ಮಹಿಳೆ ಫಲವಂತಿಕೆ:

ನಿಸರ್ಗದ ಅನಂತ ಜೀವರಾಶಿಗಳನ್ನು ಗಮನಿಸಿದ ಮಾನವ ಭೂಮಿಯನ್ನು ಫಲವಂತಿಕೆಯ ಮೊತ್ತವೆಂದು ಭಾವಿಸಿರುವ ಸಾಧ್ಯತೆಯನ್ನು ಬುಡಕಟ್ಟು ಸಂಸ್ಕೃತಿಯಲ್ಲಿರುವ ಕೆಲವೊಂದು ಆಚರಣೆಗಳು ವ್ಯಕ್ತಪಡಿಸುತ್ತವೆ. ಉದಾಹರಣೆಗೆ ಮಲೆನಾಡಿನ ಭೂಮಿ ಹುಣ್ಣಿಮೆಯ ಸಂಪ್ರದಾಯ. ಮಹಿಳೆಗೆ ನಿಸರ್ಗ ನೀಡಿದ ವಿಶಿಷ್ಟ ಕೊಡುಗೆಯೆಂದರೆ ಫಲವಂತಿಕೆ. ಆಕೆಗೆ ಸಮಾಜದಲ್ಲಿ ಸ್ಥಾನಮಾನವೇನಾದರೂ ದೊರೆತಿದ್ದರೆ ಅದು ಆ ಕಾರಣದಿಂದಾಗಿಯೇ ಎಂಬುದು ವಿದಿತ. ಫಲವಂತಿಕೆಯಿಂದಾಗಿ ಹೆಣ್ಣನ್ನು ನಿಸರ್ಗದೊಂದಿಗೆ ಹೋಲಿಸುವುದಿದೆ. ಹೆಣ್ಣಿನ ಗರ್ಭಧಾರಣೆ ಶಕ್ತಿಗೂ ಭೂಮಿಯ ಸಸ್ಯಧಾರಣ ಶಕ್ತಿಗೂ ಸಂಬಂಧ ಕಲ್ಪಿಸುವುದು ಕೂಡಾ ವಿರಳವೇನಲ್ಲ. “ಗದ್ದೆಗೆ ಹಸಿರು ಚಂದ, ಹೆಂಗಸಿಗೆ ಬಸಿರು ಚಂದ” ಎಂಬ ಗಾದೆಮಾತನ್ನು ನೆನಪಿಗೆ ತಂದುಕೊಳ್ಳಬಹುದು. ಫಲಬಿಡುವ ವೃಕ್ಷಕ್ಕೆ ಹೆಣ್ಣನ್ನು ಹೋಲಿಸುವುದು ಆಕೆಯ ಫಲವಂತಿಕೆಯ ಕುರುಹು. ಒಮ್ಮೆ ಹೆಣ್ಣು ಋತುಮತಿಯಾದ ಮೇಲೆ ಮಧ್ಯ ವಯಸ್ಸಿನಲ್ಲಿ ಆಕೆಯ ಋತುಚಕ್ರ ಸ್ಥಗಿತಗೊಳ್ಳುವವರೆಗಿನ ಘಟ್ಟವನ್ನು ಫಲವಂತಿಕೆಯ ಕಾಲ ಎಂದು ಗುರುತಿಸಲಾಗುವುದು. ಪ್ರತಿತಿಂಗಳು ಹೆಣ್ಣಿನ ಗರ್ಭದಿಂದ ಹೊರಹೊಮ್ಮುವ ಅಂಡಾಣುಗಳು ಅವಳ ಫಲವಂತಿಕೆಯ ಸಾಮರ್ಥ್ಯವನ್ನು ಪ್ರಕಟಪಡಿಸುತ್ತವೆ. ಹೆಣ್ಣಿನ ಅಂಡಾಣು ಪುರುಷನ ವೀರ್ಯಾಣುವಿನೊಂದಿಗೆ ಸೇರಿದಾಗ ಮಾತ್ರ ಸೃಷ್ಟಿಕ್ರಿಯೆ ಸಾಧ್ಯವೆಂಬುದನ್ನು ವಿಜ್ಞಾನ ನಿರೂಪಿಸುತ್ತದೆ.

ಭೈರರು ತಮ್ಮ ಅನುಭವದಿಂದ ಹೆಣ್ಣಿನ ಸೃಷ್ಟಿಶಕ್ತಿಯನ್ನು ಗುರುತಿಸಿದ್ದರು. ಆದುದರಿಂದಲೇ ಋತುಮತಿಯಾಗುವಿಕೆ, ವಿವಾಹ, ಗರ್ಭಧಾರಣೆಯಂಥ ಸಂದರ್ಭಗಳಲ್ಲಿ ಕೆಲವೊಂದು ಆಚರಣೆಗಳನ್ನು ರೂಢಿಗತಗೊಳಿಸಿ ಇವುಗಳಿಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಈ ಮೂರು ಅವಸ್ಥೆಯನ್ನು ಸೇರಿಸಿಕೊಂಡು ಜನಪದರು ಚಮತ್ಕಾರಿಕವಾಗಿ ಹೇಳುವುದುಂಟು ಉದಾ: “ಕುಂತಾಗ ಬರಬ್ಯಾಡ, ನಿಂತಾಗ ಬರಬ್ಯಾಡ, ಮಲಗಿದಾಗ ಬರಬ್ಯಾಡ, ಈ ಮೂರೂ ಸಂದರ್ಭ ಯಾವಾಗ?” ಎಂದು ವಿನೋದಕ್ಕಾಗಿ ಪ್ರಶ್ನಿಸಿದರೂ ಇದು ಹೆಣ್ಣಿನ ಈ ಮಜಲುಗಳನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸಿದ್ದರೆಂಬುದಕ್ಕೆ ನಿದರ್ಶನಂ ಇಲ್ಲಿ ಕುಂತಾಗ ಬರಬ್ಯಾಡ ಎಂದರೆ ಋತುಮತಿಯಾದಾಗ ಹೊರಗೆ ಕುಳಿತುಕೊಳ್ಳುವುದು, ನಿಂತಾಗ ಬರಬ್ಯಾಡ ಎಂದರೆ ಗರ್ಭ ನಿಲ್ಲುವುದು, ಗರ್ಭಿಣಿ ಎಂಬ ವರ್ಣನೆ, ಮಲಗಿದಾಗ ಬರಬ್ಯಾಡ ಅಂದರೆ ಹೆರಿಗೆಯಾಗಿ ಮಲಗುವುದನ್ನು ಹೇಳುತ್ತದೆ. ಹೆಣ್ಣು ಫಲವತಿಯಾಗಲು ಬೇಡದ ಬಸಿರನ್ನು ಕಳೆಯಲು ಜನಪದರು ಅನೇಕ ಬಗೆಯ ಚಿಕಿತ್ಸೆಗಳನ್ನು ನಿಸರ್ಗದಿಂದಲೇ ಕಂಡುಕೊಂಡಿದ್ದರು. ಇಂದಿಗೂ ಹಳ್ಳಿಗಳಲ್ಲಿ ಸಂತಾನವಿಲ್ಲದವರಿಗೆ ನಾಟಿ ಔಷಧಿ ನೀಡುವುದುಂಟು. ಇಂಥ ಪ್ರಯತ್ನಗಳು ಸಫಲವಾಗಿರುವ ಪ್ರಕರಣಗಳೂ ಇವೆ. ಹಾಗೆಯೇ ವಿಫಲವಾಗಿರುವ ಪ್ರಕರಣಗಳೂ ಇವೆ.

ಭೈರರ ಸಮಾಜ ಸಂಸ್ಕೃತಿಯ ಪರಿಕಲ್ಪನೆಯಲ್ಲಿ ಮೂಡಿಬಂದ ಮಾತೃಪ್ರಧಾನವಾಗಿದೆ. ಗ್ರಾಮದೇವತೆಗಳ ಸಂಧರ್ಭದಲ್ಲಿ ಪುರುಷನ ಪ್ರವೇಶವಿಲ್ಲದೆಯೇ ಸೃಷ್ಟಿಕ್ರಿಯೆ ಸಾಧ್ಯವೆಂಬುದನ್ನು ನಿರೂಪಿಸಲು ಪ್ರಯತ್ನಿಸಿದೆ. ಇಲ್ಲಿ ದೇವತೆಯ ಗಂಡನ ಪ್ರಸ್ತಾಪ ಬಾರದಿದ್ದರೂ ಆಕೆಯ ಮಕ್ಕಳ ಬಗ್ಗೆ ಕಥೆ ಹೇಳುವುದುಂಟು. ಮಗುವಿನ ತಂದೆ ಯಾರು ಎನ್ನುವುದಕ್ಕಿಂತ ತಾಯಿ ಯಾರೆಂಬುದು ಮುಖ್ಯವಾದದ್ದು. ಹೆಣ್ಣಿನ ಫಲವಂತಿಕೆ ಶಕ್ತಿಯಿಂದ ಎಂಬುದು ಗ್ರಹಿತವಾಗುತ್ತದೆ. ಮಾತೃಪ್ರಧಾನ ಕುಟುಂಬದಲ್ಲಿ ಅಧಿಕಾರ ಮಹಿಳೆಯ ಕೈವಶದಲ್ಲಿತ್ತು. ಕ್ರಮೇಣ ಗಂಡಿನ ಉತ್ಪಾದನೆ ಏರುಗತಿಯಲ್ಲಿ ಬೆಳೆದದ್ದರಿಂದ ಅಧಿಕಾರದ ಚೆಂಡು ಹೆಣ್ಣಿನ ಕೈಯಿಂದ ಜಾರಿ ಗಂಡನ ಕಡೆಗೆ ಬಿದ್ದಿತು. ಸಾಮಾಜಿಕವಾಗಿ ಹೆಣ್ಣಿನ ಸ್ಥಾನಮಾನದಲ್ಲೂ ಪಲ್ಲಟಗಳು ಕಾಣಿಸಿಕೊಂಡು ಅವಳ ವ್ಯಕ್ತಿತ್ವನ್ನು ದಮನಗೊಳಿಸಲಾಯಿತು.

