೧೯೯೦-೯೧ ನೇ ವರ್ಷದಲ್ಲಿ

ಕ್ರಮ ಸಂಖ್ಯೆ ಹಂಚನ್ನು ಕಳುಹಿಸಲಾದ ಬಂದರಿನ ಹೆಸರು ರಫ್ತು ಮಾಡಿದ ಹಂಚುಗಳು/ಮೂಲೆ ಹಂಚುಗಳ ಒಟ್ಟು ಸಂಖ್ಯೆ ರಫ್ತು ಮಾಡಿದ ಹಂಚು ಮತ್ತು ಮೂಲೆ ಹಂಚಿನ ಒಟ್ಟು ಮೌಲ್ಯ.
(ರೂಪಾಯಿಗಳಲ್ಲಿ)
೧. ಅಚ್ರ ೯೦,೦೦೦/೨೫೦೦ ೧,೪೩,೭೫೦
೨. ಅಜ್‍ಮಾನ್ ೪೦,೦೦೦/- ೧,೫೦,೦೦೦
೩. ಮುಂಬೈ ೩,೬೧,೫೦೦/೬೫೦೦ ೫,೫೬,೯೭೫
೪. ಬಾನ್ಕೋಟ್ ೪೪,೦೦೦/೫೦೦ ೬೭,೭೫೦
೫. ದಾಬೋಲ್ ೨,೮೧,೦೦೦/೮೫೦೦ ೪,೩೯,೩೨೫
೬. ದೇವ್‍ಗಡ್ ೨,೩೪,೦೦೦/೮೦೦೦ ೩,೮೨,೫೪೫
೭. ಡಿಗ್ಗಿ ೪೫,೦೦೦/೫೦೦ ೬೪,೬೨೫
೮. ದಾಮನ್ ೨,೪೨,೦೦೦/೩೭೦೦ ೩,೭೧,೩೦೫
೯. ದುಬೈ ೫,೪೬,೦೦೦/೧೧,೦೦೦ ೧೩,೨೪,೨೮೭
೧೦. ದೋಹಾ ೨,೨೨,೨೫೦/೧೧,೩೫೦ ೧೦,೭೯,೪೪೦
೧೧. ಜೈಗಢ್ ೪೮,೦೦೦/೨೫೦೦ ೭೫,೩೨೫
೧೨. ಕರಂಜ್ ೩,೩೨,೦೦೦/೫೦೦೦ ೫,೦೮,೦೭೫
೧೩. ಮಾಳ್ವನ್ ೯೫,೦೦೦/೪೫೦೦ ೧,೫೯,೩೫೦
೧೪. ಮುರುದ್ ೫೪,೦೦೦/೨೦೦೦ ೮೨,೧೦೦
೧೫. ಪಂಜಿಮ್ ೧,೫೯,೦೦೦/೨೫೦೦ ೨,೪೮,೦೦೦
೧೬. ಶ್ರೀವರ್ಧನ್ ೪೭,೦೦೦/೫೦೦ ೭೨,೨೫೦
೧೭. ವಿಜಯದುರ್ಗ ೨,೨೫,೦೦೦/೫೫೦೦ ೩,೫೪,೩೩೮
  ಒಟ್ಟು ೩೦,೬೭,೭೫೦/೭೫,೦೫೦ ೬೦,೭೯,೪೪೦

 

೧೯೯೧-೯೨ ನೇ ವರ್ಷದಲ್ಲಿ

ಕ್ರಮ ಸಂಖ್ಯೆ ಹಂಚನ್ನು ಕಳುಹಿಸಲಾದ ಬಂದರುಗಳ ಹೆಸರು ರಫ್ತು ಮಾಡಿದ ಹಂಚುಗಳು/ಮೂಲೆ ಹಂಚುಗಳ ಒಟ್ಟು ಸಂಖ್ಯೆ ರಫ್ತು ಮಾಡಿದ ಹಂಚು ಮತ್ತು ಮೂಲೆ ಹಂಚಿನ ಒಟ್ಟು ಮೌಲ್ಯ.
(ರೂಪಾಯಿಗಳಲ್ಲಿ)
೧. ಮುಂಬೈ ೨,೦೯,೦೦೦/೬೫೦೦ ೪,೦೩,೨೫೦
೨. ದೋಹಾ ೫,೩೪,೫೦೦/೧೯,೦೦೦ ೧೬,೩೫,೬೨೫
೩. ದುಬೈ ೩,೮೪,೦೦೦/೯,೦೦೦ ೭,೯೬,೯೩೭
೪. ದಾಬೋಲ್ ೧,೨೬,೦೦೦/೫೫೦೦ ೨,೬೨,೨೦೦
೫. ದಾಮನ್ ೧,೬೧,೦೦೦/೩೦೦೦ ೩,೦೩,೬೦೦
೬. ದೇವ್‍ಗಡ್ ೭೫,೦೦೦/೨೫೦೦ ೧,೫೦,೯೫೦
೭. ಜಂಜಿರ ೪೪,೦೦೦/೧೦೦೦ ೮೪,೯೫೦
೮. ಕರಂಜ ೩,೦೨,೦೦೦/೭,೦೦೦ ೫,೧೬,೦೦೦
೯. ಕೊರ್ ಫಕನ್ ೪೮,೦೦೦/೧೦೦೦ ೨,೨೬,೦೦೦
೧೦. ಮಾಳ್ವನ್ ೧೮,೦೦೦/೫೦೦ ೩೮,೭೫೦
೧೧. ಶ್ರೀವರ್ಧನ್ ೧,೦೧,೦೦೦/೨೦೦೦ ೧,೮೯,೮೦೦
೧೨. ವಿಜಯದುರ್ಗ್ ೩,೦೦,೪೦೦/೮೦೦೦ ೫,೯೦,೯೩೦
  ಒಟ್ಟು ೨೩,೦೩,೪೦೦/೬೫,೦೦೦ ೫೨,೦೦,೫೯೨

 

೧೯೯೨-೯೩ನೇ ವರ್ಷದಲ್ಲಿ

ಕ್ರಮ ಸಂಖ್ಯೆ ಹಂಚನ್ನು ಕಳುಹಿಸಲಾದ ಬಂದರುಗಳ ಹೆಸರು ರಫ್ತು ಮಾಡಿದ ಹಂಚುಗಳು/ಮೂಲೆ ಹಂಚುಗಳ ಒಟ್ಟು ಸಂಖ್ಯೆ ರಫ್ತು ಮಾಡಿದ ಹಂಚು ಮತ್ತು ಮೂಲೆ ಹಂಚಿನ ಒಟ್ಟು ಮೌಲ್ಯ.
(ರೂಪಾಯಿಗಳಲ್ಲಿ)
೧. ಅಜ್‍ಮಾನ್ ೫೦,೦೦೦/೧೦೦೦ ೧,೯೭,೩೧೪
೨. ಮುಂಬೈ ೧೨,೩೫,೦೦೦/೧೫೦೦ ೨,೬೩,೦೦೦
೩. ಬಾನ್ಕೋಟ್ ೧೮,೫೦೦/೫೦೦ ೩೯,೦೦೦
೪. ದಾಬೋಲ್ ೧,೧೭,೦೦೦/೪೦೦೦ ೨,೫೬,೦೦೦
೫. ದಾಮನ್ ೧,೨೦,೦೦೦/೨,೫೦೦ ೨,೬೨,೯೦೦
೬. ದುಬೈ ೨,೮೧,೦೦೦/೭೦೦೦ ೧೨,೧೧,೩೪೪
೭. ಕರಂಜ ೨,೦೩,೦೦೦/೨,೫೦೦ ೪,೨೬,೯೦೦
೮. ಮುರುದ್ ೫೭,೦೦೦/- ೧,೧೯,೭೦೦
೯. ವಿಜಯದರ್ಗ ೩,೭೫,೦೦೦/೧೦,೮೫೦ ೮,೦೮,೨೮೦
  ಒಟ್ಟು ೧೩,೪೫,೦೦೦/೨೯,೮೫೦ ೩೫,೮೪,೪೩೮

 

