ಗುರುವೇ ಊಬತ್ತಿಯ ಹರಡಿ
ಉರಿಗದ್ದುಗೆ ಮಾಡಿ
ಹುಲಿಯ ಚರ್ಮ ಹಾಸಿ
ಹುಲ್ಲೆ ಚರ್ಮ ತಗದು
ಬೆನ್ನಿಂದೆ ಬುಟಕೊಂಡು
ಅವರ ಭಾರಿಯ ಕಂಡಾಯ
ಜಡಿದು ಭೂಮಿಗೆ ನಾಟಿ
ಕಂಡುಗ ಧ್ಯಾನದ ಬುಕ್ಕು
ಕಾಲದ ಧ್ಯಾನದ ಬುಕ್ಕು
ತಾಮ್ರದ ಚಪ್ಪೋಡ
ಮುಂದುಗಡೆ ಮಡೀಕೊಂಡು
ಅವರು ಕಲಿಯನ್ನೇ ಓಯತಾರೆ
ಕಲಿಯನ್ನೇ ಸಾರುತಾರೆ || ಸಿದ್ಧಯ್ಯ ||

ಕಂಡುಗ ಜ್ಞಾನದ ಬುಕ್ಕು ಕಾಲದ ಜ್ಞಾನದ ಬುಕ್ಕು
ತಾಮ್ರದ ಚಪ್ಪೋಡ ತಗದು
ಮುಂಭಾಗದಲಿ ಮಡೀಕೊಂಡು
ಜಗತ್ತುಗುರು ಧರೆಗೆ ದೊಡ್ಡವರು
ಕಲಿಯನ್ನೇ ಓದುತ್ತಾ
ಕಲಿಯನ್ನೇಸಾರುತ್ತಾ
ಉರೀಗದ್ದುಗೆ ಮ್ಯಾಲೆ ಕೂತ್ಕಂಡು ನನ್ನಪ್ಪ
ಬರುವಂಥ ಕಲೀನೆಲ್ಲ ಕಣ್ಣಿಂದ ನೋಡ್ಬುಟ್ಟು ಗುರುವು
ನೊಂದೊಯ್ತು ಮೊಕ ಮನವೆಲ್ಲ
ಕಂದೋಯ್ತು ಮೊಕವೆಲ್ಲ ಜಗತ್ತು ಗುರು ಧರೆಗೆ ದೊಡ್ಡಯ್ಯ
ನಾನು ಸಾರಿದಂಥ ಕಲಿಯೆ ದೇವಾ
ನನ್ನ ಕಣ್ಮುಂದೆ ಬರುತಲ್ಲ ಗುರುವೂ
ನಾನು ಸಾರದಂಥ ಕಲಿ ನನ್ನ ಕಣ್ಮುಂದೆ ಬಂದ್ಬುಡ್ತು ಅಂತ್ಹೇಳಿ
ಅವರು ಎಲ್ಲ ಶಿಶುಮಕ್ಕಳ ದೇವ
ಪ್ರೇಮದಲ್ಲಿ ಕೂಗುತಾರೆ || ಸಿದ್ಧಯ್ಯ ||

ಅಯ್ಯೋ ಬಾರೋ ಬಾರಪ್ಪ ಕಂದ
ಬನ್ರಪ್ಪ ಶಿಶು ಮಕ್ಕಳೇ || ಸಿದ್ಧಯ್ಯ ||

ಕಂದಾ ಬಪ್ಪಾ ನನ್ನ ಕಂದ
ಬನ್ರಪ್ಪ ನನ್ನ ಮಕ್ಕಳೇ
ಹಾಗಂದು ನನ್ನ ಗುರುವೂ
ಧರೆಗೆ ದೊಡ್ಡಯ್ಯ
ನನ್ನ ಕಿಡುಗಣ್ಣ ರಾಚಪ್ಪಾಜಿ
ಓಡುಬಪ್ಪ ನನ್ನ ಕಂದ
ನನ್ನ ಹಿರಿಯ ಚೆನ್ನಾಜಮ್ಮ
ನೀ ಎದ್ದು ಬವ್ವ ನನ್ನ ಕಂದಾ
ನನ್ನ ತೋಪಿನ ದೊಡ್ಡಮ್ಮ
ಓಡಿಬವ್ವ ಶಿಶುಮಗಳೇ
ನನ್ನ ಮಡುವಾಳು ಮಾಚಪ್ಪ ಕಂದ
ಓಡಿಬಾರೋ ಎಂದರಲ್ಲ || ಸಿದ್ಧಯ್ಯ ||

