ದಾಂಡೇಲಿ  ಕಾಡಿನಲ್ಲಿ  ಕಾಳ್ಗಿಚ್ಚಿನ  ಹೊಗೆ ಕವಿದಿದೆ ಎಂದು ಗೆಳೆಯರು ಪೋನ್ ಮಾಡಿದ್ದರು. ಈಗಾಗಲೇ  ನೂರಾರು ಎಕರೆ ಪ್ರದೇಶಗಳು ಭಸ್ಮವಾಗಿವೆ. ಕಾಳ್ಗಿಚ್ಟು ತಡೆಯುವದು, ಪ್ರಾಣಿ ಬೇಟೆ  ನಿಯಂತ್ರಣಕ್ಕೆ  ಇಲ್ಲಿ  ಕರ್ನಾಟಕ ಅರಣ್ಯ ಇಲಾಖೆ  ಶ್ರಮಿಸುತ್ತಿದೆ. ಬೇಸಿಗೆ ಆರಂಭದಲ್ಲಿಯೇ  ರಸ್ತೆ ಪಕ್ಕದ  ಎರಡು ಪಟ್ಟಿಗಳಲ್ಲಿ ತರಗೆಲೆ ಸಂಗ್ರಹಿಸಿ  ಫೈಯರ್  ಲೈನ್ ಮಾಡುವ ಕೆಲಸವಂತೂ ಸಮರೋಪಾದಿಯಲ್ಲಿ ನಡೆಯುತ್ತದೆ. ಹತ್ತಾರು ಕಿಲೋ ಮೀಟರ್‌ಗೆ  ಬೆಂಕಿ ತಡೆಗೆ  ವಾಚಮನ್‌ಗಳ ಪಡೆ  ಶ್ರಮಿುಸುತ್ತಿದೆ.  ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿನ ಗೌಳಿ, ಕುಣಬಿ ವನವಾಸಿಗರಲ್ಲಿ ಜಾಗೃತಿ ಮೂಡಿಸುವ ಕೆಲಸ ಜೋರಾಗಿ ನಡೆದಿದೆ. ದಾಂಡೇಲಿ ವನ್ಯಜೀವಿ ವಿಭಾಗಕ್ಕೆ  ಹುಲಿ  ಯೋಜನೆ ಬಂದಾಗಿನಿಂದ  ಅರಣ್ಯ ಸಂರಕ್ಷಣೆಯ ಕಾಳಜಿ ಹಲವು ಮುಖಗಳಲ್ಲಿ ವ್ಯಕ್ತವಾಗಿದೆ. ಬೀದಿ ನಾಟಕ, ಸ್ಲೈಡ್ ಶೋಗಳ ಮುಖೇನ ಹಳ್ಳಿಹಳ್ಳಿಗಳಲ್ಲಿ  ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಶಾಲಾ ಮಕ್ಕಳಲ್ಲಿ ಪರಿಸರ ಅರಿವು ಹೆಚ್ಚಿಸುವ ಯತ್ನಗಳು  ನಡೆದಿವೆ. ಇನ್ನು ಸ್ವಯಂ ಸೇವಾ ಸಂಸ್ಥೆಗಳಂತೂ ದಾಂಡೇಲಿ ಕಾಡಿನಲ್ಲಿ  ಎಷ್ಟು ಜಾಗೃತಿ ಮೂಡಿಸುತ್ತಿವೆಯೆಂದರೆ ಕಾರ್ಯಕ್ರಮಗಳು ಒಂದು ಜಾಗತಿಕ ದಾಖಲೆಯಾಗಬಹುದು. ಬೆಂಕಿಯಿಂದ ಕಾಡು ಬಚಾವು ಮಾಡಲು  ಜಾಗೃತಿ ಫಲಕಗಳಿವೆ.   ಇಷ್ಟಾಗಿಯೂ ಈಗ ಯಲ್ಲಾಪುರ, ಹಳಿಯಾಳ, ದಾಂಡೇಲಿ, ಜೊಯಿಡಾ ರಸ್ತೆಗಳಂಚಿನಲ್ಲಿ  ಮಧ್ಯಾನ್ಹ ೧೨ರಿಂದ ೪ರ ಸಮಯದಲ್ಲಿ  ಓಡಾಡಿದರೆ ಕಾಣುವ ಚಿತ್ರವೇ ಬೇರೆ ! ಬಿಸಿಲಿನ ಬೇಗೆಯ ಜತೆಗೆ  ಕಾಡಿನ ಬೆಂಕಿ  ಇಲ್ಲಿನ ಪರಿಸ್ಥಿತಿ  ಹದಗೆಡಿಸಿದೆ.

ಎಲೆ ಉದುರಿಸುವ ಕಾಡು ಕಳೆದ ಜನವರಿಗೆ ಸಂಪೂರ್ಣ ಬೆತ್ತಲಾಗಿ ಈಗ ತರಗೆಲೆಗಳ ರಾಶಿ ಬಿದ್ದಿದೆ.  ತೇಗದ ನೆಡುತೋಪುಗಳು ಹೇರಳವಾಗಿರುವ ಇಲ್ಲಿ  ಕಾಳ್ಗಿಚ್ಚು  ತನ್ನ ಪ್ರಾಬಲ್ಯ ಮೆರೆಯುತ್ತಿದೆ. ದಾಂಡೇಲಿ ವನ್ಯಜೀವಿ ವಿಭಾಗದಲ್ಲಿ  ಗಾರ್ಡ್‌, ಫಾರೆಸ್ಟರ್‌ಗಳ ಬಹುತೇಕ ಹುದ್ದೆಗಳು ಖಾಲಿಯಿವೆ. ನೂರಕ್ಕೆ ಶೇಕಡಾ ೪೦ರಷ್ಟು ಹುದ್ದೆಯಲ್ಲೂ ಜನರಿಲ್ಲ! ಇರುವವರು ೫೦-೫೫ರ ಹರೆಯದವರು, ಕಾಡು ಅಲೆಯಲು, ಬೆಂಕಿ ಆರಿಸಲು ಶಕ್ಯವಿಲ್ಲದವರು. ಅರಣ್ಯ ಸಚಿವರೂ ಆಗಿರುವ ನಮ್ಮ ಮುಖ್ಯಮಂತ್ರಿಗಳು ನಿವೃತ್ತಿ ವಯಸ್ಸನ್ನು  ಏರಿಸಿ ಇನ್ನೊಂದಿಷ್ಟು ವರ್ಷ  ಕೈಲಾಗದವರಿಗೆ ಕಾಡು ಕಾಯುವ ಕೆಲಸ ಹಚ್ಚಿದ್ದಾರೆ ! ಬೆಂಕಿ ಭಯದ ಹಿಂದೆ ಎಷ್ಟೆಲ್ಲ ಮುಖಗಳಿವೆ.

ಆನೆ, ಜಿಂಕೆ, ಹುಲಿ, ಕಾಳಿಂಗ ಸರ್ಪ, ಹಾರ್ನಬಿಲ್‌ಗಳು ವಿಶೇಷವಾಗಿರುವ ಇಲ್ಲಿ  ಕಡಿದಾದ ಕಣಿವೆಯಿದೆ.  ಕಾಳಿ ನದಿ ಕೊಳ್ಳದ ಈ  ಪ್ರದೇಶದ ಯಾವುದೋ ಮೂಲೆಯಲ್ಲಿ ಬೆಂಕಿ ಬಿದ್ದರೆ ಅಲ್ಲಿಗೆ ತಲುಪುವದೇ ಕಷ್ಟ. ವಾಹನ ಓಡಾಟದ ರಸ್ತೆಯೂ ಇಲ್ಲ, ಹೆಲಿಕ್ಯಾಪ್ಟರ್ ಇದ್ದರೆ ಮಾತ್ರ  ತಲುಪಬಹುದಾದ  ದುರ್ಗಮ ಕಣಿವೆಗಳವು! ಅಮೂಲ್ಯ ಸಸ್ಯ, ಪ್ರಾಣಿಗಳಿರುವ ನೆಲೆಯನ್ನು  ಈಗ ಬೆಂಕಿಯ ಕೆನ್ನಾಲಿಗೆ ಮನಸೋಯಿಚ್ಚೆ  ಆಸ್ವಾದಿಸುತ್ತಿದೆ.

ಇಷ್ಟು ವರ್ಷಗಳಿಂದ ಇಲ್ಲಿ ಬೆಂಕಿ ತಡೆಗೆ ಏನೆಲ್ಲ ಪ್ರಯೋಗ ನಡೆದಿದೆ. ಊರಿಗೊಂದು ಕ್ರೀಡಾಂಗಣ, ಸಮುದಾಯ ಭವನ, ದೇವಾಲಯ ನಿರ್ಮಾಣ, ಪ್ರೋತ್ಸಾಹಕ ಬಹುಮಾನ ನೀಡುತ್ತ ಜನಸಹಭಾಗಿತ್ವದಲ್ಲಿ ಬೆಂಕಿ ತಡೆಯುವ ಯತ್ನಗಳು  ನಡೆದಿವೆ. ಪೊಟೋಲಿಯಲ್ಲಿ  ೧.೬೦ ಲಕ್ಷ ರೂಪಾಯಿ ವೆಚ್ಚದಲ್ಲಿ  ಈಶ್ವರ ದೇವಾಲಯ ನಿರ್ಮಿುಸಿದ ಬಳಿಕ ಹಳ್ಳಿಗರು ಕಾಡು ಕಾಯಲು ಹೆಗಲು ನೀಡಿದ್ದರು. ಬಾಪೇಲಿಯಲ್ಲಿ ಸಮುದಾಯ ಭವನ ನಿರ್ಮಿಸಿದ್ದಕ್ಕೆ ಜನ ಇಲಾಖೆಯ ಜತೆ ಕಾಡು ಉಳಿಸಲು ನೆರವಾಗಿದ್ದರು. ಗೌಳಿಗರು ಹೇಗೆ ಕಾಡು ಉಳಿಸಲು ನಿಂತಿದ್ದಾರೆ? ಕುಣುಬಿಯರು ಹೇಗೆ  ಜಾಗೃತರಾಗಿದ್ದಾರೆಂದು ಸ್ವಯಂ ಸೇವಾ ಸಂಸ್ಥೆಗಳು ದಾಖಲಿಸಿ ವಿಶ್ವಕ್ಕೆ ಮಾಹಿತಿ ಹಂಚಿದ ಉದಾಹರಣೆಯಿದೆ. ಇಂತಹ ದಂಡಕಾರಣ್ಯದ ದಾಂಡೇಲಿಯಲ್ಲಿ  ಈಗ ಏಕೆ ಇಂತಹ ದ್ವಂಸಕಾಂಡ ನಡೆಯುತ್ತಿದೆ? ‘ಜನಕ್ಕೆ ಮಂಗನ  ಕಾಯಿಲೆ ಭಯ, ಕಾಡಿನ ಉಣ್ಣಿಗಳು ರೋಗ ವಾಹಕಗಳಾಗಿ ಮಂಗನಕಾಯಿಲೆ ಹರಡುವ ಭೀತಿಯಿಂದ ಮುಂಜಾಗೃತೆಯಾಗಿ ಬೆಂಕಿ ಹಾಕುತ್ತಿದ್ದಾರೆ, ನಾವು ಇಂತಹ ಪ್ರಕರಣಗಳನ್ನು  ಪತ್ತೆ ಹಚ್ಚಿದ್ದೇವೆ’ ಎಂದು ದಾಂಡೇಲಿ ವನ್ಯ ಜೀವಿ  ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ಕುಮಾರ್ ಹೇಳುತ್ತಾರೆ.  ಮಂಗನಕಾಯಿಲೆಯ ಭಯದಿಂದ  ಜನ ಊರಿನ ಕಾಡು ಸುಡುತ್ತಿರುವದು  ಲಾಗಾಯ್ತಿನಿಂದ  ನಡೆದು ಬಂದಿದೆ. ಮಾಧ್ಯಮಗಳಲ್ಲಿ  ಮಂಗನಕಾಯಿಲೆ ಬಗೆಗೆ  ವರದಿ ಪ್ರಕಟವಾದಾಗ ಸಹಜವಾಗಿ ಭಯಗೊಂಡವರು  ಉಣ್ಣಿ ಕೊಲ್ಲಲು  ಬೆಂಕಿ ಆಸ್ತ್ರ  ಬಳಸುತ್ತಾರೆ. ದುಬಾರಿ ಚಿಕಿತ್ಸೆಗೆ ಹಣವಿಲ್ಲದ ಬಡವರಿಗೆ ಮಂಗನಕಾಯಿಲೆ  ನೇರ ಸಾವಿನ ಮನೆಯ ದಾರಿ ! ಬದುಕಿ ಉಳಿಯುವ ಯತ್ನವಾಗಿ ಕಾಡಿಗೆ ಬೆಂಕಿ  ಹಾಕುವ ಕ್ರಮ.

ಅಮೂಲ್ಯ ಜೀವ ಸಂಕುಲಗಳನ್ನು  ಬೆಂಕಿಯಿಂದ ಬಚಾವು ಮಾಡುವದು ಹೇಗೆ? ಪ್ರಶ್ನೆ  ಗಡಚಾಗುತ್ತಿದೆ. ಇಂದು ಹೈಟೆಕ್ ಯಂತ್ರಗಳು ಬೆಂಕಿ ಆರಿಸಲು ಬಂದಿವೆ. ಸಂಪರ್ಕ ಸಾಧನಗಳು ದೊರೆತಿವೆ. ಸೆಟಲೈಟ್‌ನ ಚಿತ್ರ ನೋಡಿ ದಾಂಡೇಲಿ ಕಾಡಿನ ಬೆಂಕಿಯನ್ನು  ಪ್ರಪಂಚದ ಯಾವುದೋ ಮೂಲೆಯ ವ್ಯಕ್ತಿ ಗಮನಿಸಬಹುದು!  ಆದರೆ ಬೆಂಕಿ ಆರಿಸುವದಕ್ಕೆ  ಕಾಡಿಗೆ ಬರಬೇಕು, ಬೆಂಕಿ ಬೀಳುವದಕ್ಕೆ ಕಾರಣವಾದ ಮಂಗನಕಾಯಿಲೆಯಂತಹ ಗಂಭೀರ ಸಮಸ್ಯೆ ಆಲಿಸಬೇಕು! ಒಂದೆಡೆ ಸಿಬ್ಬಂದಿಗಳ ಕೊರತೆ, ಇನ್ನೊಂದೆಡೆ ಹಳ್ಳಿಗರ ವಿಚಿತ್ರ ಸಮಸ್ಯೆಗಳ ತೊಳಲಾಟದಲ್ಲಿ  ಬೆಂಕಿಯ ಭಯ ಹೆಚ್ಚುತ್ತಿದೆ. ಒಂದು ಸಾಗವಾನಿ ಮರದ ಬೆಲೆ ಲಕ್ಷಾಂತರ ರೂಪಾಯಿ, ಒಂದರ್ಧ ಗಂಟೆ ಕಾಳ್ಗಿಚ್ಚು ಕೋಟ್ಯಾಂತರ ರೂಪಾಯಿ ನಾಟಾಗಳನ್ನು ಬೂದಿಯಾಗಿಸಹುದು. ಕೀಟ, ಪಕ್ಷಿ, ಪ್ರಾಣಿ, ಸಸ್ಯ ಚಿಗುರುಗಳನ್ನು  ಕಬಳಿಸಬಹುದು.

ಮಂಗನಕಾಯಿಲೆಯ ಭಯ ಹೋಗಲಾಡಿಸಲು ಆರೋಗ್ಯ ಇಲಾಖೆಗೆ ಚೈತನ್ಯ ಬೇಕು, ಬಡವರ ಸೇವೆಗೆ ನಿಲ್ಲುವ ಕಳಕಳಿಯ ವೈದ್ಯರು ಇದ್ದಾಗಷ್ಟೇ ಇಂತಹ ಅಭಯ ಸಾಧ್ಯ. ಒಳ್ಳೆಯ ವೈದ್ಯರು, ಸುಲಭ ಚಿಕಿತ್ಸೆ ಬೇಕು ಎಂಬುದೇನೋ ಸರಿ, ರೋಗ ಬರದಂತೆ ಏನು ಮಾಡಬೇಕು?  ಸರಳ ದಾರಿಗಳನ್ನು  ಮನದಟ್ಟು ಮಾಡುವ ಕೆಲಸ ನಡೆಯಬೇಕು.

ದಾಂಡೇಲಿಗೆ ಹುಲಿ ಯೋಜನೆ ಬಂದ ತರುವಾಯದಲ್ಲಿ   ನಮ್ಮ  ಸ್ವಯಂ ಸೇವಾ ಸಂಸ್ಥೆಗಳು ಪ್ರಾಣಿಗಳ ಸಂತತಿ ಜಾಸ್ತಿಯಾಗಿದೆ, ಜಿಂಕೆ ಕಾಣುತ್ತಿದೆ, ಹುಲಿ ಕಾಣುತ್ತಿದೆ  ಎಂಬ ವರದಿಗಳನ್ನು  ಪದೇ ಪದೇ  ಎತ್ತಿ ಹೇಳುತ್ತಾರೆ. ಯೋಜನೆ ಜಾರಿಯಾದ ತಕ್ಷಣ ಇಂತಹ ಚಿತ್ರ ಮೂಡಲು ಸಾಧ್ಯವಿಲ್ಲ. ಈಗ  ಹಣ ದೊರೆಯುತ್ತಿರುವ ಕಾರಣ ಕಾರ್ಯಕರ್ತರ ಕಾಡು ಓಡಾಟ ಜಾಸ್ತಿಯಾಗಿರಬಹುದು, ಹೆಚ್ಚು ಪ್ರಾಣಿಗಳು ಕಂಡಿರಬಹುದು ಎಂಬುದು ಹೆಚ್ಚು  ಸತ್ಯವಾದುದು.  ನಮ್ಮ ವನ್ಯ ಜೀವಿ ವಿಭಾಗದಲ್ಲಿರುವದು ವೃದ್ದರ ತಂಡ, ಪಾಪ! ಅವರೇನೋ ಕಷ್ಟಪಟ್ಟು ದುಡಿಯುತ್ತಾರೆ, ಆದರೆ ಅಗತ್ಯ ಸಿಬ್ಬಂದಿಗಳೂ ಇಲ್ಲದ ಸ್ಥಿತಿ!  ಇತ್ತ  ಬೀದಿ ನಾಟಕ ನೋಡಿ ಜಾಗೃತರಾದ ಹಳ್ಳಿಗರು ಮಂಗನಕಾಯಿಲೆ ಬಂದಾಕ್ಷಣ ತಮ್ಮ ಮುಖವಾಡ ಕಳಚಿ ಕೂತಿದ್ದಾರೆ, ಬೆಂಕಿ ಹಾಕುವ ಹಳೆಯ ಚಾಳಿಗೆ ಮರಳಿದ್ದಾರೆ! ನಮ್ಮ ಜಾಗೃತಿಯ  ನಾಟಕಗಳೆಲ್ಲ ಇಲ್ಲಿ  ದೊಡ್ಡ ಪ್ರಹಸನದಂತೆ ಕಾಣುತ್ತಿದೆ. ಸರ್ವ ಬಣ್ಣ ಮಸಿ ನುಂಗಿದಂತೆ  ಕಾಡಿನ ಬೆಂಕಿ ಹಲವು ಮುಖಗಳ ಅನಾವರಣಮಾಡಿದೆ.