ಹೆಣ್ಣಿಗೆ ಸಂಬಂಧಿಸಿದ ಬಾಹ್ಯ ಆಚರಣೆಗಳೆಲ್ಲ ಆಕೆಯ ಫಲವಂತಿಕೆಯ ಆಶಯದ ಮೇಲೆ ರೂಪುಗೊಂಡಿರುವಂಥವು. ಒಸಗೆ, ಮದುವೆ, ಗರ್ಭಿಣಿ ಈ ಅವಧಿಯಲ್ಲಿ ವಿವಿಧ ಸಂಸ್ಕೃತಿಗಳಲ್ಲಿ ಕಂಡುಬರುವ ಆಚರಣೆಗಳನ್ನು ಮತ್ತು ಆಯಾ ಸಂಸ್ಕೃತಿಯ ಮೌಖಿಕ ಸಾಹಿತ್ಯವನ್ನು ಕಂಡುಬರುವ ಆಚರಣೆಗಳನ್ನು ಮತ್ತು ಆಯಾ ಸಂಸ್ಕೃತಿಯ ಮೌಲಿಕ ಸಾಹಿತ್ಯವನ್ನು ಅಭ್ಯಾಸ ಮಾಡಿದರೆ ಫಲವಂತಿಕೆಯ ಬಗೆಗೆ ಬೇರೆ ಬೇರೆ ಸಂಸ್ಕೃತಿಗಳಲ್ಲಿರುವ ಸಾಮ್ಯತೆ ಮತ್ತು ಭಿನ್ನತೆಗಳು ಅನಾವರಣಗೊಳ್ಳುತ್ತವೆ. ಹೆಣ್ಣು ಋತುಮತಿಯಾದಾಗ ತನ್ನ ಬದುಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಜೈವಿಕ ಬದಲಾವಣೆಯಾಗುತ್ತಿರುವುದನ್ನು ಅನುಭವಿಸುತ್ತಾಳೆ. ಹುಡುಗಿ ಜೀವೋತ್ಪಾದನೆಗೆ ಸಿದ್ಧಳಾದುದನ್ನು ಸೂಚಿಸುವ ಈ ಸಂಧರ್ಭ ಆಕೆಯ ಕುಟುಂಬಕ್ಕೆ ಸಂತಸದಾಯಕವಾಗಿರುತ್ತದೆ. ಹಿಂದೆ ಬಾಲ್ಯವಿವಾಹ ರೂಢಿಯಲ್ಲಿದ್ದುದರಿಂದ ಋತುಮತಿಯಾಗುವ ಮೊದಲೇ ವಿವಾಹವಾಗಿರುತ್ತಿದ್ದರೂ ಆಕೆ ಪ್ರೌಢಾವಸ್ಥೆ ತಲುಪುವುವರೆಗೆ ತಾಯಿಯ ಮನೆಯಲ್ಲಿಯೇ ಇರುತ್ತಿದ್ದಳು. ಅಷ್ಟರ ಮಟ್ಟಿಗೆ ವೈಜ್ಞಾನಿಕ ತಿಳಿವಳಿಕೆ ಆ ಸಮಾಜಕ್ಕಿತ್ತು. ಮಗಳು ಋತುಮತಿಯಾದಾಗ ತಾಯಿ ಮೊದಲು ನೋಡಬಾರದೆಂಬ ನಂಬಿಕೆ ಇದೆ. ಯಾವ ದಿನ ನೆರೆದರೆ ಶುಭದಿನ, ಯಾವ ದಿನ ಅಶುಭ ಎಂದು ಜ್ಯೋತಿಷ್ಯವನ್ನು ಹೇಳುವುದುಂಟು. ಕಾಡುಗೊಲ್ಲ ಸಂಸ್ಕೃತಿಯಲ್ಲಿ ಮೈನೆರೆದಾಗ ಹಾಡುವ ಪದಗಳಲ್ಲಿ

“ಶುಕ್ರವಾರದ ದಿನ ಪುತ್ರಮ್ಮ ಮೈನೆರೆತಾರೆ
ಅವರಪ್ಪ ಆರೋರನ ಬೆಸಗಂಡು ಕೇಳ್ಯಾನೆ
ಪುತ್ರಮ್ಮ ನೆರೆತ ಗಳಿಗೇಯ
ಪುತ್ರಮ್ಮ ನೆರೆತ ಗಳಿಗೇಯ ಕೇಳಿದರೆ
ವುಟ್ಟೀದ ಮನೆಗೆ ಜಯ ಜಯ.”

ಎಂದು ಜೋಯಿಸರನ್ನು ಕೇಳುವ ಪ್ರಸ್ತಾಪವಿದೆ. ಹುಡುಗಿಯ ಋತುಸ್ನಾನವಾಗುವವರೆಗೆ ಆಕೆ ಅಸ್ಪೃಶ್ಯಳು. ಅವಳು ಮನೆಯ ಒಳಾಂಗಣಗಳಿಗೆ ಪ್ರವೇಶಿಸುವಂತಿಲ್ಲ. ಬಯಲು ಸೀಮೆಯಲ್ಲಿ ಹೆಂಡತಿ ಋತುವಾದಾಗ ಗಂಡನಿಗೆ ಹದಿನಾರುದಿನ ಓಕುಳಿಶಾಸ್ತ್ರ ಮಾಡುವರು. ಗುಡ್ಲು ಹಾಕಿ ಹೆಣ್ಣನ್ನು ಆ ಗುಡಿಸಿಲಿನಲ್ಲಿ ಪ್ರತ್ಯೇಕವಾಗಿಡುತ್ತಿದ್ದರು. ಏಕೆಂದರೆ ಆ ಸಮಯದಲ್ಲಿ ಅತಿಮಾನುಷ ಶಕ್ತಿ ಇರುತ್ತದೆ. ಋತುಸ್ರಾವದಿಂದ ಅಪಾಯಕಾರಿ ಶಕ್ತಿ ಹೊರಹೊಮ್ಮುವುದೆಂಬ ನಂಬಿಕೆ ಕೆಲವು ಸಮಾಜದಲ್ಲಿದೆ. ಹಾಗಾಗಿ ಸೂರ್ಯಕಿರಣ ಬೀಳದಂತೆ ಒಳಗೆ ಇರಿಸುತ್ತಿದ್ದರು. ಮಲೆನಾಡು ಭಾಗದಲ್ಲಿ ಗುಡ್ಲು ಹಾಕುವ ಸಂಪ್ರದಾಯವಿಲ್ಲ. ಫಲವಂತಿಕೆಯ ಪ್ರತೀಕವಾದ ಹಾಲುವೃಕ್ಷ ವಿಶೇಷವಾಗಿ ಹಲಸಿನ ಮರದ ಕೆಳಗೆ ಹುಡುಗಿಯನ್ನು ಕೂರಿಸಿ ಸ್ನಾನ ಮಾಡಿಸುವ ಸಂಪ್ರದಾಯ ಅನೇಕ ಸಂಸ್ಕೃತಿಗಳಲ್ಲಿ ಸಾಮಾನ್ಯ.

ಗರ್ಭಿಣಿಯರ ಬವುಕೆ ಶಾಸ್ತ್ರ

ಏಳನೆಯ ತಿಂಗಳಲ್ಲಿ ಗರ್ಭಿಣಿಗೆ ಸೀಮಂತ ನಡೆಸುತ್ತಾರೆ. ಇದಕ್ಕೆ ಸಂಬಂಧಿಸಿದ ಕಾರ್ಯವನ್ನು ಮೊದಲನೇ ಸಾರಿ ತವರು ಮನೆ (ಗರ್ಭಿಣಿಯ ತಾಯಿಮನೆ) ಯಲ್ಲಿ ಆಚರಿಸುತ್ತಾರೆ. ಗರ್ಭಿಣಿಗೆ ಆಚರಿಸುವ ಸೀಮಂತಕ್ಕೆ ‘ಬವುಕೆ ಕಾರ್ಯ’ ಎಂದು ಹೇಳುತ್ತಾರೆ. ಈ ಶಾಸ್ತ್ರ ನಡೆಸುವಾಗ ಗಂಡನ ಮನೆಯಿಂದ ಕೂಡಿ, ಸೀರೆ, ರವಿಕೆ, ಅವಲಕ್ಕಿ, ಹೊರಳು, ಒಂಭತ್ತು ಬಗೆಯ ಮಿಠಾಯಿ, ಏಳು ಬಗೆಯ ತಿಂಡಿ, ಬೆಲ್ಲ ಮತ್ತು ಹಿಂಗಾರವನ್ನು ತೆಗೆದುಕೊಂಡು ಬರುತ್ತಾರೆ. ಹಸೆಯಲ್ಲಿ ಇಬ್ಬರನ್ನು ಕೂರಿಸಿ ‘ನಿವಾಳಿ ಆರಸಿ’ ತೆಗೆಯುತ್ತಾರೆ. ಗರ್ಭಿಣಿಗೆ ಹೂವು ಮುಡಿಸಿ ಅಲಂಕಾರ ಮಾಡುತ್ತಾರೆ. ಮೂಡು ದಿಕ್ಕಿಗೆ ಮುಖ ಮಾಡಿ ಕೂರಿಸಿ ‘ಬವುಕೆ’ ಸೋಬಾನೆ ಹಾಡುತ್ತಾ ಎಲೆಗಳ ಮೇಲೆ ಸಿಹಿ ಹಾಗೂ ಎಣ್ಣೆಯಿಂದ ಕರಿದು ಮಾಡಿದ ತಿಂಡಿಗಳನ್ನು ಬಡಿಸುತ್ತಾರೆ. ಅವೆಂದರೆ ಎಳ್ಳುಂಡಿ, ಕಡ್ಲಿ ಮಿಠಾಯ್‌, ಸಿಕ್ಕಿನುಂಡಿ, ಸೀಕಡ್ಡಿ, ಹೋಳಿಗೆ, ಸಜ್ಜಪ್ಪ (ಅತ್ರಾಸು), ಚಕ್ಕುಲಿ, ಗಾರಗಾಯಿ, ಕಾರಿಗೇಮ, ರೊಟ್ಟಿ ಮತ್ತು ದ್ರಾಕ್ಷಿ ಇತ್ಯಾದಿ ಹಣ್ಣುಗಳನ್ನು ತರುತ್ತಾರೆ. ಏಳು ಬಗೆಯ ಹೂವುಗಳನ್ನು ಅಂದು ಮುಡಿಸಬೇಕು. ಬಂದ ಹೆಂಗಸರು ಗಂಡ ಉಳ್ಳವರು ಮಾತ್ರ (ಮುತ್ತೈದೆ) ಗಂಡ-ಹೆಂಡತಿಗೆ ‘ಸೀಸೆ’ ಎರಚುತ್ತಾರೆ ಮತ್ತು ಕಪ್ಪು-ಕೆಂಪು, ಹಳದಿ ಆರತಿ ಮಾಡಿ ದೃಷ್ಟಿ ಬೊಟ್ಟು ಇಟ್ಟು ‘ಕುರ್ದಿ’ ನೀರನ್ನು ಬೀದಿಗೆ ಚೆಲ್ಲುತ್ತಾರೆ.

ಇದರಿಂದ ಗರ್ಭಿಣಿಗೆ ದೃಷ್ಟಿ ದೋಷವಾಗುವುದಿಲ್ಲ. ಬಂದ ಹೆಂಗಸರಿಗೆ ವೀಳೆಯ ಗೌರವ ಕೊಡುತ್ತಾರೆ. ಗರ್ಭಿಣಿಯು ಆ ತಿಂಡಿಗಳನ್ನು ತಿನ್ನುವುದಕ್ಕೆ ಮೊದಲು ಬಂದ ಮಕ್ಕಳಿಗೆ ಹಂಚಿ ನಂತರ ತಿನ್ನುತ್ತಾಳೆ. ಬವುಕೆ ಶಾಸ್ತ್ರದ ದಿನವೂ ಗಂಡ-ಹೆಂಡಿರು ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಬವುಕೆ ಶಾಸ್ತ್ರವಾದ ದಿನ ಗರ್ಭಿಣಿ ಹೊರಗೆ ಎಲ್ಲೂ ಹೋಗಲು ಅವಕಾಶವಿಲ್ಲ. ಹಾಗೆಯೇ ಗಂಡನೂ ಬೇರೆಡೆಗೆ ಪ್ರಯಾಣ ಬೆಳೆಸಕೂಡದೆಂದು ತಿಳಿಸುತ್ತಾರೆ. ಈ ಬವುಕೆ ಕಾರ್ಯ ಮುಗಿಯುವವರೆಗೆ ಸೋಬಾನೆ ಶಾಸ್ತ್ರವನ್ನು ನಡೆಸುತ್ತಾರೆ. ಈ ಹಾಡು ಹೇಳುವವರಿಗೆ ಪ್ರತ್ಯೇಕ ವೀಳೆಯ ಗೌರವ ನೀಡುತ್ತಾರೆ.