ಮಡಿವಾಳ ಮಾಚಪ್ಪ ಕಿಡುಗಣ್ಣ ರಾಚಪ್ಪಾಜಿs
ಹಿರೀ ಚೆನ್ನಾಜಮ್ಮ
ನನ್ನ ತೋಪಿನ ದೊಡ್ಡಮ್ಮ
ಫರಾರದಯ್ಯ ನನ್ನ ಕಂದ
ಓಡುಬನ್ರೋ ಮಕ್ಕಳೇ ಓಡುಬನ್ರೋ ಕಂದಾ ಎಂದರು
ಈ ಜಗತ್ತು ಗುರು ಧರೆಗೆ ದೊಡ್ಡವರು ಕೂಗಿದ ಕೂಗು
ಸಾರಿದಂಥ ಗಲಗು
ಎಲ್ಲಾ ಶಿಶುಮಕ್ಕಳು ಕಿವಿಯಾರ ಕೇಳುಬುಟ್ಟು
ಇವತ್ತು ನಮ್ಮ ಪಡೆದ ಗುರು ಸಾಕದಂಥ ತಂದೆ
ಯಾತುಕ್ಕೇ ಕರೆದರೋ ಗೊತ್ತಿಲ್ಲ
ಏನು ಕಾರಣಕ್ಕೆ ಕೂಗ್ಬುಟ್ರೋ ಕಾಣನಲ್ಲ ಅಂತ್ಹೇಳಿ
ಎಲ್ಲಾ ಶಿಶುಮಕ್ಕಳು ಓಡೋಡಿ ಬಂದು
ಧರೆಗೆ ದೊಡ್ಡವರ ಮುಂಭಾಗದಲ್ಲಿ
ನಡಾಕಟ್ಕೊಂಡು ಪಾದ ಜೋಡುಸ್ಕಂಡು
ಕರವೆತ್ತಿ ಕೈ ಮುಕ್ಕೊಂಡು
ಧರೆಗೆ ದೊಡ್ಡವರ ಮುಕ ಕಣ್ಣಂತು ನೋಡ್ಕಂಡು
ಪರಂಜ್ಯೋತಿ ಪಾವನ ಮೂರುತಿ ಧರೆಗೆ ದೊಡ್ಡಪ್ಪ
ಎತ್ತಲ ಚಾಕರಿಗೆ ನಮ್ಮ
ಕರ್ದಿಯಪ್ಪ ಮಾಯಿಕಾರ || ಸಿದ್ಧಯ್ಯ ||

ಗುರುದೇವ ಯಾತುಕ್ಕಾಗಿ ನಮ್ಮ ಕರಿದ್ರೀಯಪ್ಪ
ಏನು ಕಾರಣಕ್ಕೆ ಕೂಗ್ಬುಟ್ರಿ ಗುರುವೇ ಎಂದರು
ಕೇಳಪ್ಪ ನನ್ನ ಕಂದ ಕಿಡುಗಣ್ಣ ರಾಚಪ್ಪಾಜಿ ಮಡುವಾಳು ಮಾಚಯ್ಯ
ಹಿರೀ ಚೆನ್ನಾಜಮ್ಮ ದುಡುವುಳ್ಳ ದೊಡ್ಡಮ್ಮ ತಾಯಿ
ಬನ್ರೋ ನನ್ನ ಕಂದ ಬನ್ರವ್ವ
ನನ್ನ ಎಡದಲ್ಲಿ ಬಲದಲ್ಲಿ ಕೂತ್ಕೊಳ್ಳಿ ಕಂದ
ಕೂತ್ಕೂಳ್ಳಿ ಮಕ್ಕಳೇ ಎಂದರು
ಎಲ್ಲಾ ಶಿಶುಮಕ್ಕಳು ಬಂದು
ಧರೆಗೆ ದೊಡ್ಡವರ ಸುತ್ತಾ ಕೂತ್ಕೊಂದ್ರಂತೆ
ಗುರುದೇವ ಯಾತುಕ್ಕಪ್ಪ
ಇಷ್ಟು ಚಿಂತಿಯಾಗಿ ದುಃಖವಾಗಿ ಕುಳಿತಿದ್ದೀರಲ್ಲ ಗುರುವು
ಇಷ್ಟು ಚಿಂತೆ ಸ್ತಾನದಲ್ಲಿ ಯಾತುಕ್ಕೆ ಕೂತ್ಕಂದ್ರಿ ತಂದೆ ಎಂದರು
ಕೇಳವ್ವ ನನ್ನ ಕಂದ ದುಡುವುಳ್ಳ ದೊಡ್ಡಮ್ಮ
ಈ ಭೂಮಿ ಪಡಕೊಂಡು ಬಂದಿ
ಈ ಭೂಲೋಕ ಪಡಕೊಂಡು ಬಂದಿ ದೊಡ್ಡಮ್ಮ
ಸೂರ್ಯ ಚಂದ್ರಾದಿಗಳ ಪಡೆದಿ
ಈ ನಡುವೆ ನರಲೋಕನೆಲ್ಲ ಪಡಕೊಂಡು ಬಂದನಲ್ಲ ಕಂದ
ಈ ನಡುವೆ ನರಲೋಕದಲ್ಲಿ ನರಮಾನವರ ಪಡೆದನಲ್ಲ ಮಗಳೇ

