ಭೈರರ ಐತಿಹಾಸಿಕ ಹಿನ್ನೆಲೆ

ಭೈರರು ಮೂಲತಃ ದಕ್ಷಿಣಕನ್ನಡ ಜಿಲ್ಲೆಯವರಲ್ಲ ಎಂಬುದು ವಾಸ್ತವ. ಇದಕ್ಕೆ ಮೇಲುನೋಟಕ್ಕೆ ಕಾಣುವ ಅಂಶಗಳೆಂದರೆ ಇವರು ಮಾತನಾಡುವ ಭಾಷೆ. ಘಟ್ಟದ ಗ್ರಾಮ್ಯ ಕನ್ನಡ, ಮತ್ತು ಘಟ್ಟದ ಮೇಲೆ ರೂಢಿಯಲ್ಲಿರುವ ಚೌಡಿ, ಮಾರಿಯಂಥ ಪೂಜಾ ಸಂಪ್ರದಾಯಗಳು. ಅದಲ್ಲದೆ ತುಳುನಾಡಿನ ಪಾಡ್ದನಗಳಲ್ಲಿ ಕೊರಗ, ನಲ್ಕೆ, ಪರವ, ಪಂಬದ ಮುಂತಾದ ಪರಿಶಿಷ್ಟ ಜಾತಿಯವರ ಹೆಸರುಗಳೂ ಅಲ್ಲದೆ ಉಳಿದ ಮೇಲ್ವರ್ಗದವರ ಜಾತಿ, ವೃತ್ತಿ ಇತ್ಯಾದಿಗಳು ಉಕ್ತಗೊಂಡಿವೆ. ಭೈರರ ಹೆಸರು, ವೃತ್ತಿ ಇವಾವುವೂ ಪಾಡ್ದನಗಳಲ್ಲಿ ಉಕ್ತವಾಗಿಲ್ಲ. ಪಾಡ್ದನಗಳಲ್ಲಿ ಉಕ್ತವಾಗಿರುವುದು ಹೆಚ್ಚಾಗಿ ತುಳುನಾಡಿನ ಸಂಸ್ಕೃತಿ. ಪಾಡ್ದನಗಳ ಕಾಲದ ಬಗೆಗಿನ ಶಾಸನಾಧಾರವೆಂದರೆ ಕಾರ್ಕಳ ತಾಲೂಕಿನ ಕಾಂತಾವರದ ಕಾಂತೇಶ್ವರ ದೇವಸ್ಥಾನದಲ್ಲಿನ ಒಂದು ಶಾಸನದಲ್ಲಿ (ಕಾಲ ೧೩೭೯) ‘ದೈವ’ ಎಂಬ ಶಬ್ದ ಬರುತ್ತದೆ. ತುಳುನಾಡಿನ ಅರ್ಥದಂತೆ ದೈವವೆಂದರೆ ಭೂತ. ಉಡುಪಿಯ ನಂದಳಿಕೆ ದೈವಗಳ ಪ್ರಸ್ತಾವ ೧೪೯೯ ರಲ್ಲಿ. ಅಬ್ಬಗೆ, ಧಾರಣೆ ಎಂಬ ದೈವಗಳ ವಿಷಯ ಬರುತ್ತದೆ. ಅಂದರೆ ಶಾಸನೋಕ್ತವಾದ ದೈವಗಳ ಕುರಿತಂತ ಭೂತಗಳಿಗೆ ಅದಕ್ಕಿಂತ ಮುಂಚೆ ಪಾಡ್ದನಗಳು ರೂಢಿಯಿದ್ದಲ್ಲಿ ಭೈರರ ಹೆಸರು ಯಾವ ಸಂದರ್ಭದಲ್ಲೂ ಕಾಣದಾದ್ದರಿಂದ ಈ ಪಾಡ್ದನ ರಚನೆಗಳ ಕಾಲದಲ್ಲಿ ಭೈರರು ತುಳುನಾಡಿನಲ್ಲಿ ಇದ್ದಿರಲಾರರು.

ಭೈರ ಪದದ ನಿಷ್ಪತ್ತಿ

ಬೈರ, ಭೈರ, ಭೈರವರು ಮುಂತಾಗಿ ಕರೆಯಲ್ಪಡುವ ಈ ಜಾತಿಸೂಚಕ ಹೆಸರು ಭೈರವನ ಆರಾಧನಾ ಸಂಪ್ರದಾಯದ ಹಿನ್ನೆಲೆಯಲ್ಲಿ ಬಂದಿರಬೇಕು. ಅವರ ಕುಲದೈವ ಭೈರವ ಅಥವಾ ಕಾಲಭೈರವ, ತುಳುನಾಡಿಗೆ ವಲಸೆ ಬಂದ ನಂತರ ಕಾಲಭೈರವನಲ್ಲದೆ ಭೈರವ ಭೂತವನ್ನು ಆರಾಧಿಸುತ್ತಾರೆ. ಅದಲ್ಲದೆ ಶಿವ ಹಾಗೂ ಶಕ್ತಿ ಸಂಬಂಧಿ ಆರಾಧನೆ, ಭೈರವನ ಸಂಕೇತವಾದ ತ್ರಿಶೂಲಗಳನ್ನು ಹರಕೆ ಸಲ್ಲಿಸುವುದು. ತಾವು ವಾಸಿಸುವ ನೆಲೆಗಳಲ್ಲಿ ತ್ರಿಶೂಲಗಳನ್ನು ಸ್ಥಾಪಿಸಿ, ತಮ್ಮ ಪರಿಸರವನ್ನು ರಕ್ಷಿಸುವ ದೈವವೆಂದು ಭಾವಿಸುತ್ತಾರೆ. “ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ-ಗಿರಿಜನ ಸಾಮಾಜಿಕ ಇತಿಹಾಸ” ಎಂಬ ಕೃತಿಯಲ್ಲಿ, ಪಿ.ಕಮಲಾಕ್ಷ ಅವರು ಭೈರವರಾರಾಧನೆಯ ವಿಷಯವನ್ನು ತಿಳಿಸುತ್ತಾ, ಪೂರ್ವದಲ್ಲಿ ಶಿವನು ಕಾಲಭೈರವನ ರೂಪತಾಳಿ ಅವತಾರಕ್ಕೆ ಬಂದು ಜನತೆಯಲ್ಲಿ ದೈವಭಕ್ತಿಯನ್ನು ಹಾಗೂ ದೇವರ ಭಯವನ್ನು, ಧರ್ಮವನ್ನು ಸ್ಥಾಪಿಸುವ ಕಾಲದಲ್ಲಿ ಈ ವರ್ಗದ ಜನರು ಶಿವನ, ಕಾಲಭೈರವ ಅವತಾರದ ದೈವಿಕಶಕ್ತಿಗೆ ಬೆರಗಾಗಿ ಕಾಲಭೈರವನ ದೈವಿಕಶಕ್ತಿಯನ್ನು ನಂಬಿ, ಪೂಜೆ-ಪುನಸ್ಕಾರ ಕೊಟ್ಟು ಆರಾಧನೆ ಮಾಡಿಕೊಂಡು ಬಂದ ಕಾರಣ ಕಾಲಭೈರವನ ಆರಾಧಕರಾದ ಇವರನ್ನು “ಭೈರವರು” ಎಂಬುದಾಗಿಯೂ ಕರೆಯತೊಡಗಿದರು ಎಂಬ ಹಿರಿಯರ ಮಾತಿದೆ, ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಕೆಲವಾರು ಆಚರಣೆ ಸಂಪ್ರದಾಯಗಳನ್ನು ಗಮನಿಸುವಾಗ ಭೈರವನ ಆರಾಧನಾ ಪದ್ಧತಿಯ ಹಿನ್ನೆಲೆಯಲ್ಲಿ ಇವರಿಗೆ ಈ ಹೆಸರು ಬಂದಿದೆಯೆಂದು ತಿಳಿಯಬಹುದು. ಭೈರವರು ಆರಾಧನಾ ಸಂಪ್ರದಾಯದ ಹಿನ್ನೆಲೆಯನ್ನೇ ಈ ವಿಷಯದಲ್ಲಿ ಅನುಮೋದಿಸಿದ್ದಾರೆ. ಮತ್ತೆ ಕೆಲವರು ಭೈರ ಅರಸರ ಪಾಳೆಯಗಾರರಾದ ಕಾರಣ ತಮಗೆ ಭೈರರೆಂದು ಕರೆಯಲಾಯಿತು ಎಂಬ ಅಭಿಪ್ರಾಯವನ್ನು ‘ಪಿ.ಕಮಲಾಕ್ಷ’ ಅವರು ತಿಳಿಸಿದ್ದಾರೆ. ೧ ಡಾ. ಡಿ.ಆರ್. ಪಾಂಡುರಂಗ ದಕ್ಷಿಣ ಕನ್ನಡ ಜಿಲ್ಲೆಯ ಭೈರರು; ಪ್ರ: ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಪು. ೯೫.

