ಮಂಟೇಸ್ವಾಮಿ ಪರಂಪರೆಯು ಪ್ರತಿಪಾದಿಸುವ ಸಮಾಜಿಕತೆಯು ವೈದಿಕತೆಯ ಜಾತಿ ಸಮಾಜಕ್ಕಿಂತಲೂ ಭಿನ್ನವಾದದ್ದು. ‘ಕುಲ’ವೆಂಬ ಪರಿಕಲ್ಪನೆಯ ಮೇಲೆ ಎಲ್ಲ ಕಸುಬುಗಾರರನ್ನು ಸಂಘಟಿಸಿ ಭಕ್ತರನ್ನಾಗಿಸಿಕೊಳ್ಳುವುದು ಜಾತಿ ಸಂರಚನೆಯ ವಿರುದ್ಧ ‘ಕುಲ’ವನ್ನು ಸಂಘಟಿಸುವುದೇ ಆಗಿರುತ್ತದೆ. ಮೌಖಿಕ ಪರಂಪರೆಗಳ ಈ ದೃಷ್ಟಿಕೋನದಿಂದ ನೋಡಿದರೆ ಇಂಡಿಯಾದ ಸಾಮಾಜಿಕ ಚರಿತ್ರೆಯ ನೋಟವೇ ಭಿನ್ನವಾಗಿ ಕಾಣುತ್ತದೆ.

ಬಹಳ ಮುಖ್ಯವಾಗಿ ಮಂಟೇಸ್ವಾಮಿ ಪರಂಪರೆ ಪ್ರತಿಪಾದಿಸುವ ಸಾಮಾಜಿಕತೆಯಲ್ಲಿ ಇಂದಿನ ಜಾತಿ ಸಮಾಜದಲ್ಲಿ ಅತಿಕೀಳು ಎಂದು ಪರಿಭಾವಿಸುವ ಮಾದಿಗ-ಹೊಲೆಯರು ಮುನ್ನೆಲೆಯಲ್ಲಿರುತ್ತಾರೆ. ಜಾತಿ ಸಂಘರ್ಷವನ್ನು ಕೇವಲ ವೈಚಾರಿಕ ತರ್ಕಕ್ಕೆ ಮಾತ್ರ ಸೀಮಿತಗೊಳಿಸದ ಮಂಟೇಸ್ವಾಮಿ ತಾನೇ ಒಂದು ಜಗತ್ತನ್ನು ಸೃಷ್ಟಿಸುತ್ತಾನೆ. ನೀಲಗಾರರ ಸೃಷ್ಟಿಶೀಲತೆಯು ಈ ರೀತಿಯ ಸಾಮಾಜಿಕತೆಯ ನಿರ್ಮಾಣದ ಆಶಯಗಳಾಗಿರುತ್ತವೆ. ಇದು ನೀಲಗಾರರಿಗೆ ಇರುವ ಜಾತಿ ವಿರುದ್ಧದ ಆಕ್ರೋಶದ ಧ್ವನಿ ಎನ್ನಬಹುದು.

ಹೊಸ ಸಾಮಾಜಿಕತೆಯ ನಿರ್ಮಾಣಕ್ಕೆ ಅಗತ್ಯವಾದ ನಂಬಿಕೆ, ಶ್ರದ್ಧೆ ಹಾಗೂ ಲೋಕದೃಷ್ಟಿಯನ್ನು ಮಂಟೇಸ್ವಾಮಿ ಕಾವ್ಯ ಕೆಳಜಾತಿಗಳ ಪರವಾಗಿ ಮಾಡಿದೆ. ಸ್ವತಃ ಮಂಟೇಸ್ವಾಮಿ ಕೆಳಜಾತಿಯವ. ಅಸ್ಪೃಶ್ಯಲೋಕದಿಂಧ ಬಂದಂತಹ ಈ ಸಂತನಿಗೆ ‘ಜಾತಿ’ ವಿರೋಧವೆಂಬುದು ಕೇವಲ ‘ಸಾಮಾಜಿಕ ಆಕ್ರೋಶ’ದ ನೆಲೆಯಲ್ಲಿ ಮಾತ್ರ ಪ್ರಕಟವಾಗಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ‘ವಿಭೂತಿ, ನಾಮಗಳೆಲ್ಲ ಸಾಂಸ್ಥಿಕೃತ ಬಣಗಳ ಲಾಂಛನವಾಗಿದ್ದರೆ ಮಟ್ಟಿಕಪ್ಪು ಭಂಡಾರ ಮುಂತಾದವುಗಳ ಮುಖಾಂತರ ಈ ಲಾಂಛನಗಳನ್ನೇ ನಿರ್ಮೌಲ್ಲೀಕರಿಸುತ್ತಾನೆ. ಜಾತಿ ಮೂಲದ ನೆಲೆಗಳನ್ನು ತಿರಸ್ಕೃತ ಜಾತಿಗಳ ದೈನಂದಿನ ಲಯಗಳನ್ನು ಇಟ್ಟುಕೊಂಡೇ ಎದುರಾಗುತ್ತಾನೆ. ಸತ್ತ ಎಮ್ಮೆ ಕರು, ಹೆಂಡ ಮತ್ತು ಮಟ್ಟಿಕಪ್ಪು ಇವೆಲ್ಲವೂ ಜಾತಿ ಸಮಾಜಿಕತೆ ಬಹಿಷ್ಕರಿಸಿದಂಥವುಗಳು. ಇಂಥವುಗಳನ್ನು ಎದುರಿಗಿಟ್ಟು ‘ಜಾತಿ’ ನಿರ್ಮಿಸಿದ ಅಧಿಕಾರ-ಮಡಿ-ಮೈಲಿಗೆಗಳ ಸಾಮಾಜಿಕತೆಯನ್ನು ಒಡೆದು ಹಾಕುತ್ತಾನೆ. ದಲಿತರು ಮತಾಂತರಿಗಳಾಗುವುದು ತಮ್ಮ ಸಾಂಸ್ಕೃತಿಕ ಅಸ್ಮಿತೆಯಾಗಲಾರದು. ಇದು ಸಾಮಾಜಿಕವಾಗಿ ಪ್ರಗತಿದಾಯಕವಾದರೂ, ಮಂಟೇಸ್ವಾಮಿ ಪರಂಪರೆ ಇದಕ್ಕಿಂತಲೂ ಭಿನ್ನವಾಗಿ ಹೇಳುತ್ತಿದೆ. ಪರಂಪರೆಯ ನಿರ್ಮಾಪಕರು ದಲಿತರೇ ಎಂದು ಹೇಳುತ್ತಿರುವುದು ಸಾಂಸ್ಕೃತಿಕ ದಮನಿತರ ಅಸ್ಮಿತೆಗೆ ಹೊಸ ಆಯಾಮವನ್ನು ನೀಡುತ್ತದೆ.

‘ಜಾತಿ’ ಪ್ರಣೀತ ಸಾಮಾಜಿಕತೆಯು ಎಲ್ಲ ವಲಯಗಳಲ್ಲಿ ತನ್ನನ್ನು ಸಂರಕ್ಷಿಸಿಕೊಳ್ಳುವಲ್ಲಿ ಕ್ರಿಯಾಶೀಲವಾಗಿರುತ್ತದೆ. ಕುಲಕ್ಕೊಬ್ಬ ಭಕುತನನ್ನು ಪಡೆಯುತ ಈ ಎಲ್ಲ ವಲಯಗಳಿಂದ ಬಿಡಿಸುವ ಹಾಗೂ ಮುಕ್ತನನ್ನಾಗಿಸುವ ಆಧ್ಯಾತ್ಮಿಕತೆಯನ್ನು ಎತ್ತಿಹಿಡಿಯುತ್ತದೆ. ವೈಜ್ಞಾನಿಕವಾಗಿ ಹಾಗೂ ವೈಚಾರಿಕವಾಗಿ ಆಧ್ಯಾತ್ಮವು ಜಾತಿ ಮುಕ್ತವಾಗಿರುವುದು ಅದು ಶರಣ ಚಳವಳಿಯಲ್ಲಿ. ಇದರ ತೀವ್ರತೆ ಇನ್ನಷ್ಟು ಜಾಸ್ತಿಯಾದದ್ದು ಮಂಟೇಸ್ವಾಮಿಯ ನೀಲಗಾರರಲ್ಲಿ.

