ಗಾದೆ:

ಗಾದೆ ನಿತ್ಯ ಬದುಕಿನೊಂದಿಗೆ ಒಡಬೆರೆತಿರುವ ಜನಪದ ಪ್ರಕಾರವಾಗಿದ್ದು ಮಾತಿನ ಅವಿಭಾಜ್ಯ ಅಂಗವಾಗಿ ಬಳಕೆಯಾಗುತ್ತದೆ. ಸಂಸ್ಕೃತಿಯೊಂದರ ಸಾಮಾಜಿಕ ನಿಯಮಗಳು, ಸಾಂಸ್ಕೃತಿಕ ನಂಬಿಕೆಗಳು, ಮಾನವ ಬದುಕಿನ ನಿರೀಕ್ಷೆಗಳು ಗಾದೆಗಳಲ್ಲಿ ಪ್ರತಿಬಿಂಬಿತಗೊಳ್ಳುತ್ತವೆ. ಇಂತಹ ನಂಬಿಕೆ-ನಡವಳಿಕೆಗಳನ್ನು ಕಾಯ್ದುಕೊಳ್ಳುವಲ್ಲಿ ಸಂವಹನವನ್ನು ಮನದಟ್ಟಾಗಿಸಿ, ಅರ್ಥವನ್ನು ಮೊನಚುಗೊಳಿಸುವ ಉದ್ದೇಶವನ್ನು ಗಾದೆಯೊಂದು ಹೊಂದಿರುತ್ತದೆ. ಅವು ರೂಪಕ, ಪ್ರತಿಮೆ, ಸಂಕೇತಗಳ ಮೂಲಕ ಪ್ರಕಟಗೊಳ್ಳುತ್ತವೆ. ಒಂದು ಗಾದೆಯನ್ನು ನಾವು ಬಳಸುತ್ತೇವೆ ಎಂದರೆ ಆ ಗಾದೆ ಪ್ರಕಟಿಸುವ ಸಾಂಸ್ಕೃತಿಕ ಮೌಲ್ಯಗಳನ್ನು ನಾವು ಅಂತರ್ಗತಗೊಳಿಸಿಕೊಂಡಿದ್ದೇವೆ ಎಂದರ್ಥ. ಈ ನೆಲೆಯಲ್ಲಿ ಸಂಸ್ಕೃತಿ ಅಥವಾ ಸಮುದಾಯವೊಂದರ ಮೌಲ್ಯಗಳ ಸೃಷ್ಟಿ ಹಾಗೂ ವಾಹಕವಾಗಿ ಗಾದೆಗಳು ದುಡಿಯುತ್ತವೆ. ಹೀಗಾಗಿ ಸಂಸ್ಕೃತಿಯ ಅಧ್ಯಯನದಲ್ಲಿ ಗಾದೆಗಳು ಮಹತ್ವದ ಸಾಂಸ್ಕೃತಿಕ ಆಕರಗಳಾಗಿ ನಿಲ್ಲುತ್ತವೆ. ಪುರುಷ ಪ್ರಧಾನವಾದ ಸಂಸ್ಕೃತಿಯೊಂದರಲ್ಲಿ ಗಾದೆಗಳ ಉತ್ಪಾದಕರು ಪುರುಷರಾಗಿದ್ದು, ಪುರುಷನ ಅಧಿಕಾರ ಮತ್ತು ಧೋರಣೆಗಳನ್ನು ಮೌಲೀಕರಣಗೊಳಿಸುವಲ್ಲಿ ಪುರುಷಪರವಾಗಿರುತ್ತವೆ. ಇಂತಹ ಪರಿಸರದಲ್ಲಿ ಸಾಂಸ್ಕೃತಿಕ ಮೌಲ್ಯಗಳ ರಚಕರು ಮತ್ತು ನಿಯಂತ್ರಕರು ಪುರುಷರಾಗಿರುವುದು ಹಾಗೂ ಗಾದೆಗಳ ಪ್ರಧಾನ ಉದ್ದೇಶವೇ ಇಂತಹ ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳನ್ನು ನಿರಂತರಗೊಳಿಸುವುದು ಆಗಿರುವಲ್ಲಿ ಮಹಿಳೆಯರೂ ಗಳಿಸಿದರೂ ಅವರು ‘ಪುರುಷದನಿ’ಯಲ್ಲೇ ಆಡುತ್ತಿರುತ್ತಾರೆ ಎನ್ನುವ ಸೂಕ್ಷ್ಮವನ್ನು ತಿಳಿಯಬೇಕಾಗಿದೆ. ಏಕೆಂದರೆ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಪುರುಷ ಹಿತಾಸಕ್ತಿಗಳು ಮೌಲ್ಯವಾಗಿದ್ದು ಅವನ್ನು ಸ್ತ್ರೀ-ಪುರುಷರಿಬ್ಬರೂ ರೂಢಿಸಿಕೊಂಡವರಾಗಿರುತ್ತಾರೆ. ಹೀಗಾಗಿ ನಾವು ಸ್ತ್ರೀತನ, ಪುರುಷತನವನ್ನು ಜೈವಿಕ ನೆಲೆಯಿಂದ ಬಿಡಿಸಿ ಗುರುತಿಸಿಕೊಳ್ಳುವಲ್ಲಿ ಹೆಚ್ಚಿನ ಅರ್ಥವಿದೆ.

ಸಂಸ್ಕೃತಿಯೊಂದರ ಮೌಲ್ಯವಾಹಕವಾಗಿ ಗಾದೆಗಳು ಕಾರ್ಯನಿರ್ವಹಿಸುತ್ತವೆ ಎಂದಾಗ ಅದು ಹುಟ್ಟಿದ ಸಂದರ್ಭದ ಅರ್ಥದಲ್ಲೇ ಹರಿದು ಬರುತ್ತದೆ ಎಂದಲ್ಲ. ಒಂದು ಗಾದೆಗೆ ಒಂದೇ ಅರ್ಥ ಎಂದಿಲ್ಲ. ಭಿನ್ನ, ಭಿನ್ನ ಸಂದರ್ಭದಲ್ಲಿ ಭಿನ್ನ ಭಿನ್ನ ಅರ್ಥಗಳನ್ನು ಅವು ಹೊಳೆಯಿಸುತ್ತವೆ. ಆಯಾ ಸಂದರ್ಭಕ್ಕೆ ತಕ್ಕಂತೆ ಅವು ಹೊರ ಬರುತ್ತವೆ. ಹೊಸ ಪಡೆದುಕೊಳ್ಳುತ್ತವೆ. ಹೀಗೆ ಗಾದೆಯೊಂದು ಎದುರಾದ ಸಂದರ್ಭದಲ್ಲಿ ಪುನರ್ ಸೃಷ್ಟಿ ಪಡೆಯುತ್ತದೆ. ಈ ಬಗೆಯ ಪುನರ್ ಸೃಷ್ಟಿ ಹಾಗೂ ಬಹುರೂಪಿ ಅರ್ಥಶೋಧನೆ ಗಾದೆ ಅಥವಾ ಇನ್ನಾವುದೇ ಮೌಖಿಕ ಪರಂಪರೆಗಿರುವ ಬಹುದೊಡ್ಡ ಶಕ್ತಿ. ಗಾದೆಗಳು ಬಳಸಿಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ಸಂದರ್ಭಕ್ಕೆ ಅನುಗುಣವಾಗಿದ್ದು, ತನ್ನ ಸಾಮಾಜಿಕ ಸಂವಾದದ ಪ್ರಕ್ರಿಯೆಯಲ್ಲಿಯೇ ಅದು ಪ್ರಸ್ತುತತೆಯನ್ನು ಸಾಧಿಸಿಕೊಳ್ಳುತ್ತದೆ. ಹೀಗಾಗಿಯೇ ಜೀವನ ಸ್ವರೂಪ, ಬದುಕಿನ ವಿನ್ಯಾಸಗಳು ಬದಲಾಗಿ ಹೊಸ ಸಂದರ್ಭಗಳು ಸೃಷ್ಟಿಯಾದಾಗ ಹಳೆಯ ಗಾದೆ, ಹೊಸ ವ್ಯವಸ್ಥೆಯಲ್ಲಿ ಹೊಸ ಅರ್ಥದೊಂದಿಗೆ ಬಳಕೆಯಾಗುತ್ತದೆ.