೧೯೯೩-೯೪ನೇ ವರ್ಷದಲ್ಲಿ

ಕ್ರಮ ಸಂಖ್ಯೆ ಹಂಚನ್ನು ಕಳುಹಿಸಲಾದ ಬಂದರುಗಳ ಹೆಸರು ರಫ್ತು ಮಾಡಿದ ಹಂಚುಗಳು/ಮೂಲೆ ಹಂಚುಗಳ ಒಟ್ಟು ಸಂಖ್ಯೆ ರಫ್ತು ಮಾಡಿದ ಹಂಚು ಮತ್ತು ಮೂಲೆ ಹಂಚಿನ ಒಟ್ಟು ಮೌಲ್ಯ.
(ರೂಪಾಯಿಗಳಲ್ಲಿ)
೧. ಅಜ್‍ಮಾನ್ ೫೦,೦೦೦/೨೦೦೦ ೩,೭೮,೬೫೨
೨. ಮುಂಬೈ ೧,೮೦,೭೦೦/೨೨೦೦ ೪,೧೩,೬೮೦
೩. ದಾಬೋಲ್ ೭೩,೦೦೦/೪೦೦೦ ೨,೬೯,೨೦೦
೪. ದಾಮನ್ ೭೮,೫೦೦/೨೦೦೦ ೧,೮೧,೭೦೦
೫. ದುಬೈ ೩,೫೩,೦೦೦/೧೧,೯೦೦ ೧೫,೧೪,೦೪೯
೬. ದೋಹಾ ೧,೪೦,೦೦೦/೮೫೦೦ ೭,೦೯,೧೦೫
೭. ಕರಂಜ ೧,೦೪,೦೦೦/೫೦೦ ೨,೩೩,೪೦೦
೮. ಶ್ರೀವರ್ಧನ ೪೧,೦೦೦/೧೦೦೦ ೯೪,೭೦೦
೯. ವಿಜಯದುರ್ಗ ೧,೫೧,೦೦೦/೪೫೦೦ ೩,೫೬,೯೦೦
  ಒಟ್ಟು ೧೧,೭೬,೨೦೦/೩೬,೬೦೦ ೪೧,೫೧,೩೮೬

 

೧೯೯೪-೯೫ನೇ ವರ್ಷದಲ್ಲಿ

ಕ್ರಮ ಸಂಖ್ಯೆ ಹಂಚನ್ನು ರಫ್ತು ಮಾಡಲಾದ ಬಂದರುಗಳ ದೇಶಗಳ ಹೆಸರು ರಫ್ತು ಮಾಡಿದ ಹಂಚುಗಳು/ಮೂಲೆ ಹಂಚುಗಳ ಒಟ್ಟು ಸಂಖ್ಯೆ ರಫ್ತು ಮಾಡಿದ ಹಂಚು ಮತ್ತು ಮೂಲೆ ಹಂಚಿನ ಒಟ್ಟು ಮೌಲ್ಯ.
(ರೂಪಾಯಿಗಳಲ್ಲಿ)
೧. ದಾಬೋಲ್ ೭೧,೦೦೦/೪೫೦೦ ೧,೯೨,೫೦೦
೨. ದಾಮನ್ ೧,೩೪,೦೦೦/೩,೭೫೦ ೩,೯೩,೨೫೦
೩. ದುಬೈ ೪,೧೦,೦೦೦/೧೨,೦೦೦ ೧೪,೪೪,೮೦೦
೪. ದೋಹಾ ೪೦,೦೦೦/೫,೦೦೦ ೨.೦೦.೦೦೦
  ಒಟ್ಟು ,೫೫,೦೦೦/೨೫,೨೫೦ ೨೨,೩೦,೫೫೦

 

೧೯೯೫-೯೬ನೇ ವರ್ಷದಲ್ಲಿ

ಕ್ರಮ ಸಂಖ್ಯೆ ಹಂಚನ್ನು ರಫ್ತು ಮಾಡಲಾದ ಬಂದರುಗಳ ದೇಶಗಳ ಹೆಸರು ರಫ್ತು ಮಾಡಿದ ಹಂಚುಗಳು/ಮೂಲೆ ಹಂಚುಗಳ ಒಟ್ಟು ಸಂಖ್ಯೆ ರಫ್ತು ಮಾಡಿದ ಹಂಚು ಮತ್ತು ಮೂಲೆ ಹಂಚಿನ ಒಟ್ಟು ಮೌಲ್ಯ.
(ರೂಪಾಯಿಗಳಲ್ಲಿ)
೧. ದೋಡಾ ೩,೧೦,೦೦೦/೧೦,೦೦೦ ೧೦,೪೦,೫೩೫
೨. ದುಬೈ ೧,೪೦,೦೦೦/೨೦೦೦ ೬,೪೨,೩೬೦
 

ಒಟ್ಟು

,೫೦,೦೦೦/೧೨,೦೦೦ ೧೬,೮೨,೮೯೫

 

೧೯೯೬-೯೭ನೇ ವರ್ಷದಲ್ಲಿ

ಕ್ರಮ ಸಂಖ್ಯೆ ಹಂಚನ್ನು ರಫ್ತು ಮಾಡಲಾದ ಬಂದರುಗಳ ದೇಶಗಳ ಹೆಸರು ರಫ್ತು ಮಾಡಿದ ಹಂಚುಗಳು/ಮೂಲೆ ಹಂಚುಗಳ ಒಟ್ಟು ಸಂಖ್ಯೆ ರಫ್ತು ಮಾಡಿದ ಹಂಚು ಮತ್ತು ಮೂಲೆ ಹಂಚಿನ ಒಟ್ಟು ಮೌಲ್ಯ.
(ರೂಪಾಯಿಗಳಲ್ಲಿ)
೧. ದುಬೈ ೨,೮೬,೦೦೦/೨೦೦೦ ೧೩,೯೦,೫೮೮

 

೧೯೯೭-೯೮ನೇ ವರ್ಷದಲ್ಲಿ

ಕ್ರಮ ಸಂಖ್ಯೆ ಹಂಚನ್ನು ರಫ್ತು ಮಾಡಲಾದ ಬಂದರುಗಳ ದೇಶಗಳ ಹೆಸರು ರಫ್ತು ಮಾಡಿದ ಹಂಚುಗಳು/ಮೂಲೆ ಹಂಚುಗಳ ಒಟ್ಟು ಸಂಖ್ಯೆ ರಫ್ತು ಮಾಡಿದ ಹಂಚು ಮತ್ತು ಮೂಲೆ ಹಂಚಿನ ಒಟ್ಟು ಮೌಲ್ಯ.
(ರೂಪಾಯಿಗಳಲ್ಲಿ)
೧. ದುಬೈ ೩,೬೧,೦೦೦/೧೩,೦೦೦ ೨೨,೦೭,೨೩೩

ಇತ್ತೀಚೆಗಿನ ವರ್ಷಗಳಲ್ಲಿ ಮಂಗಳೂರಿನಿಂದ ಭಾರತದ ಇತರ ಪ್ರದೇಶಗಳಿಗೆ ಮತ್ತು ಹೊರರಾಷ್ಟ್ರಗಳಿಗೆ ರಫ್ತುಮಾಡಲ್ಪಡುವ ಹಂಚುಗಳು ಮತ್ತು ಮೂಲೆಹಂಚುಗಳಲ್ಲಿ ಇಳಿಮುಖ ಕಂಡುಬಂದಿದ್ದು. ೧೯೯೮-೯೯ ಸಾಲಿನಲ್ಲಿ ಇನ್ನೂ ಕೂಡ ಒಂದೇ ಒಂದು ಹಂಚು ಅಥವಾ ಮೂಲೆ ಹಂಚನ್ನು ಮಂಗಳೂರಿನಿಂದ ರಫ್ತು ಮಾಡಿಲ್ಲವೆಂಬುದು “ಕೆನರಾ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀ” ಯ ವರದಿಯಿಂದ ತಿಳಿದು ಬರುತ್ತದೆ.