ಸಾಮಾಜಿಕ ವಿಮರ್ಶಾ ನೆಲೆಯ ಆಧ್ಯಾತ್ಮಿಕತೆಯನ್ನು ಬೋಧಿಸುವ ಮಂಟೇಸ್ವಾಮಿಯ ನೀಲಗಾರರು-ಲೌಕಿಕದ ನಡುವೆಯೇ ಬದುಕುವ ಸಾಮಾಜಿಕರು. ಇವರ ಆಧ್ಯಾತ್ಮವು ಭಿಕ್ಷಾಟನೆಯನ್ನೇ ಒಳಗೊಂಡಿದ್ದು. ಗುರುವಿಗೆ ಶಿಷ್ಯನಾದ ಮೇಲೆ ಜಾತಿಮೂಲ ಸಂಬಂಧ ಅಲ್ಲಿಗೆ ಇಲ್ಲವಾದಂತೆ. ಇಡೀ ಪರಂಪರೆಯೊಳಗೆ ಈ ರೀತಿಯ ಜಾತಿಮೂಲವನ್ನು ನಿರಾಕರಿಸಿ ತಾತ್ವಿಕವಾಗಿ ಆಧ್ಯಾತ್ಮಜೀವಿಯಾಗಿ ಲೌಕಿಕದೊಳಗೆಯೇ ತನ್ನ ಅಲೌಕಿಕತೆಯನ್ನು ಸಾಧಿಸಬೇಕಾಗುತ್ತದೆ. ಸಾಮಾಜಿಕವಾಗಿ ಹೀಗೆ ‘ಜ್ಯೋತಿ’ ಎನಿಸಿಕೊಳ್ಳುವ ಆಧ್ಯಾತ್ಮಿಕ ವ್ಯಕ್ತಿಯು-

ಬಡವರ ಮನೆಯ ಜ್ಯೋತಿ
ಬಲಗಾರರ ಮನೆಯ ಜ್ಯೋತಿ
ಸತ್ತವರ ಮನೆಯ ಜ್ಯೋತಿ
ಅರಸುಗಳ ಮನೆಯ ಜ್ಯೋತಿ
ಹೊಲೆಯರ ಮನೆಯ ಜ್ಯೋತಿ
ತಿಪ್ಪೇ ಮೇಲೆ ಅಸ್ಸಿಟ್ಟರುಉರಿವಂತಾಗಬೇಕು.

ಇದು ಸಾಮಾಜಿಕತೆಗೆ ವಿಮುಖವಾಗದ ಆಧ್ಯಾತ್ಮದ ರೂಪಕ. ಹಾಗೆಯೇ ಇಂಥ ಸಾಮಾಜಿಕತೆಯ ನಡುವೆಯೇ ಆಧ್ಯಾತ್ಮವು ಪ್ರಕಟವಾಗಬೇಕು. ಇಡೀ ಪರಂಪರೆಯ ಒಡನಾಟ ನಿರ್ಲಕ್ಷಿತ ಜನತೆಯ ಜೊತೆಗೆ ಆಗಿದ್ದು, ಸಮುದಾಯಗಳ ನಡುವೆ ಜ್ಯೋತಿಯಾದವ ಮಂಟೇಸ್ವಾಮಿ.

ಮಂಟೇಸ್ವಾಮಿ ಪರಂಪರೆಯು ‘ವೀರಶೈವ ಜಾತಿಗಳು’ ತಿರಸ್ಕರಿಸಿದ ಜಾತಿಗಳನ್ನೇ ಒಗ್ಗೂಡಿಸಿ ನಾಯಕತ್ವವನ್ನು ನೀಡಿದೆ. ವಚನಚಳವಳಿಯನ್ನು ತನ್ನ ಕೈವಶಮಾಡಿಕೊಂಡ ಮೇಲುಜಾತಿಗಳ ಡಾಂಭಿಕತೆಯನ್ನು, ಒಣ ಆಚಾರ ಸಂಹಿತೆಯನ್ನು ಬಯಲು ಮಾಡುವ ಮಂಟೇಸ್ವಾಮಿ ತೀರಾ ಹಿಂದುಳಿದ ಹಾಗೂ ಅಸ್ಪೃಶ್ಯರಾದ ಕುಲಗಳಿಗೆ ದೀಕ್ಷೆ ಹಾಗೂ ಆಧ್ಯಾತ್ಮಿಕ ದೀಕ್ಷೆ ನೀಡುತ್ತಾನೆ.

ಚಳುವಳಿಗಳಿಗಿರಬೇಕಾದ ಆತ್ಮ ಸೌಂದರ್ಯವೆಂದರೇ ಅದು ಸಾಮಾಜಿಕವಾಗಿ ನಿರ್ಲಕ್ಷ್ಯರಾದವರಿಗೆ ನಾಯಕತ್ವವನ್ನು ನೀಡಬೇಕೆಂಬುದು. ಹಾಗೆಂದು ಇದು ಪ್ರಜ್ಞಾ ಪೂರ್ವಕವಾಗಿರಬೇಕೆಂದೇನಿಲ್ಲ. ಆದರೆ ಹೀಗೆ ಮಾಡುವುದರ ಮುಖಾಂತರ ಅತ್ಯುನ್ನತವೆನಿಸುವ ಮೌಲ್ಯ ಮತ್ತು ವಿಚಾರಗಳು ಸ್ವಯಂ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಕುಲತ್ವಕ್ಕಿರುವ ಹಿರಿಮೆ ಎಂದರೇ ಹೀಗೆ ತಳಪ್ರಜ್ಞೆಯನ್ನು ಜೀವನದ ಧ್ಯೇಯ ಮತ್ತು ಗುರಿಗಳನ್ನಾಗಿಸಿಕೊಳ್ಳುವುದರಲ್ಲಿದೆ.

ಹೀಗಾಗಿಯೇ ಬಸವಣ್ಣನ ಅಹಂ ಮತ್ತು ಪ್ರತಿಷ್ಠೆಗಳು ಬರಿದಾಗುತ್ತವೆ. ಈ ಮೂಲಕ ನೀಲಗಾರರು ಸಾಮಾಜಿಕವಾಗಿ ಎದುರಾಗುತ್ತಿರುವುದು ತಮ್ಮ ವರ್ತಮಾನದೊಂದಿಗೆಯೇ ಕಲ್ಯಾಣದ ಜೊತೆ ಸಂವಾದಿಸುತ್ತಲೇ ಕೆಳಜಾತಿಗಳನ್ನು ನಿರಾಕರಿಸಿದ ಸಾಮಾಜಿಕತೆಯನ್ನು ಮೀರುವಲ್ಲಿ ಕ್ರಿಯಾಶೀಲರಾಗಿರುತ್ತಾರೆ. ಈ ಬಗೆಯ ಕ್ರಿಯಾಶೀಲತೆ ಕೆಳಜಾತಿಗಳು ಒಳಗೊಂಡಿರುವುದರಿಂದಲೇ ವ್ಯವಸ್ಥೆ ಎಂಬ ಹುಲಿಯ ಕೈಗೆ ಸಿಗದ ಚಾಣಾಕ್ಷ ಇಲಿಯಂತೆ ಕ್ರಿಯಾಶೀಲರಾಗಿರುತ್ತಾರೆ.

‘ಧರೆಗೆ ದೊಡ್ಡವರು’ ಎಂಬ ರೂಪಕವೇ ಮಂಟೇಸ್ವಾಮಿ ದುಡಿವ ಹಾಗೂ ಸಣ್ಣಕಸುಬುದಾರರ ಬದುಕು ಮತ್ತು ಬವಣೆಗಳಿಗೆ ಸ್ಪಂಧಿಸಿದವನೆಂದು ಹೇಳುತ್ತದೆ. ವಚನ ಚಳವಳಿಯ ಸಂದರ್ಭದಲ್ಲಿ ಆಯಾಗಾರರಾಗಿದ್ದವರು ೧೫ನೇ ಶತಮಾನದೊತ್ತಿಗೆ ಆರ್ಥಿಕತೆಯಿಂದ ಸಬಲಗೊಂಡು ಸಾಮಾಜಿಕವಾಗಿ ಮನ್ನಣೆಗೆ ಒಳಗಾದ ಜಾತಿ ‘ಹೆಜಮೊನಿ’ಯ ವರ್ಗವಾಗುತ್ತದೆ. ಮತ್ತೇ ಜಾತಿ ಶ್ರೇಣೀಕರಣವನ್ನು ಒಪ್ಪಿಕೊಳ್ಳುವ ವರ್ಗವಾಗಿ ರೂಪಾಂತರಗೊಳ್ಳುತ್ತವೆ. ಜಾತಿ ಮೀರುವ ಲಾಂಛನಗಳು ಜಾತಿ ಸೂಚಕಗಳಾಗುತ್ತವೆ. ಇಂತಹ ಸೊಕ್ಕಿದ ಜಾತಿಗಳ ಸಾಮಾಜಿಕತೆಗೆ ವಿರುದ್ಧವಾಗಿ ನಿಂತ ಮಂಟೇಸ್ವಾಮಿ ದುರ್ಬಲ ವರ್ಗಗಳ ಏಳಿಗೆಗೆ ಶ್ರಮಿಸಿದವ.