ಸ್ತ್ರೀವಾದ ತಿಳಿಯಬಯಸುವ ಅಂಶವಿವಕ್ಷೆ ಮತ್ತು ಹೆಣ್ಣು-ಗಂಡಿನ ಹಾಗೂ ಹೆಣ್ಣು-ಹೆಣ್ಣಿನ ನಡುವಿನ ಸಂಬಂಧಗಳನ್ನು ಗಾದೆಗಳು ತಮ್ಮೊಳಗೆ ಹಿಡಿದಿಟ್ಟುಕೊಂಡಿವೆ. ಪಿತೃರೂಪಿ ಮೌಲ್ಯಾಧಾರಿತ ಸಾಮಾಜಿಕ ಸಂದರ್ಭದಲ್ಲಿ ಹೆಣ್ಣು-ಗಂಡಿನ ನಡುವಿನ ಸಂಬಂಧವು ಲಿಂಗವ್ಯವಸ್ಥೆಯ ರೂಪಿಕೆಯಾಗಿರುವಂತೆ, ಹೆಣ್ಣು-ಹೆಣ್ಣಿನ ಸಂಬಂಧವೂ ಆಗಿರುತ್ತದೆ. ಹೆಣ್ಣುಗಳ ನಡುವಿನ ಸಂಬಂಧವು ಆಪ್ತ, ಗಾಢವಾಗಿರುವಂತೆ ಅದಕ್ಕೆ ವೈರುಧ್ಯದಲ್ಲೂ ಇರುತ್ತದೆ. ತಾಯಿ-ಮಗಳು, ಅಕ್ಕ-ತಂಗಿಯರ ಸಂಬಂಧ ಬಹುತೇಕವಾಗಿ ಹಿತದ ಭಾವವಾಗಿದ್ದರೆ, ಅತ್ತೆ-ಸೊಸೆ, ಅತ್ತಿಗೆ-ನಾದಿನಿಯರ ಸಂಬಂಧ ಅಹಿತ ಭಾವದ್ದಾಗಿರುತ್ತದೆ. ಭಾರತೀಯ ಪಿತೃರೂಪೀ ಸಾಂಸ್ಕೃತಿಕ ಸಂದರ್ಭದಲ್ಲಿ ಹೆಣ್ಣಿನ ಸುತ್ತಿನ ಯಾವತ್ತೂ ಸಂಬಂಧಗಳು ಸಂಕೀರ್ಣ ಸ್ವರೂಪದ್ದಾಗಿದ್ದು ಅವು ಬರಿಯ ಸಂಬಂಧಗಳಷ್ಟೇ ಆಗಿರದೇ ಅಧಿಕಾರ ಸಂಬಂಧಗಳಾಗಿರುತ್ತವೆ. ಈ ಬಗೆಯ ವ್ಯವಸ್ಥೆಯಲ್ಲಿ ‘ವಸ್ತು’ವಾಗಿಯೇ ಪರಿಗ್ರಹಿಸಲ್ಪಟ್ಟ ಹೆಣ್ಣಿಗೆ ತನ್ನ ಬದುಕಿಗೆ ಸಂಬಂಧಿಸಿದಂತೆ ಯಾವುದೇ ಆಯ್ಕೆ ಸಾಧ್ಯವಿಲ್ಲ. ಅದು ಅವಳ ವಿವಾಹದ ಪ್ರಶ್ನೆಯಾಗಬಹುದು, ಲೈಂಗಿಕತೆಯ ಪ್ರಶ್ನೆಯಾಗಬಹುದು ಅಥವಾ ಸಂತಾನದಂತಹ ಪ್ರಶ್ನೆಯಾಗಬಹುದು. ಇದರಂತೆಯೇ ಆಕೆ ಬದುಕಿನಲ್ಲಿ ರೂಢಿಸಿಕೊಳ್ಳಬೇಕಾದ ಸಂಬಂಧಗಳು ಕೂಡಾ ಇಲ್ಲಿ ವಿವಾಹದ ಮೂಲಕ ತವರಿನ ಅಧಿಕಾರ ಸಂಬಂಧದಿಂದ ಎರವಾಗಿ ಗಂಡನ ಕುಟುಂಬದೊಂದಿಗೆ ಹೊಸ ಅಧಿಕಾರ ಸಂಬಂಧ ಏರ್ಪಡುತ್ತದೆ. ಹೀಗೆ ಏರ್ಪಡುವ ಸಂಬಂಧವನ್ನು ಸ್ವಲ್ಪ ಸೂಕ್ಷ್ಮವಾಗಿ ಗ್ರಹಿಸಬೇಕು. ವಿವಾಹದ ಮೂಲಕ ಸಾಧ್ಯವಾಗುವ ಈ ಸಂಬಂಧಗಳು ಅವಳ ಆಯ್ಕೆಯ ಸಂಬಂಧವಲ್ಲ. ಬದಲಾಗಿ ಅವು ಹೇರಲ್ಪಟ್ಟ ಸಂಬಂಧಗಳು. ಹೀಗೆ ಹೇರಲ್ಪಟ್ಟ ಅಸಹಜ ಸಂಬಂಧಗಳು ಹಾಗೂ ಅವುಗಳೊಂದಿಗೆ ಹೆಣ್ಣು ಸ್ಥಾಪಿಸಿಕೊಳ್ಳಬೇಕಾದ ಬಂಧುತ್ವಕ್ಕೆ ಅನಿವಾರ್ಯತೆಯ ಒತ್ತಡವಿದೆ. ಅತ್ತೆ-ಸೊಸೆ, ಅತ್ತಿಗೆ-ನಾದಿನಿ, ಮಲತಾಯಿ-ಮಲಮಗಳು ಹಾಗೂ ಸವತಿಯರು- ಈ ಎರಡು ಹೆಣ್ಣುಗಳ ನಡುವೆ ವೈಕ್ಷಮ್ಯವನ್ನುಂಟು ಮಾಡುವ ಸಂಬಂಧಗಳನ್ನು ಈ ಪರಿಗ್ರಹಿಕೆಯಿಂದಲೇ ಅರ್ಥೈಸಬೇಕಾಗಿದೆ. ಅದಕ್ಕೆ ಗಂಡಿಗೆ ವಿವಾಹದೊಂದಿಗೆ ಸಾಧ್ಯವಾಗುವ ಸಂಬಂಧಗಳು ಸಂಬಂಧದ ನೆಲೆಯಲ್ಲಿಯೇ ನಿರ್ವಹಿಸುತ್ತದೆ ಎನ್ನುವುದನ್ನು ಜೊತೆಯಲ್ಲಿಟ್ಟು ನೋಡಬೇಕು.