ಅಂತ್ಯ ಸಂಸ್ಕಾರ

ಭೈರರಲ್ಲಿ ಯಾರಾದರೂ ಗಂಡಸು ಅಥವಾ ಹೆಂಗಸು ತೀರಿ ಹೋದರೆ ನೆಂಟರಿಗೆ ಕೊರಗರ ಮೂಲಕ ಸುದ್ದಿ ಕಳಿಸುತ್ತಾರೆ. ಕೊರಗರು ಸಿಗದಿದ್ದಲ್ಲಿ ತಮ್ಮ ಕೇರಿಯ ಯಾರಾದರೂ ಹೋಗಿ ತಿಳಿಸುತ್ತಾರೆ. ಸತ್ತವರನ್ನು ಹೊರಗಡೆಯಲ್ಲಿ ಚಾಪೆಯ ಮೇಲೆ ತಂದಿಡುತ್ತಾರೆ. ಸಾಯುವ ಸಮಯದಲ್ಲಿ ದೇವರ ಹೆಸರು ಹಾಗೂ ಸಾಯುತ್ತಿರುವವನ ಹೆಸರು ಹೇಳಿ ಬಾಯಿಗೆ ನೀರು ಬಿಡುತ್ತಾರೆ. ಹಿರಿಯ ಮಗ ಈ ಕೆಲಸವನ್ನು ಮಾಡುತ್ತಾನೆ. ಸತ್ತ ನಂತರ ಬಿಳಿ ವಸ್ತ್ರವನ್ನು ಮುಚ್ಚಿ ಅಂಗಳದಲ್ಲಿ ತಂದಿಡುತ್ತಾರೆ. ತಲೆ ಮತ್ತು ಕಾಲುಕಡೆ ತೆಂಗಿನಕಾಯಿ ಒಡೆದು ಇಟ್ಟು ಅದಕ್ಕೆ ಗಂಧದ ಕಡ್ಡಿಗಳನ್ನು ಹಚ್ಚಿಡುತ್ತಾರೆ. ಶವವನ್ನು ತೆಂಗಿನ ಗರಿಯ ಮೇಲೆ ಮಲಗಿಸಿ ‘ಮಂಜಾಳ’ (ಅರಿಶಿನ) ಸೇರಿಸಿದ ನೀರಿನಿಂದ ಮೀಯಿಸುತ್ತಾರೆ. ನಾಲ್ಕು ಬಿದಿರು ಕಟ್ಟಿ ಅದರ ಮೇಲೆ ತೆಂಗಿನ ಮಡಿಲು (ಗರಿ) ಹಾಕಿ ಚಟ್ಟವನ್ನು ಕಟ್ಟುತ್ತರೆ. ಮನೆಯ ಮುಂದೆ ಬೆಂಕಿ ಹಚ್ಚುತ್ತಾರೆ. ಚಟ್ಟದ ಮೇಲಕ್ಕೆ ಶವವನ್ನಿಟ್ಟು ಬಿಳಿ ವಸ್ತ್ರವನ್ನು ಮುಚ್ಚಿ ಸಿಂಗರಿಸುತ್ತಾರೆ. ಹೆಣದ ಜೊತೆಯಲ್ಲಿ ಮೂರು ಹಿಡಿ ಬೆಳ್ತಿಗೆ ಅಕ್ಕಿ, ಅಡಿಕೆ-ಎಲೆ ಇವುಗಳನ್ನು ಹೊಸ ವಸ್ತ್ರದಲ್ಲಿ ಕಟ್ಟಿಡುತ್ತಾರೆ. ಚಟ್ಟದ ಮೇಲೆ ಬೀಡಿ, ಬೆಂಕಿ ಪೆಟ್ಟಿಗೆ, ವೀಳ್ಯ, ಅಡಿಕೆ, ಹೊಗೆಸೊಪ್ಪು ಮತ್ತು ಸರಾಯಿ ಇಡುತ್ತಾರೆ. ಸಾಮಾನ್ಯವಾಗಿ ಅವನಿಗೆ ಹವ್ಯಾಸವಿರುವ ವಸ್ತುಗಳನ್ನು ಇಡುತ್ತಾರೆ. ಯಾವುದಾದರೂ ಗುಡ್ಡದ ಬದಿಯಲ್ಲಿ ಅಥವಾ ಕೇರಿಯಿಂದ ಹೊರಗೆ ಹೆಣವನ್ನು ಹೂಳುತ್ತಾರೆ. ಹೆಣ ಹೂರುವವರು ತಲೆಯ ಮೇಲೆ ವಸ್ತ್ರ ಸುತ್ತಿ, ಸೊಂಟದ ಸುತ್ತಲೂ ವಸ್ತ್ರ ಸುತ್ತಿಕೊಳ್ಳುತ್ತಾರೆ.

ಶವವನ್ನು ಹೂಳಲು ಆರು ಕೋಲು ಉದ್ದ, ಮೂರು ಕೋಲು ಅಗಲ ಹಾಗೂ ಎರಡು ಕೋಲು ಆಳವಿರುವ ಹೊಂಡವನ್ನು ಜಾತಿಯವರೇ ತೆಗೆಯುತ್ತಾರೆ. ಮೂಡು ದಿಕ್ಕಿಗೆ ತಲೆ ಬರುವ ಹಾಗೆ ಹೊಂಡಕ್ಕೆ ಶವ ಇಟ್ಟು ಮಣ್ಣು ಮುಚ್ಚುತ್ತಾರೆ. ಮಡಿಕೆಯಲ್ಲಿ ಬೆಂಕಿ ಹಾಕಿ ಬೂದಿಯನ್ನು ಹೆಣದ ಹತ್ತಿರ ಸುರಿದು ಬರುತ್ತಾರೆ. ಸತ್ತವರು ಹೆಂಗಸಾದರೆ ಅದರಲ್ಲಿಯೂ ಗಂಡವುಳ್ಳವಳಾದರೆ ಅವಳು ತುಂಬಾ ಭಾಗ್ಯವಂತಳೆಂದು ತಿಳಿಯುತ್ತಾರೆ. ಹೀಗೆ ಸತ್ತಾಗ ಅವಳ ಕುತ್ತಿಗೆಯ ಮೂರ್ತ ತಾಳಿ, ಬಳೆ ಯಾವುದನ್ನೂ ದೇಹದಿಂದ ತೆಗೆಯದೆ ಹಾಗೆಯೇ ಸಮಾಧಿ ಮಾಡುತ್ತಾರೆ. ಸತ್ತವಳ ಬಾಯಿಗೆ ಒಂದು ಚೂರು ಚಿನ್ನದ ತಾಳಿಯ ತುಂಡನ್ನು ಹಾಕುತ್ತಾರೆ. ಅನಂತರ ನೆಂಟರು ಬಾಯಿಗೆ ನೀರು ಬಿಡುವರು. ಸತ್ತವರ ಕುಟುಂಬಕ್ಕೆ ಹನ್ನೊಂದು ದಿನದ ಸೂತಕವಿರುತ್ತದೆ. ಸತ್ತವನ ಹೆಂಡತಿ ಇದ್ದರೆ ಆ ದಿನವೇ ಅವಳ ಓಲೆ ಮತ್ತು ತಾಳಿಯನ್ನು ಅಜ್ಜಿಯರು ತೆಗೆಯುತ್ತಾರೆ. ಆ ದಿನಗಳಲ್ಲಿ ಗುಡಿಗಳಿಗಾಗಲಿ, ಶುಭಕಾರ್ಯಗಳಿಗಾಗಲೀ ಹೋಗುವಂತಿಲ್ಲ. ಯಾವ ಹಬ್ಬವನ್ನೂ ಆಚರಿಸುವಂತಿಲ್ಲ. ಮೂರು ದಿನದ ನಂತರ ಸಮಾಧಿಯ ಪಕ್ಕದಲ್ಲಿ ಉರಿಸಿದ್ದ ಬೆಂಕಿಯ ಬೂದಿ ಹಾಗೂ ಮಡಿಕೆಯಿಂದ ಸುರಿದ ಬೂಧಿ ಗುಡಿಸಿ ಅದನ್ನು ಸಮಾದಿ ಪಕ್ಕ ಹೊಂಡ ತೆಗೆದು ಹಾಕಿ, ಅದರಲ್ಲಿ ನಾಗಸಂಪಿಗೆ ಗಿಡ ನೆಡುತ್ತಾರೆ. ಸಮಾದಿ ಮೇಲೆ ಕಾಸರಕನ ಕೊಂಬೆ ಇಡುತ್ತಾರೆ. ಮಾರನೆಯ ದಿವಸ ಕಳೆದ ನಂತರ ಹೆಣ ಹೊತ್ತವರ ‘ಹೊಲೆ’ ತೆಗೆಯುತ್ತಾರೆ. ಶವ ಹೊತ್ತ ಜಾತಿಯವರು ಅ ಮೂರು ದಿನ ಯಾರನ್ನೂ ಮುಟ್ಟಿಸಿಕೊಳ್ಳದೇ ಇದ್ದು ನಂತರ ಹೊಳೆಗೆ ಹೋಗಿ ಸ್ನಾನ ಮಾಡಿಕೊಂಡು ಬರುತ್ತಾರೆ. ನೇರವಾಗಿ ಮನೆಗೆ ಹೋಗದೆ ಮಾರಿಗುಡಿಯಲ್ಲಿ ನಮಸ್ಕಾರ ಮಾಡಿ ಹೋಗಬೇಕು. ಶವ ಹೊರದಿದ್ದ ಕುಲಸ್ಥರು ಹೊತ್ತವನ ಹೊಲೆ ತೆಗೆಯಲು ಈ ರೀತಿಯ ಆಚರಣೆಯಿದೆ. ಹೊಲೆ ತೆಗೆಯುವ ದಿನ ಮೀಯುವುದಕ್ಕೆ ಮೊದಲು ಪಾತ್ರೆಯಲ್ಲಿ ಹುಳಿ ನೀರು ಮಾಡಿ ಹೊತ್ತವರ ಸುತ್ತ ಚೆಲ್ಲುತ್ತಾರೆ. ಅನಂತರ ಪಾತ್ರೆಯಲ್ಲಿ ಉಳಿದ ಹುಳಿ ನೀರನ್ನು ಹಿಂದಕ್ಕೆ ಚೆಲ್ಲಿ ‘ಹೊಲೆ ಹೋಯಿತು’ ಎಂದು ಮೂರು ಸಾರಿ ಹೇಳುತ್ತಾರೆ. ಆ ನಂತರ ಎಲ್ಲರೂ ಮಿಂದುಕೊಂಡು ಬರುತ್ತೃಎ. ಮನೆಗೆ ಬಂದಾಗ ಭಂಡಾರದ ಎದುರು ಹಚ್ಚಿಟ್ಟಿರುವ ದೀಪಕ್ಕೆ ನಮಸ್ಕಾರ ಮಾಡುತ್ತಾರೆ. ಬೂದಿಚಾಚುವ ಮೂರನೇ ದಿವಸ ೧೨ ಬಗೆಯ ಅಡಿಗೆ ಮಾಡಿ ೧೨ ಬುತ್ತಿಕಟ್ಟಿ ಅದನ್ನು ಹೊಸ ಗೆರಸಿಯಲ್ಲಿ ಜೋಡಿಸಿ ಸಮಾಧಿಯ ಸುತ್ತ ಇಟ್ಟು ಬರುತ್ತಾರೆ. ದಾರಿಯಲ್ಲಿ ಬರುವಾಗ ಸಮಾಧಿ ನೋಡದೆ ದಾರಿಯಲ್ಲಿ ಸತ್ತವನ ಹೆಸರು ಹೇಳಿ ಹಣ ಹಾಕುತ್ತಾ ಬರುತ್ತಾರೆ. ಇದನ್ನು ಯಾರಾದರೂ ತೆಗೆದುಕೊಂಡರೆ ಸತ್ತವನಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಹನ್ನೊಂದನೆ ದಿನ ಎಲ್ಲರೂ ಮಿಂದು ಪೂಜೆ ಮಾಡಿ ಸೂತಕ ಕಳೆದುಕೊಳ್ಳುತ್ತಾರೆ.