ಜಾತಿಯ ತೀವ್ರತೆಯನ್ನು ಜಾತಿ ಸೂತಕಗಳಿಂದಲೇ ಎದುರಾಗುವ ಮಂಟೇಸ್ವಾಮಿ ಜಾತಿ ನಿರಾಕರಣೆಗೆ ಹೊಸ ಸಾಮಾಜಿಕ ವರ್ಗವನ್ನು ಕಟ್ಟುತ್ತಾನೆ. ಇವುಗಳಿಗೆ ಆಧ್ಯಾತ್ಮಿಕ ದೀಕ್ಷೆ ನೀಡಿ ಪ್ರತಿ ಬ್ರಾಹ್ಮಣೀಯ ನಂಬಿಕೆ ಹಾಗೂ ಸಂಪ್ರದಾಯಗಳನ್ನು ಹುಟ್ಟುಹಾಕುತ್ತಾನೆ. ಹೊಸ ಸಾಮಾಜಿಕತೆಗೆ ಹೊಸ ಮೌಲ್ಯ ಹಾಗೂ ನಂಬಿಕೆಗಳು ಅಗತ್ಯ. ಹೀಗಾಗಿ ಮಂಟೇಸ್ವಾಮಿ ಸಂಘಟಿಸಿದ ವರ್ಗಗಳು ಸ್ವೀಕೃತ ವ್ಯವಸ್ಥೆಯ ರೂಢಿ ಮತ್ತು ಸಂಪ್ರದಾಯಗಳಿಂದ ಮುಕ್ತರಾಗಲು ಈ ಬಗೆಯ ಪರ್ಯಾಯ ನಂಬಿಕೆ ಹಾಗೂ ಆಸಕ್ತಿಗಳನ್ನು ರೂಪುಗೊಳಿಸಿದನು. ಇವುಗಳು ಎಂದಾದರೂ ಅಪವಾದವಾದರೇ ಅವುಗಳನ್ನೇ ಭಗ್ನಗೊಳಿಸುವ ತಾತ್ವಿಕ ಸಂಘರ್ಷದ ದಾರಿದೀಪವಾಗಿ ಮಂಟೇಸ್ವಾಮಿ ಪ್ರಕಟವಾಗುತ್ತಾನೆ.

ಮಂಟೇಸ್ವಾಮಿ ಪರಂಪರೆಯು ಒಳಗೊಂಡಿರುವ ಸಾಮಾಜಿಕ ಚರಿತ್ರೆಯು ಅಸ್ಪೃಶ್ಯ ಕುಲಮೀಮಾಂಸೆಯ ಮೇಲೆ ಹೆಚ್ಚು ಮಾತಾಡುತ್ತದೆ. ಈ ಬಗ್ಗೆ ಕೆ.ರಾಮಯ್ಯನವರು ಹೊಸ ವಾಗ್ವಾದಕ್ಕೆ ಕಾರಣರಾಗಿದ್ದಾರೆ. ಅವರ ಪ್ರಕಾರ ಪರ್ಯಾಯ ಸಂಸ್ಕೃತಿ ರಚನೆಗಳನ್ನು ಹೀಗೆ ಅಸ್ಪೃಶ್ಯ ಕುಲಗಳ ಮುಖಾಂತರ ಪರಿಭಾವಿಸುವುದರ ಮೂಲಕ ಹೊಸ ಸಾಮಾಜಿಕ ಕುಲದ ಚರಿತ್ರೆಯನ್ನು ಕಟ್ಟಬಹುದು ಎಂದು ಅಭಿಪ್ರಾಯಪಡುತ್ತಾರೆ. ಕನ್ನಡದಲ್ಲಿ ಕುಲ ತತ್ವದ ಮೀಮಾಂಸೆ ಚರ್ಚೆಗೊಂಡದ್ದು ಶರಣರಲ್ಲಿ. ಇಂದಿಗೂ ನಮ್ಮಲ್ಲಿ ‘ಕುಲ-ಬಳಿ-ಬೆಡಗು’ ಎನ್ನುವ ಕಲ್ಪನೆಗಳಿದ್ದು ಈ ಕಲ್ಪನೆಗಳ ಮೇಲೆ ಸಮಾಜದ ಚರಿತ್ರೆಯನ್ನು ಪುನ್ರಚಿಸಬಹುದು. ಈಗಾಗಲೆ ಮಂಟೇಸ್ವಾಮಿ ಅಂತಹ ಕುಲ ಸಂಯೋಗದ ಸಾಮಾಜಿಕತೆಯನ್ನು ಪ್ರತಿಪಾದಿಸಿದ್ದಾನೆ. ಈ ‘ಕುಲ’ದ ಕಲ್ಪನೆ ವರ್ಣಾಶ್ರಮ ಧರ್ಮ ‘ಜಾತಿ’ಗಿಂತಲೂ ಭಿನ್ನವಾಗಿರುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕತ್ವವೆಂಬುದು ಈ ಬಗೆಯ ಕುಲತ್ವದ ನೆಲೆಯಲ್ಲಿ ಮಾತಾಡುವ ಸಂದರ್ಭ ಬಂದಾಗ ಬಹುಶಃ ‘ಜಾತಿ’ ನಿರಾಕರಣೆ ಹಾಗೂ ಜಾತಿಯ ಬಗ್ಗೆ ಹೋರಾಟದ ಕಲ್ಪನೆಯೇ ಭಿನ್ನವಾಗುತ್ತದೆ.

ಡಿ.ಆರ್. ನಾಗರಾಜ್‌ ಅವರು ಹೇಳುವಂತೆ ಮಂಟೇಸ್ವಾಮಿ ಜಾತಿ ಒಳಗಡೆ ಇದ್ದು ಜಾತಿಯಿಂದ ಆಚೆಗೆ ಹೋಗುವ ಒಂದು ಆಧ್ಯಾತ್ಮಿಕ ಮಾರ್ಗವನ್ನು ಮಂಟೇಸ್ವಾಮಿ ಪ್ರತಿಪಾದಿಸುತ್ತಾನೆ. ಇಂದು ‘ಜಾತಿ’ಯ ಅಸ್ಮಿತೆಯನ್ನು ರಾಜಕೀಯ ಕಾರಣಗಳಿಗಾಗಿ ಸಂಘಟಿಸುವ ಸಾಂಸ್ಕೃತಿಕ ಮಾದರಿ ನಮ್ಮ ಎದುರಿಗಿದೆ. ಆದರೆ ಈ ಬೆಳವಣಿಗೆ ಎಂದಿಗೂ ಸಾಮಾಜಿಕ ಪರಿವರ್ತನೆಯ ವಿಚಾರಗಳನ್ನು ಪ್ರತಿಪಾದಿಸುವುದಲ್ಲ. ಮಂಟೇಸ್ವಾಮಿ ಇದಕ್ಕೆ ಭಿನ್ನವಾದ ನೆಲೆಯಲ್ಲಿ ‘ಜಾತಿ’ಯನ್ನು ಕುಲವಾಗಿ ರೂಪಾಂತರಗೊಳಿಸುತ್ತಾನೆ.

