತ್ತು ಸಿಹಿಯ ಊಟವನ್ನು ಹಾಕುತ್ತಾರೆ. [2]

ಋತುಶಾಂತಿ:

ಭೈರರಲ್ಲಿ ಹುಡುಗಿ ದೊಡ್ಡವಳಾದರೆ ನಾಲ್ಕು ದಿನಗಳ ಕಾಲ ಹೊರಗಿಡಬೇಕಾಗುವುದು. ಆ ದಿನಗಳಲ್ಲಿ ಅವಳನ್ನು ಯಾರೂ ಮುಟ್ಟಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಮನೆಯ ಹತ್ತಿರ ಹಾಲು ಒಸರುವ ಹಲಸು, ಮಾವು, ಹಾಲೆ ಮುಂತಾದ ಯಾವುದಾರೊಂದು ಮರದ ಕೆಳಗೇ ಇರಬೇಕಾಗುತ್ತದೆ. ಮನೆಯ ಒಳಗಡೆ ಪ್ರವೇಶ ಮಾಡುವಂತಿಲ್ಲ. ಅವಳು ಕುಳಿತಿರುವಲ್ಲಿಗೆ ಊಟ, ಗಂಜಿ, ಬಾಯಾರಿಕೆಯ ಸಾಮಗ್ರಿಯನ್ನು ಹುಡುಗಿಯ ತಾಯಿ ತೆಗೆದುಕೊಂಡು ಹೋಗಿ ಕೊಟ್ಟು ಬರುತ್ತಾಳೆ. ನಾಲ್ಕು ದಿನ ಕಳೆದ ನಂತರ ಐದನೆಯ ದಿನ, ಐದು ಜನ ಗಂಡ ಇರುವ ಹೆಂಗಸರು (ಮುತ್ತೈದೆಯರು) ಬಂದು ನೀರೆರೆಯುವ ಶಾಸ್ತ್ರ ಮಾಡುವರು.[3] ಹುಡುಗಿ ಅಮವಾಸ್ಯೆ ಹಾಗೂ ಶನಿವಾರದ ದಿನ ಮೈ ನೆರೆಯಬಾರದು. ಹಾಗೆ ನೆರೆದರೆ ಗಂಡ ಸಾಯುತ್ತಾನೆಂಬ ನಂಬಿಕೆ ಭೈರರಿಗಿದೆ. ಸಾಮಾನ್ಯವಾಗಿ ಮೈ ನೆರೆದ ನಂತರ ಸರಿ ದಿನಗಳಲ್ಲಿ ಶಾಸ್ತ್ರದ ಸ್ನಾನವನ್ನು ಇವರು ಮಾಡಿಸುವುದಿಲ್ಲ. ಮೈ ನೆರೆದಾಗ ಬೇರೆ-ಬೇರೆ ಜನಾಂಗದಲ್ಲಿ ಆಚರಣೆಗಳು ಭಿನ್ನ, ಭಿನ್ನವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಹರಿಜನರಲ್ಲಿ ತೆಂಗಿನಕಾಯಿ ಮೇಲೆ ಕುಳ್ಳಿರಿಸಿ ನೀರೆರೆಯುವ ಕ್ರಿಯೆ ಸಾಮಾನ್ಯವೆನಿಸಿದೆ. ಜಾನಪದ ವಿಶ್ವಕೋಶದಲ್ಲಿ (ಪುಟ ೧೬, ೬೯, ೭೧) ಮೈ ನೆರೆಯುವ ವಿಚಾರ ಕುರಿತು ಕೆಲವು ಅಂಶಗಳಿವೆ. ಹೆಣ್ಣು ಮೈನೆರೆದಾಗ ಮಾಡುವ ಆಚರಣೆ  ಗುಡ್ಲು ಕೂಡುವುದು, ಸೊಪ್ಪ ಹಾಕುವುದು ಎಂಬ ಹೆಸರುಗಳೂ ಇವೆ. ಹೆಣ್ಣು ಮೈ ನೆರೆಯುವುದನ್ನು ಋತುವಾಗುವುದು, ದೊಡ್ಡವಳಾಗುವುದು ಎಂದೆಲ್ಲ ಕರೆಯುತ್ತಾರೆ. ಹೊರ ಬಾಗಿಲ ಬಲ ಅಥವಾ ಎಡಭಾಗದಲ್ಲಿ ಗೋಡೆಗೆ ಎರಡು ಮೂರು ಬಿದಿರು ಬೊಂಬುಗಳನ್ನು ಒರಗಿಸಿ ಅಡ್ಡವಾಗಿ ಅದಕ್ಕೆ ಗಳುಗಳನ್ನು ಕಟ್ಟಿ ಅತ್ತಿ,  ಆಲ, ಹಲಸು ಮೂರು ಬಗೆಯ ಸೊಪ್ಪುಗಳನ್ನು ಅದರ ಮೇಲೆ ಹೊದಿಸುತ್ತಾರೆ. ಋತುವಾದ ೯ ದಿನಗಳು ಅಥವಾ ಹನ್ನೊಂದು ದಿನಗಳು ಆಕೆ ಅಶುದ್ಧಳಾದ ಕಾರಣ ಅಪವಿತ್ರಳು ಎಂದು ಭಾವಿಸಿ ಮನೆಯ ಒಳಗಡೆ ಬಿಡದೆ ಗುಡ್ಲಿನಲ್ಲಿಯೇ ಕಾಲ ಹಾಕಿಸುತ್ತಾರೆ. ಋತುವಾದ ದಿನ ಮುತ್ತೈದೆಯರು ಆಕೆಗೆ ಸ್ನಾನ ಮಾಡಿಸುತ್ತಾರೆ. ಆಕೆಯ ತಾಯಿ ಸ್ನಾನ ಮಾಡಿಸಬಾರದೆಂಬ ನಿಯಮವಿದೆ. ನಂತರ ಗುಡ್ಲಿನಲ್ಲಿ ಇರಬೇಕು. ಅಲ್ಲೆ ವಸುಗೆಶಾಸ್ತ್ರ, ಸೋಬಾನೆ ಹಾಡುತ್ತಾರೆ.

