ಸಂದರ್ಶಿಸಿದವರು: ಪ್ರೊ.ಹಿ.ಚಿ.ಬೋರಲಿಂಗಯ್ಯ

ಹಿ.ಚಿ.ಬೋ : ಮಹದೇವಯ್ಯನವರೆ, ಶಿವಣ್ಣನವರೆ, ಸಂಜಯ್ಯನವರೆ- ಇದುವರೆಗೆ ನೀವು ಮಂಟೇದಸ್ವಾಮಿ ಕಾವ್ಯವನ್ನು ಸಂಪೂರ್ಣವಾಗಿ ಹಾಡಿ ದೇವರಿಗೂ ನಿಮ್ಮ ಒಂದು ಪ್ರಾರ್ಥನೆಯನ್ನು ಸಲ್ಲಿಸಿದಿರಿ ಮತ್ತು ನಮ್ಮ ವಿಶ್ವವಿದ್ಯಾಲಯಕ್ಕೆ ಬುಡಕಟ್ಟು ಅಧ್ಯಯನ ವಿಭಾಗ ಮೂರು ತಿಂಗಳ ಈ ಯೋಜನೆಯನ್ನು ಹಾಕ್ಕೊಂಡಿದ್ದೀವಿ. ನಿಮ್ಮ ತರಹಾನೆ ಒಟ್ಟು ಹತ್ತು ಕಾವ್ಯಗಳನ್ನು ಸಂಗ್ರಹ ಮಾಡ್ಬೇಕು ಅಂತ ನಾವು ಅಂದ್ಕೊಂಡಿದ್ದೀವಿ. ಅದರಲ್ಲಿ ಈಗಾಗಲೇ ಮಲೆಮಹಾದೇಶ್ವರನ ಕಾವ್ಯ ಸಂಗ್ರಹ ಮಾಡಿದ್ದೀವಿ, ಎರಡನೆಯದಾಗಿ ನಿಮ್ಮ ಮಂಟೇಸ್ವಾಮಿ ಕಾವ್ಯವನ್ನು ಸಂಗ್ರಹ ಮಾಡ್ತಾ ಇದ್ದೀವಿ. ಈ ಕರೆಂಟು ತೊಂದ್ರೆ ಇದ್ದದರಿಂದ ನಿಮ್ಮನ್ನು ಸ್ವಲ್ಪ ಜಾಸ್ತಿ ದಿವ್ಸ ಇರ್ಸಿಕೊಳ್ಳಬೇಕಾಯ್ತು. ಅದರಿಂದ ನೀವೇನೂ ಬೇಸರ ಮಾಡ್ಕೊಳ್ಳಿಲ್ಲ. ತಾಳ್ಮೆಯಿಂದ ಏನೋ ಒಂದು ರೀತಿಯ ಪ್ರೀತಿಯಿಂದ, ವಿಶ್ವಾಸಿಂದ ನೀವು ಇಷ್ಟು ದಿವ್ಸ ನಮ್ಗೆ ಸಹಕಾರ ಮಾಡಿದ್ರಿ. ಅದಕ್ಕೆ ನಿಮಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ, ನಮ್ಮ ಬುಡಕಟ್ಟು ಅಧ್ಯಯನ ವಿಭಾಗದ ಪರವಾಗಿ ಮತ್ತೆ ತಮ್ಮ ಕುಲಪತಿಗಳಾದ ಚಂದ್ರಶೇಖರ ಕಂಬಾರರ ಪರವಾಗಿ ಮತ್ತು ನಮ್ಮ ವಿಭಾಗದ ಚೆಲುವರಾಜು, ಕೇಶವನ್ ಪ್ರಸಾದ್, ಸತೀಶ್ ದೈವಜ್ಞ ಇವರೆಲ್ಲರ ಪರವಾಗಿ ನಾನು ನಿಮಗೆ ನಮಸ್ಕಾರಗಳನ್ನು, ಕೃತಜ್ಞತೆಗಳನ್ನು ಹೇಳ್ತೇನೆ.

ನಾನು ನಿಮ್ಗೆ ಈಗ ಕೆಲವು ಪ್ರಶ್ನೆಗಳನ್ನ ಕೇಳ್ಬೇಕು ಮತ್ತು ನಿಮ್ಹತ್ರ ಕೆಲವು ವಿಷಯಗಳನ್ನು ಮಾತಾಡ್ಬೇಕು, ಸಂದರ್ಶನ ಮಾಡ್ಬೇಕು ಅಂತ ಅಂದ್ಕೊಂಡಿದ್ದೇನೆ. ಏನು ಅಂದ್ರೆ, ಈಗ ನೋಡಿ ಮಲೆಮಹದೇಶ್ವರನ ಕಾವ್ಯದಲ್ಲಿಯೂ ಅಷ್ಟೇ, ಮಂಟೇದಸ್ವಾಮಿಯ ಕಾವ್ಯದಲ್ಲಿಯೂ ಅಷ್ಟೇ, ಅಂದರೆ ಬೇರೆಬೇರೆ ವಿಚಾರಗಳು ಬರ್ತವೆ. ಕೆಲವು ದೇವರುಗಳನ್ನು ಅಥವಾ ಕೆಲವು ಸಂಪ್ರದಾಯಗಳನ್ನ……. ಕೆಲವು ಪಂಥ-ಪಂಗಡಗಳನ್ನ ಸ್ವಲ್ಪ ಬೇರೆ ಮಾಡಿ, ಮಂಟೇದಸ್ವಾಮಿ ಸಂಪ್ರದಾಯ ಎಷ್ಟು ಮಹತ್ವದ್ದು, ದೊಡ್ಡದು ಅಂತ ಹೇಳ್ತದೆ. ಈ ಮಲೆ ಮಹದೇಶ್ವರನ ಕಾವ್ಯವನ್ನ ಹಾಡುವಾಗಲೂ ನಾನು ಗಮನಿಸ್ದೆ, ಅಲ್ಲಿಯೂ ಬೇರೆಬೇರೆ ದೇವರುಗಳ ವಿಚಾರಾನೂ, ಬರ್ತದೆ. ಕೆಲವು ದೇವರುಗಳ ಹೀಯಾಳಿಕೆನೂ ಬರ್ತದೆ, ಈ ದೇವರ ಪಾರಮ್ಯವೂ ಬರ್ತದೆ, ಆದರೆ ಎಲ್ಲೂನೂ ಮಲೆಮಹದೇಶ್ವರನ ಕಾವ್ಯದಲ್ಲಿ ಮಂಟೆಸ್ವಾಮಿ ವಿಚಾರ ಬರ್ಲಿಲ್ಲ, ಹಾಗೇನೆ ಮಂಟೆಸ್ವಾಮಿ ಕಾವ್ಯದಲ್ಲಿ ಎಲ್ಲೂ ಮಲೆಮಹದೇಶ್ವರನ ವಿಚಾರ ಬರ್ಲಿಲ್ಲ. ಆದ್ರೆ ಇವೆರಡೂ ಅಕ್ಕಪಕ್ಕ ಇರೋ ದೇವ್ರು. ಆಮೇಲೆ ಒಂದೇ ದೇವ್ರಿಗೆ ಆವರೂ ಗುಡ್ದ್ರು ಇರ್ತಾರೆ, ಇವರೂ ಗುಡ್ದ್ರು ಇರ್ತಾರೆ. ಒಟ್ಟೊಟ್ಟಿಗೆ ಹೋಗ್ತಾ ಇರೋದು. ಆದರೆ ಎಲ್ಲೂವೆ ಒಂದು ಹೀಯಾಳಿಕೆ ಶಬ್ದವೂ ಇಲ್ಲ, ಅಥವಾ ಹೊಗಳುವ ಶಬ್ದವೂ ಇಲ್ಲ. ಏನೋ ಒಂದು ತರ ಸಂಬಂಧದ ವಿಚಾರವೂ ಬರ್ಲಿಲ್ಲ. ಇದು ಏನು ಕಾರಣ ಅಂತ?

ಮಹದೇವಯ್ಯ : ಆ ಸ್ವಾಮಿಗೆ ಬಂದತಹದ್ದು, ಕುರಿತದ್ದು, ಏನೇನು ಮಾಡಿದ್ರೋ ಅದನ್ನ ನಮ್ಮ ಗುರುಗಳು ಯೋಳ್ಕೊಟ್ಟಂತೆ ನಾವೂ…… ಯೋಳ್ತೀವಿ. ಅಂದ್ರೆ ಈ ದೇವ್ರುಗೊಳ ವಿಷ್ಯದಲ್ಲಿ ಆ ದೇವ್ರು ಈ ದೇವ್ರು ಒಂದು ಅನ್ನೋ ವಿಷ್ಯ ನನ್ಗೆ ಗೊತ್ತಾಗಾಕಿಲ್ಲ ಅಷ್ಟೇ.

ಹಿ.ಚಿ.ಬೋ : ನೀವೇನು ಹೇಳ್ತೀರಿ ನಂಜಯ್ಯನವರೇ?

ನಂಜಯ್ಯ : ಅವರೇಳೊಂಗೇ ಸ್ವಾಮಿ. ನಾವೂ…. ಅದೇ ತರಾನೇ. ಈ ದೇವ್ರೂ ಆ ದೇವ್ರೂ ಅಂತಾಂದ್ರೆ…… ಸರ್ವರ್ಗೂ ಒಂದೇ. ಆ ಕಾಲ್ದಿಂದ ಸೃಷ್ಟಿ ಮಾಡಿದ ಭಗವಂತನೇ ಬರ್ದಿರುವಾಗ, ಅವ್ರು ಬೇರೆ ಇವ್ರು ಬೇರೆ ಅಂತ ನಾವು ವಿಂಗಡಿಸುವ ಮಟ್ದಲ್ಲಿಲ್ಲ. ನಾವೂ ಅದೇ ತರ ತಿಳ್ಕೋಬೇಕು ಸ್ವಾಮಿ.

ಹಿ.ಚಿ.ಬೋ: ನೀವೇನು ಹೇಳ್ತಿರಿ ಶಿವಣ್ಣನವರೇ?

ಶಿವಣ್ಣ: ನೋಡಿ, ಇದನ್ನ ನಮ್ಗುರುಗಳ್ಗೆ ಮೊದ್ಲೇ ಒಂದ್ಸಲ ಪ್ರಶ್ನೆ ಮಾಡಿದ್ದಿ. ಈ ರೀತಿಯಾಗಿ ದೇವ್ರು ಕಾರ್ಯಗಳನ್ನ, ಒಂದೊಂದು ಭಾಗಗಳನ್ನ ನೀವು ಮಾಡ್ತಾ ಇದ್ದೀರಿ. ಇದರಲ್ಲಿ ನಮ್ಗೆ ಯಾವ ದೇವ್ರು ಮೇಲು? ಯಾವ ದೇವ್ರು ಇದರಲ್ಲಿ ಮುಂದಾಗಿರುತ್ತೇಂತ ನಮ್ಗುರುಗಳನ್ನ ಒಂದ್ಸಲ ವಿಚಾರ ಮಾಡ್ದೊ. ಆಗ ಅವ್ರು ಹೇಳಿದ್ರು ನಮ್ಗೆ ನೋಡಿ, ನಮ್ಮ ತಾತ, ನಮ್ಮ ತಂದೆಯವ್ರು ಎಲ್ಲ ಕಲ್ತು ಬಂದಿರ್ತಕ್ಕಂತ ವಿದ್ಯಾ, ನಾನೂ ಒಂದಷ್ಟು ನಿಮ್ಗೆ ಕಲ್ಸಿದ್ದೀನಿ. ಅದ್ರಲ್ಲಿ ಆ ದೇವ್ರು, ಈ ದೇವ್ರು ಅಂತ ವಿಂಗಡಿಸ್ತಕ್ಕಂತದೇನು ಬರಲ್ಲ. ಎಲ್ಲ ಒಬ್ಬನೇ. ಆದ್ರೆ ಆವ್ರುನೂ ಒಂದೊಂದು ಚರಿತ್ರೆ ವಹಿಸ್ಕೊಂಡಿರ್ತಾರಲ್ಲ. ಆ ಭಾಗ್ದಲ್ಲಿ ಅವ್ರು ಮುಂದ್ಹೋಗ್ತಾರೆ. ಅದನ್ನ ನಾವು ನಿಮ್ಗೆ ಒಂದು ವಿದ್ಯಾ ಮೂಲಕವಾಗಿ ತಿಳ್ಸಿಕೊಡ್ತೀವಿ ಅಂತ ನಮ್ಮ ಗುರುಗಳು ನಮ್ಗೆ ಆಗಾಗ ಹೇಳ್ತಾನೇ ಇದ್ರು, ನಾವೂ ಅದನ್ನ ಕೇಳ್ತಾನೇ ಇದ್ದೋ. ನಂಜುಂಡೇಶ್ವರ ಅಂದ್ರೆ ಏನು? ಅವುರ್ದು ಏನು ಕಾರ್ಯ? ಮಲೆ ಮಹದೇಶ್ವರ ಏನು? ಸಿದ್ದಪ್ಪಾಜಿಯವರದ್ದೇನು? ಅತಿ ದೊಡ್ಡವರದ್ದೇನು? ಹಿಂಗೆಲ್ಲ ವಿಚಾರ ಮಾಡ್ತಾ ಇದ್ದೋ. ಹಲವಾರು ದೇವ್ರುಗಳಲ್ಲಿ, ಆಗ ನಮ್ಮ ಗುರುಗಳು ಏನು ಹೇಳ್ತಾ ಇದ್ರು ಅಂತ್ರಂದ್ರೆ; ಇಲ್ಲ, ಇಲ್ಲ, ಇವು ಎಲ್ಲ ದೇವ್ರುಗಳೂ ಒಬ್ನೇನೇ. ಆದ್ರೆ ಅವರವರ ಅಧಿಕಾರಕ್ಕೆ ಅನ್ಕೊಂಡು ಹೋಗೋವಾಗ ವಹಿಸ್ಕೊಡೊಂದ್ರಿಂದ ಅವವ್ರ ಕಾರ್ಯಗಳು ಬರ್ತದೆ ಅಂತ ಆಗಾಗ ನಮ್ಗೆ ಹೇಳಿದ್ದನ್ನ ನಾವು ತಿಳ್ಕಬೇಕು.

ಹಿ.ಚಿ.ಬೋ: ಮಹದೇವಯ್ಯನವರೆ, ಈಗ ನಿಮ್ಗೆ ಎಷ್ಟು ವಯಸ್ಸು?

