ವಿಧವೆಯಾಗಿ ಮಹಿಳೆ:

ಭೈರರಲ್ಲೂ ಪತಿಯ ಮರಣದೊಂದಿಗೆ ವಿಧವೆಯೊಬ್ಬಳು ತನಗಿದ್ದ ಕೆಲವು ಸ್ಥಾನಮಾನಗಳನ್ನು ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಕಳೆದುಕೊಳ್ಳುತ್ತಾಳೆ. ಅವಳು ಅಮಂಗಳೆಯಾಗಿ ಕಾಣುತ್ತಾಳೆ. ಕೌಟುಂಬಿಕ ಶುಭಕಾರ್ಯಗಳಿಂದ, ಸಮೂಹದಿಂದ ಪ್ರತ್ಯೇಕಿಸಲ್ಪಡುತ್ತಾಳೆ. ಸಾಂಪ್ರದಾಯಿಕ ಮೇಲ್ಜಾತಿಯ ಕುಟುಂಬಗಳಲ್ಲಿ ಅವಳು ಮತ್ತಷ್ಟು ಕಟ್ಟುಪಾಡುಗಳಿಗೊಳಗಾಗುತ್ತಾಳೆ. ಅವಳ ಆಹಾರ, ಉಡುಪು, ದಿನಚರಿ, ಚಲನವಲನಗಳ ಮೇಲೆ ಹಲವು ಬಗೆಯ ನಿಯಂತ್ರಣಗಳನ್ನು ಹೇರಲಾಗುತ್ತದೆ. ಇಂದಿಗೂ ಕೆಲವು ಕುಟುಂಬಗಳಲ್ಲಿ ವಿಧವೆಯರನ್ನು ವಿರೂಪಗೊಳಿಸುವುದಕ್ಕೆ ಪಾತಿವ್ರತ್ಯದ ಕಲ್ಪನೆಯೂ ಕಾರಣವಾಗಿದೆ. ಇದರ ಆಧಾರದ ಮೇಲೆ ಅವಳಿಗೆ ಪತಿಯ ಮನೆಯಲ್ಲಿ ಪತಿಯ ಮರಣಾನಂತರವೂ ಆಶ್ರಯ ಮುಂದುವರೆಯುತ್ತದೆ. ವೃದ್ಧಾಪ್ಯದಲ್ಲೂ ಇದೇ ಆಧಾರವಾಗಿರುತ್ತದೆ. ಭೈರರ ಅವಿಭಕ್ತ ಮತ್ತು ವಿಭಕ್ತ ಕುಟುಂಬಗಳಲ್ಲಿ ಮಹಿಳೆಯರ ಪರಿಸ್ಥಿತಿ ಸ್ವಲ್ಪಮಟ್ಟಿನ ಬದಲಾವಣೆಯ ಅಲೆಗಳಿಗೆ ಸಿಲುಕಿದೆ-ಎಂದೆನಿಸಿದರೂ ಕೆಲವೊಮ್ಮೆ ವಿರುದ್ಧ ಶಕ್ತಿಗಳ ಒತ್ತಡದಿಂದಾಗಿ ಹೆಚ್ಚು ಸಂಕೀರ್ಣಗೊಳ್ಳುತ್ತಿವೆ ಎಂದು ಭಾಸವಾಗುತ್ತದೆ. ಒಂದೆಡೆ ಗಂಡು ಮತ್ತು ಹೆಣ್ಣು ಅಸಮಾನರೆಂದು ಬಗೆಯುವ ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳ ಸಾಂಪ್ರದಾಯಿಕವಾದ ಕೌಟುಂಬಿಕ ರಚನೆಗಳಿಗೆ, ಉದ್ದೇಶಗಳಿಗೆ, ನಿರೀಕ್ಷೆಗಳಿಗೆ ಕೊಡಲಿಪೆಟ್ಟು ಹಾಕುತ್ತಿರುವಂತಿವೆ. ಆದರೂ ಅಂಥ ಮಹತ್ತರವಾದ ಬದಲಾವಣೆಗಳು ಕುಟುಂಬ ವ್ಯವಸ್ಥೆಯಲ್ಲಿ ಕಂಡುಬರುತ್ತಿಲ್ಲ. ಇಂದಿಗೂ ಅದೊಂದು ಶೋಷಕ ಸಂಸ್ಥೆಯಾಗಿ, ಪಿತೃಪ್ರಧಾನ ಮೌಲ್ಯಗಳ ಭದ್ರಕೋಟೆಯಾಗಿಯೇ ಭೈರರಲ್ಲಿ ಉಳಿದಿದೆ ಎನ್ನುವುದು ಮಹಿಳೆ ಇಂದು ಎದುರಿಸುತ್ತಿರುವ ಸಮಸ್ಯೆಗಳ ಮೂಲ ಸ್ವರೂಪಗಳನ್ನು ಗಮನಿಸಿದಾಗ ವೇದ್ಯವಾಗುತ್ತದೆ. ಇಂದಿಗೂ ಹೆಣ್ಣು ಕುಟುಂಬದಲ್ಲಿ ಬೇಡವಾದ ಮಗುವೇ ಆಗಿದೆ, ಅವಳನ್ನು ಕುಟುಂಬಕ್ಕೆ ಒಂದು ಹೊರೆ ಎಂದೇ ಭಾವಿಸಲಾಗುತ್ತದೆ.

ಭೈರರಲ್ಲೂ ಮಹಿಳೆಯ ಬಾಳಿನ ಗುರಿ ವಿವಾಹವೇ ಎನ್ನುವ ನಂಬಿಕೆ ಇಂದೂ ಮುಂದುವರೆಯುತ್ತದೆ. ಇದರ ಪರಿಣಾಮವಾಗಿ ವಿವಾಹಿತ ಮಹಿಳೆಯ ಸ್ಥಾನಮಾನಗಳು ಒಬ್ಬ ಅವಿವಾಹಿತ, ವಿಚ್ಛೇದಿತ ಅಥವಾ ವಿಧವೆಯ ಸ್ಥಾನಮಾನಗಳಿಗಿಂತ ಉತ್ತಮವಾಗಿರುತ್ತದೆ. ವಿವಾಹ ಬಾಳಿನ ಗುರಿ ಎಂಬ ನಂಬಿಕೆಯಿಂದಾಗಿ ಹೆಣ್ಣು ಮಕ್ಕಳ ಪೋಷಕರು ತಮ್ಮ ‘ಕನ್ಯಾಸೆರೆ’ಯನ್ನು ಬಿಡಿಸಿಕೊಳ್ಳಲು ಕಾತರರಾಗಿರುತ್ತಾರೆ. ಇದಕ್ಕೆ ಸುಲಭೋಪಾಯವಾಗಿ ವರದಕ್ಷಿಣೆಯ ಮೊತ್ತವನ್ನು ಹೆಚ್ಚಿಸುತ್ತಾ ಹೋಗಿ ತಮ್ಮ ಮಕ್ಕಳ ಬಲಪೀಠವನ್ನು ಸಿದ್ಧಪಡಿಸುತ್ತಾಠರೆ. ವರದಕ್ಷಿಣೆಯಿಂದ ಸಾಮಾಜಿಕ ಪಿಡುಗಿಗೆ ಕಾರಣರಾಗುತ್ತಿದ್ದಾರೆ. ಇಂದು ಪ್ರತಿ ೧ ಗಂಟೆ ೪೨ ನಿಮಿಷಗಳಿಗೊಮ್ಮೆ ಒಂದು ವರದಕ್ಷಿಣೆ ಸಾವು ದೇಶದಲ್ಲಿ ಸಂಭವಿಸುತ್ತಿರುವುದು, ವರದಕ್ಷಿಣೆಯ ಹಿಂಸೆಯ ಪ್ರಕರಣಗಳು ಹೆಚ್ಚುತ್ತಿರುವುದು ಸಮಸ್ಯೆಯ ತೀವ್ರತೆಯನ್ನು ಬಿಂಬಿಸುತ್ತದೆ. ಇದು ಭೈರರಲ್ಲೂ ಇಂದು ಹೆಚ್ಚಾಗುತ್ತಿದೆ.

ಅಂತೆಯೆ, ಕುಟುಂಬ ಮಹಿಳೆಯರ ಲೈಂಗಿಕತೆಯನ್ನು ನಿಯಂತ್ರಿಸುವ ವಿಧಾನವಾಗಿ ‘ಪಾತಿವ್ರತ್ಯ’, ‘ಕನ್ಯತ್ವ’, ‘ಏಕಪತಿತ್ವ’, ‘ಸತಿ’ ಮುಂತಾದ ಕಲ್ಪನೆಗಳನ್ನು, ಆಚರಣೆಗಳನ್ನು ಹುಟ್ಟು ಹಾಕಿದೆ. ವಿವಾಹ ಪೂರ್ವ ಹಾಗೂ ವಿವಾಹಾನಂತರದಲ್ಲಿ ಪತಿಯನ್ನಲ್ಲದೆ ಬೇರೊಬ್ಬನೊಂದಿಗಿನ ಲೈಂಗಿಕ ಸಂಬಂಧ ಮಹಿಳೆಯ ವಿಷಯದಲ್ಲಿ ಅಕ್ಷಮ್ಯ ಅಪರಾಧವಾದರೆ ಪುರುಷನ ವಿಷಯದಲ್ಲಿ ಹಾಗಾಗುವುದಿಲ್ಲ. ಅದನ್ನು ಮಾನ್ಯ ಮಾಡಲಾಗುತ್ತದೆ. ಅದು ಸಾಮಾಜಿಕ ಸ್ಥಾನಮಾನಗಳನ್ನು ಹೆಚ್ಚಿಸುವ ಸಂಕೇತವಾಗುತ್ತದೆ. ಆದರೆ ಮಹಿಳೆಯ ವಿವಾಹರಹಿತ ಅಥವಾ ವಿವಾಹ ಬಾಹಿರ ಲೈಂಗಿಕ ಸಂಬಂಧಗಳು ಅವಳಿಗೆ ‘ಕುಲಟೆ’, ‘ವೇಶ್ಯೆ’ ಮುಂತಾದ ಪಟ್ಟ ಕಟ್ಟುತ್ತವೆ. ಒಂದೆಡೆ ಮಹಿಳೆಯನ್ನು ವಿವಾಹವೇ ಜೀವನದ ಗುರಿ ಎಂದು ನಂಬಿಸಿ ಕುಟುಂಬ ವ್ಯವಸ್ಥೆಯಲ್ಲಿ ಬಂಧಿಸಿಡುವ ಪಿತೃಪ್ರಧಾನ ವ್ಯವಸ್ಥೆ, ಇನ್ನೊಂದಡೆ ವಿವಾಹವನ್ನು ನಿಷೇಧಿಸುವ ಮೂಲಕ ಕುಟುಂಬ ವ್ಯವಸ್ಥೆಯಿಂದ ದೂರವಿರಿಸಿ, ಮಹಿಳೆಯರನ್ನು ಲೈಂಗಿಕ ವ್ಯಾಪಾರಕ್ಕಿಳಿಯುವಂತೆ ಪ್ರೇರೇಪಿಸುವ ದೇವದಾಸಿ ಪದ್ಧತಿಯನ್ನು ಹುಟ್ಟು ಹಾಕಿದೆ. ಲೈಂಗಿಕ ನಿಯಂತ್ರಣದ ಪರಾಕಾಷ್ಟೆಯೆಂಬಂತೆ ವಿಧವೆಯ ಕೇಶಮುಂಡನ, ‘ಸತಿ’ಯಂಥ ಕ್ರೂರಪದ್ಧತಿಗಳು ಪಿತೃಪ್ರಧಾನ ಕುಟುಂಬ ವ್ಯವಸ್ಥೆಯ ಫಲವಾಗಿವೆ.

