ಮಂಜಯ್ಯ ಹೆಗ್ಗಡೆಪ್ರಸಿದ್ಧ ಯಾತ್ರಾಸ್ಥಳವಾದ ಧರ್ಮಸ್ಥಳದ ಧರ್ಮದರ್ಶಿಗಳು. ಸರಳ ಜೀವನ, ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳಿ ನೇರವಾಗಿ ಅವರ ದುಃಖದ ಭಾರವನ್ನು ಕಡಮೆ ಮಾಡಿದ ಹಿರಿಯರು. ರಸ್ತೆಗಳನ್ನು ಮಾಡಿಸಿದರು, ನೇತ್ರಾವತಿಗೆ ಸೇತುವೆ ಕಟ್ಟಿಸಿದರು, ಸರ್ವಧರ್ಮ ಸಮ್ಮೇಳನಗಳನ್ನು ವ್ಯವಸ್ಥೆ ಮಾಡಿದರು. ಸಿದ್ಧವನ ಗುರುಕುಲವನ್ನು ಹಲವು ಶಾಲೆಗಳನ್ನು ಸ್ಥಾಪಿಸಿದರು.

ಮಂಜಯ್ಯ ಹೆಗ್ಗಡೆ

ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಬಹು ಪ್ರಸಿದ್ಧವಾದ ಯಾತ್ರಾಸ್ಥಳ. ಧರ್ಮಸ್ಥಳದ ಮಂಜುನಾಥನ ದರ್ಶನಕ್ಕಾಗಿ ಪ್ರತಿನಿತ್ಯ ನೂರಾರು ಮಂದಿ ಭಕ್ತರು ಬರುತ್ತಾರೆ.

ಪ್ರತಿದಿನ ಮಧ್ಯಾಹ್ನ ಪೂಜೆಗೆ ಮೊದಲು ಜಾತಿ ಮತ ಭೇದವಿಲ್ಲದೆ ಭಕ್ತಜನರು ದೇವರ ಮುಂದೆ ಭಯಭಕ್ತಿಯಿಂದ ಸಾಲಾಗಿ ನಿಂತು ಕಾಣಿಕೆ ಒಪ್ಪಿಸುವರು. ಎರಡು ಕೈಜೋಡಿಸಿ ದೇವರ ಮುಂದೆ ತಮ್ಮ ದುಃಖ ಕಷ್ಟಗಳನ್ನು ತೋಡಿಕೊಳ್ಳುವರು.

ದೇವರ ಪ್ರತಿನಿಧಿಯಂತೆ ಶುಭ್ರವಸ್ತ್ರಧಾರಿಯಾಗಿ ನಿಂತ ಮಂಜಯ್ಯ ಹೆಗ್ಗಡೆಯವರು ತಮಗೆ ಧರ್ಮ ದೇವತೆಗಳು, ದೇವರು ಪ್ರೇರೇಪಿಸಿದಂತೆ ಸಮಾಧಾನದ ಮಾತುಗಳನ್ನು ಹೇಳಿ ಅವರನ್ನು ಸಂತೈಸುತ್ತಿದ್ದರು.

ದತ್ತು ಸ್ವೀಕಾರ

೧೮೯೫ರಲ್ಲಿ ಧರ್ಮಪಾಲ ಹೆಗ್ಗಡೆಯವರು ಧರ್ಮಸ್ಥಳದ ಪಟ್ಟಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು. ಅವರು ಒಂದೂವರೆ ವರ್ಷ ತುಂಬುವುದರೊಳಗೆ ಸ್ವರ್ಗಸ್ಥರಾದರು. ಆಗ ಅವರ ತಾಯಿ ಲಕ್ಷ್ಮೀಮತಿ ಅಮ್ಮನವರು ತಮಗೆ ಬೇರೆ ಸಂತತಿ ಇಲ್ಲದ ಕಾರಣ, ಧರ್ಮಸ್ಥಳದ ಹಿತಾಕಾಂಕ್ಷಿಗಳೂ, ಪೂರ್ವಬಂಧುಗಳೂ ಆದ ವಿಟ್ಲಸೀಮೆಯ ಕೇಪು ಎಂಬಲ್ಲಿ ವಾಸಿಸುತ್ತಿದ್ದ ಅಣ್ಣಿಶೆಟ್ಟರನ್ನು ಬರಮಾಡಿಕೊಂಡರು.

ಅಣ್ಣಿಶೆಟ್ಟರ ಮನೆತನಕ್ಕೆ ವಿಟ್ಲ ಅರಸರಲ್ಲಿ ವಿಶೇಷ ಗೌರವ ಮತ್ತು ಮರ್ಯಾದೆ ಸಲ್ಲುತ್ತಿತ್ತು.

ಲಕ್ಷ್ಮೀಮತಿ ಅಮ್ಮನವರ ಕೇಳಿಕೆಯಂತೆ ಅಣ್ಣಿಶೆಟ್ಟರು ತಮ್ಮ ತಂಗಿಯ ಮಗನಾದ ಚಂದಯ್ಯನನ್ನೂ,  ತನ್ನ ಒಬ್ಬನೇ ಮಗನಾದ ಮಂಜಯ್ಯನನ್ನೂ ಧರ್ಮಸ್ಥಳದ ಪಟ್ಟಾಧಿಕಾರಕ್ಕೆ ದತ್ತುಸ್ವೀಕಾರಕ್ಕಾಗಿ ಕೊಡುವುದೆಂದು ನಿರ್ಣಯವಾಯಿತು.

ಅದರಂತೆ ೧೮೯೬ರಲ್ಲಿ ಚಂದಯ್ಯ ಹೆಗ್ಗಡೆಯವರು ಅಧಿಕಾರ ವಹಿಸಿಕೊಂಡರು. ಅವರು ೧೯೧೮ರಲ್ಲಿ ವಿಷಮಶೀತಜ್ವರದಿಂದ ದಿವಂಗತರಾದರು. ಅನಂತರ ಮಂಜಯ್ಯ ಹೆಗ್ಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು. ಅವರ ೩೭ ವರ್ಷಗಳ ಅಧಿಕಾರದ ಅವಧಿಯಲ್ಲಿ ಅನೇಕ ಉತ್ತಮ ಕಾರ್ಯಗಳನ್ನು ನೆರವೇರಿಸಿ ಧರ್ಮಸ್ಥಳದ ಕೀರ್ತಿಯನ್ನು ಬೆಳಗಿಸಿದರು.

ಜನನಬಾಲ್ಯ

ವಿಟ್ಲ ಸೀಮೆಯ ಚಕ್ಕಿತ್ತಡಿ ಅಣ್ಣಿಶೆಟ್ಟರು ಆದರ್ಶ ಜೈನ ಸದ್ಗ ಹಸ್ಥರು. ಅವರ ಧರ್ಮಪತ್ನಿ ಅನಂತಮತಿಯಮ್ಮನವರು. ಇವರಿಬ್ಬರು ದೇವತಾರಾಧನೆಯಲ್ಲಿ ಧರ್ಮಕಾರ್ಯಗಳಲ್ಲಿ ತತ್ಪರರಾಗಿ, ವ್ರತ ಪೂಜೆಗಳನ್ನು ನಡೆಸುತ್ತಿದ್ದರು.

ಇವರ ಮಗನಾಗಿ ಮಂಜಯ್ಯ ಹೆಗ್ಗಡೆಯವರು ೧೮೮೯ ರ ನವೆಂಬರ್ ಎರಡರಂದು ಜನಿಸಿದರು.

ಮಗು ಬೆಳೆಯತೊಡಗಿದಂತೆ ಅದರ ಸೌಮ್ಯ ಗಂಭೀರ ಸ್ವಭಾವ ಸ್ಪಷ್ಟವಾಗುತ್ತ ಹೋಯಿತು. ಜೊತೆಯ ಮಕ್ಕಳೊಡನೆ ಆಡುವಾಗಲೂ ಮಂಜಯ್ಯ ಗಂಭೀರನೇ.

ವಿದ್ಯಾಭ್ಯಾಸ

ಮಂಜಯ್ಯನವರಿಗೆ ಏಳು ವರ್ಷವಾದಾಗ ಹತ್ತಿರದ ಬಂಧುಗಳಾದ ಬ್ರಹ್ಮಯ್ಯನವರ ಮೂಲಕ ಅಕ್ಷರಾಭ್ಯಾಸವಾಯಿತು.

ಪ್ರಾತಃಕಾಲ ಸ್ನಾನ ಮಾಡಿ ಸ್ತೋತ್ರಪಾಠ ಹೇಳಿ, ದೇವರದರ್ಶನ ನಮಸ್ಕಾರ ಮಾಡದೆ ಊಟ ಮಾಡುವ ಪದ್ಧತಿಯಿರಲಿಲ್ಲ. ಸಾಯಂಕಾಲ ಕೈಕಾಲು ಮುಖ ತೊಳೆದು ಪಂಚ ಪರಮೇಷ್ಠಿಗಳ ಶುಭನಾಮ, ೨೪ ತೀರ್ಥಂಕರರ ಹೆಸರು ಇವುಗಳನ್ನು ಹೇಳುವ ಕ್ರಮವನ್ನು ತಾಯಿಯವರು ಕಲಿಸಿದ್ದರು.

ಈ ರೀತಿಯ ಧಾರ್ಮಿಕವಿಧಿ ವಿಧಾನವು ಮಂಜಯ್ಯನವರಿಗೆ ಇಡೀ ಜೀವನದಲ್ಲಿ ನಿಯಮ ಶಿಸ್ತುಗಳಿಗೆ ಪ್ರೇರಕಶಕ್ತಿಯಾಯಿತು.

ಮಂಜಯ್ಯನವರು ಮೊದಲು ವಿಟ್ಲ ಶಾಲೆಯಲ್ಲಿಯೂ, ಧರ್ಮಸ್ಥಳ ಶಾಲೆಯಲ್ಲಿಯೂ ನಾಲ್ಕನೇ ತರಗತಿಯವರೆಗೆ ಕಲಿತರು. ಮುಂದೆ ಓದಲು ಅಲ್ಲಿ ಶಾಲೆ ಇರಲಿಲ್ಲ, ಅವರು ಬೇರೆ ಕಡೆಗೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಹಿರಿಯರು ಒಪ್ಪಲಿಲ್ಲ. ಸ್ವಲ್ಪಕಾಲ ಒಬ್ಬ ಉಪಾಧ್ಯಾಯರ ಮೂಲಕ ಸ್ವಲ್ಪ ಇಂಗ್ಲಿಷಿನ ಪರಿಚಯವಾದರೂ ಅದೂ ಹೆಚ್ಚು ಮುಂದುವರಿಯಲಿಲ್ಲ.

ಇವರು ಹಿರಿಯರೊಡನೆ ಹಟ ಹಿಡಿದು ವಾದಿಸಿ ತಮ್ಮ ೧೬ನೆಯ ವಯಸ್ಸಿನಲ್ಲಿ ಪುತ್ತೂರಿಗೆ ಹೋಗಿ ಅಲ್ಲಿ ಶಾಲೆಗೆ ಸೇರಿದರು.

ಅಲ್ಲಿ ಬೆಳಿಗ್ಗೆಯೂ ಸಂಜೆಯೂ ಹತ್ತಿರದ ದೇವಸ್ಥಾನಕ್ಕೆ ಹೋಗಿ ದೇವರದರ್ಶನ ಮಾಡುವುದು ಇವರ ದಿನಚರಿಯಾಗಿತ್ತು. ಪುತ್ತೂರಿನಲ್ಲಿ ಕೆಲವು ಪ್ರಸಿದ್ಧ ಮಹನೀಯರ ತೈಲಚಿತ್ರಗಳನ್ನು ನೋಡಿ, ಪ್ರಭಾವಿತರಾಗಿ ತಾವೂ ಚಿತ್ರಕಾರರಾಗಬೇಕೆಂದು ಸಂಕಲ್ಪಿಸಿದರು. ಚಿಕ್ಕಂದಿನಲ್ಲಿಯೇ ಗೋಡೆಗಳ ಮೇಲೆ ಮಸಿಯಿಂದ ಚಿತ್ರ ಬಿಡಿಸುತ್ತಿದ್ದರು. ಇದರಿಂದಾಗಿ ಮುಂದೆ ಜೀವನದಲ್ಲಿ ಚಿತ್ರಕಲೆಯು ಇವರಿಗೆ ರಕ್ತಗತವಾಯಿತು.