ಮಹದೇವಯ್ಯ : ನನ್ಗೆ ನಲ್ವತ್ತೇಳು ವರ್ಷ ವಯಸ್ಸು.

ಹಿ.ಚಿ.ಬೋ: ನೀವು ಯಾವ ವಯಸ್ಸಿನಿಂದ ಈ ಕಾವ್ಯನ ಕಲಿತ್ರಿ?

ಮಹದೇವಯ್ಯ: ನಮ್ತಂದೆಯವ್ರ ಜೊತೇಲಿ ನಾನಿದ್ದದ್ದು. ನಾನು ಯೋಳು ವರ್ಷಕ್ಕೆ ನಮ್ತಂದೆಯವರ್ನ ಸೇರ್ದೆ. ಯೋಳು ವರ್ಷದ ಕಾಲ್ದಲ್ಲಿ ಸೇರಿ ಹನ್ನೆರ್ಡು ವರ್ಷದೊರಗೂನೂವೆ ನಮ್ತಂದೆಯವ್ರು ಇದ್ರು. ನಮ್ತಂದೆಯವ್ರು ಏನಾರ ಕತೆ-ಗಿತೆ ಮಾಡ್ಕೊಂಡು ಬಂದು ತಂಬೂರಿ ಮಡ್ಗಿದ್ರೆ ನಾನು ನುಡಿಸ್ತಿದ್ದೆ. ಈ ಬಿರ್ದುಗಳೆಲ್ಲಾನೂ ನಮ್ತಂದೆಯವ್ರು ನುಡಿಸೋವಂಗೇ ನುಡಿಸ್ತಿದ್ದೆ. ಆದ್ರಿಂದ ನಮ್ತಂದೆಯವ್ರು ನನ್ಕಂಡ್ರೆ ಬೋ ಆಸೆಯಾಗೆ ಇದ್ರು.

ಹಿ.ಚಿ.ಬೋ : ನಿಮ್ಮ ತಂದೆಯವರು ಸುಮಾರು ಎಷ್ಟು ವರ್ಷ ಬದುಕಿದ್ರು?

ಮಹದೇವಯ್ಯ : ನಮ್ತಂದಯವ್ರು ಎಪ್ಪತ್ತು – ಎಂಬತ್ತು ವರ್ಷ ವಯಸ್ಸುವರ್ಗೂ ಇದ್ರು.

ಹಿ.ಚಿ.ಬೋ: ಅಂದ್ರೆ ನಿಮ್ಗೆ ಹನ್ನೆರ್ಡು ವರ್ಷಕ್ಕೆ ಅವ್ರು ತೀರ್ಕೊಂಡ್ರು ಆಮೇಲೆ ನೀವು ಹನ್ನೆರ್ಡು ವರ್ಷ ಆದ್ಮೇಲೆ ಎಲ್ಲೆಲ್ಲಿ ಕಲಿತ್ರಿ ಏನು?

ಮಹದೇವಯ್ಯ: ನಮ್ತಂದೆಯವ್ರು ತೀರೋಗ್ಬುಟ್ಟ ಮ್ಯಾಲೆ ಸ್ವಲ್ಪ ಬಿಟ್ಬಿಟ್ಟೆ. ನಮ್ತಂದೆಯವ್ರು ಯವಾಗ ತೀರೋದ್ರು, ನಮ್ತಾಯಿಗೆ ನಾನೇ ನೋಡ್ಬೇಕಾದ ಸನ್ನಿವೇಶ ಬಂತು, ಆದ್ರಿಂದ ಬುಟ್ಬುಟ್ಟೆ. ನಮ್ ಚಿಕ್ಕಪ್ಪವ್ರು ಇದನ್ನ ಬಿಡ್ಬೇಡಪ್ಪ, ನಿನ್ನ ತಂದೆಯವ್ರು ಬಾಲ ಕಷ್ಟಬಿದ್ದು ಕಲ್ಸವ್ರೆ ನಿನ್ಗೆ ಏನೋ ನಿಮ್ಮ ತಂದೆಯವ್ರ ರೀತೀನೆ ನಾನೂ ನಿನ್ಗೆ ಕಲಿಸ್ತೀನಿ. ತಂದೆಯವ್ರು ಸತ್ತೋದ್ರು ಅಂದ್ರೆ ನಾನು ಸತ್ತೋಗಿಲ್ಲ. ಅಂತ್ಹೇಳಿ ಆವಾಗ ನಮ್ತಂದೆನ್ನ ಮರಿಸಿ ನಮ್ ಚಿಕ್ಕಪ್ಪ ನಮ್ಗೆ ಸೊಲ್ಪ ಈತರ ಈತರ ಅಂತ ಹೇಳಿ ಯಾವ್ಯಾವ ದೇವ್ರ ಕತೆ ಹೆಂಗೆಮಗೆ ಅಂತ ತೋರ್ಸಿಕೊಟ್ರು.

ಹಿ.ಚಿ.ಬೋ: ಆ‌ಮ್ಯಾಲೆ……. ಈ ಮಲೆಮಹದೇಶ್ವರನಿಗೆ ಈಗ ಯಾತ್ರೆ ಹೋಯ್ತೀರಲ್ಲ ಇದು ವರ್ಷಕ್ಕೆ ಎಷ್ಟು ಸರಿ ಹೋಯ್ತೀರಿ?

ಮಹದೇವಯ್ಯ: ನಾವು ವರ್ಷಕ್ಕೆ ಏನಿಲ್ಲಾಂದ್ರೂ ನಾಕ್ಸರಿನಾದ್ರೂ ಹೋಯ್ತೀವಿ.

ಹಿ.ಚಿ.ಬೋ: ಇಲ್ಲಿ ಜಾತ್ರೆಗಳೆಲ್ಲ ಇದಾವೆ ನೋಡಿ, ಈಗ ಕಪ್ಪಡಿನಲ್ಲಿ…… ಆಮ್ಯಾಲೆ ಬಪ್ಪುಗೌಡನ ಪುರದಲ್ಲಿ, ಆಮ್ಯಾಲೆ ಚಿಕ್ಕಲ್ಲೂರಲ್ಲಿ ಜಾತ್ರೆಗಳು ಎಲ್ಲ ಇದಾವೆ ಅಲ್ವ, ಮಂಟೆಸ್ವಾಮಿಯ ಆರಾಧನೆ ಆಗ್ತಾವಲ್ಲ ಆ ಟೈಮ್ನಲ್ಲಿ?

ಮಹದೇವಯ್ಯ : ಆ ಟೈಮ್ನಲ್ಲಿ ಏನ್ಮಾಡ್ತೀವಿ ಅಂದ್ರೆ ನಾವು ಅಂತಹ ಜಾತ್ರೆಗಳ್ಗೆ ಹೋಗ್ಬೇಕಾದ್ರೆ ನಾವು ಮೂರು ಜನಗಳೂ ಹೋಗ್ಬೇಕು. ಹಾಡೋರು ಮೂರು ಜನಾ ಹೋದ್ರೆ ಆ ಸ್ವಾಮಿ ಹೆಸ್ರಲ್ಲಿ ಸ್ವಲ್ಪ ಹೊತ್ತು ಹಾಡ್ಬಿಟ್ಟು ಬರ್ಬಹುದು. ಆದ್ರೆ ಒಬ್ರೆ ಏನಾದ್ರೂ ಹೋದ್ರೆ ಪೂಜೆ – ಪುನಸ್ಕಾರ ಮಾಡಿಸ್ಕೊಂಡು ಬಂದ್ಬಿಡೋದು.

ಹಿ.ಚಿ.ಬೋ: ಮಹದೇವಯ್ಯನವರೆ, ನಿಮ್ಮ ತಂದೆಯವ್ರ ಹೆಸರೇನಂದ್ರಿ?

ಮಹದೇವಯ್ಯ : ಕುಂಟುಮಾದಯ್ಯ ಅಂತ ಸ್ವಾಮಿ.

ಹಿ.ಚಿ.ಬೋ: ಈಗ ಈ ……… ಮಲೆಮಹದೇಶ್ವರ ಅಥವಾ ಮಂಟೆಸ್ವಾಮಿ ಹೆಚ್ಚು ಕಡ್ಮೆ ಎಲ್ಲ ಜನರಲ್ಲೂ ಮಾಡ್ತಾರೆ ಅಂತ ಆಯ್ತು. ಆದ್ರೆ ನೀವು ಕಂಡಂಗೆ ಯಾವ್ಯಾವ ಜನ, ಜಾತಿ, ವರ್ಗ, ಮಂಟೆಸ್ವಾಮಿನ ಪೂಜೆ ಮಾಡ್ತಾರೆ? ಯಾವ್ಯಾವ ಜನ, ಜಾತಿ, ವರ್ಗ ಮಲೆಮಹದೇಶ್ವರನ್ನ ಪೂಜೆ ಮಾಡ್ತಾರೆ?

ಮಹದೇವಯ್ಯ: ಒಂದ್ಕೆಲ್ಸ ಬುದ್ಧೀ… ಸುಮಾರು ಜನ ನನ್ನ ಕರ್ಕೊಂಡ್ಹೋಗ್ತಾರೆ. ಜನಗಳು, ಈಗ ಮಾದೇಶ್ವರ್ನ ಪೂಜೆ ಇಡಿಸ್ತೀನಿ ಸ್ವಲ್ಪ ಬರ್ಬೇಕು ಗುಡ್ಡಪ್ಪ ಅಂತ ಕರ್ಕೊಂಡ್ಹೋಗ್ತಾರೆ. ಅಲ್ಲಿಗೆ ನಾನು ಹೋಗ್ತೀನಿ, ಅಲ್ಲಿಗೆ ಹೋದ್ರೂ ಕೂಡ ನೀವು ಯಾವ ಮತ, ಯಾವ ಜನ ಅಂತ ಕೇಳಾಕೆ ನಾನು ಸ್ವಲ್ಪ ಅಂಜ್ತೀನಿ. ಯಾಕಂದ್ರೆ ಏನು ತಿಳ್ಕೋತಾರೋ ಏನೋ ಅಂತ ನೀವು ಯಾವ ಜನ ಅಂತ ಕೇಳ್ದ್ರೆ; ಯಾಕೆ ನಮ್ಮನೇನಲ್ಲಿ ಊಟ ಮಾಡಾಕಿಲ್ವ, ತಿಂಡಿ ತಿನ್ನಾಕಿಲ್ವ ಅಂತ ಏನಾರ ಬೇಜಾರ ಪಟ್ಕೋತಾರೇನೋ ಅಂತ.

ಹಿ.ಚಿ.ಬೋ: ನಾನೇಳೋದ್ಹಂಗಲ್ಲ. ಈ ಮಲೆ ಮಹದೇಶ್ವರನ್ನ ಪೂಜೆ ಮಾಡ್ತಾರಲ್ವ ಅಥವಾ ಭಕ್ತರಾಗಿ ಒಕ್ಕಲಾಗವ್ರಲ್ವ, ಆ ಒಕ್ಕಲಾಗಿರೋವು, ಈ ಮಲೆಮಹದೇಶ್ವರನಿಗೆ ಒಕ್ಕಲಾಗಿರೋವ್ರು ಯಾವ್ಯಾವ ಜನ, ಜಾತಿಗಳವ್ರು ಈ ಮಂಟೆಸ್ವಾಮಿಗೆ ಒಕ್ಕಲಾಗಿರೋವ್ರು ಯಾವ ಜನ ಜಾತಿಗಳವ್ರು ಅಂತ ಕೇಳೋದು.

ಮಹದೇವಯ್ಯ: ಕುರುಬ ಗೌಡಗಳಲ್ಲೂ ಮಾದೇಶ್ವರನ ಗುಡ್ಡಗಳವ್ರೆ, ಈ ಪರ್ವಾರದವ್ರು ಅಂತ ಅವ್ರೆ, ಅವ್ರ ಕಡೆಯಿಂದೂವೆ ಗುಡ್ಡಪ್ಪದೀರವ್ರೆ, ಹರಿಜನದತ್ರನೂ ಗುಡ್ಡಪ್ಪದೀರವ್ರೆ

ಹಿ.ಚಿ.ಬೋ: ಒಕ್ಕಲಿಗರು, ಲಿಂಗಾಯಿತರು?

ಮಹದೇವಯ್ಯ : ಇಲ್ಲ.

ಹಿ.ಚಿ.ಬೋ: ಗುಡ್ದ್ರು ಇಲ್ಲ?

ಮಹದೇವಯ್ಯ : ಇಲ್ವೇ ಇಲ್ಲ. ಅವ್ರು ಜಂಗುಮರಾಗವ್ರೆ. ಅವುರ್ದು ಬೇರೆ ಪಂಗ್ಡ ನಮ್ದು ಬೇರೆ ಪಂಗ್ಡ.

ಹಿ.ಚಿ.ಬೋ: ಈ ಮಂಟೆಸ್ವಾಮಿಗೆ ಯಾರ್ಯಾರು ಒಕ್ಕಲಾಗದ್ರೆ? ಯಾವ್ಯಾವ ಜನ?

ಮಹದೇವಯ್ಯ: ಈ ಮಂಟೆಸ್ವಾಮಿಗೆ ಹರಿಜನಾನು ಆಗವ್ರೆ, ಗಿರಿಜನಾನೂ ಆಗವ್ರೆ ಆಮೇಲೆ ಈ ಆಚಾರ್ರು ‍ಮನೆಸ್ಥಾನದಲ್ಲೂವೆ ಆಗವ್ರೆ.

ಶಿವಣ್ಣ : ಜಾಸ್ತಿ ತುಂಬಾ ಅಂತಂದ್ರೆ ಆಚಾರ್ರು‍…. ಬಾಳ ಜಾಸ್ತಿ.

ಹಿ.ಚ.ಬೋ: ಈ ಗಿರಿಜರಂದ್ರೆ ಈಗ ಮೈಸೂರು ಜಿಲ್ಲೇನಲ್ಲಿ ಕುರುಬ್ರು ಎಲ್ಲ ಅವ್ರಲ್ಲ. ಈಗ ಕಾಡು ಕುರುಬ್ರು, ಜೇನು ಕುರುಬ್ರು, ಸೋಲಿಗ್ರು ಇವ್ರೆಲ್ಲ ಮಂಟೆಸ್ವಾಮಿಗೆ ಭಕ್ತರಾಗವ್ರ? ಅಥವಾ ಇವ್ರೆಲ್ಲ ಮಲೆಮಹದೇಶ್ವರರಿಗೆ ಭಕ್ತರಾಗವ್ರ ಹೆಂಗೆ?