ಪಿತೃರೂಪೀ ಸಂಸ್ಕೃತಿಯಲ್ಲಿ ಅತ್ತೆ-ಸೊಸೆಯರ ಸಂಬಂಧ ವಿಷಮ ಸಂಬಂಧವಾಗಿರುವುದು ಪುರುಷ ಪ್ರಧಾನ ಮೌಲ್ಯಗಳು ಅತ್ತೆಗೆ ನೀಡಿದ ಅಧಿಕಾರದಿಂದ. ಅತ್ತೆಯ ಅಧಿಕಾರ ಹಾಗೂ ಸೊಸೆಯ ದಮನದಲ್ಲಿ ಉಂಟಾಗುವ ಅನಪೇಕ್ಷಿತ ಸಂಬಂಧದಲ್ಲಿ ಈ ವಿಷಮತೆಯನ್ನು ಬಿಡಿಸಿಕೊಳ್ಳಬೇಕು. ಪುರುಷರ ಮೌಲ್ಯಗಳು ಬಹಳ ಬಾರಿ ಮಹಿಳೆಯರನ್ನು ರಂಗಸ್ಥಳದಲ್ಲಿ ನಿಲ್ಲಿಸಿ ಪುರುಷನನ್ನು ತೆರೆಯ ಹಿಂದಿಟ್ಟು ಕಾಪಾಡುತ್ತದೆ. ಮಹಿಳೆಯರ ನಡುವೆ ಸೀಳು ತಂದು ‘ಹೆಣ್ಣಿಗೆ ಹೆಣ್ಣೇ ಶತ್ರು’ ಎನ್ನುವ ಸಂದರ್ಭ ಸೃಷ್ಟಿಯಾಗುವುದು, ಪುರುಷವ್ಯವಸ್ಥೆಯ ಈ ತಂತ್ರದಿಂದ ಹೆಣ್ಣುಗಳ ಸಂಬಂಧಗಳ ಸ್ವರೂಪ ಯಾವ ಬಗೆಯದು ಎನ್ನುವುದನ್ನು ಗಾದೆಗಳು ಅನೇಕ ಮಗ್ಗುಲಗಳಲ್ಲಿ ವಿವರಿಸುತ್ತವೆ.

ಹೆಣ್ಣಿನ ಮದುವೆ ಸಂಭ್ರಮ ಮುಗಿದ ಮೇಲೆ ಬೀಗರ ಮನೆಗೆ ಹೂಗುವಾಗ ತನ್ನ ತಾಯ್ತಂದೆ ಸಂಬಂಧಿಗಳನ್ನು ನೋಡಿ ಮೆಟ್ಟಿಲು ಇಳಿದಂತೆ ವೇದನೆ ಹೆಚ್ಚುತ್ತಾ ಹೋಗುತ್ತದೆ. ಆಗ ತಂದೆ ತಾಯಿ, ಅಣ್ಣಂದಿರು ಸಾಕಷ್ಟು ಸಮಾಧಾನದ ಮಾತನ್ನಾಡಿ ಅವಳನ್ನು ಕಳಿಸಿಕೊಡುತ್ತಾರೆ.

ಒಂದು ಮೆಟ್ಟಿಲು ಇಳಿದಾಳು ಹಿಂದಕ್ಕೆ ನೊಡ್ಯಾಳು
ತಾಯನ್ನು ಕರೆದು ನುಡಿದಾಳು
ತಾಯನ್ನು  ಕರೆದು ನುಡಿಮಾತ ಹೇಳ್ಯಾಗ
ತಾಯಿಯ ದಕ್ಕೆ ಗನವಾಗೆ / ಸೋಬಾನೆ ||

ಗ್ಯಾನ ಮಾಡಲು ಬ್ಯಾಡ ಚಿಂತಿ ಮಾಡಲು ಬ್ಯಾಡ
ಗನದಿವಿಗೆ ನಿನ್ನ ಪ್ರತಿವರುಷ ಅಳದಿರು
ಎಂಟು ದಿವಸಾಕೆ ಕರತರುವೆ ನನಮಗಳೆ
ಗ್ಯಾನಿರಲಿ ನಿನ್ನ ಮನದಲ್ಲಿ / ಸೋಬಾನೆ ||

ಎರಡು ಮೆಟ್ಟಿಲು ಇಳಿದಾಳೊ ಹಿಂದಕ್ಕೆ ನೋಡ್ಯಾಳೊ
ತಂದೆಯನು ಕರೆದು ನುಡಿದಾಳು
ತಂದೆಯನು ಕರೆದು ನುಡಿಮಾತ ನುಡಿದಾಗ
ತಂದೇಗೆ ದುಃಖ ಒಳಗೊದಿ / ಸೋಬಾನೆ ||

ಅಳಬೇಡ ಕರಿಬೇಡ ಎಲೆ ನನ ಮಗಳೇ
ತಿಂಗಾಳು ತಿಂಗಾಳು ಕರೆತರುವೆ ಎಲೆ ಮಗಳೆ
ಗ್ಯಾನಿರಲಿ ನಿನ್ನ ಮನದೊಳಗೆ / ಸೋಬಾನೆ ||

ಮೂರು ಮೆಟ್ಟಿಲು ಇಳಿದಾಳು ಹಿಂದಕ ನೋಡ್ಯಾಳು
ಅಣ್ಣ ಮ್ಯಾಗೆ ಕರೆದು ನುಡಿದಾಳು
ಅಣ್ಣ ಮ್ಯಾಗ ಮಾತು ನುಡಿವಾಗೆ
ಗೆಮ್ಮನ ದುಃಖ ಗನವಾಗೆ / ಸೋಬಾನೆ ||

ಅಳಬ್ಯಾಡ ನನತಂಗಿ ಕರಿಬ್ಯಾಡ ನವತಂಗಿ
ಮಾಸಕ್ಕೊಮ್ಮೆ ಕರೆತರುವೆ ನನತಂಗಿ
ಗ್ಯಾನಿರಲಿ ನಿನ್ನ ಮನದಲ್ಲಿ / ಸೋಬಾನೆ ||

ಬರುತೀವ್ನಿ ತಾಯವ್ವ ಹೊಗತೆವ್ನಿ ಅಣ್ಣಯ್ಯ
ಬಳಿಗಾರ ಕೂಡೆ ಅಪಾನು ಒಪಾತಿ
ಹೋಗಿ ಬರುತ್ತಾಳೆ ಸಣ್ಣವ್ವ / ಸೋಬಾನೆ ||