ಅಡುಗೆ ತಯಾರಿ:

ದಿನನಿತ್ಯದ ಅಡಿಗೆಯನ್ನು ಭೈರರಲ್ಲಿ ಹೆಂಗಸರೇ ಮಾಡುತ್ತಾರೆ ಭೂತಾರಾಧನೆಯ ಕಾಲದಲ್ಲಿ, ಮಾರಿ ಜಾತ್ರೆ, ಪೂಜೆ ಇಂಥ ಕಾಲದಲ್ಲೂ ಹೆಂಗಸರೇ ಅಡಿಗೆ ಮಾಡಬೇಕಾಗುತ್ತದೆ. ಕೆಲವು ಭೂತಗಳಿಗೆ ಅಡಿಗೆ ಮಾಡುವವರು ಮುದುಕಿಯರಾಗಿರುತ್ತಾರೆ. ಮಡಿ ಅಡಿಗೆಗಳನ್ನು ಮಾಡಲು ಅವರಿಗೆ ಮಾತ್ರ ಅವಕಾಶವಿದೆ. ಮದುವೆಯ ಅಡಿಗೆಗಳನ್ನು ಗಂಡಸರು ಮಾಡುತ್ತಾರೆ. ಈ ಸಂದರ್ಭದಲ್ಲಿ ಬಂಧು-ಬಾಂಧವರು ಹೆಚ್ಚಾಗಿ ಸೇರುತ್ತಾರೆ. ಮಾಂಸದ ಅಡಿಗೆ ಭೂತಗಳಿಗೆ ಮಾಡುವಾಗ ಹೊರಗಡೆ ಮಡಿಲುಕಟ್ಟಿ ಮರೆಮಾಡಿ ಮಾಡುತ್ತಾರೆ. ಮಾಂಸವನ್ನು ಶುದ್ಧ ಮಾಡಿ ಕೊಡುವವರು ಗಂಡಸರು, ಅದನ್ನು ಪದಾರ್ಥ ಮಾಡುವವರು ಹೆಂಗಸರೇ. ಮಾಂಸದ ಅಡಿಗೆ ಮಾಡಲು ಪ್ರತ್ಯೇಕ ಒಲೆ, ಮಡಿಕೆ, ಸಟ್ಟುಗಳನ್ನು ಇಟ್ಟಿರುತ್ತಾರೆ. ಅಲ್ಲಿ ಮಾತ್ರ ಅಡಿಗೆ ಮಾಡುತ್ತಾರೆ. ಬೊಜ್ಜದ ಅಡಿಗೆ ಮಾಡುವ ಗಂಡಸರು ಹೊರಗಡೆ ತೆಂಕುದಿಕ್ಕಿನಲ್ಲಿ ಕಲ್ಲು ಒಲೆಹೂಡಿ ಅಥವಾ ನೆಲದಲ್ಲಿ ‘ಕುಣಿ’ ತೆಗೆದು ಮಡಿಕೆಗಳನ್ನಿಟ್ಟು ಅಡಿಗೆ ಮಾಡುತ್ತಾರೆ. ನಂತರ ಈ ಒಲೆ ಅಥವಾ ಕುಣಿಗಳನ್ನು ಮುಚ್ಚಿ ಬಿಡುತ್ತಾರೆ. ಮದುವೆಯ ಅಡಿಗೆಮನೆಯ ಹಿಂಭಾಗದಲ್ಲಿ ಚಪ್ಪರ ಹಾಕಿ ಕಲ್ಲು ಒಲೆಗಳನ್ನು ಹೂಡಿ ಗಂಡಸರೇ ಅಡಿಗೆ ಮಾಡುತ್ತಾರೆ. ಬಂದ ಹತ್ತಿರದ ನೆಂಟರಿಷ್ಟರು ಜೊತೆಗೂಡುತ್ತಾರೆ. ಇವರ ಜೊತೆಯಲ್ಲಿ ಅಡಿಗೆ ಗೊತ್ತಿರುವ ಮುದುಕಿಯರು ಸೇರುತ್ತಾರೆ. ಮದುವೆ ಊಟವೆಂದರೆ ಗಡದ್ದು ಅಥವಾ ಗರ್ಜಿ ಊಟ ಎಂದೇ ಹೇಳುತ್ತಾರೆ.

ಉಡುಗೆ ತೊಡುಗೆಗಳು, ಆಭರಣಗಳು:

ಸ್ತ್ರೀಯರು ಸೀರೆ, ರವಿಕೆ ಧರಿಸಿರುತ್ತಾರೆ. ಹಿಂದೆ ರವಿಕೆ ತೊಡದೆ ಕುತ್ತಿಗೆಯ ಸುತ್ತ ಕತ್ತರಿಯ ಆಕಾರದಲ್ಲಿ ಸುತ್ತಿಕೊಂಡಿರುತ್ತಿದ್ದರೆಂದು ಹೇಳುತ್ತಾರೆ. ಹೆಚ್ಚಾಗಿ ಮಗ್ಗದ ಸೀರೆಗಳನ್ನು ಮನೆಯಲ್ಲಿ ಉಟ್ಟಿರುತ್ತಾರೆ. ಸ್ವಲ್ಪ ದೊಡ್ಡ ಹುಡುಗಿಯರಾದರೆ ಸೀರೆ, ರವಿಕೆ ಹಾಕಿಕೊಂಡಿರುತ್ತಾರೆ. ಕಿವಿಗೆ ಸ್ಟೀಲ್‌ಅಥವಾ ರೋಲ್ಡ್‌ಗೋಲ್ಡ್‌ನ ಓಲೆ ಅಥವಾ ರಿಂಗು ಹಾಕಿಕೊಳ್ಳುತ್ತಾರೆ. ಕುತ್ತಿಗೆಗೆ ಮಣಿಸರ ಅಥವಾ ನಿಕ್ಕಲ್‌ಸರ, ಬೆಳ್ಳಿ, ರೋಲ್ಡ್‌ಗೋಲ್ಡ್‌ಸರಗಳನ್ನು ಹಾಕಿಕೊಳ್ಳುತ್ತಾರೆ. ಕೈಗಳಿಗೆ ಗಾಜಿನ ಅಥವಾ ಲೋಹದ ಬಳೆಗಳನ್ನು ಧರಿಸುತ್ತಾರೆ. ವಿವಾಹದ ಕಾಲದಲ್ಲಿ ವಧೂ-ವರರ (ಗಂಡು-ಹೆಣ್ಣು) ಉಡುಗೆ-ತೊಡುಗೆಗಳು ವಿಶೇಷವಾಗಿರುತ್ತವೆ. ಮದಲಿಂಗನು ಕಾಸೆಪಂಚೆ ಅಥವಾ ಬಿಳಿಪಂಚೆ ಉಟ್ಟು ಬಿಳಿ ಅಂಗಿ ಹಾಕಿಕೊಳ್ಳುತ್ತಾನೆ. ತಲೆಗೆ ಮುಂಡಾಸು, ಹೆಗಲಿಗೆ ಶಾಲು ಹಾಕಿಕೊಂಡಿರುತ್ತಾರೆ. ಕಿವಿಗೆ ಒಂಟಿ, ಕುತ್ತಿಗೆಗೆ ಚಿನ್ನದ ಚೈನು ಅಥವಾ ಬೆಳ್ಳಿಯದು ಹಾಕಿರುತ್ತಾರೆ. ಕಾಲಿಗೆ ಬೇಡಿ (ಬಳಿ) ಹಾಕಿಕೊಳ್ಳುತ್ತಾನೆ. ಮುಂಡಾಸಿಗೆ ‘ಬೆಂಡು’ ಕಟ್ಟಿರುತ್ತದೆ. ವಧು ಅಥವಾ ಮದುವಣಗಿತ್ತಿಗೆ ಹೊಸ ಜರಿ ಅಥವಾ ಸಿಲ್ಕು ಸೀರೆ, ರವಿಕೆ, ತಲೆಗೆ ತಲೆಕಟ್ಟು, ಜಡೆಬಿಲ್ಲೆ (ಚೂಡಾಮಣಿ) ಹೂವಿನ ಅಲಂಕಾರ (ಜಡೆಹಾಕುವಾಗ ಮೊಗ್ಗು ಸೇರಿಸಿ ಹೆಣೆಯುತ್ತಾರೆ) ಸೀರೆಯ ಜೊತೆಗೆ ಮೇಲುದ, ಕೈಗೆ ಬಳೆ, ಕಾಲಿಗೆ ಗೆಜ್ಜೆ ಚೈನು, ನೇವಳ ಹಾಕಿರುತ್ತಾರೆ. ಆಗ ಧರಿಸುವ ಆಭರಣಗಳೆಂದರೆ ತಲೆಗೆ ಕಪ್ಪು ಬಟ್ಟೆ’, ಮುತ್ತಿನ ಬೈತಲೆ, ಕೊಲ್ಲಿ, ಸರಪಳಿ, ಕಿವಿಗೆ ಓಲೆ, ಕೊಪ್ಪು, ಮಾಟಿ, ಬುಗುಡ೩ಇ, ಕುತ್ತಿಗೆಗೆ ಮಿರಣಿ, ಮಿಸುರುಮಾಲೆ, ಗೋದಿಸರ, ಬಂಡಸರ, ಮೂಗಿಗೆ ಮೂಗುತಿ, ಹೊಕ್ಕೆಟಿಕ್ಕೆ, ಸೊಂಟಕ್ಕೆ ಡಾಬು, ಸೊಂಟ ಸರಪಳಿ ಹಾಕಿಕೊಳ್ಳುತ್ತಾರೆ. ಕಾಲಿನ ಬೆರಳಿಗೆ ‘ಕಾಲುಂಗುರ’ ಧರಿಸಿರುತ್ತಾರೆ.

ಭೈರರ ಧಾರ್ಮಿಕ ಆಚರಣೆಗಳಲ್ಲಿ ಮಹಿಳೆ:

ಭೈರರ ಸಮಾಜದಲ್ಲಿ ಮೇಲ್‌ಸ್ತರದ ಗಂಡಸರು, ಹೆಂಗಸರೂ ದೈಹಿಕ ಶ್ರಮಗಳಲ್ಲಿ ತೊಡಗುತ್ತಿರಲಿಲ್ಲ. ದೈಹಿಕ ಶ್ರಮಕ್ಕೆ ಮೀಸಲಾಗಿದ್ದ ಕೆಳಸ್ತರದವರೂ ಕೂಡಾ ಮೇಲುಸ್ತರಕ್ಕೆ ಚಲಿಸಲು ಸಿಕ್ಕಿದ ಅವಕಾಶಗಳಿಂದಾಗಿ, ಮೇಲು ಜಾತಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದನ್ನು ಮೊದಲು ಮಾಡಿದಾಗ ಅವರ ಜೀವನವಿಧಾನದಲ್ಲಿ ಆದ ಬದಲಾವಣೆಗಳ ತೀವ್ರ ಸ್ವರೂಪಗಳು ಮಹಿಳೆಯರಲ್ಲೇ ಹೆಚ್ಚು ವ್ಯಕ್ತವಾದವು. ಮೇಲು ಜಾತಿಯಲ್ಲಿ ‘ಮಡಿ’ಯ ಕಲ್ಪನೆ ಅತಿ ಸೂಕ್ಷ್ಮ ಬಗೆಯದು. ಈ ಮಡಿ-ಮೈಲಿಗೆಗಳೇ ಪ್ರಧಾನವಾದ ಸಂಪ್ರದಾಯದ ಹಲವು ಆಚರಣೆಗಳು ವರ್ಷದುದ್ದಕ್ಕೂ ಹರಡಿರುತ್ತವೆ. ಕುತೂಹಲಕರ ಸಂಗತಿಯೆಂದರೆ ಮನೆಯಲ್ಲಿ ಈ ಮಡಿ ಮೈಲಿಗೆಗಳ ಸಂರಕ್ಷಣೆಯ ಪೂರ್ಣ ಹೊಣೆಯನ್ನು ಮಹಿಳೆಯರೇ ವಹಿಸುತ್ತಾರೆ. ಸಂಪ್ರದಾಯದ ಆಚರಣೆಗಳ ಸಂರಕ್ಷಕರೆನಿಸಿ ಮಹಿಳೆಯರು ಕೆಲಮಟ್ಟಿನ ಅಧಿಕಾರಗಳನ್ನು ಪಡೆಯುತ್ತಾರೆ.