ದಕ್ಷಿಣ ಕನ್ನಡದಲ್ಲಿ ಹಂಚು ಉದ್ಯಮವು ಮಂಗಳೂರಿನ ಸುತ್ತ ಮುತ್ತ ಹೆಚ್ಚಾಗಿ ಕೇಂದ್ರೀಕೃತಗೊಂಡಿವೆ. ನಂತರದ ಸ್ಥಾನವನ್ನು ಕುಂದಾಪುರ, ಉಡುಪಿ ಮತ್ತು ಬಂಟ್ವಾಳ ತಾಲೂಕುಗಳು ಪಡಕೊಂಡಿವೆ. ಬೆಳ್ತಂಗಡಿ, ಸುಳ್ಯ ಮುಂತಾದ ತಾಲೂಕುಗಳಿಂದ ಹಂಚು ಉದ್ಯಮಕ್ಕೆ ಯಾವುದೇ ಪಾಲು ಇಲ್ಲ. ಜಿಲ್ಲೆಯ ಹಂಚು ಉದ್ಯಮಕ್ಕೆ ವಿವಿಧ ತಾಲೂಕುಗಳ ಸರಾಸರಿ ಪಾಲು ಈ ರೀತಿ  ಇದೆ :

(ಹಿಂದಿನ ದಕ್ಷಿಣ ಕನ್ನಡ ಜಿಲ್ಲೆ ಅಂದರೆ ಇಂದಿನ ಉಡುಪಿ ಜಿಲ್ಲೆ ಸಹಿತ)

ತಾಲೂಕು ವಿಧ ಶೇಕಡ
ಮಂಗಳೂರು ಹಂಚು ಮತ್ತು ಇಟ್ಟಿಗೆ ೬೫.೧೩%
ಉಡುಪಿ ಹಂಚು ಮತ್ತು ಇಟ್ಟಿಗೆ ೧೩.೯೫%
ಕುಂದಾಪುರ ಹಂಚು ಮತ್ತು ಇಟ್ಟಿಗೆ ೧೩.೯೫%
ಬಂಟ್ವಾಳ ಹಂಚು ಮತ್ತು ಇಟ್ಟಿಗೆ ೬.೯೭%

ಪ್ರಸ್ತುತ ಹಂಚಿನ ಉತ್ಪಾದನೆಗೆ ತಗಲುವ ವೆಚ್ಚವನ್ನು ಈ ರೀತಿ ವಿಭಾಗಿಸಬಹುದು:

ಸಾಧಾರಣವಾಗಿ ಕಾರ್ಮಿಕರಿಗೆ ಕೂಲಿ ೪೦%
ಇಂಧನ ೨೦%
ಮಣ್ಣು ೨೦%
ಇತರ ಖರ್ಚು ೨೦%
  ೧೦೦%

ಕಾರ್ಮಿಕ ಸಂಘಟನೆ

ದಕ್ಷಿಣಕನ್ನಡದಲ್ಲಿ ಹಂಚಿನ ಕಾರ್ಖಾನೆಗಳ ಹೆಚ್ಚಿನ ಕೆಲಸಗಾರರು “ಸೌತ್ ಕೆನರಾ ಟೈಲ್ ವರ್ಕರ್ಸ್ ಯೂನಿಯನ್” ಎಂಬ ಸಂಘಟನೆ ಸೇರಿದ್ದಾರೆ. ಉಳಿದವರು ಇತರ ಕಾರ್ಮಿಕ ಸಂಘಟನೆಗಳಿಗೆ ಸೇರಿದ್ದಾರೆ. ಇದು ಕ್ರಿ.ಶ. ೧೯೪೪ ರಲ್ಲಿ ಪ್ರಾರಂಭವಾಯಿತು. ಅದಕ್ಕಿಂತ ಹಿಂದೇ ಹಂಚಿನ ಕೆಲಸಗಾರರ ಸಂಘಟನೆ ಇರಲಿಲ್ಲ. ೧೯೪೭-೪೮ ರಲ್ಲಿ “ಕಾಂಟ್ರಾಕ್ಟ ಪದ್ಧತಿ”ಯನ್ನು ತೆಗೆದುಹಾಕುವಂತೆ ಮಾಡಿದ್ದು ಈ ಸಂಘಟನೆಯ ಮುಖ್ಯ ಸಾಧನೆ. ಆಗ ಕಾರ್ಮಿಕರ ಸಂಬಳವನ್ನು೮ ಕಾಂಟ್ರಾಕ್ಟ್ ದಾರರಿಗೆ ಕೊಡಲಾಗುತ್ತಿತ್ತು. ಅವರು ಬಹಳಷ್ಟು ಹಣವನ್ನು ತಮ್ಮ ಜೇಬಿಗಿಳಿಸಿ ಕಾರ್ಮಿಕರಿಗೆ ಸರಿಯಾದ ಸಂಬಳ ಮತ್ತು ಬೋನಸ್ ಕೊಡದೆ ಅವರನ್ನು ಶೋಷಣೆ ಮಾಡುತ್ತಿದ್ದರು. ಕನಿಷ್ಟ ಮಜೂರಿಯ ಜಾರಿ ಮತ್ತು ವಾರ್ಷಿಕ ಬೋನಸ್ಸಿನಲ್ಲಿ ಶೇಕಡವಾರು ಹೆಚ್ಚಳ ಇವು ಇಂದು, ಹಂಚು ಕೆಲಸಗಾರರ ಬಹು ಮುಖ್ಯ ಬೇಡಿಕೆ. ಹಂಚು ಉದ್ಯಮದ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವಂತೆ ಕಾರ್ಮಿಕರಿಗೆ ಉತ್ಪಾದನೆ ಆಧಾರಿತ ಆರ್ಥಿಕ ಪ್ರೋತ್ಸಾಹ ನೀಡಬೇಕು. ಅಲ್ಲದೇ ಕಾರ್ಮಿಕರ ತಾಂತ್ರಿಕ ಕೌಶಲ್ಯವನ್ನು ಹೆಚ್ಚಿಸಲು. ಅವರನ್ನು ಹೆಚ್ಚಿನ ತರಬೇತಿಗಾಗಿ ಕಾರ್ಖಾನೆಗಳ ವತಿಯಿಂದ ಕಳುಹಿಸುವ ಏರ್ಪಾಡು ಮಾಡಬೇಕು. ಅಲ್ಲದೆ ಕಾರ್ಮಿಕರು ಮಳೆಗಾಲ ಒಂದು ನಿರ್ದಿಷ್ಟ ಅವಧಿಗೆ ಸುಮ್ಮನೆ ಕಾಲ ವ್ಯಯಿಸಬೇಕಾಗಿದೆ. (Period of enforeced idleness) ಅಂಥ ಸಮಯದಲ್ಲಿ ಅವರಿಗೆ ಚಾಪೆ ಹೆಣೆಯುವುದು, ಬುಟ್ಟಿ ಹೆಣೆಯುವುದು, ಬಾಸ್ಕೆಟ್ ಮಾಡುವುದು ಹುರಿಹಗ್ಗ ಮಾಡುವುದು. ಇತ್ಯಾದಿ ಇತರ ಕೆಲಸಗಳನ್ನು ಒದಗಿಸಿ ಅವರು ನಿರುದ್ಯೋಗಿಗಳಾಗುವುದನ್ನು ತಪ್ಪಿಸಬಹುದು.

ಹಂಚು ಉದ್ಯಮದ ಪ್ರಸಕ್ತ ಸಮಸ್ಯೆಗಳು

ಭಾರತದ ಕೈಗಾರಿಕೋದ್ಯಮಕ್ಕೆ ಕರ್ನಾಟಕದ ಹೆಮ್ಮೆಯ ಕೊಡುಗೆಯಾದ ಹಂಚು ಉದ್ಯಮವು ಇಂದು ತಾನು ಎದುರಿಸುತ್ತಿರುವ ಮಾರಕ ಸಮಸ್ಯೆಗಳಿಂದಾಗಿ ತನ್ನ ಅಸ್ತಿತ್ವದ ಬಗ್ಗೆಯೇ ಚಿಂತೆಗೊಲಗಾಗಬೇಕಾದ ಸಂದರ್ಭ ಎದುರಾಗಿದೆ. ಮುಖ್ಯವಾಗಿ ಅದು ಈ ಕೆಳಗಿನ ಸಮಸ್ಯೆಗಳನ್ನು ಎದುರಿಸುತ್ತಿವೆ.