ಹೀಗೆ ಮದುವೆಯ ಸಂಭ್ರಮದಲ್ಲಿ ಭೈರರಲ್ಲಿ ಸೋಬಾನೆಯ ಹಾಡು ಶಾಸ್ತ್ರದ ಅಂಗವಾಗಿ ಬರುತ್ತದೆ. ಹಿಂದೆ ದೇಶಿ ಶಬ್ದಗಳ ಬಳಕೆಯಲ್ಲಿ ಸೋಬಾನೆಗಳನ್ನು ಹಾಡುತ್ತಿದ್ದವರು, ಕಾಲ ಕಳೆದಂತೆ ಶಿಷ್ಟ ಭಾಷೆಯ ಪ್ರಭಾವಕ್ಕೆ ಒಳಗಾಗಿರುವುದನ್ನು ನಾವು ಕಾಣುತ್ತೇವೆ. ಕಲಿತ ಕೆಲವರು ಹಾಡುವ ಸೋಬಾನೆಯ ಕೆಲವು ಹಾಡುಗಳ ಮೇಲೆ ಶಿಷ್ಟ ಸಾಹಿತ್ಯದ  ಪ್ರಭಾವವೂ ಸಾಕಷ್ಟು ಆಗಿದೆ. ಒಳಕುಂಜದ ಪುಟ್ಟು ಬೈರಿ ಹಾಗೂ ಲಕ್ಷ್ಮಿಯರ ಹಾಡಿನಲ್ಲಿ ಗ್ರಾಮ್ಯತೆ ಕಡಿಮೆ. ಪುತ್ತೂರಿನ ಸುಬ್ಬಮ್ಮ ಮುಂತಾದವರ ಹಾಡಿನಲ್ಲಿ ಗ್ರಾಮ್ಯತೆ ಹೆಚ್ಚಾಗಿರುವುದನ್ನು ಕಾಣುತ್ತೇವೆ. ಪೇಟೆಯ ಪರಿಸರದಲ್ಲಿ ಇದ್ದರೂ ತಮ್ಮ ಸಂಪ್ರದಾಯದ ಹಾಡನ್ನು ಉಳಿಸಿಕೊಂಡವರು ಈ ವ್ಯಕ್ತಿಗಳು. ಆದರೆ ಹಾಡುಗಳು ಸ್ಪಷ್ಟವಾಗುವುದು ಕಷ್ಟ. ಹಿಂದೆ ಎಲ್ಲರ ಮನೆಯಲ್ಲಿ ಸೋಬಾನೆ ಹಾಡುವವರಿರುತ್ತಿದ್ದರು. ಈಗ ಕೆಲವರು ಮಾತ್ರ ಉಳಿದಿರುವುದರಿಂದ ಮದುವೆಯಲ್ಲಿ ಅಂಥ ಹಾಡುವವರನ್ನು  ಕರೆಯುತ್ತಾರೆ. ದೀಪಾವಳಿಯ ಸಮಯದಲ್ಲಿ ಹಾಡುವವರೆಲ್ಲಾ ಒಂದಾಗಿ ಆಹಾರಧಾನ್ಯ ಸಂಗ್ರಹಿಸುವ ಸಲುವಾಗಿ ತುಳು ಹಾಡುಗಳು ಹಾಗೂ ಕನ್ನಡ ಹಾಡುಗಳನ್ನು ಹಾಡುತ್ತಾರೆ. ಆದರೆ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಈ ರೀತಿಯ ವ್ಯಕ್ತಿಗಳು ಸಿಗಲಿಲ್ಲ. ಇದರಿಂದ ಇವರೂ ಕಡಿಮೆಯಾಗುತ್ತಿದ್ದಾರೆಂದು ತಿಳಿಯಬಹುದಾಗಿದೆ.

ಗರ್ಭಿಣಿ (ಸೀಮಂತದ ಸೋಬಾನೆ):

ಸಾಂಪ್ರದಾಯಿಕ ವಿಭಾಗದಲ್ಲಿ ಹೆಣ್ಣು ಗರ್ಭಿಣಿಯಾದಾಗ ಹಾಡುವ ಗೀತೆಗಲು ಸೇರುತ್ತವೆ. ಗರ್ಭಿಣಿಯಾದವಳಿಗೆ ತಾನು ಆ ಸ್ಥಿತಿಯಲ್ಲಿರುವುದರಿಂದ ಮಕ್ಕಳು ನಲಿಯುವ ಸಂಭ್ರಮ ಹಿರಿಯರದಾಗುತ್ತದೆ. ಗರ್ಭಿಣಿಯರಿಗೆ ಆಚರಿಸುವ ‘ಸೀಮಂತ’ವು ಸೊಸೆಯ ಬಗೆಗಿನ ಪ್ರೀತಿಯನ್ನು ತಿಳಿಸುವಂಥದು. ಇಲ್ಲಿ ಅತ್ತೆಯ ಪ್ರಾಮುಖ್ಯ ಹಾಗೂ ಹೆಂಗಸರ ಪ್ರಾಧಾನ್ಯತೆಯೇ ಮುಖ್ಯವಾದ್ದರಿಂದ ಇವಳು ಮನೆಯವರೊಡನೆ ಇರಿಸಿಕೊಂಡ ಸಂಬಂಧವನ್ನು ತಿಳಿಸುತ್ತದೆ. ಸೀಮಂತದ ಸಂದರ್ಭವನ್ನು ಭೈರರಲ್ಲಿ ‘ಬವುಕೆ ಶಾಸ್ತ್ರ’ ‘ಬಿಮ್ಮನಸಿ ಶಾಸ್ತ್ರ’ ಎಂದು ಕರೆಯುತ್ತಾರೆ. ಈ ಕಾಲದಲ್ಲಿ ಬಸುರಿಯಾದವಳಿಗೆ ಯಾವ ರೀತಿಯ ತಿಂಡಿಗಳು, ಹಣ್ಣುಗಳು  ಇಷ್ಟವೋ ಅವೆಲ್ಲವನ್ನು ಸೋಬಾನೆಯ ಮೂಲಕ ವ್ಯಕ್ತಪಡಿಸಲಾಗುವುದು. ತಿಂಗಳು ತಿಂಗಳು ಬಸುರಿಯ ಬಯಕೆಯ ವಿವಿಧ ಉಪಚಾರಗಳನ್ನು ಆ ಮೂಲಕ ಬಸುರಿ ಹೆಣ್ಣಿಗೆ ಆಗತುವ ಸಂತೋಷವನ್ನು ವ್ಯಕ್ತಪಡಿಸುವ ವಿವರಗಳಿವೆ. ಈ ಹಾಡುಗಳನ್ನು ಹಾಡಿದವರು ಲಕ್ಷ್ಮಿ (೪೦ ವರ್ಷ), ಕುರಿಮ – ಡಿಂಬ್ರಮನೆ ಎಂಬ ಸ್ಥಳದವರು. ಗರ್ಭಿಣಿಯರಿಗೆ ಸಂಬಂಧಿಸಿದಂತೆ,

೧. ಬವುಕೆ ಹಾಡು ಅಥವಾ ಸೀಮಂತದ ಹಾಡು

೨. ಬಸುರಿಯನ್ನು ಕರೆತರುವ ಹಾಡು

೩. ಗರ್ಭಿಣಿ ನಾದಿನಿ – ಅತ್ತಿಗೆಯ ಕರುಬ

೪. ಹೆರಿಗೆ ಹಾಡು

ಹೀಗೆ ಮುಂತಾದ ಸೋಬಾನೆಗಳನ್ನು ಕಾಣಬಹುದಾಗಿದೆ. ಇಂಥ ಹಾಡುಗಳು ಒಟ್ಟಾಗಿ ಗರ್ಭಿಣಿಯರಿಗೆ ಸಂಬಂಧಿಸಿರುವುದರಿಂದ ಈ ವಿಭಾಗದಲ್ಲೇ ಅಧ್ಯಯನ ಮಾಡುವುದು ಅಪ್ರಸುತ್ತವಾಗಲಾರದು.