ಬಳಿಕ ಇವರು ಕಲಿಯುವ ಆಸೆಯಿಂದ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಮೂರನೆಯ ಫಾರಂ ತರಗತಿಯನ್ನು ಸೇರಿದರು, ಆದರೆ ಕೆಲವು ದಿನಗಳಲ್ಲಿ ಅಲ್ಲಿ ಆರೋಗ್ಯ ಕೆಟ್ಟು ವಿಟ್ಲಕ್ಕೆ ಬಂದರು. ಒಂದು ವರ್ಷ ಇವರು ಅನಾರೋಗ್ಯದಿಂದಿದ್ದು, ಪುನಃ ಕೆನರಾ ಹೈಸ್ಕೂಲಿಗೆ ಸೇರಿ ಮೆಟ್ರಿಕ್ಯುಲೇಶನ್ ಪಾಸಾದರು. ಆಮೇಲೆ ಸೇಂಟ್ ಅಲೋಸಿಯಸ್ ಕಾಲೇಜಿನಲ್ಲಿ ಇಂಟರ್‌ಮೀಡಿಯೆಟ್ ತರಗತಿ ಸೇರಿದರು. ಆದರೆ ಆ ಹಂತದಲ್ಲಿ ಶಿಕ್ಷಣವನ್ನು ನಿಲ್ಲಿಸಬೇಕಾಯಿತು.

ಆದರೆ ಮಂಜಯ್ಯನವರ ಜ್ಞಾನದಾಹವು ತಣಿಯಲಿಲ್ಲ. ಧರ್ಮಸ್ಥಳದ ತಮ್ಮ ಬೀಡಿನಲ್ಲಿ ಖಾಸಗಿಯಾಗಿ ಗ್ರಂಥಭಂಡಾರವನ್ನು ಏರ್ಪಡಿಸಿಕೊಂಡು ತಮ್ಮ ಜೀವನದ ಉದ್ದಕ್ಕೂ ವ್ಯಾಸಂಗ ನಿರತರಾಗಿದ್ದರು. ಸಾಹಿತ್ಯ ಮತ್ತು ತತ್ವಶಾಸ್ತ್ರಗಳನ್ನೂ ವಿಜ್ಞಾನವನ್ನೂ ಅಧ್ಯಯನ ಮಾಡುತ್ತಿದ್ದರು.

ಧರ್ಮಸ್ಥಳ ಕ್ಷೇತ್ರ

ಧರ್ಮಸ್ಥಳವು ಕನ್ನಡ ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ. ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿಯ ದಡದಲ್ಲಿದೆ. ಸಹ್ಯಾದ್ರಿಯೆಂದು ಪ್ರಸಿದ್ಧವಾದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸುತ್ತುಮುತ್ತಲೂ ಬನಸಿರಿಯ ಪ್ರಶಾಂತ ವಾತಾವರಣದಲ್ಲಿ ಈ ಯಾತ್ರಾ ಸ್ಥಳವಿದೆ.

ಇಂತಹ ಪವಿತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜಯ್ಯ ಹೆಗ್ಗಡೆಯವರು ೧೯೧೮ ರಲ್ಲಿ ತಮ್ಮ ೨೯ ನೇ ವಯಸ್ಸಿನಲ್ಲಿ ಧರ್ಮಾಧಿಕಾರದ ಪಟ್ಟಸ್ವೀಕಾರ ಮಾಡಿದರು.

ಧರ್ಮಾಧಿಕಾರಿ ಪೀಠದ ಸ್ವೀಕಾರದ ದಿನ ಸಂಪ್ರದಾಯದಂತೆ ಹಲವು ವಿಧಿಗಳು ನಡೆದವು. ದಾನಧರ್ಮಗಳಲ್ಲಿ ಕೊರತೆಯಾಗದಂತೆ ನಡೆಸಿಕೊಂಡು ಬರುವುದು, ಪೂಜೆಗಳು ಕಟ್ಟಳೆಗಳು ಸ್ವಲ್ಪವೂ ಲೋಪವಿಲ್ಲದಂತೆ ನಡೆಯುವಂತೆ ನೋಡಿಕೊಳ್ಳುವುದು ಧರ್ಮಾಧಿಕಾರಿಗಳ ಹೊಣೆ. ಇದನ್ನು ಮಂಜಯ್ಯ ಹೆಗ್ಗಡೆಯವರಿಗೆ ನೆನಪು ಮಾಡಿಕೊಡಲಾಯಿತು. ಅನಂತರ ಊರಿನ ಮುಖ್ಯಸ್ಥರು ಹೆಗ್ಗಡೆಯವರಿಗೆ ಕಾಣಿಕೆಗಳನ್ನು ಅರ್ಪಿಸಿ ಮರ್ಯಾದೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಹೆಗ್ಗಡೆಯವರನ್ನು ದೇವಸ್ಥಾನಕ್ಕೆ ಕರೆದುಕೊಂಡುಹೋದರು.

ಹೆಗ್ಗಡೆಯವರು ಅಮ್ಮನವರ ಗುಡಿಯಲ್ಲಿ ಪೂಜೆಸಲ್ಲಿಸಿದರು. ಆಮೇಲೆ ಮಂಜುನಾಥ ದೇವರಿಗೆ ಮಂಗಳಾರತಿ ಮಾಡಿಸಿ, ಪ್ರಸಾದ ಸ್ವೀಕರಿಸಿದರು. ಅಲ್ಲಿಂದ ಇತರ ದೈವಗಳನ್ನು ಪೂಜಿಸಿ, ತನ್ನ ಬೀಡಿಗೆ ಹೆಗ್ಗಡೆಯಾಗಿ ಪ್ರವೇಶಿಸಿದರು. ಇವರು ೧೯ನೆಯ ಪಟ್ಟಾಧಿಕಾರಿ.

ಮಲೇರಿಯ ನಿವಾರಣೆ

ಮಂಜಯ್ಯ ಹೆಗ್ಗಡೆಯವರು ಅಧಿಕಾರ ಸ್ವೀಕರಿಸಿದಾಗ ದೇವಸ್ಥಾನದ ಖಜಾನೆ ಬರಿದಾಗಿತ್ತು. ಉಗ್ರಾಣದಲ್ಲಿ ದವಸ ಧಾನ್ಯಗಳು ಕಡಿಮೆಯಾಗಿದ್ದವು. ಸಾಲ ಸೋಲ ಉಂಟಾಗಿತ್ತು.

ಅವರು ಹೊಸ ಜೀವನದಲ್ಲಿ ಉತ್ಸಾಹದಿಂದ ಶ್ರದ್ಧೆಯಿಂದ ಕರ್ತವ್ಯನಿಷ್ಠೆಯಿಂದ ದುಡಿಯತೊಡಗಿದರು. ದೇವಸ್ಥಾನದ ಸುತ್ತುಮುತ್ತಲೂ ಆವರಿಸಿದ್ದ ಕಾಡನ್ನು ಕಡಿಸಿ ಸೂರ್ಯನ ಬಿಸಿಲು ಬೀಳುವಂತೆ ಮಾಡಿದರು. ತೇವವಿದ್ದ  ಪ್ರದೇಶಗಳಿಗೆ ಮಣ್ಣು ಹಾಕಿಸಿ ಜೌಗು ಹೊಂಡಗಳನ್ನು ಮುಚ್ಚಿಸಿ, ಮಾರ್ಗಗಳನ್ನು ಮಾಡಿಸಿದರು. ಸಂಚಾರ ಸೌಕರ್ಯವನ್ನು ಅಭಿವೃದ್ಧಿಗೊಳಿಸಿದರು.

ಆ ಊರಿನಲ್ಲಿ ಮಲೇರಿಯ ರೋಗವು ಮನೆಮಾತಾಗಿತ್ತು. ಸರಕಾರದವರ ಸಹಾಯ ಪಡೆದು, ಔಷಧಿ ಸಿಂಪಡಿಸಿ, ಮಲೇರಿಯ ರೋಗದ ನಿವಾರಣೆಗಾಗಿ ಶ್ರಮಿಸಿದರು. ಹೊಸ ಬಾವಿ ಕೆರೆಗಳನ್ನು ಅಗೆಸಿ ನಲ್ಲಿ ನೀರನ್ನು ವ್ಯವಸ್ಥೆಗೊಳಿಸಿದರು. ರೋಗಿಗಳ ಉಪಚಾರಕ್ಕಾಗಿ ಔಷಧಾಲಯಗಳನ್ನು ಏರ್ಪಡಿಸಿದರು. ಈ ಔಷಧಾಲಯಗಳಲ್ಲಿ ಚಿಕಿತ್ಸೆಗಾಗಿ ಜನ ಹಣ ನೀಡಬೇಕಾಗಿರಲಿಲ್ಲ.

ದೇವಸ್ಥಾನದ ಜಮೀನಿನಲ್ಲಿ ಕಾಡು ಕಡಿಸಿ, ಕೆರೆ ತೋಡಿಸಿ, ಹೊಸ ತೆಂಗಿನ ತೋಟಗಳನ್ನು ನಿರ್ಮಾಣಗೊಳಿಸಿದರು. ಬಾಳೆ, ಮಾವು, ಹಲಸು ಮೊದಲಾದ ಹಣ್ಣಿನ ಮರಗಳನ್ನು ಬೆಳೆಸಿದರು. ಕೂಲಿಗಾರರಿಗೆ ಧರ್ಮಾರ್ಥವಾಗಿ ಮನೆಕಟ್ಟಿಸಿ ವಸತಿ ಸೌಕರ್ಯ ಏರ್ಪಡಿಸಿದರು.

ಹೀಗೆ ಕೆಲವೇ ವರ್ಷಗಳಲ್ಲಿ ಮಲೇರಿಯ ರೋಗದ ಹುಟ್ಟಡಗಿತು. ಜನವಸತಿ ಹೆಚ್ಚಾಯಿತು. ತೆಂಗು, ಅಡಿಕೆ ತೋಟಗಳಲ್ಲಿ ಉತ್ಪತ್ತಿಯು ಬರತೊಡಗಿತು. ಬತ್ತದ ಬೆಳೆಯನ್ನು ಅಭಿವೃದ್ಧಿಗೊಳಿಸಿದರು.

ಹೆಗ್ಗಡೆಯವರು ೧೯೩೭ರಲ್ಲಿ ನೇತ್ರಾವತಿ ನದಿಗೆ ಸೇತುವೆಯನ್ನು ಕಟ್ಟಿಸಿದರು. ೧೯೩೫ರಲ್ಲಿ ಶ್ರೀ ಕ್ಷೇತ್ರಕ್ಕೆ ವಿದ್ಯುದ್ದೀಪ ವ್ಯವಸ್ಥೆಯನ್ನು ಒದಗಿಸಿದರು. ರಸ್ತೆಗಳು ಉತ್ತಮಗೊಂಡು ನದಿಗೆ ಸೇತವೆಯಾದುದರಿಂದ ಬಸ್ಸುಗಳ ಓಡಾಟ ಸುಲಭವಾಯಿತು. ಶ್ರೀಕ್ಷೇತ್ರಕ್ಕೆ ಭಕ್ತಾದಿ ಯಾತ್ರಿಕ ಜನರ ಆಗಮನವು ಹೆಚ್ಚಾಯಿತು. ಎಷ್ಟೋ ಮಂದಿ ಗಂಡ ಹೆಂಡತಿ ಅಥವಾ ತಂದೆ ತಾಯಿ ಮಕ್ಕಳು ಯಾತ್ರೆಗೆಂದು ಒಟ್ಟಿಗೆ ಧರ್ಮಸ್ಥಳಕ್ಕೆ ಬರುತ್ತಿದ್ದರು. ಅವರು ಉಳಿದುಕೊಳ್ಳಲು ಹೆಗ್ಗಡೆಯವರು ಉಚಿತವಾದ ಧರ್ಮಶಾಲೆಯನ್ನು ಏರ್ಪಡಿಸಿದರು.

ಹೆಗ್ಗಡೆಯವರು ದೇವಸ್ಥಾನಕ್ಕೆ ಉಂಟಾಗಿದ್ದ ಸಾಲದ ಹೊರೆಯನ್ನು ಪರಿಹರಿಸಿದರು. ಅಸಲು ಹಣದ ಎರಡರಷ್ಟು ಬಡ್ಡಿಯು ಸಂದಾಯವಾಗಿತ್ತು. ಉಜಿರೆ ಮುಂಡಾಜೆಗಳಲ್ಲಿದ್ದ ಸಾಲ ಕೊಟ್ಟ ಮಹನೀಯರು ತಮಗೆ ಸಾಲ ಸಂಪೂರ್ಣ ಪಾವತಿಯಾಯಿತೆಂದು ಹೆಗ್ಗಡೆಯವರೊಡನೆ ವಿನಂತಿಸಿಕೊಂಡರು. ಆಗ ಮದರಾಸು ಸರಕಾರದ ಋಣವಿಮೋಚನಾ ಮಸೂದೆಯೂ ಕೂಡ ಜಾರಿಗೆ ಬಂದಿತ್ತು. ಇದರ ಪ್ರಕಾರ ದೇವಸ್ಥಾನದ ಆಡಳಿತದವರು ಮಾಡಿದ್ದ ಎಷ್ಟೋ ಸಾಲವನ್ನು ತೀರಿಸಬೇಕಾಗಿರಲಿಲ್ಲ. ಆದರೆ ಮಂಜಯ್ಯ ಹೆಗ್ಗಡೆಯವರು ಮುತ್ತಿನಂತಹ ಒಂದು ಮಾತನ್ನು ಸಾಲಗಾರರಿಗೆ ಹೇಳಿದರು.