ಮಹದೇವಯ್ಯ : ಅವ್ರ ವಿಷ್ಯ ನಮ್ಗೆ ಗೊತ್ತಾಗದಿಲ್ರ. ನಮ್ಜೊತೆಗೆ ಬಂದಿರೋವ್ರು ಗುಡ್ಗೋಳು ನಮ್ಹತ್ರ ಬರ್ತಾ ಇರ್ತಾರೆ. ನಾವು ಇಂತೆವ್ರು, ಇಂತ್ರವ್ರು ಅಂತ ಬರ್ತಾರೆ, ಅವರ್ನ ಕೇಳ್ಕೊಂಡು ನಾವು ಯೋಳ್ತೀವಿ.

ಹಿ.ಚಿ.ಬೋ: ಆಮೇಲೆ ಈಗ ಈ ಮಂಟೆಸ್ವಾಮಿ ಕಾವ್ಯ ಆಗ್ಲೀ, ಮಲೆಮಹದೇಶ್ವರನ ಕಾವ್ಯ ಆಗ್ಲೀ ಎರ್ಡೂನೂ ನೀವು ಹಾಡ್ತೀರಿ, ಈಗ ಈ ಮಂಟೆಸ್ವಾಮಿಯ ಭಕ್ತರೂನೂವೆ ಇವೆರಡೂ ಕಾವ್ಯಗಳನ್ನ ಹಾಡ್ತಾರೆ. ಹಿಂಗೆ ಹಾಡ್ವಾಗ ಈಗ ನೀವು ಮಲೆಮಹದೇಶ್ವರನ ಭಕ್ತರಾಗಿ ಮಂಟೆಸ್ವಾಮಿಯ ಕಾವ್ಯಾನ್ನ ಹಾಡಿದ್ರಲ್ವ? ಈ ಮಂಟೆಸ್ವಾಮಿಯ ಭಕ್ತರನೇ, ಅಂದ್ರೆ ಗುಡ್ದ್ರೇ ಹಾಡಿದ್ರೆ ಇದ್ಕಿಂತ ಬೇರೆ ಹಾಡ್ತಾರೋ ಅಥವಾ ಇದೇನೋ?

ಮಹದೇವಯ್ಯ : ಇಲ್ಲ, ಅದು ಬೇರೆ ಹಾಡಾಕೆ ಆಗಾದಿಲ್ಲ ಯಾವ ದೇವ್ರ ಗುಡ್ಗಳು ಆದ್ರೂ ಕೂಡ, ಆ ಸ್ವಾಮಿ ಕತೆ ಏನಾಯ್ತದೆ ಅನ್ನೋದನ್ನ ನಮ್ಗೆ ಕಲ್ಸೋವಂತ ಗುರು ಹತ್ರಾನೇ ನಾವು ಅವನ್ನೆಲ್ಲ ತಿಳಿಪಡಿಸ್ಕೊಂಡು ಹೇಳ್ಬಹುದು. ಈವಾಗ ನಾನು ಮಾದೇಶ್ವರನ ಕತೆ ಹಾಡ್ತೀನಿ, ಸಿದ್ದಪ್ಪಾಜಿ ಕತೆ ಹಾಡ್ತೀನಿ. ಮಾದೇಶ್ವರ ಏನು ಮಾಡವ್ರೆ ಅನ್ನೋದನ್ನ ನಮ್ಗುರು ಕಲ್ಸಿ ಕೊಟ್ಟಂಗೆ ಹೋಗ್ಬೇಕು. ಈ ಮಾದೇಶ್ವರನ ಕತೆ ತಕಂಡ್ಬಂದು ಸಿದ್ದಪ್ಪಾಜಿಗೆ ಸೇರಿಸ್ಕಂಡು ಹಾಡಾಕೆ ಆಗಾಕಿಲ್ಲ. ಸಿದ್ದಪ್ಪಾಜಿ ಕತೆ ತಕೊಂಡೋಗಿ ಮಾದೇಶ್ವರಂಗೆ ಸೇರ್ಸಿ ಹಾಡಾಕೆ ಆಗಾಕಿಲ್ಲ.

ಹಿ.ಚಿ.ಬೋ: ಕತೆ ಮಾತ್ರ ಯಾವ್ದೇ ಗುಡ್ಡಗಳು ಹಾಡಿದ್ರೂ ಬದ್ಲಾವಣೆ ಮಾಡಾಕೆ ಅಗಾಕಿಲ್ಲ, ಕತೆ ಒಂದೇ?

ಶಿವಣ್ಣ: ಈಗ ಏನ್ಮಾಡ್ಕೊಂಡ್ಬುಡ್ತಾರಂದ್ರೆ, ಕೆಲವ್ರು ಈಗ ಒಂದ್ಕಡೆ ಹಾಡ್ತಾ ಇರ್ತಾರೆ. ನವು ಹೋಗಿ ನೋಡೋವಂತ ಸನ್ನಿವೇಶ ಅಲ್ಲಿ ಇರ್ತದೆ. ಅಲ್ಲಿ ಹಾಡ್ವಾಗ ಏನಾಗಿರ್ತದೆ, ಜಾಸ್ತಿ ಜನಾ ಕುಂತಿರೋತಾವು ಅಕ್ಕ-ಪಕ್ದಲ್ಲಿರ್ತಕ್ಕಂತ ಸಣ್ಣ ವಿಷ್ಯಗಳೆಲ್ಲ ಸೇರಿಸ್ಕೊಂಡ್ಬುಡ್ತಾರೆ, ಅದ್ಕೆ ಅಳವಡಿಸ್ಕೊಂಡ್ಬುಡ್ತಾರೆ. ಅದು ಆವಾಗ ನಮ್ಗೆ ಹಿಡ್ಯಾದಿಲ್ಲ. ಹೆಂಗಿಡ್ಯಾದಿಲ್ಲಾಂದ್ರೆ ನಮ್ಗುರುಗಳು ಹತ್ರಾನೆ ಬೇರೆ ವಚನ ಇರೋದು. ಇವ್ರು ಈತರ ಬೇರೆ ಸೇರಿಸ್ಕೊಂಡಿರ್ತಾರಲ್ಲ ಎಂಬ ಕಾರಣದಿಂದ ನಾವು ಒಂದೊಂದ್ಸಲ ಕೇಳಿರ್ತೀವಿ, ಈ ಸಿದ್ದಪ್ಪಾಜಿ ಕತೆನೂ ಮಾಡ್ತಾ ಇರ್ತೀನಿ, ಮಾದೇಶ್ವರ್ನ ಕತೆಗಳನ್ನೂ ಮಾಡ್ತೀರಲ್ಲ ಇದರಲ್ಲಿ ಏನು ಡಿಪರೆನ್ಸು? ಏನಿಕ್ಕೆ ಅವನ್ನೆಲ್ಲ ಇಲ್ಲಿ ಬಂದು ಸೇರಿಸ್ತೀರಿ? ಎಂದಾಗ ಅವ್ರು ಹೇಳ್ತಾರೆ; ಜನ ಅಟ್ರಾಕ್ಷನ್ ಗೋಸ್ಕರವಾಗಿ ಕುಂತ್ಕೊಳ್ವಾಗ ನಾವು ಕೇಳೋ ಖುಷಿಗೋಸ್ಕರವಾಗಿ ಹಿಂಗೆ ಸೇರ್ಸಿರ್ತೀವಿ, ನೇರವಾಗಿ ಹಾಡಬೇಕೂಂತೇಳ್ದ್ರೆ ನಮ್ಗೆ ಒಳ್ಳೆ ಪಂಕ್ಯನ್ನು ಮತ್ತೆ ಕಾರ್ಯಕ್ರಮಗಳು ಮುಂತಾಗಿ ಇರ್ತವಲ್ಲ ಅಲ್ಲೆಲ್ಲ ಈ ತರೆ ಸೇರ್ಸಿ ಮಾತಾಡಾಕಾಗಲ್ಲ, ಇದೆಲ್ಲ ಹೇಳಲ್ಲ ಅಂತ. ಅದು ನೇರ, ಗುರು ಏನು ಹೇಳ್ಕೊಟ್ಟಿರ್ತಾರೆ ಅನ್ನೋದು ಅಲ್ಲೊಂತಾವ್ರು ಮೂಡಿ ಬರ್ತದೆ ನೋಡಿ ಆವಾಗ. ಈ ಜಾತ್ರೆಗಳಲ್ಲಿ ಬಾಳ ಖುಷಿಯಾಗಿ, ತಮಾಷೆಯಾಗಿ ಮಾಡ್ತಾನೆ ಸಾರ್. ಆದ್ರಲ್ಲೆಲ್ಲ ಜನ ನೋಡೋವಂತದು ಮತ್ತೆ ಕುಂತ್ಕೊಂಡು ನಗ್ಬೇಕು ಅನ್ನೋ ತಮಾಷೆನೆಲ್ಲ ಚೆನ್ನಾಗಿ ಮಾಡ್ತಾರೆ. ಇದು ನಮ್ಗೆ ಆಗಲ್ಲ, ಅಂದ್ರೆ ಜಾತ್ರೆಗಳ್ಲಿ ಇಟ್ಕಳ್ಬಹುದು ಅಷ್ಟೇನೆ. ಈಗ ಇಂತ ಪಂಕ್ಸನ್ನುಗಳಲ್ಲಿ ಅವ್ರು ಬೇಕಾದಷ್ಟು ಖರ್ಚಿಟ್ಟು, ಆ ಧರೆಗೆ ದೊಡ್ಡೋರು ಯಾವ್ರೀತಿಯಾಗಿ ಹುಟ್ಟಿ ಬೆಳಿದ್ರು ಅನ್ನೋವಂತದನ್ನ ನಾವು ಪತ್ತೆ ಹಚ್ಬೇಕು ಅಂತ ನಿಮ್ಮಲ್ಲಿ ಬಾಳ ಅದು ಮೂಡಿ ಬಂದ್ಬುಟ್ಟಿರುತ್ತೆ. ಈ ಗುಡ್ಗಳಿಗಿಂತ ಎಲ್ಲ ಜಾಸ್ತಿ ಕಲಾವಿದರಿಗಿಂತ ನಿಮ್ಮಲ್ಲಿ ಜಾಸ್ತಿ ಬಂದ್ಬುಟ್ಟಿದೆ. ಆದ್ರಲ್ಲಿ ಏನಾಗುತ್ತೆ, ಅದ್ರಿಂದ ನಾವು ನಿಮ್ಗೆ ದಾರಿಯಾಗಿ ನೇರವಾಗಿ ಹೋಗ್ಬೇಕು, ಬೇರೆ ಅಕ್ಕ-ಪಕ್ದಲ್ಲಿ ಹೋಯ್ತೂಂತಂದ್ರೆ ಇದೂ ಅದೇ ತರಾನೇ, ನಾವು ಕೆಲವು ಕಡೆ ಕೇಳೋದಕ್ಕೂ ಇದೂ ಹಂಗೇ ಆಗ್ತಾದಲ್ಲ…. ಅಂತ ನೀವು ತಿಳ್ಕೋತೀರ. ಆದ್ರಿಂದ ಇಂತಾ ಕಾರ್ಯಗಳಲ್ಲೆಲ್ಲ ನಾವು ಬೇರೆ ಅಕ್ಕ-ಪಕ್ಕ ಯಾವ್ದುನ್ನೂ ಸೇರ್ಸಾಕಾಗಲ್ಲ. ನೇರವಾಗಿ ಏನು ಹೋಗಿರ್ತಾರೆ ಅದನ್ನೇ ನಿಮ್ಗೆ ನಾವು ನೇರವಾಗಿ ಸೇರ್ಸಿದ್ರೆ ನಮ್ಗೆ ಒಂದು ಕೃತಜ್ಞತೆ ಕೊಡ್ತೀರ ಮತ್ತೆ ನೀವೂನು ಇದ್ನ ಬಾಳ ಖುಷಿ ಪಟ್ವಿ ಅವುಕ್ಕಿಂತ ಕರೆಕ್ಟಾಗಿವೆ ಅಂತ ನೀವು ತಿಳ್ಕತ್ತೀರ ಇಷ್ಟು ಮಾತ್ರ ಗೊತ್ತಿದೆ.

ಹಿ.ಚಿ.ಬೋ: ಮಹದೇವಯ್ಯನವ್ರೆ ನಿಮ್ಮ ವೃತ್ತಿ, ಅಂದ್ರೆ ದೇವ್ರುಗಳನ್ನ ನಂಬಿ ಊರೂರ್ಗೆ ಹೋಗಿ ಈತರ ಸೇವೆ ಮಾಡ್ಕೊಂಡಿರೋದೇ ನಿಮ್ಮ ವೃತ್ತಿ….. ನಿಮ್ಗೆ ಜಮೀನು-ಗಿಮೀನು ಅಂತದು ಎಷ್ಟು? ಏನೂ ಇಲ್ವೊ?

ಮಹದೇವಯ್ಯ: ಏನಿಲ್ಲ ಸಾರ್

ಹಿ.ಚಿ.ಬೋ: ಏನೋ ಇಲ್ವೇ ಇಲ್ಲ……?

ಮಹದೇವಯ್ಯ: ಜಮೀನು ಇಲ್ಲ

ಹಿ.ಚಿ.ಬೋ: ಪೂರ್ತ ಇದೇ ವೃತ್ತಿ?

ಮಹದೇವಯ್ಯ : ಹೂಂ

ಹಿ.ಚಿ.ಬೋ: ಹಂಗಾದ್ರೆ ಈಗ ನೀವು ನೋಡ್ತಾ ಇದ್ದೀರಿ. ಈಗ ಕಾಲ ತುಂಬಾ ಬದಲಾಗ್ತಾ ಇದೆ. ಈಗೆಲ್ಲ ವಿಜ್ಞಾನ ಯುಗ ಬರ್ತಾ ಇದೆ. ನಾಗರಿಕತೆ ಹೆಚ್ತಾ ಇದೆ. ಆಮೇಲೆ ಈ ಟಿ.ವಿಗಳು, ಸಿನಿಮಾಗಳು ಇವುಗಳ ಹಾವಳಿನಲ್ಲಿ ಈ ತರದ ಕತೆಗಳ್ನ ಮಾಡ್ಸವ್ರು ಕಡಿಮೆ ಆಗ್ತಾ ಅವ್ರೆ ಅಂತ ಅನಿಸ್ತಾ ಇದೆಯಾ? ಹಂಗಾಗಿದ್ರೆ ನಿಮ್ಮ ಜೀವನಕ್ಕೆ ಹೆಂಗೆ?

