ಅದೊಂದು ಹಳ್ಳಿ, ಹಂಚಿನ ಮನೆ, ಗುಡಿಸಲುಗಳು, ಮನೆಗಳ ಹಿತ್ತಲು, ಅಂಗಡಿಗಳಲ್ಲಿ ಹೂವಿನ ತರಕಾರಿಯ ಗಿಡಗಳು, ಚಿಕ್ಕಪುಟ್ಟ ಮರಗಳು, ಮನೆಮನೆಯಲ್ಲೂ ದನಕರು, ಕುರಿ, ಆಡುಗಳು, ಹಳ್ಳಿಗೆ ಅನತಿ ದೂರದಲ್ಲಿ ವಿಶಾಲವಾದ ಒಂದು ಕೆರೆ. ಕೆರೆಗೆ ತಾಗಿಕೊಂಡಂತೆ ಹೊಲ ಗದ್ದೆಗಳು. ಹಾಗೆಯೇ ಮುಂದೆ ನಡೆದರೆ ಚಿಕ್ಕದೊಂದು ಹಳ್ಳ, ಹಳ್ಳದಾಚೆ ಗುಡ್ಡಕಾಡು.

ಹಳ್ಳಿಯ ಹೆಚ್ಚಿನ ಜನ ಕೃಷಿಕರು, ಕೃಷಿಕನಿಗೆ ಸಹಾಯಕರಾಗಿ ಕಮ್ಮಾರ, ಬಡಿಗ, ಕುಂಬಾರ ಕುಟುಂಬಗಳೂ ಇವೆ. ನೇಕಾರ, ಕೃಷಿಕೂಲಿಕಾರರೂ ವಾಸವಾಗಿದ್ದಾರೆ.

ಇದು ಒಂದು ಸ್ಥಾವಲಂಬಿ ಹಳ್ಳಿಯೊಂದರ ನೋಟ. ಇಲ್ಲಿಯೇ ಕಿತ್ತೂರ ಹತ್ತಿರದ ಹಳ್ಲಿಯೂ ಇದಾಗಿರಬಹುದು ಅಥವಾ ರಾಯಚೂರು, ಬೆಂಗಳೂರು ಜಿಲ್ಲೆಗಳ ಹಳ್ಳಿಯೂ ಆಗಿರಬಹುದು. ಜನರು ನೆಮ್ಮದಿಯಿಂದಿದ್ದಾರೆ. ಎಲ್ಲರಿಗೂ ಉದ್ಯೋಗವಿದೆ. ಉಣ್ಣಲು, ಉಡಲು ಇದೆ. ಹಾಗೆಯೇ ಪಶುಪಕ್ಷಿಗಳೂ ಕೂಡ ನೆಮ್ಮದಿಯಿಂದಿವೆ. ಈ ಹಳ್ಳಿಯ ಚಿತ್ರವನ್ನು ಮುಂದಿಟ್ಟುಕೊಂಡು ನಾವು ಭೌತಿಕ ಪರಿಸರ ಮತ್ತು ಜನಪದ ಜೀವನಗಳನ್ನು ವಿಶ್ಲೇಷಿಸೋಣ.

ನಮ್ಮ ಭೂಮಿ ಹುಟ್ಟಿ ಇಲ್ಲಿನ ವಾತಾವರಣ ನಿರ್ಮಾಣವಾಗಿ, ನಂತರ ಇಲ್ಲಿ ಜೀವ ಸಂಕುಲಗಳು ಒಂದೊಂದೇ ಹುಟ್ಟಿ ಬಂದವು. ಭೂಮಿ, ನೀರು, ವಾಯು ಇವು ಭೌತಿಕ ಪರಿಸರದ ಮೊದಲ ಹಂತ. ನೀರಿನೊಳಗಿರುವ ಮಣ್ಣಿನಲ್ಲಿ ಹುದುಗಿರುವ, ಭೂಮಿಯ ಮೇಲೆ ಓಡಾಡುವ, ಗಾಳಿಯಲ್ಲಿ ತೇಲಾಡುವ ವೈರಸ್, ಬ್ಯಾಕ್ಟೀರಿಯಾ, ಫಂಗಸ್, ಮುಂತಾದ ಸೂಕ್ಷ್ಮ, ಅತಿಸೂಕ್ಷ್ಮ ಜೀವಿಗಳು, ಚಿಕ್ಕ ದೊಡ್ಡ ಪ್ರಾಣಿ, ಪಕ್ಷಿ, ಸಸ್ಯ ಇವೆಲ್ಲ ಭೌತಿಕ ಪರಿಸರದ ಎರಡನೇ ಹಂಟವನ್ನು ನಿರ್ಮಿಸುತ್ತವೆ. ಎರಡನೇ ಹಂತದ ಪರಿಸರವನ್ನು ಜೀವಜಾಲ ಎಂದೂ ಕರೆಯಬಹುದು. ಒಂದಕ್ಕೊಂದು ಹೊಂದಿಕೊಂಡು, ಒಂದರಮೇಲೊಂದು ಬದುಕುವ, ಒಂದನ್ನು ತಿಂದು ಇನ್ನೊಂದು ಜೀವಿಸುವ, ಒಂದರ ಮೇಲೆ ಇನ್ನೊಂದು ನಿಯಂತ್ರಣ ಇಡುವ ಈ ಜೀವಜಾಲ ಅತ್ಯಂತ ವಿಸ್ಮಯಕರ. ಕಲ್ಪನೆಗೆ ಅತೀತವಾದ, ಆದರೆ ನಿಜ ಜೀವನದಲ್ಲಿ ಇರುವ ಭೌತಿಕ ಪರಿಸ್ಥಿತಿ, ಈ ಜೀವಜಾಲದಲ್ಲಿ ಮಾನವ ಒಂದು ತೃಣ ಮಾತ್ರ. ಕೋಟ್ಯಂತರ ಜೀವಿಗಳಲ್ಲಿ ಇವನೂ ಒಂದಷ್ಟೇ.

ಮತ್ತೆ ನಮ್ಮ ಹಳ್ಳಿಗೆ ಬರೋಣ. ಈ ಹಳ್ಳಿಯ ಭೌತಿಕ ಪರಿಸರ ಯಾವುದು ? ಹಂಚಿನ ಮನೆ ಅಥವಾ ಗುಡಿಸಲುಗಳು, ಹಿತ್ತಲಲ್ಲಿರುವ ತರಕಾರಿಗಳ, ಔಷಧೀಯ ಗಿಡಗಳ ತೋಟ, ಕೊಟ್ಟಿಗೆ ಅದರಲ್ಲಿರುವ ಸಾಕುಪ್ರಾಣಿಗಳು. ಅವುಗಳ ಸಗಣೀ ಮತ್ತು ಕಸದಿಂದ ಕೂಡಿದ ತಿಪ್ಪೆ ಮಣ್ಣಿನ ರಸ್ತೆ, ಹೊಲಗದ್ದೆಗಳು, ಗೋಮಾಳ, ಹಳ್ಳ, ಹತ್ತಿರದ ಕಾಡು, ಕಾಡುಪ್ರಾಣಿಗಳು, ಹಳ್ಳಿಯಲ್ಲಿ ನೊಣ, ಸೊಳ್ಳೆ, ಇರುವೆ, ಚಿಟ್ಟೆಗಳು ಕಡೆಯಲ್ಲಿ ಮನುಷ್ಯರು ಅಥವಾ ಜನಪದ. ಇದೇ ಊರಿನ ಪರಿಸರ ಅಥವಾ ಜನಪದ ಜೀವನ.

ಅಂದರೆ ಭೌತಿಕ ಪರಿಸರ ಮತ್ತು ಜನಪದ ಜೀವನ ಬೇರೆ ಬೇರೆಯಲ್ಲವೇ ? ಖಂಡಿತ ಬೇರೆಯಲ್ಲ. ಇಲ್ಲಿ ಜನಪದವು ಭೌತಿಕ ಪರಿಸರದಲ್ಲಿ ಒಂದಾಗಿದೆ. ಅದಿಲ್ಲದೆ ಇದಿಲ್ಲ. ಇದನ್ನವಲಂಬಿಸಿ ಅದು ಇದೆ. ಜನಪದ ಜೀವನದ ಒಂದು ಅಂಗ ಸುತ್ತಲಿನ ಭೌತಿಕ ಪರಿಸರವಾಗಿದ್ದರೆ ಅದರ ಇನ್ನೊಂದು ಅಂಗ ಜನರು ತಮ್ಮ ಜೀವನಕ್ಕಾಗಿ ಆರಿಸಿಕೊಂಡಿರುವ ಉದ್ಯೋಗ, ಕುಲಕಸುಬುಗಳ ಆಚರಣೆಗಳಾಗಿರುತ್ತವೆ. ಒಟ್ಟಾರೆ ಮನುಷ್ಯನ ಉದ್ಯೋಗ, ನಂಬಿಕೆ, ಸಂಸ್ಕೃತಿ ಆಚರಣೆಗಳು ಮತ್ತು ಗಿಡಮರ, ಪ್ರಾಣಿ, ಪಕ್ಷಿ, ಕಾಡು, ನದಿ ಇವೆಲ್ಲವೂ ಸೇರಿದಾಗಲೇ ಅವನ ಜೀವನವಾಗುತ್ತದೆ. ಅದೇ ಜನಪದ ಜೀವನ, ಅದೇ ಭೌತಿಕ ಪರಿಸರ.