‘‘ಇದು ಧರ್ಮಸ್ಥಳ, ಸತ್ಯ ನ್ಯಾಯಗಳೇ ಧರ್ಮದ ಅಸ್ತಿವಾರ. ಕೊಟ್ಟ ಸಾಲವನ್ನು ಹಿಂದೆ ಕೊಡದಿರುವುದೆಂದರೆ ಅದು ಅನ್ಯಾಯ. ಆದುದರಿಂದ ಒಂದು ಬಿಡಿಕಾಸೂ ಕೂಡ ಬಾಕಿಯಾಗದಂತೆ ನೀವು ಸಾಲದ ಹಣವನ್ನು ಹಿಂದಕ್ಕೆ ಪಡೆಯಬೇಕು.’’

ಆಡಿದ ಮಾತಿನಂತೆ ಹೆಗ್ಗಡೆಯವರು ಸಾಲವಷ್ಟನ್ನೂ ಹಿಂದಿರುಗಿಸಿದರು.

ಸರ್ವಧರ್ಮ ಸಮ್ಮೇಳನ

ಧರ್ಮಸ್ಥಳದ ವಿಶೇಷ ಗುಣವೆಂದರೆ ಸರ್ವಮತ ಧರ್ಮಸಮನ್ವಯ. ಇಲ್ಲಿಯ ಪ್ರಧಾನ ಉಪಾಸನಾ ದೇವರು ಶ್ರೀ ಮಂಜುನಾಥ, ಅಂದರೆ ಶಿವನು. ಇವನ ಅರ್ಚಕರು ವೈಷ್ಣವ ಬ್ರಾಹ್ಮಣರು. ಈ ದೇವಸ್ಥಾನದ ಆಡಳಿತ ನಡೆಸುತ್ತಿರುವವರು ಜೈನಮತೀಯರಾದ ಹೆಗ್ಗಡೆಯವರು.  ಇವರ ಆರಾಧ್ಯದೈವ ಚಂದ್ರನಾಥ ತೀರ್ಥಂಕರ. ಈ ಜಿನಬಸದಿಯೂ ಹತ್ತಿರದಲ್ಲೇ ಇದೆ.

ಆಕಾಶದಿಂದ ಬಿದ್ದ ನೀರು ಹೊಳೆಯನ್ನು ಸೇರಿ, ಹೊಳೆಗಳೆಲ್ಲವೂ ಒಂದೇ ಸಮುದ್ರಕ್ಕೆ ಸೇರುತ್ತವೆ. ಹಾಗೆಯೇ ಎಲ್ಲಾ ಮತ ಧರ್ಮದವರೂ ಭಕ್ತಿ ಮತ್ತು ಶ್ರದ್ಧೆಯಿಂದ ಮಾಡುವ ಸೇವೆ ಒಬ್ಬನೇ ದೇವರಿಗೆ ಸಲ್ಲುತ್ತದೆ. ಇದು ಈ ಕ್ಷೇತ್ರದ ತತ್ವ.

ಈ ತತ್ವವನ್ನು ಈ ಧರ್ಮಮಾರ್ಗವನ್ನು ಧರ್ಮಸ್ಥಳವು ತನ್ನ ಆಚರಣೆಯ ಮೂಲಕ ಎಲ್ಲರಿಗೂ ಸಾರಿ ಹೇಳುತ್ತದೆ. ಇಲ್ಲಿಗೆ ಬರುವವರು ಹಿಂದುಗಳು ಮಾತ್ರವಲ್ಲ, ಮುಸಲ್ಮಾನರೂ ಕೆಸ್ತರೂ ಕೂಡ ತಮ್ಮ ತಮ್ಮ ಕಷ್ಟ ನಿವಾರಣೆಗೆ ಇಲ್ಲಿಗೆ ಹರಕೆ, ಕಾಣಿಕೆ ಸಲ್ಲಿಸುತ್ತಾರೆ. ಇಲ್ಲಿ ಎಲ್ಲಾ ಮತ ಧರ್ಮದವರಿಗೂ ಧರ್ಮಾರ್ಥವಾದ ಊಟ ವಸತಿಗಳ ವ್ಯವಸ್ಥೆಯಿದೆ.

ಈ ರೀತಿಯ ವ್ಯವಸ್ಥೆಗೆ ಶಿಖರವಿಟ್ಟಂತೆ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ೧೯೩೩ರಲ್ಲಿ ಮಂಜಯ್ಯ ಹೆಗ್ಗಡೆಯವರು ಮೊದಲ ಸಲ ಸರ್ವಧರ್ಮ ಸಮ್ಮೇಳನದ ಏರ್ಪಾಡು ಮಾಡಿದರು. ಮೊದಲ ದಿನ ಧರ್ಮ ಸಮ್ಮೇಳನವನ್ನೂ ಎರಡನೆಯ ದಿನ ಸಾಹಿತ್ಯ ಸಮ್ಮೇಳನವನ್ನೂ ನಡೆಸತೊಡಗಿದರು.

ಸರ್ವಧರ್ಮ ಸಮ್ಮೇಳನದಲ್ಲಿ ದ್ವೈತ, ಅ ದ್ವೈತ, ವಿಶಿಷ್ಟಾದ್ವೈತ, ಶಿವಾದ್ವೈತ, ಬೌದ್ಧ, ಜೈನ, ಇಸ್ಲಾಮ್, ಕ್ರೈಸ್ತ ಮತ-ಹೀಗೆ ಎಲ್ಲ ಧರ್ಮಗಳ ವಿದ್ವಾಂಸರು ಬಂದು, ತಮ್ಮ ತಮ್ಮ ಸಿದ್ಧಾಂತದ ಸಾರವನ್ನು ವಿವರಿಸುತ್ತಾರೆ.

೧೯೩೩ರಲ್ಲಿ ಜರುಗಿದ ಮೊದಲನೆಯ ಧರ್ಮ ಸಮ್ಮೇಳನದಲ್ಲಿ ಮಂಜಯ್ಯ ಹೆಗ್ಗಡೆಯವರು ಸ್ವಾಗತ ಭಾಷಣದಲ್ಲಿ ಹೀಗೆ ಹೇಳಿದರು:

‘‘ಸಾಮಾನ್ಯವಾಗಿ ವಿವಿಧ ಮತಧರ್ಮಗಳ ಐಕ್ಯಕ್ಕೆ ಈ ಧರ್ಮಸ್ಥಳವು ಆದರ್ಶಕ್ಷೇತ್ರವೆಂದರೆ ತಪ್ಪಾಗದು. ಹಿಂದುಗಳು ಜೈನರು ಮುಸಲ್ಮಾನರು ಕ್ರಿಶ್ಚಿಯನರು ಎಂಬ ಭೇದಭಾವವಿಲ್ಲದೆ ಪ್ರಾಯಶಃ ಎಲ್ಲಾ ಮತ ಧರ್ಮದ ಜನರು ಈ ಕ್ಷೇತ್ರದ ವಿಶ್ವಾಸಕ್ಕೆ ಪಾತ್ರರಾಗಿರುವುದೇ ಇದಕ್ಕೊಂದು ನಿದರ್ಶನ. ಅಲ್ಲದೆ ಯಾವ ಮತ ಭೇದವನ್ನೂ ಪರಿಗಣಿಸದೆ ದಾನಾದಿಗಳನ್ನು ನೀಡುವುದೂ ಈ ಸ್ಥಳದ ಮಹತ್ವವೆನ್ನಬಹುದು.

‘‘ಪರಸ್ಪರ ವಿರೋಧಭಾವವೆಂಬ ಸಮುದ್ರವನ್ನು ಧರ್ಮತತ್ವವೆಂಬ ದೋಣಿಯೊಳಗೆ ವಿಶಾಲ ಹೃದಯ, ಉದಾತ್ತ ಭಾವಗಳೆಂಬ ಸನ್ಮಿತ್ರರೊಡಗೊಡಿ, ಶ್ರದ್ಧಾಭಕ್ತಿಯೆಂಬ ಚುಕ್ಕಾಣಿಯ ಸಹಾಯದಿಂದ ದಾಟಿದರೇನೇ ಶಾಂತಿಯೆಂಬ ಉತ್ತರ ತೀರದ ಸುಖಸಾಮ್ರಾಜ್ಯವನ್ನು ಸೇರಬಹುದು.’’

ಸಿದ್ಧವನ ಗುರುಕುಲ ಸ್ಥಾಪನೆ

ಮಂಜಯ್ಯ ಹೆಗ್ಗಡೆಯವರು ಮಹಾತ್ಮ ಗಾಂಧಿಯವರ ಸರಳ ಜೀವನ ಕ್ರಮದಿಂದ ಸ್ಫೂರ್ತಿಪಡೆದವರು. ಸರಳವಾದ ಉಡುಗೆ ತೊಡುಗೆ, ಸಾತ್ವಿಕವಾದ ಆಹಾರ ಪಾನೀಯ, ಶಿಸ್ತುಬದ್ಧವಾದ ದಿನಚರಿ-ಇದು ಹೆಗ್ಗಡೆಯವರ ಜೀವನ ಸೂತ್ರವಾಗಿತ್ತು.

ರವೀಂದ್ರನಾಥ ಠಾಕೂರರ ಶಾಂತಿನಿಕೇತನದಿಂದಲೂ, ಗಾಂಧೀಜಿಯವರ ವೃತ್ತಿಶಿಕ್ಷಣ ಕ್ರಮದಿಂದಲೂ ಪ್ರೇರಣೆ ಪಡೆದ ಹೆಗ್ಗಡೆಯವರು ಧರ್ಮಸ್ಥಳದ ಹತ್ತಿರ ಸಿದ್ಧವನ ಎಂಬ ಸ್ಥಳದಲ್ಲಿ ಆದರ್ಶ ಗುರುಕುಲ ಸ್ಥಾಪನೆಯ ಕನಸು ಕಂಡರು.

ಈ ಸಿದ್ಧವನ ಸ್ಥಳವು ಮೊದಲು ದೊಡ್ಡ ದೊಡ್ಡ ಮರಗಳಿಂದ ಕೂಡಿದ ಭಯಂಕರ ಕಾಡು ಪ್ರದೇಶವಾಗಿತ್ತು. ಈ ದಾರಿಯಲ್ಲಿ ಜನರು ಹಗಲು ಹೊತ್ತಿನಲ್ಲಿ ಕೂಡ ಹೋಗಲು ಹೆದರುತ್ತಿದ್ದರು. ಹೆಗ್ಗಡೆಯವರು ಈ ಸ್ಥಳವು ಗುರುಕುಲ ಸ್ಥಾಪನೆಗೆ ಪ್ರಶಸ್ತವಾದುದೆಂದು ತಿಳಿದು ಅಲ್ಲಿಯ ಮರಗಳನ್ನೆಲ್ಲಾ ಕಡಿಸಿ, ಸಮತಟ್ಟುಗೊಳಿಸಿದರು.

೧೯೪೦ರಲ್ಲಿ ‘ಸಿದ್ಧವನ ಗುರುಕುಲ’ ಸ್ಥಾಪನೆಯಾಯಿತು. ಈ ಸಂಸ್ಥೆ ಶಾಶ್ವತವಾಗಿ ನಡೆಯುವಂತೆ ಒಂದು ವಿಶ್ವಸ್ತ ಸಮಿತಿಯನ್ನು ರಚಿಸಿ, ಅದಕ್ಕೆ ಆ ಕಾಲದಲ್ಲಿ ವರ್ಷವರ್ಷವೂ ಐದು ಸಾವಿರ ರೂಪಾಯಿಗಳಷ್ಟು ಉತ್ಪನ್ನ ಬರುವಂತೆ ವ್ಯವಸ್ಥೆ ಮಾಡಿಸಿದರು.

ಈ ಗುರುಕುಲದಲ್ಲಿ ಸಾಮಾನ್ಯ ಪಾಠಪಟ್ಟಿಯೊಡನೆ ಸಂಸ್ಕೃತ, ಭಗವದ್ಗೀತೆ, ನೀತಿಬೋಧೆ ಕಡ್ಡಾಯವಾಗಿತ್ತು.

ಗುರುಕುಲದ ದಿನಚರಿ

ಗುರುಕುಲದಲ್ಲಿ ಗುರುಗಳೂ ಶಿಷ್ಯರೂ ದಿನದ ಇಪ್ಪತ್ತ್ತ ನಾಲ್ಕು ಗಂಟೆಯೂ ಒಟ್ಟಿಗೆ ವಾಸ ಮಾಡುತ್ತಿದ್ದರು. ಶುಚಿಯಾದ ಜೀವನ, ರುಚಿಯಾದ ಭೋಜನ, ಆದರ್ಶ ಶಿಕ್ಷಣ, ನೀತಿನಿಯಮಗಳ ಚಿಂತನ, ಮಹಾಪುರುಷರ ಜೀವನ ಕಾರ್ಯಗಳ ಮನನ-ಇವು ಇಲ್ಲಿಯ ಗುರು-ಶಿಷ್ಯರ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿದ್ದುವು.

