ಜಾತಿ ಪ್ರಪಂಚದ ಆಚೆಗಿನ ತಳಜಾತಿಗಳ ಸಾಂಸ್ಕೃತಿಕ ಜಗತ್ತು

ಭಾರತೀಯ ಸಮಾಜವನ್ನು ವರ್ಣಾಶ್ರಮ ಧರ್ಮದ ‘ಜಾತಿ’ ಮೇಲೆ ನೋಡುವಂತೆ ಮಾಡಿದ್ದು ದುರದುಷ್ಟಕರ. ಈ ಮುಖಾಂತರ ಜಾತಿಯ ಮೇಲೆ ಆಧಾರವಾದ ಈ ಸಮಾಜದಲ್ಲಿ ಮೇಲು ಜಾತಿಗಳು ಪ್ರತಿಷ್ಠಿತ ಜನಾಂಗಗಳಾದರೆ, ಕೆಳಜಾತಿಗಳು ಅಪ್ರತಿಷ್ಠರಾಗುತ್ತಾರೆ. ಈ ಸಾಂಸ್ಕೃತಿಕ ದೃಷ್ಟಿಕೋನಗಳಿಂದ ಹೊರಟರೂ ಕೆಳಜಾತಿಗಳು ಚರಿತ್ರೆಹೀನರೂ, ಅಸಂಸ್ಕೃತಿಯ ವರ್ಗವಾಗುತ್ತಾರೆ. ಮೇಲು ಜಾತಿಯ ಜನಗಳು ಸುಸಂಸ್ಕೃತರು ಮತ್ತು ಚರಿತ್ರಾರ್ಹರು ಆಗುತ್ತಾರೆ. ಈ ಬಗೆಯ ದೃಷ್ಟಿಕೋನವು ಕೆಳಜಾತಿಗಳನ್ನು ಬೌದ್ಧಿಕವಾಗಿ ನಿರ್ವೀರ್ಯರು ಎನ್ನುವಂತೆಯೂ ಜೊತೆಗೆ ಸಾಂಸ್ಕೃತಿಕವಾಗಿ ಗೈರುಹಾಜರಾತಿಗೆ ಒಳಗಾದವರೆಂದೇ ನಿರೂಪಿಸುತ್ತದೆ. ಆದ್ದರಿಂದ ಈ ರೀತಿಯ ಜಾತಿ ಪ್ರಣೀತ ವೈಚಾರಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನಗಳಿಂದ ಭಾರತೀಯ ಜಾತಿ ಸಮಾಜವನ್ನು ನೋಡಿದರೆ ಕೆಳಜಾತಿಗಳಿಗೆ ಚರಿತ್ರೆಯೇ ಇಲ್ಲದಂತಾಗುತ್ತದೆ. ವಸಾಹತುಶಾಹಿ ಕೂಡ ಕೆಳಜಾತಿಗಳಿಗೆ ಈ ರೀತಿಯ ಸಾಂಸ್ಕೃತಿಕ ತಿರಸ್ಕಾರಕ್ಕೆ ಈಡುಮಾಡಿತು. ಹಾಗೂ ಬ್ರಾಹ್ಮಣೀಯ ಮೌಲ್ಯ ಮತ್ತು ಪುರಾಣ ಜಗತ್ತನ್ನು ಮಾನ್ಯಗೊಳಿಸಿ ಕೆಳಜಾತಿಗಳನ್ನು ಸಾಂಸ್ಕೃತಿಕವಾಗಿ ನಿರ್ಲಕ್ಷಿಸಲಾಯಿತು. ಈ ಮೂಲಕ ‘ಜಾತಿ’ ಸಂಸ್ಕೃತಿಯನ್ನು ಸಾಮಾಜಿಕವಾಗಿ ಹೇರಲಾಯಿತು.

ಆಧುನಿಕ ವಿಚಾರವಂತರೂ ಸಹ ಈ ಬಗೆಯ ವಿಚಾರಗಳಿಂದಲೇ ಕೆಳಜಾತಿಗಳನ್ನು ಕಂಡಿದ್ದು ದುರಂತ. ಆದರೆ ಕೆಳಜಾತಿಗಳಿಗೆ ತಮ್ಮದೇ ಆದ ಸ್ವಾಭಿಮಾನದ ಸಾಂಸ್ಕೃತಿಕ ಜಗತ್ತು ಇಲ್ಲವೆ; ಕೇವಲ ಮೇಲು ಜಾತಿಗಳ ವಿರುದ್ಧ ಸಂಘರ್ಷ ಮತ್ತು ಪ್ರತಿಭಟನೆಗಳೇ ಇವರ ಸಾಂಸ್ಕೃತಿಕತೆಯೇ-ಹೀಗೆಲ್ಲ ಕೇಳಿಕೊಂಡು ನಿರಾಶರಾಗುವ ಅಗತ್ಯವಿಲ್ಲ.

ಮಂಟೇಸ್ವಾಮಿ, ಮಾದೇಶ್ವರ, ಬೇವಿನಟ್ಟಿ ಕಾಳಮ್ಮ, ಸಿರಿಕಾವ್ಯ, ಮೈಲಾರಲಿಂಗ-ಹೀಗೆ ಪ್ರತಿ ಜಾತಿ ಮತ್ತು ಜನಾಂಗಗಳಿಗೂ ತಮ್ಮದೇ ದೈವ ಹಾಗೂ ಆಧ್ಯಾತ್ಮಿಕತೆಯ ನೆಲೆಗಳಿವೆ. ಬಹಳ ಮುಖ್ಯವಾಗಿ ಜಾತಿ ಸಮಾಜವೆಲ್ಲ ಸಂಸ್ಕೃತೀಕರಣಕ್ಕೆ ಒಳಗಾಗಿ ಬ್ರಾಹ್ಮಣರ ಕಾಲು ತೊಳೆದು ಅವರ ಅಧೀನವಾಗಿದೆ ಎನ್ನುವ ಆಧುನಿಕ ಸಮಾಜ ಶಾಸ್ತ್ರಜ್ಞರು ಕೂಡ ದಿಗಿಲು ಪಡುವಂತೆ ಮೌಖಿಕ ಪರಂಪರೆಗಳು ಇಂಥ ಸಾಂಸ್ಕೃತೀಕರಣದ ವಿರುದ್ಧ ಸೆಣಸಾಡಿವೆ.

ಆಧುನಿಕ ಚಳವಳಿಗಳು ‘ಜಾತಿ ವಿನಾಶ’ದ ಕಲ್ಪನೆಯನ್ನು ತೀರಾ ವೈಚಾರಿಕವಾಗಿರಿಸಿದವು. ಕೇವಲ ವಿಗ್ರಹ ಭಂಜನೆ, ಮೇಲ್ಜಾತಿಗಳ ಪುರಾಣಗಳ ನಿರಾಕರಣೆ-ಹೀಗೆ ‘ಜಾತಿ ವಿನಾಶ’ದ ಚಳವಳಿ ಸೀಮಿತಗೊಂಡಿತು. ಇದಕ್ಕಾಗಿ ಆಧುನಿಕ ಹೋರಾಟಗಾರರು ಅವಲಂಬಿಸಿದ್ದು, ಯುರೋಪ್‌ ಮಾರ್ಕ್ಸ್‌ವಾದ, ಮಾನವತಾವಾದ ಹಾಗೂ ವೈಚಾರಿಕತೆಯನ್ನು ಆದರೆ ಇಂತಹ ವೈಚಾರಿಕತೆ ಸಾಮಾಜಿಕ ಹೋರಾಟವನ್ನು ಕಟ್ಟಿದರೂ, ಪ್ರತಿಯಾಗಿ ಸಾಂಸ್ಕೃತಿಕವಾಗಿ ಏನನ್ನೂ ರೂಪಿಸಲಿಲ್ಲ. ಹೀಗಾಗಿ ದೇವರು-ಧರ್ಮ ಹಾಗೂ ಧಾರ್ಮಿಕತೆಯ ಪ್ರಶ್ನೆಯನ್ನು ಕೇವಲ ನಾಸ್ತಿಕ ಮತ್ತು ಆಸ್ತಿಕ ನೆಲೆಯಲ್ಲಿ ಗ್ರಹಿಸಿ-ಇಡೀ ಚಳುವಳಿಯನ್ನು ಆಧ್ಯಾತ್ಮಿಕವಾಗಿ ಸಂಘಟಿಸಲಿಲ್ಲ. ಆದರೆ ಆಧುನಿಕ ಚಳವಳಿಗಾರರು ಸಂಘಟಿಸದೆ ಇರುವ ಆಧ್ಯಾತ್ಮಿಕ ಜಗತ್ತನ್ನು ಕೆಳಜಾತಿಗಳ ಅನಕ್ಷರಸ್ಥ ಜಗತ್ತು ಸಂಘಟಿಸಿದೆ. ಜಾತ್ಯಾತೀತ ಹೋರಾಟವು ಆಧುನಿಕವಾಗಿ ನಿರೂಪಿಸಿದ ‘ಪ್ರತಿ ಸಂಸ್ಕೃತಿ’ಯ ರಚನೆಗಳನ್ನು ಅಗೋಚರವಾಗಿ ಕೆಳಜಾತಿಗಳು ಸಂಘಟಿಸಿವೆ.