ಹೆಣ್ಣನ್ನು ಕೇವಲ ಲೈಂಗಿಕ ವಸ್ತುವಾಗಿ ಬಳಸಿಕೊಳ್ಳುವ ಕುಟುಂಬ ವ್ಯಕ್ತಿ-ವ್ಯಕ್ತಿಗಳ, ಜಾತಿ-ಜಾತಿಗಳ, ಧರ್ಮ-ಧರ್ಮಗಳ, ದೇಶ-ದೇಶಗಳ ನಡುವಿನ ವೈಷಮ್ಯಕ್ಕೆ ಮಹಿಳೆಯರನ್ನು ಅತ್ಯಾಚಾರದಂತಹ ಬರ್ಬರ ಕೃತ್ಯಗಳಿಗೆ ಈಡಾಗಿಸುವ ಪರಿಸ್ಥಿತಿಯ ನಿರ್ಮಾಣಕ್ಕೆ ಕಾರಣವಾಗಿದೆ. ಇಲ್ಲಿ ಮಹಿಳೆ ಕೇವಲ ಯಾರದೋ ಸೊತ್ತಾಗಿ ಸೇಡು ತೀರಿಸಿಕೊಳ್ಳುವ ಸಾಧನವಾಗುತ್ತಾಳೆ, ಪುರುಷರ ಮಾನಾಪಮಾನಗಳ ಸಂಕೇತವಾಗುತ್ತಾಳೆ. ಮಹಿಳೆಯರ ಮೇಲಿನ ಹಿಂಸೆಯ ಪ್ರಕರಣಗಳು ಶತ-ಶತಮಾನಗಳಿಂದ ಅನೂಚಾನವಾಗಿ ನಡೆದುಬಂದಿದ್ದು ಪಿತೃಪ್ರಧಾನವಾದ ಕುಟುಂಬಗಳು ಅದಕ್ಕೆ ಅನುಕೂಲವಾದ ಪರಿಸ್ಥಿತಿಯನ್ನು ನಿರ್ಮಿಸಿದೆ. ಹಿಂಸೆಯು ಬಲವಂತರ ಮತ್ತು ಬಲಹೀನರ ನಡುವೆ ಉಂಟಾಗುತ್ತದೆ. ಕುಟುಂಬದಲ್ಲಿ ಮಹಿಳೆ ಅನಕ್ಷರತೆ, ಅಜ್ಞಾನ, ತಾರತಮ್ಯ, ಆರ್ಥಿಕ ಪರಾವಲಂಬನೆ, ಪಿತೃಪ್ರಧಾನ ಮೌಲ್ಯ, ಕೌಟುಂಬಿಕ ನಿಯಂತ್ರಣಗಳು ಮತ್ತು ನಿರ್ಬಂಧಗಳಿಂದ ದುರ್ಬಲಳಾಗುತ್ತಾಳೆ. ಎಲ್ಲಾ ಸವಲತ್ತುಗಳನ್ನು, ಅಧಿಕಾರ ಮತ್ತು ಹಕ್ಕುಗಳನ್ನು ಪಡೆಯುವ ಪುರುಷ ಕುಟುಂಬದಲ್ಲಿ ಬಲಶಾಲಿಯಾಗುತ್ತಾನೆ. ಇದು ಪುರುಷ ಮಹಿಳೆಯನ್ನು ಹಿಂಸಿಸಲು ಅನುಕೂಲ ಪರಿಸ್ಥಿತಿಯಾಗಿದೆ. ಇಲ್ಲಿ ಹಿಂಸೆ ಹಲವು ರೂಪಗಳಲ್ಲಿ, ಅಂದರೆ ಹೊಡೆತ, ಕಿರುಕುಳ, ಅತ್ಯಾಚಾರ, ಸಾವು, ಲೈಂಗಿಕ ದುರ್ಬಳಕೆ ಮುಂತಾದವುಗಳಲ್ಲಿ ವ್ಯಕ್ತವಾಗುತ್ತವೆ. (ಗಾಯತ್ರಿ ನಾವಡ ಪುಟ ೨೭, ೧೯೯೭) ಇದು ಭೈರರ ಸಮಾಜದಲ್ಲಿ ಯಥೇಚ್ಛವಾಗಿರುವುದನ್ನು ಗಮನಿಸಬಹುದು. ಹೆಣ್ಣು ಎಲ್ಲೂ ಸುರಕ್ಷಿತವಾಗಿದ್ದಾಳೆ ಎನಿಸದು.

ಅಂತೆಯೆ, ಕುಟುಂಬದಲ್ಲಿ ಪ್ರತಿಯೊಬ್ಬರೂ ಅವಳಿಂದ ಏನನ್ನಾದರೂ ನಿರೀಕ್ಷಿಸುತ್ತಿರುತ್ತಾರೆ. ಎಲ್ಲರ ನಿರೀಕ್ಷೆಗಳಿಗನುಗುಣವಾಗಿ ಅವಳು ಹಲವು ಬಗೆಯ ಪಾತ್ರಗಳನ್ನು ಏಕಕಾಲದಲ್ಲಿ ನಿರ್ವಹಿಸುತ್ತಾಳೆ. ಇದಕ್ಕೆ ನಿಗದಿತ ವೇಳೆಯಾಗಲಿ, ಬಿಡುವಿನ ವೇಳೆಯಾಗಲಿ, ಇರುವುದಿಲ್ಲ. ಇಂಥ ನಿಃಸ್ವಾರ್ಥ ದುಡಿಮೆಗೆ ಇಲ್ಲಿ ಬೆಲೆಯೇ ಸಿಗುವುದಿಲ್ಲ. ಅವಳನ್ನು ಕುಟುಂಬದಲ್ಲಿ ಮಾತ್ರ ಹೊರೆ ಎಂದೇ ಪರಿಗಣಿಸಲಾಗುತ್ತದೆ. ಆರ್ಥಿಕ ಕೆಳವರ್ಗದ ಕುಟುಂಬದಲ್ಲಿ ಮಹಿಳೆ ಮನೆಯಿಂದ ಹೊರಗೆ ದುಡಿಯುವುದು ಅನಿವಾರ್ಯವಾದರೆ, ವಿದ್ಯಾವಂತ ಮಹಿಳೆ ಉದ್ಯೋಗದ ಅವಕಾಶಗಳನ್ನು ಪಡೆಯುತ್ತಿದ್ದಾಳೆ. ಇಂಥ ಮಹಿಳೆಯರು ಮನೆಯ ಹೊರಗೆ ದುಡಿಯುವುದರೊಂದಿಗೆ ಮನೆಯಲ್ಲೂ ದುಡಿಯುವಂತಾಗಿದೆ. ಇವರು ತಮ್ಮ ಸಾಂಪ್ರದಾಯಿಕ ಪಾತ್ರಗಳಿಂದ ಬಿಡುಗಡೆಯನ್ನು ಪಡೆಯಲಾರದೆ ಎರಡೂ ಬಗೆಯ ದುಡಿಮೆಯಿಂದ ಬಳಲುತ್ತಾರೆ. ಇಂದಿಗೂ ಮಹಿಳೆ ಕುಟುಂಬದ ಆರ್ಥಿಕ ಸಂಪನ್ಮೂಲಗಳ ಮೇಲೆ ಯಾವುದೇ ಹಿಡಿತವನ್ನು ಹೊಂದಿರುವುದಿಲ್ಲ. ಆದರೆ ಇವರಲ್ಲಿ ನೌಕರಿಯಂತ ಮೇಲ್ಮಟ್ಟದ ಉದ್ಯೋಗಸ್ಥ ಮಹಿಳೆಯರು ಸಿಗುವುದು ದುರ್ಲಭ. ಅದೇನಿದ್ದರೂ ಹೊಲ ಗದ್ದೆ ತೋಟ, ಇತರ ವೃತ್ತಿ ಕಸುಬುಗಳಲ್ಲಿ ಮಾತ್ರ ದುಡಿಯುವ ಮಹಿಳೆ ಕಾಣಸಿಗುತ್ತಾಳೆ. ವಿಚಿತ್ರವೆಂದರೆ ಈ ಹೊಲ-ಗದ್ದೆ ಕೆಲಸ ಅವರಿಗೆ ಒಂದು ಉದ್ಯೋಗದಂತೆ ಕಾಣುವುದಿಲ್ಲ. ಬರೀ ಗಂಡಸರು ಮಾಡುವ ಕೆಲಸ ಅವರಿಗೆ ಉದ್ಯೋಗವಾಗಿ ಪರಿಣಮಿಸಿದೆ. ಈ ರೀತಿಯ ಭಾವನೆಯನ್ನು ಪುರುಷ ಪ್ರಧಾನವ್ಯವಸ್ಥೆ ನಿರ್ಮಾಣ ಮಾಡಿಬಿಟ್ಟಿದೆ ಎಂಬುದು ಬೇರೆ ವಿಚಾರ.

ಭೈರರ ಮಹಿಳೆ, ಅಪರಾಧ ಮತ್ತು ಶಿಕ್ಷೆ:

ಜಾತಿಯವರಲ್ಲಿ ನಡೆಯುವ ಜಗಳ, ಹಾದರ, ಕಳ್ಳತನ, ಬೇರೆ ಜಾತಿಯವರನ್ನು ವಿವಾಹವಾಗುವುದು, ಜಾತಿಕಾರ್ಯದಲ್ಲಿ ಭಾಗಿಯಾಗದೆ ಗಲಾಟೆ ಮಾಡುವುದು, ವಿವಾಹಿತಳನ್ನು ಬಿಡುವುದು ಮುಂತಾದ ಸಂಧರ್ಭದಲ್ಲಿ ಜಾತಿಮುಖಂಡರ ಪಾತ್ರ ಪ್ರಮುಖವೆನಿಸುತ್ತದೆ. ಇಂಥ ಸಂದರ್ಭದಲ್ಲಿ ಭೈರರ ಜಾತಿಯವರನ್ನು ಭೈರಸಭೆಯಲ್ಲಿ ಬಂದು ಸೇರುವಂತೆ ತಿಳಿಸುತ್ತಾನೆ. ಇಂಥ ಸಭೆಗಳು ರಾತ್ರಿಯ ಹೊತ್ತು ನಡೆಯುತ್ತವೆ. ಸಭೆ ಸೇರಿಸಲು ಜಾತಿ ‘ಕೋಲಕಾರ’ ಇರುತ್ತಾರೆ. ಭೈರನ ಮಾತನ್ನು ಮನೆಮನೆಗೂ ಹೋಗಿ ತಿಳಿಸುತ್ತಾರೆ. ಮನೆಯ ಗಂಡಸರಲ್ಲಿ ಹಿರಿಯನು ನ್ಯಾಯ  ತೀರ್ಮಾನದ ಸಭೆಗೆ ಬರುತ್ತಾನೆ. ಗುರ್ಕಾರನು ನ್ಯಾಯ ಹೇಳಲು ಮೂರು ಕಾಲಿನ ಮಣೆಯ ಮೇಲೆ ಕುಳಿತುಕೊಳ್ಳುತ್ತಾನೆ. ಪಕ್ಕದಲ್ಲಿ ಬುದ್ಯಂತ (ಬುದ್ಧಿವಂತ) ಮತ್ತು ಭೈರ ಕುಳಿತುಕೊಳ್ಳುತ್ತಾರೆ. ತಮ್ಮ ಜಾತಿಯವರನ್ನು ಉದ್ದೇಶಿಸಿ ಬುದ್ಧಿವಂತನು ಸಭೆ ಸೇರಿಸಿದ ಉದ್ದೇಶವನ್ನು ತಿಳಿಸುತ್ತಾನೆ. ಆಗ ತಂದೆ ಅಥವಾ ಗಂಡ ತನ್ನದೆ ಹೆಂಡತಿ ಅಥವಾ ಮಗಳ ಪರವಾಗಿ ತಪ್ಪು ಮಾಡಿದವರು ಸಭೆಯ ಮುಂದೆ ಕೈಕಟ್ಟಿ ನಿಂತುಕೊಳ್ಳುತ್ತಾರೆ. ಜಗಳ, ಧಾರ್ಮಿಕ ಕಾರ್ಯದಲ್ಲಿ ತಪ್ಪಿಸಿಕೊಳ್ಳುವುದು, ಕಳ್ಳತನ, ಇಂಥವಕ್ಕೆ ದಂಡ ಹಾಕುವ ಅಥವಾ ಭೈರವ ಮಾರಿಪೂಜೆ ನಡೆಸುವ ಶಿಕ್ಷೆ ವಿಧಿಸುತ್ತಾರೆ. ಒಪ್ಪಿಕೊಳ್ಳದಿದ್ದರೆ ಬಹಿಷ್ಕಾರ ಹಾಕುತ್ತಾರೆ. ಹಾದರ, ಬೇರೆ ಜಾತಿಯವರನ್ನು ಮದುವೆಯಾಗುವುದು, ಗಂಡನನ್ನು ಬಿಡುವುದು, ಜಾತಿಯವರ ಮನೆಗೆ ಅಥವಾ ಇತರರ ಮನೆಗೆ ಬೆಂಕಿ ಹಾಕುವುದು, ಇಂಥವಕ್ಕೆ ಶಿಕ್ಷೆ ಎಂದರೆ ಬಹಿಷ್ಕಾರ ಜಾತಿಯಿಂದ ಹೊರಗಿಡುವುದು, ಕೇರಿಯಿಂದ ಗುಡಿಸಲು ಕೀಳಿಸುವುದು ಮುಂತಾಗಿರುತ್ತದೆ. ಹಾದರವನ್ನು ಒಪ್ಪಿಕೊಂಡರೆ ತಪ್ಪುದಂಡ ಹಾಕಿ ಜಾತಿ ಪ್ರಾಯಶ್ಚಿತ್ತ ಮಾಡುತ್ತಾರೆ. ಬೇರೆ ಜಾತಿಯವನನ್ನು ಮದುವೆಯಾದರೆ ಆ ಜಾತಿಯವಳು ತಮ್ಮ ಜಾತಿಗಿಂತ ಕೀಳಾದರೆ ಉದಾ: ಮಾದಿಗರು (ಕ್ರಿಶ್ಚಿಯನ್ನರು, ಮುಸ್ಲೀಮರಾದರೆ) ತಮ್ಮ ಜಾತಿಗೆ ಸೇರಿಸಿಕೊಳ್ಳದೆ ಹೊರಗಿಡುತ್ತಾರೆ. ಹುಡುಗಿ ಅಥವಾ ಹುಡುಗ ಮೇಲ್ಜಾತಿಯವನಾದರೆ ಜಾತಿ ಮುಖಂಡರಿಗೆ ಮಾಡಿದ ಅವಮಾನವೆಂದು ದಂಡ ಹಾಕುತ್ತಾರೆ. ಭೈರರ ಹುಡುಗನೋರ್ವ ಬ್ರಾಹ್ಮಣ ಹುಡುಗಿಯನ್ನು ಮದುವೆಯಾದರೂ ಅದು ಜಾತಿಗೌರವದ ಮದುವೆಯಲ್ಲವೆಂದು ಹೇಳಿದರೂ ಅಂಥವರು ಭೈರ ಹುಡುಗರಲ್ಲಿ ಕೆಲವರಿದ್ದಾರೆ. ಬೇರೆ ಧರ್ಮೀಯಳು ಕೆಳಜಾತಿಯವಳಾದರೆ ದಂಡದ ಮಾತೇ ಆಡದೆ ಜಾತಿ ಬಹಿಷ್ಕಾರ ಹಾಕುತ್ತಾರೆ. ಅವರ ಮನೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ಕೂ ಜಾತಿಯವರು ಹೋಗುವುದಿಲ್ಲ ಹಾಗೂ ತಮ್ಮ ಮನೆಯಲ್ಲಿ ನಡೆಯುವ ಯಾವ ಕಾರ್ಯಕ್ಕೂ ಕರೆಯುವುದಿಲ್ಲ. ನಮ್ಮ ಸಮಾಜ ನೈತಿಕತೆಗೆ ಸಂಬಂಧಿಸಿದಂತೆ ಎರಡು ರೀತಿಯ ಮಾನದಂಡಗಳನ್ನು ಹೊಂದಿದೆ. ಮಹಿಳೆಗೆ ಸದ್ಗುಣಗಳನ್ನು ಆರೋಪಿಸುವ ಮೂಲಕ ಅವಳ ಕಾರ್ಯವ್ಯಾಪ್ತಿಯನ್ನು ಪತಿ, ಮಕ್ಕಳ ಸಂಸಾರಕ್ಕೆ ಸೀಮಿತಗೊಳಿಸಿ ಅವರ ಯೋಗಕ್ಷೇಮದ ಚಿಂತನೆಯೇ ಅವಳ ಜೀವನ ಧ್ಯೇಯವಾಗಿರಬೇಕು ಎಂದು ನಿರೀಕ್ಷಿಸುತ್ತದೆ. ಮತ್ತು ಪತಿ ಸಚ್ಚಾರಿತ್ಯ್ರವುಳ್ಳವನಾಗಿಲ್ಲದಿದ್ದರೂ ಪತ್ನಿ ಅವನಿಗೆ ವಿಧೇಯಳಾಗಿರಬೇಕು ಎಂದಿದ್ದಾನೆ ಮನು. ನೈತಿಕತೆಗೆ ಸಂಬಂಧಪಟ್ಟ ಈ ದ್ವಂದ್ವ ಮಾನದಂಡಗಳು ಶತಮಾನಗಳಿಂದಲೂ ನಮ್ಮ ಸಮಾಜದ ಚಿಂತಾನಕ್ರಮದಲ್ಲಿ ಸೇರಿ ಹೋಗಿರುವಂಥವು. ಮಹಿಳೆಯನ್ನು ಸ್ವತಂತ್ರ ವ್ಯಕ್ತಿತ್ವ ಹಾಗೂ ಆಲೋಚನಾ ಕ್ರಮವುಳ್ಳ ಮತ್ತು ಆಸೆ-ಆಕಾಂಕ್ಷೆಗಳುಳ್ಳ ವ್ಯಕ್ತಿಯನ್ನಾಗಿ ನಮ್ಮ ಸಮಾಜ ಎಂದೂ ಪರಿಗಣಿಸಿಯೇ ಇಲ್ಲ. ಅವಳನ್ನು ಗುರುತಿಸುವುದು ಸಹ ಒಬ್ಬರ ಮಗಳನ್ನಾಗಿ, ಪತ್ನಿಯನ್ನಾಗಿ ಇಲ್ಲವೆ ತಾಯಿಯರನ್ನಾಗಿ. ಸಮಾಜ ಹಾಗೂ ಕಾನೂನುಗಳು ಸಹ ಮಹಿಳೆಯ ಮೇಲೆ ಇದನ್ನೇ ಹೇರುತ್ತವೆ. ತನ್ನ ಜೀವನ ಹಾಗೂ ತನ್ನ ದೇಹದ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಅವಳೇ ಹೊಂದಿರಬೇಕು ಎಂಬುದು ಮಹಿಳಾವಾದಿಗಳ ಕೂಗು. ಆದರೆ ಅವರ ಈ ವಾದವನ್ನು ಮುಕ್ತ ಪ್ರೇಮಕ್ಕೆ ಅಥವಾ ಮುಕ್ತ ಲೈಂಗಿಕತೆಗೆ ಬಹಳಷ್ಟು ಬಾರಿ ಅಪಾರ್ಥ ಮಾಡಿಕೊಳ್ಳಲಾಗುತ್ತದೆ. ಇಂಥ ವಿಚಾರಗಳಿಂದ ಭೈರರ ಸಮಾಜ ಕೂಡ ಹೊರತಾಗಿಲ್ಲ.

ನಾರಿಯೊಳಗಿನ ನಾರಿ; ವಿಧವಾ ವಿವಾಹ:

ಭೈರರಲ್ಲೂ ವಿಧವಾ ವಿವಾಹ ಇದೆ. ಗಂಡ ಬಿಟ್ಟವಳನ್ನು ಬೇರೆಯವನು ವಿವಾಹವಾಗುವಂತಿದ್ದರೆ ಜಾತಿಯವರ ಸಭೆ ಕರೆದು ಈ ವಿಷಯವನ್ನು ತಿಳಿಸಬೇಕು. ವಿಧವಾ ವಿವಾಹವನ್ನು ಉಡಿಕೆ, ಕೂಡಿಕೆ ಎಂದು ಕರೆಯುತ್ತಾರೆ. ಸಭೆಯ ಅನುಮತಿಯಂತೆ ಗಂಡಸು ದೇವರ ಎದುರಿನಲ್ಲಿ ಅವಳಿಗೆ ಒಂದು ಸೀರೆ ಕೊಟ್ಟು ಕೈ ಹಿಡಿದು ಕರೆದುಕೊಂಡು ಹೋಗಬಹುದು. ಅವಳಿಗೆ ಮಕ್ಕಳಿದ್ದರೆ ಅವರ ರಕ್ಷಣೆ ಮಾಡಲು ಸಭೆ ಕೈಹಿಡಿದವನಿಗೇ ವಹಿಸುತ್ತದೆ. ಗಂಡ ಬಿಟ್ಟವಳನ್ನು ಮತ್ತೊಬ್ಬನು ಮದುವೆಯಾಗಬಹುದು. ಅವನು ಎಲ್ಲರೆದುರಿಗೆ ಅವಳನ್ನು ಮದುವೆಯಾಗುವುದಾಗಿ ತಿಳಿಸಬೇಕು ಮತ್ತು ಜಾತಿಯವರಿಗೆ ಊಟ ಕೊಡಬೇಕು. ಅವಳಿಗೆ ಮೋಸ ಮಾಡುವುದಿಲ್ಲವೆಂದು ದೇವರ ಸಾಕ್ಷಿ ಮಾಡಿ ಹೇಳಬೇಕು. ಅವಳಿಗೆ ಕರಿಮಣಿ ಕಟ್ಟಿ ಕರೆದುಕೊಂಡು ಹೋಗಬಹುದು. ಅವಳ ಮಕ್ಕಳ ಜವಾಬ್ದಾರಿಯನ್ನು ಕೈಹಿಡಿದವನೇ ಮಾಡಬೇಕಾಗುತ್ತದೆ. ಮತ್ತೆ ಅವಳನ್ನು ಓಡಿಸಿದರೆ ಜಾತಿ ಬಹಿಷ್ಕಾರ ಹಾಕುತ್ತಾರೆ. ಹೆಂಡತಿಯಿಂದ ಅನ್ಯಾಯವಾಗಿದ್ದಲ್ಲಿ ಅಥವಾ ಗಂಡನಿಂದ ಹೆಣ್ಣಿಗೆ ಅನ್ಯಾಯವಾಗಿದ್ದರೆ ಒಕ್ಕಲಿನವರು ಗಡಿಯವರು ಮಾರಿಕಟ್ಟೆಗೆ ತರುತ್ತಾರೆ. ಅಲ್ಲೂ ಆಗದಿದ್ದರೆ ಶೃಂಗೇರಿ ಮಠದ ನ್ಯಾಯಮಂಡಲಿಗೆ ಒಯ್ಯುತ್ತಾರೆ. ಅಲ್ಲೂ ಆಗದಿದ್ದರೆ ಜಾತಿಯವರ ಅಪ್ಪಣೆ ಪಡೆದು ಗೌಡನ ಮೂಲಕ ಪೋಲೀಸಿಗೆ ನಂತರ ಕೋರ್ಟಿಗೆ ಹೋಗುತ್ತಾರೆ. ಸಾಮಾನ್ಯವಾಗಿ ಕೋರ್ಟಿಗೆ ಹೋದ ಪ್ರಸಂಗಗಳು ಕಡಿಮೆ ಅಥವಾ ಇಲ್ಲವೆನ್ನಬಹುದು.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಯೋಜನೆಗಳು ಮತ್ತು ಮಹಿಳೆ:

ಭೈರರ ಮಹಿಳೆಯರಲ್ಲಿ ಶಿಕ್ಷಣದ ಬಗ್ಗೆ ಅಷ್ಟೊಂದು ಜಾಗೃತಿ ಇಲ್ಲ. ಕಾರಣ ಅವಳು ಹೆಣ್ಣು, ಓದಿ ಏನು ಮಾಡಬೇಕು? ಸ್ವಾರಿ ತಿಕ್ಕೋದು ಬಿಡಲ್ಲವಲ್ಲ ಅಂತಾ ಮೌಢ್ಯ ನಂಬಿಕೆ. ಆದರೆ ಶಿಕ್ಷಣದಲ್ಲಿ ಸ್ತ್ರೀಯೊಬ್ಬಳು ಒಂಧು ಸಮಾಜವನ್ನು ನಿರ್ಮಾಣ ಮಾಡುವುದರಲ್ಲಿ ಹಾಗೂ ಅದರ ಸಂಪೂರ್ಣ ಪ್ರಗತಿಗೆ ಸ್ತ್ರೀಶಿಕ್ಷಣ ಎಂತಹ ಪ್ರಬಲವಾದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಈಗಾಗಲೇ ಹಲವು ತಜ್ಞರು ಹಾಗೂ ಸಂಶೋಧನೆಗಳು ನಿರೂಪಿಸಿವೆ. ನಮಗೆ ತಿಳಿದಿರುವಂತೆ ಅಭಿವೃದ್ಧಿಶೀಲ ದೇಶಗಳು ಶಿಕ್ಷಣದಲ್ಲಿ ಮುನ್ನಡೆಯನ್ನು ಸಾಧಿಸಿ ತಮ್ಮ ಆರ್ಥಿಕ ಹಾಗೂ ಜನಜೀವನ ಮಟ್ಟವನ್ನು ಒಂದು ಉನ್ನತ ಸ್ಥಿತಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಿದೆ. ಈ ಒಂದು ಹಿನ್ನೆಲೆಯಲ್ಲಿ ವಿವಿಧ ಸಮಾಜಗಳ ಅಭಿವೃದ್ಧಿಯನ್ನು  ಪರಾಮರ್ಶಿಸಿದಾಗ ನಮಗೆ ತಿಳಿದುಬರುವ ಅಂಶವೆಂದರೆ ಭೈರರಲ್ಲಿ ಇಂದಿಗೂ ಸಹ ಶಿಕ್ಷಣದ ಮಟ್ಟ ಬಹಳ ಶೋಚನೀಯ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಎಲ್ಲ ದೇಶಗಳಲ್ಲಿ ಹಾಗೂ ಭಾರತದಲ್ಲಿ ನಿರಕ್ಷರತೆ ಇನ್ನೂ ತಾಂಡವವಾಡುತ್ತಿದ್ದು ಇದರಿಂದ ಅವುಗಳ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಧಕ್ಕೆ ಉಂಟಾಗಿರುವುದು. ಈ ನಿರಕ್ಷರತೆಯ ಒಂದು ರೂಪರೇಷೆಯನ್ನು ನಾವು ಅವಲೋಕಿಸಿದಾಗ ಎದ್ದು ಕಾಣಬರುವುದೆಂದರೆ ಇದರಲ್ಲಿ ಮಹಿಳೆಯರು ಹೆಚ್ಚು ಶಿಕ್ಷಣದಿಂದ ವಂಚಿತರಾಗಿರುವುದು. ಮಹಿಳಾ ಜನಸಂಖ್ಯೆ ಹೆಚ್ಚು ಕಮ್ಮಿ ಅರ್ಧದಷ್ಟು ಇದ್ದಾರೆ. ಅಂದರೆ ಆ ಸಮಾಜದ ಸರ್ವತೋಮುಖ ಅಭಿವೃದ್ಧಿ ಆಗಬೇಕೆಂದರೆ ಪುರುಷರ ಸಮಾನರಾಗಿ ಮಹಿಳೆಯರೂ ಎಲ್ಲ ಅಭಿವೃದ್ಧಿ ಯೋಜನೆಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಹಾಗೂ ಅದರ ಜೊತೆಗೆ ಈ ಯೋಜನೆಗಳಿಂದ ಆಗುವ ವಿವಿಧೋದ್ಧೇಶ ಲಾಭಗಳನ್ನು ಸಹ ಪಡೆಯಬೇಕಾಗುತ್ತದೆ. ಅಂದರೆ ಭೈರರ ಮಹಿಳೆಯರು ಶಿಕ್ಷಣದ ಒಂದು ಸೌಲಭ್ಯವನ್ನು ಉಪಯೋಗಿಸಿಕೊಂಡರೆ ಅದರಿಂದ ಉಂಟಾಗುವ ತಮ್ಮ ಮಾನಸಿಕ ಬೆಳವಣಿಗೆ, ಚಿಂತನ ಶಕ್ತಿ, ವಿಮರ್ಶಾತ್ಮಕ ಕಲೆ ಹಾಗೂ ಕಾರ್ಯದಲ್ಲಿ ಚಾಕಚಕ್ಯತೆ, ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

ಈ ಒಂದು ಹಿನ್ನೆಲೆಯಲ್ಲಿ ಭಾರತದಲ್ಲಿ ಸ್ವಾತಂತ್ಯ್ರಾನಂತರ ಮಾಡಿದ ಸಂವಿಧಾನದಲ್ಲಿ ಪುರುಷರ ಸಮಾನ ಮಹಿಳೆಯರಿಗೂ ಸಹ ವಿವಿಧ ಕ್ಷೇತ್ರ ಶಿಕ್ಷಣವೂ ಕೂಡಿದಂತೆ ಮೂಲಹಕ್ಕನ್ನು ಒದಗಿಸಿಕೊಟ್ಟಿತ್ತು. ಇದರಂತೆ ಭೈರರ ಮಹಿಳೆಯರಿಗೂ ಸಹ ವಿವಿಧ ಕ್ಷೇತ್ರ ಶಿಕ್ಷಣವೂ ಕೂಡಿದಂತೆ ಮೂಲ ಹಕ್ಕನ್ನು ಒದಗಿಸಿ ಕೊಡಬೇಕಿದೆ. ಇದರಿಂದ ಭೈರರ ಮಹಿಳೆಯರಿಗೂ ಶಿಕ್ಷಣದಲ್ಲಿ ಸಮಾನಾವಕಾಶ ಕಲ್ಪಿಸಿಕೊಟ್ಟರೆ ಸ್ವಾತಂತ್ಯ್ರ ಬಂದು ೬೦ ವರ್ಷಗಳಾದರೂ ಹೆಚ್ಚು ಕಡಿಮೆ ಅರ್ಧದಷ್ಟು ಜನ ಶಿಕ್ಷಣದಿಂದ ವಂಚಿತರಾಗಿರುವುದು ಮತ್ತು ಮಹಿಳೆಯರು ಇದರಿಂದ ಹೆಚ್ಚು ವಂಚಿತರಾಗಿರುವುದು ಭೈರರಂತಹ ಸಮಾಜದಲ್ಲೂ ಮಹಿಳೆಗೆ ಶಿಕ್ಷಣ ಮರೀಚಿಕೆಯಾಗಿರುವುದು ದುಃಖದಾಯಕ ಸಂಗತಿ. ಆದರೂ ನಿಜವಷ್ಟೆ! ಸ್ವಾತಂತ್ಯ್ರ ಬಂದು ೬೦ ವರ್ಷಗಳು ಕಳೆದರೂ ಮೂಲತಃ ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಲು ಸಾಧ್ಯವಾಗಿಲ್ಲ. ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಅಸಫಲತೆಗೆ ಮುಖ್ಯವಾಗಿ ಗ್ರಾಮಾಂತರ ಬಡ ಕುಟುಂಬದವರು ಹಾಗೂ ಕೆಳ ದರ್ಜೆಗಳ ಬುಡಕಟ್ಟು ಪಂಗಡಗಳ ಮಕ್ಕಳು ಶಿಕ್ಷಣದಲ್ಲಿ ಭಾಗವಹಿಸಲು ಆಗದೇ ಇರುವುದು. ಈ ಒಂದು ಹಿನ್ನೆಲೆಯಲ್ಲಿ ಈ ನಮ್ಮ ದೇಶದಲ್ಲಿ ಹಿಂದಿನಂತೆ ನಿರಕ್ಷರರ ಸಂಖ್ಯೆ ಸಾಕ್ಷರಸ್ಥರ ಸಂಖ್ಯೆಯನ್ನೂ ಮೀರಿಲ್ಲ. ಸಂಪೂರ್ಣ ಸಾಕ್ಷರತೆ ಸಾಧಿಸಲಿಕ್ಕೆ ಆಗದಿದ್ದರೂ ಸಹ ನಮ್ಮ ದೇಶದಲ್ಲಿ ಈಗ ಸಾಕ್ಷರಸ್ಥರು ನಿರಕ್ಷಸ್ಥರಿಗಿಂತ ಹೆಚ್ಚು ಇದ್ದಾರೆ. ಎನ್ನುವ ಒಂದು ಸಮಾಧಾನಕರ ಪರಿಸ್ಥಿತಿಯೆಂದರೆ ವಯಸ್ಕರ ಶಿಕ್ಷಣದಂತಹ ಯೋಜನೆಯಲ್ಲಿ ಕೆಲ ಸ್ತ್ರೀಯರು ಶಿಕ್ಷಣ ಪಡೆದಿದ್ದಾರೆ. ಆದರೂ ಇಂತಹ ಒಂದು ಸಂಪೂರ್ಣ ಸಾಕ್ಷರತೆ ಸಾಧಿಸಲಿಕ್ಕೆ ಆಗದಿರುವಂತಹ ಹಿನ್ನೆಲೆಯಲ್ಲಿ ಇಂದಿಗೂ ಸಹ ಭೈರರ ಸಮಾಜದಲ್ಲಿ ಸ್ತ್ರೀಯರು ಅತೀ ಹೆಚ್ಚಿನ ನಿರಕ್ಷರಸ್ಥರನ್ನು ಹೊಂದಿರುವುದರಿಂದ ಭೈರರ ಸಮಾಜದಲ್ಲಿ ಮಹಿಳೆ ಶಿಕ್ಷಣದಲ್ಲಿ ಹೀನಾಯವಾದ ಸ್ಥಿತಿಯನ್ನು ಪಡೆದಿದ್ದಾಳೆ. ಅಂಕಿ-ಅಂಶಗಳ ಪ್ರಕಾರ ೨೦೦೧ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೈರರ ಹೆಚ್ಚು ಮಹಿಳೆಯರು ಭಾಗಿಗಳಾಗಿದ್ದಾರೆ. ಈ ದುಸ್ಥಿತಿ ನಿಜಕ್ಕೂ ಶೋಚನೀಯ. ನಮ್ಮ ಮಹಿಳೆಯರ ಸಾಕ್ಷರತೆಮಟ್ಟವನ್ನು ಪರಾಮರ್ಶಿಸಿದ್‌ಆಗ ತೋರಿಬರುವುದೆಂದರೆ ಬುಡಕಟ್ಟು ಸಮಾಜದಲ್ಲಿ ಮಹಿಳೆಯರ ಸಾಕ್ಷರತೆ ಶೇ ೭.೯ (೨೦೦೧). ಈಗ ಅದು ಶೇ ೩೬.೪ ಕ್ಕೆ ಏರಿದೆ.

