ನಲಿಯುವಳಾರೀ ಭೈರವ ನಾರೀ
ರಣರಂಗದೊಳೀ ಬೆಳಕನು ಬೀರಿ !

ಮಿಂಚಿನ ಬಳಗವನೊಳಕೊಂಡಿರುವ
ಮುಂಗಾರ್ ಮೋಡದ ಮಯ್ಯವಳು ;
ಮಿಂಚುವ ದಾಡೆಯ, ಬಿಡು ಮುಡಿಗೂದಲ
ರುದ್ರಭಯಂಕರಿ ನುಗ್ಗುವಳು !
ಇಂತು ರೌದ್ರವನು ತೋರುತ ಮೆರೆಯುವ
ಧೀರನಾರಿಯಿವಳಾರಿವಳು?

ಎನಿತು ಮನೋಹರ ನೋಡು ಹಣೆಯೊಳಗೆ
ಅಂಟಿಕೊಂಡಿರುವ ಬೆವರುಮಣಿ !
ಕೆದರುಗೂದಲಲಿ ಝೇಂಕೃತಿಗೈಯ್ಯುತ
ಹಾರಾಡುವ ಆ ಭೃಂಗಾಳಿ !
ಭುವನ ಮೋಹಿನಿಯ ರೂಪದೆದುರು, ಆ
ಚಂದಿರನೇ ಬಲು ನಾಚಿಹನು.
ಅಚ್ಚರಿ, ಅಚ್ಚರಿ, ಶಿವನೇ ಆಕೆಯ
ಪದತಲದೆಡೆ ಶವದಂತಿಹನು !
ಈ ಗಜಗಾಮಿನಿ ಲೋಕಮಾತೆ ಶ್ರೀ
ಮಹಾಕಾಳಿ ಎಂತೆಂಬುದನು,
ಕಮಲಾಕಾಂತನು ಊಹಿಪನು.