೧. ಉರುವಲಿನ (ಕಟ್ಟಿಗೆಯ) ಅಸಮರ್ಪಕ ಸರಬರಾಜು

ಹಂಚಿನ ಕಾರ್ಖಾನೆಯಲ್ಲಿ ಹಸಿಹಂಚನ್ನು ಗೂಡಲ್ಲಿ ಸುಡಲು ಮುಖ್ಯವಾಗಿ ಕಟ್ಟಿಗೆಯನ್ನು ಇಂಧನವಾಗಿ ಬಳಸಲಾಗುತ್ತದೆ. ಹಿಂದೇ ಎಲ್ಲಾ ಹಂಚಿನ ಕಾರ್ಖಾನೆಗಳಿಗೆ ನಿರ್ದಿಷ್ಟ ರೀತಿಯಲ್ಲಿ ಉರುವಲು ಸರಬರಾಜು ಮಾಡಲು ಸರಕಾರ ಕ್ರಮ ಕೈಗೊಂಡಿತ್ತು. ಆದರೆ ಈಗ ಅದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಅಲ್ಲದೇ ಹೆಚ್ಚಿನ ಬೆಲೆ ತೆತ್ತರೂ ಕೂದ ದಿನನಿತ್ಯಕ್ಕೆ ಅಗತ್ಯವಿರುವ ಕಟ್ಟಿಗೆಯನ್ನು ಪಡೆಯಲು ಕಾರ್ಖಾನೆಗಳಿಗೆ ಸಾಧ್ಯವಾಗುತ್ತಿಲ್ಲ. ಬರೇ ದಕ್ಷಿಣ ಕನ್ನಡದಲ್ಲಿರುವ ಹಂಚಿನ ಕಾರ್ಖಾನೆಗಳಿಗೆ ವಾರ್ಷಿಕವಾಗಿ ಸುಮಾರು ೧,೨೦,೦೦೦ ಟನ್ನು ಕಟ್ಟಿಗೆಯ ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ. ಅಂದರೆ ಇಡೀ ಕರ್ನಾಟಕ ರಾಜ್ಯದಲ್ಲಿರುವ ಹಂಚಿನ ಕಾರ್ಖಾನೆಗಳಲ್ಲಿಉ ಇಂಧನವಾಗಿ ಉಪಯೋಗಿಸಲು ವರ್ಷವೊಂದಕ್ಕೆ ಸುಮಾರು ೨,೫೦,೦೦೦ ಟನ್ನು ಕಟ್ಟಿಗೆಯ ಅವಶ್ಯಕತೆಯಿದೆ. ಕಟ್ಟಿಗೆಯ ಹೊರತಾಗಿ ಹಂಚನ್ನು ಸುಡಲು ಬಳಸುವ ಬದಲಿ ಇಂಧನ ಕಲ್ಲಿದ್ದಲು. ಆದರೆ ಹಲವು ಪ್ರಯತ್ನಗಳ ಹೊರತಾಗಿಯೂ ಕರಾವಳಿ ಕರ್ನಾಟಕದಲ್ಲಿ ಇನ್ನೂ ಕೂಡ ಕಲ್ಲಿದ್ದಲು ಸಂಗ್ರಹಣಾಗಾರವನ್ನು ಇಷ್ಟರತನಕ ತೆರೆದಿಲ್ಲ. ಬರೇ ಉರುವಲು ಸಿಗುತ್ತಿಲ್ಲವೆಂಬ ಏಕೈಕ ಕಾರಣಕ್ಕಾಗಿ ಹಂಚಿನ ಕಾರ್ಖಾನೆಯನ್ನು ಮುಚ್ಚಿರುವ ಪ್ರಸಂಗಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ.

೨. ಪ್ರೋತ್ಸಾಹದ ಕೊರತೆ

ಇತ್ತೀಚೆಗೆ ಹೊರರಾಜ್ಯಗಳಲ್ಲಿ ಕರ್ನಾಟಕದ ಹಂಚುಗಳಿಗೆ ಬೇಡಿಕೆ ಬಹಳಷ್ಟು ಕಡಿಮೆಯಾಗುತ್ತಿದ್ದು, ಗುಜರಾತ್ ಸತ್ತು ಮಹಾರಾಷ್ಟ್ರಗಳ ಹಂಚಿನ ಬೇಡಿಕೆ ಹೆಚ್ಚಾಗುತ್ತಿದೆ. ಏಕೆಂದರೆ ಅಲ್ಲಿಯ ಹಂಚುಗಳು ಬಹಳ ಅಗ್ಗದ ಬೆಲೆಯಲ್ಲಿ ದೊರಕುತ್ತಿವೆ. ಮುಖ್ಯವಾಗಿ ಅಲ್ಲಿಯ ರಾಜ್ಯ ಸರಕಾರಗಳು ಕೊಡುತ್ತಿರುವ ಪ್ರೋತ್ಸಾಹವೇ ಅದಕ್ಕೆ ಮುಖ್ಯ ಕಾರಣ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸರಕಾರಗಳು. ಹಂಚಿನ ಕಾರ್ಖಾನೆಗಳಿಗೆ ಇಂಧನಕ್ಕಾಗಿ ಸಬ್ಸಿಡಿಯನ್ನು ನೀಡುತ್ತಿದ್ದು, ಸಾಲದ ಬಡ್ಡಿಯಲ್ಲಿ ರಿಯಾಯಿತಿ, ತೆರಿಗೆ ರಿಯಾಯಿತಿ, ವಿದ್ಯುತ್ ಶುಲ್ಕ ರಿಯಾಯಿತಿ ಮುಂತಾದ ಹಲವು ರಿಯಾಯಿತಿಗಳನ್ನು ನೀಡುವುದರ ಉದ್ದಿಮೆಯ ಅಭಿವೃದ್ಧಿಗೆ ಸಹಾಯಕವಾಗುತ್ತಿವೆ. ಆದರೆ ಕರ್ನಾಟಕದಲ್ಲಿ ಇಂತಹ ಯಾವುದೇ ರಿಯಾಯಿತಿಗಳನ್ನು ಹಂಚಿನ ಕಾರ್ಖಾನೆಗಳಿಗೆ ನೀಡಲಾಗುತ್ತಿಲ್ಲ. ಸಿಗುವ ಕೆಲವು ರಿಯಾಯಿತಿಗಳು ಹೊಸಕಾರ್ಖಾನೆಗಳಿಗೆ ಮಾತ್ರ ಅನ್ವಯವಾಗುತ್ತವೆ, ಹೊರತು ಈಗಾಗಲೇ ಅಸ್ತಿತ್ವದಲ್ಲಿರುವ ಹಳೇ ಕಾರ್ಖಾನೆಗಳಿಗೆ ಸಿಗುತ್ತಿಲ್ಲ. ಕರ್ನಾಟಕದಲ್ಲಿರುವ ಹಂಚಿನ ಕಾರ್ಖಾನೆಗಳು ತೆರಿಗೆಗಳ ಭಾರದಿಂದ ಚೇತರಿಸಲಾರದ ಸ್ಥಿತಿಗೆ ತಲುಪಿವೆ. ಉದಾಹರಣೆಗಾಗಿ, ಕರ್ನಾಟಕದಲ್ಲಿ ಒಂದು ಟನ್ನು ಜೇಡಿಮಣ್ಣಿಗೆ ೬ ರೂಪಾಯಿಗ ಅಥವಾ ೧೦೦೦ ಹಂಚನ್ನು ತಯಾರಿಸುವ ಮಣ್ಣಿಗೆ ೨೦ ರೂಪಾಯಿ ರಾಯಲ್ಟಿಯನ್ನು ಸರಕಾರಕ್ಕೆ ತೆರಬೇಕು. ಆದರೆ ನೆರೆರಾಜ್ಯವಾದ ಕೇರಳದಲ್ಲಿ ಅದೇ ಸಂದರ್ಭದಲ್ಲಿ ಒಂದು ಟನ್ನು ಆವೆಮಣ್ಣಿಗೆ ೫೦ ಪೈಸೆಯಿಂದ ೭೦ ಪೈಸೆ ತನಕ ಮಾತ್ರ ರಾಯಲ್ಟಿಯನ್ನು ಸರಕಾರವು ವಸೂಲು ಮಾಡುತ್ತಿತ್ತು. ಇದು ಕೆಲವು ವರ್ಷಗಳ ಹಿಂದಿನ ದರ. ಈಗ ಬದಲಾಗಿರಬಹುದು. ಆದರೆ ದರ ಬದಲಾದರೂ ಎರಡು ರಾಜ್ಯಗಳಲ್ಲಿದ್ದ ದರದ ವ್ಯತ್ಯಾಸವು ಹಾಗೆಯೇ ಉಳುಕೊಂಡಿದೆ.