ಜಾತಿ ವಿನಾಶದ ಕಲ್ಪನೆ ಕೇವಲ ರೋಮ್ಯಾಂಟಿಕ್‌ ವೈಚಾರಿಕತೆಯ ಮೇಲೆ ನಿಲ್ಲದೆ ನಿಜವಾಗಿಯೂ ಜಾತಿ ಸಮರ್ಥನೆ ಮಾಡುವ ಮೌಲ್ಯಗಳನ್ನು ಕೆಡವಿ-ಅದು ಯಾವುದನ್ನು ಅಸಹ್ಯ ಹಾಗೂ ಅಪಮೌಲ್ಯವೆನ್ನುತ್ತವೋ ಅಂತಹ ಕ್ಷುದ್ರಜಗತ್ತಿನ ಮೂಲಕ ಸ್ವಾಭಿಮಾನ ಮತ್ತು ಸಮಾನತೆಯನ್ನು ಕೆಳಜಾತಿಗಳು ಸಂಘಟಿಸಿವೆ.

ಮಂಟೇಸ್ವಾಮಿ ಈ ಬಗೆಯಲ್ಲಿ ಉಗ್ರವಾದ ಸಾಮಾಜಿಕ ಹಾಗೂ ಆಧ್ಯಾತ್ಮಿಕ ದಂಗೆಕೋರತನದ ದೈತ್ಯ ಪ್ರತಿಮೆಯಾಗಿದ್ದಾನೆ. ‘ಲಿಂಗ’ವು ಜಾತಿಸೂಚಕ ಪ್ರತಿಮೆಯಾದಾಗ ಅಂತಹ ಲಿಂಗವನ್ನು ಹೆಂಡದ ಗಡಿಗೆಯಲ್ಲಿ ಹಾಕುವುದು, ‘ಕೊತ್ತಿಗೆ ಲಿಂಗ, ನಾಯಿಗೆ ಲಿಂಗ’- ಎಂದು ಕಲ್ಯಾಣದ ಪ್ರತಿಷ್ಠಿತರ ಲಿಂಗವನ್ನು ಅಪಮೌಲ್ಯೀಕರಿಸುತ್ತಾನೆ. ಹೀಗಾಗಿ ಜಾತಿಸೂಚಕ ಪ್ರತಿಮೆಗಳ ಶ್ರೇಷ್ಠತೆಯನ್ನು ಒಡೆದು- ಇದಕ್ಕೆ ಪ್ರತಿಯಾಗಿ ತಿಪ್ಪೆಯ ಮೇಲೆ ಜ್ಯೋತಿ ಕಾಣಿಸಿಕೊಳ್ಳುವುದು. ಬಸವಣ್ಣ ಮತ್ತು ನೀಲಮ್ಮನ ತಲೆಯ ಮ್ಯಾಲೆ ಹೆಂಡ ಮತ್ತು ಸತ್ತೆಮ್ಮೆ ಕರುವಿನ ಮಾಂಸವನ್ನು ಪೊಟ್ಟಣ ಕಟ್ಟಿ ಹೊರಿಸುತ್ತಾನೆ. ಜೊತೆಗೆ ಜಾತಿ ಸಮಾಜದ ಲಿಂಗವೆಂಬ ಸ್ಥಗಿತರೂಪಕವನ್ನು ಒಡೆದು ‘ಆತ್ಮಲಿಂಗ’ವನ್ನಾಗಿಸುತ್ತಾನೆ. ಇದರ ಬೆನ್ನಲ್ಲೇ ಈ ಮಂಟೇಸ್ವಾಮಿ ಅನೇಕ ಸಾಂಸ್ಕೃತಿಕ ಧಾರೆಗಳ ಬಗೆಗೂ ಸುಳುಹು ನೀಡುತ್ತಿರುತ್ತಾನೆ. ಕಾರಣ ಕೆಳಜಾತಿಗಳೆಲ್ಲ ‘ಆತ್ಮಲಿಂಗ’ ಪರಂಪರೆಗೆ ಸೇರಿದವು-ಎಂಬ ಚರಿತ್ರೆಯ ಕಥನವನ್ನು ಪ್ರಸ್ತಾಪಿಸುತ್ತಾನೆ. ಕಾಲಾನುಕ್ರಮದ ಚರಿತ್ರೆಗೆ ಒಗ್ಗಿದ ಮನಸ್ಸುಗಳಿಗೆ ಈ ಬಗೆಯ ಚಾರಿತ್ರಿಕ ದರ್ಶನ ಸಾಧ್ಯವಾಗುವುದಿಲ್ಲ. ಆದರೆ ಮಂಟೇಸ್ವಾಮಿ ಪರಂಪರೆಯ ನೀಲಗಾರರು ಈ ಬಗೆಯ ಚರಿತ್ರೆಯ ನಿರೂಪಣಾ ಕ್ರಮವನ್ನೇ ನಿರಾಕರಿಸುತ್ತಾರೆ. ಅವರ ಪ್ರಕಾರ ಮಂಟೇಸ್ವಾಮಿ ಕೀವು, ರಕ್ತಗಳಿಂದ ಅಸಹ್ಯವಾಗಿದ್ದರೂ, ಈತ ಮಡಿ-ಮೈಲಿಗೆಯ ಕಲ್ಯಾಣವನ್ನು ಹಾಗೂ ಲಿಂಗಾಯಿತರ ಲಿಂಗವನ್ನು ಅದರ ಪ್ರತಿಷ್ಠೆಗಳನ್ನು ಒಡೆದು ಹಾಕುತ್ತಾನೆ. ಗುರುಗೆ ಗುರುವಾಗಿ-ಅಹಂಕಾರದಿಂದ ತುಂಬಿದ ಕಲ್ಯಾಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಇದರ ಮೂಲಕ ‘ಗುರು’ ಎಂಬುದು ಒಂದು ಸ್ಥಗಿತಕೊಂಡ ಹೆಜಮೊನಿಯಾದಾಗ ಅಂತಹ ಹೆಜಮೊನಿಯ ವ್ಯಕ್ತಿತ್ವವನ್ನೇ ಮಂಟೇಸ್ವಾಮಿ ಗೇಲಿಮಾಡುತ್ತಾನೆ. ಕಾಲವೂ ಕೇಡುಗಳಿಂದ ತುಂಬಿ, ಅನಿಷ್ಠಗಳು ಸಾಂಸ್ಥೀಕರಣಗೊಂಡು ಸಮಾಜವನ್ನು ಆವರಿಸಿದಾಗ ನೀಲಗಾರರು ಮಂಟೇಸ್ವಾಮಿಯ ಮೂಲಕ ಈ ಕಾಲವನ್ನೇ ಒಡೆದು ಕಟ್ಟುತ್ತಾರೆ.

‘ಕಾಲತೀತ’ವೂ ಅಲ್ಲದ ಕಾಲದ ಹಂಗೂ ಇಲ್ಲದ ರೂಪಕ ಜಗತ್ತುಗಳ ಮೂಲಕ ಮಂಟೇಸ್ವಾಮಿಯನ್ನು ಕಾಣುವ ನೀಲಗಾರರನ್ನು ‘ಚರಿತ್ರೆ’ಯು ಅರಗಿಸಿಕೊಳ್ಳಲಿಕ್ಕೆ ಆಗದು. ಸಾಮಾಜಿಕವಾಗಿ ಕೆಳಜಾತಿಗಳಿಂದ ಬಂದ ಇವರು ತಮ್ಮ ಹಾಡು, ಆಚರಣೆ ಹಾಗೂ ನಂಬಿಕೆಗಳ ಮುಖಾಂತರ ಜಾತಿಯನ್ನು ಮೀರಿದ ‘ಸಾಮಾಜಿಕ ಚರಿತ್ರೆ’ಯನ್ನು ಕಟ್ಟುತ್ತಿರುತ್ತಾರೆ. ಹೀಗಾಗಿ ‘ಆಧುನಿಕ ಚರಿತ್ರೆ’ಯ ಮಿತಿಗಳನ್ನು ಕಥನ ಜಗತ್ತು ಒಡೆದು ಹಾಕುತ್ತದೆ.