ಮನೆಯಲ್ಲಿ ನಡೆಯುವ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸುತ್ತಾರೆ. ಮಹಿಳೆಯರು ನೇರವಾಗಿ ಭಾಗವಹಿಸದ ಕೆಲವು ಆಚರಣಗೆಳಿವೆಯಾದರೂ ಪೂರ್ವ ಸಿದ್ಧತೆಯ ಹಂತದ ಭಾಗವಹಿಸುವಿಕೆಯಾದರೂ ಅವರಿಗೆ ಇದ್ದೇ ಇರುತ್ತದೆ. ಪಾತ್ರೆ, ಬಟ್ಟೆ, ಮನೆ ಮುಂತಾದವನ್ನು ‘ಮಡಿ’ ಮಾಡುವ, ‘ಮಡಿ’ಯಲ್ಲಿ ಅಡುಗೆ ಮಾಡಿ ಒದಗಿಸುವ ರೀತಿಯ ಕೆಲಸಗಳು, ಪೂಜೆ-ಆಚರಣೆಗಳಿಗೆ ಸಂಬಂಧಿಸಿದ ಸಕಲ ಸಾಮಗ್ರಿಗಳನ್ನು ಅಣಿಮಾಡಿಕೊಡುವ ಕೆಲಸವೂ ಅವಳದೇ. ಇನ್ನು ಹೆಂಡತಿಯ ಪಕ್ಕದಲ್ಲಿಲ್ಲದೆ ಪೂರ್ಣವಾಗದೆಂಬ ಬಗೆಯ ಅನೇಕ ಆಚರಣೆಗಳೂ ಇವೆ. ಅಲ್ಲದೆ ಮಹಿಳೆ ಮಾತ್ರವೇ ಆಚರಿಸುವ ವ್ರತ, ನಿಯಮಗಳೂ ಇವೆ. ಈ ಕೊನೆಯ ಬಗೆಯದರಲ್ಲಿ ಸಾಮಾನ್ಯವಾಗಿ ಮಂತ್ರಗಳ ಬಳಕೆ ಇರುವುದಿಲ್ಲ. ಬದಲಿಗೆ ಸ್ತೋತ್ರ, ಹಾಡುಗಳು ಇರುತ್ತವೆ.

ಭೈರರ ಜಾತಿಯ ಎಲ್ಲಾ ವ್ರತಾಚರಣೆ ಸಂಪ್ರದಾಯಗಳಲ್ಲಿ ಹೆಂಡತಿಯನ್ನು ‘ಅರ್ಧಾಂಗಿ’ ಎಂದು ವ್ಯವಹರಿಸುವ ಈ ಮೇಲು ಜಾತಿಯ ಪುರುಷ ಆಕೆ ವಿಧವೆಯಾದಾಗ ಅವಳಿಂದ ಪೂರ್ಣ ಆತ್ಮವಿನಾಶವನ್ನು ನಿರೀಕ್ಷಿಸುತ್ತಾನಾದರೆ, ತಾನು ವಿಧುರನಾದಾಗ ತನ್ನ ಮೇಲೆ ಈ ನಿರ್ಬಂಧವನ್ನು ಹೇರಿಕೊಳ್ಳುವುದಿಲ್ಲ. ಬದಲಿಗೆ ಗೃಹಕೃತ್ಯಗಳು ಸಾಂಗವಾಗಿ ನೆರವೇರಬೇಕೆಂಬ ನೆಪದಲ್ಲಿ ವಿಳಂಬ ಮಾಡದೆ ಮರುಮದುವೆಯಾಗಿ ಬಿಡುತ್ತಾನೆ. ಜಾತಿಯ ಸ್ತರ ಕೆಳಗಿನದಾಗುತ್ತಾ ಈ ಪಕ್ಷಪಾತದ ನ್ಯಾಯನಿರ್ಣಯವಿಲ್ಲವೆಂಬುದು ಗಮನಾರ್ಹ. ಅಲ್ಲಿ ಹೆಣ್ಣಿನ ಶೀಲ, ಅವಳ ಮರುಮದುವೆ ಸಮಯ ಬಂದರೆ ಗಂಡನನ್ನು ಬಿಡುವ ಹಕ್ಕು ಇವೆಲ್ಲವನ್ನು ಗಂಡಿಗೆ ಸಮಾನವಾಗಿಯೇ ನಿರ್ಣಯಿಸಲಾಗುತ್ತದೆ.

ಒಂದು ಜನಪದ ಆಚರಣಾ ವಿಧಿ, ಆರಾಧನಾ ಜಗತ್ತು ಸ್ತ್ರೀಯ ಪ್ರತ್ಯೇಕ ಅಸ್ತಿತ್ವವನ್ನು ಪಡೆಯುವಲ್ಲಿ ಸ್ಥಳ, ಕಾಲ ಮತ್ತು ವ್ಯಕ್ತಿಯನ್ನು ಸಾಮಾನ್ಯ ಜಗತ್ತಿನಿಂದ ಬೇರ್ಪಡಿಸಲಾಗುವುದು. ಸಿರಿ ಜಾತ್ರೆಯ ಅತಾರಿಕ ಅಥವಾ ಮಧ್ಯಂತರ ಜಗತ್ತಿನ ಸೃಷ್ಟಿಗೆ ಪೂರಕವಾಗಿ ಸಿರಿ ಭಕ್ತರ ವೇಷ-ಭೂಷಣ, ದಲ್ಯ, ಆವರಣ, ಹುಣ್ಣಿಮೆಯ ರಾತ್ರಿಗಳನ್ನು ಕಂಡಕೊಳ್ಳಬೇಕೇ ಹೊರತು ಸಿರಿ ಭಕ್ತರು ಸಿರಿ ಬಳಗದಿಂದ ಆವೇಶಿತರಾಗುವಲ್ಲಿ ಸ್ಥಾಪಿತವಾಗುವ ಸ್ತ್ರೀ-ಪುರುಷ ಸಂಬಂಧಗಳು ರಕ್ತಬಾಂಧವ್ಯ ಘಟಕವಾಗಿದ್ದು ಅವು ತಾಯಿ-ಮಗ, ಅಣ್ಣ-ತಂಗಿ, ಸೋದರ ಮಾವ-ಸೊಸೆಯರದಾಗಿದೆ. ಈ ಜೋಡಿ ಸಂಬಂಧಗಳು ವಿವಾಹಯೋಗ್ಯ ಬಂಧುಗಳಲ್ಲ ಎನ್ನುವುದನ್ನು ಗಮನಿಸಬೇಕು. ಸಿರಿ ಜಾತ್ರೆಯ ಬೃಹತ್‌ಪಠ್ಯದಲ್ಲಿ ಅಭಿವ್ಯಕ್ತವಾಗುವ ಸಿರಿ-ಕುಮಾರ (ತಾಯಿ-ಮಗ), ಕುಮಾರ-ಸೊನ್ನೆ (ಅಣ್ಣ-ತಂಗಿ), ಕುಮಾರ-ಅಬ್ಬಗ-ದಾರಗ (ಸೋದರಮಾವ-ಸೊಸೆಯಂದಿರು) ಸಂವಾದದ ಬಂಧುತ್ವದ ಸ್ವರೂಪವು ಇದನ್ನು ಪುಷ್ಟೀಕರಿಸುತ್ತದೆ.

ಸಿರಿ ಆರಾಧನಾ ಸಂದರ್ಭದಲ್ಲಿ ಸಿರಿಕುಟುಂಬದೊಂದಿಗೆ ಸಂಬಂಧ ಸ್ಥಾಪಿಸಿಕೊಳ್ಳುವ ಸಿರಿ ಭಕ್ತರು ಸಿರಿ-ಕುಮಾರ-ಸೊನ್ನೆ-ಗಿಂಡೆ-ಅಬ್ಬಗ-ದಾರಗರಾಇ ಸಂಭಾಷಿಸುತ್ತಾರೆ. ಸಂವಾದರೂಪದ ಪಾಡ್ದನವನ್ನು ಹೇಳುತ್ತಾರೆ. ಸಿರಿ ಪಾಡ್ದನದ ಹೆಣ್ಣುಗಳ ಸಂಕಷ್ಟಗಳು ತಮ್ಮ ದಿನ ಬದುಕಿನ ಅನುಭವವೇ ಆಗಿರುವಲ್ಲಿ ಸಂಬಂಧ ನಿಕಟಗೊಂಡು ಆವೇಶ ತೀವ್ರಗೊಳ್ಳುತ್ತದೆ. ಹೀಗಾಗಿ ಸಿರಿ ಕಥಾನಕ ಮತ್ತು ಘಟನೆಗಳು ಜಾತ್ರೆಯ ಸ್ವರೂಪವನ್ನು ನಿರ್ಧರಿಸುವುದಕ್ಕಿಂತ ಹೆಚ್ಚಾಗಿ ಆವೇಶ ಹೊಂದುವ ಮಹಿಳೆಯ ವಾಸ್ತವ ಬದುಕಿನ ಕಷ್ಟ, ಹಿಂಸೆ, ಶೋಷಣೆ, ನಿರೀಕ್ಷೆ, ಹತಾಶೆಗಳೇ ಸಿರಿ ಜಾತ್ರೆಯ ಪ್ರದರ್ಶನವನ್ನು ನಿಯಂತ್ರಿಸುತ್ತವೆ.