೩. ಮಾರುಕಟ್ಟೆಯ ಸಮಸ್ಯೆ

ಒಂದು ಕಾಲದಲ್ಲಿ ಇಡೀ ಭಾರತ ಮಾತ್ರವಲ್ಲದೇ ಪ್ರಪಂಚದಲ್ಲೆಡೆ “ಮಂಗಳೂರು ಹಂಚುಗಳು” ಏಕ ಸ್ವಾಮ್ಯವನ್ನು ಪಡೆದಿದ್ದವು. ಆದರೆ ಇಂದು ಹಂಚಿನ ರಫ್ತು ಹೆಚ್ಚು ಕಡಿಮೆ ನಿಂತು ಹೋಗಿದೆ. ಭಾರತದ ಇತರ ಸ್ಥಳಗಳಲ್ಲಿ ಕೂಡ ಕರ್ನಾಟಕದ ಹಂಚಿಗೆ ಬೇಡಿಕೆ ಇಳಿಮುಖವಾಗಿದೆ. ಆದುದರಿಂದ ಈಗ ಇರುವಂಥ ಕಾರ್ಖಾನೆಗಳಿಗೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡುವುದು ಬಹಳ ಕಷ್ಟಕರವಾಗಿದೆ. ಪರಿಣಾಮವಾಗಿ ಸ್ಥಳೀಯ ಮಾರುಕಟ್ಟೆಯನ್ನು ಹಿಡಿಯುವುದಕ್ಕಾಗಿ ಪ್ರಬಲ ಸ್ಪರ್ಧೆಗಿಳಿಯುವುದು ಕಾರ್ಖಾನೆಗಳಿಗೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಕಾರ್ಖಾನೆಗಳು ತಮ್ಮ ಹಂಚು ಉತ್ಪಾದಯನ್ನು ಕಡಿತಗೊಳಿಸುವುದು ಮತ್ತು ಕಾರ್ಮಿಕರನ್ನು ನೌಕರಿಯಿಂದ ಕೈ ಬಿಡುವಂತದ್ದು ಒಂದು ದುರದೃಷ್ಟಕರ ವಿಷಯವಾದರೂ ಇಂದು ಅದೊಂದು ಕಹಿ ಸತ್ಯ.

೪. ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದ ಕೊರತೆ

ಹಂಚು ಉದ್ಯಮವು ೧೩೫ ವರ್ಷಗಳಷ್ಟು ಕಾಲದ ಹಿಂದಿನ ಉದ್ದಿಮೆಯದರೂ ಅದರ ಉತ್ಪಾದನೆಯ ತಾಂತ್ರಿಕತೆಯಲ್ಲಿ ಮಹತ್ವದ ಯಾವುದೇ ಪ್ರಗತಿಯಾಗಿಲ್ಲ. ಹಳೇ ರೀತಿಯ ಇಟ್ಟಿಗೆ ಗೂಡುಗಳು, ಹಿಂದಿನ ದಿನದಂತೆ ಇಂದೂ ಕೂಡ ಹಸಿಹಂಚುಗಳನ್ನು ಸುಡುವ ಕ್ರಮ, ಅಲ್ಲದೇ ಹಿಂದಿನಂತೆ ಹಳೇ ಯಂತ್ರಗಳೇ ಈಗಲೂ ಕೂಡ ಬಳಕೆಯಲ್ಲಿವೆ. ಇದರಿಂದಾಗಿ ಉತ್ಪಾದನ ವೆಚ್ಚವು ವಿಪರೀತವಾಗಿ ಹೆಚ್ಚು, ಹಳೇಯ ಕಾರ್ಖಾನೆಗಳು, ಹೊಸಯಂತ್ರೋಪಕರಣಗಳೊಂದಿಗೆ ಆರಂಭಗೊಂಡ ಹೊಸಕಾರ್ಖಾನೆಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ.

೫. ಕಟ್ಟಡ ನಿರ್ಮಾಣದಲ್ಲಾಗುತ್ತಿರುವ ಬದಲಾವಣೆಗಳು

ಹಿಂದೇ ಹೆಚ್ಚಿನ ಮನೆಗಳನ್ನು ಬಳಸಿ ಕಟ್ಟಲಾಗುತ್ತಿತ್ತು. ಆದರೆ ಇಂದು ಹಂಚಿನ ಮನೆಯ ಬದಲು ಆರ್ ಸಿಸಿ ಮನೆಗಳು, ಎ. ಸಿ. ಶೀಟ್‍ನ ಮನೆಗಳು, ಫೈಬರ್ ಶೀಟ್ ಮತ್ತು ಗ್ಯಾಲ್ವ್ ನೈಸೆಡ್ ತಗಡಿನ ಶೀಟ್‍ಗಳನ್ನು ಹೊದಿಸಿದ ಮನೆಗಳು ನಿರ್ಮಾಣಗೊಳ್ಳುತ್ತಿವೆ. ಹೀಗಾಗಿ ಇಂದು ಹಂಚು ಉದ್ಯಮವು ಇವುಗಳೊಂದಿಗೆ ತೀವ್ರ ಪೈಪೋಟಿ ನಡೆಸುತ್ತಾ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಸ್ಥಿತಿ ಒದಗಿಬಂದಿದೆ.

೬. ಇತರ ಸಮಸ್ಯೆಗಳು

ಈ ತನಕ ಹೆಚ್ಚಿನ ಹಂಚಿನ ಕಾರ್ಖಾನೆಗಳು ತಮ್ಮ ಸಮೀಪದಲ್ಲಿಯೇ ಸಿಗುತ್ತಿದ್ದ ಜೇಡಿಮಣ್ಣು (ಆವೆಮಣ್ಣು) ಉಪಯೋಗಿಸುತ್ತಿದ್ದವು. ಆದರೆ ಇಂದು ಅದರ ಬಹಳಷ್ಟು ಸಂಗ್ರಹ ಮುಗಿದಿದ್ದು, ಅದಕ್ಕೋಸ್ಕರ ಅದನ್ನು ಅರಸುತ್ತಾ ದೂರದ ಸ್ಥಳಗಳಿಗೆ ಹೋಗಬೇಕಾಗಿದೆ. ಆದರೆ ಯಾವ ಯಾವ ಸ್ಥಳಗಳನ್ನು ಅಂತಹ ಮಣ್ಣು ದೊರಕುತ್ತದೆ ಎಂಬ ಬಗ್ಗೆ ಕಾರ್ಖಾನೆಗಳಿಗೆ  ಅದರ ಬಗ್ಗೆ ಮಾಹಿತಿ ದೊರಕುತ್ತಿಲ್ಲ. ಅಲ್ಲದೆ ಕಾರ್ಖಾನೆ ಗಳಿಗೆ ಬೇಕಾದ ಕಟ್ಟಿಗೆಯನ್ನು ಪಡೆಯಲು ಅವರೇ ನೆಟ್ಟು ಬೆಳೆಸಲು ಬೇಕಾದಷ್ಟು ಭೂಪ್ರದೇಶ ಯಾವುದೇ ಕಾರ್ಖಾನೆ ಕೈಕೆಳಗಿಲ್ಲ. ಇದಲ್ಲದೇ ಪ್ರಸ್ತುತ ವಸ್ತುಗಳ ಸಾಗಾಟ ದರದಲ್ಲೂ ಆಗಿರುವ ತೀವ್ರ ಹೆಚ್ಚಳದಿಂದಾಗಿ ಹಂಚಿನ ಬೆಲೆಯು ಈಗ ವಿಪರೀತವಾಗಿ ಹೆಚ್ಚಾಗಿದೆ. ಪ್ರಸ್ತುತ ಒಂದು ಸಾವಿರ ಹಂಚುಗಳಿಗೆ ರೂಪಾಯಿ ೩೫೦೦ ರಿಂದ ೪೭೫೦ ತನಕ ಬೆಲೆ ಇದೆ. ಒಂದು ಸಾವಿರ ಮೂಲೆ ಹಂಚುಗಳ ಬೆಲೆ ರೂಪಾಯಿ ೧೫,೦೦೦ ತನಕ ಇದೆ. ಅಲ್ಲದೇ ಹೆಚ್ಚಿನ ಸಂದರ್ಭಗಳಲ್ಲಿ ವಿತರಣೆಗಾರರಿಗೆ, ಉತ್ಪಾದಕರು ಹಂಚುಗಳನ್ನು ಮುಂಗಡವಾಗಿ ಹಣ ಪಡೆಯದೇ ಸ್ವಲ್ಪ ಸಮಯಕ್ಕೆ ಸಾಲದ ರೀತಿಯಲ್ಲಿ ನೀಡಬೇಕು. ದಕ್ಷಿಣಕನ್ನಡ ಜಿಲ್ಲೆಯ ಜೀವನಮಟ್ಟ ಬಹಳ ತುಟ್ಟಿ ಕಾರ್ಮಿಕರ ಕೂಲಿ (ವೇತನ) ಯಾವಾಗಲೂ ಬೆಲೆ ಸೂಚ್ಯಂಕದನ್ವಯ ನಿರ್ಧರಿಸಲ್ಪಡುವುದರಿಂದ ಇಲ್ಲಿನ ಕೆಲಸಗಾರರ ಮಜೂರಿಯೂ ಇತರ ರಾಜ್ಯಗಳ ಹಂಚಿನ ಕೆಲಸಗಾರರ ಮಜೂರಿಗಿಂತ ಹೆಚ್ಚು. ಅದು ಹಂಚಿನ ಒಟ್ಟು ಬೆಲೆಯ ಸುಮಾರು ೪೦% ದಷ್ಟು ಆಗುತ್ತದೆ. ಹೆಚ್ಚಾಗುತ್ತಿರುವ ಕಾರ್ಮಿಕರ ಬೇಡಿಕೆಗಳು, ವಿದ್ಯುತ್ ಅಭಾವ, ಏರುತ್ತಿರುವ ವಿದ್ಯುತ್‍ದರ ಮತ್ತು ಅನಿಯಂತ್ರಿತವಾಗಿ ಬೆಳೆಯುತ್ತಿರುವ ಹೊಸ ಹಂಚಿನ ಕಾರ್ಖಾನೆಗಳು, ಹಂಚು ಉದ್ಯಮವು ಪ್ರಸ್ತುತ ಎದುರಿಸುತ್ತಿರುವ ಇತರ ಕೆಲವು ಸಮಸ್ಯೆಗಳು.