ಸಿ.ಡಿ. ಮ್ಯಾಕ್ಲನ್‌ಸಂಪಾದಿಸಿದ “ಗ್ಲೋಸರಿ ಆಫ್‌ದಿ ಮದ್ರಾಸ್‌ಪ್ರಸಿಡೆನ್ಸಿ” ಎಂಬ ನಿಘಂಟುವಿನಲ್ಲಿ ಭೈರ ಎಂಬ ಪದವು ‘ಭೇರಿ’ ಯಿಂದ ಬಂದದ್ದು ಎಂದು ಹೇಳಿ Low caste Proper name common among chukless (peyer) ಎನ್ನುತ್ತಾರೆ. ದೇವಾಲಯಗಳಲ್ಲಿ ಭೇರಿ ಭಾರಿಸುವ ಆಚರಣೆ ಅನೇಕ ಕಡೆಗಳಲ್ಲಿದೆ. ಭೈರರು ವೃತ್ತಿಯಲ್ಲಿ ಸೈನಿಕರಾಗಿದ್ದರಿಂದ, ‘ಭೇರಿ’ ಬಡಿಯುವುದರಲ್ಲಿ ಪರಿಣಿತರಾದ್ದರಿಂದ ಧಾರ್ಮಿಕ ಕಾರ್ಯಗಳಲ್ಲಿ ದೇವಾಲಯಗಳಲ್ಲಿನ ಹೆಚ್ಚಿನ ಅವಕಾಶಗಳು ಅವರಿಗೆ ಒದಗಿರಬಹುದು. ಬಿ.ಲಿಂಗಯ್ಯ ಅವರು ‘ಬೋರೇದೇವರು’ ಎಂಬ ಗ್ರಂಥದಲ್ಲಿ ಭೈರವ ಎಂಬ ಪದದ ನಿಷ್ಪತ್ತಿ ಹೇಳುತ್ತಾ ಭೈಯ್ಯರೂವ, ಭೈರೂವ, ಭೈರುವ, ಭೈರವ ಎಂದು ಹೇಳಿ ಶಿವನ ಭೈರವರೂಪವೆಂದು ಹೇಳುತ್ತಾರೆ. ೨ ಅದೇ ಪುಟ. ೯೨ ಶಿವನ ಭಯಂಕರಾಕಾರವೇ ಭೈರವನಾದಂತೆ, ಅದರ ಆರಾಧನೆಯನ್ನು ನಡೆಸುವವರು ಭೈರರು ಎಂದಾಗಿದೆ ಎನ್ನಬಹುದು. ಭೈರರು ನೆಲೆಸಿರುವ ಪ್ರದೇಶಗಳಲ್ಲಿನ ಬ್ರಾಹ್ಮಣ ವರ್ಗದವರನ್ನು ವಿಚಾರಿಸಿದಾಗ ಬಾಹಿರರು, ಬಹಿರರು, ಬಯಿರ, ಭೈರ ಎಂದು ತಿಳಿಸಿ ಅವರು ಬಾಹಿರರಾದುದ್ದರಿಂದಲೇ ಊರಿನಿಂದ ಹೊರಗೆ ವಾಸಿಸುತ್ತಾರೆ. ಈ ನಿಷೇಧದ ಕಾರಣ ಅವರನ್ನು ಭೈರವರೆಂದು ಹೇಳುತ್ತಾರೆ ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಈ ನಿಷೇಧ ಸಾಮಾನ್ಯವಾಗಿ ಎಲ್ಲಾ ಹರಿಜನ ವರ್ಗದವರಿಗೂ ಅನ್ವಯಿಸುವುದರಿಂದ ಕೇವಲ ಭೈರರಿಗೆ ಮಾತ್ರ ಹೇಳಲು ಸಾಧ್ಯವಾಗುವದಿಲ್ಲ. ಭೈರರು ಹೆಚ್ಚಾಗಿ ನೆಲೆಸಿರುವುದು ಪುತ್ತೂರು, ಸುಳ್ಯ, ಕಾಸರಗೋಡು ಹಾಗೂ ಮಡಕೇರಿ ಮತ್ತು ಬೆಟ್ಟ-ಗುಡ್ಡ, ನದಿ-ಮನೆಗಳಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಅಥವಾ ಗುಡ್ಡಪ್ರದೇಶದ ಬಯಲುಗಳಲ್ಲಿ ಗುಡಿಸಲು ಕಟ್ಟಿಕೊಂಡು ಭೈರರು ವಾಸಿಸುತ್ತಾರೆ. ಪೇಟೆಯ ಸಮೀಪದಲ್ಲಿ ಕೆಲವರು ವಾಸಿಸುತ್ತಿದ್ದರು. ಅದು ಊರಿನಿಂದ ಹೊರಗಿನ ಪ್ರಕೃತಿ ದಟ್ಟತೆಯ ನಡುವೆ ಅಥವಾ ಗುಡ್ಡಗಳಲ್ಲಿ ಇವರ ವಾಸ. ಕಾಸರಗೋಡಾಗಿರಲಿ, ಮಡಿಕೇರಿಯಿರಲಿ, ಪ್ರಕೃತಿಯ ಮಧ್ಯ ಶಾಂತಪ್ರದೇಶದಲ್ಲಿ ಇವರ ನೆಲೆಗಳಿರುತ್ತವೆ. ಬೆಟ್ಟ-ಗುಡ್ಡಗಳ ಪ್ರದೇಶದಲ್ಲಿ ವಾಸಿಸುವುದನ್ನು ಇಷ್ಟಪಡುತ್ತಾರೆ. ಪೇಟೆಯಲ್ಲಿಯೂ ಊರಿನಿಂದ ಸುಮಾರು ೨-೩ ಕಿ.ಮಿ. ದೂರದಲ್ಲಿನ ಪ್ರಕೃತಿ ಸಮೃದ್ಧಿಯ ನಡುವೆ ಇರುತ್ತಾರೆ. ಅಂದರೆ ಭೈರರ ವೃತ್ತಿ ಹಾಗೂ ಅವರ ಕೈಕಸಬುಗಳಿಗೆ ಈ ಪ್ರದೇಶ ಅನುಕೂಲಕರ. ಕಾಡಿನಲ್ಲಿ ಸಿಗುವ ಜೇನು, ಕೆಲವು ಬೇರು-ನಾರುಗಳನ್ನು ಸಂಗ್ರಹಿಸಲು ಇಂತಹ ಪರಿಸರ ಅಗತ್ಯ. ಅವರ ಗೃಹಕಸುಬಾದ ಬುಟ್ಟಿ ಹೆಣೆಯಲು ಬೇಕಾಗುವ ಬಿದಿರು, ಬೆತ್ತಗಳಿಗೆ ಗುಡ್ಡಪ್ರದೇಶಗಳು ಅನುಕೂಲಕರವಾಗಿವೆ. ಈಗ ಕಾಡು ಹಾಗೂ ಬಿದಿರು ಗುಡ್ಡಪ್ರದೇಶಗಳ್ಲಿ ಕಡಿಮೆಯಾಗಿರುವುದರಿಂದ ತಮ್ಮ ಪರಿಸರದಲ್ಲಿ ಬಿದಿರು ಬೆಳೆಸುವುದೂ ಉಂಟು. ಈ ಪರಿಸರದಲ್ಲಿ ಮನೆಕಟ್ಟಿ ನೆಲೆಸಿರುವ ಭೈರರು ಈಗಲೂ ಕಡಿಮೆ. ಗುಡಿಸಲು ಹೆಚ್ಚಾಗಿ ಇವರ ಗೃಹಗಳು. ಕಾಡುಮಠ, ಪುತ್ತೂರು, ಸುಳ್ಯದ ಕೆಲವರಿಗೆ ಮಾತ್ರ ಹಂಚಿನ ಮನೆಗಳಿವೆ.

ಸುಳ್ಯ ತಾಲೂಕು:

ಅಡ್ಕಾರು, ಜಾಲ್ಸೂರು, ತಂಬಡ್ಕ (ಪಡ್ಡಪಾದೆ), ಪಡಾರು, ಕುತ್ಕುಂಜ, ಪೆಂಬತ್ತಾಡಿ, ಕರಿಕ್ಕಳ, ಚೊಕ್ಕಾಡಿ, ಮುಂಡುಗಾರು, ಪುರ್ಡೂರು, ಬೆಳ್ಳಾರೆ, ಮಾಡಾವು, ಅಯ್ಯಂಗಟ್ಟೆ, ಪಂಜಿಕ್ಕಾರು, ಮುಂಡಾಜೆ, ಪೆಡುವಜಿ, ಅಲೆಟ್ಟಿ ಕೊಡಂದೂರು, ಅಜ್ಜಾವರ(ಮುಂಡಾಳಿ) ಪೈಚಾರು, ಸೋಣಂಗೇರಿ, ಕುಕ್ಕುಜಡ್ಕ.

ಪುತ್ತೂರು ತಾಲೂಕು:

ಕಬಕ, ಬಡೆಕ್ಕಿಲ, ಕೆದಿಲ, ಪುತ್ತೂರು(ಕರ್ಮಲಾ) ಬೋಳ್ಯಾರು, (ಕುರ್ನಾಟು ಮಾರ್ಗ) ಅಡ್ಡನಡ್ಕ, ಸಂಟಿಯಾರು, ಪೆರಂಜ, ಪೆರ್ಗೇರಿ, ಸೂಳ್ಯ ಪದವು ಚೇಳೂರ (ಪಾಣಿಲ) ಕುಕ್ಕುಂಜೆ, ಭರಣ್ಯ, ಕುಂಬ್ರ.

ಬಂಟ್ವಾಳ ತಾಲೂಕು:

ಕುಂಡಡ್ಕ, ಕಲ್ಲಜೆ, ದಾಸಮಾಲೆ, ಕೋಲ್ಕಾಡು, ಪಡೆಯಡ್ಕ, ಜತ್ತನಗೋಡಿ, ಸಾಯ, ಪಾಲ್ತಾಜೆ, ಕುಡ್ತಮುಗೇರು, ಕುದ್ಮಾಜೆ, ಬೊಳಂತೂರು, ಸಾಲೆತ್ತೂರು, ಕಾಡುಮಠ, ಮಂಚಿ, ಸಲೇಕಿ, ಮುಡಿಪು, ಸಿಲಾಕಬೆಟ್ಟ, ಬೇಳೂರು, ಅಮ್ಮಾರು, ನಗಣಿ, ಗೋಳಿಮಜಲು(ಕುದ್ರಜೆಟ್ಟು) ಕಳ್ಳಿಗೆ, ಬೋಳುಬೈಲು.

ಮಲಬಾರು ಪ್ರದೇಶದಲ್ಲಿ ನೆಲೆಸಿದ್ದವರಾದ್ದರಿಂದ ಅಲ್ಲಿಯ ಭೈರರನ್ನು ಕುರಿತು ತಿಳಿಸಲಾಗಿದೆ. ಈ ಜಿಲ್ಲೆಯ ಭೈರರಿಗೂ, ಅವರಿಗೂ ಕೊಡುವ ತರುವ ಮತ್ತು ಎಲ್ಲ ಸಾಂಪ್ರದಾಯಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಬಾಂಧವ್ಯವಿರುವುದರಿಂದ ಆ ಪರಿಸರದ ಭೈರರ ಆಚರಣೆಯಲ್ಲಿ ವ್ಯತ್ಯಾಸವಿಲ್ಲ. ಆದರೆ ಕೆಲವರು ಮಲೆಯಾಳಿ ಭೂತಗಳನ್ನು ನಂಬುತ್ತಾರೆ. ಅವುಗಳಿಗೆ ಕೋಲ ನಡೆಸುವಾಗ ಮಲೆಯಾಳಿ ಭಾಷೆಯಲ್ಲಿ ಮಾತನಾಡುತ್ತಾರೆ. ಭೈರರು ಬೇರೆ ಬೇರೆ ಕಡೆ ಹಂಚಿ ಹೋಗಿರುವುದರಿಂದ ಈ ಪ್ರದೇಶದ ಧಾರ್ಮಿಕಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ತಮ್ಮ ಆಚಾರ ಹಾಗೂ ಸಂಪ್ರದಾಯಗಳನ್ನು ಮಾರುವುದಿಲ್ಲ. ಈ ಹಿನ್ನೆಲೆಯಲ್ಲಿ ಇವರ ಸಾಂಘಿಕತೆ ಮೆಚ್ಚುವಂಥಹುದಾಗಿದೆ. ಹಳ್ಳಿಯ ಬೇರೆ ಜಾತಿಯವರಲ್ಲಿ ತಾವೂ ಒಂದಾಗಿ ಸೌಹಾರ್ದದಿಂದ ಜೀವನ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬಂಟವಾಳ, ಪಾಣೆ ಮಂಗಳೂರು ಮುಂತಾದ ಪ್ರದೇಶದ ಹಳ್ಳಿಗಳಲ್ಲಿ ಭೈರರು ನೆಲೆಸಿದ್ದಾರೆ. ಈ ವರ್ಗ ಅಲ್ಪಸಂಖ್ಯಾತ ಪರಿಶಿಷ್ಟ ವರ್ಗವಾಗಿದೆ. ಪರಿಶಿಷ್ಟ         ಜಾತಿಗಳೆಂದರೆ ಭಾರತ ರಾಜ್ಯಾಂಗದ ೩೪೧ ನೇ ವಿಧಿಯಲ್ಲಿ ನಮೂದಿಸಿರುವ ಎಲ್ಲಾ ಜಾತಿಗಳೂ ಜನಾಂಗಗಳೂ ಅಥವಾ ಅವುಗಳ ಭಾಗಗಳೂ ಬುಡಕಟ್ಟುಗಳೂ ಸೇರುತ್ತವೆ. ಬುಡಕಟ್ಟಿನ ಜನಸಂಖ್ಯೆ ರಾಜ್ಯಾಂಗದ ೩೪೨ನೇ ವಿಧಿಯಲ್ಲಿ ಸೇರಿರುವ ಬುಡಕಟ್ಟುಗಳು ಹಾಗೂ ಸಮುದಾಯವನ್ನು ಹೊಂದಿದೆ. ಭೈರರನ್ನು ಕರ್ನಾಟಕ ಸರ್ಕಾರ ಪರಿಶಿಷ್ಟ ವರ್ಗಕ್ಕೆ ಸೇರಿಸಿವೆ. ಭಾರತ ಸರ್ಕಾರ ೧೯೭೬ರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟು ಆಜ್ಞೆಗೆ ತಿದ್ದುಪಡಿಯನ್ನು ತಂದಿತು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯವರು ಶೇಕಡಾ ೧೩.೧೪ರಷ್ಟು ಹಾಗೂ ಶೇಕಡಾ ೭೯ ಪರಿಶಿಷ್ಟ ಬುಡಕಟ್ಟಿನವರು ಇದ್ದಾರೆ.

ಭೈರರ ಪಂಗಡಗಳು:

ಭೈರರು ತಮ್ಮಲ್ಲಿ ಒಳಪಂಗಡಗಳಿವೆ ಎಂದು ತಿಳಿಸುತ್ತಾಋಎ. ಅವೆಂದರೆ ೧) ಬಲಗೈ ಭೈರರು ೨) ಎಡಗೈ ಭೈರರು ೩) ಬೂದಿಗ ಭೈರರು ೪) ಮುಡಿಚ್ಚಿಲ್‌ಭೈರರು ೫) ಎಡಚ್ಚಿಲ್‌ಭೈರರ ೬) ಬಸವಜಾತಿ ಭೈರರು. ಈ ಎಲ್ಲಾ ವರ್ಗಗಳನ್ನು ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯವರೆಂದು ನಿರ್ಣಯಿಸಲಾಗಿದೆ.