ಮಹದೇವಯ್ಯ : ಮೊದ್ಲು ಕತೆಗೊಳು ನಡೀತಿದ್ದೊ ಈಗ ಕಲೆಗೊಳು ಜಾಸ್ತಿ ಬಂದ್ವಲ್ಲ, ಈವಾಗ ಎಷ್ಟು ಕಮ್ಮಿ. ಅಂದ್ರೆ ಕಮ್ಮಿ ಆಯ್ತು ಅಂದ್ಬುಟ್ಟು ನಾವು ಏನೂ ಮಾಡಾಕಾಕಿಲ್ಲ. ಅಂದ್ರೆ ಸಿಕ್ಕಿದ ದಿವ್ಸ ಹೋಯ್ತೀನಿ, ಸಿಕ್ದೇ ಇದ್ದ ದಿವ್ಸ ಮಾತ್ರ ಈ ಸ್ವಾಮಿ ಹೆಸ್ರಲ್ಲಿ ಎಲ್ಲಾದ್ರೂ ಭಿಕ್ಷೆ-ಗಿಕ್ಷೆ ಮಾಡ್ಕೊಂಡು ಇರ್ತೀನಿ.

ಹಿ.ಚಿ.ಬೋ: ಈ ರೀತಿಯ ಕತೆ ಸಿಕ್ದೇ ಇದ್ದಾಗ ಭಿಕ್ಷೆನೇ ಮಾಡ್ತೀರಿ ಈಗ್ಲೂನೂವೆ? ನಂಜಯ್ಯನವ್ರೆ ನಿಮ್ಮ ಬದುಕು ನಿಮ್ಮ ವೃತ್ತಿ ಎಲ್ಲ ಏನು?

ನಂಜಯ್ಯ: ನಮ್ದೂ ಇದೇ ತರಾನೆ ಸ್ವಾಮಿ. ನಿಮ್ಗೆ ಕಂಡಂಗೆ ಕೆ.ಆರ್.ಮಿಲ್ಲಲ್ಲಿ ಇದ್ದದ್ದು. ಹನ್ನೆರ್ಡು ವರ್ಷ ಆಯ್ತು. ಅದು ಬಂದಾಗ್ಬಿಡ್ತು. ಅವತ್ನಿಂದ ಇವತ್ತಿನರ್ಗೂ ಮಿಲ್ಲಿಗೆ ಹೊಗೋಕೆ ಮೊದ್ಲೂನೂವೆ ಆವಾಗ್ನಿಂದಾನೂ ಈ ವೃತ್ತಿನೇ ಮಾಡ್ಕೊಂಡು ಬರ್ತಾ ಇರೋದು ಕಡೆಗಾಲ್ದಲ್ಲಿ. ಈಗ ಈ ಕೆಲ್ಸ ಸಿಕ್ತು ಅಂತೇಳ್ಬುಟ್ಟು ಈ ಸ್ವಾಮೀನ ಮರೀಬಾರ್ದು, ಮರ್ತ್ರೆ ನಾಳೆ ನಾವು ಯಾವ ಕಷ್ಟಕ್ಕೆ ಗುರಿ ಆಗ್ತೀವೋ? ನಂಬೇಕು ಅನ್ಬುಟ್ಟು ಏನೋ – ಹಿಡ್ಕಂಡಿರೋದಿಕ್ಕೆ ಈವತ್ತಿನ ದಿವ್ಸ ಅದ್ರಲ್ಲೇ ನಾವು ಕಾಲ ಕಳೀತಾ ಇರೋದು ಸ್ವಾಮಿ. ಭಿಕ್ಷಾಮಾಡ್ಕಂಡೇ ಕಾಲ ಕಳೆಯೋದು.

ಹಿ.ಚಿ.ಬೋ:ನಿಮ್ದು ಶಿವಣ್ಣನವರೆ ಸ್ವಲ್ಪ ಭಿನ್ನವಾದದ್ದು. ಇವರಿಬ್ರೂವೆ ಹಿಂಗೆ ಹಾಡು ಹಾಡ್ಕಂಡು ಅಥವಾ ಹಿಂಗೆ ಕಲೆಯ ಸಂದರ್ಭ ಸಿಕ್ದೆ ಹೋದ್ರೆ ಭಿಕ್ಷೆ ಮಾಡ್ಕಂಡು ಜೀವ್ನ ಮಾಡ್ತಾ ಇದ್ದಾರೆ. ಆದ್ರೆ ನೀವು ಸ್ವಲ್ಪ ಬೇರೆ ದಾರೀನಲ್ಲಿ, ಅಂದ್ರೆ ನೀವು ಬೇರೆ ಕಲೆಗಳನ್ನೆಲ್ಲ ರೂಢಿಸ್ಕೊಂಡು ನೀವು ಈಗ ಶಿಲ್ಪನೂ ಮಾಡ್ತೀರಿ ಮತ್ತೆ ಕೆತ್ತನೆಗಳನ್ನೂ ಮಾಡ್ತೀರಿ. ಬೇರೆಬೇರೆ ಇದನ್ನೆಲ್ಲ ಮಾಡ್ತೀರಿ, ಈ ರೀತಿ ಮನೆಗಳನ್ನ ಕಟ್ತೀರಿ, ಸ್ವಲ್ಪ ನಿಮ್ಮ ವೃತ್ತಿ ಬೇರೆ ಮಾಡ್ಕೊಂಡಿದ್ದೀರಿ, ಇವರ ನಡುವೆ ನೀವು ಬಿಡುವು ಮಾಡ್ಕೊಂಡು ಈ ಕಾವ್ಯ ಹಾಡೋದು ಅಥವಾ ಇವು ಜೊತೆಗೆ ಹೋಗೋದುನೂ ಮಾಡ್ತೀರಿ, ಈಗ ನಿಮ್ಮ ಅನುಭವದಲ್ಲಿ ಇದೇ ರೀತಿ ಮತ್ತೊಂದೋ, ಕಷ್ಟವೋ-ಸುಖಾನೋ- ಅದನ್ನೇ ಹಿಡ್ಕೊಂಡು ಮಾಡೋದು ಒಳ್ಳೇದೋ? ಇಲ್ಲ ಅದನ್ನ ನಿಮ್ತರ ಒಂದು ಹವ್ಯಾಸವಾಗಿಟ್ಕೊಂಡು ಆವಾಗ….. ಈವಾಗ….ಉಳಿದಂತೆ ವೃತ್ತಿಗೆ ಬೇರೊಂದನ್ನ ಅವಲಂಬಿಸಿಕೊಳ್ಳೋದು ಒಳ್ಳೆಯದಂತ ಅನ್ನಿಸ್ತದೋ? ನಿಮ್ಮ ಅನುಭವದಲ್ಲಿ ಏನನ್ನಿಸ್ತದೆ?

ಶಿವಣ್ಣ: ಇಲ್ಲ ಸಾರ್, ಈಗ ನಾನು ಇತರ ಕೆಲ್ಸಗಳನ್ನ ಕಲ್ತ್ಕೊಂಡಿದ್ದೀನಿ. ಈಗ ನಾನು ಸ್ವಲ್ಪ ಗಾರೆ ಕೆಲ್ಸಾಂತ ಮಾಡ್ತೀನಿ, ಆದ್ರೆ ನಾವು ನಮ್ಮ ಕೆಲ್ಸದಲ್ಲಿ ರಕ್ತ ಇರೋವರೆಗೆ ಅಷ್ಟೇನೆ. ಆಮೇಲೆ ಇನ್ನು ಅದ್ರಿಂದ ನಾವು ಮುಂದುವರಿಯೋಕಾಗಲ್ಲ. ಅದ್ಕೋಸ್ಕರ ಏನ್ಮಾಡಿರ್ತೀವಿ ನಾವು ನಮ್ಮ ಗುರುಗಳ ಹತ್ರ ಸೇರಿ ಅವ್ರಲ್ಲಿರುವಂತ ವಿದ್ಯೆಗಳ್ನ ನಾವು ಕಲ್ತ್ರೆ ನಮ್ಗೆ ಮುಂದೆ ಅನುಕೂಲಾಗ್ತದೇಂತ ನಮ್ಮ ಪೂರ್ತಿ ನಿರ್ಧಾರ ಅದನ್ನೇ ಮಾಡ್ಕೊಂಡಿರೋದು. ಗಾರೆ ಕೆಲ್ಸ ಏನೂ ಹೇಳ್ಕಂತದೇನು ದಿವ್ಸಗಂಟಾ ಆಗಲ್ಲ. ಇದನ್ನ ನಾವು ಮರಿಯೋಕೆ ಆಗಲ್ಲ. ಇದು ಪರಂಪರೆ ಕಾಲ್ದಲ್ಲಿ ನಡೀಬೇಕು. ಇದರ ಮೇಲೆ ಅಷ್ಟೇ ನಮ್ಗೆ ಗೌರವಾನೂ ಇದೆ. ಈ ಮಂಟೆಸ್ವಾಮಿ ಕಾವ್ಯನೆ ಆಗ್ಲೀ ಮಲೆಮಹದೇಶ್ವರನ ಕಾವ್ಯನೆ ಆಗ್ಲಿ ಮತ್ತೆ ಹಲವಾರು ದೇವ್ರುಗಳ ಕಾವ್ಯಗಳಲ್ಲಿ ಬಾಳ ತಿಳ್ಕೊಳೋವಂತದು ಇದೆ. ಅದ್ರಿಂದ ನಾವು ಅದನ್ನ ಮರಿಯೋಕೆ ಆಗೋದೇ ಇಲ್ಲ, ಯಾವ್ದೆ ಕಾರಣಕ್ಕೂ ಈವಾಗ ಇರೋವರೆಗೂನು
ಅಷ್ಟೇನೆ ನಾಲ್ಕು ದಿವ್ಸ ನಾವು ಕೈನಿಂದ ಆಗಲ್ಲ ಅಂತಾದ್ಮೇಲೆ ನಮ್ಮನ್ನ ಯಾರೂ ಗಮನಿಸೊಲ್ಲ, ಆಗ ಇವ್ನೇ ತಾನೆ ನಮ್ಗೆಗತಿ. ಅದಕ್ಕೋಸ್ಕರ ನಾವು ಏನೇ ಮರೆತ್ರು ಇವ್ನಂತೂ ಮರೀವಂತ ಪ್ರಶ್ನೆಯೇ ಇಲ್ಲ.

ಹಿ.ಚಿ.ಬೋ: ಮಹದೇವಯ್ಯನವರೆ, ಈಗ ನಾನು ಕೇಳ್ತೀದ್ದೀನಿ- ಏನೆಂದ್ರೆ, ನಮ್ಗೆ ಅಧ್ಯಯನ ಮಾಡೋರಾದ್ರಿಂದ, ಯಾವ್ಯಾವ ಜನ, ಯಾವ್ಯಾವ ಜಾತಿ, ಇವ್ರಿಗೆ ಯಾವ್ಯಾವ ಕಷ್ಟ ಇತ್ತು. ಸಾಮಾಜಿಕವಾಗಿ ಏನೇನು ಕಷ್ಟ ಅನುಭವಿಸಿದ್ರು, ಯಾಕೆಂದ್ರೆ ಇದ್ರಲ್ಲಿ ನಿಮ್ಗೆ ಗೊತ್ತಲ್ಲ? ಮೇಲ್ಜಾತಿಯವರೆಂದ್ರೆ ಅವರ್ಗೇ ಒಂದು ಅನುಕೂಲಗಳಿರುತ್ವೆ. ತೀರಾ ಕೆಳಜಾತಿ ಅಂದ್ರೆ ಅವರ್ದೇ ಒಂದು ರೀತಿಯ ಅನಾನುಕೂಲಗಳೂ ಇರುತ್ವೆ- ಈ ದೃಷ್ಟಿಯಿಂದ, ನಾವು ಅಧ್ಯಯನ ಮಾಡೋ ದೃಷ್ಟಿಯಿಂದ ಕೇಳ್ತಿದ್ದೀನಿ, ಈಗ – ನೀವು ಯಾವ ಜಾತಿಯವ್ರು? ಮತ್ತೆ ಬೇರೆ ಜಾತಿಗಳಿಂದ ನಿ‌ಮ್ಗೇನಾದ್ರೂ ಕಿರುಕುಳಗಳು ಆಗಿದೆಯೇ ಅಥವಾ ಅಪಮಾನಗಳು ಆಗಿದೆಯೇ? ಅಥವಾ ಈ ಜಾತಿಗಳಲ್ಲಿ ಹುಟ್ಟಿನೂ ನೀವು ಮಲೆಮಾದೇಶ್ವರನ ಅಥವಾ ಮಂಟೆಸ್ವಾಮಿ ಕಾವ್ಯಗಳನ್ನ ಕಲ್ತು ಇಷ್ಟು ದೊಡ್ಡ ಜ್ಞಾನಿ ಆಗಿದ್ದೀರಿ.! ನಮ್ ದೃಷ್ಟಿನಲ್ಲಿ- ನೀವು ಇಲ್ಲಾ ಅನ್ಬಹುದು ನಮ್‌ದೃಷ್ಟಿನಲ್ಲಿ ಜ್ಞಾನಿನೇ ನೀವು – ಇದು ಹೇಗೆ ಸಾಧ್ಯ ಆಯ್ತು? ಇದನ್ನೆಲ್ಲ ಸ್ವಲ್ಪ ತಿಳ್ಸಿಬಿಡಿ. ಅಂದ್ರೆ ನಿಮ್ಜಾತಿ ಯಾವ್ದು, ತಂದೆಯವ್ರು ಹೇಗೇಗೆ ಇದು ಮಾಡ್ತಿದ್ರು, ನಿಮ್ಮ ಕಷ್ಟ – ಸುಖಗಳೇನು? ಬೇರೆ ಇತರ ಜಾತಿಯವ್ರು ಜೊತೆಗೆ ನಿಮ್ಮ ಸಂಬಂಧಗಳು ಹೇಗೆ- ಇದು ಸ್ವಲ್ಪ ಹೇಳಿ.