* ಭೈರರ ಸೋಬಾನೆ ಪದಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳು:

ಕನ್ನಡ ಜನಪದಗೀತೆಗಳಲ್ಲಿ ಮದುವೆಗೆ ಸಂಬಂಧಪಟ್ಟ ಹಾಡುಗಳು ಸಾಂಸ್ಕೃತಿಕವಾಗಿ ಮಹತ್ವವಾದವು. ಮದುವೆಯ ಸಂದರ್ಭದಲ್ಲಿ, ಶುಭಕಾರ್ಯ ನಿಮಿತ್ತವಾಗಿ ಹಾಡಲ್ಪಟ್ಟ ಹಾಡುಗಳೇ ‘ಶೋಬಾನೆ’ ಪದಗಳು ಎನ್ನಬಹುದು. ಪದದ ನಿಷ್ಪತ್ತಿ ‘ಶೊಭನ’ ದಿಂದ ಬಂದಿರಬೇಕು. (ಕಿಟ್ಟಲ್‌ನಿಘಂಟು) ಇದರ ಅದರ ಅರ್ಥ ಸುಂದರ, ಶುಭಕರ, ಹೊಳೆಯುವಂತಾಗಿದೆ. ‘ನೇಮವಿದ್ದರೆ ವೃತ’, ‘ನಾರಿಯಿದ್ದರೆ ಶೋಭನ’ ಮುಂತಾದ ಗಾದೆಗಳು ಶೋಭಾನೆಯೇ ಆಗಿವೆ. ಇವು ಮಂಗಳ ಅಥವಾ ಶುಭ ಕೋರುವ ಹಾಡುಗಳು ಎನ್ನಬಹುದು. ಕನ್ನಡ ಜನಪದ ಸಾಹಿತ್ಯ ಸಂಗ್ರಹಗಳಲ್ಲಿ ಈ ಶೋಭಾನದ ಹಾಡುಗಳು ವಿಫುಲವಾಗಿ ಸಿಗುತ್ತವೆ. ಕಳೆದ ಶತಮಾನದಲ್ಲಿ ಗೋದಾರ್ ಪ್ರಕಟಿಸಿದ ‘ಪೋರ್ ಸಾಂಗ್ಸ್ ಆಫ್‌ಸದರ್ನ್ ಇಂಡಿಯಾ’ ಎಂಬ ಸಂಕಲನದಲ್ಲಿ ಕೊಡುವ ಭೈರ ಸಂಸ್ಕೃತಿಯ ಮದುವೆಯ ಹಾಡುಗಳು ಪ್ರಕಟಗೊಂಡಿವೆ. ಬಾಗಿಲು ತಡೆಯುವ ಪದಗಳು ಎಂಬ ಒಂದು ಸಂಗ್ರಹ ೧೮೯೩ ರಲ್ಲಿ ಪ್ರಕಟಗೊಂಡಿದೆ. ಹುಟ್ಟಿದ ಹಳ್ಳಿಯ ಹಾಡು (೧೯೩೩), ಮಲ್ಲಿದಂಡೆ (೧೯೩೫), ನಾಡಪದಗಳು (೧೯೪೭), ಮಲೆನಾಡಿನ ಮದುವೆ (೧೯೫೫), ಲೋಕಗೀತೆ (೧೯೬೦), ಹೆಣ್ಣು ಕೊಟ್ಟೇವು (೧೯೬೨), ಸೋಬಾನೆ ಚಿಕ್ಕಮ್ಮನ ಪದ (೧೯೭೨) ಮುಂತಾದ ಸಂಕಲನಗಳಲ್ಲಿ ವಿವಾಹಕಾಲದ ವಿವಿಧ ಜಾತಿಯವರ ಆಚರಣೆಯ ಸಾಂಪ್ರದಾಯಿಕ ಹಾಡುಗಳಿರುವುದನ್ನು ತಿಳಿಯಬಹುದಾಗಿದೆ.

ಭೈರರ ಮದುವೆಯ ಸಂಪ್ರದಾಯದ ಸೋಬಾನೆ ಪದಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ಕಾರಣ, ಅವರು ಘಟ್ಟ ಪ್ರದೇಶದಿಂದ ವಲಸೆ ಬಂದು ಬದುಕಿನ ವಿವಿಧ ದುಸ್ತರ ಸನ್ನಿವೇಶದಲ್ಲಿ ಸಂಪ್ರದಾಯಗಳನ್ನು ಉಳಿಸಿಕೊಂಡಿರುವುದೊಂದು ವಿಶೇಷ. ಆಧುನಿಕ ದೃಷ್ಟಿ, ನಾಗರಿಕತೆಯ ಪ್ರಭಾವ, ಇತರ ಸಂಸ್ಕೃತಿಗಳ ಪ್ರಭಾವದ ಮಧ್ಯದಲ್ಲಿ ಸೋಬಾನೆ ಹಾಡುವವರು ಉಳಿದಿದ್ದಾರೆ. ಆದರೆ

ಹಳಯೆ ಹಾಡುಗಳು ಪ್ರಾದೇಶಿಕ ಭಾಷೆಯ ಪ್ರಭಾವಕ್ಕೆ ಒಳಗಾಗಿವೆ ಎನ್ನಬಹುದು. ಮದುವೆಯ ಸಂದರ್ಭದಲ್ಲಿ ಭೈರರಿಗೆ ಸೋಬಾನೆಯೇ ಶಾಸ್ತ್ರವಾದುದರಿಂದ ಹಾಡಬೇಕಾಗುತ್ತದೆ. ಮದುವೆ ಬಾಳಿನ ಒಂದು ರಸಘಟ್ಟ ಜನಪದ ಸಂಸ್ಕೃತಿಯಲ್ಲಿ ಇದಕ್ಕೆ ವಿಶೇಷವಾದ ಮಹತ್ವವುಂಟು. ಒಂದು ಸಾಮಾಜಿಕ ಆಚರಣೆಯಾಗಿ ಮದುವೆ ನಡೆದು ಹೋಗದೆ ಭೈರರಲ್ಲಿ ಒಂದು ಸಂಭ್ರಮದ ಸಡಗರದಂಶವಾಗಿ ಪರಿಣಮಿಸುತ್ತದೆ. ಮದುವೆ ಎಲ್ಲ ವಯಸ್ಸಿನವರಿಗೂ ಸಂತಸ ತರುತ್ತದೆ. ನೆಂಟರು ಬಂದಾಗ ದೊರೆಯುವ ಬೆಲ್ಲ, ನೀರಿನ ಸ್ವಾಗತ, ನೀರು ಮಜ್ಜಿಗೆಯ ರುಚಿ, ಗೌರವದ ವೀಳೆ, ಮೆಲ್ಲಲು ತಾಂಬೂಲ, ಆ ಸಂಭ್ರಮದಲ್ಲಿ ಕುಳಿತಿರುವಂತೆ ಪ್ರೇರೇಪಿಸುತ್ತವೆ. ಧಾರೆಯರೆಯುವುದು, ಮದುವೆಯ ಆಟದ ಮೋಜು ನೋಡುವುದು, ವಿಶೇಷವಾದ ಭೋಜನ, ಬಂಧು- ಬಾಂಧವರ ಜೊತೆಯಲ್ಲಿ ಸರಸ, ಸಲ್ಲಾಪ, ಕುಣಿಯುವ ವಿನೋದ, ಹೀಗೆ ವಿವಾಹದ ಮಂಟಪ ಆಕರ್ಷಣೀಯ ಸ್ಥಳವೂ ಆಗಿರುತ್ತದೆ. ಮದುವೆಯ ವಿವಿಧ ಶಾಸ್ತ್ರಗಳು, ವಾದ್ಯಗಳ ಮೊಳಗು, ಹಸಿರು ಚಪ್ಪರ, ಅಪಾರ ಸಂಖ್ಯೆಯ ನೆಂಟರುಗಳ ಸಡಗರ, ಜೊತೆಗೆ ಸೋಬಾನೆ ಪದಗಳ ಲಯಬದ್ಧ ಹಾಡುಗಾರಿಕೆಯು ಹಳ್ಳಿಯ ಮದುವೆಯ ಸೊಗಸನ್ನು ಇಮ್ಮಡಿಗೊಳಿಸುತ್ತದೆ.