ವಾಸ್ತವ ಬದುಕಿನಲ್ಲಿ ತನ್ನ ತುಮುಲ, ತಲ್ಲಣಗಳಿಗೆ ಮೂಕ ಅಥವಾ ಮೌನವಾಗಿರಬೇಕಾದ ಸಂದರ್ಭ ಹೆಣ್ಣೊಬ್ಬಳ ಮೇಲೆ ಅಸಹನೀಯ ಒತ್ತಡವನ್ನು ತರುತ್ತದೆ. ಇಲ್ಲಿ ದೈವಾವೇಶಕ್ಕೆ ಒಳಗಾಗುವ ಹೆಣ್ಣು ತನ್ನ ಯಾತನೆ, ತಳಮಳಗಳನ್ನು ಸಿರಿ ಕುಟುಂಬದ ಜೊತೆಗೆ ಹಂಚಿಕೊಳ್ಳುತ್ತಾಳೆ. ಅವರಿಂದ ಆಕೆಗೆ ಸಮಾಧಾನ, ವಿಶ್ವಾಸ ಹಾಗೂ ಬೆಂಬಲಗಳು ದೊರೆಯುತ್ತವೆ. ವಾಸ್ತವ ಬದುಕಿನಲ್ಲಿ ತನ್ನ ರಕ್ತಬಂಧುಗಳಿಂದ ಅಥವಾ ವಿವಾಹಯೋಗ್ಯ ಬಂಧುಗಳಿಂದ ಸಿಗದ ಬೆಂಬಲ ಹಾಗೂ ಶಕ್ತಿಯನ್ನು ಅಲೌಕಿಕ ಸಂಬಂಧಿಗಳಿಂದ ಆಕೆ ಪಡೆಯುತ್ತಾಳೆ. “ವರ್ಷ ವರ್ಷ ಜಾತ್ರೆಗೆ ಹೋದರೆ ಮಾತ್ರ ಮೈಗೆ ಸುಖ, ಇಲ್ಲದಿದ್ದರೆ ನೆಮ್ಮದಿ ಇಲ್ಲ” ಎನ್ನುವ ಸಿರಿ ಪಾತ್ರಿಣಿ ಪಾಚು ಮೂಲೈದಿಯ ಮಾತು ಸಿರಿ ಪಾಡ್ದನ ಹಾಗೂ ಆಚರಣೆ ಹೆಣ್ಣೊಬ್ಬಳಿಗೆ ತರುವ ಮಾನಸಿಕ ಬಿಡುಗಡೆಯನ್ನು ಸ್ಪಷ್ಟಪಡಿಸುತ್ತದೆ. ಸತ್ಯ ಮತ್ತು ಸಚ್ಚಾರಿತ್ಯ್ರಗಳ ಪ್ರತೀಕವಾದ ಸಿರಿ ಮೈಮೇಲೆ ಬರುವುದು ತುಳುವ ಹೆಣ್ಣೊಬ್ಬಳ ಸತ್ಯ ಹಾಗೂ ಶೂದ್ಧದ ಸತ್ವ ಪರೀಕ್ಷೆಯೂ ಹೌದು. ಇದು ಅವಳಲ್ಲಿ ತನ್ನ ಸ್ತ್ರೀತ್ವದ ಬಗೆಗೆ ಅಭಿಮಾನ ಹಾಗೂ ಹೊಸ ಶಕ್ತಿಯನ್ನು ತುಂಬಿಕೊಡುತ್ತದೆ. ಈ ಹೊಸ ಶಕ್ತಿಯ ಸಂಚಯನದಲ್ಲಿ ಅವರು ನಿಜಲೋಕದ ಸಂಘರ್ಷಗಳಿಗೆ ಮುಖಾಮುಖಿಯಾಗಿ ನಿಲ್ಲುತ್ತಾರೆ. ಭೈರರಲ್ಲೂ ಹೆಂಗಸರು ಪಾಡ್ಡನ ಸಿರಿಯ ಕಥೆ ಹೇಳಬಹುದು. ಆದರೆ (ಗಾಯತ್ರೀ ನಾವಡ – ಪುಟ ೧೪೭-೧೪೯) ಗಂಡಸರಂತೆ ಅವರು ಎಲ್ಲ ಕಾರ್ಯಗಳಲ್ಲೂ ಭಾಗಿಯಾಗುವಂತಿಲ್ಲ. ಮುಟ್ಟು, ಚಟ್ಟು ಅಥವಾ ಮಹಿಳೆ ಭೂತನಾದವನನ್ನು ಸ್ಪರ್ಷಿಸುವಂತಿಲ್ಲ, ಮಾತನಾಡುವಂತಿಲ್ಲ. ಹೀಗೆ ಅನೇಕ ನಿರ್ಬಂಧನೆಗಳನ್ನು ಮಹಿಳೆಯ ಸುತ್ತ ಹಾಕಲಾಗಿದೆ. ಆದರೆ ಅದರ ಎಲ್ಲ ಸಿದ್ಧತೆಯನ್ನು ಮಾತ್ರ ಮಹಿಳೆ ನೆರವೇರಿಸುತ್ತಾಳೆ ಈ ಪಾಡ್ದನಗಳಲ್ಲಿ ಮಹಿಳೆಯರು ಅನೇಕ ಪಾಡ್ದನಗಳನ್ನು ಹೇಳುತ್ತಾರೆ. ಅವೆಲ್ಲ ಅವರ ಪ್ರತೀಕಾರದ, ಪ್ರತಿರೋಧದ, ಪ್ರತಿಭಟನಾತ್ಮಕ ನೆಲೆಯಲ್ಲಿ ಇರುತ್ತವೆ. ಈ ಅಂಶವನ್ನು ಅವರ ಭೈರರ ಜನಪದ ಸಾಹಿತ್ಯದಲ್ಲಿ ನೋಡಬಹುದಾಗಿದೆ.

ಭೈರರ ಜನಪದ ಗೀತೆಗಳಲ್ಲಿ ಸ್ತ್ರೀ:

ಭೈರರಲ್ಲಿ ಸಮೃದ್ಧವಾದ ಜನಪದ ಭಂಡಾರವಿದೆ. ಆದರೆ ಜೀವನದ ದುರ್ದಮ್ಯತೆಯಿಂದಾಗಿ ತಮ್ಮ ಪಾರಂಪರಿಕ ಪ್ರತಿಭೆ ಅವರಲ್ಲಿ ಈಗ ಇಲ್ಲವಾಗುತ್ತಿದೆ. ದೀಪಾವಳಿಯ ಕಾಲದಲ್ಲಿ ಭೈರರ ಹಾಡು ಹೇಳಿಕೊಂಡು ಹಳ್ಳಿ-ಹಳ್ಳಿಗಳಲ್ಲಿ ಅಲೆದು ದವಸ-ಧಾನ್ಯಗಳನ್ನು ಸಂಗ್ರಹಿಸುತ್ತಿದ್ದ ಕಾಲ ಈಗ ದೂರವಾಗುತ್ತಿದೆ. ಅದಲ್ಲದೆ ಸಾಂಪ್ರದಾಯಿಕ ಹಾಡುಗಳನ್ನು ಹೇಳುವವರೂ ಈಗ ಸಿಗುವುದು ವಿರಳ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಹೆಚ್ಚಾಗಿ ಸಾಂಪ್ರದಾಯಿಕ ಹಾಗೂ ಇತರ ಹಾಡುಗಳನ್ನು ಹಾಡಿದವರು ಒಳಕುಂಜದ ಪುಟ್ಟು (ಈಗ ಬದುಕಿಲ್ಲ), ಗಂಗೆ ಪೆಗಳೇರಿಯ ಕೊರಪಳು, ಚೋಮು, ಲಕ್ಷ್ಮಿ (ಕರಿಂಗಾಣ ಮೂಡಿಗೆಯಲ್ಲಿ ಕೆಲಸ), ಪುತ್ತೂರಿನ ಕರ್ಮಲಾ ಮನೆಯ ಸುಬ್ಬಮ್ಮ ಹಾಗೂ ಅಮ್ಮಕ್ಕೆ ಭೈರಿ ಎಂಬುವವರು ಮಾತ್ರ. ಉಳಿದ ಕೆಲವು ಗಂಡಸರಿಂದ ಸಂಗ್ರಹಿಸಿರುವಂಥವು (ಕೃಷ್ಣಾ, ಚೆನಿಯ, ಕುಂಟಾರು). ಇವರು ಹಾಡುವುದರಲ್ಲಿ ಆಸಕ್ತರು. ಭೈರರಲ್ಲಿ ದೊರೆತಿರುವ ಹಾಡುಗಳು ಹೆಚ್ಚಾಗಿ ಅವರವೇ ಶುಭ ಕಾರ್ಯಗಳಲ್ಲಿ ಹಾಡುವಂತವು. ಹೆಚ್ಚು ಹಾಡುಗಳು ಮದುವೆ, ಗರ್ಭಿಣಿ ಶಾಸ್ತ್ರ, ತೊಟ್ಟಲು ಶಾಸ್ತ್ರ ಮುಂತಾದ ಆಚರಣೆಗಳಿಗೆ ಸಂಬಂಧಿಸಿದವು. ನಾಟಿ ನೆಡುವಾಗ ಎಲ್ಲರ ಜೊತೆ ತುಳು ಹಾಡುಗಳನ್ನೇ ಹಾಡುತ್ತಾರೆ. ಬೇಸರವಾದಾಗ ಕಥೆ ಮತ್ತು ಲಾವಣಿ ಹಾಡುಗಳನ್ನು ಹಾಡುತ್ತಾರೆ. ಇದರಿಂದಾಗಿ ಭೈರರಲ್ಲಿ ಸಿಗುವ ಜನಪದ ಗೀತೆಗಳನ್ನು ಈ ಕೆಳಗಿನಂತೆ ವಿಭಾಗ ಮಾಡಿ ನೋಡಬಹುದಾಗಿದೆ:

೧. ಸಾಂಪ್ರದಾಯಿಕ ಹಾಡುಗಳು:

ಅ) ಮದುವೆ ಸೋಬಾನೆ
ಆ) ಗರ್ಭಿಣಿ ಸೋಬಾನೆ
ಇ) ತೊಟ್ಟಿಲು ಪದ

೨. ಲಾವಣಿಗಳು:

ಅ) ಹೊನ್ನಮ್ಮನ ಕಥೆ
ಆ) ಅತ್ತೆ ಸೊಸೆ ಜಗಳ
ಇ) ಗೊಲ್ಲರ ಹಾಡು

೩) ಕೋಲಾಟದ ಪದಗಳು

೪) ಇತರೆ

ಮದುವೆಯ ಹಾಡುಗಳು ಹೆಚ್ಚಿನ ಸ್ಥಾನ ಪಡೆದರೆ, ಇತರೆ ಹಾಡುಗಳು ಬೇಸರ ನೀಗಿಸಲು ಹಾಡುವಂಥವುಗಳಾಗಿವೆ. ಆದರೂ ಈಗ ಹಾಡುವವರು ಕಡಿಮೆಯಾಗಿ ಸಮೃದ್ಧವಾದ ಸಾಹಿತ್ಯ ಇಲ್ಲವಾಗುತ್ತಿದೆ.