ಈ ನರಮಾನವರ ಕಲೀ
ನನ್ನ ಕಣ್ಣ ಮುಂದೆ ಬಂದೀತಲ್ಲ || ಸಿದ್ಧಯ್ಯ ||

ಈ ನರರ ಕಲಿಯು ನನ್ನ
ಕಣ್ಣ ಮುಂದೆ ಬಂದೀತಲ್ಲ || ಸಿದ್ಧಯ್ಯ ||

ಅವ್ವಾ ನರಮಾನವರ ಕಲಿಯೂ
ನನ್ನ ಕಣ್ಣ ಮುಂದೆ ಬಂದುಬುಡ್ತು
ಕೇಳವ್ವ ದೊಡ್ಡಮ್ಮ
ಇಂಥ ನರರ ಕಲಿಯಾ ನಾನು
ಕಣ್ಣಾರ ನೋಡಲಾರೆ || ಸಿದ್ಧಯ್ಯ ||

ನರಲೋಕದಲ್ಲಿ ಕಂದs
ನರಮಾನವರ ಕಲಿ ನನ್ನ ಕಣ್ಮುಂದೆ ಬುಂದ್ಬುಡ್ತು ದೊಡ್ಡಮ್ಮ
ನರರ ಕಲಿ ಕಣ್ಣಿಂದ ನೋಡಲಾರಿರಿ
ಕರ್ಣದಲ್ಲಿ ಕೇಳಲಾರಿರಿ ದೊಡ್ಡಮ್ಮ ಎಂದರು
ದೇವದೇವಮಾನರು ವಾರ್ತಿ ಹೇಳದೆ
ನರಮಾನವರ ವಾರ್ತಿ ಹೇಳ್ತಿಯಲ್ಲಪ್ಪ
ಯಾತಕ್ಕೆ ಗುರುವೇ
ನರಮಾನವರ ಕಲಿ ಅಂದರೆ ಯಾವ ಕಲಿ
ಅದೇನು ಹೇಳ್ಬುಡಿ ನನ್ನಪ್ಪ ಎಂದರು
ದೊಡ್ಡಮ್ಮ ನರಮಾನವರ ಕಲಿ ಹೇಳಬೇಕಾದ್ರೆ
ಇದು ಎಷ್ಟೊತ್ತಿನ ಗಳಿಗೆ
ಅಣ್ಣಯ್ಯ ಇದು ಒಂದು ಗಂಟೆ ರಾತ್ರಿ ಬುದ್ಧಿ
ದೊಡ್ಡಮ್ಮ ಈ ಗಳಿಗೆ ಚೆನ್ನಾಗಿಲ್ಲ ಕನವ್ವ
ಈ ಗಳಿಗೆ ಚಂದಿಲ್ಲ ಸುಮ್ನೀರು ಅಂತ್ಹೇಳಿ
ತಲೆಬಕ್ಕೊಂಡು ಕುಳಿತುಕೊಂಡರು
ಆಗ ಇನ್ನೊಂದು ಗಂಟೆ ಕಾಲ ಕಳದೋಯ್ತು
ಜಗತ್ತು ಗುರು ಧರೆಗೆ ದೊಡ್ಡಯ್ಯ
ಒಂದುಗಂಟೆ ರಾತ್ರೆ ತೀರೋಯ್ತು ಬುದ್ಧಿ
ಈಗ ಎರಡು ಗಂಟೆ ಆಗ್ಬುಡ್ತು ನನ್ನಪ್ಪ
ನರಮಾನವರ ಕಲಿ ಅಂತ ಹೇಳ್ಬುಡಿ ಗುರುದೇವ ಎಂದರು
ಹೇಳುವೆ ನನ್ನ ಕಂದ ದೊಡ್ಡಮ್ಮ
ಈಗಲೀಗ ಎರಡು ಗಂಟೆ ಕಾಲವಾಯ್ತು ಅಂತ ಹೇಳ್ತಿಯಲ್ಲವ್ವ
ಈ ಗಳಿಗೆಯೂ ಚೆನ್ನಾಗಿಲ್ಲ
ಸುಮ್ಮಗಿರು ಮಗಳೇ ದೊಡ್ಡಮ್ಮ ಎಂದರು
ಅಣ್ಣಯ್ಯ ಒಂದು ಗಂಟೆ ರಾತ್ರೆ ಚೆನ್ನಾಗಿಲ್ಲ
ಎರಡು ಗಂಟೆ ರಾತ್ರಿಲೂ ಚೆನ್ನಾಗಿಲ್ಲ
ಸುಮ್ಮಗಿರು ಮಗಳೇ ಅಂಥ ಹೇಳ್ತೀರಲ್ಲಪ್ಪ
ಈ ಒಂದು ಗಂಟೆ ಎರಡು ಗಂಟೆ ರಾತ್ರಿ ಅಂದರೆ
ಎಷ್ಟೋತ್ತಿನ ಗಳಿಗೆ ಅಂದ್ರು
ದೊಡ್ಡಮ್ಮ ಇದು ಯಾವೊತ್ತಿನ ಗಳಿಗೆ ಯಾವೊತ್ತಿನ ಟೈಮು
ಅಂಥ ಕೇಳಿದೆಯಾ
ಹೇಳ್ತೀನಿ ಕೇಳು ಕಂದ
ಒಂದು ಗಂಟೆ ಎರಡು ಗಂಟೆ ರಾತ್ರಿ ಅಂದ್ರೆ ಅದು ಎಷ್ಟೊತ್ತಿನ
ಗಳಿಗೆ ಅಂದ್ರೆ ದೊಡ್ಡಮ್ಮ