೧೩೫ ವರ್ಷಗಳಷ್ಟು ಕಾಲ ಹಳೆಯದಾದ ಹಂಚಿನ ಉದ್ದಿಮೆಯು ಈ ಮೇಲಿನ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಸಮಸ್ಯೆಗಳಿಂದ ಬಾಧಿತವಾಗಿರುವ ದಕ್ಷಿಣ ಕನ್ನಡ ಮಾತ್ರವಲ್ಲದೇ ಕರ್ನಾಟಕದ ಹೆಚ್ಚಿನ ಎಲ್ಲಾ ಹಂಚಿನ ಕಾರ್ಖಾನೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಹಳಷ್ಟು ಹೆಣಗಾಡುತ್ತಿವೆ. ಕರ್ನಾಟಕದ ಪ್ರಥಮ ಹಂಚಿನ ಕಾರ್ಖಾನೆಯಾದ ಮಂಗಳೂರಿನ ಜೆಪ್ಪುವಿನಲ್ಲಿರುವ ಕಾಮನ್ ವೆಲ್ತ್ ಹಂಚಿನ ಕಾರ್ಖಾನೆಯೂ (ಹಿಂದಿನ ಬಾಸೆಲ್ ಮಿಷನ್ ಕಾರ್ಖಾನೆ) ಕೆಲವು ಉತ್ತಮ ಯಂತ್ರಗಳನ್ನು ಹೊಂದಿದ್ದರೂ ಕೂಡ, ಪ್ರಸ್ತುತ ಸಮಸ್ಯೆಗಳಿಂದಾಗಿ ಅದು ಕೂಡ ಕಷ್ಟದಲ್ಲಿದೆ. ಅಂದರೆ, ಇತರ ಕೆಲವು ಸಣ್ಣ ಕಾರ್ಖಾನೆಗಳ ಸಮಸ್ಯೆಗಳ ಅರಿವು ನಮಗೆ ಸುಲಭದಲ್ಲಾಗಬಹುದು. ಈ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಶೀಘ್ರ ಕ್ರಮತೆಗೆದುಕೊಳ್ಳದಿದ್ದರೆ ಈ ಉದ್ದಿಮೆಯೇ ಮುಚ್ಚುಗಡೆಯಾಗುವ ಭೀತಿಯಿದೆ.

ಪರಿಹಾರೋಪಾಯಗಳು

೧. ಉರುವಲಿನ ಕ್ಷಾಮವನ್ನು ನೀಗುವುದಕ್ಕಾಗಿ ಕರಾವಳಿ ಕರ್ನಾಟಕದಲ್ಲಿ ಕೋಲ್ ಇಂಡಿಯ ಸಂಸ್ಥೆಯ ವತಿಯಿಂದ ಕಲ್ಲಿದ್ದಲು ಸಂಗ್ರಹಣಾಗಾರವನ್ನು ಪ್ರಾರಂಭಿಸುವುದು, ಅನಿಲ (ಗ್ಯಾಸ್) ಉರಿಸಿ, ಹಂಚು ಸುಡುವ ಬಗ್ಗೆ ಹೊಸ ಅವಿಷ್ಕಾರ ಮಾಡುವ ಕುರಿತು ಹೆಚ್ಚಿನ ಗಮನ ನೀಡುವುದು. ಇದಕ್ಕೆ ಹಂಚಿನ ಗೂಡಿನಲ್ಲಿ ಅಗತ್ಯದ ಬದಲಾವಣೆ ಆಗಬೇಕಾಗಿದೆ.

೨. ಹಂಚು ಉದ್ದಿಮೆಯಲ್ಲಾಗಬೇಕಾದ ಹೊಸ ತಾಂತ್ರಿಕ ಆವಿಷ್ಕರಣೆಗಾಗಿ ಸರಕಾರದ ವತಿಯಿಂದ ಒಂದು ಪ್ರತ್ಯೇಕ ಸ್ವಾಯತ್ತಾ ಸಂಶೋಧನ ಸಂಸ್ಥೆಯನ್ನು ಸ್ಥಾಪಿಸುವುದು. (ಪ್ರಸ್ತುತ ಸುರತ್ಕಲ್‍ನಲ್ಲಿರುವ ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜ್ (ಕೆ. ಆರ್. ಇ. ಸಿ.) ಹಂಚು ಉದ್ಯಮದಲ್ಲಾಗಬೇಕಾಗಿರುವ ಹೊಸ ಸಂಶೋಧನೆಗಳ ಬಗ್ಗೆ ಗಮನ ಹರಿಸಲು ಒಂದು ಪ್ರತ್ಯೇಕ ವಿಭಾಗವನ್ನು ಪ್ರಾರಂಭಿಸಿದೆ)

೩. ಇತರ ರಾಜ್ಯಗಳಲ್ಲಿ ನೀಡುವಂತೆ ಕರ್ನಾಟಕದಲ್ಲಿಯೂ ಹಂಚು ಉದ್ಯಮಕ್ಕೆ ಇಂಧನ ಸಬ್ಸಿಡಿ, ಬಡ್ಡಿರಿಯಾಯಿತಿ ನೀಡುವುದು.

೪. ಹಂಚಿನ ಉತ್ಪಾದನ ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಹಿಂದಿನಿಂತ ಇಟ್ಟಿಗೆ ಗೂಡು (ಭಟ್ಟಿ)ಗಳಲ್ಲಿ ಹಂಚನ್ನು ಸುಡುವ ಬದಲು ಹೊಸ ರೀತಿಯ ಕುಲುಮೆಯ ವ್ಯವಸ್ಥೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವುದು.

೫. ಹಳೇ ಕಾರ್ಖಾನೆಗಳಲ್ಲಿ ಈಗ ಚಾಲ್ತಿಯಲ್ಲಿರುವ ಹಳೆಯ ಯಂತ್ರಗಳನ್ನು ಬದಲಾಯಿಸಿ ಹೊಸಯಂತ್ರಗಳ ಜೋಡಣೆಗಾಗಿ ಕಾರ್ಖಾನೆಗಳಿಗೆ ಸಾಲದ ಸೌಲಭ್ಯವನ್ನು ಒದಗಿಸಿಕೊಡುವುದು.

೬. ಭೂವಿಜ್ಞಾನ ಇಲಾಖೆಯ ವತಿಯಿಂದ ಜೇಡಿಮಣ್ಣು ಸಿಗುವಂಥ ನಿರ್ದಿಷ್ಟ ಸ್ಥಳಗಳ ಬಗ್ಗೆ ಕಾರ್ಖಾನೆಗಳಿಗೆ ಸೂಕ್ತ ಮಾಹಿತಿಯನ್ನು ನೀಡುವುದು.