ಮದುವೆಯ ಹಾಡುಗಳನ್ನು ಗರತಿಯರು ಹಾಡುತ್ತಾರೆ. ಈ ಹಾಡುಗಳನ್ನು ಮದುವೆಯ ಸಂದರ್ಭದಲಿ ಹಾಡಿದರೆ ವೀಳ್ಯದ ಗೌರವದಿದೆ. ಸಾಮಾನ್ಯವಗಿ ಹೆಂಗಸರೇ ಹಾಡಬೇಕಾದ ಈ ಪದಗಳನ್ನು ಭೈರರಲ್ಲಿ ಗಂಡಸರು ವಿರಳವಾಗಿ ಹಾಡುತ್ತಾರೆ. ಕೆಲವು ಸಾರಿ ಮುಮ್ಮೇಳ ಹೆಂಗಸರದಾದರೆ, ಹಿಮ್ಮೇಳದಲ್ಲಿ ಗಂಡಸರೂ ಧ್ವನಿಗೂಡಿಸುವುದುಂಟು. ಈ ರೀತಿಯ ಹಾಡುಗಾರಿಕೆ ಹರಿಜನರಲ್ಲಿ, ಕಾಡುಗೊಲ್ಲರಲ್ಲಿ, ಒಕ್ಕಲಿಗರಲ್ಲಿ ಹಾಗೂ ಕುರುಬರಲ್ಲಿ ಈಗಲೂ ರೂಢಿಯಲ್ಲಿದೆ. ಹರಿಜನರ ಹಾಗೂ ಗೊಲ್ಲರ ಹೆಂಗಸರು ಈ ಹಾಡುಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುತ್ತಾರೆ. ಬಿಳಗುಧಾರೆ, ಶಾಸ್ತ್ರದ ಧಾರೆ, ಭಟ್ಟಧಾರೆ. ಮೊದಲಾಗಿ ಧಾರೆ ನಡೆಯುತ್ತದೆ. ಹಿಂದೆ ಮದುವೆ ಏಳು ದಿನ, ಐದು ದಿನ ಕನಿಷ್ಠ ಮೂರುದಿನಗಳ ಕಾಲವಾದರೂ ನಡೆಯುತ್ತಿದ್ದುದುಂಟು. ಮಂಟಪ ಕಟ್ಟುವುದು, ವೀಳೆಯ ಶಾಸ್ತ್ರ, ಬದ್ಧದ ಶಾಸ್ತ್ರ, ದಿಬ್ಬಣ ಹೊರಡುವುದು, ನೀರು ತರುವ ಶಾಸ್ತ್ರ, ಹಾಲೆ ಕಂಬದ ಶಾಸ್ತ್ರ, ಬಳೆ ತೊಡಿಸುವ ಶಾಸ್ತ್ರ, ಅರಿಶಿನ ಹಚ್ಚುವ ಶಾಸ್ತ್ರ, ಹುಡುಗಿಯ ಅಲಂಕಾರದ ಶಾಸ್ತ್ರ, ಧಾರೆಯರೆಯುವ ಶಾಸ್ತ್ರ ಮುಂತಾಗಿ ಮದುವೆಯಲ್ಲಿನ ಎಲ್ಲ ಶಾಸ್ತ್ರಗಳಿಗೂ ಸೋಬಾನೆಗಳನ್ನು ಕಟ್ಟಿ ಹಾಡುತ್ತಿದ್ದರು. ಶ್ರೀ. ಜಿ.ಶಂ.ಪ. ಅವರು ಶೋಬಾನೆಯ ಹಾಡುಗಳ ಕುರಿತು ಹೇಳುತ್ತಾ “ಹೆಣ್ಣು-ಗಂಡಿನ ಸಂಬಂಧ ಜೀವನದುದ್ದಕ್ಕೂ ನನಗಾಗಿ ಉಳಿಯಲು ಮದುವೆಯನ್ನು ಹಿರಿಯರು ನಡೆಸಿದಂತೆಯೇ ನಡೆಸಬೇಕೆಂಬ ನಂಬಿಕೆಯ ಹಿನ್ನೆಲೆಯಲ್ಲಿ ಶ್ರದ್ಧೆಯ ಹಿನ್ನೆಲೆಯಲ್ಲಿ ಎಲ್ಲಾ ಶಾಸ್ತ್ರಗಳನ್ನು ಒಪ್ಪವಾಗಿ ಮಾಡುವುದರಲ್ಲಿಯೇ ಅವರಿಗೆ ತೃಪ್ತಿ. ಈ ಸೋಬಾನೆ ಪದಗಳು ಇಲ್ಲಿ ಕೇವಲ ಹಾಡುಗಳಾಗಿ ಉಳಿಯದೆ, ಹೀಗೆ ಮದುವೆಯ ಕ್ರಮವನ್ನು ನಿಯಂತ್ರಿಸುವ ಸಾಧನವಾಗಿಯೂ ಕಂಡು ಬರುವುದುಂಟು. ಆದುದರಿಂದ ಇವುಗಳ ಸಾಂಸ್ಕೃತಿಕ ಅಂಶ ಗಣನೀಯ” ಎಂದಿದ್ದಾರೆ.