ಮಹದೇವಯ್ಯ: ಈವಾಗ ನಾವು ಯಾವ ಜಾತಿಯೊಳಗೆ…. ನಮ್ಜಾತೀನ ಎಕೇಸು ಅಂತ ನಾವು ಕರೀತಿವಿ. ನಮ್ಜಾತಿ ಒಳಗೇನೆ…ನಮ್ತಂದೆಯವ್ರು…..ನಾವು ನಮ್ತಂದೆ ಇದ್ದ ಕಾಲದಿಂದೂವೆ ಅವ್ರು ಏನೇನೋ…..ಅವ್ರು ದೊಡ್ಡೋರಾಗಿದ್ರು ಆವಾಗ ನಾವು ಚಿಕ್ಕವ್ರಾಗಿದ್ದೋ ಅಂದ್ರೆ ನನ್ಗೆ ತಾಯಿ-ತಂದೆಗೊಳು ಇದ್ರು…… ತಂದೆನ ಬಾಳ ದಿವ್ಸ ಮಡೀಕೊಳ್ಳಕ್ಕೆ ಫಲ ತರ್ಲಿಲ್ಲ, ನಮ್ತಾಯಿ ಕಲ್ಸಿದಂತ ಬುದ್ಧೀವೊಳ್ಗೆ ನಮ್ಪಕ್ದಲ್ಲಿ ನಮ್ಚಿಕ್ಕಪ್ಪ ಒಬ್ರು ಇದ್ರು, ಅವ್ರು ಬುದ್ಧಿ ಕಲ್ತುಕೊಂಡು – ನಾನು ಸ್ವಲ್ಪ ಬಯ್ಲು ಮೇಲೆತಿರುಗ್ಸಿ ಪಾಠ ಮಾಡ್ಸಿದವ್ರೇ ನಮ್ಚಿಕ್ಕಪ್ಪ. ಒಂದು ಕತೆ ಕವ್ವಾಗೇರಿ ಮಾಡುಸ್ಪೇಕಾದ್ರೂ ಅವ್ರ ಜೊತೇಲಿ ನಾನು ಹೋಗೋದು ಅವ್ರ ಜೋತೇಲಿ ಬರೋದು.

ಹಿ.ಚಿ.ಬೋ: ಅವ್ರ ಹೆಸ್ರೇನು?

ಮಹಾದೇವಯ್ಯ: ನಮ್ಚಿಕ್ಕಪ್ಪನ ಹೆಸ್ರು……ಮಾದಯ್ಯನವ್ರು

ಹಿ.ಚಿ.ಬೋ: ನಿಮ್ತಾಯಿಯವ್ರ ಹೆಸ್ರೇನು?

ಮಹದೇವಯ್ಯ: ನಮ್ತಾಯಿಯವ್ರ ಹೆಸರು ಸಣ್ಣ ಮಾದಮ್ಮ ಅಂತ

ಹಿ.ಚಿ.ಬೋ: ನಿಮ್ಮ ಹೆಂಡತಿ ಹೆಸ್ರು?

ಮಹದೇವಯ್ಯ: ನಮ್ಹೆಂಗ್ಸರ ಹೆಸ್ರು….ಪುಟ್ಟಮ್ಮ ಅಂತ

ಹಿ.ಚಿ.ಮೋ: ಮಕ್ಳಿಗೆಲ್ಲ ಏನೇನು ಹೆಸ್ರಿಟ್ಟಿದ್ದೀರಿ?

ಮಹದೇವಯ್ಯ: ನನ್ಹಿರಿಮಗಳ ಹೆಸ್ರು ಸಣ್ಮಾದು ಅಂತ ಕಟ್ಟಿದ್ದೀನಿ, ಇನ್ನು ಚಿಕ್ಕವ್ಳು ಹೆಸ್ರು ಉತ್ರಾಜಮ್ಮ ಅಂತ ಕರ್ದಿದ್ದೀನಿ, ಅವ್ಳ ಕಿರಿಯೋವ್ಳು ಸುಬ್ಬಮ್ಮ ಅಂತ ಕರಿದೀನಿ, ಅವ್ಳ ಕಿರಿಯವ್ಳು ಭಾಗ್ಯ ಅಂತ ಕರ್ಕಂಡಿದ್ದಿನಿ, ಕೊನೆಯ ಮಗುಳು ಆರನೆಯವ್ಳು – ಜಯಮಾಲ ಅಂತ ಕರೀತೀನಿ. ಈಗ ಯೋಳ್ನೇ ಮಗ ಗಂಡುಮಗ. ಆರು ಹೆಣ್ಣು ಮಕ್ಳು.

ಹಿ.ಚಿ.ಬೋ: ಅವನ್ಗೆ ಏನು ಹೆಸ್ರಿಟ್ಟಿದ್ದೀರಿ?

ಮಹದೇವಯ್ಯ: ಮಹದೇವ ಸ್ವಾಮಿ ಅಂತ. ಅವ್ನು ಇಸ್ಕೂಲಲ್ಲಿ ಎಂ.ವಿಜಯ್ಕುಮಾರ್ ಅಂತ ಕೊಟ್ಕೊಂಡವ್ನೆ.

ಹಿ.ಚಿ.ಬೋ: ಅವ್ನು ಎಷ್ಟೇ ಕ್ಲಾಸು ಈಗ? ಕೊನೆಯವ್ನು

ಮಹದೇವಯ್ಯ: ಐದಕ್ಕೋಗಿದಾನೆ ಸ್ವಾಮಿ

ಹಿ.ಚಿ.ಬೋ: ಈಗ ಹೆಣ್ಮಕ್ಳು ಎಷ್ಟು ಜನಾನ್ನ ಮದ್ವೆ ಮಾಡಿದ್ರಿ?

ಮಹದೇವಯ್ಯ: ನಾಲ್ಕು ಜನಾನ್ನ ಮಾಡಿದ್ದೀನಿ

ಹಿ.ಚಿ.ಬೋ: ಇನ್ನಿಬ್ರು ಅವ್ರೆ?

ಮಹದೇವಯ್ಯ: ಇನ್ನಿಬ್ರು ಆವ್ರೆ.

ಹಿ.ಚಿ.ಬೋ: ಅವ್ರೂ ಮದ್ವೆಗೆ ಬಂದವ್ರೆ?

ಮಹದೇವಯ್ಯ: ಒಬ್ರು ನಿರ್ಹಾಂಕ್ಕಂಡವ್ರೆ.

ಹಿ.ಚಿ.ಬೋ: ಈಗ…… ನಿಮ್ಮಲ್ಲಿ ಮದ್ವೆ ಅಂದ್ರೆ ಹೇಗೆ? ಕಷ್ಟವೋ? ಖರ್ಚು ಜಾಸ್ತಿಯೊ?

ಮಹದೇವಯ್ಯ: ಇಲ್ಲ ಸರ್…..ಅಷ್ಟು….ಜಾಸ್ತಿ ಸಾರ್, ಏನ್ಮಾಡಾಕಾಯ್ತದೆ? ಈಗ ಕಾಲಾನೇ ಈತರ ಬಂದ್ಬುಟ್ಟದೆ.

ಹಿ.ಚಿ.ಬೋ: ನಾಲ್ಕು ಮದ್ವೆ ಮಾಡಿದ್ರಿ ಹ್ಯಾಗೆ?

ಮಹದೇವಯ್ಯ: ನಾವು ನಾಲ್ಕುಜನ ಮಕ್ಳ ಮದ್ವೆಮಾಡ್ಬೇಕಾದ್ರೆ ಬಾಳ ಶ್ರಮಬಿದ್ದು ಮಾಡ್ದೆ. ಅಂದ್ರೆ…..ಏನಂದ್ರೆ ಈಗ ನಾಲ್ಕು ಜನ ಉಳ್ಳಾದವ್ರುನ್ನ ನಾನಾದ್ರಿಂದ ಪರ್ವಾಗಿಲ್ಲ – ಯಾಕೆಂದ್ರೆ ನಿಮ್ಮಂತ ಯಕ್ತಿಗೊಳೋತ್ರ ನಾನು ಸುಮಾರು ಕತೆ – ಪತೆಗೋಗಿ ರೂಢಿಯಾಗಿರ್ತೀನಲ್ಲ, ಅವರತ್ರ ಹೋಗಿ ನನ್ನ ಕಷ್ಟ – ಸುಖ ಹಿಂಗಂತ ಕೇಳ್ಕತೀನಿ, ಅವ್ರು ಒಂದು ಅಷ್ಟೋ……ಇಷ್ಟೊ…..ಸಾಹ್ಯಾ ಮಾಡ್ತೀವಿ ಮಾಡಪ್ಪ ನಿನ್ಗೆ ದೇವ್ರು ಈತರ ಮಾಡಿ- ಇಪ್ಪತ್ನಾಲ್ಕು ಗಂಟೇನೂ ದೇವ್ರ ಗ್ಯಾನ ಮಾಡ್ತೀಯ ನಿನ್ಗೆ ಹಿಂಗಾಯ್ತು ಏನ್ಮಾಡಾಕಾಯ್ತದೆ ಹೋಗು ಹೆದರ್ಕಬ್ಯಾಡ – ಅಂತ ಹೇಳಿ, ನೂರು ಕೊಡೋವ್ರು ಒಂದು ಐವತ್ನಾದ್ರೂ ಕೊಡ್ತಾರೆ ಅಷ್ಟರೊಳ್ಗೆ ತಕಂಡ್ಬಂದು…..ಏನೋ ಇಸ್ಕಂಬಂದು ನಾನು ಯವ್ವಾರ ಮಾಡಿದೀನಿ, ಅವ್ರುಗೂವೆ ಅಷ್ಟೋ ಇಷ್ಟೋ ಕೊಟ್ಕಂಡು ಸಾಲ ತೀರ್ಸ್ಕೋಂಡು ಬಂದಿದೀನಿ, ಇನ್ನು ಇಪ್ಪತ್ತೋ – ಮೂವತ್ತೋ ಸಾವ್ರ ರೂಪಾಯಿ ಸಾಲ ಐತೆ.

ಹಿ.ಚಿ.ಬೋ: ಓ….. ಇನ್ನೂ ಅಷ್ಟು ಸಾಲ ಇದೆ!

ಮಹದೇವಯ್ಯ: ಹಾಂ! ಇನ್ನೂ ಅಷ್ಟು ಸಾಲ ಐತೆ.

ಹಿ.ಚಿ.ಬೋ: ನಂಜಯ್ಯನವರೆ, ನೀವು ನಿಮ್ಮ ಕಷ್ಟ ಸುಖ, ನಿಮ್ಮ ಜಾತಿ – ಜನ ನಿಮ್ಮ ತಂದೆಯವ್ರು – ನಿಮ್ದೂ ಒಂದಿಷ್ಟು ಇತಿಹಾಸ ಹೇಳಿ.

ನಂಜಯ್ಯ: ಸಾಮಿ, ನಮ್ಮ ಜನಾಂಗ ಕುರುಬಗೌಡ್ರು, ನಮ್ತಂದೆ ಹೆಸ್ರು ಲಿಂಗೇಗೌಡ ಅಂತ. ನಮ್ಹೆಂಗ್ಸರ ಹೆಸ್ರು ಸರ್ಸಮ್ಮ. ನಮ್ಮಕ್ಳು – ಹಿರಿಯವ್ಳು ಮಾದೇವಮ್ಮ, ಎರಡ್ನೇ ಮಗ್ಳು ಮಂಜುಳಾದೇವಿ, – ಎರ್ಡು ಗಂಡು ಮಕ್ಳಲ್ಲಿ ಒಬ್ಬ ಮಹೇಶ, ಒಬ್ಬ ಗಿರೀಶ ಅಂತ ಇಟ್ಕೊಂಡಿದ್ದೀನಿ, ಏನೋ, ನಮ್ಮ ಅನಾನುಕೂಲ ಉಂಟಾಗಿ……

ಹಿ.ಚಿ.ಬೋ: ನಿಮ್ತಾಯಿಯವ್ರ ಹೆಸ್ರೇನು?

ನಂಜಯ್ಯ: ತಾಯಿಯವ್ರ ಹೆಸ್ರು ಮಾದಮ್ಮ ಅಂತ. ತಂದೆ, ತಾಯಿ ತೀರ್ಕೋಂಡ್ರು ಈಗ ನನ್ನ ತಮ್ಮ ಒಬ್ರು ಇದ್ದಾರೆ, ನಾನು ಒಬ್ಬ, ನಮ್ಮ ಅಕ್ಕ ಒಬ್ರು ಇದ್ದಾರೆ.

ಹಿ.ಚಿ.ಬೋ: ನೀವೂ ಮಾದೇಶ್ವರನ ಗುಡ್ರ?

ನಂಜಯ್ಯ: ಮಾದೇಶ್ವರ್ನ ಗುಡ್ಡ ಸ್ವಾಮಿ. ನಾನು ಬಾಲತತ್ವದಲ್ಲಿಯೇ ಈ ಸ್ವಾಮಿ ಕತೇನ ಪ್ರಾರಂಭ ಮಾಡ್ದೆ.

ಹಿ.ಚಿ.ಬೋ: ಎಷ್ನೇ ವಯಸ್ನಲ್ಲಿ ನೀವು ಧೀಕ್ಷೆ ತಕೊಂಡ್ರಿ?

ನಂಜಯ್ಯ : ನಮ್ಗೆ ಯೋಳು ವರ್ಷಕ್ಕೆ ಸ್ವಾಮಿ ಯೋಳು ವರ್ಷಕ್ಕೆನಾವು ಧೀಕ್ಷೆ ಪಡ್ಕೊಂಡು ಎಂಟ್ನೇ ವರ್ಷಕ್ಕೆ ನಾವು ಕತೆನ ಪ್ರಾರಂಭ ಮಾಡಿದ್ದು. ನಾವು ಬಾಲತ್ವದಲ್ಲಿಯೇ ಪ್ರಾರಂಭ ಆದದ್ದು. ಆದ್ರೆ, ಭಗವಂತನ ದಯೆಯಿಂದ ನಮ್ಗೆ ಏನೂ ತೊಂದ್ರೆ ಕಾಣ್ನಿಲ್ಲ. ಈಚೀಚೆಗೆ ನಮ್ಗೆ ಅನಾನುಕೂಲ ಕಾಣ್ತಾ ಇದೆ ಸ್ವಾಮಿ – ಮಕ್ಳು – ಮರಿ ಆಯ್ತು, ಮದ್ವೆ ಆಯ್ತು – ಸಂಸಾರ ದೊಡ್ಡಾಯ್ತು ಇದ್ರಿಂದ ಸ್ವಲ್ಪ ಅನಾನುಕೂಲ ಆಗಿ……

ಹಿ.ಚಿ.ಬೋ: ಎಷ್ಟು ಈಗ ನಿಮ್ಮ ವಯಸ್ಸು?