ಮಂಟೇದಯ್ಯನ ಪುರಾಣ, ನಂಬಿಕೆ, ಜಗತ್ತು ಇವೆಲ್ಲವುಗಳು ಅಂಬೇಡ್ಕರ್ ಪರಿಭಾವಿಸಿದ್ದ ಸಂಸ್ಕೃತೀಕರಣದ ಆಚೆಗಿನ ಸಾಂಸ್ಕೃತಿಕೆಯ ಪ್ರತಿಕಗಳೆಂದೇ ಅರ್ಥಮಾಡಿಕೊಳ್ಳಬೇಕಾಗಿದೆ. ಸಂಸ್ಕೃತೀಕರಣವು ಭಾರತೀಯ ಸಮಾಜದಲ್ಲಿ ತಳಜಾತಿಗಳನ್ನು ಬೌದ್ಧಿಕವಾಗಿ ದಿವಾಳಿಗರನ್ನಾಗಿಸಿದೆ ಹಾಗೆಯೇ ಈ ಪ್ರಕ್ರಿಯೆಯು ಶೋಷಿತರ ಸಾಂಸ್ಕೃತಿಕ ಅಸ್ಮಿತೆಗಳನ್ನು ಅಳಿಸಿಹಾಕುವಲ್ಲಿ ಯಶಸ್ವಿಯೂ ಆಗಿದೆ. ಆಧುನಿಕರಾದ ದಲಿತರು ತಾವು ಸಂಸ್ಕೃತೀಕರಣಕ್ಕೆ ಒಳಗಾಗುವುದೇ ತಮ್ಮ ಅನನ್ಯತೆಯ ರಾಜಕಾರಣದ ಪ್ರಶ್ನೆಗಳನ್ನು ಗೌಣಗೊಳಿಸಿದಂತೆ. ಆದರೆ ಈ ಮಂಟೇಸ್ವಾಮಿ ಕಾವ್ಯದಲ್ಲಿನ ಕಲ್ಯಾಣಪಟ್ಟಣದ ಈ ಸಾಲುಗಳು ಜಾತಿ ಸಮಾಜದ ಅಧಿಕಾರ ಹಾಗೂ ಮಡಿ-ಮೈಲಿಗೆಗಳ ಪ್ರತೀಕಗಳನ್ನು ಮಂಟೇಸ್ವಾಮಿ ಕೇವಲ ಒಡೆದು ಹಾಕಿಲ್ಲ; ಪ್ರತಿಯಾಗಿ ಅವುಗಳ ಜಾಗದಲ್ಲಿ ಮತ್ತೊಂದನ್ನೂ ಕಟ್ಟುತ್ತಾನೆ. ಅಂಬೇಡ್ಕರ ಹೋರಾಟದ ಮಾದರಿಗೂ ಮಂಟೇಸ್ವಾಮಿ ಜಾತಿ ವಿನಾಶದ ಭಿನ್ನವಾದ ವ್ಯತ್ಯಾಸವಿದೆ. ಅಂಬೇಡ್ಕರರಿಗೆ ‘ಸಂಸ್ಕೃತಿ’ಯ ಬಗ್ಗೆ ಗುಮಾನಿ ಹಾಗೂ ಭಯ ಮಂಟೇಸ್ವಾಮಿ ಯಾವುದು ಜಾತಿ ಸೂಚಕವು ಅದನ್ನು ಭಂಜಿಸುವುದಷ್ಟೇ ಸೀಮಿತವಾಗದೆ ಅದಕ್ಕೆ ಪ್ರತಿಯಾಗಿಯೇ ಇನ್ನೊಂದು ಕಟ್ಟಿ ಅದನ್ನೇ ದೈವ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿಸುತ್ತಾನೆ. ಸಾಂಸ್ಕೃತಿಕವಾಗಿ ಚಳವಳಿಯನ್ನು ಕಟ್ಟಿದ ಕೆಳಜಾತಿಗಳ ಚರಿತ್ರೆಯನ್ನು ವೈಚಾರಿಕರಾದ ನಾವು ಅರ್ಥಮಾಡಿಕೊಳ್ಳಬೇಕಾಗಿರುವುದು ಸಂಸ್ಕೃತಿಯನ್ನು ನಿರಾಕರಿಸುವ ನೆಲೆಯಲ್ಲಿ ಅಲ್ಲ. ಬದಲಾಗಿ ಸಂಸ್ಕೃತಿ ನಿರ್ಮಾಣ ಪ್ರಕ್ರಿಯೆಯಾಗಿ ಗ್ರಹಿಸಬೇಕಾಗುತ್ತದೆ.

ಯಾವ ಜಾತಿ ಹೆಜಮೊನಿಯು ನಿರ್ಮಿಸಿದ ನಿರ್ದಿಷ್ಟ ಪ್ರತಿಮೆಗಳು ಕೆಳಜಾತಿಗಳನ್ನು ನಿರ್ಬಂಧಿಸಲಾರವು ಎಂಬುದನ್ನು ನೀಲಗಾರರ ಕಾವ್ಯ ಹೇಳುತ್ತದೆ. ಬಡವರ ಹೋರಾಟವು ಕೇವಲ ಭೌತಿಕ ವಸ್ತುಗಳಾದ ಅನ್ನ, ನೀರು-ಸೂರಿಗಾಗಿ ಅಲ್ಲ ಇದನ್ನು ಮೀರಿದ ‘ಸ್ವಾಭಿಮಾನ’ದ ಜಗತ್ತನ್ನೂ ಕಾಣುವ ಒಳತುಡಿತವನ್ನ ಒಳಗೊಂಡಿರುತ್ತದೆ. ಹೀಗಾಗಿ ಮಾರ್ಕ್ಸ್‌ವಾದದ ಆರ್ಥಿಕತೆಯ ವಿಶ್ಯೇಷಣಾ ಮಾರ್ಗವು ಹೀಗೆ ಭೌತಿಕ ಹಕ್ಕುಗಳಿಗಾಗಿ ಹೋರಾಟವನ್ನು ಸೀಮಿತಗೊಳಿಸುತ್ತದೆ. ಹಾಗೆಯೇ ದಲಿತ ಸಂಘರ್ಷ ಸಮಿತಿಯ ಇತ್ತೀಚಿನ ಕೂಗುಗಳು ಸಹ ಹೀಗೆಯೇ ಇವೆ. ಆದರೆ ಅಂಬೇಡ್ಕರ್ ರವರು ಬುದ್ಧನತ್ತ ನಡೆವುದು ದಲಿತರ ಸ್ವಾಭಿಮಾನಕ್ಕೆ ಇರುವ ಆಧ್ಯಾತ್ಮ ವ್ಯಕ್ತಿತ್ವ ಸಂಪನ್ನತೆಗಾಗಿ ಎಂದೇ ಸಾರುತ್ತದೆ.

ಆಧುನಿಕವಾಗಿ ಜಾತಿವಿರುದ್ಧದ ಹೋರಾಟವನ್ನು ಸಂಘಟಿಸಿದ ಚಳವಳಿಗಳಿಗೆ ಜಾತಿವಿನಾಶದ ಮಾದರಿಗಳನ್ನು ಪರಂಪರೆಯಿಂದ ಹೆಕ್ಕಿ ತೆಗೆಯಬೇಕಾಗಿದೆ. ಯಾಕೆಂದರೇ ಕೆಳಜಾತಿಗಳನ್ನು ಈ ಚಳವಳಿಗಳು ಡಿ.ಆರ್.ನಾಗರಾಜ್‌ ಅವರು ಹೇಳುವಂತೆ ‘ಅಪಸಂಸ್ಕೃತೀಕರಣಕ್ಕೆ’ ಈಡು ಮಾಡುತ್ತವೆ. ಇಂಥ ಅಪಸಂಸ್ಕೃತೀಕರಣದಿಂದಾಗಿ ಸಂಸ್ಕೃತಿಯ ಪಾಲುದಾರಿಕೆಯಲ್ಲಿ ಕೆಳಜಾತಿಗಳ ಪಾತ್ರವನ್ನು ಇಲ್ಲವಾಗಿಸಿದಂತಾಗುತ್ತದೆ.

ಜಾತಿ ವಿನಾಶದ ಹೋರಾಟದ ತಾತ್ವಿಕತೆಯು ಈ ಮಂಟೇಸ್ವಾಮಿ ಪರಂಪರೆಗಳ ಒಡನಾಟದ ಸ್ಪರ್ಶವಿಲ್ಲದೆ ಹೋದರೆ, ಪರೋಕ್ಷವಾಗಿ ಈ ಹೋರಾಟಗಳು ಕೂಡ ಕೆಳಜಾತಿಗಳನ್ನು ಸಾಂಸ್ಕೃತಿಕವಾಗಿ ನಿರ್ವೀರ್ಯರನ್ನಾಗಿಸುತ್ತದೆ ಹಾಗೂ ಈ ನಿರ್ವೀಯತೆಯು ಜಾತಿ ಹೆಜಮೊನಿಯ ಸಾಂಸ್ಕೃತಿಕ ರಚನೆಗಳನ್ನು ತಡೆಯಲು ಸಾಧ್ಯವಾಗುವುದೇ ಇಲ್ಲ ಎನ್ನುವಂತೆ ಮಾಡಿಬಿಡುತ್ತದೆ.