ಕುಟುಂಬ ಪದ್ಧತಿ:

ಸಾಮಾನ್ಯವಾಗಿ ಈಗ ಭೈರರಲ್ಲಿ ಅವಿಭಕ್ತ ಕುಟುಂಬಗಳು ಕಡಿಮೆ. ಆದರೆ ಅವಿಭಕ್ತ ಕುಟುಂಬಗಳಿದ್ದವು. ವಲಸೆ ಬಂದ ಕಾಲದಲ್ಲಿ ಮನೆಯ ಬಂಧುಗಳೆಲ್ಲರೂ ಒಟ್ಟಿಗೆ ಇರುತ್ತಿದ್ದೆವೆಂದು ಹೇಳುತ್ತಾರೆ. :ಈಗ ಭೈರರು ಕೇರಿಗಳಲ್ಲಿ ಬೇರೆ ಬೇರೆ ಗುಡಿಸಲುಗಳನ್ನು ಮಾಡಿಕೊಂಡು ವಿಭಕ್ತ ಕುಟುಂಬದವರಾಗಿ ವಾಸಿಸುತ್ತಿದ್ದಾರೆ.

ಭೈರರ ಬಳಿಗಳು:

ಸಾಮಾನ್ಯವಾಗಿ ಎಲ್ಲ ಜನಾಂಗದವರು ಗೋತ್ರ ಅಥವಾ ಬಳಿ ಹೇಳಿ ತಮ್ಮ ಮೂಲವನ್ನು ಗುರುತಿಸಿಕೊಳ್ಳುತ್ತಾರೆ. ತುಳುನಾಡಿನ ಎಲ್ಲ ಜಾತಿ ಮತ್ತು ಉಪಜಾತಿಯವರು ‘ಬಳಿ’ ಅಥವಾ ‘ಬರಿ’ಗಳ ಮೂಲಕ ತಮ್ಮ ಮೂಲ ಸಂಬಂಧವನ್ನು ಸೂಚಿಸಿಕೊಳ್ಳುವುದುಂಟು. ಹಾಗೆ ಭೈರರಲ್ಲೂ ಬಳಿಗಳಿವೆ. ಆದರೆ ಈ ಬಳಿ ಸಂಪ್ರದಾಯದಂತೆ ವಿವಾಹದಲ್ಲಿ ಇದರ ಕಟ್ಟುಪಾಡುಗಳನ್ನು ಪ್ರಮುಖವೆಂದು ಪರಿಗಣಿಸುವುದಿಲ್ಲ. ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ವಿಚಾರಿಸಿದಾಗ ನಮಗೆ ‘ಬರಿ’ಗಳಿಲ್ಲ ಎಂದೇ ಅನೇಕರು ಹೇಳಿದರು. ಚಾಳ್ಯಾರ್ ಹಾಗೂ ಕಬಕ, ಸುಳ್ಯ ಪರಿಸರದಲ್ಲಿ ವಿಹರಿಸಿದಾಗ ಕೆಲವು ಬಳಿಗಳ ಹೆಸರುಗಳು ದೊರಕಿದವು. ಹೆಚ್ಚಾಗಿ ಗೋತ್ರವನ್ನು ಯಾವುದಾದರೊಂದು ಸಸ್ಯ, ವೃಕ್ಷ ಅಥವಾ ಪ್ರಾಣಿ ಸಂಬಂಧವಾಗಿ ಹೇಳಿಕೊಳ್ಳುತ್ತಾರೆ. ಬ್ರಾಹ್ಮಣ, ಮತ್ತಿತರ ಕೆಲವು ಜಾತಿಗಳಲ್ಲಿ ಮಾತ್ರ ಋಷಿಗಳನ್ನು ಮೂಲವಾಗಿ ಹೇಳುವುದು ರೂಢಿ. ಉಳಿದ ಜಾತಿಯವರ ಮೂಲವನ್ನು ಸಸ್ಯ ಸಂಬಂಧವುಳ್ಳದ್ದು ಎಂದು ತಿಳಿಯಬಹುದಾಗಿದೆ. ಭೈರರಲ್ಲಿ ಸಗೋತ್ರ ನಿಷಿದ್ಧತೆ ಅಷ್ಟು ಪ್ರಮುಖವಾಗಿಲ್ಲ. ರಕ್ತ ಸಂಬಂಧಿಗಳು ಆಗದಿದ್ದರಾಯಿತು. ಅಕ್ಕನ ಮಗಳಾಗದಿದ್ದರಾಯಿತೆಂದು ಹೇಳುತ್ತಾರೆ. ಬಹಳ ಕಡಿಮೆ ಜನಸಂಖ್ಯೆ ಇರುವುದರಿಂದಲೋ ಅಥವಾ ಬೇರೆ ಕಡೆಯಿಂದ ವಲಸೆ ಬಂದು ನೆಲೆ ಊರಿದ ಇವರಲ್ಲಿ ‘ಬಳಿ’ ಹುಡುಕಿ ವಿವಾಹ ಮಾಡುವುದು ದುಸ್ತರವಾಗಿರಬಹುದು. ತುಂಬಾ ವಯಸ್ಸಾಗಿದ್ದ ಬಳಕುಂಜದ ಪುಟ್ಟು ಹಾಗೂ ಬೋಳ್ಯಾರಿನ ಕೆಲವು ವೃದ್ಧರು ಈ ಕೆಲವು ಬಳಿಗಳಿವೆ ಎಂದು ಸೂಚಿಸಿದರು. ಅವುಗಳನ್ನು ಈ ಕೆಳಗೆ ವಿವರಿಸಲಾಗಿದೆ:

೧) ಕುಂಬರಿ ಬಳಿ (ಕುಂಬ್ರ)

೨) ಬಟ್ಟೆ ಮಂಡ್ರ (ಸೀಳು) ಒತ್ತೆ ಮಂಡೂರು

೩) ಕಳ್ಯಾರು

೪) ಬಾಳೆಪುಣಿ

೫) ಕಲ್ಲಪಾಪ

೬) ಜಾಳ್ಯ

೭) ಗುಂಡ

೮) ನೆಕ್ರಾಜಿ

೯) ವೆರಾರ್ತಬೈಲು

೧೦) ಬೆಳ್ಳಾರೆ

೧೧) ಪೆರ್ವಾಯ

೧೨) ನಂದರ ಬಳಿ

೧೩) ಕನ್ನಡ ಬಳಿ

ಭೈರರಲ್ಲಿ ವೃತ್ತಿ ಮತ್ತು ಮಹಿಳೆ:

ಎಡಗೈಭೈರರು ಮಣ್ಣು ಕೆಲಸ ಮಾಡುತ್ತಾರೆ. ರಾಣ್ಯದವರು ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಾರೆಂದು ಅಭಿಪ್ರಾಯ ಪಡುತ್ತಾರೆ. ಬಲಗೈ ಭೈರರು ಮಾರಿಗುಡಿಯ ಪೂಜಾರರಾಗುತ್ತಾರೆ. ಎಡಗೈಯವರು ನಮ್ಮ ಗುಡಿಗಳಿಗೆ ಆಗುವಂತಿಲ್ಲ ಎನ್ನುವರು. ಇದೇ ಉತ್ತರವನ್ನು ಎಡಗಯ ಭೈರರೂ ಹೇಳುತ್ತಾರೆ. ಬಲಗೈರಾಣಿ ಭೈರರು ಮೇಲಿನವರೆಂದೂ ಅಧಿಕಾರ (ಜಾತಿಗೆ ಸಂಬಂಧಿಸಿದ) ತಮಗೆ ಮಾತ್ರ ಮೀಸಲೆಂದೂ ಎಡಗೈಯವರು ನಮ್ಮ ಅಧಿಕಾರದ ವ್ಯಾಪ್ತಿಗೆ ಬರುತ್ತಾರೆಂದು ತಿಳಿಸುವರು. ಈ ಬಗ್ಗೆ ಶೃಂಗೇರಿಯ ಮಠದಿಂದ ತಾಮ್ರಶಾಸನವಾಗಿದೆ. ನಾವು ಈಗಲೂ ಗುರುಮಠಕ್ಕೆ ಹಣ ಕಳಿಸುತ್ತೇವೆ ಎನ್ನುತ್ತಾರೆ. ಎಡಗೈಯವರೂ ಇದೇ ಮಾತು ಹೇಳುತ್ತಾರೆ. ಹೀಗಾಗಿ ಇವರಲ್ಲಿ ಈ ಎರಡೂ ಪಂಗಡಗಳಿದ್ದು ಹೆಚ್ಚಿನ ಆಚಾರಗಳಲ್ಲಿ ಸಾಮ್ಯತೆಯಿದೆ. ಆದರೆ ಈ ಜಿಲ್ಲೆಯ ಕೆಲವು ಕಡೆ ನೆಲೆಸಿರುವ ‘ರಾಣಿಯಾರ್’ ಎಂಬ ಜಾತಿಯವರ ಆಚಾರ, ಪದ್ಧತಿ, ಆರಾಧನಾ ಸಂಪ್ರದಾಯವು ಭೈರರಿಗಿಂತ ಸ್ವಲ್ಪ ಮಟ್ಟಿಗೆ ಭಿನ್ನವಾಗಿದೆ. ಕೆಲವು ಸಂಪ್ರದಾಯಗಳಲ್ಲಿ, ಜೀವನ ಚಕ್ರಗಳಲ್ಲಿ ಸ್ವಲ್ಪಮಟ್ಟಿನ ಸಾಮ್ಯತೆ ಇರುವುದು. ರಾಣಿಯವರು ತಮಗೂ ಭೈರರಿಗೂ ಯಾವ ಸಂಬಂಧವೂ ಇಲ್ಲವೆಂದರೆ, ಭೈರರು ನಾವು ಅಕ್ಕ-ತಂಗಿಯ ಮಕ್ಕಳೆಂದೇ ಅಭಿಪ್ರಾಯ ಪಡುತ್ತಾರೆ. ಅವರನ್ನು ತಮಗಿಂತ ಕಡಿಮೆ ಎಂದು ಹೇಳುವುದರಿಂದ ಎಡಗೈ ರಾಣ್ಯದವರು ಹಾಗೆ ತಿಳಿಸುತ್ತಾರೆಂದು ಅಭಿಪ್ರಾಯ ಪಡುತ್ತಾರೆ. (ಡಾ|| ಪಾಂಡುರಂಗ ಅವರ “ಭೈರರ ಸಂಸ್ಕೃತಿ: ಒಂದು ಸಾಂಸ್ಕೃತಿಕ ಅಧ್ಯಯನ” ಗ್ರಂಥಕ್ಕೆ ಹೆಚ್ಚು ಋಣಿಯಾಗಿದ್ದೇನೆ.) (ಭೈರರಲ್ಲೂ ಗಂಡು, ಹೆಣ್ಣಿನ ಲಿಂಗತಾರತಮ್ಯದಲ್ಲಿ ವೃತ್ತಿಗಳು ವಿಂಗಡಣೆಗೊಂಡಿವೆ. ಇದು ಎಲ್ಲ ಸಮಾಜದಲ್ಲಿ ಇರುವಂತೆ ಭೈರರ ವೃತ್ತಿ, ಕೆಲಸದ ಪರಿಕಲ್ಪನೆ ವ್ಯಕ್ತಿಗತನೆಲೆಯಲ್ಲಿ ಭಿನ್ನವಾಗಿರುವಂತೆ ಲಿಂಗಾಧಾರಿತ ನೆಲೆಯೊಂದಿಗೂ ಸಂಬಂಧ ಹೊಂದಿದೆ. ಅವರ ಬದುಕಿನ ಎಲ್ಲ ಯೋಚನೆಗಳಂತೆ ಕೆಲಸದ ಪರಿಕಲ್ಪನೆ ಕೂಡಾ ನಿರ್ದಿಷ್ಟ ಯೋಚನಾ ಕ್ರಮಕ್ಕೆ ಅನುಗುಣವಾಗಿದ್ದು ಹೆಣ್ಣು ಮಾಡುವ ಕೆಲಸಗಳು, ಗಂಡು ಮಾಡುವ ಕೆಲಸಗಳು ಎಂದು ವಿಂಗಡಿಸಲಾಗಿದೆ ಹಾಗೂ ಆರ್ಥಿಕ ಉತ್ಪನ್ನದೊಂದಿಗೆ ನೇರವಾದ ಸಂಬಂಧವನ್ನು ಹೊಂದಿದೆ. ಈ ನೆಲೆಯಲ್ಲಿ ಹೆಣ್ಣಿನ ಕೆಲಸದ ಪರಿಕಲ್ಪನೆಯ, ಭೈರರ ಸಮಾಜದಲ್ಲಿ ಸ್ತ್ರೀ ಕುರಿತ ಅನೇಕ ಹೊಸ ಸಂಗತಿಗಳನ್ನು ಪ್ರಕಟಿಸಬಲ್ಲದು.