ಸಾಮಾಜಿಕತೆಯನ್ನು ಬದಲಾಯಿಸುವ ಆಧ್ಯಾತ್ಮ ಪರಂಪರೆ ನಮ್ಮಲ್ಲಿ ಮಂಟೇಸ್ವಾಮಿಯಂತೆ ಆಧುನಿಕವಾಗಿ ಕೈವಾರ ತಾತಯ್ಯ, ನಾರಾಯಣಗುರು ನಿರ್ವಹಿಸಿದರೂ ಇವು ಕೂಡ ಹಿಂದೂ ಸಂಸ್ಕೃತಿಯ ವಾತಾಪಿ ಗರ್ಭ ಸೇರಿಕೊಂಡಿದೆ. ಆದರೆ ಮಂಟೇಸ್ವಾಮಿ ಪರಂಪರೆ ಅವೈದಿಕ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ಪರ್ಶದಿಂದಾಗಿ ಇನ್ನೂ ತಾನು ಕೆಳಜಾತಿಗಳ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಶಕ್ತಿಯಾಗಿ ಉಳಿದಿದೆ.

ಶೂದ್ರಾತಿಶೂದ್ರರ ಅದ್ವೈತ ಪರಂಪರೆಗಳ ಬಗ್ಗೆ ಕನ್ನಡದಲ್ಲಿ ಡಿ.ಆರ್. ನಾಗರಾಜ್‌, ಬಂಜಗೆರೆ ಜಯಪ್ರಕಾಶ್‌, ಕೆ. ರಾಮಯ್ಯ, ಲಕ್ಷ್ಮೀಪತಿ ಕೋಲಾರ ಮುಂತಾದವರು ಅನುಸಂಧಾನವನ್ನು ಆರಂಭಿಸಿದ್ದಾರೆ. ಹೀಗಾಗಿ ಮಂಟೇಸ್ವಾಮಿ ದಲಿತ ಅದ್ವೈತಿಯೇ ಆದರೂ ಈ ಪರಂಪರೆ ಎಲ್ಲ ಶೋಷಿತ ಜನತೆಗೆ ‘ಸಾಮಾಜಿಕ ಚರಿತ್ರೆ’ಯಾಗಿದೆ. ಇತಿಹಾಸ ಮರೆತ ಜನಗಳ ಕಥೆಯನ್ನು ಈ ಪರಂಪರೆ ಒಳಗೊಂಡಿದೆ.

ಕಲ್ಯಾಣದ ಸಂಸ್ಕೃತಿಯು ಜಾತಿ ವಿರೋಧಿಯಾದ ತಾತ್ವಿಕತೆಯ ಮೇಲೆ ರೂಪುಗೊಂಡಿತ್ತು. ಆದರೆ ತಾನೇ ಕ್ರಮೇಣ ಜಾತಿಪರ ವಕಾಲತ್ತು ವಹಿಸಿದ್ದು ಚರಿತ್ರೆಯ ವ್ಯಂಗ್ಯ. ‘ಕುಲ’ ಮತ್ತು ಕಸುಬುಗಳನ್ನು ಇಟ್ಟುಕೊಂಡು ಜಾತಿ ವಿರೋಧನೆಲೆಯಲ್ಲಿ ರೂಪುಗೊಂಡ ಈ ವಚನ ಚಳವಳಿ ಮತ್ತೆ ಜಾತಿ ತಾತ್ವಿಕತೆಯನ್ನು ಧರಿಸಿದ್ದು, ಮಂಟೇಸ್ವಾಮಿಯಂತಹ ಕೆಳಜಾತಿ ಶರಣರಿಗೆ ತಾತ್ವಿಕ ವಿರೋಧಾಭಾಸವೆನಿಸಿತ್ತು. ಹಾಗೆಯೇ ಶರಣ ತಾತ್ವಿಕತೆಯು ಕಟ್ಟಲು ಬಯಸಿದ ಸಾಮಾಜಿಕತೆಯು ೧೫ನೇ ಶತಮಾನದ ಹೊತ್ತಿಗೆ ಆಧ್ಯಾತ್ಮಿಕತೆಯ ಹೆಸರಲ್ಲಿ ಅರಾಜಕತೆಯನ್ನು ಸಹ ಸೃಷ್ಟಿಸಿತ್ತು. ಈ ದಾಸೋಹ-ಜಂಗಮತ್ವ ಹಾಗೂ ಲಿಂಗತ್ವಗಳು ಜಾತಿ ಪೋಷಣೆಯ ಕೇಂದ್ರಗಳಾದವು. ಹೀಗಾಗಿ ವಚನ ಚಳವಳಿ ತನ್ನ ಮೂಲ ಆಶಯಗಳನ್ನು ಕಳೆದುಕೊಂಡು ಸಾಮಾಜಿಕ ವಿಮುಖವಾಗತೊಡಗಿದಾಗ ಮಂಟೇಸ್ವಾಮಿ ಇಂಥ ನಿರ್ಲಕ್ಷಿತ ಸಾಮಾಜಿಕತೆಯ ಒಡಲೊಳಗಿಂದಲೇ ಆಧ್ಯಾತ್ಮದ ಪಯಣವನ್ನು ಆರಂಭಿಸಿದನು.

ಇಂದಿನ ವೀರಶೈವ ಹಾಗೂ ಲಿಂಗಾಯತ ಧರ್ಮದ ವಿಮರ್ಶಕನಾಗಿ ಮಂಟೇಸ್ವಾಮಿ ಕಾಣಿಸಿಕೊಳ್ಳುತ್ತಾನೆ. ಇಂದು ನೀಲಗಾರರು ಸಹ ಈ ಬಗೆಯ ಸಾಮಾಜಿಕ ವಿಮರ್ಶಕರಂತೆ ಕಂಡುಬರುತ್ತಾರೆ. ತೀರಾ ತಳಸ್ತರದ ಸಮಾಜಿಕತೆಯಿಂದ ಬಂದ ಇವರಿಗೆ ಮಂಟೇದರನ ಬಗ್ಗೆ ಮಾತಾಡುವುದು ಮತ್ತು ಹಾಡುವುದೇ ಕೆಳಜಾತಿಗಳ ವೈಚಾರಿಕತೆಯನ್ನು ಪ್ರಸ್ತಾಪಿಸಿದಂತೆ ಭಾಸವಾಗುತ್ತದೆ. ಹಾಗೂ ಮರವಿಗೆ ಸರಿದ ಚರಿತ್ರೆಯು ಒಡಮೂಡುವಂತೆ ಒತ್ತಾಯಿಸಿದಂತೆ ಕಾಣುತ್ತದೆ.

ಈ ತಳಜಾತಿಗಳ ವೈಚಾರಿಕತೆ ಬಹಳ ಮುಖ್ಯವಾಗಿ ಒಂದು ರೀತಿಯ ಎಲ್ಲ ಜಾತಿಯ ಬಡವರ್ಗ ಒಂದಾಗಲು ಬೇಕಾದ ತಾತ್ವಿಕತೆಯನ್ನು ಒಳಗೊಂಡಿದೆ. ಇಂಡಿಯಾದಲ್ಲಿ ಮಾರ್ಕ್ಸ್‌ವಾದದ ವರ್ಗ ಸಂಘರ್ಷ ತತ್ವಕ್ಕಿಂತಲೂ ಮಂಟೇಸ್ವಾಮಿಯ ‘ಕುಲಮೀಮಾಂಸೆ’ಯ ತತ್ವ ಅಪ್ಯಾಯಮಾನವಾಗಿದೆ. ಕಾರಣ ಈ ‘ಕುಲ’ದ ಕಲ್ಪನೆಯು ಜಾತಿಸ್ತರದ ಭಿನ್ನಸಮುದಾಯಗಳ ಬಡವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು. ಹಾಗೂ ಸಾಮಾಜಿಕವಾಗಿ ಒಗ್ಗೂಡಿಸುತ್ತದೆ.