೭. ಬೇರೆ ಯಾವುದೇ ರೀತಿಯಲ್ಲಿ ಪ್ರಯೋಜನಕ್ಕೆ ಬಾರದ ಭೂಮಿಯನ್ನು ತೀವ್ರ ಬೆಳವಣಿಗೆ ಇರುವ ಮರಗಳನ್ನು ಬೆಳೆಸಲು ನಿರ್ದಿಷ್ಟ ಅವಧಿಗೆ, ಸರಕಾರಿ ಸ್ಥಳವನ್ನು ಕಾರ್ಖಾನೆಗಳಿಗೆ ಗುತ್ತಿಗೆ ಆಧಾರದಲ್ಲಿ ಕೊಡುವುದು.

೮. ಅನಿಯಂತ್ರಿತವಾಗಿ ಬೆಳೆಯುತ್ತಿರುವ ಹೊಸ ಕಾರ್ಖಾನೆಗಳ ಮೇಲೆ ಸರಕಾರದ ವತಿಯಿಂದ ನಿಯಂತ್ರಣ ಹೇರುವುದು.

೯. ಹಂಚಿನ ರಫ್ತಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು.

ಈಗ ಎಲ್ಲಾ ರೀತಿಯ ಸಮಸ್ಯೆಗಳೊಂದಿಗೆ ಮುಂದುವರಿಯುತ್ತಿರುವ ಹಂಚು ಉದ್ಯಮದ ಉಳಿಯುವಿಕೆಗಾಗಿ ಈ ಮೇಲಿನ ಪರಿಹಾರೋಪಾಯಗಳನ್ನು ಕಾರ್ಯ ರೂಪಕ್ಕೆ ತರುವುದು ಅತ್ಯವಶ್ಯಕ. ಅವು ಹಂಚು ಉದ್ಯಮ, ಉದ್ಯಮಿ ಮತ್ತು ಕಾರ್ಮಿಕರನ್ನು ಪ್ರಸ್ತುತ ಎದುರಿಸುತ್ತಿರುವಂಥ ಈ ಜಟಿಲ ಸಮಸ್ಯೆಗಳಿಂದ ಬಿಡಿಸಲು ಶಕ್ತವಾಗಬಹುದು. ಕರ್ನಾಟಕದಲ್ಲಿ ಹಂಚು ಉದ್ಯಮದ ರಕ್ಷಣೆ ಅಂದರೆ, ಲಕ್ಷಾಂತರ ಜನರಿಗೆ ಉದ್ಯೋಗಾವಕಾಶದ ನಿರ್ಮಾಣ, ರಾಜ್ಯದ ಆರ್ಥಿಕ ಮತ್ತು ಕೈಗಾರಿಕೆಯ ಬೆಳವಣಿಗೆಯ ನಿಟ್ಟಿನಲ್ಲಿ ಒಂದು ಸೂಕ್ತ ಹೆಜ್ಜೆ ಮತ್ತು ಇದು ನಮ್ಮ ರಾಷ್ಟ್ರದ ಪ್ರಗತಿಗೆ ಈ ನಾಡಿನಲ್ಲಿ ಮತ್ತು ಜನರ ಒಂದು ಕೊಡುಗೆ.

ಹಂಚು ಉದ್ಯಮದ ಭವಿಷ್ಯ

“ಇಂದು ಬಳಕೆದಾರನು ಇತರ ಮೂಲಗಳ ಕಡೆಗೆ ದೃಷ್ಟಿ ಹಾಯಿಸುವುದರಿಂದ ಖನಿಜ (ಮಣ್ಣು) ಆಧರಿತ ಉದ್ಯಮವಾದ, ಹಂಚುಉದ್ಯಮದ ಭವಿಷ್ಯವು ಬಹಳ ಕ್ಷೀಣಗೊಂಡಿದೆ,” ಎಂದು “ನ್ಯಾಷನಲ್ ಕೌನ್ಸಿಲ್ ಆಫ್ ಎಪ್ಲಾಯಿಡ್ ಇಕೋನಾ ಮಿಕ್ ರೀಸರ್ಚ್” ನ ವರದಿಯು ತಿಳಿಸುತ್ತದೆ. ಆದರೆ ಇದು ಪೂರ್ತಿಯಾಗಿ ಸರಿಯಲ್ಲ. ಏಕೆಂದರೆ ಭಾರತದಲ್ಲಿ ಬಳಕೆದಾರನ ದೃಷ್ಟಿ ಬದಲಾದುದ್ದರಿಂದ ಹಂಚು ಉದ್ಯಮವನ್ನು ಮುಚ್ಚಬೇಕಾದ ಪ್ರಸಂಗ ಎದುರಾಗುವುದು ಇನ್ನೂ ಬಹಳ ದೂರವಿದೆ. ಏಕೆಂದರೆ ಭಾರತದಲ್ಲಿ ಹಳ್ಳಿಗಳಲ್ಲಿರುವ ಇನ್ನೂ ಲಕ್ಷಾಂತರ ಹುಲ್ಲಿನ ಮನೆಗಳನ್ನು ಹಂಚಿನ ಮನೆಗಳನ್ನಾಗಿ ಬದಲಾಯಿಸುವ ಸಂದರ್ಭವಿರುವುದರಿಂದ ಹಂಚುಗಳಿಗೆ, ಇಟ್ಟಿಗೆಗಳಿಗೆ ಬೇಡಿಕೆ ಇದ್ದೇ ಇದೆ. ಹಂಚು ಉದ್ಯಮದ ಹುಟ್ಟುರಾದ ದಕ್ಷಿಣಕನ್ನಡದ ಹಳ್ಳಿಗಳಲ್ಲಿಯೇ ಇನ್ನೂ ಹಲವು ಹುಲ್ಲಿನ ಮನೆಗಳಿವೆ. ೧೯೮೧ ರಲ್ಲಿ ಪುತ್ತೂರು ತಾಲೂಕಿನ ಹಲ್ಳಿಗಳಲ್ಲಿ ಮಾಡಿದ ಗಣತಿಯ ಪ್ರಕಾರ ಪ್ರತಿ ೧೦೦೦ ಮನೆಗಳಲ್ಲಿ ೮೧ ಮಾತ್ರ ಹಂಚಿನ ಮನೆಗಳು. ಈಗ ಈ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿರಬಹುದು. ಮಂಗಳೂರಿನಂಥ ಪಟ್ಟಣದಲ್ಲಿ ಮಾತ್ರ ಗಣತಿ ಮಾಡಿದ ಪ್ರತಿ ೧೦೦೦ ಮನೆಗಳಲ್ಲಿ ೯೫೫ ಮನೆಗಳ ಹಂಚಿನ ಅಥವಾ ಆರ್ ಸಿಸಿ. ಮನೆಗಳು. ಪ್ರಸ್ತುತ ಕರಾವಳಿ ಕರ್ನಾಟಕದಲ್ಲಿ ನಿರ್ಮಿಸುತ್ತಿರುವ ಹೆಚ್ಚಿನ ಮನೆಗಳು ಆರ್ ಸಿಸಿ ಮನೆಗಳಾಗಿದ್ದು. ಇಲ್ಲಿ ಮಳೆಗಾಲದಲ್ಲಿ ಬೀಳುವ ಹೆಚ್ಚಿನ ಮಳೆಯ ದಾಳಿಯಿಂದ ರಕ್ಷಿಸಿಕೊಳ್ಳಲು ಇಳಿಜಾರು ರೂಪದಲ್ಲಿರುವ ಸಿಮೆಂಟ್ ಸ್ಲಾಬ್‍ಗಳನ್ನು ನಿರ್ಮಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಇಳಿಜಾರು ಸಿಮೆಂಟ್ ಸ್ಲಾಬ್‍ಗಳನ್ನು ನಿರ್ಮಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಇಳಿಜಾರು ಸಿಮೆಂಟ್ ಸ್ಲಾಬ್‍ಗಳಿದ್ದರೂ ನೀರು ಒಳ ಇಂಗುತ್ತಿರುವುದರಿಂದ ಅದನ್ನು ತಡೆಗಟ್ಟಲು ಮತ್ತು ಮೇಲ್ಛಾವಣಿಯ ಹೊರಭಾಗದ ಸೌಂದರ್ಯವನ್ನು ಹೆಚ್ಚಿಸಲು ಹಂಚನ್ನು ಉಪಯೋಗಿಸುತ್ತಾರೆ. ಆದುದರಿಂದ ಬೇರೆ ಕಡೆಗೆ ಹಂಚಿನ ರಫ್ತು ಆಗದಿದ್ದರೂ ಕೂಡ, ಜಿಲ್ಲೆಯಲ್ಲಿಯೇ ಹಂಚು ಉದ್ಯಮಕ್ಕೆ ಭವಿಷ್ಯವಿದೆ. ಈಗ ಹಂಚಿಗೆ ಬೇಡಿಕೆ ಇಲ್ಲವೆಂಬ ಕಾರಣಕ್ಕಾಗಿ ಕಾರ್ಖಾನೆಗಳು ಮುಚ್ಚಲ್ಪಟ್ಟಿರುವುದು ಬೆರಳೆಣಿಕೆಯಲ್ಲಿರಬಹುದು. ಆದರೆ ಹಂಚು ಉದ್ಯಮವನ್ನು ಕಾಡುತ್ತಿರುವಂಥ ವಿವಿಧ ಸಮಸ್ಯೆಗಳಿಂದಾಗಿ, ಹಂಚಿನ ಉತ್ಪಾದನ ವೆಚ್ಚವು ಹೆಚ್ಚಾಗಿ, ಅದು ಇತರ ಬದಲಿ ವಸ್ತುಗಳೊಂದಿಗೆ ಮತ್ತು ಇತರ ಕಡೆಗಳ ಕಾರ್ಖಾನೆಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದೆ ಹೆಚ್ಚಿನ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಕೆಲವೊಂದು ಕಾರ್ಖಾನೆಗಳು ಕೆಟ್ಟ ಆಡಳಿತದಿಂದಾಗಿ ಕೊನೆಯುಸಿರೆಳೆದಿರಬಹುದು. ಆದುದರಿಂದ ಹಂಚು ಉದ್ಯಮವನ್ನು ಕಾಡುತ್ತಿರುವಂಥ ಸಮಸ್ಯೆಗಳನ್ನು ನೀಗಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಅದು ಸ್ಥಳೀಯ ಅರ್ಥ ವ್ಯವಸ್ಥೆಯಲ್ಲಿ ಇನ್ನೂ ಕೂಡ ಬಹು ಮುಖ್ಯ ಪಾತ್ರವನ್ನು ವಹಿಸಬಹುದು.