ಅವ್ವಾ ಕಲ್ಲು ಕರಗುವ ಹೊತ್ತು
ಗಂಗಮ್ಮ ನನ್ನ ಕಂದಾ
ನಿದ್ರೆ ಮಾಡುವ ಹೊತ್ತು
ಈ ನರಲೋಕದ ಒಳಗೆ
ಹಕ್ಕಿ ಮಲಗೋ ಹೊತ್ತು
ಕಂದ ಪಕ್ಷಿ ಮಲಗೋ ಹೊತ್ತು
ಕಂದಾ ಜೀವಜಾತಿ ಪ್ರಾಣಿಗಳು
ನಿದ್ರೆ ಮಾಡೋ ಹೊತ್ತು
ಅಮ್ಮಾ ಬಸರೀರು ಬಾಣ್ತೀರು
ಅಜ್ಜೀರು ಗುಜ್ಜೀರು ಮಲಗೀ ಕಂದ
ನಿದ್ರೆ ಮಾಡುವ ಹೊತ್ತು
ಅಮ್ಮಾ ಬಸರೀರು ಹೊಟ್ಟೆವೊಳಗೆ
ಅಸುಮಾಗ ಬೆಳೆಯೋ ಹೊತ್ತು || ಸಿದ್ಧಯ್ಯ ||

ಬಸಿರೀಯ ಹೊಟ್ಟೆವೊಳಗಿರ್ತಕ್ಕಂಥಾ ಶಿಶುಮೊಗ ಬೆಳಿಯೋ ಹೊತ್ತು
ನನ್ನ ಕಂದಾ ಈಗಳಿಗೆ ಸರಿಯಿಲ್ಲ ಸುಮ್ನಿರು ಮಗಳೆ ಎಂದುರು
ಅಣ್ಣಯ್ಯಾ ಎರಡು ಗಂಟೆ ರಾತ್ರಿ ಕಳದೋಗಿ
ಮೂರು ಗಂಟೆ ರಾತ್ರಿಯಾಗೋಯ್ತು ಬುದ್ಧಿ ಎಂದರು
ದೊಡ್ಡಮ್ಮ ಮೂರು ಗಂಟೆ ರಾತ್ರಿ ಕಳದೋಯ್ತು
ಹೇಳತೀನಿ ಕೇಳು ನನ್ನ ಕಂದ ದುಡವುಳ್ಳ ದೊಡ್ಡಮ್ಮ
ಈಗ ಹಿಂದೆ ಹೋದ ಕಲಿ ಸಾರಬೇಕೋ ಮಗಳೇ
ಮುಂದೆ ಬರುವಂಥ ಕಲಿ ಹೇಳಬೇಕವ್ವ
ಅಣ್ಣಯ್ಯ ಹಿಂದೆ ಹೋದ ಕಲಿ
ನಮ್ಮ ತಾಯಿ ತಂದೆ ನಮ್ಮ ಅಜ್ಜಿಗುಜ್ಜೀರೆಲ್ಲ ಕೇಳಿ
ಸತ್ತಿ ಸ್ವರ್ಗ ಸೇರ್ಬುಟ್ಟವ್ರೆ
ಹಿಂದೆ ಹೋದ ಕಲಿ ಹಿಂದಕ್ಕೆ ಹೊಂಟೋಗ್ಲಿ