ಇಲ್ಲಿ, ಆಶ್ರಮದ ಮಕ್ಕಳು ಸ್ನಾನ ಮಾಡುವ ಬಚ್ಚಲು ಮನೆಯ ನೀರು ಕೈದೋಟವನ್ನು ಬೆಳೆಯಿಸುತ್ತದೆ. ಅವರು ಉಂಡು ಕೈತೊಳೆಯುವುದು ತೆಂಗಿನಮರದ ಕಟ್ಟೆಯಲ್ಲಿ. ಅಂಗಳದಲ್ಲಿ ಉದುರಿದ ಮರದ ಎಲೆಗಳನ್ನು ಮಕ್ಕಳು ಸಂಜೆ ಒಟ್ಟು ಸೇರಿಸಿ, ಗೊಬ್ಬರದ ಗುಂಡಿಗೆ ಹಾಕುತ್ತಿದ್ದರು.

ಮಹಾತ್ಮ ಗಾಂಧಿಯವರು ವರ್ಧಾದಲ್ಲಿ ಜೀವನ ಶಿಕ್ಷಣಕ್ರಮವನ್ನು ರೂಪಿಸಿದರು. ಹೆಗ್ಗಡೆಯವರು ಅದನ್ನು ಸಿದ್ಧವನದಲ್ಲಿ ಅನುಷ್ಠಾನಕ್ಕೆ ತಂದರು.

ಸಿದ್ಧವನ ಗುರುಕುಲದ ದಿನದಿನದ ಜೀವನದಲ್ಲಿ ಶಿಸ್ತು ನಿಯಮಪಾಲನೆ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ಬೆಳಿಗ್ಗೆ ಉಷಃಕಾಲದಲ್ಲಿ ಎದ್ದೊಡನೆ ಶೌಚಾದಿ ನಿತ್ಯಕರ್ಮಗಳು ಮುಗಿದೊಡನೆ ಮಕ್ಕಳು ಸಾಲಾಗಿ ಬಂದು, ಪ್ರಾರ್ಥನಾ ಮಂದಿರದಲ್ಲಿ ಒಟ್ಟಾಗಿ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಬೇಕಾಗಿತ್ತು. ಆಮೇಲೆ ವೈಯಕ್ತಿಕ ಅಧ್ಯಯನ. ಗೊತ್ತಾಗದ ಪಾಠದ ವಿಚಾರಗಳನ್ನು ಅಧ್ಯಾಪಕರೊಡನೆ ಮಕ್ಕಳು ಕೇಳಿಕೊಳ್ಳುತ್ತಿದ್ದರು.

ಸ್ವತಃ ಹೆಗ್ಗಡೆಯವರೇ ಬಂದು ವಿದ್ಯಾರ್ಥಿಗಳ ದಿನಚರಿ ಹಾಗೂ ಯೋಗಕ್ಷೇಮ ಕುರಿತು ಅಧ್ಯಾಪಕರೊಡನೆ ವಿಚಾರ ವಿನಿಮಯ ನಡೆಸಿ ಯೋಗ್ಯ ನಿರ್ದೇಶನ ಕೊಡುತ್ತಿದ್ದರು.

ಮಕ್ಕಳು ತಮ್ಮ ಬಟ್ಟೆಬರೆಗಳನ್ನು ತಾವೇ ಒಗೆದು ಶುಚಿಗೊಳಿಸಬೇಕಿತ್ತು. ತಮ್ಮ ಊಟದ ಬಟ್ಟಲು ಲೋಟ ಪಾತ್ರೆಗಳನ್ನು ತಾವೇ ತೊಳೆಯುತ್ತಿದ್ದರು. ಅವುಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಪ್ರತಿಯೊಬ್ಬರೂ ಬೇರೆ ಬೇರಾಗಿ ಒಪ್ಪ ಓರಣದಿಂದ ಇಡುತ್ತಿದ್ದರು.

ಸಂಜೆ ಸ್ವಲ್ಪ ಸಮಯ ಆಟ, ಹಾಗೂ ಸಾದಾ ವ್ಯಾಯಾಮ ಕಡ್ಡಾಯವಾಗಿತ್ತು. ದೀಪ ಹಚ್ಚಿದ ಮೇಲೆ ಸ್ವಲ್ಪ ಹೊತ್ತು ಸಾಮೂಹಿಕ ಭಜನೆಯ ಕಾರ್ಯಕ್ರಮ ನಡೆಯುತ್ತಿತ್ತು. ಆಮೇಲೆ ಸಂಸ್ಕೃತ ಉಪಾಧ್ಯಾಯರು ಭಗವದ್ಗೀತೆಯ ಶ್ಲೋಕಗಳನ್ನು ಹೇಳಿಕೊಡುತ್ತಿದ್ದರು. ಹಾಗೂ ವಿವರಣೆಯನ್ನು ನೀಡುತ್ತಿದ್ದರು.

ಮಕ್ಕಳ ಮೇಲೆ ಮಮತೆ

ಗುರುಕುಲದಲ್ಲಿ ಮಕ್ಕಳಿಗೆ ಊಟ ಉಡಿಗೆ ಸ್ಲೇಟು ಪುಸ್ತಕ ಮೊದಲಾದ ಶಿಕ್ಷಣದ ಉಪಕರಣಗಳನ್ನು ಹೆಗ್ಗಡೆಯವರು ಧರ್ಮಾರ್ಥವಾಗಿ ಒದಗಿಸುತ್ತಿದ್ದರು.

ಗುರುಕುಲದಲ್ಲಿ ಸಾಹಿತ್ಯಸಭೆ, ಸಂಗೀತ, ಚಿತ್ರಕಲೆ, ನಾಟಕಗಳ ತರಬೇತಿ, ಕೈಕಸಬು, ತರಕಾರಿ ತೋಟಗಾರಿಕೆ ಮೊದಲಾದ ಎಲ್ಲಾ ವಿಧದ ಶಿಕ್ಷಣವೂ ಮಕ್ಕಳಿಗೆ ದೊರೆಯುತ್ತಿತ್ತು. ಸ್ವತಃ ಹೆಗ್ಗಡೆಯವರ ನೇತೃತ್ವದಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡುವ ಭಾಗ್ಯವು ಇಲ್ಲಿಯ ವಿದ್ಯಾರ್ಥಿಗಳಿಗೆ ದೊರೆಯುತ್ತಿತ್ತು.

ಗುರುಕುಲದ ಮಕ್ಕಳನ್ನು ನೋಡಲು ಹೆಗ್ಗಡೆಯವರು ಆಗಾಗ ಬರುವ ಪರಿಪಾಠವನ್ನು ಇಟ್ಟುಕೊಂಡಿದ್ದರು. ತಮ್ಮ ಮನೆಯನ್ನೂ ತಂದೆತಾಯಂದಿರನ್ನೂ ಬಿಟ್ಟು ದೂರದ ಊರಿನಲ್ಲಿ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ವಾಸಿಸುತ್ತಿದ್ದ ಕಾರಣ ಅವರ ಆರೋಗ್ಯದ ಕಡೆಗೆ ಹೆಗ್ಗಡೆಯವರು ವಿಶೇಷವಾದ ಲಕ್ಷ್ಯವನ್ನು ಕೊಡುತ್ತಿದ್ದರು.

ಹೆಗ್ಗಡೆಯವರು ಧರ್ಮಸ್ಥಳದಿಂದ ಉಜಿರೆ ಸಿದ್ಧವನಕ್ಕೆ ಬರುವಾಗ ಮಂಜುನಾಥ ದೇವರ ಪ್ರಸಾದ, ಹಣ್ಣುಗಳು ಮೊದಲಾದವುಗಳನ್ನು ತಂದು ಹಂಚುತ್ತಿದ್ದರು.

ವರ್ಷದ ಆದಿಯಲ್ಲಿ ಬೇರೆ ಬೇರೆ ಕಡೆಯ ಶಾಲೆಯ ಬಡಮಕ್ಕಳು ಪಾಠ ಪುಸ್ತಕಗಳನ್ನು ಕೊಂಡುಕೊಳ್ಳಲು ಧನಸಹಾಯಕ್ಕಾಗಿ ಮಂಜಯ್ಯ ಹೆಗ್ಗಡೆಯವರ ಬಳಿಗೆ ಬರುತ್ತಿದ್ದರು. ಹಾಗೆಯೇ ಪರೀಕ್ಷೆಗಳಿಗೆ ಹಣ ಕಟ್ಟಲು ಸಹಾಯಕ್ಕಾಗಿ ಬರುತ್ತಿದ್ದರು. ಹೆಗ್ಗಡೆಯವರು ಯಾರನ್ನೂ ನಿರಾಶೆಗೊಳಿಸುತ್ತಿರಲಿಲ್ಲ.

ಹೆಗ್ಗಡೆಯವರಿಗೆ ಮಕ್ಕಳ ಚಟುವಟಿಕೆಗಳನ್ನು ನೋಡುವುದರಲ್ಲಿ ತುಂಬಾ ಇಷ್ಟ. ತಿಂಗಳ ಹಬ್ಬ, ದಸರಾ ಉತ್ಸವ, ವರ್ಧಂತಿ ಉತ್ಸವ ಮೊದಲಾದ ಸಂದರ್ಭಗಳಲ್ಲಿ ಮಕ್ಕಳಿಂದ ನಾಟಕಗಳನ್ನು ಆಡಿಸುತ್ತಿದ್ದರು. ನಾಟಕಗಳ ರಂಗಸಿದ್ಧತೆ ಮತ್ತು ಅಭಿನಯದ ಶಿಕ್ಷಣಕ್ಕಾಗಿ, ಅಂಬಾಪ್ರಸಾದಿತ ನಾಟಕ ಮಂಡಳಿಯನ್ನು ನಡೆಸುತ್ತಿದ್ದ ಮುಂಡಾಜೆಯ ರಂಗನಾಥ ಭಟ್ಟರನ್ನು ಹೆಗ್ಗಡೆಯವರು ಕರೆಸುತ್ತಿದ್ದರು. ರಂಗ ತಾಲೀಮನ್ನು ನೋಡಲು ಕೂಡ ಹೆಗ್ಗಡೆಯವರು ಆಗಾಗ ಬರುತ್ತಿದ್ದರು. ನಾಟಕದಲ್ಲಿ ಉತ್ತಮ ಅಭಿನಯ ಮಾಡಿದ ಮಕ್ಕಳಿಗೆ ಯೋಗ್ಯವಾದ ಬಹುಮಾನ ಕೊಡುತ್ತಿದ್ದರು.

ಕರುಣಾ ಹೃದಯ

‘‘ಅಹಿಂಸಾ ಪರಮೋ ಧರ್ಮಃ’’ ಹಿಂಸೆಯನ್ನು ಮಾಡದಿರುವುದೇ ಶ್ರೇಷ್ಠವಾದ ಧರ್ಮವಾಗಿದೆ-ಎಂಬ ಸೂತ್ರಕ್ಕೆ ಜೈನಧರ್ಮದಲ್ಲಿ ಅಗ್ರಸ್ಥಾನವಿದೆ. ಸ್ವತಃ ಜೈನಗೃಹಸ್ಥರಾದ ಮಂಜಯ್ಯ ಹೆಗ್ಗಡೆಯವರು ತಮ್ಮ ಜೀವನದಲ್ಲಿ ಅಹಿಂಸಾ ಧರ್ಮಕ್ಕೆ ಪ್ರಧಾನ ಸ್ಥಾನವನ್ನು ಕೊಡುತ್ತಿದ್ದರು.

‘‘ದಯೆಯೇ ಧರ್ಮದ ಮೂಲ’’ ಎಂಬುದು ಅವರ ಜೀವನದ ಧ್ಯೇಯ ವಾಕ್ಯವಾಗಿತ್ತು.

ಸುಮಾರು ೧೯೫೦ನೆಯ ಇಸವಿಯಲ್ಲಿ ಒಂದು ಸಂಗತಿ ನಡೆಯಿತು.

ಒಂದು ಬಾರಿ ಧರ್ಮಸ್ಥಳದ ಸಮೀಪದ ಕಾಡಿನಲ್ಲಿ ಒಬ್ಬ ಜಮೀನ್ದಾರರು ಒಂದು ಹುಲಿಯನ್ನು ಗುಂಡಿಟ್ಟು ಕೊಂದರು. ಆಗ ಹತ್ತಿರದ ಪೊದರಿನಲ್ಲಿ ತಿಂಗಳು ತುಂಬಿದ ಗರ್ಭಿಣಿ ಹರಿಣಿಯು ಕೋವಿಯ ಸದ್ದಿಗೆ ಹೆದರಿ ಮರಿ ಹಾಕಿತು. ಇದನ್ನು ತಿಳಿದ ಬೇಟೆಗಾರರು ಆ ಮರಿಯನ್ನು ಎತ್ತಿಕೊಂಡು ಮನೆಗೆ ಬಂದರು.