ಪುರುಷಕೇಂದ್ರಿತ ಗ್ರಹಿಕೆಗಳು ಹೆಣ್ಣಿನ ಗುಣ ಸ್ವಭಾವಗಳನ್ನು ನಿರ್ದೇಶಿಸಿದಂತೆ ಅಂತಹ ಗುಣ ಸ್ವಭಾವಗಳಿಗೆ ಹೊಂದಿಕೆಯಾಗುವ ಕೆಲಸಗಳನ್ನು ನಿಗದಿಪಡಿಸಿತು. ಹೆಣ್ಣಿನ ಸ್ವಭಾವಗಳು ಮನೆಕೆಲಸ, ಅಪೇಕ್ಷಿಸುವ ತ್ಯಾಗ, ಸಹನೆ, ಸೂಕ್ಷ್ಮತೆ, ಮಿತವ್ಯಯ, ಸಮಚಯನ ಪ್ರವೃತ್ತಿಗಳು ಹೆಣ್ಣಿನದಾಗಿವೆ ಎಂದು ವೈಭವೀಕರಿಸುತ್ತಲೇ ಹೆಣ್ಣನ್ನು ಖಾಸಗೀ ಜಗತ್ತಿನ ನೇಪಥ್ಯದೊಳಗೆ ತಳ್ಳಲಾಯಿತು. ಪುರುಷನಿಷ್ಠ ಆಲೋಚನಾ ವಿಧಾನ ಬದುಕನ್ನು ಖಾಸಗೀ ಜಗತ್ತು ಮತ್ತು ಸಾರ್ವಜನಿಕ ಜಗತ್ತು ಎಂದು ವಿಭಜಿಸಿದ್ದು, ಮನೆಯ ಒಳಗಿನ ಕೆಲಸಗಳನ್ನು ಖಾಸಗೀ ಎಂದೂ ಮತ್ತು ಮನೆಯ ಹೊರಗಿನ ಕೆಲಸಗಳನ್ನು ಸಾರ್ವಜನಿಕ ಎಂದೂ ಕರೆಯಲಾಗುತ್ತದೆ. ಕುಟುಂಬದೊಳಗಿನ ಹೆಣ್ಣಿನ ಶ್ರಮ, ಲೈಂಗಿಕತೆ, ಸಂಗೋಪನ ಎಲ್ಲವನ್ನೂ ಕ್ಷುದ್ರ, ಸಾಮಾನ್ಯ ಎಂದು ತಳ್ಳಿಹಾಕಲಾಗಿದೆ. ಖಾಸಗಿ ಮತ್ತು ಪಾವಿತ್ಯ್ರದ ಮುಸುಕನ್ನು ಮುಚ್ಚಿ ಅಲ್ಲಿ ಹೆಣ್ಣು ಅನುಭವಿಸುವ ಹಿಂಸೆ, ಕ್ರೌರ್ಯ, ಅತ್ಯಾಚಾರ, ದಬಾವಣೆಗಳನ್ನು ಸಾಮಾಜಿಕ ನಿಯಮಾವಳಿಯ ಕಕ್ಷೆಯೊಳಗೆ ಬರದಂತೆ ತಡೆಹಿಡಿಯಲಾಗಿದೆ. ಈ ಖಾಸಗೀ ಕೆಲಸಗಳು ಆರ್ಥಿಕ ಉತ್ಪನ್ನವನ್ನು ಪಡೆಯದೇ ಇರುವುದರಿಂದ ಅಂತಹ ಕೆಲಸಗಳು ಕೆಲಸ ಅಥವಾ ವೃತ್ತಿಯಾಗದೆ ಕರ್ತವ್ಯ ಎನ್ನಿಸುತ್ತವೆ. ಆರ್ಥಿಕ ಮೂಲವನ್ನು ಪಡೆಯದ ಕೆಲಸ ಹಾಗೂ ಈ ಕೆಲಸವನ್ನು ಮಾಡುವ ವ್ಯಕ್ತಿ ಎರಡೂ ಶ್ರೇಷ್ಠ ಎಂದು ಪರಿಗಣಿತವಾಗುತ್ತದೆ. ಈ ಕಾರಣಕ್ಕಾಗಿಯೇ ಗಂಡಿಗೆ ಶಕ್ತಿಯನ್ನು ಆರೋಪಿಸಲಾಯಿತು ಮತ್ತು ಗಂಡಿನ ಈ ಶಕ್ತಿ ಹೆಣ್ಣನ್ನು ನಿಯಂತ್ರಿಸುವ ಸಾಧನವಾದಂತೆ, ವೃತ್ತಿಯಲ್ಲೂ ಕೂಡಾ ಈ ಸ್ಥಾಪಿತ ಶಕ್ತಿ ಪರಿಕಲ್ಪನೆಯನ್ನು ಸ್ತ್ರೀಯರಿಗೆ ಆರೋಪಿಸಿ ಹೆಂಗಸರ ಕೆಲಸ, ಗಂಡಸರ ಕೆಲಸಗಳೆಂದು ವಿಂಗಡಿಸಲಾಗಿದೆ.

ಭೈರರಲ್ಲಿ ಹೆಣ್ಣಿನ ಕೆಲಸದ ಪರಿಕಲ್ಪನೆಯು ಅವರ ಸಾಮಾಜಿಕ ರಚನೆಯ ಮೂಲಭೂತ ಘಟಕವಾದ ಕುಟುಂಬದ ಮನೆಯ ಕೆಲಸವೆಂದು ವಿಂಗಡಣೆ ಮಾಡುವುದರಿಂದ ಹೊಸ ತೀರ್ಮಾನವನ್ನು ತಲುಪುವುದು ಅಸಾಧ್ಯ. ಏಕೆಂದರೆ ಮನೆಯಲ್ಲಿ ಗಂಡು-ಹೆಣ್ಣಿನ ಪಾತ್ರ ಏನು? ಅವರ ಕೆಲಸಗಳೇನು? ಈ ಕೆಲಸಗಳ ಬಗೆಗೆ ಹೆಣ್ಣು-ಗಂಡಿನ ಕೆಲಸದ ಹಂಚಿಕೆಯ ಸ್ವರೂಪ ಮತ್ತು ಪ್ರಮಾಣ ಮತ್ತು ಈ ಶ್ರಮವಿಭಜನೆಯ ಹಿಂದಿನ ತಾತ್ವಿಕತೆ ಏನು ಎನ್ನುವ ಪ್ರಶ್ನೆಗಳಿಗೆ ಮುಖಾಮುಖಿಯಾಗುವುದು ಸಾಧ್ಯವಿಲ್ಲ. ಕಾರಣ, ನಮ್ಮ ಸಾಮಾಜಿಕ ರಚನೆಯ ಒಳಗಡೆ ಕೆಲಸದ ಪರಿಕಲ್ಪನೆ ಕೂಡಾ ಪುರುಷನಿಷ್ಠ ದೃಷ್ಟಿಕೋನದ ಅರ್ಥೈಸುವಿಕೆಯೇ ಆಗಿದೆ. ಹೆಣ್ಣಿನ ವಿವಾಹ, ಲೈಂಗೀಕತೆ, ತಾಯ್ತನ, ಮನೆವಾರ್ತೆ ಯಾವವೂ ಅವಳ ಸ್ವಂತದ ಆಯ್ಕೆಯ ಪ್ರಸಂಗವಲ್ಲ. ಮಹಿಳೆಯರು ಇಂತಹ ಆಯ್ಕೆಗೆ ಸಹಜವಾಗಿಯೇ ಒಳಗಾಗಬೇಕಾಗುತ್ತದೆ. ಅದು ದತ್ತ ನಿಯಮ. ಹಾಗಾಗಿ ತಮ್ಮ ಕೆಲಸ ಕಾರ್ಯಗಳನ್ನು ಪೂರ್ವಯೋಜಿತ ಮತ್ತು ಪಾರಂಪರಿಕ ನಂಬಿಕೆಯ ಮೇಲೆ ಹಂಚಲಾಗಿದೆ. ಹಾಗಾಗಿ ಹೆಣ್ಣಿನ ಕೆಲಸದ ವಿನ್ಯಾಸ ಮತ್ತು ಸ್ವರೂಪವನ್ನು ಅರಿಯುವಲ್ಲಿ ಮನೆಯನ್ನು ಕೆಲಸದ ಘಟಕವೊಂದಕ್ಕೆ ಸಮೀಕರಿಸಿ ನೋಡಿದಾಗ ಗಂಡಿನ ಕೆಲಸಕ್ಕೆ ಅಧೀನವಾಗಿರುತ್ತದೆ. ಕುಟುಂಬದ ಕೆಲಸ ಒಂದು ಕೈಗಾರಿಕಾ ಉತ್ಪನ್ನ ಘಟಕದಲ್ಲಿ ಸಂಗ್ರಹ, ಉತ್ಪಾದನೆ ಮತ್ತು ವಿತರಣೆ ಈ ಎಲ್ಲ ಹಂತಗಳಿಗೆ ತಲುಪುವುದಿಲ್ಲ. ಅಲ್ಲಿ ಬೇರೆ ಬೇರೆ ವಿಭಾಗಗಳಿದ್ದು ಪ್ರತಿ ವಿಭಾಗಕ್ಕೂ ಉಸ್ತುವಾರಿ ಅಧಿಕಾರಿಯೊಂದಿಗೆ ಅನೇಕ ಸಹಾಯಕರಿರುತ್ತಾರೆ. ಆದರೆ ಆಹಾರ ಉತ್ಪಾದನಾ ಘಟಕವಾದ ಮನೆಯಲ್ಲಿ ಈ ಎಲ್ಲ ಹಂತದಲ್ಲೂ ಹೆಣ್ಣು ಒಬ್ಬಳೇ ಎಲ್ಲ ಪಾತ್ರಗಳನ್ನೂ ನಿರ್ವಹಿಸುತ್ತಾಳೆ. ಸಂಗ್ರಹದ ಹಂತದಲ್ಲಿ ಆಹಾರ ಸಾಮಗ್ರಿ, ಉರುವಲುಗಳ ಸಂಗ್ರಹ; ಉತ್ಪಾದನ ಹಂತದಲ್ಲಿನ ಹೆಚ್ಚುವ, ಬೇಯಿಸುವ, ಹುರಿಯುವ, ಕರಿಯುವ, ಅರೆಯುವ, ಕುಟ್ಟುವ ಕ್ರಿಯೆಗಳು, ವಿತರಣ ಹಂತದ ಉಣಿಸುವ, ಬಡಿಸುವ ಕೆಲಸಗಳು, ಹೆಚ್ಚುವರಿಯಾಗಿ ಮನೆಯ ಹೊರಗಿನ ದುಡಿತ (ಇತರರ ಹೊಲ, ತೋಟ, ಮನೆಗಳಲ್ಲಿ) ಮಾಡುತ್ತಾಳೆ. ಚಮ್ಮಾರಿಕೆ, ಹೆಣಿಕೆ, ಬುಟ್ಟಿ ರಚನೆ ನೇಯ್ಯುವುದು ಮುಂತಾದ ಪಾರಂಪರಿಕ ವೃತ್ತಿಗಳಲ್ಲಿ ಗಂಡಿನೊಂದಿಗಿನ ಹೆಣ್ಣಿನ ಕೆಲಸವನ್ನು ಆಕೆಯಂತೆಯೇ ಅದೃಶ್ಯಗೊಳಿಸಲಾಗಿದೆ. ಇದರ ಜೊತೆಗೆ ಮಗುವನ್ನು ಹೊರುವ, ಹೆರುವ, ಬೆಳೆಸುವ ಜವಾಬ್ದಾರಿಯನ್ನು ಹೆಣ್ಣು ನಿರ್ವಹಿಸುತ್ತಾಳೆ.