ಗುರುವೇ ನಾಳೆ ಬರುವ ಕಲಿಗಳ
ನೀವು ವಡದೇಳಿ ಮಾಯ್ಕಾರಾ || ಸಿದ್ಧಯ್ಯ ||

ನಾಳೆ ಬರುವಂಥ ಕಲಿಗಳ ಗುರುವೇ
ಒಡದೇಳಿ ಧರೆಗೆ ದೊಡ್ಡಯ್ಯ ಮಂಟೇದಲಿಂಗಪ್ಪ ಎಂದರು
ತೋಪಿನ ದೊಡ್ಡನ್ನು ಮಾತಕೇಳಿ
ಅಲ್ಲಮಪ್ರಭು ಪರಂಜ್ಯೋತಿಯವರು
ಪಾತಾಳಜ್ಯೋತಿಯವರು ಧರೆಗೆ ದೊಡ್ಡಯ್ಯ
ದೊಡ್ಡಮ್ಮ ಮುಂದೆ ಬರುವ ಕಲಿ ಹೇಳಬೇಕಾ
ಆ ಕಲಿಯಿಂದ ನಿಮಗೆ ಏನು ಪ್ರಯೋಜನ ಮಗಳೇ
ಆ ಕಲಿಯಿಂದ ನಿಮಗೇನಾಬೇಕ್ರವ್ವ? ಎಂದರು
ಗುರುದೇವಾ
ಆ ಕಲಿಯಿಂದ ಏನಾಗಬೇಕು ಅಂತ ಕೇಳೀರಿಯಾ
ನಾಳೆ ದಿವಸ ನಮ್ಮ ಹೊಟ್ಟೇಲಿ ಮಕ್ಕಳು ಹುಟ್ತವೆ
ಹುಟ್ಟದಂಥ ಮಕ್ಕಳಿಗೆ ಏನಂಥ ಹೇಳ್ತೀನಿ ಅಂದರೆ
ಇಂತಿಂಥ ಕಲಿಗಾಲ ಬರ್ತದೆ ಕಣ್ರಪ್ಪ ಮಕ್ಕಳೇ
ಅರಿತು ಬಾಳಿ ಅಂತ ಹೇಳಿ
ಹುಟ್ಟಿದ ಮಕ್ಕಳಿಗೆ ಬುದ್ಧಿ ಹೇಳ್ಕೊಂಡು ಬಾಳಿ ಬದುಕ್ತೀವಿ ಸ್ವಾಮಿ

ನಾಳೆ ಬರುವ ಕಲಿಗಳ
ನೀವು ಹೇಳಿಕೂಡಿ ಮಾಯ್ಕಾರ || ಸಿದ್ಧಯ್ಯ ||

ಕೇಳವ್ವ ನನ್ನ ಕಂದ ದೊಡ್ಡಮ್ಮs
ಹೇಳ್ತೀನಿ ಕೇಳು ನನ್ನ ಕಂದ
ನಾಳೆ ಹುಟ್ಟಿದಂಥ ಮಕ್ಕಳಿಗೆ
ಬುದ್ಧಿ ಹೇಳ್ಕೊಂಡು ಬಾಳಿ ಬದುಕೀಯ ಕಂದ
ಹಾಗಾದ ಮೇಲೆ ನನ ಕಂದ
ಈ ಕಂಡುಗ ಜ್ಞಾನದ ಬುಕ್ಕು ಕಾಲಜ್ಞಾನದ ಬುಕ್ಕು
ನಿನಗೆ ಖಂಡಿತವಾಗೂ ಕೊಡೋದಿಲ್ಲ ದೊಡ್ಡಮ್ಮ
ಈಗ ನನ್ನ ಮುಂಭಾಗದಲ್ಲಿರುವಂಥ ತಾಮ್ರದ ಚಪ್ಪೋಡ ತಕ್ಕವ್ವ
ನಾನು ಈವೊತ್ತು ಸಾರುವ ಕಲಿಗಳೆಲ್ಲಾನೂ