ಮಂಟೇಸ್ವಾಮಿ ಜಾತಿ ವ್ಯವಸ್ಥೆಯಲ್ಲಿನ ಪ್ರಮಾಣಗಳನ್ನು ನಿರ್ನಾಮ ಮಾಡುತ್ತಾನೆ. ವ್ಯವಸ್ಥೆಯನ್ನು ಸ್ಥಿರೀಕರಿಸುವ ಈ ಪ್ರಮಾಣಗಳನ್ನು ನಿರಚನಗೊಳಿಸದೆ ಹೋದರೆ, ‘ಜಾತಿ’ ನಾಶವಾಗುವುದಾದರೂ ಹೇಗೆ? ಆದ್ದರಿಂದ ಮಂಟೇಸ್ವಾಮಿ ಜಾತಿ ಸೂಚಕಗಳನ್ನು-ಜಾತಿಸೂಚಕಗಳಿಂದಲೇ ಒಡೆದು ಹಾಕುತ್ತಾನೆ. ಹಾಗೆಯೇ ತೀರಾ ಕೆಳಗಿರುವ ಜಾತಿಗಳಿಗೆ ಅತ್ಯುನ್ನತವಾದ ಸ್ಥಾನವನ್ನು ನೀಡುವುದರ ಜೊತೆಗೆ ಅವರನ್ನೇ ನಿಜಮನುಷ್ಯರನ್ನಾಗಿಸುತ್ತಲೇ ಸಾಮಾಜಿಕವಾದ ‘ಜಾತಿ ವಾಸ್ತವತೆ’ಯನ್ನು ಮೀರಿದ ಸ್ವತಂತ್ರ ವ್ಯಕ್ತಿತ್ವವನ್ನು ಕಲ್ಪಿಸಿಕೊಡುತ್ತಾನೆ. ಕೆಳಜಾತಿಗಳ ಘನತೆ ಹಾಗೂ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿದ ಈ ಪರಂಪರೆ ಸ್ವಾಭಿಮಾನದ ಪ್ರತೀಕ ಹಾಗೂ ಹೊಸ ಸಾಮಾಜಿಕತೆಯ ಸಂಕಥನವೂ ಆಗಿದೆ.

ಕಲ್ಯಾಣದಲ್ಲಿ ತಾವೇ ಲಿಂಗವಂತರು ಎಂದು ಕೇವಲ ಒಣಾಚಾರಿಗಳಾಗಿದ್ದ ಡಾಂಭಿಕರನ್ನು ಲೇವಡಿ ಮಾಡುತ್ತಲೇ, ಅಂಥವರ ಲಿಂಗಗಳನ್ನು ಮಾಯ ಮಾಡಿ ಅವರ ಲಿಂಗತ್ವ ತೋರಿಕೆಯದು ಎಂದು ಬಯಲು ಮಾಡುತ್ತಾನೆ. ಹೀಗೆ ಮಾಡುವ ಆತನು ಆ ಆಧ್ಯಾತ್ಮಿಕ ವಾರಸುದಾರಿಕೆಯನ್ನು ಕೆಳಜಾತಿಗಳಿಗೆ ವಹಿಸಿಕೊಡುತ್ತಾನೆ. ಈ ಮುಖಾಂತರ ಅವರ ಸಾಂಸ್ಕೃತಿಕ ಹಸಿವು ಮತ್ತು ಹಂಬಲಗಳಿಗೆ ಶಕ್ತಿಯಾಗುತ್ತಾನೆ. ಕೆಳಜಾತಿಗಳಿಗೆ ಸಾಂಸ್ಕೃತಿಕ ಅಧಿಕಾರ ಮತ್ತು ಶಕ್ತಿಯು ಈ ಸಮಾಜದಲ್ಲಿ ಇನ್ನೂ ಸಿಕ್ಕಿಲ್ಲ. ಇಂತಹ ದಕ್ಕಿಲ್ಲದ ಸಾಂಸ್ಕೃತಿಕ ಹಕ್ಕುಗಳ ಬಗೆಗಿನ ಹಕ್ಕೊತ್ತಾಯದ ಚಳವಳಿಯಾಗಿ ಮಂಟೇಸ್ವಾಮಿ ಕಲ್ಯಾಣ ಪ್ರವೇಶಿಸುವ ಪ್ರಸಂಗ ಕಂಡು ಬರುತ್ತದೆ. ಆಧುನಿಕವಾಗಿ ಅಂಬೇಡ್ಕರ್ ರವರು ಬುದ್ಧ ಧರ್ಮದ ಎಡೆಗೆ ಸಾಗುವುದು ಈ ಬಗೆಯ ಹಕ್ಕೊತ್ತಾಯದ ಸಾತ್ವಿಕ ರೂಪಕವೇ ಆಗಿದೆ. ಆಧುನಿಕ ಪ್ರಜಾಪ್ರಭುತ್ವವು ಇನ್ನೂ ಬಡವರಿಗೆ, ಅಕ್ಕಿ, ಶಿಕ್ಷಣ-ವಸತಿಗಳನ್ನು ನೀಡುವುದರಲ್ಲೆ ನಿಂತು ಬಿಟ್ಟಿದ್ದರೆ ಮಂಟೇಸ್ವಾಮಿ ಹೊಲೆ-ಮಾದಿಗರಿಗೆ ಸಾಂಸ್ಕೃತಿಕ ಹಕ್ಕುಗಳ ಹೋರಾಟವನ್ನು ಹೇಳಿ ಕೊಟ್ಟಿರುತ್ತಾನೆ. ಪ್ರಜಾಪ್ರಭುತ್ವದಲ್ಲಿ ಜಾತಿ ವಿರುದ್ಧದ ಹೋರಾಟಗಳು ಹಾಗೂ ಇನ್ನಿತರ ಹೋರಾಟಗಳು ‘ಸಾಂಸ್ಕೃತಿಕ ಚಳವಳಿ ಅಥವಾ ಹೋರಾಟ’ವಾಗಿ ರೂಪಾಂತರಗೊಳ್ಳಬೇಕು ಎಂಬ ಮುನ್ಸೂಚನೆಯನ್ನು ಮಂಟೇಸ್ವಾಮಿ ನೀಲಗಾರರ ಮುಖಾಂತರ ನೀಡಿದ್ದಾನೆ.

‘ಜನತೆಯ ಕ್ರಿಯಾಶೀಲತೆಯನ್ನು ಒಳಗಿನಿಂದಲೇ ಕೊರೆದು ಹಾಕುವ ಅದರ ಧೀಮಂತಿಕೆಯನ್ನು ನಾಶ ಮಾಡುವ ಮೌಲ್ಯಗಳನ್ನು, ಪುರೋಹಿತ ಶಾಹಿಗಳನ್ನು ಉಗ್ರವಾಗಿ ಹೋರಾಡಬೇಕಾದದ್ದು ಈ ಯುಗಧರ್ಮ’ ಎಂದು ಹೇಳುವ ಡಿ.ಆರ್. ನಾಗರಾಜರವರ ವಿಚಾರಗಳು ನಾವು ಕೆಳ ಜಾತಿಗಳ ಜೊತೆ ಅನುಸಂಧಾನ ಮಾಡಿಯೇ ಸಾಮಾಜಿಕ ಹೋರಾಟದ ಪ್ರಕ್ರಿಯೆಗಳನ್ನು ರೂಪಿಸಬೇಕು ಎಂದು ಹೇಳುತ್ತಿವೆ. ಹೀಗಾಗಿ ಈ ಸಮಾಜದ ಒಡಲೊಳಗಿಂದಲೇ ಸಿಡಿದೆದ್ದ ಬಂಡುಕೋರ ಪರಂಪರೆಯಾದ ‘ಮಂಟೇಸ್ವಾಮಿ ಪರಂಪರೆ’ ಈ ಹಿನ್ನೆಲೆಯಿಂದ ಬಹಳ ಮುಖ್ಯವಾಗಿ ಹೋರಾಟದ ಚರಿತ್ರೆಯೇ ಆಗಿ ತೋರುತ್ತದೆ.

ಪಂಪ ‘ಅರಿವನ್ನು ಬಿತ್ತುವುದೇ ಧರ್ಮ’ ಎಂದು ಹೇಳಿದಂತೆ ಮಂಟೇಸ್ವಾಮಿ ಇಂತಹ ಅರಿವಿನ ಸಂಸ್ಕೃತಿಯ ಪ್ರತೀಕವೇ ಆಗಿರುತ್ತಾನೆ. ಕೇವಲ ಆಧುನಿಕ ವಿಚಾರವಾದ-ಉದಾರವಾದಗಳಿಂದಾಗಿ ಕೆಳಜಾತಿಗಳಿಗೆ ಮಾನ್ಯತೆ ಪ್ರಾಪ್ತಿಯಾಗದು. ಸಾಂಸ್ಕೃತಿಕ ಸ್ವಾಯತ್ತತೆ ಬಹಳ ಮುಖ್ಯವಾದ್ದರಿಂದ ಮಂಟೇದಯ್ಯ ಇಂತಹ ಕೆಳಜಾತಿಗಳ ಸ್ವಾಯತ್ತತೆಯ ಚಳವಳಿಯನ್ನು ಮಧ್ಯಕಾಲೀನ ಕಾಲದಲ್ಲಿ ಆರಂಭಿಸಿಯೇ ಬಿಟ್ಟಿದ್ದಾನೆ.

ಕೆಳಜಾತಿಗಳಿಗೆ ಸಾಮಾಜಿಕ ಮನ್ನಣೆ ಹಾಗೂ ಸಾಂಸ್ಕೃತಿಕ ಅಧಿಕಾರ ಸಿಕ್ಕಾಗ ಮಾತ್ರ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲು ಸಾಧ್ಯವೆನ್ನುವ ಆಂತರ್ಯವನ್ನು ಮಂಟೇದಯ್ಯ ಎತ್ತಿಹಿಡಿದಿದ್ದಾನೆ.ಹೀಗಾಗಿ ಚಿಕ್ಕಲ್ಲೂರು ಜಾತ್ರೆಯ ಸಂದರ್ಭದಲ್ಲಿ ಹೊನ್ನಯ್ಯ-ಚನ್ನಯ್ಯ-ಕಂಡಾಯಗಳ ಮುಂದಾಳತ್ವದಲ್ಲೇ ಇಡೀ ಕಂಡಾಯಗಳು ಮೆರವಣಿಗೆ ಹೋಗಬೇಕಾಗುತ್ತದೆ.