ಹೀಗೆ ಮನೆಗೆ ಸಂಬಂಧಿಸಿದ ಈ ಚಟುವಟಿಕೆಗಳು ಆರ್ಥಿಕ ವ್ಯವಸ್ಥೆಯೊಂದಿಗೆ ಸಂಬಂಧಪಡದೆ ಇರುವುದರಿಂದ ಭೈರರಲ್ಲೂ ಇವು ಹೆಣ್ಣಿನ ಕೆಲಸಗಳಾಗಿವೆ ಮತ್ತು ಅನೇಕ ಸಂದರ್ಭಗಳಲ್ಲಿ ಅವು ಕೆಲಸಗಳೇ ಆಗಿಲ್ಲ. ಹೆಣ್ಣಿನ ಈ ಕೆಲಸಗಳನ್ನು ಗಂಡಸು ಮಾಡುವುದಿಲ್ಲ ಅಥವಾ ಈ ಕೆಲಸಗಳನ್ನು ಗಂಡು ಮಾಡುವುದು ಅಪಮಾನವೆಂದು ತಿಳಿಯಲಾಗುತ್ತದೆ. ಈ ಕೆಲಸಗಳನ್ನು ಗಂಡು ಮಾಡುವುದು ಬಹಳ ಬಾರಿ ನಿಷೇಧ ಎಂಬಂತೆ ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತದೆ. ಉದಾಹರಣೆಗೆ ಗಂಡು ಪೊರಕೆ ಹಿಡಿದರೆ ಮನೆಗೆ ದರಿದ್ರ, ಗಂಡಸು ಪೊರಕೆ ಮುಟ್ಟಿದರೆ ಅವನ ಆಯುಷ್ಯ ಕಡಿಮೆಯಾಗುತ್ತದೆ. ಗಂಡಸು ಒಲೆ ಮುಂದೆ ಕುಳಿತರೆ (ಅಡುಗೆ ಮಾಡಿದರೆ) ತರಡು ಇಳಿಯುತ್ತದೆ ಮುಂತಾದ ಮಿಥ್ಯೆಗಳನ್ನು ಸೃಷ್ಟಿಸಿ ಗಂಡಿನ ರಕ್ಷಣೆ ಮಾಡಲಾಗಿದೆ. ಮನೆಯಲ್ಲಿನ ಸಂಗ್ರಹ, ಉತ್ಪಾದನೆ, ವಿತರಣೆ ಈ ಮೂರು ಹಂತದ ಕೆಲಸಗಳು ಹೆಣ್ಣಿನ ಕೆಲಸಗಳಾಗಿದ್ದು ಮಾರಾಟದ ಹಂತದ ಸಾರ್ವಜನಿಕ ಕೆಲಸಗಳು ಗಂಡಿನದಾಗಿರುತ್ತವೆ. ಮತ್ತು ಅವು ಆರ್ಥಿಕ ವ್ಯವಸ್ಥೆಯೊಂದಿಗೆ ಸಂಬಮಧ ಹೊಂದಿರುತ್ತವೆ. ಗಂಡಿಗೆ ಗೌರವ ತರುವ ಈ ಕೆಲಸಗಳನ್ನು ಹೆಣ್ಣು ಮಾಡಿದಾಗ ಅದನ್ನು ಅಸಹಜವಾಗಿ ಪರಿಕಲ್ಪಿಸಲಾಗುತ್ತದೆ ಮತ್ತು ಹೆಣ್ಣನ್ನು ‘ಗಂಡುಬೀರಿ’ ಎನ್ನಲಾಗುತ್ತದೆ.

ಭೈರರ ಕೆಲವು ಮಹಿಳೆಯರಲ್ಲಿ “ನೀವು ಏನು ಕೆಲಸ ಮಾಡುತ್ತೀರಿ?” ಎಂಬ ಪ್ರಶ್ನೆಗೆ “ಕೂಲಿ ಗೀಲಿ ಇದ್ದರೆ ಮಾಡುವುದು, ಇಲ್ಲದಿದ್ದರೆ ಏನೂ ಕೆಲಸ ಮಾಡುವುದಿಲ್ಲ ಬರಿದೆ ಮನೆಯಲ್ಲಿ ಇರುವುದು” ಎಂದು ಉತ್ತರಿಸಿದರು. ಅದೇ ಹೊತ್ತಿಗೆ ಗಂಡಸರು ಮಾಡುವ ಕೆಲಸ ಬಹಳ ಕಷ್ಟಕರವಾದದ್ದು ಎನ್ನುವ ಭಾವನೆ ಆ ಹೆಂಗಸರಲ್ಲಿ ಇತ್ತು. “ನಿಮ್ಮ ಕೆಲಸ ಕಷ್ಟಕರವಲ್ಲವೇ?” ಎಂದಾಗ “ಇದೊಂದು ಕೆಲಸವಾ?…” ಎಂದು ನಗೆಯಾಡಿದರು. ನಮ್ಮ ಕೆಲಸದ ಪರಿಕಲ್ಪನೆ ಎಷ್ಟು ವಿಚಿತ್ರವಾಗಿದೆಯೆಂದರೆ ಬೌದ್ಧಿಕ ಕೆಲಸ ಶ್ರೇಷ್ಠವಾದದ್ದು, ದೈಹಿಕ ಕೆಲಸ ಕನಿಷ್ಠವಾದುದು ಎನ್ನುವ ತಿಳಿವಳಿಕೆಯನ್ನು ವ್ಯವಸ್ಥಿತವಾಗಿ ಗಟ್ಟಿಗೊಳಿಸುವುದೇ ಆಗಿದೆ. ಹೀಗಾಗಿಯೇ ಯಾವುದೇ ಸಂಸ್ಥೆ, ಕಛೇರಿಯೊಳಗೆ ಬೌದ್ಧಿಕ ಕರ್ಮಿಯೊಬ್ಬ ಪಡೆಯುವ ಹಣ, ಘನತೆ, ಗೌರವಗಳನ್ನು ಮನೆಯೊಳಗಿನ ದೈಹಿಕ ಶ್ರಮಜೀವಿ ಪಡೆಯುವುದು ಸಾಧ್ಯವಾಗಿಲ್ಲ. ವಾಸ್ತವಿಕವಾಗಿ ಯಾವುದೇ ಕೆಲಸವನ್ನು ಹೀಗೆ ಬೌದ್ಧಿಕ, ದೈಹಿಕ ಎಂದು ಒಡೆಯುವಿಕೆ ಸರಿಯಲ್ಲ. ಯಾಕೆಂದರೆ ಕೆಲಸವೊಂದು ಈ ಎರಡೂ ನೆಲೆಗಳ ಶ್ರಮದ ಒಗ್ಗೂಡುವಿಕೆಯಲ್ಲಿ ಸಾಧ್ಯವಾಗುವಂತಹುದು. ಅವುಗಳ ಪ್ರಮಾಣದಲ್ಲಿ ವ್ಯತ್ಯಯ ಇರಬಹುದಷ್ಟೆ. ಖಾಸಗಿ ಜಗತ್ತಿನೊಳಗೆ ಹೆಣ್ಣನ್ನು ನಿರಂತರ ದೈಹಿಕ ದುಡಿಮೆಗೆ ಹಚ್ಚುವ ಮೂಲಕ ಆಕೆಯ ಎಲ್ಲ ಬೌದ್ಧಿಕ ಚಿಂತನೆ ಮತ್ತು ಸೃಜನಶೀಲತೆಯನ್ನು ಹತ್ತಿಕ್ಕಲಾಯಿತು. ದಿನವೊಂದಕ್ಕೆ ಸರಾಸರಿ ಹನ್ನೆರಡರಿಂದ ಹದಿನಾಲ್ಕು ಗಂಟೆಗಳ ಕಾಲ ಕ್ರಿಯಾಶೀಲಳಾಗಿ ದುಡಿಯುವ ಹೆಣ್ಣನ್ನು ದುರ್ಬಲಗೊಳಿಸಿ, ಗಂಡಿನ ಬೌದ್ಧಿಕ ಶಕ್ತಿಯ ಪೂರ್ಣ ಹತೋಟಿಗೆ ಒಳಪಡಿಸಲಾಯಿತು. (ಗಾಯಿತ್ರಿ ನಾವಡ. ಪು. ೮೭, ೧೯೯೯)

ಗಂಡಿನ ಕೆಲಸವನ್ನು ಪ್ರಧಾನವಾಗಿ, ಹೆಣ್ಣಿನ ಕೆಲಸವನ್ನು ಗೌಣವಾಗಿ ಅಥವಾ ಅಲ್ಪವಾಗಿ ಕಾಣುವ ಗ್ರಹಿಕೆಯು ಇದೇ ಬಗೆಯದಾಗಿದೆ. ಭೂತಾರಾಧನಹೆಯಂತಹ ಮತಾಚಾರದ ಸಂದರ್ಭದಲ್ಲಿ ಭೂತಕಟ್ಟುವ ಗಂಡಿನ ಕುಣಿತ, ವೇಷಗಾರಿಕೆ ಮತ್ತು ಮಾತು, ಮುಖ್ಯವಾದ್ದನ್ನು ಸಿದ್ಧಪಡಿಸುವ ಆತನಲ್ಲಿ ದೈವ ಮೈದುಂಬುವಲ್ಲಿ ಪ್ರೇರಕವಾಗಿ ಪಾಡ್ದನ ಹಾಡುವ ಹೆಣ್ಣಿನ ಕೌಶಲ್ಯ ಹಾಗೂ ಕೆಲಸವನ್ನು ನಗಣ್ಯ ಎಂದು ಭಾವಿಸಲಾಗುತ್ತದೆ. ಕುಂಬಾರಿಕೆಯಲ್ಲಿ ಕುಲಾಲ ಚಕ್ರವನ್ನು ತಿರುಗಿಸುವ ಕೆಲಸ ಮತ್ತು ವ್ಯಕ್ತಿಯನ್ನು ಪ್ರಧಾನವಾಗಿ ಪರಿಕಲ್ಪಿಸಿದರೆ, ಉತ್ಪಾದನೆಯ ಹಿನ್ನೆಲೆಯಲ್ಲಿನ ಎಲ್ಲ ಹಂತಗಳಲ್ಲೂ ಕ್ರಿಯಾಶೀಲಳಾಗಿ ಭಾಗಿಯಾಗುವ ಆತನ ಹೆಂಡತಿಯ ಕಾರ್ಯವನ್ನು  ಉತ್ಪಾದಕಗಳಾಗಿ ಆತನಿಗೆ ಆರ್ಥಿಕ ಪ್ರತಿಫಲವನ್ನು ತರುವುದರೊಂದಿಗೆ ಆತ ಕುಲವೃತ್ತಿಯ ವಾರಸುದಾರನಾಗುತ್ತಾನೆ. ಆದರೆ ಚರ್ಮವನ್ನು ಶುಚಿಗೊಳಿಸುವಲ್ಲಿ, ಹದ ಮಾಡುವಲ್ಲಿ, ಒಣಗಿಸುವಲ್ಲಿ ಹೆಣ್ಣುಗಳ ದುಡಿತ ಕೆಲಸವಾಗುವುದಿಲ್ಲ. ಇದು ಎಲ್ಲ ಆಯಗಾರಿಕೆಯ ಸಂದರ್ಭದಲ್ಲೂ ಹೀಗೆ ಇರುತ್ತದೆ. ಕೃಷಿಕರ್ಮದ ಎಲ್ಲ ಹಂತಗಳಲ್ಲಿ ಗೊಬ್ಬರ ಹೊತ್ತು ಬಿಕ್ಕುವ, ಬೀಜ ಬಿತ್ತುವ, ನಾಟಿ ಮಾಡುವ, ಕಳೆ ಕೀಳುವ, ಕೊಯಿಲು ಮಾಡುವ, ಅಂಗಣದ ಕೆಲಸಗಳಾದ ಹೊಡೆಯುವ, ಬಡಿಯುವ, ಕಟ್ಟುವ, ಶುಚಿಗೊಳಿಸುವ ಹಾಗೂ ಬೀಜ ಸಂಸ್ಕರಣದಂತಹ ಹೆಣ್ಣಿನ ಎಲ್ಲ ಕೆಲಸಗಳು ಅಂಚಿಗೆ ಸೇರಿಹೋಗುತ್ತವೆ. ಈ ಎಲ್ಲ ಹಂತಗಳಲ್ಲೂ ಕಾಣೆಯಾಗಿದ್ದ ಗಂಡು, ಉತ್ಪನ್ನದ ಮಾರಾಟದ ಹಂತದಲ್ಲಿ ಪ್ರತ್ಯಕ್ಷನಾಗುತ್ತಾನೆ. ಹೀಗೆ ಆರ್ಥಿಕ ಜಗತ್ತಿನಲ್ಲಿ ಕಾಣಿಸುವ ಗಂಡನ ಕೆಲಸ ಮುಖ್ಯವಾಗುತ್ತದೆ.