ನಂಜಯ್ಯ: ನನ್ಗೆ ಈಗ ನಲ್ವತ್ತಾರು ತುಂಬೈತೆ ಸ್ವಾಮಿ

ಹಿ.ಚಿ.ಬೋ: ಶಿವಣ್ಣನವರೇ ನೀವು ಸ್ವಲ್ಪ ಹೇಳಿ

ಶಿವಣ್ಣ : ಏನ್ಹೇಳ್ಲಿ ಸ್ವಾಮಿ?

ಹಿ.ಚಿ.ಬೋ: ಅಂದ್ರೆ – ನಿಮ್ಮ ತಂದೆ, ತಾಯಿ – ನಿಮ್ಮ ವಿಚಾರ ಸ್ವಲ್ಪ ಹೇಳಿ.

ಶಿವಣ್ಣ: ನಮ್ತಾಯಿ ಚಿಕ್ಕದ್ರಲ್ಲೇನೆ ಅಂದ್ರೆ – ನಮ್ಮನೇಲಿ ತುಂಬಾ ಕಷ್ಟ ಇತ್ತಂತೆ ಆವಾಗ. ಹುಟ್ಟಿದ ಎರಡು – ಮೂರು ಮಕ್ಳು ತೀರಿ ಹೋದ್ಮೇಲೆ ಒಂದ್ಕಡೆ ದೇವ್ರಲ್ಲಿ ಹೋಗಿ ಕೇಳ್ದಾಗ : ನಿಮ್ಮ ಮನೆಸ್ಥಾನದಲ್ಲಿ ಮೊದ್ಲು ನಡೀತಾ ಇತ್ತು. ಅದು ನಿಲ್ಸಿಬುಟ್ಟಿದ್ರು – ಆ ದೇವ್ರುನ್ನ ದರ್ಶನ ಮಾಡೋದನ್ನ, ಆದ್ರಿಂದ ಈ ಮೊಗ ನಿನ್ಗೆ ಉಳ್ಕೋಬೇಕಾದ್ರೆ ನನ್ಗೆ ದರ್ಶನಿಕನ್ನ ಮಾಡ್ಬೇಕು ನನ್ಗೆ ಹನ್ನೆರ್ಡು ವರ್ಷಕ್ಕೆ – ಅಂತ ಸ್ವಾಮಿ ಹೇಳಿದ್ರಂತೆ, ಒಂದು ದೇವಸ್ಥಾನ್ದಲ್ಲಿ ಕರ್ಸಿದಾಗ. ಆವಾಗ ಹುಟ್ಟಿದ ನನ್ಗೆ ಹನ್ನೆರ್ಡು ವರ್ಷಕ್ಕೆ ನಿನ್ಗೆ ಧೀಕ್ಷೆ ಬುಡ್ತೀನಿ ಅಂತ ಮಾತು ಕೊಟ್ಟಿ ಕರೆಕ್ಟಾಗಿ ನೋಡಿ, ಹನ್ನೆರ್ಡು ವರ್ಷಕ್ಕೆ ಒಂದು ಎರಡ್ಮೂರು ದಿನ ಜಾಸ್ತಿ ಆಗ್ಬುಟ್ಟಿತ್ತು, ಎರಡ್ಮೂರು ದಿವ್ಸ ಜಾಸ್ತಿ ಆಗಿತ್ಲೂವೆ ಇವ್ರು ಆದ್ನೆ ನೆನಪ್ಗೆ ತಕ್ಕೊಂಡಿರ್ಲೇ ಇಲ್ಲ – ನಮ್ತಾಯಿ. ಆವಾಗ, ನಮ್ತಂದೇದು ಸ್ವಲ್ಪ ರೌಢಿತನ ಜಾಸ್ತಿ. ಅಂದ್ರೆ – ನಮ್ತಾಯಿನ ನ್ಯಾಯವಾಗಿ ನೋಡ್ಕೊಳ್ಳದೇ ಇರುವ ಸ್ಥಿತಿ ಇತ್ತು – ಅವ್ರ ಅಣ್ಣನ ಮಾತು ಕಟ್ಕೊಂಡು. ಅವ್ರು ಅಣ್ಣ-ತಮ್ಮಂದಿರು ಸ್ವಲ್ಪ ಘಾಟಿ. ಅವ್ರ ಜೊತೆನಮ್ಮ ಅಪ್ಪಾನೂ ಸೇರ್ಕೊಂಡು ನಮ್ತಾಯಿಗೆ ತುಂಬಾ ಹಿಂಸೆ ಕೊಡ್ತಿದ್ರು. ಆ ಹಿಂಸೆಯೊಳ್ಗೆ ನಮ್ತಾಯಿ ಇದನ್ನೆಲ್ಲ ಮರ್ತಿದ್ರು ಅಂತ ಕಾಣ್ತದೆ. ಆವಾಗ ನನ್ಗೆ ತುಂಬಾ ಉಸಾರು ತಪ್ಪಿಡ್ತು. ಏನ್ಹಿಂಗೆ ಆಗೋಗ್‌ಬಿಡ್ತಲ್ಲ ಅಂತೇಳಿ ಒಂದ್ಕಡೆ ಸ್ವಾಮಿಗೋಗೋವತ್ಗೆ ನೀವು ಹನ್ನೆರ್ಡು ವರ್ಷಕ್ಕೆ ನನ್ನ ಸೇವಿಕನಾಗಿ ಮಾಡ್ತೀವಂತ ಒಪ್ಕೊಂಡ್ರಲ್ಲ? ಅದ್ರಿಂದ ನಾನೇ ಕಷ್ಟ ಕೊಟ್ಟಿರೋದು. ಆವಾಗ ತುಂಬಾ ಕಷ್ಟ ನಮ್ತಾಯಿಗೆ ಕಷ್ಟ ಅಂತಂದ್ರೂನು ನನ್ನ ದರ್ಶನಿಕನನ್ನಾಗಿ ಮಾಡ್ಬೇಕಾದ್ರೆ ಬಾಳ ಕಷ್ಟ ಪಟ್ಟಿ ಎಲ್ಲಾ ಕಡೆ ಕೂಲಿ ಎಲ್ಲಾ ಮಾಡಿ ಒಂದು ಆರ್ನೂರು ರೂಪಾಯಿ ರೆಡಿ ಮಾಡೋದು ನಮ್ತಾಯಿಗೆ ಬಾಳ ಕಷ್ಟ ಆಗಿತ್ತು. ಅದ್ರಲ್ಲಿ ನೋಡಿ ಆ ಮಾದಪ್ಪನ ದರ್ಶನಿಕನ್ನ ನಾ ಮಾಡ್ದ ಮೇಲೆ ನಮ್ತಾಯಿ ಇರೋ ವರ್ಗೂ ಆಗ ಹನ್ನೆರ್ಡು ವರ್ಷಕ್ಕೆ ದರ್ಶನಿಕನ್ನ ಮಾಡುದ್ರು ಸರ್ ಆವಾಗ ನಮ್ತಾಯಿ ಯಾವಾಗ ತೀರಿ ಹೋಗ್ಬುಡುತ್ಲೆ ನಮ್ತಂದೆ ಇನ್ನೊಂದು ಮದ್ವೆ ಮಾಡ್ಕೋಬೇಕು ಅಂತ ಯಾರೋ ಕೆಲವ್ರು ಹೇಳ್ದ್ರಂತೆ, ಇಲ್ಲ – ಮಕ್ಳೆಲ್ಲ ಕೈಗೆ ಬಂದವ್ರೆ, ಆದ್ರಿಂದ ಆ ಕೆಲ್ಸ ಮಾಡಾಕಾಕಿಲ್ಲ ಅಂತ, ನಮ್ತಾಯಿ ಯಾವಾಗ ತಿರಿ ಹೋದ್ರು, ನಮ್ತಂದೇನೆ ಬಾಳಾ ಜವಾಬ್ದಾರಿ ತಕಂಡು ನಮ್ಮನ್ನ ಸಾಕುದ್ರು ಕೆಲವ್ರು ಆಗ ಹೇಳ್ತಿದ್ರು ನಿಮ್ತಾಯಿ ತೀರಿ ಹೋದ್ಮೇಲೆ ನಿಮ್ತಂದೆ ನಿಮ್ಮನ್ನ ಬಾಳ ಕಷ್ಟದಿಂದ ಸಾಕಿದ್ದಾನೆ. ಅವ್ರಿಗೆ ನಾಳೆ ದಿವ್ಸ ಏನೂ ತೊಂದ್ರೆ ಕೊಡ್ಬೇಡಿ ಅಂತ ಆಗ ದೊಡ್ಡೋವ್ರು- ನಿಮ್ಮಂತ್ತೋವು ಎಲ್ಲ ವಿಷ್ಯ ಹೇಳ್ತಿದ್ರು – ನಮ್ಮಲ್ಲಿ ಬಾಳಾ ಕಷ್ಟ ಪಡ್ತಾ ಇದ್ದಾನೆ ನಿಮ್ತಂದೆ ಅಂತ. ಅದೇ ತರವಾಗಿ ಕೋನೇವರ್ಗೂನೂ ನಮ್ತಂದೆನ ಸಾಕಿ, ಅವ್ರು ಈವಾಗ ತೊಂಬತ್ನಾಲ್ಕರಲ್ಲಿ ತೀರೋಗ್ಬಿಟ್ರು ಈವಾಗ ಅವ್ರ ಕ್ರಿಯಾದಿಗಳ್ನೆಲ್ಲ ಮುಗ್ಸಿದೀವಿ.

ಹಿ.ಚಿ.ಬೋ: ನೀವು ಯಾವ ಜನಾಂಗದವ್ರು?

ಶಿವಣ್ಣ: ಸಾರ್, ನಾವು ಹರಿಜನಗಳು

ಹಿ.ಚಿ.ಬೋ: ಮಹಾದೇವಯ್ಯನವರೆ, ನೀವು ಏನಾದ್ರೂ ಓದಿದೀರಾ?

ಮಹದೇವಯ್ಯ: ಇಲ್ಲ ಸಾ…….ಓದಿಲ್ಲ……ಓದಿಲ್ಲ

ಹಿ.ಚಿ.ಬೋ: ನಂಜಯ್ಯನವರೆ ನೀವು?

ನಂಜಯ್ಯ: ನಾವು ಐದ್ನೆ ಕ್ಲಾಸುಓದಿದೀವಿ ಸಾರ್. ಮಿಡ್ಲ್ ಫಸ್ಟ್ ಇಯರ್

ಹಿ.ಚಿ.ಬೋ: ನೀವು ಓದ್ತೀರಿ?

ನಂಜಯ್ಯ: ಹೌದು. ಓದ್ತೀನಿ

ಹಿ.ಚಿ.ಬೋ: ನೀವು?

ಶಿವಣ್ಣ: ನಾವು ಓದ್ಲೇ ಇಲ್ಲ ಸಾರ್

ಹಿ.ಚಿ.ಬೋ: ಹೌದಾ…..!

ಶಿವಣ್ಣ: ಇಲ್ಲ, ಓದ್ಲೇ ಇಲ್ಲ.

ಹಿ.ಚಿ.ಬೋ: ಇಷ್ಟೊಂದು ಜೋರಾಗಿದ್ದೀರಿ!

ಶಿವಣ್ಣ: ಜೋರಾಗಿ ಅಂತ್ಹೇಳುದ್ರೆ ಜ್ಞಾನದ್ಮೇಲೆ ಹೊಂಟೋದೆ ನಾನು. ಕೆಲವುರು ನಿಮ್ಮಂತೋರು ವಿದ್ಯಾವಂತ್ರತಾವು ಕುಂತ್ಕೊಂಡು ನಾವು ಓದ್ಲಿಲ್ಲ ನಮ್ತಾಯಿ ತಂದೇನೂ ಅಷ್ಟು ತುಂಬಾ ಕಷ್ಟದಲ್ಲಿದ್ರಲ್ಲ ಅದ್ಕೆ ನಾವು ಓದ್ಲಿಲ್ಲ. ಸ್ಕೂಲು ಹೆಂಗಿದೆ ಅಂತಾನೂ ನೋಡ್ಲಿಲ್ಲ. ಆದ್ರೆ ಲೆಕ್ಕಾಚಾರ ಬಾಳ ಚೆನ್ನಾಗಿ ಮಾಡ್ತೀವಿ.

ಹಿ.ಚಿ.ಬೋ: ಮಹದೇವಯ್ಯನವರೆ, ನೀವು ಒಂದಕ್ಷರ ಕಲೀಲಿಲ್ಲ – ಅಂದ್ರೆ ವಿದ್ಯಾಭ್ಯಾಸ ದೃಷ್ಟಿಯಿಂದ ಮಾಡ್ಲಿಲ್ಲ – ಆದ್ರೆ ಬಿಡಿ, ಅಕ್ಷರ ಅನ್ನೋದು ವಿದ್ಯೆ ಅಲ್ಲ, ವಿದ್ಯೆ ಅನ್ನೋದು ಬೇರೆ ಅಲ್ವೆ? ಈಗ ನೀವು ಮಾಡ್ತಾ ಇರೋದು ವಿದ್ಯೇನೇ. ಆದ್ರೂವೆ ಈ ಮೂವತ್ತು – ನಲ್ವತ್ತು ಗಂಟೆ ಅಷ್ಟು ಈ ಕಾವ್ಯ, ಈ ಮಲೆಮಹದೇಶ್ವರನ ಕಾವ್ಯ – ಇವೆಲ್ಲಾನೂ ಇಷ್ಟೊಂದು ಅಗಾಧವಾದದನ್ನೆಲ್ಲ ನೆನಪ್ನಲ್ಲಿ ಇಟ್ಕೊಂಡಿದ್ದೀರಲ್ಲ, ಈ ನೆನಪು ಈ ರೀತಿಯಲ್ಲಿ ಉಳಿಯಕ್ಕೆ ಏನು ಕಾರಣ?