ಮುಟ್ಟು:

ಭೈರರಲ್ಲಿ ಹೆಣ್ಣು ಮಗಳು ಮುಟ್ಟಾದಾಗ ನಾಲ್ಕು ದಿವಸ ಹೊರಗಿರಬೇಕಾಗುತ್ತದೆ. ಅವರು ಹೊರಗಿರಲಿಕ್ಕಾಗಿಯೇ ಕೊಟ್ಟಿಗೆಯಲ್ಲಿ ಪ್ರತ್ಯೇಕ ಸ್ಥಳ ಇರುತ್ತದೆ. ಮುಟ್ಟಾದವರನ್ನು ಗಂಡಸರಾಗಲಿ, ಹೆಂಗಸರಾಗಲಿ ಮುಟ್ಟಬಾರದು. ಅವರು ಕೃಷಿಕಾರ್ಯಗಳನ್ನು ಮಾಡಬಾರದು. ಅದಲ್ಲದೆ ವೀಳ್ಯದ ತೋಟ ಫಲಭರಿತವಾದ ತೋಟಕ್ಕೆ ಅವರು ಹೋಗುವಂತಿಲ್ಲ. ನಾಲ್ಕು ದಿನಗಳು ಭೂಮಿಯ ಮಣ್ಣನ್ನು ಹೊರುವಂತಿಲ್ಲ. ಕಡ್ಡೆಸದ ದಿನ ಮುಟ್ಟಾದರೆ ಹೆಂಗಸಿಗೆ ಯಾವ ರೀತಿಯ ಆಹಾರಧಾನ್ಯಗಳ ಊಟವನ್ನು ಬಡಿಸುವಂತಿಲ್ಲ. ಹಲೊಸು, ಮಾವು, ಮೊಟ್ಟೆ, ಮಾಂಸ ಇಂಥವನ್ನು ಉಪಯೋಗಿಸಬಹುದು. ಈ ರೀತಿ ಮೂರು ದಿನ ಆಚರಿಸಬೇಕಾಗುತ್ತದೆ. ಆ ಮೂರು ದಿನಗಳಲ್ಲಿ ಒಂದು ದಿನ ಮಾತ್ರ ಮೇಲೆ ಹೇಳಿದ ಆಹಾರ ಸೇವನೆಯನ್ನು ಮಾಡಬಹುದು.

ನಾಲ್ಕು ದಿನ ಕಳೆದು ಐದನೆಯ ದಿವಸ ಬಾವಿಯ ಕಟ್ಟೆಯ ಹತ್ತಿರ ಸ್ನಾನ ಮಾಡಿಕೊಳ್ಳುತ್ತಾಳೆ. ಅನಂತರ ಯಾರಾದರೂ ಅಜ್ಜಿಯರು ತಲೆಗೆ ಒಂದು ಬಿಂದಿಗೆ ನೀರು ಹಾಕುತ್ತಾರೆ. ಮೀಯುವುದಕ್ಕೆ ಮೊದಲು ಮುಟ್ಟಾದವಳು ಕೊಟ್ಟಿಗೆಯನ್ನೇ ಶುದ್ಧಗೊಳಿಸಿ ಸಗಣಿಯಿಂದ ಸಾರಿಸಬೇಕು. ಸ್ನಾನದ ನಂತರ ದೇವರ ಭಂಡಾರದಕ್ಕೆ ದೀಪ ಹತ್ತಿಸಿಟ್ಟು ನಮಸ್ಕಾರ ಮಾಡಬೇಕು. ಆ ದಿನ ಅವಳು ಮಡಿಕೆಗಳನ್ನು ಮುಟ್ಟುವಂತಿಲ್ಲ. ಮಾರನೆಯ ದಿವಸ ಮತ್ತೆ ತಲೆ ಸ್ನಾನ ಮಾಡಿ ಪಾತ್ರೆ, ಮಡಿಕೆ ಇತ್ಯಾದಿಗಳನ್ನು ಮುಟ್ಟಿ ಅಡಿಗೆ ಮಾಡಬಹುದು.[4]