ಭೈರರಲ್ಲೂ ಹೆಣ್ಣನ್ನು ಶೌಚ, ಅಶೌಚದ ಪರಿಕಲ್ಪನೆಯಲ್ಲಿ ಮೈಲಿಗೆಯಾಗಿ ನರ್ವಚಿಸಲಾಗುತ್ತದೆ. ಅಲ್ಲದೆ ಗಂಡು ಮಾಡುವ ಅನೇಕ ಕೆಲಸ ಮತ್ತು ಕ್ಷೇತ್ರದಿಂದ ಆಕೆಯನ್ನು ಹೊರಗಿರಿಸಿ ಗಂಡಿನ ವೀರ್ಯಸ್ರಾವ ಅವನ ಪುರುಷತ್ವವನ್ನು ಸಾಬೀತುಪಡಿಸಿ ಇದು ಗಂಡಸಿನ ಕೆಲಸ ಎಂದು ಗೌರವ ತಂದಿಡುತ್ತಾರೆ. ಅದೇ ಹೆಣ್ಣಿನ ಮಾಸಿನ ಸ್ರಾವ ಆಕೆಯ ಪಾವಿತ್ಯ್ರ ನಾಕ್ಕೆ ಕಾರಣವಾಗಿ ಅಶೌಚಳಾಗುತ್ತಾಳೆ. ಹೆಣ್ಣಿನ ಪ್ರಜನನ ಶಕ್ತಿಯನ್ನು ಉತ್ಪಾದನಾ ಪ್ರಕ್ರಿಯೆಯಾಗಿ ತಿಳಿಯದೆ ಆ ಇಡಿಯ ಕಾಲಾವಧಿಯನ್ನೇ ಅಶೌಚಗೊಳಿಸಿ ಹೆಣ್ಣನ್ನು ಅಗೋಚರಗೊಳಿಸಲಾಗಿದೆ. ನಿಸರ್ಗ ಕ್ರಿಯೆಯಾದ ಮುಟ್ಟು ಸಾಮಾಜಿಕ, ಧಾರ್ಮಿಕ ಸಂದರ್ಭಗಳಲ್ಲಿ ಹೆಣ್ಣಿನ ಕೆಲಸದ ಮೇಲೆ ಬೀರುವ ಪರಿಣಾಮವನ್ನು ಅರಿಯಬಹುದಾಗಿದೆ. ಭೈರರ ಸಮಾಜದಲ್ಲಿ ಹೆಣ್ಣಿನ ಕೆಲಸದ ವಿನ್ಯಾಸ ಮತ್ತು ಪ್ರಮಾಣಗಳು ಪ್ರಧಾನ. ಅಧೀನ ಮಾದರಿಗೆ ಅನುಕೂಲವಾಗಿಯೇ ಇವೆ.

ವಿಶ್ವದ ಒಟ್ಟು ದುಡಿಮೆಯ ಮೂರನೆಯ ಎರಡರಷ್ಟು ದುಡಿಮೆ ಮಹಿಳೆಯರಿಂದ ಆಗುತ್ತದೆ. ಆದರೆ ಜಗತ್ತಿನ ಒಟ್ಟು ಉತ್ಪನ್ನದ ಹತ್ತನೆ ಒಂದರಷ್ಟು ಮಾತ್ರ ಆಕೆ ಪಡೆಯುತ್ತಾಳೆ. ಸಾಮಾನ್ಯವಾಗಿ ಭೈರರಲ್ಲೂ ಹೆಣ್ಣೊಬ್ಬಳು ಸುಮಾರು ಹನ್ನೆರಡು ಗಂಟೆಗಳ ಕಾಲ ತನ್ನ ಮನೆಯಲ್ಲಿ ದುಡಿಯುತ್ತಾಳೆ. ಆದರೂ ಆಕೆ ಕಾರ್ಮಿಕಳಾಗಿ ಪರಿಗಣಿತಳಾಗಿಲ್ಲ ಮತ್ತು ಪುರುಷನೊಬ್ಬನು ಪಡೆಯುವ ಯಾವ ಸಲಭ್ಯವೂ ಆಕೆಗೆ ಸಿಗುತ್ತಿಲ್ಲ. ಈ ದುಡಿಮೆಯನ್ನು ಆಕೆ ಹೊಟ್ಟೆ, ಬಟ್ಟೆಗೆ ಹೊರತು ಬಿಟ್ಟಿಯಾಗಿ ಮಾಡುತ್ತಾಳೆ. ಹೆಣ್ಣಿನ ಈ ದುಡಿಮೆಗೆ ಮೌಲ್ಯ ನಿರ್ಧಾರ ಮಾಡಿದರೆ ಬಹುಶಃ ಅದು ಅವಳ ಗಂಡನ ಆದಾಯಕ್ಕೆ ಸರಿಯಾಗಬಹುದು. ಅಥವಾ ಅನೇಕ ಬಾರಿ ಅದನ್ನು ಮೀರಬಹುದು. ಗೃಹಿಣಿಯೊಬ್ಬಳ ದುಡಿಮೆಯನ್ನು ಹೀಗೆ ವ್ಯಾವಹಾರಿಕ ನೆಲೆಯಲ್ಲಿಟ್ಟು ಮಾತನಾಡುವುದು ತನ್ನವರೇ ಆದ ಗಂಡ, ಮಕ್ಕಳು ಹಾಗೂ ಕುಟುಂಬಕ್ಕಾಗಿ ಎನ್ನಬಹುದು. ಇದು ಮೇಲುನೋಟಕ್ಕೆ ನಿಜ ಅನ್ನಿಸುತ್ತದೆ ಕೂಡಾ. ಆದರೆ ಹೀಗೆ ಅಂದುಕೊಳ್ಳುವುದು ವಿಷಯವನ್ನು ತೀರಾ ಸರಳವಾಗಿ ಗ್ರಹಿಸಿದಂತಾಗುತ್ತದೆ. ಇಲ್ಲಿನ ಸೂಕ್ಷ್ಮವನ್ನು ವಿಚಾರ ಮಾಡಿದರೆ ಹೆಣ್ಣೊಬ್ಬಳ ಈ ಉಚಿತ ಶ್ರಮಶಕ್ತಿಯ ಲಾಭ ಪಡೆಯುವವರು ಆಕೆಯ ಗಂಡು ಮಕ್ಕಳು, ಕುಟುಂಬವಲ್ಲ. ಆಕೆಯ ಗಂಡ ದುಡಿಯುವ ಮಾಲಿಕರು, ಯಾಕೆಂದರೆ ಹೆಣ್ಣಿನ ಬಿಟ್ಟಿ ದುಡಿಮೆ. ಗಂಡನೊಬ್ಬನು ಕಡಿಮೆ ಸಂಬಳಕ್ಕೆ ಒಪ್ಪಿಕೊಳ್ಳುವಂತೆ ಮಾಡುತ್ತದೆ. ಹೀಗೆ ಆತನ ಕಡಿಮೆ ಸಂಬಳದ ಮನಸ್ಥಿತಿಯ ಲಾಭ ಮಾಲೀಕರಿಗೆ ಸಲ್ಲುತ್ತದೆ. ಕುಟುಂಬ ಸತಿತ್ವ, ಮಾತೃತ್ವದಂತಹ ಆದರ್ಶಗಳು ಹೆಣ್ಣನ್ನು ಲಿಂಗಸಾಪೇಕ್ಷ ಕೆಲಸಗಳೊಂದಿಗೆ ಇಡುವಲ್ಲಿ ದುಡಿಯುತ್ತವೆ. ಅಷ್ಟೇ ಅಲ್ಲ, ಪರ್ಯಾಯವಾಗಿ ಬಂಡವಾಳಶಾಹೀ ವ್ಯವಸ್ಥೆಯನ್ನು ಪೋಷಿಸುತ್ತವೆ. ಹಾಗಾಗಿಯೇ ಹೆಣ್ಣಿನ ದುಡಿಮೆಯನ್ನು ‘ಕೆಲಸ’ವಾಗಿ ಕಾಣುವ ಅಗತ್ಯಕ್ಕಾಗಿ ಒತ್ತಾಯ ತರಬೇಕಾಗಿದೆ.