ಮಹದೇವಯ್ಯ: ನೋಡಿ ಸಾರ್, ನಾನು ಮಲೀಕೊಳ್ವಾಗ ಮಾತ್ರ ಮರೀತೀನಿ ಅಷ್ಟೇ. ನಾನು ಬೆಳಿಗ್ಗೆ ಎದ್ದು ಮೊಕ ತೊಳೀತು ಅಂದ್ರೆ ನನ್ಗೆ ಇಂತಿಂತಾ ಭಿಕ್ಷಾ-ಗಿಕ್ಷಾಕೆ ಹೋದಾಗ ಈ ದೇವ್ರು ಕತೇಲಿ ಒಂದ್ಗಂಟೆ ಕಾಲ ಅಲ್ಲಿ ಹಾಡ್ತೀನಿ ಇನ್ನೊಂದು ದೇವ್ರ ಕತೇಲೂ ಒದ್ಗಂಟೆ ಕಾಲ ಹಾಡ್ತೀನಿ, ಇನ್ನೊಂದೊಂದ್ಗಂಟೆ ಕಾಲ ಇನ್ನೊಂದೊಂದು ದೇವ್ರುಗಳ ಹಾಡು ಹಾಡ್ತೀನಿ. ಒಂದೂರ್ಗೋದ್ರೆ ಭಿಕ್ಷಕ್ಕೆ ನನ್ನ ಜಲ್ಮದಲ್ಲಿ ಎಷ್ಟು ದೇವ್ರು ಕತೆಗಳು ಅದಾವೆ ಅಷ್ಟು ದೇವ್ರು ಕತೆಗಳೆಲ್ಲಾನೂ ಒಂದೊಂದ್ಗುಟೆ ಹಾಡ್ತೀನಿ.

ಹಿ.ಚಿ.ಬೋ: ಯಾವ್ಯಾವ ಕತೆ ಹಾಡ್ತೀರಿ? ಸ್ವಲ್ಪ ಹೇಳಿ

ಮಹದೇವಯ್ಯ: ನಾನು ನಂಜುಡೇಶ್ವರ್ನ ಕತೆನೆ ಹಾಡ್ತೀನಿ, ಶಂಕಮ್ಮನ ಕತೆ ಹಾಡ್ತೀನಿ, ಅಲಂಬಾಡಿ ಜುಂಜೇಗೌಡ್ರು ಕತೆ ಹಾಡ್ತೀನಿ, ಮಾದೇಶ್ವರ ಹುಟ್ಟಿ ಬೆಳ್ದ ಕತೆ ಹಾಡ್ತೀನಿ ಆಮೇಲೆ ಬೇವಿನ ಕಾಳಮ್ಮನ ಕತೆ ಅಂತ ಹಾಡ್ತೀನಿ, ಇನ್ನು……ಬಾಗನಾಗಮ್ಮನ ಕತೆ ಅಂತ ಅವೆ ಅದು ಹಾಡ್ತೀನಿ ಚೆನ್ನಿಗರಾಯನ ಕತೆ ಅಂತ ಕತೆ ಐತೆ ಅದು ಹಾಡ್ತೀನಿ, ಶಾರಂಗದಾರನ ಕತೆ ಅಂತ ಐತೆ ಅದು ಹಾಡ್ತೀನಿ, ಬಸವಣ್ಣ ದೇವ್ರ ಕತೆ ಹಾಡ್ತೀನಿ, ಶಿವರಾಯ್ನ ಕತೆ ಹಾಡ್ತೀನಿ, ಸಿದ್ದಪ್ಪಾಜಿ – ಇಂತಾವೆಲ್ಲ ಹಾಡ್ತೀನಿ, ಇಷ್ಟು ಕತೆಗೊಳಲ್ಲಿ ನಾನು ಮರೀತ್ಕಬುಡ್ತೀನಲ್ಲ ಇನ್ನು ಕಷ್ಟ ಬಿದ್ದು ಕಲ್ತ್ರು ಕೂಡ ಮರ್ತುಬುಟ್ರೆ ನಮ್ಗೆ ಸಿಕ್ಕಾಕಿಲ್ವಲ್ಲ ಅಂತ – ಇದೇ ಗ್ಯಾಪ್ನದಲ್ಲಿರ್ತದೆ

ಶಿವಣ್ಣ: ನಾವು ಮೂರು ಜನ – ನಾಲ್ಕು ಜನ ಒಟ್ಗೆ ಇವ್ರು……ಗುರುಗಳೊಂದ್ಗೆ ಸೇರ್ಕಂಬುಟ್ರೆ ಬಾಳ ತಮಾಷೆ ನಮ್ಗೆ ಜಾಸ್ತಿ. ಒಂದು ಮನೆಗೆ ಹೋಯ್ತೂಂತಂತಂದ್ರೆ ಈ ಮನೇಲಿ ಮಲೆಮಾದೇಶ್ವರಂದು ಹಾಡಿರ್ತೀವಿ. ಇನ್ನು ಆ ಕಡೆ ಶಿಫ್ಟ್ ಆಗೋದ್ರೊಳಗೇನೆ ಸಿದ್ದಪ್ಪಾಜಿದು, ಹೀಗೆ ಒಂದೇ….. ತರ ಹಾಡ್ಕೊಂಡೋದ್ರೆ ಬೋರಾಗುತ್ತೆ, ಎಲ್ಲ ದೇವ್ರುಗಳ ಕತೆ ಅಂದ್ಬುಟ್ಟು ಮೂರು ಜನ ಒಂದು ಟೈಮ್ನಲ್ಲಿ ಸೇರ್ಕಡ್ಬುಟ್ರೆ ಬಾಳಾ ಖುಷಿ. ಬೆಳಿಗ್ಗೆ ಹೋದ್ರೆ ಊಟ – ತಿಂಡಿ ಮೇಲೆ ನಮ್ಗೆ ಜ್ಞಾಪ್ನ ಇಲ್ಲ.

ಹಿ.ಚಿ.ಬೋ: ಅಂದ್ರೆ ಸಾಮಾನ್ಯವಾಗಿ ನೀವು ಮೂವರು ಒಟ್ಟೊಟ್ಟಿಗೇನೆ ಹೋಗ್ತೀರಿ……ಊರೂರ್ಗಳ ಮೇಲೆ.

ಶಿವಣ್ಣ: ಬಾಳ ಸಂತೋಷ ಇರ್ತದೆ, ಅವ್ರಲ್ಲಿ ಹುಮ್ಮಸ್ಸು ಅಂತ್ಹೇಲ್ದ್ರೆ – ಈಗ ಇಲ್ಲಿ ನೋಡಿ, ಇಲ್ಲಿ ಕುಂತ್ಕಂಡು ಈಗ ನೈಟ್ ಕತೆ ಮಾಡ್ತೀವಲ್ಲ, ಆದ್ರಲ್ಲಿ ಸ್ವಲ್ಪ ಬೇಜಾರಾಗ್ಬಹುದು. ನಾವು ಮನೆಗೆ ಹೋಗಿ ಇದನ್ನ ಎಲ್ಲಾನೂ ಹಾಡ್ವಾಗ ಬಾಳ ಇದು ಇರ್ತದೆ. ಊಟ-ತಿಂಡಿ ಮೇಲೇನೆ ಗ್ಯಾನ ಇರೋಲ್ಲ. ಬೆಳಿಗ್ಗೆ ಹೊತ್ತು ಹೋದ್ರೆ ನಾವು ಐದು – ಐದೂವರೆ – ಆರ್ಗಂಟೆಗಂಟ್ಲೂ ಬಾಳ ಹಾಡೋದ್ರಿಂದ ನಾವು ಯಾವ ಕತೇನೂ ಮರಿಯೋಕೆ ಪಾದ್ಯ ಇಲ್ಲ.

ಹಿ.ಚಿ.ಬೋ: ಈಗ ಭಿಕ್ಷುಕ್ಕೆ ಅಂತ ಹೋಗ್ತೀರಲ್ಲ. ಈ ಜನಗಳು ಹ್ಯಾಗೆ ನಡ್ಕೊಳ್ತಾರೆ? ಮೊದ್ಲು ತರ ಸ್ವಲ್ಪ ಭಯ-ಭಕ್ತಿ ಇರ್ತದಾ…..ಅಥವಾ ನಿಮ್ಗೆ ಹೇಗೆ ಅನಿಸ್ತದೆ?

ಮಹದೇವಯ್ಯ: ಈವಾಗ ಸ್ವಲ್ಪ ಕಮ್ಮಿ ಸಾ. ಈವಾಗ ಏನ್ಮಾಡ್ತಾರೆ ಅಂತಂದ್ರೆ ಮೊದ್ಲಿದ್ದಂತ ಹಳಬರೆಲ್ಲ ಕಾಲವಾಗ್ಬುಟ್ರು. ನಾನು ಚಿಕ್ಕವ್ನಾಗಿರೋವಾಗ ನಮ್ತಂದೆ ಜೊತೇಲಿ ಭಿಕ್ಷಕ್ಕೆ ಹೋ‌ಗ್ವಾಗ ಮೊದ್ಲು ದೇವ್ರ ಗುಡ್ಡಪ್ಪದೀರು ಬಂದವ್ರೆ ಅಂತ ಹೇಳಿ, ಗಂಧದ ಕಡ್ಡಿ ಕತ್ಸಿ, ಪೂಜೆಮಾಡಿ, ನಾವು ತಕ್ಕೊಂಡೋಗಿರೋ ಬಿರ್ದುಗೆ ಪೂಜೆಮಾಡಿ ಭಿಕ್ಷಾ ಕೊಡ್ತಿದ್ರು ಈವಾಗ ಅಷ್ಟು ಇಲ್ಲ ಕಮ್ಮಿ ಅದ್ರಿಂದ. ಈಗ ಎಷ್ಟೋ ಜನಗಳು ಸ್ವಾಮಿ ಹೆಸ್ರಿನ ಮ್ಯಾಲೆ ಬುಟ್ಬುಟ್ಟವ್ರೆ – ಯಾತಕ್ಕಂದ್ರೆ ನಾವು ಕತೆ-ಪತಿಗಳು ಸ್ವಲ್ಪ. ಕಲ್ತಿರೋದ್ರಿಂದ ಬಿಡ್ಸಿಗೊಡಾಕಿಲ್ಲ – ಆ ಸ್ವಾಮಿ. ಇನ್ನೂ ಏನು ಕಲ್ತಿಲ್ವಲ್ಲ ಅವ್ರು ಮಾತ್ರ ಆವ್ರವ್ರಲ್ಲಿರ್ತಕ್ಕಂತ ದೇವ್ರ ಪ್ರತಿ ಏನೈತೋ ಅವುಗಳ್ನ ಮನೇಲಿ- ಕೈ ಮುಕ್ಕೊಂಬಿಡ್ತಾರೆ ಆದ್ರೆ, ನಾವು ಆ ತರಾನೇ ಮಾಡ್ಬೇಕು ಅಂದ್ರೆ ನಮ್ಗೆ ಜೀವ್ನ ಆಗೋದಿಲ್ಲ. ನಾವು ಓಗ್ಲೇ ಬೇಕು.

ಹಿ.ಚಿ.ಬೋ: ಇಷ್ಟು ದಿವ್ಸ ನಮ್ಮ ವಿಶ್ವವಿದ್ಯಾಲಯದಲ್ಲಿ ಇದ್ರಲ್ಲ. ನಮ್ಮ ವಿಶ್ವವಿದ್ಯಾಲಯವನ್ನು ನೋಡಿದ್ರಿ ಮಾಡೋದನ್ನ ಅಂದ್ರೆ ಇದು ಒಂದು ಹೊಸ ವಿಶ್ವವಿದ್ಯಾಲಯ ಇದು ಆರಂಭವಾಗಿ ನಾಲ್ಕು ವರ್ಷ ಆಯ್ತು. ಬಾಳ ದೊಡ್ಡ ಪ್ರಮಾಣದಲ್ಲಿ ಆಗ್ತಾ ಇದೆ. ಇದರ ಉದ್ದೇಶ ಏನು ಅಂದ್ರೆ ಈ ರೀತಿ ನಮ್ಮ ಹಳ್ಳಿಯ ಜ್ಞಾನ, ನಮ್ಮ ಹಳ್ಳಿಯ ಕಲಾವಿದರ ಜ್ಞಾನ, ಒಟ್ಟು – ಗ್ರಾಮೀಣ ಪ್ರದೇಶದಲ್ಲಿ ಏನೈತೆ – ಅದನ್ನೆಲ್ಲ ಕಾಪಾಡೋವಂತ ಅದನ್ನ ಕುರಿತು ಅಧ್ಯಯನ ಮಾಡೋವಂತ ಉದ್ದೇಶಾನ ಇಟ್ಕೊಂಡಿರೋದು. ಅವ್ರ ಒಂದು ಅಂಗವಾಗೀನೆ ನಾವು ಇದನ್ನ ಮಾಡ್ತಾ ಇದ್ದೀವಿ. ಅದಕ್ಕೆ ಸಂಬಂಧಪಟ್ಟಂಗೆ ಈಗ ಅನೇಕ ಕೆಲ್ಸಗಳು ನಡಿತಾ ಇವೆ. ನಮ್ಮನ್ನೆಲ್ಲ ಆವತ್ತಿನಿಂದ ನೀವು ನೋಡ್ತಾ ಇದ್ದೀರಿ. ಈ ನಮ್ಮ ವ್ಯವಸ್ಥೆಯ ಬಗ್ಗೆ ನಿಮ್ಗೆ ಏನನ್ನುಸ್ತು?

ಮಹದೇವಯ್ಯ: ನಾನು ಸುಮಾರು ಕಡೆ ಹೋಗಿದ್ದೀನಿ. ನಿಮ್ಹತ್ರ ನಾವು ಬಂದ್ಮೇಲೆ ನಮ್ಗೆ ಯಾವ್ದುಕ್ಕೂ ತೊಂದ್ರೆ ಇಲ್ಲ. ಮಾತ್ರ……ಏನು ತೊಂದ್ರೆ ಅಂದ್ರೆ, ನಾವು ಮನೆ-ಮಠ ಬುಟ್ಬಂದ್ಬಿಟ್ಟಿದ್ದೀವಿ, ಈವತ್ತಿಗೆ ಹದಿನಾಲ್ಕು ದಿವ್ಸ ಆಯ್ತು ನೋಡಿ ನಾವು ಊರು ಬಿಟ್ಟು, ಅಷ್ಟೊಂದೆ ಹೊರ್ತು ಇನ್ನು ನಮ್ಗೆ ಏನೂ ತೊಂದ್ರೆ ಕಾಣ್ತಾ ಇಲ್ಲ.