ಕೆಳಜಾತಿಗಳು ನಾಯಕತ್ವವನ್ನು ವಹಿಸಿಕೊಳ್ಳುವುದು ಕೇವಲ ಅಧಿಕಾರ ಮತ್ತು ರಾಜಕೀಯಾತ್ಮಕವಾಗಿ ಅಷ್ಟೇ ಅಲ್ಲ. ‘ಅಗೋಚರ ಅಧಿಕಾರ ಮತ್ತು ಶಕ್ತಿ ಕೇಂದ್ರಗಳಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲೂ ಈ ನಾಯಕತ್ವವೆಂಬುದು ಸಾಧ್ಯವಾಗಬೇಕು. ಈ ಬಗೆಯ ಪ್ರಾತಿನಿಧಿತ್ವ ಸಾಧ್ಯವಾಗುವುದಾದರೆ ಮಾತ್ರ ಕೆಳಜಾತಿಗಳ ಸಾಂಸ್ಕೃತಿಕ ಬಿಡುಗಡೆ ಸಾಧ್ಯವೆಂಬುದನ್ನು ‘ಮಂಟೇದಯ್ಯನ ಸಾಂಸ್ಕೃತಿಕ ಚರಿತ್ರೆ’ ಸಾರಿ ಹೇಳುತ್ತದೆ. ದಲಿತ ನಾಯಕತ್ವವು ಬದುಕಿನ ಎಲ್ಲ ಸ್ತರಗಳಲ್ಲಿಯೂ ಮೂಡಬೇಕು. ಯಾವುದು ನಿಷೇಧ ಮತ್ತು ನಿರ್ಬಂಧತ್ವಕ್ಕೆ ಒಳಗಾಗಿದೆಯೋ ಅಂತಹ ಜಗತ್ತಿಗೆ ಮನ್ನಣೆ ಹೀಗೆ ಅಪ್ರಜ್ಞಾಪೂರ್ವಕವಾಗಿ ಸಾಂಸ್ಕೃತಿಕ ನೆಲೆಯಿಂದ ಪ್ರಾಪ್ತವಾದರೆ ಮಾತ್ರ. ಅಂತಹ ಜಗತ್ತು ಮನುಷ್ಯ ಲೋಕದ ಘನತೆ ಮತ್ತು ನೈಜವ್ಯಕ್ತಿತ್ವವನ್ನು ಸಂಪಾದಿಸಿದಂತಾಗುತ್ತದೆ.

ಆದ್ದರಿಂದಲೇ ಅಂದು ಅಸ್ಪೃಶ್ಯ ಕುಲಗಳಾಗಿದ್ದ, ಕುರುಬ, ಕುಂಬಾರ, ಹೊಲೆಯ ಮತ್ತು ಮಾದಿಗರಿಗೆ ಮಂಟೇಸ್ವಾಮಿ ಲಿಂಗ ನೀಡುವುದು ಹಾಗೂ ಇವರನ್ನೇ ಘನಶರಣರು ಎಂದು ಹೇಳುವುದು. ಆಧ್ಯಾತ್ಮವು ಹೀಗೆ ಸಾಮಾಜಿಕ ನೆಲೆಯಿಂದ ಪ್ರಕಟಗೊಳ್ಳಬೇಕಾದ ಅನಿವಾರ್ಯತೆ ಇದೆ. ಆಧುನಿಕ ಸಾಹಿತ್ಯದಲ್ಲಿ ಕುವೆಂಪು-ಜಲಗಾರ ಮತ್ತು ಆತನ ಕಸದಲ್ಲಿ ದೇವರನ್ನು ಕಾಣುವುದು ಮಂಟೇಸ್ವಾಮಿ ತಿಪ್ಪೆಯ ಮೇಲೆ ಜ್ಯೋತಿಯಾಗುವುದು ಇವೆಲ್ಲವೂ ಶೂದ್ರಾತಿ ಶೂದ್ರರ ‘ಪರಂಪರೆ’ಯ ದ್ಯೋತಕಗಳೇ ಆಗಿವೆ.

ಜಾತಿ ಸಮಾಜವನ್ನು ನಿಷ್ಕ್ರಿಯಗೊಳಿಸುವುದು ಅದರ ಅಮೂರ್ತ ಅಧಿಕಾರ ಕೇಂದ್ರಗಳನ್ನು ಒಡೆಯುವುದರ ಮೂಲಕ ಮಾತ್ರವೇ ಸಾಧ್ಯವಾಗುತ್ತದೆ. ಈ ನಂಬಿಕೆ ಹಾಗೂ ತಾತ್ವಿಕತೆಯನ್ನು ಕೆಳಜಾತಿಗಳಿಗೆ ಕಲಿಸಿಕೊಡುವುದು ಅಗತ್ಯವಾಗಿರುತ್ತದೆ. ಹಾಗೆಯೇ ಪರ್ಯಯ ದೈವತ್ವ ಹಾಗೂ ಧಾರ್ಮಿಕ ನಂಬಿಕೆಗಳ ಮೂಲಕ ಇಡೀ ಜಾತಿ ಸಮಾಜದ ಮೂರ್ತ ಹಾಗೂ ಅಮೂರ್ತ ಅಧಿಕಾರ ಮತ್ತು ಶಕ್ತಿ ಕೇಂದ್ರಗಳನ್ನು ನಿಷ್ಕ್ರಿಯಗೊಳಿಸಬಹುದು. ಈ ಜಾತಿ ನಿರಾಕರಣೆಯ ಪ್ರಕ್ರಿಯೆಯನ್ನು ಹೀಗೆ ಸ್ಥಗಿತವಾದ ಮೌಲ್ಯವ್ಯವಸ್ಥೆ ಹಾಗೂ ಅದು ನಿರ್ಮಿಸಿದ ಸಾಂಸ್ಕೃತಿಕ ಪ್ರಮಾಣಗಳನ್ನು ದಾಟುವ ನೆಲೆಯಲ್ಲಿ ತೆಗೆದುಕೊಂಡು ಹೋಗಬೇಕು. ಈ ಸೂಚನೆಯನ್ನು ಮಂಟೇದಯ್ಯ ನೀಡಿದ್ದಾನೆ. ಈತನ ಪರಂಪರೆಯ ಆಚರಣೆ ಜಗತ್ತಿನಲ್ಲಿ ಎಲ್ಲ ಜಾತಿಗಳು ಹಾಗೂ ಬಲಿಷ್ಠವರ್ಗಗಳು ಜಾತ್ರೆಯ ದಿವಸದಲ್ಲಿ ತೋಪಿನಲ್ಲಿ ಉಂಡು-ತಂಗಿ ಹೋಗುವ ಆ ಆಧ್ಯಾತ್ಮಿಕ ಅಭ್ಯಾಸವು ಈ ಸಮಾಜವು ಒಳಗೊಳ್ಳಬೇಕಾದ ಸಾಮರಸ್ಯದ ನೈಜ ಪ್ರತಿಮೆಯಂತಿದೆ.

ಬಹಳ ಮುಖ್ಯವಾಗಿ ಆಧುನಿಕ ಚಳವಳಿ ಹೋರಾಟಗಳು ಕೆಳಜಾತಿ ಹಾಗೂ ಸಮುದಾಯಗಳನ್ನು ಲೌಕಿಕ ದೃಷ್ಟಿಕೋನಗಳಿಗೆ ಸೀಮಿತಗೊಳಿಸಿದವು. ಆದರೆ ಮಂಟೇದಯ್ಯ ಈ ಸಮುದಾಯಗಳ ಅಲೌಕಿಕ ದೃಷ್ಟಿಕೋನದ ಪ್ರತೀಕವಾಗಿದ್ದಾನೆ. ಬಹುಪಾಲು ಕೆಲಜಾತಿಗಳು ಧರ್ಮ ಮತ್ತು ಆಧ್ಯಾತ್ಮಗಳ ಸೌಂದರ್ಯವನ್ನು ಕಾಣುವುದು ಸಮಾನತೆಯ ನೆಲೆಯಿಂದ. ಇಂಥ ಸಮಾನತೆ ಇಲ್ಲದ ಯಾವುದೇ ಧರ್ಮ ಮತ್ತು ಆಧ್ಯಾತ್ಮಿಕ ಸಂಗತಿಗಳು ಕೇವಲ ಭಾವನಾತ್ಮಕವಾದವು ಹಾಗೂ ಡಾಂಭಿಕವಾದವು. ಅಂತೆಯೇ ಮಾನವೀಯತೆ ಇಲ್ಲದ ಧರ್ಮ ಧರ್ಮವೇ ಅಲ್ಲ ಎಂದು ಹೇಳುವ ಅಂಬೇಡ್ಕರ್ ಬುದ್ಧನತ್ತ ಸಾಗುವುದು ಬೌದ್ಧಪರಂಪರೆಯ ಸೌಂದರ್ಯವನ್ನು ಹೆಚ್ಚಿಸಿತು. ಇಂಥ ಉದಾತ್ತತೆಯನ್ನು ಅಂತರಂಗೀಕರಿಸಿಕೊಂಡಿರುವ ಚರಿತ್ರೆಯತ್ತ ದಮನಿತರು ಗಮನಹರಿಸಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ಆಂತರ್ಯವಾಗಬೇಕು.