ವರ್ಗದ ಕಲ್ಪನೆ ಕೇವಲ ಆರ್ಥಿಕತೆಯ ಮೇಲೆಯೇ ನಿರ್ಧರಿತವಾಗುವುದಿಲ್ಲ. ಸಾಮಾಜಿಕ ಅಂತಸ್ತುಗಳು ಏಣಿ ಶ್ರೇಣಿಕರಣ ರೂಪದಲ್ಲಿ ವಿಸ್ತರಿಸಿಕೊಂಡಿವೆ. ಹೀಗಾಗಿ ಅಸಮಾನತೆ ಎಂಬುದು ಸರಳವಾಗಿರುವುದಿಲ್ಲ. ಬಹುಪಾಲು ತಳಜಾತಿಗಳಿಗೆ ಆಧುನಿಕವಾದ ಭೌತಿಕ ಜಗತ್ತಿನ ಸಮಾನತೆಯು ಸಿಕ್ಕರೂ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ಇದು ಸಾಧ್ಯವಾಗಿಲ್ಲ. ಹೀಗಾಗಿ ನಾವು ಹಿಂದೆ ಹೇಳಿದಂತೆ ಪ್ರಜಾಪ್ರಭುತ್ವವನ್ನು ಸಾಮಾಜಿಕ ಅಂತಸ್ತುಗಳ ಸಮಾನವಾಗಿ ವಿಸ್ತರಿಸುವ ನೆಲೆಯಿಂದ ನೋಡಲಿಕ್ಕೆ ಆಗುತ್ತಿಲ್ಲ.ಕಾರಣ ‘ಜಾತಿ’ ಮೇಲೆ ರೂಢಿಗತವಾಗಿರುವ ಧರ್ಮ-ಆಧ್ಯಾತ್ಮ ಹಾಗೂ ಸಾಂಸ್ಕೃತಿಕ ವ್ಯವಸ್ಥೆ. ಹೀಗಾಗಿ ನೀಲಗಾರರು ಈ ಪ್ರಜಾಪ್ರಭುತ್ವ ವ್ಯವಸ್ಥೆ ಒಳಗೊಳ್ಳಬೇಕಾದ ‘ಸಾಂಸ್ಕೃತಿಕತೆ’ ಹೇಗಿರಬೇಕೆಂಬುದನ್ನು ಸ್ಪಷ್ಟವಾಗಿ ‘ಪರಂಜ್ಯೋತಿ’ ಅರ್ಥದಲ್ಲಿ ವಿವರಿಸಿ ಬಿಟ್ಟಿದ್ದಾರೆ. ಕನ್ನಡ ಸಾಂಸ್ಕೃತಿಕ ಜಗತ್ತು ಇಂತಹ ‘ಪರಂಜ್ಯೋತಿ’ ರೂಪಕ ಜಗತ್ತನ್ನು ಒಳಗೊಳ್ಳಬೇಕಾಗಿದೆ. ಹಾಗೂ ತನ್ನ ಅನನ್ಯತೆಯನ್ನು ತಳಸ್ತರದ ಮೇಲೆ ಪ್ರಕಟಿಸಬೇಕಾಗಿದೆ.

ಭಾರತೀಯ ಸಮಾಜ ಈಗ ಕೋಮುವಾದ ಹಾಗೂ ಜಾಗತೀಕರಣ ದಾಳಿಗೆ ಸಿಲುಕಿರುವ ಹೊತ್ತಲ್ಲಿ ಮಂಟೇಸ್ವಾಮಿ ಪರಂಪರೆ ಪ್ರತಿಪಾದಿಸುವ ‘ಸಾಮಾಜಿಕತೆ’ಯ ತಾತ್ವಿಕತೆ ಬಹಳ ಮುಖ್ಯವಾಗುತ್ತದೆ. ಕಾರಣ ಹೆಚ್ಚಿದವರು ದ್ವಿಗುಣಗೊಳ್ಳುತ್ತಿರುವ ಈ ಹೊತ್ತಲ್ಲಿ ರೈತ ದಲಿತರೆಲ್ಲರೂ ನಿರ್ಗತಿಕರಾಗುತ್ತಿದ್ದಾರೆ. ಜನವಿರೋಧಿ ಸಾಂಸ್ಕೃತಿಕ ಮೌಲ್ಯಗಳು ತೀವ್ರವಾಗಿ ಹಬ್ಬಿಕೊಳ್ಳುತ್ತಿದ್ದು, ಬಂಡವಾಳಶಾಹಿ ಮತ್ತು ಮತೀಯವಾದಗಳ ಸಾಮಾಜಿಕತೆಗೆ ಚಾಲ್ತಿ ನೀಡುತ್ತಿವೆ. ಈ ಹೊತ್ತಲ್ಲಿ ವ್ಯವಸಾಯಗಾರರು ಹಾಗೂ ಸಣ್ಣ ಕಸುಬುದಾರರ ಪರವಾದ ಸಾಮಾಜಿಕತೆ ಇಲ್ಲವಾಗುತ್ತಿದೆ. ಹೀಗಾಗಿ ಆತ್ಮಸ್ಥೈರ್ಯವೇ ಇಲ್ಲವಾಗುತ್ತಿರುವ ಜನವರ್ಗಗಳು ಮತ್ತೇ ‘ಕುಲ’ವಾಗಿ ಒಗ್ಗೂಡುವ ಅಗತ್ಯವಿದೆ. ಮಂಟೇಸ್ವಮಿ ಇಂತಹ ತಾತ್ವಿಕತೆಯನ್ನು ಸಾಮಾಜಿಕ ನೆಲೆಯಿಂದಲೇ ತನ್ನ ಪರಂಪರೆಯೊಳಗೆ ಕಟ್ಟಿಕೊಟ್ಟಿದೆ. ಇಂತಹ ಪರಂಪರೆಯ ಮೇಲೆ ನಾವು ಕೋಮುವಾದ ಮತ್ತು ಸಾಮ್ರಾಜ್ಯಶಾಹಿಯನ್ನು ಎದುರಿಸುವ ಚಳವಳಿಯನ್ನು ಸಂಘಟಿಸಬೇಕಾಗಿದೆ.

ಮಂಟೇದಯ್ಯನ ಪರಂಪರೆ ಬಹುಮುಖಿ ಕುಲಮೀಮಾಂಸೆಯ ಸಂಕಥನ

‘ಜಾತಿ’ಯ ಮೇಲೆ ರೂಪುಗೊಂಡಿರುವ ಸಾಮಾಜಿಕ ದೃಷ್ಟಿಕೋನಗಳನ್ನು ಬದಲಾಯಿಸದ ಹೊರತು ಹೊಸ ಸಾಮಾಜಿಕತೆ ರೂಪಗೊಳ್ಳುವುದಿಲ್ಲ. ಆದ್ದರಿಂದಲೇ ಶೋಷಣೆ ಮತ್ತು ಸಂಘರ್ಷಗಳನ್ನು ತಾತ್ವಿಕವಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಂತಹ ಸಾಧ್ಯತೆ ಹಾಗೂ ದೃಷ್ಟಿಕೋನಗಳು ಒಂದು ಚಾರಿತ್ರಿಕ ಕಾಲಘಟ್ಟದಲ್ಲಿ ಸಾಧ್ಯವಾಗಿಸಿದ ಚರಿತ್ರೆಯ ರೂಪಕವಾಗಿ ಮಂಟೇದಯ್ಯನ ಪರಂಪರೆ ಗೋಚರವಾಗುತ್ತದೆ. ಈ ಕಾರಣದಿಂದಲೇ ಕುಲ ಸಂಗೋಪನೆ ಮತ್ತು ಕುಲ ಸಮೀಕರಣ ಪರಿಕಲ್ಪನೆಗಳನ್ನು ಪ್ರೊ. ಕಿರಂ ಹಾಗೂ ಬಂಜಗೆರೆ ಜಯಪ್ರಕಾಶ್‌ ಅವರು ಚರ್ಚಿಸುತ್ತಾರೆ.