ಹಿ.ಚಿ.ಬೋ: ಶಿವಣ್ಣನವರೆ, ನಮ್ಮ ವಿಶ್ವವಿದ್ಯಾಲಯ ಕಂಡು ನಿಮ್ಗೆ ಏನನ್ನುಸ್ತು?

ಶಿವಣ್ಣ: ಅಯ್ಯೋ…… ನಮ್ಗಂತೂನೂ ನೋಡಿ ಸಾರ್ ಹೇಳ್ಕೊಳ್ಳುವಂತದು ನಿಮ್ಮಲ್ಲಿ ನಮ್ಮ ದರ್ಶಕರು, ಕಲಾವಿದರಿಗಿಂತ ನಿಮ್ಮದು ಬಾಳ ಮಹತ್ವವಾದದ್ದು, ಬಾಳ ಸಾದ್ಸಿಬುಟ್ಟಿದ್ದೀರ ಸಾರ್ ಕೆಲವು ವಿಷಯಗಳ್ನ ನಮ್ಗೆನೇ ಕೊಚ್ಚನ್ ಮಾಡ್ಬುಟ್ಟಿರ್ತಾರೆ ಬಾಳ ಸಂತೋಷ ಆದ್ರೆ ನೀವು ಮಾಡ್ತಾ ಇರೋದು. ಮುಂದೆ ಜನಕ್ಕೆ ತೊಂದ್ರೆ ಆಗದಂತ ಮತ್ತು ಹಿಂದೆ ಇದ್ದಂತ ಕಲೆಗಳ್ನೆಲ್ಲ ಉಳಿಸ್ತಕ್ಕಂತದ್ದು. ಮಂಟೆ ಲಿಂಗಯ್ಯನವ್ರು ಯಾವ ರೀತಿಯಾಗಿ ಚರಿತ್ರನ ಭೂಮಿಗೆ ಬಂದು ಬರೆದ್ರೋ ಅದರ ಎರಡರಷ್ಟನ್ನ ನೀವು ಕಲ್ಪನೆ ಮಾಡ್ಬುಡ್ತೀರ ಅಂತ ನಮ್ಗೆ ಬಾಳ ಸಂತೋಷ ಆಯ್ತು. ನಾವು ಬಂದ ಮೇಲೆಯಾ ನಮ್ಗೆ ಯಾವ ತೊಂದ್ರೆ ಕೊರತೇನೂ ಇಲ್ಲ. ನಾವು ಬಂದಿದ್ದು ಹೊಸದಾಗಿ ಕಾಣ್ಸಲ್ಲ. ತಮ್ಮೆಲ್ಲರ್ನ ನಾವು ಕಂಡ್ಹಂಗಾಯ್ತು. ಇದ್ರ ಬಗ್ಗೆ ನಮ್ಗೆ ಗೊತ್ತೇ ಇರ್ಲಿಲ್ಲ. ಈ ತರ ಕಲಾವಿದ್ರನ್ನ ಕರ್ಕೋಂಡ್ಹೋಗಿ ಇಷ್ಟೊಂದು ಪ್ರೋತ್ಸಾಹ ಕೊಟ್ಟು ಈ ರೀತಿಯಾಗಿ ಈ ಕಾರ್ಯನ ಮುಂದುವರಿಸ್ತಾರನ್ನೋದು ನಾನಂತೂ ತಿಳ್ಕಂಡರ್ಲಿಲ್ಲ. ಇದ್ನ ಕಾಯ್ತನೆ ಇದ್ದೂ ನಾವು ಇಂತವ್ರು ಎಲ್ಲಿ ಯಾವ್ಕಡೆ ಬರ್ತಾರೆ ಅಂತ. ಈ ಕೆಲವು ಪಂಕ್ಯನ್‌ಗಳಿಗೆಲ್ಲ ನಾವು ಹೋಗೇವು ಅವುಗಳ್ಲಿ ನಮ್ಗೆ ಹೇಳ್ಕೊಳ್ಳೋವಂತದೇನೂ ಇರ್ಲಿಲ್ಲ. ಇಲ್ಲಿ ಬಾಳ ನಮ್ಗೆ ವಿಶಾಲವಾದದ್ದು ಮತ್ತು ಇಲ್ಲಿ ಜನಾಂಗವೇ ನೀವು ಅದಕ್ಕಾಗೇನೆ ಬಾಳವಾಗಿ ಮಾಡಿದ್ದೀರ.

ಹಿ.ಚಿ.ಬೋ: ಇಲ್ಲ, ಇಲ್ಲ ಈತರ ಕರೆದದ್ದು ಇದೇ ಮೊದ್ಲು. ಯಾಕಂದ್ರೆ ಬೇರೆ ಬೇರೆಯವ್ರು ಕಲಾವಿದ್ರ ಹತ್ರ ಹೋಗಿ, ಅವ್ರವ್ರ ವೈಯಕ್ತಿಕವಾಗಿ ಏನೋ ಅವ್ರಿಗೆ ಇಷ್ಟಪಟ್ಟಂಗೆ ಈತರ ಸಣ್ಣ ಪುಟ್ಟ ಪುಸ್ತಕಗಳನ್ನ ಮಾಡವ್ರೆ. ಆದ್ರೆ ಮಂಟೆಸ್ವಾಮಿ ಕತೆನ, ಒಂದು ಕಾರ್ಯನ ಸಂಗ್ರಹ ಮಾಡಿರೋದು ಇದೇ ಮೊದ್ಲು ಅದೂ, ಸರ್ಕಾರದ ಕಡೆಯಿಂದ ಒಂದು ದೊಡ್ಡ ಸಂಸ್ಥೆ ಈ ರೀತಿ ಸಂಗ್ರಹ ಮಾಡಿರೋದು ಇದೇ ಮೊದ್ಲು. ನಮ್ಮ ಉದ್ದೇಶಾನೂ ಅಷ್ಟೇ. ಇದು ಬೃಹತ್ತಾಗಿ ಅಂದ್ರೆ ಈಗ ಏನು ಹಾಡಿದ್ದೀರಿ, ಅದರ ಒಂದು ಅಕ್ಷರವನ್ನು ಬಿಡದ ಹಾಗೆ, ಒಂದು ವಾಕ್ಯಾನೂ ಬಿಡದ ಹಾಗೆ, ಒಂದು ಪದನೂ ಬಿಡದ ಹಾಗೆ ಅದನ್ನು ಪುಸ್ತಕ ರೂಪದಲ್ಲಿ ತಂದು ಉಳಿಸ್ಬೇಕು ಅನ್ನೋ ಉದ್ದೇಶಾನ ನಾವು ಇಟ್ಕೊಂಡಿದ್ದೀವಿ.

ಶಿವಣ್ಣ: ಈಗ ಫಸ್ಟು ನಮ್ಗೆ ಕಳ್ಸಿಕೊಟ್ರಲ್ಲ ಲೆಟ್ರು, ಇದು ಚೆಲುವರಾಜು ಅಂತ ಒಬ್ರು ಮೈಸೂರಿಗೆ ಬಂದಿದ್ದಾಗ, ಇದನ್ನು ನಾವು ತಮಾಷೆಗೆ ಹಾಡಿದದ್ದನ್ನು ಅವ್ರು ಅದನ್ನೇ ಅಪ್ರೂಪವಾಗಿ ನಾಲ್ಕು ವರ್ಷದಿಂದ ಇಟ್ಕಂಡು…..ನಮ್ಮ ಮನೀಗೆ ಲೆಟ್ರು ಬಂತು.

ಹಿ.ಚಿ.ಬೋ: ಅವ್ರೂನೂ ಹಾಡ್ತಾರೆ…….ಚೆನ್ನಾಗಿ ಹಾಡ್ತಾರೆ

ಶಿವಣ್ಣ: ಆಮೇಲೆ ನಮ್ಮನೇಗೆ ಲೆಟ್ರು ಕಳ್ಸಿದ್ರು. ಆ ಮೇಲೆ ಕೇಶವ ಮೂರ್ತಿಯವ್ರು ಬಂದ್ರು – ನಮ್ಮನೆಗೆ ಲೆಟ್ರು ತಕ್ಕಂಡು.

ಹಿ.ಚಿ.ಬೋ: ಕೇಶವ ಪ್ರಸಾದ್‌ ಅವರನ್ನು ನಾನೇ ಕಳಿಸ್ದೆ.

ಶಿವಣ್ಣ: ಆವಾಗ ನಾನು ಮನೇಲಿ ಇರ್ಲಿಲ್ಲ. ಎಲ್ಲೋ ಹೋಗಿದ್ದೆ. ಭಾನುವಾರ ದಿವ್ಸ. ಅವ್ರು ಬಂದಿದ್ದು. ಸೋಮವಾರ ಹತ್ಗಂಟೆಗೆ ಕರೆಕ್ಟಾಗಿ ಬಂದ್ಬಿಟ್ರು. ಬಂದ್ಮೇಲೆ ಇದನ್ನ ಆಗಲ್ಲ ಅಂದಾಗ ನಿಮ್ಮ ಕಲಾವಿದರಿಗೆ ಅಂತಾ ನಾವು ಬಾಳ ಶ್ರಮಪಟ್ಟಿದ್ದೀವಿ, ತಾವು ಇದ್ಕೆ ಬರ್ಲೇ ಬೇಕು ಅಂತಂದ್ರು ಆವಾಗ ನಾನು ಸ್ವಲ್ಪ ಹಿಂಜರ್ದ್ಬುಟ್ಟಿದ್ದೆ.

ಹಿ.ಚಿ.ಬೋ: ನಾನೂ ಕಾಗ್ದದಲ್ಲಿ ಅದ್ನೇ ಬರ್ದಿದ್ದಲ್ಲ. ಇದು ಬಾಳ ಅಪರೂಪದ್ದು, ಪುಸ್ತಕ ತರ್ಬೇಕು ಅಂತ ಮಾಡಿದ್ದೀವಿ, ನೀವು ಮಿಸ್ ಮಾಡದೆ ಬರ್ಬೇಕು ಅಂತ.

ಶಿವಣ್ಣ: ನಮ್ಮಲ್ಲಿ ಕೆಲವು ದೊಡ್ಡವ್ರು ಹೇಳಿದ್ರು. ಯಾರಿಗೂ ಸಿಗಲ್ಲ ಈತರ ಪದ್ದಿಗಳು ಅವ್ರು ಅಲ್ಲಿಂದ ನಿಮ್ಗೆ ನಾನೂರು ಐನೂರು ಕಿಲೋಮೀಟರ್ ದೂರ್ದಿಂದ ಕಳ್ಸಿ ನಿಮ್ಗೆ ಇಷ್ಟೊಂದು ಗೌರವ ಕೊಡ್ತಾರೆ ಅಂದ್ಮೇಲೆ, ಇಲ್ಲಿ ಸಾವಿರಾರು ರೂಪಾಯಿ ಸಿಗುತ್ತೇಂದ್ರೂ ನೀವು ಇದ್ಕೆ ಆಸೆ ಮಾಡ್ಬೇಡಿ ಮೊದ್ಲು ಅವ್ರಿಗೆಹೋಗಿ ಒಂದ್ಸಲ ಹಾಡಿ, ದೇವ್ರು ನಿಮ್ಗೆ ಕೆಡ್ಸಲ್ಲ ಅಂತ, ಒಂದು ಉಪ್ದೇಶ ಹೇಳಿದ್ರು. ಆಮೇಲೆ ನಾನೂ ಯೋಚ್ನೆ ಮಾಡ್ದೆ. ಗುರುಗಳ್ಗೆ ಹೋಗಿ ವಿಷಯ ಹೇಳ್ದೆ. ಈ ತರವಾಗಿ ಹಂಪೆಯಿಂದ ಬಂದಿದೆ, ಕಾರ್ಡಿನಿಂದ ಬರ್ದಿದ್ದಾರೆ. ಅದ್ಕೆ ನಾನು ಮಾತು ಕೊಟ್ಬುಟ್ಟಿದ್ದೀನಿ- ಬಂದೇ ಬರ್ತೀವಿ ಅಂತ ಲೆಟ್ರು ಬೇರೆ ಹಾಕ್ಬುಟ್ಟಿದ್ದೀನಿ ಅದ್ಕೆ ದಯವಿಟ್ಟು ನೀವು ಬರ್ಬೇಕು ಅಂದಾಗ ಅವ್ರು ಹೇಳಿದ್ರು ಆಯ್ತಪ್ಪ ಇಂತ ಕಾರ್ಯಕ್ಕೆ ನಾನು ಏನೇ ಇದ್ರುನೂ ಬಂದೇ ಬರ್ತೀನಿ ಅದ್ನ ಬರ್ದು ಕಳ್ಸು ಅಂತ ಯವಾಗ ನಮ್ಮ ಗುರುಗಳು ಹೇಳಿದ್ರು ಬಾಳ ಸಂತೋಷವಾಗೋಯ್ತು, ನಮ್ಗೆ ಆವಾಗ ಒಂದು ಸೊಲ್ಪ ನಾವೇನಾದ್ರೂ ಮಿಸ್ ಮಾಡ್ಕಂಬುಟ್ಟಿದ್ರೆ ಈ ಗೌರವ ನಮ್ಗೆ ಸಿಗ್ತಾ ಇರ್ಲಿಲ್ಲ ಅಂತ ಅನಿಸ್ತದೆ ಇಲ್ಲಿ ಬಂದ್ಮೇಲೆ ಗೊತ್ತಾಯ್ತು ನಮ್ಗೆ

ಹಿ.ಚಿ.ಬೋ: ನಮ್ಮ – ನಿಮ್ಮ ಪ್ರಯತ್ನದಿಂದಾಗಿ ಇದು ಮುಂದೆ ಒಂದು ಒಳ್ಳೆ ಗ್ರಂಥವಾಗಿ ಬರ್ಲಿ ಅಂತ ಆ ಮಂಟೆಸ್ವಾಮಿನ, ಮಲೆಬಹದೇಶ್ವರ ಅವರ್ನ ಕೇಳ್ಕೊಂಡು ನನ್ನ ಮಾತನ್ನ ಮುಗಿಸ್ತೇನೆ – ನಮಸ್ಕಾರ