ಮದುವೆ:

ಹುಡುಗಿ ಹುಡುಕುವುದು ಗಂಡಿನ ಕಡೆಯವರು, ಹುಡುಗಿಯನ್ನು ಕೇಳಿಕೊಂಡು ತಮ್ಮ ಜಾತಿಯವರಲ್ಲಿಗೆ ಹೋಗುತ್ತಾರೆ. ಸಾಮಾನ್ಯವಾಗಿ ನಾಲ್ಕು ಅಥವಾ ಆರು ಹೀಗೆ ಸೇರಿ ಸಂಖ್ಯೆಯಲ್ಲಿ ಹೊರಡುವುದು ಇವರ ಕ್ರಮ. ಹೊರಡುವಾಗ ಮನೆದೈವ ಭೈರವ ಹಾಗೂ ವೆಂಕಟರಮಣನಿಗೆ ಪೂಜೆ ಸಲ್ಲಿಸಿ ಪ್ರಯಾಣ ಮಾಡುವರು. ಅಮವಾಸ್ಯೆ, ಮಂಗಳವಾರ ಬಿಟ್ಟರೆ ಉಳಿದ ಯಾವ ದಿನದಲ್ಲೂ ಹುಡುಗಿಯನ್ನು ನೋಡಲು ಹೋಗುತ್ತಾರೆ. ದಾರಿಯಲ್ಲಿ ಶುಭ ಶಕುನಗಳಾಗಬೇಕು. ತುಂಬಿದ ಕೊಡ, ದೇವರ ಪೂಜಾ ಸಾಮಾಗ್ರಿ, ಮುತ್ತೈದೆಯರು, ಇವರು ಎದುರಾಗಬಹುದು. ಒಂಟಿ ಬ್ರಾಹ್ಮಣ, ವಿಧವೆಯರು, ಬೆಕ್ಕು, ಸರ್ಪ ಅಡ್ಡಬಂದಲ್ಲಿ ಪ್ರಯಾಣವನ್ನು ನಿಲ್ಲಿಸುತ್ತಾರೆ. ತಮ್ಮ ಜಾತಿಯಲ್ಲಿ ಹೆಣ್ಣಿರುವ ಮನೆಗೆ ಹೋಗಿ ಎಲೆ ಅಡಿಕೆಯನ್ನು ಮಣೆಯ ಮೇಲೆ ಇಟ್ಟು ನಾವು ದಾರಿತಪ್ಪಿ ಬಂದಿದ್ದೇವೆ, ನಮಗೆ ಸರಿಯಾದ ದಾರಿ ತೋರಿಸಿ ಎಂದು ಕೇಳುತ್ತಾರೆ. ಅಥವಾ ನಮ್ಮ ಹುಡುಗನಿಗೆ ಈ ಜಾಗದಲ್ಲಿ ನೆಳ್ಳು ಸಿಕ್ಯಾತು ಎಂದು ಬಂದಿದ್ದೇವೆ, ನೆಳ್ಳು ಸಿಕ್ಯಾತೋ ಎಂದು ಕೇಳುತ್ತಾರೆ. ಇವರ ‘ಬಳಲಿ’ ತಮ್ಮದಲ್ಲಿದ್ದಿದ್ದಾರೆ, ಕೊಡುವ ಮನಸ್ಸಿದ್ದರೆ ಆಗಲಿ ತೋರಿಸುವ ಅಥವಾ ನೆಳ್ಳು ಉಂಟು ಎಂದು ಕುಳಿತುಕೊಳ್ಳಲು ಚಾಪೆ ತೋರಿಸುತ್ತಾರೆ. ಕೊಡುವ ಹುಡುಗಿಯನ್ನು ನೋಡಿ ಅವಳಿಗೆ ದೋಷವಿದ್ದರೆ ಒಪ್ಪುವುದಿಲ್ಲ. ಹುಡುಗಿಗೆ ಕಾಯಿಲೆ ಇರಬಾರದು. ಮೆಳ್ಳಗಣ್ಣು, ಮೇಲುಗಣ್ಣು, ಕೂಸುಗಣ್ಣು, ಅಥವಾ ಕೆಟ್ಟ ಸುಳಿ ಇರಬಾರದು. ಇದ್ದರೆ ‘ಹುಡುಗಿ ಕುಸಿ ಇಲ್ಲ’ ಎಂದು ಹೇಳಿ ಹೊರಟುಬಿಡುತ್ತಾರೆ. ಹುಡುಗಿ ಒಪ್ಪಿಗೆಯಾದಲ್ಲಿ ಮಾತ್ರ ಊಟ ಮಾಡುತ್ತಾರೆ. ಇಲ್ಲವಾದರೆ ಊಟ ಮಾಡುವುದಿಲ್ಲ.