ಹಾಗೆಯೇ ಮಂಟೇಸ್ವಾಮಿ ಜಾತಿ ಸೂತಕದ ಪ್ರತಿಮೆಯಾಗಿದ್ದ ‘ಲಿಂಗ ಹಾಗೂ ಜಂಗಮತ್ವ’ವನ್ನು ನಿರಾಕರಿಸಿ ಆತ್ಮಲಿಂಗ ಹಾಗೂ ಜ್ಯೋತಿ ಸ್ವರೂಪನಾಗುವುದು ಕೆಳಜಾತಿಗಳ ಸಾಂಸ್ಕೃತಿಕ ಜಗತ್ತಿನ ಸೌಂದರ್ಯದ ಹೆಚ್ಚುಗಾರಿಕೆಯಂತೆ ಭಾಸವಾಗುತ್ತದೆ. ಈ ದಿಸೆಯಲ್ಲಿ ಮಂಟೇದಯ್ಯ ಎಲ್ಲ ಕೆಳಜಾತಿಗಳನ್ನು ‘ಈ ಜಾತಿ’ ಪ್ರಪಂಚದ ಆಚೆಗಿನ ಆಧ್ಯಾತ್ಮಿಕ ಪಯಣಕ್ಕೆ ಕರೆದುಕೊಂಡು ಹೋದ ಸಾಂಸ್ಕೃತಿಕ ಚಳವಳಿಗಾರ. ಅಲ್ಲಮ್ಮನ ಅರಿವಿನ ರೂಪಕದ ಪ್ರತೀಕದಂತಿರುವ ಮಂಟೇದಯ್ಯ ನಿಜವಾಗಲೂ ಪ್ರಜಾಪ್ರಭುತ್ವ ವ್ಯವಸ್ಥೆ ಒಳಗೊಳ್ಳಬೇಕಾದ ದೈತ್ಯ ಪ್ರತಿಮೆ. ಇಂತಹ ಸ್ವಾಭಿಮಾನವನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗುತ್ತಿರುವ ನೀಲಗಾರರನ್ನು ನಮ್ಮ ಸಾಂಸ್ಕೃತಿಕ ರಾಯಭಾರಿಗಳು ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಕುಲ ಸೂತಕವಿಲ್ಲದ ‘ಆಧ್ಯಾತ್ಮ ಮತ್ತು ಧಾರ್ಮಿಕತೆ’ ಎಂಬುದು ಕೆಳಜಾತಿಗಳ ಸಾಂಸ್ಕೃತಿಕ ಜಗತ್ತಿನ ಅತ್ಯುನ್ನತೆ ಮೌಲ್ಯ ಹಾಗೂ ಪ್ರತಿಮೆ. ದೇವರು ಮತ್ತು ಧರ್ಮಗಳಿಗೆ ಅಂಟಿದ ಮಡಿ-ಮೈಲಿಗೆಯನ್ನು ಜ್ಞಾನದಲ್ಲಿ ತೊಳೆದು ಲಿಂಗವನ್ನು ಪರಂಜ್ಯೋತಿ-ಆತ್ಮಲಿಂಗವನ್ನಾಗಿಸಿ ಡಾಂಭಿಕ ಜಂಗಮತ್ವವನ್ನು ಗುರುವಿನೆದುರು ಬಯಲು ಮಾಡಿ, ಜಾತಿಯ ಸೂತಕದಿಂದ ಮನುಷ್ಯರನ್ನು ಪಾರುಮಾಡುವ ಪರಂಪರೆಯನ್ನು ಕೆಳಜಾತಿಗಳು ಒಳಗೊಂಡಿವೆ. ಮಂಟೇದಯ್ಯ ಇಂತಹ ಕೆಳಜಾತಿಗಳ ಆಧ್ಯಾತ್ಮಿಕ ಶಕ್ತಿ ಹಾಗೂ ಸ್ವಾಭಿಮಾನದ ಪ್ರತೀಕ.

ಸಾಮಾಜಿಕ ಚರಿತ್ರೆಯ ಭಿನ್ನರೂಪಕವಾಗಿ ಮಂಟೇದಯ್ಯನ ಕಥನ ಜಗತ್ತು

‘ಚರಿತ್ರೆ’ಯು ಸಾಮಾಜಿಕತೆಯ ಕಥನ. ಆದರೆ ನಮ್ಮ ಜನಪ್ರಿಯ ಚರಿತ್ರೆಯ ನಿರೂಪಣೆಗಳು ಈ ಕ್ರಮಗಳಿಗೆ ವಿರುದ್ಧವಾಗಿವೆ. ಮೌಖಿಕವಾಗಿರುವ ನಂಬಿಕೆ, ಆಚರಣೆಗಳು ಹಾಗೂ ಕಥನ ಜಗತ್ತು ಮುಖ್ಯವಾಹಿನಿ ಮರೆತ ಜನಗಳ ಸಾಮಾಜಿಕ ಕಥನವೇ ಆಗಿರುತ್ತದೆ. ಚರಿತ್ರೆಯು ಕಾಲಾನುಕ್ರಮದಲ್ಲಿ ಸರಳ ರೇಖಾತ್ಮಕವಾಗಿರುತ್ತದೆಂಬುದು ಭಾರತೀಯ ಸಾಮಾಜಿಕತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಲ್ಲಿ ಚರಿತ್ರೆಯನ್ನು ಮರೆತವರ ಚರಿತ್ರೆಗಳು ಸಾಂಸ್ಕೃತಿಕ ಮತ್ತು ಸಾಮಾಜಿಕ ಕಥನದ ರೂಪದಲ್ಲಿ ಚಾಲ್ತಿಯಲ್ಲಿರುತ್ತವೆ ಎಂದು ಇಂದಿಗೆ ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಜನತೆಯ ಚರಿತ್ರೆ ನಿರ್ಮಾಣ ಪ್ರಕ್ರಿಯೆಯೂ ಆಧುನಿಕ ಚರಿತ್ರೆಯ ಓದುಗರಿಗೆ ಅರ್ಥವಾಗದು. ಕಾರಣ ಆಧುನಿಕ ಚರಿತ್ರೆಗೆ ಗತಕಾಲದ ಸಂಗತಿಗಳನ್ನು ಕಾಲಾನುಕ್ರಮದಲ್ಲಿ ನೋಡುವಂತೆ ಒತ್ತಾಯಿಸುತ್ತದೆ. ಆದರೆ ಕೆಳಜಾತಿಗಳನ್ನು ಈ ಬಗೆಯ ಚರಿತ್ರೆಯ ಹಂದರದೊಳಗೆ ನೋಡಲಾಗುವುದಿಲ್ಲ. ಚರಿತ್ರೆ ಇಲ್ಲಿ ನಂಬಿಕೆ ಹಾಗೂ ಆಚರಣೆಯ ರೂಪದಲ್ಲಿ ಕಥನ ಜಗತ್ತಾಗಿ ಪ್ರಕಟವಾಗಿರುತ್ತದೆ.

ಜಾತಿ ಪ್ರಧಾನ ಸಮಾಜದಲ್ಲಿ ‘ಹಿಂದೂ’ ಎಂಬ ಸಾಂಸ್ಕೃತಿಕ ಗ್ರಹಿಕೆಯ ಮೇಲೆ ಚರಿತ್ರೆಯನ್ನು ಅರ್ಥಮಾಡಿಕೊಳ್ಳಲು ಹೊರಟರೆ ಜಾತಿಯಲ್ಲಿ ಕೆಳಗಿನವರಾದವರು ಚರಿತ್ರೆಯಿಂದ ವಂಚಿತರಾಗುತ್ತಾರೆ. ಹೀಗಾಗಿ ಗೆದ್ದವರ ಹಾಗೂ ಬಲಿಷ್ಟರ ದೃಷ್ಟಿಯಿಂದ ಸೋತವರ ಇತಿಹಾಸವನ್ನು ಸಂಸ್ಕೃತಿ ನೋಡುವ ಕ್ರಮವೇ ಗೆದ್ದವರು ಮತ್ತು ಬಲಿಷ್ಠರ ದೃಷ್ಟಿಕೋನಗಳಿಗೆ ಅನುಸಾರವಾಗಿರುತ್ತದೆ. ಆದ್ದರಿಂದ ಇಂಡಿಯಾದ ಚರಿತ್ರೆಯು ಸಹ ಕೇವಲ ಮೇಲು ಜಾತಿಗಳ ಧಾರ್ಮಿಕತೆಯ ಹಾಗೂ ರಾಜರ ವೈಭವದ ಕಥನವಾಗಿ ಮಾತ್ರ ‘ಚರಿತ್ರೆ’ ಎನ್ನುವಂತಾಗಿದೆ.