ಅಂದರೆ ಇಂದಿಗೂ ಸಹ ಭೈರರಲ್ಲಿ ಸುಮಾರು ೯೩ ಕ್ಕೂ ಹೆಚ್ಚು ಮಹಿಳೆಯರು ನಿರಕ್ಷರಸ್ಥರಾಗಿದ್ದಾರೆ. ನಮ್ಮ ಭಾರತದಲ್ಲಿ ಹೆಚ್ಚು ಕಡಿಮೆ ಮಹಿಳೆಯರ ಸಂಖ್ಯೆ ಇಡೀ ಜನಸಂಖ್ಯೆಯ ಅರ್ಧದಷ್ಟಿದ್ದರೂ ಕೇವಲ ಶೇ. ೩೬ ರಷ್ಟು ಮಾತ್ರ ಸಾಕ್ಷರಸ್ಥರು ಎನ್ನುವದು ಒಂದು ಶೋಚನೀಯ ಪರಿಸ್ಥಿತಿ. ಇಂತಹ ಒಂದು ಅಧಿಕ ಮಟ್ಟದ ನಿರಕ್ಷರತೆ ಕಾಣುತ್ತದೆ. ಅಂದಾಗ ಭೈರರ ಮಹಿಳೆಯರು ಅಭಿವೃದ್ಧಿಕಾರ್ಯದಲ್ಲಿ ಪಾಲ್ಗೊಳ್ಳಲು ಹೇಗೆ ಸಹಕಾರವಾಗುತ್ತಾರೆ. ಅಥವಾ ಅವರ ಸ್ಥಾನಮಾನ, ಅಂತಸ್ಥನ್ನು ಹೆಚ್ಚಿಸಲು ಹೇಗೆ ಸಾಧ್ಯವಾಗುತ್ತದೆ ಎನ್ನುವುದು ಒಂದು ಬೃಹತ್‌ಪ್ರಶ್ನೆ ಇಂದಿಗೂ ನಮ್ಮನ್ನು ಕಾಡುತ್ತಿದೆ.

ಸ್ತ್ರೀ ಸಂಘಗಳು:

ಆಧುನಿಕ ಯೋಜನೆಯ ಪ್ರಗತಿಪರ ಚಿಂತನೆಯ ಫಲವಾಗಿ ಎಲ್ಲ ಜಾತಿ, ವರ್ಗಗಳಲ್ಲೂ ಸ್ತ್ರೀಸಂಘಗಳು ರಚನೆಗೊಂಡವು. ಅವು ಮಹಿಳೆಯರ ಕ್ಷೇಮಾಭಿವೃದ್ಧಿ ಆರ್ಥಿಕ ಚಿಂತನೆಯ ಮೇಲೆ ನಿರ್ಮಾಣಗೊಂಡವು. ಅಂಥ ಪ್ರಯತ್ನದ ಫಲ ಭೈರರ ಸಮಾಜದ ಮಹಿಳಾ ಸಂಘಗಳು. ಇಲ್ಲಿ ಮೊದಲಿನಿಂದಲೂ ನಮ್ಮ ಸಮಾಜ ಮಹಿಳೆಯರಿಗೆ ಕೆಲವು ಗುಣಗಳನ್ನು ಆರೋಪಿಸಿದೆ. ಅವು ಜೈಃವಿಕ ನೀತಿಯ ಗುಣಗಳಾಗಿವೆ. ಆಕೆಯನ್ನು ಪರಹಿತವಾದಿ ಎಂದು ಗುರುತಿಸಲಾಗಿದೆ. ಗಂಡ ಮತ್ತು ಮಕ್ಕಳ ಹಿತವನ್ನು ಕಾಪಾಡುವುದು ಮಹಿಳೆಯರ ಜೈವಿಕ ಜವಾಬ್ದಾರಿಯೆಂದು ವಾದಿಸಲಾಗುತ್ತದೆ. ಮಹಿಳೆಗೆ ತನ್ನದು ಎಂಬ ಆಸೆ-ಆಕಾಂಕ್ಷೆಗಳಿರುವುದಿಲ್ಲವೆಂದು ಹೇಳಲಾಗಿದೆ. ಈ ಗುಣಗಳನ್ನು ಮಹಿಳೆಯರು ಶೈಶವಾವಸ್ಥೆಯಿಂದ ಮೈಗೂಡಿಸಿಕೊಳ್ಳುವಂತಹ ಸಾಮಾಜೀಕರಣ ವ್ಯವಸ್ಥೆಯನ್ನು ಪುರುಷ ಶಾಹಿ ರೂಪಿಸಿಬಿಟ್ಟಿದೆ. ಇದರಿಂದಾಗಿ ಮಹಿಳೆಯರು ತಮ್ಮ ಜಗತ್ತು ಎಂದರೆ, ಗಂಡ ಮಕ್ಕಳು, ಅಡುಗೆ ಮನೆ, ಕಸಮುಸುರಿ ಎಂದು ಭಾವಿಸಿಕೊಂಡಿದ್ದಾರೆ. ಇದರಿಂದಾಗಿ ಅವಳ ಶೋಷಣೆ ಸುಲಭವಾಗಿದೆ.

“ಅಮರ್ತ್ಯಸೇನ್‌ಕೌಟುಂಬಿಕ ನೆಲೆಯ ಮಹಿಳಾ ಶೋಷಣೆ ಬಗ್ಗೆ ವಿಭಿನ್ನವಾದ ಪ್ರಮೇಯವನ್ನು ರೂಪಸಿದ್ದಾರೆ. ಕುಟುಂಬ ಎಂಬ ಸಂಸ್ಥೆಯಲ್ಲಿನ ಸದಸ್ಯರಲ್ಲಿ ಸಹಕಾರದ ಗುಣವೂ ಇರುತ್ತದೆ. ಮತ್ತು ಸಂಘರ್ಷದ ಗುಣವೂ ಇರುತ್ತದೆ ಎಂಬುದು ಸೇನ್‌ರವರ ವಾದವಾಗಿದೆ. ಮಹಿಳೆಯರು ತಮ್ಮ ಶೋಷಣೆ ಬಗ್ಗೆ, ಹಿಂಸೆಯ ಬಗ್ಗೆ, ತಾರತಮ್ಯದ ಬಗ್ಗೆ ಪ್ರತಿಭಟನೆ ಮಾಡುವ ಸ್ಥಿತಿಯಲ್ಲಿರುವುದಿಲ್ಲ. ಪ್ರತಿಭಟಿಸಿದರೆ ಸದ್ಯ ದೊರೆಯುತ್ತಿರುವ ಭದ್ರತೆ, ರಕ್ಷಣೆಯೂ ಇಲ್ಲವಾಗಿಬಿಡುತ್ತದೆ. ಸಂಘರ್ಷಕ್ಕಿಳಿಯಲಾಗದೆ ಅಸಹಾಯಕತೆಯಿಂದ ಸಹಕಾರವಾದಿಗಳಾಗಿರುತ್ತಾರೆ” ಎಂಬುದು ಸೇನ್‌ಅವರ ಪ್ರಮೇಯವಾಗಿದೆ. ಮಹಿಳೆಯರಿಗೆ ತಾವು ಅನುಭವಿಸುತ್ತಿರುವ ಹಿಂಸೆ, ತಾರತಮ್ಯ, ಶೋಷಣೆ, ದಮನ ಮುಂತಾದವುಗಳ ಅರಿವಿಲ್ಲವೆಂದು ಹೇಳಲು ಸಾಧ್ಯವಿಲ್ಲ. ಆದರೆ ಅದನ್ನು ಪ್ರತಿಭಟಿಸಿ ಕುಟುಂಬದಿಂದ ಹೊರಗೆ ಬಂದರೆ ನೆಲೆ ಎಲ್ಲಿ? ಬದುಕು ಹೇಗೆ? ಕುಟುಂಬ ಸಂಬಂಧಗಳನ್ನು ಮುರಿದು ಬಂದ ಮಹಿಳೆಯರನ್ನು ನಮ್ಮ ಸಮಾಜವು ಮರ್ಯಾದೆಯಿಂದ ನಡೆಸಿಕೊಳ್ಳುವುದಿಲ್ಲ. ಅದಕ್ಕೆ ಇಲ್ಲಿ ಸ್ತ್ರೀಸಂಘಗಳ ಪಾತ್ರ ಮುಖ್ಯವಾಗಿರುತ್ತದೆ. ಇಂತಹ ಸಮಸ್ಯೆಗಳನ್ನು ಮಹಿಳೆಯರು ಏಕಾಂಗಿಗಳಾಗಿ ಎದುರಿಸಲು ಸಾಧ್ಯವಿಲ್ಲ. ಸಂಘರ್ಷಣಾತ್ಮಕ ದಾರಿಯನ್ನು ಮಹಿಳೆಯರು ತುಳಿಯಬೇಕಾದರೆ ಅವರಿಗೆ ಸಂಘಟನೆಯ ಬೆಂಬಲ ಬೇಕು. ಕುಟುಂಬದ ಚೌಕಟ್ಟಿನಿಂದ ಬೇರೆಯಾದ ಮೇಲೆ ಆಶ್ರಯ ಬೇಕಾಗುತ್ತದೆ. ಮಹಿಳೆಯರ ಹಿತಾಸಕ್ತಿಯನ್ನಲು ಕಾಯಲು ಇರುವ ಮಾರ್ಗ ಇದಾಗಿದೆ. ಬಂಡವಾಳಶಾಹಿಯು ತನಗೆ ಅಗತ್ಯವಾದ ಹೆಚ್ಚುವರಿ ದುಡಿಮೆಯನ್ನು ಕುಟುಂಬ ವ್ಯವಸ್ಥೆಯಲ್ಲಿರುವ ಮಹಿಳೆಯರಿಂದ ಉಚಿತವಾಗಿ ಪಡೆಯುತ್ತದೆ ಎಂದು ಹೇಳಲಾಗಿದೆ.