ಈ ತಾಮ್ರದ ಚಪ್ಪೋಡ್ನಲ್ಲಿ ನೀ
ಬರ್ಕೋವಾ ದೊಡ್ಡಮ್ಮ ತಾಯಿ || ಸಿದ್ಧಯ್ಯ ||

ನಾನು ಸಾರುವಂಥ ಕಂದಾ
ಕಲಿಗಳ ನನ್ನ ಮಗಳೇ
ಈ ತಾಮ್ರದ ಚಪ್ಪೋಡಿನಲ್ಲಿ
ಬರ್ಕೋವಾ ನನ್ನ ಕಂದ
ನಾನು ಹೊರಟು ಹೋದ ಮೇಲೆ
ಈ ಬರವಣಿಗೆ ನನ್ನ ಕಂದ
ಬರ್ಕೋಳ್ಳಿ ನನ್ನ ಕಂದ
ನಾನು ಹೇಲಿದಂಥ ಕಲಿಗಳ
ನೀವು ನೋಡ್ಕಳ್ಳಿ ನನ್ನ ಕಂದ
ಈ ನಡುವೆ ನರಲೋಕದಲ್ಲಿ
ಬುದ್ಧಿಯಾಗಿ ಬಾಳಿರವ್ವ || ಸಿದ್ಧಯ್ಯ ||

ಕೇಳವ್ವ ನನ್ನ ಕಂದ ದುಡುವುಳ್ಳ ದೊಡ್ಡಮ್ಮಾs
ಇಂದಿರಾದಿ ದೇವ ದೇವಮಾನವರೆಲ್ಲಾನು ಪಡೆದು
ಈಗಲೀಗ ಮಾರಿ ಮಸಣಿ ದುರ್ಗಿ ಚೌಡೀರ ಪಡೆದು
ಈ ನರಲೋಕ ಬೆಳೆಕು ಮಾಡಬೇಕು ಅಂತ್ಹೇಳಿ
ಸೂರ್ಯ ಚಂದ್ರಾದಿಗಳ ಪಡೀಬೇಕು ಅಂತ್ಹೇಳಿ
ಬದುನಾಳು ದಿಕ್ಕಿಗೆ ಕಣ್ಣಾರ ನೋಡಿದಿ ದೊಡ್ಡಮ್ಮ
ಈಗಲೀಗ ಬದನಾಳು ದಿಕ್ಕಿನಿಂದ ಕಲಿ ಉಕ್ಕಿ ಬರುತ್ತಿತ್ತು
ಉಕ್ಕಿಬರುವಂತ ಕಲಿಗಾಲದಲ್ಲಿ ಕಂದ
ಈಗಲೀಗಾ ಆ ಕಲಿ ಮನುಷ್ಯನ್ನೇ ಹಿಡಿದು
ನೀನು ಯಾರಪ್ಪ ಅಂತ ಕೇಳಿದ್ದಿ
ನಾನು ಕಲಿ ಮನಸ ಬುದ್ಧಿ ಅಂತ ಹೇಳಿದ್ದ
ತಾಯಿ ತಂದೆಗಳ ಕಣ್ಣಿಂದ ನೋಡುಬುಟ್ಟು
ತಾಯಮ್ಮನ ಬಲದಲ್ಲಿ ಬುಟಕೊಂಡು
ತಂದೆ ಎಡದಲ್ಲಿ ಬುಟಕೊಂಡು
ಕೈ ಹಿಡಿದ ಹೆಂಡತಿ ಹೆಗಲಮ್ಯಾಲೆ ಹೊತ್ತುಕೊಂಡು
ಕಲಿ ಅಂತ್ಹೇಳಿ ಕಲಿ ಸಾರ್ಕೊಂಡು ಬರುವಾಗ
ಯಾವ ರೀತಿ ಬಂದ್ಬುಟ್ಟಾ ಅಂದರೆ ದೊಡ್ಡಮ್ಮ
ತಾನು ನಡೆವಂತ ಪಾದರಾಕ್ಷಿ
ಹೆಂಡತಿ ನಡೆವಂತ ಪಾದರಾಕ್ಷಿ
ಹೆತ್ತ ತಾಯಿ ತಲೆಮ್ಯಾಲೆ ಹೊರಿಸ್ಕಂಡು
ತಾನು ನಡೆವಂತ ಪಾದರಕ್ಷಿ ತಾಯಿ ಮಡಿಲಲ್ಲಿ ಕಟ್ಟಿಸ್ಕೊಂಡು