ತೆರ:

ಇವರಲ್ಲಿ ಗಂಡಿನವರು ಹುಡುಗಿಯನ್ನು ಒಪ್ಪಿ ನಿಶ್ಚಯವಾದ ನಂತರ ಸಭೆಯ ಮುಂದೆ ‘ಹೆಣ್ಣಿಗೆ ತೆರ’ ಕೊಡಬೇಕಾಗುತ್ತದೆ. ಇದಕ್ಕೆ ಗಂಡಿನ ಕಡೆಯವರು ೫೦ ಎಲೆ, ೨೬ ಅಡಿಕೆ, ಇಟ್ಟು ಹೆಣ್ಣಿನ ತಂದೆಗೆ ಹುಡುಗಿಯ ಹೆಸರು ಹೇಳಿ ಐದು ನಾಣ್ಯದಿಂದ ನೂರೊಂದು ನಾಣ್ಯದವರೆಗೂ, ಈಗ ನೂರೊಂದು ರೂಪಾಯಿ ಯಿಂದ ಸಾವಿರದೊಂದು ರೂಪಾಯಿಗಳವರೆಗೂ ತೆರ ಕೊಡಬೇಕಾಗುತ್ತದೆ. ಈ ತೆರವನ್ನು ಹೆಣ್ಣಿನವರು ಹುಡುಗಿಗೆ ಒಡವೆ ತರಲು ಉಪಯೋಗಿಸುತ್ತಾರೆ. ಒಡುವೆ ದುಬಾರಿಯಾಗಿರುವುದರಿಂದ ತೆರದ ಹಣವನ್ನು ಹೆಚ್ಚು ಕೇಳುತ್ತಾರೆ. ಗಂಡಿನವರು ಹಣವಂತರಾದರೆ ಎರಡೂ ಖರ್ಚು ಹಾಕಿ ಮದುವೆ ಮಾಡಿಕೊಳ್ಳುವಂತೆ ತಿಳಿಸುತ್ತಾರೆ. ತೆರ ಕೊಟ್ಟುದ್ದುದರಲ್ಲಿ ಗಂಡಿನ ಹೆಸರಲ್ಲಿ ಹದಿನಾರು ರೂ.ಗಳ ಬಳೆ ತರಬೇಕಾಗುತ್ತದೆ. ಅದನ್ನು ಹುಡುಗಿ ಮಾತ್ರವಲ್ಲದೆ ಹತ್ತಿರದ ನೆಂಟರಿಗೆಲ್ಲಾ ಕೊಡಲಾಗುತ್ತದೆ. ಸಾಮಾನ್ಯ ಬಡವರಾದರೂ ಕನಿಷ್ಠ ಇಪ್ಪತ್ತೈದು ರೂಪಾಯಿಗಳನ್ನಾದರೂ ತೆರವಾಗಿ ಸಲ್ಲಿಸುತ್ತಾರೆ. ಭೈರರಲ್ಲಿ ಇದು ಅವರ ‘ಜಾತಿಕಟ್ಟಳೆ ’ ಅಥವಾ ‘ಕುಲ ಮರ್ಯಾದೆ’ ಎಂದು ಭಾವಿಸುತ್ತಾರೆ.

ಮಂಟಪ ಅಥವಾ ಚಪ್ಪರ:

ಈ ಮಂಟಪದ ಮಧ್ಯದಲ್ಲಿ ‘ಧಾರೆಮಂಟಪ’ವನ್ನು ವಿಶೇಷವಾಗಿ ಮಾಡುತ್ತಾರೆ. ಆರು ಜನ ಗಂಡಸರು ಐದು ಹಾಲೆ ಮರವನ್ನು ತಂದು ನಾಲ್ಕು ಕಂಬ ಮತ್ತು ಮಧ್ಯದಲ್ಲಿ ಒಂದು ಕಂಬವನ್ನು (ಕಟಿಕಂಬ) ನೆಡುತ್ತಾರೆ. ನಾಲ್ಕು ಕಂಬಕ್ಕೆ ನಾಲ್ಕು ತೆಂಗಿನ ಕಾಯಿ ಕಟ್ಟುವರು. ಮಧ್ಯದ ಕಂಬಕ್ಕೆ ಐದು ಬಗೆಯ ತೆಂಗು ಹಾಗೂ ಬಾಳೆಗೆ ಸಂಬಂಧಿಸಿದ ಸೀಯಾಳ, ತೆಂಗಿನಕಾಯಿ, ಬಾಳೆಗೊನೆ, ಹೂವು ಇರುವುದು. ಒಂದು ಅಡಿಕೆಗೊನೆ, ಸಿಂಗಾರ ಇವುಗಳನ್ನು ಕಟ್ಟುತ್ತಾರೆ. ಹಾಲೆ ಕಂಬದ ಸುತ್ತ ೧೨ ಗುಂಬಗಳನ್ನು ಇಡುತ್ತಾರೆ. ಆ ಗುಂಬಗಳಲ್ಲಿ ರಾಗಿ, ಭತ್ತ ಇತ್ಯಾದಿ ಧಾನ್ಯಗಳನ್ನು ಹಾಕಿಡುತ್ತಾರೆ. ಹಾಲೆಮರವನ್ನು ನೆಟ್ಟ ಚಪ್ಪರದಲ್ಲಿ ಧಾರೆ ನಡೆಯುತ್ತದೆ. ಆ ಮಂಟಪದ ಒಳಗೆ ಒಂದು ಬಿಳಿಯ ಬಟ್ಟೆ ಹಾಕಿ, ಅದರ ಮೇಲೆ ಹನ್ನೆರಡು ಸೇರು ಬೆಳ್ತಿಗೆ ಅಕ್ಕಿಯನ್ನು ಹರಡುವರು. ಅಕ್ಕಿಯಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ತ್ರಿಶೂಲ ಮುಂತಾದವನ್ನು ಬಿಡಿಸಿ ಬಣ್ಣದ ಪುಡಿ ಹಾಕುವರು.