ಮಂಟೇಸ್ವಾಮಿ ಕಥನ ಜಗತ್ತೆ, ಕೆಳಜಾತಿಗಳ ಸಂಘರ್ಷ ಹಾಗೂ ಆತ್ಮಾಭಿಮಾನದ ಆಂದೋಲನದಂತೆ ಭಾಸವಾಗುತ್ತದೆ. ಚರಿತ್ರೆಯು ದಾಖಲಿಸಿದ ಈ ವಿವರಗಳು-ಮೌಖಿಕವಾಗಿ ಜನಮಾನಸದೊಳಗೆ ಗುಪ್ತವಾಗಿವೆ. ಅಂಬೇಡ್ಕರ್ ರವರು ಚರಿತ್ರೆ ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರೆಂಬುದು ಶೋಷಿತರ ಸಂಘರ್ಷ ಹಾಗೂ ಸ್ವವ್ಯಕ್ತಿತ್ವದ ಸ್ಮತಿ ಪರಂಪರೆಯನ್ನು ಕುರಿತದ್ದಾಗಿದೆ. ಹೀಗಾಗಿ ಮಂಟೇಸ್ವಾಮಿ ಪರಂಪರೆ ಕಥನವು ಈ ಬಗೆಯ ಸಾಮಾಜಿಕ ಚರಿತ್ರೆಯ ಸಂಕಥನವೇ ಆಗಿರುತ್ತದೆ.

ಜನಪ್ರಿಯವಾಗಿರುವ ಚರಿತ್ರೆಯು ಸಾಮಾಜಿಕತೆಯನ್ನು ನಿರಾಕರಿಸಿದ್ದಾಗಿರುತ್ತದೆ. ಹಾಗೂ ಹಿಂದೂ ‘ಧಾರ್ಮಿಕತೆ’ಯ ಮೇಲೆ ರೂಪುಗೊಂಡ ಈ ಚರಿತ್ರೆ ‘ಜಾತಿ’ಯ ಸಮರ್ಥನೆಯ ಮೌಲ್ಯಗಳು ಮಾತ್ರ ಚರಿತ್ರೆ ಎಂದು ಪ್ರತಿಪಾದಿಸುತ್ತದೆ. ಈ ಚರಿತ್ರೆಯು ಕೆಳಜಾತಿಗಳನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಂಡು ಇವುಗಳ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆ ಅಸ್ಮಿತೆಯನ್ನೆ ಅಳಿಸಿಹಾಕುತ್ತದೆ. ಆಧುನಿಕವಾದ ಚರಿತ್ರೆಯ ಗ್ರಹಿಕೆಯು ಕೂಡ ಈ ಬಗೆಯ ಮೇಲುಸ್ತರೀಯ ಜನತೆಗಳ ಜೀವನ ವಿವರಗಳನ್ನು ಮಾತ್ರ ಚರಿತ್ರೆ ಎಂದು ವ್ಯಾಖ್ಯಾನಿಸಿ ಉಳಿದ ಕೆಳಸ್ತರೀಯ ಜನತೆಯ ಜೀವನವನ್ನು ಆನುಷಂಗಿಕವಾಗಿ ಮಾತ್ರ ವ್ಯಾಖ್ಯಾನಿಸುತ್ತದೆ. ಆದರೆ ಮೌಖಿಕವಾಗಿರುವ ಕೆಳಜಾತಿಗಳ ಜಗತ್ತು ಈ ಬಗೆಯ ಕಥನಗಳಿಗೆ ಬೇರೆಯದೆ ಆದ ಪುರಾಣ-ಜಗತ್ತು-ಕಾವ್ಯಗಳು ಸಂಪೂರ್ಣ ಬದುಕಿನ ಕಥನವಾಗಿಯೇ ಕಂಡುಬರುತ್ತದೆ.

ಮಂಟೇಸ್ವಾಮಿ ಪರಂಪರೆ ಕೆಳಜಾತಿಗಳ ಆಧ್ಯಾತ್ಮಿಕ ಚರಿತ್ರೆಯನ್ನು ನೆನಪಿಸುತ್ತದೆ. ಈ ಅಬ್ರಾಹ್ಮಣವಾದಿ ಆಧ್ಯಾತ್ಮಿಕ ಚಿಂತಕರು ಬಹಳ ಹಿಂದಿನಿಂದಲೂ ಜಾತ್ಯತೀತವಾದ ಆಧ್ಯಾತ್ಮಿಕ ಪರಂಪರೆಯನ್ನು ಸಂಘಟಿಸಿದ್ದಾರೆ ಎಂಬ ಕುರುಹನ್ನು ಮಂಟೇಸ್ವಾಮಿ ಚಾರಿತ್ರಿಕವಾಗಿ ನೆನಪಿಸುತ್ತಾನೆ.

ಈ ಮಂಟೇದರ ರೂಪಕ ಜಗತ್ತು, ಧಾರ್ಮಿಕ ಪ್ರಭುತ್ವ, ಆಧ್ಯಾತ್ಮಿಕ ಪ್ರಭುತ್ವಗಳಿಂದ ದೇವರು-ಧರ್ಮಗಳನ್ನೂ ಬಿಡುಗಡೆಗೊಳಿಸಿ ‘ಪರಂಜ್ಯೋತಿ’ ಪರಂಪರೆಯನ್ನಾಗಿಸುತ್ತದೆ. ‘ಆಡಿದವರ ಮನವ ಬಲ್ಲೆ, ನೀಡಿದವರ ನಿಜವಬಲ್ಲಂತಹ’ ಈ ಗುರುವು ಮಾರಿಯರ ವಿರುದ್ಧ ಸಂಘರ್ಷ ಮಾಡುವುದು ಆರ್ಥಿಕತೆಯಿಂದ ಬಲಿತ ಜಾತಿಗಳು ದೈವ ಹಾಗೂ ಧಾರ್ಮಿಕತೆ ಸಾಂಸ್ಥೀಕರಣಗೊಂಡು ‘ಅಹಂ’ ಪ್ರದರ್ಶಿಸುತ್ತದೆ. ‘ಕಬ್ಬಿಣದ ಭಿಕ್ಷೆ’ ಎಂಬುದು ಖಾಸಗಿತನದ ಪ್ರಕ್ರಿಯೆಯು ಸಮುದಾಯಿಕ ಹಿತವನ್ನು ನುಂಗಿ ಹಾಕುತ್ತೆಂಬುದರ ನೈಜರೂಪಕದಂತಿದೆ.

ಮಂಟೇಸ್ವಾಮಿ ಕಥನವು ‘ಜಾತಿ’ಯನ್ನು ‘ಕುಲ’ವನ್ನಾಗಿಸುವುದರ ಮೂಲಕ ಎಲ್ಲ ಜಾತಿವರ್ಗಗಳಿಗೆ ವೈಜ್ಞಾನಿಕವಾದ ಸಮಾನತೆಯನ್ನು ಕಲ್ಪಿಸಿಕೊಡುತ್ತದೆ. ಎಲ್ಲಕ್ಕಿಂತಲೂ ಈ ಪರಂಪರೆ ದರ್ಶಿಸುವ ಸಾಮಾಜಿಕತೆಯು ‘ಸಮುದಾಯಗಳು ಪರಸ್ಪರ ಅವಲಂಬಿಯಾಗುವ ಸಾಂಸ್ಕೃತಿಕತೆಯನ್ನು ಎತ್ತಿಹಿಡಿಯುತ್ತದೆ. ಕುರುಬ-ಹೊಲೆಯ-ಮಾದಿಗ ಎಂಬ ಜಾತಿಗಳನ್ನು ಕಾಯಕ ಮತ್ತು ಕಸುಬುಗಳ ಮುಖಾಂತರ ಕುಲಸಮೀಕರಣಾ ಪ್ರಕ್ರಿಯೆಗೆ ಒಳಪಡಿಸಿ ‘ಸಮುದಾಯವಾದ’ವನ್ನು ಮಂಟೇದರ ಪರಂಪರೆ ಹುಟ್ಟಿಹಾಕುತ್ತದೆ.