ತಾವು ಗಂಡು ಹೆಂಡ್ತಿರು ಊಟ ಮಾಡುವಂಥ
ವೀಳ್ಯ ಹಾಕ್ಕೊಂಡು ಉಗುಳುವಂತೆ ಪೀಕುದಾನಿ
ಹೆತ್ತ ತಾಯಿ ಕೈಲಿಡುಸ್ಕಂಡು ದೊಡ್ಡಮ್ಮ
ತಾವು ಮಲೀಕೊಳ್ಳುವ ಹಾಸಿಗೆ ಮಂಚ ತಲೆದಿಂಬು ಜಲ್ಮ ಕೊಟ್ಟ
ತಂದೆ ತಲೇ ಮ್ಯಾಲೆ ಹೊರಿಸ್ಕಂಡು
ಬದನಾಳು ದಿಕ್ಕಿನಿಂದ ಕಲಿ ಮನುಷ್ಯ ಬರುತಿದ್ದ
ನೀನು ಯಾರಪ್ಪ ಅಂತ ಕೇಳಿದಿ
ಕಲಿ ಮನುಷ್ಯ ಬುದ್ಧಿ ಅಂತ ಹೇಳಿದ
ಎಡದಲ್ಲಿ ಬಲದಲ್ಲಿ ನಿಂತಿರೋರು ಯಾರಪ್ಪ ಅಂತಕೇಳ್ದಿ
ಗುರುದೇವ ಬಲದಲ್ಲಿ ನಿಂತಿರೋರು ನಮ್ಮ ತಾಯಿ
ಎಡದಲ್ಲಿ ನಿಂತಿರೋರು ನಮ್ಮ ತಂದೆ
ಹೆಗಲಮೇಲೆ ಕೂತಿರೋರು ಯಾರಯ್ಯಾ
ಅವರು ನನ್ನ ಹೆಂಡ್ತಿ ಬುದ್ಧಿ
ಆಗಲೀ ನನ್ನ ಕಂದ
ನಿಮ್ಮ ತಾಯಿ ಹೊತ್ತಿರೋದೇನೋ
ನಿಮ್ಮ ತಾಯಿ ಮೊಡಲಲ್ಲಿರುವುದೇನಪ್ಪ
ನಿಮ್ಮ ತಾಯಿ ಕೈಲಿ ಹಿಡಿದಿರುವುದೇನು
ನಿಮ್ಮ ತಂದೆ ಹೊತ್ತಿರೋದೆಯ ಕಂದಾ ಅಂತ ಕೇಳಿದಿ
ಗುರುದೇವಾ ನಮ್ಮ ತಾಯಿ ಹೊತ್ತಿರೋದು
ನನ್ನ ಹೆಡ್ತಿ ಮಡೊ ಪಾದರಕ್ಷಿ
ನಮ್ಮ ತಾಯಿ ಮೊಡಲಲ್ಲಿರೋದು ನಾನು ಮೆಡೋ ಪಾದರಕ್ಷಿ
ನಮ್ಮ ತಾಯಿ ಕೈಲಿ ಹಿಡಿಸಿರೋದು ನಮ್ಮ ಗಂಡ ಹೆಂಡ್ತೀರು
ಊಟಮಾಡಿ ವೀಳ್ಯ ಹಾಕ್ಕೋತೀವಲ್ಲ
ಆ ವೀಳ್ಯ ಹಾಕಿದ ಮೇಲೆ ಉಗುಳವಂಥ ಪೀಕುದಾನಿ
ನಮ್ಮ ತಂದೆ ಹೊತ್ತಿರೋದು
ನಾವು ಗಂಡ ಹೆಂಡ್ತೀರು ಮಲೀಕೊಳ್ಳುವಂಥ ಹಾಸಿಗೆ ಮಂಚ
ತಲೆದಿಂಬು ಅಂತ ಹೇಳ್ದಾ ಕಂದ
ಈ ಮನುಷ್ಯನ ಮಾತು ಕೇಳಿಬುಟ್ಟು ದೊಡ್ಡಮ್ಮ
ಎರಡ ಕಣ್ಣ ನೇತ್ರ ಮುಚ್ಕೊಂಡು
ಎರಡು ಕರಣ ಮುಚ್ಚುಕೊಂಡು
ಎಲ್ಲಿಗೋದಿಯಪ್ಪ ಅಂತ ಕೇಳಿದಿ
ಬಲಿ ಚಕ್ರವರ್ತಿ ಪಟ್ಟಣಕ್ಕೆ ಹೊಯ್ತೀನಿ ಸ್ವಾಮಿ ಕರ್ಮಕಳಿಯೋಗಕ್ಕೆ ಅಂತೇಳುಬುಟ್ಟ
ಇವನ ಮುಂದಕ್ಕೆ ಬುಡಬಾರ್ದು ಅಂತ್ಹೇಳಿ
ನೋಡಪ್ಪ ಈ ಕುಕ್ಕುರ ಕೋಡು ತಲಕಾಡು ಮಾಲಂಗಿ
ಆನೆ ಉದ್ದ ನೀರಿಗಿಳಿದು ಮುಳುಗಿ ಸ್ನಾನ ಮಾಡಿಕೊಂಡು
ಮುಂದುಕ್ಕೋಗಿರಯ್ಯ ಕರ್ಮ ಕಳೀತಾದೆ ಅಂತ ಹೇಳಿಬುಟ್ಟಿ
ಕಲಿ ಮನಸಾನ ತಾಯಿ ತಂದೆ ಮುಳುಗಿ ಸ್ನಾನ ಮಾಡುವಾಗ