ಮಂಟಪದಲ್ಲಿಶಾಸ್ತ್ರ:

ಹೆಣ್ಣಿನ ಮಂಟಪದಲ್ಲಿ ಬೆಳಗಿನ ಹೊತ್ತಿಗೆ ೧೨ ಜನ ಗಂಡುಳ್ಳ (ಮುತ್ತೈದೆ) ಹೆಂಗಸರು ಬಾವಿಗೆ ಹೋಗಿ ಪೂಜೆ ಮಾಡಿ ‘ಸದ್ದು ಜಲ’ ತರುತ್ತಾರೆ. ಇದಕ್ಕೆ ‘ಶಾಸ್ತ್ರದ ಕೊಡ’ ಎಂದು ಕರೆಯುತ್ತಾರೆ. ಇದನ್ನು ಮಂಟಪಕ್ಕೆ ತಂದಿಟ್ಟು ಪೂಜೆ ಮಾಡುತ್ತಾರೆ. ಧಾರೆ ಎರೆಯುವಾಗ ಈ ಕೊಡಗಳ ನೀರನ್ನು ಸ್ವಲ್ಪ ಸ್ವಲ್ಪ ತೆಗೆದು ಗಿಂಡಿಗೆ ಹಾಕಿ ಹಾಲು ಸೇರಿಸುತ್ತಾರೆ.

ಹುಡುಗಿಯನ್ನು ಅಲಂಕರಿಸುವುದು:

ದಿಬ್ಬಣ ಬರುವಾಗ ಹುಡುಗಿಗೆ ಕುಕ್ಕೆ ಅಥವಾ ಹೆಡಿಗೆಯಲ್ಲಿ ಸೀರೆ, ಖಣ, ಬಳೆ, ಕುಂಕುಮ, ಅರಿಶಿನ, ಹೂವು, ಒಡವೆ, ಕನ್ನಡಿ, ಎಣ್ಣೆ ಇಷ್ಟನ್ನು ತಂದಿರುತ್ತಾರೆ. ಈ ರೀತಿ ಸಿದ್ಧ ಮಾಡಿಕೊಂಡು ಬರುವ ಕುಕ್ಕೆಯನ್ನು ‘ಸಾಲ್‌ಕುಕ್ಕೆ’ ಎಂದು ಕರೆಯುತ್ತಾರೆ. ಇದನ್ನು ಹೆಣ್ಣಿನ ತಾಯಿಗೆ ಅವರ ಬುದ್ಧಿವಂತನ ಮೂಲಕ ಕೊಡುತ್ತಾರೆ. ಇವರು ಕೊಟ್ಟಿದ್ದನ್ನು ಹುಡುಗಿ ಧರಿಸಿಕೊಂಡು ಬರಬೇಕಾಗುತ್ತದೆ. ಅದಕ್ಕೆ ಮೊದಲು ಹೊಸ ಮಗ್ಗದ ಅಥವಾ ಬೇರೆ ಸೀರೆ ಉಡಿಸಿ ತಲೆ ಬಾಚಿ ಹೂ ಮುಡಿಸಿ ದೇವರ ಮುಂದೆ ಮಣೆಯ ಮೇಲೆ ಕುಳಿತಿರುವಂತೆ ಹೇಳಿರುತ್ತಾರೆ. ಮದುಮಗನ ಮನೆಯವರು ಕೊಟ್ಟ ವಸ್ತ್ರಾಭರಣಗಳನ್ನು ಅವಳು ಧರಿಸಿಕೊಂಡು ಬರುತ್ತಾಳೆ. ಮದುಮಗಳ ಮದುವೆಯ ಅಲಂಕಾರವೆಂದರೆ ಹೊಸ ಸೀರೆಯ ಮೇಲೆ ಶಾಲು ಧರಿಸುವುದು. ಕೈಗೆ ಹಸಿರು ಅಥವಾ ಕೆಂಪು ಬಳೆ ಧರಿಸುವುದು. ಆಭರಣಗಳಿಗಾಗಿ ತಲೆಗೆ ಜಡೆಬಿಲ್ಲೆ. ಕುತ್ತಿಗೆಗೆ ಮಣಿಸರ, ಸೊಂಟಪಟ್ಟಿ, ಓಲೆ, ಮೂಗುತಿ, ಇಷ್ಟು ಧರಿಸುತ್ತಾಳೆ. ಇವೆಲ್ಲವನ್ನು ಗಂಡಿನವರು ಕೊಡದಿದ್ದರೆ ಆ ದಿನದ ಮಟ್ಟಿಗೆ ಬಂಧುಗಳಿಂದ ತೆಗೆದುಕೊಂಡು ಬಂದು ಅಲಂಕರಿಸುತ್ತಾರೆ. ಆಭರಣಗಳು ಬಂಧುಗಳಲ್ಲಿ ಇಲ್ಲದಿದ್ದರೆ ತಮ್ಮ ಒಡೆಯರ ಮನೆಯಿಂದ ತಂದಾದರೂ ಹಾಕುತ್ತಾರೆ. ಈ ಕಾಲದಲ್ಲಿ ಹೆಂಗಸರು ಸೋಬಾನಗಳನ್ನು ಹಾಡುತ್ತಾರೆ.

