ಇತ್ತೀಚೆಗೆ ಮಲೆನಾಡಿನಲ್ಲಿ ಮಂಗಗಳ ಅಭಿಯಾನ ಶುರುವಾಗಿತ್ತು. ಯಾವ ಊರಿನಲ್ಲಿ ನೋಡಿದರೂ ೫೦-೬೦ ಮಂಗಗಳ ಹಿಂಡು. ಹಿತ್ತಲಿನ ತರಕಾರಿಗಳು, ದೀವಿಗುಜ್ಜೆ, ಪೇರಲ, ಸೀತಾಫಲ, ಮಾವು ಇನ್ನು ತೋಟಕ್ಕೆ ನುಗ್ಗಿದರೆ ಬಾಳೆ, ಹಲಸು, ಕೊನೆಗೆ ಅಡಿಕೆ, ತೆಂಗುಗಳೂ ಹಿಂಡಿನ ಕೈಗೆ ಸಿಕ್ಕ ಮಾಣಿಕ್ಯವಾಗುತ್ತಿದ್ದವು.

ಹಿಡಿಯಲು ಹೋದರೆ ಗಡವಾ ಅಟ್ಟಿಸಿಕೊಂಡು ಬರುತ್ತಿತ್ತು. ಕೆಲವರು ಪರಚಿಸಿಕೊಂಡದ್ದೂ ಆಯಿತು. ಕೊಲ್ಲಲು ಮುಜುಗರ. ಕೆಲವರು ದೊಡ್ಡಮರದ ಬೋನು ಮಾಡಿಸಿ ಹಿಡಿದು ಭಟ್ಕಳದ ಕಾಡು, ಕೊಲ್ಲೂರಿನ ಕಾಡಿಗೆ ಬಿಟ್ಟದ್ದೂ ಆಯಿತು. ಸ್ವಲ್ಪ ದಿನಗಳಲ್ಲೇ ಮತ್ತೊಂದು ಹಿಂಡು ಬಂದಿದ್ದೂ ಆಯಿತು.

ಹೀಗಿರುವಾಗ ತೋಟದಲ್ಲಿ ಬಾಳೆ ಬೆಳೆದು, ಗೊನೆ ಉಳಿದು ಹಣ್ಣು ತಿನ್ನುವ ಕಾಲ ಯಾವಾಗ?

ಅದಕ್ಕುಪಾಯ ಶಿಕಾರಿಪುರದ ಮಲ್ಲೇಶಪ್ಪನವರು ನೀಡಿದರು. ಅದೇ ಸುಗಂಧಿ ಬಾಳೆ ಬೆಳೆಯುವಿಕೆ. ಇದು ಪೂವನ್‌ ಎನ್ನುವ ಹೆಸರಿನ ತಮಿಳುನಾಡಿನ ತಳಿ? ಆಂಧ್ರ, ಕೇರಳದಲ್ಲೂ ಇದೆ. ಹಣ್ಣೇನೋ ಹುಳಿ ಸಿಹಿ. ಆದರೆ ತಿನ್ನುವಾಗ ಚಿಕ್ಕ ಚಿಕ್ಕ ಬೀಜಗಳು ಬಾಯಿಗೆ ಸಿಗುತ್ತವೆ. ಕಚಕ್ಕನೆ ತಿಂದರೆ ಕಟ್‌ ಎಂದು ಹಲ್ಲೇ ಮುರಿಯಬಹುದು. ಗುಳುಂಗುಳುಂ ನುಂಗಿದರೆ ಜೀರ್ಣವಾಗದೇ ಭೇದಿ ಗ್ಯಾರಂಟಿ.

ಚೆನ್ನಾಗಿ ಕಳಿತ ಹಣ್ಣಿನಲ್ಲಿ ಬೀಜಗಳು ಕರಗಿಹೋಗಿರುತ್ತವೆ. ಕಾಯಿ, ದೊರೆಗಾಯಿಯಲ್ಲಿ ಬೀಜಗಳು ಕಲ್ಲಿನಷ್ಟು ಗಟ್ಟಿ.

ಈ ತಳಿಯನ್ನು ತೋಟದ ಸರಹದ್ದಿನಲ್ಲಿ ಹಾಕಬೇಕು. ಒಳಭಾಗಕ್ಕೆ ಏಲಕ್ಕಿ, ಪಚ್ಚಬಾಳೆ, ಕೆಂಪುಬಾಳೆ ಇನ್ಯಾವುದನ್ನಾದರೂ ಹಾಕಬಹುದು ಎಂದರು ಮಲ್ಲೇಶಪ್ಪ. ಅಂದಹಾಗೆ ಶಿಕಾರಿಪುರ ತಾಲ್ಲೂಕು ಬಾಳೆ ಬೆಳೆಗೆ ಪ್ರಖ್ಯಾತ. ಪ್ರತಿವರ್ಷ ಕೋಟ್ಯಾಂತರ ರೂಪಾಯಿಗಳ ಬಾಳೆಹಣ್ಣಿನ ವಹಿವಾಟು ನಡೆಯುತ್ತದೆ.

ಪೂವನ್‌ ಅರ್ಥಾತ್‌ ಸುಗಂಧಿ ಕೃಷ್ಣಭಟ್ಟರ ತೋಟದಲ್ಲಿ ಚೆನ್ನಾಗಿ ಬೆಳೆಯಿತು. ಗೊನೆಗಳಲ್ಲಿ ೨೦೦ಕ್ಕೂ ಹೆಚ್ಚು ಕಾಯಿಗಳು.

ಮಂಗನ ಹಿಂಡು ದಾಳಿ ಇಟ್ಟವು. ಕಾಯಿ ತಿನ್ನುವುದು, ಪುಚಕ್ಕೆಂದು ತುಪ್ಪುವುದು, ಕಿಚಕಿಚ ಎನ್ನುತ್ತಾ ಮತ್ತೊಂದು ಮರಕ್ಕೆ ಹಾರುವುದು. ಕೇವಲ ಹತ್ತೇ ನಿಮಿಷಗಳಲ್ಲಿ ಮಂಗಗಳೆಲ್ಲಾ ಪರಾರಿ.

ಸುಗಂಧಿ ಯಾ ಪೂವನ್‌ ಗೊನೆಗಳ ತೂಕ ಸರಾಸರಿ ೨೫ ಕಿಲೋಗ್ರಾಂ. ಬೆಲೆ ಕಡಿಮೆ. ವೈನ್‌ಗೋ, ಔಷಧಿಗೋ ಹೋಗುತ್ತದೆಯಂತೆ. ಅಂತೂ ಇದಕ್ಕೆ ಗಿರಾಕಿಗಳಂತೂ ಇದ್ದಾರೆ. ಗೊನೆಯೊಂದಕ್ಕೆ ಹತ್ತಿರ ಹತ್ತಿರ ನೂರು ರೂಪಾಯಿಗಳು ಸಿಗುತ್ತವೆ ಎಂದಾದರೆ ಏಕೆ ಬೆಳೆಯಬಾರದು?

ಮಂಗನ ಕಾಟವಿರುವ ಜಾಗದಲ್ಲೆಲ್ಲಾ ಈಗ ಪೂವನ್‌ ಸುಗಂಧಿಯದೇ ದರ್ಬಾರು. ಹನುಮಂತನಿಗೆ ಮಾತ್ರ ಪ್ರವೇಶ ನಿಷಿದ್ಧ.

ಉಳಿದ ಹಣ್ಣುಗಳಲ್ಲೂ ಇದೇ ರೀತಿಯ ತಳಿಗಳಿವೆಯೇ? ತಿಳಿದವರು ಹೇಳಬೇಕು. ಇಲ್ಲದಿದ್ದರೆ ಮಂಗಗಳೇ ಮೇಲಾದಾವು.