ಮುಂಜಾವಿನ ಮಂಜಿನ ಸರಿ
ಇಳೆಗಿಳಿದಿತ್ತು,
ಭೂವ್ಯೋಮದ ಅಂತರವನು
ಅಳಿಸುತಲಿತ್ತು.
ಸುರಲೋಕದ ಅಮೃತ ರಸ
ಬುವಿಜಡತೆಯನೆಲ್ಲ
ತೊಳೆ ತೊಳೆಯುತ ಕಣ್ ಬಿಡಿಸಲು
ಅವತರಿಸಿತ್ತೋ,
ಮೇಣ್ ಗಗನವೆ ಮಂಜಾಗುತ
ಕುಸಿಯುತ ಬಿತ್ತೋ
ಎಂಬಂತಿದೆ ಈ ಮಾಗಿಯ ಈ ಮಂಜಿನ ಆಟ
ಸುರಮಾಂತ್ರಿಕ ಸೃಜಿಸಿರುವೀ ಕಣ್‌ಕಟ್ಟಿನ ಮಾಟ !

ಮುಂದೆಂಬುವ ಹಿಂದೆಂಬುವ
ಅಂತರವಳಿಸಿತ್ತು,
ತಿರೆವೆಣ್ಣಿಗೆ ತರುನಿವಹಕೆ
ಬಿಳಿತೆರೆಯಿಳಿಸಿತ್ತು.
ಹೊಸಬಾಳಿನ, ಹೊಸ ಮುಗುಳಿನ
ಹಳೆ ಕೊಳೆಯನು ತೊಳೆದು,
ಚೆಲುವಾಗಿಸಿ ಕಣ್ ಬಿಡಿಸಲು
ಗಗನಾಮೃತಬಿಂದು
ಇಳೆಗಿಳಿಯುತ ಮರಗಿಡಗಳ
ಕರತಲದಲಿ ನಿಂದು

ತರುನಾರಿಯ ಕರತಲದಾ
ಮಣಿಸೇಸೆಗಳಂತೆ
ತೊಟ್ಟಿಕ್ಕಿದೆ ತಿರೆವೆಣ್ಣಿಗೆ
ಸಂಸೇಚನೆಯಂತೆ.
ನವಉದಯಕೆ ವ್ರತಿಯಾಗಿಹ
ಈ ಸೃಷ್ಟಿಯ ತಪಕೆ,
ಮೈಗಾವಲ ತೆರೆಯಾಗಿದೆ
ಈ ಮಂಜಿನ ಹೊದಿಕೆ,
ಎಂಬಂತಿದೆ ಭುವನಾವೃತ ಮುಂಜಾವಿನ ತುಹಿನ
ಅದರೊಳಗಡೆ ನಡೆಯುತಲಿದೆ ನವಸೃಷ್ಟಿಯ ಧ್ಯಾನ !

ಮಾಯಾವೃತ ಜಗಜೀವರ
ಭವ್ಯಾತ್ಮಗಳಂತೆ,
ಎಲ್ಲೆಲ್ಲಿಯು ಬೆಳಬೆಳಗುವ
ಸಾಲ್‌ಸೊಡರಿನ ಸಂತೆ
ಹಿರಿಮಂಜಿನ ಆವರಣದಿ
ತೇಲಾಡುವ ತೆರದಿ,
ಶೋಭಿಸುತಿವೆ ದಿವಕೇರುವ
ಅಮರಾತ್ಮಗಳಂತೆ !
ನೀರವವಿದೆ ತಣ್‌ಶಾಂತಿಯ
ದನಿಗರ್ಭಿತಭುವನ
ಸುರಸುಂದರ ಸುಮಸ್ವಪ್ನದಿ
ಕವಿಶಿಶುವಿನ ನಯನ
ತೇಲಾಡಿದೆ ಸೌಂದರ್ಯದ
ಸುರಸ್ತನ್ಯವ ಹೀರಿ
ಆನಂದವೆ ತಾನಾಗಿದೆ
ಆನಂದವ ಹೀರಿ !