ಕುಲಕಥನವಾಗಿ ಕಂಡುಬರುವ ಪರಂಪರೆಗಳು ಜಾನಪದದ ರೂಪದಲ್ಲಿ ಜೀವಂತವಾಗಿವೆ. ಈ ಪರಂಪರೆಗಳು ಧಾರಣೆ ಮಾಡಿರುವುದು ಕೇವಲ ಭಾವನಾತ್ಮಕವಾದ ಭಕ್ತಿ ಹಾಗೂ ಆಧ್ಯಾತ್ಮಿಕತೆಗಳನ್ನಲ್ಲ; ಬದಲಾಗಿ ಸಾಮಾಜಿಕ ಪರಿವರ್ತನೆಯ ಜ್ಞಾನ ಮತ್ತು ವಿವೇಕಗಳನ್ನು ವರ್ಣಾಶ್ರಮ ಧರ್ಮದ ಮೇಲೆ ರೂಪುಗೊಳಿಸಿರುವ ಜಾತಿ ಸಾಂಸ್ಕೃತಿಕತೆಯು ಜ್ಞಾನ ಮತ್ತು ವಿವೇಕಗಳ ರೂಪದಲ್ಲಿ ‘ತನಗೆ ಬೇಕಾದ ವಿಚಾರ ಮತ್ತು ಮೌಲ್ಯಗಳನ್ನು ಸ್ಥಿರೀಕರಿಸಿದೆ. ಆದರೆ ಜನತೆ ಇಂತಹ ಸ್ಥಿರೀಕರಣಕ್ಕೆ ಪ್ರತಿಯಾದ ಜ್ಞಾನ ಮತ್ತು ವಿವೇಕಗಳನ್ನು ಸೃಷ್ಟಿಸುತ್ತಿರುತ್ತದೆ. ‘ಕುಲಮೀಮಾಂಸೆ’ಯ ಪರಿಕಲ್ಪನೆಯು ‘ಸ್ಥಗಿತತೆ’ಯ ವಿರುದ್ಧದ ನೆಲೆಯಲ್ಲಿ ಜ್ಞಾನ ಮತ್ತು ವಿವೇಕಗಳನ್ನು ಸಂಘಟಿಸಿಕೊಳ್ಳಬೇಕೆಂಬುದರ ವೈಚಾರಿಕತೆಯಾಗಿರುತ್ತದೆ.

ಆದಿಒಳಗಳ ಜ್ಯೋತಿ
ಬೀದಿ ಒಳಗಳ ಜ್ಯೋತಿ
ಬಡವಬಲ್ಲಿದರ ಮನೆಯೊಳಗೆ ಉರಿದಂತಹ ಪರಂಜ್ಯೋತಿ

ಎಂಬ ನೀಲಗಾರರ ಪದವು ಈ ಬಗೆಯ ‘ಸಾಮಾಜಿಕತೆ’ಯನ್ನು ಪುನರ್ ಸೃಷ್ಟಿಸುವುದರ ತಾತ್ವಿಕತೆಯ ರೂಪಕವಾಗಿದೆ.

ದಮನ ರೂಪಿಯಾದ ಜಾತಿಯು ಹುಟ್ಟಿಹಾಕಿರುವ ಸಾಮಾಜಿಕಿ ಗ್ರಹಿಕೆಗಳು ಮತ್ತು ವೈಚಾರಿಕತೆ ಹಾಗೂ ಆಧುನಿಕ ವೈಜ್ಞಾನಿಕತೆಯು ಮಂಡಿಸಿದ ಏಕರೂಪಿಯಾದ ನಾಗರಿಕತೆಯ ತಾರ್ಕಿಕತೆ ಇವೆಲ್ಲವೂ ಕೂಡ ಬದುಕಿನ ಏಕತಾನತೆಗೆ ಕಾರಣವಾಗಿವೆ. ಏಕಮುಖಿಯಾದ ಜ್ಞಾನ ಮತ್ತು ವೈಚಾರಿಕತೆಗಳು ಸಾಮಾಜಿಕವಾಗಿ ವ್ಯಾಪಿಸಿಕೊಂಡು ಸಮಾಜವನ್ನು ಏಕ ಘನಾಕೃತಿಯ ದೃಷ್ಟಿಕೋನಕ್ಕೆ ಒಳಗಾಗಿಸುತ್ತದೆ. ‘ಜಾತಿ’ಯೂ ಈ ಬಗೆಯ ಏಕರೂಪಿಯಾದ ಸಂಕಥನ. ಇದು ನಿರ್ದಿಷ್ಠ ಭಾಷೆ ಹಾಗೂ ದೃಷ್ಟಿಕೋನಗಳನ್ನು ಹೇರುವ ಸಂಸ್ಥೆಯೂ ಹೌದು. ಹಾಗೆಂದು ಜಾತಿ ವಿರೋಧಿ ಚಿಂತನೆಯನ್ನು ತೀರಾ ವೈದಿಕತೆಗೆ ಸೀಮಿತಗೊಳಿಸಿದರೆ ಇದರ ಇನ್ನಿತರ ಮುಖಗಳು ಅಗೋಚರವಾಗಿ ಬಿಡುತ್ತವೆ.

ಮಂಟೇಸ್ವಾಮಿಯ ಕುಲ ಸಂಗೋಪನೆ ಹಾಗೂ ಕುಲಸಮೀಕರಣ ಸಾಧ್ಯವಾಗುವುದೇ ಜಾತಿ ಸಮಾಜ ಯಾವುದ್ದನ್ನು ಕನಿಷ್ಠೀಕರಿಸಿದೆ ಅಂತಹ ಕನಿಷ್ಠ ಜಗತ್ತನ್ನು ಪ್ರತಿ ಸಂಸ್ಕೃತಿಯನ್ನಾಗಿಸುವ ನೆಲೆಯಿಂದ. ಆದರೆ ಹೀಗೆ ಸಂಭ್ರಮಿಸಿದರೆ ಪ್ರತಿ ಸಂಸ್ಕೃತಿಯೂ ಕೂಡ ದಮನಿತರಿಗೆ ಮಾರ್ಗಕ್ಕೆ ಬದಲಾಗಿ ತೊಡಕಾಗಿ ಪರಿಣಮಿಸಿಬಿಡುತ್ತದೆ.

‘ಜಾತಿ’ಸಂಘಟಿಸಿದ ಸಂಕಥನಗಳು ಹಾಗೂ ಆಧುನಿಕತೆಯು ರೂಢಿಗೆ ತಂದಂತಹ ಸಂಕಥನಗಳ ಮಾದರಿಯಲ್ಲಿ ‘ಕುಲಮೀಮಾಂಸೆ’ಯನ್ನು ಸಂಕಥನವನ್ನಾಗಿಸಿದರೆ ಈ ಕುಲಮೀಮಾಂಸೆಯು ಕೂಡ ರೂಢಿಗತವಾದ ಸಂಕಥನಗಳ ಭಾಗವೇ ಆಗಿಬಿಡುತ್ತದೆ. ಕೇವಲ ರಾಜಕೀಯತ್ಮಾಕವಾದ ಹಕ್ಕುಗಳಿಗೆ ಮಾತ್ರ ಕುಲಮೀಮಾಂಸೆಯನ್ನು ಸೀಮಿತಗೊಳಿಸಿದರೆ ‘ಜಾತಿ’ಯನ್ನು ಮತ್ತಷ್ಟು ಕೊಬ್ಬಿಸಿದಂತಾಗುತ್ತದೆ.

ಈಗಾಗಲೇ ಇಂತಹ ಜಾತಿ ವಿರೋಧಿ ನೆಲೆಯಲ್ಲಿ ಕಾಣಿಸಿಕೊಂಡಿದ್ದಂತಹ ಶೂದ್ರಾತಿ ಶೂದ್ರರ ಆಂದೋಲನಗಳು-‘ಜಾತಿ ರಾಜಕಾರಣ’ದ ವಿಪರೀತಗಳಿಗೆ ಬಲಿಯಾಗಿವೆ. ಜಾತಿ ಮತ್ತು ವರ್ಗವಿರೋಧಿ ತಾತ್ವಿಕತೆಯು ಕೂಡ ಆಯಾಯ ಜಾತಿ ಮತ್ತು ವರ್ಗಗಳ ಬಲಿಷ್ಠರ ಹಿತಾಸಕ್ತಿಗಳಿಗೆ ನಿಂತುಬಿಟ್ಟಿವೆ. ಹೀಗಾಗಿ ಎಲ್ಲ ಜಾತಿಯ ಬಡವರು ಮತ್ತಷ್ಟು ಬಡವರಾಗಿಯೇ ಉಳಿಯುವ ಸ್ಥಿತಿ ಯಥಾವತ್‌ ಆಗಿ ಮುಂದುವರಿಯುತ್ತಿದೆ. ಅಷ್ಟೇ ಅಲ್ಲದೆ ಈ ‘ಶೂದ್ರ ಹಾಗೂ ದಲಿತತ್ವ’ ಹಾಗೂ ಇನ್ನಿತೆ ಶೋಷಣೆ ವಿರೋಧಿ ನೆಲೆಗಳು ರಾಜಕೀಯಾತ್ಮಕ ಹಿತಾಸಕ್ತಿಗಳಿಗೆ ಬಲಿಯಾಗಿ ಬಿಡುವ ಚಾರಿತ್ರಿಕ ನಿದರ್ಶನಗಳು ಕಣ್ಣ ಮುಂದೆಯೇ ಮಾಸದ ಗಾಯಗಳಂತೆ ರಾಚುತ್ತಿವೆ.