ದೂರದಿಂದಲೇ ತಾಯಿ ಜಿಂಕೆಯು ಮರಿಯ ಮೇಲಿನ ಮಮತೆಯಿಂದ ಬರುತ್ತಾ ಬರುತ್ತಾ ಇವರ ಮನೆಯನ್ನು ಗೊತ್ತುಹಚ್ಚಿಕೊಂಡಿತು. ಬೆಳಗ್ಗೆ ಸಂಜೆ ತಾಯಿಜಿಂಕೆ ಮನೆಗೆ ಬಂದಾಗ ಬೇಟೆಗಾರರು ಮರಿಯನ್ನು ಮೊಲೆ ಕುಡಿಯಲು ಬಿಟ್ಟು ಅಡಗಿ ಕುಳಿತಿರುತ್ತಿದ್ದರು. ಮೊಲೆ ಕುಡಿದೊಡನೆ ಮರಿಯ ಹತ್ತಿರ ಹೋದಾಗ ಜಿಂಕೆ ಹೆದರಿ ಓಡುತ್ತಿತ್ತು. ಮರಿಯನ್ನು ಇವರು ಹಿಂದೆ ತರುತ್ತಿದ್ದರು.

ಹೀಗೆ ಮೂರು ನಾಲ್ಕು ದಿನ ನಡೆಯಿತು.

ಈ ಜಿಂಕೆಮರಿಯನ್ನು ಮಂಜಯ್ಯ ಹೆಗ್ಗಡೆಯವರಿಗೆ ಕಾಣಿಕೆಯಾಗಿ ಕೊಡುವುದೆಂದು ನಿಶ್ಚಯಿಸಿ, ಜಮೀನ್ದಾರರು ಧರ್ಮಸ್ಥಳಕ್ಕೆ ಹೋದರು. ಹೆಗ್ಗಡೆಯವರು ಅವರಿಗೆ ಅಂದು ಅಲ್ಲೆ ಊಟಮಾಡಲು ಆಹ್ವಾನಿಸಿದರು.

ಜಮೀನ್ದಾರರು ಬೇಟೆಯ ಕತೆಯನ್ನೆಲ್ಲ ಹೇಳಿದರು. ಕೇಳುತ್ತಾ ಕೇಳುತ್ತಾ ಹೆಗ್ಗಡೆಯವರಿಗೆ ಬಹಳ ದುಃಖವಾಯಿತು.

‘‘ಇನ್ನು ಮುಂದೆ ನೀವು ಬೇಟೆಯಾಡಬಾರದು, ಮೃಗಗಳನ್ನು ಕೊಲ್ಲಬಾರದು. ಸತ್ತವರನ್ನು ಬದುಕಿಸಲು ನಮಗೆ ತಿಳಿದಿಲ್ಲ. ಹಾಗಿರುವಾಗ ಬದುಕಿರುವವರನ್ನು ಕೊಲ್ಲಲು ನಮಗೆ ಅಧಿಕಾರವಿದೆಯೇ?’’ ಎಂದು ಮಂಜಯ್ಯ ಹೆಗ್ಗಡೆಯವರು ಕೇಳಿದರು.

‘‘ಇನ್ನು ನಾನು ಬೇಟೆಯಾಡುವುದಿಲ್ಲ’’ ಎಂದು ಜಮೀನ್ದಾರರು ತಲೆತಗ್ಗಿಸಿದರು.

‘‘ಹಾಗಾದರೆ ಇನ್ನು ನಾನು ಬೇಟೆಯಾಡುವುದಿಲ್ಲ ಎಂದು ದೇವರ ಮುಂದೆ ಪ್ರತಿಜ್ಞೆ ಮಾಡಿರಿ’’ ಎಂದು ಹೆಗ್ಗಡೆಯವರು ಹೇಳಿ, ಅವರಿಂದ ಪ್ರತಿಜ್ಞೆ ಮಾಡಿಸಿದರು.

ಅವರು ತಂದಿದ್ದ ಜಿಂಕೆಯ ಕಿರುಮರಿಯನ್ನು ನೋಡಿ, ಹೆಗ್ಗಡೆಯವರು ಕರುಣೆಯಿಂದ ಅದರ ಬೆನ್ನು ನೇವರಿಸಿ, ‘‘ಇಂದೇ ನೀವು ಇದನ್ನು ಕಾಡಿಗೆ ಕೊಂಡು ಹೋಗಿ ಅದರ ತಾಯಿಗೆ ಒಪ್ಪಿಸಬೇಕು’’ ಎಂದು ಆಜ್ಞೆ ಮಾಡಿದರು.

ಜಮೀನ್ದಾರರು ಅಂದೇ ಹೊರಟು, ಮನೆಗೆ ಬಂದು, ರಾತ್ರಿಯೇ ದೀಪ ಹಿಡಿದುಕೊಂಡು, ಕೆಲಸದಾಳಿನೊಡನೆ ಜಿಂಕೆಮರಿಯನ್ನು ಹೊರಿಸಿಕೊಂಡು, ಮನೆಯ ಹಿಂದಿನ ಕಾಡಿಗೆ ಹೋದರು. ಮರಿಯು ಕೂಗತೊಡಗಿದಾಗ, ದೂರದಲ್ಲಿ ಇದ್ದ ತಾಯಿ ಜಿಂಕೆ ಮರುದನಿ ಕೊಟ್ಟಿತು. ಮರಿಯನ್ನು ಕೆಳಗೆ ಬಿಟ್ಟೊಡನೆ ಅದು ಚಂಗನೆ ನೆಗೆಯುತ್ತಾ ತಾಯ ಬಳಿಗೆ ಓಡಿತು. ತಾಯಿಯೂ ಮರಿಯೂ ಒಂದಾದುವು.

ಧರ್ಮಸ್ಥಳವೇ ನ್ಯಾಯಮಂದಿರ

ಧರ್ಮಸ್ಥಳವು ಬರೇ ದೇವರಮಂದಿರವಲ್ಲ. ಅದನ್ನು ಒಂದು ಧಾರ್ಮಿಕ ಕೋರ್ಟು ಎಂದು ಹೇಳಬಹುದು. ಮಂಜಯ್ಯ ಹೆಗ್ಗಡೆಯವರು ದೇವಸ್ಥಾನದ ಬರೇ ಧರ್ಮದರ್ಶಿಗಳಾಗಿ ಇದ್ದಿಲ್ಲ. ಅವರು ದೇವರ ಮುಂದೆ ನ್ಯಾಯಾಧಿಕಾರಿಯ ಪಾತ್ರ ವಹಿಸುತ್ತಿದ್ದರು.

ಹೆಚ್ಚಾಗಿ ದಾಯಾದಿಗಳಾದ ಅಣ್ಣತಮ್ಮಂದಿರೊಳಗೆ ಆಸ್ತಿ, ತೋಟ ಪಾಲಾಗುವಾಗ ಒಂದಿಲ್ಲೊಂದು ರೀತಿಯಿಂದ ಹೆಚ್ಚುಕಡಿಮೆಯಾಗಿ ಜಗಳವಾಗುತ್ತಿತ್ತು. ‘‘ಈ ನ್ಯಾಯ ಅನ್ಯಾಯ ಧರ್ಮಸ್ಥಳದ ದೇವರು ಕಂಡ ಹಾಗೆ ಇರಲಿ’’ ಎಂದು ಒಂದು ಕಡೆಯವರು ಹೇಳಿದರೆ ಆ ಎರಡು ಮನೆಯೊಳಗೆ ಸಂಬಂಧ ಪೂರ್ತಿಯಾಗಿ ತಪ್ಪಿ ಹೋಗುತ್ತಿತ್ತು. ದೇವರ ಹೆದರಿಕೆಯಿಂದ ಒಬ್ಬರ ಬಾವಿಯ ನೀರನ್ನು ಕೂಡ ಮತ್ತೊಬ್ಬರು ಕುಡಿಯುತ್ತಿರಲಿಲ್ಲ.

ಕೆಲವು ವರ್ಷ ಕಳೆದ ಮೇಲೆ ಸಿಟ್ಟೆಲ್ಲಾ ತಣಿದಾಗ, ಸಮಾಧಾನವಾಗಬೇಕೆಂದು ಅನ್ನಿಸಿದಾಗ ಎರಡು ಕಡೆಯವರೂ ಧರ್ಮಸ್ಥಳಕ್ಕೆ ದೇವರ ಸನ್ನಿಧಿಗೆ ಬರುತ್ತಿದ್ದರು.

ಹೆಗ್ಗಡೆಯವರು ಅವರಿಬ್ಬರೊಳಗಿನ ಕಲಹವನ್ನು ವಿಚಾರಿಸಿ, ಅವರಿಂದ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿಸುತ್ತಿದ್ದರು. ಅಮೇಲೆ ಯಥೋಚಿತವಾದ ತಪ್ಪು ದಂಡ ಕಾಣಿಕೆ ಹಾಕಿಸಿ, ಅವರ ನ್ಯಾಯ ತೀರ್ಮಾನ ಮಾಡುತ್ತಿದ್ದರು.

ಹಣ ಸಾಲ ಕೊಟ್ಟು ನೋಟು ಚೀಟು ಬರೆಸಿಕೊಂಡಾಗ, ಅದರ ವಾಯಿದೆ ಕಳೆದಮೇಲೆ, ಅದು ಯಾವ ಸರಕಾರಿ ಕೋರ್ಟಿನಲ್ಲಿಯೂ ವಸೂಲು ಆಗುತ್ತಿದ್ದಿಲ್ಲ. ಆಗ ವಾದಿಯು ಧರ್ಮಸ್ಥಳಕ್ಕೆ ಹೋಗಿ ಸತ್ಯ ಸಂಗತಿಯನ್ನು ಬರೆದುಕೊಡುತ್ತಿದ್ದರು. ಹೆಗ್ಗೆಡೆಯವರು ಪ್ರತಿವಾದಿಯನ್ನು ಪತ್ರ ಮುಖಾಂತರ ಬರುವಂತೆ ಮಾಡಿ, ಆ ಸಾಲದ ಹಣವನ್ನು ವಸೂಲು ಮಾಡಿಸಿಕೊಡುತ್ತಿದ್ದರು. ಆಗ ಹಣ ಪಡಕೊಂಡವರು ತನಗೆ ದೇವರು ಪ್ರೇರಿಸಿದಷ್ಟು ಹಣವನ್ನು ಭಂಡಾರಕ್ಕೆ ಒಪ್ಪಿಸುತ್ತಿದ್ದನು.

‘‘ಅನಾಥೋ ದೈವ ರಕ್ಷಿತಃ’’ ಎಂಬಂತೆ ಅನ್ಯಾಯ ಹೊಂದಿದವರು, ದುರ್ಬಲರು ತಮಗೆ ಪ್ರಬಲರಿಂದ ಕಷ್ಟ ಬಂದಾಗ ಧರ್ಮಸ್ಥಳದಲ್ಲಿ ದೂರು ಕೊಡುತ್ತಿದ್ದರು. ಅದು ದೇವರ ಮುಂದೆ ತೀರ್ಮಾನವಾಗುತ್ತಿತ್ತು. ಹೀಗೆ ಅಣ್ಣ ತಮ್ಮಂದಿರೊಳಗಿನ, ತಂದೆಮಕ್ಕಳೊಳಗಿನ, ಗಂಡ ಹೆಂಡಿರೊಳಗಿನ ಕಲಹಗಳು ಧರ್ಮಸ್ಥಳದಲ್ಲಿ ನ್ಯಾಯವಾದ ತೀರ್ಪು ಹೊಂದುತ್ತಿದ್ದವು.

ಈ ರೀತಿಯ ನೂರಾರು ನ್ಯಾಯ ವಿವಾದಗಳನ್ನು ಮಂಜಯ್ಯ ಹೆಗ್ಗಡೆಯವರು ತೀರ್ಮಾನಿಸಿ ಬಡವರ ಕಣ್ಣೀರನ್ನು ತೊಡೆದಿದ್ದರು.

ಶಿಕ್ಷಣ ಸೇವೆ

ಉಜಿರೆಯಲ್ಲಿ ಹೈಸ್ಕೂಲು ಸ್ಥಾಪನೆಯಾಗಲು ಮಂಜಯ್ಯ ಹೆಗ್ಗಡೆಯವರು ಶ್ರಮ ವಹಿಸಿದರು. ‘ಕರ್ಣಾಟಕ ವಿದ್ಯಾವರ್ಧಕ ಸಂಘ’ ಎಂಬುದನ್ನು ಸ್ಥಾಪಿಸಿ, ಅದಕ್ಕೆ ಹತ್ತು ಸಾವಿರ ರೂಪಾಯಿಯನ್ನೂ ಮೂವತ್ತು ಎಕರೆ ಭೂಮಿಯನ್ನೂ ದಾನವಾಗಿ ಕೊಟ್ಟರು. ೧೯೪೭ ರಲ್ಲಿ ಕರ್ಣಾಟಕ ವಿದ್ಯಾವರ್ಧಕ ಹೈಸ್ಕೂಲು ಸ್ಥಾಪನೆಯಾಯಿತು. ಅದೇ ಈಗ ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಹೈಸ್ಕೂಲಾಗಿ ಹೆಸರು ಬದಲಾಯಿಸಿದೆ.