ಭೇಟೆಯಾಡುತ್ತ ಕಂದಮೂಲಗಳನ್ನು ತಿನ್ನುತ್ತ ಕಾಡು ಪ್ರಾಣಿಗಳಂತೆ ಅಲೆಮಾರಿಯಾಗಿದ್ದ ಮನುಷ್ಯನನ್ನು ಕೃಷಿಯ ಆವಿಷ್ಕಾರ ಒಂದೆಡೆ ನೆಲೆ ನಿಲ್ಲುವಂತೆ ಮಾಡತು. ಕೃಷಿಯಲ್ಲಿನ ಹೊಸ ಹೊಸ ಪ್ರಯೋಗಗಳು, ನವನವೀನ ತಂತ್ರಜ್ಞಾನಗಳು ಅವನ ಜೀವನ ಶೈಲಿಯನ್ನೇ ಬದಲು ಮಾಡುತ್ತ ಹೋದವು. ಪ್ರಾಣಿ ಸಾಕಾಣಿಕೆ ಮತ್ತು ಜೀವನದ ಅವಿಭಾಜ್ಯ ಅಂಗಗಳಾದವು.

ಭಾರತ ಮತ್ತು ಚೀನಗಳಲ್ಲಿ ಕೃಷಿ ಸುಮಾರು ೪೦೦೦ ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಈ ನಾಲ್ಕು ಶತಮಾನಗಳಲ್ಲಿ ವ್ಯವಸಾಯದಲ್ಲಿ ಬಂದಿರುವ ಸಾಧನಗಳು ಸಾವಿರಾರು. ಕೃಷಿ ಪದ್ಧತಿಗಳು ಲಕ್ಷಾಂತರ. ಬೀಜಗಳಂತೂ ಕೋಟ್ಯಂತರ ಅಥವಾ ಅಸಂಖ್ಯಾತ ಎಂದೇ ಹೇಳಬಹುದು. ಒಂದೊಂದು ಪ್ರದೇಶದಲ್ಲಿ ಹತ್ತು ಹಲವು ಬೆಳೇಗಳು. ಒಂದೊಂದು ಭಾಗದಲ್ಲಿ ಬೇರೆ ಬೇರೆ ರೀತಿಯ ಪದ್ಧತಿಗಳು. ಭೂಮಿಯ ಮೇಲಿನ ಜೀವರಾಶಿಗಳಂತೆಯೇ ವೈವಿಧ್ಯಮಯ ನಮ್ಮ ಕೃಷಿ ಕೂಡ. ಒಂದೇ ಹೊಲದಲ್ಲಿ ಅನೇಕ ನಮೂನೆಯ ಬೀಜಗಳನ್ನು ಬಿತ್ತುವುದು. ಆ ಬೆಳೆಗಳು ಪೋಷಕಾಂಶಕ್ಕಾಗಿ, ನೀರು ನೆರಳಿಗಾಗಿ, ವೈರಿಗಳಿಂದ ರಕ್ಷಣೆಗಾಗಿ ಪರಸ್ಪರ ಅವಲಂಬಿಗಳು. ಈ ಬೆಳೆಗಳ ಜೊತೆಗೆ ಹೊಲದಲ್ಲಿ ಮನೆ ಮಾಡುವ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳು, ಅವುಗಳನ್ನವಲಂಬಿಸಿರುವ ಜೀವ ಜಂತುಗಳು, ಕ್ರಿಮಿ ಕೀಟಗಳು, ಕೀಟಗಳನ್ನು ತಿಂದು ಬದುಕುವ ಕಪ್ಪೆ, ಕಪ್ಪೆಯ ಮೇಲೆ ಹಾವು………. ಮುಂದೆ ಮುಂಗುಸಿ………. ಹೀಗೆಯೇ ಜೀವ ಜಾಲ ರೈತನ ಹೊಲದಿಂದ ಕಾಡಿನವರೆಗೆ ವ್ಯಾಪಿಸಿ ಮತ್ತೆ ನದಿ ನೀರಿನ ಮೂಲಕ ಹಳ್ಳಿಗೆ ಬಂದು, ಒಂದು ಜೀವನ ಚಕ್ರವನ್ನೇ ನಿರ್ಮಿಸಿತ್ತು. ಜೀವಜಾಲ ಹಳ್ಳಿಹಳ್ಳಿಯಲ್ಲೂ ಹೆಣೆದುಕೊಂಡಿತ್ತು. ಮಾನವ ತನಗರಿವಿಲ್ಲದೆಯೇ ಈ ಜೀವಜಾಲದಲ್ಲಿ ತಾನೊಂದು ಕೊಂಡಿಯಾಗಿದ್ದ. ತಾನೇ ಜೀವಜಾಲವನ್ನು ಹೆಣೆದಿದ್ದ ಕೂಡ.

ಒಂದು ಬೆಳೆ ತೆಗೆದರೆ ಅದು ತನಗೆ ಆಹಾರ ಧಾನ್ಯ ಕೊಡುವುದರೊಂದಿಗೆ ಬೇಸಾಯದಲ್ಲಿ ಸಹಾಯ ಮಾಡಿದ ಸಾಕುಪ್ರಾಣಿಗಳಿಗೂ ಮೇವು ಸಿಗಬೇಕು. ತಾನು ಬೆಳೆದ ಗಿಡಮರಗಳು ಬಡಿಗನಂಥ ಇನ್ನಿತರ ಕಸಬುದಾರರಿಗೆ ಉಪಯೋಗಬೇಕು. ತಾನು ಉಣ್ಣಬೇಕು, ಉಣ್ಣುವ ಮೊದಲು ಅತಿಥಿಯೊಬ್ಬರಿಗೆ ಉಣಬಡಿಸಬೇಕು. ಇದು ನಮ್ಮ ಗ್ರಾಮ್ಯ ಜೀವನದ ತಿರುಳಾಗಿದ್ದ ಕಾಲವೊಂದಿತ್ತು.

ಭಾರತದಲ್ಲಾಗಲೀ ಅಥವಾ ವಿದೇಶದ ಯಾವುದೇ ಜನಪದ ಸಂಸ್ಕೃತಿಯಲ್ಲಾಗಲೀ ಸಾಂಪ್ರದಾಯಿಕ ಎನಿಸುವ ಯಾವುದೇ ಕಸಬು ಮತ್ತು ಜೀವನ ಪದ್ಧತಿಗಳು. ನಮ್ಮೀ ಬದುಕಿನ ಮೂಲವೇ ನಿಸರ್ಗ ಎಂಬ ತತ್ವದ ಮೇಲೆ ನಿಂತಿವೆ. ಆ ತತ್ವವನ್ನೇ ಸಾರಿ ಹೇಳುತ್ತವೆ. ಸೂಕ್ಷ್ಮ ಜೀವಿಯಿರಲಿ, ಸಸ್ಯ ಪ್ರಾಣಿಯಿರಲಿ, ಅಣುಜೀವಿಯಿರಲಿ, ಆನೆಯಿರಲಿ ಎಲ್ಲ ಜೀವಿಗಳಿಗೂ ಜೀವಿಸುವ ಹಕ್ಕು ಸಮಾನವಾಗಿರುತ್ತದೆ ಎಂಬುದನ್ನು ಈ ಜೀವನ ಪದ್ಧತಿಗಳು ನಂಬುತ್ತವೆ ಅಷ್ಟೇ ಏನು ಜೀವವಿಲ್ಲದ ಮಣ್ಣು ಕಲ್ಲನ್ನು ಕೂಡ ಗೌರವಿಸುತ್ತದೆ ಈ ಸಂಪ್ರದಾಯಗಳು.

ಹೀಗಾಗಿ ನಿಸರ್ಗವನ್ನು ಗೌರವಿಸುವುದು ನಮ್ಮ ಜನಪದರಲ್ಲಿ ಹಾಸು ಹೊಕ್ಕಾಗಿ ಬಂದಿದೆ. ಹಿಂದೂ ಧರ್ಮವಿರಲಿ, ಬೌದ್ಧ, ಜೈನ ಮತಗಳಿರಲಿ, ಏಕೋ ದೇವ, ಸರ್ವಭೂತೇಶು ತಿಷ್ಕತಿ ಎಂಬೀ ವಾಕ್ಯದ ಆಧಾರದ ಮೇಲೆ ನಿಂತಿವೆ. ಜೈನ ಮತದಲ್ಲಿ ಜೀವ ಅಜೀವಗಳ ಬಗ್ಗೆ ಹೇಳುವಾಗ ಜೀವಿಯಿರಲಿ ನಿರ್ಜೀವಿಯಿರಲಿ ಎಲ್ಲವೂ ನಿಸರ್ಗದ ಭಾಗಗಳು, ಒಂದು ಗಿಡದ ಎಲೆಯನ್ನು ಕಿತ್ತರೂ ಅದು ಜೈವಿಕ ಸಮಗ್ರತೆಗೆ ಭಂಗ ಕೊಟ್ಟಂತೆ ಎಂದು ಹೇಳುತ್ತದೆ. ಗಿಡವನ್ನೇ ಕೀಳಬೇಕಾಗುತ್ತದೆ ಎಂಬ ಕಾರಣಕ್ಕೆ ಕಂದ ಮೂಲವನ್ನು ತಿನ್ನುವುದನ್ನು ಕೂಡ ಜೈನಮತ ವಿರೋಧಿಸುತ್ತದೆ.

ಬೌದ್ಧ ಮತದ ಮೂಲ ತತ್ವವೂ “ಆಸೆಯೇ ದುಃಖಕ್ಕೆ ಮೂಲ ಕಾರಣ”ವೆನ್ನುತ್ತದೆ. ತಾನು ನಿಸರ್ಗದ ಒಂದು ತುಣುಕೆಂಬುದನ್ನು ಅರಿತು, ನಿಸರ್ಗಕ್ಕೆ ಧಕ್ಕೆ ಮಾಡದ ರೀತಿಯಲ್ಲಿ ತನ್ನಷ್ಟಕ್ಕೆ ತಾವು ತೃಪ್ತನಾಗಿ ಬದುಕಬೇಕು ಎಂದೀ ಮತ ಹೇಳುತ್ತದೆ. ಆಸೆಗೆ ಕೊನೆ ಮೊದಲಿಲ್ಲ, ತನಗಿರುವುದಕ್ಕಿಂತ ಹೆಚ್ಚು ಹೆಚ್ಚು ಬೇಕೆನ್ನುತ್ತ ಹೋದಂತೆಲ್ಲ ಸಮಾಜಕ್ಕೂ ಪೆಟ್ಟಾಗುತ್ತದೆ. ಭೌತಿಕ ಪರಿಸರಕ್ಕೂ ಹಾನಿಯಾಗುತ್ತ ಹೋಗುತ್ತದೆ.