ಬಂಡವಾಳಶಾಹಿಯ ವರ್ಗವ್ಯವಸ್ಥೆ ಹಾಗೂ ಪುರುಷಶಾಹಿ ಇವೆರಡೂ ಬಗೆಯ ಶೋಷಣೆಗೆ ಮಹಿಳೆಯು ಒಳಗಾಗುತ್ತಿದ್ದಾಳೆ. ಕುಟುಂಬವು ಇಂತಹ ಶೋಷಣೆ ಮುಂದುವರೆಯುವಂತೆ ನೋಡಿಕೊಳ್ಳುತ್ತಿದೆ. ಕುಟುಂಬವ್ಯವಸ್ಥೆಯ ರಾಜಕಾರಣದಲ್ಲಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಹಕ್ಕು ಇಂದಿಗೂ ಪುರುಷರ ವಶದಲ್ಲಿದೆ. ಈ ಅಧಿಕಾರ ಪುರುಷರಿಗೆ ಆಸ್ತಿ ಹಕ್ಕು, ಉದ್ಯೋಗದ ಹಕ್ಕು, ವರಮಾನದ ಆರ್ಜನೆಗಳಿಂದ ಪ್ರಾಪ್ತವಾಗುತ್ತದೆ. ಇಂತಹ ವಿಚಾರದ ದೂರದೃಷ್ಟಿ ಇಟ್ಟುಕೊಂಡು ಹುಟ್ಟಿದ ಸ್ತ್ರೀಶಕ್ತಿ ಕೇಂದ್ರಗಳು ದಕ್ಷಿಣ ಕನ್ನಡ ಜಿಲ್ಲೆಯ ಭೈರರ ಸಮಾಜದ ಎಲ್ಲ ಪ್ರದೇಶಗಳಲ್ಲೂ ಪ್ರಚಲಿತವಾಗಿವೆ. ಇಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ಜನ ಸ್ತ್ರೀ ಸಮೂಹದವರು ಸೇರಿ ಸ್ತ್ರೀಶಕ್ತಿ ಕೇಂದ್ರವನ್ನು ಸ್ಥಾಪಿಸುತ್ತಾರೆ. ಇವರು ವಾರಕ್ಕೆ ಇಂತಿಷ್ಟು ವಂತಿಗೆಯನ್ನು ಕೂಡಿ ಹಾಕುತ್ತಾರೆ. ಕೂಡಿಹಾಕಿದ ಒಟ್ಟು ವಂತಿಗೆಯನ್ನು ಯಾರಾದರೂ ಒಬ್ಬರು ಲಾಟರಿ ಮೂಲಕ ಎತ್ತಿಕೊಳ್ಳುತ್ತಾರೆ. ಅದಕ್ಕೆ ಅತಿ ಕಡಿಮೆ ಬಡ್ಡಿಯನ್ನು ಹಾಕುತ್ತಾರೆ. ಆ ಹಣವು ತಮ್ಮ ಕುಟುಂಬದ ಅಭಿವೃದ್ಧಿ, ಪ್ರಗತಿ, ಹೊಲ-ಗದ್ದೆ ಕೆಲಸ, ಎಣ್ಣೆ, ಹಸು, ಹಾಲು ಉತ್ಪಾದನೆ ಇತ್ಯಾದಿಯಾಗಿ ಆರ್ಥಿಕ ಅಭಿವೃದ್ಧಿಗೆ ಕುಟುಂಬದ ಏಳ್ಗೆಗೆ ಸಹಾಯವಾಗುತ್ತದೆ. ಇಲ್ಲಿನ ಸಂಘಗಳು ಕೇವಲ ಮಹಿಳೆಯ ಕುಟುಂಬದ ಆರ್ಥಿಕ ಚಿಂತನೆಯಿಂದ ಮೇಲೆತ್ತುವಂತೆ ಆಕೆಯ ಅನೇಕ ವೈಯಕ್ತಿಕ (ದೈಹಿಕ, ಮಾನಸಿಕ) ಸಮಸ್ಯೆಗಳ ಪರಿಹಾರಕ್ಕೆ ಕಾರಣೀಭೂತವಾಗಿರುವುದು ಈ ಸಂಘಗಳ ವಿಶೇಷ. ಹೆಣ್ಣು ಗರ್ಭಿಣಿ ಆದಾಗಿನಿಂದ ಋತುಸ್ರಾವ, ಬಿಳಿ ಮುಟ್ಟು, ಕಾಮಾಲೆ, ಏಡ್ಸನಂತಹ ಗಂಭೀರ ಕಾಯಿಲೆಗಳ ಬಗ್ಗೆ ಇಲ್ಲಿ ಚರ್ಚೆ ನಡೆಯುತ್ತದೆ. ಪಟ್ಟಣದಿಂದ ಶಿಕ್ಷಣ ಹೊಂದಿ, ಮಹಿಕಲೆಯರನ್ನು, ಎನ್‌.ಜಿ.ಓ. ಸದಸ್ಯರನ್ನು ಕರೆಸಿ ಉಪನ್ಯಾಸ ನೀಡಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಮಹಿಳೆ-ಸಮಾಜ, ಮಹಿಳೆ-ಕಾನೂನು, ಮಹಿಳೆ-ಶಿಕ್ಷಣ ಇತ್ಯಾದಿ ಸಂಗತಿಗಳು ಚರ್ಚಿತವಾಗುತ್ತವೆ. ಅವುಗಳಲ್ಲಿ ಕೆಲವನ್ನು ನೋಡಬಹುದು:

ವೈಯಕ್ತಿಕ ಕಾನೂನು ಮತ್ತು ಮಹಿಳೆ:

ಭೈರರಲ್ಲೂ ಸ್ತ್ರೀ ಬದುಕು ವ್ಯಕ್ತಿ ಜೀವನ ಕುಟುಂಬದೊಂದಿಗೆ ಆರಂಭವಾಗುತ್ತಿದೆ. ಎಂದ ಮೇಲೆ ಕುಟುಂಬವೆಂದರೆ ರಕ್ತ ಸಂಬಂಧ, ವಿವಾಹ ಹಾಗೂ ದತ್ತಕ ಮುಂತಾದವುಗಳ ಮೂಲಕ ಒಟ್ಟುಗೂಡಿದ ವ್ಯಕ್ತಿಗಳಿರುತ್ತಾರೆ. ಹೀಗಾಗಿ ವಿವಾಹ, ಉತ್ತರಾಧಿಕಾರ, ಜೀವನಾಂಶ, ಮಕ್ಕಳ ಪಾಲನೆ, ಅಪ್ರಾಪ್ತ ವಯಸ್ಕರು ಹಾಗೂ ಪಾಲಕರು ಮುಂತಾದ ವಿಷಯಗಳ ಬಗ್ಗೆ ಪ್ರತಿಯೊಂದು ಸಮಾಜ ಅಥವಾ ಸಮುದಾಯವು ಅದರದೇ ಆದ ಕಟ್ಟುಪಾಡು, ನಿಯಮಗಳನ್ನು ಹೊಂದಿರುತ್ತದೆ. ಇದನ್ನು ವೈಯಕ್ತಿಕ ಕಾನೂನು ಎಂದು ಕರೆಯಬಹುದು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಅವರು ಭಾರತದಲ್ಲಿ ರೂಢಿಯಲ್ಲಿದ್ದ ವೈಯಕ್ತಿಕ ಕಾನೂನುಗಳನ್ನು ಬದಲಿಸುವ ಪ್ರಯತ್ನ ಮಾಡಲಿಲ್ಲ. ಆದರೆ ಭಾರತ ಸಂವಿಧಾನದ ೪೪ ನೇ ಅನುಚ್ಛೇದದಲ್ಲಿ ಕೇಂದ್ರ ಸರ್ಕಾರವು ಅದರ ಸಮಸ್ತ ಪ್ರಜೆಗಳಿಗೂ ಏಕರೂಪ ನಾಗರಿಕ ಸಂಹಿತೆಯನ್ನು ಅನ್ವಯಿಸಬೇಕೆಂಬುದಾಗಿ ವಿಧಿಸಲಾಗಿದೆ. ಇಂತ ಸಮುದಾಯ ಕಾನೂನುಗಳನ್ನು ಮೀರಿ ಕೋರ್ಟ್-ಕಛೇರಿಗೆ ಹೋಗಿ ತನ್ನ ನ್ಯಾಯ ಪಡೆಯಲು ಪ್ರೋತ್ಸಾಹಿಸುವುದು.

ಹಾಗೆ ವಿವಿಧ ಧರ್ಮಗಳಿಗೆ ಸೇರಿದ ಜನರು ಆಯಾ ಧಾರ್ಮಿಕ ಪದ್ಧತಿಯಂತೆ ವಿವಾಹ ಮಾಡಿಕೊಳ್ಳುವಂತೆಯೇ ಧರ್ಮ, ಜಾತಿ, ಪಂಥ ಇತ್ಯಾದಿಗಳನ್ನು ಮೀರಿ ವಿವಾಹ ಮಾಡಿಕೊಳ್ಳಬಯಸುವವರಿಗೆ ವಿಶೇಷ ವಿವಾಹ ಅಧಿನಿಯಮ ೧೯೫೪ ರ ಅನುಸಾರ ವಿವಾಹವಾಗಲು ಅವಕಾಶವಿದೆ. ಇದನ್ನು ಸಿವಿಲ್‌ವಿವಾಹವೆಂದೂ ಕರೆಯಲಾಗಿದೆ. ಇದರಲ್ಲಿ ಯಾವುದೇ ಧಾರ್ಮಿಕ ಸಂಪ್ರದಾಯ ಅಥವಾ ಆಚರಣೆಗಳನ್ನು ಅನುಸರಿಸಬೇಕಾಗಿಲ್ಲ. ಇದೊಂದು ಕ್ರಾಂತಿಕಾರಕ ವಿಚಾರ. ಇಂಥ ತಿಳಿವಳಿಕೆ ಮೂಡಿಸುವುದು ಹಾಗೇ ಜೀವನಾಂಶ, ಈ ಅಧಿನಿಯಮದ ಅಡಿಯಲ್ಲಿ ವಿವಾಹಿತಳಾಗಿ ಕಾರಣವಿಲ್ಲದೆ ಗಂಡನಿಂದ ತ್ಯಜಿಸಲ್ಪಟ್ಟ ಮಹಿಳೆ ಪತಿಯಿಂದ ಜೀವನಾಂಶ ಪಡೆಯಲು ಹಕ್ಕುಳ್ಳವಳಾಗಿರುತ್ತಾಳೆ. ಭಾರತ ದಂಢ ಸಂಹಿತೆಯ ೧೨೫ ನೇ ಪ್ರಕರಣದಲ್ಲಿ ಇದಕ್ಕೆ ಉಪಬಂಧ ಕಲ್ಪಿಸಲಾಗಿದೆ. ಜೀವನಾಂಶದ ಅರ್ಜಿಯನ್ನು ಸಾಮಾನ್ಯವಾಗಿ ವೈವಾಹಿಕ ಹಕ್ಕುಗಳ ಪುನಃ ಸ್ಥಾಪನೆ, ನ್ಯಾಯಿಕ ಪ್ರತ್ಯೇಕತೆ, ವಿವಾಹ ವಿಚ್ಛೇದನ ಅರ್ಜಿಯೊಂದಿಗೆ ಸಲ್ಲಿಸಬೇಕು. ಇಲ್ಲದಿದ್ದರೆ ಪ್ರತಿವಾದಿಯು ಜೀವನ ನಿರ್ವಹಣೆಗೆ ವರಮಾನವಿದೆಯೆಂದು ವಾದಿಸಬಹುದು. ಹೀಗಾಗಿ ಪ್ರಮಾಣಪತ್ರವನ್ನು ಸಲ್ಲಿಸಿ ವರಮಾನ, ಆಸ್ತಿ, ಸ್ವತ್ತುಗಳ ವಿವರ, ಅವಲಂಬಿತರು, ಅವರ ವಯಸ್ಸು ಮುಂತಾದವುಗಳನ್ನು ತಿಳಿಸುವುದು ಸೂಕ್ತ. ಇದರಿಂದ ಜೀವನಾಂಶದ ಮೊಬಲಗನ್ನು ನಿರ್ಧರಿಸಲು ನೆರವಾಗುತ್ತದೆ ಎಂದು ಮನವರಿಕೆ ಮಾಡಿಕೊಡುವುದು.