“ಅನೇಕ ಸ್ತ್ರೀವಾದಿಗಳು ಹೇಳುವಂತೆ ಭೌತಿಕ ವಸ್ತು ಪ್ರಪಂಚದ ಕಾರ್ಯಗಳಷ್ಟೇ ಉತ್ಪಾದನೆಯಲ್ಲ. ಹೆಣ್ಣು ಜೀವವಿಕಾಸಕ್ಕೆ ನೀಡುವ ಸಂತತಿ ಕೂಡಾ ಉತ್ಪಾದನೆಯ ಅರ್ಥವನ್ನು ಪಡೆಯುವಂತಾಗಬೇಕು. ಆರ್ಥಿಕ ಉತ್ಪಾದನೆಗೆ ನೀಡಿರುವ ಅತಿಯಾದ ಮಹತ್ವ, ಆರ್ಥಿಕತೆಯ ಆಚೆಗೆ ಜೀವನಾವಶ್ಯಕವಾದ ಕೆಲಸವಿದೆ ಎನ್ನುವ ಪರಿಕಲ್ಪನೆಯನ್ನು ಒಪ್ಪದಿರುವ ಮನೋಭಾವವನ್ನು ಮರುವಿಮರ್ಶೆಗೆ ಒಡ್ಡಬೇಕಾಗಿದೆ. ಇಲ್ಲಿ ಎಡ ಚಿಂತನ ಧೋರಣೆಗಳು ಲಿಂಗನೆಲೆಯಲ್ಲಿ ನಡೆಯುವ ಹೆಣ್ಣಿನ ಶೋಷಣೆಯನ್ನು ನಿರ್ವಚಿಸಲು ಸಾಕಾಗದು. ಯಾಕೆಂದರೆ ಅದಕ್ಕೆ ಲೈಂಗಿಕ ಆಯಾಮವಿಲ್ಲ. ಹೀಗಾಗಿ ‘ಸ್ತ್ರೀ-ಪುರುಷ’ ಅಸಮಾನತೆಯನ್ನು ವರ್ಗಸಂಘರ್ಷದಿಂದ ಬೇರೆಯಾಗಿಯೇ ನೋಡಬೇಕು. ಯಾಕೆಂದರೆ ವರ್ಗ ಸಂಘರ್ಷಕ್ಕೆ ಜೈವಿಕ ಕಾರಣಗಳೇನೂ ಇಲ್ಲ.” (ಬೋವಾ ರಾಮಚಂದ್ರನ್‌ಉದ್ದೃತ ೧೯೯೬:ಪು.೧೦೬) ಹಾಗಾಗಿಯೇ ಪ್ರತಿಯೊಬ್ಬ ಗರಿಷ್ಟ ಶೋಷಿತನೂ ಲಿಂಗವ್ಯವಸ್ಥೆಯಲ್ಲಿ ಸ್ತ್ರೀಯ ಶೋಷಣೆಯನ್ನು ಮಾಡುತ್ತಾನೆ. ಭೈರರಲ್ಲೂ ದುಡಿಯುವ ವರ್ಗದ ಹೆಣ್ಣುಗಳು ಇತರ‍ಹೆಣ್ಣುಗಳಿಗಿಂತ ಹೆಚ್ಚು ದನಿಯುಳ್ಳವರು ಎನ್ನುವ ಎಡಪಂಥೀಯ ನಿಲುವನ್ನು ಒಪ್ಪಿಕಿಂಡು ಆಧುನಿಕ ಸಂದರ್ಭದಲ್ಲಿ ಹೆಣ್ಣಿನ ಮೇಲಿನ ಗಂಡಿನ ಪ್ರಭುತ್ವ ಮತ್ತು ಅಧಿಕಾರಗಳನ್ನು ಆರ್ಥಿಕ ನೆಲೆಯಲ್ಲಷ್ಟೇ ಅರ್ಥೈಸುವುದು ಸಾಧ್ಯವಾಗದು. ಯಾಕೆಂದರೆ ಆಥಿðಕತೆಯ ಆಚೆಗೆ ಗಂಡು, ಹೆಣ್ಣಿನ ಅಧಿಕಾರಸಂಬಂಗಳಿರುತ್ತವೆ. ಹೀಗಾಗಿಯೇ ಶ್ರಮಿಕ ಕುಟುಂಬದ ದುಡಿಯದ ಗಂಡ ಮನೆಯ ಯಜಮಾನನಾಗಿಯೇ ಇರುತ್ತಾನೆ ಮತ್ತು ದುಡಿಯುವ ಹೆಂಡತಿಯನ್ನು ಹೊಡೆಯುವಷ್ಟು ಅಧಿಕಾರವನ್ನು ಹೊಂದಿರುತತಾನೆ ಎಂಬ ಸತ್ಯಗಳು ನಮ್ಮ ಮುಂದಿರುವುದು, ಈ ಹೆಣ್ಣಿನ ದುಡಿತದ ಪ್ರತಿಫಲ ಗಂಡಿನ ಕುಡಿತಕ್ಕೆ ಪೂರೈಕೆಯಾಗುವ ಸಂದರ್ಭದಲ್ಲಿಯೂ ಆಕೆಯನ್ನು ಗುರುತಿಸುವುದು ಸಾಧ್ಯವಾದರೆ ಲಿಂಗನೆಲೆಯಲ್ಲಿನ ಆಕೆಯ ಶೋಷಣೆಯನ್ನು ಗ್ರಹಿಸಬಹುದು. (ಗಾಯತ್ರೀ ನಾವಡ ೧೯೯೨).

ಭೈರರ ಸಮಾಜದಲ್ಲೂ ಸ್ತ್ರೀಯು ಪುರುಷಕೇಂದ್ರಿತ ಚಿಂತನೆಯಿಂದ ಬಿಡುಗಡೆಗೊಳ್ಳದಿರುವ ನಿಲುವನ್ನು ಅವರ ಕೆಲಸದ ಪರಿಕಲ್ಪನೆಯ ಹಿಂದಿರುವ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ, ಅಧಿಕಾರ ಸಂಬಂಧಗಳ ಮೂಲಕ ಅರಿಯಬಹುದು. ಅದು ಪುರುಷಶಕ್ತಿ ಕೇಂದ್ರದಿಂದ ಪಲ್ಲಟವಾಗದಿರುವ ಸಾಧ್ಯತೆಯ ಚಿತ್ರಣ. ಇಲ್ಲಿ ಹೆಣ್ಣಿನ ಕೆಲಸವು ಕರ್ತವ್ಯವಾಗದೆ, ಕೆಲಸವಾಗಬಲ್ಲದು ಮತ್ತು ಕೆಲಸ ಪಡೆಯುವ ಎಲ್ಲ ಆದರ, ಗೌರವಗಳು ಗಂಡಿನ ಪ್ರಭುತ್ವವನ್ನು ಮೀರುವುದಕ್ಕೆ ಸಾಧ್ಯವಾಗದ ಚಿತ್ರಣವನ್ನೇ ಪ್ರತಿನಿಧಿಸುತ್ತದೆ.

ಕುಟುಂಬ ಮತ್ತು ಮಹಿಳೆಯ ಸ್ಥಾನ:

ಕುಟುಂಬ ಪುರುಷನಿಗಿಂತ ಮಹಿಳೆಗೆ ಹೆಚ್ಚು ಮಹತ್ವಪೂರ್ಣವಾಗುತ್ತದೆ. ಮಹಿಳೆಗೆ ಸಂಬಂಧಿಸಿದ ಯಾವುದೇ ಚರ್ಚೆ ಕುಟುಂಬವನ್ನು ಹೊರತುಪಡಿಸಿ ನಡೆಯುವುದು ಅಸಾಧ್ಯ. ಕಾರಣ ಅವಳ ಎಲ್ಲಾ ಚಟುವಟಿಕೆಗಳು ಕುಟುಂಬದ ಪರಿಧಿಯಲ್ಲೇ ಹೆಚ್ಚಾಗಿ ನಡೆಯುತ್ತವೆ. ಅವಳ ಬದುಕಿಲ್ಲ ಎಂದ ಮೇಲೆ ಮಹಿಳೆಯನ್ನು ಕುರಿತ ಯಾವುದೇ ಅಧ್ಯಯನ ಕುಟುಂಬದ ಅಧ್ಯಯನದೊಂದಿಗೆ ಆರಂಭವಾಗಬೇಕಾದುದು ಅನಿವಾರ್ಯವಾಗಿದೆ.

ಪಿತೃವಂಶೀಯ ಕುಟುಂಬ:

ಭೈರರ ಕುಟುಂಬವೆಂದರೆ ಮೂರು ಪೀಳಿಗೆಗಳಿಗೆ ಸೇರಿದ, ಒಂದೇ ಸೂರಿನಡಿ ವಾಸಿಸುವ, ಸಹಪಂಕ್ತಿ ಭೋಜನಮಾಡುವ ವ್ಯಕ್ತಿಗಳನ್ನು ಹೊಂದಿರುತ್ತದೆ. ಇವರೆಲ್ಲ ಪುರುಷರ ಸಂಬಂಧಿಗಳು. ಅವರ ಪತ್ನಿಯರು, ಮಕ್ಕಳು, ಅವಿವಾಹಿತ ಹೆಣ್ಣುಮಕ್ಕಳೂ ಆಗಿರುತ್ತಾರೆ. ಇಲ್ಲಿ ಒಂದೇ ಆಯ-ವ್ಯಯ ಪಟ್ಟಿ, ಒಂದೇ ವಾಸದ ಮನೆ, ಜಂಟೀ ಒಡೆತನದ ಆಸ್ತಿ, ಕುಟುಂಬದ ಒಂದೆಡೆ ಕ್ರೋಢೀಕರಣಗೊಂಡಿರುವ ಕುಶಲ ಶ್ರಮಿಕರು ಮತ್ತು ಸಂಪನ್ಮೂಲಗಳು ಕಂಡುಬರುತ್ತವೆ. ಒಂದೇ ಹೆಸರು, ಕುಲ, ಪೂರ್ವಜರ ಪೂಜೆ,ಒಂದೇ ದೇವರು, ಧಾರ್ಮಿಕ ಸಂಸ್ಕಾರಗಳು, ಹುಟ್ಟು ಸಾವಿನಲ್ಲಿ ಮಡಿಮೈಲಿಗೆಯ ಆಚರಣೆಗಳು, ಮುಂತಾದವುಗಳಿರುತ್ತವೆ. ಭೈರರು ಪಿತೃಸ್ಥಳೀಯ ಕುಟುಂಬಗಳಲ್ಲಿ ಮಗುವನ್ನು ತಂದೆಯ ವಾರಸುದಾರ, ವೃದ್ಧಾಪ್ಯದಲ್ಲಿ ಆಶ್ರಯದಾತ, ಕುಟುಂಬದ ಘನತೆ-ಗೌರವಗಳನ್ನು ಕಾಪಾಡುವವನು, ಸಂಪತ್ತನ್ನು ವೃದ್ಧಿಸುವವನು, ವಂಶವನ್ನು ಮುಂದುವರೆಸುವವನು ಎಂದು ಭಾವಿಸಲಾಗುತ್ತದೆ. ಮಗ ತನ್ನ ತಂದೆಯ ಚಿತೆಗೆ ಬೆಂಕಿ ಇಡುವ ಮೂಲಕ ಅವನನ್ನು ‘ಪುತ್‌’ ಎಂಬ ನರಕದಿಂದ ಪಾರುಮಾಡಿ ಸ್ವರ್ಗಕ್ಕೆ ಸೇರಿಸುತ್ತಾನೆ ಎಂಬ ನಂಬಿಕೆ ಇದೆ. ಇದು ಕುಟುಂಬದಲ್ಲಿ ಮಗನಿಗೆ ಇರುವ ವಿಶೇಷ ಸ್ಥಾನಮಾನಗಳನ್ನು ಸೂಚಿಸುತ್ತದೆ.

ಈ ಹಿನ್ನೆಲೆಯಲ್ಲಿ ಮಗಳಾಗಿ ಹೆಣ್ಣು ತನ್ನ ಹೆತ್ತವರ ಮನೆಯಲ್ಲಿ ಯಾವುದೇ ಸ್ಥಾನವನ್ನು ಹೊಂದಿರುವುದಿಲ್ಲ. ಅವಳ ಸ್ಥಾನ ಪತಿಯ ಮನೆಯಲ್ಲಿ ಮಾತ್ರ. ಹುಟ್ಟಿದ ಮನೆಯಲ್ಲಿ ಪೋಷಿತನು, ರಕ್ಷಿಸಿ ಪರರಿಗೆ ಒಪ್ಪಿಸಬೇಕಾದ ವಸ್ತುವಾಗಿರುತ್ತಾಳೆ. ಮಗಳನ್ನು ಪೋಷಿಸುವುದೆಂದರೆ ಬೇರೊಬ್ಬರ ಮನೆಯ ಕಂಪೌಂಡಿನಲ್ಲಿರುವ ಗಿಡಕ್ಕೆ ಗೊಬ್ಬರ ಹಾಕಿ ನೀರೆರೆದಂತೆ ಎಂಬ ಭಾವನೆ ಅವಳಿಗೆ ಕೊಡುವ ಆಹಾರ, ಶಿಕ್ಷಣ, ವೈದ್ಯಕೀಯ ಉಪಚಾರ, ಆಸ್ತಿಹಕ್ಕು, ಸಾಮಾಜೀಕರಣ ಮುಂತಾದ ವಿಷಯಗಳಲ್ಲಿ ವ್ಯಕ್ತವಾಗುತ್ತದೆ. ಕುಟುಂಬದಲ್ಲಿ ಅವಳ ಆಗಮನ ಎಲ್ಲರೂ ಬಯಸಿದುದಾಗಿರುವುದಿಲ್ಲ. ಎಲ್ಲರಿಗೂ ಸಂತಸ ತರುವುದಿಲ್ಲ.