ಮಾನವ ಪ್ರಕೃತಿಯ ಒಂದು ಭಾಗವೆನ್ನುವುದನ್ನು ಹಿಂದೂ ಜನಪದ ಜೀವನ ತತ್ವಗಳು ಇನ್ನೂ ಚೆನ್ನಾಗಿ ಹೇಳುತ್ತವೆ. ಈ ಜಗತ್ತೆಲ್ಲ ಭೂತ ಮಹಾಭೂತಗಳಿಂದಾಗಿದೆ. ಪೃಥ್ವಿ, ನೀರು, ತೇಜ, ವಾಯು, ಆಕಾಶ ಇವು ಪಂಚ ಮಹಾಭೂತಗಳು, ಭೂತಗಳೆಂದರೆ ಜೀವವಸ್ತುಗಳು, ಮಹಾಭೂತಗಳೆಂದರೆ ನಿರ್ಜೀವ ವಸ್ತುಗಳು, ಜೀವವಸ್ತು ಸತ್ತಾಗ ಅದು ಮಹಾಭೂತಗಳಲ್ಲೊಂದಾಗುತ್ತದೆ.

ಜೀವದಿಂದ ಜೀವ, ಜೀವವನ್ನವಲಂಬಿಸಿ ಜೀವ, ಜೀವದಿಂದ ಅಜೀವ, ಅಜೀವದಿಂದ ಜೀವ ಎಂಬ ಅರಿವೇ ಜನಪದನನ್ನು ತಮ್ಮ ಸುತ್ತಲಿನ ರಕ್ಷಕನನ್ನಾಗಿ ಮಾಡಿತ್ತು. ಅರಿವು ಇದ್ದುದರಿಂದ ನಿಸರ್ಗದ ಬಗ್ಗೆ ಗೌರವ ಭಾವನೆ ಬಂದಿತೋ ಅಥವಾ ಗೌರವ ಮೊದಲಿನಿಂದ ಇದ್ದುದರಿಂದ ತೃತೀಯ ಜಗತ್ತಿನಲ್ಲಿ ಪ್ರಕೃತಿ ಸಂಪತ್ತು ಸ್ವಲ್ಪಮಟ್ಟಿಗಾದರೂ ಉಳಿಯಿತೋ ಗೊತ್ತಿಲ್ಲ.

ಬದಲಾವಣೆಯೇ ಕಾಲದ ಗುರಿ, ಪರಿಸರದಲ್ಲಿ ತಾನೊಂದೆಂದು ಮಾನವ ನಂಬಿದ್ದ ಕಾಲವೂ ಉರುಳಿತು. ಅತಿ ಆಸೆ, ಅಭಿವೃದ್ಧಿ ಎಂಬ ಹುಸಿ ನಂಬಿಕೆ, ಐಶಾರಾಮಿ ವೈಭೋಗದತ್ತ ಮನ ಸೋಲುವಿಕೆಗಳು ಭೌತಿಕ ಪರಿಸರ ನಾಶಕ್ಕೆ ನಾಂದಿ ಹಾಕಿದವು. ನಿಸರ್ಗ ಸಮತೋಲನವನ್ನು ಕೆಡಿಸತೊಡಗಿದವು.

ತನ್ನ ದೇಹದ ಭಾಗದ ಹೊರತಾಗಿ ಆಯುಧಗಳನ್ನು ಉಪಯೋಗಿಸಬಲ್ಲ ಏಕೈಕ ಪ್ರಾಣಿಯೆಂದರೆ ಮನುಷ್ಯನೇ. ಆಯುಧಗಳ ಬಳಕೆ ಅತಿಯಾದಾಗ ಪ್ರಕೃತಿಯಲ್ಲಿ ಗಾಯಗಳು ಮೂಡತೊಡಗಿದವು. ಇಂದು ಮನುಷ್ಯ ತಾನೂ ಒಂದು ಭಾಗವಾಗಿರುವ ನಿಸರ್ಗವನ್ನೇ ಗೆಲ್ಲಲು ಕತ್ತಿ ಹಿರಿದು ನಿಂತಿದ್ದಾನೆ.

ಭಾರತದಲ್ಲಿ ಭೌತಿಕ ಪರಿಸರದ ಬಗ್ಗೆ ಮಾತನಾಡುವಾಗ ಬ್ರಿಟೀಷರ ಮೂಲಕ ಭಾರತದ ಮೇಲೆ ದಾಳಿ ಮಾಡಿದ ಪಾಶ್ಚಾತ್ಯ ಜೀವನ ಶೈಲಿಯ ಬಗ್ಗೆ ಹೇಳದಿರಲಿಕ್ಕಾಗುವುದಿಲ್ಲ. ೧೮ನೇ ಶತಮಾನ ಮತ್ತು ೧೯ನೇ ಶತಮಾನಗಳಲ್ಲಿ ಒಂದೇ ಸಮ ಬೇರೆ ಬೇರೆ ವಿದೇಶಿಯರ ದಾಳಿಗೆ ತುತ್ತಾದ ಉತ್ತರ ಭಾರತದ ಬಗ್ಗೆ ವಿದೇಶಿಯೊಬ್ಬನು ಹೀಗೆ ಬರೆಯುತ್ತಾನೆ. ತಮಗೆ ಬೇಕಾದುದನ್ನು ಬೆಳೆದುಕೊಂಡು, ಪೂರ್ಣ ಸ್ವಾವಲಂಬಿಯಾಗಿರುವ ಇಲ್ಲಿನ ಹಳ್ಳಿಗಳು ಒಂದೊಂದು ಗಣರಾಜ್ಯವಿದ್ದಂತೆ, ಆರ್ಯರು, ಪಠಾಣರು, ಮೊಗಲರು, ಮರಾಠರು, ಸಿಖ್ ಹೀಗೆ ಸಾಮ್ರಾಜ್ಯದ ನಂತರ ಸಾಮ್ರಾಜ್ಯಗಳು ಆಗಿ, ನಶಿಸಿ ಹೋದವು. ಆದರೆ ಹಳ್ಳಿಗಳು ನಶಿಸಲಿಲ್ಲ. ತಮ್ಮದೇ ಸಂಸ್ಕೃತಿಯಲ್ಲಿ ತಮ್ಮದೇ ಜೀವನ ಪದ್ಧತಿಯಲ್ಲಿ ಅವು ಸದಾ ಜೀವಂತವಾಗೇ ಇದ್ದವು.

ಆದರೆ ಸ್ವಾವಲಂಬಿಯಾಗಿ ಬದುಕಿಕೊಂಡಿದ್ದ ಹಳ್ಳಿ ಜೀವನದ ಮೇಲೆ ಬ್ರಿಟೀಷ ಸಾಮ್ರಾಜ್ಯ ಮಾತ್ರ ದಾಳಿ ಮಾಡಿತು. ಜೀವನ ಪದ್ಧತಿಯನ್ನೇ ಕೆಡಿಸಿ ಕೋಲಾಹಲವನ್ನುಂಟು ಮಾಡಿತು. ಪರಿಸರದೊಂದಿಗೆ ಒಂದಾಗಿ ಜೀವಿಸುತ್ತಿದ್ದ ಭಾರತೀಯ ಜೀವನ ಪದ್ಧತಿಯನ್ನು ಪಾಶ್ಚಾತ್ಯರು ಎಂದೂ ಗೌರವಿಸಲಿಲ್ಲ. ಪ್ರಕೃತಿ ಪೂಜೆಯನ್ನು ಹುಚ್ಚುತನ ಎಂದು ತುಚ್ಚೀಕರಿಸಿದರು. ಅಲ್ಲಿಂದ ಆರಂಭವಾಯಿತು ಭೌತಿಕ ಪರಿಸರದ ನಾಶ ಅಥವಾ ಜನಪದ ಜೀವನದ ಮೇಲೆ ಪ್ರಹಾರ.

ಭೌತಿಕ ಪರಿಸರದ ನಾಶ :

ನಮ್ಮ ಸುತ್ತಲಿನ ಪ್ರಕೃತಿ ಸಂಪತ್ತನ್ನು ಧಾರಾಳವಾಗಿ ಉಪಯೋಗಿಸಿಕೊಂಡು ನಮ್ಮ ಅನುಕೂಲತೆಗಳನ್ನು ಹೆಚ್ಚಿಸಿಕೊಳ್ಳುವುದೇ ಅಭಿವೃದ್ಧಿ ಎಂದು ಬ್ರಿಟೀಷರು ನಮಗೆ ಕಲಿಸಿಕೊಟ್ಟರು. ಜೋಗದಲ್ಲಿ ಧುಮ್ಮಿಕ್ಕುತ್ತಿದ್ದ ಶರಾವತಿಯನ್ನು ನೋಡಿ ವಿಶ್ವೇಶ್ವರಯ್ಯ “what a waste !”  ಎಂದು ಉದ್ಧರಿಸಿದರಂತೆ ಶರಾವತಿಗೆ ೨.೫ ಕಿ.ಮೀ ಉದ್ಧದ ಅಣೆಕಟ್ಟು ಹಾಕಿದಾಗ ೧೫೦೦೦ ಹೆಕ್ಟೇರು ಕಾಡು ನೀರೊಳಗೆ ಮುಳುಗಿತು. ‘ಅಯ್ಯೋ ಎಷ್ಟೊಂದು ದಟ್ಟ ಕಾಡು ನೀರುಪಾಲಾಗಿ ಹೋಯಿತಲ್ಲ’ ಎಂದು ಉದ್ಧರಿಸಿದವರಾರೂ ಇಲ್ಲ. ವಿದ್ಯುತ್ ಬೇಕೆಂದರೆ ನಾವು ಏನನ್ನಾದರೂ ತ್ಯಾಗ ಮಾಡಲೇ ಬೇಕು ಎಂಬ ಹೊಸ ಲೋಕೋಕ್ತಿಯನ್ನು ಉದ್ಧರಿಸಲಾಯಿತು. ಆದರೆ ತ್ಯಾಗ ಯಾರದು ? ಫಲ ಯಾರಿಗೆ ?