ಅಲ್ಲದೆ ಈ ಪ್ರಕರಣದಲ್ಲಿ ಪತ್ನಿ, ಮಕ್ಕಳು ಮಾತ್ರವಲ್ಲದೆ ಆರ್ಥಿಕ ತೊಂದರೆಯಲ್ಲಿರುವ, ಜೀವನಾಧಾರವಿಲ್ಲದ ತಾಯ್ತಂದೆ, ವಿವಾಹ ಬಾಹಿರ ಸಂಬಂಧದಿಂದ ಜನಿಸಿದ ಮಕ್ಕಳು, ಪ್ರಾಪ್ತ ಅಥವಾ ಅಪ್ರಾಪ್ತ ವಯಸ್ಸಿನವರು, ಪತಿ ಅಥವಾ ತಂದೆ ಅಥವಾ ಮಕ್ಕಳ ವಿರುದ್ಧ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದ್ದು. ಇದೊಂದು ಅತಿ ಮಹತ್ವದ ಕಾನೂನಾಗಿದೆ. ಯುಕ್ತ ಕಾರಣವಿಲ್ಲದೆ ಯಾವ ಮಹಿಳೇ ಸ್ವತಂತ್ರಳಾಗಿ, ಪರಸ್ಪರ ಒಪ್ಪಿಗೆಯಿಂದ ಅಥವಾ ವ್ಯಭಿಚಾರದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಜೀವನಾಂಶ ಕೇಳಲು ಸಾಧ್ಯವಿಲ್ಲ ಎಂದರೆ ತಾಯ್ತಂದೆ ಅಥವಾ ಅತ್ತೆ-ಮಾವ ಅಥವಾ ಇತರರಿಗೆ ಜೀವನಾಂ ನೀಡಲು ನ್ಯಾಯಾಲಯ ಆಜ್ಞೆ ನೀಡಲಾಗುವುದಿಲ್ಲ. ಅಂತ ಸಂದರ್ಭದಲ್ಲಿ ಮಹಿಳೆ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಜೀವನಾಂಶ ಕೇಳಬಹುದು. ಹಿಂದೂ ಅಪ್ರಾಪ್ತ ವಯಸ್ಕರು ಮತ್ತು ಸಂರಕ್ಷಕರ ಅಧಿನಿಯಮ ೧೯೫೫ ಹಿಂದೂ ಪೋಷಕರು ಮತ್ತು ಸಂರಕ್ಷಕರ ಅಧಿನಿಯಮಗಳಲ್ಲಿ ಪೋಷಣೆ ಹಕ್ಕುಗಳ ಬಗ್ಗೆ ಭೈರರ ಸ್ತ್ರೀಯರಿಗೆ ಈ ಎನ್‌.ಜಿ.ಓ. ಗಳು ವಿಶೇಷ ಪಾತ್ರ ವಹಿಸಿ, ಅವರಿಗೆ ಕಾನೂನಿನ ಅರಿವನ್ನು ಮೂಡಿಸಿವೆ.

ಭೈರರ ಸಮಾಜದ ಮಹಿಳೆಯರ ಕೆಲವು ಸಮಸ್ಯೆಗಳು:

ಭೈರರಲ್ಲೂ ಮದುವೆಯಾಗಿ ಹೆಂಡತಿಯ ಮೈ ಮೇಲಿರುವ ಚೂರುಪಾರು ಒಡವೆಗಳನ್ನು ಮಾರಿ, ಯೌವ್ವನ ಮಾಸುವವರೆಗೆ ಆಕೆಯೊಡನೆ ಸುಖಿಸಿ ಎರಡು, ಮೂರು ಅಥವಾ ಐದಾರು ಜನ ಮಕ್ಕಳನ್ನು ಹುಟ್ಟಿಸಿ ಆಕೆಯ ಕುತ್ತಿಗೆಗೆ ತಾಳಿ ಕಟ್ಟಿದ ಜಾಗ ಖಾಲಿ ಮಾಡಿ, ಇನ್ನೋರ್ವಳನ್ನು ಮದುವೆಯಾಗುವ ಗಂಡಂದಿರು ಭೈರರ ಕುಟುಂಬಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರ ಮೇಲೆ ಯಾರಿಗೂ ಯಾವ ನಿಯಂತ್ರಣವೂ ಇಲ್ಲ. ಸಮಾಜದ ಬಳಿಗೆ ದೂರು ನೀಡಿದರೆ ಅವನಿಗೆ ಬೇಕಾದವಳನ್ನು ಇಟ್ಟುಕೊಳ್ಳಬಹುದೆಂಬುದು ಸಾಮಾಜಿಕ ಮುಖಂಡರ ನಿಯಮ. ಇದನ್ನು ಪ್ರಶ್ನಿಸುವಂತಿಲ್ಲ. ಮಕ್ಕಳಿಗೆ ಉಪಜೀವನ ಕೊಡಬೇಕು. ಅದು ಕೊಡದಿದ್ದರೆ ನೀವು ನ್ಯಾಯಾಲಯಕ್ಕೆ ಹೋಗಿ ಎಂದಷ್ಟೇ ಹೇಳುತ್ತಾರಲ್ಲದೆ, ಬೇರೆ ಯಾವ ರೀತಿಯ ಪರಿಹಾರವನ್ನೂ ಸೂಚಿಸುವುದಿಲ್ಲ. ನ್ಯಾಯಾಲಯಕ್ಕೆ ಹೋಗಲು ಬೇಕಾದ ಆರ್ಥಿಕ ಅನುಕೂಲವೂ ಇವರಿಗಿಲ್ಲ. ಆ ಹಾದಿಯೂ ತಿಳಿಯದು. ಹಾಗೆ ಹೋಗಲು ಬೇಕಾದ ಮಾರ್ಗದರ್ಶನ ನೀಡಿ ಸಹಕರಿಸುವ ಭೈರರ ಮಹಿಳೆಯರದ್ದೇ ಆದ ಸಂಘಟನೆಗಳಂತೂ ಇಲ್ಲವೇ ಇಲ್ಲ. ಮಂಗಳೂರಿನ ಆಸುಪಾಸಿನಲ್ಲಿ ಕೆಲವು ಸ್ತ್ರೀ ಶಕ್ತಿ ಕೇಂದ್ರಗಳಿವೆ. ಕೆಲವು ಮಹಿಳೆಯರು ಸಂಘದಲ್ಲಿ ಚರ್ಚಿಸಿ ಬಿಡುತ್ತಾರೆ. ಕೆಲವರು ಮಾರ್ಗದರ್ಶನ ಪಡೆಯುತ್ತಾರೆ. ಅವರಿಂದಲೂ ಹೆಚ್ಚಿನ ನೆರವು ನೀಡಲು ಸಾಧ್ಯವಾಗುವುದಿಲ್ಲ. ಭೈರರ ವ್ಯಕ್ತಿ ನಿಯಮದಲ್ಲೇ ಇರುವ ಕೆಲವು ತೊಡಕುಗಳು ನಿವಾರಣೆಯಾಗಬೇಕು. ವ್ಯಕ್ತಿ ನಿಯಮದಲ್ಲೆ ಬದಲಾವಣೆಯಾಗಬೇಕು. ಆದರೆ ಭೈರರ ಮಹಿಳೆಯರಿಗಾಗಿ ಇಂತಹ ಒಂದು ಬೇಡಿಕೆಯನ್ನು ಸ್ತ್ರೀಶಕ್ತಿ ಕೇಂದ್ರ ಸಂಘಟನೆ ಮುಂದಿಡುವುದು ಸಾಧ್ಯವಿಲ್ಲ.

ಭೈರರ ಮಹಿಳೆಯರ ಶೋಷಣೆಯ ವಿರುದ್ಧ ಭೈರರ ಮಹಿಳೆಯರೇ ಧ್ವನಿ ಎತ್ತಬೇಕಷ್ಟೆ! ನಿರಕ್ಷರತೆ ಹಾಗೂ ಬಡತನದಿಂದ ಮುರುಟಿ ಹೋದ ಈ ಹೆಣ್ಣುಮಕ್ಕಳ ಧ್ವನಿ ಹೊರಗೆ ಕೇಳಿಸುವ ಸಾಧ್ಯತೆಯಾದರೂ ಎಲ್ಲಿದೆ? ಇಂದು ಹೊಸ ಎಚ್ಚರದ ಹಲವು ಸಾಮಾಜಿಕ ಸಂಘಟನೆಗಳು ಮಹಿಳಾ ಶೋಷಣೆಯ ಕುರಿತು ಮಾತನಾಡುತ್ತವೆ. ವರದಕ್ಷಿಣೆಯನ್ನು ಮಾತ್ರ ಇವರು ಮಹಿಳಾ ಶೋಷಣೆಯ ಕುರಿತು ಮಾತನಾಡುತ್ತವೆ. ವರದಕ್ಷಿಣೆಯನ್ನು ಮಾತ್ರ ಇವರು ಮಹಿಳಾ ಶೋಷಣೆ ಎಂದು ಗುರುತಿಸುತ್ತಾರೆಯೇ ಹೊರತು ಬುಡಕಟ್ಟಿನ ಭೈರರ ಮಹಿಳೆಯರ ನಿಜವಾದ ಶೋಷಣೆಯಾದ ಬಹುಪತ್ನಿತ್ವ, ವಿಚ್ಛೇದನ ಕುರಿತು ಇವರು ಚಕಾರವೆತ್ತುವುದಿಲ್ಲ. ಇವೆಲ್ಲವೂ ಪುರುಷರ ನಿಯಮಗಳೆಂದು ಚಿತ್ರಿಸಲ್ಪಟ್ಟು ನೆರಳಿನಲ್ಲಿ ಬೆಳೆಯುತ್ತವೆ. ಮಗಳ ಮದುವೆಯ ಸಂದರ್ಭದಲ್ಲಿ ವರದಕ್ಷಿಣೆ ನೀಡಿ ನಷ್ಟ ಅನುಭವಿಸುವುದು ತಂದೆಯಾದುದರಿಂದ ಈ ಹೊರೆ ತಮ್ಮ ಮೇಲೆ ಬೀಳುತ್ತದೆಂದಾದಾಗ ಗಂಡಸರು ಅದರ ವಿರುದ್ಧ ಧ್ವನಿ ಎತ್ತಿದ್ದಾರಷ್ಟೇ| ಆದರೆ ಈ ಶೋಷಣೆಯ ವಿರುದ್ಧ ಮಹಿಳೆಯರೇ ಧ್ವನಿ ಎತ್ತುವಂತಹ ಒಂದು ಸೌಲಭ್ಯವು ಈ ಸಮಾಜದಲ್ಲಿಲ್ಲ. ಇಷ್ಟಕ್ಕೂ ವರದಕ್ಷಿಣೆ ಒಂದು ಶೋಷಣೆ ಎನ್ನುವಂತೆಯೂ ಇಲ್ಲ. ಆಸ್ತಿಯಲ್ಲಿ ಪಾಲು ನೀಡಬೇಕೆಂಬ ಕಾನೂನಿನ ನಿಯಮವಿದ್ದರೂ ಹೆಣ್ಣುಮಕ್ಕಳಿಗೆ ಮದುವೆಯಾದ ಬಳಿಕ ತವರಿನಿಂದ ದೊರೆಯುವುದು ಅಷ್ಟಕ್ಕಷ್ಟೆ. ಅಲ್ಲದೆ ವರದಕ್ಷಿಣೆಯ ಹಣವನ್ನು ಸಮನಾಗಿ ವಿನಿಯೋಗಿಸಿ ತಮ್ಮ ಮುಂದಿನ ಬದುಕಿಗೆ ಹಾದಿ ಕಂಡುಕೊಂಡವರೂ ಎಷ್ಟೋ ಜನರಿದ್ದಾರೆ. ತಮಗೆ ತವರಿನಿಂದ ಅಷ್ಟಾದರೂ ಬರಲಿ ಎನ್ನುವ ಹೆಣ್ಣು ಮಕ್ಕಳು ಎಷ್ಟೋ ಜನರಿದ್ದಾರೆ.