ಆಗಲೇ ಅಲ್ಲಿ ಅದಕ್ಕೆ ಸುಮಾರು ನಲವತ್ತು ಸಾವಿರ ರೂಪಾಯಿ ಖರ್ಚಿನಲ್ಲಿ ಹೊಸ ವಿದ್ಯಾರ್ಥಿ ಭವನ ಒಂದನ್ನು ಕಟ್ಟಿಸಿಕೊಟ್ಟರು.

ಆ ಕಾಲದಲ್ಲಿ ಹೆಗ್ಗಡೆಯವರು ವಿದ್ಯಾಸಂಬಂಧವಾಗಿ ವಿನಿಯೋಗಿಸಿದ ಹಣದ ಮೊಬಲಗು ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಮೀರಬಹುದು ಎಂದು ಅಂದಾಜು ಮಾಡಿದ್ದಾರೆ.

ಗೃಹಸ್ಥ ಜೀವನ

೧೯೨೨ ನೇ ಇಸವಿ ಮೇ ತಿಂಗಳಲ್ಲಿ ಮಂಜಯ್ಯ ಹೆಗ್ಗಡೆಯವರಿಗೆ ಮೂಡಬಿದರೆಯ ಪಟ್ಟಣಶೆಟ್ಟಿ ದೇವರಾಜ ಶೆಟ್ಟರ ಮಗಳು ಶ್ರೀಮತಿ ಲೋಕಮ್ಮನವರೊಡನೆ ಮದುವೆಯಾಯಿತು. ಇವರು ಆದರ್ಶ ಗೃಹಿಣಿಯಾಗಿ ಪತಿಗೆ  ತಕ್ಕ ಸತಿಯೆನಿಸಿದ್ದರು.

ಇವರಿಗೆ ಒಬ್ಬಳೇ ಮಗಳು ವಿಮಲಮ್ಮ.

ಹೆಗ್ಗಡೆಯವರೂ ಲೋಕಮ್ಮನವರೂ ಆದರ್ಶ ದಂಪತಿಗಳು. ದಿನ ನಿತ್ಯವೂ ದೇವರಪೂಜೆ, ಗುರುಸೇವೆ, ಶಾಸ್ತ್ರಗಳ ಅಧ್ಯಯನ, ವ್ರತಾಚರಣೆಗಳಲ್ಲಿ ಮಗ್ನರಾಗಿ ಇರುತ್ತಿದ್ದರು.

ಮಂಜಯ್ಯ ಹೆಗ್ಗಡೆಯವರೂ ಲೋಕಮ್ಮನವರೂ ತಮ್ಮ ಗುರುಗಳಾದ ನೇಮಿಸಾಗರ ವರ್ಣಿಜಿಯವರೊಡಗೂಡಿ, ಜೈನ ತೀರ್ಥಕ್ಷೇತ್ರಗಳಾದ ಸಮ್ಮೇದ ಶಿಖರ, ಪಾವಾಪುರಿ, ಚಂಪಾಪುರಿ, ಗಿರಿನಾರ್ ಮೊದಲಾದ ಕಡೆಗೆ ತೀರ್ಥಯಾತ್ರೆ ಮಾಡಿದರು. ಅಲ್ಲಿಂದ ಕಾಶಿಗೆ ಬಂದು ವಿಶ್ವನಾಥದರ್ಶನವನ್ನೂ ಮಾಡಿದರು.

ಬಿಹಾರದ ಸಮ್ಮೇದಶಿಖರದ ಅತಿಥಿಗೃಹಕ್ಕೆ ಬೇಕಾದ ದೊಡ್ಡ ದೊಡ್ಡ ತಾಮ್ರ ಹಿತ್ತಾಳೆಗಳ ಪಾತ್ರೆಗಳನ್ನು ಹೆಗ್ಗಡೆಯವರು ಉಚಿತ ಕೊಡುಗೆಯಾಗಿ ನೀಡಿದರು.

ಕಲಾಭಿರುಚಿಲಲಿತೋದ್ಯಾನ

ದೇವಸ್ಥಾನದ ಬಡಗುಬದಿಯ ಪ್ರದೇಶವು ಕೊಳಚೆ ನೀರಿನ ಕೆರೆಯಾಗಿ ಸೊಳ್ಳೆಗಳ ಆವಾಸಸ್ಥಾನವಾಗಿತ್ತು. ಅದನ್ನು ಹೆಗ್ಗಡೆಯವರು ಕೆಂಪು ಮಣ್ಣು ಹಾಕಿ ಮುಚ್ಚಿಸಿ ಲಲಿತೋದ್ಯಾನವಾಗಿ ಮಾರ್ಪಡಿಸಿದರು.

ಈ ಉದ್ಯಾನವು ಹೆಗ್ಗಡೆಯವರ ಕಲಾಭಿರುಚಿಗೊಂದು ಉತ್ತಮ ನಿದರ್ಶನ. ಇದರಲ್ಲಿ ಒಂದು ಕಡೆ ಎತ್ತರವಾದ ಸುಂದರ ಮಂಟಪದಲ್ಲಿ ಶ್ರೀಶಾರದಾ ದೇವಿಯ ಚೆಲುವಾದ ವಿಗ್ರಹ. ಅವಳ ಅಕ್ಕಪಕ್ಕದಲ್ಲಿ ಪುಸ್ತಕ ಹಿಡಿದು ಓದುತ್ತಿರುವ ಇಬ್ಬರು ಬಾಲಕ ಬಾಲಕಿಯರ ಮನಸೆಳೆಯುವ ಮೂರ್ತಿಗಳು. ಅದರ ಕೆಳಗಡೆ ಜವಾನನೊಬ್ಬನು ತೂಕಡಿಸುತ್ತಾ ಕುಳಿತಿರುವುದು ಜೀವಂತವಾಗಿರುವಂತೆ ಭಾಸವಾಗುವುದು.

ಈ ಮಂಟದ ಎದುರುಗಡೆ ಒಂದು ಸಣ್ಣ ಸಿಮೆಂಟಿನ ಕೊಳವಿದ್ದು, ಅದರಲ್ಲಿ ಯಾವಾಗಲೂ ನೀರು ತುಂಬಿರುವಂತೆ ವ್ಯವಸ್ಥೆಗೊಳಿಸಿದ್ದಾರೆ. ಅದರ ಮಧ್ಯದಲ್ಲಿ ಬಿಂದಿಗೆಯನ್ನು ಸೊಂಟದಲ್ಲಿ ಬಗ್ಗಿಸಿ ಹಿಡಿದಿರುವ ಗಂಗಾದೇವಿಯ ಸುಂದರ ವಿಗ್ರಹ.

ಹೂದೋಟದಲ್ಲಿ ಅಂಚೆ ಜವಾನನೊಬ್ಬನು ಪತ್ರವನ್ನು ಹಂಚಲು ಎತ್ತಿಹಿಡಿದಂತೆ ತೋರುವ ಬಣ್ಣದ ಮೂರ್ತಿಯೊಂದು ಜೀವಂತವಾಗಿರುವಂತೆ ಕಾಣುತ್ತದೆ.

ಚಿತ್ರಕಲಾವಿದ

ದೇವಸ್ಥಾನದ ಮೂಡುಬದಿಯ ಮುಂಭಾಗದಲ್ಲಿ ಎತ್ತರವಾದ ಸ್ಥಳದಲ್ಲಿ ವಸಂತಮಹಲು ಎಂಬ ಸಭಾಮಂದಿರವನ್ನು ಹೆಗ್ಗಡೆಯವರು ಕಟ್ಟಿಸಿದರು. ಇಲ್ಲಿ ಸಭೆ ಸಮಾರಂಭಗಳು ನಡೆಯುತ್ತವೆ. ಅದರ ಗೋಡೆಗಳ ಮೇಲೂ ಮೇಲು ಬದಿಗಳಲ್ಲಿಯೂ ಉತ್ತಮ ಅಭಿರುಚಿಯ ಅನೇಕ ವರ್ಣಚಿತ್ರಗಳನ್ನು ನಾವು ನೋಡಬಹುದು. ಇವುಗಳಲ್ಲಿ ಅನೇಕ ಚಿತ್ರಗಳನ್ನು ಸ್ವತಃ ಹೆಗ್ಗಡೆಯವರೇ ಬಿಡಿಸಿರುವರು.

ಗೌತಮಬುದ್ಧನ ವೈರಾಗ್ಯ, ಕರ್ಣಾವಸಾನ, ಪ್ರಸನ್ನ ಮಹಾದೇವ, ಶಕುಂತಲೆ, ಅನಂತಕೀರ್ತಿ ಸ್ವಾಮಿಗಳ ಧ್ಯಾನಮುದ್ರೆ, ಜಿನಮುನಿಯ ಜ್ಞಾನಭಂಗಕ್ಕಾಗಿ ಅಪ್ಸರೆಯರ ನೃತ್ಯ, ಯೇಸುಕ್ರಿಸ್ತನ ಉಪದೇಶ ಮೊದಲಾದ ಆಳೆತ್ತರದ ವರ್ಣಚಿತ್ರಗಳನ್ನು ಹೆಗ್ಗಡೆಯವರು ಬಿಡಿಸಿದ್ದರು. ಮುಳಿಯ ತಿಮ್ಮಪ್ಪಯ್ಯನವರ ‘‘ನಾಡೋಜ ಪಂಪ’’ ಗ್ರಂಥಕ್ಕಾಗಿ ಆದಿಪಂಪನ ಚಿತ್ರವನ್ನು ಹೆಗ್ಗಡೆಯವರು ಬಿಡಿಸಿಕೊಟ್ಟರುವರು.

ಭಗವಾನ್ ಬಾಹುಬಲಿ ಗೋಮಟೇಶ್ವರನ ಜೀವನಕ್ಕೆ ಸಂಬಂಧಿಸಿದ ಏಳೆಂಟು ಚಿತ್ರಗಳನ್ನು ಹೆಗ್ಗಡೆಯವರು ಬಿಡಿಸಿದರು. ಅವುಗಳನ್ನು ಕಾರ್ಕಳದ ಗೋಮಟಮಸ್ತಕಾಭಿಷೇಕ ಕಾಲದಲ್ಲಿ ಪ್ರದರ್ಶನಕ್ಕಾಗಿ ಸಿದ್ಧಗೊಳಿಸಿದರು. ಅನಂತರ ಅವುಗಳನ್ನು ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಪ್ರದರ್ಶಿಸಲೆಂದು ಅಲ್ಲಿಗೆ ಕಳುಹಿಸಿದರು. ಈಗಲೂ ಅದನ್ನು ಅಲ್ಲಿಯ ಮಠದ ಎದುರಿನ ಚಾವಡಿಯಲ್ಲಿ ಕಾಣಬಹುದು.

ಇವರ ಪ್ರಸಿದ್ಧವಾದ ಚಿತ್ರವೆಂದರೆ ಭಗವಾನ್ ಮಹಾವೀರ ಸ್ವಾಮಿಯ ಸಮವಸರಣದ ಮಹಾಚಿತ್ರ. ಸಮವಸರಣವೆಂದರೆ ತೀರ್ಥಂಕರರು ಕೇವಲ ಜ್ಞಾನಿಯಾದ ಮೇಲೆ ಜನರಿಗೆ ಮಹಾಮಂಟಪದಲ್ಲಿ ಧರ್ಮೋಪದೇಶ ಮಾಡುವುದು.ಇದನ್ನು ಐದು ಬಣ್ಣಗಳಲ್ಲಿ ರಚಿಸಿದ್ದರು.

ಕೊಡುಗೈ ದಾನಿ

ಮಂಜಯ್ಯ ಹೆಗ್ಗಡೆಯವರ ಬಳಿಗೆ ನಾನಾ ಸಂಘ ಸಂಸ್ಥೆಗಳ ಜನರು ಧನಸಹಾಯ ಕೇಳಲು ಬರುತ್ತಿದ್ದರು. ಇವರು ಯಾರನ್ನೂ ಬರಿಗೈಯಲ್ಲಿ ಕಳಿಸುತ್ತಿದ್ದಿಲ್ಲ.

ದಸರಾ ಸಮಯದಲ್ಲಿ ಮಹಾನವಮಿಯದಿನ ಹೆಂಗಸರಿಗೆ ಹೊಸ ಸೀರೆಯನ್ನು ದಾನವೀಯುತ್ತಿದ್ದರು. ವರ್ಷಕ್ಕೊಂದು ನಿಶ್ಚಿತ ದಿನ ಪಾತ್ರೆ ಹಿಡಿದುಕೊಂಡು ಎಲ್ಲಾ ಬಡವರಿಗೂ ಎಣ್ಣೆಯನ್ನು ಹಂಚುತ್ತಿದ್ದರು.