ನಮ್ಮ ಹಿಂದಿನ ಹಳ್ಳಿಗರು ಭೂತದ ಕಾಡು, ನಾಗರಬನ, ದೇವರ ಕಾಡು ಎಂದೆಲ್ಲ ಹೆಸರನ್ನಿಟ್ಟು ಕೆಲವೊಂದು ಪ್ರದೇಶಗಳಲ್ಲಿ ಮನುಷ್ಯರೆಂದೂ ಪ್ರವೇಶಿಸದಂತೆ ಮಾಡಿ ಅಲ್ಲಿ ಕಾಡು ಯಥೇಚ್ಛವಾಗಿ ಬೆಳೆದುಕೊಂಡಿರುವಂತೆ ಮಾಡಿದ್ದರು. ಭಯ ಭಕ್ತಿಗಳಿಂದ ಅವನ್ನು ಕಾಪಾಡಿಕೊಂಡು ಬಂದಿದ್ದರು. ಆದರೆ ಬ್ರಿಟೀಷರು ಜನರ ಈ ಭಯಭಕ್ತಿಯನ್ನೆಲ್ಲ Fools Sentiment ಎಂದು ತಳ್ಳಿ ಹಾಕಿ ದಟ್ಟ ಕಾಡನ್ನೆಲ್ಲ ಸಂರಕ್ಷಿತ ಅರಣ್ಯ, ಕಾದಿಟ್ಟ ಅರಣ್ಯವೆಂದು ಬೇಲಿ ಹಾಕಿಬಿಟ್ಟರು. ಸಂರಕ್ಷಿಸಿಕೊಂಡು ಬಂದವರಿಂದ ರಕ್ಷಿತವಾದ ಅರಣ್ಯ ಮುಂದೆ ಇರುವುದೇ ಆಳರಸರ ಐಶಾರಾಮಿಗೆ ಎಂದಾಯಿತು. ಸಾಗವಾನಿ, ದೇವದಾರು, ಶ್ರೀಗಂಧ, ಬೀಟೆಗಳು ಸರ್ವಭಕ್ಷಕ ಜನಾಂಘದ ಮೇಜವಾನಿಯ ಟೇಬಲ್, ಕುರ್ಚಿ, ಗೃಹಾಲಂಕಾರದ ಪೀಠೋಪಕರಣಗಳಾದವು. ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳಾದವು. ಸಾಮಾನು ಸಾಗಾಣಿಕೆಗೆಂದು ದೇಶದ ಉದ್ದಗಲಕ್ಕೂ ನಮ್ಮ ಅತ್ಯಮೂಲ್ಯ ಮರಗಳು ಬಲಿಯಾಗಿ ಮಲಗಿದವು. ಬೇಲಿಯ ಒಳಗೆ ಕೊಳ್ಳೆಯಾಗುತ್ತಿದ್ದರೂ ಹಳ್ಳಿಯ ಜನ ಸೊಲ್ಲೆತ್ತುವಂಟಿಲ್ಲ. ಕಾರಣ ಆ ದರೋಡೆಕಾರರ ದೃಷ್ಟಿಯಲ್ಲಿ ಈ ಜನರೇ ಕಳ್ಳರು.

ಒಂದು ದೇಶದ ಪರಿಸರ ಸಮತೋಲನದಲ್ಲಿರಬೇಕೆಂದರೆ ಯಾವುದೇ ದೇಶದ ಒಟ್ಟು ಭೂಭಾಗದ ಶೇ.೩೩ ಭಾಗದಷ್ಟಾದರೂ ಕಾಡಿರಬೇಕು. ನಮ್ಮ ದೇಶದಲ್ಲಿ ಈಗಿರುವುದು ಶೇ.೧೧ ಕ್ಕಿಂತ ಕಡಿಮೆ ಕಾಡು. ಮಾಯವಾದ ಅರಣ್ಯಗಳಲ್ಲಿ ಅಣೆಕಟ್ಟಿನ ಪಾಲೆಷ್ಟೋ, ಕಾರ್ಖಾನೆಗಳ ಪಾಲೆಷ್ಟೂ, ಗಣಿಗಳ ಪಾಲೆಷ್ಟೋ ಅರಣ್ಯ ನುಂಗಲು ಯೋಜನೆಗಳಿಗೇನು ಕಡಿಮೆ ?

ಅರಣ್ಯ ನಾಶದ ನೇರ ಪರಿಣಾಮ ಹಳ್ಳಿಗಳ ಜನಪದದ ಮೇಲೆಯೇ. ಇತ್ತೀಚಿನ ವರ್ಷಗಳಲ್ಲಿ ಭಾರತದ ಗ್ರಾಮೀಣ ಪರಿಸರ ದಿನದಿಂದ ದಿನಕ್ಕೆ ದುರಂತದತ್ತ ಬೀಳುತ್ತಿದೆ. ಮನೆಕಟ್ಟಲು ಕಟ್ಟಿಗೆ, ಉರುವಲು ಕೃಷಿ ಸಾಮಗ್ರಿ, ಸೊಪ್ಪು, ಗೊಬ್ಬರ, ಬುಟ್ಟಿ ಹೆಣೆಯುವವರಿಗೆ ಬೆತ್ತ ಬಿದಿರು, ಹೀಗೆ ಸಾಮಾನ್ಯ ಜನರು ಅವಲಂಬಿಸಿದ್ದ ವಸ್ತುಗಳ ಮೇಲೆಯೇ ಕಾಗದ, ಪ್ಲೈವುಡ್, ಬೆಂಕಿಪೆಟ್ಟಿಗೆ, ಪಾಲಿಫೈಬರ್ನಂಠ ಬೃಹತ್ ಕಾರ್ಖಾನೆಗಳೂ ಅವಲಂಬಿಸತೊಡಗಿದರೆ ಬಡ ಹಳ್ಳಿಗನಿಗೆ ತನ್ನ ಪಾಲು ಸಿಕ್ಕೀತು ? ನಂಬಿದ ಉದ್ಯೋಗ ತ್ಯಜಿಸಿ ಕೆಟ್ಟು ಪಟ್ಟಣ ಸೇರುವುದೊಂದೇ ಅವನಿಗೆ ಉಳಿದಿರುವ ದಾರಿ. ನಮ್ಮ ಪಶ್ಚಿಮ ಘಟ್ಟಗಳು ಕೇವಲ ೩ ಬೆಂಕಿ ಪೊಟ್ಟಣ ತಯಾರಿಕಾ ಕಾರ್ಖಾನೆಗೆ ಕಚ್ಚಾ ವಸ್ತು ಒದಗಿಸಬಲ್ಲವು. ಆದರೆ ೧೭ ಕ್ಕೂ ಹೆಚ್ಚು ಕಾರ್ಖಾನೆಗಳಿವೆಯೆಂದರೆ ಆ ಕಾಡಿನ ಮೇಲೆ ಈ ಒಂದೇ ಜಾತಿಯ ಕಾರ್ಖಾನೆಗಳಿಂದ ಬೀಳುತ್ತಿರುವ ಪೆಟ್ಟು ಎಷ್ಟೆಂದು ಊಹಿಸಿ, ಪ್ಲೈವುಡ್, ಪಲ್ಸ್ ಕಾರ್ಖಾನೆಗಳ ವಿಷಯ ಆಮೇಲೆ.

ಗ್ರಾಮೀಣ ಉದ್ಯೋಗಗಳು, ಗುಡಿ ಕೈಗಾರಿಕೆಗಳು ಕ್ರಮೇಣ ನೆಲಕಚ್ಚುತ್ತ ಹೋದವು. ಇವುಗಳತ್ತ ಬ್ರಿಟೀಷರಿಗೆ ಎಂದೂ ಗೌರವ ಇರಲೇ ಇಲ್ಲ. ದೊಡ್ಡ ಬಂಡವಾಳ ಹಾಕಿ, ಹೆಚ್ಚು ನಿಸರ್ಗ ಸಂಪತ್ತನ್ನು ಲೂಟಿ ಮಾಡಿ, ಸರಕಾರದಿಂದ ಅಪಾರ ಸಬ್ಸಿಡಿಯಲ್ಲಿ ವಿದ್ಯುತ್ ಪಡೆದು ಬೃಹತ್ ಕೈಗಾರಿಕಾ ಸ್ಥಾಪನೆ ಮಾಡುವತ್ತಲೇ ಅವರ ಒಲವು. ಇದೇ ನೀತಿ ಸಂಹಿತೆಯನ್ನು ಸ್ವತಂತ್ರ ಭಾರತದ ಸರಕಾರವೂ ಸಹ ಮನಸಾರೆ ಒಪ್ಪಿಕೊಂಡು ಇಂದಿಗೂ ಅದನ್ನೇ ಪಾಲಿಸಿಕೊಂಡು ಬಂದಿದೆ. ಆದರೆ….