ಕುಲಪ್ರಜ್ಞೆಯು ಕೂಡ ‘ಅವೈದಿಕ ಹಾಗೂ ಅಹಿಂದ’ ಎಂದು ಹೊರಟರೂ, ಇದು ಜಾತ್ಯತೀತ ವರ್ಗಾತೀತವಾದ ನೆಲೆಯಲ್ಲಿ ಹೊಸ ಸಾಮಾಜಿಕ ವರ್ಗಕ್ಕೆ ಕಾರಣವಾಗಬೇಕು. ಈ ಪ್ರಕ್ರಿಯೆಯನ್ನು ಮಂಟೇಸ್ವಾಮಿ ಹೇಗೆ ಹೊಲೆ-ಮಾದಿಗರನ್ನು ಮುಂಚೂಣಿಯಲ್ಲಿಟ್ಟು ಇನ್ನೆಲ್ಲ ಅಸ್ಪೃಶ್ಯ ಜಾತಿಗಳನ್ನು ಸಂಘಟಿಸಿ-ಇಡೀ ‘ಜಾತಿ ಆಧಾರಿತ ಧರ್ಮ ಮತ್ತು ಆಚಾರ ಜಗತ್ತನ್ನು ಕೆಡವಿ ಹಾಕಿದನೋ ತಾತ್ವಿಕತೆ’ಯನ್ನು ಒಳಗೊಂಡು ನಡೆದಾಗ ಮಾತ್ರ ಈ ಕುಲಪ್ರಜ್ಞೆ ವಾಸ್ತವತೆಗೆ ಹತ್ತಿರವಾಗುತ್ತದೆ.

ಕೇವಲ ಆಧ್ಯಾತ್ಮಿಕತೆಗಾಗಿ ಜಾತಿ ಬಿಟ್ಟು ಮೂರು-ನಾಲ್ಕು ದಿವಸ ಜಾತ್ರೆಯಲ್ಲಿ ಒಟ್ಟಿಗೆ ತಿಂದುಂಡು ವಾಪಸ್ಸಾಗುವುದು, ನಂತರ ತಮ್ಮ ಜಾತಿಮೂಲಗಳಲ್ಲೆ ನಿಂತುಬಿಡುವುದು-ಇವೆಲ್ಲವೂ ಕೇವಲ ಹಿಂದೂ ಧರ್ಮದ ಧಾರ್ಮಿಕ ಅಭ್ಯಾಸದಂತೆ ಕಂಡುಬರುತ್ತದೆ.

ಆದರೆ ಮಂಟೇಸ್ವಾಮಿ ಕಿಂಚಿತ್‌ ಸಹ ಜಾತಿಮೂಲದ ಸೂತಕಗಳನ್ನು ಒಪ್ಪದವನು. ಹೆಜಮೊನಿಯಿಂದ ಅಮಲಿಗೇರಿದ ಸಿದ್ಧಪ್ಪಾಜಿ ಮತ್ತು ಪರಿಚಾಳರನ್ನು ಇಂತಹ ಸೂತಕಗಳಿಂದ ಮುಕ್ತ ಮಾಡುತ್ತಾನೆ. ಕ್ಷುದ್ರಗೊಂಡದ್ದರಿಂದಲೇ ಆಧ್ಯಾತ್ಮಿಕತೆ ಪರೀಕ್ಷೆಗೆ ಒಳಗಾಗುತ್ತದೆ. ಇಂತಹ ಕ್ಷುದ್ರ ಜಗತ್ತಿನವರನ್ನೇ ಮೆರೆವ ಕಂಡಾಯಗಳನ್ನಾಗಿಸುತ್ತಾನೆ. ಆಧುನಿಕ ಜಾತ್ಯತೀತ ಆಂದೋಲನಗಳು ಕಟ್ಟಿಬಯಸಿದ ನಾಗರಿಕ ಸಮಾಜವು ಕೂಡ ಮೂರ್ತ ಹಾಗೂ ಅಮೂರ್ತ ಅಧಿಕಾರಗಳಲ್ಲಿ ಶೋಷಿತರನ್ನು ಅಸಂದಿಗ್ಧವಾಗಿ ಒಪ್ಪಿಕೊಳ್ಳುವಂತೆ ಮಾಡಲಿಲ್ಲ. ಮಂಟೇಸ್ವಾಮಿ ಕಾವ್ಯ ಮತ್ತು ಜಗತ್ತು ಹಿಂದೆಯೇ ಪೂರೈಸಿದೆ. ಇಂತಹ ತಾತ್ವಿಕತೆಯನ್ನು ನೀಲಗಾರರು ಇಂದು ಕೇರಿಗಳ ಬೀದಿಗಳಲ್ಲಿ ಹಾಡಾಗಿಸಿ ಪ್ರಕಟಿಸುತ್ತ ಹೋಗುತ್ತಿದ್ದಾರೆ.

ಭಾರತೀಯ ರಾಷ್ಟ್ರೀಯತೆಯನ್ನು ‘ಮತೀಯತೆಯ ಮೇಲೆ ಕೇಂದ್ರೀಕರಿಸುವಂತಾದದ್ದು ಸಾಮಾಜಿಕತೆಗೆ ಅಪಚಾರದಂತಿದೆ. ಈ ಜಾತಿ ‘ಏಕಾತ್ಮಕತೆ’ಯ ನಾಗರಿಕತೆಯು ತೀರಾ ಭಾವನವಾದಿಯಾದದ್ದು ಹಾಗೂ ಅರಾಜಕವಾದದ್ದು. ಆದರೆ ಈ ಭಾವನಾವಾದಿ ಅರಾಜಕತೆಯು ಕೂಡ ವೈದಿಕ ಸಂಸ್ಕೃತಿಯ ರಾಜಕಾರಣದ ಒಂದು ಮಾದರಿ. ಜಾತಿಯ ಸಂಕೋಲೆಗಳನ್ನು ಬಿಗಿದಪ್ಪಿಕೊಳ್ಳುವ ಇಂತಹ ರಾಷ್ಟ್ರೀಕತೆಯು ಭಿನ್ನ ಸಾಂಸ್ಕೃತಿಕ ಚಹರೆಗಳನ್ನು ಮರೆವಿಗೆ ಸರಿಸಿಬಿಟ್ಟಿದೆ. ಮಂಟೇದರನ ಕುಲಪ್ರಜ್ಞೆ ಇಂತಹ ಮರವಿಗೆ ಸರಿಸಿದ ಭಿನ್ನ ಸಾಂಸ್ಕೃತಿಕ ಚಹರೆಗಳ ಸಂಕಥನವೇ ಆದರೂ ಈ ಭಿನ್ನ ಸಂಕಥನಗಳು ‘ಜಾತಿ-ಸಮಾಜದ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಬೇಕಾಗಿದೆ.

ದಮನಿತರ ಸಾಂಸ್ಕೃತಿಕ ಅಧಿಕೃತತೆಯು ಈ ಬಗೆಯ ಜಾತಿ ಪ್ರಣೀತ ಸಾಮಾಜಿಕತೆಯಿಂದ ಬಿಡಿಸಿಕೊಳ್ಳದ ಹೊರತು “ಕುಲ ಸಂಗೋಪನೆ” ತಾತ್ವಿಕವಾಗಿ ನೆಲೆಗೊಳ್ಳಲಾರದು.