೧. ಮದುವೆ ಸೋಬಾನೆ ಹಾಡುಗಳು:

ಭೈರರಲ್ಲಿ ಮದುವೆ ಅತ್ಯಂತ ಸಡಗರ, ಸಂತೋಷದ ಸಂಗತಿ. ಬಂಧು-ಬಾಂಧವರೆಲ್ಲ ಸೇರುವುದರಿಂದ ಅಂಥ ಸಂದರ್ಭದಲ್ಲಿ೯ ಸಾಂಪ್ರದಾಯಿಕದ ದೃಷ್ಟಿ ಪ್ರಧಾನವೆನಿಸುತ್ತದೆ. ಬೇರೆ ಕಡೆಯವರಿಗಿಂತಲೂ ಹೆಚ್ಚು ಸೋಬಾನ ಪದಗಳನ್ನು ಹಾಡಿ ಮದುವೆಯ ಆಚರಣೆಯನ್ನು ವೈಭವಗೊಳಿಸುವ ಹುಮ್ಮಸ್ಸು ಹೆಚ್ಚಿರುತ್ತದೆ. ಹಾಗಾಗಿ ಅದರಲ್ಲಿ ಪ್ರಾವೀಣ್ಯತೆ ಇರುವವರು ಗಂಡಿನ ಕಡೆಯ ಗುಂಪಿನವರು ಮತ್ತು ಹೆಣ್ಣಿನ ಕಡೆಯವರ ಗುಂಪಿನವರು ಮದುವೆಯ ಸಕಲ ಆಚರಣೆಗಳಲ್ಲೂ ಹಾಡುತ್ತಿರುತ್ತಾರೆ. ನಿತ್ಯ ಜೀವನದಲ್ಲಿ ಕಾಣದ ಅನೇಕ ವಸ್ತುಗಳು ಇವರ ಹಾಡುಗಳಲ್ಲಿ ವೈಭವೀಕರಣಗೊಳ್ಳುತ್ತವೆ. ಮದುವೆಯ ಸಂದರ್ಭದಲ್ಲಿ ಅನೇಕ ಆಚರಣೆಗಳಿರುವುದರಿಂದ ಎಲ್ಲಕ್ಕೂ ಸಂಭಾವನೆಗಳು ಶಾಸ್ತ್ರೀಯವಾಗಿ ಹಾಡಲೇಬೇಕಾಗುತ್ತದೆ. ಶುಭಕಾರ್ಯದಲ್ಲಿ ಹಾಡುವ ಸಾಂಪ್ರದಾಯಿಕ ಹಾಡುಗಳೆಲ್ಲವೂ ಸೋಬಾನೆಗಳಾಗುತ್ತವೆ. ಕೆಲವು ಸಾರಿ ಪ್ರಸ್ತುತ ಆಚರಣೆಗೆ ಸಂಬಂಧಿಸಿದ ಹಾಡುಗಳೂ ಸ್ಥಾನ ಪಡೆಯುತ್ತವೆ. ಇವುಗಳನ್ನು ಹೀಗೆ ಪಟ್ಟಿ ಮಾಡಬಹುದು.

ಸಂಪ್ರದಾಯದ ಹಾಡುಗಳು:

೧) ಹಂಪೆಯ ಹಾಡು ೨) ಗಂಗೆ ತರುವ ಹಾಡು ೩) ಆರತಿಪದ ೪) ಮೀಯಿಸೋ ಹಾಡು – ಎಣ್ಣೆಶಾಸ್ತ್ರ ೫) ಕಳಸ ಇಡುವ ಹಾಡು ೬) ಮದರಂಗಿ ಹಾಡು ೭) ಸಾಲೆಕುಕ್ಕೆ ಪದ ೮) ಧಾರೆಗೆ ಕರೆಯುವ ಹಾಡು ೯) ಸೊಸೆ ತೊಳೆಯುವುದು ೧೦) ಹೆಣ್ಣಿಳಿಸಿ ಕೊಡೋದು – ಒಪ್ಪಿಸುವುದು

ಧಾರೆ ಹಾಡು:

ಧಾರೆ ಎರೆಯುವ ಸಮಯದಲ್ಲಿ ಗರತಿಯರು ಗುಂಪಾಗಿ ಸೋಬಾನೆಯ ಪದಗಳನ್ನು ಹಾಡುತ್ತಾರೆ. ಅವು ಧಾರೆಗೆ ಸಂಬಂಧಿಸಿದ್ದೇ ಆಗಬೇಕೆಂದೇನೂ ಇಲ್ಲ. ಭೈರರಲ್ಲಿ ಕೆಲವರು ಹಾಡಿರುವುದು ಸೊಸೆಯ ಕೆಲಸ, ನಡವಳಿಕೆ, ರೀತಿ-ನೀತಿಗಳನ್ನು ಕುರಿತು ವಿಸ್ತಾರವಾಗಿ ತಿಳಿಸುತ್ತವೆ. ಸೊಸೆಯಾದವಳ ಕರ್ತವ್ಯವೇನೆಂಬುದನ್ನು ಇಂಥ ಸೊಬಾನೆಗಳು ಹೇಳುತ್ತವೆ. ಸುಮಾರು ಒಂದು ಗಂಟೆಗಳ ಕಾಲ ಬೇರೆ ಬೇರೆ ಸೊಲ್ಲುಗಳ ಮೂಲಕ ಸೋಬಾನೆ ಹಾಡಿ ತೃಪ್ತಿ ಪಡೆಯುತ್ತಾರೆ. ಅವುಗಳಲ್ಲಿ ವೈವಿಧ್ಯತೆಗಳಿರುತ್ತವೆ. ಮದುವೆಯ ಹಾಡೆಂದು ತಿಳಿಸುವ ಈ ಹಾಡಿನಲ್ಲಿ ಹುಡುಗಿಗೆ ಬೇಕಾಗುವ ವಸ್ತ್ರ, ಒಡವೆಗಳ ಬಗ್ಗೆ ತಿಳಿಸಿ, ಹೆಣ್ಣಿಗೆ ಅವು ಅಗತ್ಯವಾದ್ದರಿಂದ ಅವುಗಳನ್ನು ಗಂಡು ತಂದು ಕೊಡಬೇಕೆಂದು ಸೂಚಿಸುತ್ತವೆ. ಕೆಲವು ಹಾಡುಗಳು ಅರ್ಥದ ದೃಷ್ಟಿಯಿಂದ ಅಸ್ಪಷ್ಟವಾಗುತ್ತವೆ.

ಭೈರರ ಜನಪದ ಸಾಹಿತ್ಯದ ಬಹು ಮುಖ್ಯ ಹಾಗೂ ಜನಪ್ರಿಯ ಪ್ರಕಾರ ಜನಪದಗೀತೆ. ಜನಪದಗೀತೆಯನ್ನು ಸ್ತ್ರೀ-ಪುರುಷರ ಪ್ರಕಾರ ಎಂದು ನಿಖರವಾಗಿ ಹೇಳುವುದು ಅಸಾಧ್ಯವಾದರೂ ಅದು ಬಹುತೇಕ ಮಹಿಳಾ ಅಭಿವ್ಯಕ್ತಿಯೇ ಆಗಿದೆ. ಜನಪದಗೀತೆ ಹಾಡದ ಜನಪದ ಹೆಣ್ಣುಗಳಿಲ್ಲ. ಅವರೆಲ್ಲ ಹಾಡಿನ ಗೂಡುಗಳು. ಹೀಗೆ ಒಂದು ಪ್ರಕಾರದ ಪ್ರಸರಣ ಹಾಗೂ ಪ್ರದರ್ಶನವನ್ನು ನೀಡುವ ವ್ಯಕ್ತಿಗಳು ಹೆಣ್ಣಾಗಿರುವುದು ಕರ್ತೃವಿನ ಪ್ರಶ್ನೆಯಲ್ಲಿ ಮುಖ್ಯವಾಗುತ್ತದೆ. ಹೀಗಾಗಿ ಜನಪದ ಪ್ರಕಾರವೊಂದರ ಸೃಷ್ಟಿಕರ್ತರು ಅಥವಾ ಕರ್ತೃ ಯಾರೆಂಬ ಪ್ರಶ್ನೆಗಿಂತ ಆ ಪ್ರಕಾರದ ಪ್ರದರ್ಶನಕಾರರು ಯಾರು ಎನ್ನುವುದು ಸಂವೇದನೆಯನ್ನು ತಿಳಿಯುವಲ್ಲಿ ಮಹತ್ವದ್ದಾಗುತ್ತದೆ. ಜನಪದ ಪಠ್ಯ ಅಥವಾ ಸಂಗತಿಯೊಂದು ಚಲನ ಪ್ರಕ್ರಿಯೆಯಾಗುವಲ್ಲಿ ಹಾಡುಗಾರ ಅಥವಾ ಪ್ರದರ್ಶನಕಾರರಿಗೆ ಅದರ ಮರುಸೃಷ್ಟಿಗೆ ಬಹಳಷ್ಟು ಅವಕಾಶವಿದೆ. ಇಲ್ಲಿ ಪ್ರದರ್ಶನಕಾರರೇ ಕರ್ತೃವಾಗಿರುತ್ತಾರೆ ಎನ್ನುವುದು ನಮಗೆ ತಿಳಿದಿರಬೇಕು. ಈ ಹಿನ್ನೆಲೆಯಲ್ಲಿ ಜನಪದಗೀತೆ೪ಗಳ ಪ್ರದರ್ಶನಕಾರರು ಮಹಿಳೆಯಾಗಿರುವುದರಿಂದ ಗೀತೆಗಳನ್ನು ಮಹಿಳಾ ಪ್ರಕಾರವೆಂದು ನಿರ್ವಚಿಸಬೇಕಾಗಿದ್ದು, ಅದನ್ನು ಮಹಿಳಾ ಸಂವೇದನೆಯ ಅಭಿವ್ಯಕ್ತಿ ಮಾಧ್ಯಮವಾಗಿ ಕಂಡುಕೊಳ್ಳಬೇಕಾಗಿದೆ.

ಭೈರರ ಜನಪದ ಗೀತೆಗಳು ಬಹುತೇಕ ತ್ರಿಪದಿಗಳು. ಹೆಣ್ಣಿನ ನೂರಾರು ಅನುಭವಗಳ ಅಭಿವ್ಯಕ್ತಿಯಾದ ಗೀತೆ ಮಹಿಳಾ ಜನಪದ ಪ್ರಕಾರವಾಗಿದೆ. ಆಕೆಯ ದೈನಂದಿನ ಬದುಕಿನೊಂದಿಗೆ ಬೆಸೆದುಕೊಂಡ ಗೀತೆಗಳು ದಿನ ಬದುಕಿನಲ್ಲಿ ಆಕೆಗೆ ಎದುರಾದ ಇಕ್ಕಟ್ಟು , ಸಂಕಟ, ಸಂಘರ್ಷಕ್ಕೆ ನೀಡಿದ ಪ್ರತಿಕ್ರಿಯೆಯಾಗಿದೆ. ಕುಟ್ಟುವಾಗ, ಬೀಸುವಾಗ,ಮೊಸರು ಕಡೆಯುವಾಗ, ತೊಟ್ಟಿಲು ತೂಗುವಾಗ, ನಾಟಿ ಮಾಡುವಾಗ, ಕಳೆ ಕೀಳುವಾಗ, ಕಾಳು ಆಯುವಾಗ – ಹೀಗೆ ಕೈಗಳು ಕೆಲಸದಲ್ಲಿ ತೊಡಗಿರುವಾಗಲೇ ಮನಸ್ಸು ಪಟ್ಟ ಹಾಡನ್ನು ಅಲ್ಲಲ್ಲೇ ಕಟ್ಟಿ ಹಾಡುತ್ತಾರೆ.

ಭೈರರ ಜನಪದ ಕಥೆಗಿಂತ ಭಿನ್ನವಾದ ಆವರಣದಲ್ಲಿ ಜನಪದಗೀತೆಯು ಸೃಷ್ಟಿಯಾಗುತ್ತದೆ. ಕಥೆಯೊಂದು ಪ್ರೇಕ್ಷಕಸಮೂಹದ ಮಲುಂದೆ ಪ್ರದರ್ಶನಗೊಂಡರೆ ಗೀತೆಯಲ್ಲಿ ಕರ್ತೃ, ಪ್ರದರ್ಶಕ ಹಾಗೂ ಪ್ರೇಕ್ಷಕ ಪುರುಷ ಜಗತ್ತಿಗಿಂತ ‘ದೂರ’ವಾದ ತನ್ನ ಸಂದರ್ಭದಿಂದಾಗಿ ಅವು ಹೆಣ್ಣಿನ ಮುಕ್ತ ಅಭಿವ್ಯಕ್ತಿಯಾಗಿದೆ. ಕಥೆಯಲ್ಲಿ ವಾಸ್ತವಿಕ ಬದುಕಿನ ಸತ್ಯಗಳಿಗೆ ಭಿನ್ನವಾಗಿ ಕಾಲ್ಪನಿಕ ಜಗತ್ತನ್ನು ಸೃಷ್ಟಿಸಿಕೊಂಡರೆ, ಗೀತೆಗಳು ಒಡಲ ಅನುಭವಕ್ಕೆ ಜೀವ ಕೊಡುವ ನೇರ ಉತ್ಪನ್ನವಾಗಿವೆ.