ಭೈರರ ಸಮಾಜದಲ್ಲಿ ಕುಟುಂಬ ಯೋಜನೆ ಮತ್ತು ಸ್ತ್ರೀ:

ಪುರುಷ ಪ್ರಧಾನ ಸಂಸ್ಕೃತಿ ಹಾಗೂ ಸ್ತ್ರೀ ಪರ ಪ್ರಯತ್ನಗಳ ನಡುವಣ ಸಂಘರ್ಷ ಸಮಕಾಲೀನ ಸಮಾಜದ ಒಂದು ಜ್ವಲಂತ ಸಮಸ್ಯೆ. ಸಾಮಾಜಿಕ ರಚನೆಯಲ್ಲಿ ಹಾಸುಹೊಕ್ಕಾಗಿರುವ ಲಿಂಗ ಅಸಮಾನತೆಯ ಬೇರುಗಳನ್ನು ನಿರ್ಮೂಲನ ಮಾಡುವವರೆಗೂ ಕಾಯಿದೆಗಳಾಗಲಿ, ಅಭಿವೃದ್ಧಿ ಯೋಜನೆಗಳಾಗಲಿ  ಈ ಸಮಾಜದ ಮೂಲಭ?ಊತ ರಚನೆಯನ್ನು ಭೇದಿಸಲು ಸಾಧ್ಯವಿಲ್ಲ. ದೇಶದ ವಿವಿಧೆಡಗಳಲ್ಲಿ, ವಿವಿಧ ಪ್ರಮಾಣಗಳಲ್ಲಿ ಇಂದಿಗೂ ಸ್ತ್ರೀಯರು ನಾನಾ ರೀತಿಯ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ, ಬಾಲ್ಯ ವಿವಾಹ, ವರದಕ್ಷಿಣೆಗಾಗಿ ಹಿಂಸೆ ಮತ್ತು ಕೊಲೆ, ಕೌಟುಂಬಿಕ ಕ್ರೌರ್ಯ, ದೇವದಾಸಿ ಮತ್ತು ಬಾಲವೇಶ್ಯಾ ಪದ್ಧತಿಗಳಂತಹ ಅಮಾನುಷ ಆಚರಣೆಗಳಿಗೆ ಹೆಣ್ಣು ಮಕ್ಕಳ ಬಲಿ, ಆಸ್ತಿ ಹಕ್ಕಿನಿಂದ ವಂಚನೆ, ವೃತ್ತಿ ಸ್ಥಳದಲ್ಲಿ ದೌರ್ಜನ್ಯ, ಇವೇ ಮುಂತಾದ ಅನೇಕ ಆಚರಣೆಗಳು ಇಂದಿಗೂ ಜಾರಿಯಲ್ಲಿದ್ದು, ಮಹಿಳೆಯರ ಉಳಿವು ಹಾಗೂ ಅಭಿವೃದ್ಧಿಗಳಿಗೆ ತೀವ್ರವಾದ ಧಕ್ಕೆಯನ್ನುಂಟು ಮಾಡುತ್ತಿವೆ.

ಭೈರರಲ್ಲಿ ಹೆಣ್ಣು ಮಗು ಜನಿಸಿದರೆ ಸಣ್ಣ ಮುಖ ಮಾಡಿ ಆ ಮಗುವನ್ನು ಸ್ವಾಗತಿಸುವುದರ ಮೂಲಕ ಕುಟುಂಬ ಬಾಂಧವರು ಮೌನವಾಗಿ ತಮ್ಮ ಅಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಮತ್ತು ಮುಂದಿನದಾದರೂ ಗಂಡು ಮಗುವಾದೀತು ಎಂಬ ನಿರೀಕ್ಷೆಯಲ್ಲಿ ತಮ್ಮ ಅಸಂತೋಷವನ್ನು ಮರೆಯುತ್ತಾರೆ! ಗ್ರಾಮೀಣ ಭೈರರಲ್ಲಿ ಸಮಾಜದಲ್ಲಿ ಹೆರಿಗೆ ಮಾಡಿಸಲು ಬಂದ ‘ಸೂಲಗಿತ್ತಿ’ಗೆ ಹಾಗೂ ಬಾಣಂತಿಯ ‘ಮೈಲಿಗೆ’ ಬಟ್ಟೆ ಶುಚಿ ಮಾಡುವ ‘ಅಗಸಗಿತ್ತಿಗೆ’ ಉಡಕ್ಕಿ ಹಾಕುವ ಒಂದು ಪದ್ಧತಿ ಇದೆ. ಮಗು ಹುಟ್ಟಿದ ತಕ್ಷಣ ಆ ಮಗುವಿನ ಸೋದರ ಮಾವ ಸೂಲಗಿತ್ತಿಯಿಂದ ಮಗು ಗಂಡೋ-ಹೆಣ್ಣೋ ತಿಳಿದುಕೊಂಡು ‘ಗಂಗಾಳಬಾರಿಸಿ’ ಕುಟುಂಬ ಬಾಂಧವರಿಗೆ ಮಗುವಿನ ಜನನ ಸುದ್ದಿ ಸಾರುತ್ತಾನೆ. ನಂತರ ಹೆರಿಗೆ ಮಾಡಿಸಿದ ಸೂಲಗಿತ್ತಿಗೆ, ಬಾಣಂತಿ ಬಟ್ಟೆ ಶುಚಿ ಮಾಡಿದ ಅಗಸಗಿತ್ತಿಗೆ ಅದೇ ಗಂಗಾಳದಿಂದ ಕಾಳುಗಳನ್ನು, ತುಂಬಿ ಹೆಣ್ಣು ಮಗು ಜನಿಸಿದ್ದರೆ ಬೆಲ್ಲ. ಗಂಡು ಮಗುವಾಗಿದ್ದರೆ ಸಕ್ಕರೆ ಹಂಚುತ್ತಾರೆ. ಹೀಗೆ ಭೈರರ ಸಮಾಜದಲ್ಲಿ ಹುಟ್ಟಿನಿಂದಲೇ ತಾರತಮ್ಯ ಎದುರಿಸುವ ಹೆಣ್ಣು ಮಗು ಆ ತಾರತಮ್ಯದ ಜೊತೆ ಜೊತೆಗೆ ಬೆಳವಣಿಗೆ ಪ್ರಾರಂಭಿಸುತ್ತದೆ.

ನಿಸರ್ಗವು ಹೆಣ್ಣಿನ ಮೇಲೆ ಸಂತಾನ ನಿರ್ವಹಣೆಯ ಬಹುಪಾಲು ಹೊಣೆಯನ್ನು ಹೇರಿದೆ. ಇದೀಗಸಮಾಜವ್ಯವಸ್ಥೆಯು ಸಂತಾನ ನಿಯಂತ್ರಣದ ಕಾರ್ಯಾಚರಣೆಯಲ್ಲಿ ಅವಳನ್ನು ಪ್ರಯೋಗಪಶುವನ್ನಾಗಿ ಬಳಸುತ್ತಿದೆ. ಮನುಕುಲದ ಒಟ್ಟು ಒಳಿತಿನ ಬಗೆಗೆ ಮಹಿಳೆಯೇನೂ ವಿರೋಧವನ್ನೆತ್ತುತ್ತಿಲ್ಲ. ಆದರೆ ಮಹಿಳೆಯ ಒಳಿತನ್ನೂ ಕುರಿತು ಚಿಂತಿಸುವ ಜವಾಬ್ದಾರಿ ಈ ಸಮಾಜದ್ದಲ್ಲವೇ?

ಭೈರರ ಮಹಿಳೆಯರು ವಸ್ತುಗಳನ್ನು ಭಾವನೆಗಳನ್ನು, ಹಾಗೂ ಜನರನ್ನು ಅಮೂರ್ತಕ್ಕಿಂತ ಮೂರ್ತಕ್ಕೆ, ಅನುಭವಕ್ಕೆ ತಂದುಕೊಳ್ಳುತ್ತಾರೆ. ಹೇಗೆ ಪುರುಷ ತನ್ನ ಸಮಸ್ಯೆಯನ್ನು ಸಾಮಾಜಿಕ ಅಥವಾ ಸಮಾಜದ ಸಮಸ್ಯೆಯನ್ನಾಗಿ ಪರಿಗಣಿಸುತ್ತಾನೋ ಹಾಗೆ ಆ ಜಾಣ್ಮೆ ಈ ಸ್ತ್ರೀಯರಲ್ಲಿಲ್ಲವೆಂದೇ ಹೇಳಬಹುದು. ವಸ್ತುನಿಷ್ಠವಾಗಿ ಗ್ರಹಿಸುವುದಕ್ಕಿಂತ ವೈಯಕ್ತಿಕ ನೆಲೆಯಲ್ಲಿ ಗುರುತಿಸಿಕೊಳ್ಳುತ್ತಾರೆ. ಕುಟುಂಬ ಕಲ್ಯಾಣದಂತಹ ಯೋಜನೆ ಜನಸಂಖ್ಯಾ ನಿಯಂತ್ರಣಕ್ಕಾಗಿ ಸಮಾಜ, ದೇಶ ಇಂಥ ವಿಶಾಲ ಅರ್ಥದ ಕಲ್ಪನೆ ಅವರಿಗೆ ಹೊಳೆಯುವುದಿಲ್ಲ. ತಮಗೆ ಮಕ್ಕಳು ಹೆಚ್ಚಾಗಬಾರದು, ಅದಕ್ಕೆ ಉದಾರದರ್ಶಕ ಸಂತಾನಹರಣ ಶಸ್ತ್ರಕ್ರಿಯೆ ಟ್ಯುಬೆಕ್ಟಮಿ, ಕಾಪರ್ ಟಿ ಅಳವಡಿಕೆ, ನುಂಗುವ ಮಾತ್ರೆಗಳು ಇವುಗಳನ್ನು ಪಡೆಯುತ್ತಾರೆ. ಇದರಲ್ಲಿ ಕೆಲವನ್ನು ಪುರುಷರು ಅನುಸರಿಸಬಹುದು ಎಂದರೆ ಅದು ಹೇಗಾಗುತ್ತದೆ? ಎನ್ನುತ್ತಾರೆ. “ಆಪರೇಷನ್‌ಮಾಡಿಸಿಕೊಂಡ್ರೆ… ನನ್ನ ಗಂಡನ ಪೌರುಷತ್ವ ಹೋಗುತ್ತಂತೆ, ಕೆಲ್ಸ ಮಾಡೋಕೆ ಅವರಿಗೆ ಆಗೋಲ್ಲ… ಅದಕ್ಕೆ ನಾನೇ ಆಪರೇಷನ್‌ಮಾಡಿಸಿಕೊಂಡೆ” ಎನ್ನುತ್ತಾರೆ.

ಹೀಗೆ ಕುಟುಂಬ ಯೋಜನೆ ಅಂದ್ರೇನೆ ಅದು ಹೆಣ್ಣು ಮಕ್ಕಳಿಗೆ ಮಾತ್ರ ಎನ್ನುವ ನಂಬಿಕೆ ಭೈರರಲ್ಲಿದೆ.