ಧಾರೆ ಮಂಟಪಕ್ಕೆ ಮದುಮಗಳನ್ನು ಕರೆತರುವುದು:

ಧಾರೆಗೆ ಸೋದರಮಾವ ಅಥವಾ ಅಕ್ಕನ ಗಂಡ, ಭಾವನು ಮದುಮಗಳನ್ನು ಕರೆದುಕೊಂಡು ಬರುತ್ತಾನೆ. ಹಿಂದೆ ಚಿಕ್ಕ ವಯಸ್ಸಿನ ಹುಡುಗಿಯಾಗಿದ್ದಾಗ ಮದುಮಗಳನ್ನು ಎತ್ತಿಕೊಂಡು ಮಾವನು ಬರುತ್ತಿದ್ದನಂತೆ. ಆದರೆ ಈಗ ಕೈ ಹಿಡಿದು ಕರೆದುತರುತ್ತಾನೆ. ಆ ಕಾಲದಲ್ಲಿ ಜಾತಿಯವರೆಲ್ಲಾ ಎದ್ದುನಿಂತು ಮದುಮಗಳನ್ನು ಉಪಚಾರ ಮಾಡುತ್ತಾರೆ. ಹುಡುಗಿ ಚಿಕ್ಕವಳಾಗಿದ್ದಾಗ ನಾಚಿಕೆಯಿಂದ ಅಥವಾ ಹೆದರಿಕೆಯಿಂದ ತೊಂದರೆಯಾಗಬಾರದೆಂದು ಉಪಚಾರ ಮಾಡುತ್ತಿದ್ದರು. ಈಗಲೂ ನೆಂಟರು ಬಂದು ಒಳ್ಳೆಯ ಮಾತನ್ನು ಹೇಳುತ್ತಾರೆ. ಮದುಮಗಳು ಬರುವಾಗ ಎದ್ದು ನಿಲ್ಲುವ ಪದ್ಧತಿ ಇದೆ. ಮದುಮಗಳನ್ನು ಕರೆ ತರುವಾಗ ಹೆಂಗಸರು ಸೋಬಾನೆ ಹಾಡುತ್ತಾರೆ.

ಧಾರೆ ನೀರು:

ಹೆಂಗಸರು ತಂದ ಹನ್ನೆರಡು ಕೊಡದಲ್ಲಿನ ಸ್ವಲ್ಪ ನೀರನ್ನು ಒಂದು ಕಂಚಿನ ಪಾತ್ರೆಗೆ ಹಾಕಿ,ಅದಕ್ಕೆ ಹಾಲು ಮತ್ತು ಅರಿಶಿನ, ಜೀರಿಗೆ ಹಾಕಿ ಧಾರೆ ನೀರನ್ನು ಬುದ್ಧಿವಂತರು (ಭಟ್ಟರು) ಮಾಡುತ್ತಾರೆ. ಹಾಲು ಸಿಗದೆ ಇದ್ದರೆ ತೆಂಗಿನ ತುರಿಯನ್ನು ನೀರಿನಲ್ಲಿ ಹಿಂಡಿ ತೆಗೆದ ‘ಕಾಯಿರಸ’ವನ್ನು ಧಾರೆಗೆ ಬಳಸುತ್ತಾರೆ.