ಮದುವೆಯಲ್ಲಿ ಚಪ್ಪರ ಹಾಕುವುದರ ಮೂಲಕ ಮದುವೆಯ ಸೋಬಾನೆಯ ಪದಗಳು ಭೈರರಲ್ಲಿ ಆರಂಭವಾಗುತ್ತವೆ. ಆದರೆ ಇದನ್ನು ಚಪ್ಪರ ಹಾಕುವಾಗ ಹಾಡದೇ, ಗಂಡಿನ ಮನೆಯಲ್ಲಿ ವರನಿಗೆ ಎಣ್ಣೇ ಶಾಸ್ತ್ರ ಹಾಗೂ ಆರತಿ ಮಾಡುವಾಗ ಅಥವಾ ಧಾರೆಯ ಮಂಟಪದಲ್ಲಿ ನೆಂಟರಿಷ್ಟರು ಬಂದಿರುವಾಗ ಹಾಡುತ್ತಾರೆ. ಎಣ್ಣೆ ಶಾಸ್ತ್ರಾದಿಗಳನ್ನು ಅದೇ ಕಾಲದಲ್ಲಿ ಹಾಡುತ್ತಾರೆ. ದಿಬ್ಬಣಕ್ಕೆ ಗಂಡು ಹೊರಡುವುದಕ್ಕೆ ಸಿದ್ಧನಾದಾಗ ದಿಬ್ಬಣದ ಹಾಡನ್ನು ಪ್ರಾರಂಭಿಸುತ್ತಾರೆ. ಈ ಲಹಾಡುಗಳು ಸಾಂದರ್ಭಿಕ ವಿಷಯಕ್ಕೆ ಒತ್ತು ಕೊಟ್ಟು ಹುಟ್ಟಿಕೊಂಡಿವೆ. ಶಾಸ್ತ್ರಕ್ಕೆ ಧಾರೆಗಾಗಿ ನೀರು ತರುವ ಹಾಡುಗಳು ಪ್ರಮುಖವಾದವು. ಮುತ್ತೈದೆಯರು ಶಾಸ್ತ್ರ ಪ್ರಕಾರ ವಾದ್ಯದ ಜೊತೆಗೂಡಿಕೊಂಡು ಗಂಗೆಗೆ ಪೂಜೆ ಮಾಡಿ, ಧಾರೆಗೆ ಹಾಗೂ ಮಂಟಪಕ್ಕೆ ನೀರು ತರುವುದೇ ಗಂಗೆ ತರುವ ಹಾಡು. ಹೀಗೆ ಹೊರಟು ಕೊಡಗಳಲ್ಲಿ ನೀರು ತರುವುದನ್ನು ಹಾಡುಗಳೇ ಹೇಳುತ್ತವೆ. ಉದಾ:

ಶೃಂಗಾರ ಆಗ್ಯಾಳೆ ಗಂಗಮ್ಮ
……………………………..
ಬಂಗಾರ ತರಿಸ್ಯಾಳೆ ಮಳಲಲ್ಲಿ ಗಂಗಮ್ಮ ಮತ್ತು
ಅಂಬಾರದಲ್ಲಿ ತುಂಬಿ ನಿಂತಿರೊಳೆ………..

ಮುಂತಾಗಿ ಗಂಗೆಯನ್ನು  ಹಾಡಿ ಹೊಗಳಿ ಗಂಗೆ ತರುತ್ತಾರೆ. ಗಂಗೆಯ ಪೂಜೆಗೆ ಬೇಕಾಗುವ ವಸ್ತುಗಳನ್ನು ಪ್ರಕೃತಿಯ ಮಡಿಲಿನಿಂದ ಬಿಡಿಸಿ ತರುವಾಗಿನ ಸಂಧರ್ಭ ಹಾಡಿನಲ್ಲಿ ಬರುತ್ತದೆ. ಅಕ್ಕಿ, ವೀಳೆಯ, ಹೊಂಬಾಳೆ ಅಥವಾ ಸಿಂಗಾರ ಇವುಗಳನ್ನು ಹಾಡಿನ ಮೂಲಕ ಕಳಸಕ್ಕೆ ತರುವ ಸಂದರ್ಭ ಜನಪದರ ಸೌಂದರ್ಯಪ್ರಜ್ಞೆಗೆ ಸಾಕ್ಷಿಯಾಗಿದೆ.

ಭೈರರ ಮದುವೆಯಲ್ಲಿ ವೀಳೆಯ ಸಂಪ್ರದಾಯ ಮುಖ್ಯವಾದುದು. ಮದುವೆಗಿಂತ ಮುಂಚೆ ತಪ್ಪದೆ ಈ ಶಾಸ್ತ್ರ ಮುಗಿಯುತ್ತದೆ. ವೀಳೆಯನ್ನು ಒಪ್ಪಿಸಿ ಹೆಣ್ಣಿಗೆ ಸೀರೆ ಮುಂತಾದ ಉಡುಗೊರೆಗಳನ್ನು ನೀಡಿ ಸಂಬಂಧ ಕಲ್ಪಿಸಿಕೊಳ್ಳುವ ಮುಖ್ಯ ಘಟ್ಟವಿದು. ವೀಳೆದೆಲೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವುಂಟು. ಯಾವುದೇ ಕಾರ್ಯವಾದರೂ ವೀಳೆಯನ್ನು ಸ್ವೀಕರಿಸಿದ ಮೇಲೆ ಕಾರ್ಯಕ್ಕೆ ಸಮ್ಮತಿ ಎಂಬುದು ವ್ಯಕ್ತವಾಗುತ್ತದೆ. ಹೆಣ್ಣಿನವರಿಗೆ ವೀಳೆಯ, ಉಡುಗೊರೆ, ತೆರ ನೀಡಿದ ಮೇಲೆ ಹೆಣ್ಣನ್ನು ಒಪ್ಪಿಸುವ ಕಟ್ಟಿಗೆ ಒಳಗಾದಂತೆ. ಆ ನಂತರ ಕಳಸವನ್ನು ಪೂಜಿಸಿ ಹಸೆಯ ಮೇಲೆ ಕುಳ್ಳಿರಿಸುತ್ತಾರೆ. ಜಾತಿ ಹಿರಿಯರು ಎಲ್ಲಾ ಕಲೆತ ಮೇಲೆ ಒಬ್ಬಿಬ್ಬರು ವೀಳೆಯನ್ನು ಕೊಡುತ್ತಾರೆ. ಕಳಸಕ್ಕೆ ಹಾಗೂ ಇತರ ಕಾರ್ಯಗಳಿಗೆ ವೀಳೆಯ ಕುರಿತಂತೆ,

“ಮೇಲಲು ಮೇಲೆಂಬ ಪರ್ವತಗೊಳಿಗಿರುವ
ಸೇವಾರ ಗಿಂಡಿಗೆ ಅಡಿಕೆ ಬರಬೇಕು
ದೇವರ ಗಿಂಡೀಗೆ ವಿಳ್ಯಾ ಬರಬೇಕು
ಸೋಬಾನೆ ಗರತೀಗೆ ಇಡಿರಿ ಈಳ್ಯಾವ”

ವೀಳ್ಯಕ್ಕೆ ಸೋಬಾನೆಯಲ್ಲಿ ಪ್ರಾಮುಖ್ಯ ದೊರೆತಿದೆ. ಅನೇಕ ಸಾರಿ ಮದುವೆಯ ಸಂಪ್ರದಾಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಗೌಡ, ಬುದ್ಧಿಂತ ಮುಂತಾದ ಹಿರಿಯರ ಹಾಗೂ ಬಾಂಧವರ ಎದುರಿನಲ್ಲಿ ಮದುವೆಗೆ ಮುನ್ನ ನಡೆದು ವೀಳ್ಯ ಶಾಸ್ತ್ರ ವಿವಾಹದ ಮೊದಲು ನಾಂದಿಯಾಗುತ್ತದೆ.

ಗಂಡು ದಿಬ್ಬಣ ಹೊರಡುವ ಸಂದರ್ಭದಲ್ಲಿ ಸಾಕಷ್ಟು  ಸೋಬಾನೆಗಳನ್ನು ಕಟ್ಟಲಾಗಿದೆ. ಗಂಡನನ್ನು ಹೆಣ್ಣಿನ ಮನೆಗೆ ಕರೆತರುವುದೇ ‘ದಿಬ್ಬಣ’ ವಾದ್ಯಮೇಳದಲ್ಲಿ ಅದೊಂದು ಸಂಭ್ರಮದ ಕಾರ್ಯ. ಗಂಡನ್ನು ಹೊರಡಿಸುವುದಕ್ಕೆ ನಾನಾ ಅಲಂಕಾರಗಳನ್ನು ಮಾಡುತ್ತಾರೆ. ಆ ಕಾಲದಲ್ಲಿ ಮನೆಯಿಂದ ಹೊರಡುವ ದಿಬ್ಬಣವನ್ನು ಊರವರೆಲ್ಲರೂ ತದೇಕಚಿತ್ತರಾಗಿ ನೋಡುತ್ತಿದ್ದರು.