ಕೊನೆಯ ಮಾತು

ಬಾಸೆಲ್ ಮಿಷನ್ ದಕ್ಷಿಣಕನ್ನಡದಲ್ಲಿ ಪ್ರಥಮ ಹಂಚಿನ ಕಾರ್ಖಾನೆಯನ್ನು ಕ್ರಿ.ಶ. ೧೮೬೫ ರಲ್ಲಿ ಸ್ಥಾಪಿಸುವುದರ ಮೂಲಕ ಇಂದೂ ಕೂಡ ಜಿಲ್ಲೆಯ ಮಾತ್ರವಲ್ಲದೇ ಇಡೀ ಭಾರತ ದೇಶದಲ್ಲಿ ಎಲ್ಲಾ ಜನರ ಹೃದಯಾಳದಲ್ಲಿ ಅದರ ನೆನಪನ್ನು ಬಿಟ್ಟುಹೋಗಿದೆ. ೧೯ನೇ ಶತಮಾನದಲ್ಲಿ ಈ ಉದ್ಯಮವು ಸಂಸ್ಥೆಯ ಮತ್ತು ಜಿಲ್ಲೆಯ ಹಲವು ಜನರ ಜೀವನಕ್ಕೆ ಒಂದು ಆಧಾರವಾಗಿತ್ತು. ಅಂದು ಅದು ಈ ಉದ್ಯಮದ ಆಡಳಿತದಲ್ಲಿ ಮತ್ತು ವಸ್ತುಗಳ ಗುಣಮಟ್ಟದಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿತ್ತು ಮತ್ತು ಜಿಲ್ಲೆಯ ಜನರಿಗೆ ಹೊಸದಾಗಿತ್ತು. ೧೯ನೇ ಶತಮಾನದ ಗುಣಮಟ್ಟ ಮತ್ತು ವಿನ್ಯಾಸಕ್ಕೆ ಬಾಸೆಲ್ ಮಿಷನ್ ಕಾರ್ಖಾನೆಯಲ್ಲಿ ತಯಾರಾಗುತ್ತಿದ್ದ ವಸ್ತುಗಳು ಆಧುನಿಕ ಮಾತ್ರವಲ್ಲ ಅದು ಭಾರಿ ಯಶಸ್ಸು ಕೂಡಾ ಪಡೆದಿತ್ತು. ಕರಾವಳಿ ತೀರದಲ್ಲಿ ಮನ್ಸೂನ್ ಅತ್ಯಂತ ತೀವ್ರವಾಗಿರುವೆಡೆ ಮಳಿಗಾಳಿಯ ಹೊಡೆತದಿಂದ ಜನರನ್ನು ರಕ್ಷಿಸುವಲ್ಲಿ ತಲೆಯ ಮೇಲೊಂದು ಸೂರು ನಿರ್ಮಿಸುವಲ್ಲಿ, ಸ್ಥಳೀಯ ಆರ್ಥಿಕಪರಿಸ್ಥಿಯು ಸುಧಾರಿಸುವಲ್ಲಿ, ದೇಶಕ್ಕೆ ಅಗತ್ಯವಿರುವ ವಿದೇಶಿ ವಿನಿಮಯವನ್ನು ಗಳಿಸಿಕೊಡುವಲ್ಲಿ “ಮಂಗಳೂರು ಹಂಚುಗಳು” ಬಹಳ ಮುಖ್ಯ ಪಾತ್ರ ವಹಿಸಿವೆ. ಆದರೆ ಕಾಲದೊಂದಿಗೆ ಹೆಜ್ಜೆ ಹಾಕಲು ಹಂಚು ಉದ್ಯಮವು ಹಿಂದೇಟು ಹಾಕಿದುದರಿಂದ, ಅಗತ್ಯವಿರುವ ಆಧುನೀಕರಣವನ್ನು ಮಾಡಲು ಗಮನ ನೀಡದೆ ಇದ್ದುದರಿಂದ ಇಂದು ಅದು ‘ಕೆಟ್ಟ ಸಮಯ’ ವನ್ನು ಎದುರು ನೋಡುವಂತಾಗಿದೆ. ಆದರೆ ಮುಂಜಾನೆ ಮೋಡಗಳೆಡೆಯಿಂದ ಮೆಲ್ಲ ಮೆಲ್ಲನೆ ಹೊರ ಇಣುಕುವ ಸೂರ್ಯನ ಬೆಳಕಿನಿಂದ ಕತ್ತಲು ಹರಿಯುವಂತೆ, ಹಂಚು ಉದ್ಯುಮವನ್ನು ಕವಿದಿರುವ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕರಾವಳಿ ಕರ್ನಾಟಕದಲ್ಲಿ ಮಾನವನ ಅಸ್ತಿತ್ವವಿರುವ ತನಕ ಆತನು ‘ಮಂಗಳೂರು ಹಂಚು’ ಗಳೊಂದಿಗೆ ತನ್ನ ಸಂಬಂಧವನ್ನು ಕಡಿದುಕೊಳ್ಳುವ ಯಾವುದೇ ಸಾಧ್ಯತೆ ಇಲ್ಲ.

ಆದರೆ ಇದೇ ವೇಳೆ ಹಂಚು ಉದ್ಯಮಕ್ಕೆ ಅಗತ್ಯವಿರುವ ಚಿಕಿತ್ಸೆಯ ಬಗ್ಗೆ ತುರ್ತು ಗಮನ ಹರಿಸುವ ಅವಶ್ಯಕತೆಯಿದೆ. ಬರೇ ಮದ್ದಿನಿಂದ ಗುಣವಾಗುವ ರೋಗಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯಬಾರದಂತೆ ತಕ್ಕ ಮುನ್ನೆಚ್ಚರಿಕೆ ವಹಿಸುವುದು ಬುದ್ಧಿವಂತರ ಲಕ್ಷಣ.