“ಪರರ ಮನೆಯ ಒಡೆವೆ”ಯಾದ ಹೆಣ್ಣು ಮಗುವಿನ ಸಾಮಾಜೀಕರಣ ಮತ್ತು ತರಬೇತಿಗಳು, ಹುಟ್ಟಿದ ಮನೆಯಲ್ಲೇ ಶಾಶ್ವತ ನೆಲೆಯನ್ನು ಹೊಂದಿರುವ ವಂಶೋದ್ಧಾರಕನಾದ ಮಗನ ಸಾಮಾಜೀಕರಣ ಮತ್ತು ತರಬೇತಿಗಿಂತ ಭಿನ್ನವಾಗಿವೆ. ಹೆಣ್ಣು ಮಗುವಿನ ಸಾಮಾಜೀಕರಣದಲ್ಲಿ ಹೊಂದಾಣಿಕೆಯ ಗುಣಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ವಿನಯ, ವಿಧೇಯತೆ, ಸಹನೆ, ಪ್ರೇಮ, ಪ್ರೀತಿ, ವಿಶ್ವಾಸಗಳ ಸಾಕಾರಮೂರ್ತಿಯೇ ಹೆಣ್ಣೆಂಬಂತೆ ಬೋಧಿಸಲಾಗುತ್ತದೆ. ಲೈಂಗಿಕ ಜೀವನ ಮತ್ತು ಅದಕ್ಕೆ ಸಂಬಂಧಿಸಿದ ಪಾತ್ರಗಳಿಗೆ ತರಬೇತಿ ನೀಡುವಾಗ ಅವಳು ಎದುರಿಸಬೇಕಾದ ಸಮಸ್ಯೆಗಳು, ಅನಿಶ್ಚಿತತೆಗಳ ಬಗ್ಗೆ ನೆನಪಿಸಲಾಗುತ್ತದೆ. ಅವಳ ಸೇವೆ ಮತ್ತು ಪ್ರೀತಿ ಇನ್ನೊಂದು ಮನೆಗೆ ಮೀಸಲು. ಅಂಥ ಮನೆಯೊಂದಕ್ಕೆ ಅವಳನ್ನು ಸೇರಿಸುವ ಹೊಣೆಗಾರಿಕೆ ಮಾತ್ರ ತಂದೆಯದು. ಅನಂತರದ ಆಗುಹೋಗುಗಳಿಗೆ ತವರ್ಮನೆ ಹೊಣೆಯಲ್ಲೆಂಬ ಉಕ್ತಿಯ ಮೂಲಕ ಸ್ಪಷ್ಟಪಡಿಸಲಾಗುತ್ತದೆ. ತರಬೇತಿಯಲ್ಲೂ ಕೂಡಾ ಅವಳು ಮುಂದೆ ವಹಿಸಬೇಕಾದ ಸೊಸೆ, ಹೆಂಡತಿ, ತಾಯಿಯ ಪಾತ್ರಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಅದಕ್ಕೆ ಅಗತ್ಯವಾದ ಜವಾಬ್ದಾರಿಗಳನ್ನು ಬಾಲ್ಯದಿಂದಲೇ ವಹಿಸಿಕೊಡಲಾಗುತ್ತದೆ. ಒಟ್ಟಿನಲ್ಲಿ ಹೆಣ್ಣು ತನ್ನ ಬಾಲ್ಯದಿಂದಲೇ ಪರರ ಮನೆಗೆ ಹೋಗಲು ಸಿದ್ಧತೆಗಳನ್ನು ನಡೆಸಿರುತ್ತಾಳೆ. ಗಂಡಿಗಿಂತ ಹೆಚ್ಚು ಜವಾಬ್ದಾರಿಗಳನ್ನು ಹೊರುತ್ತಾಳೆ. ಅವಳಿಗೆ ದೊರಕುವ ಕಡಿಮೆ ಸಮಯಾವಧಿಯಲ್ಲಿಯೇ ಸಿದ್ಧತೆಗಳು ಪರಿಪೂರ್ಣವಾಗಬೇಕಾದ ಅಗತ್ಯವಿರುತ್ತದೆ. ಇಲ್ಲವಾದಲ್ಲಿ ಪರರ ಮನೆಯವರ ಅವಹೇಳನಕ್ಕೆ ಗುರಿಯಾಗಬೇಕಾಗುತ್ತದೆ. ಮಹಿಳೆ ವಿವಾಹದ ನಂತರ ಅಪರಿಚಿತ ಕುಟುಂಬವೊಂದಕ್ಕೆ ಪ್ರವೇಶ ಪಡೆಯುತ್ತಾಳೆ. ಇದು ಅಪರಿಚಿತವೆನ್ನಲು ಕಾರಣ, ಭಾರತದಲ್ಲಿ ವಿವಾಹದಲ್ಲಿ ಗಂಡು-ಹೆಣ್ಣಿನ ಆಯ್ಕೆಯ ಹಲವು ಮಾದಿರಗಳಿವೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹಿರಿಯರು, ಕುಟುಂಬದ ಹಿರಿಯರು, ಹೆಣ್ಣು-ಗಂಡಿನ ತಂದೆ-ತಾಯಂದಿರು ತಮ್ಮ ಮಕ್ಕಳ ವಿವಾಹಕ್ಕೆ ಮುನ್ನ ಪರಸ್ಪರರನ್ನು ನೋಡಿರುವ ಸಾಧ್ಯತೆ ಇರುವುದಾದರೂ ನಿಕಟಸಂಪರ್ಕ ಹೊಂದುವ ಅವಕಾಶವಿರುವುದಿಲ್ಲ. ಇಂಥ ವಿವಾಹಗಳಲ್ಲಿ ಕುಟುಂಬದ ಸಾಮಾಜಿಕ ಸ್ಥಾನಮಾನಗಳು, ಹಾಗೆಯೇ ಗಂಡಿನ ಶಿಕ್ಷಣ, ಉದ್ಯೋಗ, ಕುಟುಂಬದ ಆರ್ಥಿಕ ಪರಿಸ್ಥಿತಿ, ಹಿನ್ನೆಲೆ ಮುಂತಾದವುಗಳು ಸಂಬಂಧ ಕುದುರಿಸುವ ಅಂಶಗಳಾಗುತ್ತವೆ. (ಅದೇ ಪುಟ ೧೧೨)

ಭೈರರಲ್ಲಿ ಮಹಿಳೆಯೊಬ್ಬಳು ತನ್ನ ವೈವಾಹಿಕ ಜೀವನವನ್ನು ಸ್ವತಂತ್ರವಾಗಿ ಆರಂಭಿಸುವುದು ಅಪರೂಪ. ಪತಿ ತನ್ನ ತಂದೆ-ತಾಯಿಗಳಿಂದ ದೂರವಾಗಿ ನೆಲೆಸಿದ್ದರೂ ಸಹ ಅವಳು ಮೊದಲಿಗೆ ಅವನ ತಂದೆ-ತಾಯಿಗಳಿರುವ ಮನೆಯನ್ನೇ ಪ್ರವೇಶಿಸಬೇಕು. ವಿವಾಹದ ಕೆಲವು ವರ್ಷಗಳು ಅವಳು ಸೊಸೆಯ ಪಾತ್ರಕ್ಕೆ ಅನ್ವಯಿಸುವ ಕೆಲವು ನೀತಿ-ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಲವು ನಿರ್ಬಂಧಗಳಿಗೊಳಪಡಬೇಕಾಗುತ್ತದೆ. ಅವಿಭಕ್ತ ಕುಟುಂಬಗಳಲ್ಲಿ ಸೊಸೆ ನೇರವಾಗಿ ಅತ್ತೆಯ ಅಧೀನದಲ್ಲಿರುತ್ತಾಳೆ. ತಮ್ಮ ಪೀಳಿಗೆಯ ಮುಂದುವರಿಕೆಗೆ ಕಾರಣಳಾಗುತ್ತಾಳೆಂದು ಆ ಮನೆಯಲ್ಲಿ ಅವಳಿಗೆ ಸ್ವಾಗತ ದೊರಕುತ್ತದಾದರೂ ಅವಳಿಗೆ ಅಲ್ಲಿ ದೊರಕುವ ಹಕ್ಕುಗಳು ಕಡಿಮೆಯೇ. ಅವಳು ಕಡಿಮೆ ದರ್ಜೆಯ ಸದಸ್ಯಳೇ ಆಗಿರುತ್ತಾಳೆ. ಅವಳು ಆ ಕುಟುಂಬದವರೊಂದಿಗಿನ ಸಂಬಂಧಗಳ ಮೂಲಕ ಪ್ರೀತಿ-ವಿಶ್ವಾಸಗಳನ್ನು, ಸ್ಥಾನ-ಮಾನಗಳನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ತಪ್ಪಿದಲ್ಲಿ ತನ್ನ ಸ್ಥಾನವನ್ನು ಇನ್ನೊಬ್ಬಳಿಗೆ ಬಿಟ್ಟು ಕೊಡಲು ಅಥವಾ ಅಲ್ಲಿಯೇ ಇದ್ದು ಮತ್ತಷ್ಟು ಕೆಳಸ್ಥಾನವನ್ನು ಪಡೆಯಲು ಸಿದ್ಧಳಾಗಬೇಕಾಗುತ್ತದೆ.

ಮಹಿಳೆಯೊಬ್ಬಳಿಗೆ ತನ್ನ ಪತಿಯ ಮನೆಯಲ್ಲಿ ದೊರಕುವ ಸ್ಥಾನಮಾನ ಇನ್ನೂ ಕೆಲವು ಅಂಶಗಳಿಂದ ನಿರ್ಧರಿತವಾಗುತ್ತವೆ. ಅವೆಂಧರೆ,

೧. ಸಮಾಜದಲ್ಲಿ ಅವಳನ್ನು ಹೆತ್ತವರ ಸ್ಥಾನಮಾನ

೨. ಪತಿಯ ಉದ್ಯೋಗ – ಸಾಮಾಜಿಕ ಸ್ಥಾನಮಾನ

ಮಹಿಳೆ ತಾಯ್ತನಕ್ಕೇರಿದಂತೆ, ಅತ್ತೆ ಇಳಿವಯಸ್ಸಿನವಳಾದಂತೆ ಸೊಸೆಯಾಗಿ ತಾನು ಪಡೆಯದಿದ್ದ ಕೆಲವು ನಿರ್ಧಾರ, ಹಕ್ಕುಗಳನ್ನು ಪಡೆಯುತ್ತಾಳೆ. ಅವಳ ಸ್ಥಾನ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಾ ಹೋಗುತ್ತದೆ.

ಭೈರರ ಮಹಿಳೆ ತಾನು ಪಡೆಯುವ ಮಕ್ಕಳ ಮೇಲೆ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಅದೇನಿದ್ದರೂ ಆ ಹಕ್ಕು ಪತಿಯದೇ ಆಗಿರುತ್ತದೆ. ಪತಯ ಮನೆಯಲ್ಲಿ ತಾನು ದುಡಿಯುತ್ತಾಳಾದರೂ ಅವಳಿಗೆ ಅಲ್ಲಿಯ ಆಸ್ತಿಯ ಮೇಲಿನ ಹಕ್ಕಾಗಲಿ, ಸಂಪನ್ಮೂಲಗಳ ಮೇಲಿನ ಹಿಡಿತವಾಗಲಿ ಇರುವುದಿಲ್ಲ. ಅವಳಿಗಿರುವುದು ಅಲ್ಲಿ ಬದುಕುವ ಹಕ್ಕು ಮಾತ್ರ, ಅದೂ ಕೂಡಾ ಆ ಕುಟುಂಬದವರು ಬಯಸಿದಲ್ಲಿ ಮಾತ್ರ, ಇಲ್ಲವಾದರೆ ತನ್ನ ತವರಿಗೆ ಮರಳಬೇಕಾಗುತ್ತದೆ. ಅಲ್ಲಿಯೂ ಬೇಡವಾಗಿ, ವಿಧವೆಯೊಬ್ಬಳು ಮಾತ್ರ ತನ್ನ ಪತಿಯ ಆಸ್ತಿಯ ಮೇಲಿನ ಹಕ್ಕು ಹೊಂದಿರುತ್ತಾಳೆ. ಅದು ತಾನು ಮರುವಿವಾಹವಾಗಿದ್ದಲ್ಲಿ ಮಾತ್ರ ಸಾಧ್ಯವಾಗುತ್ತದೆ. ಮಕ್ಕಳು ಬೆಳೆದಂತೆ ಅದು ಮತ್ತೆ ಅವಳ ಕೈ ಜಾರಿ ಗಂಡು ಮಕ್ಕಳಿಗೆ ವರ್ಗಾವಣೆಯಾಗುತ್ತದೆ.