ತಲೆಗೆ ಪೇಟ, ಕೊರಳಲ್ಲಿ ಸರ, ಮೈಮೇಲೆ ಶಾಲು, ಕಚ್ಚೆಯ ಪಂಚೆ, ಕೈಯಲ್ಲಿ ಛತ್ರಿ ಹಿಡಿದು ಹೊರಟರೆ ಭೈರರ ಅರಸನೇ ಬಂದನೆಂದುಕೊಳ್ಳುತ್ತಾರೆ. ದಿಬ್ಬಣ ಎದುರುಗೊಂಡಾಗ ಎಳೆನೀರು ಬೆಲ್ಲ, ವರನಿಗೆ ಹಾಲು ಕೊಡುವ ಅತಿಥ್ಯ ನಡೆಯುತ್ತವೆ. ಇವೆಲ್ಲ ವ್ಯಕ್ತಿಯ ಸಮಷ್ಟಿಸಂಸ್ಕೃತಿಯನ್ನು ಬಿಂಬಿಸುವಂಥದು. ಅತಿಥಿ ಸತ್ಕಾರ ನಮ್ಮ ಸಂಸ್ಕೃತಿಯ ಕುರುಹು. ಮದರಂಗಿಯನ್ನು ಹೆಣ್ಣಿನವರು ಹಚ್ಚುವಾಗ ತಮಾಷೆ ಮಾಡುವ ಪದಗಳು ಭೈರರ ಹಾಸ್ಯ ಪ್ರಜ್ಞೆಯನ್ನು ತೋರಿಸುತ್ತದೆ.

ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬದುಕಲು ಹೊರಟ ಜೀವಿಗಳು ಪರಸ್ಪರ ಪ್ರೀತಿಸಿ ಬಾಳಸಂಗಾತಿಗಳಾಗುತ್ತಾರೆ. ಕೆಲವು ಶಾಸ್ತ್ರಗಳು

ಮುಗಿದ ಮೇಲೆ ಪತಿ-ಪತ್ನಿಯರ ಕೈಹಿಡಿಸುವುದು ಓರೋರ್ವರ ಕೈಹಿಡಿದು ಸಾಗಲೆಂಬ ಸಂಕೇತದಿಂದ. ಅವರೀರ್ವರಲ್ಲಿ ಅಂದಿನಿಂದಲೇ ಅನುರಾಗದ ಮೊಳಕೆ ಕುಡಿಯೊಡೆಯುತ್ತದೆ. ಆತ್ಮೀಯತೆ ಪ್ರೇಮವಾಗಿ, ಹೃದಯಭಾರ ಬೆಸುಗೆಯಾಗುವಂತೆ ಪ್ರೇರೇಪಿಸುತ್ತದೆ. ವಿವಾಹದಲ್ಲಿ ಒದಗುವ ಸಂಸ್ಕೃತಿ ಇಂಥದು. ಪತಿ-ಪತ್ನಿಯರ ನಡುವೆ ಇರುವ ಸಂಕೋಚದ ತೆರೆ ಸರಿಯಲೆಂಬ ದೃಷ್ಟಿಯಿಂದ ಮದುವೆಯಲ್ಲಿ ಉಂಗುರದ ಆಟ, ಮಗುವಿನ ಆಟ, ಮುಂತಾಗಿ ಎಲ್ಲರ ಎದುರು ಆಟವಾಡಿಸುತ್ತಾರೆ. ಬಾಗಿಲು ತಡೆಯುವುದರ ಹಿನ್ನೆಲೆಯಲ್ಲಿ ಅವರ ನಾಚಿಕೆ ಸ್ವಭಾವವನ್ನು ದೂರ ಮಾಡುವ ಆಶಯವಿದೆ. ಅದರಿಂದ ಅವನು ತನ್ನ ಅತ್ತೆ-ಮಾವರಿಗೆ ಅವರ ಮದುವೆಯ ಜೊತೆ ಸಂಬಂಧ ಬೆಳೆಸಲು ಒಪ್ಪಿಕೊಳ್ಳುತ್ತಾನೆ. ಈ ಸಂಧರ್ಭದಲ್ಲಿನ ಹಾಡು ಮಧುರವಾದುದು.

ಹೀಗೆ ಸೋಬಾನೆ ಪದಗಳು ಮುಗಿಯದೆ ಗರ್ಭಿಣಿ ಮಗು ಹಡೆದಾಗ, ಆರತಿ ಎತ್ತುವಾಗ, ಪೂಜೆ ನಡೆಸುವಾಗ ಬೆಳೆಯುತ್ತಲೇ ಇರುತ್ತದೆ. ನಾಗರಿಕ ಗಂಧ, ಗಾಳಿ, ಇಲ್ಲದ ಕಡೆಗಳಲ್ಲಿ ಹಾಡುಗಳು ಶುದ್ಧ ದೇಶೀಯ ಗುಣದಿಂದಲೇ ಕೂಡಿರುತ್ತವೆನ್ನಬಹುದು. ಸೋಬಾನೆ ಪದಗಳು ಎಲ್ಲಾ ರೀತಿಯಿಂದಲೂ ಸಂಸ್ಕೃತಿಯನ್ನು ಬಿಂಬಿಸುವ ಗುಣವುಳ್ಳವಾಗಿವೆ.

 

ವಕ್ತೃಗಳ ವಿವರ:

ಹೆಸರು ಊರು ವಯಸ್ಸು
೧. ಮಾರಬೈರ ಬೆಳಾರೆ (ತಾ. ಸುಳ್ಯ) ೫೦
೨. ಮಾಚಪ್ಪಾ ಪುತ್ತೂರು ೪೫
೩. ಪಾಚನ ಬಂಟ್ವಾಳ ೪೮
೪. ಮಾಲಿಂಗ ಉಡುಪಿ ೬೩
೫. ಶೀನಭೈರ ಬೆಳ್ತಂಗಡಿ ೫೭

 

* (ಸಂಖ್ಯಾಗೊಂದಲ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

ಸಂದರ್ಶನ

೧. ಡಾ. ಡಿ.ಆರ್. ಪಾಂಡುರಂಗ
ಪ್ರಾಧ್ಯಾಪಕರು, ಎಮ್‌.ಜಿ.ಎಮ್‌. ಕಾಲೇಜ್‌, (ಕನ್ನಡ ವಿಭಾಗ), ಉಡುಪಿ.

೨. ಪ್ರೊ. ಶ್ರೀಧರ
ವಿವೇಕಾನಂದ ಕಾಲೇಜು, ಪುತ್ತೂರು

೩. ಕೇಶವಭಟ್ಟ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.

೪. ಪ್ರೊ. ದೇವೇಂದ್ರ ಹುಂಡೇಕರ
ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು.

೫. ಶ್ರೀ ಜಯಣ್ಣ
ಸಂಶೋಧನ ವಿದ್ಯಾರ್ಥಿ (ಸಮಾಜ ಶಾಸ್ತ್ರ ವಿಭಾಗ)
ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು.