ಗುಡಿಕೈಗಾರಿಕೆ ಮತ್ತು ಇತರ ಕೈಕಸಬುಗಳಲ್ಲೆಲ್ಲಾ ಕುಂಬಾರಗೆಲಸವು ಅತ್ಯಂತ ಪ್ರಾಚೀನವಾದುದು. ತಿಗರಿಯ ಸುತ್ತ ತಮ್ಮ ಬದುಕನ್ನು ಸಾಗಿಸುತ್ತಿರುವ ಕುಂಬಾರರ ನಿಪುಣ ಹಸ್ತಗಳಿಂದ ಮೂಡಿ ಬರುವ ವಿವಿಧ ಆಕಾರಗಳನ್ನು ನೋಡುವುದೇ ಮನಸ್ಸಿಗೆ ಉಲ್ಲಾಸಕರವಾಗಿದೆ. ನಮ್ಮ ದೇಶದಲ್ಲಿ ಹಿಂದೇ ಕುಂಬಾರಗೆಲಸವು ಹೆಚ್ಚಾಗಿ ಪಾತ್ರೆ ಪಗಡಿಗಳನ್ನು ಮಾಡುವುದಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಪ್ರಪಂಚದ ಬೇರೆ ಕೆಲವು ಕಡೆ ಬಹಳ ಹಿಂದಿನಿಂದಲೇ ಹಂಚುಗಳು, ನೆಲಕ್ಕೆ ಹಾಸುವ ಇಟ್ಟಿಗೆ, ಗೋಡೆಗೆ ಹಾಸುವ ಇಟ್ಟಿಗೆ, ಇತ್ಯಾದಿ ತಯಾರಿಕೆಗಳ ಮೂಲಕ ಕುಂಬಾರಗೆಲಸವು ವಿವಿಧ ರೂಪವನ್ನು ಪಡೆದಿತ್ತು. ಶಿಲಾಯುಗದಲ್ಲಿ ಅಂದರೆ ಇನ್ನು ನಿಖರವಾಗಿ ಹೇಳಬೇಕಾದರೆ ಹೊಸ ಶಿಲಾಯುಗದಲ್ಲಿ ಒಂದು ಸ್ಥಳದಲ್ಲಿ ನೆಲೆನಿಂತ ಆಹಾರ ಸಂಗ್ರಾಹಕ ಮಾನವವು, ಆಹಾರ ಉತ್ಪಾದಕನಾದಾಗ (ವ್ಯವಸಾಯ ಅಥವಾ ಕೃಷಿ ಕೆಲಸವನ್ನು ಕಂಡು ಕುಡುಕಿದಾಗ) ಆತನು ಸಂಶೋಧಕನಾಗಬೇಕಾಯಿತು. ಈ ವಿಶ್ವವನ್ನೇ ಬದಲಾಯಿಸಲು ಶಕ್ತವಾದ ಅವನ ಎರಡು ಮುಖ್ಯ ಸಂಶೋಧನೆಗಳು ಬೆಂಕಿ ಮತ್ತು ಚಕ್ರ. ಸಾಧಾರಣವೆಂದು ಕಂಡು ಬಂದರೂ ಚಕ್ರವು ಮಾನವನ ಅತ್ಯಂತ ಶ್ರೇಷ್ಠ ಸಂಶೋಧನೆ. ಮನುಷ್ಯನ ಚಲನೆ ಮತ್ತು ವಿವಿಧ ವಸ್ತುಗಳ ಉತ್ಪಾದನೆ ಚಕ್ರವಿಲ್ಲದೆ ಸಾಧ್ಯವೇ ಇಲ್ಲ. ಇಂದು ವಿಶ್ವದಾದ್ಯಂತ ಪ್ರತಿಯೊಬ್ಬರಿಗೂ ಅಗತ್ಯವಿರುವ ಮತ್ತು ಅಷ್ಟೇ ಪ್ರಾಮುಖ್ಯ ಸಾಧನವಾದ ಚಕ್ರವನ್ನು ಪ್ರಾಚೀನ ಕಾಲದಲ್ಲಿ ಯಾರು ಸಂಶೋಧಿಸಿದರು ಎಂಬುದು ತಿಳಿದಿಲ್ಲ. ಆದರೆ ಈ ಚಕ್ರವನ್ನು ಕಂಡು ಹಿಡಿಯುವುದಕ್ಕಿಂತ ಹಿಂದೆಯೇ ಹೊಸ ಶಿಲಾಯುಗದಲ್ಲಿ ಆತನು ಮಣ್ಣನ್ನು ತಟ್ಟಿ ಅದಕ್ಕೆ ವಿವಿಧ ರೂಪಕೊಟ್ಟು ಮಡಿಕೆ ಕುಡಿಕೆಗಳನ್ನು ತಯಾರಿಸಿದ್ದ ಎಂಬುದು ದೃಢಪಟ್ಟಿದೆ. ಆರಂಭದಲ್ಲಿ ಗವಿಗಳಲ್ಲಿ ವಾಸಿಸುತ್ತಿದ್ದ ಆತನು ನಂತರ ಒಂದು ಸ್ಥಳದಲ್ಲಿ ನೆಲೆನಿಂತು ವ್ಯವಸಾಯ, ಬೆಂಕಿ ಮತ್ತು ಚಕ್ರವನ್ನು ಕಂಡು ಹುಡುಕಿದಾಗ, ಆದಾಗಲೇ ಆತನು ಮಡಿಕೆಗಳನ್ನು ತಯಾರಿಸುತ್ತಿದ್ದರೂ, ನಂತರ ಚಕ್ರದ ಸಹಾಯದಿಂದ ವಿವಿಧ ರೂಪದ ಮಡಿಕೆಗಳನ್ನು, ತನ್ನ ವಾಸಕ್ಕಾಗಿ ಕಟ್ಟಿಕೊಂಡ ಮನೆಗೆ ಹೊದಿಸಲು ಹಂಚುಗಳನ್ನು ತಯಾರಿಸಲು ಪ್ರಾರಂಭಿಸಿದ. ಹೀಗೆ ಗವಿಗಳ ಬದಲು ತನ್ನ ವಾಸಕ್ಕಾಗಿ ಮಾನವನು ಮನೆಗಳನ್ನು ಕಟ್ಟಲು ಗಮನ ನೀಡಬೇಕಾಗಿ ಬಂದುದು ಆತನನ್ನು ಹಂಚು ತಯಾರಿಸಲು ಪ್ರೇರೇಪಿಸಿತು.

ಹಂಚು ಉದ್ಯಮದ ಮೂಲ ಮತ್ತು ಪ್ರಾಚೀನತೆ

“ಹಂಚು” ಅಂದರೆ ಸಾಮಾನ್ಯವಾಗಿ ಮಣ್ಣಿಂದ ತಯಾರಿಸಿದ ಹೊಳಪು ಅಥವಾ ಹೊಳಪಿರದ ಮೇಲ್ಮೈಯನ್ನು ಹೊಂದಿದ್ದು, ಕಟ್ಟಡಗಳ ಸಂರಕ್ಷಣೆಗೆ ಅಥವಾ ಅಲಂಕಾರಿಕವಾಗಿ ಬಳಸಲ್ಪಡುವ ಒಂದು ತೆಳು ಚಪ್ಪಟೆಯಾಕಾರದಲ್ಲಿರುವ ಹಾಸಿಗೆ ಕಲ್ಲು (ಆಸಿಕಲ್ಲು). ಮೇಲ್ಛಾವಣೆ ಸಂಬಂಧ “ಹಂಚು” ಎಂಬ ಶಬ್ದವನ್ನು ವಿಭಿನ್ನ ರೂಪದಲ್ಲಿ ಬಳಸಲಾಗುತ್ತದೆ. ಕೆಲವೊಮ್ಮೆ ವಸ್ತುವಿನಿಂದ ತಯಾರಿಸಲಾದ ಚಪ್ಪಟೆಯಾಕಾರದಲ್ಲಿರುವ ಹಾಸಿಗೆ ಕಲ್ಲುಗಳನ್ನು “ಹಂಚು” ಎಂದು ಕರೆಯಲಾಗುತ್ತದೆ. ಉದಾಹರಣೆ : ಗ್ರೀಕರ ದೇವಾಲಯಗಳಲ್ಲಿ ಉಪಯೋಗಿಸುತ್ತಿದ್ದ ಮಾರ್ಬಲ್ ಹಂಚುಗಳು ಮತ್ತು ರೋಮನ್ ದೇವಾಲಯಗಳಲ್ಲಿ ಉಪಯೋಗಿಸುತ್ತಿದ್ದ ಮಾರ್ಬಲ್ ಹಂಚುಗಳು ಮತ್ತು ರೋಮನ್ ದೇವಾಲಯಗಳಲ್ಲಿ ಉಪಯೋಗಿಸುತ್ತಿದ್ದ ಕಂಚಿನ ಹಂಚುಗಳು, ಕಟ್ಟಡದ ಮೇಲ್ಛಾವಣಿಗೆಗೆ ಇಂಗ್ಲೆಂಡಿನಲ್ಲಿ ಉಪಯೋಗಿಸುತ್ತಿದ್ದ ಕಲ್ಲಿನಿಂದ ಮಾಡಿದ ಹಾಸಿಗೆ ಕಲ್ಲುಗಳನ್ನು “ಕಲ್ಲು ಹಂಚು” ಗಳೆಂದು ಕರೆಯಲಾಗುತ್ತಿತ್ತು.

ಕ್ರಿ.ಶ. ೩ನೇ ಶತಮಾನದ ಹೆಲನ್ (ಗ್ರೀಕ್) ನಾಗರಿಕತೆಯ ಹಿಂದೇ, ಮೆಡಿಟರೇನಿಯನ್ ಬಯಲು ಪ್ರದೇಶದಲ್ಲಿ ಹಂಚು ಉದ್ಯಮವು ಇದ್ದ ಬಗ್ಗೆ ಯಾವುದೇ ಕುರುಹು ದೊರೆತಿಲ್ಲ. ಆದರೆ ಗ್ರೀಕ್ ನಾಗರಿಕತೆಯ ಸಮಯದಲ್ಲಿ ತಯಾರಾಗಿ ದೊರೆದಂಥ ಬಹಳ ಉತ್ತಮ ಮಾದರಿಯ ಹಂಚುಗಳು ಅದರ ಅಸ್ತಿತ್ವ ಬಹಳ ಹಿಂದಿನ ದಿನಗಳಿಂದಲೇ ಇತ್ತು ಎಂಬುದನ್ನು ದೃಢಪಡಿಸಿವೆ. ಗ್ರೀಕ್ ನಾಗರಿಕತೆಯುದ್ಧಕ್ಕೂ ಮಠ ಮತ್ತು ದೇಗುಲಗಳ ಮಾಡಿನ ಮೇಲಿನ ಹೆಚ್ಚಿನ ಭಾಗವನ್ನು ಚಪ್ಪಟೆಯಾಕಾರದ ಹಂಚುಗಳಿಂದ ಮುಚ್ಚುತ್ತಿದ್ದು ಇದರ ಎರಡು ಬದಿಗಳು ಸ್ವಲ್ಪ ಎತ್ತರವಾಗಿದ್ದವು. ಈ ಹಂಚುಗಳು ಒಂದೇ ಆಕಾರದಲ್ಲಿದ್ದು ಅವುಗಳನ್ನು ಒಂದರ ಮೇಲೊಂದರಂತೆ ಮೇಲು ಪದರಾಗಿ ಇಡಲಾಗುತ್ತಿತ್ತು. ಆಗ ಎಲ್ಲಾ ಸಾಲುಗಳ ಹಂಚಿನ ಬದಿಗಳು ಒಂದೇ ಸಾಲಿನಲ್ಲಿ ಬರುತ್ತವೆ. ನಂತರ ಚಪ್ಪಟೆ ಹಂಚುಗಳು ಬದಿಗಳು ಸೇರುವ ಸಂದಿನಲ್ಲಿ ಉಬ್ಬಿದ ಆಮೆ ಬೆನ್ನಂತಿರುವ ಅರ್ಧ ಚಂದ್ರಾಕೃತಿಯಲ್ಲಿರುವ ಹಂಚುಗಳನ್ನು (Convex) ಮೇಲು ಪದರಾಗಿ ಇಡುತ್ತಿದ್ದರು. ಅವು ಹಂಚುಗಳ ಸಂಧನ್ನು ಮಾತ್ರವಲ್ಲದೇ  ಅವುಗಳ ಎರಡು ಬದಿಗಳ ಎತ್ತರವಾಗಿರುವ ಭಾಗಗಳನ್ನು ಮುಚ್ಚುತ್ತಿದ್ದವು. ಹೀಗೇ ಗ್ರೀಕರು ತಮ್ಮ ದೇಗುಲಗಳಿಗೆ ಅತ್ಯಂತ ಭದ್ರವಾದ ಮೇಲ್ಛಾವಣೆಯನ್ನು ನಿರ್ಮಿಸುತ್ತಿದ್ದರು.

ರೋಮನ್ ನಾಗರಿಕತೆಯ ಸಮಯದಲ್ಲಿ ಎರಡು ವಿಧದ ಹಂಚುಗಳನ್ನು ಉಪಯೋಗಿಸಲಾಗುತ್ತಿತ್ತು ಅವುಗಳು “ಸ್ಪ್ಯಾನಿಶ್ ಹಂಚು” ಗಳೆಂದು ಪ್ರಖ್ಯಾತಿಗೊಂಡಿವೆ. ಈ ಹಂಚುಗಳ ಹೊರಬದಿಯು ಇಂಗ್ಲಿಷ ಭಾಷೆಯ “S” ಅಕ್ಷರದ ವಿಬ್ಯಾಸದಲ್ಲಿದ್ದು, ಇಲ್ಲಿ ಅರ್ಧಚಂದ್ರಾಕೃತಿಯಲ್ಲಿರುವ ಹಂಚುಗಳ ಉಬ್ಬಿದ ಹೊರಬದಿಯು (Convex) ಮಧ್ಯೆ ನಿಮ್ನವಾಗಿರುವ ಒಳಗಡೆ ಬಾಗಿರುವಂಥ (Concave) ಹಂಚುಗಳ ಬದಿಯ ಸಂದುಗಳಿಗೆ ಸರಿಯಾಗಿ ಕೂಡುತ್ತಿತ್ತು, ರೋಮನ್ ನಾಗರಿಕತೆಯ ಅವಶೇಷಗಳಲ್ಲಿ ಅವರು ಉಪಯೋಗಿಸುತ್ತಿದ್ದ ಚಪ್ಪಟೆಯಾಕಾರದ ಕಲ್ಲಿನ ಹಂಚುಗಳು ದೊರೆತಿವೆ. ಸಾಮಾನ್ಯವಾಗಿ ಅವರು ಎಲ್ಲಾ ವಿಧದ ಹಂಚುಗಳನ್ನು ಸುಟ್ಟು ಜೇಡಿಮಣ್ಣಿನಿಂದ (ಆವೆಮಣ್ಣು) ತಯಾರಿಸುತ್ತಿದ್ದು, ಅವು ಕಿತ್ತಳೆ-ಹಳದಿ ಮಿಶ್ರಿತ ; ಅಥವಾ ನೇರಳೆ-ಕೆಂಪು ಬಣ್ಣವನ್ನು ಹೊಂದಿರುತ್ತಿದ್ದವು. ಗ್ರೀಕ್ ಮತ್ತು ರೋಮನ್ ದೇವಾಲಯಗಳಲ್ಲಿ ಮಾರ್ಬಲ್ ಮತ್ತು ಕಂಚಿನ ಹಂಚುಗಳನ್ನು ಕೂಡ ಉಪಯೋಗಿಸುತ್ತಿದ್ದರು. ಆದರೆ ಈ ಲೋಹದ ಬೆಲೆಯಲ್ಲಿ ಉಂಟಾದ ಹೆಚ್ಚಳದಿಂದಾಗಿ ಮಧ್ಯಯುಗ ಮತ್ತು ನವೋದಯಕಾಲದ ನಂತರ ಪ್ರಾಚೀನ ಕಂಚಿನ ಹಂಚುಗಳ ಯಾವುದೇ ಮಾದರಿಗಳು ದೊರೆಯುತ್ತಿಲ್ಲ.

ಪ್ರಪಂಚದೆಲ್ಲೆಡೆ ಮಧ್ಯಯುಗದ ತನಕ ಆವೆಮಣ್ಣಿನಿಂದ ತಯಾರಿಸಲಾದ ಹಂಚುಗಳು ಏಕಸ್ವಾಮ್ಯವನ್ನು ಪಡೆದಿದ್ದವು. ಆದರೆ ನಂತರದ ದಿನಗಳಲ್ಲಿ ಅರಮನೆ, ಸಾರ್ವಜನಿಕ ಕಟ್ಟಡ ಮತ್ತು ದೇವಾಲಯಗಳ ಮೇಲ್ಛಾವಣೆಗಳಿಗೆ ಸೀಸ ಮತ್ತು ಸತುವಿನ ಹಾಳೆಗಳನ್ನು ಇತರ ಸಣ್ಣ ಖಾಸಗಿ ಮನೆಗಳ ಛಾವಣಿಗಳನ್ನು ಕಲ್ಲು ಮತ್ತು ಹುಲ್ಲಿನಿಂದ ಕಟ್ಟಲು ಪ್ರಾರಂಭಿಸಿದಾಗ, ಆವೆಮಣ್ಣಿನಿಂದ ತಯಾರಿಸಲಾಗುವ ಹಂಚುಗಳು ತಮ್ಮ ಪ್ರಾಬಲ್ಯವನ್ನು ಕಳಕೊಂಡವು. ಆದರೆ ನಂತರ ೧೯ನೇ ಶತಮಾನದಲ್ಲಿ ಪುನಃ ಮಣ್ಣಿನಿಂದ ಮಾಡಲಾದ ಹಂಚುಗಳ ಬಳಕೆ ಹೆಚ್ಚಾಯಿತು. ಇಂದೂ ಕೂಡ ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಸ್ಪೇಯಿನ್, ಗ್ರೀಸ್ ಮತ್ತು ಟರ್ಕಿ ಮುಂತಾದ ದೇಶಗಳಲ್ಲಿ ಉಪಯೋಗಿಸುವಂತ ಹಂಚುಗಳು ಹಿಂದಿನ ಮಾದರಿಯಲ್ಲಿಯೇ ಇದ್ದು ಯಾವುದೇ ಬದಲಾವಣೆ ಕಂಡಿಲ್ಲ. ಹಂಚನ್ನು ಉತ್ಪಾದಿಸುವ ರೀತಿಯಲ್ಲಿ ಅಥವಾ ತಾಂತ್ರಿಕತೆಯಲ್ಲಿ ಮಾತ್ರ ಬದಲಾವಣೆ, ಅಭಿವೃದ್ಧಿಯಾಗಿದೆ ಹೊರತು ಹಂಚುಗಳ ಮಾದರಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಕರ್ನಾಟಕದಲ್ಲಿ ಹಂಚು ಉದ್ಯಮದ ಜನನ

ಭಾರತದ ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಮತ್ತು ಕರಾವಳಿ ಪ್ರದೇಶದಲ್ಲಿ ಮನೆಗಳ ಮೇಲ್ಛಾವಣೆಗಳಿಗೆ ಹೊದಿಸಲು ಬಹಳ ಹಿಂದಿನಿಂದಲೇ ಆವೆಮಣ್ಣಿನಿಂದ ತಯಾರಿಸಲಾದ ಹಂಚುಗಳನ್ನು ಉಪಯೋಗಿಸುತ್ತಿದ್ದರು. ಈ ಹಂಚುಗಳನ್ನು “ನಾಡ ಹಂಚು” ಗಳೆಂದು ಕರೆಯಲಾಗುತ್ತಿದ್ದು, ಇವು ಇಂಗ್ಲೀಷ ಭಾಷೆಯ “V” ಅಕ್ಷರದ ವಿನ್ಯಾಸದಲ್ಲಿ ಅರ್ಧಚಂದ್ರಾಕೃತಿಯಲ್ಲಿವೆ. ಇವುಗಳನ್ನು ಕುಂಬಾರರು ತಮ್ಮ ಚಕ್ರಗಳ ಮೂಲಕ ತಯಾರಿಸುತ್ತಿದ್ದು, ಇದರ ಒಂದು ಬದಿ ಸ್ವಲ್ಪ ಸಪೂರವಾಗಿದ್ದು, ಇನ್ನೊಂದು ಬದಿ ಅಗಲವಾಗಿದೆ. ಕ್ರಿ. ಶ. ೧೮೬೫ರಲ್ಲಿ “ಮಂಗಳೂರು ಹಂಚು”ಗಳ ಉತ್ಪಾದನೆ ಪ್ರಾರಂಭವಾದ ನಂತರ ದಕ್ಷಿಣ ಕನ್ನಡದಲ್ಲಿ ನಾಡಹಂಚಿನ ಬಳಕೆ ನಿಂತುಹೋಗಿದ್ದರೂ, ಕರ್ನಾಟಕ ರಾಜ್ಯದ ಇತರೆಡೆ ಮೈಸೂರು, ಮಂಡ್ಯ, ತುಮಕೂರು, ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇಂದೂ ಕೂಡ ನಾಡಹಂಚುಗಳನ್ನು ಉಪಯೋಗಿಸುತ್ತಿದ್ದಾರೆ. ಪ್ರಸ್ತುತ ದಕ್ಷಿಣಕನ್ನಡ ಮತ್ತು ಇತರ ನಗರಗಳಲ್ಲಿ ಈ ಮಾದರಿಯ ಹಂಚುಗಳನ್ನು ಮೇಲ್ಛಾವಣೆಯ ಹೊರಭಾಗದ ಸೊಬಗನ್ನು ಹೆಚ್ಚಿಸುವುದಕ್ಕಾಗಿ ಆರ್.ಸಿ.ಸಿ. ಸ್ಲ್ಯಾಬ್ ಗಳ ಮೇಲೆ ಬಳಸುತ್ತಿದ್ದಾರೆ.

ಭಾರತದ ಪಶ್ಚಿಮ ಕರಾವಳಿ ತೀರಪ್ರದೇಶದಲ್ಲಿ ಹಂಚುಗಳ ಉತ್ಪಾದನೆಯ ಹಿಂದೇ ಹಲವು ಶತಮಾನಗಳ ಚರಿತ್ರೆಯಿದೆ. ಕ್ರಿ.ಶ. ೧೫೧೦-೧೫೩೧ರ ಮಧ್ಯೆ ಮಲಬಾರ್ ಕರಾವಳಿ ತೀರಕ್ಕೆ ಬಂದು ಅಲ್ಲಿಯೇ ಬಹಳಷ್ಟು ವರ್ಷಗಳ ಕಾಲ ಇದ್ದು ಅಲ್ಲಿಯ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿರುವ ಪೋರ್ಚ್‍ಗೀಸ್ ಪ್ರವಾಸಿಗ ಡ್ಯೂರೇಟ್ ಬರ್ಬೊಸಾ, ಭಾರತದ ಪಶ್ಚಿಮ ಕರಾವಳಿ ತೀರದಲ್ಲಿದ್ದ ಕುಂಬಾರರು. ಕುಂಬಾರ ಕಲೆ ಮತ್ತು ಹಂಚುಗಳ ಬಗ್ಗೆ ಈ ಕೆಳಗಿನ ವಿವರಣೆ ನೀಡಿದ್ದಾನೆ : “ಆವೆಮಣ್ಣನ್ನು ಸುಡುವುದು ಮತ್ತು ಹಂಚು ತಯಾರಿಸುವುದು ಇಲ್ಲಿಯ ಜನರ ಮುಖ್ಯಉದ್ಯೋಗ, ಮನೆಯ ಮೇಲ್ಛಾವಣೆ, ದೇವಾಲಯಗಳು ಮತ್ತು ರಾಜಮನೆತನಕ್ಕೆ ಸಂಬಂಧಪಟ್ಟ ಕಟ್ಟಡಗಳ ಮೇಲ್ಛಾವಣಿಗೆಗೆ ಹೊಂದಿಸಲು ಅವರು ಹಂಚನ್ನು ಉಪಯೋಗಿಸುತ್ತಿದ್ದರು. ಆದರೆ ಸಾಮಾನ್ಯ ಜನರು ತಮ್ಮ ಮನೆಗಳ ಮೇಲ್ಛಾವಣೆಗೆಗೆ ಎಲೆ ಅಥವಾ ಹುಲ್ಲನ್ನು ಹೊರತು ಬೇರೇ ಯಾವುದೇ ವಸ್ತುಗಳನ್ನು ಬಳಸಬಾರದು ಎಂಬುದು ಆಗಿನ ಸಾಮಾನ್ಯ ಕಾನೂನಾಗಿತ್ತು, ಎಂದು ಆತನು ತನ್ನ ಗ್ರಂಥದಲ್ಲಿ ಬರೆದಿದ್ದಾನೆ. ಅಂದರೆ ಅರಮನೆ ಮತ್ತು ಹಣವಂತರು ಮಾತ್ರ ಹಂಚನ್ನು ಉಪಯೋಗಿಸುತ್ತಿದ್ದರು. ಆದರೆ ಬಡವರು ಮತ್ತು ಸಮಾಜದ ಶೋಷಿತವರ್ಗ ಹಂಚನ್ನು ಬಳಸದಂತೆ ಅವರ ಮೇಲೆ ಅಲಿಖಿತ ಕಾನೂನು (ಸಂಪ್ರದಾಯ) ಜಾರಿಯಲ್ಲಿತ್ತೆಂದು ಇದರಿಂದ ತಿಳಿದುಬರುತ್ತದೆ. ಒಬ್ಬಾತನು ಹಂಚಿನ ಮನೆಯನ್ನು ಹೊಂದಿರುವುದು, ಸಮಾಜದಲ್ಲಿ ಆತನ ಸ್ಥಾನಮಾನವನ್ನು ನಿರ್ಧರಿಸುವ ಅಳತೆ ಗೋಲಾಗಿತ್ತು, ಎಂಬ ಸ್ಪಷ್ಟ ತೀರ್ಮಾನಕ್ಕೆ ಬರಲು ಬರ್ಬೊಸಾನ ಈ ಮೇಲಿನ ಹೇಳಿಕೆಯು ಒಂದು ಉತ್ತಮ ಆಧಾರವಾಗಿದೆ. ೧೯ನೇ ಶತಮಾನದ ತನಕ ಕರಾವಳಿ ತೀರದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಿತು. ೧೯ನೇ ಶತಮಾನದಲ್ಲಿ ಸಾರ್ವಜನಿಕ ಕಟ್ಟಡ, ರೈಲ್ವೆ ನಿಲ್ದಾಣಗಳು ಇತ್ಯಾದಿ ಕಟ್ಟಲು ಪ್ರಾರಂಭಿಸಿದಾಗ ಹೆಚ್ಚಿನ ಹಂಚು ಪೂರೈಕೆಗಾಗಿ ಕಾದುಕೊಂಡಿದ್ದ ಸಿದ್ಧ ಮಾರುಕಟ್ಟೆಯಿತ್ತು. ಆದರೆ ನಾಡಹಂಚಿನ ಉತ್ಪಾದನೆಯಲ್ಲಿ ತೊಡಗಿದ್ದವರಿಗೆ ಈ ಹೊಸ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ. ನಾಡಹಂಚನ್ನುಉಪಯೋಗಿಸಿ ಮೇಲ್ಛಾವಣೆ ರಚಿಸಲು ಹೆಚ್ಚಿನ ಸಂಖ್ಯೆಯ ಮೋಪು ಅಗತ್ಯವಿರುವುದರಿಂದ ಅಂದು ಬಡಜನರಿಗೆ ಅದು ದುಬಾರಿಯೆನಿಸಿತ್ತು. ಅಂತಹ ಸಂದರ್ಭದಲ್ಲಿ ಬಾಸೆಲ್ ಮಿಷನ್, ಯಂತ್ರದ ಮೂಲಕ ತಯಾರಿಸಿದ ತನ್ನ ಹಂಚನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದುವೇ “ಮಂಗಳೂರು ಹಂಜುಗಳು”.

ಮಂಗಳೂರು ಹಂಚುಗಳು

ಕರ್ನಾಟಕದಲ್ಲಿ ಹೊಸ ಮಾದರಿಯ “ಮಂಗಳೂರು ಹಂಚು”ಗಳೆಂದು ವಿಶ್ವದಾದ್ಯಂತ ಪ್ರಖ್ಯಾತಗೊಂಡಿರುವ ಹಂಚುಗಳನ್ನು ಪ್ರಥಮವಾಗಿ ತಯಾರಿಸಿದ ಕೀರ್ತಿ “ಬಾಸೆಲ್ ಮಿಷನ್” ಸಂಸ್ಥೆಗೆ ಸಲ್ಲುತ್ತದೆ. ಬಾಸೆಲ್ ಮಿಷನ್ ಎಂಬುದು ಕ್ರಿ.ಶ. ೧೮೧೫ ರಲ್ಲಿ ಸ್ವಿಝರ್ಲೆಂಡ್ ದೇಶದ ಬಾಸೆಲ್ ಎಂಬ ಪಟ್ಟಣದಲ್ಲಿ ಪ್ರಾರಂಭವಾಗಿ ಕ್ರಿ ಶ. ೧೮೩೪ ರಲ್ಲಿ ದಕ್ಷಿಣಕನ್ನಡದಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿದ ಒಂದು ಸೇವಾ ಸಂಸ್ಥೆ. ಅದು ಹಿಂದಿನ ದಕ್ಷಿಣಕನ್ನಡ ಜಿಲ್ಲೆಯ (ಉಡುಪಿ ಜಿಲ್ಲೆ ಸಹಿತ) ಮಂಗಳೂರಿನ ಜಪ್ಪು ಎಂಬಲ್ಲಿ ಕ್ರಿ.ಶ. ೧೮೬೫ ರಲ್ಲಿ ಪ್ರಥಮ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ ೧೩೫ ವರ್ಷಗಳಷ್ಟು ದೀರ್ಘಕಾಲದ ಇತಿಹಾಸವುಳ್ಳ ಒಂದು ಹಿರಿಯ ಕೈಗಾರಿಕೆಯು ಕರ್ನಾಟಕದಲ್ಲಿ ಪ್ರಾರಂಭವಾಗಲು ಕಾರಣವಾಗಿದೆ.

೧೯ನೇ ಶತಮಾನಕ್ಕಿಂತ ಹಿಂದೆ ದಕ್ಷಿಣಕನ್ನಡದ ಆರ್ಥಿಕತೆಯು ಭಾರತದ ಇತರ ಪ್ರದೇಶಗಳಂತೆ ಮುಖ್ಯವಾಗಿ ವ್ಯವಸಾಯದ ಮೇಲೆ ಅವಲಂಬಿತವಾಗಿತ್ತು. ಕೆಲವು ಗುಡಿ ಕೈಗಾರಿಕೆಗಳನ್ನು ಬಿಟ್ಟರೆ ಬೇರೆ ಹೇಳಿಕೊಳ್ಳುವಂಥ ಯಾವುದೇ ಕೈಗಾರಿಕೆಗಳು ದಕ್ಷಿಣಕನ್ನಡದಲ್ಲಿ ಪ್ರಾರಂಭವಾಗಿರಲಿಲ್ಲ. ಅನಂತರ ಜಿಲ್ಲೆಯು ಬ್ರಿಟಿಷ್ ಸರಕಾರದ ಆಡಳಿತಕ್ಕೆ ಒಳಪಟ್ಟರೂ ಕೂಡ ಇಂಗ್ಲಿಷ್ ಸರಕಾರವು ವ್ಯಾಪಾರ ಮತ್ತು ಕಂದಾಯ ವಸೂಲಿಗೆ ಹೆಚ್ಚಿನ ಗಮನ ನೀಡಿತೇ ಹೊರತು. ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳನ್ನು ಆರಂಭಿಸುವ ಸಾಹಸಕ್ಕೆ ಅದು ಮುಂದಾಗಲಿಲ್ಲ. ಆ ಸಂದರ್ಭದಲ್ಲಿ ಬಾಸೆಲ್ ಮಿಷನ್ ಹಲವು ಕೈಗಾರಿಕೆಗಳನ್ನು ಸ್ಥಾಪಿಸಿ ಜಿಲ್ಲೆಯ ಆರ್ಥಿಕ ಸ್ಥಿತಿಗೆ ಒಂದು ಹೊಸ ರೂಪಕೊಟ್ಟು, ಅದು ಮೆರುಗುಪಡೆದು ಮುಂದೆ ಪ್ರಗತಿಪಥದಲ್ಲಿ ಮುಂದುವರೆಯಲು ತನ್ನಿಂದಾದ ಸೇವೆಯನ್ನು ಸಲ್ಲಿಸಿದೆ. ಕ್ರಿ.ಶ. ೧೮೪೦ ರಿಂದಲೇ ಬಾಸೆಲ್ ಮಿಷನ್ ಮಂಗಳೂರಿನಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸುವ ಸಾಹಸಕ್ಕೆ ಕೈಹಚ್ಚಿತು. ಆರಂಭದಲ್ಲಿ ಮಂಗಳೂರಿನ ಬಲ್ಮಠದಲ್ಲಿ ಕಾಫಿ ಪ್ಲಾಂಟೇಶನ್ ಮಾಡಲಾಯಿತು. ಆದರೆ ಅದು ಅಷ್ಟು ಫಲಕಾರಿಯಾಗಿಲ್ಲ. ನಂತರ ತೆಂಗಿನಮರದಿಂದ ದೊರೆಯುವ ಶೇಂದಿಯಿಂದ ಸಕ್ಕರೆ ತಯಾರಿಸುವ ಪ್ರಯತ್ನ ಮಾಡಲಾಯಿತು. ಆದರೆ ತೀವ್ರ ತುಟ್ಟಿಯಾದ ಇಂಧನ ಸಮಸ್ಯೆಯಿಂದಾಗಿ ಅದನ್ನೂ ಕೈಬಿಡಲಾಯಿತು. ಮುಂದೆ ಕ್ರಿ.ಶ. ೧೮೪೬ ರಲ್ಲಿ ಮಂಗಳೂರಿನಲ್ಲಿ ಒಂದು ಕೈಗಾರಿಕಾ ತರಬೇತಿ ಶಾಲೆಯನ್ನು ಸ್ಥಾಪಿಸಲಾಯಿತು. ಇಲ್ಲಿ ಮರದ ಕೆಲಸ, ನೇಯ್ಗೆ, ಬೀಗ ತಯಾರಿಕೆ ಮುಂತಾದವುಗಳ ಬಗ್ಗೆ ತರಬೇತಿಯನ್ನು ಯುವಜನರಿಗೆ ಕೊಡಲಾಗುತ್ತಿತ್ತು. ಈ ತರಬೇತಿ ಶಾಲೆಯು ಬೊಸಿಂಜರ್ ಮತ್ತು ಮುಲ್ಲರ್ ಎಂಬ ಇಬ್ಬರು ತಜ್ಞರ ಕೈಕೆಳಗೆ ಕೆಲಸ ಮಾಡುತ್ತಿತ್ತು. ಆದರೆ ಸ್ಥಳೀಯ ಜನರಿಗೆ ಇದು ಕಷ್ಟಕರವೆಂದು ಕಂಡು ಬಂದದ್ದರಿಂದ ಸ್ವಲ್ಪ ಸಮಯದ ನಂತರ ಇದನ್ನು ಕೈಬಿಡಲಾಯಿತು. ಆರಂಭದಲ್ಲಿ ಈ ಮೇಲಿನ ಎಲ್ಲಾ ಕೈಗಾರಿಕೆಗಳನ್ನು ಸ್ಥಾಪಿಸಿ ಅವುಗಳ ಸಾಧನೆಯನ್ನು ಪರೀಕ್ಷಿಸಿದ ನಂತರ ಕ್ರಿ.ಶ. ೧೮೫೪ ರಲ್ಲಿ ಬಾಸೆಲ್‍ಮಿಷನ್, “ಇಂಡಸ್ಟ್ರಿಯಲ್ ಕಮಿಷನ್” ಎಂಬ ಒಂದು ಸಹಸಂಸ್ಥೆಯನ್ನು ಪ್ರಾರಂಭಿಸಿತು. ಹೆರ್ ಕಾರ್ಲ್ ಸರಸಿನ್ ಎಂಬಾತನು ಈ ಸಂಸ್ಥೆಯ ಪ್ರಥಮ ಅಧ್ಯಕ್ಷ. ಭಾರತದಲ್ಲಿ ಬಾಸೆಲ್ ಮಿಷನಿನ ಪರವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ ಅವುಗಳನ್ನು ನಡೆಸಿಕೊಂಡು ಬರುವುದು ಇಂಡಸ್ಟ್ರೀಯಲ್ ಕಮಿಷನ್‍ನ ಮುಖ್ಯ ಕರ್ತವ್ಯ. ಈ ಸಂಸ್ಥೆಯ ಮೂಲಕ ದಕ್ಷಿಣಕನ್ನಡದಲ್ಲಿ ಸ್ಥಾಪಿಸಿಲ್ಪಟ್ಟು ಅಂತರ್ ರಾಷ್ಟ್ರೀಯವಾಗಿ ಖ್ಯಾತಿಗಳಿಸಿದ ಕೈಗಾರಿಕೆಗಳಲ್ಲಿ ಪ್ರಮುಖವಾದುದ್ದು ಹಂಚು ಉದ್ಯಮ.

ದಕ್ಷಿಣ ಕನ್ನಡದಲ್ಲಿ ಬಾಸೆಲ್ ಮಿಷನ್ ತನ್ನ ಪ್ರಥಮ ಹಂಚಿನ ಕಾರ್ಖಾನೆಯನ್ನು ಕ್ರಿ.ಶ. ೧೮೬೫ ರಲ್ಲಿ ಸ್ಥಾಪಿಸಿತು. ಮತ್ತು ಆ ಮೂಲಕ ೧೩೫ ವರ್ಷಗಳಷ್ಟು ಕಾಲದ ಇತಿಹಾಸವುಳ್ಳ ಒಂದು ಹಿರಿಯ ಉದ್ದಿಮೆಯು ಕರ್ನಾಟಕದಲ್ಲಿ ಹುಟ್ಟಲು ಕಾರಣವಾಗಿದೆ. ಈ ಸಂಸ್ಥೆಯ ಕೈಗಾರಿಕಾ ವಿಭಾಗಕ್ಕೆ ಸೇರಿದ ಓರ್ವ ಮಿಷನರಿ ಮತ್ತು ಮುದ್ರಕನಾದ ಚಾರ್ಲ್ಸ್ ಚಾರ್ಜ್ ಆಂಡ್ರೂಪ್ಲೆಬ್ಸೈ ಎಂಬಾತನು ಓರ್ವ ಮ್ಯಕನಿಕಲ್ ಇಜಿನಿಯರ್, ಮಂಗಳೂರಿನಿಂದ ಜರ್ಮನಿಗೆ ಹಿಂತಿರುಗಿದ ಆತನು ಮಣ್ಣುಹದಮಾಡುವುದು, ಹಂಚು ತಯಾರಿಸುವುದು, ಹಂಚನ್ನು ಸುಡುವ ಗೂಡನ್ನು ನಿರ್ಮಿಸುವುದು ಮತ್ತು ಹಂಚನ್ನು ಬೇಯಿಸುವುದು (ಸುಡುವುದು) ಮುಂತಾದ ಬಗ್ಗೆ ಜರ್ಮನಿಯಲ್ಲಿ ತರಬೇತಿ ಪಡೆದು ಮಂಗಳೂರಿಗೆ ಹಿಂತಿರುಗಿದ ನಂತರ ಮಂಗಳೂರಿನಲ್ಲಿ ಮಣ್ಣಿನ ಪಾತ್ರೆಗಳ ತಯಾರಿ ಬಗ್ಗೆ ಸ್ಥಳೀಯರಿಗೆ ತರಬೇತಿ ನೀಡುತ್ತಿದ್ದ. ಆದರೆ ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣನ್ನು ಪರೀಕ್ಷಿಸಿದ ಆತನು ಅದು ಹಂಚುಗಳ ಉತ್ಪಾದನೆಗೆ ಬಹಳ ಉತ್ತಮವಾಗಿದೆ ಎಂಬುದನ್ನು ಅರಿತುಕೊಂಡು, ಕ್ರಿ.ಶ. ೧೮೬೫ ರಲ್ಲಿ ಮಡಿಕೆ ತಯಾರಿಸುವುದನ್ನು ಕೈಬಿಟ್ಟು ಹಂಚಿನ ಉತ್ಪಾದನೆಗೆ ಮುಂದಡಿ ಇಟ್ಟ. ಪ್ರಥಮ ಮಂಗಳೂರು ಹಂಚನ್ನು ಕ್ರಿ.ಶ. ೧೮೬೫ ರಲ್ಲಿ ಜೆಪ್ಪುವಿನಲ್ಲಿರುವ ಬಾಸೆಲ್ ಮಿಷನ್ ಕಾರ್ಖಾನೆಯಲ್ಲಿ ತಯಾರಿಸಲಾಯಿತು. ಆರಂಭದಲ್ಲಿ ಹಂಚನ್ನು ಉತ್ಪಾದಿಸುವ ಯಂತ್ರಗಳನ್ನು ಕೈಯಿಂದ ತಿರುಗಿಸಲಾಗುತ್ತಿತ್ತು. ಆದರೆ ನಂತರ ಅದಕ್ಕಾಗಿ ಎತ್ತುಗಳನ್ನು ಉಪಯೋಗಿಸುತ್ತಿದ್ದರು. ಕ್ರಿ.ಶ. ೧೮೭೧ ರಲ್ಲಿ ಜೆಪ್ಪು ಕಾರ್ಖಾನೆಯಲ್ಲಿ ೬೦ ಕೆಲಸಗಾರರಿದ್ದು ಆಗ ಅದರ ವಾರ್ಷಿಕ ಉತ್ಪಾದನೆ ೨,೦೯,೦೦೦ ಹಂಚುಗಳು. ಕ್ರಿ.ಶ. ೧೮೭೩ ರಲ್ಲಿ ಈ ಕಾರ್ಖಾನೆಯು ತನ್ನ ಮೂಲ ಬಂಡವಾಳಕ್ಕಾಗಿ ಪಡೆದ ಎಲ್ಲಾ ಹಣವನ್ನು ಮರುಪಾವತಿ ಮಾಡಿತು. ಇದಲ್ಲದೇ ಕ್ರಿ. ಶ. ೧೮೭೧ ರಲ್ಲಿ ಈ ಕಾರ್ಖಾನೆಯ ಇತರ ಕೆಲಸಗಾರರಿಗೆ ಹಂಚು ತಯಾರಿಸುವ ಬಗ್ಗೆ ತರಬೇತಿ ನೀಡಲು ಹಂಚು ತಜ್ಞ ಹಟ್ಟಿಂಬರ್ ಎಂಬಾತನನ್ನು ಬಾಸೆಲ್ ಪಟ್ಟಣದಿಂದ ಕರೆಸಲಾಯಿತು. ಕ್ರಿ.ಶ. ೧೮೮೦ ರಲ್ಲಿ ಇಲ್ಲಿ ೧೮೦ ಕೆಲಸಗಾರರಿದ್ದು ೧೦ ಲಕ್ಷ ಹಂಚುಗಳನ್ನು ವಾರ್ಷಿಕವಾಗಿ ಉತ್ಪಾದಿಸಲಾಗುತ್ತಿತ್ತು. ಕ್ರಿ.ಶ. ೧೮೮೧ ನವೆಂಬರ್ ೨೧ ರಂದು “ಉಗಿಯಂತ್ರ” ವನ್ನು ಸ್ಥಾಪಿಸಿ ಹಂಚಿನ ಉತ್ಪಾದನೆಯನ್ನು ಹೆಚ್ಚಿಸಲಾಯಿತು. ಅಂದು ಬಾಸೆಲ್ ಮಿಷನ್ ಹಂಚಿನ ಕಾರ್ಖಾನೆಯ ದಿನ ಒಂದರ ಉತ್ಪಾದನೆ ೫೬೦ ಹಂಚುಗಳು. ಆದರೆ ಇಂದು ಬಹಳ ಸುಧಾರಿತ ಯಂತ್ರಗಳನ್ನು ಹೊಂದಿರುವ ಕಾಮನ್‍ವೆಲ್ತ್ ಹಂಚಿನ ಕಾರ್ಖಾನೆ (ಹಿಂದಿನ ಬಾಸೆಲ್ ಮಿಷನ್ ಕಾರ್ಖಾನೆ)ಯ ಪ್ರೆಸ್ಸಿನಲ್ಲಿ ೧೧ ಜನ ಕೆಲಸಗಾರರು ೮ ಗಂಟೆಯ ಒಂದು ಶಿಫ್ಟ್ ಕೆಲಸ ಮಾಡಿದರೆ ೬೨೫೦ ಹಂಚುಗಳನ್ನು ಉತ್ಪಾದಿಸುತ್ತಾರೆ. ಇತರ ಕೆಲವು ಕಾರ್ಖಾನೆಗಳಲ್ಲಿ ಒಂದು ಶಿಫ್ಟ್ ನಲ್ಲಿ ೮೭೦೦ ಹಂಚುಗಳ ತನಕ ತಯಾರಿಸುತ್ತಾರೆ. ಸಾಮಾನ್ಯವಾಗಿ ಸುಧಾರಿತ ಯಂತ್ರಗಳನ್ನು ಹೊಂದಿರುವ ಕೆಲವು ಕಾರ್ಖಾನೆಗಳನ್ನು ಬಿಟ್ಟರೆ, ಇತರ ಕಾರ್ಖಾನೆಗಳಲ್ಲಿ ೧೦೦೦ ಹಂಚುಗಳನ್ನು ತಯಾರಿಸಲು ೧೪ ರಿಂದ ೧೫ ಕೆಲಸಗಾರರ (೮ ಗಂಟೆಯ ಒಂದು ಶಿಫ್ಟ್) ಅಗತ್ಯವಿದೆ.

ಜೆಪ್ಪುವಿನಲ್ಲಿ ಪ್ರಾರಂಭಿಸಿದ ಹಂಚಿನ ಕಾರ್ಖಾನೆಗೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಗಿ ಜನರ ಬೇಡಿಕೆಯನ್ನು ಪೂರೈಸಲು ಬಾಸೆಲ್ ಮಿಷನ್‍ಗೆ ಅಸಾಧ್ಯವಾದಾಗ ಕ್ರಿ.ಶ. ೧೮೮೨ರಲ್ಲಿ ಆರ್ ಹೌರೀ ಮತ್ತು ಜಿ. ಫ್ರಾಂಕೇ ಎಂಬವರ ಹಿರಿತನದಲ್ಲಿ ಮಂಗಳೂರಿನ ಕುದ್ರೋಳಿ ಎಂಬಲ್ಲಿ ಬಾಸೆಲ್ ಮಿಷನ್ ತನ್ನ ಎರಡನೆ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸಿತು. ಮುಂದೇ ದಕ್ಷಿಣ ಕನ್ನಡ ಜಿಲ್ಲೆಯ (ಉಡುಪಿದಾಗ ಸಹಿತ) ಉತ್ತರಭಾಗದಲ್ಲಿ ಬಾಸೆಲ್ ಮಿಷನ್ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದಾಗ ಉಡಿಪಿಯ ಮಲ್ಪೆ ಎಂಬಲ್ಲಿ ಬೌಮನ್ ಮತ್ತು ಗ್ಲೇಟ್ ಫೀಲ್ಡರ್ ರ ಮುಂದಾಳುತನದಲ್ಲಿ ಕ್ರಿ.ಶ. ೧೮೮೬ ರಲ್ಲಿ ಬಾಸೆಲ್ ಮಿಷನ್ ತನ್ನ ೩ನೇ ಕಾರ್ಖಾನೆಯನ್ನು ಪ್ರಾರಂಭಿಸಿತು. ಆದರೆ ಇದು ಕ್ರಿ.ಶ. ೧೮೮೮ ರಲ್ಲಿ ತನ್ನ ಉತ್ಪಾದನೆ ಪ್ರಾರಂಭಿಸಿತು. ಈ ಮೂರು ಕಾರ್ಖಾನೆಗಳ ಉತ್ಪಾದನಾ ಸಾಮರ್ಥ್ಯವು ಆಯಾ ಕಾರ್ಖಾನೆಗಳಲ್ಲಿ ದೊರಕುವ ಕೆಲಸಗಾರರು, ಹಂಚನ್ನು ಒಣಗಿಸಲು ಅಗತ್ಯವಿರುವ ಸ್ಥಳ ಮತ್ತು ಹಂಚಿಗಿರುವ ಬೇಡಿಕೆಯನ್ನು ಅವಲಂಬಿಸಿ ಭಿನ್ನವಾಗಿತ್ತು. ಮಲ್ಪೆಯ ಕಾರ್ಖಾನೆಗೆ ಬೇಕಾದ ಆವೆಮಣ್ಣನ್ನು ಈಗ ಮಣಿಪಾಲವೆಂದು ಕರೆಯಲ್ಪಡುವ ಸ್ಥಳದಿಂದ ಕೊಂಡೊಯ್ಯುತ್ತಿದ್ದರು. ಅಂದು ಈ ಸ್ಥಳವನ್ನು ‘ಮಣ್ಣು-ಪಲ್ಲ’ (ಮಣ್ಣು ತೆಗೆದಾಗ ಆಗುವ ದೊಡ್ಡ ಹೊಂಡ) ವೆಂದು ಕರೆಯುತ್ತಿದ್ದರು. ಮುಂದೇ ಇದೇ “ಮಣಿಪಾಲ” ವೆಂದಾಯಿತು ಎಂದು ತಿಳಿದು ಬರುತ್ತದೆ. ಇಂದು ಕೂಡ ಮಣಿಪಾಲದ ಹೊರಭಾಗದಿಂದ ಸುತ್ತು ಮುತ್ತಲಿನ ಕಾರ್ಖಾನೆಗಳಿಗೆ ಆವೆಮಣ್ಣನ್ನು ಸಾಗಿಸಲಾಗುತ್ತದೆ.

ಆರಂಭದಲ್ಲಿ ಬಾಸೆಲ್ ಮಿಷನ್ ಕಾರ್ಖಾನೆಯು ತಯಾರಿಸುತ್ತಿದ್ದ ಹಂಚುಗಳು ಈಗಿನ ಹಂಚಿನಂತೆ ಮಧ್ಯೆ ಎತ್ತರವಿದ್ದು ಎರಡು ಬದಿಗಳಲ್ಲಿ ಉದ್ದಕ್ಕೆ ತಗ್ಗಿರುವ ಹಂಚುಗಳಾಗಿರದೇ ಮಧ್ಯೆ ತಗ್ಗಾಗಿದ್ದು ಎರಡು ಬದಿಗಳಲ್ಲಿ ಎತ್ತರವಾಗಿದ್ದವು. ಆ ನಂತರ ಸಾಮಾನ್ಯವಾದ ಮತ್ತು ಅಲಂಕಾರಿಕ ಮೂಲೆ ಹಂಚುಗಳು, ಸೂರ್ಯನ ಬೆಳಕು ಒಳಬರುವ ಗ್ಲಾಸ್ ಹಂಚುಗಳು, ವೆಂಟಿಲೇಟರ್ ಗಳು, ಇಟ್ಟಿಗೆಗಳು, ನೇತಾಡುವ ಗೋಡೆ ಹಂಚುಗಳು, ಮೇಲ್ಛಾವಣೆಯ ಒಳಭಾಗಕ್ಕೆ ಹೊದಿಸುವ ಹಂಚುಗಳು, ನೆಲದ ಮೇಲೆ ಹೊದಿಸುವ ಹಂಚುಗಳು, ಮೇಲ್ಮೈ ಹೊಳಪಿರುವ ಗೋಡೆಯ ಮತ್ತು ನೆಲದ ಮೇಲೆ ಹೊದಿಸುವ ಹಂಚುಗಳು, ಒಳಚರಂಡಿ ಕೊಳವೆಗಳು, ಮಣ್ಣಿನ ಹೂದಾನಿಗಳು, ಚಟ್ಟಿಗಳು ಇತ್ಯಾದಿ ವಸ್ತುಗಳನ್ನು ಇಲ್ಲಿ ತಯಾರಿಸಲಾಗುತ್ತಿತ್ತು. ಬಾಸೆಲ್ ಮಿಷನ್ ಹಂಚಿನ ಕಾರ್ಖಾನೆಗಳು ತಾನು ಉತ್ಪಾದಿಸುತ್ತಿದ್ದ ಹಂಚುಗಳ ಗುಣ ಮಟ್ಟವನ್ನು ಬಹಳ ಶ್ರೇಷ್ಠಮಟ್ಟದಲ್ಲೇ ಕಾದುಕೊಂಡಿದ್ದರಿಂದ ಅದು ಇಡೀ ವಿಶ್ವದಾದ್ಯಂತ “ಮಂಗಳೂರು ಹಂಚು”ಗಳೆಂದು ಪರಿಚಯಿಸಲ್ಪಟ್ಟಿದೆ. ಇದರಿಂದಾಗಿ ಡಿಸೆಂಬರ್ ೧೯೦೪ ರಿಂದ ಫೆಬ್ರವರಿ ೧೯೦೫ರ ತನಕ ಮುಂಬೈಯಲ್ಲಿ ಮತ್ತು ಕ್ರಿ.ಶ. ೧೯೦೯ ರಲ್ಲಿ ನಾಗಪುರದಲ್ಲಿ ನಡೆದ ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳ ವಸ್ತು ಪ್ರದರ್ಶನದಲ್ಲಿ ಜೆಪ್ಪು ಮತ್ತು ಕುದ್ರೋಳಿಯ ಬಾಸೆಲ್ ಮಿಷನ್ ಕಾರ್ಖಾನೆಗಳು ಉತ್ಪಾದಿಸಿ ಕಳುಹಿಸಿದ ವಸ್ತುಗಳು ಪ್ರೇಕ್ಷಕರ ಮೆಚ್ಚುಗೆಯೊಂದಿಗೆ ಬಂಗಾರದ ಪದಕಗಳನ್ನು ಗಳಿಸಿವೆ. ಈ ಹಂಚುಗಳಿಗೆ ಭಾರತದ್ಯಾದಂತ ಮಾತ್ರವಲ್ಲದೇ ಪೂರ್ವ ಆಫ್ರಿಕ ದೇಶಗಳು, ಏಡಾನ್, ಬಸ್ರಾ, ಸುಮುತ್ರಾ, ಬ್ರಿಟಿಷ್ ಬೋರ್ನಿಯೊ, ಆಸ್ಟ್ರೇಲಿಯ, ಫಿಜಿ, ಆಫ್ರಿಕದಲ್ಲಿದ್ದ ಜರ್ಮನ್ ವಸಾಹತುಗಳು ಮುಂತಾದೆಡೆಯಿಂದ ಬೇಡಿಕೆ ಇದ್ದು ಈ ಎಲ್ಲಾ ದೇಶಗಳಿಗೆ ಅದನ್ನು ರಫ್ತು ಮಾಡಲಾಗುತ್ತಿತ್ತು.

ದಕ್ಷಿಣ ಕನ್ನಡ ಮಾತ್ರವಲ್ಲದೆ ಕೇರಳದ ಕಲ್ಲಿಕೋಟೆ (೧೮೭೩) ಕೊಡಕ್ಕಲ್ (೧೮೮೭) ಫಾಲ್ಗಟ್ (೧೮೮೭) ಫೆರೋಕ್ (೧೯೦೫) ಎಂಬಲ್ಲಿ ಕೂಡ ಬಾಸೆಲ್ ಮಿಷನ್, ಹಂಚಿನ ಕಾರ್ಖಾನೆಗಳನ್ನು ಪ್ರಾರಂಭಿಸಿತ್ತು. ಇಂದೂ ಕೂಡ ಅವು ಕಾರ್ಯ ನಿರ್ವಹಿಸುತ್ತಿವೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದ (ಉಡುಪಿ ಜಿಲ್ಲೆ ಸಹಿತ) ಹಂಚಿನ ಕಾರ್ಖಾನೆಗಳಲ್ಲಿ ಜೆಪ್ಪು ಮತ್ತು ಕುದ್ರೋಳಿಗಳಲ್ಲಿದ್ದ ಹಂಚಿನ ಕಾರ್ಖಾನೆಗಳು ಇಂದು ಕೂಡ, “ಬಾಸೆಲ್ ಮಿಷನ್ ಹಂಚಿನ ಕಾರ್ಖಾನೆ” ಗಳೆಂದು ಕರೆಯಲ್ಪಡುತ್ತಿದ್ದು, “ಕಾಮನ್‍ವೆಲ್ತ್ ಟ್ರಸ್ಟ್ ಲಿಮಿಟೆಡ್” ಎಂಬ ಸಂಸ್ಥೆಯ ಕೈಕಳಗೆ ಇವೆ. ಆದರೆ ಮಲ್ಪೆಯಲ್ಲಿದ್ದ ಹಂಚಿನ ಕಾರ್ಖಾನೆಯನ್ನು ಕ್ರಿ.ಶ. ೧೯೬೯ ರಲ್ಲಿ ಕಾಮನ್‍ವೆಲ್ತ್ ಟ್ರಸ್ಟ್ ಲಿಮಿಟೆಡ್, ೮ ಜನ ಶೇರುದಾರರಿರುವ ಒಂದು ಸಂಸ್ಥೆಗೆ ಮಾರಾಟ ಮಾಡಿತು. ಅದು ಇಂದು “ಕೊರೊನೆಟ್ ಟೈಲ್ ಫ್ಯಾಕ್ಟರಿ, ಮಲ್ಪೆ” ಎಂಬ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಕ್ರಿ.ಶ. ೧೮೬೫ರಲ್ಲಿ ಬಾಸೆಲ್ ಮಿಷನ್‍ನ ಪ್ರಥಮ ಹಂಚಿನ ಕಾರ್ಖಾನೆ ಪ್ರಾರಂಭವಾದ ನಂತರ ದಕ್ಷಿಣಕನ್ನಡ ಜಿಲ್ಲೆಯ ಯಾವುದೇ ಸ್ಥಳಗಳಲ್ಲಿ ಪ್ರಾರಂಭವಾದ ಹಂಚಿನ ಕಾರ್ಖಾನೆಗಳು ಸಹ “ಮಂಗಳೂರು ಹಂಚುಗಳು” ಎಂಬ ಮುದ್ರೆಯಡಿಯಲ್ಲಿ ತಮ್ಮ ಹಂಚುಗಳನ್ನು ಮಾರಾಟ ಮಾಡುತ್ತಿವೆ. ಈ ಒಂದೇ ಒಂದು ಉದಾಹರಣೆಯು ಪ್ರಪಂಚದಲ್ಲಿ ಬಾಸೆಲ್ ಮಿಷನ್ ಹಂಚುಗಳು ಗಳಿಸಿಕೊಂಡಿರುವ ಕೀರ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಕ್ರಿ.ಶ. ೧೯೧೪ ರ ಹೊತ್ತಿಗೆ ದಕ್ಷಿಣಕನ್ನಡದಲ್ಲಿದ್ದ ಮೂರು ಬಾಸೆಲ್ ಮಿಷನ್ ಹಂಚಿನ ಕಾರ್ಖಾನೆಗಳಲ್ಲಿ ೯೧೪ ಜನರು ಉದ್ಯೋಗ ಪಡೆದಿದ್ದರು. ಅಂದಿನಿಂದ ಇಂದಿನ ತನಕ ಅದು ಹಲವು ಸಾವಿರ ಜನರಿಗೆ ನೌಕರಿಯನ್ನು ಒದಗಿಸಿಕೊಟ್ಟದ್ದಲ್ಲದೇ, ವಿಶ್ವದಾದ್ಯಂತ ಹಲವು ಲಕ್ಷ ಜನರು ಇಲ್ಲಿ ತಯಾರಾದ ಹಂಚುಗಳನ್ನು ಉಪಯೋಗಿಸಿ ಮನೆಗಳನ್ನು ಕಟ್ಟಿಕೊಳ್ಳಲು ಸಹಾಯ ಮಾಡುವುದರ ಮೂಲಕ ಜನ ಸಾಮಾನ್ಯರನ್ನು ಪ್ರಕೃತಿಯ ವೈಪರೀತ್ಯಗಳಿಂದ ರಕ್ಷಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. “ಭಾರತದಲ್ಲಿ ಈ ಕ್ಷೇತ್ರದಲ್ಲಿ ಇತರ ಯಾವುದೇ ಮಿಷನರಿ ಸಂಸ್ಥೆಗಳಿಗಿಂತ ಬಾಸೆಲ್ ಮಿಷನ್ ಸಾಧಿಸಿರುವಂಥದ್ದು ಬಹಳಷ್ಟು ಹೆಚ್ಚು. ಬಹಳ ಶ್ರೇಷ್ಠ ದರ್ಜೆಯ ಹಂಚುಗಳನ್ನು ಸಂಶೋಧಿಸಿ ಉತ್ಪಾದಿಸುವಲ್ಲಿ ಅವರು ಸಫಲರಾಗಿದ್ದಾರೆ,” ಎಂದು ಜೇಮ್ಸ್ ಎಂ ಥೋಬರ್ನ್ ಎಂಬುವರು ತಮ್ಮ “ಕ್ರಿಶ್ಚಿಯನ್ ಕಾನ್‍ಕ್ಟೆಸ್ಟ್ ಆಫ್ ಇಂಡಿಯ” ಎಂಬ ಗ್ರಂಥದಲ್ಲಿ ಹೇಳಿದ್ದಾರೆ. ಜಿಲ್ಲೆಯೊಳಗೆ ಈ ಹಂಚುಗಳು ಎಲ್ಲಾ ಮತ ಮತ್ತು ಜಾತಿಯ ಜನರ ಪ್ರೀತಿ ವಿಶ್ಚಾಸಕ್ಕೆ ಪಾತ್ರವಾಗಿತ್ತು ಎಂಬುದಕ್ಕೆ ರೆ. ಬ್ಯಾಚೆಲೇ ಎಂಬವರು ಕ್ರಿ.ಶ. ೧೮೯೯ರಲ್ಲಿ ನಡೆದ ಒಂದು ಘಟನೆಯನ್ನು ವಿವರಿಸಿದ್ದಾರೆ. ಮುಲ್ಕಿಯಲ್ಲಿ ಒಂದು ಬಾರಿ ಅವರು ಕ್ರೈಸ್ತೇತರರ ಮನೆಗೆ ಭೇಟಿ ನೀಡಿ ಅವರು ಮನಿಯೊಳಗೆ ಹೋಗುವಾಗ ಅವರ ತಲೆ ಬಾಸೆಲ್ ಮಿಷನ್ ಹಂಚುಗಳನ್ನು ಉಪಯೋಗಿಸಿದ್ದ ಮನೆಯ ಛಾವಣೆಗೆ ತಾಗಿತು. ಎಲ್ಲಿಂದ ನೀವು ಇದನ್ನು ಖರೀದಿಸಿದ್ದೀರಿ ಎಂದು ಬ್ಯಾಚ್‍ಲೇ ಮನೆಯವರನ್ನು ಪ್ರಶ್ನಿಸಲು, ನಿಮ್ಮಿಂದ ಎಂಬ ಉತ್ತರ ಬಂತು. ಬೇರೆ ಕಾರ್ಖಾನೆಗಳ ಹಂಚನ್ನು ಖರೀದಿಸುವ ಬದಲು ನಮ್ಮ ಹಂಚುಗಳನ್ನೇ ಏಕೆ ಖರೀದಿಸಿದ್ದೀರಿ ಎಂದು ಬ್ಯಾಚ್‍ಲೇ ಮತ್ತೇ ಪ್ರಶ್ನಿಸಲು, ನಿಮ್ಮ ಹಂಚುಗಳಿಗೆ ಅವುಗಳ ಗುಣಮಟ್ಟದ ಬಗ್ಗೆ ಒಳ್ಳೇ ಹೆಸರಿದೆ ಎಂಬ ಉತ್ತರ ಮನೆಯವರಿಂದ ಬಂತು, ಅಂದರೆ ಬಾಸೆಲ್ ಮಿಷನ್ ಹಂಚುಗಳು ದಕ್ಷಿಣಕನ್ನಡ ಜಿಲ್ಲೆ ಕರ್ನಾಟಕ ರಾಜ್ಯ. ದೇಶದಲ್ಲಿ ಮತ್ತು ದೇಶದ ಹೊರಗೂ ಖ್ಯಾತಿ ಪಡೆದಿತ್ತು ಎಂಬುದು ಇದರಿಂದ ತಿಳಿಯುತ್ತದೆ

ಕ್ರಿ.ಶ. ೧೮೬೫ ರಲ್ಲಿ ಬಾಸೆಲ್ ಮಿಷನ್ ತನ್ನ ಪ್ರಥಮ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸಿದ ನಂತರ ಅದರಿಂದ ಪ್ರೇರಿತರಾದ ಅನೇಕ ಮಂದಿ ಉದ್ಯಮಿಗಳು ಈ ಉದ್ಯಮ ಸ್ಥಾಪಿಸಲು ಮುಂದಡಿಯಿಟ್ಟದ್ದರಿಂದ ಇಂದು ದಕ್ಷಿಣಕನ್ನಡ ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಇತರೆಡೆ ಅದೊಂದು ಬಹಳಷ್ಟು ಮುಖ್ಯವಾದ ಉದ್ಯಮವಾಗಿ ಬೆಳೆದು ಸಾವಿರಾರು ಜನರಿಗೆ ಉದ್ಯೋಗವನ್ನು        ನೀಡಿದೆ. ದಕ್ಷಿಣಕನ್ನಡದಲ್ಲಿ ಮಂಗಳೂರಿನ ಸುತ್ತಮುತ್ತ ನದಿತೀರದಲ್ಲಿ, ನದಿಗೆ ಸಂಪರ್ಕವಿರುವ ಕಾಲುವೆಗಳ ಬದಿಯಲ್ಲಿ ಹಿನ್ನೀರುಪ್ರದೇಶ ಮತ್ತು ಸಮುದ್ರ ಬದಿಗಳಲ್ಲಿ ಹಂಚಿನ ಕಾರ್ಖಾನೆಗಳು ಹೆಚ್ಚಾಗಿ ಕೇಂದ್ರಿಕೃತಗೊಂಡಿವೆ. ಮುಖ್ಯವಾಗಿ ನೇತ್ರಾವತಿ ಮತ್ತು ಗುರಪುರ ನದಿತೀರದಲ್ಲಿ ಆವೆಮಣ್ಣಿನ ಬಹಳ ದೊಡ್ಡಪದರಗಳನ್ನು ಪ್ಲೆಬ್ಸ್ಟ್ ಕಂಡುಕೊಂಡಿದ್ದ. ಆದುದರಿಂದ ಈ ಎರಡು ನದಿ ತೀರಗಳಲ್ಲಿ ಇಂದು ಆಕಾಶವನ್ನು ಚುಂಬಿಸುತ್ತಿಯೋ ಎಂಬಂತೆ ಭಾಸವಾಗುವ ರಾಶಿರಾಶಿ ಕಪ್ಪನೆ ಹೊಗೆಯುಂಡೆಯನ್ನು ಉಗುಳುತ್ತಿರುವ ಚಿಮಿಣಿ (ಹೊಗೆ ಕೊಳವೆ)ಗಳನ್ನು ಕಾಣಬಹುದು – ನದಿಗಳ ಮೂಲಕ ಮಣ್ಣು ಮತ್ತು ಕಟ್ಟಿಗೆಯನ್ನು ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಸಾಗಾಟ ಮಾಡಲು ಮತ್ತು ನಂತರ ಉತ್ಪಾದನೆಯಾದ ಹಂಚನ್ನು ಮಾರಾಟ ಮಡಲು ದೂರದೂರಿಗೆ ಸಾಗಿಸಲು ಅನುಕೂಲವಿರುವುದರಿಂದ ಹಿಂದೇ ಹೆಚ್ಚಿನ ಎಲ್ಲಾ ಹಂಚಿನ ಕಾರ್ಖಾನೆಗಳು ನದಿತಟದಲ್ಲಿಯೇ ಸ್ಥಾಪಿಸಲ್ಪಟ್ಟಿವೆ. ಆದರೆ ಇಂದು ರಸ್ತೆಸಾರಿಗೆ ವ್ಯವಸ್ಥೆ ಬಹಳಷ್ಟು ಅಭಿವೃದ್ಧಿಯಾಗಿರುವುದರಿಂದ ಮಂಗಳೂರಿನ ಒಳಪ್ರದೇಶದಲ್ಲಿ ಮಾತ್ರವಲ್ಲದೇ ಸಮುದ್ರ ಮತ್ತು ನದಿ ತೀರಗಳ ಸಂಪರ್ಕವೇ ಇಲ್ಲದ ಜಿಲ್ಲೆಯ ಒಳಪ್ರದೇಶಗಳಲ್ಲೂ ಹಂಚಿನ ಕಾರ್ಖಾನೆಗಳು ತಲೆಎತ್ತಿನಿಂತಿವೆ. ಆದರೆ ಈ ಕಾರ್ಖಾನೆಗಳಿಗೆ ಸಾಗಾಟ ವೆಚ್ಚವು ತುಸು ತುಟ್ಟಿಯಾಗಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಚಿಕ್ಕ ಗಿಡವಾಗಿ ಬೆಳೆದ ಹಂಚಿನ ಉದ್ಯಮವು ಇಂದು ದೇಶದಲ್ಲೇ ಅತೀ ದೊಡ್ಡ ಮರವಾಗಿ (ಉದ್ಯಮವಾಗಿ) ಬೆಳೆದು ನಿಂತಿದೆ. ಇಂದು ಭಾರತದಲ್ಲಿ ಸಣ್ಣ ಮಧ್ಯಮ ಮತ್ತು ದೊಡ್ಡ ಒಟ್ಟು ೬೦೦ ಕ್ಕಿಂತ ಹೆಚ್ಚು ಹಂಚಿನ ಕಾರ್ಖಾನೆಗಳಿವೆ. ಇದರಲ್ಲಿ ೩೦೦ ಕ್ಕಿಂತ ಹೆಚ್ಚು ಕಾರ್ಖಾನೆಗಳು ಕೇರಳದಲ್ಲಿಯೇ ಸ್ಥಾಪಿಸಲ್ಪಟ್ಟಿದ್ದರೆ ೧೬೧ ಕ್ಕಿಂತ ಹೆಚ್ಚು ಹಂಚಿನ ಕಾರ್ಖಾನೆಗಳು ಕರ್ನಾಟಕದಲ್ಲಿ ಎದ್ದು ನಿಂತಿವೆ. ಅವುಗಳಲ್ಲಿ ಸುಮಾರು ೭೫ ಕಾರ್ಖಾನೆಗಳು ದಕ್ಷಿಣ ಕನ್ನಡದಲ್ಲಿ (ಉಡುಪಿ ಜಿಲ್ಲೆ ಸಹಿತ) ೧೩ ಕಾರ್ಖಾನೆಗಳು ಉತ್ತರಕನ್ನಡದಲ್ಲಿ ೪೩ ಕಾರ್ಖಾನೆಗಳು ಕೋಲಾರದಲ್ಲಿ ಮತ್ತು ಉಳಿದ ೩೦ ಕ್ಕಿಂತ ಕಾರ್ಖಾನೆಗಳು ರಾಜ್ಯದ ಇತರ ಜಿಲ್ಲೆಗಳಲ್ಲಿವೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದ್ದ ಕಾರ್ಖಾನೆಗಳಲ್ಲಿ ೧೯೭೨ ರಲ್ಲಿ ೪೩ ಕಾರ್ಖಾನೆಗಳು ಮಂಗಳೂರು ನಗರದಲ್ಲೂ, ಉಳಿದ ೨೬ ಕಾರ್ಖಾನೆಗಳು ಜಿಲ್ಲೆಯ ಉಳಿದ ಸ್ಥಳಗಳಲ್ಲೂ ಇತ್ತು. ಆದರೆ ನಂತರದ ದಿನಗಳಲ್ಲಿ ಮಂಗಳೂರು ನಗರದಲ್ಲಿದ್ದ ಕಾರ್ಖಾನೆಗಳ ಸಂಖ್ಯೆ ೩೬ ಕ್ಕೆ ಇಳಿಯಿತು. ಆದರೆ ಪ್ರಸ್ತುತ ಅದರಲ್ಲಿ ೧೮ ರಿಂದ ೨೦ ಹಂಚಿನ ಕಾರ್ಖಾನೆಗಳು ಮಾತ್ರ ಕಾರ್ಯಾಚರಿಸುತ್ತಿವೆ. ಉಳಿದ ಕಾರ್ಖಾನೆಗಳು ಒಂದೋ ಸಂಪೂರ್ಣವಾಗಿ ತಮ್ಮ ಅಸ್ತಿತ್ವವನ್ನು ಕಳಕೊಂಡಿವೆ ಅಥವಾ ಅಲ್ಲಿ ಹಂಚಿನ ಉತ್ಪಾದನೆಯನ್ನು ನಿಲ್ಲಿಸಲಾಗಿದೆ.

ಭಾರತದಲ್ಲಿ ವಾರ್ಷಿಕವಾಗಿ ಸುಮಾರು ೬೦ ಕೋಟಿಗಿಂತ ಹೆಚ್ಚು ಹಂಚನ್ನು ಉತ್ಪಾದಿಸಲಾಗುತ್ತದೆ. ಅದರಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಹಂಚಿನ ಕಾರ್ಖಾನೆಗಳು ಸುಮಾರು ೩೦ಕೋಟಿ ರೂಪಾಯಿಗಿಂತ ಹೆಚ್ಚು ಬೆಲೆಯ ಸುಮಾರು ೨೦ ಕೋಟಿ ಹಂಚುಗಳನ್ನು ಉತ್ಪಾದಿಸುತ್ತಿವೆ. ದಕ್ಷಿಣಕನ್ನಡ ಜಿಲ್ಲೆಯ ಹಂಚಿನ ಕಾರ್ಖಾನೆಗಳು ೧೫,೦೦೦ ಕ್ಕಿಂತ ಹೆಚ್ಚು ಜನರಿಗೆ ಉದ್ಯೋಗವನ್ನು ಒದಗಿಸಿವೆ. ಅದರಲ್ಲಿ ಸುಮಾರು ೮೦೦೦ ಜನರು ಕಾರ್ಖಾನೆಯ ಒಳಗೂ ಮತ್ತು ೫೦೦೦ ರಿಂದ ೭೦೦೦ ಜನರು ಕಾರ್ಖಾನೆಯ ಹೊರಗೆ ಮಣ್ಣಿನ ಗದ್ದೆಗಳಲ್ಲಿ, ಉರುವಲು ಸರಬರಾಜು, ಸಾಗಾಟ, ಮತ್ತು ವಿತರಣ ಕೆಲಸದಲ್ಲಿ ದುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಉದ್ದಿಮೆಯಲ್ಲಿ ಸುಮಾರು ೧೦ಕೋಟಿಗಿಂತ ಹೆಚ್ಚು ಬಂಡವಾಳವನ್ನು ತೊಡಗಿಸಲಾಗಿದೆ. ಮುಖ್ಯವಾಗಿ ಕರ್ನಾಟಕದ ಕರಾವಳಿ ತೀರದಲ್ಲಿ ಕೇಂದ್ರೀಕೃತಗೊಂಡ ಹಂಚು ಉದ್ಯಮವು ಒಳಪ್ರದೇಶದಲ್ಲಿ ಅಂದರೆ ಗುಲ್ಬರ್ಗ, ಬಿಜಾಪೂರ, ರಾಯಚೂರು, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಆದರೆ ಉತ್ತರಕನ್ನಡ ಮತ್ತು ಕೋಲಾರ ಜಿಲ್ಲೆಗಳಲ್ಲಿ ಇದೊಂದು ಪ್ರಮುಖ ಉದ್ಯಮವಾಗಿ ಬೆಳೆದಿದೆ. ತುಮಕೂರು, ಹಾಸನ ಜಿಲ್ಲೆಗಳಲ್ಲಿ ಕೆಲವು ಹಂಚಿನ ಕಾರ್ಖಾನೆಗಳಿವೆ. ಉತ್ತರ ಕನ್ನಡದಲ್ಲಿರುವ ೧೩ ಹಂಚಿನ ಕಾರ್ಖಾನೆಗಳು ಸುಮಾರು ೧೦,೦೦೦ ಜನರಿಗೆ ಉದ್ಯೋಗ ಒದಗಿಸಿವೆ ಎಂದು ತಿಳಿಯಲಾಗಿದೆ. ಕೊಡಗು ಜಿಲ್ಲೆಯಲ್ಲಿ ಮಾಯಾಮುಡಿ ಗ್ರಾಮದಲ್ಲಿ “ಮಡಿಕೆ ಬೀಡು” ಹಂಚಿನ ಕಾರ್ಖಾನೆಯನ್ನು “ವಿಶ್ವ” ಯೋಜನೆಯಡಿಯಲ್ಲಿ ಅಕ್ಟೋಬರ್ ೪, ೧೯೯೧ ರಂದು ಉದ್ಘಾಟಿಸಲಾಯಿತು. ಕರ್ನಾಟಕ ರಾಜ್ಯ ಸರಕಾರ ರೂಪಿಸಿ ಕೊಂಡಿರುವ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಉತ್ಪಾದನೆ ಆಧಾರಿತ ಉದ್ಯೋಗವೇ “ವಿಶ್ವ” ಯೋಜನೆಯಾಗಿದೆ. ಭಾರತದಲ್ಲಿ ಮುಖ್ಯವಾಗಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಹಂಚಿನ ಕಾರ್ಖಾನೆಗಳು ಹರಡಿಕೊಂಡಿವೆ. ಈ ಎಲ್ಲಾ ಹಂಚಿನ ಕಾರ್ಖಾನೆಗಳಲ್ಲಿ ಮೇಲ್ಛಾವಣೆಗೆಗೆ ಹೊದಿಸುವ ಹಂಚುಗಳನ್ನು ಮಾತ್ರವಲ್ಲದೇ ಮೂಲೆ ಹಂಚು, ಗ್ಲಾಸ್ ಹಂಚು, ಹೂ ಚಟ್ಟಿಗಳು, ನೆಲಕ್ಕೆ ಹಾಸುವ ಇಟ್ಟಿಗೆ, ಮಡಿಕೆ, ಜಗ್ಗ್, ಹೂಜಿ, ಒಳಚರಂಡಿ ಬಳಸಲಾಗುವ ಕೊಳವೆಗಳು, ಹೊಗೆಕೊಳವೆ ಮತ್ತು ಛಾವಣಿಯ ಒಳಭಾಗಕ್ಕೆ ಹೊದಿಸುವ ಹಂಚುಗಳನ್ನು ಕೂಡ ತಯಾರಿಸಲಾಗುತ್ತದೆ.

ಹಂಚು ತಯಾರಿಗೆ ಅಗತ್ಯವಿರುವ ಕಚ್ಚಾವಸ್ತು

ಹಂಚು ಮತ್ತು ಇತರ ಕೆಲವು ವಸ್ತುಗಳ ಉತ್ಪಾದನೆಗೆ ಅಗತ್ಯವಿರುವ ಮುಖ್ಯ ಕಚ್ಚಾವಸ್ತು. ಪ್ಲಾಸ್ಟಿಕ್‍ನ ಗುಣವಿರುವ ಉರಿಸಿದಾಗ ಕೆಂಪು ಬಣ್ಣಕ್ಕೆ ತಿರುಗುವ ಅಂಟಿರುವ ಆವೆಮಣ್ಣು (ಜೇಡಿಮಣ್ಣು). ಹಂಚನ್ನು ಸುಟ್ಟಾಗ ಅದು ಸುಂದರ ನಸುಗೆಂಪು ಬಣ್ಣ ಪಡೆಯಲು ಅದನ್ನು ತಯಾರಿಸಲು ಉಪಯೋಗಿಸುವ ಮಣ್ಣಿನಲ್ಲಿ ಕಬ್ಬಿಣದ ಅಂಶವುಳ್ಳ ಫೆರಿಕ್‍ಆಮ್ಲ ಲವಣದ ಅಂಶ ೬% ದಿಂದ ೮% ದಷ್ಟು ಇರುವುದನ್ನು ಖಾತರಿಪಡಿಸಿಕೊಳ್ಳಬೇಕು. ಇದಲ್ಲದೇ ಹಂಚಿನ ತಯಾರಿಕೆಗೆ ಅಗತ್ಯವಿರುವ ಇನ್ನಿತರ ವಸ್ತುಗಳು ಕಟ್ಟಿಗೆ (ಇಂಧನ), ಕ್ರೂಡ್ ಆಯಿಲ್, ಸೀಮೆಎಣ್ಣೆ ಮತ್ತು ತೌಡೆಣ್ಣೆ.