ಆದರೆ, ಬೃಹತ್ ಕಾರ್ಖಾನೆಗಳು, ಗ್ರಾಮೀಣ ಜನಪದರ ಎಲ್ಲಾ ಕಸುಬುಗಳಿಗೂ ದೊಡ್ಡ ಪೆಟ್ಟನ್ನೇ ಕೊಟ್ಟವಲ್ಲದೇ ಕಂಗಾಲಾದ ಜನತೆಗೆ ಮಾಲಿನ್ಯವನ್ನು ಧಾರಾಳವಾಗಿ ನೀಡಿದವು.

ನಿಸರ್ಗದಲ್ಲಿ ಹೊಲಸು, ಕೊಳಚೆ ಎಂಬುದು ಇಲ್ಲವೇ ಇಲ್ಲ. ಒಂದರ ತ್ಯಾಜ್ಯವಸ್ತು, ಇನ್ನೊಂದರ ಆಹಾರ. ನಮಗೆ ಬೇಡವಾದ ಹುಲ್ಲು ಕಸವನ್ನು ತಿಂದ ದನಕರು ಆಡುಗಳು ತ್ಯಜಿಸಿದ ಮಲವನ್ನೇ ಮತ್ತೆ ನಾವು ಅನ್ನ ಬೆಳೆಯುವ ಗಿಡಗಳಿಗೆ ಉಪಯೋಗಿಸುತ್ತೇವೆ. ಒಂದು ಪ್ರಾಣಿ ಸತ್ತರೂ ಕೂಡ ಅದರ ಭೌತಿಕ ಶರೀರವನ್ನು ಲಕ್ಷಾಂತರ ಜೀವಿಗಳು ತಿಂದು ಜೀರ್ಣಿಸಿ ಮಣ್ಣಿಗೆ ಸೇರಿಸುತ್ತವೆ. ನಿಸರ್ಗ ಅದನ್ನು ಮತ್ತೆ ತನ್ನೊಲಗೆ ಹುಗಿದಿಟ್ಟುಕೊಳ್ಳುತ್ತದೆ.

ಮನುಷ್ಯ ತನಗೆ, ತನ್ನ ಸುತ್ತಲಿನವರಿಗೆ ಬೇಕಾಗಿದ್ದಷ್ಟನ್ನೇ ಉತ್ಪತ್ತಿ ಮಾಡುತ್ತಿದ್ದಾಗಲೂ ನಿಸರ್ಗದ ಈ ನಿಯಮವನ್ನು ಮುರಿದಿರಲಿಲ್ಲ. ಆದರೆ ಅವನು ಎಂದು ತನ್ನ ಭೋಗಕ್ಕಾಗಿ ಅವಶ್ಯಕತೆಗಿಂತ ಹೆಚ್ಚು ಉತ್ಪಾದಿಸಲಾರಂಭಿಸಿದನೋ ಆಗ ನಿಸರ್ಗದಲ್ಲಿ ಕೊಳಚೆ, ಹೊಲಸು ಎಂಬ ವಸ್ತುವೊಂಡು ಉದ್ಭವವಾಯಿತು. ಇಂದು ಹವಾಮಾಲಿನ್ಯ ಜಲಮಾಲಿನ್ಯ ಭೂ ಮಾಲಿನ್ಯಗಳು ಅತಿಯಾಗಿ ಅದರೆ ಸಮಸ್ಯೆಗಳು ಮುಗಿಲೆತ್ತರಕ್ಕೆ ಎದ್ದು ನಿಂತಿವೆ.

ಪರಿಸರ ಮಾಲಿನ್ಯವನ್ನು ನಿರ್ಲಕ್ಷಿಸಿ ಕೇವಲ ಕೈಗಾರಿಕಾಭಿವೃದ್ಧಿಗೆ ಗಮನಕೊಟ್ಟರೆ ಆಗಬಹುದಾದ ಅಪಾಯ ಎಂಥಹುದು ಎಂಬುದಕ್ಕೆ ಬೀದರ ಜಿಲ್ಲೆಯ ಕೊಳಾರ ಗ್ರಾಮದ ಜನರು ಅನುಭವಿಸುತ್ತಿರುವ ನರಕಯಾನತೆ ತೀರ ಇತ್ತೀಚೆಗಿನ ಒಂದು ಉದಾಹರಣೆ.

೧೯೯೩ರಲ್ಲಿ ಕೈಗಾರಿಕಾರಹಿತ ಜಿಲ್ಲೆಯೆಂದು ಕರೆಸಿಕೊಂಡ ಬೀದರ ಜಿಲ್ಲೆಯ ಅಭಿವೃದ್ಧಿಗೆಂದು ಸರಕಾರ ನೂರಾರು ಕೈಗಾರಿಕೆಗಳನ್ನೆಲ್ಲ ಆಹ್ವಾನಿಸಿತು. ಸಾವಿರಾರು ಎಕರೆ ಭೂಮಿಯನ್ನು ಮೀಸಲಿಟ್ಟಿತ್ತು. ಸರ್ಕಾರದ ಆಹ್ವಾನ, ರಿಯಾಯಿತಿ, ಸವಲತ್ತುಗಳನ್ನು ಉಪಯೋಗಿಸಿಕೊಂಡೂ ಕೊಳಾರ ಕೈಗಾರಿಕಾ ಪ್ರದೇಶಕ್ಕೆ ೮೦ ಕೈಗಾರಿಕಾ ಘಟಕಗಳು ಬಂದವು. ಅವುಗಳಲ್ಲಿ ೧೪ ಔಷದಗಳ ಮೂಲವಸ್ತು ತಯಾರಿಸುವ ರಾಸಾಯನಿಕ ಕಾರ್ಖಾನೆಗಳು. ಬೀದರ ಮತ್ತು ಕೊಳಾರ ಗ್ರಾಮದ ಜನರಿಗೆ ವರದಾನವಾಗಬೇಕಿದ್ದ ಕೈಗಾರಿಕೆಗಳು ಹೊರಬಿಡೂವ ಕಲುಷಿತ ನೀರು, ವಾಯುಮಾಲಿನ್ಯದಿಂದಾಗಿ ಜನ ಮತ್ತು ಜಾನುವಾರುಗಳ ಬದುಕು ನರಕ ಸದೃಶ್ಯವಾಗಿದೆ. ಕಾರ್ಖಾನೆಗಳು ಕೋಟ್ಯಂತರ ರೂಪಾಯಿಗಳ ಲಾಭಗಳಿಸುತ್ತಿದ್ದರೂ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸದೇ ಇರುವುದರಿಂದ ಕಾರ್ಖಾನೆಗಳ ಕೊಳಚೆ ಹಳ್ಳ-ಕೊಳ್ಳಗಳ ಮೂಲಕ ನೀರು ಹರಿದು ಸುತ್ತಲ ಹೊಲಗದ್ದೆಗಳಿಗೂ ನುಗ್ಗಿದೆ. ನೀರು ಹರಿಯುವ ಜಾಗದಲ್ಲೆಲ್ಲ ಉಪ್ಪಿನಂಶ ಹೆಚ್ಚಾಗಿ ಮಣ್ಣು ಬಿಳುಪಾಗಿದೆ. ಸಮೃದ್ಧವಾಗಿ ಬೆಳೆಕೊಡುತ್ತಿದ್ದ ಭೂಮಿ ಇಂದು ಬರಡಾಗಿದೆ. ಅಕ್ಕಪಕ್ಕದ ಹೊಲಗಳಲ್ಲೂ ಬೆಳೆಗಳು ಮುರುಟೆ ಹೋಗಿವೆ. ರಾಸಾಯನಿಕ ನೀರು ಬಾವಿಯ ತಳ ಸೇರಿ ಬಾವಿ ನೀರು ಹಳದಿ, ಕೆಂಪು ಬಣ್ನಕ್ಕೆ ತಿರುಗಿವೆ. ಹಳ್ಳ ಕೆರೆಗಳೆಲ್ಲವುಗಳ ನೀರು ವಿಷಯುಕ್ತವಾಗಿ ಕುಡಿಯುವ ನೀರಿಗಾಗಿ ಹಾಹಾಕಾರ, ಕಲುಷಿತ ನೀರನ್ನೇ ಕುಡಿದು ಈವರೆಗೆ ಸುಮಾರು ೨೦೦ ಕ್ಕೂ ಹೆಚ್ಚು ದನಕರುಗಳು ಸಾವಿರಾರು ಆಡು ಕುರಿಗಳು ಪ್ರಾಣ ತೆತ್ತಿವೆ.

ಜನ ಮತ್ತು ಜಾನುವಾರುಗಳು ಕುಡಿಯುವ ನೀರು, ಸೇವಿಸುವ ಗಾಳಿ, ತಿನ್ನುವ ಅನ್ನದ ಕೃಷಿ ಭೂಮಿಗೆ ತುತ್ತಾಗಿರುವ ಕೊಳಾರದ ಕಾರ್ಖಾನೆಗಳು ಜನಪದ ಜೀವನದಲ್ಲಿ ಎಂಥ ಕೋಲಾಹರವನ್ನಬ್ಬಿಸಿರಬಹುದು.

ಕೃಷಿ (ಭೂಸಾರ ನಾಶ) :

ಆಧುನಿಕ ಜಗತ್ತಿಗೆ ಮನುಷ್ಯ ಪಾದಾರ್ಪಣೆ ಮಾಡಿದ್ದೇ ಕೃಷಿಯಿಂದ. ಆಗಿನಿಂದೇ ಭೌತಿಕ ಪರಿಸರದ ನಾಶ ಆರಂಭವಾಯಿತೆನ್ನಬಹುದಾದರೂ ಕೃಷಿಕ ತನ್ನ ಸುಸ್ಥಿರ ಕೃಷಿ ಪದ್ಧತಿಯಿಂದಾಗಿ ಸಾಧ್ಯವಾದಷ್ಟು ಪರಿಸರ ಸ್ನೇಹಿಯಾಗೇ ಬದುಕಿದ್ದ. ಆದರೆ ಆ ಕಾಲ ಉರುಳಿಹೋಗಿ ಈಗ ಅರ್ಧ ಶತಮಾನಕ್ಕೂ ಹೆಚ್ಚಾಯಿತೆನ್ನಬಹುದು. ನೊಗ, ನೇಗಿಲು, ಎತ್ತು, ಚಕ್ಕಡಿ, ಸಗಣಿ ಗೊಬ್ಬರಗಳ ಕಾಲ ಹೋಯಿತು. ಯಾಂತ್ರೀಕೃತ ರಾಸಾಯನಿಕ ಬೇಸಾಯದ ಕಾಲವಿದು.

ಕೃಷಿ ನಾಡಿನ ಬೆನ್ನೆಲುಬು ಎಂಬ ನಾಣ್ಣುಡಿಗೆ ಬಲು ವಿಶಾಲವಾದ ಅರ್ಥವಿದೆ. ಒಬ್ಬ ರೈತ ಕೃಷಿ ಮಾಡುತ್ತಿದ್ದರೆ ಸುತ್ತಲಿನ ಅನೇಕ ಕಸುಬುಗಳು ಜೀವಂತವಾಗಿರುತ್ತಿದ್ದವು. ಇಂಥ ಜನಪದ ಜೀವನ ಇಂದಿಗೂ ಹಲವು ಕಡೆ ಕಾಣಸಿಗುತ್ತದೆ. ನೊಗ, ನೇಗಿಲು, ಚಿಕ್ಕಡಗಳನ್ನು ಮಾಡಲು ಬಡಿಗ ಬೇಕು. ಕುರುಷಿ, ಕತ್ತಿ, ಗುದ್ದಲಿಗಳು ಕಮ್ಮಾರನಿಂದ ತಯಾರಾಗಬೇಕು. ಮನೆಬಳಕೆಯ ಮಡಿಕೆ ಕುಡಿಕೆಗಳು ಕುಂಬಾರನಿಲ್ಲದೇ ಇಲ್ಲ.ಇವರೆಲ್ಲರ ಅನ್ನದಾತ ರೈತ. ಕುರಿ ಕಾಯುವವನು ತಿಂಗಳಗಟ್ಟಲೆ ರೈತನ ಹೊಲದಲ್ಲಿ ತನ್ನ ಕುರಿಗಳೊಂದಿಗೆ ಬೀಡುಬಿಡುತ್ತಾನೆ. ಅಷ್ಟು ಕಾಲ ಕುರಿಗಳಿಗೆ ಹೊಲದ ಕಸವೇ ಮೇವು ಮತ್ತು ಇರಲು ಆಶ್ರಯ ಸಿಕ್ಕರೆ ರೈತನ ಹೊಲ ಕುರಿಹಿಕ್ಕೆಯಿಂದ ಬಂಗಾರದಂಥ ಗೊಬ್ಬರ ಪಡೆಯುತ್ತದೆ. ಹೀಗಿತ್ತು ಅಂದಿನ ಸಾಮರಸ್ಯ ಜೀವನ.

ಇನ್ನು ಹೊಲಗದ್ದೆಗಳ ವಿಷಯ ತೆಗೆದುಕೊಂಡರೂ ಅಷ್ಟೇ ಒಂದೇ ಹೊಲದಲ್ಲಿ ನಾಲ್ಕಾರು ನಮೂನೆಯ ಬೆಳೆಗಳು ಕೃಷಿಕೂಲಿಗಳಿಗೆ ಒಂದರ ನಾಟೆ ಮುಗಿಯುತ್ತಿದ್ದಂತೆಯೇ ಇನ್ನೊಂದರ ಸುಗ್ಗಿ ಆರಂಭ. ಇಡೀ ವರ್ಷ ಕೆಲಸ, ಹೊಟ್ಟೆ ತುಂಬ ಊಟ. ದನಕರುಗಳಿಗೆ ಮೇವು ನೀಡುವಂಥ ಬೆಳೆಗಳು. ಒಂದು ಬೆಳೆಗೆ ಕ್ರಿಮಿಕೀಟಗಳು ತಗುಲದಂತೆ ಇನ್ನೊಂದರಿಂದ ರಕ್ಷಣೆ. ವೈವಿಧ್ಯದ ಕೃಷಿ ಸುಸ್ಥಿರ ಸಾವಯವ ಕೃಷಿ ಸಹಜೀವನ, ಸಾಮರಸ್ಯ ಜೀವನವನ್ನು ಕೃಷಿಯು ಹಳ್ಳಿಯಲ್ಲಿ ನೇಯಿದ್ದಿತ್ತು.

ಇಂಥ ಜೀವನ ಇಂದಿಗೂ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಕಾಣಸಿಗುತ್ತದೆ. ಈ ಹಳ್ಳಿಗಳಲ್ಲಿ ಜನರು ಎಣ್ಣೆ ಮತ್ತು ಉಪ್ಪಿನ ಹೊರತಾಗಿ ಇನ್ನಾವುದನ್ನೂ ಹೊರಗಿನಿಂದ ತರುವುದಿಲ್ಲ. ಆದರೆ ಬಹುಪಾಲು ಹಳ್ಳಿಗಳ ಚಿತ್ರ ಇಂದು ಸಂಪೂರ್ಣ ಬದಲಾಗಿ ಹೋಗಿದೆ. ಹಿಂದೆ ವರ್ಣಿಸಿದ್ದ ಜನಪದ ಜೀವನ ಇಂದಿಲ್ಲ. ಸಾಮರಸ್ಯ ಎಂಬುದು ಶಬ್ದಕೋಶದ ಪದವಾಗಿ ಬಿಟ್ಟಿದೆ. ಇಂದು ಕೃಷಿ ಕೂಡ ಒಂದು ಕೈಗಾರಿಕೆ. ಎರಡನೇ ಮಹಾಯುದ್ಧದ ನಂತರ ಇನ್ನು ಯುದ್ಧ ಬೇಡ ಎಂಬ ನಿಲುವಿಗೆ ಎಲ್ಲ ರಾಷ್ಟ್ರಗಳೂ ಬಂದವು. ಯುದ್ಧ ಬೇಡವೆಂದರೆ ರಾಸಾಯನಿಕ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳು ಏನಾಗಬೇಕು ? ಅಪಾರ ಬಂಡವಾಳ ಹಾಕಿ ಬೆಳೆಸಿದ್ದ ಅವು ಮುಚ್ಚಿಹೋಗಬೇಕೆ ? ಪೆಟ್ರೋಲಿಯಂ ಉಪ ಉತ್ಪನ್ನಗಳನ್ನು ಏನು ಮಾಡಬೇಕು ? ಈ ಎಲ್ಲ ಪ್ರಶ್ನೆಗಳಿಗೆ ಕೃಷಿಭೂಮಿ ಉತ್ತರವಾಗಿ ನಿಂತಿತು. ಇತ್ತ ಜನಸಂಖ್ಯೆಯೂ ಏರ ತೊಡಗಿದಾಗ ಕಡಿಮೆ ಅವಧಿಯಲ್ಲಿ ಹೆಚ್ಚು ಉತ್ಪಾದಿಸಬೇಕೆಂಬ ಗುರಿಯೂ ಸರಕಾರಗಳ ಮುಂದೆ ನಿಂತಿತು.

ಕೃಷಿಯಲ್ಲಿ ಸಂಶೋಧನೆಗಾಗಿ ಹೆಚ್ಚು ಇಳುವರಿಕೊಡುವ ಸಂಕರ (ಮಿಶ್ರಣ) ತಳಿಗಳು ಬಂದವು. ಕೃಷಿಯಲ್ಲಿ ಕೈಗಾರಿಕೆ ಬರುತ್ತಲೇ ಕೃಷಿ ಪದ್ಧತಿಯೂ ಬದಲಾಯಿತು. ಕೃಷಿಯ ಹಿಂದೆ ಇದ್ದ ವಿಶಾಲವಾದ ಮನೋಭಾವವೂ ಕಾಣೆಯಾಯಿತು. ಹೆಚ್ಚು ಬೆಳೆ ಹೆಚ್ಚು ಗಳಿಸು, ಇದೇ ತತ್ವ. ವಾಣಿಜ್ಯ ಬೆಳೆಗಳು ಒಂದು ಜನರ ಧನದಾಹವನ್ನು ಹೆಚ್ಚಿಸಿದವು. ತನ್ನದಷ್ಟೇ ಅಲ್ಲದೆ ಸುತ್ತಲಿನವರ ಅವಶ್ಯಕತೆಗಳನ್ನು ಪೂರೈಸುತ್ತಿದ್ದ ತುಂಡು ಭೂಮಿ ರೈತನಿಗೆ ಸಾಲದಾಯಿತು. ಎಲ್ಲಿ ನೋಡಿದರೂ ಅತಿಕ್ರಮಣ ಗೋಮಾಳ, ಗಾಂಪಠಾಣಾ ಶೋಲಾಕಾಡುಗಳು, ಬೆಟ್ಟ, ಗುಡ್ಡ ಕಡೆಗೆ ದಟ್ಟ ಅರಣ್ಯಕ್ಕೂ ಕೂಡ ಜನರು ಲಗ್ಗೆ ಹಾಕಿದ್ದಾರೆ.

ಆಧುನಿಕತೆಯ ಗಾಳಿ ಸೋಂಕಿದಂತೆ ಗ್ರಾಮೀಣ ಬದುಕಿನ ಎಲ್ಲಾ ಮೌಲ್ಯಗಳೂ ಚದುರಿಹೋಗಿ ಚೆಲ್ಲಾಪಿಲ್ಲಿ ಆಗಿವೆ. ರೈತರ ಕೂಲಿಗಳ ಉಪಕಸುಬಿನವರ ಸಂಬಂಧ ಕೆಟ್ಟುಹೋಗಿದೆ. ಉದ್ಯಮಿಗಳ ಬಳಿ ಇರುವಂತೆ ರೈತನಿಗೂ ಹಣಬೇಕು. ಅವನು ಗಳಿಸುವುದನ್ನು ಉಳಿದ ಜನರೇಕೆ ಸುಮ್ಮನೆ ಕುಳಿತು ನೋಡಬೇಕು ? ಅವರಿಗೂ ಹಣ ಬೇಕು, ಹಣವಿದ್ದರೇ ಬದುಕು. ಹಣವಿದ್ದರೆ ಗೌರವ.

ಕೈಗಾರಿಕೆಗಳಿಂದಾಗಿ ಗ್ರಾಮೀಣ ಕಸುಬುಗಳು ಮೂಲೆಗುಂಪಾಗುತ್ತಿದ್ದಂತೆ ಆಯಾ ಕಸುಬನ್ನವಲಂಬಿಸಿದ್ದವರೆಲ್ಲ ಒಂದೋ, ಪಟ್ಟಣಗಳತ್ತ ವಲಸೆ ಹೋಗಲಾರಂಭಿಸಿದರು. ಇಲ್ಲವೇ ಎಲ್ಲೆಲ್ಲಿ ಭೂಮಿ ಸಾಗುಮಾಡಲು ಸಿಗುತ್ತದೆ ಎಂದು ಸಿಕ್ಕಸಿಕ್ಕಲ್ಲಿ ಗಳೆ ಹೂಡ ತೊಡಗಿದರು. ಕೆರೆ ಕುಂಟೆ ಗೋಮಾಳಗಳೆಲ್ಲ ಇಂದು ಹೊಲಗಳಾಗಿ ಮಾರ್ಪಟ್ಟಿವೆ.

ಹಿಂದೆ ಖಾಸಗಿ ಆಸ್ತಿ, ಊರೊಟ್ಟಿನ ಆಸ್ತಿಗಳು ಬೇರೆ ಬೇರೆಯಾಗಿದ್ದು ಊರೊಟ್ಟಿನ ಆಸ್ತಿಗಳು ಜನರ ಸಂಘಟನೆಯ ಸಂಕೇತಗಳಾಗಿದ್ದವು. ಧನಮೇಯಿಸುವ ಗೋಮಾಳು ಹಸಿರು ಸೊಪ್ಪು, ತರಗಲೆಗಳ ಬೆಟ್ಟ, ಔಷಧ ಮೂಲಿಕೆಗಳ ವನ, ಹಣ್ಣುಗಳ ತೋಪು ಇವನ್ನೆಲ್ಲ ಜನರು ಜೋಪಾನವಾಗಿ ಕಾದುಕೊಂಡು ಬಂದಿದ್ದರು. ಸಾಮಾಜಿಕ ಸೊತ್ತುಗಳನ್ನು ಸಂರಕ್ಷಿಸಲು ಆಳರಸರ ಬೆಂಬಲ ಕೂಡಾ ಇತ್ತು. ಪಶುಗಂದಾಯ, ಮೇವು ತೆರಿಗೆಗಳನ್ನು ವಿಧಿಸಿ ಯಾವುದೇ ವಸ್ತು, ಅತಿ ಬಳಕೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಇತ್ತು. ಸಾಮೂಹಿಕ ಆಸ್ತಿಯ ದುರ್ಬಳಕೆ ಮಾಡಿದವರಿಗೆ ದಂಡ ವಿಧಿಸುವ ಪರಿಪಾಠವಿತ್ತು. ಕೆರೆಯ ಹೂಳು ತೆಗೆಯುವ, ಕಾಲುವೆ ದುರಸ್ತಿ ಮಾಡುವ, ಕಳೇ ಕೀಳುವ ಕೆಲಸದಲ್ಲಿ ರೈತರು, ಕೂಲಿಗಳು ಉಪಕಸುಬಿನವರೆಲ್ಲ ಭೇದಭಾವವಿಲ್ಲದೆ ಭಾಗವಹಿಸುತ್ತಿದ್ದರು. ಸಮಾಜದಲ್ಲಿ ಸಮಾನತೆ ಇಲ್ಲದಿದ್ದರೂ ಸಾಮರಸ್ಯವಿತ್ತು. ಆಲದ ಬನ, ಬನ್ನಿವೃಕ್ಷ, ಅಶ್ವತ್ಥ (ಅರಳಿಮರ) ವೃಕ್ಷ, ಚೌಡಿಮರ, ಭೂತನ ಕೆರೆಗಳ ಬಗ್ಗೆ ಎಲ್ಲರಿಗೂ ಭಯ ಭಕ್ತಿ ಇತ್ತು.

ಇಂಥ ಒಂದು ಸಾಮೂಹಿಕ ಸಾಮಾಜಿಕ ಒಗ್ಗಟ್ಟಿನ ಜೀವನವನ್ನು ಆಧುನಿಕತೆ, ವಾಣಿಜ್ಯ ಬೆಳೆಗಳು, ಧನದಾಹ ಹರಿದು ಚಿಂದಿ ಚಿಂದಿ ಮಾಡಿದವು. ಊರೊಳಗಿನ ಜನಸಂಖ್ಯೆ ಹೆಚ್ಚಿದ್ದು, ಕುಲಕಸುಬುಗಳಿಗೆ ಗ್ರಹಣ ಹಿಡಿದಿದ್ದು, ಜನರಲ್ಲಿ ಆಂತರಿಕ ದ್ವೇಷ ಅತೃಪ್ತಿ ಮೂಡಿಸಿ ಮೊದಲಿದ್ದ ಒಗ್ಗಟ್ಟು, ಸಾಮರಸ್ಯ, ಸಂಯಮ ಎಲ್ಲವೂ ಮಾಯವಾಗಿ ಹೋದವು. ಕೃಷಿಭೂಮಿ ಶೇ.೪೪ ರಷ್ಟು ಹೆಚ್ಚಿತು. ಆಹಾರೋತ್ಪಾದನೆಯೂ ಹೆಚ್ಚಿತು ನಿಜ. ಆದರೆ ಅಸಮಾನ ಹಂಚಿಕೆಯ ಪರಿಣಾಮವಾಗಿ ಜನಪದದ ಮಧ್ಯೆ ಬಿರುಕು ಕಂದಕವಾಗಿ ಬೆಳೆಯುತ್ತಲೇ ಹೋಯಿತು.

ಹೆಚ್ಚು ಬೆಳೆ, ಹೆಚ್ಚು ಹಣಗಳಿಸು ಎಂಬ ಸೂತ್ರದ ಮೂಲತತ್ವ ಹೆಚ್ಚು ಹೆಚ್ಚು ರಾಸಾಯನಿಕಗಳನ್ನು ಭೂಮಿಗೆ ಹಾಕು ಎಂಬುದೇ ಆಗಿದೆ. ಹಸಿರು ಕ್ರಾಂತಿಯ ಹೆಸರಿನಲ್ಲಿ ನಮ್ಮ ದೇಶದಲ್ಲಿ ಎಲ್ಲಾ ಆಹಾರ ಧಾನ್ಯಗಳ ಹೈಬ್ರಿಡ್ ಅವತಾವಗಳು ಬಂದವು. ಶೀಘ್ರ ಬೆಳೆಕೊಡುವ ತಳಿ, ಗಿಡ್ಡ ತಳಿ, ದಪ್ಪನೆಯ ದಂಟಿಲ್ಲದ ತಳಿ ಹೆಚ್ಚು ಎಲೆಗಳು ಇಲ್ಲದತಳಿಗಳು ಬಂದವು. ಒಂದು ಗಿಡ ಆಹಾರ ಉತ್ಪಾದನೆ ಮಾಡಬೇಕೆಂದರೆ ಎಲೆಗಳು ಅದರ ಕಾರ್ಖಾನೆಗಾಗಿ ಕೆಲಸ ಮಾಡುವುದು ನಿಸರ್ಗ ನಿಯಮ. ಆದರೆ ಬೇರಿಗೆ ಹೆಚ್ಚು ಹೆಚ್ಚು ಗೊಬ್ಬರ ಕೊಟ್ಟು ಎಲೆಗಳು ಇಲ್ಲದೆಯೂ ನೇರ ಧಾನ್ಯದ ತೆನೆಯನ್ನೇ ಭೂಮಿಯಿಂದ ಹೊರತೆಗೆಯುವಲ್ಲಿಗೆ ನಮ್ಮ ವಿಜ್ಞಾನ ಮುಂದುವರೆದಿದೆ ಪ್ರಕೃತಿ ನಿಯಮದ ವಿರುದ್ಧ ಸಾಗಿದೆ.

ಕೃಷಿಯ ಮೂಲ ತತ್ವಗಳನ್ನು ನೀತಿ ಸಂಹಿತೆಗಳನ್ನು ಬುಡಮೇಲು ಮಾಡಿದು ಹೈಬ್ರಿಡ್ ಕೃಷಿ ವೈವಿದ್ಯ ಹೋಗಿ ಏಕಜಾತಿ ಬಂತು. ಅದರ ಫಲವಾಗಿ ಸಮಗ್ರತೆಯ ಸಂಕೇತವಾಗಿದ್ದ ಆಹಾರ ಪೋಷಕಾಂಶ, ರಕ್ಷಣೆಗಾಗಿ ಪರಸ್ಪರರನ್ನು ಅವಲಂಬಿಸಿದ್ದ ಸಸ್ಯಗಳೆಲ್ಲ ದೂರದೂರವಾಗಿ ಒಂಟಿಯಾಗಿ, ಪೋಷಕಾಂಶಕ್ಕಾಗಿ ಪೇಟೆಯ ಗೊಬ್ಬರ, ಪೇಟೆಯ ಕೀಟನಾಶಕ ಇವನ್ನೇ ಅವಲಂಬಿಸಬೇಕಾಗಿ ಬಂತು. ಭೂಸಾರ ಕಡಿಮೆಯಾಗುತ್ತ ರಾಸಾಯನಿಕದ ಬೇಡಿಕೆ ಜಾಸ್ತಿಯಾಗುತ್ತ ಹೋಯಿತು. ಬೆಲೆ ಹೆಚ್ಚಿದಂತೆ ರೈತ ರಾಸಾಯನಿಕ ಉದ್ಯಮದ ಗುಲಾಮನಾದ. ದೂರ ಕಾಣುವ ಹಣ ಅವನ್ನಾಡಿಸತೊಡಗಿತು. ಹೊರಗಿನ ಅವಲಂಬನೆ ಪರಸ್ಪರ ಬಾಂಧವ್ಯದ ತಂತುಗಳನ್ನೆಲ್ಲ ಕಡಿದು ಹಾಕಿದವು.

ನಗರೀಕರಣ ಭೌತಿಕ ಪರಿಸರ ನಾಶ ಜನಪದ ಜೀವನ :

ಹಳ್ಳಿಯ ಪರಿಸರ ನಾಶವಾಗುತ್ತಾ ಹೋದಂತೆ ಜನರು ಅವಲಂಬಿಸಿದ್ದ ಕುಲಕಸುಬುಗಳೂ ನಾಶವಾಗುತ್ತಾ ಹೋದದ್ದರ ಬಗ್ಗೆ ಹಿಂದೆಯೇ ತಿಳಿದುಕೊಂಡೆವು. ಜನರು ಅವಲಂಬಿಸಿದ್ದ ನೈಸರ್ಗಿಕ ಸಂಪನ್ಮೂಲಗಳಿಗೆ ಲಗ್ಗೆ ಹಾಕಿ ಬೆಳೆದ ಕೈಗಾರಿಕೆಗಳೂ ಅತ್ತ ಜನರ ಕುಲ ಕಸುಬುಗಳನ್ನೆಲ್ಲ ಬುಡಮೇಲು ಮಾಡಿದವು. ನಿರುದ್ಯೋಗಿಗಳದ ಜನರು ಕೈಗಾರಿಕೆಗಳಲ್ಲಿ ಸಿಗಬಹುದಾದ ಉದ್ಯೋಗಗಳನ್ನು ಅರಸಿ ಗುಂಪು ಗುಂಪಾಗಿ ಶಹರದ ಕಡೆ ಧಾವಿಸತೊಡಗಿದವು.

ಶಹರಗಳೆಂದರೆ ಸಾಂಸ್ಕೃತಿಕ ವೈಶಿಷ್ಟ್ಯವಿದ್ದ, ಹಳ್ಳಿಗಳ ಕಸುಬುಗಳಿಗೆ ಮಾರುಕಟ್ಟೆಯಾಗಿದ್ದ ಪೇಟೆಗಳಾಗಿದ್ದ ಕಾಲವೊಂದಿತ್ತು. ಕೈಗಾರಿಕೆಗಳು ಶಹರಗಳ ಈ ಚಿತ್ರವನ್ನು ಬದಲು ಮಾಡಿ ಉದ್ಯೋಗ ಕೇಂದ್ರವಾಗುವಂತೆ ಮಾಡಿದ್ದರ ಫಲವಾಗಿ ನಗರೀಕರಣ ಬಲು ವೇಗವಾಗಿ ಹರಡುತ್ತ ಹೋಯಿತು. ಜನಸಾಂಡ್ರತೆ ಹೆಚ್ಚಾದಂತೆ ಮನೆಗಳು, ಅವುಗಳಿಗೆ ತಕ್ಕಂತೆ ಇತರ ವಸ್ತುಗಳ ಬೇಡಿಕೆಗಳು ಹೆಚ್ಚಾದವು. ವೈಜ್ಞಾನಿಕವಾಗಿ, ಆರೋಗ್ಯಕರವಾಗಿ, ನಿಸರ್ಗ ಸ್ನೇಹಿಯಾಗಿ ಹರಡಿಕೊಂಡಿದ್ದ ಶಹರಗಳು ದಟ್ಟವಾಗುತ್ತ, ಅನಾರೋಗ್ಯಕರವಾಗಿ ಅವೈಜ್ಞಾನಿಕವಾಗಿ ಬೆಳೆಯತೊಡಗಿದವು. ಹತಾಶರಾಗಿ ಉದ್ಯೋಗವನ್ನರಸಿ ಬಂದ ಜನತೆಯ ಮೂಲ ಬೇರು ಎಲ್ಲೆಲ್ಲೋ ಶೋಷಣೆಯ ಬುನಾದಿಯ ಮೇಲೆ ಅಪರಿಚಿತ ಪ್ರದೇಶಗಳಲ್ಲಿ, ಅಪರಿಚಿತರ ನಡುವೆ ಗೂಡುಕಟ್ಟಿ ಬದುಕಬೇಕಾದ ಪರಿಸ್ಥಿತಿ ಬಂದಾಗ ಸಂಬಂಧ, ಸಾಮರಸ್ಯ, ಹೊಂದಾಣಿಕೆ ಇವೆಲ್ಲ ಶಬ್ದಗಳೂ ಅರ್ಥರಹಿತವಾದವು. ನಗರಗಳು ಹೇಗೆ ಬೆಳೆಯಬೇಕು, ವ್ಯವಸ್ಥೆಗಳು ಏನಿರಬೇಕು, ನೀರಿನ ಸೌಲಭ್ಯ, ಒಳಚರಂಡಿ, ಮುಂತಾದ ಸೌಕರ್ಯಗಳು ಹೇಗಿರಬೇಕು ಎಂದೆಲ್ಲ ಯೋಜನೆಗಳು ಜನರ ದುಂಡಿನಲ್ಲಿ ದಿಕ್ಕಾಪಾಲಾಗಿ ಹೋದವು. ಹಿಡಿದದ್ದೇ ಜಾಗ, ಕಟ್ಟಿದ್ದಲ್ಲೆ ಮನೆಗಳಾಗಿ ಕೊಳಚೆ ಪ್ರದೇಶಗಳು ನಗರಗಳ ಅವಲಕ್ಷಣಗಳಾಗಿ ಬೆಳೆದವು. ಇನ್ನೂ ಬೆಳೆಯುತ್ತಲೇ ಇವೆ. ಕನಿಷ್ಠ ಸೌಲಭ್ಯಗಳಾದ ನೀರು, ವಸತಿಗಳೂ ಸರಿಯಾಗಿ ಸಿಗದಿದ್ದಾಗ ಇರುವ ಅತ್ಯಲ್ಪ ಸಂಪನ್ಮೂಲಕ್ಕಾಗಿಯೇ ನಿತ್ಯ ಜಗಳ, ಹೊಡೆದಾಟ, ಎಲ್ಲರಿಗೂ ಹಣಬೇಕು, ಸಂಪನ್ಮೂಲ ಬೇಕು. ಲಾಭಕ್ಕಾಗಿ, ಸ್ವಹಿತಕ್ಕಾಗಿ, ಐಶಾರಾಮಿ ವೈಭೋಗಕ್ಕಾಗಿ ಶಹರ ವಾಸಕ್ಕೆ ಬಂದ ಸಿರಿವಂತರು ಪರಿಸರದ ಜೊತೆ ತಮಗಿದ್ದ ಸಂಬಂಧವನ್ನು ತಾವಾಗಿಯೇ ಕಡಿದುಕೊಂಡರು. ಬೇರೆ ದಾರಿಯಿಲ್ಲದೆ ಹೊಟ್ಟೆಪಾಡಿಗಾಗಿ ಕೆಟ್ಟು ಪಟ್ಟಣ ಸೇರಿದ, ಬಡಜನರು ನಿಸರ್ಗದ ಜೊತೆಗಿದ್ದ ಸಂಬಂಧವನ್ನು ಕಡಿದುಕೊಳ್ಲಲೇಬೇಕಾಯ್ತು. ಪರಿಸರ ನಾಶದಿಂದ ಪಟ್ಟಣಗಳು ನಗರಗಳಾದವು. ನಗರಗಳಿಂದ ಇನ್ನೂ ಹೆಚ್ಚು ಭೌತಿಕ ಪರಿಸರದ ನಾಶ ಆಗುತ್ತ ಹೋಯಿತು. ಇಂದು ಇದೊಂದು ವಿಷವರ್ತುಲವಾಗಿ ತನ್ನೆಡೆ ಎಲ್ಲರನ್ನೂ ಸೆಳೆಯುತ್ತ ಬಂದವರನ್ನು ನುಂಗುತ್ತ ಹೊರಟಿದೆ. ಪ್ರಕೃತಿಯೂ ಇಲ್ಲ, ಪರಿಸರವೂ ಇಲ್ಲ, ಈ ಕಾಂಕ್ರೀಟ್ ಕಾಡನಲ್ಲಿ ಕಡೆಗೆ ಮನುಷ್ಯ ಮನುಷ್ಯನ ಸಂಬಂಧವೂ ಇಲ್ಲ ಎಲ್ಲವೂ ಒಣ ಒಣ, ಭಣ ಭಣ. ಮುಗಿಲೆತ್ತರಕ್ಕೆ ನಾಲಿಗೆ ಚಾಚಿ ನಿಂತಿರುವ ಬೋಳು ಬೋಳಾದ ಸಿಮೆಂಟ್ ಕಟ್ಟಡಗಳಷ್ಟೇ ಕಠೋರ.

* * *