ಮೊದಲಿನ ಹೆಗ್ಗಡೆಯವರ ಕಾಲದಲ್ಲಿ ಜನಸಾಮಾನ್ಯರಿಗೆ ಪಡಿಯಕ್ಕಿ ಅಳೆದು ಕೊಡುವ ಕ್ರಮವಿತ್ತು. ಅವರು ಅದನ್ನು ಸ್ವತಃ ಬೇಯಿಸಿ ಊಟ ಮಾಡಬೇಕಿತ್ತು. ಇದರಿಂದ ಅವರಿಗೆ ತೊಂದರೆಯಾಗುತ್ತದೆಯೆಂದು ತಿಳಿದ ಹೆಗ್ಗಡೆಯವರು ಎಲ್ಲರಿಗೂ ಎರಡು ಹೊತ್ತು ಊಟದ ವ್ಯವಸ್ಥೆಯನ್ನು ಮಾಡಿಸಿದರು.

ಕಾರ್ತೀಕ ಮಾಸದ ಲಕ್ಷದೀಪೋತ್ಸವ ಕಾಲದಲ್ಲಿಯೂ, ಮೇಷ ಮಾಸದಲ್ಲಿ ನಡೆಯುತ್ತಿದ್ದ ವರ್ಷಾವಧಿ ಜಾತ್ರೆಯ ಸಮಯದಲ್ಲಿಯೂ ಬೇರೆಬೇರೆ ಊರುಗಳಿಂದ ಬ್ಯಾಂಡಿನವರು, ಮೇಳದವರು, ನಾಗಸ್ವರದ ಪಂಗಡದವರು ನೂರಾರು ಮಂದಿ ದೇವರ ಸೇವೆಗೆಂದು ಬಂದು ಉತ್ಸವದಲ್ಲಿ ಭಾಗವಹಿಸುತ್ತಿದ್ದರು. ಅವರೆಲ್ಲರಿಗೂ ಹೆಗ್ಗಡೆಯವರೇ ಉಚಿತವಾದ ಸಂಭಾವನೆಯನ್ನು ನೀಡುತ್ತಿದ್ದರು.

ಧರ್ಮ ಸಮ್ಮೇಳನ ಸಾಹಿತ್ಯ ಸಮ್ಮೇಳನಗಳ ಕಾಲದಲ್ಲಿ ಭಾಷಣಕ್ಕೆಂದು ಬರುತ್ತಿದ್ದ ವಿದ್ವಾಂಸರಿಗೆ ಬಿಡುಗೈಯಿಂದ ಗೌರವಧನ ಕೊಡುತ್ತಿದ್ದರು. ಸಂಗೀತಗಾರರಿಗೂ ಕಲಾವಿದರಿಗೂ ಧಾರಾಳವಾಗಿ ಹಣ ಕೊಡುತ್ತಿದ್ದರು.

ಧರ್ಮದೈವಗಳೂ ಅಣ್ಣಪ್ಪಸ್ವಾಮಿಯೂ ತಮ್ಮ ‘ನೇಮ’ವೆಂಬ ಉತ್ಸವದ ದರ್ಶನ ಕಾಲದಲ್ಲಿ ‘‘ಹೆಗ್ಗಡೇ, ದಾನಧರ್ಮ ಸರಿಯಾಗಿ ನಡೆಯುತ್ತದೋ?’’ ಎಂದು ಎಚ್ಚರಿಕೆಯನ್ನು ಕೊಡುವುದು ಇಲ್ಲಿ ಪರಂಪರೆಯ ರೂಢಿಯಾಗಿದೆ.

ಸಾರ್ವಜನಿಕ ಜೀವನ

ಹೆಗ್ಗಡೆಯವರು ಸಾರ್ವಜನಿಕ ಜೀವನದಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ೧೯೨೭ರಿಂದ ಸುಮಾರು ೧೫ ವರ್ಷಗಳ ಕಾಲ ಮದರಾಸು ಶಾಸನಸಭಾ ಸದಸ್ಯರಾಗಿದ್ದು, ಜನಹಿತಕಾರ್ಯಗಳನ್ನು ಸಾಧಿಸಿದರು.

೧೯೪೭ರಲ್ಲಿ ಕಾಸರಗೋಡಿನಲ್ಲಿ ತಿರುಮಲೆ ತಾತಾಚಾರ್ಯ ಶರ್ಮರ ಅಧ್ಯಕ್ಷತೆಯಲ್ಲಿ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ಜರುಗಿತು. ಅದರಲ್ಲಿ ಮಂಜಯ್ಯ ಹೆಗ್ಗಡೆಯವರು ಸ್ವಾಗತಾಧ್ಯಕ್ಷರಾಗಿ ಸಹಕರಿಸಿದರು.

೧೯೫೧ರಲ್ಲಿ ನೇತ್ರದಾನಿ ಡಾಕ್ಟರ್ ಮೋದಿಯವರನ್ನು ಧರ್ಮಸ್ಥಳಕ್ಕೆ ಕರೆಯಿಸಿ ಸುಮಾರು ಮೂರು ವಾರಗಳ ನೇತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿ, ನೂರಾರು ಜನರಿಗೆ ದೃಷ್ಟಿದಾನ ಮಾಡಿಸಿದರು.

೧೯೫೪ರಲ್ಲಿ ಉಚಿತ ಸಂಚಾರಿ ಆಸ್ಪತ್ರೆಯನ್ನು ಏರ್ಪಡಿಸಿದರು. ಎಂದರೆ, ಔಷಧಿಗಳನ್ನು ವಾಹನದಲ್ಲಿಟ್ಟುಕೊಂಡು ವೈದ್ಯರು ಹಳ್ಳಿಹಳ್ಳಿಗೆ ಹೋಗುವ ವ್ಯವಸ್ಥೆಯಾಯಿತು. ಧರ್ಮಸ್ಥಳದ ಆಸುಪಾಸಿನ ಹಳ್ಳಿಗಳಲ್ಲಿ ಬಡರೋಗಿಗಳ ಮನೆಬಾಗಿಲಿಗೆ ಧರ್ಮಾರ್ಥವಾಗಿ ವೈದ್ಯಕೀಯ ಸಹಾಯವು ದೊರಕುವಂತೆ ವ್ಯವಸ್ಥೆ ಮಾಡಿಸಿದರು.

ಶಿವಮೊಗ್ಗದ ಹೊಂಬುಜ ಮಠದ ಗುರುಗಳು ಮಂಜಯ್ಯ ಹೆಗ್ಗಡೆಯವರ ಪ್ರೇರಣೆಯಿಂದ ಆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದರು. ಅಲ್ಲಿಯ ಸ್ವಾಮೀಜಿಯವರು ಇವರ ಸಲಹೆಯಂತೆ ಶ್ರೀ ಪದ್ಮಾಂಬಾ ಹೈಸ್ಕೂಲ್, ವರ್ಧಮಾನ ವಿದ್ಯಾರ್ಥಿನಿಲಯ, ಕುಂದಕುಂದ ಬ್ರಹ್ಮಚರ್ಯಾಶ್ರಮ ಮೊದಲಾದವುಗಳನ್ನು ಸ್ಥಾಪಿಸಿದರು.

ಯೋಗೀಂದುದೇವ ವಿರಚಿತ ‘‘ಪರಮಾತ್ಮ ಪ್ರಕಾಶ’’ ಎಂಬ ಅಧ್ಯಾತ್ಮಗ್ರಂಥಕ್ಕೆ ಕನ್ನಡದಲ್ಲಿ ಅರ್ಥಾನುವಾದ ಬರೆಯಿಸಿ, ಮುದ್ರಣ ಮಾಡಿಸಿ, ಶ್ರೀಪಾಯ ಸಾಗರ ಮುನಿಗಳ ಸನ್ನಿಧಿಯಲ್ಲಿ ಅದರ ಸಾವಿರ ಪ್ರತಿಗಳನ್ನು ಶಾಸ್ತ್ರದಾನ ಮಾಡಿಸಿದರು.

ಬೈಲಂಗಡಿ, ಸಂಸೆ ಮೊದಲಾದ ಕಡೆಗಳಲ್ಲಿ ಜೈನ ಬಸದಿಗಳ ಜೀಣೋದ್ಧಾರ ಮಾಡಿಸಿದರು. ವಿಟ್ಲ, ಬೈಲಂಗಡಿ, ಮೂಡಬಿದರೆ, ಕಾರ್ಕಳ ಮೊದಲಾದ ಕಡೆಗಳಲ್ಲಿ ಬಸದಿಗಳಲ್ಲಿ ನಿತ್ಯ ನೈವೇದ್ಯ ನಡೆಯುವಂತೆ ವರ್ಷ ವರ್ಷವೂ ಅಕ್ಕಿಮುಡಿ ಕಳಿಸುವ ವ್ಯವಸ್ಥೆ ಮಾಡಿಸಿದರು.

ವೇಣೂರು, ಕಾರ್ಕಳ, ಶ್ರವಣಬೆಳಗೊಳಗಳಲ್ಲಿ ಶ್ರೀ ಗೋಮಟೇಶ್ವರ ಸ್ವಾಮಿಯ ಮಹಾಮಸ್ತಕಾಭಿಷೇಕ ಕಾಲದಲ್ಲಿ ಧರ್ಮಕಾರ್ಯಗಳನ್ನು ನಡೆಸಿದರು.

ಸಾರ್ವಜನಿಕ ಸನ್ಮಾನ

೧೯೪೩ ರಲ್ಲಿ ಇವರ ಆಡಳಿತದ ಇಪ್ಪತ್ತೆ ದು ವರ್ಷಗಳ ಸ್ಮರಣೆಗಾಗಿ ಜನರು ರಜತೋತ್ಸವ ಸಭೆಯನ್ನು ನೆರವೇರಿಸಿ ಹೆಗ್ಗಡೆಯವರನ್ನು ತುಂಬು ಹೃದಯದಿಂದ ಅಭಿನಂದಿಸಿದರು.

೧೯೫೦ನೇ ಇಸವಿಯಲ್ಲಿ ಮಂಜಯ್ಯ ಹೆಗ್ಗಡೆ ಯವರಿಗೆ ೬೦ ವರ್ಷ ತುಂಬಿದಾಗ ಅವರ ಅಭಿಮಾನಿಗಳಾದ ಹಿರಿಯರು ಷಷ್ಟಿಪೂರ್ತಿ ಉತ್ಸವವನ್ನು ಜರಗಿಸಬೇಕೆಂದು ನಿಶ್ಚಯಿಸಿದರು. ದೊಡ್ಡ ಸಂಭಾವನಾಗ್ರಂಥವೊಂದನ್ನು ಸಮರ್ಪಿಸಬೇಕೆಂದು ನಿರ್ಧರಿಸಿದರು.

ಅಖಿಲ ಕನ್ನಡ ನಾಡಿನ ಪ್ರಸಿದ್ಧ ಲೇಖಕರ ಐವತ್ತೊಂಬತ್ತು ಲೇಖನಗಳಿಂದ ಕೂಡಿದ ದೊಡ್ಡ ಲೇಖನ ಸಂಪುಟ ಸಿದ್ಧವಾಯಿತು. ಹೆಗ್ಗಡೆಯವರ ಗಂಭೀರ ವ್ಯಕ್ತಿತ್ವಕ್ಕೆ ಒಪ್ಪುವ ‘ಸಮರ್ಪಣೆ’ ಎಂಬ ಗ್ರಂಥವನ್ನು ಅಭಿನಂದನ ಸಭೆಯಲ್ಲಿ ಒಪ್ಪಿಸಲಾಯಿತು. ಇಂತಹ ಅಭಿನಂದನ ಸಭೆಯು ಮೂಡಬಿದರೆಯಲ್ಲೂ ನಡೆಯಿತು.

ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರು ಹೆಗ್ಗಡೆಯವರನ್ನು ದಸರಾಸಭೆಗೆ ಕರೆಯಿಸಿ ಸನ್ಮಾನಿಸಿದರು.

ಮಹಾನಡಾವಳಿ ಉತ್ಸವ

ಧರ್ಮಸ್ಥಳ ಮಂಜಯ್ಯ ಹೆಗ್ಗಡೆಯವರು ಆಡಳಿತವನ್ನು ವಹಿಸಿಕೊಂಡು ೩೨ ವರ್ಷಗಳು ಕಳೆದವು. ಪ್ರತಿಯೊಬ್ಬ ಹೆಗ್ಗಡೆಯವರೂ ತಮ್ಮ ಆಡಳಿತದ ಅಂತಿಮ ಹಂತದಲ್ಲಿ ದೇವರಿಗೂ ಧರ್ಮದೈವಗಳಿಗೂ ಮಹಾನಡಾವಳಿ ಎಂಬ ವಿಶೇಷ ಉತ್ಸವವನ್ನು ನಡೆಸುವ ಕ್ರಮವಿದೆ. ಹಾಗೆಯೇ ಮಂಜಯ್ಯ ಹೆಗ್ಗಡೆಯವರೂ ೧೯೫೧ನೇ ಇಸವಿ ಫೆಬ್ರವರಿ ತಿಂಗಳಲ್ಲಿ ಈ ಮಹಾನಡಾವಳಿಯನ್ನು ನಡೆಸುವ ನಿಶ್ಚಯ ಮಾಡಿದರು.