ಹೆಣ್ಣು ಇಳಿಸಿ ಕೊಡುವುದು:

ಹೆಣ್ಣು ಗಂಡನ್ನು ಹಸೆಯಿಂದ ಕರೆದುಕೊಂಡು ಹೋಗಲು ಹೆಂಗಸರು ಕುರ್ದಿ ಮಾಡಿ ಬೆಳಗುತ್ತಾರೆ. ಒಳಗಡೆಯಲ್ಲಿ ೫ ಬಾಳೆ ಎಲೆಯ ಮೇಲೆ ದೈವಕ್ಕೆ ಬಡಿಸಿ ದೇವರಿಗೆ ಎಡೆಮಾಡಿ ಪ್ರಾರ್ಥಿಸಿದ ಮೇಲೆ ಹುಡುಗಿಯನ್ನು ಕರೆದೊಯ್ಯುತ್ತಾರೆ. ಗಂಡು ಮತ್ತು ಹೆಣ್ಣು ಇಬ್ಬರನ್ನು ಹಸೆಯಿಂದ ಒಳಗೆ ಕರೆದುಕೊಂಡು ಹೋಗಿ ದೇವರಿಗೆ ಇಟ್ಟ ೫ ಎಲೆಯಲ್ಲಿ ಒಂದನ್ನು ಹುಡುಗಿಗೆ ಕೊಡುತ್ತಾರೆ. ಮುಂದೆ ಯಾವ ಕಾಲಕ್ಕೂ ಹುಡುಗಿಗೆ ಮತ್ತೆ ಮನೆಯ ‘ಎಡೆ’ಯನ್ನು ಕೊಡುವುದಿಲ್ಲ. ಆ ದಿನದಿಂದಲೇ ಅವಳು ಗಂಡನ ಮನೆಯವರಿಗೆ ಸೇರಿದಂತೆ ಕುಲಕ್ಕೆ ಹೊರಗೆ ಆಗುತ್ತಾಳೆ.

ವಿಚ್ಛೇದನ:

ಗಂಡ, ಹೆಂಡಿರು ಬೇರೆಯಾಗುವುದಾದರೆ ಇದಕ್ಕೆ ಸರಿಯಾದ ಕಾರಣವಿರಬೇಕು. ಸಾಮಾನ್ಯವಾಗಿ ವಿಚ್ಛೇದನವಾಗಲು ಭೈರರು ಕೆಲವು ಮುಖ್ಯ ಕಾರಣಗಳನ್ನು ತಿಳಿಸುತ್ತಾರೆ ಗಂಡನಾಗಲಿ ಅಥವಾ ಹೆಂಡತಿಯಾಗಲಿ ಸಮಾಜದ ಗೌಡ, ಬುದ್ಧಿವಂತರ ಕೇಳಿಕೆಯಂತೆ ತಾವು ಬೇರೆಯಾಗುವ ಕಾರಣವನ್ನು ತಿಳಿಸಬೇಕಾಗುತ್ತದೆ. ಅವರು ವಿಚ್ಛೇದನಕ್ಕೆ ಅವಕಾಶ ಕೊಡುವುದು-

೧) ಹುಡುಗ ಕುಡುಕನೋ, ಕೆಟ್ಟ ರೋಗವನೋ ಅಥವಾ ಕೆಟ್ಟ ಹೆಣ್ಣುಗಳ ಸಹವಾಸ ಮಾಡಿ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಅವರೀರ್ವರಲ್ಲಿ ಪ್ರೀತಿ ಇಲ್ಲವಾಗಿದ್ದರೆ, ವಿಚ್ಛೇದನಕ್ಕೆ ಒಪ್ಪುತ್ತಾರೆ. ಮತ್ತು ಅವನು ಹೆಂಡತಿಯನ್ನು ಆಳುವ ಶಕ್ತಿ ಕಳಕೊಂಡಿದ್ದರೆ ಅದನ್ನು ಹೆಣ್ಣು ಹೇಳಿದರೆ, ಗಂಡನನ್ನು ಬಿಡಲು ಅನುಮತಿ ನೀಡುತ್ತಾರೆ. ಮಕ್ಕಳಾಗದಿದ್ದರೆ ಗಂಡಿನ ದೋಷವೆಂದಾದರೆ, ಹೆಣ್ಣು ಬೇರೆಯಾಗಬಹುದು. ಅದಕ್ಕಾಗಿ ಗಂಡನಿಂದ ತಪ್ಪು ದಂಡವಾಗಿ ಹಣ ಮತ್ತು ಅವಳ ಜೀವನಕ್ಕೆ ಸ್ವಲ್ಪ ಹಣ ಕೊಡಿಸುತ್ತಾರೆ. ಹೆಂಡತಿ ಸಂಬಂಧ ಕಡಿದುಕೊಳ್ಳುವಾಗ ಗಂಡ ಕಟ್ಟಿದ ‘ತಾಳಿ’ ಹಾಗೂ ‘ಮೂಗೂತಿ’ ‘ಓಲೆ’ಯನ್ನು ಬಿಚ್ಚಿ ಕೊಡಬೇಕಾಗುತ್ತದೆ. ಅನಂತರ ಅವಳೂ ಜಾತಿಯಲ್ಲಿ ಯಾರನ್ನು ಬೇಕಾದರೂ ಮದುವೆಯಾಗಬಹುದು. ಆದರೆ ಮದುವೆಯಾದಂಥ ಶುಭಕಾಲದಲ್ಲಿ ಸೇಸೆ ಹಾಕುವ ಅಧಿಕಾರವನ್ನು ಅವಳು ಕಳೆದುಕೊಳ್ಳುತ್ತಾಳೆ. ಜಾತಿಯ ಸಮಾಜದಲ್ಲಿ ಅವಳು ಇದನ್ನು ಒಪ್ಪಿಕೊಂಡು ಬೇರೆಯಾಗುತ್ತಾಳೆ. [5]

ಹೆಣ್ಣಿನ ದೋಷದ ಕಾರಣದಿಂದಾಗಿಯೂ ಹೆಣ್ಣನ್ನು ಬಿಡಬಹುದು. ಅವರು ಹೇಳುವಂತೆ ಅವಳು ಹಾದರ ಮಾಡುವವಳಾದರೆ, ಕೆಟ್ಟ ರೋಗಗಳಿದ್ದರೆ, ಬಂಜೆಯಾದರೆ, ಗಂಡ-ಹೆಂಡಿರ ಜಗಳಕ್ಕೆ ಕಾರಣಳಾಗಿ ಮನೆ ಹಾಳು ಮಾಡುವವಳಿದ್ದರೆ ಅವಳನ್ನು ಬಿಡಬಹುದು. ಆಗ ಹೆಣ್ಣು ಗಂಡನಿಂದ ಪಡೆದ ತೆರ ಮತ್ತು ಓಲೆ, ತಾಳಿ, ಮೂಗುತಿ ಇವನ್ನು ಬಿಚ್ಚಿ ಕೊಡುವಂತೆ ಹೇಳುತ್ತಾರೆ. ತಪ್ಪು ದಂಡವನ್ನು ಹಾಕುತ್ತಾರೆ. ಗಂಡನಿಂದ ಯಾವ ಪರಿಹಾರವನ್ನೂ ಕೊಡಿಸುವುದಿಲ್ಲ. ಅವಳು ಬೇರೆ ಯಾವನ ಜೊತೆ ಸಂಬಂಧ ಇಟ್ಟುಕೊಂಡಿದ್ದರೆ ಅವನು ಸಭೆಯಲ್ಲಿ ಅವಳನ್ನು ಸ್ವೀಕರಿಸಬೇಕಾಗುತ್ತದೆ. ಅವಳ ಜೊತೆ ಸಂಸಾರ ಮಾಡುವುದಾಗಿ ಸಭೆಯಲ್ಲಿ ಹೇಳಿಕೆ ಕೊಡಬೇಕಾಗುತ್ತದೆ. ಹಿಂದಿನ ಗಂಡನ ಮಕ್ಕಳನ್ನು ಅವನು ಕೈಹಿಡಿದು ಕರೆದುಕೊಂಡು ಹೋಗದಿದ್ದರೆ ಹೆಣ್ಣನ್ನು ಇಟ್ಟುಕೊಂಡವನೇ ಅವರ ಜವಾಬ್ದಾರಿ ಹೊರಬೇಕಾಗುತ್ತದೆ. ಗಂಡನು ತನಗೆ ಮಕ್ಕಳು ಹುಟ್ಟಿಲ್ಲವೆಂದನಾದರೆ ಮಾತ್ರ ಅವುಗಳನ್ನು ಕರೆದುಕೊಂಡು ಹೋಗುವುದಿಲ್ಲ. ಇಲ್ಲದಲ್ಲಿ ಗಂಡ ಬಿಟ್ಟವಳ ಜೊತೆಗೆ ಅವರನ್ನು ತಂದೆ ಕಳಿಸುವುದಿಲ್ಲ. ಭೈರರಲ್ಲಿ ವಿಚ್ಛೇದನ ಆಗುವುದು ಕಡಿಮೆ. ಆದರೂ ಹೆಣ್ಣಿನ ಗುಣ, ನಡತೆಯಿಂದ ಹಾಗೆ ಆಗುವುದು ಉಂಟೆಂದು ಹಿರಿಯರು ತಿಳಿಸುತ್ತಾರೆ. ಇದರ ತೀರ್ಮಾನ ಮಾಡುವವರು ಎರಡೂ ಕಡೆಯ ಗೌಡ (ಗುರ್ಕಾರ) ಬುದ್ದವಂತ ಹಾಗೂ ಮೊಕರಿ ಮತ್ತು ಜಾತಿ ಸಭೆಯವರಾಗಿರುತ್ತಾರೆ. ವಿಚ್ಛೇದನವಾದ ನಂತರ ಹೆಣ್ಣಿಗೆ ಶುಭಕಾರ್ಯಗಳಲ್ಲಿ ಸೇಸೆ ಹಾಕುವ ಅವಕಾಶವಿರುವುದಿಲ್ಲ.[1]        ಡಾ. ಡಿ.ಎಲ್. ಪಾಂಡುರಂಗ: ದಕ್ಷಿಣ ಕನ್ನಡ ಜಿಲ್ಲೆಯ ಭೈರರು, ಪ್ರಕಾಶನ: ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ, ಪುಟ-೧೯

[2]        ಅದೇ ಪುಟ – ೨೨

[3]        ಅದೇ ಪುಟ – ೨೪

[4]        ಅದೇ ಪುಟ – ೩೦

[5]      ಅದೇ ಪುಟ – ೩೪