ಕರಾವಳಿಯ ಮುಖ್ಯ ಆಹಾರ ಬೆಳೆ ಭತ್ತ. ಬದುಕಿನ ಎಲ್ಲ ಸಂದರ್ಭಗಳಲ್ಲಿ ಭತ್ತಕ್ಕೆ ವಿಶೇಷವಾದ ಪ್ರಾಧಾನ್ಯ, ಪಾವಿತ್ಯ್ರ, ಬೀಜ ಬಿತ್ತುವ ಪ್ರಕ್ರಿಯೆಯಿಂದ ಅಕ್ಕಿಯಾಗುವ ಎಲ್ಲಿ ಹಂತದಲ್ಲೂ ಭತ್ತದೊಂದಿಗಿನ ಹೆಣ್ಣಿನ ಸಂಬಂಧ ತೀರಾ ಆಪ್ತವಾದುದು. ಅದರಲ್ಲಿ ಮುಖ್ಯವಾಗಿ ಹೆಚ್ಚು ಶ್ರಮಪೂರ್ಣವಾದ ಭತ್ತ ಕುಟ್ಟಿ ಅಕ್ಕಿಯಾಗಿಸುವ ಹಂತ ಪೂರ್ಣವಾಗಿ ಹೆಣ್ಣಿನದು. ಭತ್ತ ಕುಟ್ಟುವ, ಭತ್ತ ತೊಳುವ ಹಾಡುಗಳೆಂದು ಪ್ರಖ್ಯಾತವಾದ ಜನಪದ ತ್ರಿಪದಿಗಳು ಭತ್ತ ಕುಟ್ಟುವ ಹೆಣ್ಣುಗಳ ಜೀವಂತ ಅಭಿವ್ಯಕ್ತಿ, ಬದುಕಿನ ತೆರೆದಿಟ್ಟ ಹಾಳೆ. ಹೀಗಾಗಿ ಜನಪದ ಗೀತೆಗಳನ್ನು ಹೆಣ್ಣಿನ ದೈಹಿಕ ಶ್ರಮ ಪರಿಹಾರದ ಸಾಧನವೆಂದಷ್ಟೇ ಕಾಣದೆ, ಅವಳ ಅನುಭವದ ಅಭಿವ್ಯಕ್ತಿಯ ಸಾಧ್ಯತೆಯಾಗಿ ಗಮನಿಸಬೇಕಾಗಿದೆ.

ಕರಾವಳಿ ಸಂಸ್ಕೃತಿ ಮಾತೃರೂಪಿಯಾದುದು. ಸಾಮಾಜಿಕ, ಸಾಂಸ್ಕೃತಿಕ ಸ್ತರದಲ್ಲಿ ಅದು ಇಂದೂ ಜೀವಂತವಾಗಿದೆ. ಕರಾವಳಿ ಜಾನಪದದಲ್ಲಿ ಅದರ ಗಾಢವಾದ ಚಹರೆಯನ್ನು ಗುರುತಿಸಬಹುದು. ಸ್ತ್ರೀ ಕೇಂದ್ರಿತವಾದ ಮಾತೃಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಪುರುಷಕೇಂದ್ರಿತ ಸಮಾಜಕ್ಕಿಂತ ತೀರಾ ಭಿನ್ನವಾಗಿದೆ. ಇಲ್ಲಿ ಹೆಣ್ಣಿನ ಹುಟ್ಟು ಮತ್ತು ಬದುಕು. ಅತ್ಯಂತ ಅಗತ್ಯದ ಹಾಗೂ ಗೌರವದ ಸಂದರ್ಭವಾಗಿದ್ದು, ನಿರ್ಬಂಧವಿಲ್ಲದ ಸಹಜ ಮುಕ್ತ ಸ್ಥಿತಿಯದಾಗಿರುತ್ತದೆ. ಹೆಣ್ಣಿಗೆ ಒದಗಿರುವ ಆಸ್ತಿ, ವಂಶ, ಪರಂಪರೆ ಹಾಗೂ ಕುಟುಂಬದ ಉತ್ತರಾಧಿಕಾರತ್ವದ ಜೊತೆಗೆ ಬಂಧುಸಮಾಜದಲ್ಲಿ ಲಭ್ಯವಾಗುವ ಸಮಷ್ಟಿ ಪ್ರಜ್ಞೆ ಹಾಗೂ ಸಾಮಾಜೀಕರಣಗಳು ಹೆಣ್ಣಿನ ಶಕ್ತಿಯ ಮೂಲ ದ್ರವ್ಯವಾಗಿವೆ. ಶೀಲದ ಪಾವಿತ್ಯ್ರವನ್ನು ಗಂಡಿಗೂ ಅನ್ವಯಿಸಿದುದು ಹಾಗೂ ಅದನ್ನು ಮೀರಿದ ಗಂಡನಿಗೆ ಪ್ರಾಯಶ್ಚಿತ್ತದ ಶಿಕ್ಷೆಗಳನ್ನು ವಿಧಿಸಿದುದು ಏಕಪತಿತ್ವ ಹಾಗೂ ಬಹು ಪತ್ನಿತ್ವದ ಸಾಂಸ್ಕೃತಿಕ ಮೌಲ್ಯ ವ್ಯವಸ್ಥೆಯಲ್ಲಿ ಬಹಳ ಅಪರೂಪದ ಪ್ರಕರಣ. ಲಿಂಗಪ್ರಭೇದವನ್ನು ಮುರಿದು ಸಮಸಂಸ್ಕೃತಿಯತ್ತ ತುಡಿಯುವ ಇಲ್ಲಿನ ಮುಂಚಲನೆಯ ಗತಿಯನ್ನು ಕಾಣಬೇಕು. ಮಾತೃರೂಪಿ ಸಾಂಸ್ಕೃತಿಕ ಪರಿವಲಯದ ಮನಸ್ಸೊಂದು ಮಾತ್ರ ಇಂತಹ ನೆಯ್ಗೆಯನ್ನು ನೇಯಬಲ್ಲದು. ಹಾದರದ ಪರಿಕಲ್ಪನೆಯನ್ನು ಹೆಣ್ಣಿನ ನೆಲೆಯಲ್ಲಿ ಮರು ರಚಿಸುವ ಈ ಒತ್ತಾಯ ಆಧುನಿಕ ಚಿಂತನೆಯ ಹಕ್ಕೊತ್ತಾಯವಾಗಬೇಕಾಗಿದೆ. ಭೈರರ ಮತ್ತು ಹೆಣ್ಣಿನ ಒಂದು ಕಥನ ಈ ಕೆಳಗಿನಂತಿದೆ:

ಭೈರರಲ್ಲಿ ಅನೇಕ ಜನಪದ ಕಥನ ಕವನಗಳಿವೆ. ಅದರ ಒಂದು ಭಾಗವಾಗಿ ಹೊನ್ನಮ್ಮನ ಕಥೆಯನ್ನು ಗುರುತಿಸಿಕೊಂಡು ಬರಲಾಗಿದೆ. ಕಥನ ಕವನದ ಆಶಯ, ಆವರಣ, ವಿನ್ಯಾಸ, ಬಂಧಗಳಲ್ಲಿ ತೀರಾ ಭಿನ್ನವಾದ ಸಾಮಾಜಿಕ ವಸ್ತು ರೂಪದ ಜನಪದ ಕಥನ ಕವನಗಳನ್ನು ಹೋಲುತ್ತದಾದರೂ ಇದನ್ನು ಅನೇಕ ವಿದ್ವಾಂಸರು ‘ಕೆರೆಗೆ ಹಾರ’ ಕಥನದ ವಿಭಾಗೀಕರಣದಲ್ಲಿ ಗುರುತಿಸಿದ್ದಾರೆ.

‘ಕೆರೆಗೆ ಹಾರ’ ಕಥನ ಗೀತೆಯಲ್ಲಿ ಕಿರಿಯ ಸೊಸೆ ಭಾಗೀರಥಿಯನ್ನು ಕೆರೆಯಲ್ಲಿ ನೀರು ಬಾರದ ಕಾರಣ ‘ಬಲಿ’ಯಾಗಿ ಅರ್ಪಿಸುವಂತೆಯೇ ಇಲ್ಲಿಯೂ ಸೊಸೆ ಹೊನ್ನಮ್ಮನನ್ನು ಒತ್ತಾಯದಿಂದ ಕೆರೆಗೆ ಹಾರವಾಗಿ ಅರ್ಪಿಸಿ ತಾವು ಸುಖವಾಗಿರುವ ಮಾವನ ಮನೆಯವರ ನಡಾವಳಿಯನ್ನೇ ಕುರಿತು ಹೇಳುವ ಹಾಡಾಗಿದೆ. ಪ್ರತಿಭಟಿಸಲಾರದ ಸೊಸೆ ಅನಿವಾರ್ಯವಾಗಿ ಮತ್ತು ಅಸಹಾಯಕಳಾಗಿ ಬಲಿಯಾಗುವ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ರಕ್ಷಿಸುವ ಗಂಡ ದಂಡಿಗೆ ಹೋದಾಗ ಮನೆಯವರಾರೂ ಬಲಿಯಾಗಲು ಇಷ್ಟವಿಲ್ಲದಿದ್ದಾಗ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ‘ಅಳು ನೋಡುವ’ ಗುಣ ಸಮಾಜದಲ್ಲಿನ ಕೆಲವು ಕುಟುಂಬದಲ್ಲಿ ರೂಢಿಯಲ್ಲಿದ್ದುದನ್ನು ತಿಳಿಸಲಾಗುತ್ತದೆ. ಭೈರರು ಹಾಡುವ ಈ ಲಾವಣಿ ಗ್ರಾಮ್ಯ ಪದಗಳಿಂದ ಕೂಡಿದ್ದು ‘ಕೆರೆಗೆ ಹಾರ’ ದಷ್ಟು ಸಾಹಿತ್ಯಕ ಗುಣಗಳಿಂದ ಕೂಡಿಲ್ಲ. ಆದರೆ ಈ ಕಥೆಯ ಬೆಳವಣಿಗೆ ಮತ್ತು ಬಲಿಕೊಡುವ ಕಾರಣಗಳು ವಿಶಿಷ್ಟವೆನ್ನಿಸುತ್ತವೆ. ಬಲಿಯಾಗಲು ಸಿದ್ಧಳಾದ ಹೊನ್ನಮ್ಮನ ಮಾನಸಿಕ ತುಮುಲ ಅವಳು ತೌರು ಮನೆಯಲ್ಲಿನ ತನ್ನವರ ಮನೆಗೆಲ್ಲಾ ಹೋಗಿ ಗಂಡನ ಮನೆಯವರಿಗೆ ತಾನು ಬೇಡವಾದ ವಿಷಯವನ್ನು ತಿಳಿಸದೆ ಮುಗ್ಧಳಂತೆ ವರ್ತಿಸಿ ಆತ್ಮಾರ್ಪಣೆ ಮಾಡಿಕೊಳ್ಳುವ ಕಥೆ ಎಲ್ಲರ ಹೃದಯವನ್ನು ಮಿಡಿಯುವಂತಹದ್ದು. ಹಾಗಾಗಿ ಭೈರರಿಗೆ ಇಂಥ ಕಥೆ ಅನುಕಂಪದ ಕಾರಣದಿಂದ ರೂಢಿಯಲ್ಲಿ ಬಂದಿರಬೇಕು.