ಕಾಯಕ ಜೀವಿಗಳು ಹಾಗೂ ವ್ಯವಸಾಯ ಮಾಡುವವರ ಜೊತೆ ಒಡನಾಡಿದ ಮಂಟೇಸ್ವಾಮಿ ಚರಿತ್ರೆ ಮರೆತವರ ಚರಿತ್ರೆಯಂತಿದ್ದಾನೆ. ವಸಾಹತುಶಾಹಿ ಏಕೀಕರಿಸಿದ ‘ಹಿಂದೂ’ ಎಂಬ ಸಾಮಾಜಿಕತೆ ನಿರ್ಲಕ್ಷಿಸಿದವರ ಸಾಮಾಜಿಕ ಕಥನದ ಪ್ರತೀಕ ಈ ಮಂಟೇದಯ್ಯನ ಪರಂಪರೆ. ‘ಸಾಮಾಜಿಕ ಚರಿತ್ರೆ’ ಎಂಬುದು ‘ಜಾತಿ’ ಎಂಬುದರಿಂದ ಇಬ್ಭಾಗಗೊಂಡರೂ ಈ ಪರಿಕಲ್ಪನೆಯ ತಾತ್ವಿಕತೆಯು ಈ ವೈರುಧ್ಯಗಳನ್ನು ಮೀರುವ ನೆಲೆಯನ್ನು ಪ್ರತಿಪಾದಿಸಿರುತ್ತದೆ. ಹೀಗಾಗಿ ಮಂಟೇಸ್ವಾಮಿ ಪರಂಪರೆ ಧಾರಣೆ ಮಾಡಿರುವ ಬಹಳ ಮುಖ್ಯ ಅಂಶಗಳಲ್ಲಿ ಪ್ರಧಾನವಾಗಿ ‘ಜಾತಿ ನಿರಾಕರಣೆ’ ಎಂದರೂ ಈ ಜಾತಿ’ ನಿರಾಕರಣೆಯ ಉ ಕುಲದ ಅಸ್ತಿತ್ವದ ಮೂಲಕ ಆಗಬೇಕಾಗುತ್ತದೆ. ಇಂತಹ ‘ಕುಲ’ ಒಕ್ಕಲು ಮಕ್ಕಳಿಗೆ, ಕಾಯಕವಿರಬೇಕು. ಆತ್ಮಲಿಂಗದ ಬಗ್ಗೆ ಅರಿವಿರಬೇಕು ಎಂದು ಮಂಟೇಸ್ವಾಮಿ ನೀಲಗಾರರ ಬಾಯಲ್ಲಿ ಹೇಳಿಸುತ್ತಾನೆ.

ಇದು ವಚನ ಚಳಿವಳಿಯ ಮುಂದುವರೆದ ಭಾಗವೆಂದು ಹೇಳುವುದು ಅತಿ ಸುಲಭ. ಆದರೆ ಆ ವಚನ ಚಳವಳಿಯ ಚಹರೆಗಳಿಂದ ಮುಕ್ತವಾದ ಭಿನ್ನ ಸಾಮಾಜಿಕ ಚಳವಳಿಯಂತೆ ಈ ಪರಂಪರೆ ಭಾಸವಾಗುತ್ತದೆ. ‘ಸಾಂಸ್ಕೃತಿಕ ಚರಿತ್ರೆ’ ಎಂಬುದ್ದನ್ನು ಕೆಳಜಾತಿಗಳು ಕಟ್ಟಿಕೊಳ್ಳುವ ರೀತಿಯು ಪರಸ್ಪರ ಅವಲಂಬಿಯಾದ ಜೀವನಾ ವ್ಯವಸ್ಥೆಯ ತಾತ್ವಿಕತೆಯ ಮೇಲೆ ಸಂಘಟಿಸಿಕೊಂಡಿರುತ್ತವೆ. ಹಾಗಾಗಿ ಈ ಪರಂಪರೆ ಭಿನ್ನ ಸಾಮಾಜಿಕ ಚರಿತ್ರೆಯ ಕಥನವಾಗಿದೆ.

ಸ್ಥಾಪಿತ ವ್ಯವಸ್ಥೆಯ ಸಾಮಾಜಿಕತೆಯ ನಿರಾಕರಣೆ ಕೇವಲ ಮೇಲ್ಮಟ್ಟದ ಬಂಡಾಯ ಹಾಗೂ ಕ್ರಾಂತಿಗಳಿಂದ ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸಿದ್ಧಪ್ಪಾಜಿಯನ್ನು ಗಮನಿಸುವುದಾದರೆ ‘ಜಾತಿ’ ಅಹಂನ ನೆಲೆಯನ್ನು ಅಡಗಿಸಿ ಶಿಷ್ಯನನ್ನಾಗಿ ಮಂಟೇಸ್ವಾಮಿ ಆತನನ್ನು ಮಾಡಿಕೊಂಡರೂ ಆತನ ಸಾತ್ವಿಕನಾಗಿ ಜಾತಿ ಪ್ರೇಮ ಉಳಿಸಿಕೊಂಡರೂ ಮಂಟೇಸ್ವಾಮಿ ಉಗ್ರನಾಗಿ ಆತನ ಜಾತಿಕರ ಬಳಿಗೆ ಭಿಕ್ಷೆಗೆ ಕಳುಹಿಸುವುದು ಹೊಸ ಸಾಮಾಜಿಕ ವರ್ತನೆಯ ಅಗತ್ಯವನ್ನು ಒತ್ತಿ ಹೇಳಿದಂತೆ ಇದೆ. ಜಾತಿ ವಿರುದ್ಧ ರಾಜಿರಹಿತ ಸಾಂಸ್ಕೃತಿಕ ಹೋರಾಟ ಇದಾಗಿದೆ. ಇದರ ಅಗತ್ಯವನ್ನು ಮಂಟೇಸ್ವಾಮಿ ಒತ್ತಿ ಹೇಳುತ್ತಿರುತ್ತಾನೆ.

ಜಾತಿ ಸಾಮಾಜಿಕತೆಯು ಹೇಳಿಕೊಟ್ಟ ವರ್ತನೆಗಳಿಗೂ ತಾತ್ವಿಕವಾದ ವರ್ತನೆಗಳಿಗೂ ವ್ಯತ್ಯಾಸವಿದೆ. ಆದರೆ ‘ಜಾತಿ’ಯು ಕೂಡ ಒಂದು ರೀತಿಯಲ್ಲಿ ಸಿದ್ಧಾಂತವಾಗಿ ನಂತರ ಸಾಮಾಜಿಕತೆಯಾಗಿ ವ್ಯಾಪಿಸಿಕೊಂಡಿದೆ. ಇಂತಹ ಸ್ಥಾಪಿತ ಸಾಮಾಜಿಕತೆಯು ಜನವಿರೋಧಿಯಾದದ್ದು ಹಾಗೂ ನಿರ್ದಿಷ್ಟ ಜನ, ಜಾತಿ ವರ್ಗಗಳ ಅನುಕೂಲಕ್ಕಾಗಿ ಸ್ಥಾಪಿತವಾಗುವಂಥದ್ದು. ಮಂಟೇಸ್ವಾಮಿ ಪರಂಪರೆಯಲ್ಲಿ ನಿಚ್ಚಳವಾಗಿ ಗೋಚರವಾಗುವಂಥದ್ದು ಇಂಥ ಸಾಮಾಜಿಕ ಕತೆಯ ನಿರಾಕರಣೆ.

‘ಲಿಂಗ’ಜಾತಿ ಪ್ರಮಾಣವಾಗಿ ಬಿಟ್ಟಾಗ ಮಂಟೇಸ್ವಾಮಿ ಈ ಲಿಂಗ ಜಾತಿ ಶ್ರೇಣೀಕರಣ ಹಾಗೂ ಶ್ರೇಷ್ಠ-ಕನಿಷ್ಠತೆಯನ್ನು ಉತ್ಪಾದಿಸುತ್ತದೆಂದಾಗ ಅಂತಹ ಮೌಲ್ಯಗಳನ್ನು ಪಲ್ಲಟಗೊಳಿಸಲು ‘ಲಿಂಗ’ ದೀಕ್ಷೆಯನ್ನು ಕೊಡದೆ ಕಾಯಕ ಮಾಡುವ ಅದರಲ್ಲೂ ಅಂದು ಅಸ್ಪೃಶ್ಯ ಕುಲಗಳಾಗಿದ್ದ ಕುರುಬರ ಬೀರಯ್ಯ, ಮಡಿವಾಳ ಮಾಚವಯ್ಯ, ಹೊಲಾರ ಹೊನ್ನಯ್ಯ, ಹಡಪದ ಅಪ್ಪಣ, ಕುಂಬಾರ ಗುಂಡಯ್ಯ, ಮಾದರ ಚನ್ನಯ್ಯ, ದೇವಾಂಗ ಲಿಂಗಯ್ಯ ಮುಂತಾದ ಕೆಳಜಾತಿಗಳನ್ನು ಲಿಂಗದ ವಾರಸುದಾರರನ್ನಾಗಿಸುತ್ತಾನೆ. ಲಿಂಗವೆಂಬ ಕುರುಹು ನಿಜಲಿಂಗಗಳಿಗೆ ಅಗತ್ಯವಿಲ್ಲ ಎಂದು ಹೇಳುತ್ತ ಲಿಂಗವನ್ನು ಮರುನಿರ್ವಚಿಸುತ್ತಾನೆ. ಈ ಬೆಳವಣಿಗೆ ಬಹುಪಾಲು ಎಲ್ಲ ಕೆಳಜಾತಿಗಳ ಆಚರಣೆ ಹಾಗೂ ನಂಬಿಕೆಯ ಜಗತ್ತಿನಲ್ಲಿದೆ. ಆದರೆ ವೈದಿಕ ಸಾಮಾಜಿಕತೆಯು ನಮ್ಮ ಸಮಾಜವನ್ನು ಆವರಿಸಿಕೊಂಡಿರುವುದರಿಂದ ಕಾಯಕ ಜೀವಿಗಳಿಂದ ರೂಪಿತವಾಗಿದ್ದ ಸಾಮಾಜಿಕತೆಯನ್ನು ಅರ್ಥಮಾಡಿಕೊಳ್ಳಲು ತೊಡಕಾಗಿದೆ.