ಆ ಕಲಿಮನಸಾನ ನೆತ್ತಿಮ್ಯಾಲೆ
ಅವರ ತಂದೆ ತಾಯಿಗಳ ನೆತ್ತಿಮ್ಯಾಲೆ
ಬಲದ ಪಾದ ಎತ್ತಿ ಮಡಗಿದ್ದ
ಕಲಿ ಮನಸದ ಹೆಡ್ತಿ ಸಿರದ ಮೇಲೆ
ಎಡದ ಪಾದ ಎತ್ತಿ ಮಡಗಿದಿ ಕಂದ
ಅವನ ಜಗ್ಗಿಸಿ ತುಳಿದ್ಬುಟ್ಟಿ ಕಂದ
ಈಗಲೀಗ ಕಲಿಮನಸದ ತಂದೆ ತಾಯಿಗಳ ಪಾತಾಳ ಲೋಕಕ್ಕೊಂಟೋದ್ರು
ಕಲಿಮನಸನ ಹೆಡ್ತಿ ಶಿರ ಕತ್ತರಿಸಿ ದೇವಲೋಕಕೋಯ್ತು
ಅವರ ಕಲಿಮನಸಾನ ತಾಯ್ತಂದೆಗಳು
ಪಾತಾಳಕ್ಕೋಗುವಾಗ ದುಃಖ ಪಡ್ತಿದ್ದರು
ಗುರುದೇವಾ ನಮ್ಮ ಪಾತಾಳಕ್ಕೆ ತುಳಿದ್ರಿಯಲ್ಲ
ಇನ್ಯಾವಾಗ ನಮ್ಮ ತೃಷ್ಣೆಮಾಡಿ ಭೂಲೋಕಕ್ಕೆ ಬುಟ್ಟಿಯಲ್ಲಪ್ಪ
ಅಂತ ಕೇಳುದ್ರು
ಏನೋ ಕಲಿ ಮನುಷ್ಯ
ನನ್ನ ಕಣ್ಣು ಮುಂದುಗಡೆ ಈ ರೀತಿ ಕಲಿ ಸಾರ್ಕೊಂಡು ಬಂದಿಯಲ್ಲ
ಅದಕ್ಕಾಗಿ ನಿನ್ನ ಪಾತಾಳಕ್ಕೆ ತುಳಿದಿವ್ನಿ
ನೀನು ಹೋಗಿರುವಂತ ಪಾತಾಳಕ್ಕೆ ನಾಳೆದಿವ್ಸ ನಾನೇ ಹೋಟೋಯ್ತಿನಿ
ನಾವು ಪಾತಾಳಕ್ಕೋದ ಮ್ಯಾಲೆ
ನಿಮ್ಮ ಭೂಲೋಕಕ್ಕೆ ಯಾವ ರೀತಿ ಬುಡ್ತೀವಿ ಅಂದರೆ
ನಿಮ್ಮ ತಾಯಿನ ಛಾಯಾದೇವಿ ಮಾಡ್ತೀನಿ
ನಿಮ್ಮ ತಂದೆ ಸೂರ್ಯದೇವನ್ನೇ ಮಾಡ್ತೀನಿ
ಅವರ ಗರ್ಭಕ್ಕೇ ನಿನ್ನ ಹಾಕ್ತೀನಿ ಕಂದ
ಈಗ ಕಲೀ ಮನುಷ್ಯನಾಗಿದ್ದೀಯೆ
ನಾಳೆ ಬರುವಂಥ ಏಳನೇ ಉಗಂತರಕ್ಕೆ

ಕಲಿಮನಸ ತಾನಲ್ಲ ನೀನು
ಕಲಿಪುರುಷ ಕಲಿದೇವ || ಸಿದ್ಧಯ್ಯ ||