ಜಾತಿ ಸಂರಚನೆಯ ನೆಲೆಗಳಿಂದ ಬಿಡುಗಡೆಗೊಳ್ಳುವುದರ ಜೊತೆಗೆ ಈ ನಾಗರಿಕತೆಯ ಏಕರೂಪಿ ಜೀವನ ದೃಷ್ಟಿಕೋನಗಳಿಂದಲೂ ಸಹ ಬಿಡಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಹಿಂದೆ ಪ್ರಸ್ತಾಪಿಸಿದಂತೆ ಈ ಜಾತಿಯು ದಮನದ ಪರಂಪರೆಯಾಗಿದೆ ಜೊತೆಗೆ ಈ ನಾಗರಿಕ ಜೀವನವೂ ಕೂಡ ಪ್ರಗತಿಯ ರೂಪದಲ್ಲಿ ಹಿಂಸೆ ಮತ್ತು ವಿನಾಶವನ್ನೇ ಸೃಷ್ಟಿಸುತ್ತಿದೆ. ಈ ಎರಡು ಬಗೆಯ ದಮನಗಳಿಂದ ಬಿಡಿಸಿಕೊಳ್ಳುವುದಕ್ಕೆ ‘ಕುಲ ಸಂಗೋಪನೆ’ ಪ್ರಕ್ರಿಯೆಯ ಸಾಧ್ಯತೆಗಳನ್ನು ಪ್ರಕಟಿಸುತ್ತಿದೆ. ದಲಿತ-ರೈತ ಚಳವಳಿಗಳು ಇನ್ನಾದರೂ ಈ ಕುಲಪ್ರಜ್ಞೆಯನ್ನು ಗ್ರಹಿಸುವಂತಾಗಲಿ.

ಕುಲಪ್ರಜ್ಞೆಯು ಕೂಡ ಪುರುಷರೂಪಿ ಹೆಜಮೊನಿಯ ಸಂಕಥನಗಳಾಗದಂತೆ ಕೂಡ ಜಾಗರೂಕರಾಗಬೇಕಿದೆ. ಕಾರಣ ‘ಕುಲಪ್ರಜ್ಞೆ’ ಎಂಬುದು ಸಾಮಾಜಿಕವಾಗಿ ಪುರುಷ ಪ್ರಧಾನತೆಯ ನೆಲೆಯಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಇಂತಹ ಅಪಾಯಗಳು ಉಂಟಾಗದಂತೆ ಕುಲಪ್ರಜ್ಞೆಯನ್ನು ಸಂಘಟಿಸಬೇಕಾಗಿದೆ. ಮಂಟೇದಯ್ಯನು ‘ಮುಟ್ಟನ್ನು ಅಪವಿತ್ರವೆಂದು ನೋಡುವ ಸಮಾಜಕ್ಕೆ ಮುಟ್ಟೆ ಹುಟ್ಟಿನ ಮೂಲ’ ಎಂದು ಹೇಳುವುದೇ ಪರಂಪರೆಯು ತಾರತಮ್ಯಗಳಿಲ್ಲದ ವಿವೇಕದ ಒರತೆಯಾಗಬೇಕೆಂಬ ನಿಲುವು ಮತ್ತು ಧೋರಣೆಗಳನ್ನು ಪ್ರಕಟಿಸುತ್ತದೆ. ಆದರೆ ಪೂಜೆ-ಪುರಸ್ಕಾರ ಹಾಗೂ ಮಡಿ-ಮೈಲಿಗೆ ಆಚರಣೆಗಳೆಲ್ಲವೂ ಇನ್ನು ಬಲಿಷ್ಠಗೊಳ್ಳುತ್ತಿರುವ ಈ ವರ್ತಮಾನದಲ್ಲಿ ಇಂತಹ ಸಾಧ್ಯತೆಗಳು ಎಂದು ಕ್ರಿಯಾಶೀಲವಾಗುತ್ತವೆಂಬ ಅನುಮಾನ ಮೂಡುತ್ತದೆ.

ಮಂಟೇದ ಪರಂಪರೆಯ ಚಿಕ್ಕಲ್ಲೂರು ಜಾತ್ರೆಯಲ್ಲಿ ‘ಪಂಚಾಳರೇ ಒಂದು ಬೇರೆಯಾದ ಪ್ರದೇಶದಲ್ಲಿ ಸಿದ್ಧಪ್ಪಾಜಿಯನ್ನು ಸಂಕೇತವಾಗಿಟ್ಟುಕೊಂಡು ಮತ್ತೆ ಜಾತಿಯನ್ನು ಸಂಘಟಿಸುತ್ತಿರುವುದನ್ನು ಕಾಣಬಹುದು. ಹಾಗೆಯೇ ಮಠದೊಳಗೆ ದಲಿತರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿದೆ. ಇವೆಲ್ಲವೂ ಪರಂಪರೆಯ ವೈರುಧ್ಯಗಳೆಂದು ಹೇಳುತ್ತಿಲ್ಲ. ಆದರೆ ಈ ಪರಂಪರೆಯನ್ನು ಕೂಡ ಮೇಲ್ಜಾತಿಗಳು ಹೈಜಾಕ್‌ ಮಾಡಿಕೊಳ್ಳುತ್ತಿವೆ. ಆದರೆ ಕೆಳಜಾತಿಯ ನೀಲಗಾರರು ಸಿದ್ದಪ್ಪಾಜಿಯನ್ನು ನೆನೆಯುತ್ತಲೇ ಇರುತ್ತಾ, ಈತನನ್ನು ಗುರುಸಂಜಾತನನ್ನಾಗಿ ಸುತ್ತಲೇ ಇರುತ್ತಾರೆ.

ಕುಲಪ್ರಜ್ಞೆಯ ತಾತ್ವಿಕತೆಯ ಬೌದ್ಧಿಕತೆಯ ಇಂದು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಚರ್ಚೆಗೆ ಒಳಗಾಗುತ್ತಿದೆ. ಆದರೆ ಸಾಮಾಜಿಕ ಜೀವನದಲ್ಲಿ ಹಿಂದುಳಿದವರು ದಲಿತರನ್ನು ಶೋಷಿಸುತ್ತಲಿರುತ್ತಾರೆ. ಹಿಂದುಳಿದವರನ್ನು ಬಲಿಷ್ಠ ಮೇಲ್ಜಾತಿಗಳು ಶೋಷಣೆ ಮಾಡುತ್ತಲಿರುತ್ತಾರೆ. ಆದರೆ ರಾಜಕೀಯ ವಲಯದಲ್ಲಿ ಮಾತ್ರ ದಲಿತ ಮತ್ತು ಹಿಂದುಳಿದವರ ನಡುವೆ ಸಮೀಕರಣಗಳು ಏರ್ಪಡುತ್ತವೆ. ಆದರೆ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ದಲಿತರನ್ನು ಅವಮಾನಿಸುತ್ತಲೇ ಇರುತ್ತವೆ. ಇಂತಹ ವೈರುಧ್ಯಗಳ ನಡುವೆ ‘ಕುಲಪ್ರಜ್ಞೆ’ಯ ತಾತ್ವಿಕತೆ ಸಾಕಾರಗೊಳ್ಳುವ ಬಗೆಯಾದರು ಹೇಗೆ ಎನಿಸುತ್ತದೆ. ಜೊತೆಗೆ ಇದೇ ಶೂದ್ರ ಸಮುದಾಯಗಳು ಹಿಂದೂ ಮತೀಯತೆಯ ತೆಕ್ಕೆಗೆ ಒಳಗಾಗುತ್ತಿವೆ. ಹಾಗೆಯೇ ಪ್ರತಿ ದಿನ ದಲಿತರ ಕಗ್ಗೊಲೆ ಹಾಗೂ ದೌರ್ಜನ್ಯಗಳ ಇಮ್ಮಡಿಗೊಳ್ಳುತ್ತಲಿವೆ. ಹೀಗಾಗಿ ಇಂತಹ ಸನ್ನಿವೇಶಗಳನ್ನು ನೆನೆದರೆ ಕುಲಪ್ರಜ್ಞೆಯೇ ಅಸಂಬದ್ಧ ಭ್ರಮೆಯಾಗಿ ತೋರುತ್ತದೆ. ಆದರೆ ಮಂಟೇಸ್ವಾಮಿ ಇವೆಲ್ಲವುಗಳನ್ನು ಮೀರಿ ಈ ದಲಿತ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿರುವುದು ಮಾತ್ರ ಶೋಷಿತರಿಗೆ ‘ಗೋಲ್ಡನ್‌ ಪಾಸ್ಟ್‌’ ಆಗಿದೆ. ಹಾಗೆಯೇ ಇದು ಸಮುದಾಯಗಳ ಜೀವನ ಸ್ಮೃತಿ ಪರಂಪರೆ ಎಂದೇ ಹೇಳಬೇಕು.