ಮಹಾನಡಾವಳಿ ಎಂದರೆ ಮಂಜುನಾಥ ದೇವರಿಗೂ ಚಂದ್ರನಾಥ ಸ್ವಾಮಿಗೂ ಎಂಟುದಿನಗಳ ತನಕ ನಡೆಯುವ ವಿಜೃಂಭಣೆಯ ಮಹೋತ್ಸವವಾಗಿದೆ. ಜಾತಿಮತ ಭೇದವಿಲ್ಲದೆ, ಮೇಲುಕೀಳು ಎಂದು ಎಣಿಸದೆ, ಮಹಾನಡಾವಳಿಯನ್ನು ನೋಡಲು ಬರುವ ಎಲ್ಲಾ ಜನರಿಗೂ ರಾತ್ರಿ ಹಗಲು ಊಟದ ವ್ಯವಸ್ಥೆಯಾಗಬೇಕು.

ಹೆಗ್ಗಡೆಯವರು ತಾವು ಮುಂದೆ ನಡೆಸಲಿರುವ ಮಹಾನಡಾವಳಿ ಮಹೋತ್ಸವ ಏನೊಂದೂ ಅಡ್ಡಿಆತಂಕವಿಲ್ಲದೆ ನಡೆಯಬೇಕೆಂದು ದೇವರಿಗೂ ಧರ್ಮ ದೇವತೆಗಳಿಗೂ ಪ್ರಾರ್ಥನೆ ಸಲ್ಲಿಸಿದರು. ಉತ್ಸವಕ್ಕೆ ಬೇಕಾದ  ಸಾಧನ ಸಾಮಗ್ರಿಗಳನ್ನೂ ಸಂಗ್ರಹಿಸಲು ಪ್ರಾರಂಭಿಸಿದರು. ಎಲ್ಲಾ ಕಡೆ ವಿಶಾಲವಾದ ಚಪ್ಪರವನ್ನು ಹಾಕಿಸಿದರು. ವಿಶೇಷವಾದ ದೊಡ್ಡ ಪಾಕಶಾಲೆಯನ್ನು ಏರ್ಪಡಿಸಿದರು.

ಶ್ರೀ ಕ್ಷೇತ್ರದ ಸುತ್ತುಮುತ್ತಲೂ ಎಲ್ಲಾ ಕಡೆಯೂ ಬಣ್ಣ ಬಣ್ಣದ ವಿದ್ಯುದ್ದೀಪಗಳ ಅಲಂಕಾರಗಳೂ, ಮಂಟಪಗಳೂ, ತೋರಣ ಪತಾಕೆಗಳೂ ಕಂಗೊಳಿಸುತ್ತಿದ್ದವು. ರಾತ್ರಿ ಹಗಲು ನೇತ್ರಾವತಿ ನದಿಯಿಂದ ಶುದ್ಧವಾದ ನೀರಿನ ಸರಬರಾಜು ನಡೆಯಿತು.

ಮಹಾನಡಾವಳಿ ನಡೆಯುವ ಹದಿನೈದು ದಿನಗಳ ಮೊದಲೇ ಜಿಲ್ಲೆಯ ಪ್ರಸಿದ್ಧ ಮಹನೀಯರನ್ನು ಬರಮಾಡಿಕೊಂಡು, ಬೇರೆಬೇರೆ ಜವಾಬ್ದಾರಿ ಕಾರ್ಯಗಳನ್ನು ನಡೆಸಿಕೊಟ್ಟು ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಂಡುದರಿಂದ, ಮಹಾಜನರ ಸಂಪೂರ್ಣ ಸಹಾಯ ಸಹಕಾರಗಳು ದೊರೆತವು.

ಕಲೆ ಕೈಗಾರಿಕೆಗಳ ವಸ್ತು ಪ್ರದರ್ಶನವನ್ನೂ ಕೃಷಿ ಪ್ರದರ್ಶನವನ್ನೂ ಏರ್ಪಾಡು ಮಾಡಿದರು. ಉತ್ಸವದ ಬಿಡುವೇಳೆಯಲ್ಲಿ ಸಂಗೀತ, ನರ್ತನ, ಹರಿಕಥೆ, ರಾತ್ರಿ ದಶಾವತಾರ ಯಕ್ಷಗಾನ ಬಯಲಾಟ ಮೊದಲಾದವುಗಳ ಏರ್ಪಾಡು ನಡೆಯಿತು. ಮಹಾನಡಾವಳಿಯ ವರ್ಷದಲ್ಲಿ ಧರ್ಮ ಸಮ್ಮೇಳನವೂ ಸಾಹಿತ್ಯ ಸಮ್ಮೇಳನವೂ ಮತ್ತಷ್ಟು ವೈಭವದಿಂದ ನಡೆದವು.

ಹಿರಿಯ-ಕಿರಿಯ, ಹೆಣ್ಣು-ಗಂಡು,ಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ, ಒಂದೇ ಸಮನೆ ಸಾವಿರಾರು ಜನರನ್ನು ಧರ್ಮಸ್ಥಳಕ್ಕೆ ಬರಮಾಡಿಸಿ, ಚಪ್ಪರದ ತಂಪಾದ ನೆರಳಲ್ಲಿ ಊಟ ಉಪಚಾರಗಳ ಆದರ-ಅತಿಥ್ಯದಿಂದ ಸಂತೋಷಗೊಳಿಸಿದ್ದು ಹೆಗ್ಗಡೆಯವರ ಮಹಾಕಾರ್ಯವಾಗಿದೆ.

ಸಾವಿರಾರು ಜನರು ಒಂದೆಡೆ ಕಲೆತರೂ, ಕಳವು, ಮೋಸ ಎಲ್ಲಿಯೂ ನಡೆಯಲಿಲ್ಲ. ಧರ್ಮಸ್ಥಳದ ಮೇಲಿದ್ದ ಭಯಭರಿತ ಭಕ್ತಿಯೇ ಜನರಿಗೆ ಶಿಸ್ತು ಸಂಯಮ ನಿಯಮಗಳನ್ನು ಬೋಧಿಸಿತು ಎಂದು ತಿಳಿಯಬಹುದು.

ನಾಗರಿಕ ಸೌಕರ್ಯಗಳಿಲ್ಲದ ಊರೊಂದರಲ್ಲಿ ಲಕ್ಷಾಂತರ ಜನರು ಉತ್ಸವಕ್ಕೆ ನೆರೆದಾಗ ನೂರು ಇನ್ನೂರು ಮಂದಿ ಪೋಲೀಸರಿಂದಾಗಲಿ, ಸ್ವಯಂಸೇವಕರಿಂದಾಗಲಿ, ನೌಕರರಿಂದಾಗಲಿ ಜನರನ್ನು ಹತೋಟಿಯಲ್ಲಿಡಲು ಅಸಾಧ್ಯ. ಜನರಲ್ಲಿದ್ದ ಸ್ವಯಂಪ್ರೇರಿತ ಶಿಸ್ತು ಸಂಯಮಗಳಿಂದಲೂ ಭಯ ಭಕ್ತಿಯಿಂದಲೂ ಇದು ಸಾಧ್ಯವಾಯಿತೆಂದು ಹೇಳಬಹುದು.

ಸಮಾಧಿ ಮರಣ

ಒಂದು ದಿನ ಸಂಜೆ ಮಂಜಯ್ಯ ಹೆಗ್ಗಡೆಯವರು ವಸಂತ ಮಹಲಿನಲ್ಲಿ ರಾಧಾಕೃಷ್ಣ ಚಿತ್ರವನ್ನು ಒಂದೆರಡು ಗಂಟೆಗಳ ತನಕ ತನ್ಮಯರಾಗಿ ಚಿತ್ರಿಸುತ್ತಾ ಇದ್ದರು. ದೇಹಕ್ಕೆ ತುಂಬಾ ಆಯಾಸವೆನಿಸಿದಾಗ ಅಲ್ಲಿಂದ ಇಳಿದುಕೊಂಡು ಬೀಡಿನ ಅಂಗಳಕ್ಕೆ ಬಂದರು. ಹಟದಿಂದ ನಡೆದು ಬೀಡಿನೊಳಗೆ ಪ್ರವೇಶಿಸುತ್ತಲೇ ಅವರಿಗೆ ತಲೆ ತಿರುಗಲಾರಂಭಿಸಿತು. ಆಗ ಆಯಾಸದಿಂದ ಕುಳಿತುಕೊಳ್ಳಲು ಪ್ರಯತ್ನಿಸಿ, ನೆಲದಲ್ಲಿಯೇ ಬಿದ್ದುಬಿಟ್ಟರು. ಹತ್ತಿರದಲ್ಲಿದ್ದ ಜನರು ಅವರನ್ನು ಎತ್ತಿಕೊಂಡು ಹೋಗಿ ಹಾಸಿಗೆಯಲ್ಲಿ ಮಲಗಿಸಿದರು.

ಹೆಗ್ಗಡೆಯವರಿಗೆ ತನ್ನ ಅಂತ್ಯಕಾಲವು ಸಮೀಪಿಸಿತೆಂಬ ಅರಿವಾಯಿತು. ಮಂಗಳೂರಿನಿಂದ ತನ್ನ ಮಗಳು ವಿಮಲಮ್ಮನನ್ನೂ ಮುಂದೆ ಪಟ್ಟವೇರಲಿರುವ ರತ್ನವರ್ಮರನ್ನೂ ಬಂಧುಮಿತ್ರರನ್ನೂ ಬರುವಂತೆ ಹೇಳಿ ಕಳುಹಿಸಿದರು.

ಮರುದಿನ ಎಲ್ಲರೂ ಬಂದು ಸೇರಿದರು. ರತ್ನವರ್ಮ ಹೆಗ್ಗಡೆಯವರನ್ನು ಹತ್ತಿರ ಕರೆದು, ಮುಂದಿನ ಹಲವು ರಹಸ್ಯ ವಿಚಾರಗಳನ್ನು ತಿಳಿಸಿದರು. ಎಲ್ಲರೂ ಅನ್ಯೋನ್ಯ ಪ್ರೀತಿಯಿಂದ ವಾತ್ಸಲ್ಯದಿಂದ ಇರಬೇಕೆಂದು ಹರಸಿದರು. ಕತ್ತಲಾಯಿತು. ಶ್ರೀ ಜಿನೇಂದ್ರ ದೇವರ ಕುರಿತಾದ ಭಕ್ತಾಮರ ಸ್ತೋತ್ರ ಪಠನ ನಡೆಯುತ್ತಾ ಇತ್ತು. ಚಂದ್ರನಾಥ ಸ್ವಾಮಿಯ ಮತ್ತು ಮಂಜುನಾಥ ದೇವರ ತೀರ್ಥಪ್ರಸಾದ ತರುವಂತೆ ಹೇಳಿದರು. ಅದನ್ನು ಭಕ್ತಿಯಿಂದ ಸೇವಿಸಿ ಕೈಜೋಡಿಸಿ ಮಲಗಿದರು. ಮಂಜಯ್ಯ ಹೆಗ್ಗಡೆಯವರು ತಮ್ಮ ೬೬ನೇ ವರ್ಷದಲ್ಲಿ ಅಂದರೆ ೧೯೫೫ ರ ಆಗಸ್ಟ್ ಮೂವತ್ತೊಂದರಂದು ದೈವಾಧೀನರಾದರು.

‘‘ಎಲ್ಲಾ ಮಾನವರೂ ಸರಿಸಮಾನರು. ಎಲ್ಲಾ ಮತಧರ್ಮಗಳೂ ದೇವರೆಡೆಗೆ ಹೋಗುವ ದಾರಿಗಳು. ಎಲ್ಲಾ ಜೀವಿಗಳಿಗೂ ಹಿತವನ್ನು ಬಯಸಿ ದಾನ ಧರ್ಮ ಪರೋಪಕಾರ ಮಾಡುವುದೇ ಜೀವನದ ಧ್ಯೇಯವಾಗಿರ ಬೇಕು’’ ಎಂಬ ನುಡಿಯಂತೆ ನಡೆದು ತೋರಿಸಿ, ಕೀರ್ತಿ ಶರೀರದಿಂದ ಬಾಳಿ ಬೆಳಗಿದವರು ಧರ್ಮಸ್ಥಳ ಮಂಜಯ್ಯ ಹೆಗ್ಗಡೆಯವರು.